ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೨೪.೦೧ ರಷ್ಟಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ಜನಾಂಗದವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ಸುಮಾರು ೧೯ ಸಾವಿರ ಕೋಟಿ ರೂ ಮೀಸಲಿಟ್ಟಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಂಡ್ರಹಳ್ಳಿ ಗ್ರಾಮದಲ್ಲಿ ಸೋಮವಾರ ಪರಿಶಿಷ್ಟ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಯಲುಸೀಮೆ ಭಾಗದಲ್ಲಿ ನೀರಿನ ಬವಣೆ ಹೆಚ್ಚಾಗಿರುವುದರಿಂದ ದೊಡ್ಡ ರೈತರ ಮಕ್ಕಳು ಸಹ ಕಾನ್ವೆಂಟ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗಾಗಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಮೊರಾರ್ಜಿ ದೇಸಾಯಿ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದ್ದು ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವಂತಾಗುತ್ತದೆ.
ಈ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿಯೂ ಉತ್ತಮ ವಸತಿನಿಲಯಗಳನ್ನು ನಿರ್ಮಿಸಬೇಕು ಎಂಬ ಈ ಭಾಗದ ಜನರ ಬೇಡಿಕೆಯಂತೆ ಎಲ್ಲಾ ಹೋಬಳಿಗಳಲ್ಲಿಯೂ ವಸತಿಶಾಲೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಲು ಸೂಚಿಸಲಾಗಿದೆ ಎಂದರು.
ಭವ್ಯ ಭಾರತವನ್ನು ನಿರ್ಮಾಣ ಮಾಡಬೇಕಾದರೆ ನಾವು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಈ ನಿಟ್ಟಿನಲ್ಲಿ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿಯೂ ಒಂದೊಂದು ಸುಸಜ್ಜಿತ ವಸತಿಶಾಲೆಗಳನ್ನು ನಿರ್ಮಿಸಲಾಗುವುದು ಎಂದರು.
ಈಗಾಗಲೇ ಎರಡೂ ಜಿಲ್ಲೆಗಳಲ್ಲಿ ಸುಮಾರು ೧೪ ವಸತಿಶಾಲೆಗಳು ಪೂರ್ಣಗೊಂಡಿದ್ದು ಕೆಲವು ಕಡೆ ಸ್ಥಳಾವಕಾಶ ಸಿಗದ ಕಾರಣ ಇನ್ನೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ ಹಾಗಾಗಿ ತ್ವರಿತವಾಗಿ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಸ್ಥಳ ಗುರುತಿಸಿ ಕೊಟ್ಟಲ್ಲಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಹೋಬಳಿಗಳಲ್ಲಿಯೂ ಸುಸಜ್ಜಿತ ವಸತಿಶಾಲೆ ನಿರ್ಮಿಸಲಾಗುವುದು ಎಂದರು.
ಶಾಸಕ ಎಂ ರಾಜಣ್ಣ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಅನೇಕ ಉತ್ತಮ ಯೋಜನೆಗಳನ್ನು ರೂಪಿಸಿದೆ. ಈ ಭಾಗದ ಬಹುತೇಕ ನಾಗರಿಕರು ಕೂಲಿ ನಾಲಿ ಮಾಡಿ ಬದುಕವವರಾಗಿದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗುವುದಿಲ್ಲ. ಹಾಗಾಗಿ ಅಂತಹ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ತಾಲೂಕಿನ ಸುಂಡ್ರಹಳ್ಳಿ ಗ್ರಾಮದ ಬಳಿ ಸುಮಾರು ೧೦ ಎಕರೆ ಜಾಗದಲ್ಲಿ ೧೩ ಕೋಟಿ ರೂ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜ ಏಳಿಗೆಯಾಗುತ್ತದೆ. ಸಾರ್ವಜನಿಕ ಕಾಮಗಾರಿಗಳು ನಡೆಯುವಾಗ ಪ್ರತಿಯೊಬ್ಬರೂ ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾವಹಿಸುವ ಮೂಲಕ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯರಾದ ರಾಜಶೇಖರ್, ಶೋಭಾ ಶಶಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪರಿಶಿಷ್ಟ ಜಾತಿ ಹಾಗು ಪಂಗಡದ ಜನಾಂಗದವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ಬದ್ಧ
ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಡಿಸೆಂಬರ್ 19 ರ ಸೋಮವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ತಿ ಬಗ್ಗೆ ಕಾಳಜಿ ಇರಲಿ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೆ ಅಭಿವೃದ್ದಿ ಕಾಮಗಾರಿಯನ್ನು ಉಪೇಕ್ಷಿಸದೆ, ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಎಲ್ಲಾ ಗ್ರಾಮಸ್ಥರಲ್ಲೂ ಮೂಡಬೇಕಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲ್ಲಪನಹಳ್ಳಿ ಹಾಗು ಅತ್ತಿಗಾನಹಳ್ಳಿ ಗ್ರಾಮದಲ್ಲಿ ತಲಾ ೫ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಭಿವೃದ್ದಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ದಿಗಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಎಲ್ಲಾ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣ ಇನ್ನಿತರೆ ಮೂಲ ಸೌಕರ್ಯಗಳನ್ನು ಕಾಣಲು ಸಾಧ್ಯ. ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಪ್ರಯತ್ನ ನಡೆಸಿದ್ದು ಬಹುತೇಕ ಗ್ರಾಮಗಳಿಗೆ ಈಗಾಗಲೇ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸವಲತ್ತು ಕಲ್ಪಿಸಲಾಗಿದೆ ಎಂದರು.
ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಅಭಿವೃದ್ದಿಗೆ ಸಹಕರಿಸಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಮುನಿನರಸಮ್ಮ, ಮುಖಂಡರಾದ ಮುನಿಯಪ್ಪ, ಚನ್ನಪ್ಪ, ವೆಂಕಟೇಶ್, ನಾರಾಯಣಸ್ವಾಮಿ, ಚೌಡಪ್ಪ ಮತ್ತಿತರರು ಹಾಜರಿದ್ದರು.
ಪಲ್ಲಕ್ಕಿ ಉತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಪಟ್ಟಾಭಿರಾಮರ ವಿಗ್ರಹಗಳು ಮತ್ತು ಆಂಜನೇಯಸ್ವಾಮಿಯೊಂದಿಗೆ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು.
ಡಾ. ಬಾಲಮುರಳಿಕೃಷ್ಣ ಸ್ಮರಣಾರ್ಥ ಸ್ವರಾಂಜಲಿ
ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರಿಗೆ ಸಂಗೀತದ ಮೂಲಕವಷ್ಟೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಸಾಧ್ಯವೆಂದು ತಾಲ್ಲೂಕಿನ ಸಂಗೀತ ಕಲಾವಿದರೆಲ್ಲ ಒಗ್ಗೂಡಿ ಸಂಗೀತ ಸ್ವರಾಂಜಲಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್ ತಿಳಿಸಿದರು.
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಸಮಾನ ಮನಸ್ಕ ಸಂಗೀತ ಕಲಾವಿದರ ಬಳಗದಿಂದ ಆಯೋಜಿಸಿದ್ದ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಶೈಲಿಯ ಖ್ಯಾತ ಸಂಗೀತಗಾರರಲ್ಲಿ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರು ಅದ್ವಿತೀಯರು. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರರು. ಭಾರತ ದೇಶ ಕಂಡ ಮಹಾನ್ ವಾಗ್ಗೇಯಕಾರರು. ಒಟ್ಟು 18,000 ಸಂಗೀತ ಕಚೇರಿಗಳನ್ನು ನೀಡಿರುವ ಅವರು ಸಂಗೀತ ಕಲಾವಿದರಿಗೆಲ್ಲ ಅವರು ಸ್ಫೂರ್ತಿ ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಕಲಾವಿದರುಗಳು 17ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಸಿಕೊಟ್ಟರು.
