ಬರಗಾಲದಿಂದ ತತ್ತರಿಸುತ್ತಿರುವ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಎಕರೆಯೊಂದಕ್ಕೆ ೨೦ ಸಾವಿರ ರೂಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ( ಕೋಡಿಹಳ್ಳಿ ಚಂದ್ರಶೇಖರ್ ಬಣ) ಯ ತಾಲ್ಲೂಕು ಪದಾಧಿಕಾರಿಗಳು ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯಾಧ್ಯಂತ ಬರಗಾಲದಿಂದ ರೈತರು ತತ್ತರಿಸುತ್ತಿದ್ದು ಮಳೆಯಿಲ್ಲದ ಕಾರಣ ಭೂಮಿಗೆ ಹಾಕಿದ ಬೀಜ, ಗೊಬ್ಬರ ಮಣ್ಣು ಪಾಲಾಗಿದೆ. ಜಾನುವಾರುಗಳಿಗೆ ನೀರು ಮೇವಿಲ್ಲದೇ ಕಡಿಮೆ ಬೆಲೆಗೆ ಕಸಾಯಿ ಕಾನೆಗೆ ಸೇರುತ್ತಿದೆ. ಸಾಲದೆಂಬಂತೆ ಕೃಷಿಗಾಗಿ ಮಾಡಿರುವ ಸಾಲ ತಲೆ ಮೇಲಿದೆ. ಇಷ್ಟಾದರೂ ರೈತನ ನೆರವಿಗೆ ಬಾರದೇ ಶಾಸಕರ ಸಂಬಳ ಸೇರಿದಂತೆ ಇನ್ನಿತರ ಖರ್ಚುಗಳಿಗಾಗಿ ಜನರ ತೆರಿಗೆ ಹಣವನ್ನು ಬಳಸುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ರೈತರ ಮೇಲಿರುವವ ಸಾಲ ಮನ್ನಾ ಮಾಡಿ ನೂತನ ಸಾಲ ನೀಡಬೇಕು, ಬರಗಾಲ ಪ್ರದೇಶದ ರೈತರಿಗೆ ಎಕರೆಗೆ ೨೦ ಸಾವಿರದಂತೆ ಪರಿಹಾರ ಧನ ನೀಡಬೇಕು. ರಾಜ್ಯದ ನೀರಾವವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಜೆಟ್‌ನ ಶೇ. ೨೫ ರಷ್ಟು ಹಣ ಮೀಸಲಿಡಬೇಕು. ಹಾಲು, ರೇಷ್ಮೆ, ತೆಂಗು, ತಾಳೆಗೆ ಬೆಂಬಲ ಬೆಲೆ ನಿಗಧಿಯಾಗಬೇಕು. ಕೆರೆ ಅಂಗಳದಲ್ಲಿರುವ ಜಾಲಿಮರ ಹಾಗು ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು. ಬರಗಾಲವನ್ನು ತಡೆಗಟ್ಟುವವ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ನಗರ ಘಟಕದ ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಕೃಷ್ಣಪ್ಪ, ದೇವರಾಜ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಭಾರತಿ ಮತ್ತಿತರರು ಹಾಜರಿದ್ದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮನವಿ
ಸಹಕಾರಿ ಕ್ಷೇತ್ರವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ…
ಕೇಂದ್ರ ಸರ್ಕಾರ 500-–1000 ಸಾವಿರ ಮುಖಬೆಲೆ ಬಾಳುವ ನೋಟುಗಳನ್ನು ನಿಷೇಧಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಹಕಾರ ಬ್ಯಾಂಕ್‌ಗಳಲ್ಲಿ ಐದುನೂರು ಮತ್ತು ಸಾವಿರ ರೂಗಳ ಹಳೆಯ ನೋಟುಗಳನ್ನು ಜಮಾ ಮಾಡಲು ಅವಕಾಶವನ್ನು ನಿರಾಕರಿಸುವ ಮೂಲಕ ತಾರತಮ್ಯ ನೀತಿಯನ್ನು ಅನುಸರಿ ಸಹಕಾರಿ ಕ್ಷೇತ್ರವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ದೂರಿದರು.
ಶಿಡ್ಲಘಟ್ಟ- ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಅಂಜನಾದ್ರಿ ಸಂಕೀರ್ಣದಲ್ಲಿ(ಪೆಟ್ರೋಲ್ ಬಂಕ್ ಪಕ್ಕ) ಕೋಲಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಳಾಂತರಗೊಂಡಿದ್ದು, ಗುರುವಾರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರ ಕೂಡಲೇ ನಿರ್ಧಾರವನ್ನು ಬದಲಿಸಿಕೊಳ್ಳದಿದ್ದಲ್ಲಿ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಸಿ.ಎಸ್ ಬ್ಯಾಂಕ್‌ಗಳ ಅಧ್ಯಕ್ಷರು, ಡಿಸಿಸಿ ಬ್ಯಾಂಕಿನ ನಿರ್ದೇಶಕರು ಮತ್ತು ಸಹಕಾರಿಗಳನ್ನು, ಬ್ಯಾಂಕ್‌ನ ಅತ್ಯುತ್ತಮ ಗ್ರಾಹಕರನ್ನು ಸನ್ಮಾನಿಸಿದರು.
ರಾಜ್ಯ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ಡಾ.ಜಯರಾಮ ರೆಡ್ಡಿ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಆನೂರು ಪಿ.ವಿ.ನಾಗರಾಜ್, ರೂಪ ಶಶಿಧರ್, ಶಂಕರಪ್ಪ, ಹನುಮೇಗೌಡ, ಕೃಷ್ಣೇಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಎಸ್.ಆನಂದ್, ಮೇಲ್ವಿಚಾರಕ ಲಿಂಗರಾಜು ಮತ್ತಿತರರು ಹಾಜರಿದ್ದರು.
ಜಿಲ್ಲೆಗೆ 83 ಕೋಟಿ ರೂಗಳ ಸಹಾಯಧನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೃಷಿ ಬೆಳೆಗಳ ನಷ್ಟವನ್ನು ಅಂದಾಜಿಸಿ 83 ಕೋಟಿ ರೂಗಳ ಸಹಾಯಧನ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗುರುವಾರ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರ, ಬೋದಗೂರು ಸಿರಿ ಸಮೃದ್ಧಿ ರೈತಕೂಟ ಸಂಯುಕ್ತಾಶ್ರಯದಲ್ಲಿ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ತೋಟದಲ್ಲಿ ನಡೆದ ಮಾವು ಸುಸ್ತಿರ ಕೃಷಿ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಆತ್ಮವಿಶ್ವಾಸ ಮೂಡಿಸುವ, ಮಾಹಿತಿಯನ್ನು ನೀಡುವ, ಗುಣಮಟ್ಟದ ಉತ್ಪಾದಕತೆಯನ್ನು ಹೆಚ್ಚಿಸುವ ಕಾರ್ಯಾಗಾರಗಳನ್ನು ಆಗಾಗ್ಗೆ ನಡೆಸಬೇಕಾದ ಅಗತ್ಯವಿದೆ. ವಿಜ್ಞಾನಿಗಳು, ಕ್ಷೇತ್ರ ತಜ್ಞರು, ಸಾವಯವ ಕೃಷಿಕರು, ಪ್ರಗತಿಪರ ರೈತರಿಂದ ಅನುಭವಗಳನ್ನು ತಿಳಿಸುವ ಮೂಲಕ ರೈತರಿಗೆ ಮಾರ್ಗದರ್ಶನ ಕೊಡುವ ಕೆಲಸಗಳು ನಡೆಯುವುದು ಆಶಾದಾಯಕ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು. ನರೇಗಾ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸ್ವಚ್ಛಭಾರತ್ ಅಭಿಯಾನದಡಿ ವೈಯಕ್ತಿಕ ಶೌಚಾಲಯಗಳನ್ನು ಪ್ರತಿಯೊಬ್ಬ ಮನೆಯವರೂ ಕಟ್ಟಿಸಿಕೊಳ್ಳಬೇಕು. ಬರುವ ಮಾರ್ಚ್ ತಿಂಗಳೋಳಗೆ ಪ್ರತಿಯೊಂದು ಮನೆಗೂ ಶೌಚಾಲಯವಿರಬೇಕು. ಸ್ನಾನದ ಗೃಹವನ್ನೂ ಸೇರಿಸಿ ಸರ್ಕಾರ 20 ಸಾವಿರ ರೂ ನೀಡುತ್ತಿದೆ ಸದುಪಯೋಗ ಮಾಡಿಕೊಳ್ಳಿ ಎಂದು ನುಡಿದರು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಮಾತನಾಡಿ, ಪಶುವಿಗೆ ಆಹಾರವಾಗಿ ಎಲ್ಲೆಲ್ಲಿಂದಲೋ ಒಣಹುಲ್ಲು ತರಿಸಿಕೊಡಬೇಡಿ. ಅದರ ಬದಲಿಗೆ ಪಶು ಆಹಾರವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ರಿಯಾಯಿತಿ ದರದಲ್ಲಿ ಒದಗಿಸಿ. ಬರದ ಕಾಲದಲ್ಲಿ ಉಪಕಾರವಾಗುತ್ತದೆ. ನಮ್ಮ ಉತ್ಪಾದನೆಗಳಾದ ಹಾಲು ಮತ್ತು ರೇಷ್ಮೆಗೆ ನ್ಯಾಯಬದ್ಧವಾದ ರಸೀದಿ ಸಿಗುತ್ತದೆ. ಇದರಿಂದ ಹಣದ ಮೂಲವನ್ನು ತಿಳಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬ ರೈತರೂ ತಮ್ಮ ಭೂಮಿಯಲ್ಲಿ ಕನಿಷ್ಠ 2 ಗುಂಟೆಯಲ್ಲಾದರೂ ತಮ್ಮ ಕುಟುಂಬಕ್ಕಾಗಿಯೇ ತರಕಾರಿಯನ್ನು ಬೆಳೆಯಿರಿ. ಕುರಿ, ಕೋಳಿ, ಮೀನು, ಹಸು, ಎಮ್ಮೆಗಳನ್ನು ಸಾಕಿ. ಕಷ್ಟದಲ್ಲಿ ನೆರವಾಗುತ್ತದೆ ಎಂದು ವಿವರಿಸಿದರು.
ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಜಿ.ಸಿ.ಬಸವರಾಜು, ನಬಾರ್ಡ್ ಬ್ಯಾಂಕ್ ಡಿ.ಡಿ.ಎಂ. ಚಿತ್ರಾ ಶ್ರೀಧರ್ ಮಾತನಾಡಿದರು.
ಲಾಲ್‌ಬಾಗ್ ತೋಟಗಾರಿಕಾ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಸಸ್ಯರೋಗ ತಜ್ಞ ಡಾ.ದೇವರಾಜ್ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 166 ಮಂದಿ ರೈತರಿಗೆ ಸಿರಿ ರೈತಕೂಟದಿಂದ ಕರಿಬೇವು ಮತ್ತು ನಿಂಬೆ ಗಿಡಗಳನ್ನು ನೀಡಲಾಯಿತು.
ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಕಾರ್ಯಾಗಾರವನ್ನು ಕರಿಬೇವು ಮತ್ತು ನಿಂಬೆ ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದರು. ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಮಳೆಯಾಶ್ರಿತ ಸುಮಾರು 30 ವಿಧದ ಬೆಳೆಗಳಿರುವ ತೋಟ, ಕೃಷಿ ಹೊಂಡವನ್ನು, ಮಾವಿನ ಬೆಳೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರ ಸಾವಯವ ಬೆಳೆಗಳಾದ ಸಿರಿಧಾನ್ಯಗಳು, ಹಣ್ಣುಗಳು ಮುಂತಾದ ಪ್ರದರ್ಶನವನ್ನು ವೀಕ್ಷಿಸಿದರು.
ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕಿ ಗಾಯಿತ್ರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಜಿ.ಆರ್.ನಾಗಭೂಷಣ್, ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಡಿ.ಸುಧಾಜ್ಯೋತಿ, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಬಿ.ಎಂ.ಪ್ರಕಾಶ್, ರಾಮಮೂರ್ತಿ, ಬಿ.ಪಿ.ಸತೀಶ್, ಬಿ.ಕೆ.ಮುನಿರಾಜು, ವಿ.ಕೃಷ್ಣಪ್ಪ, ದೊಡ್ಡ ಮಾರಪ್ಪ, ಬಂಗಾರು ಶ್ರೀನಿವಾಸ್, ಆರ್.ಶ್ರೀನಿವಾಸ್, ನಾರಾಯಣಸ್ವಾಮಿ, ನಾಗೇಂದ್ರ, ಬಿ.ಎಂ.ಪ್ರಕಾಶ್, ಭಾರತಾಂಬೆ ಮಹಿಳಾ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ಮತ್ತಿತರರು ಹಾಜರಿದ್ದರು.
ಜೂಜು ಅಡ್ಡೆ ಮೇಲೆ ದಾಳಿ
ತಾಲ್ಲೂಕಿನ ತಾತಹಳ್ಳಿ ಬಳಿ ಅರಣ್ಯ ಇಲಾಖೆಗೆ ಸೇರಿರುವ ನೀಲಗಿರಿ ತೋಪಿನಲ್ಲಿ ಜೂಜು ಆಡುತ್ತಿದ್ದವರ ಮೇಲೆ ಬುಧವಾರ ದಾಳಿ ನಡೆಸಿರುವ ಜಿಲ್ಲಾ ಅಪರಾಧ ನಿಯಂತ್ರಣ ದಳದ ಪೊಲೀಸರು ಜೂಜಾಡುತ್ತಿದ್ದವರನ್ನು ಬಂಧಿಸಿ ಪಣಕ್ಕಿಟ್ಟಿದ್ದ ನಗದು ಹಣವನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೂಜಾಡುತ್ತಿದ್ದ ತಾತಹಳ್ಳಿ ಮುನಿಶಾಮಿ, ಚೊಕ್ಕಹಳ್ಳಿ ಮಂಜುನಾಥ, ಪೆರೇಸಂದ್ರ ವೇಣು, ಶಿಡ್ಲಘಟ್ಟ ವೆಂಕಟೇಶ್, ತಾತಹಳ್ಳಿ ಮೂರ್ತಿ, ಚಿಕ್ಕಬಳ್ಳಾಪುರ ಕುಬೇರ, ಚಿಂತಾಮಣಿ ಬಾಬಾಜಾನ್, ತಿಪ್ಪೇನಹಳ್ಳಿ ಲಕ್ಷ್ಮಯ್ಯ, ಅಜ್ಜವಾರ ನಾರಾಯಣಗೌಡ ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಿದ್ದು, ಬಂಧಿತರು ಪಣಕ್ಕಿಟ್ಟಿದ್ದ 42 ಸಾವಿರ ರೂ, 10 ಮೊಬೈಲ್ ಮತ್ತು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನರಸಿಂಹ, ಗಿರೀಶ್, ಸತೀಶ್, ರಮೇಶ್, ಶ್ರೀನಿವಾಸ್ ಹಾಗೂ ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದ್ದರು.
ಮಾವು ಸುಸ್ತಿರ ಕೃಷಿ ಕುರಿತು ತರಬೇತಿ
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರ, ಬೋದಗೂರು ಸಿರಿ ಸಮೃದ್ಧಿ ರೈತಕೂಟ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡರ ಮಾವಿನ ತೋಟದಲ್ಲಿ ಮಾವು ಸುಸ್ತಿರ ಕೃಷಿ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಲಾಲ್ ಬಾಗ್ ತೋಟಗಾರಿಕಾ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಸಸ್ಯರೋಗ ತಜ್ಞ ಡಾ.ದೇವರಾಜ್ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ತಾಲ್ಲೂಕಿನ ಮಾವು ಬೆಳೆಗಾರರು ಭಾಗವಹಿಸಿ ಮಾಹಿತಿಯನ್ನು ಪಡೆಯುವಂತೆ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕರಾಟೆ ಸ್ಪರ್ಧೆಯಲ್ಲಿ ಗೆದ್ದ ಜಂಗಮಕೋಟೆ ವಿದ್ಯಾರ್ಥಿಗಳು
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಂಗಮಕೋಟೆಯ ವಿದ್ಯಾರ್ಥಿಗಳು ಪದಕಗಳನ್ನು ಪಡೆದಿದ್ದಾರೆ ಎಂದು ವಾಡು ಇಂಟರ್‌ನ್ಯಾಷನಲ್ ಕರಾಟೆ ಫೆಡರೇಷನ್ ತರಬೇತುದಾರ ಜಂಗಮಕೋಟೆಯ ಎಸ್.ಮಹಮ್ಮದ್ ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ 2016ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಸಿಂಧು ಬೆಳ್ಳಿ ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುವುದಾಗಿ ಅವರು ತಿಳಿಸಿದರು.
ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಮೇಘನ, ಹರ್ಷಿತ ಮತ್ತು ಪ್ರಗತಿ ಪದವಿ ಪೂರ್ವ ಕಾಲೇಜಿನ ರಾಹುಲ್ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.
