ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಚಳ್ಳಕೆರೆ ತಳಿಯ ಕುರಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ನಾಲ್ಕೂ ಮರಿಗಳು ಸಹ ಆರೋಗ್ಯದಿಂದಿದ್ದು ಲವಲವಿಕೆಯಿಂದಿವೆ.
ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿಯ ರೈತ ರಾಜಣ್ಣ ಎಂಬುವವರು ಸಾಕಾಣಿಕೆ ಮಾಡಿರುವ ಚಳ್ಳಕೆರೆ ತಳಿಯ ಕುರಿ ಮೊದಲ ಸೂಲಿನಲ್ಲಿಯೆ ನಾಲ್ಕು ಮರಿಗಳನ್ನು ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಚಳ್ಳಕೆರೆ, ನಾಟಿ, ಬನ್ನೂರು, ಹೊಸದಾಗಿ ಅಭಿವೃದ್ದಿ ಪಡಿಸಿದ ಸುವರ್ಣ ನಾರಿ ಇನ್ನಿತರೆ ಯಾವುದೆ ಕುರಿಯಾಗಲಿ ಒಂದು ಅಥವಾ ಎರಡು ಮರಿ ಹಾಕುವುದು ಸಹಜ. ಆದರೆ ಅಪರೂಪದಲ್ಲಿ ಅಪರೂಪ ಎಂಬಂತೆ ನಾಲ್ಕು ಮರಿಗಳನ್ನು ಹಾಕಿದೆ.
‘ತಮ್ಮ ತಾತ ಅಪ್ಪಂದಿರ ಕಾಲದಿಂದಲೂ ವ್ಯವಸಾಯ, ಕುರಿ ಮೇಕೆ ಸಾಕಾಣಿಕೆ ಕಸುಬನ್ನು ಮಾಡಿಕೊಂಡು ಬರುತ್ತಿದ್ದು ನಮ್ಮ ಮನೆತನದಲ್ಲಿ ಇದೆ ಮೊದಲ ಬಾರಿಗೆ ಕುರಿ ನಾಲ್ಕು ಮರಿಗಳನ್ನು ಹಾಕಿದೆ’ ಎಂದು ರಾಜಣ್ಣ ಸಂತಸ ವ್ಯಕ್ತಪಡಿಸುತ್ತಾರೆ.
‘ಮಾಂಸ ಮತ್ತು ಉಣ್ಣೆಗಾಗಿ ಸಾಕಾಣಿಕೆ ಮಾಡುವ ಚಳ್ಳಕೆರೆ ಸೇರಿದಂತೆ ಬನ್ನೂರು, ನಾಟಿ ಕುರಿಗಳೂ ಸಹ ಒಂದು ಅಥವಾ ಎರಡು ಮರಿಗಳನ್ನು ಹಾಕುವುದು ಸಹಜ, ಆದರೆ ಚಳ್ಳಕೆರೆಯ ಕುರಿ ನಾಲ್ಕು ಮರಿಗಳನ್ನು ಹಾಕಿರುವುದು ಅಪರೂಪದಲ್ಲಿ ಅಪರೂಪ.
ನನ್ನ ಅನುಭವದ ಅವಯಲ್ಲಿ ಇದೆ ಮೊದಲಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದನ್ನು ನೋಡುತ್ತಿದ್ದೇನೆ. ಅದರಲ್ಲೂ ಎಲ್ಲ ಮರಿಗಳೂ ಆರೋಗ್ಯದಿಂದ ಚಟುವಟಿಕೆಯಿಂದ ಇವೆ.
ನಾಲ್ಕೂ ಮರಿಗಳಿಗೆ ಆಗುವಷ್ಟು ಹಾಲು ಕುರಿಯಲ್ಲಿ ಉತ್ಪಾದನೆ ಆಗುವುದಿಲ್ಲ. ಹಾಗಾಗಿ ಹೆಚ್ಚುವರಿಯಾಗಿ ಹಾಲನ್ನು ಮರಿಗಳಿಗೆ ಕುಡಿಸಬೇಕು ಹಾಗೂ ತಾಯಿ ಕುರಿಗೂ ಹೆಚ್ಚುವರಿ ಪಶು ಆಹಾರ, ಹಸಿರು ಮೇವನ್ನು ನೀಡಬೇಕು’
ನಾಲ್ಕು ಮರಿಗಳಿಗೆ ಜನ್ಮ ನೀಡಿದ ಚಳ್ಳಕೆರೆ ತಳಿಯ ಕುರಿ
ಗ್ರಾಮೀಣ ಮಕ್ಕಳಲ್ಲಿ ಓದುವ ಅಭಿರುಚಿ ಹತ್ತಿಸಿ
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಓದುವ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಸಾಹಿತ್ಯದ ಅಭಿರುಚಿಯನ್ನು ಬೆಳೆಸುತ್ತಾ ತಾಲ್ಲೂಕು ಕಸಾಪ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಶ್ಲಾಘಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಜಾನಪದ ಗೀತೆ ಗಾಯನ ಸ್ಪರ್ಧೆ ಕಸಾಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳು ಓಡಾಡುವ ಗುಡಿಗಳಂತೆ. ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆದಂತೆ ಅದು ಜೀವನದಲ್ಲಿ ಬಹಳಷ್ಟು ಪರಿಣಾಮಗಳನ್ನು ಉಂಟುಮಾಡುತ್ತದೆ. ಸ್ವಚ್ಛತೆ, ಹಸಿರು ಬೆಳೆಸುವ ಬಗ್ಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಗ್ರಾಮೀಣ ಕಲೆಗಳು, ಆಟಗಳು, ಜಾನಪದ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಕಸಾಪ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದೆ. ಮಕ್ಕಳನ್ನು ತಿದ್ದುತ್ತಾ, ಅವರಿಗೆ ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿಸುವುದು ಬಹಳ ಮುಖ್ಯ. ಈ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಇತರರೂ ಸಹಕರಿಸಬೇಕು. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಬಗ್ಗೆ ಬಹು ಆಶಯವನ್ನಿಟ್ಟಿದ್ದರು. ಅವರ ಆಶಯಗಳನ್ನು ನೆರವೇರಿಸಬೇಕಿದೆ ಎಂದರು.
ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಜಾನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ನಡೆಸಿದ್ದ ಕರ್ನಾಟಕ ಏಕೀಕರಣ ವಿಷಯವಾಗಿ ಪ್ರಬಂಧ ಸ್ಪರ್ಧೆ ಮತ್ತು ಜಾನಪದ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಕೆ ಎನ್ ಭವಾನಿ(ಪ್ರಥಮ ), ಸಿ ಎನ್ ನವೀನ್(ದ್ವಿತೀಯ), ಎಂ ಎಸ್ ನಿತೀಶ್ ಕುಮಾರ್(ತೃತೀಯ), ಜಾನಪದ ಗೀತೆಗಳ ಗಾಯನ ಸ್ಪರ್ಧೆ ವಿಜೇತರಾದ ಆರ್ ಚೈತ್ರ(ಪ್ರಥಮ), ಭವಾನಿ ಕೆ ಎನ್ (ದ್ವಿತೀಯ ), ಶ್ರಾವಣಿ ಟಿ ಎಲ್(ತೃತೀಯ) ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಹೋಬಳಿ ಪದಾಧಿಕಾರಿ ಕೆಂಪಣ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರಪ್ಪ, ಸದಸ್ಯೆ ಗುಣಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಭಾಕರ್, ಮುಖ್ಯಶಿಕ್ಷಕಿ ಹೇಮಾವತಿ, ಶಿಕ್ಷಕರಾದ ಮಾಲತಿ, ಗಣೇಶ, ಅನಿತಾ, ಶ್ರೀಧರ್, ವಿಜಯಶ್ರೀ, ರವಿ ಮತ್ತಿತರರು ಹಾಜರಿದ್ದರು.
