ಕ್ರಿಸ್ತನ ಉಪದೇಶವಾದ ಶಾಂತಿ, ಪ್ರೀತಿ, ಮಾನವೀಯತೆ ಇಂದಿನ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ತಾಲ್ಲೂಕಿನ ಹುಜಗೂರು ಗ್ರಾಮದಲ್ಲಿ ಮಂಗಳವಾರ ಇಮ್ಮಾನು ವೆಲ್ ಟ್ರಸ್ಟ್ ವತಿಯಿಂದ ಕ್ರಿಸ್‌ಮಸ್ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು.
ಕ್ರಿಸ್‌ಮಸ್ ಹಬ್ಬ ಶಾಂತಿಯನ್ನು ಸಾರುತ್ತಿದೆ. ಶಾಂತಿಯ ಸಾಧನಗಳಾಗಲು, ಶಾಂತಿಯ ದೂತರಾಗಲು ನಮ್ಮನ್ನು ಆಹ್ವಾನಿಸುತ್ತಿದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ ಪ್ರಜ್ವಲಿಸಲಿ. ಸ್ವಾರ್ಥ, ಹಗೆತನವನ್ನು ಬಿಟ್ಟು ತ್ಯಾಗ ತನ್ಮಯರಾಗಿ. ಸೇವಾಮನೋಭಾವದಿಂದ ಮುನ್ನೆಡೆಯಿರಿ ಎಂದರು.
ಕ್ರೈಸ್ತ ಮುಖಂಡ ಮುನಿನಾರಾಯಣ ಮಾತನಾಡಿ, ಯೇಸು ಸ್ವಾಮಿ ನಿನ್ನೆಯಂತೆ ಇಂದು, ಇಂದಿನಂತೆ ನಾಳೆ ಹಾಗೂ ಚಿರಕಾಲ ನಮ್ಮೊಡನೆ ಇರುವರು. ಅವರ ಹೆಸರು ‘ಇಮ್ಮಾನು ವೆಲ್’ ಎಂದರೆ ‘ದೇವರು ನಮ್ಮೊಡನೆ’ ಎಂದು ಅರ್ಥ. ಈ ಕ್ರಿಸ್‌ಮಸ್ ಲೋಕ ದಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಬಡ ಮಹಿಳೆಯರಿಗೆ ಟ್ರಸ್ಟ್ ವತಿಯಿಂದ ಸೀರೆಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ದೇವರಾಜ್, ದೇವರಾಜು, ಪಿಡಿಓ ರಾಮಕೃಷ್ಣ, ಕೆಂಪೇಗೌಡ, ರಾಮಚಂದ್ರ, ಕದಿರಪ್ಪ, ಅರುಣ್‌ಕುಮಾರ್, ವೆಂಕಟೇಶ್, ಶಾಮಣ್ಣ, ನಾರಾಯಣಸ್ವಾಮಿ, ಹರೀಶ್, ಗೋವಿಂದಪ್ಪ, ಎಚ್.ಎನ್.ಮುನಿನಾರಾಯಣ, ಶಿವಕುಮಾರ್, ಮಂಜುನಾಥ್, ಚೌಡಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹುಜಗೂರು ಗ್ರಾಮದಲ್ಲಿ ಕ್ರಿಸ್‌ಮಸ್ ಆಚರಣೆ
ಮಾಚಿದೇವರ ಯುವಕರ ಸಂಘದಿಂದ ದಿನಚರಿ ಬಿಡುಗಡೆ
ಪ್ರತಿವರ್ಷವೂ ಮಡಿವಾಳ ಮಾಚಿದೇವರ ಯುವಕರ ಸಂಘದಿಂದ ದಿನಚರಿಯನ್ನು ಹೊರತರುತ್ತಿದ್ದು, ಅದನ್ನು ಸಮುದಾಯದ ಪ್ರತಿ ಮನೆಗೂ ತಲುಪಿಸುತ್ತಾ ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ ಮಾಡಲು ಸಂಘಟನೆ ಮಾಡುತ್ತಿರುವುದಾಗಿ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್.ವಿ.ರಾಜಣ್ಣ ತಿಳಿಸಿದರು.
ನಗರದ ಟಿ.ಬಿ.ರಸ್ತೆಯಲ್ಲಿರುವ ಮಡಿವಾಳ ಮಾಚಿದೇವರ ಸಂಘದ ಕಚೇರಿಯಲ್ಲಿ ಭಾನುವಾರ ಸಂಜೆ ಮಡಿವಾಳ ಮಾಚಿದೇವರ ಯುವಕರ ಸಂಘದಿಂದ ಹೊಸ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮುದಾಯದಲ್ಲಿ ಬಹಳ ಮಂದಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ಸರ್ಕಾರದ ನೆರವನ್ನು ತಲುಪಿಸುವುದು ಮತ್ತು ಅವರಿಗೆ ಸಹಾಯ ಮಾಡಲು ಸಂಘದಿಂದ ಶ್ರಮಿಸಲಾಗುತ್ತಿದೆ. ಅಂಘವು ಸಮುದಾಯದ ಪ್ರತಿ ಮನೆಯನ್ನು ತಲುಪಲು ಕ್ಯಾಲೆಂಡರ್ ನೆರವಾಗಲಿದೆ ಎಂದರು.
ಮಡಿವಾಳ ಮಾಚಿದೇವರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮುನಿರಾಜು, ಡಿ.ವಿ.ಕೃಷ್ಣಪ್ಪ, ದೇವರಾಜ್, ಎಚ್.ಕೆ.ಶ್ರೀನಿವಾಸ್, ಎನ್.ರಾಜು, ರಾಮಚಂದ್ರಪ್ಪ, ಎಚ್.ಸಿ.ರಮೇಶ್, ಚಂದ್ರಪ್ಪ, ಆಂಜಿನಪ್ಪ, ಎನ್.ಹರೀಶ್, ಕೆ.ಎಂ.ಮುನಿರಾಜು, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಹಕಾರ ಸಂಘಗಳಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ
ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದ್ದು ಅವುಗಳ ಬೆಳವಣಿಗೆಗಾಗಿ ಎಲ್ಲರೂ ಶ್ರಮಿಸಬೇಕು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂತಡಿಪಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲುಸೀಮೆಯ ಜಿಲ್ಲೆಗಳಲ್ಲಿನ ಜನರು ತಮ್ಮ ಜೀವನ ಮಟ್ಟ ಸುಧಾರಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರಿ ಸಂಘಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಬೇಕು ಎಂದರು.
