ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿ ಮತ್ತು ಚಿಕ್ಕಪಾಪನಹಳ್ಳಿ ನಡುವೆ ಕೋಲಾರದ ಬೆಳುಮಾರನಹಳ್ಳಿಯ ಟ್ರಾಕ್ಟರ್ ಬುಧವಾರ ಆಯತಪ್ಪಿ ಉರುಳಿದ್ದು ಹತ್ತು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿತ್ತಲಹಳ್ಳಿಯ ಮಿಶ್ರ ಬೆಳೆಗಳ ತೋಟವನ್ನು ವೀಕ್ಷಿಸಿದ ಚಿಂತಾಮಣಿಯ ರೈತ ಮಹಿಳೆಯರು
‘ಇನ್ನಿ ಪಂಟ್ಲು ಪೆಟ್ಟೇವಾಳ್ಳು ದೇಶಮ್ಲು ಇಂಕಾ ಉಂಡಾರಾ?’ (ಇಷ್ಟು ಬೆಳೆಗಳನ್ನು ಒಂದೆಡೆ ಬೆಳೆಯುವವರು ದೇಶದಲ್ಲಿದ್ದಾರಾ?) ಎಂಬ ಅಚ್ಚರಿಯ ಉದ್ಘಾರ ಮಹಿಳೆಯರದ್ದು.
ತಾಲ್ಲೂಕಿನ ಹಿತ್ತಲಹಳ್ಳಿಯ ಗೋಪಾಲಗೌಡರ ೩೫ಕ್ಕೂ ಹೆಚ್ಚು ವಿಧವಿಧವಾದ ಮಿಶ್ರ ಬೆಳೆಗಳನ್ನು ಬೆಳೆದ ತೋಟಕ್ಕೆ ಮಂಗಳವಾರ ಭೇಟಿ ನೀಡಿದ್ದ ಚಿಂತಾಮಣಿಯ ಶ್ರೀಧರ್ಮಸ್ಥಳ ಯೋಜನಾ ಸಂಘದ ಸ್ವ ಸಹಾಯ ಸಂಘಗಳ ರೈತ ಮಹಿಳೆಯರು ಇಷ್ಟೊಂದು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಸಾಧ್ಯತೆಗಳನ್ನು ಕಂಡು ಅಚ್ಚರಿಗೊಂಡರು.
‘ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತದಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಬಹುದು, ಇದಕ್ಕೂ ಮಿಗಿಲಾಗಿ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಬಹುದು’ ಎಂದು ಈ ಸಂದರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಎಚ್.ಜಿ.ಗೋಪಾಲಗೌಡರು ಮಿಶ್ರ ಬೆಳೆಗಳಿಂದಾಗುವ ಲಾಭಗಳ ಬಗ್ಗೆ ವಿವರಿಸಿದಾಗ ಅವರು ಹೌದಲ್ಲ ಎಂದು ತಲೆದೂಗಿದರು.
ನಾಲ್ಕು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ, ಮಾವು, ಗೋಡಂಬಿ, ತೊಗರಿ, ರಾಗಿ, ನೆಲಗಡಲೆ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಚೆಂಡು ಹೂವು ಸೇರಿದಂತೆ ೩೫ಕ್ಕೂ ಹೆಚ್ಚು ವಿಧವಾದ ಮರ ಗಿಡ ತರಕಾರಿ, ದವಸ ದಾನ್ಯ ಇನ್ನಿತರೆ ಮಿಶ್ರ ಬೆಳೆಗಳನ್ನು ಬೆಳೆದಿರುವುದನ್ನು ಕಂಡ ರೈತ ಮಹಿಳೆಯರು ಮೂಕ ವಿಸ್ಮಿತರಾದರು.
ಒಂದೆ ತರನಾದ ಬೆಳೆಗಳನ್ನು ಬೆಳೆಯುವುದರಿಂದ ಭೂಮಿಯಲ್ಲಿನ ಕ್ಷಾರ ಶಕ್ತಿ ಕುಂದುತ್ತದೆ. ಅದಕ್ಕೂ ಮಿಗಿಲಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದರೆ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಒಂದು ಬೆಳೆಯ ಬೆಲೆ ಕುಸಿದರೂ ಮತ್ತೊಂದು ಬೆಳೆಗೆ ಬೆಲೆ ಸಿಗಲಿದೆ. ಮೊದಲು ಎರಡು ಅಥವಾ ಮೂರು ಗುಂಟೆ ಪ್ರದೇಶದಲ್ಲಿ ಮನೆಗೆ ಅಗತ್ಯವಾಗುವ ತರಕಾರಿ, ಹೂವುಗಳನ್ನು ಬೆಳೆಯಿರಿ. ಇದರಿಂದ ನಿಮ್ಮ ಮನೆಗೆ ಅಗತ್ಯವಾದ ಹೂ ಹಣ್ಣು ತರಕಾರಿಗಳನ್ನು ಖರೀಸುವ ತಾಪತ್ರಯ ತಪ್ಪುತ್ತದೆ ಎಂದು ಗೋಪಾಲಗೌಡರು ತಿಳಿಸಿದರು.
ನೀರಿನ ಲಭ್ಯತೆ ನೋಡಿಕೊಂಡು ಹೆಚ್ಚು ಜಮೀನಿನಲ್ಲಿ ಮಾರಾಟ ಮಾಡುವಂತ ತರಕಾರಿ ಹೂವು ಹಣ್ಣು ದೀರ್ಘ ಕಾಲದ ಮರಗಳನ್ನು ಬೆಳೆಸಬೇಕು. ಇದರ ಜತೆಗೆ ಕುರಿ ಕೋಳಿ ಹಸುಗಳನ್ನು ಸಾಕಾಣಿಕೆ
ಜತೆಗೆ ನೀರಾವರಿ ಸೌಲಭ್ಯ ಇಲ್ಲದೆ ಇದ್ದಾಗ ಮಳೆ ನೀರನ್ನು ಸಂಗ್ರಹಿಸುವ ಕೃಷಿ ಹೊಂಡದ ಅನುಕೂಲಗಳ ಬಗ್ಗೆ ಕೂಡ ತಿಳಿಸಿಕೊಟ್ಟರು.
ಕೊಳವೆಬಾವಿಯ ನೀರು ಹಾಗೂ ಕೃಷಿ ಹೊಂಡದ ನೀರನ್ನು ಬಳಸಿಕೊಂಡರೆ ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಫೆಬ್ರವರಿ ಮಾರ್ಚ್‌ವರೆಗೂ ಬೆಳೆಗಳಿಗೆ ಹಾಯಿಸಿಕೊಳ್ಳಬಹುದು. ಅಷ್ಟೊತ್ತಿಗೆ ಮಳೆಗಾಲ ಶುರುವಾಗುತ್ತದೆ ಎಂದು ವಿವರಿಸಿದರು.
ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಇನ್ನಿತರೆ ಕ್ಷೇತ್ರಗಳಿಗೆ ಸಂಬಂದಿಸಿದ ಎಲ್ಲ ಮರ ಗಿಡ ತರಕಾರಿ ಹಣ್ಣು ಹಂಪಲನ್ನು ಬೆಳೆಯುವುದರಿಂದ ಆಯಾ ಇಲಾಖೆಗಳಿಂದಲೂ ನರೇಗಾ ಯೋಜನೆಯಡಿ ಸಹಾಯ ಧನವೂ ಸಿಗಲಿದೆ ಎಂದು ಮಿಶ್ರ ಬೆಳೆಗಳ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಮಿಶ್ರ ಬೆಳೆಗಳನ್ನು ಬೆಳೆಯುವ ವಿಧಾನ, ಅನುಸರಿಬೇಕಾದ ಕ್ರಮಗಳು, ಯಾವ ಸಮಯದಲ್ಲಿ ಯಾವ ಬೆಳೆಗಳನ್ನು ಬೆಳೆದರೆ ಸೂಕ್ತ, ಮಾರುಕಟ್ಟೆಗೆ ಅನುಗುಣವಾಗಿ ಬೆಳೆಪದ್ಧತಿಯನ್ನು ನಿರ್ಧರಿಸುವುದು ಹೇಗೆ ಮೊದಲಾದ ವಿಚಾರಗಳ ಬಗ್ಗೆ ರೈತ ಮಹಿಳೆಯರು ಮಾಹಿತಿ ಪಡೆದುಕೊಂಡರು.
ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧಿಕಾರಿಗಳಾದ ಜನಾರ್ಧನ್, ಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.
ರೈಲ್ವೆ ಅಧಿಕಾರಿಯ ವಿರುದ್ಧ ನಗರಸಭೆಯ ಸದಸ್ಯರ ಆಕ್ರೋಶ
‘ಅಸ್ಥವ್ಯಸ್ಥಗೊಂಡ ಕಚೇರಿ. ಕಚೇರಿಯ ಟೇಬಲಿನ ಮೇಲೆಯೇ ರಗ್ಗು ಹೊದ್ದು ಅವ್ಯವಸ್ಥೆಯಾಗಿ ಮದ್ಯ ಸೇವಿಸಿ ಬಿದ್ದಿದ್ದ ಅಧಿಕಾರಿ’ ಇದು ಮಂಗಳವಾರ ಮುಂಜಾನೆ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರಿಗೆ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಕಂಡು ಬಂದ ದೃಶ್ಯ.
ನಗರದ ರೈಲ್ವೆ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳಿವೆ. ಸುತ್ತ ಮುತ್ತ ಸ್ವಚ್ಛತೆಯ ಅವಶ್ಯಕತೆಯಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಜನಪ್ರತಿನಿಧಿಗಳಿಗೆ ಈ ವಿಚಿತ್ರ ದೃಶ್ಯದಿಂದ ಮುಜುಗರವುಂಟಾಯಿತು.
‘ನಗರದ ಆಸುಪಾಸಿನಲ್ಲಿರುವ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಹೂಳು ತುಂಬಿಕೊಂಡು ನೀರು ಹರಿಯದಂತಾಗಿದೆ. ನೀರು ನಿಲ್ಲುವ ಕಾರಣ ಡಾಂಬರು ಕಿತ್ತು ಬಂದು ಕಬ್ಬಿಣದ ಸರಳುಗಳು ಹೊರಕ್ಕೆ ಬಂದಿವೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳಿವೆ. ಅವರೆಲ್ಲರೂ ಆಯಾ ಭಾಗದ ನಗರಸಭೆಯ ಸದಸ್ಯರಿಗೆ ಶಾಪ ಹಾಕುತ್ತಾರೆ. ಆದರೆ ನಾವು ಅವನ್ನು ಮುಟ್ಟುವಂತಿಲ್ಲ. ಅವೆಲ್ಲ ರೈಲ್ವೆ ಇಲಾಖೆಗೆ ಸಂಬಂಧಿಸಿವೆ. ಇದನ್ನು ವಿಚಾರಿಸಲು ರೈಲು ನಿಲ್ದಾಣಕ್ಕೆ ಬಂದರೆ ಅಧಿಕಾರಿಯು ಮದ್ಯ ಸೇವಿಸಿ ಪರಿಜ್ಞಾನವಿಲ್ಲದೆ ಕಚೇರಿಯಲ್ಲಿ ಬಿದ್ದಿದ್ದಾರೆ. ಬೆಳಿಗ್ಗೆ 10.30 ಆಗಿದ್ದರೂ ನಾವು ಎಬ್ಬಿಸಿದರೂ ಮಾತನಾಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಸರ್ಕಾರಿ ಸಂಬಳ ಪಡೆಯುವ ಇವರು ಈ ರೀತಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬೇಸರವಾಯಿತು’ ಎಂದು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
‘ರೈಲ್ವೆ ಹಳಿಗಳು, ಪ್ಲಾಟ್‌ಫಾರಮ್ ಮೇಲೆಲ್ಲಾ ಗಿಡಗಳು ಬೆಳೆದಿವೆ. ಮೂಲಭೂತ ಸೌಕರ್ಯಗಳಿಲ್ಲ. ಪ್ಲಾಟ್‌ಫಾರಂ ಸುತ್ತ ಕಸಕಡ್ಡಿ ಹೇರಳವಾಗಿವೆ. ರೈಲ್ವೆ ನಿಲ್ದಾಣಕ್ಕೆ ಯಾರು ಬೇಕಾದರೂ ಪ್ಲಾಟ್‌ಫಾರಂ ಟಿಕೇಟಿಲ್ಲದೆ ಹೋಗಿ ಬರುವ ಸ್ಥಿತಿಯಿದೆ. ಫ್ಲೈ ಓವರ್ ಹತ್ತಲು ಹೋಗುವೆಡೆ ಗಿಡಗಂಟೆಗಳು ಬೆಳೆದಿವೆ. ಸ್ವಚ್ಛತೆಯಿಲ್ಲ. ನಗರದಲ್ಲಿ ಎಲ್ಲಿ ಸ್ವಚ್ಛತೆಯಿಲ್ಲದಿದ್ದರೂ ಜನ ಜನಪ್ರತಿನಿಧಿಗಳನ್ನೇ ದೂರುತ್ತಾರೆ. ರೈಲ್ವೆ ಅಧಿಕಾರಿಯನ್ನು ಈ ಬಗ್ಗೆ ಮಾತನಾಡಲು ಬಂದರೆ ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರ ವಿರುದ್ಧ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ ಒತ್ತಾಯಿಸಿದರು.
ನಗರಸಭೆಯ ಅಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾರ್ವಜನಿಕರಿಂದ ನೇರವಾಗಿ ಗರ್ಭಗುಡಿ ಪ್ರವೇಶ ಮತ್ತು ಸ್ವಹಸ್ತಗಳಿಂದ ಮುತ್ತಿನ ಅಭಿಷೇಕ
ಭಾರತೀಯ ಸಂಸ್ಕೃತಿ ವೈವಿಧ್ಯಮಯವಾಗಿದೆ. ಅನೇಕತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು, ಎಂದು ಸಾಯಿನಾಥ ಜ್ಞಾನಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಮಂಗಳವಾರ ದಸರಾ ಹಬ್ಬ ಹಾಗೂ ಸಾಯಿಬಾಬಾ ದೇಹತ್ಯಾಗ ಮಾಡಿದ ದಿನದ ಅಂಗವಾಗಿ ಸಾರ್ವಜನಿಕರಿಂದ ನೇರವಾಗಿ ಗರ್ಭಗುಡಿ ಪ್ರವೇಶ ಮತ್ತು ಸ್ವಹಸ್ತಗಳಿಂದ ಮುತ್ತಿನ ಅಭಿಷೇಕ ಮುಂತಾದ ಸಾಂಸೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಯಿಬಾಬಾರವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಠ ಮಂದಿರಗಳು ಸರ್ವ ಧರ್ಮಗಳ ಶಾಂತಿ ಕೇಂದ್ರಗಳಾಗಬೇಕು. ರಾಗ ದ್ವೇಷಗಳನ್ನು ಹರಡುವ ಕೆಲಸ ಮಾಡಬಾರದೆಂದರು.