ವಾಡು ಇಂಟರ್‌ನ್ಯಾಷನಲ್ ಕರಾಟೆ ಫೆಡರೇಷನ್ ಅಧ್ಯಕ್ಷ ಬಿ.ಎಚ್.ಸಾಬುಲಾಲ್, ತರಬೇತುದಾರ ಎಸ್.ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ದುರ್ಬಲ ವರ್ಗಗಳ ದಿನಾಚರಣೆ
ದುರ್ಬಲ ವರ್ಗಗಳ ದಿನಾಚರಣೆ ಕಟಾಚಾರಕ್ಕೆ ನಡೆಸಲಾಗುತ್ತಿದೆ. ದುರ್ಬಲ ವರ್ಗಗಳ ಅಭಿವೃದ್ಧಿ ತಮಗೆ ಬೇಕಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ತಾಲ್ಲೂಕು ಆಡಳಿತದ ವಿರುದ್ದ ಆರೋಪಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುರ್ಬಲ ವರ್ಗಗಳ ದಿನಾಚರಣೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ದಲಿತರು ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುವುದು ನಿಮಗೆ ಇಷ್ಟ ಇಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದಲಿತರ ಕಾಲೋನಿಗಳಲ್ಲಿ ಮದ್ಯದ ಮಾರಾಟ ಅವ್ಯಾಹತವಾಗಿ ನಡೆದಿದೆ. ನಿಯಂತ್ರಣ ಮಾಡಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ, ಇದರಿಂದ ದಲಿತ ಕುಟುಂಬಗಳು ನಾಶವಾಗುತ್ತಿವೆ ಎಂದು ತಿಳಿಸಿದರು.
ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಾಕಷ್ಟು ಪ್ರಚಾರ ಇಲ್ಲ, ಇದ್ದರೂ ಸಾಕಷ್ಟು ಯೋಜನೆಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ತಾಲ್ಲೂಕಿನ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಬ್ಯಾಂಕ್‌ನವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ದಲಿತರು ನಿರ್ಮಿಸುವ ಪಾಲಿಹೌಸ್ ಗೆ ಸರ್ಕಾರದಿಂದ ಶೇ. ೯೦ರಷ್ಟು ಪ್ರೋತ್ಸಾಹ ಧನ ನೀಡಲಿದ್ದು, ಉಳಿದ ಶೇ. ೧೦ರಷ್ಟು ಮಾತ್ರವೇ ದಲಿತ ಫಲಾನುಭವಿಗಳು ಭರಿಸಬೇಕು. ಆದರೆ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾದರೆ ದಲಿತರು ಮುಖ್ಯವಾಹಿನಿಗೆ ಹೇಗೆ ತಾನೆ ಬರುತ್ತಾರೆ ಎಂದು ಪ್ರಶ್ನಿಸಿದರು.
ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ದಲಿತ ಮುಖಂಡರಾದ ವೆಂಕಟೇಶ್, ನಂಜಪ್ಪ, ನರಸಿಂಹಮೂರ್ತಿ, ದ್ಯಾವಕೃಷ್ಣ, ಮುನಿರಾಜು ಮುಂತಾದವರು ಒತ್ತಾಯಿಸಿದರು.
ಗೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ, ಗ್ರಾಮೀಣಾಭಿವೃದ್ಧಿ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಸಭೆಯಲ್ಲಿ ಹಾಜರಿದ್ದರು.
ತುತ್ತು ಅನ್ನಕ್ಕಾಗಿ ವಲಸೆ ಪಯಣ… ಶ್ರಮ, ನೋವಿನ ನಡುವೆ ಸಾಗಿದೆ ಜೀವನ…
‘ಹೆಚ್ಚೇನೂ ಆಸೆಪಡದ ಬಡವನಿಗೆ ತನ್ನ ದುಡಿಮೆಯಿಂದ ಗಳಿಸಿದ ಒಂದು ತುತ್ತು ಅನ್ನ ಸಿಕ್ಕರೆ ಸಾಕು. ಆ ಕ್ಷಣ ಸಂಭ್ರಮದಿಂದ ಬದುಕಿಬಿಡುತ್ತಾನೆ’. ಇಂತಹ ಒಂದು ಸಂಭ್ರಮಕ್ಕಾಗಿ ಬಡವ ಊರೂರು ಅಲೆಯುತ್ತಾನೆ. ದೇಶ ಸುತ್ತುತ್ತಾನೆ. ದಿನಪೂರ್ತಿ ಕಷ್ಟಪಟ್ಟ ದುಡಿಮೆಯಿಂದ ಸಿಗುವ ಕ್ಷಣಿಕ ಸುಖ-ಸಂಭ್ರಮ ಅರಸುತ್ತ ಮಧ್ಯಪ್ರದೇಶದ ಕುಟುಂಬವೊಂದು ಶಿಡ್ಲಘಟ್ಟಕ್ಕೆ ಆಗಮಿಸಿದೆ. ಕಮ್ಮಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿರುವ ಈ ಕುಟುಂಬ ಕೆಲ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಬೀಡುಬಿಟ್ಟಿದೆ.
ಗ್ರಾಮೀಣ ಜನರ ವ್ಯವಸಾಯಕ್ಕೆ ಬೇಕಾದ ಕಬ್ಬಿಣದ ಉಪಕರಣಗಳನ್ನು ತಯಾರಿಸಿ ಮಾರುವ ಈ ಕುಟುಂಬದಲ್ಲಿ ಹಿರಿಯರು-, ಕಿರಿಯರು ಮತ್ತು ಮಕ್ಕಳು ಇದ್ದಾರೆ. ದುಡಿಮೆ ಎಂಬುದು ಕುಟುಂಬದ ಹಿರಿಯನಿಗೆ ಅಥವಾ ಪುರುಷನಿಗೆ ಸೀಮಿತವಾದುದಲ್ಲ. ದುಡಿಮೆಯಲ್ಲಿ ತಮ್ಮದು ಸಹಯೋಗವಿದೆ ಎಂಬಂತೆ ಮಹಿಳೆಯರು ಮತ್ತು ಮಕ್ಕಳು ಸಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ದೂರದ ಮಧ್ಯಪ್ರದೇಶದ ಭೂಪಾಲ್‌ನಿಂದ ಮನೆ, ಆಪ್ತ ಸದಸ್ಯರನ್ನು, ಅಲ್ಲಿನ ದೈನಂದಿನ ಸಂಸ್ಕೃತಿಯಿಂದ ದೂರಗೊಂಡು ಶಿಡ್ಲಘಟ್ಟಕ್ಕೆ ಬಂದಿರುವ ಈ ಕುಟುಂಬಕ್ಕೆ ಶಾಶ್ವತ ಸೂರು ಇಲ್ಲ. ರಾತ್ರಿ ವೇಳೆ ತಾತ್ಕಾಲಿಕ ಟೆಂಟ್ ಕಟ್ಟಿಕೊಂಡು ಮಲಗುವ ಇವರು ದಿನಪೂರ್ತಿ ಕುಲುಮೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಒಬ್ಬರು ಉಪಕರಣಗಳ ತಯಾರಿಕೆಯಲ್ಲಿ ಪರಿಣತಿಗಳಿಸಿದ್ದರೆ, ಮತ್ತೊಬ್ಬರು ಅವುಗಳ ಮಾರಾಟದಲ್ಲಿ ಸಿದ್ಧಹಸ್ತರು.

ಕಾರ್ಯ ವಿಧಾನ: ಕಬ್ಬಿಣವನ್ನು ಕುಲುಮೆಯ ಒಲೆಯಲ್ಲಿ ಇಟ್ಟು ಅದರ ಸುತ್ತಲೂ ಇದ್ದಿಲು ಮುಚ್ಚಿ ತಿರುಗಣಿಯನ್ನು ತಿರುಗಿಸುತ್ತಾ ಹೋದಂತೆ ಕಬ್ಬಿಣ ಕೆಂಪಾಗುತ್ತದೆ. ಹದ ಬಂದ ಮೇಲೆ ಇಕ್ಕುಳದ ಸಹಾಯದಿಂದ ಗಟ್ಟಿಯಾಗಿ ಹಿಡಿದು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಬಲವಾದ ಪೆಟ್ಟು ಕೊಡುತ್ತಾರೆ. ಸಣ್ಣ ಸುತ್ತಿಗೆಯಿಂದ ಬಡಿದು ತಿದ್ದಿದ ಮೇಲೆ ಕಬ್ಬಿಣ ಕಠಿಣವಾಗಲೆಂದು ತಕ್ಷಣ ನೀರಿನಲ್ಲಿ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಅದ್ದಿ ನೀರುಬಾನಿಗೆ ಹಾಕಿ ತೆಗೆಯುತ್ತಾರೆ.
ಇವರು ತಯಾರಿಸುವ ಸಾಧನಗಳು: ಕುಡಗೋಲು, ನೆರಗೋಲು, ಗುದ್ದಲಿ, ಸಲಿಕೆ, ಕೊಡಲಿಗಳನ್ನು ಹೆಚ್ಚಾಗಿ ತಯಾರಿಸುವ ಇವರು ನೇಗಿಲಿಗೆ ಬೇಕಾದ ಕುಳ, ಬೆಳೆಗಳ ಸಾಲು ಮಾಡಲು ಪಿಳೆಗುಡ, ಕಸ ಸ್ವಚ್ಛ ಮಾಡಲು ಹೆಗ್ಗುಡ, ಬಿತ್ತಿದ ಮೇಲೆ ಸಾಲು ಮಾಡಲು ಬಳಗುಡ, ಟ್ರಾಕ್ಟರ್ ಬಳಸಿ ಹರಗಲು ಬಳಸುವ ಡಮಗುಂಟೆಗಳನ್ನೂ ತಯಾರಿಸಿ ಕೊಡುವರು.
ಜೀನಾ ಇಸಿ ಕಾ ನಾಮ್ ಹೈ…: ಕಬ್ಬಿಣ ಕಠಿಣಗೊಳಿಸುವ ಕ್ರಿಯೆಯೊಂದಿಗೆ ತಮ್ಮ ಜೀವನವನ್ನು ಹೋಲಿಸಿಕೊಳ್ಳುವ ಇವರು, ‘ನಮಗೆ ಈ ಊರು ಸರಿಯಾಗಿ ಗೊತ್ತಿಲ್ಲ. ಇಲ್ಲಿನ ನೀತಿ, ನಿಯಮ ಮತ್ತು ಸಂಸ್ಕೃತಿ ಬಗ್ಗೆ ಅರಿವಿಲ್ಲ. ಇವತ್ತು ಈ ಊರು, ನಾಳೆ ಇನ್ನೊಂದು ಊರಿಗೆ ಹೋಗುತ್ತೇವೆ. ಚೆಂದದ ಮನೆ ಕಟ್ಟಿಸಿಕೊಂಡು ಭೂಪಾಲದಲ್ಲಿ ವಾಸವಿದ್ದ ನಾವು ಬಡತನ, ನಿರುದ್ಯೋಗದಿಂದ ಅಲೆಮಾರಿಗಳು ಆಗಬೇಕಾಯಿತು. ನಮಗೆ ಬೇಕಿರುವುದು ತುತ್ತು ಅನ್ನ, ಧರಿಸಲು ಬಟ್ಟೆ ಮತ್ತು ವಾಸಿಸಲು ಮನೆ. ಒಳ್ಳೆಯ ಬಟ್ಟೆ ಮತ್ತು ಮನೆ ಸಿಗದಿದ್ದರೂ ಚಿಂತೆಯಿಲ್ಲ. ತುತ್ತು ಅನ್ನ ಸಿಕ್ಕರೆ ಸಾಕು, ಜೀನಾ ಇಸಿ ಕಾ ನಾಮ್ ಹೈ… ಎಂಬಂತೆ ನಮ್ಮ ಬದುಕು’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.
’ನಮಗೆ ಎಲ್ಲಿ ಅನ್ನ ಸಿಗುವುದೋ ಅದೇ ನಮ್ಮೂರು. ನಾವು 25 ಜನರು. ಒಗ್ಗಟ್ಟಿನಿಂದ ಕಷ್ಟಪಟ್ಟು ದುಡಿಯುತ್ತೇವೆ. ಕಲಿತಿರುವ ಕಸುಬು ನಮ್ಮನ್ನು ಉಪವಾಸ ಹಾಕಲ್ಲ ಎಂಬ ನಂಬಿಕೆಯಿದೆ. ಒಂದು ಕೆಜಿಗೆ ೧೫೦ ರೂಪಾಯಿಯಂತೆ ಕೃಷಿ ಉಪಕರಣಗಳನ್ನು ಮಾಡಿಕೊಡುತ್ತೇವೆ’ ಎಂದು ತುಳಸಿಸಿಂಗ್ ಎಂಬುವವರು ತಿಳಿಸಿದರು.
ಕಮ್ಮಾರಿಕೆ ಮೂಲ: ’ಕಮ್ಮಾರಿಕೆ ಮಾಡುತ್ತಿದ್ದವರು ಮೂಲತಃ ವಿಶ್ವಬ್ರಾಹ್ಮಣ ಕುಲದವರಾಗಿದ್ದು ಕರಕುಶಲ ಕಲೆಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರವಾದುದು. ನಂತರ ಮುಸಲ್ಮಾನರು ಈ ವೃತ್ತಿಯನ್ನು ಮುಂದುವರೆಸಿದರು. ಅವರು ಇದನ್ನು ಕೊಲಿಮಿ ಅನ್ನುತ್ತಿದ್ದರು. ಹಿಂದೆ ಚಕ್ಕಡಿ ಗಾಡಿಗಳನ್ನು ಬಳಸುತ್ತಿದ್ದರು. ಅದರ ಗಾಲಿಗಾಗಿ ಕಬ್ಬಿಣದ ಅಚ್ಚು ಅತ್ಯಗತ್ಯವಾಗಿತ್ತು. ಚಕ್ಕಡಿ ಬಂಡಿಗೆ ಬೇಕಾದ ಸಾಮಗ್ರಿಗಳಾದ ಗಾಲಿಯ ಅಚ್ಚು, ಗಾಲಿಯ ಗಡ್ಡು ಕಟ್ಟು, ಬಾಯಕಟ್ ಗಾಲಿಗಳನ್ನು ಜೋಡಿಸುವ ಅಚ್ಚು, ರಂಧ್ರಕ್ಕೆ ಬೇಕಾದ ಬಾಯಬಳಿ ಹಾಗೂ ಕಿವಿಬಳಿ ಇವೆಲ್ಲಕ್ಕೂ ರೈತರು ಇವರನ್ನು ಅವಲಂಬಿಸಿದ್ದರು. ಟೈರು ಗಾಡಿಗಳು ಹಾಗೂ ಟ್ರ್ಯಾಕ್ಟರು ಬಂದ ಮೇಲೆ ಈ ವೃತ್ತಿಯವರು ಕ್ರಮೇಣ ನಶಿಸಿದರು’ ಎಂದು ಶಿಡ್ಲಘಟ್ಟದ ಹಿರಿಯರೊಬ್ಬರು ತಿಳಿಸಿದರು.
ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಮಹತ್ತರ ಯೋಜನೆಗಳ ಪರಿಣಾಮ ಇಂದು ದೇಶದ ಸಮಸ್ತ ಜನತೆಗೂ ಆಹಾರ ಹಾಗು ಆರೋಗ್ಯದ ಭದ್ರತೆ ಸಿಗುವಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕಸಬಾ ಹೋಬಳಿ ಮಟ್ಟದ ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಏಳಿಗೆಗಾಗಿ ಏನಾದರೂ ನೀಡಿದ ರಾಜಕೀಯ ಎಂದರೆ ಅದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ, ಕಾಂಗ್ರೆಸ್ ಏನೆಲ್ಲಾ ಕೆಲಸಗಳನ್ನು ಮಾಡಿದೆ ಎನ್ನುವುದರ ಪ್ರಚಾರದ ಕೊರತೆಯಿಂದಷ್ಟೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದ ದೂರದೃಷ್ಟಿಯ ಯೋಜನೆಗಳಿಂದ ಇಂದು ದೇಶದ ಸಮಸ್ತ ಜನರಿಗೂ ಆಹಾರ ಮತ್ತು ಆರೋಗ್ಯದ ಹಕ್ಕು ದೊರೆತಿದೆ ಎಂದರು.
ಕಾಂಗ್ರೆಸ್ ಪಕ್ಷದ ಉದ್ಯೋಗಖಾತ್ರಿ ಯೋಜನೆಯಿಂದ ಪ್ರತಿಯೊಬ್ಬರಿಗೂ ಕೂಲಿ ಸಿಗುತ್ತಿದ್ದು, ದೇಶದ ಬಹುತೇಕ ಗ್ರಾಮಗಳು ಗುಡಿಸಲು ಮುಕ್ತವವಾಗಿದೆ. ದೇಶಾಧ್ಯಂತ ಶೇ. ೯೦ ರಷ್ಟು ನೀರಾವರಿ ಯೋಜನೆಗಳನ್ನು ನೀಡಿದ ಕೀರ್ತಿಯೂ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ವಾಜಪೇಯಿ ಹಾಗು ಮೋದಿ ನೇತೃತ್ವದ ಸರ್ಕಾರಗಳು ದೇಶಕ್ಕಾಗಿ ಏನೊಂದು ಉತ್ತಮ ಯೋಜನೆ ಜಾರಿಗೊಳಿಸದಿದ್ದರೂ ವ್ಯಾಪಕ ಪ್ರಚಾರದಿಂದ ಸುಳ್ಳನ್ನು ನಿಜ ಮಾಡಲು ಹೊರಟಿದೆ. ಆದರೆ ದೇಶಕ್ಕಾಗಿ ಸತತ ವವಾಗಿ ದುಡಿದಿರುವ ಕಾಂಗ್ರೆಸ್ ಪಕ್ಷ ಪ್ರಚಾರದ ಕೊರತೆಯಿಂದ ಹಿಂದುಳಿದಿದೆ ಎಂದರು.
