ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ೧೧ ನಿರ್ದೇಶಕರ ಸ್ಥಾನಗಳ ಪೈಕಿ ೧೧ ರಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಠೇವಣಿದಾರರ ಕ್ಷೇತ್ರದಿಂದ ಈಗಾಗಲೇ ಅವಿರೋಧವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ನಾಗರಾಜ್ ಆಯ್ಕೆಯಾಗಿದ್ದು ಇನ್ನುಳಿದಂತೆ ಸಾಲಗಾರರ ಕ್ಷೇತ್ರ ಸಾಮಾನ್ಯ ವರ್ಗದಿಂದ ಕಾಂತರಾಜು(೧೬೩), ಬಿ.ನಾರಾಯಣಸ್ವಾಮಿ (೧೬೭), ಎನ್.ಲಕ್ಷ್ಮಿನಾರಾಯಣಪ್ಪ (೧೩೭), ವೆಂಕಟೇಶಪ್ಪ (೧೫೯), ಪರಿಶಿಷ್ಠ ಜಾತಿ ಸ್ಥಾನದಿಂದ ಟಿ.ಎ.ನಾರಾಯಣಪ್ಪ(೧೭೮), ಪರಿಶಿಷ್ಠ ಪಂಗಡದ ಸ್ಥಾನದಿಂದ ಎನ್.ನರಸಿಂಹಯ್ಯ(೧೯೫), ಹಿಂದುಳಿದ ವರ್ಗದ ಸ್ಥಾನದಿಂದ ಕೆ.ಎನ್.ನರಸಿಂಹಮೂರ್ತಿ( ೧೮೨), ಜೆ.ಎನ್.ರಾಮಚಂದ್ರಪ್ಪ (೨೧೭), ಮಹಿಳಾ ಮೀಸಲು ಸ್ಥಾನದಿಂದ ನೀಲಮ್ಮ (೨೦೦) ಮತ್ತು ಎಂ.ಶೋಭಾರಾಣಿ (೨೦೯), ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ವೇಣುಗೋಪಾಲ್ (೧೭೨) ಮತಗಳು ಪಡೆಯುವ ಮೂಲಕ ಜಯಗಳಿಸಿರುವುದಾಗಿ ಚುನಾವಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಾಲಾದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ
ವಿಜ್ಞಾನ ಮಾತ್ರ ವಿಭಿನ್ನವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ
ಚಿಕಿತ್ಸಕ ನೋಟ ಮತ್ತು ಕನಸುಗಳನ್ನು ಕಾಣುವ ಪ್ರವೃತ್ತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಗಣಿತ ಮತ್ತು ವಿಜ್ಞಾನ ಮಾತ್ರ ವಿಭಿನ್ನವಾಗಿ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಇಸ್ರೋ ಜಿಯೋಸ್ಯಾಟ್ ಯೋಜನೆಯ ವಿಜ್ಞಾನಿ ಎಸ್.ಹಿರಿಯಣ್ಣ ತಿಳಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ರೋ ಸಂಸ್ಥೆ ಬೃಹದಾಕಾರವಾಗಿ ಬೆಳೆಯುತ್ತಿದೆ. ವರ್ಷಕ್ಕೆ 12 ಉಪಗ್ರಹಗಳನ್ನು ಉಡಾಯಿಸಲಾಗುತ್ತಿದೆ. ಯುವ ವಿಜ್ಞಾನಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.
ವಿಜ್ಞಾನ ಮಿದುಳಿಗೆ ಮೇವಿದ್ದಂತೆ, ಅದನ್ನು ಆನಂದಿಸುತ್ತಾ ಕಲಿಯಬೇಕು. ನಮ್ಮ ಸುತ್ತಮುತ್ತಲಿನ ಸಕಲ ಕ್ರಿಯೆಗಳಲ್ಲೂ ವಿಜ್ಞಾನ ಮತ್ತು ಗಣಿತವಿದೆ. ಶಾಲಾ ಪಠ್ಯದೊಂದಿಗೆ ಸಾಕಷ್ಟು ಪುಸ್ತಕಗಳನ್ನು ಓದಬೇಕು. 30 ವರ್ಷಗಳ ಅನುಭವದಿಂದ ಬರೆದ ಪುಸ್ತಕವನ್ನು 3 ಗಂಟೆ ಓದುವ ಮೂಲಕ ಆ ಜ್ಞಾನ ಸಂಪಾದಿಸಬಹುದಾಗಿದೆ. ಒಳ್ಳೆಯ ಪುಸ್ತಕಗಳನ್ನು ಓದಲು ಜೀವಮಾನ ಸಾಲದು. ಓದುವ ಚಟವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಶಿಸ್ತು, ಸಾಧನೆ ಮತ್ತು ಏಕಾಗ್ರತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಒಂದು ಜನಾಂಗಕ್ಕೆ ಸೀಮಿತವಾಗದಂತೆ ನಮ್ಮ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಾತಿ ಬೇಧವಿಲ್ಲದೇ ಗುರುತಿಸಿ ಪುರಸ್ಕರಿಸುತ್ತಿರುವ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿಭೆಯು ಜಾತಿ, ಧರ್ಮ, ಭಾಷೆ, ಗಡಿಯನ್ನು ಮೀರಿದಂಥದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿಗಳಲ್ಲಿ ಹೆಚ್ಚು ಅಂಕ ಗಳಿಸಿರುವ 20 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರತಿ ವಿದ್ಯಾರ್ಥಿಗೂ ಒಂದು ಸಾವಿರ ರೂ ನಗದು, ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು.
ತಾಲ್ಲೂಕಿನ ಸಾಧಕರಾದ ಚೀಮಂಗಲ ಮೂಲದ ಕವಿ ಬಿ.ಆರ್.ಲಕ್ಷ್ಮಣರಾವ್, ನವೋದಯ ವಿದ್ಯಾಸಂಸ್ಥೆಯ ಎನ್.ಆರ್.ಕೃಷ್ಣಮೂರ್ತಿ, ಡಾ.ಎನ್.ಎನ್.ರಾಘವೇಂದ್ರರಾವ್, ಡಾ.ಬ್ರಹ್ಮಶ್ರೀ ಉಮೇಶ್ ಶರ್ಮಗುರೂಜಿ, ಸಂಗೀತ ನಿರ್ದೇಶಕ ಪ್ರಣವ್ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುನ್ನ ರುದ್ರ ಕ್ರಮಾರ್ಚನಾ ಪೂರ್ವಕ ಬಿಲ್ವಯಾಗ ಮಹೋತ್ಸವವನ್ನು ನಡೆಸಲಾಯಿತು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ.ಮಂಜುನಾಥ್, ಬಿ.ಜೆ.ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ನಾಗಭೂಷಣರಾವ್, ಎನ್.ಕೆ.ಗುರುರಾಜರಾವ್, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿ.ಕೃಷ್ಣ, ಎಸ್.ಶ್ರೀಕಾಂತ್, ಶೇಷಭಟ್, ರಮೇಶ್‌ರಾವ್, ಎಸ್.ಸತೀಶ್, ಎಚ್.ವಿ.ನಾಗೇಂದ್ರ, ಯು.ಆರ್.ಮಾಧವರಾವ್, ಪಿ.ಶ್ರೀಕಾಂತ್, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.
ನಿಂತುಹೋದ ಅಂಗನವಾಡಿ ಕಟ್ಟಡದ ಕೆಲಸ, ಗ್ರಾಮಸ್ಥರ ಆಕ್ರೋಶ
ಅಂಗನವಾಡಿ ಕಟ್ಟಡ ಕಟ್ಟಲು ಟೆಂಡರ್ ಪ್ರಕ್ರಿಯೆ ಮುಗಿದು ಹಣ ನಿಗದಿಪಡಿಸಿದ್ದರೂ ಗುತ್ತಿಗೆದಾರರ ವಿಳಂಬದಿಂದಾಗಿ ಒಂದು ವರ್ಷವಾದರೂ ಕಾಮಗಾರಿ ನಡೆಯದೆ ಮಕ್ಕಳು ಸಮುದಾಯಭವನವನ್ನು ಆಶ್ರಯಿಸಬೇಕಾಗಿದೆ ಎಂದು ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷವೇ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯ ಪೂರೈಸಿ 9 ಲಕ್ಷ 15 ಸಾವಿರ ರೂಗಳಷ್ಟು ಹಣ ಮೀಸಲಿಡಲಾಗಿತ್ತು. ಪಾಯವನ್ನು ತೋಡುವ ಸಮಯದಲ್ಲಿ ಗ್ರಾಮಸ್ಥರು ಈ ಸ್ಥಳದಲ್ಲಿ ಹಿಂದೆ ಕುಂಟೆ ಇತ್ತು. ಹಾಗಾಗಿ ಕಟ್ಟಡದ ಭದ್ರತೆಯ ದೃಷ್ಟಿಯಿಂದ ಐದರಿಂದ ಆರು ಅಡಿಗಳ ಪಾಯ ಹಾಕಿ ಮತ್ತು ಪಿಲ್ಲರುಗಳ ಮೇಲೆ ಕಟ್ಟಡ ನಿರ್ಮಿಸಿ ಎಂದು ಒತ್ತಾಯಿಸಿದ್ದೆವು. ಕೇವಲ ಮೂರು ಅಡಿಗಳಷ್ಟು ಪಾಯ ತೋಡಿ ಗುತ್ತಿಗೆದಾರ ಇತ್ತ ಸುಳಿಯದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು. ಎಂಜಿನಿಯರ್ ಅವರನ್ನು ಕೇಳಿದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ. ದೇವರು ವರ ಕೊಟ್ಟರೂ ಪೂಜಾರಿ ವರಕೊಡದಂತಾಗಿದೆ ನಮ್ಮ ಗ್ರಾಮದ ಸ್ಥಿತಿ ಎಂದು ದೂರಿದರು.