ಈ ಸಂದರ್ಭದಲ್ಲಿ ಶಿರಡಿಯಿಂದ ತಂದಿದ್ದ ಸಾಯಿನಾಥರ ನಿಜ ಪಾದುಕೆಗಳ ದರ್ಶನ ಮತ್ತು ಸ್ವರ್ಶ ಏರ್ಪಡಿಸಲಾಗಿತ್ತು. ಬೆಂಗಳೂರು ನಗರದ ಸಾಯಿನಾಥ ಇಂಟರ್‌ನ್ಯಾಷನಲ್ ಫೌಂಡೇಶನ್ ಅವರಿಂದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ ಶಾಂತಿ ಸೌರ್ಹಾದತೆಗಾಗಿ, ಶ್ರೀ ದುರ್ಗಾ ಹೋಮವನ್ನು ಏರ್ಪಡಿಸಿ ಪೂರ್ಣಾಹುತಿಯನ್ನು ನೀಡಲಾಯಿತು.
ಶಿರಡಿಯಿಂದ ಆಗಮಿಸಿದ ಪಂಡಿತ್ ಅಜಯ್ ದಾಸ್, ಸಾಯಿಬಾಬಾ ಫೌಂಡೇಶನ್‌ನ ಮಂಜುನಾಥ್, ಸಾಯಿಸಾಗರ್, ಎಚ್,ವಿ ರಾಮಕೃಷ್ಣಪ್ಪ, ಮೇಲೂರಿನ ರಮೇಶ್, ಸೀತಾರಾಮರೆಡ್ಡಿ ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೇಲೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸೋಮವಾರ ಆಯುಧ ಪೂಜಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿ ಒಗ್ಗೂಡಿ ಆಚರಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರಿಂದ ಉಸ್ತುವಾರಿ ಸಚಿವರಿಗೆ ಮನವಿ
ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರ ನೆರವಿಗೆ ಧಾವಿಸಬೇಕು. ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸೋಮವಾರ ರೈತ ಸಂಘದ ಪದಾಧಿಕಾರಿಗಳು ಸಚಿವರ ಮನೆಯಲ್ಲಿ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ವಿವರಿಸಿದರು. ಸತತ ಏಳು ವರ್ಷಗಳಿಂದ ಬರಗಾರ ಆವರಿಸಿರುವುದರಿಂದ, ರೈತರ ಸಾಲವನ್ನು ಮನ್ನಾ ಮಾಡಬೇಕು. ಒಂದು ಎಕರೆಗೆ 25 ಸಾವಿರ ರೂಗಳಷ್ಟು ಬೆಳೆ ನಷ್ಟ ಪರಿಹಾರ ನೀಡಬೇಕು. ಶಾಶ್ವತ ನೀರಾವರಿ ಹೋರಾಟಕ್ಕೆ ಮಣಿಸು ಸರ್ಕಾರ ರೂಪಿಸಿರುವ ನೀರಾವರಿ ನಿಗಮ, ಸಮನ್ವಯ ಸಮಿತಿ, ತಜ್ಞರ ಸಮಿತಿ ಮತ್ತು ಕೆ.ಸಿ.ವ್ಯಾಲಿ ಕುರಿತು ತುರ್ತು ಸಭೆ ಕರೆದು ಪ್ರಗತಿ ವಿವರ ತಿಳಿಸಿ.
ಬರಗಾಲದ ಪರಿಸ್ಥಿತಿಯ ನಡುವೆಯೂ ಸರ್ಕಾರ ಎಂಟು ತಿಂಗಳಿನಿಂದ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡದಿರುವುದು ದುರಂತ. ತಕ್ಷಣ ಪ್ರೋತ್ಸಾಹಧನ ಬಿಡುಗಡೆಗೆ ಕ್ರಮ ಕೈಗೊಳ್ಳಿ. ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ಅಪಾರ ನಷ್ಟವುಂಟಾಗಲಿದೆ.
ಅಂತರ್ಜಲ ಕುಸಿತದಿಂದಾಗಿ ಜಿಲ್ಲೆಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಪರಿಸ್ಥಿತಿಯ ನಡುವೆಯೂ ಅಕ್ರಮ ಮರಳು ದಂದೆಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮೂನೆ 53ರಲ್ಲಿ ಅರ್ಜಿ ಹಾಕಿರುವ ರೈತರಿಗೆ ಜಮೀನು ಮಂಜೂರು ಮಾಡುವಲ್ಲಿ ಪಾರದರ್ಶಕತೆಯಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕೆ.ಸಿ.ವ್ಯಾಲಿ ಯೋಜನೆಯ ಟೆಂಡರ್ ಪ್ರಕ್ರಿಯೆ ಕಳೆದ ಶುಕ್ರವಾರ ಮುಗಿದಿದೆ. ನವೆಂಬರ್ 28ರಂದು ಗುದ್ದಲಿ ಪೂಜೆ ನಡೆಯಲಿದೆ. ಅತಿ ಶೀಘ್ರದಲ್ಲಿ ಸಭೆಯನ್ನು ಕರೆದು ರೈತಮುಖಂಡರಿಗೆ ಪ್ರಗತಿ ವಿವರವನ್ನು ನೀಡುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ತಾದೂರು ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳಿಗೆ ಸಂವೇದನಾಶೀಲ ಶಿಕ್ಷಣ ನೀಡಬೇಕು
ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳಿಗೆ ಹೆಚ್ಚು ಸಂವೇದನಾಶೀಲ ಶಿಕ್ಷಣವನ್ನು ನೀಡಲು ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಆರ್. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಂಗಳೂರಿನ ರೋಟರಿ ಹಾಗೂ ರೋಟರ್‍ಯಾಕ್ಟ್ ಸಂಸ್ಥೆಯ ವತಿಯಿಂದ ಶಾಲೆಗೆ ಗ್ರಂಥಾಲಯ ಪರಿಕರಗಳನ್ನು ವಿತರಿಸುವ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳು ಓದುವ ಮತ್ತು ಪುಸ್ತಕದ ಬಗ್ಗೆ ತಮ್ಮ ಭಾವವನ್ನು ಬರೆದಿಡುವ ರೂಢಿಯನ್ನು ಶಿಕ್ಷಕರು ಕನ್ನಮಂಗಲದ ಶಾಲೆಯಲ್ಲಿ ಬೆಳೆಸಿರುವುದು ಅಭಿನಂದನೀಯ. ಮಕ್ಕಳ ಬರಹಗಳ ‘ಶಾಮಂತಿ’ ಪುಸ್ತಕ ಪ್ರತಿವರ್ಷವೂ ಶಾಲೆಯಿಂದ ಹೊರತರುತ್ತಾ ಮಾದರಿಯಾಗಿದ್ದಾರೆ ಎಂದು ನುಡುದರು.
