ಹಿಂದೆ ಗ್ರಾಮಗಳಲ್ಲಿ ಎಲ್ಲಾ ಸಮಾಜದವರ ಬಟ್ಟೆಗಳನ್ನು ಶುದ್ಧ ಮಾಡಿಕೊಡುವ ಕೆಲಸವನ್ನು ಮಡಿವಾಳ ಜನಾಂಗದವರು ಮಾಡುತ್ತಿದ್ದರು. ಅದಕ್ಕಾಗಿ ಅವರ ಮನೆಗಳಲ್ಲಿ ಉಬ್ಬೆ ಇರುತ್ತಿತ್ತು. ಕಾಲದ ಬದಲಾವಣೆ, ಮನೆಮನೆಗಳಲ್ಲಿ ಪ್ರವೇಶಿಸಿದ ವಾಷಿಂಗ್‌ಮಿಷನ್ ಉಬ್ಬೆಗಳನ್ನು ಮರೆಯುವಂತೆ ಮಾಡಿತು.
ಈಗ ಉಬ್ಬೆಗಳು ಹೇಗಿತ್ತು ಎಂದು ಊಹಿಸಿಕೊಳ್ಳಲೂ ಸಹ ಎಲ್ಲಿಯೂ ಉಳಿದಿಲ್ಲ. ಆದರೆ, ತಾಲ್ಲೂಕಿನ ಕಾಚಹಳ್ಳಿಯ ಎಂ.ದೇವರಾಜ್ ಅವರ ಕುಟುಂಬದವರು ಬಳಸುತ್ತಿದ್ದ ಉಬ್ಬೆಯು ಅವರ ಮನೆಯಲ್ಲಿ ಇನ್ನೂ ಪಳೆಯುಳಿಕೆಯಂತೆ ಉಳಿದಿದೆ. ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಎಂ.ದೇವರಾಜ್, ತಮ್ಮ ತಂದೆ ಕಾಚಹಳ್ಳಿ ಮುನಿಯಪ್ಪ ಹೇಗೆ ಮಡಿವಾಳ ವೃತ್ತಿಯನ್ನು ಮಾಡುತ್ತಿದ್ದರು ಎಂದು ಅವರ ಶ್ರಮ ಜೀವನದ ಬಗ್ಗೆ ವಿವರಿಸುತ್ತಾರೆ.
‘ತಾಲ್ಲೂಕಿನ ನಾಗಮಂಗಲ, ಭಕ್ತರಹಳ್ಳಿ, ಮಳಮಾಚನಹಳ್ಳಿ, ಕಾಕಚೊಕ್ಕಂಡಹಳ್ಳಿ, ಮುತ್ತೂರು, ಚೌಡಸಂದ್ರ ಹೀಗೆ ಹತ್ತಾರು ಹಳ್ಳಿಗಳಿಂದ ಮಡಿವಾಳರು ಎರಡು ಅಥವಾ ನಾಲ್ಕು ಕತ್ತೆಗಳೊಂದಿಗೆ ಕಾಚಹಳ್ಳಿಗೆ ಬಂದು ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೇ ಆಂಧ್ರದ ಅಂಚಿಗೆ ಬರುವ ಕೆರೆಗಳ ಸಮೀಪಕ್ಕೆ ತೆರಳುತ್ತಿದ್ದರು. ಕೆರೆಗಳ ದಂಡೆಗಳಲ್ಲಿ ಸಿಗುತ್ತಿದ್ದ ಸವಳನ್ನು(ಲವಣಾಂಶ ಬೆರೆತ ಮಣ್ಣು) ಕತ್ತೆಗಳ ಮೇಲೆ ಹೊತ್ತು ತರುತ್ತಿದ್ದರು. ಇವರು ಕಾಲ್ನಡಿಗೆಯಲ್ಲಿ ಹೋಗಿ ಬರಲು ಒಂದು ವಾರ ಬೇಕಾಗುತ್ತಿತ್ತು. ಒಂದು ಸಾರಿ ಹೊರಟರೆ ಒಂದು ವರ್ಷಕ್ಕಾಗುವಷ್ಟು ಸವಳನ್ನು ಸಂಗ್ರಹಿಸುತ್ತಿದ್ದರು.
ಪ್ರತಿ ಹಳ್ಳಿಯಲ್ಲೂ ಮಡಿವಾಳರು ಸುಮಾರು 20 ರಿಂದ 40 ಮನೆಗಳವರ ಕೊಳೆ ಬಟ್ಟೆಗಳನ್ನು ತಂದು ವಿಂಗಡಿಸಿ ಸವಳನ್ನು ನೀರಿಗೆ ಮಿಶ್ರಣ ಮಾಡಿ ಕೊಳೆ ಬಟ್ಟೆಗಳನ್ನು ಅದರಲ್ಲಿ ನೆನೆಸಿ ಉಬ್ಬೆಯ ಮೇಲೆ ಗೋಳಾಕಾರದಲ್ಲಿ ಸುತ್ತುತ್ತಿದ್ದರು. ನಂತರ ಅದೇ ದಿನ ಉಬ್ಬೆಗೆ ಬೆಂಕಿಯನ್ನು ಹಾಕಿ ನೀರನ್ನು ಕಾಯಿಸುತ್ತಿದ್ದರು. ಆ ಹಬೆಗೆ ಬಟ್ಟೆಗಳಲ್ಲಿರುವ ಕೊಳೆ ಬಿಟ್ಟುಕೊಳ್ಳುತ್ತಿತ್ತು.
ಮಾರನೆ ದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಉಬ್ಬೆಗೆ ಸುತ್ತಿದ್ದ ಬಟ್ಟೆಗಳನ್ನು ಮಾದೆಗಳಲ್ಲಿ ಗಂಟು ಕಟ್ಟಿಕೊಂಡು ಕತ್ತೆಗಳ ಮೇಲೆ ಹೇರಿಕೊಂಡು ಮೇಲೂರು ಮಳ್ಳೂರು ಸಮೀಪದ ಗಂಗಮ್ಮನ ಕುಂಟೆಗೆ ತರುತ್ತಿದ್ದರು. ಅಲ್ಲಿ ನೀರಿನ ಹತ್ತಿರ ಸಿದ್ಧಗೊಳಿಸಿರುವ ಬಂಡೆಗಳ ಮೇಲೆ ಬಟ್ಟೆಗಳನ್ನು ಜಾಡಿಸಿ ಹೊಡೆದು ಅದರಲ್ಲಿರುವ ಕೊಳೆಯನ್ನು ಹೋಗಲಾಡಿಸಿ ಅದೇ ನೀರಿನಲ್ಲಿ ಜಾಲಿಸುತ್ತಿದ್ದರು. ಕುಂಟೆಯ ದಡದ ಮೇಲೆ ಬಟ್ಟೆಯನ್ನು ಹಾಸಿ ಬಿಸಿಲಿಗೆ ಒಣಗಿಸಲಾಗುತ್ತಿತ್ತು. ಸಂಜೆ ಮನೆಗೆ ತಂದು ಅವನ್ನು ಮನೆಗಳಿಗೆ ಸಂಬಂಧಿಸಿದಂತೆ ವಿಂಗಡಿಸಿ ಇಸ್ತ್ರಿ ಮಾಡಿ ಕೊಡುವ ಕಾಯಕ ನಡೆಯುತ್ತಿತ್ತು.
ಬಟ್ಟೆಗಳನ್ನು ವಿಂಗಡಿಸಲು ಗೇರುಬೀಜಕ್ಕೆ ಸೂಜಿಯನ್ನು ಚುಚ್ಚಿ ಅದರಿಂದ ಬಂದ ಕಪ್ಪು ಬಣ್ಣದಿಂದ ಪ್ರತಿ ಕುಟುಂಬದ ಬಟ್ಟೆಗಳಿಗೆ ಗುರುತನ್ನು ಮಾಡುತ್ತಿದ್ದರು.
ಇಷ್ಟೆಲ್ಲಾ ಶ್ರಮದ ದುಡಿಮೆಗೆ ತಿಂಗಳಿಗೊಂದಿಷ್ಟು ಹಣ ಅಥವಾ ದವಸ ಧಾನ್ಯಗಳನ್ನು ಪಡೆಯುತ್ತಿದ್ದರು. ಸಾಮಾಜಿಕ ಬದಲಾವಣೆಗಳಾದಂತೆ ಮಡಿವಾಳರ ಅಗತ್ಯವೂ ಕಡಿಮೆಯಾಗತೊಡಗಿತು. ನಮ್ಮ ಜೀವನವೂ ಕಷ್ಟಕರವಾಗತೊಡಗಿತು. ಹಾಗಾಗಿ ವಿವಿಧ ವೃತ್ತಿಗಳನ್ನು ಕೈಗೊಳ್ಳಬೇಕಾಯಿತು. ಉಬ್ಬೆಯು ಇತಿಹಾಸಕ್ಕೆ ಸೇರಿತು. ಈಗ ಕೆರೆಗಳಲ್ಲಿ ನೀರಿಲ್ಲ, ಇನ್ನು ಸವುಳು ಮಣ್ಣನ್ನು ಕಾಣುವುದೆಂತು. ಕಾಲದ ಹರಿವಿನಲ್ಲಿ ಉಬ್ಬೆಯು ಗತಕಾಲದ ಜನಜೀವನದ ನೆನಪಾಗಿ ಉಳಿದಿರುವ ಒಂದು ಸಂಗತಿಯಾಗಿದೆ’ ಎನ್ನುತ್ತಾರೆ ಕಾಚಹಳ್ಳಿ ದೇವರಾಜ್.
ಮರೆಯಾದ ಮಡಿವಾಳರ ವಾಷಿಂಗ್‌ಮಿಷನ್ ಉಬ್ಬೆ
ಐಡಿಎಸ್‌ಎಂಟಿ ಅಂಗಡಿ ಮಳಿಗೆಗಳ ಬಹಿರಂಗ ಹರಾಜು
ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ನಗರಸಭೆಯಿಂದ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ೨೯ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಎಲ್ಲ ೨೯ ಅಂಗಡಿಗಳ ಪೈಕಿ ಬಹುತೇಕ ಅಂಗಡಿಗಳು ಹರಾಜಿನಲ್ಲಿ ವಿಲೇಯಾಗಿದ್ದು ಮೂರ್ನಾಲ್ಕು ಅಂಗಡಿಗಳಿಗೆ ಹರಾಜಿನಲ್ಲಿ ಯಾರೂ ಬಿಡ್ ಮಾಡದಿದ್ದರಿಂದ ಅಂತಹ ಅಂಗಡಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.