‘ನಮ್ಮ ಮಕ್ಕಳು ಅಂಗನವಾಡಿ ಕಟ್ಟಡವಿಲ್ಲದೆ ಸಮುದಾಯ ಭವನದಲ್ಲಿರುತ್ತಾರೆ. ಯಾವುದಾದರೂ ಕಾರ್ಯಕ್ರಮವಿದ್ದಲ್ಲಿ ಮಕ್ಕಳು ವರಾಂಡದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಒಪ್ಪಿಕೊಂಡ ಕೆಲಸವನ್ನು ಮಾಡದಿದ್ದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನಮ್ಮ ಗ್ರಾಮದಲ್ಲಿ ಆದಷ್ಟು ಬೇಗ ಅಂಗನವಾಡಿ ಕಟ್ಟಡದ ಕಾಮಗಾರಿ ಪ್ರಾರಂಭಗೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ನಗರಸಭೆಯ ಅವ್ಯವಸ್ಥೆಯ ಬಗ್ಗೆ ನಗರಸಭೆಯ ಸದಸ್ಯರ ಆಕ್ರೋಶ
ನಗರಸಭೆಯ ಅವ್ಯವಸ್ಥೆಗಳು ಹಾಗೂ ಅಧಿಕಾರಿಗಳು ಮತ್ತು ಆಡಳಿತದ ಬಗ್ಗೆ ನಗರಸಭೆಯ ಸದಸ್ಯರೇ ಹತಾಶರಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಗಳನ್ನು ಖರ್ಚುಮಾಡಿ ದಿಬ್ಬೂರಹಳ್ಳಿ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಮಾಡಿ ಸುಮಾರು ೩೦ರಿಂದ ೫೦ ದೀಪಗಳನ್ನು ಹಿಂದಿನ ಪುರಸಭೆಯ ಅವಧಿಯಲ್ಲಿ ಹಾಕಿಸಲಾಗಿತ್ತು . ಆದರೆ ಅದರ ನಿರ್ವಹಣೆಯನ್ನು ಈಗಿರುವ ನಗರ ಸಭೆಯು ಸರಿಯಾಗಿ ನಿರ್ವಯಿಸುತ್ತಿಲ್ಲ ಎಂದು ನಗರಸಭೆಯ ಸದಸ್ಯ ವೆಂಕಟಸ್ವಾಮಿ ಆರೋಪಿಸಿದ್ದಾರೆ.
ನಗರದ ಜನನಿಬಿಡ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಯಲು ಅನುಕೂಲವಾಗಲಿ, ಸಂಚಾರಕ್ಕೆ ಸಹಾಯಕವಾಗಲಿ ಎಂದು ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅದರ ಸೂಕ್ತ ನಿರ್ವಹಣೆಯಿಲ್ಲದೇ ಹಗಲಿನ ಹೊತ್ತು ಕೂಡ ಉರಿಯುತ್ತಲೇ ಇರುತ್ತದೆ. ಆದರೆ ನಗರ ಸಭೆಯ ಅಧಿಕಾರಿಗಳು ಸಂಬಳವನ್ನು ಪಡೆದು ಸಾರ್ವಜನಿಕ ಕೆಲಸಗಳನ್ನು ಮಾಡುತ್ತಿಲ್ಲ. ಪರಿಸರ ಅಧಿಕಾರಿಗಳು ಚರಂಡಿ, ನೀರಿನ ವ್ಯವಸ್ತೆ, ಬೀದಿ ದೀಪಗಳ ನಿರ್ವಹಣೆಯನ್ನು ಮಾಡದೇ ಇರುವುದಕ್ಕೆ ಕಸದ ರಾಶಿ ಮತ್ತು ಜೋಡಿ ರಸ್ತೆಯ ಬೀದಿ ದೀಪಗಳು ಹಾಡು ಹಗಲೇ ಉರಿಯುತ್ತಿರುವುದು ಸಾಕ್ಷಿಯಾಗಿದೆ ಎಂದರು.
ಬೆಸ್ಕಾಂ ಇಲಾಖೆಗೆ ಸಾವಿರಾರು ರೂಪಾಯಗಳು ನಗರ ಸಭೆಯಿಂದ ಕಟ್ಟಬೇಕಾಗುತ್ತದೆ. ಈ ಅವ್ಯವಸ್ಥೆಗಳಿಂದ ನಗರಸಭೆಯು ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಜನರ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ. ಇದಕ್ಕೆ ನಗರ ಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದ ಅವರು ಇದೇ ರೀತಿ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ ಮುಂದುವರೆದರೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ರಾಗಿ ರೈತನಿಗೆ ಚೇತೋಹಾರಿ….
ಮಳೆ ಕಣ್ಣಾಮುಚ್ಚಾಲೆಯಾಟವಾಡುತ್ತಿದೆ. ಎಲ್ಲಿ ಬೆಳೆ ಹಾಳಾಗುತ್ತೋ ಎಂಬ ಆತಂಕ ರೈತರದ್ದು. ಬಹುತೇಕ ಕಡೆ ಬೆಳೆ ಒಣಗಿಯೂ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ನೀರಿನ ಸಮರ್ಥ ಬಳಕೆ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ರಾಗಿಯನ್ನು ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ರೈತರೊಬ್ಬರು ಬೆಳೆಯುತ್ತಿದ್ದಾರೆ.
ರಾಗಿ ತಿಂದವ ನಿರೋಗಿ ಎಂಬ ಮಾತಿದೆ. ರಾಗಿ ಈ ನೆಲದ ಬಂಗಾರ. ತಿನ್ನುವವರಿಗೆ ಮಾತ್ರವಲ್ಲ ಬೆಳೆಯುವವರಿಗೂ ಎಂಬುದನ್ನು ಕನ್ನಮಂಗಲದ ರೈತ ಬೈರೇಗೌಡ ತೋರಿಸಿಕೊಟ್ಟಿದ್ದಾರೆ.
ಕನ್ನಮಂಗಲದ ರೈತ ಬೈರೇಗೌಡ ಒಂದೂ ಮುಕ್ಕಾಲು ಎಕರೆಯಲ್ಲಿ ಎಂ.ಎಲ್ 365 ಎಂಬ ರಾಗಿ ತಳಿಯನ್ನು ನಾಟಿ ಮಾಡಿದ್ದಾರೆ. ನರ್ಸರಿಯಿಂದ 25 ಸಾವಿರ ಸಸಿಗಳನ್ನು ತಂದು 2 ಅಡಿ ಮತ್ತು ಒಂದೂವರೆ ಅಡಿ ಅಂತರದಲ್ಲಿ ನಾಟಿ ಮಾಡಿ, ಹನಿ ನೀರಾವರಿ ಪದ್ಧತಿಯಲ್ಲಿ ನೀರು ಹಾಯಿಸುತ್ತಿದ್ದಾರೆ. ಒಂದೊಂದೂ ಹಲವಾರು ಕುಡಿಗಳನ್ನು ಹೊಡೆದಿದ್ದು, ಪ್ರತಿಯೊಂದು ಕವಲೂ ರಾಗಿ ತೆನೆಯನ್ನು ಹೊತ್ತು ತರಲು ಸಿದ್ಧವಾಗುತ್ತಿದೆ.
ಈ ಬಾರಿ ಮಳೆಯಿಲ್ಲದ ಕಾರಣ ತಾಲ್ಲೂಕಿನೆಲ್ಲೆಡೆ ಮಳೆಯಾಶ್ರಿತವಾಗಿ ಬೆಳೆಯಲು ಹೊರಟ ರಾಗಿ ಪೈರುಗಳು ಒಣಗಿವೆ. ಅಕಸ್ಮಾತ್ ಬಂದಿದ್ದರೂ ಇಳುವರಿ ಕಡಿಮೆಯಾಗಿದೆ. ಎಲ್ಲರೂ ಒತ್ತೊತ್ತಾಗಿ ರಾಗಿ ಚೆಲ್ಲುವ ಮೂಲಕ ಬೆಳೆ ಬೆಳೆದರೆ, ಬೈರೇಗೌಡರದ್ದು ಮಾತ್ರ ವಿಭಿನ್ನ ಹಾದಿ.