ರೋಟರ್‍ಯಾಕ್ಟ್್‌ನ ಅಧ್ಯಕ್ಷ ವೈಭವ ನಾಯಕ್ ಮಾತನಾಡಿ, ಮಕ್ಕಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆಗ ಜೀವನದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಈ ಶಾಲೆಯ ಮಕ್ಕಳು ಒಳ್ಳೆಯ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಗೆ ಗ್ರಂಥಾಲಯದ ಸಾಮಾಗ್ರಿಗಳಾದ ಕಪಾಟುಗಳು, ಮೇಜುಗಳು, ಕುರ್ಚಿಗಳು, ಕಂಪ್ಯೂಟರ್ ಹಾಗೂ ಮಕ್ಕಳಿಗೆ ಚಿತ್ರಕಲಾ ಕಿಟ್‌ಗಳನ್ನು ನೀಡಲಾಯಿತು. ಅಲ್ಲದೇ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಅಮೃತ, ಕಿರಣ್ ಹಾಗೂ ತೇಜಸ್ ರೋಟರ್‍ಯಾಕ್ಟ್್ ಸಂಸ್ಥೆಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ತುಮ್ಮನಹಳ್ಳಿಯ ಗ್ರಾಮಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಸದಸ್ಯ ದೇವರಾಜ್, ರೋಟರಿ ಸಂಸ್ಥೆಯ ಜಾನ್ ಬ್ರೂನೊ, ವೈಭವನಾಯಕ್, ಗೌತಮ್ ರಮೇಶ್, ಅರ್ಜುನ್ ಗುಬ್ಬಿ, ಕೆ.ಎಸ್.ಚೇತನ್, ಸುಕೃತ ಸುದರ್ಶನ್, ಸುಹಾಸ್, ಅನಿಲ್ ಕುಮಾರ್, ನಮ್ರತ, ಅಶ್ರಿತ್, ಹರೀಶ್, ಕೀರ್ತಿ ಪ್ರಸಾದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜ ಗೌಡ, ಕಾರ್ಯದರ್ಶಿ ರವಿಶಂಕರ್, ಸ್ನೇಹ ಯುವಕರ ಸಂಘದ ಕಾರ್ಯದರ್ಶಿ ವಾಸುದೇವ್, ನಾಗರಾಜ್, ಮೂರ್ತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮುನಿಆಂಜಿನಪ್ಪ ಸದಸ್ಯರಾದ ಸುಬ್ರಮಣಿ, ಕೆಂಪರೆಡ್ಡಿ, ದೊಡ್ಡಮುನಿಶಾಮಪ್ಪ, ದೊಡ್ಡ ಲಕ್ಷ್ಮಯ್ಯ, ಲಕ್ಷ್ಮಪ್ಪ, ಮುನಿನಾರಾಯಣಮ್ಮ, ನಿರ್ಮಲ, ಲಕ್ಷ್ಮಣ, ಮುಖ್ಯಶಿಕ್ಷಕ ಜೆ.ಶ್ರೀನಿವಾಸ್, ಸಹಶಿಕ್ಷಕರಾದ ಟಿ.ರಾಜಣ್ಣ, ಎಸ್.ಕಲಾಧರ, ಟಿ.ಜೆ.ಸುನಿತ, ಎನ್. ಪದ್ಮಾವತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗ್ರಾಮಾಂತರ ಸಾರಿಗೆಗೆ ಸಂಭ್ರಮಿಸಿದ ಗ್ರಾಮಸ್ಥರು
ಭಕ್ತರಹಳ್ಳಿ, ಕಾಕಚೊಕ್ಕಂಡಹಳ್ಳಿ, ನಾಗಮಂಗಲ, ಹೊಸಪೇಟೆ ಮತ್ತು ಜಂಗಮಕೋಟೆ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಹಾದು ಹೋಗುವ ಸಾರಿಗೆ ಬಸ್ ವ್ಯವಸ್ಥೆಗೆ ಗುರುವಾರ ಮುಂಜಾನೆ ಚಾಲನೆ ನೀಡಲಾಯಿತು.
ನಾಗಮಂಗಲ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಬಸ್ ಸಂಚಾರಕ್ಕೆ ಸಂಭ್ರಮಿಸಿದ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಿಹಿ ಹಂಚಿದರು. ಗ್ರಾಮದಿಂದ ಸಂಚರಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ಅನುಕೂಲ ಎಂದು ತಿಳಿಸಿದರು.
ಕಳೆದ ೨೦ ವರ್ಷಗಳಿಂದ ಈ ಮಾರ್ಗದಲ್ಲಿ ಬಸ್ ವ್ಯವಸ್ಥೆಯಲ್ಲದೆ ಸಾರ್ವಜನಿಕರು ಪರದಾಡುವಂತಾಗಿದ್ದರು. ಬಸ್ ಸಂಚಾರ ಕಲ್ಪಿಸಿರುವುದರಿಂದ ಓಡಾಟಕ್ಕೆ ಸುಲಭವಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್ ಗೌಡ ಹರ್ಷ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ನಾಗಮಂಗಲ ಪಂಚಾಯತಿಯ ಅಧ್ಯಕ್ಷೆ ರೂಪ, ಶ್ರೀನಿವಾಸ್, ಶಂಕರಪ್ಪ, ತಮ್ಮಣ್ಣ, ಚನ್ನಕೇಶವ, ನಾರಾಯಣಸ್ವಾಮಿ, ಮುರಳಿ, ರಾಜಣ್ಣ, ಶಿವರಾಜ್, ಮಂಜುನಾಥ್,ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೂತನ ತಾಲ್ಲೂಕು ಅಧ್ಯಕ್ಷರಾಗಿ ಕೇಶವರೆಡ್ಡಿ ಆಯ್ಕೆ
ತಮ್ಮ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸರ್ಕಾರಿ ನೌಕರರ ಸಂಘದ ನೂತನ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ ಹೇಳಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿಂದಿನ ಅಧ್ಯಕ್ಷ ಎನ್.ಕೆ.ಗುರುರಾಜರಾವ್ರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಕಳೆದ ೨೦೦೪ ರಿಂದ ಸತತವಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎನ್.ಕೆ.ಗುರುರಾಜರಾವ್ ಅವಿರೋಧವಾಗಿ ಆಯ್ಕೆಯಾಗುತ್ತಿದ್ದು, ಕಳೆದ ಸೆಪ್ಟೆಂಬರ್ ೩೦ ರಂದು ಕರ್ತವ್ಯದಿಂದ ನಿವೃತ್ತಿಯಾದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ತನ್ನನ್ನು ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ. ತಾಲ್ಲೂಕಿನ ಯಾವುದೇ ಸರ್ಕಾರಿ ನೌಕರರ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ ಹಾಗೂ ಎಲ್ಲರ ವಿಶ್ವಾಸದೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಮಾಜಿ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಮಾತನಾಡಿ ೨೦೦೪ ರಿಂದ ಇದುವರೆಗೂ ಸತತವಾಗಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದ ಪದಾಧಿಕಾರಿಗಳ ಸಹಕಾರದಿಂದ ನಗರದಲ್ಲಿ ಸರ್ಕಾರಿ ನೌಕರರ ಸಂಘ ನಿರ್ಮಿಸಲು ನಿವೇಶನ ಮಂಜೂರು ಮಾಡಿಸಿದ್ದೇವೆ. ಮುಂದಿನ ದಿನಗಳಲ್ಲಿ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ನೂತನ ಅಧ್ಯಕ್ಷರು ಹಾಗು ಪದಾಧಿಕಾರಿಗಳಿಗೆ ನಿರಂತರ ಸಹಕಾರ ನೀಡುವುದಾಗಿ ಹೇಳಿದರು.