ಈ ಮೊದಲೆ ನಿರ್ದಿಷ್ಟ ಅಂಗಡಿಗೆ ಮುಂಗಡ ಪಾವತಿಸಿದ್ದವರು ಮಾತ್ರ ಹರಾಜಿನಲ್ಲಿ ಭಾಗವಹಿಸಿ ಬಿಡ್ ನೀಡಿದರು.
ಒಟ್ಟು ೨೯ ಅಂಗಡಿಗಳಿದ್ದು ಅದರಲ್ಲಿ ಒಂದು ಅಂಗಡಿಯನ್ನು ವಿಕಲಚೇತನರಿಗೆ ಹಾಗು ಐದು ಅಂಗಡಿಗಳನ್ನು ಪರಿಶಿಷ್ಟ ಜಾತಿಗೆ ಹಾಗೂ ಎರಡು ಅಂಗಡಿಗಳನ್ನು ಪರಿಶಿಷ್ಟ ಪಂಗಡದವರಿಗೆ ಉಳಿದ ೨೧ ಅಂಗಡಿಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಹರಾಜು ಪ್ರಕ್ರಿಯೆಯ ಪ್ರಾರಂಭದಲ್ಲಿ ವಿಕಲಚೇತನರ ಹಾಗು ಪ.ಜಾ ಹಾಗೂ ಪ.ಪಂ ದವರಿಗೆ ಮೀಸಲು ಇಟ್ಟ ಅಂಗಡಿಗಳ ಹರಾಜು ನಡೆಸಲಾಯಿತು. ನಂತರ ಇತರೆ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದ ಅಂಗಡಿಗಳ ಹರಾಜನ್ನು ನಡೆಸಲಾಯಿತು.
ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ಈ ಅಂಗಡಿಗಳಿಗೆ ಇಲಾಖೆಯ ನಿಯಮದಂತೆ ಬಾಡಿಗೆಯನ್ನು ಮೊದಲೆ ನಿಗಪಡಿಸಿದ್ದು ಮುಂಗಡ ಠೇವಣಿ ಹಣಕ್ಕೆ ಮಾತ್ರ ಬಿಡ್ ನೀಡಲಾಯಿತು.
ಈ ಹಿಂದೆಯು ಈ ಅಂಗಡಿ ಮಳಿಗೆಗಳ ಹರಾಜನ್ನು ನಿಗದಿಪಡಿಸಲಾಗಿತ್ತಾದರೂ ಈ ಮೊದಲು ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದಕ್ಕೂ ಮುನ್ನ ಮೊದಲಿನಿಂದಲು ಅಂಗಡಿಗಳನ್ನು ಇಟ್ಟುಕೊಂಡಿದ್ದವರು ತಮಗೆ ಮೊದಲ ಆಧ್ಯತೆಯನ್ನು ನೀಡಬೇಕೆಂದು ಐಡಿಎಸ್‌ಎಂಟಿ ಯೋಜನೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು. ಇದರಿಂದ ಹರಾಜು ಮುಂದೂಡಲ್ಪಟ್ಟಿದ್ದು ಗುರುವಾರ ಹರಾಜು ಪ್ರಕ್ರಿಯೆ ನಡೆಯಿತು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ವೆಂಕಟಸ್ವಾಮಿ, ಸಿಕಂದರ್, ನವಾಜ್, ಆಯುಕ್ತ ಹರೀಶ್ ಮತ್ತಿತರರು ಹಾಜರಿದ್ದರು.
ಕನ್ನಡ ಸಾಹಿತ್ಯ ಜನಪರವಾದದ್ದು
ಕನ್ನಡ ಸಾಹಿತ್ಯವು ಆರಂಭದಿಂದ ಇಂದಿನವರೆಗೂ ಜನಪರವಾಗಿಯೇ ನಡೆದು ಬಂದಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಹನ್ನೊಂದನೇ ಮೈಲಿಕಲ್ಲಿನ ಶ್ರೀ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ, ದನಿಯಾಗುವ ಹಂಬಲದಿಂದ ಹುಟ್ಟಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ನೂರ ಒಂದು ವರ್ಷಗಳ ಸಾಧನಾ ಪಯಣದಲ್ಲಿ ಕನ್ನಡ ನಾಡು-ನುಡಿಗಾಗಿ ನಡೆದ ಎಲ್ಲ ಚಟುವಟಿಕೆಗಳಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಕಳೆದ ಒಂದು ಶತಮಾನದಿಂದ ಕನ್ನಡ ಜನತೆ ಪರಿಷತ್ತಿನೊಡನೆ ನಿಕಟ ಸಂಬಂಧವಿರಿಸಿಕೊಂಡಿದೆ. ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನ ಸೇರುವುದೇ ಇದಕ್ಕೆ ಅತ್ಯುತ್ತಮ ನಿದರ್ಶನ. ಪರಿಷತ್ತು ನಮ್ಮದು ಎಂಬ ಭಾವ ಕನ್ನಡಿಗರ ಮನಸ್ಸಿಗಿದೆ. ಇನ್ನು ಯಾವ ಸಮ್ಮೇಳನಗಳಿಗೂ ಪರಿಷತ್ತಿನ ಸಮ್ಮೇಳನಕ್ಕಿರುವ ಸಾಂಸ್ಕೃತಿಕ, ಸಾಮಾಜಿಕ ಮಹತ್ತ್ವವಿಲ್ಲ ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಭೌಗೋಳಿಕವಾಗಿ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಕರ್ನಾಟಕದಲ್ಲಿ ಭಾಷೆ, ಚರಿತ್ರೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆದಷ್ಟು ಮತ್ತ್ಯಾವ ರಾಜ್ಯಗಳಲ್ಲೂ ನಡೆದಿಲ್ಲ. ಕನ್ನಡ ಭಾಷೆಯ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ. ಕನ್ನಡ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
‘ಕರ್ನಾಟಕ ಏಕೀಕರಣ’ ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಹತ್ತನೇ ತರಗತಿಯ ಡಿ.ಎಸ್.ನವೀನ್,ಶುಭಾ ಮತ್ತು ಕೆ.ಎಸ್.ಪ್ರಕಾಶ್ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಎ.ಪಿ.ಜೆ ಅಬ್ದುಲ್ ಕಲಾಂ’, ‘ಸಿ.ಎನ್.ಆರ್.ರಾವ್’ ಕುರಿತ ಪುಸ್ತಕಗಳು ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಭಾವಗೀತೆ ಹಾಡಿದ ನಿಖಿಲ್‌ದೇವ್, ಏಕಪಾತ್ರಾಭಿನಯ ನಡೆಸಿದ ಎನ್.ಕೆ.ಮಂಜುನಾಥ್, ಜನಪದ ಗೀತೆ ಹಾಡಿದ ಎಸ್.ಎನ್.ನವೀನ್‌ಕುಮಾರ್ ಮತ್ತು ಜೆ.ಕೆ.ಶ್ರೀಕಾಂತ್ ಅವರಿಗೆ ಕಸಾಪ ತಾಲ್ಲೂಕು ಘಟಕದಿಂದ ಪುಸ್ತಕಗಳನ್ನು ನೀಡಲಾಯಿತು.
ಮುಖ್ಯಶಿಕ್ಷಕಿ ಎ.ಆರ್.ಕುಬ್ರಾಮುಬೀನ್, ಶಿಕ್ಷಕರಾದ ಕೆ.ಪಿ.ಶಿವಕುಮಾರ್, ಬಿ.ಈಶ್ವರರೆಡ್ಡಿ, ಡಿ.ಪಿ.ಮುರಳೀಧರ, ಪದ್ಮಿನಿ.ಅ.ರಜಪೂತ, ಎಂ.ವಿ.ಪ್ರೇಮಕುಮಾರ್, ಸಿ.ಎಸ್.ನಾಗಮಣಿ, ಬ್ರಹ್ಮಿಣಿ ಮತ್ತಿತರರು ಹಾಜರಿದ್ದರು.
ಗ್ರಾಮೀಣ ಶಿಬಿರ
ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಶಾಲೆಯಲ್ಲಿ ಬುಧವಾರ ಪ್ರಾರಂಭಗೊಂಡ ಹತ್ತು ದಿನಗಳ ಗ್ರಾಮೀಣ ಶಿಬಿರದಲ್ಲಿ ಭಾಗವಹಿಸಿರುವ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್‌ಡಬ್ಲೂ ವಿದ್ಯಾರ್ಥಿಗಳು ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಸಹಯೋಗದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಪೌಷ್ಠಿಕತೆ, ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದರು. ಡಾ.ಶ್ರೀದೇವಿ, ಸುಮಂತ್, ತುಷಾರ್, ಮುಖ್ಯ ಶಿಕ್ಷಕ ಎಸ್.ಎಂ.ಆದಿನಾರಾಯಣ, ಸೇವಾದಳ ವೆಂಕಟರೆಡ್ಡಿ ಹಾಜರಿದ್ದರು.
ರಾಜೀವ್ ಗಾಂಧಿ ಚೈತನ್ಯ ತರಬೇತಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಚೆಕ್ ವಿತರಣೆ
ವೃತ್ತಿಗಳಲ್ಲಿ ಕೌಶಲ್ಯ ವೃದ್ದಿಸಿಕೊಳ್ಳುವುದು ಅತಿ ಮುಖ್ಯ. ಅದರಲ್ಲೂ ಗ್ರಾಮೀಣ ಭಾಗದ ಯುವ ಜನಾಂಗವು ವೃತ್ತಿ ಕೌಶಲ್ಯ ಕೊರತೆಯಿಂದಲೆ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರಲ್ಲದೆ ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜೆ.ಮಂಜುನಾಥ್ ತಿಳಿಸಿದರು.