‘ಈ ಪದ್ಧತಿಯಲ್ಲಿ ಕಾಳುಗಳು ದಪ್ಪನಾಗಿರುತ್ತವೆ. ಜೊಳ್ಳು ಬರುವುದಿಲ್ಲ. ಉತ್ತಮ ಗಾಳಿ ಬೆಳಕಿರುವುದರಿಂದ ರೋಗ ಕಡಿಮೆ. ತೆನೆ ಕತ್ತರಿದರೂ ಹುಲ್ಲು ಮೇವಿಗೆ ಹಸಿರಾಗಿ ಸುಪುಷ್ಟಿಯಿಂದ ಕೂಡಿರುತ್ತದೆ. ಕಡ್ಡಿ ದಪ್ಪವಿರುವುದರಿಂದ ದನಕರುಗಳ ಮೇವಿಗೆ ಒದಗುತ್ತದೆ. ಸುಮಾರು ಒಂದು ಎಕರೆಗೆ ಈ ಪದ್ಧತಿಯಿಂದ 50 ರಿಂದ 60 ಮೂಟೆ ರಾಗಿ ಸಿಗುತ್ತದೆ. ಅದೇ ಸಾಂಪ್ರದಾಯಿಕ ಪದ್ಧತಿಯಲ್ಲಿ 10 ರಿಂದ 15 ಮೂಟೆಯಷ್ಟೇ ಸಿಗುವುದು. ಐದಯ ಎಕರೆ ಮಾಮೂಲಿ ರೀತಿಯಲ್ಲಿ ಬೆಳೆಯುವುದಕ್ಕಿಂತ ಈ ರೀತಿಯಾಗಿ ಒಂದು ಎಕರೆ ಬೆಳೆದರೆ ಸಾಕು’ ಎಂದು ಕನ್ನಮಂಗಲದ ಬೈರೇಗೌಡರು ವಿವರಿಸುತ್ತಾರೆ.
‘ಪೋಷಕಾಂಶಗಳ ಖಜಾನೆಯಾಗಿರುವ ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೇರಳವಾಗಿದೆ. ಅಷ್ಟೇ ಅಲ್ಲ ಪ್ರೊಟೀನ್ ಸಹ ಸಾಕಷ್ಟಿರುವುದರಿಂದ ರಾಗಿ ಒಂದು ಸಮೃದ್ಧ ಆಹಾರ. ಮಕ್ಕಳಿಗೆ ಬಣ್ಣಬಣ್ಣದ ಜಾಹೀರಾತಿನ ಬೇಬಿ ಫುಡ್ ತಿನ್ನಿಸುವ ಬದಲು ರಾಗಿ ಮುದ್ದೆ, ಅಂಬಲಿ, ಗಂಜಿ ಊಟ ರೂಢಿ ಮಾಡಿಸಿದರೆ ಅವರ ಬೆಳವಣಿಗೆ ಉತ್ತಮವಾಗುತ್ತದೆ ಎನ್ನುತ್ತಾರೆ ಹಿರಿಯರು. ಗ್ರಾಮೀಣ ಪ್ರದೇಶವನ್ನು ಬಿಟ್ಟು ಈಗ ಪಟ್ಟಣದಲ್ಲೂ ರಾಗಿ ಬಲು ಪ್ರಚಲಿತ. ಉಷ್ಣತೆ, ಮಧುಮೇಹ ನಿಯಂತ್ರಣಕ್ಕೆ ರಾಗಿ ಬಹು ಪ್ರಸಿದ್ಧಿ. ರಾಗಿಗೆ ಬೇಡಿಕೆ ಇದ್ದರೂ ಬೆಳೆಯುವ ರೈತರು ಮತ್ತು ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ ವಿಭಿನ್ನ ರೀತಿಯಲ್ಲಿ ಹೆಚ್ಚು ಇಳುವರಿ, ಉತ್ತಮ ಬೆಳೆ ಎಂಬ ಉದ್ದೇಶದಿಂದ ಈ ಸಾಲು ಪದ್ಧತಿಯನ್ನು, ಗುಣಿಪದ್ಧತಿಯನ್ನು ಅನುಸರಿಸಿದ್ದೇನೆ’ ಎಂದು ಅವರು ತಿಳಿಸಿದರು.
ಪಿಡಿಓಗಳು ಯಾರ ಒತ್ತಡಕ್ಕೂ ಮಣಿಯದಿರಿ
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಡೆಸುವಾಗ ಸ್ಥಳೀಯ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವಂತಹ ಪಿಡಿಓಗಳು ಗ್ರಾಮ ಪಂಚಾಯತಿಗಳ ಅಭಿವೃದ್ಧಿಯ ನೇರ ಹೊಣೆಗಾರಿಕೆ ಹೊತ್ತುಕೊಂಡಿದ್ದೀರಿ, ಯಾರ ಒತ್ತಡಗಳಿಗೂ ಮಣಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡಿ. ಕಾಮಗಾರಿಗಳ ಗುಣಮಟ್ಟ ಹಾಗೂ ಸ್ಥಳೀಯವಾಗಿ ಬರುವಂತಹ ಕೆಲವು ಸಣ್ಣಪುಟ್ಟ ಲೋಪದೋಷಗಳನ್ನು ನಿವಾರಣೆ ಮಾಡಿಕೊಂಡು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಜನಪ್ರತಿನಿಧಿಗಳನ್ನು ಬಳಕೆ ಮಾಡಿಕೊಳ್ಳಿ. ಕಾನೂನು ಬಾಹಿರವಾಗಿ ಒತ್ತಡಗಳಿಗೆ ಮಣಿದು ಸರ್ಕಾರದಿಂದ ಬರುವಂತಹ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸ ಮಾಡದ ಅಧಿಕಾರಿಗಳ ವೇತನವನ್ನು ತಡೆಹಿಡಿಯುವುದರ ಜೊತೆಗೆ ಅಮಾನತ್ತು ಮಾಡುವಂತಹ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಮುಂದಿನ ಡಿಸೆಂಬರ್ ೩೧ ರೊಳಗೆ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಗಳಲ್ಲಿರುವ ಹಳ್ಳಿಗಳಲ್ಲಿ ಪ್ರತಿಯೊಂದು ಕುಟುಂಬಕ್ಕೂ ಶೌಚಾಲಯ ನಿರ್ಮಾಣವಾಗಿರಬೇಕು. ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಡೆಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಮಾತನಾಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಯಾರೂ ಸ್ಪಂದಿಸುವುದಿಲ್ಲ, ಬೇಜಾವಾಬ್ದಾರಿಯಿಂದ ಕೆಲಸ ಮಾಡುತ್ತಾರೆ ಇದೇ ಪರಿಸ್ಥಿತಿ ಮುಂದುವರೆದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಬ್ಲೂಡು ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಬಹಳಷ್ಟು ಗ್ರಾಮ ಪಂಚಾಯತಿಗಳಲ್ಲಿನ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ, ಐ.ಎ.ಎಸ್.ಅಧಿಕಾರಿಗಳಂತೆ ವರ್ತನೆ ಮಾಡುತ್ತಾರೆ. ಕಂದಾಯ ಜಮೀನುಗಳಲ್ಲಿ ನಿವೇಶನಗಳನ್ನು ಸಿದ್ದಗೊಳಿಸಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮ ಪಂಚಾಯತಿಯಿಂದ ನಮೂನೆ ೯,೧೦ ಫಾರಂಗಳನ್ನು ನೀಡಿದ್ದಾರೆ. ಪಂಚಾಯತಿಗಳ ವ್ಯಾಪ್ತಿಗಳಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳನ್ನು ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡುವ ಕಡೆಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆಯೆ ಹೊರತು ಪಂಚಾಯತಿಗಳ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಾಸ್ಕರ್, ಜಿಲ್ಲಾ ಪಂಚಾಯತಿ ಸದಸ್ಯರಾದ ಡಾ.ಜಯರಾಮರೆಡ್ಡಿ, ತನುಜಾರಘು, ಸತೀಶ್, ತಾಲ್ಲೂಕು ಪಂಚಾಯತಿ ಇ.ಓ ವೆಂಕಟೇಶ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ ಮತ್ತಿತರರು ಹಾಜರಿದ್ದರು.
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಅಕ್ಟೋಬರ್ 23 ರ ಭಾನುವಾರ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಲೋಕ ಕಲ್ಯಾಣಾರ್ಥವಾಗಿ ರುದ್ರ ಕ್ರಮಾರ್ಚನಾ ಪೂರ್ವಕ ಬಿಲ್ವಯಾಗ ಮಹೋತ್ಸವವನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಮತ್ತು ಇಸ್ರೋ ಸಂಸ್ಥೆಯ ವಿಜ್ಞಾನಿ ಎಸ್.ಹಿರಿಯಣ್ಣ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಡಿ.ಟಿ.ಸತ್ಯನಾರಾಯಣರಾವ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿರ್ದೇಶಕ ಎಸ್.ಪಿ.ಕುಲಕರ್ಣಿ, ಟೆಕ್ಸೆಲ್ ಆಟೋಮೇಷನ್‌ನ ಆರ್.ಹರೀಶ್ ರಾಯಸ, ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ.ಮಂಜುನಾಥ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ನಾಗಭೂಷಣ್ ರಾವ್, ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ತಾಲ್ಲೂಕು ಬ್ರಾಹ್ಮನ ಮಹಾಸಭಾ ಅಧ್ಯಕ್ಷ ಎ.ಎಸ್.ರವಿ ಹಾಜರಿರುತ್ತಾರೆ.
