ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಡಿ.ಕಾವ್ಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ್ದರಿಂದ ಶಾಲೆಯ ಶಿಕ್ಷಕರು ಮತ್ತು ಎಸ್ಡಿಎಂಸಿ ಅಧ್ಯಕ್ಷರು ಅಭಿನಂದಿಸಿದರು.
ಸ್ವಚ್ಛತಾ ಕಾರ್ಯ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರ ಗಾಂಧಿಜಯಂತಿ ಪ್ರಯುಕ್ತ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಗಮ
ತಾಲ್ಲೂಕಿನ ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಗಾಂಧಿಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಶಾಲೆಯ 2005–2006ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದರು.
ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರಮದಾನ ಹಾಗೂ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ನಿವೃತ್ತ ಶಿಕ್ಷಕರಾದ ಸಿ.ಬಿ.ಹನುಮಂತಪ್ಪ, ಎಸ್.ವಿಜಯಕುಮಾರ್, ಜಿ.ಸುಂದರೇಶ್, ಮುನಿಶಾಮಿರೆಡ್ಡಿ, ಬಿ.ಕೃಷ್ಣಮೂರ್ತಿ, ಮುನಿಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
2005–2006ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಶಾಲೆಯ ಪ್ರತಿಯೊಂದು ತರಗತಿಗೂ ಒಂದೊಂದು ಪೋಡಿಯಂ ಉಡುಗೊರೆಯಾಗಿ ನೀಡಿದರು. 2015–2016ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ 125 ಅಂಕಗಳನ್ನು ಗಳಿಸಿದ ಹಾಗೂ ಗರಿಷ್ಠ ಅಂಕಗಳನ್ನು ಗಳಿಸಿದ ವೈ.ಎನ್.ಮನೋಜ್, ಎಲ್.ಎನ್.ನರೇಂದ್ರಬಾಬು ಅವರನ್ನುಗೌರವಿಸಲಾಯಿತು.
ಮಮತಾ, ಆನಂದ್, ಶಿವಪ್ಪ, ಡಿ.ಪಿ.ನಾಗೇಂದ್ರ ಮತ್ತಿತರರು ಹಾಜರಿದ್ದರು.
ಗಾಂಧಿ ಜಯಂತಿಯಂದು ಜಿಲ್ಲೆಯಲ್ಲೇ ದಾಖಲೆ ರಕ್ತ ಸಂಗ್ರಹ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆಸಿದ ರಕ್ತದಾನ ಶಿಬಿರದಲ್ಲಿ 300 ಯೂನಿಟ್ ಸಂಗ್ರಹವಾಗಿ ಜಿಲ್ಲೆಯಲ್ಲೇ ದಾಖಲೆಯನ್ನು ನಿರ್ಮಿಸಿದೆ.
‘ರೆಡ್ಕ್ರಾಸ್ ಸಹಯೋಗದಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರಗಳಲ್ಲಿ ಈ ವರ್ಷದ ಅತಿ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ತಾಲ್ಲೂಕಿನ ದಾಖಲೆಯನ್ನು ನಿಮರ್ಮಿಸಿರುವುದು ಹೆಮ್ಮೆಯ ಸಂಗತಿ. ಗಾಂಧಿ ಜಯಂತಿಯ ಪವಿತ್ರವಾದ ದಿನದಂದು ಮಾಡಿದ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕರ ಸ್ಪಂದನೆ ಅದ್ಭುತವಾಗಿತ್ತು. ರಕ್ತದಾನವನ್ನು ಸ್ವಯಂಪ್ರೇರಿತರಾಗಿ ಬಂದು ಮಾಡಿ ನೂರಾರು ಜನರ ಪ್ರಾಣ ಉಳಿಸುವಲ್ಲಿ ಇಂದು ನೆರವಾಗಿದ್ದಾರೆ’ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ಪೀಪಲ್ ಟ್ರೀ ಹಾಸ್ಪಟಲ್ ಸಹಯೋಗದಲ್ಲಿ ಉಚಿತ ಕಣ್ಣಿ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ನೂರಾರು ಮಂದಿ ಸಾರ್ವಜನಿಕರು ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡರು. ಉಚಿತವಾಗಿ ಕನ್ನಡಕವನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ನೀಡಲಾಯಿತು. ಕಣ್ಣಿನ ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳವರನ್ನು ಉಚಿತವಾಗಿ ಪೀಪಲ್ ಟ್ರೀ ಹಾಸ್ಪಟಲ್ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ರಕ್ತದಾನಿಗಳಿಗೆ ಹಣ್ಣು, ಪ್ರಶಂಸನಾ ಪತ್ರದೊಂದಿಗೆ ಸಸಿಗಳನ್ನು ವಿತರಿಸಲಾಯಿತು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರ ಪರವಾಗಿ ತಾಲ್ಲೂಕು ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಅಭಿನಂದನೆಯನ್ನು ಸಲ್ಲಿಸಿ, ‘2016–17ನೇ ಸಾಲಿನಲ್ಲಿ ನಡೆದಿರುವ ರಕ್ತದಾನ ಶಿಬಿರಗಳಲ್ಲಿ ಈ ದಿನ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ನಡೆದ ಶಿಬಿರದಲ್ಲಿ ಅತಿ ಹೆಚ್ಚಿನ ಯೂನಿಟ್ ರಕ್ತ ಸಂಗ್ರಹಣೆಯಾಗಿದೆ’ ಎಂದು ತಿಳಿಸಿದರು.
ಸುಂದರೇಶ್, ಎ.ಆರ್.ಅಬ್ದುಲ್ ಅಜೀಜ್, ಮುನಿರಾಜು, ಮೌಲಾ, ಶಕೀಲ್ ಅಹ್ಮದ್, ಅಪ್ಪು, ಆನೂರು ಶ್ರೀನಿವಾಸ್, ಮಂಜುನಾಥ್, ಮುರಳಿ, ನಟರಾಜ್, ಶ್ರೀನಿವಾಸ್, ನವೀನ್, ಮಹಬೂಬ್, ಜಬೀ, ಮಹಮ್ಮದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೂರು ವರ್ಷಗಳಿಂದ ಕಾಪಾಡಿಕೊಂಡು ಬಂದ ಗೊಂಬೆಗಳು
ಬೊಂಬೆ ಕೂರಿಸಿ ಆರತಿ ಎತ್ತುವುದು ನವರಾತ್ರಿ ಹಬ್ಬದ ವೈಶಿಷ್ಠ್ಯ. ಈ ಹಬ್ಬವನ್ನು ಆಚರಿಸುವವರ ಮನೆಗಳಲ್ಲಿ ಗೊಂಬೆಗಳ ಮೇಳವೇ ನಡೆಯುತ್ತದೆ. ಅದಕ್ಕೆಂದೇ ನವರಾತ್ರಿಯನ್ನು ಬೊಂಬೆಗಳ ಹಬ್ಬ ಎಂದು ಕರೆಯುತ್ತಾರೆ. ಹಿಂದೆ ಈ ಬೊಂಬೆಗಳ ಪ್ರದರ್ಶನದಲ್ಲಿ ಮಾನವಾಕಾರದ ಬೊಂಬೆಗಳನ್ನು ತಯಾರಿಸುತ್ತಿದ್ದರು. ಕೇವಲ ತಲೆಯ ಭಾಗ ಮಾತ್ರ ಇರುವ ಈ ಗೊಂಬೆಗಳಿಗೆ ದೇಹದಾಕೃತಿಯನ್ನು ಕೊಟ್ಟು ಉಡುಗೆ ತೊಡುಗೆಗಳನ್ನು ಉಡಿಸುವುದೇ ದೊಡ್ಡ ಸವಾಲಾಗಿತ್ತು.