ನಗರದ ಭಕ್ತರಹಳ್ಳಿ ವೆಂಕಟರಾಯಪ್ಪನವರ ಫ್ಯಾಕ್ಟರಿ ಸಭಾಂಗಣದಲ್ಲಿ ನಡೆಯುತ್ತಿದ್ದ ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಸಂಜೀವಿನ ಸ್ವಯಂ ಉದ್ಯೋಗ ತರಬೇತಿ ಶಿಬಿರ ಬುಧವಾರ ಮುಕ್ತಾಯವಾಗಿದ್ದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರವು ಎಲ್ಲ ಕೌಶಲ್ಯ ಅಗತ್ಯವುಳ್ಳ ತರಬೇತಿಗಳಿಗಾಗಿ ಪ್ರತ್ಯೇಕ ಇಲಾಖೆಯನ್ನೆ ರಚಿಸಿದ್ದು ಆ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಸ್ವಯಂ ಉದ್ಯೋಗ ಕೈಗೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತೆ ಹೇಳಿದ ಅವರು, ಎಲ್ಲ ಶೌಚಾಲಯವನ್ನು ನಿರ್ಮಿಸಿಕೊಂಡು ಬಯಲು ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಶಿಬಿರಾರ್ಥಿಗಳು ತಮ್ಮ ತರಬೇತಿ ಅವಧಿಯಲ್ಲಿನ ಅನಿಸಿಕೆಗಳು, ತರಬೇತಿಯಿಂದ ಆದ ಅನುಕೂಲಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ತರಬೇತಿ ಅವಧಿಯಲ್ಲಿನ ಭತ್ಯದ ಚೆಕ್‌ಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ಕರ್ನಾಟಕ ವಿದ್ಯುತ್ ಮಂಡಳಿಯ ನಿರ್ದೆಶಕ ಭಕ್ತರಹಳ್ಳಿ ಮುನೇಗೌಡ, ಕೃಷ್ಣಾ ಪ್ರಗತಿ ಬ್ಯಾಂಕ್‌ನ ವ್ಯವಸ್ಥಾಪಕ ಬಸವರಾಜ್, ಸೌಂದರ್ಯ ಪಟ್ಟಣ ಹಾಗೂ ಗ್ರಾಮೀಣ ಸಂಸ್ಥೆಯ ವೆಂಕಟರೋಣಪ್ಪ ಮತ್ತಿತರರು ಹಾಜರಿದ್ದರು.
ಬಚ್ಚಹಳ್ಳಿ ಗ್ರಾಮದಲ್ಲಿ ವಿಶೇಷ ಪೂಜೆ
ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಪುರಾತನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಕೊನೆಯ ಕಾರ್ತಿಕ ಮಾಸದ ಸೋಮವಾರ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಸಲ್ಲಿಸಲಾಯಿತು. ಎರಡು ದಿನಗಳ ಕಾಲ ನಡೆದ ಪೂಜಾ ವಿಧಿಗಳು ಮಂಗಳವಾರದವರೆಗೂ ಸಾಗಿತು.
ಗ್ರಾಮದ ಜನತೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಬಸವೇಶ್ವರ ಸ್ವಾಮಿರವರಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ದೇವರಿಗೆ ಹೋಮಗಳು, ಎರಡು ದಿನಗಳ ಕಾಲ ನಡೆಯಿತು ಕೋಲಾರ, ಬೆಂಗಳೂರು, ಬಂಗಾರಪೇಟೆ ಹಾಗೂ ಇನ್ನೂ ಹಲವಾರು ಊರುಗಳಿಂದ ಭಕ್ತಧಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿದರು.
ಶ್ರೀ ಬಸವೇಶ್ವರ ಸ್ವಾಮಿ ದೇವರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ದೇವರಿಗೆ ಗ್ರಾಮದ ಜನರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ವೀರಭದ್ರ ವೇಷದ ವೀರಗಾಸೆ ನೃತ್ಯವನ್ನು ಆಯೋಜಿಸಲಾಗಿತ್ತು.
ತೀರ್ಥ ಪ್ರಸಾದಗಳನ್ನು ವಿನಿಯೋಗಿಸಿದರು.
ರಕ್ತದಾನ ಶಿಬಿರ
ನಗರದ ದಿ ಕ್ರೆಸೆಂಟ್ ಶಾಲಾ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಿ ಕ್ರೆಸೆಂಟ್ ಶಾಲೆ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಆಯೋಜಿಸಲಾಗಿದೆ.
ಮೇಲೂರು ಕೆನರಾ ಬ್ಯಾಂಕ್ ಮುಂದೆ ಹಾಲು ಉತ್ಪಾದಕರ ಪ್ರತಿಭಟನೆ
ಹಾಲು ಉತ್ಪಾದಕರಿಗೆ ಕನಿಷ್ಠ ಅಗತ್ಯವಿರುವಷ್ಟಾದರೂ ಹಣವನ್ನು ನೀಡಿ ಎಂದು ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿಗೆ ದಿಗ್ಭಂಧನೆ ಹಾಕಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಮೇಲೂರು ಗ್ರಾಮದ ಕೆನರಾ ಬ್ಯಾಂಕ್‌ನ ಬಳಿ ಬುಧವಾರ ನಡೆಯಿತು.
ಬೆಳಿಗ್ಗೆ 9 ಗಂಟೆಯ ಹೊತ್ತಿಗೆಲ್ಲಾ ಬ್ಯಾಂಕ್ ಮುಂದೆ ಜಮಾಯಿಸಿದ್ದ ಹಾಲು ಉತ್ಪಾದಕರು, ವ್ಯವಸ್ಥಾಪಕಿ ಮಂಜುಳಾ ಮತ್ತು ಸಿಬ್ಬಂದಿ ಬ್ಯಾಂಕ್ ಬೀಗಲು ತೆಗೆಯಲು ಬಿಡದೆ, ಜನರ ಸಮಸ್ಯೆಯನ್ನು ನಿಮ್ಮಿಂದ ಬಗೆಹರಿಸಲು ಆಗುತ್ತಿಲ್ಲ ತಮ್ಮ ಮೇಲಧಿಕಾರಿಗಳನ್ನು ಕರೆಸಿ ಎಂದು ಒತ್ತಾಯಿಸಿದರು.
ಮೇಲೂರು ಪಂಚಾಯಿತಿ ವ್ಯಾಪ್ತಿಯ ಮೇಲೂರು, ಚೌಡಸಂದ್ರ, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ ಗ್ರಾಮಗಳ ಹಾಲು ಉತ್ಪಾದಕರು ಬ್ಯಾಂಕ್ ಮುಂದೆ ಸೇರಿದ್ದರು.
ಈ ಹಿಂದೆ ಹಾಲು ಉತ್ಪಾದಕರಿಗೆ ಕಾರ್ಯದರ್ಶಿಗಳ ಮೂಲಕ ಸಹಕಾರ ಸಂಘಗಳಲ್ಲಿ ವಿತರಿಸಲಾಗುತ್ತಿತ್ತು. ನವೆಂಬರ್ 8 ರ ಕೇಂದ್ರ ಸರ್ಕಾರದ ಆದೇಶದ ನಂತರ ಹಾಲು ಉತ್ಪಾದಕರ ಖಾತೆಗಳಿಗೆ ಅವರಿಗೆ ಸೇರಬೇಕಾದ ಹಣವನ್ನು ಜಮೆ ಮಾಡಲಾಯಿತು. ಆದರೆ ಬ್ಯಾಂಕ್‌ನವರು ಪ್ರತಿಯೊಬ್ಬರೂ ಕೇವಲ 2000 ರೂಗಳನ್ನು ಮಾತ್ರ ಪಡೆಯಬೇಕೆಂದು ನಿಯಮ ರೂಪಿಸಿರುವುದು ಹಾಲು ಉತ್ಪಾದಕರಿಗೆ ತೊಂದರೆಯಾಗಿದೆ. ನಾವು ನಮ್ಮ ನಿತ್ಯದ ಕೆಲಸವನ್ನು ಬಿಟ್ಟು ಪ್ರತಿ ದಿನ ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಹಾಲು ಬಿಲ್ 3 ಸಾವಿರದಿಂದ 10 ಸಾವಿರವರೆಗೂ ಇರುತ್ತದೆ. ಕುಟುಂಬ ನಿರ್ವಹಣೆ, ಹಸುವಿಗೆ ಮೇವು, ಬೂಸಾ, ಹಿಂಡಿ ಮುಂತಾದವುಗಳಿಗೆ ಹಣ ಬೇಕಿರುತ್ತದೆ. ನಮ್ಮ ಹಣವನ್ನು ಒಂದೇ ಬಾರಿ ನೀಡಿ ಎಂದು ಒತ್ತಾಯಿಸಿದರು.
