Home Blog Page 437

ಮಳ್ಳೂರಾಂಭ ದೇವಿಯ ರಥೋತ್ಸವ

0

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ವಿವಿಧ ಕಲಾತಂಡಗಳೊಂದಿಗೆ ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ಎಂ.ರಾಜಣ್ಣ ಮತ್ತು ಶಿರಸ್ತೆದಾರ್‌ ವಾಸುದೇವಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ, ಆಂಜನೇಯರೆಡ್ಡಿ, ಚಲಪತಿ, ನಾರಾಯಣಪ್ಪ, ಎ.ವೆಂಕೋಬರಾವ್‌, ಕೆಂಪಣ್ಣ, ಗೋವಿಂದರಾಜು, ದ್ಯಾವಪ್ಪ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈದ್-ಮಿಲಾದ್ ಆಚರಣೆ

0

ನಗರದಲ್ಲಿ ಈದ್-ಮಿಲಾದ್ ಹಬ್ಬವನ್ನು ಮಂಗಳವಾರ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.
ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು.ಎಲ್ಲರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಎಲ್ಲ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಮುಸ್ಲಿಂ ಜನಾಂಗದ ಎಲ್ಲ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನೋಟು ಬದಲು ದೇಶ ಮೊದಲು

0

ಕೇಂದ್ರ ಸರ್ಕಾರ, ೫೦೦ ಹಾಗೂ ೧೦೦೦ ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಣೆ ಮಾಡಿ, ನಗದು ರಹಿತ ವ್ಯವಹಾರವನ್ನು ಸಾಮಾನ್ಯ ಜನರು ನಡೆಸಬಹುದೆನ್ನುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಸಂವಾದ ಕಾರ್ಯಕ್ರಮವನ್ನು ರಾಜ್ಯದಲ್ಲೆ ಮೊದಲ ಬಾರಿಗೆ ಶಿಡ್ಲಘಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್‌ರೆಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೋಟು ಬದಲು ದೇಶ ಮೊದಲು’ ಎಂಬ ಈ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಕಾರ್ಡುಗಳ ಮೂಲಕ ನಗದು ರಹಿತ ವ್ಯವಹಾರ ನಡೆಸುವುದರಿಂದ ಆಗಬಹುದಾದಂತಹ ಅನುಕೂಲಗಳ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ನಾಗರಿಕರೊಂದಿಗೆ ಡಿಸೆಂಬರ್‌ 14 ರ ಬುಧವಾರ ಬೆಳಿಗ್ಗೆ ೧೦.೩೦. ಗಂಟೆಯಿಂದ ೧ ಗಂಟೆಯವರೆಗೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಂವಾದ ನಡೆಸಲಿದ್ದಾರೆ. ವರ್ತಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಮಹಿಳಾ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಸೇರಿದಂತೆ ಎಲ್ಲಾ ನಾಗರಿಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ರಾಜ್ಯ ಸಮಿತಿ ಸದಸ್ಯ ದಾಮೋದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ದೊಣ್ಣಹಳ್ಳಿ ರಾಮಣ್ಣ, ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕಿರಣ್, ತಾಲ್ಲೂಕು ಕಾರ್ಯದರ್ಶಿ ಬಾಸ್ಕರ್‌ರೆಡ್ಡಿ, ಮುನಿರಾಜು, ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನರೇಶ್ ಮುಂತಾದವರು ಹಾಜರಿದ್ದರು.

ಕ್ರೀಡಾಕೂಟದಲ್ಲಿ ಚಿನ್ನದ ಪದಕ

0

ಶಿಡ್ಲಘಟ್ಟ ತಾಲ್ಲೂಕಿನ ಜಯಂತಿ ಗ್ರಾಮದ ಕ್ರೀಡಾಪಟು ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ 400 ಮೀಟರ್‌ ಹರ್ಡಲ್ಸ್‌ ಓಟದಲ್ಲಿ ಚಿನ್ನದ ಪದಕ ಹಾಗೂ 800 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಫೆಬ್ರುವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಚೌಡಸಂದ್ರ ಗ್ರಾಮದಲ್ಲಿ ಹನುಮಜಯಂತಿ ಆಚರಣೆ

0

ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಹನುಮಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ನೂತನ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 28 ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಹನುಮಜಯಂತಿ ಪ್ರಯುಕ್ತ ಭಜನೆ, ಭಕ್ತಿಗಾಯನವನ್ನು ಆಯೋಜಿಸಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಹನುಮಜಯಂತಿ ಪ್ರಯುಕ್ತ ಭಜನೆ, ಭಕ್ತಿಗಾಯನವನ್ನು ಆಯೋಜಿಸಲಾಗಿತ್ತು.

ಭಾನುವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯವನ್ನು ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ತಿಂಡಿ ತಿನಿಸುಗಳು, ಆಟಿಕೆಗಳು, ಮುಂತಾದ ವಿವಿಧ ರೀತಿಯ ಅಂಗಡಿಗಳು ತರೆಯಲಾಗಿತ್ತು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

0

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮದಿನವಾದ ಈದ್‌ಮಿಲಾದ್‌ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಿ ಅತಿ ಹೆಚ್ಚು ಅಂದರೆ 750 ಯೂನಿಟ್‌ ರಕ್ತವನ್ನು ರೆಡ್‌ ಕ್ರಾಸ್‌ ಸಂಸ್ಥೆಗೆ ಸಂಗ್ರಹಿಸಿಕೊಡುವ ಮೂಲಕ ದಾಖಲೆ ಮಾಡಿದ್ದೇವೆ. ಈ ಬಾರಿಯೂ ಡಿಸೆಂಬರ್‌ 14 ರ ಬುಧವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೆಡ್‌ ಕ್ರಾಸ್‌ ಸಂಸ್ಥೆ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಈ ಬಾರಿ ಕಳೆದ ದಾಖಲೆಗಳಿಗಿಂತ ಹೆಚ್ಚು ರಕ್ತವನ್ನು ಸಂಗ್ರಹಿಸುವ ಮೂಲಕ ಶಿಡ್ಲಘಟ್ಟವನ್ನು ಮಾನವೀಯತೆ, ಸಮಾನತೆ, ಐಕ್ಯತೆಯ ನಗರವೆಂಬ ಖ್ಯಾತಿ ತರಲು ಶ್ರಮಿಸುತ್ತಿರುವುದಾಗಿ ಹೇಳಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಶನ್‌ ಅಧ್ಯಕ್ಷ ಮೊಹಮ್ಮದ್‌ ಅಸದ್‌ ಮಾತನಾಡಿ, ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದುವರೆಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ದಂತ ಚಿಕಿತ್ಸಾ ಶಿಬಿರ, ಟಿ.ಬಿ ಚಿಕಿತ್ಸಾ ಶಿಬಿರ, ಪಲ್ಸ್‌ ಪೋಲಿಯೋ ಕಾರ್ಯಕ್ರಮ, ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ. 33 ಮಂದಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದು, 90 ಲಕ್ಷ ರೂಗಳಷ್ಟು ಹಣ ತಾಲ್ಲೂಕಿಗೆ ಉಳಿಸಿದಂತಾಗಿದೆ. ಆರೋಗ್ಯ ಭಾಗ್ಯ ಯೋಜನೆಯನ್ನು ಬಡವರಿಗೆ ತಲುಪಿಸಲು ನೆರವಾಗುತ್ತಿದ್ದೇವೆ. ಶೈಕ್ಷಣಿಕವಾಗಿ ತಾಲ್ಲೂಕಿನ ಮಕ್ಕಳಿಗೆ ನೆರವಾಗಲು ಮುಂದಿನ ಶೈಕ್ಷಣಿಕ ವರ್ಷದಿಂದ ತಾಂತ್ರಿಕ ತರಬೇತಿ ಶಿಬಿರಗಳು, ಉತ್ತಮ ಬರವಣಿಗೆ, ಜ್ಞಾಪಕ ಶಕ್ತಿ ವೃದ್ಧಿಗಾಗಿ ಶೀಬಿರಗಳನ್ನು ನಡೆಸುವುದಾಗಿ ವಿವರಿಸಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಶನ್‌ ಕಾರ್ಯದರ್ಶಿ ಇಮ್ತಿಯಾಜ್‌ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್‌, ಸಯ್ಯದ್‌ ತೌಫೀಕ್‌, ಶಬ್ಬೀರ್‌ಪಾಷ, ಶಂಷೀರ್‌ ಪಾಷ, ಗೌಸ್‌ಖಾನ್‌ ಆಮೀರಿ ಈ ಸಂದರ್ಭದಲ್ಲಿ ಹಾಜರಿದ್ದರು.