ಮರೆತೇ ಹೋಗಿದ್ದ ಈ ರೀತಿಯ ಗೊಂಬೆಗಳನ್ನು ನಗರದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್ ತಮ್ಮ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ತಮ್ಮ ಅಜ್ಜಿಯ ಕಾಲದಿಂದ ಉಳಿಸಿಕೊಂಡು ಬಂದಿರುವ ಈ ನೂರಕ್ಕೂ ಹೆಚ್ಚು ವರ್ಷದ ಗೊಂಬೆಗಳ ತಲೆ ಭಾಗಕ್ಕೆ ದೇಹದಾಕೃತಿಯನ್ನು ಕಾಲಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ.
‘ನಮ್ಮಜ್ಜಿಯ ಮನೆಯಲ್ಲಿ ರಾಜ, ರಾಣಿ, ಯುವರಾಜ, ಯುವರಾಣಿ, ಮಂತ್ರಿ, ಸೈನಾಧಿಪತಿ, ದರ್ಬಾರ್ ಎಲ್ಲವನ್ನೂ ಬೊಂಬೆಗಳ ಮೂಲಕವೇ ನಿರೂಪಿಸುತ್ತಿದ್ದರು. ಗೊಂಬೆಗಳೆಂದರೆ ಕೇವಲ ತಲೆಗಳು ಮಾತ್ರ. ಅವಕ್ಕೆ ಉಡುಗೆಗಳನ್ನು ತೊಡಿಸಿ, ಕೈಕಾಲುಗಳನ್ನು ನಾವೇ ತಯಾರಿಸಿಡಬೇಕು. ಬೊಂಬೆಗಳಿಗೆ ಕೊಡುವ ಆಕಾರ, ನಿಲುವು, ಮೂಡಿಸುವ ಭಾವ, ತೊಡಿಸುವ ಉಡುಗೆ ತೊಡುಗೆ, ರಚನಾ ಕ್ರಿಯೆಯಲ್ಲಿ ತೋರಿಸುವ ನಯ ನಾಜೂಕು, ಇವೆಲ್ಲ ಸೊಬಗನ್ನು ಹೆಚ್ಚಿಸುತ್ತವೆ. ನಮ್ಮಜ್ಜಿಯಿಂದ ಕೊಡುಗೆಯಾಗಿ ನಮ್ಮ ಪಾಲಿಗೆ ಬಂದ ಗೊಂಬೆಗಳನ್ನು ಪ್ರತಿವರ್ಷ ವಿಶೇಷವಾಗಿ ಅಲಂಕರಿಸಿ, ವಸ್ತ್ರವನ್ನೆಲ್ಲಾ ತೊಡಿಸಿ ಜೋಡಿಸಿಡುತ್ತೇವೆ. ಈ ಬಾರಿ ರಾಜ, ರಾಣಿಯರು, ರಾಜಕುಮಾರ, ರಾಜಕುಮಾರಿ ಮತ್ತು ದೃಷ್ಟಿ ಬೊಂಬೆಗಳನ್ನು ಮಾಡಿಟ್ಟಿದ್ದೇವೆ. ಇವು ಪ್ರಧಾನವಾದ ಬೊಂಬೆಗಳಾದರೆ, ಮಿಕ್ಕ ಬೊಂಬೆಗಳಲ್ಲಿ ದಶಾವತಾರ, ಶ್ರೀಕೃಷ್ಣ ಲೀಲೆ, ಶೆಟ್ಟಿ ಅಂಗಡಿ, ಗಣೇಶ, ಕಾಮಧೇನು, ಶಿವನ ಲೋಕ ಮೊದಲಾದವುಗಳಿವೆ’ ಎಂದು ಪುರಾತನ ಗೊಂಬೆಗಳ ಬಗ್ಗೆ ಡಾ.ರೋಹಿಣಿ ರವಿಶಂಕರ್ ತಿಳಿಸಿದರು.