ನಾಲ್ಕು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ
ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯತಿ ಕಾರ್ಯಾಲಯಗಳ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅಧಿಕಾರಾವಧಿ ಕೊನೆಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ ಈ ನಾಲ್ಕು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯತಿಗೆ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ನಾಗಮಂಗಲ ಗ್ರಾಮ ಪಂಚಾಯತಿಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್, ಹೊಸಪೇಟೆ ಗಮ ಪಂಚಾಯತಿಗೆ ತಾಲ್ಲೂಕು ಪಂಚಾಯತಿನ ಸಹಾಯಕ ಲೆಕ್ಕಾಧಿಕಾರಿ ವರದರಾಜುರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದ್ದಾರೆ.
ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿರುವ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರ ಹಾಗು ಕರ್ತವ್ಯಗಳನ್ನು ಚಲಾಯಿಸುವ ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ದ್ವಿಮುಖ ಗಣಪತಿ ದೇವಾಲಯದ ವಾರ್ಷಿಕೋತ್ಸವ
ನಗರದ ಅಶೋಕರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದ ಐದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಬುಧವಾರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಹೋಮವನ್ನು ನೆರವೇರಿಸಲಾಯಿತು. ದೇವಾಲಯ ಸಮಿತಿ ಹಾಗೂ ಯುವ ಸದಸ್ಯರಿಂದ ದ್ವಿಮುಖ ಗಣಪತಿ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು, ವಿಧ ವಿಧವಾದ ಹೂಗಳಿಂದ ದೇವಾಲಯವನ್ನುವಿಶೇಷವಾಗಿ ಸಿಂಗಾರಗೊಳಿಸಲಾಗಿತ್ತು, ದೇವಾಲಯವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು, ವಾರ್ಷಿಕೋತ್ಸವದ ಅಂಗವಾಗಿ ಭಕ್ತಾದಿಗಳು ಬೆಳಗಿನಿಂದಲೇ ದೇವಾಲಯಕ್ಕೆ ಬೇಟಿ ನೀಡಿ ಪೂಜೆಗಳನ್ನು ಸಲ್ಲಿಸಿದರು.
ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.
ಇಬ್ಬನಿಯ ನೀರಿನಲ್ಲಿ ಬೆಳೆದ ಕ್ಯಾಪ್ಸಿಕಮ್ ಬಾಂಗ್ಲಾದೇಶಕ್ಕೆ ರಫ್ತು
ಒಂದೆಡೆ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಆಳಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಮುಂಜಾನೆ ಹೊತ್ತಿನಲ್ಲಿ ಮಂಜು ಆವರಿಸುತ್ತಾ ಮಳೆಗಾಲ ಮುಗಿದಿದೆ ಎಂಬ ಮುನ್ಸೂಚನೆ ನೀಡುತ್ತಿದೆ. ಇಂಥಹ ಕಷ್ಟಕರ ಸನ್ನಿವೇಶದಲ್ಲೂ ತಾಲ್ಲೂಕಿನ ನಾರಾಯಣದಾಸರಹಳ್ಳಿಯ ರೈತ ದೊಡ್ಡಮುನಿಯಪ್ಪನವರ ಮಗ ರೆಡ್ಡಪ್ಪ ಬೆಳಿಗ್ಗೆ ಆವರಿಸುವ ಇಬ್ಬನಿಯಿಂದಲೇ ನೀರು ಹಿಡಿದಿಟ್ಟು ಬಣ್ಣ ಬಣ್ಣದ ಕ್ಯಾಪ್ಸಿಕಮ್(ದಪ್ಪ ಮೆಣಸಿನಕಾಯಿ) ಬೆಳೆಯುತ್ತಿದ್ದಾರೆ. ಇವರು ಬೆಳೆಯುತ್ತಿರುವ ಕ್ಯಾಪ್ಸಿಕಮ್ ಬಾಂಗ್ಲಾದೇಶಕ್ಕೂ ರಫ್ತಾಗಿದೆ.
ವಾರ್ಷಿಕ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಪಾಲಿ ಹೌಸ್ ನಿರ್ಮಿಸಲು ಸಹಾಯಧನ ನೀಡುತ್ತಿದ್ದು, ನಾರಾಯಣದಾಸರಹಳ್ಳಿಯ ರೈತ ರೆಡ್ಡಪ್ಪ ಅರ್ಧ ಎಕರೆಯಲ್ಲಿ ಪಾಲಿಹೌಸ್ ನಿರ್ಮಿಸಿಕೊಂಡು ಅದರ ಮೇಲೆ ಬೀಳುವ ಇಬ್ಬನಿ, ಮಳೆ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸುತ್ತಿದ್ದಾರೆ.
ಸುಮಾರು ಒಂದೂಕಾಲು ಲಕ್ಷ ರೂಪಾಯಿಗಳನ್ನು ವ್ಯಯಿಸಿ 18 ಮೀಟರ್ ಉದ್ದ ಮತ್ತು ಅಗಲದ ಹಾಗೂ 11 ಅಡಿ ಆಳದ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿರುವ ಇವರು ಬಿಸಿಲು ಬೀಳದಂತೆ, ಯಾವುದೇ ಪ್ರಾಣಿ, ಕಸ ಬೀಳದಂತೆ ಕಂಬಿಯನ್ನು ಕಟ್ಟಿ ಶೀಟ್ ಹೊದಿಸಿ ಹೊಂಡವನ್ನು ರಕ್ಷಿಸಿದ್ದಾರೆ.
‘ಕೊಳವೆ ಬಾವಿಯನ್ನು ನಾವು ಅವಲಂಬಿಸಿಯೇ ಇಲ್ಲ. ಬೆಳಗಿನ ಹೊತ್ತು ಆವರಿಸುವ ಮಂಜಿನಿಂದಲೇ ಸುಮಾರು 100 ರಿಂದ 200 ಲೀಟರ್ ನೀರು ಸಂಗ್ರಹವಾಗುತ್ತದೆ. ಹೆಚ್ಚು ಮಂಜು ಆವರಿಸಿದ ದಿನ 500 ಲೀಟರ್ ವರೆಗೂ ನೀರು ಸಂಗ್ರಹಣೆಯಾಗುತ್ತದೆ. ಮಳೆ ಬಿದ್ದರಂತೂ ಸಂಪೂರ್ಣ ನೀರು ಕೃಷಿ ಹೊಂಡ ಸೇರುತ್ತದೆ. ಕೊಳವೆ ಬಾವಿಯ ನೀರಿಗಿಂತ ಆಗಸದ ಪ್ರಕೃತಿಯ ನೀರಿನಲ್ಲಿ ಲವಣಾಂಶಗಳು ಹೆಚ್ಚಿರುತ್ತವೆ. ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಕ್ಯಾಪ್ಸಿಕಮ್ ಬೆಳೆಗೆ ಬೆಳಿಗ್ಗೆ ಮತ್ತು ಸಂಜೆ ಐದೈದು ನಿಮಿಷ ನೀರು ಹಾಯಿಸಿದರೆ ಸಾಕು’ ಎಂದು ತಮ್ಮ ನೀರಿನ ಸದ್ಭಳಕೆಯ ಬಗ್ಗೆ ರೆಡ್ಡಪ್ಪ ವಿವರಿಸುತ್ತಾರೆ.
‘ಅರ್ಧ ಎಕರೆ ಪ್ರದೇಶದಲ್ಲಿ 15 ಲಕ್ಷ ರೂಗಳು ಬ್ಯಾಂಕ್‌ನಲ್ಲಿ ಸಾಲ ಮಾಡಿ ಪಾಲಿ ಹೌಸ್ ನಿರ್ಮಿಸಿದೆ. ಸರ್ಕಾರ 11 ಲಕ್ಷ 75 ಸಾವಿರ ರೂಗಳು ಸಹಾಯಧನ ನೀಡಿದೆ. ಮೊದಲ ಬೆಳೆ ಸೌತೇಕಾಯಿಯನ್ನು ಹಾಕಿದ್ದೆ. ಈಗ ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಮ್ ಹಾಕಿದ್ದೇನೆ. ವರಮಹಾಲಕ್ಷ್ಮಿ ಹಬ್ಬದ ದಿನ ನಾಟಿ ಮಾಡಿದ್ದು, ಕಳೆದ ಶುಕ್ರವಾರ ಮೊದಲ ಫಸಲು ಬಂದಿತು. 280 ಕೆಜಿ ಆಯಿತು. ಬಾಂಗ್ಲಾದೇಶಕ್ಕೆ ರಫ್ತು ಮಾಡುವವರು ಒಂದು ಕೆಜಿಗೆ 20 ರೂಗಳಂತೆ ತೋಟಕ್ಕೇ ಬಂದು ಕೊಂಡರು. ಎಂಟರಿಂದ ಹತ್ತು ತಿಂಗಳು ಈ ಬೆಳೆ ಬರುತ್ತದೆ. ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಹಣ್ಣು ಕೀಳುತ್ತೇವೆ. ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿರುವುದರಿಂದ ರಫ್ತು ಮಾಡುವವರು ತೋಟಕ್ಕೇ ಬಂದು ಕೊಳ್ಳುತ್ತಿದ್ದಾರೆ. ಪಾಲಿ ಹೌಸ್ ಪದ್ಧತಿಯಿಂದ ಇಳುವರಿ ಮತ್ತು ಗುಣಮಟ್ಟ ಹೆಚ್ಚುವುದಲ್ಲದೆ ರೋಗಗಳು ಕಡಿಮೆ. ನೀರು ಕೂಡ ಉಳಿತಾಯ’ ಎಂದು ಅವರು ಹೇಳಿದರು.