ಹಾಲು ಒಕ್ಕೂಟವು ಕೂಡಾ ಉತ್ಪಾದಕರಿಗೆ ಅನುಕೂಲವಾಗುವಂತೆ ಈಗಾಗಲೇ ಅನೇಕ ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದು ಎಷ್ಟೇ ಹಾಲು ಉತ್ಪಾದನೆಯಾದರೂ ಕೂಡಾ ಮಾರುಕಟ್ಟೆಯ ಕೊರತೆಯಿಲ್ಲದಂತೆ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಸಹಕಾರಿ ಸಂಘಗಳು ಜನರ ಸಹಕಾರಕ್ಕೆ ಮಾತ್ರ ಸೀಮಿತವಾಗಬೇಕು. ಯಾವುದೇ ಕಾರಣಕ್ಕೂ ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡದೇ ಗ್ರಾಮದ ಸಹಕಾರಿ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಸಹಕಾರಿ ಸಂಘಗಳ ಮೂಲಕ ಜನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಉತ್ಪಾದಕರಿಗೆ ತಲುಪಿಸುವಂತಹ ಕೆಲಸವನ್ನು ಗ್ರಾಮದ ಮುಖಂಡರೂ ಸೇರಿದಂತೆ ಸಹಕಾರಿ ಸಂಘದ ನಿರ್ದೇಶಕರು ಹಾಗು ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಚಿಂತಡಿಪಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಮಾರೇಗೌಡ, ಮಾಜಿ ಅಧ್ಯಕ್ಷರಾದ ಪಿ.ನರಸಿಂಹಯ್ಯ, ಎಂ.ಮುನಿನಾರಾಯಣಪ್ಪ, ಕೋಚಿಮುಲ್ ಶಿಡ್ಲಘಟ್ಟ ಶಿಭಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಎಂ.ಬಿ.ಮಂಜುನಾಥ್, ಮಾರುತಿ, ನಾರಾಯಣಸ್ವಾಮಿ, ರಮೇಶ್, ಮುನಿರಾಜು, ಮುರಳಿ, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಹುಟ್ಟುಹಬ್ಬದ ಪ್ರಯುಕ್ತ ‘ಕವಿನಮನ’
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಳತೆ, ಹೃದಯವಂತಿಕೆ ಮತ್ತು ಕವಿಮನಸ್ಸನ್ನು ನೆನೆಯುವ ಉದ್ದೇಶದಿಂದ ಕವಿ ನಮನ ಕಾರ್ಯಕ್ರಮವನ್ನು ನಡೆಸುತ್ತಿರುವುದಾಗಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಹೆಸರಾಂತ ಗಾಯಕ ಕಡಬುಗೆರೆ ಮುನಿರಾಜು ಮತ್ತು ತಂಡದವರಿಂದ ಕವಿ ನಮನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಜಪೇಯಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ತಮ್ಮ ಕೆಲಸಗಳ ಮೂಲಕ ಅವರು ದೇಶದ ಜನರ ಹೃದಯ ಗೆದ್ದಿದ್ದಾರೆ. ವಾಜಪೇಯಿ ಒಬ್ಬ ಅಜಾತಶತ್ರು, ದೇಶಕಂಡ ಹೆಮ್ಮಯ ನಾಯಕ. ಭ್ರಷ್ಟಚಾರ ನಿರ್ಮೂಲನೆ ಮಾಡಿದ ವ್ಯಕ್ತಿ. ಅವರ ಆಡಳಿತದ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಈಗ ನರೇಂದ್ರ ಮೋದಿ ಅವರ ಹಾದಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ವಾಜಪೇಯಿ ಅವರಿಗೆ ದೇವರು ಆರೋಗ್ಯ ಮತ್ತು ಆಯಸ್ಸು ನೀಡಲಿ ಎಂದು ಪಾರ್ಥಿಸುತ್ತೇವೆ ಎಂದರು.
ವಾಜಪೇಯಿ ರಚಿಸಿದ ಕವನಗಳ ಜೊತೆಯಲ್ಲಿ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮುಂತಾದ ಕವಿಗಳ ರಚನೆಗಳನ್ನು ಹೆಸರಾಂತ ಗಾಯಕ ಕಡಬುಗೆರೆ ಮುನಿರಾಜು ಮತ್ತು ತಂಡದವರು ಹಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಸದಾಶಿವ, ಸುಜಾತಮ್ಮ, ದಾಮೋದರ್, ರಮೇಶ್ ಬಾಯಿರಿ, ಮುನಿರಾಜು, ಪುರುಷೋತ್ತಮ್, ಬೈರಾರೆಡ್ಡಿ ಮತ್ತಿತರರು ಹಾಜರಿದ್ದರು.
ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೇವು ಬ್ಯಾಂಕ್ ತೆರೆಯಿರಿ
ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೇವು ಬ್ಯಾಂಕ್ ತೆರೆದು ರಾಸುಗಳ ಮೇವಿನ ಕೊರತೆ ನೀಗಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆವಾರು ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಬೀಕರ ಬರಗಾಲ ಬಂದಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೇವಿನ ಬ್ಯಾಂಕ್‌ಗಳನ್ನು ಆರಂಭಿಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದು ಅಗತ್ಯ ಕ್ರಮಗಳ ಬಗ್ಗೆ ಕೂಡಲೆ ವರದಿ ನೀಡಿ ಶೀಘ್ರವಾಗಿ ಮೇವಿನ ಬ್ಯಾಂಕ್‌ನ್ನು ಆರಂಭಿಸುವಂತೆ ಸೂಚಿಸಿದರು.
ತಾಲ್ಲೂಕಿನಲ್ಲಿ ದನಕರುಗಳ ಸಂಖ್ಯೆ, ಬೇಕಾಗಬಹುದಾದ ಮೇವಿನ ಪ್ರಮಾಣದ ಬಗ್ಗೆ ವಿವರ ನೀಡಿದ ಪಶು ಸಂಗೊಪನೆ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ, ಬಳ್ಳಾರಿಯಿಂದ ಮೇವನ್ನು ಆಮದು ಮಾಡಿಕೊಳ್ಳಬೇಕಿದೆ. ಈಗಾಗಲೆ ತಾಲ್ಲೂಕಿಗೆ ೪,೧೦೬ ಮೇವಿನ ಕಿಟ್‌ಗಳನ್ನು ಸರಬರಾಜು ಮಾಡಲು ಕೋರಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ವಾಸುದೇವಮೂರ್ತಿ ಮಾತನಾಡಿ, ತಾಲ್ಲೂಕಿನ ದಿಬ್ಬೂರಹಳ್ಳಿ ಹಾಗೂ ಸಾದಲಿ ಪ್ರದೇಶದಲ್ಲಿ ಮೇವು ಬ್ಯಾಂಕ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ದಾಸ್ತಾನು ಮಾಡುವ ಮೇವಿಗೆ ಭದ್ರತೆ ಕಲ್ಪಿಸುವ ದೃಷ್ಠಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮೇವಿನ ದಾಸ್ತಾನು ಮಾಡಲು ಸ್ಥಳದ ಕೊರತೆ ಜತೆಗೆ ಭದ್ರತೆಯ ಸಮಸ್ಯೆಯೂ ಎದುರಾಗುವ ಕಾರಣ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಒಟ್ಟು ೧೭,೧೬೩ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು ಈ ಪೈಕಿ ೧೬,೪೩೪ ಹೆಕ್ಟೇರ್‌ನಲ್ಲಷ್ಟೆ ಬಿತ್ತನೆಯಾಗಿದ್ದು ಮಳೆ ಕೊರತೆಯಿಂದಾಗಿ ೧೩,೫೨೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ, ಸರ್ಕಾರದಿಂದ ಅನುಮೋದನೆ ದೊರತೆ ಕೂಡಲೆ ನಷ್ಟ ಪರಿಹಾರವನ್ನು ವಿತರಿಸಲಾಗುವುದು ಎಂದು ಸಭೆಗೆ ವಿವರಿಸಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಎಇಇ ಕೇಶವಮೂರ್ತಿ ಮಾತನಾಡಿ, ನಾರಾಯಣದಾಸರಹಳ್ಳಿಯಲ್ಲಿ ಖಾಸಗಿ ಕೊಳವೆಬಾವಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ವೈ.ಹುಣಸೇನಹಳ್ಳಿ, ಬಸವನಪರ್ತಿ ಹಾಗೂ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ೨೭೮ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ ೧೩೧ ಕೊಳವೆ ಬಾವಿಗಳಿಗೆ ಮಾತ್ರ ಹಣ ಪಾವತಿ ಮಾಡಿದ್ದು ೧೨೯ ಕೊಳವೆ ಬಾವಿಗಳಿಗೆ ಪಾವತಿಸಬೇಕಿದೆ, ಕೆಲವು ಕಡೆ ಕೊಳವೆ ಬಾವಿಗಳು ಕೊರೆದು ನೀರು ದೊರೆತಿದ್ದರೂ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ ಎಂದು ಸಮಸ್ಯೆಯನ್ನು ತೆರೆದಿಟ್ಟರು.
೧೪೪ ಗ್ರಾಮಗಳಲ್ಲಿ ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಅಂದಾಜಿಸಿದ್ದು ಅಂತಹ ಗ್ರಾಮಗಳಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ವಾಸುದೇವಮೂರ್ತಿ ಮಾತನಾಡಿ, ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನ ಒದಗಿಸುವ ಸಲುವಾಗಿ ಈಗಾಗಲೇ ೯೩ ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು ೬೦ ಎಕರೆಗೆ ಸಂಬಂದಿಸಿದಂತೆ ಕಡತವನ್ನು ಸಿದ್ದಪಡಿಸಲಾಗಿದೆ.
ಇನ್ನುಳಿದ ಜಮೀನಿಗೆ ಸಂಬಂದಿಸಿದಂತೆ ಅಗತ್ಯ ದಾಖಲೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು ಗ್ರಾಮ ಪಂಚಾಯಿತಿವಾರು ನಿವೇಶನರಹಿತರ ಪಟ್ಟಿಯನ್ನು ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ. ಜತೆಗೆ ಸಾರ್ವಜನಿಕರಿಗೆ ಮೀಸಲಾದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ದೂರು ಸಲ್ಲಿಸಿದರೆ ಭೂಮಾಪಕರೊಂದಿಗೆ ತ್ವರಿತವಾಗಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೆಶಕ ಚಂದ್ರಪ್ಪ ಸೇರಿದಂತೆ ವಿವಿದ ಇಲಾಖೆಗಳ ಅಕಾರಿಗಳು ಸಭೆಗೆ ಪ್ರಗತಿಯ ಮಾಹಿತಿಯನ್ನು ನೀಡಿದು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನರಸಿಂಹಯ್ಯ, ಕೆಡಿಪಿ ಸಮಿತಿ ಸದಸ್ಯ ಪಿ.ವಿ.ನಾಗರಾಜ್, ತಾ.ಪಂ.ಇಓ ವೆಂಕಟೇಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು
ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು ಎಂದು ಖ್ಯಾತ ಸಮಾಜವಾದಿ ಚಿಂತಕ ಬಾಪು ಹೆದ್ದೂರ್ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿಎಂವಿ ಎಜುಕೇಷನ್ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುವವರು ಮಾತ್ರ ಉನ್ನತ ಸ್ಥಾನಕ್ಕೆ ಏರಬಲ್ಲರು ಎಂಬ ಭ್ರಮೆ ಬೇಡ. ಉತ್ತಮ ಹವ್ಯಾಸ, ಗುರಿ, ಮಾರ್ಗದರ್ಶನ, ತಾಂತ್ರಿಕತೆ, ಸೂಕ್ತ ವಾತಾವರಣ ಕಲ್ಪಿಸಿದಲ್ಲಿ ಗ್ರಾಮೀಣ ಪ್ರತಿಭೆಗಳು ಅರಳಬಲ್ಲವು. ಚರಿತ್ರೆಯನ್ನು ಅವಲೋಕಿಸಿದಾಗ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿ ಸಾಧನೆಗೈದ ಮಹಾನುಭಾವರ ಪಟ್ಟಿಯೇ ನಮಗೆ ಸಿಗುತ್ತದೆ. ಕನ್ನಡದಲ್ಲಿ ಕಲಿತರೆ ನಂತರ ಇತರ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ, ಅಭಿಮಾನ, ಪ್ರಾಧಾನ್ಯತೆ ಮತ್ತು ಪ್ರೀತಿಯನ್ನು ಹೊಂದಬೇಕು. ಇಷ್ಟಪಟ್ಟು ಮಾಡುವ ಕೆಲಸ ಯಾವುದೂ ಕಷ್ಟವೆನಿಸದು ಎಂದು ಹೇಳಿದರು.
ಮಕ್ಕಳು ಸಮಾಜದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಅವರಿಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಮಕ್ಕಳು ಭಾಷೆಯನ್ನು ಪ್ರೀತಿಸುತ್ತಾ, ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದ ಚಿಂತನೆಯನ್ನು ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹಿತಿ ಹಾಗೂ ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್.ಎನ್. ಮುಕುಂದರಾಜ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳು, ಕ್ರೀಡೆ ಮುಂತಾದವುಗಳು ಮಕ್ಕಳ ಮನೋಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಕೇವಲ ಪಾಠವೊಂದನ್ನೇ ಕಲಿತರೆ ಸಾಲದು, ಕನ್ನಡ ಸಾಹಿತ್ಯ, ವಿವಿಧ ಹವ್ಯಾಸ, ಚಾರಣ, ಪ್ರವಾಸ, ಕೃಷಿ ಮುಂತಾದ ವಿಷಗಳ ಬಗ್ಗೆಯೂ ಮಕ್ಕಳು ತೊಡಗಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸಬೇಕು ಎಂದರು.
ಶಾಲಾ ಮಕ್ಕಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ, ಗ್ರಾಮಸ್ಥರ ಮನಸೂರೆಗೊಂಡಿತು.
ಗ್ರಾಮದ ಹಿರಿಯರಾದ ಎಂ.ವೆಂಕಟಮೂರ್ತಿ, ಬಿಎಂವಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ, ರೈತ ಸಂಘದ ಜಿಲ್ಲಾದ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ ಬೈರೇಗೌಡ, ಸ್ಮೈಲ್ ಪೌಂಡೇಶನ್‌ನ ಪ್ರದೀಪ್ ರಾಧಾಕೃಷ್ಣ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಗೌಡ, ಭಕ್ತರಹಳ್ಳಿ ಎಮ್‌ಪಿಸಿಎಸ್ ಅಧ್ಯಕ್ಷ ಚನ್ನೇಗೌಡ, ನಂಜೇಗೌಡ, ಪಿಡಿಓ ಯಮುನಾರಾಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭೂತಾನ್ ದೇಶದಲ್ಲಿ ಕನ್ನಡದ ಕಂಪು ಹರಿಸಿದ ಶಿಡ್ಲಘಟ್ಟ ತಾಲ್ಲೂಕು ಕಸಾಪ
ಭೂತಾನ್ ದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ಪ್ರಾರಂಭಿಸಿ. ಕರ್ನಾಟಕದಿಂದ ಬರುವ ಪ್ರವಾಸಿಗರಿಗೆ ಹಾಗೂ ಇಲ್ಲಿಗೆ ಉದ್ಯೋಗಕ್ಕೆಂದು ಬರುವವರಿಗೆ ಅದು ಸಂಸ್ಕೃತಿ, ಸಹಕಾರ ಮತ್ತು ಸಂಪರ್ಕದ ಕೊಂಡಿಯಾಗಲಿ ಎಂದು ಭೂತಾನ್ ದೇಶದ ಖ್ಯಾತ ಛಾಯಾಗ್ರಾಹಕ ಮತ್ತು ರೋಟರಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಯಶಿ ದೋರ್ಜಿ ತಿಳಿಸಿದರು.
ಭೂತಾನ್ ದೇಶದ ರಾಜಧಾನಿ ಥಿಂಪು ನಗರದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಘಟಕದ ಪದಾಧಿಕಾರಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಭೂತಾನ್ ದೇಶವು ಆಧುನಿಕತೆಯತ್ತ ಮುಖಮಾಡಿದ್ದು ಕೆಲವು ವರ್ಷಗಳಿಂದೀಚೆಗೆ. ಆದರೂ ತನ್ನ ಮೂಲ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಉಳಿಸಿಕೊಂಡಿದೆ. ಪ್ರಕೃತಿ ಸೌಂದರ್ಯ, ಮಾಲಿನ್ಯ ರಹಿತ ಮತ್ತು ಸಂತುಷ್ಟ ಜನರಿರುವ ದೇಶವೆಂದು ಜಗತ್ತಿನಾದ್ಯಂತ ಪ್ರವಾಸಿಗರು ಆಗಮಿಸುತ್ತಾರೆ. ಕನ್ನಡಿಗರೂ ಬಹಳಷ್ಟು ಮಂದಿ ಬಂದಿದ್ದಾರೆ, ಬರುತ್ತಾರೆ. ಭಾರತದ ಐಟಿ ಉದ್ಯಮವೂ ಭೂತಾನ್ ದೇಶದಲ್ಲಿ ತೊಡಗಿಸಿಕೊಂಡಿರುವುದರಿಂದ ಉದ್ಯೋಗಿಗಳಾಗಿ ಹಲವು ಕನ್ನಡಿಗರು ಬಂದಿದ್ದಾರೆ. ನಿಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯು ನಮ್ಮ ದೇಶದ ಜನರಿಗೂ ಪರಿಚಯ ಮಾಡಿಸುತ್ತಾ, ನಿಮ್ಮ ನಾಡಿನವರಿಗೆ ಪ್ರವೇಶಿಕೆಯಾಗುವಂತೆ ಘಟಕವನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದಿಂದ ಭೂತಾನ್ ದೇಶದ ಬರ್ಡ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಖ್ಯಾತ ಛಾಯಾಗ್ರಾಹಕ ಮತ್ತು ರೋಟರಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಯಶಿ ದೋರ್ಜಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಪತ್ರಿಕಾ ಪ್ರತಿನಿಧಿಗಳಾದ ಎ.ಶಶಿಕುಮಾರ್, ರಮೇಶ್, ಜಂಗಮಕೋಟೆ ಹೋಬಳಿ ಸಂಚಾಲಕ ಜಗದೀಶ್‌ಬಾಬು, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ಮಾಜಿ ತಾಲ್ಲೂಕು ಅಧ್ಯಕ್ಷ ರೂಪಸಿ ರಮೇಶ್, ವಿಜಯಪುರ ಕಸಾಪ ಘಟಕದ ಉಪಾಧ್ಯಕ್ಷ ಮುನಿನಾರಾಯಣ, ಸದಸ್ಯರಾದ ಮಲ್ಲಿಕಾರ್ಜುನ, ಮಂಜುನಾಥ, ಛಾಯಾ ರಮೇಶ್, ಮುನೇಗೌಡ, ರಾಜೇಶ್ ಹಾಜರಿದ್ದರು.