ರಾಜ್ಯ ಪರಿಷತ್ ಸದಸ್ಯ ಸುಬ್ಬರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಕ್ಕಲರೆಡ್ಡಿ, ಉಪಾಧ್ಯಕ್ಷರಾದ ರಾಮಚಂದ್ರಪ್ಪ, ಶಶಿಕುಮಾರ್, ಖಜಾಂಚಿ ಲಲಿತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದ ಪ್ರವೇಶದ್ವಾರದಲ್ಲಿ ಕೋಡಿ ಕಾಲುವೆಯ ಆಧುನೀಕರಣ
ನಗರದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವೇಶ ದ್ವಾರದಲ್ಲಿರುವ ಗೌಡನಕೆರೆಯಿಂದ ಅಮ್ಮನಕೆರೆಗೆ ಸಂಪರ್ಕ ಕಲ್ಪಿಸುವ ಕೋಡಿ ಕಾಲುವೆಯ ಆಧುನೀಕರಣ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಸುಮಾರು ೭೫ ಲಕ್ಷ ರೂಗಳ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ನಗರದ ಪ್ರವೇಶದ್ವಾರದಲ್ಲಿರುವ ಕಾಲುವೆಯಲ್ಲಿ ಕಸ ಕಡ್ಡಿ ತುಂಬಿ ನಗರದ ಅಂದ ಕೆಡಿಸುವ ಜೊತೆಗೆ ದುರ್ನಾತ ಬೀರುತ್ತಿದ್ದು ಈ ಬಗ್ಗೆ ನಗರದ ಜನತೆ ಹಿಂದಿನಿಂದಲೂ ಸುಸಜ್ಜಿತ ಸಿಮೆಂಟ್ ಕಾಲುವೆ ನಿರ್ಮಿಸಲು ಬೇಡಿಕೆಯಿಡುತ್ತಿದ್ದ ಹಿನ್ನಲೆಯಲ್ಲಿ ಇದೀಗ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇನ್ನು ಸಂತೆ ಮೈದಾನದ ಹಿಂಭಾಗದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸುವುದು ಸೇರಿದಂತೆ ನಗರದ ಹೊರವಲಯದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಪ್ರಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್, ಸದಸ್ಯರಾದ ಲಕ್ಷ್ಮಯ್ಯ, ಜಬೀ, ವೆಂಕಟಸ್ವಾಮಿ, ಮುಖಂಡರಾದ ಮುಗಿಲಡಿಪಿ ನಂಜಪ್ಪ, ಕೆ.ಎಸ್.ಕನಕಪ್ರಸಾದ್, ರೆಹಮತ್ತುಲ್ಲಾ, ಶ್ರೀದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಚಿತ ನ್ಯೂರೋ ಮತ್ತು ಮನೋರೋಗ ಶಿಬಿರ
ತಾಲ್ಲೂಕಿನಲ್ಲಿ ಬಹಳಷ್ಟು ಜನರಿಗೆ ಅವಶ್ಯಕವಾಗಿದ್ದ ನ್ಯೂರೋ ಮತ್ತು ಮನೋರೋಗ ಶಿಬಿರವನ್ನು ಉಚಿತವಾಗಿ ಅಕ್ಟೋಬರ್ 9ರ ಭಾನುವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಕೋರಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯಲಹಂಕದ ನವಚೇತನ ಆಸ್ಪತ್ರೆ, ಬೆಂಗಳೂರು ನ್ಯೂರೋ ಸೆಂಟರ್ ಸಹಯೋಗದೊಂದಿಗೆ ಈ ಬೃಹತ್ ಶಿಬಿರವನ್ನು ಆಯೋಜಿಸಿದ್ದು, ನ್ಯೂರಾಲಜಿ, ಸೈಕಿಯಾಟ್ರಿ, ಫಿಸಿಯೋಥೆರಪಿ, ಇ.ಸಿ.ಜಿ, ಜಿ.ಆರ್.ಬಿ.ಎಸ್, ರಕ್ತದೊತ್ತಡ ಮೊದಲಾದ ಪರೀಕ್ಷೆಗಳನ್ನು ತಜ್ಞರು ನಡೆಸಿಕೊಡುವರು. ತಲೆ ನೋವು(ಮೈಗ್ರೇನ್), ಅಪಸ್ಮಾರ, ಮೂರ್ಚೆ ರೋಗ, ಅದುರು ರೋಗ, ತಲೆ ಸುತ್ತುವಿಕೆ, ಬೆನ್ನು ನೋವು, ಖಿನ್ನತೆ, ಮರೆಗುಳಿತನ, ನರರೋಗದ ನೋವು, ಆತಂಕ ಮೊದಲಾದ ತೊಂದರೆಗಳಿದ್ದವರು ಬಂದು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬಹುದು.
ಖಿನ್ನತೆಗೊಳಗಾದವರಿಗೆ, ದುಶ್ಚಟಕ್ಕೆ ಬಲಿಯಾದವರಿಗೆಂದೇ ತಜ್ಞ ಸಮಾಲೋಚಕರು ಬರಲಿದ್ದಾರೆ. ನರರೋಗ ತಜ್ಞರಾದ ಡಾ.ಆರ್.ಉಮಾಶಂಕರ್, ಡಾ.ಎನ್.ಶೋಭಾ, ಡಾ.ಗಿರೀಶ್ ಗಾರ್ಡೆ, ಡಾ.ಕೃಷ್ಣಪ್ರಸಾದ್, ಡಾ.ಗುರುಪ್ರಸಾದ್ ಎಸ್.ಪೂಜಾರ್, ಡಾ.ಕಿರಣ್ ಕಾನಪುರೆ, ಮನೋರೋಗ ತಜ್ಞರಾದ ಡಾ.ಅನಿತಾ ಚಂದ್ರ, ಡಾ.ಬಿ.ಜಿ. ಗಿರೀಶ್ಚಂದ್ರ ಆಗಮಿಸುತ್ತಾರೆ ಎಂದು ತಿಳಿಸಿದರು.
ನವಚೇತನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ರಫಿ, ಡಾ. ಸಿ.ಎಂ.ಅರುಣ್, ಭಾರ್ಗವಿ, ಆನಂದ್ಕುಮಾರ್, ಆನೂರು ಶ್ರೀನಿವಾಸ್, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕನ್ನಡ ಭಾಷೆ ಅಳಿವು ಉಳಿವು ನಮ್ಮ ಕೈಯಲ್ಲಿದೆ
ಕನ್ನಡ ಭಾಷೆ ಅಳಿವು ಉಳಿವಿನ ಪ್ರಶ್ನೆ ನಮ್ಮ ಕೈಯಲ್ಲಿಯೇ ಇದೆ ಹೊರತು ಸರ್ಕಾರಗಳ ಕೈಯಲ್ಲಲ್ಲ. ಭಾಷೆ ಉದ್ಧಾರವಾಗಲು ಪ್ರತಿ ಹಂತದಲ್ಲೂ ಜನ ಕನ್ನಡ ಬಳಸಬೇಕು, ಭಾಷೆ ಹಿರಿಮೆಯನ್ನು ಮೆರೆಸಬೇಕು. ಆಗ ಜಯ ಕನ್ನಡಿಗರದಾಗುತ್ತದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎರಡನೇ ಹಂತದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹರಿದು ಹಂಚಿಹೋಗಿದ್ದ ರಾಜ್ಯವನ್ನು ಏಕೀಕರಣಗೊಳಿಸಿದ ಹಲವಾರು ಮಹಾನುಭಾವರು ಸ್ಮರಣೀಯರು. ಅವರೆಲ್ಲರ ತ್ಯಾಗ, ಶ್ರಮ, ಹೋರಾಟವನ್ನು ನೆನೆಯಬೇಕು. ನಮ್ಮ ಭಾಷೆಯ ಬಗ್ಗೆ ಸದಾ ಅಭಿಮಾನಿಗಳಾಗಬೇಕು. ಕನ್ನಡ ದಿನಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಸಂಸ್ಕಾರ ರೂಢಿಯಾಗಬೇಕು ಎಂದು ಹೇಳಿದರು.