ನಾಗಮಂಗಲದಲ್ಲಿ ಹನುಮಜಯಂತಿ

0

ತಾಲ್ಲೂಕಿನ ನಾಗಮಂಗಲ ಗ್ರಾಮದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ 11ನೇ ವರ್ಷದ ಹನುಮಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರು ನವೀಕರಿಸಿದ ನಂತರ ಪ್ರತಿ ವರ್ಷವೂ ಹನುಮಜಯಂತಿಯನ್ನು ವಿಶೇಷವಾಗಿ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಜನೆ ಕಾರ್ಯಕ್ರಮವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸಗೌಡ, ದೇವರಾಜು, ಮೋಹನ್‌, ಮಂಜುನಾಥ್‌, ವೆಂಕಟರೆಡ್ಡಿ, ಮುನಿರಾಜಪ್ಪ, ವಿಜಯ್‌, ಶಂಕರಪ್ಪ, ರಾಮಣ್ಣ, ಅರ್ಚಕ ರಾಜಗೋಪಾಲ್‌, ನಾರಾಯಣಸ್ವಾಮಿ, ವೆಂಕಟೇಶ್‌, ನಂಜೇಗೌಡ ಮತ್ತಿತರರು ಹಾಜರಿದ್ದರು.

ಒಗ್ಗಟ್ಟಿನಿಂದ ಕೂಡಿದ ಯುವಕರ ಶಕ್ತಿ ಅಪಾರವಾದುದು

0

ಯುವ ಸಂಘಟನೆಗಳು ಶಿಸ್ತು, ಬದ್ಧತೆ, ನಿಯಮ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಿದಲ್ಲಿ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬಹುದಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ನಗರದ ಅಶೋಕ ರಸ್ತೆಯಲ್ಲಿ ಭಾನುವಾರ ಒಕ್ಕಲಿಗರ ಯುವಸೇನೆ ಸಂಘದ ಕಚೇರಿಯನ್ನು ಉದ್ಘಾಟಿಸಿ ನಂತರ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚರಿತ್ರೆಯನ್ನು ನಾವು ಮರೆಯಬಾರದು. ಮುಂದಿನ ಪೀಳಿಗೆಗೆ ಹಿಂದಿನವರ ಸಾಧನೆ ತಿಳಿಯಬೇಕೆಂದರೆ ಅದು ಪುಸ್ತಕ ರೂಪದಲ್ಲಿ ದಾಖಲಾಗಬೇಕಿದೆ. ಕೆಂಪೇಗೌಡರು ಸೇರಿದಂತೆ ಒಕ್ಕಲಿಗರಲ್ಲಿ ಹಲವಾರು ಮಂದಿ ಸಾಧಕರಿದ್ದಾರೆ. ಯುವಕರು ಒಕ್ಕಲಿಗರ ಚರಿತ್ರೆ, ಸಾಧಕರ ಸಾಧನೆಯ ಪುಸ್ತಕಗಳನ್ನು ಹೊರತನ್ನಿ. ಮಳೆ ಬೆಳೆ ಇಲ್ಲದ ಜಿಲ್ಲೆಯ ರೈತ ಮಕ್ಕಳಿಗೆ ವಿದ್ಯೆಯೇ ಜೀವಾಳ. ರೈತರ ಮಕ್ಕಳು ಸುಶಿಕ್ಷಿತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಯುವಕರು ಒಗ್ಗೂಡಬೇಕು. ಒಗ್ಗಟ್ಟಿನಿಂದ ಕೂಡಿದ ಯುವಕರ ಶಕ್ತಿ ಅಪಾರವಾದುದು. ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಯುವಕರ ಉತ್ಸಾಹವನ್ನು ಕಂಡು ಅಪಾರ ಸಾಧ್ಯತೆಗಳು ಕಾಣಿಸುತ್ತಿವೆ. ನಮ್ಮ ಭರವಸೆಯನ್ನು ಹುಸಿಗೊಳಿಸಬೇಡಿ ಎಂದು ಹೇಳಿದರು.
ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ಸಾಹಿ ಯುವಕರ ಪಡೆ ಸಿದ್ಧವಾಗಿದೆ. ಹಿರಿಯರು ಮಾರ್ಗದರ್ಶನ ಮಾಡಿ ಬೆನ್ನುತಟ್ಟುವ ಮೂಲಕ ಪ್ರೋತ್ಸಾಹಿಸಬೇಕಿದೆ. ಸಮಾಜದ ಎಲ್ಲ ಸ್ಥರದವರನ್ನೂ ತಲುಪುವ, ಎಲ್ಲರಿಗೂ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.
ಒಕ್ಕಲಿಗರ ಯುವಸೇನೆ ಸಂಘದ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಭಾಕರ್‌, ಪ್ರಸನ್ನ, ಪಿ.ವಿ.ಮುನಿರಾಜು, ಮುರಳಿ, ಪ್ರತಾಪ್‌, ಪುರುಷೋತ್ತಮ್‌, ನಾರಾಯಣಸ್ವಾಮಿ, ಒಕ್ಕಲಿಗರ ಯುವಸೇನೆ ಸಂಘದ ಗ್ರಾಮ ಪಂಚಾಯಿತಿ ಘಟಕಗಳ ಅಧ್ಯಕ್ಷರುಗಳು

