Home Blog Page 433

ಸೋಲಿನ ಭಯದಿಂದ ಜೆಡಿಎಸ್ ಪಕ್ಷದವರು ಹಿಂದೆ ಸರಿದಿದ್ದಾರೆ

0

ಎ.ಪಿ.ಎಂ.ಸಿ.ಚುನಾವಣೆಯಲ್ಲಿ ಸೋಲಿನ ಭಯದಿಂದ ಜೆಡಿಎಸ್ ಪಕ್ಷದವರು ಹಿಂದೆ ಸರಿದಿದ್ದಾರೆಯೆ ಹೊರತು ಅವರಿಗೆ ಎಲ್ಲಿಯೂ ಅನ್ಯಾಯವಾಗಿಲ್ಲವೆಂದು ಮಾಜಿ ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೨ ವರ್ಷಗಳಿಂದ ಎ.ಪಿ.ಎಂ.ಸಿ.ಗೆ ಚುನಾವಣೆ ನಡೆದಿರಲಿಲ್ಲ, ನ್ಯಾಯಾಲಯವು ಜನವರಿ ೨೫ ರೊಳಗೆ ಚುನಾವಣೆಗಳನ್ನು ನಡೆಸಿ ವರದಿ ಒಪ್ಪಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಚುನಾವಣೆಗೆ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಗಳನ್ನು ನಿಯಮಾನುಸಾರ ಮುಕ್ತಾಯಗೊಳಿಸುವಂತಹ ಸಂಪೂರ್ಣ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಿ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯ ಮಾಡಿದ್ದಾರೆ.
ಸರ್ಕಾರ ನಮ್ಮದಿದ್ದರೂ ನಾವು ಚುನಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಳೆದ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹಿನ್ನಡೆಯಾದರೂ ಒಪ್ಪಿಕೊಂಡಿದ್ದೇವೆ. ಈಗ ಹಸ್ತಕ್ಷೇಪ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬೇಕಾದಂತಹ ಅನಿವಾರ್ಯತೆ ನಮಗಿಲ್ಲ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದರೆ ಅದಕ್ಕೆ ಅಧಿಕಾರಿಗಳು ಹೊಣೆಯಾಗುತ್ತಾರೆಯೆ ಹೊರತು ನಮಗೂ ಅದಕ್ಕೂ ಸಂಬಂಧವಿಲ್ಲ. ಎ.ಪಿ.ಎಂ.ಸಿ.ನಲ್ಲಿ ಇದುವರೆಗೂ ಆಡಳಿತಾಧಿಕಾರಿ ಇರುವುದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಆದ್ದರಿಂದ ನಾವು ನ್ಯಾಯಾಲಯದ ಮೊರೆ ಹೋಗಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದ್ದೇವು. ಇದರಿಂದ ಚುನಾವಣೆ ಮಾಡಲು ಆಯೋಗ ಮುಂದಾಗಿದೆ.
ಮತದಾರರ ಪಟ್ಟಿಯ ಬಗ್ಗೆ ಯಾರದಾದರೂ ತಕರಾರು ಇದ್ದರೆ ಅರ್ಜಿಸಲ್ಲಿಸಲು ಅವಕಾಶ ನೀಡುತ್ತಾರೆ. ಸಮಯಾವಕಾಶ ಮುಕ್ತಾಯವಾಗುವವರೆಗೂ ಅಭ್ಯರ್ಥಿಗಳಾಗಲಿ, ರೈತರಾಗಲಿ ತರಾಕರು ಅರ್ಜಿ ಹಾಕಿಲ್ಲ. ಚುನಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ ಜೆಡಿಎಸ್ ನವರು ಎಲ್ಲಾ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದಾರೆ. ಚುನಾವಣೆ ಕೇವಲ ಒಂದು ದಿನ ಬಾಕಿ ಇರುವಾಗ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೆ ನೀಡಿರುವುದು ರೈತರ ಹಿತಕ್ಕಿಂತ ರಾಜಕೀಯ ಹಿತಾಸಕ್ತಿ ಹೆಚ್ಚಾಗಿರುವುದು ಕಂಡು ಬರುತ್ತದೆ.
ಜೆಡಿಎಸ್ ಪಕ್ಷದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವವರು ಯಾವುದೇ ಕ್ಷೇತ್ರದ ಅಭ್ಯರ್ಥಿಯಲ್ಲ. ಯಾರು ರೈತರ ಪರವಾಗಿದ್ದಾರೆ. ಯಾರು ರೈತರ ವಿರೋಧಿಗಳು ಎಂಬುದನ್ನು ರೈತರೇ ನಿರ್ಧರಿಸಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಪ್ಪ, ಎಸ್.ಎಂ.ನಾರಾಯಣಸ್ವಾಮಿ, ಲಗಿನಾಯಕನಹಳ್ಳಿ ಮುನಿಯಪ್ಪ, ಗಂಗನಹಳ್ಳಿ ಬಿ.ಸಿ.ವೆಂಕಟೇಶಪ್ಪ, ಮಳ್ಳೂರು ನಾಗರಾಜ್, ಮುತ್ತೂರು ಚಂದ್ರೇಗೌಡ, ಎಲ್.ಮಧು, ದೇವರಾಜು ಮುಂತಾದವರು ಹಾಜರಿದ್ದರು.

ಎ.ಪಿ.ಎಂ.ಸಿ. ಚುನಾವಣೆಯಿಂದ ಜೆಡಿಎಸ್ ಪಕ್ಷ ಹೊರಗುಳಿಯಲು ನಿರ್ಧಾರ

0

ಕಾಂಗ್ರೆಸ್ ಪಕ್ಷದ ಅಧಿಕಾರ ದುರ್ಬಳಕೆ ಹಾಗೂ ನ್ಯಾಯಾಲಯದಲ್ಲಿ ಆಗಿರುವ ಹಿನ್ನಡೆಯಿಂದಾಗಿ ಜನವರಿ 12 ರಂದು ನಡೆಯಲಿರುವ ಎ.ಪಿ.ಎಂ.ಸಿ.ಚುನಾವಣೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ೫ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಹೊರಗುಳಿಯಲು ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಪಿ.ಎಂ.ಸಿ.ಚುನಾವಣೆಗೆ ಮೊದಲು ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮವಾಗಿದೆ ಎಂದು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದೆವು. ಇದೇ ದಿನದಲ್ಲಿ ರಾಜ್ಯ ಹೈಕೋರ್ಟ್‌ನಿಂದ ಮೊದಲ ಅಧಿಸೂಚನೆಗೆ ತಡೆಯಾಜ್ಞೆ ಬಂದಿತ್ತು.
ನಂತರ ಎರಡನೇ ಬಾರಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಸೂಚನೆ ಹೊರಡಿಸಲಾಯಿತು. ಕಾಂಗ್ರೆಸ್ ನವರು ಮೊದಲ ಅಧಿಸೂಚನೆಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮೊದಲ ಅಧಿಸೂಚನೆಯಂತೆಯೆ ಚುನಾವಣೆ ನಡೆಯಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನಾವೂ ಕೂಡಾ ಎರಡನೇ ಅಧಿಸೂಚನೆಯಂತೆ ನಮಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವು. ಡಿಸೆಂಬರ್‌ 29 ರಂದು ಎರಡನೇ ಅಧಿಸೂಚನೆಗೆ ತಡೆಯಾಜ್ಞೆ ನೀಡಲಾಗಿರುತ್ತದೆ.
ಅರ್ಜಿದಾರರಾದ ಡಾ.ಧನಂಜಯರೆಡ್ಡಿ ಅವರು ಸ್ಪರ್ಧಿಸಿರುವ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ ಮುಂದುವರೆಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಸೂಚನೆ ನೀಡಿರುತ್ತಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲವೆಂದು ಪುನಃ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವು. ಆದರೆ ನ್ಯಾಯಾಲಯದಿಂದ ಬಂದ ಆದೇಶದಲ್ಲಿ ನಮಗೆ ಹಿನ್ನಡೆಯಾಗಿರುವುದರಿಂದ ನಾವು ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿಲ್ಲದ ಕಾರಣ ಎಲ್ಲಾ ಅಭ್ಯರ್ಥಿಗಳು, ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಚುನಾವಣೆಯಿಂದ ದೂರವುಳಿಯುವಂತಹ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.
ಮುಖಂಡ ಬಿ.ಎನ್.ರವಿಕುಮಾರ್ ಮಾತನಾಡಿ, ಮಾಜಿ ಶಾಸಕ ವಿ.ಮುನಿಯಪ್ಪ ಅವರು ಹಿಂದಿನಿಂದಲೂ ವಾಮಮಾರ್ಗದಲ್ಲೆ ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ರೀತಿ ಈ ಚುನಾವಣೆಯಲ್ಲಿಯು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಧಿಕಾರ ದರ್ಬಳಕೆ ಮಾಡಿಕೊಂಡು ಈ ಬೆಳವಣಿಗೆಗಳಿಗೆ ಕಾರಣರಾಗಿದ್ದಾರೆ. ಶಿಡ್ಲಘಟ್ಟ ಟೌನ್ ೯ ನೇ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಬಾವಮೈದುನನ್ನು ನಿರ್ದೇಶಕನನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರಿ ಭೂಮಿಗಳನ್ನು ರೈತರ ಹೆಸರಿಗೆ ಪಹಣಿಗಳಲ್ಲಿ ಖಾತೆ ಬದಲಾವಣೆ ಮಾಡಿಸುವ ಮೂಲಕ ಅಕ್ರಮ ಎಸಗಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದರೂ ಕಾನೂನು ಹೋರಾಟ ಮುಂದುವರೆಯಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ, ನಾಗಮಂಗಲ ಶ್ರೀನಿವಾಸಗೌಡ, ಮುಗಲಡಪಿ ನಂಜಪ್ಪ, ತಾದೂರು ರಘು, ಮುಂತಾದವರು ಹಾಜರಿದ್ದರು.

ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಡಿವಿ.ಜಿ ಅಗ್ರಗಣ್ಯರು

0

ಆಧುನಿಕ ಭಾರತದ ಭಗವದ್ಗೀತೆ ಎಂದೇ ಕರೆಯಲ್ಪಡುವ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳಮುನಿಯನ ಕಗ್ಗ’ ರಚಿಸಿರುವ ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಲೋಕದ ‘ದೃವತಾರೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಮತ್ತು ಕದಿರಿನಾಯಕನಹಳ್ಳಿಯ ಎಸ್‌.ಆರ್‌.ಇ.ಟಿ ಶಾಲೆಯಲ್ಲಿ ಮಂಗಳವಾರ ನಡೆದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರು ಹುಟ್ಟಿದ್ದು ಅವಿಭಾಜ್ಯ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದವರು ಡಿ.ವಿ.ಜಿ.ಯವರು. ಡಿ.ವಿ. ಗುಂಡಪ್ಪನವರು ‘ಆಧುನಿಕ ಸರ್ವಜ್ಞ’ ಎಂದು ಕರೆಸಿಕೊಂಡವರು.
ವಿಶಾಲವಾದ ಆಲದ ಮರದಂತೆ ಅವರ ವ್ಯಕ್ತಿತ್ವ. ಆಲದ ಮರ ನೂರಾರು ಬಿಳಲು ಬಿಟ್ಟು ಉನ್ನತವೂ ವಿಶಾಲವೂ ಆಗಿರುವಂತೆ ಅವರ ವ್ಯಕ್ತಿತ್ವ ಹಲವಾರು ಸತ್ವಗಳಿಂದ ಕೂಡಿ ಶ್ರೀಮಂತವಾದದ್ದು. ಮನಸ್ಸು, ಮಾತು, ಕೃತಿ ಮೂರರಿಂದಲೂ ಅವರು ನಾಡಿನ ಏಳಿಗೆಗೆ ಶ್ರಮಿಸಿದರು. ಅದಕ್ಕಾಗಿ ಸ್ವಂತ ಸುಖಗಳನ್ನೂ ಅಲಕ್ಷಿಸಿದರು. ಸಮಾಜದ ಉನ್ನತಿಗಾಗಿ ತಮ್ಮ ಬದುಕನ್ನೇ ತೇಯ್ದ ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಅವರು ಅಗ್ರಗಣ್ಯರು ಎಂದು ವಿವರಿಸಿದರು.
ಕನ್ನಡ ಕವಿಗಳ ಪರಿಚಯವನ್ನು ಮಾಡಿಕೊಟ್ಟ ವಿದ್ಯಾರ್ಥಿಗಳಾದ ವಿ.ಕಾವ್ಯ, ಬಿ.ವಿ.ಸುನೀತ, ವಿಜ್ಞಾನಿಗಳ ಪರಿಚಯ ಮಾಡಿಕೊಟ್ಟ ಎಸ್‌.ಡಿ.ಕುಸುಮ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಿದ ಅಮೃತ, ಕವಿಪರಿಚಯ ಮಾಡಿದ ಸಾಗರ್‌, ಭಾವಗೀತೆಗಳನ್ನು ಹಾಡಿದ ಸಿ.ಎನ್‌.ಶೃತಿ, ಗೋವರ್ಧನ್‌ ರಾಜ್‌, ರಶ್ಮಿ ಅವರಿಗೆ ಕಸಾಪ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಕಸಾಪ ತಾಲ್ಲೂಕು ಘಟಕದಿಂದ ರತ್ನಕೋಶ, ಕನ್ನಡ ಮಾತನಾಡುವ ಬಗೆ, ಉಕ್ತಲೇಖನ ಬರೆಯುವ ಬಗೆ ಮುಂತಾದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಲಾಯಿತು. ಶಾಲೆಯ ಆವರಣದಲ್ಲಿ ಗಣ್ಯರು ಸಸಿ ನೆಟ್ಟರು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್‌ ಜಾನಪದ ಗೀತೆಗಳನ್ನು ಹಾಡಿದರು.
ಎಸ್‌.ಆರ್‌.ಇ.ಟಿ ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ, ಕಸಾಪ ತಾಲ್ಲೂಕು ಉಪಾಧ್ಯಕ್ಷ ಚೌಡಸಂದ್ರ ಪಿ.ಈ. ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ರಮೇಶ್‌, ಲೋಕೇಶ್‌, ಮುಖ್ಯಶಿಕ್ಷಕರಾದ ಗೌರಿಶಂಕರ್‌, ಟಿ.ವಿ.ಬೈರಪ್ಪ, ಶಿಕ್ಷಕರಾದ ಎಂ.ಕೃಷ್ಣಪ್ಪ, ಹನುಮಂತಪ್ಪ, ರಾಮಕೃಷ್ಣಾರೆಡ್ಡಿ, ನಾಗಚಂದ್ರ, ನಾರಾಯಣಸ್ವಾಮಿ, ಪಂಕಜ, ವೆಂಕಟೇಶ್‌ನಾಯಕ್‌, ಕೃಷ್ಣಾರೆಡ್ಡಿ, ಗಾಯಿತ್ರಿ, ಮುನಿರಾಜು, ನರಸಿಂಹನ್‌, ಮಾಲಾ, ಭವ್ಯ, ಬ್ರಹ್ಮಿಣಿ, ದೇವಿಕ ಮತ್ತಿತರರು ಹಾಜರಿದ್ದರು.