‘ಈಗ ಮಳೆ ಇಲ್ಲದೆ ತಾಲ್ಲೂಕು ಬರಗಾಲವನ್ನು ಎದುರಿಸುತ್ತಿದೆ. ಸರ್ಕಾರ ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡುವುದು ನಿಲ್ಲಿಸಿರುವುದನ್ನು ಹಿಂಪಡೆಯಬೇಕು. ಪಾಲಿಹೌಸ್ ನಿರ್ಮಾಣವಾದಂತೆ ಅತ್ಯಂತ ಕಡಿಮೆ ನೀರನ್ನು ಬಳಸಿ ಉತೃಷ್ಟ ಮತ್ತು ಹೆಚ್ಚು ಫಸಲನ್ನು ನಮ್ಮ ರೈತರು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರದ ರಾಮಾಂಜಿನಪ್ಪ ಹೇಳುತ್ತಾರೆ
ಜೀವಾಮೃತ ಮತ್ತು ಸಾವಯವ ಔಷಧಿ:ನೀರಿನೊಂದಿಗೆ ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಮಣ್ಣು, ಸಗಣಿ, ಗಂಜಲದ ಮಿಶ್ರಣವನ್ನು ಜೀವಾಮೃತವೆನ್ನುತ್ತಾರೆ. ಒಂದೊಂದು ಗಿಡಕ್ಕೂ ಒಂದೊಂದು ಲೋಟ ಜೀವಾಮೃತವನ್ನು 15 ದಿನಗಳಿಗೊಮ್ಮೆ ನೀಡುತ್ತಾರೆ. ಜೀವಾಮೃತ ಉಪಯೋಗಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ರೆಡ್ಡಪ್ಪ.
ಟ್ರಿಪ್ಸ್, ಮೈಟ್ಸ್ ಮುಂತಾದ ಕೀಟಗಳನ್ನು ತಡೆಗಟ್ಟಲು ಅರ್ಧ ಲೀಟರ್ ನಿಂಬೆ ರಸಕ್ಕೆ ಎರಡು ನಾಟಿ ಮೊಟ್ಟೆಯನ್ನು ಹಾಕಿ 15 ದಿನ ಕೊಳೆಸಿ ಒಂದು ಲೀಟರ್ ನೀರಿಗೆ 4 ಮಿಲಿಯಂತೆ ಮಿಶ್ರಣ ಮಾಡಿಕೊಂಡು ಗಿಡಕ್ಕೆ ಸಿಂಪಡಿಸುತ್ತಾರೆ. ಬೂದಿ ರೋಗಕ್ಕೆ 15 ಲೀಟರ್ ನೀರಿಗೆ ಒಂದು ಕೆಜಿ ಬೂದಿಯನ್ನು ಮಿಶ್ರಣ ಮಾಡಿಕೊಂಡು ಸಿಪಡಿಸುತ್ತಾರೆ. ಹುಳಿ ಮಜ್ಜಿಗೆಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿದರೂ ಬೂದಿ ರೋಗ ಇಲ್ಲವಾಗುತ್ತದೆ ಎಂಬುದು ರೆಡ್ಡಪ್ಪ ಅವರ ಅನುಭವದ ನುಡಿ.
ಬಿಳಿ ಜೋಳ ಬೆಳೆದು ಮೇವಿನ ಕೊರತೆ ನೀಗಿಸಿಕೊಂಡ ರೈತ
ಒಣಭೂಮಿಗೆ ಸೂಕ್ತ ಎಂದು ಪ್ರಾಯೋಗಿಕವಾಗಿ ತಾಲ್ಲೂಕಿನ ಕೃಷಿ ಇಲಾಖೆ ವಿತರಿಸಿದ್ದ ಬಿಳಿ ಜೋಳ ಉತ್ತಮವಾಗಿ ಬೆಳೆದಿದ್ದು, ನೀರಿನ ಅಭಾವದಿಂದ ಜಾನುವಾರುಗಳಿಗೆ ಮೇವಿನ ತೊಂದರೆಯುಂಟಾಗಿರುವ ಕಾಲದಲ್ಲಿ ಪರ್ಯಾಯವಾಗಿ ಆಶಾಕಿರಣವಾಗಿದೆ.
ತಾಲ್ಲೂಕಿನ ಬೂದಾಳದ ರೈತ ರಾಮಾಂಜಿನಪ್ಪ ಕೃಷಿ ಅಧಿಕಾರಿಗಳಿಂದ ಪಡೆದಿದ್ದ ಒಂದು ಕೆಜಿ ಬಿಳಿ ಜೋಳವನ್ನು ತಮ್ಮ 10 ಗುಂಟೆ ಜಮೀನಿನಲ್ಲಿ ಹಾಕಿದ್ದರು. ಸುಮಾರು ಎರಡು ತಿಂಗಳಿನಿಂದ ಮಳೆಯ ಹಿನ್ನಡೆಯೊಂದಿಗೂ ಜೋಳದ ಬೆಳೆ ಚೆನ್ನಾಗಿ ಬಂದಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಿದೆ. ಅವರದ್ದೇ ಜಮೀನಿನಲ್ಲಿ ಅವರು ಚೆಲ್ಲಿದ್ದ ಸಾಂಪ್ರದಾಯಿಕ ಮೇವು ನೀರಿಲ್ಲದೆ ಸೊರಗಿದೆ.
ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ ಬಿಳಿ ಜೋಳದ ಬಿತ್ತನೆಗೆ ಸಾಕಷ್ಟು ಮಳೆ ಬೇಕಾಗಿಲ್ಲ. ಭೂಮಿ ಹದವಿದ್ದರೆ ಸಾಕು. ಬಿತ್ತನೆ ನಂತರ ಒಂದು ಮಳೆ ಬಂದರೂ ಸಾಕು. ಚಳಿಗಾಲದಲ್ಲಿ ಬೀಳುವ ಇಬ್ಬನಿಗೂ ಬೆಳೆ ಕೈಗೆ ಬರುತ್ತದೆ. ಇದಲ್ಲದೇ ಈ ಬೆಳೆಗೆ ಅತಿಯಾದ ಖರ್ಚೂ ಇರುವುದಿಲ್ಲ. ಹೆಚ್ಚಿನ ಗೊಬ್ಬರ ಮತ್ತು ಔಷಧದ ಅವಶ್ಯಕತೆ ಇಲ್ಲ.
‘ಕೃಷಿ ಅಧಿಕಾರಿಗಳು ಬಿಳಿ ಜೋಳ ಒಣ ಭೂಮಿಗೆ ಸೂಕ್ತ. ಕಡಿಮೆ ನೀರಿದ್ದರೂ ಒಳ್ಳೆಯ ಬೆಳೆಯಾಗುತ್ತದೆ ಎಂದು ಹೇಳಿ ಕೊಟ್ಟಿದ್ದರು. ಆದರೆ ನಾನು ಕೇವಲ 10 ಗುಂಟೆಯಲ್ಲಿ ಮಾತ್ರ ಅದನ್ನು ಚೆಲ್ಲಿದ್ದೆ. ಉಳಿದ ಕಡೆ ನಮ್ಮ ಎಂದಿನ ಮೇವಿನ ತಳಿಯನ್ನೇ ಹಾಕಿದ್ದೆ. ಆದರೆ ಮಳೆ ಕೈಕೊಟ್ಟಿದ್ದರಿಂದ ಈಗ ಬಿಳಿ ಜೋಳದ ಬೆಳೆಯೇ ಕಾಪಾಡುತ್ತಿದೆ. ಬಿಳಿ ಜೋಳವನ್ನು ನಾವು ಅಡುಗೆಗೆ ಬಳಸಬಹುದಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನೇ ನಾವು ಇನ್ನು ಮುಂದೆ ಹೆಚ್ಚಾಗಿ ಅವಲಂಬಿಸಬೇಕು’ ಎಂದು ರೈತ ಬೂದಾಳ ರಾಮಾಂಜಿನಪ್ಪ ತಿಳಿಸಿದರು.
ಹಿಪ್ಪುನೇರಳೆ ಸೊಪ್ಪಿಗೆ ಕೆಂಪು ತಲೆಯ ಕಂಬಳಿ ಹುಳುಗಳ ಕಾಟ
ಮಳೆ ಕೈಕೊಟ್ಟು ಈಗಾಗಲೇ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಹಿಪ್ಪುನೇರಳೆ ಸೊಪ್ಪಿಗೆ ಕೆಂಪು ತಲೆಯ ಕಂಬಳಿ ಹುಳುಗಳ ಕಾಟ ಪ್ರಾರಂಭವಾಗಿದ್ದು, ಹಲವರು ತಮ್ಮ ಬೆಳೆಯನ್ನೇ ಕಳೆದುಕೊಂಡಿದ್ದಾರೆ.
