Home Blog Page 434

ಹಿರಿಯ ಕ್ರೀಡಾಪಟು ಕೆ.ಎಲ್‌.ನಾಗರಾಜ್‌ ಅವರ ಶ್ರದ್ಧಾಂಜಲಿ ಸಭೆ

0

ಯುವ ಕ್ರೀಡಾಸಕ್ತರಿಗೆ ಸದಾ ಪ್ರೋತ್ಸಾಹಿಸುತ್ತಾ ಕ್ರೀಡಾಂಗಣದ ಅಭಿವೃದ್ಧಿಯ ಬಗ್ಗೆ ತುಡಿತವನ್ನಿಟ್ಟುಕೊಂಡಿದ್ದ ಕೆ.ಎಲ್‌.ನಾಗರಾಜ್‌ ಅವರ ಅಕಾಲಿಕ ನಿಧನದಿಂದಾಗಿ ಕ್ರೀಡಾಪಟುಗಳಿಗೆ ಅಪಾರ ನಷ್ಟವಾಗಿದೆ ಎಂದು ಹಿರಿಯ ಕ್ರೀಡಾಪಟು ಟಿ.ಟಿ.ನರಸಿಂಹಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ ಕ್ರೀಡಾಪಟುಗಳು ಆಯೋಜಿಸಿದ್ದ ಕೆ.ಎಲ್‌.ನಾಗರಾಜ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಷಟಲ್‌ಕಾಕ್‌ ಕ್ರೀಡೆಯಲ್ಲಿ ಹಿರಿಯರ ವಿಭಾಗದಲ್ಲಿ ಜಿಲ್ಲಾ ಚಾಂಪಿಯನ್‌ ಆಗಿದ್ದ ಕೆ.ಎಲ್‌.ನಾಗರಾಜ್‌ ಯುವಕ್ರೀಡಾಕಾರರಿಗೆ ಸ್ಫೂರ್ತಿಯಾಗಿದ್ದರು. ಪ್ರತಿದಿನ ಚಿಕ್ಕಬಳ್ಳಾಪುರದ ಕ್ರೀಡಾಂಗಣದಲ್ಲಿ ಷಟಲ್‌ಕಾಕ್‌ ಆಡಿಬರುತ್ತಿದ್ದ ಅವರು ನಮ್ಮ ಶಿಡ್ಲಘಟ್ಟದಲ್ಲಿಯೇ ಒಂದು ಒಳಾಂಗಣ ಷಟಲ್‌ಕಾಕ್‌ ಕೋರ್ಟನ್ನು ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಯುವಕರು ನಾಚುವಂತೆ ಆಟವನ್ನು ಆಡುತ್ತಿದ್ದ ಅವರು ಚೆನ್ನಾಗಿ ಆಟ ಆಡುವ ಮಕ್ಕಳಿಗೆ ತಿಂಡಿ ತಿನಿಸನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.
ಕ್ರೀಡಾಪಟುಗಳು ಮೌನಾಚರಣೆಯ ಮೂಲಕ ಕೆ.ಎಲ್‌.ನಾಗರಾಜ್‌ ಅವರ ಶ್ರದ್ಧಾಂಜಲಿ ಅರ್ಪಿಸಿದರು.
ರಾಷ್ಟ್ರೀಯ ಅಥ್ಲೀಟ್‌ ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ರಾಷ್ಟ್ರೀಯ ಕ್ರೀಡಾಪಟು ಜಯಚಂದ್ರ, ಮಾಜಿ ಪುರಸಭಾ ಸದಸ್ಯ ಜೆ.ವಿ.ಸುರೇಶ್‌, ಜಗದೀಶ್‌, ಮುರಳಿ, ಆರ್‌.ಶ್ರೀನಿವಾಸ್‌, ವಸಂತಕುಮಾರ್‌, ದಾಕ್ಷಾಯಿಣಿ, ಕರಾಟೆ ಶಿಕ್ಷಕ ಶ್ರೀನಿವಾಸ್‌ ಮತ್ತಿತರರು ಹಾಜರಿದ್ದರು.

ಶಿಡ್ಲಘಟ್ಟದಿಂದ ಮಹಾರಾಷ್ಟ್ರದ ಕೋರೆಗಾಂವ್‌ಗೆ ತೆರಳಿದ ದಲಿತ ಮುಖಂಡರು

0

ಜನವರಿ ೧ ರಂದು ಆತ್ಮಗೌರವ ಮತ್ತು ದಾಸ್ಯದ ವಿಮೋಚನೆಗಾಗಿ ಈ ದೇಶದ ಶೋಷಿತ ವರ್ಗದ ಸೈನಿಕರ ಗುಂಪೊಂದು ದನಿಯೆತ್ತಿದ ದಿನವಾಗಿದ್ದು, ಅಸೃಶ್ಯತೆಯ ವಿರುದ್ಧ ಕಾದಾಡಿ ಗೆದ್ದು ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದ ದಿನವಾಗಿ ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಿಂದ ಶನಿವಾರ ಮಹಾರಾಷ್ಟ್ರದ ಕೋರೆಗಾಂವ್‌ಗೆ ತೆರಳಿದ ದಲಿತ ಮುಖಂಡರಿಗೆ ಶಾಸಕ ಎಂ.ರಾಜಣ್ಣ ಶುಭಹಾರೈಸಿ ಅವರು ಮಾತನಾಡಿದರು.
ಜನವರಿ ೧ ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ ೧ ರಂದು ಭೇಟಿ ನೀಡುತ್ತಿದ್ದ ಕೊರೆಗಾಂವ್‌ನ ಚರಿತ್ರೆಯನ್ನು ನೆನೆಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ.
ಅಸೃಶ್ಯತೆಯ ವಿರುದ್ಧ ಬಂಡೆದಿದ್ದ ಶೋಷಿತ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯಸಾಧಿಸಿದ ಈ ದಿನ, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧವಾಗಿದೆ. ಈ ಘಟನೆ ಅಂಬೇಡ್ಕರ್ ಅವರ ಹೋರಾಟದ ಬದುಕಿನ ಪ್ರೇರಣೆಗಳಲ್ಲಿ ಒಂದಾಗಿದ್ದು, ಕೋರೆಗಾಂವ್‌ಗೆ ತೆರಳುವಂತಹ ಪ್ರತಿಯೊಬ್ಬರು ಅಲ್ಲಿನ ಚರಿತ್ರೆಯನ್ನು ಉಳಿದೆಲ್ಲರಿಗೂ ಸಾರಿಹೇಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ದಲಿತರು ಒಟ್ಟುಗೂಡಬೇಕು. ಸಂಘಟಿತರಾಗಿ ಹೋರಾಟ ನಡೆಸಬೇಕು. ಹೋರಾಟದ ಗುರ್ತಾಗಿ ಉಳಿದುಕೊಂಡಿರುವ ಕೋರೆಗಾಂವ್ ಚಳುವಳಿಯ ಹಿನ್ನೆಲೆಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಪ್ರತಿ ವರ್ಷದ ಜನವರಿ ೧ ರಂದು ಅಲ್ಲಿಗೆ ಭೇಟಿ ನೀಡಬೇಕು ಎನ್ನುವ ಉದ್ದೇಶದಿಂದ ದಲಿತ ಮುಖಂಡರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಮಾತನಾಡಿ, ಚರಿತ್ರೆಯಲ್ಲಿ ಹೂತು ಹೋಗಿದ್ದ ಕೋರೆಗಾಂವ್ ಕದನದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಬಿ.ಆರ್.ಅಂಬೇಡ್ಕರ್. ಹಾಗಾಗಿಯೇ ಜನವರಿ – ೧ ಅಸೃಶ್ಯತೆಯ ವಿರುದ್ಧ ಈ ದೇಶದ ಶೋಷಿತ ಜನಾಂಗಗಳ ಅಸಹನೆಯ ಕಟ್ಟೆಯೊಡೆದ ದಿನವಾಗಿಯೂ ಅವರು ತಮ್ಮ ಅಸ್ಥಿತ್ವದ ಉಳಿವಿಗಾಗಿ ಹೋರಾಡಿ ಜಯಿಸಿದ ಉತ್ಸವದ ದಿನವನ್ನಾಗಿ ಮಾಡಬೇಕಾಗಿದೆ. ಪ್ರತಿಯೊಬ್ಬ ವಿದ್ಯಾವಂತರು ಈ ಘಟನೆಯ ಬಗ್ಗೆ ತಿಳಿಯಬೇಕು. ತಾವು ತಿಳಿದುಕೊಂಡದ್ದನ್ನು ಇತರರಿಗೂ ಸಾರಿ ಹೇಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಬಶೆಟ್ಟಿಹಳ್ಳಿ ದ್ಯಾವಪ್ಪ, ಈ ಧರೆ ಪ್ರಕಾಶ್, ತೇಕಹಳ್ಳಿ ದ್ಯಾವಪ್ಪ, ಗಂಗಪ್ಪ, ಆಂಜಿನಪ್ಪ, ಕೆ.ಎಸ್.ದ್ಯಾವಕೃಷ್ಣಪ್ಪ, ರೆಡ್ಡಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಪ್ಪೇಗೊಂಡನಹಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ

0

ಶಾಲಾ ಆವರಣದಲ್ಲಿ ಗಿಡ ನೆಡಿ, ಗ್ರಾಮದ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಮನೆಗಳಲ್ಲಿನ ಶೌಚಾಲಯದ ಅಗತ್ಯತೆಯ ಅರಿವು ಮೂಡಿಸಿ ಎಂದು ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿನ ನ್ಯೂನತೆಗಳನ್ನು ತಿಳಿಸುತ್ತಾ ಗ್ರಾಮ ಪಂಚಾಯಿತಿಯಿಂದ ಆಗಬಹುದಾದ ಕೆಲಸಗಳ ಬಗ್ಗೆ ಕೋರಿಕೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಪ್ಪೇಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈಚೆಗೆ ಹಂಡಿಗನಾಳ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕನ್ನು ಚೆಲ್ಲಿದರು.
ಶುದ್ಧ ಕುಡಿಯುವ ನೀರು ನಮಗೆ ಬೇಕು. ಅದರಿಂದ ಹಲವು ರೋಗಗಳು ತಪ್ಪುತ್ತವೆ. ಗ್ರಾಮಕ್ಕೆ ಒಂದು ಗ್ರಂಥಾಲಯ ಬೇಕಿದೆ ಮುಂತಾದ ಬೇಡಿಕೆಗಳನ್ನು ಮಕ್ಕಳು ಮುಂದಿಟ್ಟರು.
ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಜಿಲ್ಲಾ ರಕ್ಷಣಾಧಿಕಾರಿ ಗೋಪಾಲರೆಡ್ಡಿ ಮಾತನಾಡಿ, ಮಕ್ಕಳು ದೇವರ ಸಮಾನ. ಅವರ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರು ಅಗತ್ಯತೆಗಳ ಅನುಗುಣವಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಅವನ್ನು ಈಡೇರಿಸಲು, ಸ್ಪಂದಿಸಲು ಗ್ರಾಮ ಪಂಚಾಯಿತಿಯವರು ಮನಸ್ಸು ಮಾಡಬೇಕು. ಗ್ರಾಮೀಣ ಮಕ್ಕಳು ಅಪಾರ ಪ್ರತಿಭಾವಂತರು. ಅವರ ಪ್ರತಿಭೆಯನ್ನು ಪೊರೆಯಲು ಪೂರಕವಾದ ವಾತಾವರಣ ಕಲ್ಪಿಸಬೇಕಾದದ್ದು ಹಿರಿಯರ ಕರ್ತವ್ಯವಾಗಿದೆ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸುತ್ತಿರಬೇಕು. ಅವರ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಕುಮಾರಸ್ವಾಮಿ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ, ಸ್ವಚ್ಛತೆಯ ಕುರಿತು ಹಾಗೂ ಮಕ್ಕಳಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಾಲಾ ಮಕ್ಕಳು ವೇಷಭೂಷಣ ಧರಿಸಿ ನಾಟಕ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಿಡಿಪಿಓ ಇಲಾಖೆಯ ಅಧಿಕಾರಿ ರಾಧಮ್ಮ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಜಯರಾಮ್‌, ಎ.ಎಂ.ತ್ಯಾಗರಾಜು, ಬೈರಾರೆಡ್ಡಿ, ಉಮಾ, ನೇತ್ರಾವತಿ, ಪಿಡಿಓ ಬಿ.ಇ.ಅಂಜನ್‌ಕುಮಾರ್‌, ಕಾರ್ಯದರ್ಶಿ ಶ್ರೀನಿವಾಸ್‌, ಕರವಸೂಲಿಗಾರ ಶ್ರೀನಿವಾಸ್‌, ವೆಂಕಟೇಶ್, ನರಸಿಂಹಮೂರ್ತಿ, ಲಕ್ಷ್ಮೀಪತಿ, ಜಗದೀಶ್‌, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಭಾರತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಸಾಪದಿಂದ ಹಿರಿಯ ಕಲಾವಿದರ ಸನ್ಮಾನ

0

ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಗೌರವಿಸುವುದು ಕಸಾಪ ತಾಲ್ಲೂಕು ಘಟಕದ ಧ್ಯೇಯಗಳಲ್ಲೊಂದು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ನಲ್ಲಿರುವ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ 158ನೇ ಅಮಾವಾಸ್ಯೆಯ ಪ್ರಯುಕ್ತ ಆಯೋಜಿಸಿದ್ದ ಬಜನೆ, ತತ್ವಪದ, ಕೀರ್ತನೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯಾವುದೇ ಆರ್ಥಿಕ ಆದಾಯದ ಫಲಾಪೇಕ್ಷೆಯಿಲ್ಲದೇ ತಾಲ್ಲೂಕಿನ ಗ್ರಾಮ ಗ್ರಾಮಗಳಲ್ಲಿ ಕಲಾವಿದರು ಕೇವಲ ಕಲಾಸಕ್ತಿಯಿಂದ ಕಲೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಬಹುಮುಖದಯ. ಇಂದಿನ ಯುವ ತಲೆಮಾರಿಗೆ ನಮ್ಮ ಜಾನಪದರ ಕಲೆಯು ಸಿಗಬೇಕು ಅದಕ್ಕಾಗಿ ಕಸಾಪ ತಾಲ್ಲೂಕು ಘಟಕದಿಂದ ಕಲಾಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬೆಳೆಸುವ ಧ್ಯೇಯೋದ್ಧೇಶವನ್ನು ಹೊಂದಿರುವ ಕಸಾಪ ಕಲೆ, ಸಂಸ್ಕೃತಿಗೂ ಪ್ರಾಧಾನ್ಯತೆಯನ್ನು ನೀಡುತ್ತಿದೆ. ಈಗಿನ ಯುವಕರ ಆಧ್ಯತೆಗಳು ಬದಲಾಗಿವೆ. ಆದರೂ ಕಲೆಯ ಆಸಕ್ತಿಯುಳ್ಳ ಕಿರಿಯರಿಗೆ ಹಿರಿಯರಿಂದ ಕಲೆ, ಸಂಗೀತ, ಸಾಹಿತ್ಯ ಕಲಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಬದುಕುಳಿಯುತ್ತದೆ. ತಬಲಾ, ಹಾರ್ಮೋನಿಯಂ, ಖಂಜರ, ಘಟಂ, ಪಿಟೀಲು, ಮೃದಂಗ ಮೊದಲಾದ ವಾದ್ಯಗಳನ್ನು ಕಲಿಸುವ ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಆಗಬೇಕಿದೆ ಎಂದು ನುಡಿದರು.
ಹರಿಕಥೆ ಕಲಾವಿದ ಚೌಡಸಂದ್ರ ನಾಮದೇವ್‌ ಹರಿದಾಸ, ತಬಲಾ ಕಲಾವಿದ ಅಪ್ಪೇಗೌಡನಹಳ್ಳಿ ಎ.ಎಂ.ವೀರಪ್ಪ, ಹಾರ್ಮೋನಿಯಂ ಕಲಾವಿದ ಅಪ್ಪೇಗೌಡನಹಳ್ಳಿ ಎ.ರೋಹಿಣಿಕುಮಾರ್‌, ಗಾಯಕರಾದ ಭಕ್ತರಹಳ್ಳಿ ಮುನೇಗೌಡ, ಹಾರ್ಮೋನಿಯಂ ಕಲಾವಿದ ದೇವರಮಳ್ಳೂರು ದ್ಯಾವಪ್ಪ ಅವರನ್ನು ಕಸಾಪ ತಾಲ್ಲೂಕು ಘಟಕದಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ಕಲಾವಿದರು ತತ್ವಪದ, ಭಕ್ತಿಗೀತೆ, ನಾಡಗೀತೆ ಮತ್ತು ಜಾನಪದ ಗೀತೆಗಳನ್ನು ನಡೆಸಿಕೊಟ್ಟರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಕಲಾವಿದರಾದ ಮೇಲೂರು ಗೋವಿಂದಪ್ಪ, ರಾಮಚಂದ್ರ, ಮುನಿಬೈರಪ್ಪ, ಶ್ರೀನಿವಾಸಪ್ಪ, ರಾಮಚಂದ್ರಪ್ಪ, ಲಕ್ಷ್ಮೀನಾರಾಯಣ, ದ್ಯಾವಪ್ಪ, ವೆಂಕಟರಾಯಪ್ಪ, ಮುನಿಆಂಜಿನಪ್ಪ, ಭಕ್ತರಹಳ್ಳಿ ಬಿ.ಎಂ.ಮುನಿವೆಂಕಟಪ್ಪ, ಮಳಮಾಚನಹಳ್ಳಿ ಮುನಿಶಾಮಪ್ಪ, ಅರ್ಚಕ ರಮೇಶ್‌ಶರ್ಮ ಮತ್ತಿತರರು ಹಾಜರಿದ್ದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ದ್ವಾದಶ ಲಿಂಗಗಳ ದರ್ಶನ