ಜೆ.ರೇಖಾ, ವಿ.ಎಲ್.ನಾರಾಯಣಸ್ವಾಮಿ, ವಿ.ಪಿ.ಶಿವಶಂಕರ, ಮಂಜುಳ ಜಗದೀಶ್, ವೆಂಕಟೇಶಪ್ಪ, ಶ್ರೀನಿವಾಸ್, ವೇಣುಗೋಪಾಲ್, ದ್ಯಾವಪ್ಪ, ಶ್ರೇಯಸ್ ಸಿಂಹ, ಮುನಿಆಂಜಿನಪ್ಪ, ಕಿಶೋರ್ ಕುಮಾರ್, ರಾಮಕೃಷ್ಣಪ್ಪ, ವೆಂಕಟನಾರಾಯಣಪ್ಪ ಮುಂತಾದವರು ಗಾಯನವನ್ನು ನಡೆಸಿಕೊಟ್ಟರು. ಜಗದೀಶ್ ಕುಮಾರ್ ಮತ್ತು ಜಿ.ಎನ್.ಶ್ಯಾಮಸುಂದರ್ ಪಿಟೀಲು ದ್ವಂದ್ವವನ್ನು ನಡೆಸಿಕೊಟ್ಟರು. ವಿವಿಧ ಕಲಾವಿದರು ಮೃದಂಗ, ತಬಲ, ಖಂಜಿರ, ಘಟವನ್ನು ನುಡಿಸಿ ಸಾಥ್ ನೀಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆಧ್ಯತೆ
ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮತ್ತು ಮೂಲಭೂತ ಸವಲತ್ತುಗಳನ್ನು ಒದಗಿಸಲು ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಹಳ್ಳಿ ಗ್ರಾಮದಲ್ಲಿ ೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರೂವರೆ ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸೇರಿದಂತೆ ಮೂಲಭೂತ ಸವಲತ್ತು ಕಲ್ಪಿಸಲು ಹೆಚ್ಚಿನ ಆಧ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಉದ್ದಗಲಕ್ಕೂ ಓಡಾಡಿ ಅಗತ್ಯಕ್ಕನುಸಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸ್ಥಳೀಯ ಮುಖಂಡರೂ ಸೇರಿದಂತೆ ನಾಗರಿಕರು ಗಮನ ಹರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಬಯಲುಸೀಮೆ ಭಾಗದ ಬಹುತೇಕ ಜನರು ಜೀವನೋಪಾಯಕ್ಕಾಗಿ ನಂಬಿಕೊಂಡಿರುವ ಹೈನುಗಾರಿಕೆಯನ್ನು ಮತ್ತಷ್ಟು ಬಲಪಡಿಸಿ ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಜೊತೆಗೆ ಪ್ರತಿಯೊಬ್ಬರೂ ಆರ್ಥಿಕವಾಗಿ ಮತ್ತಷ್ಟು ಅಭಿವೃದ್ದಿ ಹೊಂದಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜುಂಡಪ್ಪ, ಮುಖಂಡರಾದ ಎಚ್.ಜಿ.ಗೋಪಾಲಗೌಡ, ಗೋಪಾಲಪ್ಪ, ಮಳ್ಳೂರಯ್ಯ, ಪಿಡಿಓ ಅರಣಕುಮಾರಿ, ಗುತ್ತಿಗೆದಾರ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ
ಕಾನೂನು ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರಿಗೆ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ. ಅದನ್ನು ಅರಿತು ಮುನ್ನಡೆದರೆ ಏಳಿಗೆ ಸಾಧ್ಯ ಎಂದು ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾನೂನು ಅರಿವಿನ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಬೇಕು. ಹಾಗಾ ದಾಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಜನರಿಗೆ ಕಾನೂನು ಅರಿವು ಮುಖ್ಯ, ಕೆಲವು ಜನರು ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ನ್ಯಾಯಾಲಯದ ಮೆಟ್ಟಿಲಿಗೆ ಬರುತ್ತಾರೆ. ಪ್ರಕರಣಗಳು ಒಂದು ನ್ಯಾಯಾಲಯದಲ್ಲಿ ಇತ್ಯರ್ಥವಾದರೆ ಮತ್ತೆ ಮತ್ತೆ ಮೇಲ್ಮನವಿ ಸಲ್ಲಿಸುವ ಮೂಲಕ ಮೇಲಿನ ಕೋರ್ಟುಗಳಿಗೆ ಹೋಗುತ್ತಾರೆ. ಸೌಹಾರ್ದಯುತವಾಗಿ ಕಡಿಮೆ ವೆಚ್ಚದಲ್ಲಿ ಬಗೆ ಹರಿಸಿಕೊಳ್ಳಬಹುದಾದ ವಿಷಯಗಳಿಗೆ ಹೆಚ್ಚುವರಿಯಾಗಿ ಹಣ ವ್ಯಯ ಮಾಡು ತ್ತಾರೆ. ಇದು ತಪ್ಪಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಸಮಸ್ಯೆ ಪರಿಹಾರವಾಗಬೇಕಾದರೆ ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಇದ್ದರೆ ಇಂತಹ ಬೆಳವಣಿಗೆಗೆ ತಡೆ ಹಾಕಬಹುದು. ಕಾನೂನು ತಿಳುವಳಿಕೆ ಮತ್ತು ಉಚಿತ ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ಜನತಾ ಕಾನೂನು ಸೇವಾ ಪ್ರಾಧಿ ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸೌಂಧರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ವಿಜಯ ವೆಂಕಟರಾಮ್, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು, ವಕೀಲ ಚಂದ್ರೇಗೌಡ, ಜನನ ಮತ್ತು ಮರಣ ನೋಂದಣಿ ಕಾಯ್ದೆ ಕುರಿತು ವಿವರಿಸಿದರು.
ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರಾದ ಕೆ.ಮಂಜುನಾಥ್, ಬಿ.ಪಿ.ಭಾಸ್ಕರ್ ಮತ್ತಿತರರು ಹಾಜರಿದ್ದರು.
ಬಯಲು ಸೀಮೆ ರೈತ ಮಕ್ಕಳ ಬೈಕ್ ರ್ಯಾಲಿ
ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಬಯಲು ಸೀಮೆ ರೈತ ಮಕ್ಕಳ ಯುವಶಕ್ತಿಯ ತಂಡ ಕೋಲಾರದ ಸರ್ವಜ್ಞ ಪಾರ್ಕ್‌ನ ನಿರಂತರ ಧರಣಿ ವೇದಿಕೆಯಲ್ಲಿ ಪಾಲ್ಗೊಂಡು ಶಾಶ್ವತ ನೀರಿಗಾಗಿ ಒತ್ತಾಯಿಸುವುದಾಗಿ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ವಿವಿಧ ಭಾಗಗಳಿಂದ ಬೈಕ್‌ನಲ್ಲಿ ಆಗಮಿಸಿದ್ದ ಯುವಶಕ್ತಿಯ ಸದಸ್ಯರೊಂದಿಗೆ ಬೈಕ್ ರ್ಯಾಾಲಿಯ ಮೂಲಕ ಕೋಲಾರಕ್ಕೆ ತೆರಳುವ ಮುನ್ನ ಅವರು ಮಾತನಾಡಿದರು.
ನಿರಂತರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆಯ ನಮ್ಮ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರದಿಮದ ನಮಗೆ ನ್ಯಾಯ ದೊರಕಿಲ್ಲ. ಅಂತರ್ಜಲ ಈಗಾಗಲೇ ಪಾತಾಳಕ್ಕೆ ಕುಸಿದಿದ್ದು, ಶುದ್ಧ ಕುಡಿಯುವ ನೀರು ಮತ್ತು ಕೃಷಿಗಾಗಿ ನೀರಿನ ಭದ್ರತೆಯಿಲ್ಲದೆ ಜನರು ಕಷ್ಟದಲ್ಲಿದ್ದಾರೆ.
ಕೊಳವೆ ಬಾವಿಗಳ ಮೂಲಕ ಸಾಲಕ್ಕೆ ಸಿಲುಕಿ ನಮ್ಮ ರೈತರು ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ಬಯಲುಸೀಮೆಯ ವಿದ್ಯಾವಂತ ಯುವಜನತೆ ಮತ್ತು ರೈತ ಮಕ್ಕಳ ಸಂಘಟನೆಯಾದ ಯುವಶಕ್ತಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ನೀರಾವರಿ ಹೋರಾಟಕ್ಕೆ ಧುಮುಕಿದ್ದು, ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನ ರೈತ ಮಕ್ಕಳ ಸಮಾವೇಶ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿ ನೀರಿಗಾಗಿ ಯುವಜನತೆಯನ್ನು ಸಂಘಟಿಸುವ ಕಾರ್ಯದಲ್ಲಿ ನಿರತವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಗಳನ್ನು ಬಡಿದೆಬ್ಬಿಸಲು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಲಾರದಲ್ಲಿ ನಡೆಯುತ್ತಿರುವ ನಿರಂತರ ಧರಣಿಗೆ ಬೆಂಬಲವಾಗಿ ಇಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಬೃಹತ್ ಬೈಕ್ ರ್ಯಾಲಲಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಅಶೋಕ್, ಮಂಜುನಾಥ್, ಸುನಿಲ್. ಶ್ರೀನಾಥ್, ಸುಧಾಕರ್, ಶರತ್, ಸಚಿನ್ ಮತ್ತಿತರರು ಹಾಜರಿದ್ದರು.
ಗುಣಿ ಮತ್ತು ಮರಕಡ್ಡಿ ಪದ್ಧತಿಯ ಮೂಲಕ ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವ ರೈತ
‘ಈಗೇನೋ ನೀರಿದೆ, ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿದ್ದೀಯ ನಾರಾಯಣಸ್ವಾಮಿ, ನೀರಾಗೋದ್ರೆ ಏನು ಮಾಡ್ತೀಯ’ ಎಂದು ರೇಷ್ಮೆ ಗೂಡಿನ ಮಾರುಕಟ್ಟೆಯ ಸಹಾಯಕ ನಿರ್ದೇಶಕರಾಗಿದ್ದ ಆಂಜನೇಯರೆಡ್ಡಿ ಕೇಳಿದ್ದರು. ಆಗ ನಾನು ಎಲ್ಲರಿಗೂ ಏನಾಗುತ್ತೋ ನನಗೂ ಅದೇ ಆಗುತ್ತೆ ಬಿಡಿ ಸರ್ ಎಂದು ಹೇಳಿದ್ದೆ. ‘ಬೇಡ ನಾರಾಯಣಸ್ವಾಮಿ, ಸಾಲು ಪದ್ಧತಿಯಲ್ಲಿ ಬೆಳೆಯುತ್ತಿದ್ದ ಹಿಪ್ಪುನೇರಳೆಯನ್ನು ತೆಗೆದು ಗುಣಿ ಮತ್ತು ಮರಕಡ್ಡಿ ಪದ್ಧತಿಯನ್ನು ಅನುಸರಿಸಿ ಬೆಳೆಯಲು ಸಲಹೆ ನೀಡಿದರು. ಅಂದು ಅವರು ಹೇಳಿದ ಮಾತಿನ ಮಹತ್ವ ಇಂದು ನನಗೆ ತಿಳಿಯುತ್ತಿದೆ ಎಂದು ಮರದ ರೀತಿಯಲ್ಲಿ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿನ ಗಿಡಗಳ ಬಳಿ ನಿಂತು ವಿವರಿಸುತ್ತಾರೆ ಅರಿಕೆರೆ ನಾರಾಯಣಸ್ವಾಮಿ.
ಅಂತರ್ಜಲ ಕುಸಿಯುತ್ತಿರುವ ಮತ್ತು ಮಳೆ ನೀರಿನ ಕೊರತೆಯ ಹಿನ್ನೆಲೆಯಲ್ಲಿ ರೇಷ್ಮೆಯನ್ನೇ ನಂಬಿದ ತಾಲ್ಲೂಕಿನ ರೈತರಿಗೆ ಗುಣಿ ಕಡ್ಡಿ ಪದ್ಧತಿಯು ವರದಾನವಾಗಿದ್ದು, ಅರಿಕೆರೆ ಗ್ರಾಮದ ನಾರಾಯಣಸ್ವಾಮಿ ಈ ಪದ್ಧತಿಯ ಮೂಲಕ ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾ ಮಾದರಿಯಾಗಿದ್ದಾರೆ.
ಕುಸಿದ ಅಂತರ್ಜಲ ಮಟ್ಟ, ವಿದ್ಯುತ್ ಕಣ್ಣಾ ಮುಚ್ಚಾಲೆ, ಕೂಲಿ ಕಾರ್ಮಿಕರ ಸಮಸ್ಯೆಗಳು ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ರೈತರನ್ನು ಬೆಂಬಿಡದೆ ಕಾಡುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಸದಾ ಸೆಣಸಾಡುವ ಬುದ್ಧಿವಂತ ರೈತರು ತಮ್ಮ ನೆಲಮೂಲದ ದೇಸಿ ಜ್ಞಾನವನ್ನು ಬಳಸಿ ಅಲ್ಲಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಕಂಡುಕೊಳ್ಳುತ್ತಿದ್ದಾರೆ. ಅಂಥಹವರಲ್ಲಿ ಒಬ್ಬರಾದ ಅರಿಕೆರೆ ನಾರಾಯಣಸ್ವಾಮಿ ಗುಣಿ ಮತ್ತು ಮರಕಟ್ಟಿ ಪದ್ಧತಿಯಲ್ಲಿ ಮೊದಲು ಮುಕ್ಕಾಲು ಎಕರೆ ಪ್ರದೇಶದಲ್ಲಿ ಪ್ರಯೋಗವನ್ನು ಕೈಗೊಂಡರು. 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ಈ ಪದ್ಧತಿಯಲ್ಲಿ ನಾಟಿ ಮಾಡಬಹುದಾಗಿದೆ. ಮೂರರಿಂದ ನಾಲ್ಕು ಅಡಿ ಆಳವಾಗಿ ಗುಣಿ ತೆಗೆದು ಹಿಪ್ಪುನೇರಳೆ ನಾರನ್ನು ನಾಟಿ ಮಾಡಿ ಅದು ಬೆಳೆದಂತೆಲ್ಲಾ ಕೊಟ್ಟಿಗೆ ಗೊಬ್ಬರ, ಮಣ್ಣು, ಹಸಿರೆಲೆ ಸೊಪ್ಪು ಮೊದಲಾದವುಗಳನ್ನು ತುಂಬಿಸುತ್ತಾ ಕವಲುಗಳನ್ನು ಕತ್ತರಿಸುತ್ತಾ ಮರದಂತೆ ಎತ್ತರಗೊಳಿಸಬೇಕು. ಮೊದಲ ವರ್ಷ ಬೆಳೆ ಸಿಗುವುದಿಲ್ಲ, ನಂತರ ಸೊಪ್ಪು ಸಿಗಲು ಪ್ರಾರಂಭವಾಗುತ್ತದೆ. ತಾಳ್ಮೆಯಿದ್ದವರಿಗೆ ಅಧಿಕ ಫಲ ಎಂಬಂತಹುದು ಈ ವಿಧಾನ ಎನ್ನುತ್ತಾರೆ ನಾರಾಯಣಸ್ವಾಮಿ.