ತಾಲ್ಲೂಕಿನಾದ್ಯಂತ ಮಳೆಯಿಲ್ಲದೆ, ಅಂತರ್ಜಲ ಕುಸಿತದಿಂದ ರೈತರು ಕಂಗಲಾಗಿದ್ದು, ಇರುವ ಅತ್ಯಲ್ಪ ನೀರಿನಲ್ಲಿಯೇ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೂ ಬಾಧಿಸುತ್ತಿದ್ದ ಕಂಬಳಿ ಹುಳುಗಳ ಕಾಟ ಈ ಬಾರಿ ನಾಲ್ಕು ಪಟ್ಟು ಹೆಚ್ಚಾಗಿದೆ. ಹಲವಾರು ಹೆಕ್ಟೇರ್‌ಗಳಷ್ಟು ಹಿಪ್ಪುನೇರಳೆ ಸೊಪ್ಪಿನ ತೋಟ ಕಂಬಳಿ ಹುಳುಗಳಿಗೆ ಆಹಾರವಾಗಿದೆ. ಕೆಲವರ ತೋಟಗಳಲ್ಲಿ ಶೇ.90 ರಷ್ಟು ಸೊಪ್ಪುಗಳನ್ನು ಹುಳುಗಳು ಕಬಳಿಸಿವೆ.
ಒಂದೆಡೆ ಕುಡಿ ತಿನ್ನುವ ಹುಳುಗಳು ಕಾಡುತ್ತಿದ್ದರೆ, ಮತ್ತೊಂದೆಡೆ ಬಂತೆ ಹುಳುಗಳೆಂದೇ ಕರೆಯುವ ಕಂಬಳಿಹುಳುಗಳು ಸೊಪ್ಪನ್ನು ತಿನ್ನುತ್ತಿವೆ. ಕಂಬಳಿಹುಳುಗಳ ಆವಾಸ ಎಲೆಗಳ ಅಡಿಯಲ್ಲಿ. ಕೀಟವು ಸುಮಾರು 300 ರಿಂದ 400 ಮೊಟ್ಟೆಗಳನ್ನಿಟ್ಟು ಹೋಗುತ್ತದೆ. ಅವುಗಳಿಂದ ಹೊರ ಬರುವ ಹುಳುಗಳು ಬಕಾಸುರನಂತೆ ಎಲೆಯ ಸಾರವನ್ನೆಲ್ಲಾ ತಿನ್ನುತ್ತಾ ಅತಿ ಶೀಘ್ರವಾಗಿ ಬೆಳೆಯುತ್ತವೆ. ಎಲೆಗಳನ್ನು ತಿನ್ನುತ್ತಾ ರೆಂಬೆಯಿಂದ ರೆಂಬೆಗೆ ತೋಟದಿಂದ ತೋಟಕ್ಕೆ ಹರಡುತ್ತವೆ.
ರೈತರು ಹುಳುಗಳು ಸಣ್ಣದಿದ್ದಾಗ ಎಲೆ ಸಮೇತವಾಗಿ ಕತ್ತರಿಸಿ ಬಕೆಟ್‌ನಲ್ಲಿ ಸಂಗ್ರಹಿಸಿ ನಂತರ ಒಂದೆಡೆ ಗುಂಡಿ ತೋಡಿ ಮುಚ್ಚುತ್ತಿದ್ದಾರೆ. ಆದರೆ ಹುಳುಗಳು ದೊಡ್ಡದಾಗಿರುವ ಕಡೆ ಅವುಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ಬಹುತೇಕ ಎಲ್ಲಾ ಕಡೆಯೂ ಹಿಪ್ಪುನೇರಳೆ ಸೊಪ್ಪಿಗೆ ಕಂಬಳಿ ಹುಳುಗಳ ಹಾವಳಿ ಇದೆ. ಇದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಆ ಸೊಪ್ಪು ತಿನ್ನುವ ರೇಷ್ಮೆ ಹುಳುಗಳು ಹಲವು ರೋಗಗಳು ಬಂದು ಅದರಲ್ಲೂ ರೈತರಿಗೆ ನಷ್ಟ ಸಂಭವಿಸುತ್ತದೆ.
‘ಎಲೆ ತಳಭಾಗದಲ್ಲಿ ಹುಳುಗಳಿರುವುದರಿಂದ ಅಲ್ಲಿಗೆ ಶೇ.2 ರಷ್ಟು ನೂವಾನ್ ಮಿಶ್ರಿತ ಔಷಧಿಯನ್ನು ಸಿಂಪಡಿಸಬೇಕು. ಹಾಗೂ ಕುಡಿಯಲ್ಲಿನ ಹುಳುಗಳಿಗೆ ಕುಡಿಗೂ ಸಿಂಪಡಣೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಪ್ರಾಥಮಿಕ ಹಂತದಲ್ಲೇ ಹುಳುಗಳನ್ನು ಹತೋಟಿಗೆ ತರಲು ಔಷಧಿ ಸಿಂಪಡಿಸದಿದ್ದಲ್ಲಿ ಅವುಗಳನ್ನು ಹತೋಟಿಗೆ ತರಲು ಸಾಧ್ಯವಿಲ್ಲ. ಈಗಾಗಲೇ ರೈತರು ಅಪಾರ ನಷ್ಟದಲ್ಲಿರುವುದರಿಂದ ಹಾಗೂ ಇದು ಜಿಲ್ಲೆಯ ರೇಷ್ಮೆ ಬೆಳೆಗಾರರ ಸಮಸ್ಯೆಯ ಕಾರಣ ತಕ್ಷಣ ಜಿಲ್ಲಾ ಮಟ್ಟದ ಆಯುಕ್ತರ ಮತ್ತು ಜಂಟಿ ನಿರ್ದೇಶಕರ ಸಭೆ ನಡೆಸಬೇಕು. ರೇಷ್ಮೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಔಷಧಿಯನ್ನು ವಿತರಿಸಬೇಕು’ ಎಂದು ವಿಶ್ವೇಶ್ವರಯ್ಯ ರೈತ ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿನ ರಂಧ್ರ, ಗ್ರಾಮಸ್ಥರ ಆಕ್ರೋಶ
ತಾಲ್ಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ದೊಂಗರವು ಉಂಟಾಗಿದ್ದು, ಸರಿಪಡಿಸದಿರುವುದರಿಂದ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಬ್ಲೂಡಿನಿಂದ ಗುಡಿಹಳ್ಳಿಯ ಮೂಲಕ ಕಂಟಿಕನಹಳ್ಳಿ, ಅಂಗರೇಕಹಳ್ಳಿ, ಆವಲಹಳ್ಳಿ, ಅಣಕನೂರು ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಿದು. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವಿರುತ್ತದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಪ್ರಯಾಣಿಸಬೇಕಿದೆ.
ಮೋರಿಯ ಕಲ್ಲು ಮುರಿದಿರುವ ಕಾರಣ ದೊಡ್ಡ ರಂಧ್ರವು ರಸ್ತೆಯಲ್ಲಿ ಮೂಡಿದೆ. ಗ್ರಾಮಸ್ಥರು ಈ ಭಾಗದಲ್ಲಿ ಸಂಚರಿಸುವವರು ಬೀಳದಿರಲೆಂದು ಒಂದು ಕೋಲನ್ನು ಸಿಕ್ಕಿಸಿ ಅದಕ್ಕೆ ಚೀಲವನ್ನು ಹೊದಿಸಿದ್ದಾರೆ. ಆದರೂ ಕತ್ತಲಿನಲ್ಲಿ ಅಪಾಯವೇ ಹೆಚ್ಚು. ಹಲವಾರು ವರ್ಷಗಳು ಕಳೆದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ತಕ್ಷಣ ಕ್ರಮ ಕೈಗೊಂಡು ಈ ಮೋರಿಯನ್ನು ದುರಸ್ಥಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಧರಣಿ ನಡೆಸಿದ ಸಂತೆ ವ್ಯಾಪಾರಸ್ಥರು
ನಗರದ ಸಂತೆ ಆವರಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಚರಂಡಿಯಿಂದ ಸಂತೆಗೆ ಬರುವ ವ್ಯಾಪಾರಸ್ಥರು ಮತ್ತು ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದ್ದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಇಲ್ಲವಾದಲ್ಲಿ ವಾರದ ಸಂತೆ ನಡೆಯುವುದನ್ನು ಸ್ಥಗಿತಗೊಳಿಸಿ ಎಂದು ಆಗ್ರಹಿಸಿ ಸೋಮವಾರ ಸಂತೆ ವ್ಯಾಪಾರಿಗಳು ನಗರಸಭೆ ಮುಂಭಾಗ ಧರಣಿ ನಡೆಸಿದರು.