0

ಪ್ರತಿಯೊಬ್ಬರ ಜೀವನದಲ್ಲೂ ಸುಖ ಶಾಂತಿ, ಸದ್ಭಾವನೆ, ನೆಮ್ಮದಿ, ಶಾಂತಿ ಮೂಡಲಿ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಉತ್ತಮ ಬಾಂಧವ್ಯ ಮೂಡಲಿ ಎಂಬ ಉದ್ದೇಶದಿಂದ ದ್ವಾದಶ ಲಿಂಗಗಳ ದರ್ಶನವನ್ನು ಏರ್ಪಡಿಸಿದ್ದೇವೆ ಎಂದು ಬ್ರಹ್ಮಕುಮಾರಿ ಸಮಾಜದ ಜಯಕ್ಕ ತಿಳಿಸಿದ್ದಾರೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮಕುಮಾರಿ ಸಮಾಜದ ವತಿಯಿಂದ ಸುಮಾರು ಆರು ದಿನಗಳಿಂದ ಆಯೋಜಿಸಲಾಗಿರುವ ದ್ವಾದಶ ಲಿಂಗಗಳ ದರ್ಶನದ ಬಗ್ಗೆ ಅವರು ಮಾತನಾಡಿದರು.
ಸಮಾಜದಲ್ಲಿನ ಕೆಟ್ಟದ್ದನ್ನು ಹೋಗಲಾಡಿಸಿ, ರಾಮರಾಜ್ಯವಾಗುವಂತೆ ಭಗವಂತನು ಅನುಗ್ರಹಿಸಲಿ. ಮಳೆ ಬೆಳೆ ಸಕಾಲಕ್ಕೆ ಆಗಲಿ. ನಾಡು ಸುಭಿಕ್ಷವಾಗಲಿ, ಭ್ರಷ್ಟಾಚಾರ, ಅನಾಚಾರಗಳು ನಿರ್ಮೂಲವಾಗಲಿ. ದೇಶದಾದ್ಯಂತ ಇರುವ ದ್ವಾದಶ ಲಿಂಗಗಳನ್ನು ಜನರು ಇಲ್ಲಿಯೇ ದರ್ಶನ ಮಾಡಿ ಪುಣ್ಯವನ್ನು ಗಳಿಸಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಭಗವಂತನ ಕೃಪಾಕಟಾಕ್ಷವಿದ್ದಲ್ಲಿ ಅನೇಕ ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗುತ್ತವೆ. ಧಾರ್ಮಿಕ ಆಚರಣೆಗಳು, ಭಾವನೆಗಳು ಮಾನವನನ್ನು ಸರಿದಾರಿಯಲ್ಲಿ ನಡೆಸುತ್ತವೆ. ಭಾರತೀಯರಲ್ಲಿ ಇಂದಿಗೂ ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಅಪಾರ ಶ್ರದ್ಧೆ, ನಂಬಿಕೆಯಿದೆ. ಇವುಗಳ ಪುಣ್ಯ ದರ್ಶನದಿಂದಲೇ ತಮ್ಮ ಪಾಪಗಳೆಲ್ಲ ಕಳೆದು ಪುನೀತರಾಗಬಹುದೆಂಬ ನಂಬಿಕೆ ಜನರಲ್ಲಿದೆ. ಇಷ್ಟಾರ್ಥಗಳ ಸಿದ್ಧಿಗೆ ತಮ್ಮ ಜೀವಿತಾವಧಿಯಲ್ಲಿ ಹನ್ನೆರಡು ಲಿಂಗಗಳ ದರ್ಶನ ಮಾಡಬೇಕೆಂಬ ಬಯಕೆ ಎಲ್ಲರಲ್ಲಿಯೂ ಇರುತ್ತದೆ. ಇದನ್ನು ಅರಿತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ಒಂದೇ ಕಡೆ ದ್ವಾದಶ ಲಿಂಗಗಳ ದರ್ಶನವನ್ನು ಏರ್ಪಡಿಸಿದ್ದಾರೆ ಎಂದು ಹೇಳಿದರು.
ನಗರದ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆರು ದಿನಗಳಿಂದ ಆಗಮಿಸಿ ದ್ವಾದಶ ಲಿಂಗಗಳ ದರ್ಶನವನ್ನು ಪಡೆದರು.

ಕಸಾಪದಿಂದ ಕುವೆಂಪು ಕುರಿತು ಪ್ರಬಂಧ ಸ್ಪರ್ಧೆ

0

ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಕುವೆಂಪು ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು. ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲ ’ಅನಿಕೇತನ’ರಾಗಬೇಕು ಎಂಬುದು ಅವರ ಆಶಯವಾಗಿತ್ತು ಎಂದು ವಿವರಿಸಿದರು.
ಕುವೆಂಪು ಅವರ ಕುರಿತಂತೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಏಳನೇ ವರ್ಗದ ಎಚ್‌.ಕೆ.ಮದನ್‌ಕುಮಾರ್‌, ಎಚ್‌.ಎ.ಅರ್ಚನ, ಎಚ್‌.ಪಿ.ಮುತ್ತುಶ್ರೀ ಮತ್ತು ಎಂಟನೇ ವರ್ಗದ ಎಚ್‌.ಕೆ.ಮನೋಜ್‌ಕುಮಾರ್‌, ಜಿ.ಪಿ.ದೀಪ, ಎಚ್‌.ಎಂ.ಸ್ವಾತಿ ಅವರಿಗೆ ಕಸಾಪ ತಾಲ್ಲೂಕು ಘಟಕದಿಂದ ಪ್ರಶಸ್ತಿಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಜನಪದ ಕಲಾವಿದ ದೇವರಮಳ್ಳೂರು ಮಹೇಶ್‌ ಕುವೆಂಪು ರಚಿಸಿರುವ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಮುಖಂಡ ಹೊಸಪೇಟೆ ಎಚ್‌.ಜಿ.ಶಶಿಕುಮಾರ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎನ್‌.ಪಾಪಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಪಿ.ಬಸಪ್ಪ, ಚನ್ನಕೃಷ್ಣಪ್ಪ, ಜಣಗಮಕೋಟೆ ಮಂಜುನಾಥಗೌಡ, ಮುನೇಗೌಡ, ಮುಖ್ಯಶಿಕ್ಷಕಿ ಜಿ.ಎನ್‌.ನೇತ್ರಾವತಿ, ಶಿಕ್ಷಕರಾದ ರೇಖಾರಾಣಿ, ಪದ್ಮಜಾ, ಶೈಲಜಾ, ನಾಗಮಣಿ ಮತ್ತಿತರರು ಹಾಜರಿದ್ದರು.