ಗೊಂಬೆಗಳ ಮೂಲಕ ವಿಶ್ವದರ್ಶನ: ನೂರು ವರ್ಷದ ಹಿಂದಿನ ಗೊಂಬೆಗಳು ಹಾಗೂ ಪಟ್ಟದ ಗೊಂಬೆಗಳೊಂದಿಗೆ ಡಾ.ರೋಹಿಣಿ ರವಿಶಂಕರ್ ದೇಶ ವಿದೇಶಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬದಲ್ಲಿ ವಿಶ್ವದರ್ಶನವನ್ನೂ ಮಾಡಿಸಿದ್ದಾರೆ. ದಸರಾ ಗೊಂಬೆಗಳ ಮೂಲಕ ವಿಶ್ವ ಮಾನವ ಸಂದೇಶವನ್ನೂ ಸಾರುತ್ತಿದ್ದಾರೆ.
ವಾಘಾ ಗಡಿಯಲ್ಲಿ ಸೈನಿಕರ ಕವಾಯತ್ತು, ಹಾಂಕಾಂಗ್ ದೇಶದ ನವಿಲು, ಆಮ್ಸ್ಟರ್ಡ್ಯಾಂನ ಟುಲಿಪ್ಗಳು, ಸಾರಾನಾಥ್ ಮತ್ತು ಭೂತಾನ್ನ ಬುದ್ಧ ಮೂರ್ತಿಗಳು, ವೆನಿಸ್ನ ಮುಖವಾಡ, ಅಮೆರಿಕೆಯ ವೈದ್ಯ ಬೊಂಬೆಗಳು, ಲಂಡನ್ನ ಬಿಗ್ಬೆನ್, ಜರ್ಮನಿಯ ಸ್ವರೋಸ್ಕಿ ಹೂಗಳು, ಪ್ಯಾರಿಸ್ನ ಹೆಣ್ಣು ಗೊಂಬೆ, ದುಬೈ, ಥಾಯ್ಲೆಂಡ್ ದೇಶದ ಪ್ರತಿಕೃತಿಗಳು, ನ್ಯೂಯಾರ್ಕ್ನ ಡಬ್ಲೂಟಿಸಿ, ಅಮೆರಿಕೆಯ ಸ್ವಾತಂತ್ರ್ಯ ದೇವತೆ, ಪ್ಯಾರಿಸ್ನ ಐಫೆಲ್ ಟವರ್, ಹಾಲೆಂಡ್ನ ಮರದ ಪುಟಾಣಿ ಶೂಗಳು, ಥಾಯ್ಲೆಂಡ್ನ ತಾಯಿ ಮಗು, ಹಾಂಕಾಂಗ್ನ ಜೆಲ್ಲಿಫಿಶ್, ಥೈವಾನ್ನ ಅದೃಷ್ಟದ ಗೊಂಬೆಗಳು, ಡಿಸ್ನಿ ರಾಜಕುಮಾರಿ, ಚೀನಾದ ತಾಯಿ ಮಕ್ಕಳು, ಅಮೆರಿಕೆಯ ರಾಷ್ಟ್ರಪಕ್ಷಿ, ದುಬೈನ ರಾಷ್ಟ್ರಪ್ರಾಣಿ, ತಂಜಾವೂರಿನ ನರ್ತಕಿ, ಮೊದಲಾದವುಗಳನ್ನು ಜೋಡಿಸಿಟ್ಟು ದೇಶ ವಿದೇಶಗಳನ್ನು ಒಂದುಗೂಡಿಸಿದ್ದಾರೆ.
ಪರಿಸರ ಕಾಳಜಿ: ಪರಿಸರ ಪ್ರೇಮವನ್ನು ಪ್ರತಿನಿಧಿಸುವಂತೆ ಒಂದು ಭಾಗದಲ್ಲಿ ಕಾಡನ್ನು, ಕಾಡುಪ್ರಾಣಿಗಳು, ಹಕ್ಕಿಗಳು, ಕಾಡಿನಲ್ಲಿ ವಾಸಿಸುವವರನ್ನು ಗೊಂಬೆಗಳ ಮೂಲಕ ಪ್ರದರ್ಶಿಸಿದ್ದಾರೆ.