ಎಂದಿನಂತೆ ಸೋಮವಾರದ ಸಂತೆಗೆ ತರಕಾರಿ ತಂದಿದ್ದ ವ್ಯಾಪಾರಸ್ಥರು ಸಂತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದ ಸಂತೆಗೆ ತರಕಾರಿ ಹೊತ್ತು ತರುವ ವಾಹನಗಳು ಸುಲಭವಾಗಿ ಬರಲು ಆಗುವುದಿಲ್ಲ ಹಾಗು ಸಂತೆಯೊಳಗೆ ತರಕಾರಿ ಅಂಗಡಿ ಹಾಕುವ ಸಣ್ಣ ಪುಟ್ಟ ವ್ಯಾಪರಸ್ಥರ ಬಳಿ ಗ್ರಾಹಕರು ಹೋಗಲು ಸಹ ಆಗದೇ ಸಂತೆಯ ಹೊರಗಡೆಯೇ ತರಕಾರಿ ಕೊಂಡು ಹೋಗುವುದರಿಂದ ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಇಲ್ಲವೇ ಸಂತೆ ನಡೆಯುವುದನ್ನು ಒಂದೆರಡು ವಾರಗಳ ಕಾಲ ಸ್ಥಗಿತಗೊಳಿಸಿ ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಯನ್ನು ಆಳಿಸಿದ ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ ಮಾತನಾಡಿ, ನಗರದ ರಾಷ್ಟ್ರೀಯ ಹೆದ್ದಾರಿ ೨೩೪ ಕ್ಕೆ ಹೊಂದಿಕೊಂಡಂತೆ ಇರುವ ಅಮ್ಮನಕೆರೆಯಿಂದ ಗೌಡನಕೆರೆಯವರೆಗೂ ಇರುವ ರಾಜಕಾಲುವೆ ಕಾಮಗಾರಿ ಚಾಲನೆಯಲ್ಲಿದೆ. ನಗರದ ಗಾರ್ಡನ್ ರಸ್ತೆ ಡಾಂಬರೀಕರಣ, ಸಂತೆ ಮೈದಾನದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳು ಶುರುಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ನಾಗರೀಕರು ಸಹಕರಿಸಬೇಕು ಎಂದರು. ಇನ್ನು ಸಂತೆ ಮೈದಾನದಲ್ಲಿರುವ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿ ಕೆ.ಎನ್.ಮುನೀಂದ್ರ, ಮುನಿರಾಜು, ನಗರಸಭೆ ಪೌರಾಯುಕ್ತ ಎಚ್.ಎ.ಹರೀಶ್, ಸದಸ್ಯ ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.
ಎಂ.ವಿ.ಜೆ ಆಸ್ಪತ್ರೆಯ ತಜ್ಞರಿಂದ ಉಚಿತ ಶಸ್ತ್ರಚಿಕಿತ್ಸೆಗೆ ತೆರಳಿದ ರೋಗಿಗಳು
ಕಣ್ಣಿನ ಶಸ್ತ್ರ ಚಿಕಿತ್ಸೆ, ನರ ರೋಗ ಸಂಬಂಧೀ ಚಿಕಿತ್ಸೆ, ಹೃದಯ ಚಿಕಿತ್ಸೆ ಹಾಗೂ ಗರ್ಭಕೋಶ ಸಂಬಂಧ ಚಿಕಿತ್ಸೆಗಾಗಿ ತಾಲ್ಲೂಕಿನ ದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಸುಮಾರು 200 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೊಸಕೋಟೆ ಎಂ.ವಿ.ಜೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಮೋದ್ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಕಳೆದ ಶನಿವಾರ ಹೊಸಕೋಟೆ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ನಡೆಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರನ್ನು ಗುರುತಿಸಿದ್ದು, ಸೋಮವಾರ ಮೂರು ಬಸ್‌ಗಳಲ್ಲಿ ಕರೆದೊಯ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಸ್ತ್ರಚಿಕಿತ್ಸೆ ಹಾಗೂ ಔಷಧದ ವೆಚ್ಚವನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ಭರಿಸುತ್ತಿದ್ದು, ಹೊಸಕೋಟೆ ಎಂ.ವಿ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಕಡಿಮೆ ವೆಚ್ಚದಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ರೋಗಿಗಳನ್ನು ಅವರ ಗ್ರಾಮಕ್ಕೆ ಚಿಕಿತ್ಸೆಯ ನಂತರ ಕರೆದೊಯ್ದು ಬಿಡುವುದಾಗಿ ಹೇಳಿದರು.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರಿನಲ್ಲಿ ಗಣವೇಷಧಾರಿಯಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ ಅವರ ಕೊಲೆಯನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಘಟಕದ ಸದಸ್ಯರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರರಿಗೆ ಅಪರಾಧಿಗಳನ್ನು ಬಂಧಿಸುವಂತೆ ಮನವಿಯನ್ನು ಸಲ್ಲಿಸಿದರು.
ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ ಅವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ನಿಷ್ಕ್ರಿಯವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ಬಸ್‌ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರದ ಟಿ.ಬಿ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಇ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ದಾಮೋದರ್, ಕೆಂಪರೆಡ್ಡಿ, ಬೈರಾರೆಡ್ಡಿ, ಸುಜಾತಮ್ಮ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಾಜಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಆತ್ಮೀಯ ಸನ್ಮಾನ
ನಗರದ ಬಸ್ ನಿಲ್ದಾಣದ ಬಳಿಯಿರುವ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಸೋಮವಾರ ಈಚೆಗೆ ನಿವೃತ್ತರಾದ ಮಾಜಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್ ಅವರನ್ನು ರೇಷ್ಮೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು.
ರೇಷ್ಮೆ ಇಲಾಖೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಪಶುವೈದ್ಯ ಇಲಾಖೆಯವರು, ಬ್ಯಾಂಕ್ ವ್ಯವಸ್ಥಾಪಕರು, ರೀಲರುಗಳ ಸಂಘದವರು, ರೈತರು, ತಾಲ್ಲೂಕು ಕಸಾಪ, ಅರ್ಚಕರು ಆಗಮಿಕರು ಮುಂತಾದವರು ಗುರುರಾಜ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ,‘ರೇಷ್ಮೆ ಬಿತ್ತನೆ ಕೋಠಿಯಲ್ಲಿ ಹೆಚ್ಚು ವರ್ಷಗಳ ಕಾಲ ಯಾರೂ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಅದಕ್ಕೆ ಕಾರಣ ಒಂದು ಆಸ್ತಮಾ ಖಾಯಿಲೆಯಾದರೆ ಮತ್ತೊಂದು ಬೆಳಗಿನ ಜಾವ 3 ಗಂಟೆಗೇ ಬಂದು ಕಾರ್ಯನಿರ್ವಹಿಸಬೇಕಿರುವುದು. ಆದರೆ ಗುರುರಾಜರಾವ್ ಅವರು 27 ವರ್ಷಗಳ ಕಾಲ ಸತತವಾಗಿ ಈ ಇಲಾಖೆಯಲ್ಲಿ ದುಡಿದಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶೀಗಳಾಗಿದ್ದು, ತಾಲ್ಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸತತ ಮೂರು ಬಾರಿ ಚುನಾಯಿತರಾಗಿದ್ದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಇವರು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇವರ ಅನುಭವ ಮತ್ತು ಮಾರ್ಗದರ್ಶನ ನಮಗೆ ಅತ್ಯಗತ್ಯವಾಗಿದೆ’ ಎಂದು ಹೇಳಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಸುಧಾಕರ್, ರಾಜ್ಯಸಭಾ ಸದಸ್ಯ ಸುಬ್ಬಾರೆಡ್ಡಿ, ಕೇಂದ್ರ ರೇಷ್ಮೆ ಮಂಡಳಿಯ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀರಾಮಯ್ಯ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ರೀಲರ್ ಸಂಘದ ಅಧ್ಯಕ್ಷ ಅಕ್ಮಲ್ ಪಾಷ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ರಾಮ್‌ಕುಮಾರ್, ಎಸ್‌ಬಿಎಂ ವ್ಯವಸ್ಥಾಪಕಿ ಹೇಮಲತಾ, ದೇವರಾಯನದುರ್ಗದ ಪ್ರಧಾನ ಅರ್ಚಕ ಗೋಕುಲ್ ಭಟ್ಟರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಪ್ಪಿದ ಬೆಂಕಿ ಅವಘಡ
ನಗರದ ಉಲ್ಲೂರುಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಅಗ್ನಿ ಆಕಸ್ಮಿಕವೊಂದು ಸಂಭವಿಸಿದ್ದು, ಸೂಕ್ತ ಸಮಯದಲ್ಲಿ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿದ್ದರಿಂದ ಅಪಾಯವು ತಪ್ಪಿದೆ.
ಉಲ್ಲೂರುಪೇಟೆಯ ನಿವಾಸಿ ಟೈಲರ್ ಕೆಂಪಣ್ಣ ಅವರ ಮನೆಯ ಮಹಡಿಯ ಮೇಲೆ ಬಾಯ್ಲರಿಗೆ ಬಳಸಲು ಒಣ ಸೌದೆ, ಸೊಪ್ಪು, ಸುರುಗನ್ನು ಹರಡಿದ್ದರು. ಬಾಯ್ಲರಿನ ಪೈಪಿನಿಂದ ಹಾರಿದ ಕಿಡಿಯು ಒನ ಎಲೆಗಳಿಗೆ ತಗುಲಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿದ್ದರಿಂದ ಬಂದು ನಂದಿಸಿ ಆಗುತ್ತಿದ್ದ ಅಪಾಯವನ್ನು ತಪ್ಪಿಸಿದ್ದಾರೆ.