ನಿರುದ್ಯೋಗ ಯುವಕ, ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ

0

ತಾಲ್ಲೂಕಿನ ನಿರುದ್ಯೋಗ ಯುವಕ,ಯುವತಿಯರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ದಿ.ನಡ್ಜ್ ಪೌಂಡೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ನಂದನ್ ನೀಲಕೇಣಿ ಮತ್ತು ಟಾಟಾ ಟ್ರಸ್ಟ್ ನ ಸಹಕಾರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ ಕೌಶಲ್ಯಯುತ ೧೦೦ ದಿನಗಳ ತರಬೇತಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟಿನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವ ಸಬಲೀಕರಣ’ ಕಾರ್ಯಕ್ರಮವನ್ನು ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಜನವರಿ 13 ರ ಶುಕ್ರವಾರದಂದು ನಡೆಸಲಾಗುವುದು. ಬಡಜನರ ಜೀವನ ಮಟ್ಟ ಸುಧಾರಣೆ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಯುವ ಸಬಲೀಕರಣದೊಂದಿಗೆ ಸದೃಢ ಸಮಾಜದ ಆಶಯವನ್ನು ಇಟ್ಟುಕೊಂಡು ಬೆಂಗಳೂರಿನ ಕಾಡುಗೋಡಿಯಲ್ಲಿ ಉಚಿತ ಊಟ, ವಸತಿ ಸಹಿತ ೧೦೦ ದಿನಗಳ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ೧೮ ರಿಂದ ೩೫ ವರ್ಷದೊಳಗಿನ ಅವಿದ್ಯಾವಂತ ಅಥವಾ ಪಿಯುಸಿ ಓದಿರುವ ನಿರುದ್ಯೋಗಿ ಯುವಕ,ಯುವತಿಯರು ಭಾಗವಹಿಸಬಹುದಾಗಿದೆ. ವಾಹನ ಚಾಲನ ತರಬೇತಿ(ಪುರುಷರು), ಬ್ಯೂಟಿಷಿಯನ್ (ಮಹಿಳೆಯರು) ಡಾಟಾ ಎಂಟ್ರಿ, ಕಂಪ್ಯೂಟರ್, ಉತ್ತಮ ಕೌಶಲ್ಯಯುತ ಜೀವನ ಶೈಲಿ, ವ್ಯಕ್ತಿತ್ವ ವಿಕಸನ, ಆರ್ಥಿಕ ವ್ಯವಹಾರ ಜ್ಞಾನ, ಯೋಗ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ. ಮೂಲ ನೋಂದಾವಣಿ ಶುಲ್ಕ ಒಬ್ಬ ಅಭ್ಯರ್ಥಿಗೆ ೫೦೦ ಗಳನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ಭರಿಸಲಿದೆ ಎಂದರು.
ನಡ್ಜ್ ಸಂಸ್ಥೆಯ ಅಧಿಕಾರಿ ಜೈಕರ್ ಮಾತನಾಡಿ, ವಾಹನ ಚಾಲನಾ ತರಬೇತಿ ಪಡೆಯುವವರು ಹಾಗೂ ಬ್ಯೂಟಿಷಿಯನ್‌ಗೆ ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. ಡಾಟಾ ಎಂಟ್ರಿಗೆ ದ್ವೀತಿಯ ಪಿ.ಯು.ಸಿ. ಕಡ್ಡಾಯವಾಗಿರುತ್ತದೆ. ಪಾಸ್ ಪೋರ್ಟ್ ಅಳತೆಯ ೩ ಭಾವಚಿತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪತ್ರ, ವಯಸ್ಸಿನ ದೃಡೀಕರಣ ಪತ್ರ ನೀಡಬೇಕಾಗುತ್ತದೆ. ಒಂದು ತರಬೇತಿ ತಂಡದಲ್ಲಿ ೬೫ ಮಂದಿ ಇರುತ್ತಾರೆ. ಯುವಕರು, ಹಾಗೂ ಯುವತಿಯರಿಗೆ ಪ್ರತ್ಯೇಕವಾದ ವಸತಿ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೦೮೧೫೮೨೫೫೪೪೦, ೯೯೦೦೮೨೨೧೮೮, ೯೮೪೫೩೬೬೪೦೭ ಗೆ ಸಂಪರ್ಕಿಸಬಹುದಾಗಿದೆ ಎಂದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ : ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಎಂ.ವಿ.ಜೆ.ಹಾಸ್ಪಿಟಲ್, ಹೊಸಕೋಟೆ, ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ೧೭ ನೇ ಜನವರಿ ೨೦೧೭ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೂ ತಾಲ್ಲೂಕಿನ ಸಾದಲಿಯ ಸಾರ್ವಜನಿಕರ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಯೋಜನೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವವರು ಯಶಸ್ವಿನಿ ಅಥವಾ ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆಯ ಕಾರ್ಡ್ ಇದ್ದರೆ ಕಡ್ಡಾಯವಾಗಿ ತರುವುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದ್ದಾರೆ.
ಕೃಷಿಕ ಸಮಾಜದ ಅಧ್ಯಕ್ಷ ಆನೂರು ದೇವರಾಜ್, ಕನ್ನಮಂಗಲ ಶರತ್, ಮೋಹನ್, ಸಲಿಂಭಾಷಾ, ಬಾಬು, ಮತ್ತಿತರರು ಹಾಜರಿದ್ದರು.

ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ ಕೆಲಸವಾಗಲಿ

0

ಮಕ್ಕಳು ತಮ್ಮ ಅನುಭವವನ್ನು ಅಕ್ಷರ ರೂಪಕ್ಕಿಳಿಸುವಂತೆ ಮಾಡುವ ಮೂಲಕ ಅವರನ್ನು ಸಾಹಿತ್ಯದೆಡೆಗೆ ಆಸಕ್ತಿಯನ್ನು ಮೂಡಿಸಬಹುದು ಹಾಗೂ ಅವರ ಸೃಜನಶೀಲತೆಯನ್ನು ವೃದ್ಧಿಸಬಹುದಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಸಾಪ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಠ್ಯದೊಡನೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಷ್ಟೂ ಅವರ ಚುರುಕುತನ ಹೆಚ್ಚುತ್ತದೆ. ಓದುವ ಹವ್ಯಾಸವನ್ನು ಚಿಕ್ಕಂದಿನಿಂದಲೇ ರೂಢಿಸಿಕೊಂಡಾಗ ಮುಂದೆ ಅವರು ಪಕ್ವತೆಯನ್ನು ಹೊಂದಲು ಸಹಕಾರಿಯಾಗುತ್ತದೆ. ನಮ್ಮ ಭಾಷೆ, ಸಂಸ್ಕೃತಿಯ ಬೇರು ಗಟ್ಟಿಯಾಗಿದ್ದಾಗ ಮಾತ್ರ ನಮ್ಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು. ಹಾಡು ಹಾಡಿದ ಮಕ್ಕಳಿಗೆ ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ಕಸಾಪ ತಾಲ್ಲೂಕು ಘಟಕದಿಂದ ರತ್ನಕೋಶ, ಕನ್ನಡ ಮಾತನಾಡುವ ಬಗೆ, ಉಕ್ತಲೇಖನ ಬರೆಯುವ ಬಗೆ ಮುಂತಾದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಲಾಯಿತು. ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲೆಯ ವತಿಯಿಂದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್‌ ಜಾನಪದ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಚೌಡಸಂದ್ರ ಪಿ.ಈ. ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಗೌಡ, ನರಸಿಂಹಮೂರ್ತಿ, ವೆಂಕಟೇಶ್‌, ರಾಜಣ್ಣ, ಲೋಕೇಶ್‌, ಸಂತೋಷ್‌, ಮುಖ್ಯ ಶಿಕ್ಷಕ ಕೆ.ಮಂಜುನಾಥ್‌, ಶಿಕ್ಷಕಿ ಸುಜಾತ ಮತ್ತಿತರರು ಹಾಜರಿದ್ದರು.