ಸಮಾನ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ
ಗಂಡು ಮತ್ತು ಹೆಣ್ಣೆಂಬ ಬೇಧಭಾವವಿಲ್ಲದೇ ಸರ್ವರಿಗೂ ೫ರಿಂದ ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡಲೇ ಬೇಕಾದ ಅಗತ್ಯಿವಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೋಪಾಲ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ, ಜಿಲ್ಲಾಪಂಚಾಯತ್, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣು ಮತ್ತು ಗಂಡೆಂಬ ಬೇಧಭಾವ ಕೂಡದು. ಸಮಾಜದ ಅಭಿವೃದ್ಧಿಯಲ್ಲಿ ಇಬ್ಬರಿಗೂ ಸಮಾನವಾದ ಪಾತ್ರವಿದೆ. ಪೋಷಕರು ಮಕ್ಕಳಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ತಪ್ಪದೇ ಒದಗಿಸಬೇಕು. ಬಾಲಕಾರ್ಮಿಕ ಪದ್ಧತಿ, ಹೆಣ್ಣುಭ್ರೂಣ ಹತ್ಯೆ, ಅರ್ಹವಯಸ್ಸಿನ ಮಕ್ಕಳನ್ನು ಶಾಲಾ ಶಿಕ್ಷಣದಿಮದ ವಂಚಿತಗೊಳಿಸುವಂತಹ ಘಟನೆಗಳು ನಿಲ್ಲಬೇಕು ಎಂದು ಅವರು ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಮೇಗೌಡ ಮಾತನಾಡಿ, ಮಕ್ಕಳಿಗೆ ಬದುಕುವ, ಭಾಗವಹಿಸುವ, ಅಭಿವ್ಯಕ್ತಿಪಡಿಸುವ ಹಕ್ಕುಗಳಿದ್ದು, ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳು ತಮಗೆ ಒದಗಿಬಂದ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಾದಾಗ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ರಘುನಾಥ್ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಣ ಪಡೆಯುವಲ್ಲಿ ಒದಗಬಹುದಾದ ಎಲ್ಲಾ ಸಮಸ್ಯೆಗಳನ್ನೂ ಆದ್ಯತೆಮೇಲೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಜಂಗಮಕೋಟೆ ಸಿಆರ್‌ಪಿ ಸುಂದರಾಚಾರಿ ಮಾತನಾಡಿ, ಮಕ್ಕಳು ಸಾಲೆಯಿಂದ ಹೊರಗುಳಿಯದಂತೆ ಸರ್ಕಾರವು ಅನೇಕ ಸವಲತ್ತುಗಳನ್ನು ಒದಗಿಸಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ಪಡೆಯಲು ಪ್ರಯತ್ನಿಸಬೇಕು ಎಂದರು.
ಶಾಲಾ ಮಕ್ಕಳು ಶಾಲೆಯ ತರಗತಿ ಕೊಠಡಿ ರಿಪೇರಿ, ಕುಡಿಯುವ ನೀರಿನ ಸಮಸ್ಯೆ, ಆಟದ ಮೈದಾನದ ಕುರಿತು ಪ್ರಶ್ನೆಗಳನ್ನು ಕೇಳಿ ಮನವಿ ಸಲ್ಲಿಸಿದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷ ಚಂದ್ರೇಗೌಡ, ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ವೆಂಕಟಾಪುರ ಕೆ.ಗೀತಾ, ಮಿತ್ತನಹಳ್ಳಿ ಚಂದ್ರಶೇಖರ್, ಬಳುವನಹಳ್ಳಿ ಪದ್ಮಾ, ಭೈರಸಂದ್ರ ವಿರೂಪಾಕ್ಷ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಸ್.ಡಿ.ದೇವರಾಜು, ಭಾಗ್ಯಮ್ಮ ಅರುಣ್‌ಕುಮಾರ್, ಷಣ್ಮುಗ, ಮಿತ್ತನಹಳ್ಳಿ ಹರೀಶ್, ಭೈರಸಂದ್ರ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಆರ್.ನಾಗೇಶ್, ಪಾಪರಾಜು, ಸದಸ್ಯ ಎಸ್.ಎಂ.ಶಂಕರಪ್ಪ, ಎನ್.ಪಿ.ನಾಗರಾಜಪ್ಪ, ಚಂದ್ರಪ್ಪ, ಗಂಗರತ್ನಮ್ಮ, ಮುನಿಕೃಷ್ಣಪ್ಪ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಮತ್ತಿತರರು ಹಾಜರಿದ್ದರು.
ಗ್ರಾಮಾಂತರ ಪ್ರದೇಶಗಳಲ್ಲಿನ ಆರೋಗ್ಯ ಸಮಸ್ಯೆ ತಡೆಯಲು ಶಿಬಿರಗಳು ನೆರವಾಗಿವೆ
ಗ್ರಾಮಾಂತರ ಪ್ರದೇಶಗಳಲ್ಲಿನ ಬಹಳಷ್ಟು ಜನರು ಥೈರಾಯಿಡ್, ಮೂಳೆ ಸವೆತದಂತಹ ಕಾಯಿಲೆಗಳಿಗೆ ಒಳಗಾಗುತ್ತಿರುವುದರಿಂದ ಅವರ ಆರೋಗ್ಯ ರಕ್ಷಣೆ ಮಾಡಲು ಮುಂದಾಗುವುದು ಅನಿವಾರ್ಯವಾಗಿದೆ ಎಂದು ಎಂ.ವಿ.ಜೆ. ಆಸ್ಪತ್ರೆಯ ವೈದ್ಯ ಡಾ. ಪ್ರಮೋದ್ ಹೇಳಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಮಂಗಳವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಿರಂತರವಾದ ದುಡಿಮೆಯಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಹಳ್ಳಿಗಾಡಿನ ಜನರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ರೀತಿಯ ಉಚಿತ ಆರೋಗ್ಯ ಶಿಬಿರಗಳು ಈ ಭಾಗದ ಗ್ರಾಮೀಣರಿಗೆ ಅತ್ಯಗತ್ಯವಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿರುವ ಬಯಲು ಸೀಮೆ ಭಾಗವಾದ ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಜನರು ಪ್ಲೋರೈಡ್ ನೀರನ್ನು ಕುಡಿಯುವ ಮೂಲಕ ಅನಾರೋಗ್ಯಗಳಿಗೆ ಒಳಗಾಗುತ್ತಿದ್ದಾರೆ. ಮೂಳೆ ಸವೆತ ಕಂಡು ಬರುತ್ತಿದೆ. ಕಣ್ಣಿನ ದೃಷ್ಠಿ ಮಂಜಾಗುತ್ತಿದ್ದು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಜನರ ಆರೋಗ್ಯ ರಕ್ಷಣೆಗಾಗಿ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ತಾಲ್ಲೂಕಿನಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದ್ದು ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಶಿಬಿರಗಳ ಉಪಯೋಗ ಪಡೆದುಕೊಂಡಿದ್ದಾರೆ ಎಂದರು.
ಶಿಬಿರದಲ್ಲಿ ಮೂಳೆ ತಜ್ಞರು, ಕಣ್ಣಿನ ತಜ್ಞರು, ಸ್ತ್ರೀ ರೋಗ ತಜ್ಞರು, ದಂತ ವೈದ್ಯರು, ನರರೋಗ ತಜ್ಞರು, ಮಕ್ಕಳ ತಜ್ಞರು, ನಾಗರಿಕರಿಗೆ ಪರೀಕ್ಷೆ ನಡೆಸಿದರು. ಶಸ್ತ್ರ ಚಿಕಿತ್ಸೆ ಅಗತ್ಯವಾಗಿರುವ ರೋಗಿಗಳಿಗೆ ತಗಲುವ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ ಎಂದರು.
ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದ ನಾಗರಿಕರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಮತ್ತು ಗಿಡಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ನಾಗರಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷರಾದ ಶಿವಪ್ಪ, ರಾಮಕೃಷ್ಣಪ್ಪ, ಸದಸ್ಯ ಎಸ್.ಆರ್.ನಾರಾಯಣಸ್ವಾಮಿ, ಆನೂರು ದೇವರಾಜ್, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ, ಬುರುಡುಗುಂಟೆ ಅನ್ವರ್ ಸಾಬ್, ತಲಕಾಯಲಬೆಟ್ಟ ಅಶ್ವಥ್ಥನಾರಾಯಣ, ಗಂಗಣ್ಣ, ದಢಂಘಟ್ಟ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಸಾದಲಿ ಹೊಸ ಕೆರೆಯಲ್ಲಿ ಹಕ್ಕಿಗಳ ಕಲರವ
ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ದೇಶೀಯ ಹಾಗೂ ವಿದೇಶೀಯ ವಲಸೆ ನೀರ ಹಕ್ಕಿಗಳು ಆಗಮಿಸುತ್ತವೆ. ಆದರೆ ಈ ಬಾರಿ ನಗರದ ಅಮ್ಮನ ಕೆರೆ ಸೇರಿದಂತೆ ಹಲವಾರು ಕೆರೆಗಳು ಒಳಗಿನಿಂತಿವೆ. ಹಾಗಾಗಿ ನೀರ ಹಕ್ಕಿಗಳೂ ಕಾಣಸಿಗುತ್ತಿಲ್ಲ. ಆದರೆ ಅಲ್ಪ ಸ್ವಲ್ವ ನೀರನ್ನು ಹೊಂದಿರುವ ಸಾದಲಿ ಹೊಸ ಕೆರೆಯಲ್ಲಿ ಹಲವು ನೀರು ಹಕ್ಕಿಗಳನ್ನು ಕಾಣಬಹುದಾಗಿದೆ.