ನಗರದಲ್ಲಿ ತಾಲ್ಲೂಕು ಕಚೇರಿಯ ಬಳಿ ಅಗ್ನಿಶಾಮಕ ದಳಕ್ಕೆ ಸ್ಥಳವನ್ನು ನೀಡಿರುವುದರಿಂದ ಸಮಯಕ್ಕೆ ಸರಿಯಾಗಿ ಬಂದರು. ಇದರಿಂದ ಅಗ್ನಿ ಅವಘಡವು ತಪ್ಪಿದೆ. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಆವರಿಸುವ ಸಂಭವವು ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಗ್ರಾಮಸ್ಥರು, ವಯೋವೃದ್ಧರಿಗೆ ಉಚಿತ ಆರೋಗ್ಯ ಶಿಬಿರ ಸಹಕಾರಿ
ನಗರದಿಂದ ದೂರವಿರುವ ಗ್ರಾಮೀಣರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿದ್ದು ತಜ್ಞ ವೈದ್ಯರಿಂದ ಅವರು ಚಿಕಿತ್ಸೆ ಪಡೆಯಲು ಕಷ್ಟವಾಗುವುದರಿಂದ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ವಯೋವೃದ್ಧರಿಗೆ ದೂರದ ಆಸ್ಪತ್ರೆಗೆ ಹೋಗಲು ಬಹಳ ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಗ್ರಾಮಸ್ಥರು ಉತ್ತಮ ಚಿಕಿತ್ಸೆ ಪಡೆಯಲಾಗುವುದಿಲ್ಲ. ಈ ಲೋಪವನ್ನು ಸರಿಪಡಿಸಲು ಎಂ.ವಿ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಗ್ರಾಮಕ್ಕೇ ಬಂದಿದ್ದಾರೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ಸಾಂದ್ರತೆ ಮತ್ತು ಕೀಲು ರೋಗ ತಪಾಸಣೆ, ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಜ್ಞರು, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸುವರು. ಉಚಿತ ಔಷಧಿಗಳು ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಚಿಕಿತ್ಸೆ ಪಡೆಯಲು ಆಗಮಿಸಿದ್ದ ರೋಗಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಚಿಕಿತ್ಸೆ ಪಡೆದ ಪ್ರತಿಯೊಬ್ಬರಿಗೂ ಸಾಂಬಾರ್ ಗಿಡ ಸಿನಮೊನ್(ಚಕ್ಕೆ ಗಿಡ) ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಇಬ್ಬರು ಅಂಗವಿಕಲರಿಗೆ ವೀಲ್ ಚೇರ್ ನೀಡಲಾಯಿತು. ಹತ್ತು ಮಂದಿ ವೃದ್ಧರು ಮತ್ತು ಅಂಗವಿಕಲರಿಗೆ ಬಸ್ ಪಾಸ್ ವಿತರಿಸಲಾಯಿತು.
ಒಂದು ಸಾವಿರದ ಎಂಟು ನೂರು ಮಂದಿ ಚಿಕಿತ್ಸೆ ಪಡೆದು ಔಷಧಿಗಳನ್ನು ಪಡೆದರು. ಎಂ.ವಿ.ಜೆ ಆಸ್ಪತ್ರೆಯ ಡಾ.ಪ್ರಮೋದ್, ಬೆಳ್ಳೂಟಿ ಸಂತೋಷ್, ತಲಕಾಯಲಬೆಟ್ಟ ಅಶ್ವತ್ಥನಾರಾಯಣರೆಡ್ಡಿ, ಚಿಕ್ಕಪ್ಪಯ್ಯ, ಶ್ರೀರಂಗಪ್ಪ, ರಾಯಪಲ್ಲಿ ಅಶ್ವತ್ಥನಾರಾಯಣರೆಡ್ಡಿ, ದಿಬ್ಬೂರಹಳ್ಳಿ ಶ್ರೀನಿವಾಸ್, ದಡಂಘಟ್ಟ ಕೃಷ್ಣಪ್ಪ, ವಿಶ್ವನಾಥ್, ಮಂಜುನಾಥ್, ಮುರಳಿ, ನಟರಾಜ್, ಶ್ರೀನಿವಾಸ್, ನವೀನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆದರ್ಶ ಕುಟುಂಬದ ಕಥನದ ಮೂಲಕ ಸಮಾಜ ತಿದ್ದಿದ ಮಹರ್ಷಿ ವಾಲ್ಮೀಕಿ
ಆದರ್ಶ ಕುಟುಂಬದಲ್ಲಿನ ಉತ್ತಮವಾದ ಸಂಬಂಧಗಳನ್ನು ಕುರಿತು, ಆದರ್ಶ ರಾಜನ ನಡುವಳಿಕೆ, ಹಾಗೂ ಆದರ್ಶ ಪತ್ನಿಯ ಕರ್ತವ್ಯಗಳನ್ನು ಸಮಾಜಕ್ಕೆ ಸಾರಿ ಹೇಳುವ ರಾಮಾಯಣ ರಚನೆ ಮಾಡಿರುವ ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಏಳನೇ ವರ್ಷದ ಮಹರ್ಷಿವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೌಟುಂಬಿಕ ಜೀವನ ಮೌಲ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ ಕೃತಿಯ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ಮಾನವನು ಸನ್ಮಾರ್ಗವನ್ನು ಕಾಣುವಂತಹ ಅವಕಾಶವನ್ನು ಮಹರ್ಷಿ ವಾಲ್ಮೀಕಿ ಅವರು ಒದಗಿಸಿಕೊಟ್ಟಿದ್ದಾರೆ.
ಬಹಳ ಮುಖ್ಯವಾಗಿ ಶ್ರೀರಾಮನ ಮಕ್ಕಳಾದ ಲವ-ಕುಶರನ್ನು ಶ್ರೀರಾಮನಷ್ಟೆ ಸಮರ್ಥರನ್ನಾಗಿ ಮಾಡುವ ಮೂಲಕ ಮಹರ್ಷಿ ವಾಲ್ಮೀಕಿಯವರ ದೂರದೃಷ್ಟಿ ಪ್ರತಿಯೊಬ್ಬ ಮಾನವನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ಮಾರ್ಗದರ್ಶಕರಾಗಿ ಸಂತರಾಗಿ, ದಾರ್ಶನಿಕ ಕವಿಗಳಾಗಿ ಕಠೋರವಾದ ಮನಸ್ಥಿತಿಗಳನ್ನು ಪರಿವರ್ತನೆ ಮಾಡುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ವಾಲ್ಮೀಕಿ ಜನಾಂಗದ ಅದರಲ್ಲಿಯೂ ಮುಖ್ಯವಾಗಿ ಯುವಜನತೆ ವ್ಯಸನಗಳಿಂದ ದೂರವಾಗಿ ಇಂತಹ ಮಹಾಕಾವ್ಯಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್, ಸಮಾಜಸೇವಕ ಅರುಣ್‌ಬಾಬು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಬಂಕ್‌ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯರ್ರಬಚ್ಚಪ್ಪ, ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಳೆಕಟ್ಟಿದ ಮೆರವಣಿಗೆ, ಕಲಾತಂಡಗಳು
ಶಿಡ್ಲಘಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಗೆ ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ವಾಲ್ಮೀಕಿ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿಯವರ ಬೃಹತ್ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಮಯೂರ ವೃತ್ತದ ಬಳಿ ಇರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ವಾಲ್ಮೀಕಿ ವಿರಚಿತ ರಾಮಾಯಣದಲ್ಲಿನ ಶ್ರೀರಾಮ, ಸೀತೆ, ಲಕ್ಷ್ಮಣ, ಭಕ್ತ ಆಂಜನೇಯನ ವೇಷಧಾರಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ರಾಮಾಯಣದ ಕಾಲಘಟ್ಟದಲ್ಲಿ ನಡೆದುಹೋದಂತೆ ಭಾಸವಾಗಿತ್ತ.
ಕುದುರೆ ಸಾರೋಟದ ವಾಲ್ಮೀಕಿಯ ಪಲ್ಲಕ್ಕಿಯ ಉತ್ಸವದೊಂದಿಗೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ವೇಷ ಭೂಷಣಗಳೊಂದಿಗೆ ಅಲಂಕರಿಸಿದ್ದ ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಸಾಗಿದವು. ಮಹಿಳೆಯರ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಪೂಜಾ ಕುಣಿತ, ಪಟ ಕುಣಿತ, ನಾಸಿಕ್ ಡೋಲ್, ತಮಟೆ ಇನ್ನಿತರೆ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದ್ದವು.
ನಗರದ ಕೋಟೆ ವೃತ್ತದಲ್ಲಿ ವಾಲ್ಮೀಕಿ ಸರ್ಕಾರಿ ನೌಕರರ ಸಂಘದವತಿಯಿಂದ ಬೃಹತ್ ಗಾತ್ರದ ವಾಲ್ಮೀಕಿಯವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