ಪರಿಹಾರ ಧನ

0

ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಗರದ ಸೈಯ್ಯದ್ ಉನ್ನಿಸಾ ಎಂಬುವವರಿಗೆ ಮುಖ್ಯಮಂತ್ರಿಗಳ ಪರಿಹಾರ ಧನದಿಂದ ಮಂಜೂರಾಗಿದ್ದ ೭೫ ಸಾವಿರ ರೂಗಳ ಚೆಕ್ಕನ್ನು ಶಾಸಕ ಎಂ.ರಾಜಣ್ಣ ವಿತರಿಸಿದರು.

ವೈಕುಂಠ ದ್ವಾದಶಿ

0

ಶಿಡ್ಲಘಟ್ಟದ ಪುರಾಣ ಪ್ರಸಿದ್ಧ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾದಶಿಯ ಪ್ರಯುಕ್ತ ಸೋಮವಾರದಂದು ನಗರದ ವೈಕುಂಠದ ಬಾಗಿಲು ತೆಗೆಯಲಾಗಿತ್ತು. ಭಕ್ತರು ದೇವರ ಅಡಿಯಲ್ಲಿ ಹಾದು ಬರಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಸಿದ್ಧರಾಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ

0

ಶಿವಯೋಗಿ ಸಿದ್ಧರಾಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮುದಾಯದ ಮುಖಂಡರು ತಮ್ಮ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಸಿದ್ಧರಾಮ ಜಯಂತಿಯ ಆಚರಣೆಯು ಬೋವಿ ಸಮುದಾಯದವರ ಅಭಿವೃದ್ಧಿಗೆ ಪೂರಕವಾಗಿರುವಂತೆ ಆಚರಣೆ ಮಾಡಬೇಕು ಎಂದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಜನವರಿ 15 ರಂದು ಸಿದ್ಧರಾಮ ಜಯಂತಿಯ ಆಚರಣೆಯನ್ನು ವಿಶೇಷವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಬೋವಿ ಜನಾಂಗದ ಜಿಲ್ಲಾ ಉಪಾಧ್ಯಕ್ಷ ಎನ್‌.ಶ್ರೀನಿವಾಸ್‌, ತಾಲ್ಲೂಕು ಅಧ್ಯಕ್ಷ ಚಿಕ್ಕನರಸಿಂಹಯ್ಯ, ಗೌರವಾಧ್ಯಕ್ಷ ಕೆ.ವಿ.ಚಲಪತಿ, ತಾಲ್ಲೂಕು ಉಪಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಎನ್‌.ನರಸಪ್ಪ ಮತ್ತಿತರರು ಹಾಜರಿದ್ದರು.

ಮಹಿಳೆಯರು ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು

0

ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗ ನಿರ್ಮಿಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ವಿಚಾರ ಸಂಕಿರಣ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ರಾಧಾಕೃಷ್ಣ ರಾವ್ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರು ಪೇಟೆ ಸರ್ಕಾರಿ ಶಾಲೆಯ ಸಮುದಾಯ ಭವನದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ವಲಯ ಮಟ್ಟದ ಸ್ವ ಉದ್ಯೋಗ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರು ತಮ್ಮ ಮನೆಯಿಂದಲೇ ಅಲಂಕಾರಿಕ ವಸ್ತುಗಳನ್ನು ತಯಾರಿ ಮಾಡಿ ಆರ್ಥಿಕವಾಗಿ ಸಬಲರಾಗಬಹುದು. ಅದಕ್ಕೆ ಬೇಕಾದ ವಸ್ತುಗಳ ತಯಾರಿಗೆ ತರಬೇತಿ ಕಾರ್ಯ ಸೇರಿದಂತೆ ಅವಶ್ಯಕತೆ ಬಿದ್ದರೆ, ತಯಾರಿ ಮಾಡಿದ ವಸ್ತುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಗ್ರಾಮಾಭಿವೃದ್ದಿ ಯೋಜನೆಯಿಂದ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತ್ಯಾಜ್ಯ ರೇಷ್ಮೆಗೂಡಿನಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕ ವಿಜಯೇಂದ್ರ ಅಲಂಕಾರಿಕ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಂದ ತಯಾರಿಸಲಾದ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಅನಂದ್ ಮಾತನಾಡಿ ಮನೆಯ ಮಹಡಿಯ ಮೇಲೆ ತರಕಾರಿ ಕೃಷಿ ಮಾಡುವ ಬಗ್ಗೆ ಪ್ರಾತ್ಯಕ್ಷಿಕವಾಗಿ ವಿವರಣೆ ನೀಡಿ ಅದಕ್ಕೆ ಬೇಕಾದ ಪಾಲಿಥಿನ್ ಚೀಲ ಹಾಗು ತರಕಾರಿ ಗಿಡಗಳನ್ನು ವಿತರಿಸಿದರು.
ಕ್ಷೇತ್ರ ದರ್ಮಸ್ಥಳ ಗ್ರಾಮೀಣಾಬಿವೃದ್ದಿ ಯೋಜನೆಯ ಯೋಜನಾಧಿಕಾರಿ ಮೋಹನ್, ಕೃಷಿ ಇಲಾಖೆಯ ಮೇಲ್ವಿಚಾರಕ ಜನಾರ್ದನ, ಮೇಲ್ವಿಚಾರಕಿ ಮಮತ ಮತ್ತಿತರರು ಹಾಜರಿದ್ದರು.

ಕ್ರೀಡೆಯು ಬದುಕು ರೂಪಿಸುವ ಪ್ರಮುಖ ಮಾಧ್ಯಮ

0

ಕ್ರೀಡೆಯು ಬದುಕು ರೂಪಿಸುವ ಪ್ರಮುಖ ಮಾಧ್ಯಮ. ಕ್ರೀಡೆಯು ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ದೃಢತೆಯೊಂದಿಗೆ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಲು ಸಹಕಾರಿಯಾಗಬಲ್ಲುದು ಎಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.
ನಗರದ ಡಾಲ್ಫಿನ್‌ ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದ ವಾರ್ಷಿಕ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯು ಮನುಷ್ಯನ ಮನೋಬಲ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ದೈಹಿಕ, ಶಾರೀಕವಾಗಿ ಆರೋಗ್ಯವಾಗಿ ಇರಬೇಕಾದರೆ ಕ್ರೀಡೆಯು ಅತ್ಯಾವಶ್ಯ. ಆದ್ದರಿಂದ ವಿದ್ಯಾಥಿಗಳು ಕ್ರೀಡೆಯ ಮಹತ್ವದ ಕುರಿತು ಗಮನ ಹರಿಸಬೇಕಿದೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದ್ದರೂ ಭಾರತ ಒಲಿಂಪಿಕ್ಸ್‌ ಪದಕ ಪಟ್ಟಿಯಲ್ಲಿ 67 ನೇ ಸ್ಥಾನ ಪಡೆದಿದೆ. ವಿಶ್ವದ ವೇಗದ ಓಟಗಾರ ಹುಸೇನ್‌ ಬೋಲ್ಟ್‌ ಇರುವ ಜಮೈಕ ಎನ್ನುವ ಪುಟ್ಟ ರಾಷ್ಟ್ರ ಪದಕ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದೆ. ಭಾರತದಲ್ಲಿಯೂ ಅಗ್ರಮಾನ್ಯ ಕ್ರೀಡಾಪಟುಗಳಿದ್ದಾರೆ. ಅವರು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಓದಿಗಷ್ಟೇ ಸೀಮಿತವಬಾಗಬಾರದು ಎಂದು ಹೇಳಿದರು.
ಒಲಿಂಪಿಕ್ಸ್‌ ಕ್ರೀಡೆ ಬೆಳೆದು ಬಂದ ಬಗೆ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ತಂದುಕೊಟ್ಟ ಕ್ರೀಡಾಪಟುಗಳ ಬಗ್ಗೆ ವಿವರಿಸಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಡಾಲ್ಫಿನ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪಾರಿತೋಷಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಕ್ರೀಡಾ ಪ್ರದರ್ಶನಗಳನ್ನು ನೀಡಿದರು.
ಡಾಲ್ಫಿನ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್‌, ಕ್ರೀಡಾ ಇಲಾಖೆಯ ಉಪನಿರ್ದೇಶಕ ಟಿ.ಅಶ್ವತ್ಥರೆಡ್ಡಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಸಿ.ವೆಂಕಟೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ರಘುನಾಥರೆಡ್ಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಎಚ್‌.ಎನ್‌.ಆನಂದಕುಮಾರ್‌, ಡಾಲ್ಫಿನ್‌ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ಅಶೋಕ್‌, ಚಂದನಾ ಮತ್ತಿತರರು ಹಾಜರಿದ್ದರು.

ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ

0

ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂಬ ವಿಶೇಷ ದಿನವೆಂದು ಭಾನುವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮೀ ಶ್ರೀನಿವಾಸರ ಅಲಂಕೃತ ಬೃಹತ್‌ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ದರ್ಶನವನ್ನು ಸಾಲಿನಲ್ಲಿ ತೆರಳಿ ಭಕ್ತರು ಪಡೆದರು.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ದರ್ಶನವನ್ನು ಸಾಲಿನಲ್ಲಿ ತೆರಳಿ ಭಕ್ತರು ಪಡೆದರು.

ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗಾಗಿ ವೈಕುಂಠ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ಒಡಯನಕೆರೆಯ ಅನಂತಪದ್ಮನಾಭಸ್ವಾಮಿ ದೇವಾಲಯ, ದೊಡ್ಡದಾಸೇನಹಳ್ಳಿ ಗ್ರಾಮದ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯ, ಹೌಸಿಂಗ್‌ ಬೋರ್ಡ್‌ನ ಗಾಯಿತ್ರಿ ದೇವಸ್ಥಾನ, ವಾಸವಿ ರಸ್ತೆಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
‘ವೈಕುಂಠವನ್ನು ದರ್ಶಿಸಿ ಭಕ್ತರು ಸಾಯಿನಾಥ, ಗಣೇಶ, ಅಯ್ಯಪ್ಪ, ಸುಬ್ರಮಣ್ಯ ಸ್ವಾಮಿಯವರ ದರ್ಶನವನ್ನು ಹಾಗೂ ಪೂಜೆಯನ್ನು ನಡೆಸಿಕೊಂಡು ಪ್ರಸಾದವನ್ನು ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.

ಎಪಿಎಂಸಿ ಚುನಾವಣಾ ಪ್ರಚಾರದ ಸಭೆ

0

ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಲ್ಲಿ ಶನಿವಾರ ಎಪಿಎಂಸಿ ಚುನಾವಣಾ ಪ್ರಚಾರದ ಸಭೆಯಲ್ಲಿ ಜೆಡಿಎಸ್‌ ಮುಖಂಡರಾದ ಕೆ.ಎನ್‌.ನರಸಿಂಹಗೌಡ, ಅಶ್ವತ್ಥನಾರಾಯಣ ಮತ್ತು ಬೆಂಬಲಿಗರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್‌ ಹಾಜರಿದ್ದರು.

ಮಕ್ಕಳಲ್ಲಿ ಮೌಲ್ಯಗಳನ್ನು ಬೆಳಸುವಲ್ಲಿ ಶಾಲೆಗಳ ಪಾತ್ರ ದೊಡ್ಡದು

0

ಮೌಲ್ಯಗಳನ್ನು ಬೆಳಸುವಲ್ಲಿ ಶಾಲೆಗಳ ಪಾತ್ರ ದೊಡ್ಡದು, ಶಿಕ್ಷಕರು ಮತ್ತು ಪೋಷಕರು ಮಾತ್ರ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳಸಬಲ್ಲರು ಎಂದು ಅಕಾಡೆಮಿ ಆಫ್‌ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಪ್ರೊ.ಗುರುರಾಜ್ ಕರಜಗಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಎಂ.ಮೂರ್ತಿ ಸ್ಮರಣಾರ್ಥ ಶನಿವಾರ ಏರ್ಪಡಿಸಲಾಗಿದ್ದ ಜ್ಞಾನ ಕಲೋತ್ಸವ ೨೦೧೬–೧೭ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮರಗಳಿಗೆ ಬೇರು ಹೇಗೆ ಮುಖ್ಯವೋ ಅದೇ ರೀತಿ ಮಕ್ಕಳಿಗೆ ತಮ್ಮ ಸಂಸ್ಕೃತಿ ಮುಖ್ಯ, ಮಕ್ಕಳು ಬರೀ ಅಂಕಗಳಿಗಾಗಿ ಮಾತ್ರ ಓದಬಾರದು ಬದಲಿಗೆ ತಮ್ಮ ಸಂಸ್ಕೃತಿಯನ್ನು ಮರೆಯದೇ ತನ್ನ ಭವಿಷ್ಯ ತನ್ನದೇ ಕೈಯ್ಯಲಿದೆ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದೇ ಆದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸುತ್ತಾರೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವುದು ಕಷ್ಟವೇ ಸರಿ. ಇಂತಹ ಪರಿಸ್ಥಿತಿಯಲ್ಲೂ ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಒಳ್ಳೆಯ ವಾತಾವರಣದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಈ ವಿದ್ಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದ ಅವರು, ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿಯನ್ನು ಅಭಿನಂದಿಸಿದರು.
ರವಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ವ್ಯಕ್ತಿತ್ವ ತರಬೇತುದಾರ ಆರ್.ಎ.ಚೇತನ್‌ಕುಮಾರ್ ಮಾತನಾಡಿ, ಶಾಲಾ ಮಕ್ಕಳು ಕೇವಲ ಪಾಠ, ಪ್ರವಚನಕ್ಕೆ ಮಾತ್ರವೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೆದುಳನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ವಿದ್ಯಾರ್ಥಿಗಳು ಓದುವುದು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಆ ನಂತರ ಒಂದು ಉದ್ಯೋಗ ಪಡೆಯುವುದೆ ಗುರಿ ಎಂದು ಭಾವಿಸದೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಮನಹರಿಸಿಬೇಕು. ಇದರಿಂದ ಸಾಮಾಜಿಕ ಕಳಕಳಿ ಭಾವನೆ ಬೆಳೆಯಲು ಕಾರಣವಾಗುತ್ತದೆ.
ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ರ್ಯಾಂದಕ್ ಪಡೆಯುವಂತೆ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಟ್ಟು ಮಕ್ಕಳ ಆಸಕ್ತಿ ಯಾವ ವಿಷಯದ ಮೇಲೆ ಇದೆ ಎಂಬುದನ್ನು ಮೊದಲಿಗೆ ಗ್ರಹಿಸಿಕೊಳ್ಳಿ. ಆ ನಂತರ ಆ ಕ್ಷೇತ್ರದಲ್ಲಿಯೆ ಅವರನ್ನು ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಪೋಷಕರನ್ನು ವಿನಂತಿಸಿದರು.
ಶಾಲೆಯ ಶೈಕ್ಷಣಿಕ ಆಡಳಿತಾಧಿಕಾರಿ ಮನುಶ್ರೀ ರಾಜೀವ್‌ಕುಮಾರ್‌ ಶಾಲೆಯ ವರದಿಯನ್ನು ಮಂಡಿಸಿದರು.
ಗ್ರಾಮೀಣ ವಿದ್ಯಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೆ.ಗುಡಿಯಪ್ಪ, ಗ್ರಾಮೀಣ ವಿದ್ಯಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ರಾಜೀವ್‌ಕುಮಾರ್, ಹಿರಿಯ ವಕೀಲ ಎಂ.ಪುಟ್ಟೇಗೌಡ, ವೈದ್ಯ ಆಂಜಿನಪ್ಪ, ಮುಖ್ಯ ಶಿಕ್ಷಕ ಎನ್.ಲಕ್ಷ್ಮಣಪ್ಪ, ಎಂ,ಕೆ.ಅಂಜನಾಮೂರ್ತಿ ಮತ್ತಿತರರು ಹಾಜರಿದ್ದರು.