ವಿದ್ಯುತ್ ಪೂರೈಕೆ ಸ್ಥಗಿತ
ಚಿಂತಾಮಣಿಯ ೨೨೦ ಕೆವಿ ವಿತರಣಾ ಕೇಂದ್ರದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದರಿಂದ ಡಿಸೆಂಬರ್ ೨೬ರ ಸೋಮವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ಶಿಡ್ಲಘಟ್ಟ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆ ಇರುವುದಿಲ್ಲ.
ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನ್ಸರ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ತಾಲ್ಲೂಕಿನ ಚಿಂತಡಪಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಡಿಸೆಂಬರ್೨೬ರ ಸೋಮವಾರ ಬೆಳಗ್ಗೆ ೯.೩೦ಕ್ಕೆ ನಡೆಯಲಿದೆ.
ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೆಶಕ ಬಂಕ್ ಮುನಿಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಶಾಸಕ ಎಂ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಹಾಲು ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಮಾರೇಗೌಡ, ಮಾಜಿ ಅಧ್ಯಕ್ಷ ಪಿ.ನರಸಿಂಹಯ್ಯ, ಎಂ.ನಾರಾಯಣಸ್ವಾಮಿ, ಎಂ.ಮುನಿನಾರಾಯಣಪ್ಪ, ಕೋಚಿಮುಲ್‌ನ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಕಾರಿ ಎಂ.ಬಿ.ಮಂಜುನಾಥ್ ಇನ್ನಿತರರು ಭಾಗವಹಿಸಲಿದ್ದಾರೆ.
ರಾಯಲ್ ಪಬ್ಲಿಕ್ ಶಾಲೆಯ ೪ನೇ ವಾರ್ಷಿಕೋತ್ಸವ
ನಗರ ಹೊರವಲಯದ ಬೂದಾಳ ಗೇಟ್‌ನಲ್ಲಿರುವ ರಾಯಲ್ ಪಬ್ಲಿಕ್ ಶಾಲೆಯ ೪ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿಸೆಂಬರ್೨೬ರ ಸೋಮವಾರದಂದು ಶಾಲಾ ಆವರಣದಲ್ಲಿ ನಡೆಯಲಿದೆ.
ಸಂಜೆ ೪ ಗಂಟೆಯಿಂದ ೧೦ ಗಂಟೆಯವರೆಗೂ ಕಾರ್ಯಕ್ರಮ ನಡೆಯಲಿದ್ದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್.ಮಹೇಶ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಬಿಇಒ ಎಸ್.ರಘುನಾಥರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್‌ರಾವ್, ಶ್ರೀನಿವಾಸಪುರ ತಾಲೂಕು ಬಿಇಒ ಟಿ.ಕೆ.ರಾಘವೇಂದ್ರ, ವಿನಯ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕೆ.ಮಂಜುಳ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕ್ರಿಸ್‌ಮಸ್ ಹಬ್ಬ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ದೇವರಿಗೆ ಸಂಟಾಕ್ಲಾಸ್ ಅಲಂಕಾರವನ್ನು ಮಾಡಲಾಗಿತ್ತು.
ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ
ಕಸಾಪ ತಾಲ್ಲೂಕು ಘಟಕದ ವತಿಯಿಂದ ‘ಸಾಧಕರ ಸಾಧನೆ, ವಿದ್ಯಾರ್ಥಿಗಳಿಗೆ ಪ್ರೇರಣೆ’ ಕಾರ್ಯಕ್ರಮ
‘ಪ್ರಶ್ನಿಸದೆ ನಂಬಬೇಡ’ ಎಂಬ ಎಚ್.ನರಸಿಂಹಯ್ಯನವರ ಮಾತು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಹೊಸತನವಾಗಿ ಯೋಚಿಸಿ, ಹೊಸತನ್ನು ಕಂಡು ಹಿಡಿಯುವ ಬಗ್ಗೆ ನಿಮ್ಮ ಆಲೋಚನೆಗಳು ಸಾಗಲಿ, ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ ಎಂದು ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್ ವಿಭಾಗದ ಮುಖ್ಯಸ್ಥ ಹಿರಿಯಣ್ಣ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಲಯ ವಸತಿ ಪ್ರೌಢಶಾಲೆ ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ‘ಸಾಧಕರ ಸಾಧನೆ, ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಜ್ಞಾನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಒಂದೊಂದು ವೃತ್ತಿಯನ್ನು ಕೈಗೊಳ್ಳಬೇಕು. ಆದರೆ ಅದು ಕೇವಲ ಹಣ ಸಂಪಾದಿಸಲು ಮಾತ್ರ ಆಗಬಾರದು. ಸಮಾಜಕ್ಕೆ ನಮ್ಮ ಕಾಣ್ಕೆಯಾಗಿ ನಮ್ಮ ದುಡಿಮೆಯಿರಬೇಕು. ನಮ್ಮಿಂದ ಸಮಾಜದಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆಯಾದರೂ ಬದುಕು ಸಾರ್ಥಕತೆ ಕಾಣುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದೊಂದಿಗೆ ತಿಂಗಳಿಗೊಂದು ಹೊಸ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆ ತಡವಾಗಿ ಮಲಗಿ. ಆ ಸಮಯವನ್ನು ಓದಿಗೆ ಮೀಸಲಿಡಿ ಎಂದು ಸಲಹೆ ನೀಡಿದರು.
ಭಾರತೀಯ ಬಾಹ್ಯಾಹಾಶ ವಿಜ್ಞಾನ ನಡೆದು ಬಂದ ದಾರಿ, ಉಪಗ್ರಹ ಉಡ್ಡಯನ ಕಾರ್ಯದ ಬಗ್ಗೆ, ಇಸ್ರೋ ಸಂಸ್ಥೆ ಹಾಗೂ ಅದರ ಕಚೇರಿಗಳ ಕಾರ್ಯಗಳ ಕುರಿತು ಸ್ಲೈಡ್ ಷೋ ಮೂಲಕ ಚಿತ್ರಗಳನ್ನು ತೋರಿಸುತ್ತಾ ವಿವರಿಸಿದರು. ಪಿಯುಸಿ ವಿದ್ಯಾರ್ಥಿಗಳು ಇಸ್ರೋ ಸಂಸ್ಥೆ ಸೇರಲು ಪ್ರೇರೇಪಿಸಿ ಅವರು ತೆಗೆದುಕೊಳ್ಳಬೇಕಾದ ಪರೀಕ್ಷೆಗಳ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಜ್ಞಾನಿ ಹಿರಿಯಣ್ಣ, ದೆವ್ವ, ಭೂತ, ರಾಕೆಟ್ ಇಂಧನ, ಅನ್ಯಗ್ರಹ ಜೀವಿಗಳು, ಭೂಮಿಯ ಸೃಷ್ಠಿ, ನಕ್ಷತ್ರಗಳು, ಉಪಗ್ರಹ ವಾಹನ ಮೊದಲಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪುಸ್ತಕವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ರಾಜಣ್ಣ, ಶಾಲಾ ಕಾಲೇಜುಗಳಲ್ಲಿ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು, ಅವರಿಗೆ ವಿವಿಧ ಕ್ಷೇತ್ರಗಳ ಬಗ್ಗೆ ತಿಳಿಸಿಕೊಡುವುದು ಉತ್ತಮ ಕಾರ್ಯ. ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಸಾಪ ತಾಲ್ಲೂಕು ಘಟಕ ಮತ್ತು ಸಹಕಾರ ನೀಡಿರುವ ಶಿಕ್ಷಣ ಸಂಸ್ಥೆಯವರು ಮಾದರಿಯಾಗಿದ್ದಾರೆ ಎಂದರು.
