
Sidlaghatta ಶಿಡ್ಲಘಟ್ಟ : ಜೂನ್, ಜುಲೈ ತಿಂಗಳುಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದ ತಾಲ್ಲೂಕಿನ ರೈತರಿಗೆ, ಆಗಸ್ಟ್ ಆರಂಭದಲ್ಲಿ ಸುರಿದ ಮಳೆ ನೆಮ್ಮದಿ ತಂದಿದೆ. ಆ. 3 ಮತ್ತು 5ರಂದು ತಾಲ್ಲೂಕಿನ ಹಲವೆಡೆ ಮಳೆಯಾಗಿದ್ದು, ಈಗಾಗಲೇ ಉಳುಮೆ ಮಾಡಿಕೊಂಡಿದ್ದ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಮಳೆ ಕೊರತೆಯಿಂದ ಜಮೀನುಗಳಲ್ಲಿ ತೇವಾಂಶ ಕುಸಿದಿದ್ದ ಕಾರಣ, ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರು ಬಿತ್ತನೆಗೆ ಸೂಕ್ತ ಸಮಯಕ್ಕಾಗಿ ಕಾದಿದ್ದರು. ಬಿತ್ತನೆಯ ಬಳಿಕ ಮಳೆ ಕೈಕೊಟ್ಟರೆ ಬೆಳೆ ಹಾನಿಯಾಗಬಹುದೆಂಬ ಆತಂಕದಿಂದ ಹಲವರು ಬಿತ್ತನೆ ಮುಂದೂಡಿದ್ದರು. ಇದೀಗ ತೇವಾಂಶ ಹೆಚ್ಚಿದ ಹಿನ್ನೆಲೆಯಲ್ಲಿ ರಾಗಿ, ಜೋಳ, ಅವರೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ರೈತರು ತೊಡಗಿದ್ದು, ಹೊಲಗಳಲ್ಲಿ ಕೃಷಿ ಕಾರ್ಮಿಕರು ಹಾಗೂ ಟ್ರ್ಯಾಕ್ಟರ್ ಗಳ ಚಟುವಟಿಕೆ ಗರಿಗೆದರಿದೆ.
ಆದರೆ, ಈ ಮಳೆ ರೈತರ ಆತಂಕವನ್ನು ಸಂಪೂರ್ಣ ದೂರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಮೊಳಕೆಯೊಡೆತ ಮತ್ತು ಬೆಳೆ ಬೆಳವಣಿಗೆಗೆ ಪೂರಕವಾಗಲಿದ್ದು, ಮತ್ತೆ ಮಳೆ ಕೈಕೊಟ್ಟಲ್ಲಿ ಬಿತ್ತಿದ ಬೀಜಗಳಿಗೆ ತೇವಾಂಶದ ಕೊರತೆಯಾಗಿ ಬೆಳೆಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳ ಹವಾಮಾನ ಸ್ಥಿತಿ ರೈತರ ಪಾಲಿಗೆ ನಿರ್ಣಾಯಕವಾಗಿದ್ದು, ವರುಣನ ಕೃಪೆ ಮುಂದುವರಿಯಲಿ ಎಂಬ ನಿರೀಕ್ಷೆಯಲ್ಲಿ ರೈತರು ಆಕಾಶದತ್ತ ಮುಖಮಾಡಿದ್ದಾರೆ.
In English: After a poor June-July, rain on August 3 and 5 brought relief to Sidlaghatta taluk farmers, who have accelerated sowing of ragi, jowar and avare on already-ploughed land. Many had delayed sowing fearing crop loss if rain failed afterward; now with soil moisture restored, farm labourers and tractors are active in the fields. Farmers say the coming days weather is still critical — continued rain would aid germination, while another dry spell could set back the newly sown crop.