ಮಾವು ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಿ

0

ಮಾವು ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯಲು ಉತ್ತೇಜಿಸುವ ಸಲುವಾಗಿ ಬೆಳೆಗಾರರಿಗೆ ಬೇಸಾಯ ಕ್ರಮಗಳ ಕುರಿತು ಕಾರ್ಯಾಗಾರವನ್ನು ಮಾಡಲಾಗುತ್ತಿದೆ ಎಂದು ಮಾವು ಬೆಳಗಾರರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಗೊರಮಿಲ್ಲಹಳ್ಳಿ ಗ್ರಾಮದ ದೊಡ್ಡಮುನಿಯಮ್ಮನವರ ತೋಟದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರು ಮತ್ತು ಮಾವು ಅಭಿವೃದ್ಧಿ ಕೇಂದ್ರ ಚಿಂತಾಮಣಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾವಿನಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಾಂತ್ರಿಕ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈಗೀಗ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾವಿನಲ್ಲಿ ವಿವಿಧ ಮಾದರಿಯ ತಳಿಗಳಿದ್ದು ಈ ಹಣ್ಣುಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಮಾವು ರಫ್ತು ಮಾಡಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಆಧುನಿಕ ತಂತ್ರಜ್ಞಾನ ಪ್ರಯೋಜನ ಪಡೆದು ಯಾವ ಮಾದರಿ ಬೆಳೆ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು ಹಾಗೂ ಆರ್ಥಿಕವಾಗಿ ಮುಂದೆ ಬರಬಹುದು ಎಂಬ ಬಗ್ಗೆ ಬೆಳೆಗಾರರು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಮಾವು ಬೆಳೆಗಾರರಿಗೆ ಸರ್ಕಾರ ಸಹ ಹಲವಾರು ಸೌಲಭ್ಯಗಳ ಮೂಲಕ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹನಿ ನೀರಾವರಿ ಸೌಕರ್ಯ ಅಳವಡಿಕೆ, ಕ್ರಿಮಿನಾಶಕಗಳ ಖರೀದಿ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಸಹಾಯಧನವನ್ನು ತೋಟಗಾರಿಕೆ ಇಲಾಖೆ ಮೂಲಕ ಒದಗಿಸುತ್ತಿದೆ. ಈ ಪ್ರಯೋಜನ ಪಡೆದುಕೊಳ್ಳಬೇಕು. ಹಾನಿಕಾರವಲ್ಲದ ಉಪಚಾರ ಕ್ರಮಗಳ ಮೂಲಕ ಹಣ್ಣು ಮಾಗಿಸುವ ಪ್ರಕ್ರಿಯೆ ಅನುಸರಿಸಬೇಕು. ವೈವಿಧ್ಯಮಯ ತಳಿಗಳನ್ನು ಬೆಳೆಯುವ ಮೂಲಕ ಹೆಚ್ಚು ಲಾಭ ಪಡೆಯಬೇಕು ಎಂದರು.
ತೋಟಗಾರಿಕೆ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ರೋಗ ಮತ್ತು ಕೀಟನಾಶಕ ತಜ್ಞ ಮುರಳಿ ಮೋಹನ್, ತೋಟಗಾರಿಕೆಯ ಅಧಿಕಾರಿ ಚಂದೇಗೌಡ, ಡಾ. ಶಿವಾನಂದ ಮತ್ತು ಮಾವು ಬೆಳೆಗಾರರು ಹಾಜರಿದ್ದರು.

ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತವಾದುದು

0

ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡದ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿದ್ದು, ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಈಚೆಗೆ ರೈತ ನಾರಾಯಣಪ್ಪ ಅವರ ಮನೆಯಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಕನ್ನಡ ಸಿರಿನುಡಿಗಳು. ಇವುಗಳನ್ನು ದಾಖಲಿಸಿ ಉಳಿಸಬೇಕಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಗುಡಿ ಕೈಗಾರಿಕೆಗಳು, ಗ್ರಾಮೀಣ ಸೊಗಡು, ಕಲೆ ಮಾಯವಾಗುತ್ತಿವೆ. ಕನ್ನಡದ ದೇಸೀ ಸೊಗಡು ಮಾಯವಾದಲ್ಲಿ ಪರಂಪರೆ – ಸಂಸ್ಕೃತಿಯೂ ಕಣ್ಣಂಚಿನಿಂದ ಮರೆಯಾದೀತು ಎಂದು ಹೇಳಿದರು.
ಗ್ರಾಮದ ಮಕ್ಕಳಾದ ಯಶೋಧ, ಅರ್ಪಿತ, ವಂದನಾ, ರಾಧಿಕಾ, ಕಾವ್ಯ ಹಾಡುಗಳನ್ನು ಹಾಡಿ ಕಸಾಪ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ಪಡೆದರು.
ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್‌ ಕುವೆಂಪು ರಚನೆಯ ಗೀತೆಗಳನ್ನು ಹಾಡಿದರು. ಕಸಾಪ ತಾಲ್ಲೂಕು ಘಟಕದ ವತಿಯಿಂದ ಮನೆಯ ಮಾಲೀಕರಾದ ನಾರಾಯಣಪ್ಪ ಅವರನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ, ಆಂಜಿನಮ್ಮ ಈರಪ್ಪ, ಗ್ರಾಮಸ್ಥರಾದ ಲಕ್ಷ್ಮಣಮೂರ್ತಿ, ಕವಿತಾ, ಗೌರಮ್ಮ, ಮಂಜುಳ, ಮುನೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಆರಂಭಗೊಂಡ ಕೊಂಬಿನ ಸಿಂಗಾರ

0

ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಹಳ್ಳಿಗಳಲ್ಲಿ ಸಂಭ್ರಮದ ವಾತಾವರಣ ಶುರುವಾಗುತ್ತದೆ. ದನಕರುಗಳು ಮತ್ತು ಎತ್ತುಗಳನ್ನು ಅಲಂಕರಿಸಲು ಪ್ರಾರಂಭಿಸುತ್ತಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಎತ್ತುಗಳನ್ನು ಸಿಂಗರಿಸುವ ಕೆಲಸ ಆರಂಭವಾಗಿದೆ. ಎತ್ತುಗಳನ್ನು ತೊಳೆದು ಗೆಜ್ಜೆಕಟ್ಟಿ ಹೊಸ ನೂಲುಗಳನ್ನು ಹಾಕುವ ಕೆಲಸ ಶುರುವಾಗಿದೆ.
ಮೊದಲು ಎತ್ತುಗಳ ಕೊಂಬುಗಳನ್ನು ಮೊನಚಾದ ದೋಟಿ ಮಚ್ಚಿನಿಂದ ಹೆರೆಯುವರು. ಇದನ್ನು ’ಕೊಮ್ಮು ಜೀವೋದು’ ಎನ್ನುತ್ತಾರೆ. ಇದರಿಂದ ಕೊಂಬು ನಯವಾಗುವುದಲ್ಲದೆ ಹೊಳಪು ಪಡೆಯುತ್ತದೆ. ಅದಕ್ಕೆ ಬಣ್ಣದ ಟೇಪುಗಳನ್ನು ಕಟ್ಟುವುದು, ಬಣ್ಣ ಬಳಿಯುವುದು ಮುಖ್ಯವಾದದ್ದು.
ಆದರೆ ಕೊಂಬುಗಳನ್ನು ಹೆರೆಯುವುದು ಎಲ್ಲರಿಂದಲೂ ಅಸಾಧ್ಯ. ಇದನ್ನು ವೃತ್ತಿಪರರೇ ಮಾಡಬೇಕು. ಎತ್ತನ್ನು ಒಬ್ಬರು ಗಟ್ಟಿಯಾಗಿ ಹಿಡಿಕೊಂಡರೆ ಚೂಪಾದ ದೋಟಿಮಚ್ಚಿನಿಂದ ಕೊಂಬನ್ನು ಚೂಪು ಮಾಡುತ್ತಾರೆ. ಎತ್ತಿಗೆ ಗಾಯವಾಗದಂತೆ, ನೋವಾಗದಂತೆ ಚಾಕಚಕ್ಯತೆಯಿಂದ ಮಾಡುವ ಅವರ ಕೆಲಸದ ಹಿಂದೆ ಅಪಾರ ಅನುಭವ ಕಂಡುಬರುತ್ತದೆ.