ಕೆರೆಯಲ್ಲಿ ನೀರು ಕಡಿಮೆಯಿರುವುದರಿಂದ ಸಣ್ಣ, ದೊಡ್ಡ ಗಾತ್ರದ ನೀರು ಹಕ್ಕಿಗಳು ಒಂದೆಡೆ ಆಹಾರವನ್ನು ಬೆದಕುತ್ತಾ, ಕೆರೆಯ ನೀರಿನಲ್ಲಿ ಸಿಗುವ ಮೀನು, ಏಡಿ, ಕಪ್ಪೆ, ಶಂಖದ ಹುಳುಗಳು ಮೊದಲಾದ ಜಲಚರಗಳನ್ನು ಈ ಹಕ್ಕಿಗಳು ಬೆನ್ನು ಗೂನು ಮಾಡಿಕೊಂಡು ತಾಳ್ಮೆಯಿಂದ ಕಾದು ಹಿಡಿದು ತಿನ್ನುತ್ತಿದ್ದರೆ, ಮತ್ತೊಂದೆಡೆ ಕೆರೆಯಲ್ಲಿನ ಮೀನುಗಳನ್ನು ಹಿಡಿಯುವಲ್ಲಿ ಗ್ರಾಮೀಣರ ಉತ್ಸಾಹವೂ ಸೇರಿದೆ. ಹಕ್ಕಿಗಳ ಆಹಾರವನ್ನು ಮನುಷ್ಯರು ಕದಿಯುತ್ತಿದ್ದಾರೋ, ಮನುಷ್ಯರ ಆಹಾರವನ್ನು ಹಕ್ಕಿಗಳು ಕಬಳಿಸುತ್ತಿವೆಯೋ ಗೊಂದಲವಾಗಿ ಕಾಣುತ್ತದೆ.
ದೊಡ್ಡ ಗಾತ್ರದ ಕೆಲವು ಗ್ರೇ ಹೆರಾನ್ ಹಕ್ಕಿಗಳು, ಸ್ಟಿಲ್ಟ್, ಪ್ಲೋವರ್, ಸ್ನೈಪ್, ಸ್ಯಾಂಡ್‌ಪೈಪರ್, ಬಾತುಗಳು ಇವುಗಳೊಂದಿಗೆ ಬೆಳ್ಳಕ್ಕಿಗಳು ಮತ್ತು ಕೊಕ್ಕರೆಗಳ ಗುಂಪೂ ಸೇರಿಕೊಂಡು ಕೆರೆಯು ಪುಟ್ಟ ರಂಗನತಿಟ್ಟಿನಂತೆ ಕಂಡುಬರುತ್ತಿದೆ.
“ದೊಡ್ಡದಿರುವ ಹಳದಿಗೆಂಪು ಬಣ್ಣದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು ಹಿಂಡು ಹಿಂಡಾಗಿ ಈಚೆಗೆ ಈ ಕೆರೆಯಲ್ಲಿ ಕಂಡು ಬಂದವು. ಆದರೆ ಒಂದು ದಿನವಷ್ಟೇ ಇಲ್ಲಿದ್ದ ಅವು ನಂತರ ಕಂಡು ಬರಲಿಲ್ಲ. ಬಹುಷಃ ಇಲ್ಲಿ ಆ ಹಕ್ಕಿಗಳಿಗೆ ಆಹಾರ ಸಾಲದಾಗಿರಬೇಕು ಅಥವಾ ಮನುಷ್ಯರ ಓಡಾಟದಿಂದ ಅವು ಬೇರೆಡೆ ಸ್ಥಳಾಂತರ ಗೊಂಡಿರಬೇಕು. ನಮ್ಮೂರ ಬಳಿಯ ಕೆರೆಯಲ್ಲಿ ಇಷ್ಟೊಂದು ಹಕ್ಕಿಗಳನ್ನು ಕಂಡು ಖುಷಿಯಾಯಿತು. ಇನ್ನೂ ನೀರಿದ್ದಿದ್ದರೆ ಎಷ್ಟೆಲ್ಲ ವಿವಿಧ ಹಕ್ಕಿಗಳನ್ನು ನೋಡಬಹುದಿತ್ತಲ್ಲವೆ ಅನ್ನಿಸಿತು’ ಎಂದು ಶಿಕ್ಷಕ ರವಿ ತಿಳಿಸಿದರು.
‘ಕೆರೆಗಳನ್ನು ಸ್ವಚ್ಛವಾಗಿರಿಸುವುದರಿಂದ ಅಂತರ್ಜಲ ಮರುಪೂರಣ, ಅನೇಕ ಜಲಚರಗಳ ಬದುಕು ಇನ್ನಿತರ ಅನುಕೂಲಗಳಿವೆ. ಪ್ರತಿವರ್ಷ ಬರುವ ವಲಸೆ ಹಕ್ಕಿಗಳಿಗೂ ತಾಣವಾಗುತ್ತದೆ. ದೂರದ ರಂಗನತಿಟ್ಟಿಗೆ ಮಕ್ಕಳನ್ನು ಕರೆದೊಯ್ಯುವುದರ ಬದಲು ಇಲ್ಲೇ ನಾನಾ ಹಕ್ಕಿಗಳ ಪರಿಚಯ ಮಾಡಿಸಬಹುದಾಗಿದೆ’ ಎಂದು ಅವರು ಹೇಳಿದರು.
ಶಿಡ್ಲಘಟ್ಟದಲ್ಲಿ ಗರಡಿ ಮನೆ ಆರಂಭ: ತೆರೆಗೆ ಸರಿಯುತ್ತಿರುವ ಕಲೆಗೆ ಮರುಜೀವ
ಯುವಜನರು ತಮ್ಮ ದೈಹಿಕ ಸದೃಡತೆಗೆ ಹೆಚ್ಚಿನ ಆಧ್ಯತೆ ನೀಡದೆ ನಾನಾ ರೋಗ ರುಜುನಗಳಿಗೆ ಬಲಿಯಾಗುತ್ತಿದ್ದಾರೆ. ಈಗಿನ ಕಾಲಕ್ಕೆ ವ್ಯಾಯಾಮಶಾಲೆಗಳು ಪ್ರಸ್ತುತವಾಗಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಸಂತೆ ಮೈದಾನದ ಬಳಿ ಕೋಹಿನೂರ್ ವೆಲ್‌ಫೇರ್ ಟ್ರಸ್ಟ್‌ನಿಂದ ಟಿಪ್ಪು ಸುಲ್ತಾನ್ ಗರಡಿ ಮನೆಯನ್ನು ಆರಂಭಿಸಿದ್ದು, ಗರಡಿ ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಂಪ್ಯೂಟರ್, ಫೇಸ್ ಬುಕ್, ವಾಟ್ಸ್‌ಪ್‌ನಂತ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗುವ ಮೂಲಕ ಇತರೆ ಚಟುವಟಿಕೆಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿಲ್ಲ. ಇದರಿಂದ ಆರೋಗ್ಯ ಮಟ್ಟ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ರಾಜ ಮಹರಾಜರ ಕಾಲದಿಂದಲೂ ಕುಸ್ತಿ, ಗರಡಿ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಕುಸ್ತಿ ಪಟುಗಳು ನಮ್ಮ ಪ್ರತಿಷ್ಠೆ ಹೆಮ್ಮೆಯ ಪ್ರಶ್ನೆಯಾಗಿತ್ತು. ಆದರೆ ಕಾಲ ಬದಲಾದಂತೆ ಕುಸ್ತಿ, ಗರಡಿ ಮನೆಗಳು ಖಾಲಿಯಾಗಿವೆಯಲ್ಲದೆ ಕುಸ್ತಿ ಪಟುಗಳು ಸಹ ವಿರಳವಾಗಿದ್ದಾರೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಕೋಹಿನೂರ್ ವೆಲ್‌ಫೇರ್ ಟ್ರಸ್ಟ್‌ನವರು ಗರಡಿ ಮನೆಯನ್ನು ನಿರ್ಮಿಸಿರುವುದು ಮೆಚ್ಚುವಂತ ಕಾರ್ಯ, ಇದರಿಂದ ಯುವಜನರು ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಫೈಲ್ವಾನ್ ಉಮಾಯನ್ ಖಾನ್, ಕೋಹಿನೂರ್ ಟ್ರಸ್ಟ್‌ನ ಅಮ್ಜದ್ ನವಾಜ್, ಸಯ್ಯದ್ ಹುಸೇನ್, ಮಹಬೂಬ್ ಪಾಷ ಮತ್ತಿತರರು ಹಾಜರಿದ್ದರು.