ನಿಧನ ವಾರ್ತೆ

0

ಷಟಲ್‌ಕಾಕ್‌ ಕ್ರೀಡೆಯಲ್ಲಿ ಹಿರಿಯರ ವಿಭಾಗದಲ್ಲಿ ಜಿಲ್ಲಾ ಚಾಂಪಿಯನ್‌ ಆಗಿದ್ದ ಹಿರಿಯ ಕ್ರೀಡಾಪಟು ಹೌಸಿಂಗ್‌ ಬೋರ್ಡ್‌ ನಿವಾಸಿ ಕೆ.ಎಲ್‌.ನಾಗರಾಜ್‌(54) ಅಪಘಾತಕ್ಕೀಡಾಗಿ ಗುರುವಾರ ನಿಧನರಾಗಿದ್ದಾರೆ. ವಿಜಯಪುರದ ಸಮೀಪ ಕಳೆದ ಶನಿವಾರ ದ್ವಿಚಕ್ರ ವಾಹನದಿಂದ ಬಿದ್ದು ಅಪಘಾತಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಸೆಂಟ್‌ಜಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕನಕನಗರದ ಬಳಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಅವರ ಬಂಧುಗಳು ತಿಳಿಸಿದ್ದಾರೆ.

ನಿಧನ ವಾರ್ತೆ

0

ನಗರದ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕರಾದ ಎನ್‌.ಶಿವಕುಮಾರ್‌(69) ಅವರು ಗುರುವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ವೆಂಕಟೇಶ್ವರ ಚಿತ್ರಮಂದಿರದ ಹಿಂಭಾಗ ಅವರದೇ ಸ್ಥಳದಲ್ಲಿ ನೆರವೇರಿಸಲಾಯಿತು.
ಸಂಸದ ಕೆ.ಎಚ್‌.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಮಾಜಿ ಶಾಸಕರಾದ ಶ್ರೀನಿವಾಸಗೌಡ, ಬಚ್ಚೇಗೌಡ ಮತ್ತಿತರರು ಮೃತರ ದರ್ಶನ ಪಡೆದರು.

ನಗದು ರಹಿತ ವ್ಯವಹಾರವನ್ನು ರೂಢಿಸಿಕೊಳ್ಳಬೇಕು

0

ವಿದೇಶಗಳಲ್ಲಿ ಜನಪ್ರಿಯವಾಗಿರುವ ನಗದು ರಹಿತ ವ್ಯವಹಾರವನ್ನು ದೇಶದಲ್ಲಿ ಯಶಸ್ವಿಗೊಳಿಸಿಬೇಕೆಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ್ ಕರೆ ನೀಡಿದರು.
ತಾಲ್ಲೂಕಿನ ಬೂದಾಳ ಗೇಟ್ ಬಳಿಯಿರುವ ಗರುಡಾದ್ರಿ(ರಾಯಲ್) ಶಾಲೆಯ ೪ನೇ ವಾರ್ಷಿಕೋತ್ಸವ ವಿದ್ಯಾತರಂಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದೇಶಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಅಲ್ಲಿನ ನಾಗರಿಕರು ನಗದು ರಹಿತ ವ್ಯವಹಾರ ನಡೆಸಿ ಯಶಸ್ವಿಯಾಗಿದ್ದಾರೆ. ಹಾಗೆಯೇ ನಮ್ಮ ದೇಶದಲ್ಲಿ ಸಹ ಪ್ರತಿಯೊಬ್ಬ ನಾಗರಿಕರು ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವ್ಯವಹರಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ಯಾಷಲೆಸ್ ಕನಸು ನನಸು ಮಾಡಬೇಕೆಂದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಬೇಕೆಂದು ವಿದ್ಯಾರ್ಥಿಗಳ ಮೇಲೆ ಪೋಷಕರು ಒತ್ತಡ ಹೇರುವ ಕೆಲಸವನ್ನು ಮಾಡಬಾರದೆಂದು ಮನವಿ ಮಾಡಿದ ಅವರು ವಿದ್ಯಾರ್ಥಿಗಳಿಗೆ ಮುಕ್ತ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಬೇಕೆಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಡಿಸಿಕೊಂಡು ಶ್ರದ್ದೆಯಿಂದ ವ್ಯಾಸಂಗ ಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಉನ್ನತಸ್ಥಾನಗಳನ್ನು ಅಲಂಕರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಚಂದ್ರಮೋಹನ್ ಹಾಗೂ ಪ್ರಾಂಶುಪಾಲ ಮಂಜುನಾಥ್ ಹಾಗೂ ಶಿಕ್ಷಕರು ಡಿಜಿಟಲ್ ಇಂಡಿಯಾ ಪರಿಕಲ್ಪನೆಯೊಂದಿಗೆ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಕ್ಯಾಷಲೆಸ್ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಗರುಡಾದ್ರಿ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಂ.ಎಸ್.ಮಹೇಶ್, ಕಾರ್ಯದರ್ಶಿ ಹೆಚ್.ಮಂಜುನಾಥ್, ಟ್ರಸ್ಟಿಗಳಾದ ರವೀಂದ್ರ, ಜಿ.ಆರ್.ಮಂಜುನಾಥ್, ವಿ.ಎಂ.ಶಿವಕುಮಾರ್ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ವಿಶ್ವಮಾನವ ಸಂದೇಶ ಸಾರ್ವಕಾಲಿಕ

0

ರಾಷ್ಟ್ರ ಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಮಹಾನ್ ಚೇತನ ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ನಾಡಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿಶ್ವ ಮಾನವ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುವೆಂಪು ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನಾಚರಣೆಯನ್ನಾಗಿ ಸರ್ಕಾರ ಘೋಷಿಸಿರುವುದು ಸಂತಸದ ವಿಷಯ. ಸಾಹಿತ್ಯ ಲೋಕದಲ್ಲಿ ಕುವೆಂಪು ರವರು ನಡೆದು ಬಂದ ಹಾದಿಯ ಬಗ್ಗೆ ಪ್ರತಿಯೊಬ್ಬ ಸಾರ್ವಜನಿಕರು ತಿಳಿದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ವಿಶ್ವ ಮಾನವ ದಿನ ವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸದರು.
ಮುಖ್ಯ ಭಾಷಣಕಾರ ವೆಂಕಟೇಶ್ ಮಾತನಾಡಿ, ಕುವೆಂಪು ಒಬ್ಬ ದಾರ್ಶನಿಕ ಕವಿಯಾಗಿದ್ದು ೨೦ ನೇ ಶತಮಾನವು ಕಂಡ ಅದ್ಬುತ ಪ್ರತಿಭೆ. ತಮ್ಮ ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಅವರು ೧೫ ಪ್ರಕಾರಗಳಲ್ಲಿ ೭೦ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ ಕನ್ನಡದ ಅಗ್ರಮಾನ್ಯ ಕವಿಯಾಗಿದ್ದರು.
ಮಕ್ಕಳಿಂದ ಬುದ್ದಿಜೀವಿಗಳವರೆಗೆ ಅವರ ಮನಸ್ಸನ್ನು ಮಟ್ಟುವ ರೀತಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದಲ್ಲಿ ಸಮಾನತೆಯನ್ನು ಸಾರಿದ ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಬಂದಿವೆ. ಯುಗಪ್ರವರ್ತಕ. ರಸಋಷಿ ಎಂದು ಪ್ರಖ್ಯಾತಿಗೊಂಡಿರುವ ಕುವೆಂಪುರವರ ಹೆಸರು ಎಂದೆಂದಿಗೂ ಅಮರವಾಗಿರುತ್ತದೆ. ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕವಾದುದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಕುವೆಂಪು ಗಾಯನ ಸ್ವರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಹಸೀಲ್ದಾರ್ ವಾಸುದೇವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್‌, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಟೌನ್ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಒಕ್ಕಲಿಗೆ ಯುವಸೇನೆಯ ತಾಲ್ಲೂಕು ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ಮುರಳಿ ಮತ್ತಿತರರು ಹಾಜರಿದ್ದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