ಎತ್ತಿನ ಕೊಂಬನ್ನು ಮೊನಚಾದ ದೋಟಿ ಮಚ್ಚಿನಿಂದ ಜೀವುತ್ತಿರುವುದು.
ಎತ್ತಿನ ಕೊಂಬನ್ನು ಮೊನಚಾದ ದೋಟಿ ಮಚ್ಚಿನಿಂದ ಜೀವುತ್ತಿರುವುದು.

ಹಿಂದೆ ನಾಟಿ ತಳಿಗಳು ಹೆಚ್ಚಾಗಿದ್ದುದರಿಂದ ಈ ಕೊಂಬನ್ನು ಹೆರೆಯುವ ವೃತ್ತಿಯವರಿಗೆ ಕೆಲಸ ಸದಾ ಕೆಲಸ ಸಿಗುತ್ತಿತ್ತು. ಹಾಯುವ ದನಗಳಿಗೆ ಕೊಂಬನ್ನು ಮೊಂಡು ಮಾಡಿಸುವುದು. ಕೊಂಬು ನೇರವಾಗಿ ಬೆಳೆಯಲೆಂದು ಎರಡು ಕೊಂಬುಗಳ ಮಧ್ಯೆ ಮರದ ಚಕ್ಕೆ ಇಡುವುದು. ಅಲಂಕಾರಿಕವಾಗಿ ಉದ್ದುದ ಕೊಂಬನ್ನು ಹೆರೆಯಿಸುವುದು. ಅದಕ್ಕೆ ಬಣ್ಣ ಕೂರಿಸುವುದು ಮುಂತಾದ ಹಲವು ಕೆಲಸಗಳಿರುತ್ತಿದ್ದವು. ಈಗ ನಾಟಿ ತಳಿಗಳು ಕಣ್ಮರೆಯಾಗುತ್ತಿವೆ ಹಾಗೂ ಈಗಿನ ಸೀಮೆ ಹಸುಗಳಿಗೆ ಕೊಂಬೇ ಇರುವುದಿಲ್ಲ. ಎತ್ತುಗಳ ಸಾಕಾಣಿಕೆ ಕಷ್ಟವೆಂದು ಸಾಕುವವರೇ ಕಡಿಮೆಯಾಗುತ್ತಿರುವುದರಿಂದ ಈ ವೃತ್ತಿಯು ಅಳಿವಿನಂಚಿನಲ್ಲಿದೆ.
ಸೀಮೆ ಹಸುಗಳಿಗೆ ಕೊಂಬಿನ ಸಿಂಗಾರದ ಭಾಗ್ಯವಿಲ್ಲ. ನಾಟಿ ದನಗಳಿಗೆ ಮಾತ್ರ ಕೊಂಬಿರುತ್ತದೆ ಮತ್ತು ಅದನ್ನು ಹೇಗೆ ಬೇಕಾದರೂ ಸಿಂಗರಿಸಬಹುದು. ಹೆಂಗಸರು ಘಮಲು ಎಣ್ಣೆ ಹಚ್ಚಿಕೊಂಡು ಕೂದಲನ್ನು ಬಾಚಿ ಮುಡಿಕಟ್ಟಿಕೊಳ್ಳುವ ಹಾಗೆ ದನಗಳ ಕೊಂಬನ್ನು ಜೀವಿ, ನಯಸ್ಸುಗೊಳಿಸಿ ಹೊಳಪುಬರಲು ಎಣ್ಣೆ ಸವರುತ್ತಾರೆ. ಅದಕ್ಕೆ ಕೊಂಬುಕುಪ್ಪು, ಗೆಜ್ಜೆಗಳನ್ನು ಹಾಕಿ ಅಲಂಕರಿಸುತ್ತಾರೆ.
ಹಿಂದೆ ಕೊಂಬುಗಳು ಬಹೂಪಯೋಗಿ ಆಗಿತ್ತು. ಬರಬರುತ್ತ ನಾಟಿಕಾರು ತಳಿಗಳ ಸಂಖ್ಯೆಯನ್ನು ಸೀಮೆತಳಿಗಳು ಕಡಿಮೆ ಮಾಡಿದವು. ಹೀಗಾಗಿ ಕೊಂಬುಗಳ ವಿವಿಧ ಬಳಕೆ ತಗ್ಗಿತು. ಕೊಂಬುಗಳಿಂದ ಮಾಡುತ್ತಿದ್ದ ಬಾಚಣಿಗೆ ದಂತದ ಬಾಚಣಿಗೆಯಂತೆಯೇ ಆಕರ್ಷಕವಾಗಿರುತ್ತಿತ್ತು. ಇಂದಿಗೂ ಕೆಲವರು ಬೀದಿಬದಿಯಲ್ಲಿ ಕೊಂಬುಗಳಿಂದ ವಿವಿಧ ಪಕ್ಷಿಗಳು, ಗೊಂಬೆಗಳನ್ನು ಮಾಡಿ ಮಾರುವುದನ್ನು ಬೆಂಗಳೂರಿನಂತಹ ನಗರಗಳಲ್ಲಿ ನೋಡಬಹುದು.
ಈಗಿನಂತೆ ಮೈಕುಗಳಿರದಿದ್ದ ದಿನಗಳಲ್ಲಿ ಬೀದಿಬದಿಯ ವ್ಯಾಪಾರಿಗಳು ಕೊಂಬನ್ನು ಮೈಕಿನಂತೆ ಬಳಸುತ್ತಿದ್ದರು. ‘ಸಿಂಗನಾದಂ ಜೀಲಕರ್ರ’ ಎಂಬ ತೆಲುಗು ಗಾದೆ ಇದಕ್ಕೆ ಪುರಾವೆಯನ್ನು ನೀಡುತ್ತದೆ. ಸಿಂಗ ಎಂದರೆ ಕೊಂಬು. ಹಿಂದೆ ಮಸಾಲೆ ಸಾಮಾನುಗಳು ಹಡಗುಗಳ ಮೂಲಕ ಬಂದರಿಗೆ ಬರುತ್ತಿದ್ದವು. ಅದನ್ನು ಪಡೆದು ತಂದ ಸಂಚಾರಿ ವ್ಯಾಪಾರಿಗಳು ಬೀದಿಬೀದಿ ತಿರುಗುತ್ತಾ ಕೊಂಬಿನ ಕೆಳ ರಂಧ್ರಕ್ಕೆ ಬಾಯಿ ಇಟ್ಟು ಸಾರುತ್ತಿದ್ದರು.
‘ಸೊಟ್ಟಕೊಂಬುಗಳಿರುವ ದನಗಳಿಗೆ ಬೆಲೆ ಕಡಿಮೆ. ಹಾಗಾಗಿ ಹೋರಿ ಕರುಗಳಿಗೆ ಕೊಂಬುಗಳ ಮಧ್ಯೆ ಮರದ ತುಂಡನ್ನಿಟ್ಟು, ಕೊಂಬಿನ ತುದಿಗೆ ಕಂಬಿಯನ್ನು ಕಟ್ಟಿ ನೆಟ್ಟಗೆ ಕೊಂಬುಗಳು ಬೆಳೆಯುವಂತೆ ನೋಡಿಕೊಳ್ಳುತ್ತೇವೆ. ಕೊಂಬು ಬೆನ್ನಾಗಿದ್ದರೆ ಮಾತ್ರ ಅದು ಲಕ್ಷಣವಂತ ದನವಾಗುತ್ತದೆ’ ಎನ್ನುತ್ತಾರೆ ದೇಶದಪೇಟೆಯ ರವಿ.