ಬ್ಯಾಂಕ್ ವ್ಯವಸ್ಥಾಪಕರು ಅವರಿಗೆ ಬೇಕಿರುವವರನ್ನು ಕರೆಯಿಸಿ ಅವ್ಯವಹಾರಗಳು ನಡೆಸುತ್ತಿದ್ದರೆ. ಬ್ಯಾಂಕ್ ಸಿಬ್ಬಂದಿ ಸಹಾಯದಿಂದ ಶ್ರಿಮಂತರು ಕುಳಿತಲ್ಲಿಯೆ ಚಿಲ್ಲರೆ ತರಿಸಿಕೊಳ್ಳುತ್ತಿದ್ದಾರೆ, ಬಡವರು ಮಾತ್ರ ಸಾಲಿನಲ್ಲಿ ದಿನಗಟ್ಟಲೆ ನಿಲ್ಲುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪೊಲೀಸರು ಇತ್ತ ಬರಲಿಲ್ಲ. ಪೊಲೀಸರಿಗೆ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಮಳ್ಳೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಬ್ಯಾಂಕ್ ವ್ಯವಸ್ಥಾಪರೊಂದಿಗೆ ಚರ್ಚಿಸಿ ಹಾಲು ಉತ್ಪಾದಕರಿಗೆ 6 ಸಾವಿರ ರೂಗಳು, ಉಳಿದ ಗ್ರಾಹಕರಿಗೆ 4 ಸಾವಿರ ರೂಗಳನ್ನು ನೀಡುವಂತೆ ಮನವೊಲಿಸಿದರು. ಆ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ವಿದ್ಯಾರ್ಥಿಗಳಿಂದ ಪಿಟಿಷನ್ ಹಾಕಿಸುತ್ತೇನೆ
‘ಮಾನವ ಹಕ್ಕುಗಳ ಆಯೋಗಕ್ಕೆ ವಿದ್ಯಾರ್ಥಿಗಳಿಂದ ಪಿಟಿಷನ್ ಹಾಕಿಸುತ್ತೇನೆ. ಅದರ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯಾ. ನಿಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ’ ಎಂದು ಪರಿಸರ ತಜ್ಞ ಡಾ. ಅ. ನ.ಯಲ್ಲಪ್ಪರೆಡ್ಡಿ ಗುಡುಗಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಿ.ಎಂ.ಸಿ.ಎ., ನಮ್ಮ ಮುತ್ತೂರು ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಜಂಗಮಕೋಟೆ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಶಾಲೆಯ ಗೋಡೆ ಹಾಗೂ ದಾರಿಯುದ್ದಕ್ಕೂ ಮೂತ್ರ ವಿಸರ್ಜನೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಜ್ಯೋತಿ ಶಾಲೆಯ ತೇಜಸ್ವಿನಿ ಹೇಳಿದಾಗ, ಅವರು ಗ್ರಾಮ ಪಂಚಾಯಿತಿಯ ಕಾರ್ಯ ವೈಖರಿಯ ಕುರಿತು ಈ ರೀತಿಯಾಗಿ ಹೇಳಿದರು.
ಬೆಂಗಳೂರಿನಲ್ಲಿ ಸಾವಿರಾರು ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದಾರೆ, ನಿಮಗೆ ನಾಲ್ಕು ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಆಗುತ್ತಿಲ್ಲವೆ. ಮೂರು ತಿಂಗಳಷ್ಟೆ ನಿಮಗೆ ಗಡುವು. ಅಷ್ಟರೊಳಗೆ ಶೌಚಾಲಯವನ್ನು ನಿರ್ಮಾಣ ಮಾಡದಿದ್ದಲ್ಲಿ ವಿದ್ಯಾರ್ಥಿಗಳಿಂದಲೇ ಪಿಟಿಷನ್ ಹಾಕಿಸುತ್ತೇನೆ ಎಂದರು.
ಶಾಲೆಗೆ ಬೇಕು ಭದ್ರತೆ: ‘ನಮ್ಮ ಶಾಲೆಯ ಕಾಂಪೋಂಡ್ ಒಳಗೆ ಪ್ರತಿ ದಿನ ವಾಲಿಬಾಲ್ ಆಡಲು ಕೆಲವಾರು ಯುವಕರು ಬರುತ್ತಾರೆ. ನಾವು ಕಷ್ಟಪಟ್ಟು ಬೆಳೆಸಿದ್ದ ಗಿಡಗಳನ್ನೆಲ್ಲಾ ನಾಶಪಡಿಸಿದ್ದಾರೆ. ಹೊಸದಾಗಿ ನಿರ್ಮಿಸಿರುವ ಶೌಚಾಲಯಗಳ ಟೈಲ್ಸ್ ಮುರಿದಿದ್ದಾರೆ. ರಾತ್ರಿಯ ವೇಳೆ ಶಾಲೆಯು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಭಾನುವಾರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬರುವ ಶಿಕ್ಷಕರಿಗೆ ಗದರಿ ಕಳುಹಿಸುವ ಪರಿಸ್ಥಿತಿಯಿದೆ. ಶಾಲೆಯ ಶಿಕ್ಷಕರೇ ಗೇಟ್ ಮಾಡಿಸುತ್ತಿದ್ದಾರೆ. ನಮಗೆ ಭದ್ರತೆ ಬೇಕು’ ಎಂದು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶ್ವೇತಾ ಕೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ವೆಂಕಟೇಶ್ ಮಾತನಾಡಿ, ಶಾಲೆಯು ಪವಿತ್ರವಾದ ಸ್ಥಳ. ನಮ್ಮ ಗ್ರಾಮದ ಮಕ್ಕಳೇ ಓದುತ್ತಿರುವುದು ಎಂಬ ಭಾವನೆ ಗ್ರಾಮಸ್ಥರಿಗೆ ಇರಬೇಕು. ಗ್ರಾಮ ಪಂಚಾಯಿತಿಯಿಂದ ಕ್ರೀಡೆಗೆ ಬೇರೆ ಸ್ಥಳ ಮಾಡಿಕೊಡಿ. ಶಾಲೆಯ ಕಾಂಪೋಡ್ ಒಳಗೆ ಕಿಡಿಗೇಡಿಗಳು ಬರದಂತೆ ಪೊಲೀಸರಿಗೆ ದೂರು ನೀಡಿ ಎಂದು ಹೇಳಿ ಸಭೆಯಲ್ಲಿ ಹಾಜರಿದ್ದ ಎಎಸ್‌ಐ ನಾರಾಯಣಸ್ವಾಮಿ ಅವರಿಗೆ ಕ್ರಮ ಕೈಗೊಳ್ಳುವಂತೆ ಹೇಳಿದರು.
ಬೀದಿನಾಯಿಗಳ ಸಮಸ್ಯೆ: ಬೀದಿ ಬದಿಯ ಕೋಳಿ ಮಾಂಸದ ಅಂಗಡಿಗಳಿಂದಾಗಿ ಬೀದಿ ನಾಯಿಗಳು ಹೆಚ್ಚಾಗಿವೆ. ಇದರಿಂದಾಗಿ ಅಪಘಾತಗಳು ಒಂದೆಡೆಯಾದರೆ, ವಿದ್ಯಾರ್ಥಿಗಳು ನಾಯಿ ಕಡಿತಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕೊಡಿಸಿ ಎಂದೊಬ್ಬ ವಿದ್ಯಾರ್ಥಿ ಹೇಳಿದರು. ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಂಬಿಕಾ ಮಾತನಾಡಿ, ಪ್ರತಿದಿನ 10 ರಿಂದ 12 ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆಗೆ ಬರುತ್ತಾರೆ ಎಂದು ಹೌಹಾರುವ ಮಾಹಿತಿ ನೀಡಿದರು. ತಕ್ಷಣವೇ ಪ್ರತಿಕ್ರಿಯಿಸಿದ ಪರಿಸರ ತಜ್ಞ ಡಾ. ಅ. ನ.ಯಲ್ಲಪ್ಪರೆಡ್ಡಿ, ‘ನಾಯಿಗಳ ಕಡಿತದಿಂದ ಈ ಗ್ರಾಮ ವಿಶ್ವ ದಾಖಲೆ ಮಾಡುತ್ತಿದೆ. ನಾಯಿಗಳ ಸಂಖ್ಯೆ ಹೆಚ್ಚಲು ಕಾರಣವೇನು. ತಕ್ಷಣ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಿ’ ಎಂದರು.
ವಿವಿಧ ಸಮಸ್ಯೆಗಳು: ಜಂಗಮಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಸಮಸ್ಯೆಯನ್ನು ವಿದ್ಯಾರ್ಥಿ ಜೆ.ಎನ್.ಪ್ರಶಾಂತ್‌ಕುಮಾರ್ ಪ್ರಸ್ತಾಪಿಸಿದರೆ, ಜಂಗಮಕೋಟೆ ತೋಟಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಕುಂಟೆಯ ತ್ಯಾಜ್ಯದ ಬಗ್ಗೆ ವಿದ್ಯಾರ್ಥಿ ಭರತ್ ಬೆಳಕುಚೆಲ್ಲಿದರು. ವಿದ್ಯಾರ್ಥಿ ಮುನಿರಾಜು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಂದಿನ ಚರಂಡಿಯ ಸ್ವಚ್ಛಗೊಳಿಸದ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಆಫ್ರಿರ್ ಜಂಗಮಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಯಲ್ಲಿದ್ದು, ಬಸ್ ನಿಲ್ದಾಣದ ಬಳಿಯಿರುವುದರಿಂದ ಸ್ಥಳಾಂತರಗೊಳಿಸಲು ಕೋರಿದರು. ಜ್ಯೋತಿ ಶಾಳೆಯ ತೇಜಸ್ವಿಸಿ ರಸ್ತೆ ವೇಗ ನಿಯಂತ್ರಕಗಳನ್ನು ಶಾಲೆಯ ಬಳಿ ಅಳವಡಿಸಬೇಕು ಎಂದು ಕೇಳಿದರು.
ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರವನ್ನು ಕಂಡುಕೊಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ವೆಂಕಟೇಶ್ ಕ್ರಮ ಕೈಗೊಂಡಿದ್ದು ಸಭೆಯ ವಿಶೇಷವಾಗಿತ್ತು.
ಸಭೆಯನ್ನು ಮುತ್ತುಗದ ಗಿಡವನ್ನು ಶಾಲೆಯ ಆವರಣದಲ್ಲಿ ಗಣ್ಯರು ನೆಡುವ ಮೂಲಕ ಉದ್ಘಾಟಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ, ಕಾರ್ಯದರ್ಶಿ ಗಣೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್ ಜಾನ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಫಯಾಜ್, ಸಯ್ಯದ್ ಸನ್ವರ್‌ಪಾಷ, ನೋಡಲ್ ಅಧಿಕಾರಿ ದೇವೇಗೌಡ, ಸಿ.ಎಂ.ಸಿ.ಎ ಸಂಸ್ಥೆಯ ಮರಳಪ್ಪ, ವೈದ್ಯೆ ಡಾ.ಅಂಬಿಕಾ, ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೋಪಾಲ್, ಕಾರ್ಮಿಕ ಇಲಾಖೆಯ ರಮೇಶ್, ಮುಖ್ಯ ಶಿಕ್ಷಕ ಈರಯ್ಯ, ಶಿಕ್ಷಕರಾದ ಬೈರಾರೆಡ್ಡಿ, ಮಂಜುನಾಥ್, ನಾರಾಯಣಸ್ವಾಮಿ, ನಾಗರತ್ನ, ಲತಾ, ಲಾಲಾಸಿಂಗ್‌ರಾಥೋಡ್ ಮತ್ತಿತರರು ಹಾಜರಿದ್ದರು.