0

ಮುಂದಿನ ಮಾರ್ಚ್ ೩೧ ರೊಳಗೆ ಶಿಡ್ಲಘಟ್ಟ ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕನ್ನಾಗಿ ಮಾಡಲು ಅಧಿಕಾರಿಗಳು ಸೇರಿದಂತೆ ಜನಪ್ರತಿಧಿಗಳು ಕೈ ಜೋಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆವಾರು ಪ್ರಗತಿ ಪರಿಶೀಲನೆ ಮಾಡಿದ ಅವರು, ತಾಲ್ಲೂಕಿನಾದ್ಯಂತ ೧೫,೫೫೦ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಾಗರಿಕರ ಮನವೊಲಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿವೆಯಾದರೂ ಸೂಕ್ತ ನೀರಿನ ವ್ಯವಸ್ಥೆಯಿಲ್ಲದಿರುವುದರಿಂದ ನಿರ್ವಹಣೆಯಿಲ್ಲ ಎಂಬ ಅಧಿಕಾರಿಗಳ ಮಾಹಿತಿಗೆ ಸ್ಪಂದಿಸಿದ ಅವರು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಾಲೆಗಳ ಶೌಚಾಲಯ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯಿಂದ ಮಾಡಿಸುವಂತೆ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಸೂಚಿಸಿದರು.
ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪೂರಕವಾಗಿ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಬಿಇಓ ರಿಂದ ಮಾಹಿತಿ ಪಡೆದುಕೊಂಡ ಅವರು ಈ ಭಾರಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ಬರಲು ಬೇಕಾದ ಎಲ್ಲಾ ಕ್ರಮಗಳನ್ನು ಜರುಗಿಸುವಂತೆ ಸೂಚಿಸಿದರು.
ತಮ್ಮದೇ ಸ್ವಗ್ರಾಮ ಸೇರಿದಂತೆ ಕ್ಷೇತ್ರದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಅಧಿಕಾರಿಗಳು ಕ್ಷೇತ್ರದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವುದಿಲ್ಲ ಎಂಬ ಸದಸ್ಯರ ಪ್ರಶ್ನೆಗೆ ಎಲ್ಲಾ ಅಧಿಕಾರಿಗಳು ಯಾವುದೇ ಕಾಮಗಾರಿ ಅಥವ ಕಾರ್ಯಕ್ರಮ ಆಯೋಜಿಸುವ ಮುನ್ನ ಆಯಾ ಕ್ಷೇತ್ರದ ಗ್ರಾಮ ಪಂಚಾಯಿತಿ ಹಾಗು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಸಿಡಿಪಿಓ ಲಕ್ಷ್ಮಿದೇವಮ್ಮ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೆಶಕ ಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಪ್ರಗತಿಯ ಮಾಹಿತಿಯನ್ನು ನೀಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇಓ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

0

ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜಯಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೦೧೬- ೧೭ ನೇ ಸಾಲಿನ ಸರ್ಕಾರದ ಉಚಿತ ಸೈಕಲ್ ವಿತರಣೆ ಹಾಗು ಕೋಚಿಮುಲ್ ಹಾಲು ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಪ್ರತಿಯೊಬ್ಬರೂ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಸರ್ಕಾರದಿಂದ ನೀಡುವ ಉಚಿತ ಸೈಕಲ್‌ಗಳನ್ನು ವಿದ್ಯಾರ್ಥಿಗಳ ಪೋಷಕರು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳು ಶಿಸ್ತು, ಶ್ರಮ ಮತ್ತು ಗುರಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕಿಗಳಾಗಿ ಬೆಳೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಹಾಗು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಂಡು ಹುಟ್ಟಿದ ಊರಿಗೆ ಕೀರ್ತಿಯನ್ನು ತರಬೇಕು ಎಂದರು.
ಕೋಚಿಮುಲ್ ಒಕ್ಕೂಟದಿಂದ ಈಗಾಗಲೇ ತಾಲ್ಲೂಕಿನಾದ್ಯಂತ ೮ ನೇ ತರಗತಿ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಒಕ್ಕೂಟದಿಂದ ವಿದ್ಯಾರ್ಥಿ ವೇತನ, ಅತಿ ಹೆಚ್ಚು ಅಂಕಗಳಿಸಿದವರಿಗೆ ಪೋತ್ಸಾಹ ಧನ ಸೇರಿದಂತೆ ವಿವಿಧ ಯೋಜನೆಗಳಿವೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಣ್ಣ, ಮುಖಂಡರಾದ ಮಳ್ಳೂರಯ್ಯ, ಬೈರೇಗೌಡ, ತಾಲ್ಲೂಕು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಹನುಮಂತರಾವ್, ಮುನೇಗೌಡ, ಬಾಲಸುಬ್ರಮಣಿ, ಪ್ರಭಾಕರ್ ರೆಡ್ಡಿ, ದೇವೆಗೌಡ, ವೆಂಕಟೇಶ್, ಅಥ್ಲೆಟಿಕ್ ಕ್ರೀಡಾಪಟು ನಾರಾಯಣಸ್ವಾಮಿ, ದೇವರಾಜು, ಸರ್ಕಾರಿ ಪ್ರೌಢಶಾಲೆಯ ಸಿಬ್ಬಂದಿ ಹಾಜರಿದ್ದರು.

ತಾಯ್ನೆಲವನ್ನು ಪ್ರತಿಯೊಬ್ಬರೂ ಪ್ರೀತಿಸಿ

0

ಕನ್ನಡ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಆಹಾರ, ಜನಜೀವ, ಜಾನಪದ ಮೊದಲಾದವುಗಳ ಬಗ್ಗೆ ಪ್ರತಿಯೊಬ್ಬರ ಮನದಲ್ಲೂ ಅಭಿಮಾನವಿರಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಪುರಬೈರನಹಳ್ಳಿಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣವಾಗಿ 60 ವರ್ಷಗಳು ಆಗಿವೆ. ಈ ಸಂದರ್ಭದಲ್ಲಿ ಈ ಚಳುವಳಿಯಲ್ಲಿ ಭಾಗವಹಿಸಿದ್ದ ಮಹನೀಯರ ಹೋರಾಟವನ್ನು ನೆನೆಯಬೇಕಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಹಲವಾರು ನಾನಾ ರೀತಿಯ ಎಡರು ತೊಡರುಗಳನ್ನು ಅನುಭವಿಸಿದ್ದರು. ಕರುನಾಡಿನ ಹುಟ್ಟಿನ ಹಿಂದೆ ದಿಟ್ಟ ಹೋರಾಟದ ಕಥೆಯಿದೆ. ನಮಗಿದು ಬಿಟ್ಟಿ ಬಂದ ನಾಡಲ್ಲ. ಇದಕ್ಕಾಗಿ ಅನ್ನ, ನೀರು, ನಿದ್ದೆಯನ್ನು ಬಿಟ್ಟು ಹೋರಾಡಿದ ಹಿರಿಯರು ಹಲವರು. ಅವರೆಲ್ಲರ ತ್ಯಾಗದ ಉಡುಗೊರೆಯಾಗಿ ನಮಗೆ ಈ ನಾಡು ದಕ್ಕಿದೆ. ನಮ್ಮ ತಾಯ್ನೆಲವನ್ನು ಪ್ರತಿಯೊಬ್ಬರೂ ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಜಾನಪದ ಗಾಯಕ ದೇವರಮಳ್ಳೂರು ಮಹೇಶ್‌ ಕನ್ನಡ ಕವಿಗಳ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಶಿಕ್ಷಕರಾದ ಕೃಷ್ಣಮೂರ್ತಿ ವಡ್ಡಾರ, ವಿ.ಆನಂದ್‌, ಸಿ.ರಾಘವೇಂದ್ರರೆಡ್ಡಿ, ವೆಂಕಟರಮಣಪ್ಪ, ಜಿಗ್ನುಮಾ, ಡಿ.ಕೆ.ಜಗದೀಶ್‌, ಎಸ್‌.ಟಿ.ರಾಜಪ್ಪ, ಮಂಜುನಾಥ, ಪಿ.ಪುಷ್ಪ, ಎ.ಲಾವಣ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ದಾಹ ತಣಿಸಿಕೊಳ್ಳುತ್ತಿರುವ ಮಾರುತಿ

0

ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ನೀರಿನ ಸಿಸ್ಟರ್ನ್‌ನಿಂದ ನಲ್ಲಿಯನ್ನು ತಿರುವಿಕೊಂಡು ಕೋತಿಯು ನೀರನ್ನು ಕುಡಿಯುತ್ತಿರುವ ದೃಶ್ಯವು ತಾಲ್ಲೂಕಿನ ನೀರಿನ ಬವಣೆಯು ಜನರಿಗಷ್ಟೇ ಅಲ್ಲದೆ ಜೀವಜಂತುಗಳಿಗೂ ಕಾಡುತ್ತಿರುವುದು ತಿಳಿಸಿಕೊಡುತ್ತಿದೆ.