ಷಷ್ಠಿ ಹಬ್ಬ

0

ಷಷ್ಠಿ ಹಬ್ಬದ ಪ್ರಯುಕ್ತ ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಶ್ರದ್ದಾ ಭಕ್ತಿಯಿಂದ ಹಾವಿನ ಹುತ್ತಕ್ಕೆ ಹಾಲೆರದು ಪೂಜೆ ಸಲ್ಲಿಸುತ್ತಿರುವುದು.

ಪ್ರತಿಯೊಂದು ಸಂಘಗಳೂ ಸಮಾಜದ ಒಳಿತಿಗೋಸ್ಕರ ಕೆಲಸ ಮಾಡಬೇಕು

0

ಮಾನವ ಸಂಘಜೀವಿಯಾಗಿದ್ದು ಸಾಂಘಿಕ ಜೀವನವು ಸಮಾಜದ ಅಭಿವೃದ್ಧಿಗೆ ಪೂರಕವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈಚೆಗೆ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಸಂಘಗಳೂ ಸಮಾಜದ ಒಳಿತಿಗೋಸ್ಕರ ಕೆಲಸ ಮಾಡಬೇಕು ಎಂದ ಅವರು ಶಿಕ್ಷಕರ ಸಂಘಗಳ ಕಾರ್ಯಕ್ರಮಗಳಡಿಯಲ್ಲಿ ಗುಣಾತ್ಮಕ ಶಿಕ್ಷಣದ ಅನುಷ್ಟಾನ, ಉತ್ತಮ ಫಲಿತಾಂಶ ಪಡೆಯಲು ಮತ್ತು ಮಕ್ಕಳಲ್ಲಿ ಬದುಕಿನ, ನೈತಿಕ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಅವರು ಮಾತನಾಡಿ, ಸರ್ಕಾರವು ಪ್ರೌಢಶಾಲಾ ವೃಂದದ ಟಿಜಿಟಿ, ಬಿಆರ್‍ಪಿ, ಇಸಿಒ ಮತ್ತು ಕ್ಷೇತ್ರಸಮನ್ವಯಾಧಿಕಾರಿಗಳಿಗೆ ನೀಡಬೇಕಾದ ಹೆಚ್ಚುವರಿ ಭತ್ಯೆಯಲ್ಲಿ ತಾರತಮ್ಯ ಮಾಡಿದ್ದು ಶೀಘ್ರ ಬಗೆಹರಿಯುವ ವಿಶ್ವಾಸವಿದೆ. ಕಚೇರಿಗಳಲ್ಲಿ ಶಿಕ್ಷಕರ ವೇತನ, ಮತ್ತಿತರ ಸಮಸ್ಯೆಗಳನ್ನು ಸಂಘವು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ ಎಂದರು.
ಶಿಕ್ಷಣ ಸಂಯೋಜಕ ಲಕ್ಷ್ಮಿನಾರಾಯಣಗೌಡ, ಜಿಲ್ಲಾ ಸಂಘದ ಉಪಾಧ್ಯಕ್ಷ ಎಂ.ಕೆಂಪೇಗೌಡ, ತಾಲ್ಲೂಕು ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಖಜಾಂಚಿ ಇಂದಿರಾ, ಸಹಕಾರ್ಯದರ್ಶಿ ಗೋವಿಂದರಾಜು, ಎಚ್.ಎಸ್.ರುದ್ರೇಶಮೂರ್ತಿ, ಎಂ.ಕೆ.ಸಿದ್ಧರಾಜು, ಮಾಲತಿ, ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಮನ್ಸೂರ್‍ಪಾಷ, ಮತ್ತಿತರರು ಉಪಸ್ಥಿತರಿದ್ದರು.

ಹೊಸವರ್ಷದ ಆಶಾಕಿರಣಕ್ಕೆ ಎದುರು ನೋಡುತ್ತಿರುವ ಹಕ್ಕಿ

0

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಬಳಿ ಕಂಡುಬಂದ ಹೆಣ್ಣು ಲಾರ್ಕ್‌ ಹಕ್ಕಿಯು ನವ ಚೇತನ, ಹೊಸ ಆಶಾಕಿರಣದ ಹೊಸವರ್ಷವನ್ನು ಎದುರು ನೋಡುತ್ತಿರುವಂತೆ ಕತ್ತೆತ್ತಿ ದಿಗಂತದತ್ತ ದೃಷ್ಟಿ ಹಾಯಿಸುತ್ತಿತ್ತು.

ಹೊಸಪೇಟೆ ಗ್ರಾಮದಿಂದ ಆದಿಪರಾಶಕ್ತಿ ದರ್ಶನಕ್ಕೆ ತೆರಳಿದ ಭಕ್ತರು

0

ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕಾದರೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಿಂದ ತಮಿಳುನಾಡಿನ ಮೇಲ್ಮರುವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿ ಜನ್ಮದಿನದ ಅಂಗವಾಗಿ ೮ ಬಸ್‌ಗಳಲ್ಲಿ ೪೪೦ ಮಂದಿಗೆ ಆಯೋಜಿಸಿದ್ದ ಯಾತ್ರೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಆದಿಪರಾಶಕ್ತಿಯ ಸನ್ನಿಧಿಗೆ ತೆರಳುತ್ತಿರುವ ಭಕ್ತರು ನಮ್ಮ ಭಾಗದಲ್ಲಿ ಉತ್ತಮವಾಗಿ ಮಳೆ ಬೆಳೆಗಳಾಗಲಿ ಎಂದು ಪ್ರಾರ್ಥಿಸಲಿ. ನಾಡು ಸುಭಿಕ್ಷವಾಗಿದ್ದರೆ ಜನರೂ ಏಳಿಗೆ ಕಾಣುತ್ತಾರೆ. ಶ್ರದ್ಧಾಭಕ್ತಿಯಿಂದ ವ್ರತವನ್ನು ಆಚರಿಸಿ ಪೂಜಿಸುವ ಮನಸ್ಸುಗಳಿಗೆ ದೇವರು ಅನುಗ್ರಹಿಸುತ್ತಾರೆ. ಮುಂದಿನ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಯನ್ನು ಕುಮಾರಸ್ವಾಮಿಯವರು ಮುನ್ನಡೆಸಲು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಅವರು ಹೇಳಿದರು.
ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ, ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಲೆಂದು ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು ದೇವರ ಆಶೀರ್ವಾದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಓಂ ಶಕ್ತಿ ದೇವಾಲಯಕ್ಕೆ ಭಕ್ತರಿಗೆ ಯಾತ್ರೆಯನ್ನು ಆಯೋಜಿಸಿದ್ದಾರೆ. ಇತ್ತೀಚೆಗಷ್ಟೆ ನಡೆದ ಎಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣನವರ ಹುಟ್ಟಿದ ಹಬ್ಬದ ಪ್ರಯುಕ್ತ ಆದಿಪರಾಶಕ್ತಿಯ ದರ್ಶನಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸುಮಾರು ನಾಲ್ಕು ಸಾವಿರ ಮಂದಿಯನ್ನು ಹಂತಹಂತವಾಗಿ ಕಳುಹಿಸುತ್ತಿರುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅದ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್, ನಾಗಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸಗೌಡ, ಜಂಗಮಕೋಟೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಶ್ರೀನಿವಾಸ್, ಹೊಸಪೇಟೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಜೆಡಿಎಸ್ ಮುಖಂಡರಾದ ಮೇಲೂರು ಕೆ.ಎಸ್‌.ಮಂಜುನಾಥ್, ಸಿ.ವಿ. ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಬೈರಪ್ಪ. ಮುನಿಕೃಷ್ಣ, ಮುಂತಾದವರು ಹಾಜರಿದ್ದರು.