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಯುವ ಕಾಂಗ್ರೇಸ್‌ನ ಸದಸ್ಯತ್ವ ನೋಂಧಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹೋಬಳಿವಾರು ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ ೩೦ ರೊಳಗೆ ಸಂಪೂರ್ಣವಾಗಿ ಸದಸ್ಯತ್ವ ನೋಂದಣಿ ಕಾರ್ಯ ಮುಗಿಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ವಿ.ಮುನೇಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಸದಸ್ಯ ವೇಣು ಯುವ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಪಾಷ, ಎಲ್.ಮಧುಸೂಧನ್, ಬಿ.ಪಿ.ರಾಘವೇಂದ್ರ, ಶಂಕರ್ ಮತ್ತಿತರರು ಹಾಜರಿದ್ದರು.
ಉಸರವಳ್ಳಿಯ ನೆಗೆತ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಊಸರವಳ್ಳಿಯು ದೇಹವನ್ನು ಹಿಂದಕ್ಕೂ ಮುಂದಕ್ಕೂ ತೂಗಾಡಿಸುತ್ತ ವಿಶಿಷ್ಟ ಶೈಲಿಯಲ್ಲಿ ರೆಂಬೆಯಿಂದ ರೆಂಬೆಗೆ ಹೋಗಲು ಪ್ರಯತ್ನಿಸುತ್ತಿತ್ತು. ಇರುವೆಗಳು, ಮಿಡತೆಗಳು ಹಾಗು ಅನೇಕ ಕೀಟಗಳನ್ನು ಭಕ್ಷಿಸುತ್ತಾ ಮಾನವನಿಗೆ ಉಪಕಾರಿಯಾದ ಇದರ ಬಣ್ಣ ಬದಲಿಸುವ ಗುಣವನ್ನು ಬದುಕಿನಲ್ಲಿ ತಮ್ಮ ಬಣ್ಣ ಬದಲಿಸುವ ಪುಡಾರಿಗಳಿಗೆ ಹೋಲಿಸುವುದು ದುರಂತ.
ಸಹಪಠ್ಯ ಚಟುವಟಿಕೆಗಳ ಸ್ವರ್ಧೆ
ಶಿಡ್ಲಘಟ್ಟದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಶಿಕ್ಷಕರಾದ ವಿ. ಕೃಷ್ಣ ಅವರು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿವತಿಯಿಂದ ೨೦೧೬-೧೭ ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಏರ್ಪಡಿಸಿದ ಜಿಲ್ಲಾಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ವರ್ಧೆಗಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನುಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಾರ್ಶನಿಕರ ಜಯಂತಿಯ ನೆಪದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ
‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎನ್ನುವ ಮೂಲಕ ಜಾತಿ ಸಂಘರ್ಷಗಳನ್ನು ಹೋಗಲಾಡಿಸಲು ತಮ್ಮ ಕೀರ್ತನೆಗಳಿಂದ ಜಾಗೃತಿ ಮೂಡಿಸಿದ ಭಕ್ತ ಶ್ರೇಷ್ಠರು ಕನಕದಾಸರು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಸೋಮವಾರ ಸಂಜೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಮತ್ತು ದಾಸ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ನಡೆಯುತ್ತಿರುವ ಮೂಢ ನಂಬಿಕೆ ಕಂದಾಚಾರಗಳನ್ನು ನೂರಾರು ವರ್ಷಗಳ ಹಿಂದೆಯೇ ಮನಗಂಡು ಅವನ್ನು ಹತ್ತಿಕ್ಕಲು ಪ್ರಯತ್ನಿಸಿದ ಕ್ರಾಂತಿಕಾರಿ ಕನಕದಾಸರು. ದಾರ್ಶನಿಕರ ಜಯಂತಿಯ ನೆಪದಲ್ಲಿ ಆತ್ಮಾವಲೋಕನವನ್ನು ಎಲ್ಲರೂ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ದಾಸ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಮಾತನಾಡಿ, ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕನಕದಾಸರ ಚಿಂತನೆಗಳ ಅಗತ್ಯತೆ ಅಂದಿಗಿಂತ ಇಂದು ಹೆಚ್ಚಿದೆ. 16ನೇ ಶತಮಾನದಲ್ಲಿ ಬದುಕಿದ್ದ ಸಂತ ಕವಿ ಕನಕದಾಸರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದರು. ನೂರಾರು ವರ್ಷಗಳ ನಂತರವೂ ನಾವು ಅವರ ಜಯಂತಿ ಆಚರಿಸುವ ಮೂಲಕ ನೆನಪು ಮಾಡಿಕೊಳ್ಳುತ್ತೇವೆ ಎಂದರೆ ಅವರ ಆಲೋಚನೆಗಳ ಮಹತ್ವ ಎಷ್ಟು ಎಂಬುದು ಗೊತ್ತಾಗುತ್ತದೆ. ಅಸಮಾನತೆ ವಿರುದ್ಧ ಹೋರಾಡಲು ಅವರ ಮಾತುಗಳನ್ನು ಸ್ಫೂರ್ತಿಯಾಗಿ ಪಡೆಯಬೇಕು ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಾದ ಎಸ್.ಮಹಮ್ಮದ್ ಬಾಬಾಜಾನ್, ಎ.ಇರ್ಫಾನ್‌ಪಾಷ, ಎ.ಶಿವಾಣಿ, ಎನ್.ಟಿ.ನಂದನ್‌ಕುಮಾರ್ ಕನಕದಾಸರ ಕುರಿತು ಮಾತನಾಡಿದರು. ದಾಸರ ಕೀರ್ತನೆಗಳನ್ನು ಸಂಗೀತ ಶಿಕ್ಷಕರಾದ ಚಂದ್ರಪ್ಪ, ಎಸ್.ವಿ.ರಾಮಮೂರ್ತಿ, ನಾಮದೇವ್ ಹಾಡಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ದಾಸ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಕೆ.ಪಿ.ನವಮೋಹನ್, ಕಾಚಹಳ್ಳಿ ಎಂ.ದೇವರಾಜ್, ಶ್ರೀನಿವಾಸರೆಡ್ಡಿ, ಗಜೇಂದ್ರ, ವೇಣುಗೋಪಾಲ್, ಚನ್ನಕೃಷ್ಣ, ದೇವರಾಜ್, ಶ್ರೀರಾಮಯ್ಯ, ವೆಂಕಟೇಶ್, ನರಸಿಂಹಪ್ಪ, ನಾರಾಯಣಮೂರ್ತಿ, ಪ್ರಭಾಕರ್ ಮತ್ತಿತರರು ಹಾಜರಿದ್ದರು.
ದ್ರಾಕ್ಷಿ ಬೆಳೆಗಾರರಿಗೆ ಕಾರ್ಯಾಗಾರ
ದ್ರಾಕ್ಷಿ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಉಷ್ಣ ಹವಾಮಾನ ಸೇರಿದಂತೆ ಎಲ್ಲಾ ರೀತಿಯ ವಾತಾವರಣಗಳಲ್ಲೂ ದ್ರಾಕ್ಷಿ ಬೆಳೆಯಬಹುದಾಗಿದೆ ಎಂದು ದ್ರಾಕ್ಷಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಗಂಗಾದೇವಿ ಸಮುದಾಯಭವನದಲ್ಲಿ ಮಂಗಳವಾರ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದಿಂದ ಆಯೋಜಿಸಿದ್ದ ದ್ರಾಕ್ಷಿ ಬೆಳೆಗಾರರ ಕಾರ್ಯಾಗಾರದಲ್ಲಿ ಸ್ಲೈಡ್ ಶೋ ಮೂಲಕ ವಿವರಣೆ ನೀಡಿ ಮಾತನಾಡಿದರು.
ದ್ರಾಕ್ಷಿ ಬೆಳೆಗೆ ಹೆಚ್ಚಿನ ಉಷ್ಣಾಂಶದ ಅಗತ್ಯವಿದೆ. ಶೀತ ವಾತವರಣದಿಂದ ಹಣ್ಣಿಗೆ ರೋಗ ತಗಲುವ ಸಾಧ್ಯತೆಯಿರುತ್ತದೆ. ಹಿಮ ಹಾಗೂ ಚಳಿಗಾಲದಲ್ಲಿ ದ್ರಾಕ್ಷಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ. ದ್ರಾಕ್ಷಿ ಉತ್ಪಾದನೆಯ ಶೇ.80 ರಷ್ಟು ಹಣ್ಣನ್ನು ವೈನ್ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಇನ್ನು 10 ರಷ್ಟು ಹಣ್ಣನ್ನು ಜ್ಯೂಸ್ ಮತ್ತಿತರ ಉದ್ದೇಶಗಳಿಗೆ ಬಳಸಲಾಗುತ್ತೆ. ಶೇ. 10 ರಷ್ಟು ಹಣ್ಣನ್ನು ಒಣದ್ರಾಕ್ಷಿಗಾಗಿ ತಯಾರಿಕೆಗೆ ಉಪಯಾಗಿಸಲಾಗುತ್ತದೆ.
ದ್ರಾಕ್ಷಿ ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭ ಹೆಚ್ಚಿಸಲು ಹಾಗೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ವಂಚನೆಯಿಂದ ತಪ್ಪಿಸಲು ಅವರಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ. ಪ್ರಪಂಚದಲ್ಲಿ ದ್ರಾಕ್ಷಿ ಉತ್ಪಾದಿಸುವ ಮೊದಲ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಭಾರತ ಐರೋಪ್ಯ ದೇಶಗಳಾದ ಯು.ಕೆ, ಜರ್ಮನಿ, ಸಿಂಗಾಪೂರ, ನೆದರ್ಲ್ಯಾಂಡ್‌ಗೆ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ರಫ್ತು ಮಾಡುತ್ತದೆ. ಭಾರತದ ಸೀಡ್ ಲೆಸ್ ದ್ರಾಕ್ಷಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ದೇಶದಲ್ಲಿ ಬೆಳೆಯುವ ಪ್ರಮಾಣವೂ ಏರಿಕೆಯಾಗುತ್ತಿದೆ. ದ್ರಾಕ್ಷಿಯನ್ನು ವೈನ್ ತಯಾರಿಕೆಯಲ್ಲಿ ಬಳಸುವುದರಿಂದ ಸರ್ಕಾರ ಹೆಚ್ಚಿನ ಬೆಂಬಲ ಹಾಗೂ ಸೂಕ್ತ ವ್ಯವಸ್ಥೆ ಮಾಡಿದರೆ ಜಾಗತಿಕ ಮಟ್ಟದಲ್ಲಿ ವೈನ್ ಉದ್ಯಮವನ್ನು ಬೆಳೆಸಬಹುದಾಗಿದೆ ಎಂದು ಹೇಳಿದರು.
ಮಣ್ಣು ಪರೀಕ್ಷೆ, ವಿವಿಧ ರೀತಿಯ ರೋಗಗಳು ಅದನ್ನು ತಡೆಯಲು ಬಳಸಬೇಕಾದ ವಿಧಾನಗಳು, ನೀರು ಮಿತವಾಗಿ ಬಳಸುವ ರೀತಿ, ನೀರನ್ನು ಸಾಂಗ್ಲಿ ಪದ್ಧತಿಯಲ್ಲಿ ನೀಡುವ ತಂತ್ರಜ್ಞಾನ, ಮಣ್ಣಿನ ಸಂರಕ್ಷಣೆ, ರಸಗೊಬ್ಬರ ಮತ್ತು ಪೌಷ್ಠಿಕಾಂಶಗಳನ್ನು ನೀಡುವ ಬಗೆ ಮುಂತಾದ ಹಲವಾರು ವಿಚಾರಗಳನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರಘು, ಸಹಾಯಕ ನಿರ್ದೇಶಕ ಆನಂದ್, ಮೇಲೂರು ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ಮಂಜುಳಾ, ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ಮಳ್ಳೂರು ಹರೀಶ್, ಕಾರ್ಯದರ್ಶಿ ನಾಗೇಂದ್ರ ಪ್ರಸಾದ್, ಮಳ್ಳೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ಬಿ.ಎಂ.ವೆಂಕಟರೆಡ್ಡಿ, ನವೀನ್, ಬಿ.ಎನ್.ಸಚಿನ್, ಮಳ್ಳೂರು ಕರಗಪ್ಪ, ರಾಮಣ್ಣ ಮತ್ತಿತರರು ಹಾಜರಿದ್ದರು.
ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿಯೂ ಬಯಲು ಶೌಚ ಮುಕ್ತ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ಹೇಳಿದರು.
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶನಿವಾರ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಗಳನ್ನೊಳಗೊಂಡ ತಂಡ ಮನೆ ಮನೆ ಸಮೀಕ್ಷೆ ನಡೆಸಿ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿ ಕಾರ್ಯಾದೇಶ ವಿತರಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿ ಬಹುತೇಕ ಗ್ರಾಮಗಳಲ್ಲಿ ಈಗಾಗಲೇ ಬಹಳಷ್ಟು ನಾಗರಿಕರು ಶೌಚಾಲಯ ನಿರ್ಮಾಣಮಾಡಿಕೊಂಡಿದ್ದು ಉಳಿದ ಅಲ್ಪ ಪ್ರಮಾಣದ ಜನರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಕಾರ್ಯಾದೇಶ ವಿತರಿಸಿ ಮುಂದಿನ ೧೫ ದಿನಗಳೊಳಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರೂಪೇಶ್, ಮಾಜಿ ಸದಸ್ಯ ಚಂದ್ರಶೇಖರ್, ಪಿಡಿಓ ಶಾರದ, ಕಾರ್ಯದರ್ಶಿ ಸಿದ್ದಣ್ಣ ಮತ್ತಿತರರು ಹಾಜರಿದ್ದರು.
ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ
ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸವಲತ್ತುಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣ ದಂತಹ ಕಾಮಗಾರಿಗಳು ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ ರಾಜಣ್ಣ ಹೇಳಿದರು.
ತಾಲ್ಲೂಕಿನ ಮಳ್ಳೂರು, ಕಾಚಹಳ್ಳಿ ಹಾಗು ಅಂಕತಟ್ಟಿ ಗ್ರಾಮಗಳಲ್ಲಿ ತಲಾ ೫ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎತ್ತಿನಹೊಳೆ ಯೋಜನೆಯಡಿ ತಾಲ್ಲೂಕಿನ ೧೦ ಗ್ರಾಮಗಳಿಗೆ ತಲಾ ೫ ಲಕ್ಷದಂತೆ ೫೦ ಲಕ್ಷ ರೂ ಮಂಜೂರಾಗಿದ್ದು ಇದೀಗ ಮೇಲಿನ ಮೂರು ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಇದೀಗ ಗ್ರಾಮಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆವಹಿಸಿ ಕಾಲ ಕಾಲಕ್ಕೆ ಕಾಮಗಾರಿಯ ಮೇಲೆ ನಿಗಾವಹಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಮುಖಂಡರಾದ ರಾಜೇಶ್, ಮಂಜುನಾಥಬಾಬು, ಸುಬ್ಬಾರೆಡ್ಡಿ, ಅಶೋಕ್, ಗುತ್ತಿಗೆದಾರ ಮಂಜುನಾಥ್, ನವೀನ್ ಮತ್ತಿತರರು ಹಾಜರಿದ್ದರು.
ದಿ.ಡಾ.ಸಂಜಯ್ ದಾಸ್ ಗುಪ್ತಾ ಗೆಳೆಯರ ಬಳಗದಿಂದ ಕಬಡ್ಡಿ ಪಂದ್ಯಾವಳಿ
ಗ್ರಾಮಾಂತರ ಪ್ರದೇಶಗಳಲ್ಲಿ ದೇಶೀಯ ಕ್ರೀಡೆಗಳನ್ನು ಆಯೋಜನೆ ಮಾಡುವ ಮೂಲಕ ಯುವಜನತೆಯಲ್ಲಿ ಕ್ರೀಡಾಭಿಮಾನ ಮೂಡಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ದಿ.ಡಾ.ಸಂಜಯ್ ದಾಸ್ ಗುಪ್ತಾ ಗೆಳೆಯರ ಬಳಗದಿಂದ ಆಯೋಜನೆ ಮಾಡಲಾಗಿದ್ದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ದಿ.ಡಾ.ಸಂಜಯ್ ದಾಸ್ ಗುಪ್ತಾ ಅವರು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ನೀಡಿದ್ದ ಹೆಚ್ಚಿನ ಪ್ರೋತ್ಸಾಹ ಇಲ್ಲಿನ ಜನರ ಮನದಾಳದಲ್ಲಿ ಉಳಿದಿರುವುದು ಶ್ಲಾಘನೀಯವಾಗಿದೆ.
ಯುವಜನರು ಕ್ರಿಕೆಟ್ ನಂತಹ ಕ್ರೀಡೆಗಳಿಂದಾಗಿ ದೇಶೀಯ ಕ್ರೀಡೆಗಳಾದ ಕಬ್ಬಡ್ಡಿ, ಖೋ ಖೋ, ಅಥ್ಲೇಟಿಕ್ಸ್ ನಂತಹ ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಕಬ್ಬಡ್ಡಿ ಪಂದ್ಯಾವಳಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡು ದೇಶದ ತಂಡ ಪ್ರಶಸ್ತಿಯನ್ನು ಗಳಿಸಿಕೊಂಡಿರುವುದು ನಮ್ಮ ಹೆಮ್ಮೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಯುವಜನರನ್ನು ಪ್ರೋತ್ಸಾಹ ಪಡಿಸುವಂತಹ ವೇದಿಕೆಗಳು ಸಿದ್ದಗೊಳ್ಳಬೇಕು ಎಂದರು.
ಸುತ್ತಮುತ್ತಲ ಗ್ರಾಮಗಳಿಂದ ಯುವಜನರು ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಬ್ಬಡಿ ಪಂದ್ಯಾವಳಿಯ ಪ್ರಥಮ ಬಹುಮಾನದ ಪ್ರಾಯೋಜಕತ್ವವಾಗಿ ೨೫ ಸಾವಿರ ರೂಪಾಯಿಗಳ ಚೆಕ್ಕನ್ನು ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಯಿತು. ತೀರ್ಪಗಾರರಾಗಿ ಸ್ವಾಮಿ ವಿವೇಕಾನಂದ ಶಾಲೆಯ ದೈಹಿಕ ಶಿಕ್ಷಕರುಗಳಾದ ಯು.ಪಿ.ನರಸಿಂಹಮೂರ್ತಿ, ಎಂ.ಎನ್.ಚಂದ್ರಶೇಖರ್ ಕಾರ್ಯ ನಿರ್ವಹಿಸಿದರು.
ಎಂ.ಎಸ್.ವೆಂಕಟೇಶಮೂರ್ತಿ, ಎಂ.ಎಲ್.ಮುನಿರಾಜು, ನಾಗರಾಜು, ನಾರಾಯಣಸ್ವಾಮಿ, ಸಾಯಿಬಾಬಾ, ಮಳ್ಳೂರು ಮಂಜುನಾಥ್, ಎಂ.ಬಿ.ಬೈರೇಗೌಡ, ಕೆ.ಎಂ,ಮಂಜುನಾಥ್, ಪ್ರತಾಪ್, ಬೈರಾರೆಡ್ಡಿ, ಚಂದ್ರಶೇಖರ್, ಎಂ.ಎನ್.ರೆಡ್ಡಿ, ಚಲಪತಿ ಮತ್ತಿತರರು ಹಾಜರಿದ್ದರು.
ಕನಕ ಜಯಂತಿ
ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಆರನೇ ತರಗತಿಯ ವಿದ್ಯಾರ್ಥಿ ಪ್ರವೀಣ ಕನಕದಾಸರ ವೇಷವನ್ನು ಧರಿಸಿ ಹರಿನಾಮ, ಭಜನೆ ಮತ್ತು ಕೀರ್ತನೆಗಳನ್ನು ಹಾಡಿದನು.
ಸಹಕಾರಿ ಸಂಘಗಳ ಬೆಳವಣಿಗೆಗೆ ಷೇರುದಾರರು ಶ್ರಮಿಸಬೇಕು
ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಂಘದ ಎಲ್ಲಾ ಷೇರುದಾರರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ೬೩ ನೇ ಅಖಿಲ ಭಾರತ ಸಹಕಾರ ಸಪ್ತಾಹ –2೦೧೬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಹಕಾರಿ ಸಂಘಗಳ ಮೂಲಕ ಸಹಕಾರಿ ಬೇಸಾಯ, ಸಹಕಾರಿ ಉದ್ದಿಮೆ, ಸಹಕಾರಿ ಮಾರಾಟ ಮತ್ತು ವ್ಯಾಪಾರ, ಸಹಕಾರಿ ಪತ್ತು ಮತ್ತು ಹಣಕಾಸಿನ ನಿರ್ವಹಣೆ, ಶಿಕ್ಷಣ, ಕೌಶಲ್ಯಾಧಾರಿತ ತರಬೇತಿ, ಪ್ರಚಾರ, ಮಾನವನ ಇತರೇ ಸಹಕಾರಿ ಚಟುವಟಿಕೆಗಳು ಹಾಗೂ ಆರೋಗ್ಯದ ಉದ್ದೇಶಗಳಿಗಾಗಿ ಉತ್ತೇಜನ ನೀಡುವಂತಹ ಕೆಲಸವಾಗಬೇಕು. ಸಹಕಾರಿ ಸಂಘಗಳಿಂದ ಪಡೆಯುವಂತಹ ಸಾಲಗಳನ್ನು ನಾಗರಿಕರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘಗಳನ್ನು ಉಳಿಸಿ ಬೆಳಸಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಮಾತನಾಡಿ, ಸಾಲಗಳನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಾರೊ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರೈತರು ಕೇವಲ ಕೃಷಿಯನ್ನು ಮಾತ್ರ ಅವಲಂಬಿಸದೆ ಹೈನುಗಾರಿಕೆ, ಮಿನಿಅರಣ್ಯ, ಗುಡಿಕೈಗಾರಿಕೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ತೀವ್ರ ನೀರಿನ ಅಭಾವದಿಂದಾಗಿ ಬಯಲುಸೀಮೆ ಭಾಗದ ಜನರು ರೇಷ್ಮೆಯಿಂದ ಸುಧಾರಣೆ ಕಾಣಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಹ ಚಟುವಟಿಕೆಗಳ ಕಡೆಗೆ ಹೆಚ್ಚು ಒಲವು ತೋರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಜಿಲ್ಲಾ ಯೂನಿಯನ್ ನಿರ್ದೇಶಕ ತಾದೂರುರಮೇಶ್, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಚಂದ್ರೇಗೌಡ, ಗೋವಿಂದರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚಿಲ್ಲರೆಗಾಗಿ ಸಾರ್ವಜನಿಕರ ಪರದಾಟ
೫೦೦ ಮತ್ತು ೧೦೦೦ ರೂಪಾಯಿಗಳ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಚಿಲ್ಲರೆಗಾಗಿ ಸಾರ್ವಜನಿಕರು ಪರದಾಡುತ್ತಿರುವ ನಾಗರಿಕರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.
ಬ್ಯಾಂಕುಗಳಲ್ಲಿ ಖಾತೆಗಳಿಗೆ ಹಣ ಜಮಾ ಮಾಡುವ ಗ್ರಾಹಕರಿಗಿಂತ ಖಾತೆಗಳಲ್ಲಿನ ಹಣವನ್ನು ಹಿಂಪಡೆಯಲು ಸಾಲಿನಲ್ಲಿ ನಿಂತಿದ್ದ ಗ್ರಾಹಕರೇ ಗುರುವಾರ ಬ್ಯಾಂಕುಗಳ ಮುಂದೆ ಹೆಚ್ಚಾಗಿದ್ದರು. ನೋಟುಗಳ ಬದಲಾವಣೆಗಾಗಿ ಬಂದಿದ್ದ ಗ್ರಾಹಕರ ಬೆರಳಿಗೆ ಶಾಯಿಯನ್ನು ಹಾಕುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು.
ಬ್ಯಾಂಕುಗಳಲ್ಲಿ ೨ ಸಾವಿರ ಮುಖಬೆಲೆಯ ನೋಟುಗಳನ್ನೆ ಗ್ರಾಹಕರಿಗೆ ವಿತರಣೆ ಮಾಡುತ್ತಿರುವುದರಿಂದ ದಿನಸಿ ಅಂಗಡಿಗಳ ವ್ಯಾಪಾರಿಗಳು, ಮೆಡಿಕಲ್ ಸ್ಟೋರ್‌ಗಳು, ಬೀದಿಬದಿ ವ್ಯಾಪಾರಿಗಳು ಚಿಲ್ಲರೆ ಸಮಸ್ಯೆಯಿಂದ ವ್ಯಾಪಾರಗಳಿಲ್ಲದೆ ಪರದಾಡುವಂತಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಹಳೇಯ ನೋಟುಗಳನ್ನು ಸ್ವೀಕಾರ ಮಾಡಿಕೊಳ್ಳದ ಪರಿಣಾಮವಾಗಿ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ಪರದಾಡುವಂತಾಗಿತ್ತು. ಪೆಟ್ರೋಲ್ ಬಂಕ್‌ಗಳಲ್ಲಿಯೂ ಹಳೇಯ ನೋಟುಗಳನ್ನು ಸ್ವೀಕಾರ ಮಾಡಲು ಹಿಂಜರಿಯುತ್ತಿದ್ದಾರೆ. ೫೦೦ ಕೊಟ್ಟರೆ ಪೂರ್ತಿ ಹಣಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳುವಂತೆ ಗ್ರಾಹಕರನ್ನು ಒತ್ತಾಯ ಮಾಡಲಾಗುತ್ತಿದೆ. ಗ್ರಾಹಕರು ನಿರಾಕರಿಸಿದರೆ ಚಿಲ್ಲರೆ ನೀಡಲು ಟೋಕನ್‌ಗಳನ್ನು ನೀಡಿ ಸಮಯ ನಿಗದಿ ಮಾಡುತ್ತಿದ್ದಾರೆ.