ಲಕ್ಷ ದೀಪೋತ್ಸವ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಲಕ್ಷ ದೀಪೋತ್ಸವವನ್ನು ಆಯೋಜಿಸಲಾಗಿತ್ತು.
ದೇವರಿಗೆ ಅಭಿಷೇಕ, ಬೆಣ್ಣೆ ಅಲಂಕಾರ ಮಾಡಿದ್ದು, ಭಜನೆ ಕಾರ್ಯಕ್ರಮವನ್ನು ನಡೆಸಲಾಯಿತು. ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯ, ಮೇಲೂರು ಚನ್ನಕೇಶವಸ್ವಾಮಿ ದೇವಾಲಯ, ಭಕ್ತರಹಳ್ಳಿಯ ಈಶ್ವರ ದೇವಸ್ಥಾನ, ಶಿಡ್ಲಘಟ್ಟದ ನಗರೇಶ್ವರಸ್ವಾಮಿ, ಬೂದಾಳದ ಮಲೆಮಲ್ಲೇಶ್ವರಸ್ವಾಮಿ ದೇವಾಲಯ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಯು ನಡೆಯಿತು.
ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು
ಕನ್ನಡದ ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ನಮ್ಮನ್ನಗಲಿದ್ದು 1994 ರ ನವೆಂಬರ್ 11ರಂದು. ಈ ತಿಂಗಳ ಕವಿಯಾಗಿ ಅವರನ್ನು ನೆನಪಿಸಿಕೊಳ್ಳುವುದು, ಅವರ ಸಾಹಿತ್ಯ ಓದಿ ಚರ್ಚಿಸುವುದು ಕಸಾಪ ತಾಲ್ಲೂಕು ಘಟಕದ ಉದ್ದೇಶವಾಗಿದೆ.
ಕುವೆಂಪು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ, ಅದೊಂದು ಸಾಹಿತ್ಯದ ಹೆಸರು, ಸಂಸ್ಕೃತಿಯ ಹೆಸರು, ಜನಾಂಗದ ಮತ್ತು ಜನಜೀವನದ ಹೆಸರು. ಕನ್ನಡಿಗರು ‘ನವೆಂಬರ್ ಕನ್ನಡಿಗ’ರಾಗದೆ ನಿತ್ಯ ಕನ್ನಡಿಗರಾಗಬೇಕು, ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು; ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು. ಉತ್ಸಾಹ ಕ್ಷಣಿಕವಾಗಬಾರದು ಎಂದು ಹೇಳಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ ಮಾತನಾಡಿ, ಕನ್ನಡ ಅಳಿಯುತ್ತಿರುವುದು ನಗರ ಪ್ರದೇಶಗಳಲ್ಲಿ ಮಾತ್ರ, ಗ್ರಾಮಾಂತರ ಪ್ರದೇಶಗಳಲ್ಲಿ ಅದು ಸುಸ್ಥಿರವಾಗಿದೆ ಎಂದು ಇದುವರೆಗೆ ನಾವು ತಿಳಿದಿದ್ದೆವು. ಆದರೆ ಈಗ ಅಲ್ಲಿಯೂ ಕನ್ನಡದ ಬೇರುಗಳು ಸಡಿಲವಾಗುತ್ತಿವೆ ಎಂಬುದು ಕಳವಳಕಾರಿ. ಕಾನ್ವೆಂಟ್ ಮೋಹ ಹಳ್ಳಿಗಾಡಿನಲ್ಲೂ ಮೂಡಿ ಬೆಳೆಯುತ್ತಿದೆ. ಜನರ ಬಾಯಲ್ಲಿ ಕನ್ನಡ ಶಬ್ದಗಳು ಮರೆಯಾಗಿ ಇಂಗ್ಲಿಷ್ ಶಬ್ದಗಳು ಅನಗತ್ಯವಾಗಿ ಮೆರೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕುವೆಂಪು ರಚಿಸಿರುವ ಗೀತೆಗಳನ್ನು ಹಾಡಿದರು.
ಗ್ರಾಮ ಪಂಚಾಯತಿ ಸದಸ್ಯೆ ಉಮಾ ಚನ್ನೇಗೌಡ, ನಾಗರಾಜ್, ಚಂದ್ರಶೇಖರ್, ಶ್ರೀರಾಮ್, ನರಸಿಂಹಮೂರ್ತಿ, ಜಗದೀಶ್, ಮಧು, ಚನ್ನಕೇಶವ, ಲಕ್ಷ್ಮೀಪತಿ, ಮನೋಜ್‌ಕುಮಾರ್, ಶ್ರೀನಾಥ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತ ಸಂಘದಿಂದ ರಸ್ತೆ ತಡೆ ಮತ್ತು ಪ್ರತಿಭಟನೆ
ಶಿಡ್ಲಘಟ್ಟ- ಚಿಂತಾಮಣಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ರಸ್ತೆಯ ಧೂಳಿನಿಂದ ಅಕ್ಕಪಕ್ಕದ ರೈತರ ತೋಟಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸೊಣ್ಣೇನಹಳ್ಳಿ ಗೇಟ್ ಬಳಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಿಪರೀತ ಧೂಳಿನಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ಬೆಳೆ, ಮಾವು, ಸಪೋಟ ಮುಂತಾದ ಬೆಳೆಗಳು ನಾಶವಾಗುತ್ತಿದೆ. ರೈತರ ಲಕ್ಷಾಂತರ ರೂಗಳ ಬೆಳೆ ಹಾಳಾಗುತ್ತಿದೆ. ಸೂಕ್ತ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದೆ, ವಿಳಂಬವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ರೈತರು ಕಿಡಿಕಾರಿದರು.
ಗೌರಿಬಿದನೂರಿನಿಂದ ಶ್ರೀನಿವಾಸಪುರದವರೆಗೆ ರಾಷ್ಟ್ರೀಯ ಹೆದ್ದಾರಿ ೨೩೪ ರ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕೆರೆ ಮಣ್ಣನ್ನು ತಂದು ರಸ್ತೆಗೆ ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ಈಗಾಗಲೇ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿದರು.
ಅತ್ಯಲ್ಪ ನೀರಿನಲ್ಲಿ ಈ ಭಾಗದ ರೈತರು ಕಷ್ಟಪಟ್ಟು ರೇಷ್ಮೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಈ ರಸ್ತೆಯ ಧೂಳಿನಿಂದ ಹಿಪ್ಪುನೇರಳೆ ಸೊಪ್ಪು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಸೊಪ್ಪು ದನದ ಮೇವಿಗೂ ಉಪಯುಕ್ತವಾಗಿಲ್ಲ. ರೈತರ ಈ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ಕೊಡಿಸಬೇಕೆಂದು ಪಟ್ಟುಹಿಡಿದರು.
ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ನಿಂತು ಹೋಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಬೇಕೆಂದು ಪಟ್ಟುಹಿಡಿದ ರೈತರಿಗೆ ನಗರಠಾಣೆ ಪಿಎಸ್ಸೈ ನವೀನ್ ಸಮಾಧಾನ ಹೇಳಿ ಠಾಣೆಯಲ್ಲಿ ಕರೆಸಿ ಮಾತನಾಡೋಣ ಎಂದು ಮನವೊಲಿಸಿದರು. ರಸ್ತೆ ಕಾಮಗಾರಿಗೆ ಸಂಬಂಧಿಸಿದ ವ್ಯವಸ್ಥಾಪಕ ನರಸಿಂಹರೆಡ್ಡಿ ಸ್ಥಳಕ್ಕೆ ಆಗಮಿಸಿ ಗುತ್ತಿಗೆದಾರ ಶಿವಾರೆಡ್ಡಿ ಶಬರಿಮಲೈಗೆ ತೆರಳಿದ್ದಾರೆ, ಶುಕ್ರವಾರ ಬರುತ್ತಾರೆ ಎಂದು ತಿಳಿಸಿದಾಗ, ಶುಕ್ರವಾರ ಠಾಣೆಯಲ್ಲಿ ಸಭೆ ಸೇರಲು ತೀರ್ಮಾನಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ದೇವರಾಜು, ಪ್ರಭಾಕರ್, ಗೋವಿಂದ, ದೇವರಾಜಪ್ಪ, ಮುನಿಯಪ್ಪ, ಸಿದ್ದಪ್ಪ, ಕುಮಾರ್, ರಾಮಾಂಜಿನಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಉಚಿತ ಕಣ್ಣಿನ ತಪಾಸಣಾ ಶಿಬಿರ
ನಿರಂತರ ಒತ್ತಡಗಳ ನಡುವೆ ಜೀವನ ಮಾಡುವಂತಹ ನಾಗರಿಕರು ಹಾಗೂ ಒತ್ತಡಗಳ ನಡುವೆ ವ್ಯಾಸಂಗ ಮಾಡುವಂತಹ ವಿದ್ಯಾರ್ಥಿಗಳು ಆಗಾಗ ಕಣ್ಣಿನ ತಪಾಸಣೆಗೆ ಒಳಗಾಗುವುದು ಸೂಕ್ತವೆಂದು ಎ.ಡಿ.ಡಿ. ಇಂಡಿಯಾ ಸಂಸ್ಥೆಯ ಡಾ.ಆನಂದ್ ಹೇಳಿದರು.