ಸಂಕ್ರಾಂತಿ ಹಬ್ಬ
ಶಿಡ್ಲಘಟ್ಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಲ್ಲೂರುಪೇಟೆಯಿಂದ ಎತ್ತುಗಳನ್ನು ದೇವರ ಪಲ್ಲಕ್ಕಿಯೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಸಮಾಜದಲ್ಲಿ ಸಮಾನತೆ ಬಹು ಮುಖ್ಯ
ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬದುಕಲು ಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ಹೇಳಿದರು.
ನಗರದ ಕೋಟೆ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಶೂದ್ರಶಕ್ತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಭಾರತ ದೇಶದಲ್ಲಿ ಹುಟ್ಟಿಬೆಳೆದಿರುವ ನಮಗೆ ವೇದಗಳನ್ನು ಕಲಿಯುವಂತಹ ಸ್ವಾತಂತ್ರ್ಯವಿಲ್ಲವೆ. ಒಕ್ಕಲಿಗ, ಲಿಂಗಾಯಿತ, ಕುರುಬ, ಕುಂಬಾರ, ಬಣಜಿಗ, ಗೊಲ್ಲ, ಬೇಡ, ಬೆಸ್ತ, ಅಗಸ, ನಾಯಿಂದ, ಇಡಿಗ, ತಿಗಳ, ದಲಿತ, ಗಿರಿಜನ, ಕೊರಚ, ಬೋವಿ, ಉಪ್ಪಾರ, ನೇಕಾರ, ಕೊರಮ, ವಡ್ಡ, ಬಂಜಾರ ಮರಾಠ ಮುಂತಾದವರೆಲ್ಲರೂ ಶೂದ್ರರೇ ಆಗಿದ್ದು, ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಜಿಸಲಾಗಿದೆ. ಹಾಗಾಗಿ ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಪಶು ಸಂಗೋಪನಾ ಇಲಾಖೆಯ ಅಡಿಷನಲ್ ಡೈರೆಕ್ಟರ್ ಚಲುವಯ್ಯ ಮಾತನಾಡಿ, ಸತತ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಕಳೆಯನ್ನು ಕಳೆದುಕೊಳ್ಳುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು, ರೈತರ ಉಳಿವಿಗಾಗಿ ಪಶುಸಂಗೋಪನೆ ಸಹಕಾರಿಯಾಗಿದೆ. ಪಶುಸಂಗೋಪನೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಅತ್ಯುತ್ತಮ ರೈತರೆಂದು ಸೊಣ್ಣೇನಹಳ್ಳಿಯ ನರಸಿಂಹಪ್ಪ ಹಾಗು ಅಮೂರು ತಿಮ್ಮನಹಳ್ಳಿಯ ಆಂಜಿನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ಹಿತ್ತಲಹಳ್ಳಿ ಗೋಪಾಲಗೌಡ, ನಾರಾಯಣಸ್ವಾಮಿ, ಶೂದ್ರಶಕ್ತಿ ಸಮಿತಿಯ ಗೋವಿಂದರಾಜು ಮತ್ತಿತರರು ಹಾಜರಿದ್ದರು.
ಕಸಾಪದಿಂದ ‘ಸುಗ್ಗಿ-ಹುಗ್ಗಿ ಸಂಕ್ರಾಂತಿ ಜಾನಪದ ಸಂಭ್ರಮ’ ಕಾರ್ಯಕ್ರಮ
ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಧಾರ್ಮಿಕ ಹಿನ್ನೆಲೆಯ ಜತೆಗೆ ರೈತರಿಗೆ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಹಂಚಿಕೊಂಡು ಸಂಭ್ರಮಿಸುವ ದಿನ ಇದಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಕಸಾಪ ತಾಲ್ಲೂಕು ಘಟಕ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಆಚರಿಸಿದ ಸುಗ್ಗಿ-ಹುಗ್ಗಿ ಸಂಕ್ರಾಂತಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯೆಂದರೆ, ರೈತಪರಿವಾರವು ತಮ್ಮ ಬೆಳೆ, ಹೊಲ, ಎತ್ತು, ದನ ಕರುಗಳ ಜತೆ ಸಂಭ್ರಮಿಸುವ ಹಬ್ಬ. ನಮ್ಮಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತೇವೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ತಿಂಡಿಯನ್ನೇ ಈ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು , ಜೊತೆಗೆ ಕಬ್ಬಿನ ತುಂಡುಗಳ ಮಿಶ್ರಣವನ್ನು ತಯಾರಿಸಿ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಗ್ರಾಮಗಳಲ್ಲಿ ಎತ್ತುಗಳು ಕಡಿಮೆಯಾಗುತ್ತಿವೆ, ಬಹುತೇಕ ಕೃಷಿ ಪರಿಕರಗಳು ಮಾಯವಾಗಿವೆ. ಆಧುನಿಕತೆಯು ಜಾನಪದವನ್ನು ಕಳೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಂಗೋಲಿ ಹಾಕಿ, ರಾಗಿಯ ರಾಶಿಗೆ ಮಾವಿನ ಸೊಪ್ಪು, ಕಬ್ಬು, ಹೂಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿ, ಕೃಷಿ ಪರಿಕರಗಳಾದ ನೊಗ, ನೇಗಿಲು, ಮೊರ, ಕುಡುಗೋಲು, ಜರಡಿ, ಕೈತಂತಿ ಮುಂತಾದ ಕಣದ ಸಾಮಾನುಗಳನ್ನು ಜೋಡಿಸಿಟ್ಟು, ಕಬ್ಬು, ಕಾಶಿ ಮತ್ತು ಊಶಿ ಹುಲ್ಲು, ಮಾವಿನ ಸೊಪ್ಪು, ಶೃಂಗರಿಸಿದ ಎತ್ತುಗಳ ಜೊತೆಯಲ್ಲಿಟ್ಟು ಪೂಜೆ ಸಲ್ಲಿಸಿದರು. ಎತ್ತುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಕಬ್ಬನ್ನು ತಿನ್ನಿಸಿದರು. ಭಾಗವಹಿಸಿದ್ದವರಿಗೆಲ್ಲಾ ಎಳ್ಳು ಬೆಲ್ಲವನ್ನು ಹಂಚಲಾಯಿತು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ಗ್ರಾಮದಲ್ಲಿ ಉತ್ತಮವಾಗಿ ರಂಗೋಲಿ ಹಾಕಿದ್ದ ಮಹಿಳೆಯರಾದ ಪುಷ್ಪ ಪ್ರಸಾದ್, ಭವ್ಯ, ಅಂಜಲಿ, ನಿಖಿತ, ಹೆಚ್ಚು ಹಾಲು ಉತ್ಪಾದಿಸುವ ಆನಂದಮೂರ್ತಿ, ತಳವಾರ ಮುನಿಕೃಷ್ಣಪ್ಪ, ಎತ್ತುಗಳ ಮಾಲೀಕ ವೆಂಕಟೇಶ್, ಗ್ರಾಮದ ಹಿರಿಯ ರೈತ ಬಸಪ್ಪ ಹಾಗೂ ಉತ್ಸಾಹಿ ಯುವಕರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಬಿ.ನಾಗರಾಜ್, ಎಸ್.ಚಂದ್ರಶೇಖರ್, ಕೆ.ಶ್ರೀನಾಥ್, ಎಂ.ಪ್ರಸಾದ್, ಎಂ.ಶ್ರೀಕಾಂತ್, ಎಂ.ಮುನಿರಾಜು, ಜಿ.ವೇಣು, ಜಿ.ನರಸಿಂಹಮೂರ್ತಿ, ಶ್ರೀನಿವಾಸ್, ಟಿ.ಪ್ರತೀಪ್, ಮುನಿಕೃಷ್ಣಪ್ಪ, ಹನುಮಂತರೆಡ್ಡಿ, ಚಿಕ್ಕಣ್ಣ, ವೆಂಕಟೇಶ್, ಸಂಪತ್ತು, ಪ್ರಸನ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು
ಶಿಕ್ಷಣದಲ್ಲಿ ಮೌಲ್ಯಗಳು ಉಳಿಯಬೇಕಾದರೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯ. ಉತ್ತಮ ಬೋಧಕ ವೃಂದ ಮತ್ತು ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದು ಮತ್ತು ಫಲಿತಾಂಶದ ಇಳಿಕೆ ಆಘಾತಕರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ದಿವಂಗತ ಎಂ.ಕೃಷ್ಣಪ್ಪ ವೇದಿಕೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಭಾಷೆಯನ್ನು ಕೇವಲ ಸಂವಹನ ಭಾಷೆಯಷ್ಟೆ ಆದರೂ ಉನ್ನತ ಶಿಕ್ಷಣವನ್ನು ಇಂಗ್ಲೀಷಿನ ಮಾದ್ಯಮದಲ್ಲಿ ಕಲಿಯಬೇಕಿರುವುದರಿಂದ ಹಾಗೂ ಉದ್ಯೋಗದ ಉದ್ದೇಶದಿಂದ ಖಾಸಗಿ ಶಾಲೆಗಳತ್ತ ಪೋಷಕರು ಮೊರೆ ಹೋಗುತ್ತಿದ್ದಾರೆ. ಶಿಕ್ಷಣವೆಂದರೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಪೋಷಕರು ಮಕ್ಕಳಿಗೆ ಒತ್ತಡದ ಬದುಕನ್ನು ನೀಡಬಾರದು ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯರ ಸಮಿತಿ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಿದಲ್ಲಿ ಖಾಸಗಿ ಶಾಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಮನವಿ ಸಲ್ಲಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಅವರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಶೀಘ್ರವಾಗಿ ಜಾರಿಯಾಗಬಹುದು ಎಂದರು. ಮೇಲೂರಿನ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿಗಳು ಮಂಜೂರಾಗಿದೆ ಎಂದು ತಿಳಿಸಿದರು.
ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ವೈದ್ಯ ಡಾ.ಡಿ.ಕೆ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳ ನೆನಪಿನ ಶಕ್ತಿ ವೃದ್ಧಿಸಲು ಉತ್ತಮ ಆರೋಗ್ಯ ಹೊಂದಬೇಕು. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ಈ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಕಾಳಜಿ ವಹಿಸಬೇಕು. ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾದ ಆದ್ಯತೆಯನ್ನು ನೀಡಬೇಕು. ಆಗ ಮಾತ್ರ ದೈಹಿಕ, ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮಗುವಿನ ಗ್ರಹಣಾ ಶಕ್ತಿಯೂ ವೃದ್ಧಿಸುತ್ತದೆ. ಕೇವಲ ಅಂಕ ಗಳಿಕೆಯಷ್ಟೇ ವಿದ್ಯಾಭ್ಯಾಸವಲ್ಲ, ನೈತಿಕ, ಮೌಲ್ಯಯುತ ಶಿಕ್ಷಣ ಮುಖ್ಯ. ಒತ್ತಡದ ಜೀವನ ಅನಾರೋಗ್ಯಕ್ಕೆ ದಾರಿ ಎಂದು ಹೇಳಿದರು.
ಶಾಲೆಯಲ್ಲಿ ನಡೆದಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 50 ವಿದ್ಯಾರ್ಥಿಗಳಿಗೆ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ನಿವೃತ್ತ ಶಿಕ್ಷಕ ದಿವಂಗತ ಎಂ.ಕೃಷ್ಣಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ನಡೆಸಲಾಯಿತು.
ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್, ಪವಾಡ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಉನ್ನತ ಸರ್ಕಾರಿ ಹುದ್ದೆಯಲ್ಲಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಅಗ್ನಿಶಾಮಕದಳದ ಎಂ.ಎಲ್.ಕಿಶೋರ್, ಪಿಡಿಓ ಕಾತ್ಯಾಯಿನಿ, ಉಪವಲಯ ಅರಣ್ಯಾಧಿಕಾರಿ ರಘು, ಉಪನ್ಯಾಸಕಿ ಅಶ್ವಿನಿ ಮತ್ತು ಏರೋಸ್ಪೇಸ್ ಕಂಪೆನಿಯಲ್ಲಿನ ಉದ್ಯೋಗಿ ನವೀನ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೈ.ಜೆ.ಜನಾರ್ಧನ್, ಗ್ರಾಮ ಪಂಚಾಯಿತಿ ಅಧರ್ಯಕ್ಷೆ ಜಮುನಾ ಧರ್ಮೇಂದ್ರ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ಮೇಲೂರು ವೈದ್ಯಾಧಿಕಾರಿ ಚೌಡಸಂದ್ರ ಡಾ.ಎನ್.ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್, ಮುಖ್ಯ ಶಿಕ್ಷಕಿ ಕೆ.ಮಂಗಳಗೌರಮ್ಮ, ಎಂ.ಪಿ.ಸಿ.ಎಸ್. ಅಧ್ಯಕ್ಷ ಶ್ರೀನಿವಾಸಮೂರ್ತಿ, ಆರ್.ಎ. ಉಮೇಶ್, ಧರ್ಮೇಂದ್ರ, ಮಾಲಾಶ್ರೀ, ಶ್ರೀನಿವಾಸ್, ಕುಮಾರಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲಾಧಿಕಾರಿಯಿಂದ ಪುಣೆಯ ಆಸಕ್ತರಿಗೆ ರೇಷ್ಮೆ ಪಾಠ
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಶಿಡ್ಲಘಟ್ಟ ರೇಷ್ಮೆಗೆ ಮನಸೋತಿರುವ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರು ಮಹಾರಾಷ್ಟ್ರದ ತಮ್ಮ ಊರು ಪುಣೆಯಿಂದ ಆಸಕ್ತರನ್ನು ಕರೆ ತಂದು ಶುಕ್ರವಾರ ಚಿಟ್ಟೆಯಿಂದ ಬಟ್ಟೆಯವರೆಗೂ ವಿವಿಧ ಹಂತಗಳ ರೇಷ್ಮೆ ಕೆಲಸವನ್ನು ತೋರಿಸಿ ವಿವರಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಬೇಟಿ ನೀಡಿದ್ದ ಅವರು, ಗೂಡಿನ ಗುಣಮಟ್ಟ, ಇ ಹರಾಜು ಪ್ರಕ್ರಿಯೆ, ಸೇರಿದಂತೆ ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ನಂತರ ಬೈಪಾಸ್ ರಸ್ತೆಯಲ್ಲಿರುವ ನಾರಾಯಣಪ್ಪ ಎಂಬುವರ ನೂಲು ಬಿಚ್ಚಾಣಿಕೆ ಕೇಂದ್ರಕ್ಕೆ ಬೇಟಿ ನೀಡಿದ್ದ ಅವರು, ಗೂಡಿನಿಂದ ನೂಲು ಬಿಚ್ಚಾಣಿಕೆ ಮಾಡುವುದು, ನೂಲು ಬಿಚ್ಚಾಣಿಕೆ ಆದ ನಂತರ ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ರೇಷ್ಮೆನೂಲು ಬಿಚಾಣಿಕೆ ಮಾಡುತ್ತಿರುವ ಕಾರ್ಮಿಕರಿಗೆ ಒದಗಿಸುತ್ತಿರುವ ಸವಲತ್ತುಗಳ ಬಗ್ಗೆ ರೀಲರುಗಳಿಂದ ಮಾಹಿತಿ ಪಡೆದುಕೊಂಡರು. ಸರ್ಕಾರದಿಂದ ರೀಲರುಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ಬೆಳ್ಳೂಟಿ ರೇಷ್ಮೆಮೊಟ್ಟೆ ಉತ್ಪಾದನಾ ಘಟಕಕ್ಕೆ ಬೇಟಿ ನೀಡಿ ಮೊಟ್ಟೆ ಉತ್ಪಾದನೆಯ ಬಗ್ಗೆ ಮಾಹಿತಿ ಪಡೆದ ನಂತರ ಬೋದಗೂರು ಗ್ರಾಮಕ್ಕೆ ತೆರಳಿದ ಅವರು, ಗ್ರೇನೆಜ್‌ಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ತಿಳಿದುಕೊಂಡರು. ರೇಷ್ಮೆಹುಳು ಸಾಕಾಣಿಕೆ, ಹುಳು ಮನೆಯ ನಿರ್ಮಾಣ, ಹಿಪ್ಪುನೇರಳೆ ತೋಟಗಳ ನಿರ್ವಹಣೆ, ಸೇರಿದಂತೆ ರೈತರಿಂದ ಅನೇಕ ಮಾಹಿತಿಗಳನ್ನು ಪಡೆದುಕೊಂಡರು.
ರೀಲರುಗಳು ರೇಷ್ಮೆಗೂಡಿನಿಂದ ತಯಾರು ಮಾಡಿದ ಹಾರವನ್ನು ನೀಡಿ ಜಿಲ್ಲಾಧಿಕಾರಿಯವರನ್ನು ಗೌರವಿಸಿದರು.
ಚಿಕ್ಕಬಳ್ಳಾಪುರ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್, ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವೆಂಕಟೇಶಪ್ಪ, ರೀಲರುಗಳಾದ ನಾರಾಯಣಪ್ಪ, ರಾಮಕೃಷ್ಣಪ್ಪ ಮುಂತಾದವರು ಹಾಜರಿದ್ದರು.