ಜೆಡಿಎಸ್‌ ಕಾರ್ಯಕರ್ತರಿಂದ ಮೇಲ್ಮರುವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ಯಾತ್ರೆ ಆಯೋಜನೆ

0

ಬಯಲುಸೀಮೆಯ ಮೂಲಭೂತ ಅಗತ್ಯವಾದ ಕುಡಿಯುವ ನೀರು ಮತ್ತು ಕೃಷಿಗೆ ನೀರಿಗಾಗಿ ಶಾಶ್ವತವಾದ ಯೋಜನೆ ರೂಪಿಸಲು ಕಟಿಬದ್ಧರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಂಕಲ್ಪಕ್ಕೆ ದೇವರು ಶಕ್ತಿ ನೀಡಲೆಂದು ಜೆಡಿಎಸ್ ಕಾರ್ಯಕರ್ತರು ತಾಲ್ಲೂಕಿನ ನೂರಾರು ಭಕ್ತರನ್ನು ಆದಿಪರಾಶಕ್ತಿಯ ದರ್ಶನಕ್ಕೆ ಕಳುಹಿಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಮುಂದೆ ಬುಧವಾರ ಜೆಡಿಎಸ್‌ ಕಾರ್ಯಕರ್ತರು ಆಯೋಜಿಸಿದ್ದ ಮೇಲ್ಮರುವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ಯಾತ್ರೆಗೆ 14 ಬಸ್ಸುಗಳಲ್ಲಿ ತೆರಳಿದ 770 ಮಂದಿ ಭಕ್ತರಿಗೆ ಶುಭ ಕೋರಿ ಬೀಳ್ಕೊಟ್ಟು ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಆದಿಪರಾಶಕ್ತಿಯ ಸನ್ನಿಧಿಗೆ ತೆರಳುತ್ತಿರುವ ಭಕ್ತರು ನಮ್ಮ ಭಾಗದ ಮಳೆ ಬೆಳೆಗಾಗಿ ಪ್ರಾರ್ಥಿಸಲಿ. ನಾಡು ಸುಭಿಕ್ಷವಾಗಿದ್ದರೆ, ಜನರೂ ಏಳಿಗೆ ಕಾಣುತ್ತಾರೆ. ಶ್ರದ್ಧಾಭಕ್ತಿಯಿಂದ ವ್ರತವನ್ನು ಆಚರಿಸಿ ಪೂಜಿಸುವ ಮನಸ್ಸುಗಳಿಗೆ ದೇವರು ಅನುಗ್ರಹಿಸುತ್ತಾರೆ. ದೇವರ ಅನುಗ್ರಹವಿದ್ದಲ್ಲಿ ನಮ್ಮ ಬಾಳು ಹಸನಾಗುತ್ತದೆ. ಮುಂದಿನ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಯನ್ನು ಕುಮಾರಸ್ವಾಮಿಯವರು ಮಾಡಲು ತಾಯಿ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಮಾತನಾಡಿ, ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಲೆಂದು, ಅದಕ್ಕಾಗಿ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಜೆಡಿಎಸ್‌ ಬಹುಮತವನ್ನು ಪಡೆದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು ದೇವರ ಆಶೀರ್ವಾದಕ್ಕಾಗಿ ಜೆಡಿಎಸ್‌ ಕಾರ್ಯಕರ್ತರು ಓಂ ಶಕ್ತಿ ದೇವಾಲಯಕ್ಕೆ ಭಕ್ತರಿಗೆ ಯಾತ್ರೆಯನ್ನು ಆಯೋಜಿಸಿದ್ದಾರೆ. ಇತ್ತೀಚೆಗಷ್ಟೆ ನಡೆದ ಎಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣನವರ ಹುಟ್ಟಿದ ಹಬ್ಬದ ಪ್ರಯುಕ್ತ ಆದಿಪರಾಶಕ್ತಿಯ ದರ್ಶನಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸುಮಾರು ನಾಲ್ಕು ಸಾವಿರ ಮಂದಿಯನ್ನು ಹಂತಹಂತವಾಗಿ ಕಳುಹಿಸುತ್ತಿರುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್‌.ನರಸಿಂಹಯ್ಯ, ಮೇಲೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್‌.ಮಂಜುನಾಥ್‌, ಮಳಮಾಚನಹಳ್ಳಿ ಬೈರೇಗೌಡ, ತಾದೂರು ರಘು, ಪುರಸಭೆ ಸದಸ್ಯ ವೆಂಕಟಸ್ವಾಮಿ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್‌, ಶ್ರೀನಿವಾಸಗೌಡ, ಜಂಗಮಕೋಟೆ ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

ಮೇಲೂರಿನಲ್ಲಿ ಮಕ್ಕಳ ಕೈ ಬಳೆಯ ವದಂತಿ: ಆತಂಕಕ್ಕೆ ಬಿದ್ದ ಪೋಷಕರು: ಮಕ್ಕಳ ಕೈಯ್ಯಲ್ಲಿನ ಹಿತ್ತಾಳೆಯ ಬಳೆ ಕಿತ್ತೆಸೆದ ಪೋಷಕರು