ನಗರದ ಬಿ.ಆರ್.ಸಿ.ಕೇಂದ್ರದಲ್ಲಿ ಎ.ಡಿ.ಡಿ. ಇಂಡಿಯಾ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಅಂಗವಿಕಲರ ಒಕ್ಕೂಟದಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಮಾನವನ ದೇಹದಲ್ಲಿನ ಬಹುಮುಖ್ಯ ಅಂಗವಾಗಿರುವ ಕಣ್ಣಿನ ತಪಾಸಣೆಯು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ದೃಷ್ಟಿದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ಸೋರುವಿಕೆ, ಅಭ್ಯಾಸದ ಸಮಯದಲ್ಲಿ ದೃಷ್ಟಿ ಮಂದವಾಗುವುದು ಮುಂತಾದ ಸಮಸ್ಯೆಗಳ ನಿವಾರಣೆಗಾಗಿ ಆಗಾಗ ತಪಾಸಣೆಗೆ ಒಳಪಟ್ಟಾಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಪಾಸಣಾ ಶಿಬಿರದಲ್ಲಿ ನಾಗರಿಕರು, ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಜಾನ್‌ಮುರೆ, ಕೃಷ್ಣಪ್ಪ, ರತ್ನ, ಉಮೇಶ್, ಬಿ.ಆರ್.ಸಿ.ರಮೇಶ್, ರಾಧ, ವಿವೇಕಾನಂದ ಅಂಗವಿಕಲರ ಒಕ್ಕೂಟದ ಸಂತೋಷ್, ಮುನಿರಾಜು, ನಾಗರತ್ನ, ಗಂಗಮ್ಮ, ಹಾಗೂ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಾಜರಿದ್ದರು.
ಸೀತಾರಾಮಾಂಜಿನೇಯ ಬ್ರಹ್ಮರಥೋತ್ಸವ
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್‌ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಪ್ರತಿವರ್ಷದಂತೆ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ಭಾರಿ ವಿಜೃಂಭಣೆಯಿಂದ ಮಂಗಳವಾರ ನೆರವೇರಿಸಲಾಯಿತು, ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ರಥೋತ್ಸವ ಅಂಗವಾಗಿ ದೇವರಿಗೆ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ತಿನಿಸುಗಳ, ಆಟಿಕೆಗಳ, ಗೃಹೋಪಯೋಗಿ ವಸ್ತುಗಳ ಸಾಲು ಸಾಲು ಅಂಗಡಿಗಳಿದ್ದು, ಜನರು ಬತ್ತಾಸು, ಬುರುಗು, ಕಡ್ಲೇಬೀಜವನ್ನು ಕೊಂಡು ತಿನ್ನುತ್ತಿದ್ದುದು ಸಹಜವಾಗಿತ್ತು.
ಮೇವಿನ ಅಭಾವದಿಂದ ಈ ಬಾರಿ ರಾಸುಗಳ ಜಾತ್ರೆಯನ್ನು ನಡೆಸಲಿಲ್ಲ. ಆದರೆ ರಾಸುಗಳಿಗೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಕೂಡ ಜಾತ್ರೆಯಲ್ಲಿ ಮಾರಾಟಕ್ಕಿಟ್ಟಿದ್ದು, ರೈತರು ಕೊಂಡುಕೊಳ್ಳಲು ಅನುಕೂಲವಾಗಿತ್ತು.
ದೇವಾಲಯದ ಧರ್ಮದರ್ಶಿಗಳಾದ ಕೆ.ಬಿ.ಅಯ್ಯಪ್ಪ, ಸಂಚಾಲಕರಾದ ಉದ್ದಂಡಚಾರಿ, ಚನ್ನರಾಯಪ್ಪ, ಸಂಗಪ್ಪ, ಅನಿಲ್‌ಕುಮಾರ್, ಸುಶೀಲಮ್ಮ, ಮುಖಂಡರಾದ ಆಂಜಿನಪ್ಪ, ಭಾಗ್ಯಮ್ಮ ಮತ್ತಿತರರು ಹಾಜರಿದ್ದರು.
ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ
ಶಿಡ್ಲಘಟ್ಟ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಇದೀಗ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ. ನಗರದ ಸ್ವಚ್ಚತೆ ಸೇರಿದಂತೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ೨೦೧೭–೧೮ ನೇ ಸಾಲಿಗೆ ಆಯ-ವ್ಯಯ ಅಂದಾಜುಪಟ್ಟಿ ತಯಾರಿಸಲು ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಬಹುತೇಕ ಜನರ ನಿರೀಕ್ಷೆಯಂತೆ ಮುಂದಿನ ಆರು ತಿಂಗಳೊಳಗೆ ನಗರದ ಎಲ್ಲಾ ವಾರ್ಡುಗಳ ರಸ್ತೆ ಕಾಮಗಾರಿ ಮತ್ತು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ತಾಲ್ಲೂಕಿನ ಈ ತಿಮ್ಮಸಂದ್ರ ಬಳಿಯ ನಲ್ಲಸಾನಿ ಕೆರೆ ಹಾಗು ರಾಜಸಾನಿ ಕೆರಗಳಿಂದ ನಗರಕ್ಕೆ ನೀರು ಪೂರೈಸಲು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದ್ದು ತಮ್ಮ ಅವಧಿಯೊಳಗೆ ಈ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು.
ನಗರದ ವಿವಿಧ ಮುಖಂಡರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸಿದ ಅವರು ದೇಶದಲ್ಲಿಯೇ ಅತ್ಯಂತ ದೊಡ್ಡ ರೇಷ್ಮೆ ಮಾರುಕಟ್ಟೆ ಇರುವ ಶಿಡ್ಲಘಟ್ಟಕ್ಕೆ ಯಾರಾದರೂ ಹೊಸಬರು ಬಂದರೆ ಯಾವುದೇ ನಾಮಫಲಕಗಳಿಲ್ಲದೇ ಪರದಾಡುವುದರಿಂದ ನಗರಸಭೆಯಿಂದ ನಗರದ ನಾಲ್ಕು ದಿಕ್ಕುಗಳಲ್ಲಿಯೂ ಬೃಹತ್ ಸ್ವಾಗತ ನಾಮಫಲಕ ಅಳವಡಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು. ಒಂದು ವೇಳೆ ತಾವು ಮಾಡದಿದ್ದಲ್ಲಿ ಮುಂದಿನ ವರ್ಷದ ತಮ್ಮ ಶಾಸಕರ ಅನುದಾನದಲ್ಲಿ ತಾವೇ ನಿರ್ಮಿಸುವುದಾಗಿ ತಿಳಿಸಿದರು.
ಮುಂದಿನ ವರ್ಷದಲ್ಲಿ ನಗರದಲ್ಲಿ ೧೦ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು.
ನಗರಸಭೆಗೆ ಹೆಚ್ಚಿನ ಅನುದಾನ ಬರಬೇಕಾದರೆ ಅದಕ್ಕೆ ನಮ್ಮ ನಗರಸಭೆಯ ಆದಾಯ ತೋರಿಸಬೇಕಾಗುತ್ತದೆ. ಹಾಗಾಗಿ ತಾವೆಲ್ಲರೂ ಸಕಾಲದಲ್ಲಿ ನಗರಸಭೆಗೆ ಆದಾಯ ತರುವ ಬಾಡಿಗೆ, ಕಂದಾಯ, ನೀರಿನ ಬಿಲ್ ಮುಂತಾದವನ್ನು ಪಾವತಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ ಮಾತನಾಡಿ, ನಗರದಲ್ಲಿ ಕುಡಿಯುವ ನೀರು ಸೇರಿದಂತೆ ಸ್ವಚ್ಚತೆಯ ಬಗ್ಗೆ ಜನರಿಗಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಈ ಹಿಂದೆ ನಗರಸಭೆಯ ಪೌರ ಕಾರ್ಮಿಕರಿಗೆ ಸುಮಾರು ಆರು ತಿಂಗಳ ಸಂಬಳ ನೀಡಿರಲಿಲ್ಲ. ಇದೀಗ ತಾವು ಅಧಿಕಾರಕ್ಕೆ ಬಂದ ಮೇಲೆ ಪೌರ ಕಾರ್ಮಿಕರ ಸಂಬಳಗಳನ್ನು ಮಾಡಿಸಿದ್ದು ಮುಂದಿನ ಡಿಸೆಂಬರ್ ಒಳಗೆ ಎಲ್ಲರಿಗೂ ಸಂಬಳ ಮಾಡಲಾಗುತ್ತದೆ ಎಂದರು.
ನಗರಸಭೆ ಆಯುಕ್ತ ಎಚ್.ವಿ.ಹರೀಶ್, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್, ಸದಸ್ಯರಾದ ಜಬೀವುಲ್ಲಾ, ಮಾಜಿ ಸದಸ್ಯರಾದ ಕದಿರಿ ಯೂಸುಫ್, ಸೀನಪ್ಪ ಮತ್ತಿತರರು ಹಾಜರಿದ್ದರು.
ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳು ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆಯಾದರೂ ಸರ್ಕಾರದ ಹಣಕಾಸಿನ ಪರಿಸ್ಥಿತಿಯಲ್ಲಿ ಸಮಸ್ಯೆಯಿರುವುದರಿಂದ ಅಗತ್ಯವಿರುವಷ್ಟು ಅನುಧಾನ ಬಿಡುಗಡೆಯಾಗುತ್ತಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾದ ತುಮ್ಮನಹಳ್ಳಿಯಲ್ಲಿ ಶನಿವಾರ ಸುಮಾರು ೧೦೩ ಲಕ್ಷ ವೆಚ್ಚದಲ್ಲಿ ಮಳಮಾಚನಹಳ್ಳಿ- ಕೈವಾರ ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಸೇರಿದಂತೆ ದೊಡ್ಡದಾಸರಹಳ್ಳಿಯಲ್ಲಿ ೧೪.೯ ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಮಲ್ಲಶೆಟ್ಟಿಪುರ ಗ್ರಾಮದಲ್ಲಿ ೧೦ ಲಕ್ಷ ರೂ ವೆಚ್ಚದ ಜಗಜೀವನರಾಂ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ರಸ್ತೆಗಳು ಸಾಕಷ್ಟು ಹದೆಗೆಟ್ಟಿದ್ದು ಅಗತ್ಯಕ್ಕನುಸಾರವಾಗಿ ಕ್ಷೇತ್ರದಾದ್ಯಂತ ರಸ್ತೆ ಕಾಮಗಾರಿಗಳನ್ನು ಮಾಡುತ್ತಿದ್ದು ಇನ್ನೂ ಮಾಡಬೇಕಾಗಿರುವುದು ಇರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಮಾಡಲಾಗುವುದು ಎಂದರು.