ಗ್ರಾಮೀಣ ಭಾಗಕ್ಕೆ ತಜ್ಞ ವೈದ್ಯಕೀಯ ನೆರವು ಅಗತ್ಯ

0

ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರದ ಅಗತ್ಯತೆ ಹೆಚ್ಚಿದೆ. ತಜ್ಞ ವೈದ್ಯರು ಗ್ರಾಮಕ್ಕೇ ಆಗಮಿಸಿ ಚಿಕಿತ್ಸೆ ನೀಡುವುದರಿಂದ ವೃದ್ಧರಿಗೆ, ಅಶಕ್ತರಿಗೆ, ಬಡವರಿಗೆ ಹಾಗೂ ಮಹಿಳೆಯರಿಗೆ ಉಪಯೋಗವಾಗುತ್ತದೆ ಎಂದು ಪೀಪಲ್‌ ಟ್ರೀ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಚಂದ್ರಶೇಖರ್‌ ಚಿಕ್ಕಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಮತ್ತು ಪೀಪಲ್ಸ್ ಟ್ರೀ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡಿನೋವು, ಕಣ್ಣಿನ ತೊಂದರೆ, ಗರ್ಭಗೋಶ ಹಾಗೂ ಸ್ತ್ರೀಸಂಬಂಧಿತ ತೊಂದರೆ, ಸೀಳುತುಟಿ, ಸೀಳು ಅಂಗಳ, ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲ್ಲೂಕಿನಲ್ಲಿ ವಿವಿದೆಡೆ ಈಗಾಗಲೇ ಎಸ್.ಎನ್.ಕ್ರಿಯಾ ಟ್ರಸ್ಟ್ ಜೊತೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿದ್ದೇವೆ. ದೇಶವಾರಪಲ್ಲಿ ಗ್ರಾಮದಲ್ಲಿ ಸೊಸೆ ಮತ್ತು ಅತ್ತೆ ಸೇರಿದಂತೆ 7 ಮಂದಿ ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಲಾಗಿದೆ. ದಡಂಘಟ್ಟದ ನವ್ಯಶ್ರೀ ಎಂಬಾಕೆಗೆ ಟ್ರಸ್ಟ್‌ ಸಹಾಯದಿಂದ 2 ಲಕ್ಷ ರೂಗಳ ವೆಚ್ಚದಲ್ಲಿ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದ ಪರಿಣಾಮ ತನ್ನ ಕಾಲಿನ ಶಕ್ತಿ ಪಡೆದಿದ್ದಾಳೆ. ಚಿಲಕಲನೇರ್ಪು ಹೋಬಳಿಯ ದೊಡ್ಡಬೆನ್ನರಘಟ್ಟದ ನರಸಿಂಹಮೂರ್ತಿ ಅವರನ್ನು ಕತ್ತಿನ ಹಿಂಭಾಗ ನರಸಮಸ್ಯೆಯಿಂದ ಮುಕ್ತಿ ನೀಡಲಾಗಿದೆ. ಮಳ್ಳೂರಿನ ಶ್ರೀನಿವಾಸ್ ಎಂಬುವರಿಗೆ ಥೈರಾಯ್ಡ್‌ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಸರ್ವರಿಗೂ ಆರೋಗ್ಯ ಮತ್ತು ಸರ್ವರಿಗೂ ಶಿಕ್ಷಣದ ಅಭಿಲಾಷೆಯೊಂದಿಗೆ ಆನೂರು ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಯೋವೃದ್ಧರಿಗೆ ಪಿಂಚಣಿ ಸೌಲಭ್ಯ,ವಿಧವೆಯರಿಗೆ ಮಾಶಾಸನ, ಅಂಗವಿಕಲರಿಗೆ ಮಾಶಾಸನ ಹಾಗೂ ಪ್ರತಿಯೊಂದು ಹೋಬಳಿ ಮತ್ತು ಗ್ರಾಮ ಪಂಚಾಯಿತಿಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ವ್ಯವಸ್ಥಾಪಕ ಪಾರ್ಥ ಮಾತನಾಡಿ, ಈ ಶಿಬಿರದಲ್ಲಿ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆ ಅವಶ್ಯಕತೆಯಿರುವ ರೋಗಿಗಳನ್ನು ಗುರುತಿಸಿ ಅವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಸಹಕಾರದಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಗ್ರಾಮದಿಂದ ಉಚಿತವಾಗಿ ಕರೆದೊಯ್ದು ಪುನಃ ಮನೆಗೆ ಕರೆತಂದು ಬಿಡುವುದಾಗಿ ಹೇಳಿದರು.
ಚಿಕಿತ್ಸೆ ಪಡೆದ ರೋಗಿಗಳಿಗೆ ಎಸ್.ಎನ್.ಕ್ರಿಯಾ ಟಸ್ಟ್‌ ವತಿಯಿಂದ ಸಸಿಗಳನ್ನು ವಿತರಿಸಲಾಯಿತು.
ಆನೂರು ಶ್ರೀನಿವಾಸ್‌, ದೇವರಾಜ್‌, ಚಂದ್ರೇಗೌಡ, ಶಿವಾನಂದ, ಅಮರ್‌, ಕೋಟಹಳ್ಳಿ ದೇವರಾಜ್‌, ಎ.ಆರ್‌. ಅಬ್ದುಲ್‌ ಅಜೀಜ್‌, ಹಿತ್ತಲಹಳ್ಳಿ ಸುರೇಶ್‌, ನಂದನಗೌಡ, ಶಿವಾನಂದ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಛಲಪತಿ, ವಿಶ್ವನಾಥ, ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು

ಮೋರಿಗೆ ಬಿದ್ದು ಬೈಕ್ ಸವಾರ ಸಾವು

0

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಬಳಿ ನಿರ್ಮಾಣ ಹಂತದಲ್ಲಿರುವ ಮೋರಿಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ.
ನಗರದ ಗಾಂಧಿನಗರದ ವಾಸಿ ವೆಂಕಟರೆಡ್ಡಿ(೫೦) ಮೃತಪಟ್ಟ ದುರ್ದೈವಿ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ಗಿಡ್ನಹಳ್ಳಿಯ ತನ್ನ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೆಂಕಟರೆಡ್ಡಿ, ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಮಾರ್ಗದ ಹಂಡಿಗನಾಳ ಬಳಿ ನಿರ್ಮಾಣ ಹಂತದ ಮೋರಿಗೆ ಬೈಕ್ ಸಮೇತ ಬಿದ್ದು ಮಂಗಳವಾರ ತಡರಾತ್ರಿ ಈ ದುರಂತ ಸಂಭವಿಸಿದೆ.
ರಿ ನಿರ್ಮಾಣದ ವೇಳೆ ಮೋರಿ ಬಳಿ ಯಾವುದೆ ಸೂಚನಾ ಫಲಕಗಳು, ತಡೆಗೋಡೆ ನಿರ್ಮಾಣ ಇನ್ನಿತರೆ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಈ ದುರಂತ ಸಂಭವಿಸಿದ್ದು ಮೃತರ ಪತ್ನಿ ಚಂದ್ರಮ್ಮ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಹಾಸ್ಯ ಸಾಹಿತಿ ಬೀಚಿಯವರ ನೆನಪು