ಈ ಪದ್ಧತಿಯಲ್ಲಿ ಕೂಲಿ ಆಳಿನ ಉಳಿತಾಯವಾಗುತ್ತದೆ. ಬೇರು ಆಳದಲ್ಲಿರುವುದರಿಂದ ಕಡಿಮೆ ನೀರಿದ್ದರೂ ಸಾಕು, ಸೊಪ್ಪು ಕುಯ್ಯುವ ಖರ್ಚು ಕಡಿಮೆ ಮತ್ತು ಸೊಪ್ಪು ದಿವಿನಾಗಿರುವುದರಿಂದ ದಿನಕ್ಕೆರಡು ಬಾರಿ ಹುಳು ಮೇಯಿಸಲು ಹಾಕಿದರೂ ಸಾಕು. ಅಂತರ ಬೆಳೆಯಾಗಿ ಮೊದಲು ರಾಗಿಯನ್ನು ಹಾಕಿದ್ದೆ, ಈಗ ತೊಗರಿಯನ್ನು ಬೆಳೆದಿದ್ದೇನೆ, ಒಳ್ಳೆಯ ಬೆಳೆಯಾಗಿದೆ. ಈಗ ಶುಂಟಿ ಮತ್ತು ಕನಕಾಂಬರವನ್ನು ಹಾಕಲು ಸಿದ್ಧತೆ ನಡೆಸಿದ್ದೇನೆ. ಸಾಲು ಪದ್ಧತಿಗಿಂತ ಈ ಗುಣಿ ಮತ್ತು ಮರಕಟ್ಟಿ ಪದ್ಧತಿಯಲ್ಲಿ ಹಲವು ಲಾಭಗಳಿವೆ ಎಂದು ಅವರು ವಿವರಿಸಿದರು.
ಮೊದಲು ಈ ಪದ್ಧತಿಯಲ್ಲಿ ನಾಟಿ ಮಾಡಿದಾಗ ಖಾಲಿಯಾಗಿರುವ ತೋಟವನ್ನು ನೋಡಿ ಮನೆಯಲ್ಲಿ ಹೆಂಡತಿ ಮಕ್ಕಳು ವಿರೋಧಿಸಿದ್ದರು. ಈಗ ಒಂದೂವರೆ ವರ್ಷದ ನಂತರ ಇದರ ಲಾಭವನ್ನು ಮನಗಂಡು ಉಳಿದ ತೋಟದಲ್ಲೂ ಈ ಪದ್ಧತಿಯಲ್ಲೇ ಹಿಪ್ಪುನೇರಳೆ ಬೆಳೆಸೋಣ ಎನ್ನುತ್ತಿದ್ದಾನೆ ಮಗ. ಕೊಳವೆ ಬಾವಿಯನ್ನು ಕೊರೆಸುತ್ತಾ ರೈತರು ಸಾಲಗಾರರಾಗುತ್ತಿದ್ದಾರೆ. ಅವರಿಗೆಲ್ಲಾ ನಾನು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಿದ್ದೇನೆ. ರೈತರು ಒಂದೇ ಬೆಳೆಯನ್ನು ಅವಕಲಂಬಿಸದಂತೆ ಈ ಪದ್ಧತಿಯಲ್ಲಿ ಅಂತರ ಬೆಳೆಯನ್ನೂ ಬೆಳೆಯಬಹುದು. ಇಂಡೋನೇಷ್ಯಾ ಮೂಲದ ಜಮನಾಪಾರಿ ತಳಿಯ ಮೇಕೆಯನ್ನೂ ಸಾಕುತ್ತಿದ್ದೇನೆ. ಒಂದು ಜೊತೆಯನ್ನು ಒಂದು ಲಕ್ಷ ರೂಗಳಿಗೆ ಮಾರುತ್ತೇನೆ ಎಂದು ನಾರಾಯಣಸ್ವಾಮಿ ಹೇಳಿತ್ತಾರೆ.
‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 5,935 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡಿದ್ದು, ಸುಮಾರು 6,039 ಕುಟುಂಬಗಳು ಹಿಪ್ಪುನೇರಳೆ ಬೇಸಾಯವನ್ನು ಅವಲಂಬಿಸಿದ್ದಾರೆ. ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿಸಲು ರೇಷ್ಮೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಳೆಯಾಶ್ರಯದಲ್ಲಿ ಮರಗಳ ರೂಪದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ರೇಷ್ಮೆ ಇಲಾಖೆಯಿಂದ ಯೋಜನೆಯನ್ನು ರೂಪಿಸಿದೆ. ತಾಲ್ಲೂಕಿನ 300 ಎಕರೆಯಲ್ಲಿ ನಾಟಿ ಮಾಡಲು ವರದನಾಯಕನಹಳ್ಳಿ ಗೇಟ್ ಬಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷ ಮೂವತ್ತೈದು ಸಾವಿರ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿಕೊಟ್ಟಿದ್ದಾರೆ. ನಾಟಿ ಮಾಡುವುದಕ್ಕೂ ನರೇಗಾದಿಂದ 161 ಮಾನವ ದಿನಗಳ ಕೂಲಿಯನ್ನೂ ನೀಡಲಾಗುವುದು. ಹಿಪ್ಪುನೇರಳೆ ನರ್ಸರಿ ಮಾಡಲು ಹಾಗೂ 2 ಮತ್ತು 3ನೇ ವರ್ಷದ ಹಿಪ್ಪುನೇರಳೆ ತೋಟ ನಿರ್ವಹಣೆಗೂ ಸರ್ಕಾರ ಸಹಾಯಹಸ್ತ ಚಾಚಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.
ಸಾರ್ವಜನಿಕರಿಗಾಗಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳು ಸಾರ್ವಜನಿಕರಿಗಾಗಿ ಎನ್ನುವ ಮನೋಭಾವದಿಂದ ಎಲ್ಲಾ ಗ್ರಾಮಸ್ಥರು ಗುಣಮಟ್ಟದ ಬಗ್ಗೆ ಕಾಳಜಿವಹಿಸಬೇಕಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲ, ಕೆ.ಮುತ್ತುಕದಹಳ್ಳಿ ಹಾಗೂ ಚಿಂತಡಿಪಿ ಗ್ರಾಮಗಳಲ್ಲಿ ಎಸ್‌ಸಿಪಿ ಯೋಜನೆಯಡಿ ತಲಾ ೫ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಈಚೆಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ವಿಯಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ ಎಂದರು.
ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೆರಸದೇ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರವಹಿಸಬೇಕು ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಶೇ. ೭೦ ರಷ್ಟು ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಕುಡಿಯುವ ನೀರಿಗೆ ಅಗತ್ಯವಾದ ಕ್ರಮ ಕೈಗೊಂಡಿದ್ದೇನೆ. ಉಳಿದ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಸದಸ್ಯ ರಾಜಶೇಖರ್, ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಎಂ.ಸುರೇಂದ್ರ, ಸದಸ್ಯ ದ್ಯಾವಪ್ಪ, ಮುಖಂಡರಾದ ಚಿಕ್ಕ ಆಂಜಿನಪ್ಪ, ಮಾರುತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೆಡಿಎಸ್ ಕಾರ್ಯಕರ್ತರಿಂದ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಆಚರಣೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದು ಜನರ ಮನ ಗೆದ್ದಿದ್ದಾರೆ. ಜನಪರ, ರೈತಪರ, ದೀನದಲಿತರ ಪರ ನಿರಂತರ ಚಿಂತನೆ ನಡೆಸುವ ಮೂಲಕ ಜನರ ಧ್ವನಿಯಾಗಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ 57 ನೇ ಹುಟ್ಟುಹಬ್ಬದ ಪ್ರಯುಕ್ತ ಅಂಧ ಮಕ್ಕಳ ಜೊತೆ ಕೇಕ್ ಕತ್ತರಿಸಿ, ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿ ಅವರು ಮಾತನಾಡಿದರು.
ಸ್ವಚ್ಛ ಹಾಗೂ ಜನಪರ ಆಡಳಿತದ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರು ಮನೆಮಾತಾದವರು. ಅವರ ಸೇವೆ ರಾಜ್ಯದ ಜನಕ್ಕೆ ಇನ್ನಷ್ಟು ಮತ್ತಷ್ಟು ಸಿಗಬೇಕು ಎಂಬ ಸದುದ್ದೇಶದಿಂದ ಅಂಧ ಮಕ್ಕಳೊಂದಿಗೆ ಮತ್ತು ಬಡರೋಗಿಗಳೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಾಗಲು ಕಾರಣಕರ್ತರು ನಮ್ಮ ಕುಮಾರಸ್ವಾಮಿಯವರು. ಜಿಲ್ಲೆಯಾದರೂ ಹಲವಾರು ಸೌಲಭ್ಯ ವಂಚಿತಗೊಂಡಿರುವ ನಮ್ಮ ಜಿಲ್ಲೆ ಹಾಗೂ ಬರಪೀಡಿತ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರು ಬರಲೇಬೇಕು. ಬಯಲು ಸೀಮೆಗೆ ನೀರು ತರಲು ಕುಮಾರಸ್ವಾಮಿಯವರು ಬದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ಧ್ಯೇಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಜೆಡಿಎಸ್ ಕಾರ್ಯಕರ್ತರಿಂದ ಏರ್ಪಡಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯರಾದ ರಾಜಶೇಖರ್, ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ಡಾ.ಜಯರಾಮರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ಮುಖಂಡರಾದ ಗೋಪಾಲಗೌಡ, ಶ್ರೀನಿವಾಸಗೌಡ, ತಾದೂರು ರಘು, ಸಾದಲಿ ವೆಂಕಟಠಚಲಪತಿ, ಜಂಗಮಕೋಟೆ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ಈದ್ ಮಿಲಾದ್ ಅಂಗವಾಗಿ ಆಯೋಜನೆ: 205 ಯೂನಿಟ್ ರಕ್ತ ಸಂಗ್ರಹ
ಇತ್ತೀಚಿನ ದಿನಗಳಲ್ಲಿ ಯುವ ಸಮೂಹದಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಈದ್ ಮಿಲಾದ್ ಅಂಗವಾಗಿ ಟಿಪ್ಪು ಸುಲ್ತಾನ್ ಅಸೋಸಿಯೇನ್, ಖಾನ್ಸ್ ಪ್ರೆಂಡ್ಸ್, ಎಂಸಿಸಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬರು ಒಂದು ಯೂನಿಟ್ ರಕ್ತ ನೀಡಿದರೆ ಅದು ಅಗತ್ಯ ಇರುವ ನಾಲ್ಕು ಮಂದಿಗೆ ಬೇರೆ ಬೇರೆ ರೂಪದಲ್ಲಿ ನೆರವಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಇರುವವರಿಗೆ ರಕ್ತ ನೀಡುವಂತ ರಕ್ತದಾನಕ್ಕಿಂತಲೂ ಮಿಗಿಲಾದ ದಾನ ಮತ್ತೊಂದು ಇಲ್ಲ ಎಂದು ಹೇಳಿದರು.
ಹೆಚ್ಚು ಹೆಚ್ಚು ಮಂದಿ ರಕ್ತದಾನದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆಯಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ ೨೦೫ ಯೂನಿಟ್ ರಕ್ತ ಸಂಗ್ರಹವಾಯಿತು. ಎಲ್ಲ ರಕ್ತದಾನಿಗಳಿಗೂ ಹಣ್ಣು, ಹಣ್ಣಿನ ರಸ ಮತ್ತು ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್, ಪಂಪ್‌ನಾಗರಾಜ್, ಶ್ರೀನಾಥ್, ಸಮೀರ್, ಅತೀಫ್, ಬಾಬಾ, ರೆಡ್‌ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್ ಮತ್ತಿತರರು ಹಾಜರಿದ್ದರು.
ಕಾನೂನು ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ
ಕಾನೂನು ತಿಳಿಯದೇ ಅಪರಾಧ ಮಾಡಿದ್ದರೂ ಅದಕ್ಕೆ ಕ್ಷಮೆ ಇರುವುದಿಲ್ಲ. ಹಾಗಾಗಿ ಎಲ್ಲರೂ ಕಾನೂನು ತಿಳಿವಳಿಕೆ ಹೊಂದಿರುವುದು ಅಗತ್ಯವಾಗಿದೆ. ಗ್ರಾಮಗಳಲ್ಲಿ ಬಂದು ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಕೊಡುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಹಾಲು ಡೈರಿ ಆವರಣದಲ್ಲಿ ಬುಧವಾರ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲರೂ ಕಾನೂನಿನ ಅರಿವು ಹೊಂದುವುದು ಸಂವಿಧಾನದಲ್ಲಿಯೇ ಹೇಳಿದೆ. ಹಾಗಾಗಿ ಕಾನೂನು ರಥದೊಂದಿಗೆ ವಿವಿಧ ಗ್ರಾಮಗಳಿಗೆ ಆಗಮಿಸುತ್ತಿದ್ದು ಕಾನೂನಿನ ಬಗ್ಗೆ ವಕೀಲರು ತಿಳಿಸಿಕೊಡುತ್ತಾರೆ. ಬಡತನವೆಂದು ಕೈಕಟ್ಟಿ ಅನ್ಯಾಯ ಸಹಿಸಬಾರದು. ಜನ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಯೋಚಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುವುದು ಅತ್ಯವಶ್ಯಕವಾಗಿದೆ. ಇಂದು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು, ಲೈಂಗಿಕ ಶೋಷಣೆಗಳು ನಡೆಯುತ್ತಿರುವುದು ಖೇದದ ಸಂಗತಿ. ತಾಯಂದಿರು ಇದರ ಸೂಕ್ಷ್ಮತೆಯನ್ನು ಅರಿತು ಮಕ್ಕಳ ಚಲನವಲನ, ವರ್ತನೆಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ ತಮ್ಮ ಜೀವಕ್ಕೆ ಮತ್ತು ಆಸ್ತಿ ಪಾಸ್ತಿಗೆ ಹಾನಿ ಉಂಟಾದಲ್ಲಿ ಪ್ರಾಧಿಕಾರ ಅವಶ್ಯಕ ನೆರವು ನೀಡಿ ನ್ಯಾಯ ಒದಗಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಉದ್ಘಾಟಿಸಲಾಯಿತು. ವಕೀಲ ರವೀಂದ್ರನಾಥ್, ಪಂಚಾಯತ್‌ರಾಜ್ ಕಾಯ್ದೆ ಹಾಗೂ ಇತ್ತೀಚಿನ ಯೋಜನೆಗಳ ಕುರಿತು ಮಾತನಾಡಿದರು. ವಕೀಲೆ ವೀಣಾ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮಹಿಳೆ ಆಸ್ತಿ ಹಕ್ಕು ಕುರಿತು ವಿವರಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ವಕೀಲರಾದ ಆಂಜನೇಯರೆಡ್ಡಿ, ಬೈರಾರೆಡ್ಡಿ, ಲೋಕೇಶ್, ಲಕ್ಷ್ಮೀ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಂ.ಶ್ರೀನಿವಾಸ್, ಸೌಂಧರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ವಿಜಯ ವೆಂಕಟರಾಮ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಚಂದ್ರಶೇಖರ್, ವೆಂಕಟೇಶ್, ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ. ರವಿಶಂಕರ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನಿಂದ ಪ್ರತಿ ತಿಂಗಳು ೩೦೦ ಯೂನಿಟ್‌ಗಳಷ್ಟು ರಕ್ತವನ್ನು ನಿರೀಕ್ಷೆ ಮಾಡುತ್ತಿದ್ದು ಪ್ರಸ್ತುತ ೧೮೦ ರಿಂದ ೨೦೦ ಯೂನಿಟ್‌ಗಳಷ್ಟು ರಕ್ತವನ್ನು ದಾನಿಗಳು ದಾನಮಾಡುತ್ತಿದ್ದಾರೆ. ವಾರ್ಷಿಕವಾಗಿ ೩೦೦೦ ಯೂನಿಟ್ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ. ಆರೋಗ್ಯ ಇಲಾಖೆಯಿಂದ ತಾಲ್ಲೂಕಿನ ೯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಲೂ ವರ್ಷಕ್ಕೆ ಎರಡು ಬಾರಿ ರಕ್ತ ಸಂಗ್ರಹ ಕಾರ್ಯ ಮಾಡಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಗೌರವಾಧ್ಯಕ್ಷ ಮೊಹಮದ್ ಖಾಸಿಂ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಶಿಬಿರದಲ್ಲಿ 300 ಯೂನಿಟ್ ರಕ್ತ ಸಂಗ್ರಹಣೆಯಾಯಿತು. ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ್ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.
ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಗುರುರಾಜರಾವ್, ಡಿ.ಟಿ.ಸತ್ಯನಾರಾಯಣರಾವ್, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಕಾರ್ಯದರ್ಶಿ ಇಮ್ತಿಯಾಜ್ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್, ಸಯ್ಯದ್ ತೌಫೀಕ್, ಶಬ್ಬೀರ್‌ಪಾಷ, ಶಂಷೀರ್ ಪಾಷ, ಗೌಸ್‌ಖಾನ್ ಆಮೀರಿ ಮುಂತಾದವರು ಹಾಜರಿದ್ದರು.
ಬಯಲು ಸೀಮೆ ರೈತ ಮಕ್ಕಳ ಯುವಶಕ್ತಿಯ ಗರ್ಜನೆ – ಬೃಹತ್ ಬೈಕ್ ರ್ಯಾಬಲಿ
ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಬಯಲು ಸೀಮೆ ರೈತ ಮಕ್ಕಳ ಯುವಶಕ್ತಿಯ ಗರ್ಜನೆ ಡಿಸೆಂಬರ್ 17ರ ಶನಿವಾರ ಕೋಲಾರದ ಸರ್ವಜ್ಞ ಪಾರ್ಕ್‌ನ ನಿರಂತರ ಧರಣಿ ವೇದಿಕೆಯಲ್ಲಿ ಮೊಳಗಲಿದೆ ಎಂದು ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆಯನ್ನು ಸೇರಿದ್ದ ಯುವಶಕ್ತಿ ಸದಸ್ಯರು ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು.
ನಿರಂತರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆಯ ನಮ್ಮ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರದಿಮದ ನಮಗೆ ನ್ಯಾಯ ದೊರಕಿಲ್ಲ. ಅಂತರ್ಜಲ ಈಗಾಗಲೇ ಪಾತಾಳಕ್ಕೆ ಕುಸಿದಿದ್ದು, ಶುದ್ಧ ಕುಡಿಯುವ ನೀರು ಮತ್ತು ಕೃಷಿಗಾಗಿ ನೀರಿನ ಭದ್ರತೆಯಿಲ್ಲದೆ ಜನರು ಕಷ್ಟದಲ್ಲಿದ್ದಾರೆ.