ಸನ್ಮಾನ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಅಂಚೆ ಕಚೇರಿಯಲ್ಲಿ ಈಚೆಗೆ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಚೆ ಪೇದೆ ವಿ.ರಾಮಾಂಜನೇಯ ದಂಪತಿಗಳನ್ನು ಸನ್ಮಾನಿಸಲಾಯಿತು. ಅಂಚೆ ನಿರೀಕ್ಷಕ ವೆಂಕಟರಮಣಪ್ಪ, ರುದ್ರಾಚಾರಿ, ಗೋಪಾಲ್, ಶ್ರೀಧರ್, ಮಂಜುನಾಥ್, ರಾಜ್‌ಕುಮಾರ್ ಹಾಜರಿದ್ದರು.
ಕೌಶಲ್ಯ ಹೊಂದಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಬಹುದು
ತೀವ್ರ ಬರಗಾಲಕ್ಕೆ ತುತ್ತಾಗಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಬಯಲು ಸೀಮೆ ಭಾಗದಲ್ಲಿ ನಿರುದ್ಯೋಗಿ ಯುವಕ,ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡುವುದು ಒಳಿತು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ನಡ್ಜ್ ಫೌಂಡೇಷನ್ ವತಿಯಿಂದ ಯುವಸಬಲೀಕರಣ ಕಾರ್ಯಕ್ರಮದಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ೧೦೦ ದಿನಗಳ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಪ್ರಕ್ರಿಯೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರು ಯಾವುದೇ ಉದ್ಯೋಗಗಳನ್ನು ನಡೆಸಬೇಕಾದರೆ ಕೌಶಲ್ಯಗಳು ಪ್ರಾಮುಖ್ಯವಾಗಿ ಬೇಕು. ಮಾನಸಿಕ ಸಿದ್ಧತೆಗಳು, ಸಂವಹನ ಕಲೆ ಅಗತ್ಯವಾಗಿದೆ. ತಮ್ಮಲ್ಲಿರುವ ಕೌಶಲ್ಯಗಳ ಜೊತೆಗೆ ಪ್ರತಿಭೆಗಳನ್ನು ತೋರ್ಪಡಿಸಿಕೊಂಡು ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಿ ರೂಪುಗೊಳ್ಳಲು ಇಂತಹ ತರಬೇತಿಗಳು ಸಹಕಾರಿಯಾಗಲಿದ್ದು ಯುವಜನರು ಇಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಬರಪೀಡಿತವಾದ ನಮ್ಮ ಜಿಲ್ಲೆಯ ಯುವಜನರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಜಿಲ್ಲೆಯಲ್ಲಿ ಮುಂದಿನ ಪೀಳಿಗೆ ಬದುಕಬೇಕಾದರೆ ಪರಿಸರವನ್ನು ಕಾಪಾಡಿಕೊಳ್ಳಬೇಕು, ವಿದ್ಯೆ, ಕೆಲಸ, ಬದುಕಿನ ಜೊತೆಗೆ ನಮ್ಮ ಪರಿಸರವನ್ನು ಉಳಿಸುವ, ಹಸುರನ್ನು ಹೆಚ್ಚಿಸುವ ಸಮಾಜಕ್ಕೆ ಕೊಡುಗೆ ಸಲ್ಲಿಸುವ ಸಂಕಲ್ಪ ಮಾಡಬೇಕು. ಶಾಲಾ ಕಾಲೇಜಿನಲ್ಲಿ ಕಲಿತ ವಿದ್ಯೆಯಿಂದ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗದು. ಅದಕ್ಕಾಗಿ ಕೌಶಲ್ಯ ವೃದ್ಧಿಸಿಕೊಳ್ಳಬೇಕು. ನಮ್ಮ ಭಾಗದ ಯುವಜನರಿಗಾಗಿ ಕೌಶಲ್ಯ ವೃದ್ಧಿಸಿ ಕೆಲಸವನ್ನು ಕೊಡಿಸುವ ಈ ಕಾರ್ಯ ಶ್ಲಾಘನೀಯ ಎಂದರು.
ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಮಾತನಾಡಿ, ಸಮಸ್ಯೆಗಳ ಸರಮಾಲೆಯನ್ನೆ ಮೈಗಂಟಿಸಿಕೊಂಡು ಜೀವನ ಮಾಡುತ್ತಿರುವ ತಾಲ್ಲೂಕಿನ ಜನರ ಜೀವನಕ್ಕೆ ಆಸರೆಯಾಗುವ ಉದ್ದೇಶದಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಯುವಸಬಲೀಕರಣ ಕಾರ್ಯಕ್ರಮದಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ೧೦೦ ದಿನಗಳ ಉಚಿತ ವಸತಿ ರಹಿತ ಕೌಶಲ್ಯಾಧಾರಿತ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಈ ತರಬೇತಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಡ್ಜ್ ಫೌಂಡೇಷನ್ ವತಿಯಿಂದ ತರಬೇತಿ ಪಡೆಯುತ್ತಿರುವ ಯುವಕ ಯುವತಿಯರಿಂದ ತರಬೇತಿಯ ಅವಧಿಯಲ್ಲಿ ತಾವು ಕಲಿಯುತ್ತಿರುವ ಕಲಿಕೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ತರಬೇತಿಯ ವಿಧಾನಗಳ ಬಗ್ಗೆ ಪರದೆಯ ಮೇಲೆ ತೋರಿಸಿ ವಿವರಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಆನೂರು ದೇವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೋಟಹಳ್ಳಿ ದೇವರಾಜ್, ಅಶ್ವತ್ಥನಾರಾಯಣ್, ಮುನೇಗೌಡ, ದೇವರಾಜ್, ಅನುಸಾಬ್, ವಿಶ್ವನಾಥ್ ಮತ್ತಿತರರು ಹಾಜರಿದ್ದರು.
ಯುವಕರಲ್ಲಿ ನವೋತ್ಸಾಹವನ್ನು ತುಂಬಿದವರು ಸ್ವಾಮಿ ವಿವೇಕಾನಂದರು
ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದವರು. ಯುವಕರಲ್ಲಿ ನವೋತ್ಸಾಹವನ್ನು ತುಂಬಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ‘ದ್ಯಾವರ ಕೋಗಿಲೆ ಕಲಾ ತಂಡ’ದ ವತಿಯಿಂದ ಗುರುವಾರ ಸಂಜೆ ಆಚರಿಸಿದ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಜನಸಾಮಾನ್ಯರ, ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಅದಕ್ಕಿಂತ ಮುಖ್ಯವಾಗಿ ಮಾನವೀಯತೆಯ ಪ್ರತಿಪಾದಕರಾಗಿದ್ದರು. ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಜಗದ ಮಾನವೀಯತೆಯ ಬೆಳಕು, ಸರ್ವಧರ್ಮಗಳ ನೆಲೆವೀಡು ನಮ್ಮ ಭಾರತ ದೇಶ ಎಂದು ಹೇಳುವ ಮೂಲಕ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದ್ದರು. ವಿವೇಕಾನಂದರ ಜೀವನಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯ. ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಮೈಗೂಡಿಕೊಂಡರೆ, ಅದುವೇ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತೆ ಎಂದು ಹೇಳಿದರು.
ವಿಜಯಪುರದ ಛಾಯಾಗ್ರಾಹಕ ಲಕ್ಷ್ಮಣ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜನನ, ಬಾಲ್ಯ, ರಾಮಕೃಷ್ಣರ ಜೊತೆಗೆ, ಮಠದ ಸ್ಥಾಪನೆ, ಭಾರತ ಪರ್ಯಟಣೆ, ವಿಶ್ವ ಪರ್ಯಟಣೆ, ಸರ್ವಧರ್ಮ ಸಮ್ಮೇಳನ, ಅವರ ಭಾಷಣಗಳು ಮೊದಲಾದ ವಿಚಾರಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ‘ದ್ಯಾವರ ಕೋಗಿಲೆ ಕಲಾ ತಂಡ’ದ ವತಿಯಿಂದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ದೇಶಭಕ್ತಿಗೀತೆಗಳನ್ನು ಹಾಡಿದರು.
ಶಿಕ್ಷಕ ಜಗದೀಶ್, ರೆಡ್ಡಿಸ್ವಾಮಿ, ವೆಂಕಟೇಶ್, ರಶ್ಮಿ, ಮಹೇಶ್‌ಕುಮಾರ್, ಪ್ರವೀಣ್, ನಿತೀಶ್, ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.