0

‘ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು, ಚೆನ್ನೆಂದು ದೊಡ್ಡವರ ಅನುಕರಿಸ ಬೇಡ’ ಎಂದು ಹೇಳಿದ ವೈಶಿಷ್ಟ್ಯಪೂರ್ಣ ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯವನ್ನು ಓದುವ ಮೂಲಕ ಅವರನ್ನು ಸ್ಮರಿಸೋಣ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ನಮ್ಮನ್ನಗಲಿದ್ದು 1980 ರ ಡಿಸೆಂಬರ್‌ 7ರಂದು. ಈ ತಿಂಗಳ ಸಾಹಿತಿಯಾಗಿ ಅವರನ್ನು ನೆನಪಿಸಿಕೊಳ್ಳುವುದು, ಅವರ ಸಾಹಿತ್ಯ ಓದಿ ಚರ್ಚಿಸುವುದು ಕಸಾಪ ತಾಲ್ಲೂಕು ಘಟಕದ ಉದ್ದೇಶವಾಗಿದೆ.
ಶಂ.ಬಾ. ಜೋಶಿ ಯವರು ಬೀಚಿಯವರನ್ನು ‘ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ’ ಎಂದು ವರ್ಣಿಸಿದ್ದಾರೆ. ಬೀಚಿ ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಭಾಷಾಭಿಮಾನ ಮೂಡುವಂತಾಗಬಾರದು. ನಾವು ನಿತ್ಯ ಕನ್ನಡಿಗರಾಗಬೇಕು, ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು. ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು ಎಂದು ಹೇಳಿದರು.
ವಿವಿಧ ಪ್ರತಿಭಾ ಪ್ರದರ್ಶನವನ್ನು ನೀಡಿದ ವಿದ್ಯಾರ್ಥಿಗಳಾದ ರಂಜನ್‌, ಮಾಣಿಕ್ಯ, ಲಕ್ಷ್ಮಿ, ತಿಲಕ್‌, ಕಿಶೋರ್‌ಕುಮಾರ್‌, ಮೋಹಿತ್‌, ಮಹೇಶ್‌ ಅವರಿಗೆ ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ಜನಪದ ಗಾಯಕ ದೇವರಮಳ್ಳೂರು ಮಹೇಶ್‌ ಕನ್ನಡ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ವೆಂಕಟರತ್ನಮ್ಮ, ಭಾರತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಜೆಪಿ ಸದಸ್ಯರ ಪ್ರತಿಭಟನೆ

0

ಐಟಿ ದಾಳಿ ವೇಳೆ ಹೊಸ ನೋಟುಗಳೊಂದಿಗೆ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮತ್ತು ಪಿಡಬ್ಲೂಡಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್‌ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ಬುಧವಾರ ಬಿಜೆಪಿ ತಾಲ್ಲೂಕು ಘಟಕ ಮತ್ತು ಯುವ ಮೋರ್ಚಾ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿ ಚಿಕ್ಕರಾಯಪ್ಪ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಆಪ್ತ ಅಧಿಕಾರಿ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ಮಾಡಿದಾಗ ಒಟ್ಟು ಆರು ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಿಗ್ಭ್ರಮೆ ಹುಟ್ಟಿಸುವ ಸಂಗತಿಯೆಂದರೆ, ಈ ಇಬ್ಬರೂ ಅಧಿಕಾರಿಗಳ ಬಳಿ ದೊರಕಿರುವ ನಗದು ಪೈಕಿ 4.7 ಕೋ. ರೂ.ನಷ್ಟು ಮೊತ್ತ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2,000 ರೂ. ನೋಟುಗಳ ರೂಪದಲ್ಲಿದೆ. ಈ ಭ್ರಷ್ಟ ಅಧಿಕಾರಿಗಳ ಬೆನ್ನ ಹಿಂದಿರುವ ಜನಪ್ರತಿನಿಧಿಗಳ ಬಣ್ಣ ಬಯಲಾಗಿದೆ. ಇದರ ಜೊತೆಯಲ್ಲಿ ಎತ್ತಿನ ಹೊಳೆ ಕಾಮಗಾರಿಯಲ್ಲಿ ಖರೀದಿಸಿರುವ ಪೈಪುಗಳ ವಿಚಾರವಾಗಿ ಮೂವರು ಸಚಿವರು ಅಕ್ರಮವೆಸಗಿರುವುದು ತಿಳಿದುಬಂದಿದೆ. ಭ್ರಷ್ಟ ಸರ್ಕಾರದ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು.
ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಶಿರಸ್ತೆದಾರರಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಪಕ್ಷದ ಸುರೇಂದ್ರಗೌಡ, ಅರಿಕೆರೆ ಮುನಿರಾಜು, ಭಾಸ್ಕರರೆಡ್ಡಿ, ರತ್ನಮ್ಮ, ಬೈರರೆಡ್ಡಿ, ಪ್ರತಾಪ್‌, ಅಶ್ವಾಕ್‌ ಅಹಮದ್‌, ಫಯಾಜ್‌ ಅಹಮದ್‌ ಮತ್ತಿತರರು ಹಾಜರಿದ್ದರು.