‘ಪ್ರವಾಸಕ್ಕಾಗಿ ಹೋದ ಸ್ಥಳಗಳಿಂದೆಲ್ಲಾ ಗೊಂಬೆಗಳನ್ನು ತರುವ ಅಭ್ಯಾಸವಿದೆ. ದಸರಾ ಹಬ್ಬದ ಪ್ರಯುಕ್ತ ಈ ರೀತಿ ಸಂಗ್ರಹಿಸಿರುವ ಗೊಂಬೆಗಳನ್ನೆಲ್ಲಾ ಜೋಡಿಸಿಟ್ಟಾಗ ನಾವು ಭೇಟಿ ನೀಡಿರುವ ವಿಶ್ವದ ವಿವಿಧ ಪ್ರದೇಶಗಳು, ಸಂಸ್ಕೃತಿ, ರೀತಿ ರಿವಾಜುಗಳು, ಉಡುಪು, ಖಾದ್ಯ ಎಲ್ಲವೂ ಚಿತ್ರಾವಳಿಯಂತೆ ಕಣ್ಮುಂದೆ ಬರುತ್ತದೆ. ಕುವೆಂಪು ಸಾರಿದ ವಿಶ್ವ ಮಾನವ ಸಂದೇಶ ನೆನಪಾಗುತ್ತದೆ. ಗಡಿಗಳು ಮನುಷ್ಯರ ನಿರ್ಮಿತಿ, ಮಾನವತ್ವ ಗಡಿಯನ್ನು ಮೀರಿದ್ದು. ವಿಶ್ವದ ಸಾಂಸ್ಕೃತಿಕ ವೈವಿಧ್ಯತೆ ಹೆಮ್ಮೆ ತರುತ್ತದೆ. ಗೊಂಬೆಗಳನ್ನು ತಯಾರಿಸಲು, ಜೋಡಿಸಿಡಲು ನಮ್ಮ ತಾಯಿ ಹಾಗೂ ಕುಟುಂಬದವರೆಲ್ಲ ನೆರವಾಗಿದ್ದಾರೆ’ ಎನ್ನುತ್ತಾರೆ ಡಾ.ರೋಹಿಣಿ ರವಿಶಂಕರ್.
ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ
ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ. ಆದರೆ ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಸಮಾಜದ ಎಲ್ಲಾ ವರ್ಗದ ಮಕ್ಕಳೂ ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಕಲಿಯುವ ವಿದ್ಯಾಮಂದಿರ ನಿರ್ಮಾಣವಾಗಲಿ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ನಗರದ ಎಸ್.ವಿ.ಗಣೇಶ್ನಗರದಲ್ಲಿ ಭಾನುವಾರ ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ವತಿಯಿಂದ ಪ್ರಾರಂಭಿಸಲಾಗುತ್ತಿರುವ ವಿದ್ಯಾ ಸಂಸ್ಥೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರನನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲಿಯನ್ನಾಗಿಯೂ, ಓರ್ವ ಉತ್ತಮ ಪ್ರಜೆಯನ್ನಾಗಿಯೂ, ಸ್ವಾವಲಂಬೀ ಬದುಕನ್ನು ನಿರ್ವಹಿಸಬಲ್ಲ ನಾಗರಿಕನನ್ನಾಗಿಯೂ ರೂಪಿಸುವ ಧ್ಯೇಯವನ್ನು ಇಟ್ಟುಕೊಂಡು ವಿದ್ಯಾಸಂಸ್ಥೆಯನ್ನು ನಡೆಸಬೇಕು. ಸರಿಯಾದ ಜೀವನ ಮೌಲ್ಯಾಧಾರಿತ ಶಿಕ್ಷಣ ಸಿಗುವಂತಾಗಲಿ ಎಂದು ಹಾರೈಸಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಆಧುನಿಕ ಯುಗವು ತಾಂತ್ರಿಕವಾಗಿ ದಾಪುಗಾಲು ಇಡುತ್ತಾ ಸಾಗುತ್ತಿದೆ. ಅದರ ವೇಗಕ್ಕೆ ಎಲ್ಲರೂ ಹೊಂದಿಕೊಳ್ಳಬೇಕಾಗಿದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಬಾಲ್ಯದಲ್ಲಿಯೇ ಮಕ್ಕಳು ಯಾವ ಕ್ಷೇತ್ರದಲ್ಲಿ ಕುಶಲಿಯಾಗ ಬಹುದು ಎಂಬುದನ್ನು ಕಂಡು ಹಿಡಿದು ಅದರಲ್ಲಿ ಅವನು ದಕ್ಷನಾಗುವಂತೆ, ಕೌಶಲವನ್ನು ಅಭ್ಯಾಸ ಮಾಡುವಂತೆ ಪ್ರೇರಣೆ ನೀಡಬೇಕು. ನಿಗದಿತ ಶಿಕ್ಷಣವನ್ನು ಕೊಡುವುದರ ಜೊತೆಗೆ ಉತ್ತಮ ಗುಣ, ನಡತೆ, ತ್ಯಾಗ ಮನೋಭಾವನೆ, ಸೇವಾ ಭಾವನೆ, ದ್ವೇಷವಿಲ್ಲದ ಸಹಜ ಪ್ರೀತಿಯ ವರ್ತನೆ ಮೊದಲಾದ ಜೀವನ ಮೌಲ್ಯಗಳನ್ನು ಮಕ್ಕಳು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಪ್ರೇರೇಪಿಸ ಬೇಕು. ಶಿಕ್ಷಣದ ಜೊತೆಗೆ ಬದುಕುವುದನ್ನು ಮೊದಲು ಅಭ್ಯಾಸ ಮಾಡುವಂತೆ ಪರೋಕ್ಷವಾಗಿ ಪ್ರಶಿಕ್ಷಣ ನೀಡಬೇಕು ಎಂದು ನುಡಿದರು.
ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವೆಂಕಟರೋಣಪ್ಪ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಡಾ.ಲಕ್ಷ್ಮೀನಾರಾಯಣ್, ನಗರಸಭೆ ಸದಸ್ಯ ಜಬೀವುಲ್ಲ, ಸುಬ್ರಮಣಿ, ಕ್ರೆಸೆಂಟ್ ತಮೀಮ್ ಅನ್ಸಾರಿ, ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್(ದೇವಿ), ನಾಗನರಸಿಂಹ, ಮುನಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಾತಂತ್ರ್ಯವು ಶೋಷಕರ ವಿರೋಧಿ
ಸ್ವಾತಂತ್ರ್ಯ ಎನ್ನುವುದು ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದಾಗಿದೆ. ಸ್ವಾತಂತ್ರ್ಯವು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ ಎಂಬುದು ಭಗತ್ ಸಿಂಗ್ ಅವರ ಆಲೋಚನೆಯಾಗಿತ್ತು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಎಲ್.ಮುತ್ತಕದಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ ಮನೆಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಭಗತ್ ಸಿಂಗ್ ೧೦೯ನೇ ಜಯಂತಿ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭಗತ್ ಸಿಂಗ್ನ ಹೆಸರೇ ರೋಮಾಂಚನ ಉಂಟುಮಾಡುವಂಥದ್ದು. ನಮ್ಮ ದೇಶದ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಭಗತ್ ಸಿಂಗ್ ಇಂದಿಗೂ ಯುವಕರಿಗೆ ಪ್ರೇರಣೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಜಾತಿ ರಹಿತ ಸಮ ಸಮಾಜವನ್ನು ಭಗತ್ಸಿಂಗ್ ಪ್ರತಿಪಾದಿಸಿದ್ದರು.ಭಗತ್ಸಿಂಗ್ನನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿ ದಶಗಳು ಕಳೆದಿದ್ದರೂ ಅವರ ತತ್ವಾದರ್ಶ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭರತ್ ರೆಡ್ಡಿ, ಕಿರಣ್, ಮುನಿರಾಜು, ದಾಮೋದರ್, ಅಶ್ವಕ್ ಅಹ್ಮಮದ್, ನರೇಶ್, ಮಂಜುನಾಥ್, ಗಂಗಾಧರ್, ವೇಣು ಮತ್ತಿತರರು ಹಾಜರಿದ್ದರು.