ಕೊಳವೆ ಬಾವಿಗಳ ಮೂಲಕ ಸಾಲಕ್ಕೆ ಸಿಲುಕಿ ನಮ್ಮ ರೈತರು ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ಬಯಲುಸೀಮೆಯ ವಿದ್ಯಾವಂತ ಯುವಜನತೆ ಮತ್ತು ರೈತ ಮಕ್ಕಳ ಸಂಘಟನೆಯಾದ ಯುವಶಕ್ತಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ನೀರಾವರಿ ಹೋರಾಟಕ್ಕೆ ಧುಮುಕಿದ್ದು, ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನ ರೈತ ಮಕ್ಕಳ ಸಮಾವೇಶ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿ ನೀರಿಗಾಗಿ ಯುವಜನತೆಯನ್ನು ಸಂಘಟಿಸುವ ಕಾರ್ಯದಲ್ಲಿ ನಿರತವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಗಳನ್ನು ಬಡಿದೆಬ್ಬಿಸಲು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಲಕಾರದಲ್ಲಿ ನಡೆಯುತ್ತಿರುವ ನಿರಂತರ ಧರಣಿಗೆ ಬೆಂಬಲವಾಗಿ ಡಿಸೆಂಬರ್ 17 ರ ಶನಿವಾರದಂದು ಎಲ್ಲಾ ತಾಲ್ಲೂಕುಗಳಿಂದ ಬೃಹತ್ ಬೈಕ್ ರ್ಯಾವಲಿಯನ್ನು ಆಯೋಜಿಸಲಾಗಿದೆ. ವಿದ್ಯಾವಂತ ಯುವಜನತೆ ಮತ್ತು ರೈತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಆನೂರು ದೇವರಾಜ್, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಎಂ.ಸುನಿಲ್. ಎಂ.ರಮೇಶ್, ಮಂಜುನಾಥ್, ಅಶೋಕ್, ರವಿಚಂದ್ರ, ಮನೋಜ್‌ಕುಮಾರ್, ಸುಮಂತ್‌ನಾಯಕ್, ಸುಧಾಕರ್, ಕುಮಾರ್, ಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಪನಗಧೀಕರಣವು ಈ ಶತಮಾನದ ಮೇರು ಆರ್ಥಿಕ ಸುಧಾರಣೆ; ವ್ಯವಸ್ಥೆಯ ಸುಧಾರಣೆಯ ಆರಂಭವಿದು, ಅಂತ್ಯವಲ್ಲ
ಅಪನಗಧೀಕರಣವು ಈ ಶತಮಾನದ ಮೇರು ಆರ್ಥಿಕ ಸುಧಾರಣೆ. ಆರ್ಥಿಕ ಕ್ಷೇತ್ರವಷ್ಟೇ ಅಲ್ಲ, ಆಡಳಿತ ವ್ಯವಸ್ಥೆಯನ್ನು ಕೂಡ ಇದರಿಂದ ಶುದ್ಧೀಕರಣವಾಗುತ್ತದೆ. ಹಣಚೆಲ್ಲಿ ಜನಪ್ರತಿನಿಧಿಗಳಾಗವವರು ಇಲ್ಲವಾಗುತ್ತಾರೆ. ಒಟ್ಟಾರೆ ಲಾಭವು ಜನಸಾಮಾನ್ಯರಿಗಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಯುವಮೋರ್ಚಾ ಮತ್ತು ತಾಲ್ಲೂಕು ಮಂಡಲದಿಂದ ಆಯೋಜಿಸಲಾಗಿದ್ದ ‘ನೋಟು ಬದಲು – ದೇಶ ಮೊದಲು’ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಯೋತ್ಪಾದನೆ, ಕಾಳಧನ, ಬ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಅನುದಾನಗಳ ಸೋರಿಕೆ ತಪ್ಪುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರೂಗಳ ಅಪನಗಧೀಕರಣ ಮಾಡಿರದಿದ್ದರೆ ದೇಶ ಆರ್ಥಿಕ ಗುಲಾಮಗಿರಿಗೆ ಸಿಲುಕುತ್ತಿತ್ತು. ದೇಶದಲ್ಲಿ ಸುಮಾರು 15 ಲಕ್ಷ ಕೋಟಿ ರೂಗಳಷ್ಟು ಇದ್ದ 500 ಮತ್ತು 1000 ರೂಗಳ ನೋಟುಗಳಲ್ಲಿ ಬಹುತೇಕ ಕಾಳಧನವಾಗಿ ಮಾರ್ಪಟ್ಟಿತ್ತು. ಕಲ್ಲಿದ್ದಲು, 2ಜಿ ಮೊದಲಾದ ವಿವಿಧ ಹಗರಣಗಳ ಕಪ್ಪು ಹಣವೇ 13 ಲಕ್ಷ ಕೋಟಿಗೂ ಹೆಚ್ಚೆಂದು ಅಂದಾಜಿಸಲಾಗಿದೆ. ಪ್ರಧಾನಿಯವರು ಕೈಗೊಂಡ ದಿಟ್ಟ ನಿಲುವಿನಿಂದ ಕಪ್ಪುಹಣ ಹೆಣವಾಯಿತು, ಅದನ್ನಿಟ್ಟುಕೊಂಡವರು ಅಳುತ್ತಿದ್ದರೆ, ಬಡವರು ನೋಡಿ ನಗುವಂತಾಯಿತು ಎಂದು ಹೇಳಿದರು.
ಇನ್ನು ಮುಂದೆ ಚಿನ್ನದ ವ್ಯವಹಾರವಾಗಲಿ, ರಿಯಲ್ ಎಸ್ಟೇಟ್ ಉದ್ದಿಮೆಯಾಗಲಿ ಲೆಕ್ಕ ತಪ್ಪಿಸಲು ಸಾಧ್ಯವಿಲ್ಲ. ಇದರಿಂದ ಚಿನ್ನದ ಬೆಲೆಯೂ ಕುಸಿಯುತ್ತದೆ, ಗಗನಕ್ಕೇರಿರುವ ಭೂಮಿಯ ಬೆಲೆಯೂ ಇಳಿಯಲಿದೆ. ಇದೊಂದು ರೀತಿಯ ಆರ್ಥಿಕ ಸುಧಾರಣೆ. ನಮ್ಮ ದೇಶದಲ್ಲಿ ಈವರೆಗೂ ಶೇ.1.78 ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುವವರಿದ್ದಾರೆ. ಇನ್ನು ಮುಂದೆ ತೆರಿಗೆ ಪಾವತಿಸುವವರೂ ಹೆಚ್ಚಾಗುತ್ತದೆ ಮತ್ತು ತೆರಿಗೆಯನ್ನು ಕಡಿತಗೊಳಿಸುವ ಆಲೋಚನೆಯೂ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರಕ್ಕೆ ಬರುವ ಈ ಹೆಚ್ಚುವರಿ ಹಣದಿಂದ ಆಸ್ಪತ್ರೆ, ಬಡವರ ಮನೆ, ರಸ್ತೆ, ಶಾಲೆ ಮೊದಲಾದ ಮೂಲಭೂತ ಸೌಕರ್ಯಗಳು ಹೆಚ್ಚಲಿವೆ. ಈಗಾಗುತ್ತಿರುವುದು ತಾತ್ಕಾಲಿಕ ತೊಂದರೆಯಷ್ಟೆ. ಸಾಮಾನ್ಯ ಜನರ ಬದುಕು ಹಸನಾಗಲಿದೆ ಎಂದರು.
ಅಪನಗಧೀಕರಣವು ಶುದ್ಧೀಕರಣದ ಆರಂಭವಷ್ಟೆ. ಕಾಳಧನಿಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರಧಾನಿಯ ಉದ್ದೇಶ ದೇಶವನ್ನು ಬದಲಿಸುವುದು, ಗುರಿಯಿರುವುದು ವ್ಯವಸ್ಥೆಯ ಸುಧಾರಣೆ. ನಮ್ಮ ದೇಶದಲ್ಲಿ 80 ಕೋಟಿ ಮೊಬೈಲ್‌ಗಳಿವೆ. 40 ಕೋಟಿ ಸ್ಮಾರ್ಟ್ ಫೋನ್‌ಗಳಿವೆ. ನಮ್ಮಲ್ಲಿ ಅನಕ್ಷರಸ್ಥರಿರಬಹುದು ಆದರೆ ದಡ್ಡರಿಲ್ಲ. ವ್ಯವಸ್ಥೆಯ ಸುಧಾರಣೆಗಾಗಿ ನಗದುರಹಿತ ವ್ಯವಹಾರವನ್ನು ರೂಢಿಸಿಕೊಳ್ಳಬೇಕು. ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿದರು. ಅದರ ಉಪಯೋಗ ಬಡವರಿಗಾಗಲಿಲ್ಲ. ಲಾಭ ಆಗಿದ್ದು, ಕೋಟ್ಯಾಂತರ ಸಾಲ ಮಾಡಿ ದೇಶಬಿಡುವಂಥಹ ಮೋಸಗಾರರಿಗೆ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಜನಧನ ಯೋಜನೆ ಜಾರಿಗೆ ಬಡವರು ಬ್ಯಾಂಕ್ ಖಾತೆ ಹೊಂದುವಂತಾಯಿತು. ಮುಂದೆ ಬ್ಯಾಂಕ್‌ಗಳಿಂದ ಸುಲಭವಾಗಿ ಕಡಿಮೆ ಬಡ್ಡಿಗೆ ಸಾಲ ಸಿಗಲಿದೆ ಎಂದರು.
ಬಿಜೆಪಿ ಯುವಮೋರ್ಚಾದ ಆನಂದ್, ನಗದುರಹಿತ ವ್ಯವಹಾರಗಳು, ಮೊಬೈಲ್‌ನಿಂದ ಹಣ ಕಳುಹಿಸುವ ವ್ಯವಸ್ಥೆಯ ಬಗ್ಗೆ ವಿವರಿಸಿದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭರತ್‌ರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಪ್ರಧಾನ ಕಾರ್ಯದರ್ಶಿ ತರಬಳ್ಳಿ ಭಾಸ್ಕರರೆಡ್ಡಿ, ತಮ್ಮೇಗೌಡ, ತೇಜಸ್ವಿ ಸೂರ್ಯ, ಜ್ಯೋತಿರೆಡ್ಡಿ, ಆನಂದ್, ಶ್ರೀರಾಮರೆಡ್ಡಿ, ಗೋಪಿನಾಥ್, ಮುರಳೀಧರ್, ಮುನಿರಾಜು, ಎಚ್.ಸುರೇಶ್, ಸುರೇಂದ್ರಗೌಡ, ಬೈರಾರೆಡ್ಡಿ, ಡಾ.ಡಿ.ಟಿ.ಸತ್ಯನಾರಾಯಣ್, ಪ್ರತಾಪ್, ನರೇಶ್, ಸಿ.ವಿ.ಲೋಕೇಶ್‌ಗೌಡ, ರಾಮರೆಡ್ಡಿ, ಬೈರೇಗೌಡ, ಸದಾಶಿವ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎತ್ತಿನಹೊಳೆ ಶ್ವೇತಪತ್ರ ಹೊರಡಿಸಿ: ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಯಲು ಸೀಮೆಯ ಭಾಗಕ್ಕೆ ನೀರು ಬೇಕಿದೆ. ಬಿಜೆಪಿ ಪಕ್ಷವು ಇದನ್ನು ಬೆಂಬಲಿಸುತ್ತದೆ. ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆ ಆಗಬಾರದು. ಇದರ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ಶ್ವೇತಪತ್ರ ಹೊರಡಿಸುವ ಮೂಲಕ ಜನರಿಗೆ ತಿಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
2000 ರೂ ನೋಟಿಗೂ ಆಯಸ್ಸು ಕಡಿಮೆ: ‘2000 ರೂ ನೋಟುಗಳನ್ನೇ ಏಕೆ ಮಾಡಿದರು ಎಂದು ಆಲೋಚನೆ ಮಾಡಿ. ಇದಕ್ಕೂ ಆಯಸ್ಸು ನಿಗದಿಯಾಗಿದೆ. ರಂಗೋಲಿ ಕೆಳಗೆ ನುಸುಳುವವರು ಈ ನೋಟುಗಳನ್ನು ಕ್ರೂಡೀಕರಿಸುತ್ತಿದ್ದರೆ ಅಥಹವರ ಕಡಿವಾಣಕ್ಕೆ ಎಲ್ಲ ಸಿದ್ಧತೆ ನಡೆದಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಮಳೆಯ ಆರ್ಭಟ
ಶಿಡ್ಲಘಟ್ಟದಲ್ಲಿ ಸೋಮವಾರ ರಾತ್ರಿ ಬಿದ್ದ ಮಳೆಗೆ ವಾಲ್ಮೀಕಿ ದೇವಸ್ಥಾನದ ಬಳಿ ತೆಂಗಿನ ಮರವೊಂದು ಮರದ ಮೇಲೆ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಪರಿಶೀಲಿಸಿ
ಗ್ರಾಮೀಣ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುವಾಗ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಪರಿಶೀಲಿಸುತ್ತಿರಬೇಕು. ಪಕ್ಷಬೇಧ ಮರೆತು ಅಭಿವೃದ್ಧಿಯತ್ತ ಗಮನವಿಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಯ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ೫ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ಸಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ ಎಂದರು.
ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಬೆರಸದೇ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯೆ ಸರಳಾ ಗೋವಿಂದಪ್ಪ, ಮುಖಂಡರಾದ ಕೃಷ್ಣಪ್ಪ, ನರೇಂದ್ರ, ಮೂರ್ತಿ, ಚಂದ್ರಶೇಖರ್, ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಕಲಾವಿದರು
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮಳ್ಳೂರಾಂಭ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ನಡೆದ ಜನಪರ ಉತ್ಸವದಲ್ಲಿ ವೀರಗಾಸೆ ಕಲಾವಿದರು ಆಕರ್ಷಕ ಪ್ರದರ್ಶನವನ್ನು ನೀಡಿದರು.
ಲಂಬಾಣಿ ನೃತ್ಯ:
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮಳ್ಳೂರಾಂಭ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಜನಪರ ಉತ್ಸವದಲ್ಲಿ ಲಂಬಾಣಿ ನೃತ್ಯ ಕಲಾವಿದೆಯರು ನಡೆಸಿಕೊಟ್ಟ ನೃತ್ಯ ಪ್ರಕಾರ ವಿಶಿಷ್ಟವಾಗಿತ್ತು.
ಕಲಾವಿದರನ್ನು ಮುಖ್ಯವಾಹಿನಿಗೆ ತರಬೇಕಿದೆ
ಜಾನಪದ ನೃತ್ಯ ಪ್ರಕಾರದಲ್ಲಿ ಒಂದಾದ ಕಳಸನೃತ್ಯದ ಮೂಲಕ ದೇಶದೆಲ್ಲೆಡೆ ತಾಲ್ಲೂಕಿನ ಕೀರ್ತಿಯನ್ನು ಮೆರೆಸಿದ ದೇವರಮಳ್ಳೂರು ಗ್ರಾಮದಲ್ಲಿ ಜಾನಪದ ಜನಪರ ಉತ್ಸವ ನಡೆಯುತ್ತಿರುವುದು ಸಮಂಜಸವಾಗಿದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮಳ್ಳೂರಾಂಭ ದೇವಿಯ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ನಡೆದ ಜನಪರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರ್ಕಾರ ಈ ಕಾರ್ಯಕ್ರಮವನ್ನು ನಡೆಸುತ್ತಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಜನಪದ ಕಲೆ ಉಳಿವಿಗಾಗಿ ಕಲಾವಿದರ ರಕ್ಷಣೆ ಆಗಬೇಕಿದೆ. ಈ ಪರಂಪರೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸಂಸ್ಕೃತಿ ಉಳಿದರೆ ಪರಂಪರೆ ಉಳಿಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಗಡಿಭಾಗದಲ್ಲಿ ಜನಪದ ಕಾರ್ಯಕ್ರಮಗಳನ್ನು ಮಾಡುವಾಗ ಗ್ರಾಮೀಣ ಜನರು ತೋರಿಸುವ ಪ್ರೀತಿ ಮೆಚ್ಚುವಂತದ್ದು ಎಂದು ಹೇಳಿದರು.
ಜಾನಪದ ಹಾಡುಗಾರಿಕೆ, ತಮಟೆ ವಾದನ, ವೀರಗಾಸೆ, ಶಾಸ್ತ್ರೀಯ ನೃತ್ಯ, ಕರಗ ನೃತ್ಯ, ಡೊಳ್ಳು ಕುಣಿತ, ಬುರ್ರಕಥ, ಗೊರವರಕುಣಿತ ಸೇರಿದಂತೆ 31 ಕಲಾತಂಡಗಳು ಪ್ರದರ್ಶನವನ್ನು ನೀಡಿದವು. ಭಾಗವಹಿಸಿದ್ದ ಕಲಾವಿದರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.
ಶಿರಸ್ತೆದಾರ್ ವಾಸುದೇವಮೂರ್ತಿ. ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ, ಆಂಜನೇಯರೆಡ್ಡಿ, ಚಲಪತಿ, ನಾರಾಯಣಪ್ಪ, ಎ.ವೆಂಕೋಬರಾವ್, ಕೆಂಪಣ್ಣ, ಗೋವಿಂದರಾಜು, ದ್ಯಾವಪ್ಪ, ಗೊಲ್ಲಹಳ್ಳಿ ಶಿವಪ್ರಸಾದ್, ಮೂಡಲಗೊಳ್ಳಹಳ್ಳಿ ನರಸಿಂಹಪ್ಪ, ದೇವರಮಳ್ಳೂರು ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