ಕೆನರಾ ಬ್ಯಾಂಕಿನಲ್ಲಿ ಹಣವಿಲ್ಲ, ಬೇಸರಗೊಂಡ ಗ್ರಾಹಕರು

0

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣದ ಬದಲಾವಣೆಯನ್ನು ಸ್ಥಗಿತಗೊಳಿಸಿರುವ ಆರ್.ಬಿ.ಐ. ಒಬ್ಬ ಖಾತೆದಾರರಿಗೆ ಒಂದು ವಾರದಲ್ಲಿ ೨೪ ಸಾವಿರ ಪಡೆಯಲು ಅವಕಾಶ ಮಾಡಿಕೊಟ್ಟಿದ್ದರೂ ನಗರದ ಕೆನರಾ ಬ್ಯಾಂಕಿನಲ್ಲಿ ಹಣದ ಕೊರತೆಯಿಂದಾಗಿ ಗ್ರಾಹಕರಿಗೆ ಹಣ ನೀಡದೆ ಇರುವುದರಿಂದ ಗ್ರಾಹಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಲ್ಲಿದ್ದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಪರದಾಡುತ್ತಿದ್ದ ಗ್ರಾಹಕರು, ಬ್ಯಾಂಕುಗಳಲ್ಲಿ ನೀಡುತ್ತಿರುವ ಕೇವಲ ೨೦೦೦ ರೂಪಾಯಿಗಳನ್ನು ಪಡೆದುಕೊಳ್ಳಲು ಬ್ಯಾಂಕುಗಳ ಮುಂದೆ ದಿನವಿಡೀ ಸಾಲುಗಟ್ಟಿ ನಿಂತು ಬೇಸತ್ತಿದ್ದರು. ಸೋಮವಾರ ನಗರದ ಕೆನರಾ ಬ್ಯಾಂಕಿನ ಮುಂದೆ ರಿಸರ್ವ್ ಬ್ಯಾಂಕಿನಿಂದ ಹಣ ಸರಬರಾಜಾಗಿಲ್ಲವೆಂಬ ಕಾರಣಕ್ಕಾಗಿ ತಮ್ಮ ಖಾತೆಗಳಿಗೆ ಹಣ ತುಂಬಿಸುವವರು ಮಾತ್ರ ಬ್ಯಾಂಕಿನ ಮುಂದೆ ಸಾಲಾಗಿ ನಿಲ್ಲಿ, ಹಣ ಡ್ರಾ ಮಾಡುವವರು ಯಾರೂ ನಿಲ್ಲಬೇಡಿ ಎಂದು ಬೋರ್ಡ್ ಅಳವಡಿಸಿರುವುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.
ಆಸ್ಪತ್ರೆ, ಮದುವೆ, ದಿನನಿತ್ಯದ ವ್ಯವಹಾರಗಳಿಗಾಗಿ ಹಣವಿಲ್ಲದೆ ಪರದಾಡುವಂತಾಗಿದ್ದು, ಎಲ್ಲಾ ಬ್ಯಾಂಕುಗಳಿಗೂ ಹಣ ಬರುತ್ತಿದೆ. ಕೆನರಾ ಬ್ಯಾಂಕಿನವರಿಗೆ ಮಾತ್ರ ಹಣ ಬರುತ್ತಿಲ್ಲವೇ ಎಂದು ಗ್ರಾಹಕರಾದ ಶಿವಕುಮಾರ್, ಅರುಣ್‌ಬಾಬು, ರಾಘವೇಂದ್ರ, ಪ್ರಭಾವತಿ ಮುಂತಾದವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂತೆ ಮೈದಾನದ ದುರವಸ್ಥೆ

0

ನಗರದ ಸಂತೆ ಮೈದಾನದಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಲಾಗಿರುವ ಕಾಲುವೆಯ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಹಲವು ಮಂದಿ ವ್ಯಾಪಾರಸ್ಥರು ಬಿದ್ದು ಗಾಯಗೊಂಡಿರುವುದರ ಜೊತೆಗೆ ಜನರಿಗೆ ತೊಂದರೆಯಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಶಿಡ್ಲಘಟ್ಟದ ಸಂತೆ ಮೈದಾನದಲ್ಲಿ ನಗರಸಭೆಯಿಂದ ಮಾಡಿರುವ ಕಾಲುವೆಯಲ್ಲಿ ಬಿದ್ದ ಮಹಿಳೆಯನ್ನು ಇತರರು ಮೇಲಕ್ಕೆ ಬರಲು ಸಹಾಯ ಮಾಡಿದರು.
ಶಿಡ್ಲಘಟ್ಟದ ಸಂತೆ ಮೈದಾನದಲ್ಲಿ ನಗರಸಭೆಯಿಂದ ಮಾಡಿರುವ ಕಾಲುವೆಯಲ್ಲಿ ಬಿದ್ದ ಮಹಿಳೆಯನ್ನು ಇತರರು ಮೇಲಕ್ಕೆ ಬರಲು ಸಹಾಯ ಮಾಡಿದರು.

ನಗರದಲ್ಲಿ ಪ್ರತಿ ಸೋಮವಾರದಂದು ನಡೆಯುವ ವಾರದ ಸಂತೆಯ ಮೈದಾನದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸದೆ, ಕಳೆದ ಎರಡು ತಿಂಗಳ ಹಿಂದೆ ಕಾಲುವೆಯನ್ನು ಮಾಡಿದ್ದಾರೆ. ಆದರೆ ಕಾಲುವೆಯ ಕಾಮಗಾರಿಯನ್ನು ಇದುವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ಸಂತೆಯಲ್ಲಿ ವ್ಯಾಪಾರ ಮಾಡಲು ಬಂದಿರುವ ಹಲವಾರು ಮಂದಿ ವ್ಯಾಪಾರಸ್ಥರು ಕಾಲುವೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಗ್ರಾಹಕರು ಕೂಡಾ ಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಗರಸಭೆಯ ಆಯುಕ್ತರು ಹಾಗೂ ಶಾಸಕರಿಗೂ ಮನವಿ ಕೊಟ್ಟಿದ್ದರೂ ಈ ಬಗ್ಗೆ ಯಾರೂ ಗಮನಹರಿಸಿಲ್ಲ.
ಸಂತೆಯಲ್ಲಿ ಸ್ವಚ್ಚತೆಯಿಲ್ಲ. ಓಡಾಡಲು ಸಾಧ್ಯವಾಗುತ್ತಿಲ್ಲ. ಹಣದ ತೀವ್ರ ಕೊರತೆಯ ನಡುವೆಯೂ ಸಾವಿರಾರು ರೂಪಾಯಿಗಳ ಬಂಡವಾಳ ಹಾಕಿದ್ದರೂ ವ್ಯಾಪಾರಗಳಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಭಾನುವಾರ ರಾತ್ರಿ ಬಿದ್ದಿರುವ ಮಳೆಯಿಂದಾಗಿ ಸಂತೆಯ ಮೈದಾನ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ನಗರಸಭೆಯವರು ಈ ಬಗ್ಗೆ ಗಮನಹರಿಸಬೇಕು. ಸಂತೆ ಮೈದಾನವನ್ನು ಸ್ವಚ್ಚಗೊಳಿಸಬೇಕು ಅಪೂರ್ಣವಾಗಿರುವ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರಾದ ಮುನೀಂದ್ರ, ಭಾಗ್ಯಮ್ಮ, ರಾಮಚಂದ್ರ, ಶಿವಕುಮಾರ್, ಮುಂತಾದವರು ಒತ್ತಾಯ ಮಾಡಿದ್ದಾರೆ.