ದಸರಾ ಕ್ರೀಡಾಕೂಟ
ಶಿಡ್ಲಘಟ್ಟದ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಾದ ಪೃಥ್ವಿ, ತೇಜಸ್(400 ಮೀಟರ್ ಓಟ), ಪೃಥ್ವಿ ಮಾದೇಶ(800 ಮೀಟರ್ ಓಟ), ಪೃಥ್ವಿ, ಲಕ್ಷ್ಮಣ, ಸುಹಾಸ್, ತೇಜಸ್(400 ಮೀಟರ್ ರಿಲೇ) ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬ್ರಾಹ್ಮಣ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ನಗರದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ನಾಲ್ಕನೇ ವರ್ಷದ 2016ನೇ ಸಾಲಿನ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಅಕ್ಟೋಬರ್ 23ರ ಭಾನುವಾರ ನಡೆಯಲಿದ್ದು, ತಾಲ್ಲೂಕಿನ ಪ್ರತಿಭಾವಂತ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ಸಂಪರ್ಕಿಸಬೇಕೆಂದು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿಯಲ್ಲಿ ಶೇ.85, ಪಿಯುಸಿಯಲ್ಲಿ ಶೇ.80 ಮತ್ತು ಪದವಿ ಪರೀಕ್ಷೆಯಲ್ಲಿ ಶೇ.60 ಅಂಕಗಳಿಸಿರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಜೆರಾಕ್ಸ್, ಎರಡು ಭಾವಚಿತ್ರಗಳೊಂದಿಗೆ ಟ್ರಸ್ಟ್ನ ಪದಾಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.
ಸಂಪರ್ಕಿಸಬೇಕಾದವರು: ಬಿ.ಆರ್. ಅನಂತಕೃಷ್ಣ – 9964182305, ವಿ. ಕೃಷ್ಣ – 9632025422, ಎನ್. ಶ್ರೀಕಾಂತ್ – 9845062116
ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ
ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಹಿದ್‌ಪಾಷ ನಣಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ನಿಸ್ವಾರ್ಥ ಸೇವೆಯೇ ಆದರ್ಶವಾಗಬೇಕು
ನಿಸ್ವಾರ್ಥದಿಂದ ದೇಶದ ಕೃಷ್ಠರೋಗಿಗಳ ಆರೈಕೆ ಮಾಡಿ ಸಂತರಾದ ಮದರ್ ತೆರೆಸಾ ಮತ್ತು ಹರಿಜನರ ಏಳಿಗೆಗಾಗಿ ಶ್ರಮಿಸಿದ ಮಹಾತ್ಮಾ ಗಾಂಧೀಜಿ ನಮಗೆ ಆದರ್ಶವಾಗಬೇಕು. ಇದುವೇ ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ ಎಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯದರ್ಶಿ ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚಾರಣೆಯಲ್ಲಿ ಅವರು ಮಾತನಾಡಿದರು. ಮದರ್ ತೆರೆಸಾ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರು, ಮಹಾತ್ಮಗಾಂದೀಜಿರವರು ಸಮಾಜದ ಸುಧಾರಣೆಗೆ ನಿಸ್ವಾರ್ಥವಾಗಿ ದುಡಿದು ಮಹಾತ್ಮರಾದರು. ಮಹಾತ್ಮ ಗಾಂದೀಜಿಯವರ ಕನಸಿನ ಕೂಸು ರಾಷ್ಟ್ರೀಯ ಸೇವಾ ಯೋಜನೆಯಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳ ಜನತೆ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾದ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಜನತೆ ