Home News ಪಶು ಆರೋಗ್ಯ ತಪಾಸಣೆ ಶಿಬಿರ: ಕೃಷಿ ವಿದ್ಯಾರ್ಥಿಗಳಿಂದ ಉಚಿತ ಚಿಕಿತ್ಸೆ

ಪಶು ಆರೋಗ್ಯ ತಪಾಸಣೆ ಶಿಬಿರ: ಕೃಷಿ ವಿದ್ಯಾರ್ಥಿಗಳಿಂದ ಉಚಿತ ಚಿಕಿತ್ಸೆ

0
2
GKVK Agriculture Students Animal Health Camp Cheemanahalli

Sidlaghatta ಶಿಡ್ಲಘಟ್ಟ: ತಾಲ್ಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ (GKVK – University of Agricultural Sciences, Bangalore) ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ವತಿಯಿಂದ ಗುರುವಾರ ಪಶು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರದಲ್ಲಿ ರೈತರು ಹಾಗೂ ಪಶುಪಾಲಕರು ಹಸು, ಎಮ್ಮೆ ಮತ್ತು ಕುರಿಗಳನ್ನು ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದರು. ಪಶು ವೈದ್ಯಕೀಯ ತಜ್ಞರು ಪಶುಗಳ ಆರೋಗ್ಯ ಪರಿಶೀಲಿಸಿ, ಅಗತ್ಯವಿರುವ ಪಶುಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಿದರು.

ಕೆಚ್ಚಲುಬಾವು, ಕಾಲುಬಾಯಿ ರೋಗ, ಕಂದುರೋಗ ಹಾಗೂ ಹುಚ್ಚುನಾಯಿ ಕಡಿತದಿಂದ ಉಂಟಾಗುವ ಸಮಸ್ಯೆಗಳು ಸೇರಿದಂತೆ ಪಶುಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಕೊಡಿಸುವುದು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅರಿವು ಮೂಡಿಸಲಾಯಿತು.

ಶಿಡ್ಲಘಟ್ಟ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶ್ರೀನಾಥ್ ರೆಡ್ಡಿ ಮಾತನಾಡಿ, “ಪಶುಗಳ ಆರೋಗ್ಯ ಕಾಪಾಡುವುದು ರೈತರ ಆರ್ಥಿಕ ಪ್ರಗತಿಗೂ ಮುಖ್ಯ. ಪಶುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು, ಜಂತುಹುಳು ನಿವಾರಣೆ ಮಾಡಿಸುವುದು, ಸಮತೋಲನ ಆಹಾರ ನೀಡುವುದು ಹಾಗೂ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯ” ಎಂದರು.

“ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವ ಮೂಲಕ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದು. ಇಂತಹ ಆರೋಗ್ಯ ಶಿಬಿರಗಳು ರೈತರಿಗೆ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ಕುರಿತು ಅರಿವು ಮೂಡಿಸಲು ಸಹಕಾರಿಯಾಗುತ್ತವೆ” ಎಂದು ಅವರು ಹೇಳಿದರು.

ಪಶುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆ ಹೆಚ್ಚಿಸುವಲ್ಲಿ ಅಜೋಲ್ಲಾದ ಮಹತ್ವ, ಪೌಷ್ಟಿಕ ಹಾಗೂ ಸಮತೋಲನ ಆಹಾರ ನೀಡುವ ವಿಧಾನ ಮತ್ತು ಸೈಲೇಜ್ ತಯಾರಿಸುವ ಕ್ರಮಗಳ ಕುರಿತು ಸಹ ರೈತರಿಗೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ 25 ಹಸುಗಳು, 10 ಎಮ್ಮೆಗಳು ಹಾಗೂ 75 ಕುರಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಪ್ರಸೂತಿ ವಿಭಾಗದ ತಜ್ಞ ಡಾ. ಬಿ.ಜೆ. ರೇಣುಕಾರಾಧ್ಯ, ಅಬ್ಲೂಡು ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಮುನಿಕೃಷ್ಣ, ಶಿಡ್ಲಘಟ್ಟ ಗ್ರಾಮೀಣ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಜೆ. ಪ್ರಶಾಂತ್, ಡೇರಿ ಉಪವ್ಯವಸ್ಥಾಪಕ ಡಾ. ರವಿಕಿರಣ್ ಸೇರಿದಂತೆ ರೈತರು ಹಾಗೂ ಪಶುಪಾಲಕರು ಭಾಗವಹಿಸಿದ್ದರು.

In English:

Final-year agriculture students from GKVK (University of Agricultural Sciences, Bangalore) organized a free animal health check and treatment camp at Cheemanahalli village. Veterinary experts examined 25 cows, 10 buffaloes, and 75 sheep brought in by farmers, providing free treatment and medicines, and educated farmers on early disease detection, vaccination schedules, deworming, balanced feed, and shed hygiene. Dr. Srinath Reddy, chief veterinary officer at Sidlaghatta veterinary hospital, said maintaining animal health is directly tied to farmers’ economic progress and urged early consultation with vets at the first sign of illness.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!