ಕನ್ನಡ ಭಾಷೆ, ರಾಜ್ಯದ ಭೌಗೋಳಿಕ ವಿಸ್ತಾರ, ಏಕೀಕರಣ, ಇತಿಹಾಸ, ದಾಖಲೆ, ಪ್ರಶಸ್ತಿಗಳು, ಏಕೀಕರಣ ಹೋರಾಟ, ಕಸಾಪ ನಡೆದು ಬಂದ ದಾರಿ, ಭಾಷೆ ಅಂದು ಇಂದು ಮುಂದೆ ಬಾಷೆ ಉಳಿಯಲು ಮಾಡಬೇಕಾದ ಕೆಲಸಗಳು ಮುಂತಾದವುಗಳನ್ನು ವಿವರಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆನಂದ್ ‘ತೋಟಗಾರಿಕೆಯಲ್ಲಿ ವಾಣಿಜ್ಯೀಕರಣ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಎ.ಎಂ.ತ್ಯಾಗರಾಜ್, ಉಮಾ ಚನ್ನೇಗೌಡ, ವಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮುನಿರಾಜು, ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೊಗೆರಹಿತ ಗ್ರಾಮ, ನಗರ
‘ಹೊಗೆರಹಿತ ಗ್ರಾಮ, ನಗರ’ದ ಕನಸಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ತಾಲ್ಲೂಕಿನಲ್ಲಿ 90 ಅನಿಲ ಸಂಪರ್ಕಗಳಿಗೆ ಅರ್ಜಿ ಬಂದಿದ್ದು ಹಂತಹಂತವಾಗಿ ವಿತರಿಸಲಾಗುತ್ತದೆ ಎಂದು ವೆಂಕಟೇಶ್ವರ ಇಂಡೇನ್ ಗ್ಯಾಸ್ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ಆವರಣದಲ್ಲಿ ಅನಿಲ ಸಂಪರ್ಕಗಳಿಗೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.
ಪರಿಸರ ಉಳಿಸುವುದಲ್ಲದೆ ಆರೋಗ್ಯದ ಸುರಕ್ಷತೆಗೂ ಬಹು ಅನುಕೂಲಕರವಾದ ಉಜ್ವಲ ಯೋಜನೆಯ ಸದುಪಯೋಗವನ್ನು ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕುಟುಂಬದವರು ಪಡೆಯಬೇಕೆಂದು ಹೇಳಿದರು.
‘ಉಜ್ವಲ’ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರದೆ ಇರುವ ಬಿ.ಪಿ.ಎಲ್. ಕಾರ್ಡ್ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಪಡೆಯಲು 2 ಪಾಸ್ಪೋರ್ಟ್ ಭಾವಚಿತ್ರ, ಆಧಾರ್ ನಕಲು, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ಬಿ.ಪಿ.ಎಲ್ ಕಾರ್ಡ್ಗಳ ನಕಲುಗಳನ್ನು ಸ್ಥಳೀಯ ಗ್ಯಾಸ್ ಏಜೆನ್ಸಿಗಳಲ್ಲಿ ನೀಡಿ, ಪರಿಶೀಲನೆ ನಂತರ ಸಂಪರ್ಕ ಪಡೆಯ ಬೇಕು ಎಂದು ನುಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ವಿ.ಶ್ರೀನಿವಾಸ್, ರಾಜಣ್ಣ, ಸಂತೋಷ್, ನಾರಾಯಣಸ್ವಾಮಿ, ವೆಂಕಟೇಶ್ವರ ಇಂಡೇನ್ ಗ್ಯಾಸ್ನ ಭರತ್, ನಾಗೇಶ್ ಮತ್ತಿತರರು ಹಾಜರಿದ್ದರು.
ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಮನವಿ
ಮುಂಗಾರು ಮಳೆ ಕೈಕೊಟ್ಟಿದ್ದು ರೈತರ ಬೆಳೆಗಳು ಒಣಗಿಹೋಗಿರುವ ಕಾರಣ ಶಿಡ್ಲಘಟ್ಟ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದವರು ಉಪತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ರೈತರು ಮಳೆ ಆಶ್ರಿತ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಈ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಮಾಡಬೇಕು.
ರಾಷ್ಟ್ರೀಕೃತ ಸಹಕಾರ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆಗಳ ನಾಶದಿಂದ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಸರ್ಕಾರದಿಂದ ಮೇವು ವಿತರಣೆ ಮಾಡಬೇಕು.
ರೈತರು ತಮ್ಮ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗೆ ಬಂದರೆ ರೈತರ ಕೆಲಸವನ್ನು ವಿನಾ ಕಾರಣ ಅಲೆದಾಡುವಂತೆ ಅಧಿಕಾರಿಗಳು ಮಾಡುತ್ತಿದ್ದು, ಅವರ ವಿರುದ್ದ ಕ್ರಮ ಕೈಕೊಳ್ಳಬೇಕು. ತಕ್ಷಣವೇ ಅನ್ನದಾತರ ಬೇಡಿಕೆಗಳನ್ನು ಈಡೆರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ವೆಂಕಟಸ್ವಾಮಿ, ತಾಲ್ಲೂಕು ಗೌರವಾಧ್ಯಕ್ಷ ಮುನಿಕೆಂಪಣ್ಣ, ಅಧಯಕ್ಷ ರವಿಪ್ರಕಾಶ್, ಪ್ರತೀಶ್, ಮಾರಪ್ಪ. ಗೋವಿಂದಪ್ಪ, ಶಿವಕುಮಾರ್, ಪುರುಷೋತ್ತಮ್, ಶಂಕರ್, ಮುನಿನಾರಾಯಣ, ರಮೇಶ್, ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರಿನಲ್ಲಿ ಮೂರನೇ ತಲೆಮಾರಿನ ಗೊಂಬೆಹಬ್ಬ
ದಸರಾ ಗೊಂಬೆ ಹಬ್ಬಕ್ಕೆ ಮೂರು ತಲೆಮಾರುಗಳ ನಂಟು ತಾಲ್ಲೂಕಿನ ಮೇಲೂರಿನಲ್ಲಿ ಮೂಡಿ ಸಂಭ್ರಮಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಮೇಲೂರಿನ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ಮೂರು ತಲೆಮಾರುಗಳಿಂದ ಆಚರಿಸಿಕೊಂಡ ಬಂದ ಗೊಂಬೆ ಹಬ್ಬವು ಈ ವರ್ಷವೂ ಮುಂದುವರೆದಿದೆ. ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ಬಗೆ ಆಕರ್ಷಕವಾಗಿದೆ. ಪಟ್ಟದ ಗೊಂಬೆಗಳು, ದೇವರ ಗೊಂಬೆಗಳು, ಶೆಟ್ಟಿ ಅಂಗಡಿ, ಪ್ರಾಣಿಗಳು, ವಾದ್ಯವೃಂದ, ಹಾಸ್ಯಗಾರರು, ನೃತ್ಯಗಾರರು ಮುಂತಾದ ಹತ್ತು ಹಲವು ಗೊಂಬೆಗಳಿಲ್ಲಿವೆ.
ಮೂರು ತಲೆಮಾರಿನ ನಂಟನ್ನು ಹೊಂದಿರುವ ಗೊಂಬೆ ಹಬ್ಬವನ್ನು ಆಚರಿಸುತ್ತಿರುವ ಅಶ್ವತ್ಥಮ್ಮ, ‘ತಮ್ಮ ಮನೆಯ ಹೆಣ್ಣುಮಕ್ಕಳೆಲ್ಲರೂ ಸೇರಿ ಗೊಂಬೆ ಜೋಡಿಸಿಟ್ಟಿದ್ದಾರೆ. ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ’ ಎಂದು ಹೇಳಿದರು.