ಮಣ್ಣಿನ ಫಲವತ್ತತೆಯ ಪರೀಕ್ಷೆ ನಡೆಸಿ

0

ಮಣ್ಣಿನ ಫಲವತ್ತತೆಯ ಪರೀಕ್ಷೆ ನಡೆಸಿ ಅದಕ್ಕೆ ತಕ್ಕಂತೆ ಪೌಷ್ಠಿಕಾಂಶಗಳು ಮತ್ತು ರಸಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿ ಪಡೆಯಬಹುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ವಿಶ್ವ ಮಣ್ಣಿನ ದಿನದ ಅಂಗವಾಗಿ ಸೋಮವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಕಿಸಾನ್‌ ಘೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಕೃಷಿ ಮಾಡುವುದು ಬಹಳಷ್ಟು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ರೈತರು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಉತ್ತಮ ಹಾಗೂ ಗುಣಮಟ್ಟದ ಕೃಷಿ ಮಾಡಿದಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗುತ್ತದೆ ಎಂದರು.
ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸುರಕ್ಷಿತ ಕೀಟ ನಾಶಕಗಳ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಿಕೆಯ ಬಗ್ಗೆಯೂ ರೈತರಿಗೆ ಮಾಹಿತಿಯನ್ನು ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ನರಸಿಂಹಯ್ಯ, ಸಹಾಯಕ ಕೃಷಿ ನಿರ್ದೇಶಕ ದೇವೇಗೌಡ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ರವಿಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾಟಾಚಾರದ ಕಾರ್ಯಕ್ರಮ: ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ವಿಶ್ವ ಮಣ್ಣಿನ ದಿನ ಕಾರ್ಯಕ್ರಮ ಕೇವಲ ಕಾಟಾಚಾರಕ್ಕೆ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು. ಕಾರ್ಯಕ್ರಮದ ಬಗ್ಗೆ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ, ಕರಪತ್ರ ಮುದ್ರಿಸಿಲ್ಲ. ತಾಲೂಕಿನಾಧ್ಯಂತ ಸಾವಿರಾರು ರೈತರಿದ್ದರೂ ಸಹ ಕೇವಲ ತಾಲ್ಲೂಕು ಕಚೇರಿ ಮತ್ತು ತಾಲ್ಲೂಕು ಪಂಚಾಯಿತಿಗೆ ವಿವಿಧ ಕೆಲಸಗಳ ಮೇಲೆ ಬಂದಿದ್ದ ಹತ್ತಿಪ್ಪತ್ತು ಮಂದಿ ಸಾರ್ವಜನಿಕರನ್ನು ಕರೆದು ಕಾರ್ಯಕ್ರಮ ನಡೆಸಿದ್ದಾರೆ. ರೈತರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವಾಗಲಿ ಕೃಷಿ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಕೇವಲ ಜನಪ್ರತಿನಿಧಿಗಳನ್ನು ಓಲೈಸಲು ಹಾಗು ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಷ್ಟೇ ಕಾರ್ಯಕ್ರಮ ಆಚರಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ, ಅವರು ರಾಷ್ಟ್ರನಾಯಕರು

0

ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಕಾನೂನು ವ್ಯವಸ್ಥೆ ಪ್ರಭಲವಾಗಿರಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿ ಇಡೀ ದೇಶದ ಭದ್ರತೆ ಕಾಪಾಡಿದ ಕೀರ್ತಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಕೆ.ಮೂರ್ತಿ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಗಂಗಮ್ಮ ದೇವಾಲಯ ಆವರಣದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೦ ನೇ ಮಹಾಪರಿನಿರ್ವಾಣ ದಿನ ಹಾಗೂ ಅಬ್ಲೂಡು ಗ್ರಾಮ ಪಂಚಾಯಿತಿ ದಲಿತಸೇನೆ ಶಾಖೆ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆಗಳು, ಶೋಷಣೆಯಿಂದಾಗಿ ನಿರಂತರವಾದ ಚಿಂತನೆಗಳನ್ನು ನಡೆಸಿದ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಜನರಿಗೂ ನಿಜವಾದ ಸ್ವಾತಂತ್ರ್ಯ ಮತ್ತು ಉತ್ತಮ ಶಿಕ್ಷಣವನ್ನು ಕೊಡಿಸುವುದನ್ನು ಗುರಿಯನ್ನಾಗಿಸಿಕೊಂಡು ಸಂವಿಧಾನ ರಚಿಸಿದರು.
ಜೀವನವಿಡೀ ಶೋಷಿತರ ಏಳಿಗೆಗಾಗಿ ಶ್ರಮಿಸಿದ ಅವರ ಕನಸನ್ನು ನನಸು ಮಾಡುವಂತಹ ಮಹತ್ತರವಾದ ಜವಾಬ್ದಾರಿ ಇಂದಿನ ಸಂಘಟನೆಗಳ ಮೇಲೆ ನಿಂತಿದೆ. ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ ಬದಲಿಗೆ ಅವರು ರಾಷ್ಟ್ರನಾಯಕರು, ವಿಶ್ವನಾಯಕರಾಗಿದ್ದಾರೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಪ್ರತಿಯೊಬ್ಬರೂ ಅಂಬೇಡ್ಕರ್‌ ಅವರ ಜೀವನದ ಉದ್ದೇಶಗಳನ್ನು ಅರ್ಥಮಾಡಿಕೊಂಡು ಅವರ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕು, ಅವರ ಹೋರಾಟದ ಹಾದಿಗಳನ್ನು ನೆನಪುಮಾಡಿಕೊಂಡು ಆದರ್ಶ ಜೀವನ ನಡೆಸುವಂತವರಾಗಬೇಕು ಎಂದರು.
ಸಂಘಟನೆಗಳು ಒಗ್ಗೂಡುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಗಳನ್ನು ಮಾಡಬೇಕು. ದೀನದಲಿತರ ಉದ್ದಾರಕ್ಕಾಗಿ ಚಿಂತನೆ ನಡೆಸುವುದರೊಂದಿಗೆ ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಕಾರ್ಯದರ್ಶಿ ಅರಿಕೆರೆ ಮುನಿರಾಜು, ಆಮ್ ಆದ್ಮಿ ಪಕ್ಷದ ಸಂಚಾಲಕ ವಿಸ್ಡಂ ನಾಗರಾಜ್, ದಲಿತಸೇನೆ ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್, ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಕಲಾಮಂಡಳಿ ಜಿಲ್ಲಾಧ್ಯಕ್ಷ ಈಧರೆಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್.ರಮೇಶ್, ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಓ ಜಯಶ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು

ಶೀಘ್ರ ಕಾಮಗಾರಿ – ಹೆದ್ದಾರಿ ಎಂಜಿನಿಯರ್‌ ಭರವಸೆ

0

ಬೆಳೆಗಳಿಗೆ ಹಾನಿಯಾಗದ ರೀತಿಯಲ್ಲಿ ಧೂಳು ಏಳದಂತೆ ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಮುಗಿಸುವುದಾಗಿ ಎಂಜಿನಿಯರ್‌ ರಾಮಚಂದ್ರರೆಡ್ಡಿ ರೈತರಿಗೆ ಭರವಸೆಯನ್ನು ನೀಡಿದರು.
ನಗರದ ಸರ್ಕಲ್‌ ಇನ್ಸ್‌ಪೆಕ್ಟರ್‌ ಕಚೇರಿಯಲ್ಲಿ ಮಂಗಳವಾರ ನಡೆದ ರೈತರು ಹಾಗೂ ಹೆದ್ದಾರಿ ವಿಭಾಗದ ಎಂಜಿನಿಯರ್‌ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಾರ ಶಿಡ್ಲಘಟ್ಟ- ಚಿಂತಾಮಣಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ರಸ್ತೆಯ ಧೂಳಿನಿಂದ ಅಕ್ಕಪಕ್ಕದ ರೈತರ ತೋಟಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸೊಣ್ಣೇನಹಳ್ಳಿ ಗೇಟ್ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಠಾಣೆಗೆ ಕರೆಸಿ ರೈತರೊಂದಿಗೆ ಸಮಸ್ಯೆಯ ಬಗೆಗೆ ಚರ್ಚಿಸುವುದಾಗಿ ತಿಳಿಸಿದ್ದರು.
ಆದಷ್ಟು ಬೇಗ ಕಾಮಗಾರಿ ಪೂರೈಸಲಾಗುವುದು. ಧೂಳು ಎದ್ದೇಳದಂತೆ ಕ್ರಮ ಕೈಗೊಳ್ಳುವುದಾಗಿ ಎಂಜಿನಿಯರ್‌ ಭರವಸೆ ನೀಡಿದರು. ಆದರೆ ರೈತರು, ಕೆರೆ ಮಣ್ಣನ್ನು ತಂದು ರಸ್ತೆಗೆ ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ಈಗಾಗಲೇ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಈಗ ಆಗಿರುವ ನಷ್ಟಕ್ಕೆ ಪರಿಹಾರವನ್ನು ನೀಡಬೇಕೆಂದು ಪಟ್ಟುಹಿಡಿದರು.
ಹೆದ್ದಾರಿ ಕಾಮಗಾರಿಯಿಂದ ರೈತರಿಗೆ ಈಗಾಗಲೇ ಆಗಿರುವ ನಷ್ಟವನ್ನು ಗುತ್ತಿಗೆದಾರರಿಗೆ ವಿವರಿಸಿ ಅವರಿಂದ ಸೂಕ್ತ ಪರಿಹಾರವನ್ನು ಕೊಡಿಸಲು ಪ್ರಯತ್ನಿಸುವುದಾಗಿ ಎಂಜಿನಿಯರ್‌ ರಾಮಚಂದ್ರರೆಡ್ಡಿ ತಿಳಿಸಿದರು. ಸಬ್‌ ಇನ್ ಸ್ಪೆಕ್ಟರ್ ಪ್ರದೀಪ್‌ ಪೂಜಾರಿ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಎಸ್‌.ಎಂ.ನಾರಾಯಣಸ್ವಾಮಿ, ಪ್ರಭಾಕರ್, ಗೋವಿಂದ, ರಾಮಾಂಜಿನಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಒಂದು ವರ್ಗಕ್ಕೆ ಸೇರಿದವರಲ್ಲ

0

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಎಲ್ಲ ಜನಾಂಗದ ಬಡವರ ಬಗ್ಗೆ ಕಾಳಜಿ ವಹಿಸಿದ್ದರು. ಅವರು ಕೇವಲ ಒಂದು ವರ್ಗಕ್ಕೆ ಸೇರಿದವರಲ್ಲ. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಪ್ರತಿಪಾದಿಸಿದವರು ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕ ಟಿ.ಎ.ಛಲಪತಿ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 60ನೇ ವರ್ಷದ ಪರಿನಿರ್ವಾಹಣ ದಿನದ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ರೋಗಿಗಳಿಗೆ ಹಣ್ಣು, ಬ್ರೆಡ್‌ ವಿತರಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್‌ ಮೊಟ್ಟಮೊದಲ ಬಾರಿಗೆ ಮಹಿಳೆಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ವಾದ ಮಂಡನೆ ಮಾಡಿದ್ದರು. ಈಗ ಮಹಿಳೆಯರು ಮುಖ್ಯವಾಹಿನಿಗೆ ಬರಲು ಮೂಲ ಕಾರಣ ಡಾ.ಅಂಬೇಡ್ಕರ್‌. ಅವರ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದು ಹೇಳಿದರು.
ದಲಿತ ಮುಖಂಡ ಕೆ.ಎಸ್‌.ದ್ಯಾವಕೃಷ್ಣಪ್ಪ ಮಾತನಾಡಿ, ಡಾ.ಅಂಬೇಡ್ಕರ್‌ ಅವರ ಸಿದ್ಧಾಂತದಂತೆ ಬಡವರ ಪರವಾಗಿ, ಅವರ ಏಳಿಗೆಗಾಗಿ ಕೆಲಸ ಮಾಡುವ ಉದ್ದೇಶದಿಂದ ಈ ದಿನ ದ.ಸಂ.ಸ ತಾಲ್ಲೂಕು ಘಟಕದ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದೆವು ಎಂದರು.
ಸರ್ಕಲ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್‌, ಸಬ್‌ಇನ್ಸ್‌ಪೆಕ್ಟರುಗಳಾದ ಪ್ರದೀಪ್‌ ಪೂಜಾರಿ, ನವೀನ್‌ರೆಡ್ಡಿ, ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ಡಾ.ಸುನೀತಾ, ಡಾ.ತಿಮ್ಮೇಗೌಡ. ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಟಿ.ವಿ.ಮುನಿಯಪ್ಪ, ಹುಜಗೂರು ವೆಂಕಟೇಶ್‌, ಟಿ.ಎಂ.ವೆಂಕಟೇಶ್‌, ದೊಡ್ಡ ತಿರುಮಳಯ್ಯ, ಲಕ್ಷ್ಮಣ, ನಾರಾಯಣಪ್ಪ ಮತ್ತಿತರರು ಹಾಜರಿದ್ದರು.

ಸಾದಲಿ ಕೆರೆಗಳಲ್ಲಿ ಕಾನೂನುಬಾಹಿರ ಕಾಮಗಾರಿ, ಗ್ರಾಮಸ್ಥರ ಆರೋಪ

0

ಕೆರೆ ಒತ್ತುವರಿದಾರರನ್ನು ತೆರವುಗೊಳಿಸಬೇಕಾದ ಸಣ್ಣ ನೀರಾವರಿ ಇಲಾಖೆಯವರು ತಾಲ್ಲೂಕಿನ ಸಾದಲಿ ಗ್ರಾಮದ ಎರಡು ಕೆರೆಗಳಲ್ಲಿ ಎಕರೆಗಟ್ಟಲೆ ಕೆರೆಯ ಜಾಗವನ್ನು ಬಿಟ್ಟು ಟ್ರಂಚ್‌ ಹಾಕುತ್ತಿದ್ದಾರೆ ಎಂದು ಸಾದಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾದಲಿ ಗ್ರಾಮದ ಸಾದಲಮ್ಮನ ಕೆರೆ ಮತ್ತು ಸಾದಲಿ ಹೊಸಕೆರೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಗಳಿಗೆ ಹಣ ಮಂಜೂರಾಗಿದೆ. ಟೆಂಡರ್‌ ಪಡೆದ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಒತ್ತುವರಿ ಮಾಡಿರುವ ಜಮೀನುಗಳನ್ನು ಬಿಟ್ಟು ಟ್ರಂಚ್‌ ಹಾಕಿದ್ದಾರೆ. ಸಾದಲಿ ಹೊಸಕೆರೆ ನಿರ್ಮಾಣವಾದಾಗ ಜಮೀನು ಕಳೆದುಕೊಂಡ ನಾಲ್ವರು ರೈತರಿಗೆ ಸರ್ಕಾರ ಪರಿಹಾರವಾಗಿ ಹಣವನ್ನು ನೀಡಿತ್ತು. ಈಗ ಕೆರೆಯ ಅಂಗಳವಾಗಿದ್ದ ಆ ಜಮೀನುಗಳನ್ನು ಹೊರತುಪಡಿಸಿ ಟ್ರಂಚ್‌ ಹಾಕಿದ್ದಾರೆ.
ಕಾನೂನು ಬಾಹಿರವಾಗಿ ಗುತ್ತಿಗೆದಾರರಿಂದ ಕೆಲಸ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯವರ ಗಮನಕ್ಕೆ ತಂದಿದ್ದರೂ ಅವರು ಕ್ರಮ ಕೈಗೊಳ್ಳದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರಿ ಸ್ವತ್ತಾದ ಕೆರೆಯನ್ನು ರಕ್ಷಿಸಬೇಕು ಎಂದು ನ್ಯಾಯಾಲಯದ ಆದೇಶವಿದ್ದರೂ, ಇಲ್ಲಿ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಗ್ರಾಮಸ್ಥರು ಸಹಿ ಮಾಡಿರುವ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೂ ತಲುಪಿಸಿದ್ದೇವೆ ಎಂದು ಗ್ರಾಮದ ವೆಂಕಟಾಚಲಪತಿ ತಿಳಿಸಿದರು.

ರೈತ ಆಸಕ್ತ ಗುಂಪುಗಳ ಉದ್ಘಾಟನೆ

0

ಬಯಲುಸೀಮೆ ಭಾಗದ ರೇಷ್ಮೆ ಬೆಳೆಗಾರರು ಬೆಳೆಯುವ ರೇಷ್ಮೆ ಗೂಡು ಉತ್ಪಾದನೆ ಹೆಚ್ಚು ಮಾಡುವುದು, ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಭೂಷಣ್ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರಿನಲ್ಲಿ ರೇಷ್ಮೆ ಇಲಾಖೆ ಮತ್ತು ಮೈರಾಡ ಸಂಸ್ಥೆಯ ಸಹಯೋಗದಲ್ಲಿ ರೇಷ್ಮೆ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಓ) ಯೋಜನೆಯಡಿ ಶನಿವಾರ ನಡೆದ ರೈತ ಆಸಕ್ತ ಗುಂಪುಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ಧಿ ತರಭೇತಿ ನೀಡುವುದು, ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮಧ್ಯವರ್ತಿಗಳ ಹಾವಳಿ ತಡೆಯುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಸಮಾನ ಮನಸ್ಕ ರೇಷ್ಮೆ ಬೆಳೆಗಾರರನ್ನು ಒಂದುಗೂಡಿಸಿ ೨೦ ಮಂದಿಯಿರುವ ಸುಮಾರು ೫೦ ಗುಂಪುಗಳನ್ನು ರಚಿಸಲು ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಗಾರರಿರುವ ನಾಲ್ಕೈದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಇದರ ಮಾರ್ಗದರ್ಶನವನ್ನು ಮೈರಾಡ ಸಂಸ್ಥೆ ನೆರವೇರಿಸಿದರೆ ಹಣಕಾಸಿನ ನೆರವನ್ನು ರೇಷ್ಮೆ ಇಲಾಖೆ ನಿರ್ವಹಿಸುತ್ತದೆ. ಪ್ರತಿ ಸದಸ್ಯರೂ ಒಂದು ಸಾವಿರ ರೂಗಳ ಷೇರು ಹಣವನ್ನು ಹಾಗೂ ಒಂದು ನೂರು ರೂಗಳ ನಿರ್ವಹಣಾ ವೆಚ್ಚವನ್ನು ನೀಡಬೇಕು. ಒಂದು ಗುಂಪಿನಲ್ಲಿ ಸಂಗ್ರಹವಾದ ಷೇರು ಹಣದಷ್ಟೇ ಹಣವು ಸರ್ಕಾರ ನೀಡುತ್ತದೆ. ಒಟ್ಟು ಮೊತ್ತದಿಂದ ಸಂಘದ, ರೈತರ ಆರ್ಥಿಕ ಅಭಿವೃದ್ಧಿ ಮಾಡಬಹುದು ಎಂದರು.
ಮೈರಾಡ ಸಂಸ್ಥೆಯ ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಕ್ರಮ ಅಧಿಕಾರಿ ಶಿವಶಂಕರ್ ಮಾತನಾಡಿ ರೈತ ಆಸಕ್ತ ಗುಂಪು ರಚಿಸುವುದರಿಂದ ರೈತರ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ತಾವು ಬೆಳೆದ ರೇಷ್ಮೆ ಗೂಡಿಗೆ ಉತ್ತಮ ಬೆಲೆ ನಿಗಧಿ ಪಡಿಸುವ ಅವಕಾಶವೂ ಇರುತ್ತದೆ. ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಕರಿಯಾಗುತ್ತದೆ ಎಂದರು.
ರೈತ ಆಸಕ್ತ ಗುಂಪುಗಳನ್ನು ರಚಿಸಿಕೊಂಡರೆ ತಮ್ಮದೇ ಷೇರು ಮೊತ್ತದ ಜೊತೆಗೆ ಇಲಾಖೆಯಿಂದ ಸಿಗುವ ಸಹಾಯಧನವನ್ನು ಬಳಸಿಕೊಂಡು ಚಾಕಿ ಸಾಕಾಣಿಕೆ ಕೇಂದ್ರ, ರಸಗೊಬ್ಬರ ಮಳಿಗೆ ನಿರ್ಮಿಸಿಕೊಂಡರೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜೊತೆಗೆ ತಮ್ಮ ಆದಾಯವೂ ಹೆಚ್ಚಾಗುತ್ತದೆ. ಹಾಗಾಗಿ ರೇಷ್ಮೆ ಬೆಳೆಗಾರರು ೨೦ ಮಂದಿಯನ್ನೊಳಗೊಂಡ ಒಂದೊಂದು ಗುಂಪು ರಚಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಹಾಗು ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಜಿಲ್ಲಾ ಸಂಯೋಜಕ ವೆಂಕಟರೆಡ್ಡಿ ಎಸ್ ಗಿರಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮಳ್ಳೂರಂಭ ರೈತ ಆಸಕ್ತ ಗುಂಪಿನ ಸದಸ್ಯರಿಗೆ ಪುಸ್ತಕ ಹಾಗು ಲೇಖನಿ ವಿತರಿಸಲಾಯಿತು.
ರೇಷ್ಮೆ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ರೇಷ್ಮೆ ಪ್ರದರ್ಶಕ ಎಸ್.ಎಂ. ಪ್ರಕಾಶ್, ಬಿ. ಎಲ್. ಮುನಿರಾಜು, ಗ್ರಾಮದ ಮುಖಂಡರಾದ ಬಿ.ಕೆಂಪಣ್ಣ, ಎಸ್.ಕೆಂಪಣ್ಣ, ಆಂಜಿನಪ್ಪ, ನಾರಾಯಣಸ್ವಾಮಿ, ಜಯರಾಂ, ರೆಡ್ಡಿಸ್ವಾಮಿ, ದೇವರಾಜ್ ಮತ್ತಿತರರು ಹಾಜರಿದ್ದರು.