ಯಾವುದೇ ಬ್ಯಾಂಕುಗಳ ಎ.ಟಿ.ಎಂ.ಗಳ ಬಾಗಿಲುಗಳು ತೆರೆಯದೇ ಗ್ರಾಹಕರು ವುಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಕನಕಜಯಂತಿಯ ರಜಾ ದಿನವಾದ್ದರಿಂದ ಶಾಲಾ ಮಕ್ಕಳೂ ಕೂಡಾ ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಂತಿದ್ದರು. ಪೋಷಕರು ತಮ್ಮ ಹೆಸರುಗಳಲ್ಲಿ ಖಾತೆಗಳು ಇಲ್ಲದ ಕಾರಣ ವಿದ್ಯಾರ್ಥಿ ವೇತನಕ್ಕಾಗಿ ಮಾಡಿಸಿರುವ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಬ್ಯಾಂಕುಗಳಿಗೆ ಬರುವಂತಹ ಹಿರಿಯ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಆರ್.ಬಿ.ಐ ಘೋಷಣೆ ಮಾಡಲಾಗಿದ್ದರೂ ಕೂಡಾ ಹಿರಿಯ ನಾಗರಿಕರಿಗೆ ಯಾವುದೇ ಸೌಲಭ್ಯಗಳನ್ನು ಮಾಡಿಕೊಡದ ಕಾರಣ ಗಂಟೆಗಟ್ಟಲೇ ಸಾಲಿನಲ್ಲಿ ನಿಂತುಕೊಂಡು ಹಣಕ್ಕಾಗಿ ಕಾಯಬೇಕಾಯಿತು.
ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೊರತು ಪಡಿಸಿ ಸಹಕಾರಿ ಬ್ಯಾಂಕುಗಳಲ್ಲಿ ಚಿಲ್ಲರೆ ನೀಡುವ ವ್ಯವಸ್ಥೆಯಿಲ್ಲದ ಕಾರಣ, ಡಿ.ಸಿ.ಸಿ.ಬ್ಯಾಂಕ್, ಪಿ.ಎಲ್.ಡಿ.ಬ್ಯಾಂಕ್ ಮುಂತಾದ ಕಡೆಗಳಲ್ಲಿ ಖಾತೆಗಳನ್ನು ಹೊಂದಿರುವ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಚಿಲ್ಲರೆಗಾಗಿ ಪರದಾಡುವಂತಾಗಿತ್ತು.
ತಲೆಗೆ ಕಾಯಿ ಒಡೆಸಿಕೊಳ್ಳುವ ವಿಭಿನ್ನ ಕಲೆ
ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ ‘ತೆಂಗಿನಕಾಯಿ ಪವಾಡ’. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವ ದೃಶ್ಯ ಎಂಥವರಿಗಾದರೂ ಮೈನವಿರೇಳಿಸುವಂಥದ್ದು.
ನಗರದಲ್ಲಿ ಗುರುವಾರ ಕನಕ ಜಯಂತಿಯ ಪ್ರಯುಕ್ತ ಕನಕ ಭಜನೆ ಮಂದಿರದಲ್ಲಿ ವಿಶೇಷ ಪೂಜೆಯನ್ನು ನಡೆಸಿದ ನಂತರ ತೆಂಗಿನ ಕಾಯಿ ಪವಾಡವನ್ನು ನಡೆಸಲಾಯಿತು. ಗುರುವು ಭಕ್ತನ ತಲೆಯ ಮೇಲೆ ತೆಂಗಿನ ಕಾಯಿಯನ್ನು ಒಡೆಯುತ್ತಾ ಹೋಗುವ ರೋಮಾಂಚಕ ದೃಶ್ಯವನ್ನು ಸಾರ್ವಜನಿಕರು ಅಚ್ಚರಿಯಿಂದ ವೀಕ್ಷಿಸಿದರು.
ಸಮಾಜದಲ್ಲಿ ಹಾಲಿನಲ್ಲಿ ನೀರು ಬೆರೆಯುವಂತೆ ಬಾಳ್ವೆ ನಡೆಸುವರೆಂದು ಕುರುಬ ಜನಾಂಗದವರನ್ನು ಹಾಲು ಮತಸ್ಥರೆಂದು ಕರೆಯುತ್ತಾರೆ. ಅವರ ಕುಲದೈವ ಬೀರೇದೇವರು. ಈಶ್ವರ ಬೀರೇಶ್ವರನಾಗಿ ಭೂಲೋಕಕ್ಕೆ ಬಂದನೆಂದು ಇವರು ನಂಬುತ್ತಾರೆ. ಅವರು ತಮ್ಮ ಕುಲದೇವರನ್ನು ಪೂಜಿಸುವ ಆಚರಣೆಯನ್ನು ಕುರುಬರ ದ್ಯಾವರ ಎನ್ನುತ್ತಾರೆ. ತಮ್ಮ ಮೂಲ ದೇವಸ್ಥಾನದ ಬಳಿ ಸೇರಿ ಆಚರಿಸುವ ಹಬ್ಬವಿದು. ಭೀರೇಶ್ವರ, ಭತ್ಯೇಶ್ವರ, ಸಿದ್ದೇಶ್ವರ, ಅಬ್ಬಿಣಿ ಬೀರೇಶ್ವರ, ಇಟ್ಟೇಶ್ವರ, ಕಾಶಿ ಬೀರೇಶ್ವರ, ಅಜ್ಜ ಬೀರೇಶ್ವರ, ಗುರು ಮೂರ್ತೇಶ್ವರ, ಮೈಲಾರ ಲಿಂಗೇಶ್ವರ ಹೀಗೆ ವಿವಿಧ ಹೆಸರಿನ ಮನೆದೇವರನ್ನು ಅವರಲ್ಲಿ ಹಲವರು ಹೊಂದಿದ್ದಾರೆ.
ದ್ಯಾವರದಲ್ಲಿ ತಮಟೆ ಎತ್ತನ್ನು ಕಳಸ ಹಾಗೂ ಭಂಡಾರದ ಪೆಟ್ಟಿಗೆಯೊಂದಿಗೆ ತೆಗೆದುಕೊಂಡು ಹೋಗಿ ಗುರು ಅಥವಾ ಜಂಗಮರಿಂದ ಪೂಜೆ ಮಾಡಲಾಗುತ್ತದೆ. ಗುರುವು, ತಮಟೆ ಎತ್ತಿನ ಪಾದ ಮತ್ತು ಹಣೆ ತೊಳೆದು ಪೂಜಿಸಿ ಬೀರಪ್ಪನನ್ನು ಹೊಗಳುತ್ತಾ ವೀರಮಕ್ಕಳು, ವೀರಗಾರ್ರು ಅಥವಾ ಈರಗಾರ್ರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆಯುತ್ತಾರೆ.
ಈರಗಾರ್ರು ಆವೇಶ ಬಂದಂತೆ ‘ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮುದ್ದುಲ ವೀರಭದ್ರ, ಭಲರೇ ಬಾಲ್ವರೇ ವೀರ’ ಎಂಬ ಘೋಷಣೆ ಕೂಗುತ್ತಿರುತ್ತಾರೆ. ಹುಡುಗರಿಂದ ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಹೊಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದುಕೊಂಡು ದಂಡಕಗಳನ್ನು ಹೇಳಿಸಿಕೊಂಡು ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ. ಈ ಕಾಯಿ ಪವಾಡ ನೋಡಲು ಸಾವಿರಾರು ಮಂದಿ ಭಕ್ತಾದಿಗಳು ಕುತೂಹಲಿಗಳಾಗಿ ಸೇರಿರುತ್ತಾರೆ.
‘ಈ ಪವಾಡದಲ್ಲಿ ಭಾಗವಹಿಸುವ ವೀರಮಕ್ಕಳು ಉಪವಾಸ ವ್ರತವನ್ನು ಕೈಗೊಂಡಿರುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಬಹಳ ಭಯ ಭಕ್ತಿಯಿಂದ ಇದ್ದಾಗ ಮಾತ್ರ ತಲೆ ಮೇಲೆ ಎಷ್ಟು ಕಾಯಿ ಒಡೆದರೂ ತಲೆಗೆ ಗಾಯವಾಗುವುದಿಲ್ಲ. ಒಂದು ವೇಳೆ ಕಾಯಿ ಕರಟ ತಗುಲಿ ರಕ್ತ ಬಂದಿದ್ದರೂ ಭಂಡಾರ ಹಚ್ಚುವುದರಿಂದ ದೇವರ ಶಕ್ತಿಯಿಂದ ಗಾಯ ವಾಸಿಯಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಔಷಧಿ ಪಡೆಯಬೇಕಾದ ಅಗತ್ಯವಿಲ್ಲ. ಕೆಲವರು ನಿರಂತರವಾಗಿ ಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ’ ಎನ್ನುತ್ತಾರೆ ಕಾಯಿ ಒಡೆಯುವ ಗುರು ಜಂಗಮಕೋಟೆಯ ಸಿದ್ಧಲಿಂಗಸ್ವಾಮಿ.