ನವೋದಯ ವಿದ್ಯಾಲಯ ವಸತಿ ಪ್ರೌಢಶಾಲೆ ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕರ್ನಾಟಕ ಏಕೀಕರಣದ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯನ್ನು ನಡೆಸಿದ್ದು, ವಿಜೇತರಿಗೆ ಕಸಾಪ ತಾಲ್ಲೂಕು ಘಟಕದಿಂದ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಬೀ ಬ್ರೈನಿ ಎಡುಕೇಷನಲ್ ಫೌಂಡೇಷನ್ ಸಂಸ್ಥೆಯ ಮೇಖಲಾ ಅವರು ಯಶಸ್ಸಿನೆಡೆಗೆ ಪಯಣ, ಗೆಲುವಿನ ಗುಟ್ಟು ಎಂಬ ವಿಷಯದ ಬಗ್ಗೆ ವೀಡಿಯೋ ತೋರಿಸಿವ ಮೂಲಕ ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯ ಪರಿಚಯ ಮಾಡಿಕೊಟ್ಟರು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಿದ್ದು, ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳು ಆಗಮಿಸಿ ವೀಕ್ಷಿಸಿದರು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಜಾನಪದ ಗಾಯನವನ್ನು ನಡೆಸಿಕೊಟ್ಟರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಹನುಮಂತರಾವ್, ಮಾಜಿ ಗೌರವ ಕಾರ್ಯದರ್ಶಿ ಅಮೃತಕುಮಾರ್, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಕಪಿಲಮ್ಮ ಕಾಲೇಜಿನ ಪ್ರಾಂಶುಪಾಲ ಎನ್.ಕೆ.ಸುದರ್ಶನ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಸತ್ಯನಾರಾಯಣ್, ಕಾಚಹಳ್ಳಿ ದೇವರಾಜ್, ಸ್ನೇಕ್ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಇಸ್ರೋ ಭೇಟಿ ಕಲ್ಪಿಸಿದ ತಾಲ್ಲೂಕು ಕಸಾಪ: ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನ 60 ಮಂದಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಸಂಸ್ಥೆಗೆ ಕರೆದೊಯ್ಯಲು ಕಸಾಪ ತಾಲ್ಲೂಕು ಘಟಕದಿಂದ ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್ ವಿಭಾಗದ ಮುಖ್ಯಸ್ಥ ಹಿರಿಯಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯನ್ನು ತೋರಿಸಿ ಪರಿಚಯಿಸುವುದಾಗಿ ವಿಜ್ಞಾನಿ ಹಿರಿಯಣ್ಣ ಭರವಸೆ ನೀಡಿದರು.
ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ
ರೇಷ್ಮೆ ನೂಲು ಬಿಚ್ಚಣಿಕೆದಾರರು ಮತ್ತು ಕಾರ್ಮಿಕರಿಗೆ ರಾಜ್ಯ ರೇಷ್ಮೆ ಇಲಾಖೆಯ ಸಾಮಾನ್ಯ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಉದ್ದೇಶಿಸಿ ಅದರ ಅಂಗವಾಗಿ ವಿಮಾ ನೋಂದಣಿ ಆಂದೋಲನ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಅಧಿಕಾರಿ ಡಾ.ನಾಗರಾಜ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡುವ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿ ಹಾಗೂ ಏಕೀಕೃತ ಪಾವತಿಗಳ ಇಂಟಫೇಸ್ ಆಪ್ ವತಿಯಿಂದ ಸಂಪರ್ಕ ಸಭೆಯನ್ನು ನಡೆಸಿ ಅವರು ಮಾಡಿದರು.
ರಾಜ್ಯದಾದ್ಯಂತ ಡಿಸೆಂಬರ್ ೨೬ ರಿಂದ ೨೯ ರವರಿಗೆ ಈ ವಿಮಾ ನೋಂದಣಿ ಆಂದೋಲನ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಜಾರಿಯಲ್ಲಿರುವ ಸಾಮಾನ್ಯ ವಿಮಾ ಯೋಜನೆಯಲ್ಲಿ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ಭೀಮಾ, ಅಪಘಾತ ವಿಮಾ ಯೋಜನೆ, ಮುಖ್ಯ ಮಂತ್ರಿ ಸಾಂತ್ವನ ಯೋಜನೆ, ವಿಮಾ ಯೋಜನೆಯಡಿ ರಾಜೀವ್ ಆರೋಗ್ಯ ಭಾಗ್ಯ, ವಾಜಪೇಯ ಆರೋಗ್ಯ ಶ್ರೀ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದ ಬಗ್ಗೆ ರೇಷ್ಮೆ ಕಾರ್ಮಿಕರಿಗೆ ಅವರು ಮಾಹಿತಿಯನ್ನು ನೀಡಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ಬಿಲ್ ಅಥವಾ ಟಿನ್ ನಂಬರ್ ಇಲ್ಲದೆ ನಮ್ಮ ರೇಷ್ಮೆ ತೆಗೆದುಕೊಳ್ಳುತ್ತಿಲ್ಲ, ಕ್ಯಾಷ್ ಲೆಸ್ ವ್ಯವಹಾರ ಮಾಡುವಾಗ ತಾಂತ್ರಿಕ ತೊಂದರೆಗಳು ಎದುರಾದರೆ ರೈತರಿಗೆ ತಿಳುವಳಿಕೆ ನೀಡುವರು ಯಾರು? ಮೋಬೈಲ್ ಬ್ಯಾಂಕಿಂಗ್‌ನಲ್ಲಿ ಹಣ ವರ್ಗಾವಣೆ ಮಾಡಿ ಎನ್ನುತ್ತೀರಿ, ಈ ಸಮಸ್ಯೆಗಳನ್ನು ಬಗೆಹರಿಸಿ, ರೀಲರುಗಳಲ್ಲದವರು ಮಾರುಕಟ್ಟೆಗೆ ಬಂದು ಹರಾಜು ಕೂಗುತ್ತಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ರೀಲರುಗಳು ತಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ ವಿವರಿಸಿದರು, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಕೆ.ಎನ್.ಮಹೇಶ್, ರೇಷ್ಮೆ ಗೂಡು ಮಾರುಕಟ್ಟೆ ಉಪ ನಿರ್ದೇಶಕ ರತ್ನಯ್ಯ ಶೆಟ್ಟಿ, ನರಸಿಂಹ ಮೂರ್ತಿ, ರಾಮ್ ಕುಮಾರ್, ವಿ.ಕೃಷ್ಣಪ್ಪ, ರಹಮತ್ತುಲ್ಲಾ, ಜಬೀ, ಮಹೇಶ್, ನಾರಾಯಣಸ್ವಾಮಿ, ವೆಂಕಟೇಶ್, ನಯಾಜ್, ರಫೀಕ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಕ್ರೀಡಾಸಕ್ತಿಯನ್ನು ಬೆಳಸಿಕೊಳ್ಳಲು ಕರೆ
ಮಕ್ಕಳು ಪಾಠ ಪ್ರವಚನಗಳ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳಸಿಕೊಳ್ಳಬೇಕೆಂದು ಡಾಲ್ಫಿನ್ ಶಾಲೆಯ ಪ್ರಾಂಶುಪಾಲ ಥಾಮಸ್ ಫಿಲಿಪ್ಸ್ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಡಾಲ್ಫಿನ್ ಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವರ್ಷ ಪೂರ್ತಿ ಓದಿನ ಕಡೆಗೆ ಗಮನ ಹರಿಸುವುದರಲ್ಲಿ ಮಗ್ನರಾಗಿರುತ್ತಾರೆ. ಅವರಲ್ಲಿರುವ ಕ್ರೀಡಾಪ್ರತಿಭೆಯನ್ನು ಗುರ್ತಿಸಲು ಇಂತಹ ಶಾಲಾ ಕ್ರಿಡಾಕೂಟ ಸಹಕಾರಿಯಾಗುತ್ತದೆ. ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಇರುತ್ತದೆ. ಸಮಯ, ಸಂದರ್ಭ ಒದಗಿಬಂದಾಗ ಆ ಪ್ರತಿಭೆ ಅನಾವರಣಗೊಳ್ಳುತ್ತದೆ. ಮಕ್ಕಳು ಎಲ್ಲರೂ ಸಂತೋಷದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಚಿಕ್ಕಂದಿನಿಂದಲೇ ಕ್ರೀಡೆಯನ್ನು ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ರಿಲೆ, ಲಾಂಗ್‌ಜಂಪ್, ಗೋಣಿ ಚೀಲ ಓಟ, ಗುಂಡು ಎಸೆತ ಮುಂತಾದ ಕ್ರೀಡೆಗಳನ್ನು ಆಡಿಸಲಾಯಿತು. ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ, ಫಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸುನಿತ, ಭರತ್, ರಮೇಶ್, ಮಾಲತಿ, ವಸಂತ್, ಶ್ರೀನಿವಾಸ್ ಹಾಜರಿದ್ದರು.
ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ
ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ಗರದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ನಡೆದ ರೈತ ದಿನಾಚರಣೆ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶದ ಬೆನ್ನೆಲುಬು. ರೈತರ ಶ್ರಮಕ್ಕೆ ತಕ್ಕ ಆದಾಯ ಸಿಗುತ್ತಿಲ್ಲ, ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ನೀರು, ನಮ್ಮ ಬಯಲುಸೀಮೆ ಪ್ರದೇಶಗಳಲ್ಲಿ ನೀರಿನ ಬವಣೆಯು ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಟ್ಟು ಕೃಷಿ ಕ್ಷೇತ್ರವನ್ನು ಅಬಿವೃದ್ಧಿಪಡಿಸಬೇಕೆಂದು ತಿಳಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ರೈತ ದಿನಾಚರಣೆಯು ಕೇವಲ ಆಚರಣೆಗೆ ಸೀಮಿತವಾಗದೆ ಅರ್ಥ ಪೂರ್ಣವಾಗಿ ಕಾರ್ಯಗತವಾಗಬೇಕು. ರೈತ ದಿನಾಚರಣೆಯನ್ನು ಕೃಷಿ ಭೂಮಿಯಲ್ಲಿ ನಡೆಸಿದರೆ ನಿಜಕ್ಕೂ ಉಪಯುಕ್ತ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಳಕ್ಕೆ ಕೊರೆದಂತೆಲ್ಲಾ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಕೃಷಿಯನ್ನು ಅವಲಂಬಿಸಿ ಜೀವನ ಮಾಡುವುದು ಕಷ್ಟಕರವಾಗಿದೆ. ಸರ್ಕಾರ ರೈತರ ಹಿತದೃಷ್ಟಿಯಿಂದ ನೀರಾವರಿ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಸುರಕ್ಷಿತ ಕೀಟನಾಶಕಗಳ ಬಳಸುವ ಬಗ್ಗೆ ಮತ್ತು ಕೀಟನಾಶಕಗಳನ್ನು ಸಿಂಪಡಿಸುವಾಗ ಕೈಗೊಳ್ಳುವ ಮುನ್ನೆಚರಿಕೆ ಕ್ರಮಗಳ ಮಾಹಿತಿ ನೀಡಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ತೋಟಗಾರಿಕೆಯ ಸಹಾಯಕ ನಿರ್ದೇಶಕ ಆನಂದ್, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರಗತಿಪರ ರೈತ ಸುರೇಶ್, ಜಿಲ್ಲಾ ಕೃಷಿಕ ಸಮಾಜದ ಉಪಾದ್ಯಕ್ಷ ಕೆಂಪೆಗೌಡ, ದೇವರಾಜು, ಪ್ರತೀಶ್, ಕೃಷಿ ಅಧಿಕಾರಿ ಗೋಪಾಲ್ ರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗುಣಮಟ್ಟದ ಶಿಕ್ಷಣ ನೀಡಿ
ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡಿ ರಾಷ್ಟ್ರದ ಪ್ರಗತಿಗೆ ಪ್ರತಿಯೊಬ್ಬ ಪೋಷಕರು ಸಹಕಾರ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಂಟನೇ ತರಗತಿ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಸೈಕಲ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿ ಕಲಿಕೆಗೆ ಪೂರಕವಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು ಮಕ್ಕಳು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ದೂರದ ಊರುಗಳಿಂದ ಶಾಲೆಗೆ ಬರುವಂತಹ ಮಕ್ಕಳಿಗೆ ಅನುಕೂಲವಾಗಲೆಂದು ವಿತರಣೆ ಮಾಡುವಂತಹ ಸೈಕಲ್‌ಗಳನ್ನು ಪೋಷಕರು ದುರುಪಯೋಗ ಪಡಿಸಿಕೊಳ್ಳದೆ ಅವುಗಳನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನ ಮಾಡಬೇಕು. ೧೪ ವರ್ಷದೊಳಗಿನ ಪ್ರತಿಯೊಂದು ಮಗುವನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿವಿಧ ಸೌಲಭ್ಯಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬರಬೇಕು ಎಂದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಹಾಲು ಉತ್ಪಾದಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೋಚಿಮುಲ್ ಕೂಡಾ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಉತ್ಪಾದಕರು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಒಕ್ಕೂಟಕ್ಕೆ ಹೆಚ್ಚಿನ ಲಾಭ ಬರುವಂತೆ ಮಾಡಿದರೆ ತಾಲ್ಲೂಕಿನ ಮತ್ತಷ್ಟು ಶಾಲೆಗಳ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ವಿತರಣೆ ಮಾಡಲು ಅನುಕೂಲವಾಗಲಿದೆ ಎಂದರು.
ಕೋಚಿಮುಲ್‌ನ ಹಾಲು ಉತ್ಪಾದಕರ ದತ್ತಿ ವತಿಯಂದ ೮ ನೇ ತರಗತಿ ಮಕ್ಕಳಿಗೆ ೧೮೦ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾದ್ಯಕ್ಷ ಎಚ್. ನರಸಿಂಹಯ್ಯ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಹಾಲು ಒಕ್ಕೂಟದ ವ್ಯವಸ್ಥಾಪಕ ಹನುಮಂತರಾವ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳ ಹಾಜರಿದ್ದರು.
ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಸಮ್ಮಿಲನ
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳು ಮತ್ತು ನಗರದ ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿಗಳು ಒಂದೆಡೆ ಕಲೆತು, ವಿಚಾರ ವಿನಿಮಯ, ಚಟುವಟಿಕೆ, ಪರಸ್ಪರ ಸಹಾಯ ನಡೆಸುತ್ತಿರುವುದು ಅತ್ಯಂತ ಆಶಾದಾಯಕ ವಿಚಾರ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಳ್ಳೂರು ಸರ್ಕಾರಿ ಶಾಲೆಯಲ್ಲಿ ಮಂಗಳವಾರ ‘ನಮ್ಮ ಮುತ್ತೂರು’ ಸಂಸ್ಥೆ ಆಯೋಜಿಸಿದ್ದ ಬೆಂಗಳೂರಿನ ದಕ್ಷಿಣ ಭಾಗದ ದೆಹಲಿ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ನಡೆದ ಸ್ವಚ್ಛತಾ ಅಭಿಯಾನ, ವಿಚಾರ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ವಿದ್ಯಾರ್ಥಿಗಳು ಗ್ರಾಮೀಣ ಸೊಗಡು, ಸಂಸ್ಕೃತಿಯ ಬಗ್ಗೆ ತಿಳಿದುಕೊಂಡರೆ, ಗ್ರಾಮೀಣ ಮಕ್ಕಳು ತಂತ್ರಜ್ಞಾನ, ಭಾಷೆಯ ಬಳಕೆ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳಬಹುದು. ಮೇಲು ಕೀಳು, ಬಡವ ಬಲ್ಲಿದ, ನಗರ ಗ್ರಾಮೀಣ ಎಂಬ ಬೇಧ ಭಾವ ಮಕ್ಕಳ ಮನಸ್ಸಿನಿಂದ ದೂರವಾಗುತ್ತದೆ. ಈ ರೀತಿಯ ಮಕ್ಕಳ ಸೇರ್ಪಡೆಗಳು, ಸಮ್ಮಿಲನಗಳು ಆಗಾಗ ನಡೆಯಬೇಕು. ಇದನ್ನು ಆಯೋಜಿಸಿದ ‘ನಮ್ಮ ಮುತ್ತೂರು’ ಸಂಸ್ಥೆಯವರ ಉದ್ದೇಶ ಅನುಕರಣೀಯ ಎಂದು ಹೇಳಿದರು.