ತಾವು ಶಾಸಕರಾದ ಮೇಲೆ ಬಂಗಾರಪೇಟೆ- ಬಾಗೇಪಲ್ಲಿ ರಸ್ತೆಯ ಗೋಣಿಮರದಹಳ್ಳಿಯವರೆಗೂ ೬ ಕಿ.ಮೀ ರಸ್ತೆ ಕಾಮಗಾರಿ ಮುಗಿದಿದ್ದು ಇದೀಗ ಇನ್ನೂ ೧೦ ಕಿ.ಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು ಗೋಣಿಮರದಹಳ್ಳಿಯಿಂದ ಇರಗಪ್ಪನಹಳ್ಳಿಯವರೆಗೂ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸೇರಿದಂತೆ ಮೂಲಭೂತ ಸವಲತ್ತು ಕಲ್ಪಿಸಲು ಕಳೆದ ಮೂರೂವರೆ ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಉಳಿದ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದ ಉದ್ದಗಲಕ್ಕೂ ಓಡಾಡಿ ಅಗತ್ಯಕ್ಕನುಸಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಶ್ರಮವಹಿಸಿದ್ದು ವಿರೋಧ ಪಕ್ಷದಲ್ಲಿರುವ ನಮ್ಮ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನಗಳನ್ನು ತರುವ ಸ್ಥಿತಿಯಿದೆ. ಆದರೂ ಕ್ಷೇತ್ರದಾದ್ಯಂತ ಶಾಸಕರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಸದಸ್ಯರಾದ ಅಂಬರೀಷ್, ಪದ್ಮಮ್ಮ, ರಮೇಶ್, ಮುನಿಯಪ್ಪ, ಮುಖಂಡರಾದ ಟಿ.ಕೆ.ರಾಮಕೃಷ್ಣಪ್ಪ, ಕದಿರಪ್ಪ, ಮುನಿರಾಜು, ನಾರಾಯಣಸ್ವಾಮಿರೆಡ್ಡಿ, ತಿಪ್ಪೇನಹಳ್ಳಿ ಅಂಬರೀಷ್, ನಾರಾಯಣಸ್ವಾಮಿ, ಮುನಿಯಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಲೋಕೇಶ್, ಪಂಚಾಯತ್ ರಾಜ್ ವಿಭಾಗದ ಎಇಇ ಶಿವಾನಂದ, ಗುತ್ತಿಗೆದಾರ ದೇವರಾಜ್ ಮತ್ತಿತರರು ಹಾಜರಿದ್ದರು.
ಗ್ರಾಮೀಣ ಶಿಬಿರದಲ್ಲಿ ಭಾಗವಹಿಸಿರುವ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು
ತಾಲ್ಲೂಕಿನ ಗಾಂಡ್ಲಚಿಂತೆ ಶಾಲೆಯಲ್ಲಿ ಶನಿವಾರ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ದರ್ಶನವಾಗಿತ್ತು. ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್‌ಡಬ್ಲೂ ವಿದ್ಯಾರ್ಥಿಗಳು ಹತ್ತು ದಿನಗಳ ಗ್ರಾಮೀಣ ಶಿಬಿರಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದು, ಶಾಲಾ ವಿದ್ಯಾರ್ಥಿಗಳ ಮುಂದೆ ಅವರು ತಮ್ಮ ಮೂಲ ನೆಲೆಗಳ ಬಗ್ಗೆ ವಿವರಿಸಿ ವಿವಿಧ ರಾಜ್ಯಗಳ ಪರಿಚಯವನ್ನು ಮಾಡಿಕೊಟ್ಟರು.
ಬಿ ಎಸ್ ಡಬ್ಲೂ ವಿದ್ಯಾರ್ಥಿಗಳಲ್ಲಿ ಸಿಕ್ಕಿಂ, ಕೇರಳ, ಕರ್ನಾಟಕ, ತಮಿಳುನಾಡು, ಅರುಣಾಚಲ ಪ್ರದೇಶ, ಡಾರ್ಜಲಿಂಗ್, ಅಸ್ಸಾಂ, ನಾಗಾಲ್ಯಾಂಡ್, ಬಾಂಬೆ, ಆಂಧ್ರಪ್ರದೇಶವಲ್ಲದೆ, ನೆರೆಯ ರಾಷ್ಟ್ರಗಳಾದ ಟಿಬೆಟ್, ನೇಪಾಳದ ಮೂಲದವರು ಇದ್ದಾರೆ. 22 ಮಂದಿ ಗಂಡು ವಿದ್ಯಾರ್ಥಿಗಳು ಮತ್ತು 12 ಮಂದಿ ಹೆಣ್ಣು ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರೊಂದಿಗೆ ಶಾಲೆಯಲ್ಲಿಯೇ ತಂಗಿದ್ದಾರೆ.
‘ಬೆಳಿಗ್ಗೆ 5.30 ರಿಂದ ತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವ ಈ ಶಿಬಿರಾರ್ಥಿಗಳು ಗಂಡ್ಲಚಿಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿ ಮನೆಗೂ ತೆರಳಿ ಜನಜೀವನ, ಆಹಾರಪದ್ಧತಿ, ಉಡುಗೆ ತೊಡುಗೆ, ಆದಾಯ ಮೂಲಗಳು, ಸರ್ಕಾರಿ ಸೌಲಭ್ಯಗಳು, ಕೂಲಿ ಕಾರ್ಮಿಕರು, ಅಂಗವಿಕಲರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಜೊತೆಯಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವ ಶಿಬಿರಾರ್ಥಿಗಳು ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್, ಗ್ರಾಮಕ್ಕೆ ನಾಮಫಲಕ, ಶಾಲೆಗೆ ಕೊಕೋ ಮತ್ತು ವಾಲಿಬಾಲ್ ಕೋರ್ಟ್ ರೂಪಿಸಿಕೊಡುತ್ತಿದ್ದಾರೆ.
ಸಂಜೆವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಗ್ರಾಮದಲ್ಲಿ ವಿಶಿಷ್ಠ ಹಬ್ಬದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ, ಏರೋಬಿಕ್, ಬಾಂಗ್ಡಾ, ವಿವಿಧ ಅಭಿನಯಗೀತೆಗಳನ್ನು ಕಲಿಸುತ್ತಿದ್ದೇನೆ’ ಎಂದು ಸಂಪನ್ಮೂಲ ಶಿಕ್ಷಕ ಸೇವಾದಳ ವೆಂಕಟರೆಡ್ಡಿ ತಿಳಿಸಿದರು.
ಶಿಬಿರದ ಸಂಘಟಕರಾದ ಡಿ. ಅಕ್ಷಯ್ ಮಾಂಡ್ಲಿಕ್, ವಿಯೋಲಾ, ಶಾಲಾ ಮುಖ್ಯ ಶಿಕ್ಷಕ ಎಸ್.ಎಂ.ಆದಿನಾರಾಯಣ, ಶಿಕ್ಷಕರಾದ ನಾಗೇಶ್, ಶ್ರೀನಿವಾಸ್, ರಾಮರೆಡ್ಡಿ, ವಾಣಿ, ಲಲಿತ ಹಾಜರಿದ್ದರು.
ಅಪರೂಪದ ಚಿತ್ತಾರದ ಹಾವು ಪತ್ತೆ
ಕಣ್ಣಿನ ಬಳಿ ಕಾಡಿಗೆ ತೀಡಿದಂತೆ ಇರುವ ಗುರುತಿನಿಂದಾಗಿ ಈ ಹಾವನ್ನು ಸುಂದರಿ ಎಂದು ಕರೆಯುವರು.
ಆಕ್ರಮಣಕಾರಿ ಪ್ರವೃತ್ತಿಯದಾದರೂ ವಿಷಪೂರಿತ ಹಾವಲ್ಲ.
ಚಿತ್ತಾರದ ‘ಸುಂದರಿ’ಯ ಆಕ್ರಮಣಕಾರಿ ಪ್ರವೃತ್ತಿ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ವಿಶೇಷವಾದ ಹಾವೊಂದು ಕಂಡು ಬಂದಿದೆ. ಅದುವೇ ಟ್ರಿಂಕೆಟ್ ಹಾವು. ಕನ್ನಡದಲ್ಲಿ ಇದನ್ನು ಚಿತ್ತಾರದ ಹಾವು ಎಂದರೆ, ಗುಜರಾತಿನಲ್ಲಿ ಸುಂದರಿ ಎಂದೇ ಇದನ್ನು ಕರೆಯುವರು. ಕೊತ್ತನೂರಿನಿಂದ ಬಚ್ಚಹಳ್ಳಿ ರಸ್ತೆಯಲ್ಲಿರುವ ಆಂಜಿನಪ್ಪನವರ ಸೀಬೆ ತೋಟದಲ್ಲಿ ಕೊಳವೆ ಬಾವಿಯ ಬಳಿ ಬಟ್ಟೆ ಒಗೆಯುವ ಕಲ್ಲಿನ ಅಡಿಯಲ್ಲಿ ಸೇರಿಕೊಂಡಿದ್ದ ಈ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟರು.
ಈ ಟ್ರಂಕೆಟ್ ಹಾವು ನುಣುಪಾದ ಹೊಳೆಯುವ ಹುರುಪೆಗಳ ಹೊದಿಕೆಯನ್ನು ಹೊಂದಿದ್ದು, ಇದರ ಬಾಲ ದಟ್ಟ ಬಣ್ಣವಿರುತ್ತದೆ. ದೇಹ ಕಂದಿದ ಚಾಕಲೇಟ್ ಕಂದು ಬಣ್ಣವಿದ್ದರೆ, ಆರೀರದ ಮುಂಭಾಗದಲ್ಲಿ ಲಘುವಾದ ಪಟ್ಟೆಗಳು ಹಾಗೂ ಚೌಕಳಿಗಳಿವೆ.ಉದ್ದವಾದ ತಲೆಯಲ್ಲಿ ಕಣ್ಣುಗಳು ಎದ್ದು ಕಾಣುವಂತಿದ್ದು, ದುಂಡನೆಯ ಪಾಪೆ ಹೊಂದಿದೆ. ಕುತ್ತಿಗೆಯ ಎರಡೂ ಪಕ್ಕ, ಚಿಕ್ಕದಾದ ಕಪ್ಪು ವರ್ಣರೇಖೆಯಿದ್ದು, ಅವು ಮಧ್ಯಭಾಗದಲ್ಲಿ ಕೂಡಿಕೊಂಡು ತಲೆಕೆಳಗಾದ ಇಂಗ್ಲೀಷ್ ವಿ ಗುರುತನ್ನು ರಚಿಸಬಹುದು. ಶರೀರದ ತಳಭಾಗವು ಮುತ್ತಿನ ಹರಳಂತೆ ಬಿಳುಪಾಗಿರುತ್ತದೆ. ಹುರುಪೆಗಳು ನಯವಾಗಿ ಹೊಳೆಯುತ್ತವೆ.