ವಿವೇಕಾನಂದರ ಜನ್ಮದಿನೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವೇಷಧರಿಸಿದ್ದ ಪುಟ್ಟ ಮಕ್ಕಳು ಮುಗ್ಧತೆಯಿಂದ ಸಾಲಾಗಿ ಕುಳಿತಿದ್ದರು.
ತೀವ್ರ ಮದ್ಯ ಸೇವಿಸಿ ವ್ಯಕ್ತಿ ಮೃತ
ವ್ಯಕ್ತಿಯೊಬ್ಬ ತೀವ್ರ ಮದ್ಯ ಸೇವಿಸಿ ನಿತ್ರಾಣಗೊಂಡು ಮೃತಪಟ್ಟ ಘಟನೆ ಶಿಡ್ಲಘಟ್ಟ ನಗರದ ಹೊರವಲಯದ ಟೋಲ್‌ಗೇಟ್ ಬಳಿಯ ತೋಟದ ಮನೆಯೊಂದರ ಬಳಿ ನಡೆದಿದೆ.
ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಟೋಲ್ ಗೇಟ್ ಬಳಿಯ ತೋಟದ ಮನೆಯಲ್ಲಿ ೨೭ ವರ್ಷದ ಕೃಷ್ಣಮೂರ್ತಿ ಎಂಬಾತ ವಿಪರೀತ ಮದ್ಯ ಸೇವಿಸಿ ಅನ್ನ ಆಹಾರ ಸೇವಿಸದೆ ವಿಪರೀತ ನಿತ್ರಾಣಗೊಂಡು ಮಲಗಿದ್ದಲ್ಲೆ ಮೃತಪಟ್ಟಿದ್ದಾನೆ.
ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತರ ತಾಯಿ ಅಶ್ವತ್ಥಮ್ಮ ನೀಡಿದ ದೂರನ್ನು ದಾಖಲಿಸಿಕೊಂಡು ಮೃತನ ಶವಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ತೀವ್ರ ಕುತೂಹಲ ಕೆರಳಿಸಿದ್ದ ಎಪಿಎಂಸಿ ಸಮಿತಿಗೆ ಮತದಾನ; ಮತದಾನದಿಂದ ದೂರ ಉಳಿದ ಜೆಡಿಎಸ್
ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಮತದಾನದಿಂದ ದೂರವೇ ಉಳಿದಿದ್ದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಗಳೆ ಇಲ್ಲದ ಮತದಾನ ನೀರಸವಾಗಿ ನಡೆಯಿತು.
ತಾಲ್ಲೂಕಿನ ಐದು ಎಪಿಎಂಸಿ ಕ್ಷೇತ್ರಗಳಿಗೆ ಗುರುವಾರ ಬೆಳಗ್ಗೆ ೮ ಗಂಟೆಯಿಂದಲೆ ಮತದಾನ ಆರಂಭವಾಯಿತಾದರೂ ಚಳಿಯ ವಾತಾವರಣದಿಂದ ಬಿಸಿಲೇರುವ ತನಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಬಳಿ ಸುಳಿಯಲಿಲ್ಲ ವಾದ್ದರಿಂದ ಮತದಾನ ಪ್ರಕ್ರಿಯೆ ನೀರಸವಾಗಿತ್ತು.
ಬಿಸಿಲೇರುತ್ತಿದ್ದಂತೆ ಮತಗಟ್ಟೆ ಬಳಿ ಮತದಾರರು ಒಬ್ಬೊಬ್ಬರಾಗಿ ನಿಧಾನವಾಗಿ ಸುಳಿಯತೊಡಗಿದ್ದು ನಿಧಾನಗತಿಯಲ್ಲಿ ಮತದಾನ ನಡೆಯಿತು.
ಮತದಾನ ಆರಂಭವಾದ ಮೇಲೂ ಮತಗಟ್ಟೆಯ ಬಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ನಿಂತು ಮತದಾರರನ್ನು ಮನವೊಲಿಸುವ ಕೊನೆಯ ಕಸರತ್ತು ನಡೆಯಿತು. ಎಲೆ ಅಡಿಕೆ ತಾಂಬೂಲ ನೀಡಿ ನಮಗೆ ಮತ ನೀಡುವಂತೆ ಮತದಾರರ ಮನವೊಲಿಸಿದರು.
ಆದರೆ ಈ ಮೊದಲೆ ಪ್ರಕಟಿಸಿದಂತೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮತಗಟ್ಟೆ ಬಳಿ ಸುಳಿಯಲಿಲ್ಲ.
ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಯಾವುದೆ ಮತಗಟ್ಟೆಯಲ್ಲೂ ಏಜೆಂಟರೂ ಸಹ ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ ಜೆಡಿಎಸ್ ಪಕ್ಷದ ಮತದಾರರೂ ಎಲ್ಲೂ ಹೆಚ್ಚಾಗಿ ಕಾಣಲಿಲ್ಲ.
ಬಹುತೇಕ ಎಲ್ಲ ಮತಗಟ್ಟೆಗಳ ಬಳಿಯೂ ಚುನಾವಣೆಯ ಆತುರ ಕಾತುರ ಲಘು ಬಗೆ ಇಲ್ಲದೆ ನೀರಸವಾದ ವಾತಾವರಣ ಇತ್ತು.
ಶೇ. ೩೭ರಷ್ಟು ಮತದಾನ ನಡೆಯುವ ಮೂಲಕ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಅತಿ ಕಡಿಮೆ ಪ್ರಮಾಣದ ಮತದಾನಕ್ಕೆ ಈ ಎಪಿಎಂಸಿ ಚುನಾವಣೆ ಸಾಕ್ಷಿಯಾಯಿತು.
ಇನ್ನು ಸಂಸದ ಕೆ.ಎಚ್.ಮುನಿಯಪ್ಪ ಶಿಡ್ಲಘಟ್ಟ ಎಪಿಎಂಸಿ ಕ್ಷೇತ್ರದ ಮೇಲೂರು ಗ್ರಾಮದಲ್ಲಿ ಮತ ಚಲಾಯಿಸಿದರೆ ಮಾಜಿ ಸಚಿವ ವಿ.ಮುನಿಯಪ್ಪ ತಮ್ಮ ಪತ್ನಿಯೊಂದಿಗೆ ಹಂಡಿಗನಾಳ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಇನ್ನಿತರೆ ಪ್ರಮುಖರು ಮತಗಟ್ಟೆಯತ್ತ ಸುಳಿಯಲೇ ಇಲ್ಲ.
ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಗುರುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ. ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಮಲಿಂಗೇಶ್ವರ ಬೆಟ್ಟ ಪುರಾತನವಾದ ಹಾಗೂ ಪ್ರಸಿದ್ಧಿಪಡೆದ ಕ್ಷೇತ್ರವಾಗಿದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಪರಿಸರ ಹಲವು ವಿಶೇಷತೆಗಳನ್ನು ಹೊಂದಿದ್ದು, ಬ್ರಹ್ಮರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ರಥೋತ್ಸವದ ಸಂದರ್ಭಕ್ಕೆ ದನಗಳ ಜಾತ್ರೆಯು ಕೂಡ ನಡೆಯಿತು. ರಾಸುಗಳನ್ನು ಕೊಳ್ಳಲು ಮತ್ತು ಮಾರಲು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು.
ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೇ ಇರುವ ಬೆಟ್ಟ, ದೇವಾಲಯ ಮುಜರಾಯಿಯದ್ದಾದರೂ, ಪ್ರತಿವರ್ಷ ಜನವರಿ ತಿಂಗಳ ಶುಕ್ಲ ಪಕ್ಷದ ಚತುರ್ದಶಿಯಂದು ನಡೆಯುವ ಬ್ರಹ್ಮರಥೋತ್ಸವದ ನಿರ್ವಹಣೆಯನ್ನು ದೇವಾಲಯ ಸಂಚಾಲಕರಾದ ಎಂ.ಸುನೀತ ಶ್ರೀನಿವಾಸರೆಡ್ಡಿ ಮತ್ತು ಕುಟುಂಬದವರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.
ವಿಶ್ವ ಭ್ರಾತತ್ವವನ್ನು ಬೆಸೆದವರು ಸ್ವಾಮಿ ವಿವೇಕಾನಂದರು
ವಿಶ್ವಕ್ಕೆ ಸಹೋದರತ್ವ ಹಾಗೂ ಭಾರತೀಯ ಸಂಸ್ಕೃತಿ ಪರಂಪರೆ ಪರಿಚಯಿಸಿ, ವಿಶ್ವ ಭ್ರಾತತ್ವವನ್ನು ಬೆಸೆದವರು ಸ್ವಾಮಿ ವಿವೇಕಾನಂದರು ಎಂದು ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ತಿಳಿಸಿದರು.
ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ‘ವಿಶ್ವ ಯುವ ದಿನಾಚರಣೆ’ ಅಂಗವಾಗಿ ನಡೆಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಮಹಂಸರ ಶಿಷ್ಯನಾಗಿ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿ, ಪರಂಪರೆ ಪರಿಚಯಿಸಿದ ಮಹಾನ್ ವ್ಯಕ್ತಿ ವಿವೇಕಾ ನಂದ. ಜಾತಿ, ಮತ, ಪಂಥ, ಭೇದ ಗಳನ್ನು ಮೆಟ್ಟಿ ನಿಂತ ಅವರ ಆದರ್ಶ ಗುಣಗಳು ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಅವರ ಆದರ್ಶ ಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿ ಕೊಂಡು, ಉತ್ತಮ ಪ್ರಜೆಗಳಾಗಿ, ದೇಶದ ಆಸ್ತಿಯಾಗಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕ್ರಿಯಾಶೀಲತೆ ಮತ್ತು ನೈತಿಕ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುವತ್ತ ವಿವೇಕಾನಂದರ ಸಂದೇಶಗಳು ಪ್ರಸ್ತುತವಾಗಿ ಅಗತ್ಯವಾಗಿವೆ.ಯುವ ಜನಾಂಗದಲ್ಲಿ ರಾಷ್ಟ್ರ ಕಟ್ಟುವ ಮತ್ತು ದೇಶದ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ಯುವ ಜನರ ಶಕ್ತಿ ಮಹತ್ತರವಾದುದು ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾಗಿ ಆಗಮಿಸಿದ್ದ ವಕೀಲ ಟಿ.ವಿ.ಚಂದ್ರಶೇಖರಗೌಡ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಮಾತನಾಡಿದರು.
ಹಿರಿಯ ವಕೀಲ ಜಿ.ಎನ್.ವಿಶ್ವನಾಥಪ್ಪ, ಐಟಿಐ ಶಿಕ್ಷಕ ಶ್ರೀನಿವಾಸ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಐಟಿಐ ಶಿಕ್ಷಕರಾದ ಮಂಜುನಾಥ, ಸುವರ್ಣಕುಮಾರಿ, ಸುಜಾತ, ವಿಶ್ವನಾಥ ಮತ್ತಿತರರು ಹಾಜರಿದ್ದರು.
ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯೆ ಕಲಿಯಿರಿ
ಹೊಟ್ಟೆಪಾಡಿಗಾಗಿ ವಿದ್ಯೆ ಕಲಿಯಬಾರದು. ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯೆಗೆ ಮಹತ್ವ ನೀಡಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಜೀ ಮಹಾರಾಜ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜವಾಬ್ದಾರಿಗಳನ್ನು ಹೆಗಲೆ ಮೇಲೆ ಹೊತ್ತುಕೊಂಡಷ್ಟೂ ಶ್ರೇಷ್ಠವಾದ ಚಿಂತನೆಗಳು ಮೂಡುತ್ತವೆ ಮತ್ತು ವ್ಯಕ್ತಿತ್ವ ಅರಳುತ್ತದೆ. ಅನಾವಶ್ಯಕ ವಿಚಾರಗಳೆಡೆಗೆ ಗಮನ ಹರಿಯುವುದಿಲ್ಲ. ತಪ್ಪುಗಳನ್ನು ಮಾಡದಂತೆ ಜೀವನ ಮಾಡುವುದನ್ನು ಕಲಿತವರನ್ನು ಮಾತ್ರ ವಿದ್ಯಾವಂತರೆನ್ನುತ್ತಾರೆ. ಶಕ್ತಿಯನ್ನು ಅನಾವಶ್ಯಕ ಸಂಗತಿಗಳಿಗೆ ವ್ಯಯಿಸಬೇಡಿ. ಸಾರ್ಥಕ ಕೆಲಸಗಳನ್ನು ಮಾಡಿ. ಆಲೋಚನೆಗಳು ಉನ್ನತ ಮಟ್ಟದಲ್ಲಿದ್ದಾಗ ಮಾತ್ರ ಸಂತಸದಿಂದಿರುತ್ತೀರಿ. ಸಕಾರಾತ್ಮಕ ಭಾವನೆಗಳಿಗೆ ಮಾತ್ರ ಹೃದಯದಲ್ಲಿ ಪ್ರವೇಶ ಮಾಡಲು ಅವಕಾಶ ನೀಡಿ ಎಂದು ಹೇಳಿದರು.
ನಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಮುಖ್ಯ. ಮೊಬೈಲ್, ಟೀವಿ, ಬೈಕ್ ಮೊದಲಾದ ಆಕರ್ಷಣೆಗಳಿಗೆ ಚಂಚಲ ಮನಸ್ಸು ಈಡಾಗದಂತೆ ಎಚ್ಚರವಹಿಸಿ. ಪ್ರತಿ ದಿನ ಹಣ್ಣು ಮತ್ತು ತರಕಾರಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು. ಮಕ್ಕಳು ಓದುವ ಸಮಯದಲ್ಲಿ ಪೋಷಕರು ಟೀವಿ ಹಾಕಬೇಡಿ, ಅವರ ಓದಿಗೆ ಸಹಕರಿಸಿ. ಲಿಖಿತ ರೂಪದಲ್ಲಿ ಪರೀಕ್ಷೆ ಇರುವುದರಿಂದ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಸ್ಫುಟವಾಗಿ, ಸುಂದರವಾಗಿ ಬರೆಯಬೇಕು. ಓದುವುದು, ಬರೆಯುವುದು, ಮನನ ಮಾಡುವುದು, ಸ್ಮರಣೆ ಮಾಡುವುದು ಬಹಳ ಮುಖ್ಯ. ಕಂಠಪಾಠ ಮಾಡಬೇಡಿ. ಅದು ಅಲ್ಪಕಾಲೀನ ಸ್ಮರಣೆಯಷ್ಟೆ. ಅರ್ಥಮಾಡಿಕೊಂಡು ಓದಿ ಎಂದು ಹೇಳಿದರು.
ಅನ್ನ ನೀಡುವ ಕೃಷಿಯಂಥ ಕಾಯಕವನ್ನು ನಿರ್ಲಕ್ಷಿಸಲಾಗುತ್ತಿದೆ. ಜೀವನಕ್ಕೆ ಅಗತ್ಯವಿರುವ ವೃತ್ತಿಗಳನ್ನು ಆಯ್ದುಕೊಂಡು ಹಣ, ಹೆಸರು ಮತ್ತು ಸಮಾಜದಲ್ಲಿ ಸ್ಥಾನಮಾನಗಳನ್ನು ಗಳಿಸಬಹುದು. ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಓದು, ತರಬೇತಿ, ವೃತ್ತಿ ಸಾಧ್ಯತೆಗಳ ಕುರಿತು ಮಾರ್ಗದರ್ಶನ ಅಗತ್ಯವಿದೆ. ಜಗತ್ತಿನಲ್ಲಿ ಬಿ.ಪಿ, ಮಧುಮೇಹ, ಥೈರಾಯ್ಡ್, ಅಲ್ಸರ್, ಕ್ಯಾನ್ಸರ್ ಮೊದಲಾದ ಗುಣಪಡಿಸಲಾಗದ ರೋಗಗಳಿಗೆ ಮೂಲ ಕಾರಣ ಚಿಂತೆ. ಚಿತೆ ಶವವನ್ನು ಸುಡುತ್ತೆ, ಚಿಂತೆ ಜೀವಂತ ಮನುಷ್ಯನನ್ನೇ ಸುಡುತ್ತದೆ. ಸಮಸ್ಯೆಯನ್ನು ಎದುರಿಸಿ ಚಿಂತಿಸಬೇಡಿ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಾದ ಸಿ.ಎನ್.ರತ್ನಮ್ಮ, ಪಿ.ಗೋದಾವರಿ ಮತ್ತು ದಿವಂಗತ ಕೃಷ್ಣಮೂರ್ತಿ ಅವರ ಪತ್ನಿ ವಿಜಯಮ್ಮ ಅವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ದಕ್ಷಿಣ ರೈಲ್ವೆ ವಲಯದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್.ಎಸ್.ಶ್ರೀಧರಮೂರ್ತಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್.ರಾಮಾಂಜನಪ್ಪ, ಕಾರ್ಯದರ್ಶಿ ಮಳ್ಳೂರು ಶಿವಣ್ಣ, ಪ್ರಾಂಶುಪಾಲ ಚಂದ್ರಕುಮಾರ್, ಗೋಪಾಲಪ್ಪ, ಮಳ್ಳೂರು ಹರೀಶ್, ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