ಪುಸ್ತಕಗಳು ಜೀವವನ್ನು ಕಟ್ಟುವ, ಜೀವನವನ್ನು ರೂಪಿಸುವ ಕೆಲಸ ಮಾಡುತ್ತವೆ
ಜಗತ್ತು ಜ್ಞಾನದ ಮೇಲೆ ನಿಂತಿದೆ. ಹಣದ ಮೇಲಲ್ಲ. ಯಾವ ದೇಶದಲ್ಲಿ ಪುಸ್ತಕಕ್ಕೆ ಗೌರವ ಸಿಗುತ್ತದೆಯೋ ಅದು ಅಭಿವೃದ್ಧಿ ಹೊಂದುತ್ತದೆ. ಪುಸ್ತಕಗಳು ದೇಶವನ್ನು ಕಟ್ಟುವ ಸಾಧನಗಳು ಎಂದು ಪ್ರೊ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಬಿಜಿಎಸ್ ವಿದ್ಯಾಸಂಸ್ಥೆ ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಂಥಾಲಯದ ಪ್ರಕಾರ ಪ್ರತಿಯೊಬ್ಬರೂ ವರ್ಷಕ್ಕೆ ಸರಾಸರಿ ಎರಡು ಸಾವಿರ ಪುಟಗಳಷ್ಟು ಓದಬೇಕು. ಆದರೆ ಭಾರತೀಯರು ಕೇವಲ 33 ಪುಟಗಳಷ್ಟು ಓದುತ್ತಾರೆ ಎಂಬ ಆಘಾತಕರ ವಿಷಯ ಸಮೀಕ್ಷೆಯಿಂದ ತಿಳಿದುಬಂದಿದೆ. ಪುಸ್ತಕಗಳು ಜೀವವನ್ನು ಕಟ್ಟುವ, ಜೀವನವನ್ನು ರೂಪಿಸುವ ಕೆಲಸ ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಓದುವುದು ಬಿಟ್ಟು ಸಿದ್ಧ ಪ್ರಶ್ನೋತ್ತರಗಳನ್ನು ಓದುತ್ತಿರುವುದು ದುರಂತ. ಅರ್ಥಗ್ರಹಿಕೆಯ ವಾಚನವನ್ನು ಅಳವಡಿಸಿಕೊಳ್ಳಲು ಶಿಕ್ಷಕರು ನೆರವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪುಸ್ತಕಗಳ ಶಕ್ತಿಯನ್ನು ಕಂಡುಕೊಳ್ಳಬೇಕು. ಓದುವುದು ಊಟದಂತೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಬಟ್ಟೆಯನ್ನು ಕೊಳ್ಳುವಂತೆ ವರ್ಷಕ್ಕೆ ಕನಿಷ್ಠ ಹತ್ತು ಪುಸ್ತವನ್ನಾದರೂ ಕೊಂಡು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಎಸ್ಎಸ್ಎಲ್ಸಿ ಓದುವ ಓದಿರುವ ಪ್ರತಿಯೊಬ್ಬರೂ ಸಾರ್ವಜನಿಕ ಗ್ರಂಥಾಲಯದ ಸದಸ್ಯರಾಗಬೇಕು. ಪುಸ್ತಕವನ್ನು ಓದಿ, ಗ್ರಹಿಸಿಕೊಂಡಲ್ಲಿ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಹೊಸ ಆಲೋಚನೆಗಳು ಹುಟ್ಟುತ್ತವೆ. ಕಲಿಯುವ ಸಮಾಜ, ಓದುವ ಸಮಾಜ ಸೃಷ್ಠಿಯಾಗಬೇಕು. ಬಡವರು ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚು ಓದಬೇಕು. ಇದರಿಂದ ಮೌನವಾದ ಆಲೋಚನೆಗಳು, ಸುಪ್ತ ಚಿಂತನೆಗಳು, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನುಡಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡದ ಹಿರಿಮೆ ಸಾರುವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹನ್ನೊಂದು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಹನುಮೇಶ್, ದ್ವಿತೀಯ ಸ್ಥಾನ ಪಡೆದ ಎನ್.ನಾಗೇಂದ್ರ ಮತ್ತು ತೃತೀಯ ಸ್ಥಾನ ಪಡೆದ ಕೆ.ಮಧುಸೂದನ್ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತ್ಕುಮಾರ್, ಪ್ರಾಂಶುಪಾಲ ಮಹದೇವ್, ಡಿ.ಜಿ.ಮಲ್ಲಿಕಾರ್ಜುನ, ಉಪನ್ಯಾಸಕ ಗಿರೀಶ್, ಕಸಾಪ ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಖಜಾಂಚಿ ಎಸ್.ಸತೀಶ್, ಸದಸ್ಯ ಸ್ನೇಕ್ ನಾಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸುವ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಗಾಂಧಿ ಕಂಡ ಕನಸು ನನಸಾಗಲಿ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನದ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ನಮ್ಮ ಗ್ರಾಮದಲ್ಲಿ ನಡೆಸುತ್ತಿರುವುದಕ್ಕೆ ಸಂತಸವಾಗಿದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರನ್ನು ಸಾಮಾಜಿಕ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಶಿಕ್ಷಣಕ್ಕೆ ಸಾಮಾಜಿಕ ಸಂವೇದನೆಯ ಆಯಾಮ ದೊರಕಿಸಿಕೊಡುವುದು ಎನ್ಎಸ್ಎಸ್ನ ಉದ್ದೇಶಗಳಲ್ಲಿ ಒಂದು. ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆಯಲು, ಗ್ರಾಮೀಣ ಸಮಸ್ಯೆಗಳನ್ನು ಅರಿಯಲು, ಗ್ರಾಮೀಣ ನೈರ್ಮಲ್ಯ, ಪರಿಸರ ಪ್ರಜ್ಞೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವ ಅವಕಾಶವನ್ನು ಎನ್ಎಸ್ಎಸ್ ಕಲ್ಪಿಸಿಕೊಡುತ್ತದೆ.
ಹಾಗಾಗಿ ಇಂಥಹ ಶಿಬಿರವು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನುಡಿದರು.