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ವೈಧಿಕ ನಾರಾಯಣಸ್ವಾಮಿಯವರು ಮಕ್ಕಳ ಕೈಗೆ ತೊಡಿಸಿದ ಮಂತ್ರಿಸಿದ ಬಳೆಯಿಂದ ಇಬ್ಬರು ಮಕ್ಕಳು ಸತ್ತಿದ್ದಾರಂತೆ, ಅಲ್ಲಿ ಇನ್ನೂ ಮೂವರು ಸತ್ತರಂತೆ ಎಂಬ ಅಂತೆ ಕಂತೆಗಳು ಹರಿದಾಡಿ ಮಂಗಳವಾರ ತಾಲ್ಲೂಕಿನಲ್ಲಿ ಆತಂಕ ಸೃಷ್ಠಿಯಾಗಿತ್ತು.
ತಾಲ್ಲೂಕಿನ ಮೇಲೂರು ಗ್ರಾಮದ ವೈಧಿಕ ಲಕ್ಷ್ಮೀನಾರಾಯಣ್ ಎಂಬುವವರು ಮಂತ್ರಿಸಿದ ಬಳೆ ಧರಿಸಿದ ಮಕ್ಕಳು ಸತ್ತು ಹೋದರಂತೆ ಎಂಬ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಿಡಿದ್ದು ಪೋಷಕರು ಆತಂಕಕ್ಕೊಳಗಾಗುವಂತಾಯಿತು.
ಮದ್ಯಾಹ್ನದ ವೇಳೆಗೆ ಸುದ್ದಿಯು ಒಬ್ಬರಿಂದ ಒಬ್ಬರಿಗೆ ಹರಡಿತ್ತಲ್ಲದೆ, ಕೂಡಲೆ ಬಳೆಗಳನ್ನು ತೆಗೆದು ಬಿಸಾಡಿ ಎಂದು ಪ್ರಚಾರ ನಡೆದಿತ್ತು. ಇನ್ನು ಕೆಲವು ಕಡೆ ವೈಧಿಕರು ಹಾಗೂ ಅವರ ಮೂವರು ಮಕ್ಕಳು ಸಹ ಒಬ್ಬರ ನಂತರ ಒಬ್ಬರು ಸತ್ತರಂತೆ ಎಂಬ ಅಂತೆ ಕಂತೆಗಳ ಸುದ್ದಿ ಹರಿದಾಡಿದ್ದು ಕೆಲವೇ ಗಂಟೆಗಳಲ್ಲಿ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆ, ನೆರಯ ಆಂಧ್ರ, ತಮಿಳುನಾಡಿನಲ್ಲೂ ಸುದ್ದಿ ಸದ್ದು ಮಾಡಿತ್ತು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳ ಕೈಯ್ಯಲ್ಲಿ ಧರಿಸಿದ್ದ ತಾಮ್ರದ ಬಳೆಗಳನ್ನು ಕಿತ್ತು ಬಿಸಾಡಿದ್ದಾರೆ, ಇನ್ನೂ ಕೆಲವು ಕಡೆ ಪೋಷಕರು ಗುಂಪು ಗುಂಪಾಗಿ ಶಾಲೆಗಳಿಗೆ ದೌಡಾಯಿಸಿ ಬಂದು ತಮ್ಮ ಮಕ್ಕಳ ಕೈಯ್ಯಲ್ಲಿನ ಬಲೆಯನ್ನು ತೆಗೆದು ನಿಟ್ಟುಸಿರು ಬಿಟ್ಟಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಿಡಿದ್ದು ತಮ್ಮ ಬಂಧು ಬಳಗ ನೆಂಟರು ಅಕ್ಕ ಪಕ್ಕದವರಿಗೆ ಮಕ್ಕಳ ಕೈಯ್ಯಲ್ಲಿ ಬಳೆ ಬಿಸಾಡಿ ಎಂದು ತಾಕೀತು ಮಾಡಿದ್ದಾರೆ. ಇಷ್ಟಕ್ಕೂ ಸಮಾಧಾನವಾಗದೆ ಕೆಲವರು ನೇರವಾಗಿ ಮೇಲೂರಿನ ವೈಧಿಕರ ಮನೆಗೆ ದೌಡಾಯಿಸಿದ್ದಾರೆ.
ನೋಡ ನೋಡುತ್ತಿದ್ದಂತೆ ವೈಧಿಕ ಲಕ್ಷ್ಮೀನಾರಾಯಣರ ಮನೆ ಮುಂದೆ ಜನಜಂಗುಳಿಯೆ ನೆರೆದಿತ್ತು. ಲಕ್ಷ್ಮೀನಾರಾಯಣಸ್ವಾಮಿಗಳಿಗಿಂತೂ ಬಂದ ಎಲ್ಲರಿಗೂ ನಾನು ಬದುಕಿದ್ದೇನೆ, ನಮ್ಮ ಮಕ್ಕಳು ಬದುಕಿದ್ದಾರೆ, ನಾನು ಬಳೆ ತೊಡಿಸಿದ ಎಲ್ಲ ಮಕ್ಕಳೂ ಕ್ಷೇಮವಾಗಿದ್ದಾರೆ. ಯಾರಿಗೂ ಏನೂ ಆಗಿಲ್ಲ, ಇದೆಲ್ಲವೂ ವದಂತಿಗಳು ಅಷ್ಟೇ ಎಂದು ಹೇಳಿ ಹೇಳುವಷ್ಟರಲ್ಲಿ ಸಾಕು ಸಾಕಾಯಿತು.
ಅಂತೂ ಇಂತೂ ರಾತ್ರಿಯವರೆಗೂ ಹರಿದಾಡಿದ ಗಾಳಿ ಸುದ್ದಿಯಿಂದ ವೈಧಿಕ ಲಕ್ಷ್ಮೀನಾರಾಯಣರ ಬಳಿ ಬಳೆ ತೊಡಿಸಿಕೊಂಡು ಹೋಗಿದ್ದ ಲಕ್ಷಾಂತರ ಮಂದಿ ಪೋಷಕರು ಇನ್ನಿಲ್ಲದ ಆತಂಕಕ್ಕೆ ಒಳಗಾಗಿ ತಮ್ಮ ಮಕ್ಕಳ ಕೈಯ್ಯಲ್ಲಿನ ಬಳೆಯನ್ನು ಕಿತ್ತೆಸೆದು ಕೊನೆಗೂ ಇದೆಲ್ಲಾ ಸುಳ್ಳು ಎಂದು ತಿಳಿದ ಮೇಲಷ್ಟೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಯಿತು.

ಸಿರಿ ಸಮೃದ್ದ ರೈತ ಕೂಟದಿಂದ ಕೋಳಿಗಳ ವಿತರಣೆ

0

ಕುರಿ ಕೋಳಿ ಹಸು ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿಯನ್ನು ಕೈಗೊಂಡರೆ ಮಾತ್ರವೇ ಆರ್ಥಿಕವಾಗಿ ಅಭಿವೃದ್ದಿಯಾಗಲು ಸಾಧ್ಯ ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ, ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೈತ ಕೂಟಗಳ ಮಹಿಳಾ ರೈತರಿಗೆ ಬೋದಗೂರಿನ ಸಿರಿ ಸಮೃದ್ದಿ ರೈತ ಕೂಟದಿಂದ ವಿಶೇಷ ತಳಿಯ ನಾಟಿ ಗಿರಿರಾಜ ಕೋಳಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿ ಮಾತನಾಡಿದರು.
ಕೇವಲ ಕೃಷಿಯನ್ನು ಕೈಗೊಳ್ಳುವುದರಿಂದ ಆರ್ಥಿಕ ಲಾಭಗಳಿಸಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಕುರಿ ಸಾಕಾಣಿಕೆಯನ್ನು ಕೈಗೊಂಡು ಸಮಗ್ರ ಕೃಷಿ ಮಾಡಿದಾಗ ಮಾತ್ರ ಆರ್ಥಿಕವಾಗಿ ಸುಧಾರಿಸಬಹುದೆಂದರು.
ಕೃಷಿಯಲ್ಲೂ ಸಹ ಆಧುನಿಕ ಪದ್ದತಿಗಳ ಆವಿಷ್ಕಾರ ಆಗುತ್ತಿದೆ. ಯಂತ್ರಗಳ ಬಳಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸಿ ಅಧಿಕ ಲಾಭ ಗಳಿಸುವುದು ನಮ್ಮ ಮುಂದಿರುವ ಸವಾಲು ಆಗಿದೆ. ಆದರೆ ಬಹುತೇಕ ರೈತರು ಹಳೆಯ ಪದ್ದತಿಗಳಿಗೆ ಜೋತು ಬಿದ್ದು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.
ನಮ್ಮ ರೈತ ಕೂಟಗಳಿಂದ ಕಾಲ ಕಾಲಕ್ಕೆ ರೈತರಿಗೆ ತರಬೇತಿ, ಅಧ್ಯಯನ ಪ್ರವಾಸ, ಪ್ರಾತ್ಯಕ್ಷಿಕೆ, ಪ್ರಗತಿ ಪರ ರೈತರ ತೋಟಗಳ ವೀಕ್ಷಣೆ ಮೂಲಕ ಕೃಷಿಯ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷ ತಳಿಯ ಕುರಿಗಳನ್ನು ನಮ್ಮ ಒಕ್ಕೂಟದ ಎಲ್ಲ ಸದಸ್ಯರಿಗೂ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಬೋದಗೂರು ಸಿರಿ ಸಮೃದ್ದಿ ರೈತ ಕೂಟದಿಂದ ಕಾಚಹಳ್ಳಿ, ಮಳ್ಳೂರು, ಹಿತ್ತಲಹಳ್ಳಿ, ಬೂದಾಳ ಇನ್ನಿತರೆ ಗ್ರಾಮಗಳ ೫೦ ಮಂದಿ ಮಹಿಳಾ ರೈತರಿಗೆ ತಲಾ ನಾಲ್ಕು ನಾಟಿ ಗಿರಿರಾಜ ವಿಶೇಷ ತಳಿಯ ಕೋಳಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು.
ಬೋದಗೂರು ರಾಮಮೂರ್ತಿ, ಪ್ರಕಾಶ್, ಶ್ರೀನಿವಾಸ್‌ರೆಡ್ಡಿ, ಮುನೇಗೌಡ, ಮುನಿರಾಜು, ರತ್ನಮ್ಮ, ವನಿತ, ರಾಧಮ್ಮ ಮತ್ತಿತರರು ಹಾಜರಿದ್ದರು.