ದೆಹಲಿ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ 64 ಮಂದಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತಮ್ಮ ಮೂವರು ಶಿಕ್ಷಕರೊಂದಿಗೆ ಶಾಲೆಯ ಆವರಣದಲ್ಲಿ ತರಕಾರಿಗಳನ್ನು ಬೆಳೆಯಲು ಭೂಮಿಯನ್ನು ಹದ ಮಾಡಿದರು. ಮಳ್ಳೂರು ಗ್ರಾಮದಲ್ಲಿ ಕಸವನ್ನು ವಿಲೇವಾರಿ ಮಾಡಿದರು. ನಂತರ ಹಿಪ್ಪುನೇರಳೆ ತೋಟ, ರೇಷ್ಮೆ ಗೂಡಿನ ರೂಪುಗೊಳ್ಳುವಿಕೆಯ ವಿವಿಧ ಹಂತಗಳಾದ ಚಾಕಿ, ಹುಳು ಸಾಕಾಣಿಕೆಯನ್ನು ವೀಕ್ಷಿಸಿ ಪ್ರಗತಿಪರ ರೈತ ಹರೀಶ್ ಅವರಿಂದ ಮಾಹಿತಿ ಪಡೆದರು. ಬೆಂಗಳೂರಿನಿಂದ ತಾವು ತಂದಿದ್ದ ಪುಸ್ತಕಗಳು, ಬಣ್ಣದ ಪೆನ್ಸಿಲ್‌ಗಳು, ಆಟಿಕೆಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದರು. ನಾಲ್ಕು ಅಂಗನವಾಡಿಗಳ ಮಕ್ಕಳಿಗೆ ಆಟಿಕೆಗಳನ್ನು ನೀಡಿದರು. ಮುತ್ತೂರು ಗ್ರಾಮದ ಮಹಿಳಾ ಹೊಲಿಗೆ ಕೇಂದ್ರಕ್ಕೂ ಭೇಟಿ ನೀಡಿ ಸ್ವಾವಲಂಬಿ ಗ್ರಾಮೀಣ ಮಹಿಳೆಯರ ಬಗ್ಗೆ ತಿಳಿದುಕೊಂಡರು.
ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷ ಗೋಪಾಲಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ, ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷೆ ಸೌಮ್ಯ ಮತ್ತಿತರರು ಹಾಜರಿದ್ದರು.
ಶಿಕ್ಷಕರು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ
ಸರ್ಕಾರಿ ಶಾಲೆಯಲ್ಲಿ ಭೋದನೆ ಮಾಡುವ ಶಿಕ್ಷಕರು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥ್‌ರೆಡ್ಡಿ ಹೇಳಿದರು.
ತಾಲ್ಲೂಕಿನ ಈ.ತಿಮ್ಮಸಂದ್ರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಿಲ್ಲ ಎಂದು ಪೋಷಕರ ಮನದಲ್ಲಿ ಮೂಡಿರುವ ಅಪನಂಬಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವ್ಯಾಸಂಗ ಮಾಡುವ ಪ್ರತಿಯೊಂದು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದು ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಸುಸಜ್ಜಿತ ಕೊಠಡಿಗಳು, ಭೋದನಾ ಸಾಮಾಗ್ರಿಗಳು, ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿವೇತನ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ನೀಡುತ್ತಿದ್ದು ಅದನ್ನು ಪೋಷಕರು ಸದುಪಯೋಗ ಮಾಡಿಕೊಂಡು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿಬೇಕೆಂದು ಮನವಿ ಮಾಡಿದರು.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಸಂವಾದ ನಡೆಸಿ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷೆ ಮಾಡಿದರು. ಇದೇ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ ತೃಪ್ತಿ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮುಖ್ಯಶಿಕ್ಷಕರು ಅಡುಗೆ ಸಿಬ್ಬಂದಿ ಸಮನ್ವಯದಿಂದ ಜಾಗೃತಿವಹಿಸಿಬೇಕೆಂದು ಸೂಚಿಸಿದರು.
ಖಾಸಗಿ ಶಾಲೆಯ ಮಾದರಿಯ ವಿದ್ಯಾರ್ಥಿಗಳು: ಸರ್ಕಾರಿ ಉರ್ದು ಶಾಲೆಯ ಎಲ್ಲಾ ಮಕ್ಕಳು ಸಮವಸ್ತ್ರವನ್ನು ಧರಿಸಿ, ಕೊರಳಿಗೆ ಟೈ, ಬೆಲ್ಟ್ ಮತ್ತು ಗುರುತಿನಚೀಟಿಯೊಂದಿಗೆ ಹಾಜರಾಗಿದ್ದರಲ್ಲದೇ ಪಾಠಪ್ರಚನಗಳನ್ನು ಕೇಳಿಕೊಳ್ಳುತ್ತಿದ್ದನ್ನು ಕಂಡುಬಂದಿತ್ತು, ಶಿಕ್ಷಕರ ಸೇವೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶಂಸಿದರು.
ಕುಂದಲಗುರ್ಕಿ ಸರ್ಕಾರಿ ಪ್ರೌಡಶಾಲೆಯ ನೂತನ ಕೊಠಡಿ ಉದ್ಘಾಟನೆ
ದೇಶದ ಅಭಿವೃದ್ಧಿಗೆ ಶಿಕ್ಷಣ ಬಹುದೊಡ್ಡ ಮಾನದಂಡ ಎಂದು ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಡಶಾಲೆಯ ನೂತನ ಕೊಠಡಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಯುವಶಕ್ತಿ ಹೆಚ್ಚಾಗಿದ್ದು, ಅವರೆಲ್ಲ ವಿದ್ಯಾವಂತರಾದಾಗ ಮಾತ್ರ ದೇಶ ಮುಂದುವರೆಯಲು ಸಾದ್ಯ, ಶಿಕ್ಷಣಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂಗಳ ಯೋಜನೆಯನ್ನು ರೂಪಿಸುತ್ತಿದ್ದು, ಹೆಚ್ಚು ಹೆಚ್ಚಾಗಿ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ, ಸೈಕಲ್ ವಿತರಣೆ, ಸಮವಸ್ತ್ರಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. ಇಂದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದು ಮುಂದು ನೋಡುತ್ತಿದ್ದಾರೆ. ನಮ್ಮ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿ ಹೆಸರುವಾಸಿಯಾದ ಸರ್.ಎಂ ವಿಶ್ವೇಶ್ವರಯ್ಯ ಸಹ ಸರ್ಕಾರಿ ಶಾಲೆಯಲ್ಲಿ ಓದಿರುವುದನ್ನು ಮರೆಯಬಾರದೆಂದು ತಿಳಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರ ವಿದ್ಯಾಬ್ಯಾಸಕ್ಕಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳನ್ನು ತೆರೆದಿದೆ. ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ಚೆನ್ನಾಗಿ ಓದಿ ದೇಶಕ್ಕೆ ಕೀರ್ತಿ ತನ್ನಿ ಎಂದು ಕರೆನೀಡಿದರು.
ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ನಿರ್ಮಲ ಮುನಿರಾಜು, ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ,ಎಂ.ವೆಂಕಟೇಶ್, ಜಿಲ್ಲಾ ಪಂಚಾತಿಯಿ ಸದಸ್ಯ ಸತೀಶ್, ಮುಖಂಡರಾದ ಬಿ.ಪಿ ನಾಗರಾಜು, ಎಚ್,ಎಂ ನಾರಾಯಣಸ್ವಾಮಿ, ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಕೆ.ಪಿ ಮುನಿರೆಡ್ಡಿ, ಕೆ.ಪಿ.ವೆಂಟೇಶ್, ರಾಮಾಂಜಿನೆಯರೆಡ್ಡಿ, ದೊಣ್ಣಹಳ್ಳಿ ರಮೇಶ್, ಮುನೀಂದ್ರ, ಮತ್ತಿತತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಳೆಯಿಲ್ಲದಿದ್ದರೂ ಉತ್ತಮ ರಾಗಿ ಬೆಳೆ; ರೈತನ ಸಹಾಯಕ್ಕೆ ಬಂದ ಗುಣಿ ಪದ್ಧತಿ
ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಕೌಶಲವನ್ನು ತಾಲ್ಲೂಕಿನ ಬೋದಗೂರಿನ ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಕಂಡುಕೊಂಡಿದ್ದಾರೆ.
ತಾಲ್ಲೂಕಿನ ಬೋದಗೂರಿನ ಪ್ರಗತಿ ಪರ ರೈತ ವೆಂಕಟಸ್ವಾಮಿರೆಡ್ಡಿ ಕಳೆದ ಕೆಲವು ವರ್ಷಗಳಿಂದ ರಾಗಿ ಬೆಳೆಯನ್ನು ಗುಣಿ ಪದ್ಧತಿ ಅಳವಡಿಸಿಕೊಂಡು ಬೆಳೆಯುತ್ತಿದ್ದು, ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಅಲ್ಪ ವೆಚ್ಚದಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಅದನ್ನು ಗಮನಿಸಿದ ಸುತ್ತ-ಮುತ್ತಲ ಗ್ರಾಮಗಳ ರೈತರು ಈ ಬಾರಿ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಲು ಮುಂದಾಗಿದ್ದಾರೆ.
ತಾಲ್ಲೂಕಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತು ಕೊಳವೆ ಬಾವಿಗಳ ಮೇಲೆ ಆಧಾರವಾಗಿದ್ದಾರೆ. ಇತ್ತೀಚೆಗೆ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದರೂ ಬಯಲು ಸೀಮೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ವೇಳೆಗಾಗಲೇ ರಾಗಿ ನಾಟಿ ಮಾಡಬೇಕಾಗಿದ್ದು, ಇಂಥ ಸಂದರ್ಭದಲ್ಲಿ ಗುಣಿಪದ್ಧತಿಯು ರೈತರಲ್ಲಿ ಆಶಾವಾದ ಮೂಡಿಸಿದೆ. ಮಳೆಯಾಶ್ರಿತವಾಗಿಯೇ ಗುಣಿ ಪದ್ಧತಿಯಲ್ಲಿ ರಾಗಿಯನ್ನು ರೈತ ವೆಂಕಟಸ್ವಾಮಿರೆಡ್ಡಿ ಅವರು ಬೆಳೆದಿದ್ದು, ಮಳೆ ಕೈಕೊಟ್ಟರೂ ನಷ್ಟವನ್ನು ಅನುಭವಿಸದಿರುವುದು ಇತರರಿಗೆ ಪ್ರೇರಣೆಯಾಗಿದೆ.
‘ಸಾಮಾನ್ಯವಾಗಿ ಒಂದು ಎಕರೆ ಭೂಮಿಗೆ 10 ರಿಂದ 12 ಕೆ.ಜಿ ರಾಗಿ ಬಿತ್ತನೆ ಮಾಡಲಾಗುತ್ತದೆ. ಆದರೆ ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು 30 ಗ್ರಾಂ ರಾಗಿಯನ್ನು ಒಂದು ರಾತ್ರಿ ನೆನೆಹಾಕಿ ಬೆಳಿಗ್ಗೆ ನರ್ಸರಿಗೆ ನೀಡಬೇಕು. ನಂತರ ಒಂದು ಕ್ರೇಟ್‌ನಲ್ಲಿ ರಾಗಿ ಕಾಳುಗಳನ್ನು ಬಿತ್ತನೆ ಮಾಡಿ ಪೈರನ್ನು ಬೆಳೆಸಲಾಗುತ್ತದೆ. 20ದಿನ ಪೈರನ್ನು ಪೋಷಿಸಿ ನಂತರ ನಾಟಿ ಮಾಡಲಾಗುತ್ತದೆ. ಒಂದು ಗ್ರಾಂ ರಾಗಿಯಲ್ಲಿ 400 ಕಾಳುಗಳಿರುತ್ತವೆ. ಮುಕ್ಕಾಲು ಎಕರೆಯಲ್ಲಿ 2 ಅಡಿಗೆ 2 ಅಡಿ ಅಂತರದಲ್ಲಿ ಅರ್ಧ ಅಡಿ ಆಳ ಗುಣಿ ತೆಗೆದು ಕೊಟ್ಟಿಗೆ ಗೊಬ್ಬರವನ್ನಷ್ಟೆ ಹಾಕಿ ಎಂಟು ಸಾವಿರ ಪೈರನ್ನು ನಾಟಿ ಮಾಡಿಸಿದೆ’ ಎನ್ನುತ್ತಾರೆ ರೈತ ವೆಂಕಟಸ್ವಾಮಿರೆಡ್ಡಿ.
‘ಪೈರನ್ನು ನಾಟಿ ಮಾಡಿದ 40 ದಿನಗಳ ನಂತರ ಅದನ್ನು ತುಳಿದು ಬಗ್ಗಿಸುವುದರಿಂದ ಒಂದು ಪೈರು ಸುಮಾರು 20 ರಿಂದ 30 ತೆಂಡೆ ಹೊಡೆಯುತ್ತದೆ. ತೆನೆಗಳ ಸಂಖ್ಯೆ ಏರಿಕೆಯಾಗಿ ಇಳುವರಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ರಾಗಿಯಿಂದ 10 ರಿಂದ 15 ಕ್ವಿಂಟಲ್ ಇಳುವರಿ ಪಡೆದರೆ, ಗುಣಿ ಪದ್ಧತಿ ಅಳವಡಿಸಿ ಬೆಳೆದ ರಾಗಿಯಲ್ಲಿ ಒಂದು ಎಕರೆ ಭೂಮಿಗೆ 25 ರಿಂದ 30 ಕ್ವಿಂಟಲ್ ರಾಗಿ ಸಿಗಲಿದೆ. ನಮಗೆ ನಾಟಿ ಮಾಡಿದಂದಿನಿಂದ ಮಳೆಯೇ ಬರಲಿಲ್ಲ. ಮೂರು ಬಾರಿ ಟ್ಯಾಂಕರಿನಲ್ಲಿ ನೀರು ಹಾಕಿಸಿದೆ. ಈಗ ಸುಮಾರು 7 ಕ್ವಿಂಟಲ್ ಇಳುವರಿ ಬರಲಿದೆ. ಇಷ್ಟಾದರೂ ರೈತರಿಗೆ ನಷ್ಟವಾಗುವುದಿಲ್ಲ. ರೈತರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆಯುವುದರಿಂದ ಪೋಷಕಾಂಶಗಳು ಅಗತ್ಯಕ್ಕೆ ತಕ್ಕಂತೆ ಸಮರ್ಪಕವಾಗಿ ಸಿಗುತ್ತವೆ. ನೀರು ಕಡಿಮೆಯಾದರೂ ಪೈರುಗಳ ಶಕ್ತಿಗೆ ಕುಂದುಂಟಾಗುವುದಿಲ್ಲ. ಅದರಿಂದ ಹೆಚ್ಚು ಇಳುವರಿ ಸಿಗಲಿದೆ’ ಎಂದು ಅವರು ತಮ್ಮ ಅನುಭವವನ್ನು ತಿಳಿಸಿದರು.