ಭಾರತದಲ್ಲಿ ಟ್ರಂಕೆಟ್ ಹಾವುಗಳ 9 ಪ್ರಭೇದಗಳಿವೆ. ರಾಜ್ಯದ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಕಂಡುಬರುತ್ತವೆ. ಬೆಟ್ಟ ಹಾಗೂ ಮೈದಾನ ಪ್ರದೇಶದಲ್ಲಿ ತಂಪು ವಾತಾವರಣವಿರುವಲ್ಲಿ ಇವು ಇರುತ್ತವೆ. ಅಪರೂಪವಾಗಿ ಮನುಷ್ಯನ ವಸತಿಗಳ ಬಳಿ ಕಂಡುಬರಬಹುದು. ಸಾಮಾನ್ಯವಾಗಿ ಈ ಹಾವು ೪ ಅಡಿ ಉದ್ದವಿರುತ್ತವೆ. ಹೆಣ್ಣು ಗಂಡಿಗಿಂತ ಹೆಚ್ಚು ಉದ್ದವಿರುತ್ತದೆ. ದಂಶಕ ಪ್ರಾಣಿಗಳು ಇದರ ಮುಖ್ಯ ಆಹಾರ. ಅಪರೂಪವಾಗಿ ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹಾವಿನ ಮರಿಗಳು, ಕೀಟಗಳು ಮತ್ತು ಸಣ್ಣ ಹಲ್ಲಿಗಳನ್ನು ಹಾಗೂ ಹಾವುರಾಣಿಗಳನ್ನು ತಿನ್ನುತ್ತವೆ.
‘ಈ ಚಿತ್ತಾರದ ಹಾವು ಗೊಂದಲವಾದಾಗ ಉದ್ರೇಕಗೊಂಡು ರೇಗುತ್ತದೆ. ದೇಹವನ್ನು ನೆಲದಿಂದ ಮೇಲೆತ್ತಿ ಬಡಿಯುತ್ತದೆ. ಕುತ್ತಿಗೆಯನ್ನು ಹಿಗ್ಗಿ, ತಲೆಯೆತ್ತಿ ಬಾಯಿ ತೆರೆದು, ಶರೀರ ಮೇಲಕ್ಕೆತ್ತಿ ಕಚ್ಚಲು ಬರುತ್ತದೆ. ಇವುಗಳ ಆಕ್ರಮಣಕಾರಿ ಪ್ರವೃತ್ತಿಯಿಂದ ಇದನ್ನು ವಿಷಯುಕ್ತ ಹಾವೆಂದು ತಪ್ಪಾಗಿ ಭಾವಿಸುತ್ತಾರೆ. ಇದು ವಿಷಪೂರಿತ ಹಾವಲ್ಲ. ಹಾಗಾಗಿ ಕಚ್ಚಿದರೂ ಅಪಾಯವಾಗದು. ನಾನು ಇದುವರೆಗೂ ನೂರಾರು ಹಾವುಗಳನ್ನು ರಕ್ಷಿಸಿದ್ದೇನೆ. ಈ ರೀತಿಯ ಹಾವು ನಮ್ಮ ಪ್ರದೇಶದಲ್ಲಿ ಬಲು ಅಪರೂಪ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.
ಮಲ್ಲಹಳ್ಳಿಯ ಕುಂಟೆಯಲ್ಲಿ ಅರಳಿ ನಿಂತ ಸುಂದರ ಕಮಲಗಳು
ಹಿಂದೆ ಪ್ರತಿ ಗ್ರಾಮದಲ್ಲೂ ಜಲ ಮೂಲಗಳಾದ ಕುಂಟೆಗಳಲ್ಲಿ ಮತ್ತು ತೋಟಗಳಲ್ಲಿನ ನೀರಿನ ಹೊಂಡಗಳಲ್ಲಿ ಕಮಲದ ಹೂ ಬೆಳೆಯುವುದು ಸಾಮಾನ್ಯವಾಗಿತ್ತು. ಆದರೆ ಅಂತರ್ಜಲ ಪಾತಾಳಕ್ಕಿಳಿದಂತೆ, ಮಳೆಯು ಕೈಕೊಟ್ಟ ಹಿನ್ನೆಲೆಯಲ್ಲಿ ಗ್ರಾಮದ ಕುಂಟೆಗಳು, ಕೆರೆಗಳು ಒಣಗಿ ನಿಂತಿವೆ. ಅಪರೂಪದ ದೃಶ್ಯವೆಂಬಂತೆ ತಾಲ್ಲೂಕಿನ ಮಲ್ಲಹಳ್ಳಿಯ ಕುಂಟೆಯ ತುಂಬ ಕಮಲದ ಹೂಗಳು ಅರಳಿ ನಿಂತಿದ್ದು, ದಿಬ್ಬೂರಹಳ್ಳಿ ಮಾರ್ಗವಾಗಿ ಹೋಗುವವರಿಗೆ ಆಹ್ಲಾದಕರ ದೃಶ್ಯವಾಗಿ ಕಂಡುಬರುತ್ತಿದೆ.
ಜಲಪುಷ್ಪವಾದ ಈ ಕಮಲದ ಹೂವು ವಿಷ್ಣು, ಬ್ರಹ್ಮ, ಸರಸ್ವತಿ ಮತ್ತು ಲಕ್ಷ್ಮಿಗೆ ಪ್ರಿಯವಾಗಿದೆ. ಕಮಲದ ಹೂವು ಸೌಂದರ್ಯ ಮತ್ತು ಶುದ್ಧತೆಯ ಸಂಕೇತ. ಅರಳಿರುವ ಕಮಲದ ದಳಗಳನ್ನು ಆತ್ಮದ ವಿಸ್ತರಣೆಯ ರೂಪವಾಗಿ ನೋಡಲಾಗುತ್ತದೆ. ಬೌದ್ಧ ಜನಾಂಗದಲ್ಲಿ ಕಮಲದ ಹೂವನ್ನು ಆತ್ಮ ಸ್ವರೂಪದ ಶುದ್ಧತೆಗೆ ಹೋಲಿಸಲಾಗುತ್ತದೆ.
ಮಲ್ಲಹಳ್ಳಿ ಗ್ರಾಮದಲ್ಲಿ ಚರಂಡಿಯ ನೀರು ಮತ್ತು ಓವರ್ ಹೆಡ್ ಟ್ಯಾಂಕಿಗೆ ತುಂಬಿ ಹರಿದು ಹೋಗುವ ನೀರೆಲ್ಲಾ ಕುಂಟೆಗೆ ಬಂದು ಸೇರುವ ಕಾರಣ ಸದಾ ನೀರಿರುತ್ತದೆ. ಸಾಕಷ್ಟು ಜೊಂಡು ಕೂಡ ಇಲ್ಲಿ ಆವರಿಸಿದೆ. ಆದರೂ ಕಮಲದ ಹೂಗಳು ಸಾಕಷ್ಟು ಸಂಖ್ಯೆಯಲ್ಲಿ ಅರಳಿ ನಿಂತಿರುತ್ತವೆ.
ಗ್ರಾಮದ ಪ್ರವೇಶದಲ್ಲಿ ಕಣ್ಣಿಗೆ ಮುದವನ್ನು ನೀಡುವುದರೊಂದಿಗೆ ಈ ಪುಷ್ಪಗಳು ಗ್ರಾಮಕ್ಕೆ ಆದಾಯವನ್ನೂ ತರುತ್ತವೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಕಮಲದ ಹೂಗಳಿಗೆ ಬೇಡಿಕೆ ಬಂದಾಗ ಹೂ ವ್ಯಾಪಾರಸ್ಥರು ಬಂದು ಹೂಗಳನ್ನು ಕೊಂಡು ಕುಯ್ದುಕೊಂಡು ಹೋಗುತ್ತಾರೆ. ಗ್ರಾಮಸ್ಥರು ಆ ಹಣವನ್ನು ಗ್ರಾಮದ ಗಣೇಶನ ದೇವಸ್ಥಾನದ ಪೂಜೆಗೆ, ಅಭಿವೃದ್ಧಿಗೆ ಬಳಸುವರೆಂದು ಗ್ರಾಮಸ್ಥ ನಾಗೇಶ್ ಹೇಳುತ್ತಾರೆ.
ಈ ಬಾರಿ ಸಾಕಷ್ಟು ಜೊಂಡು ಬೆಳೆದಿದೆ. ಅವನ್ನು ತೆಗೆಸಬೇಕಿದೆ. ಆಗ ಕುಂಟೆಯ ತುಂಬಾ ಕಮಲವೇ ಆವರಿಸುತ್ತದೆ. ಇದರಿಂದ ಇನ್ನಷ್ಟು ಆದಾಯವೂ ಗ್ರಾಮಕ್ಕೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ನಗರದ ವಾಸವಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜೇತರಾಗಿ ಬಾಗಲಕೋಟೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮುಖೇಶ್, ಗುಂಡು ಎಸೆತ ಮತ್ತು ಉದ್ದಜಿಗಿತ (ಪ್ರಥಮ), ಕೌಶಿಕ್, ಎತ್ತರ ಜಿಗಿತ (ಪ್ರಥಮ), ಯಶ್ವಂತ್ 400 ಮೀಟರ್ (ಪ್ರಥಮ), ಅರುಣ್‌ಕುಮಾರ್, 800 ಮೀಟರ್ (ತೃತೀಯ), ವೇದ, ಉದ್ದಜಿಗಿತ (ತೃತೀಯ) ಮತ್ತು ರಿಲೇ ವಿಜೇತರಾದ ಚಂದನ್, ಯಶ್ವಂತ್, ಪವನ್, ವಿನಯ್ ಅವರನ್ನು ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.