ಕುರಿಗಳನ್ನು ಕೊಳ್ಳಲು ಸಾಲ ಮಂಜೂರಾತಿ ಪತ್ರ

0

ಕುರಿಗಳು ಮನೆಯಲ್ಲಿದ್ದರೆ ಎ.ಟಿ.ಎಂ ಇದ್ದಂತೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬುಳಕೆ ಮಾಡಿಕೊಂಡು ಕುರಿಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಪ್ರಗತಿಪರ ಸಾಕಾಣಿಕೆ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್ ಗೌಡ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಮಂಗಳವಾರ ಪ್ರಗತಿಪರ ಕುರಿ ಸಾಕಾಣಿಕೆ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ಒಂಭತ್ತು ಮಂದಿ ಮಹಿಳೆಯರಿಗೆ ಕುರಿಗಳನ್ನು ಕೊಳ್ಳಲು ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ನೀಡುತ್ತಿದ್ದೇವೆ. ಒಬ್ಬ ಮಹಿಳೆಗೆ 67,440 ರೂಗಳಂತೆ ಒಟ್ಟು ೬ ಲಕ್ಷದ ೬ ಸಾವಿರ ರೂ. ಗಳಷ್ಟು ಸಾಲವನ್ನು ನೀಡಲಾಗುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ. ೫೦ ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ. ೨೫ ರಷ್ಟು ಸಹಾಯಧನವನ್ನು ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿಯಿಂದ ನೀಡಲಾಗಿದೆ ಎಂದು ಹೇಳಿದರು.
ಪ್ರಗತಿಪರ ಕುರಿ ಸಾಕಾಣಿಕೆ ಸಂಘದ ನಿರ್ದೇಶಕ ರಾಮಣ್ಣ, ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ತ್ಯಾಗರಾಜು, ಗ್ರಾಮಸ್ಥರಾದ ಅಂಬಿಕಾ, ರಾಧಮ್ಮ, ಲಕ್ಷ್ಮಮ್ಮ, ಭಾರತಿ, ಸುಶೀಲಮ್ಮ, ಜಿ.ಅಂಬಿಕಾ, ಮುನಿಯಮ್ಮ, ಲಕ್ಷ್ಮಮ್ಮ, ಸರಸ್ವತಮ್ಮ, ಗಾಯಿತ್ರಮ್ಮ, ಮಂಜುನಾಥ್, ಹನುಮೇಗೌಡ, ರಾಜಣ್ಣ ಮತ್ತಿತರರು ಹಾಜರಿದ್ದರು.

ಕಾವಲು ಸಮಿತಿ ಸದಸ್ಯರ ಜಾಗೃತಿ ಶಿಬಿರ

0

ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಕಾವಲು ಸಮಿತಿ ಸದಸ್ಯರು ಶ್ರಮಿಸಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ರಾಮರತ್ನ ಕುಮಾರ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನಿವಾರಣೆಯ ಯೋಜನೆಯಡಿ ಕಾವಲು ಸಮಿತಿ ಸದಸ್ಯರ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಕಲೆಗಳನ್ನು ಕಲಿಯಬೇಕು. ಕೆಲಸದ ಆಮಿಷ ತೋರಿಸಿ ಮಹಿಳೆಯರನ್ನು ಬೇರೆ ದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದು, ಈ ಬಗ್ಗೆ ಜಾಗೃತರಾಗಿರಬೇಕು.
ಮಕ್ಕಳನ್ನು ಕಳ್ಳತನ ಮಾಡಿ ಪ್ರಯೋಗದ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಮಕ್ಕಳನ್ನು ಬಿಕ್ಷಾಟನೆಯನ್ನು ಬಳಸಿಕೊಂಡು ಹಣವನ್ನು ಗಳಿಸುತ್ತಿರುವರು. ಇದನ್ನು ತಡೆಗಟ್ಟುವ ಹೊಣೆ ಸಂಘ ಸಂಸ್ಥೆಗಳ, ಕಾವಲು ಸಮಿತಿ ಅಲ್ಲದೆ ಪ್ರತಿಯೊಬ್ಬ ಸಾರ್ವಜನಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಿಡಿಪಿಓ ಲಕ್ಷ್ಮಿದೇವಮ್ಮ ಮಾತನಾಡಿ, ಮಹಿಳೆಯರು ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವಾಗ ತಮ್ಮ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಪರಿಚಿತರರು ಮನೆಗಳ ಸುತ್ತ ಬಂದು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದರೆ ಅಂತಹವರ ವಿರುದ್ದ ಪೋಲಿಸ್ ಇಲಾಖೆಗೆ ದೂರು ನೀಡಬೇಕು, ಮಹಿಳೆರನ್ನು ಕಳ್ಳ ಸಾಗಾಣಿಕೆಯನ್ನು ಮಾಡಿ ಅವರನ್ನು ಲೈಂಗಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆ ಕೊಡುತ್ತಾರೆ. ಆದ್ದರಿಂದ ಇದನ್ನ ತಡೆಗಟ್ಟಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ತಹಶೀಲ್ದಾರ್ ವಾಸುದೇವಮೂರ್ತಿ, ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನಿರೀಕ್ಷಕ ಆಂಜಪ್ಪ, ಶಾಲಾ ಮುಖ್ಯಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿಷ್ಠೆಯಿಂದಿರಬೇಕು

0

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರ್ವಂಚನೆಯಿಂದ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ರಾಮರತ್ನ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಯಾವುದೇ ಪ್ರತಿಫಲ ಆಶಿಸದೇ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಡುವ ಸಹಾಯವೇ ಸೇವೆ. ಹಣ ಪಡೆದು ನೌಕರಿ ಮಾಡುವ ನಾವುಗಳು ಮಾಡುತ್ತಿರುವುದು ಸೇವೆಯಲ್ಲ. ಯಾವುದೇ ರೈತರು, ನಾಗರೀಕರು ಸೇರಿದಂತೆ ಕಚೇರಿಗೆ ಬರುವವರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು.
ವಿನಾಕಾರಣ ನಾಗರಿಕರನ್ನು ಅಲೆಸುವುದು ಸೇರಿದಂತೆ ಕೆಲಸ ಮಾಡಲು ಲಂಚ ಕೇಳುವುದನ್ನು ಬಿಡಿ ಎಂದ ಅವರು ಇದ್ದಷ್ಟು ದಿನ ತಮ್ಮ ಕೈಲಾದ ಸಹಾಯವನ್ನು ಜನರಿಗೆ ಮಾಡಿದಾಗ ಕೆಲಸ ಮಾಡಿದ ತೃಪ್ತಿಯ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. ಲಂಚದ ಹಣ ಪಡೆದು ತಮ್ಮ ಮುಂದಿನ ಪೀಳಿಗೆಯವರಿಗಾಗಿ ಕೂಡಿಡುವುದರಿಂದ ದೇಶದ ಮುಂದಿನ ಪ್ರಜೆಗಳನ್ನು ಸೋಂಬೇರಿಗಳನ್ನಾಗಿ ಮಾಡಬೇಡಿ ಎಂದರು.
ಇನ್ಸ್‌ಪೆಕ್ಟರ್ ಆಂಜಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಕಚೇರಿಗೆ ಬರುವ ನಾಗರಿಕರ ಕೆಲಸಗಳನ್ನು ವಿನಾಕಾರಣ ವಿಳಂಬ ಮಾಡಬೇಡಿ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಕೂಡಲೇ ಅವರ ಕೆಲಸ ಮುಗಿಸಿಕೊಡಿ ಇಲ್ಲವಾದಲ್ಲಿ ಅವರಿಗೆ ಹಿಂಬರಹವನ್ನಾದರೂ ನೀಡಿ ಕಳುಹಿಸಿ. ವರ್ಷಗಟ್ಟಲೇ ಕಚೇರಿಗೆ ಅಲೆದು ಸುಸ್ತಾಗಿ ಕೊನೆಗೆ ನಮ್ಮ ಬಳಿಗೆ ಬಂದು ದೂರು ನೀಡಿದಾಗ ಯಾವುದೇ ಮುಲಾಜಿಲ್ಲದೇ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳು ಸಲ್ಲಿಕೆಯಾಗಲಿಲ್ಲ.
ತಹಸೀಲ್ದಾರ್ ಪಿ.ಕೆ.ವಾಸುದೇವಮೂರ್ತಿ, ರಾಜಸ್ವ ನಿರೀಕ್ಷಕ ಮೋಹನ್, ಬೆಸ್ಕಾಂ ಎಇಇ ಅನ್ಸರ್‌ಪಾಷ, ಸಿಡಿಪಿಓ ಲಕ್ಷ್ಮಿದೇವಮ್ಮ, ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಪಶುವೈದ್ಯ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.