ವಿದ್ಯಾರ್ಥಿಗಳು ಜಾತಿ, ಜನಾಂಗ, ಧರ್ಮ, ಭಾಷೆ, ಲಿಂಗ ಯಾವುದೇ ಭೇದ ಮಾಡದೇ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬೆರೆತು ಕೆಲಸ ಮಾಡುವ, ಪರಸ್ಪರ ಹೊಂದಾಣಿಕೆಯಿಂದ ಜೀವಿಸುವ ಅವಕಾಶವನ್ನು ಶಿಬಿರ ಕಲ್ಪಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಮಯ ಪ್ರಜ್ಞೆ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಿಕೆ, ಪ್ರಜಾಪ್ರಭುತ್ವದ ಮನೋಭಾವ, ಸಹಿಷ್ಣುತಾ ಭಾವನೆ, ವ್ಯಾವಹಾರಿಕ ಕೌಶಲ್ಯ, ಪರಸ್ಪರ ಸಹಾಯ- ಸಹಕಾರ, ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹಾಕುವಿಕೆಗೆ ವೇದಿಕೆ ಒದಗಿಸಿಕೊಡುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇ.ಓ. ವೆಂಕಟೇಶ್, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ, ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯ ಎ.ಎಂ.ತ್ಯಾಗರಾಜ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ, ಮುಖ್ಯ ಶಿಕ್ಷಕಿ ವೆಂಕಟಲಕ್ಷ್ಮಮ್ಮ, ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಉಪನ್ಯಾಸಕರಾದ ಲಕ್ಷ್ಮಯ್ಯ, ಮುನಿರಾಜು, ಗ್ರಾಮಸ್ಥರಾದ ಅಂಬರೀಷ್, ಆನಂದ್, ಶೇಖರ್, ಪಿಡಿಓ ಅಂಜನ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗಾಂಧಿ ಗ್ರಾಮ ಪುರಸ್ಕಾರ
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿಗೆ ಅದರ ಕಾರ್ಯನಿರ್ವಹಣೆಯನ್ನು ಮೆಚ್ಚಿ ರಾಜ್ಯ ಸರ್ಕಾರದಿಂದ ಗಾಂಧಿ ಜಯಂತಿ ಪ್ರಯುಕ್ತ, ಗಾಂಧಿ ಗ್ರಾಮ ಪುರಸ್ಕಾರವನ್ನು ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಐದು ಲಕ್ಷ ರೂ ಹಾಗೂ ಅಭಿನಂದನಾ ಪತ್ರವನ್ನೊಳಗೊಂಡ ಪ್ರಶಸ್ತಿಯನ್ನು ನೀಡಲಾಯಿತು. ತಾಲ್ಲೂಕು ಪಂಚಾಯತಿ ಇಓ ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಮದ್ದಿರೆಡ್ಡಿ, ಪಿಡಿಓ ಮಧು ಇದ್ದಾರೆ.
ದುಷ್ಕರ್ಮಿಗಳಿಂದ ಔಷಧಿ ಸಿಂಪಡನೆ, ರೇಷ್ಮೆ ಬೆಳೆ ನಾಶ
ದುಷ್ಕರ್ಮಿಗಳು ಔಷಧಿ ಸಿಂಪಡಿಸಿದ್ದರಿಂದ ಐದನೇ ಹಂತದಲ್ಲಿದ್ದ ರೇಷ್ಮೆ ಹುಳುಗಳು ಸತ್ತು ಸುಮಾರು ಮುಕ್ಕಾಲು ಲಕ್ಷ ರೂಗಳಷ್ಟು ನಷ್ಟವಾಗಿರುವ ಘಟನೆ ಸೋಮವಾರ ನಡೆದಿದೆ.
ನಗರದ ಉಲ್ಲೂರುಪೇಟೆಯ ವಾಸಿ ವಿ.ಆಂಜಿನಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪನ್ನು ಭಾನುವಾರ ಸಂಜೆ ಕಟಾವು ಮಾಡಿ ರಾತ್ರಿ ಐದನೇ ಹಂತದಲ್ಲಿದ್ದ ಹುಳುಗಳಿಗೆ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ನೋಡಿದಾಗ ಹುಳುಗಳು ಸತ್ತಿವೆ. ನಂತರ ಸೊಪ್ಪನ್ನು ತೋಟದಲ್ಲಿ ಪರಿಶೀಲಿಸಿದಾಗ ಬಿಳಿ ಬಣ್ಣದ ಚುಕ್ಕೆಗಳು ಕಂಡು ಬಂದಿದ್ದು, ಔಷಧಿಯ ವಾಸನೆ ಸಹ ಬಂದಿದೆ. ತಕ್ಷಣ ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ಪರಿಶೀಲನೆ ನಡೆಸಿದರು.
‘ಸುಮಾರು 100 ಮೂಟೆಯಷ್ಟು ಹಿಪ್ಪುನೇರಳೆ ಸೊಪ್ಪು ಉಪಯೋಗಕ್ಕೆ ಬರದಂತಾಗಿದೆ. ಮುನ್ನೂರು ಮೊಟ್ಟೆ ತಂದು ಐದನೇ ಹಂತದವರೆಗೂ ಸಾಕಿದ್ದೇವೆ. ನಮ್ಮ ಕೂಲಿಯನ್ನು ಬಿಟ್ಟು 75 ಸಾವಿರ ರೂಗಳಷ್ಟು ನಷ್ಟವಾಗಿದೆ. ಸರ್ಕಾರದಿಂದ ಪರಿಹಾರವನ್ನು ಕೊಡಿಸಬೇಕು’ ಎಂದು ರೈತ ವಿ.ಆಂಜಿನಪ್ಪ ಅಧಿಕಾರಿಗಳನ್ನು ಕೋರಿದರು.
ರೈತ ಮುಖಂಡ ವೇಣುಗೋಪಾಲ್, ದೇವರಾಜ್, ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.
ನಾಲ್ಕು ಕೋಟಿ ಐವತ್ತಮೂರು ಲಕ್ಷ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ
ನಾಲ್ಕು ಕೋಟಿ ಐವತ್ತಮೂರು ಲಕ್ಷ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹಗಳನ್ನು ಅತಿ ಶೀಘ್ರದಲ್ಲಿ ನಿರ್ಮಿಸಿ ಸಮರ್ಪಿಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸಮೀಪ ಸೋಮವಾರ ಅಗ್ನಿಶಾಮಕ ಠಾಣೆಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜನತೆಯಿಂದ ಅಗ್ನಿಶಾಮಕ ಠಾಣೆಯು ಬಹುದಿನದ ಬೇಡಿಕೆಯಾಗಿತ್ತು. ತಾಲ್ಲೂಕಿನಲ್ಲಿ ಅಗ್ನಿ ದುರಂತಗಳು ಸಂಭವಿಸಿದರೆ ಅದನ್ನು ನಿವಾರಿಸಲು ಬೇರೆ ಕಡೆಯಿಂದ ಅಗ್ನಿ ಶಾಮಕ ವಾಹನ ಬರುವುದು ತಡವಾಗುತ್ತಿತ್ತು. ತಾಲ್ಲೂಕಿನ ಹಲವೆಡೆ ಇದರಿಂದ ಅಪಾರವಾದ ಹಾನಿಯಾಗಿತ್ತು. ಇದನ್ನು ತಡೆಯಲೆಂದು ನಗರದ ಪೋಲಿಸ್ ಠಾಣೆ ಪಕ್ಕದಲ್ಲಿ ತಾತ್ಕಾಲಿಕವಾಗಿ ಅಗ್ನಿ ಶಾಮಕ ಠಾಣೆ ಕಾರ್ಯನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಪ್ರಾರಂಭಿಸಲು ಪ್ರಯತ್ನವನ್ನು ನಡೆಸಿದ್ದು, ಅತ್ಯಂತ ತ್ವರಿತವಾಗಿ ಕಾಲೇಜಿಗಾಗಿ ಅನುಮತಿ ಪಡೆಯುತ್ತೇವೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಬಸ್ ಡಿಪೋ ನಿರ್ಮಿಸಿಸುವ ಯೋಜನೆಯು ಇದ್ದು ತಾಲ್ಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳುವುದಾಗಿ ತಿಳಿಸಿದರು.
ಸಾರ್ವಜನಿಕರ ಪರವಾಗಿ ಬೆಳ್ಳೂಟಿ ನಾಗಪ್ಪ, ಶಿಡ್ಲಘಟ್ಟ ಮತ್ತು ಜಂಗಮಕೋಟೆ ನಡುವೆ ಶಾಲಾ ಅವಧಿಯಲ್ಲಿ ಸಾರಿಗೆ ಬಸ್ ಸಂಚರಿಸಲು ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜ ರಘು, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಬೈರೇಗೌಡ, ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಿ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಶಿವಕುಮಾರ್, ಮಂಜುನಾಥ್, ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
.

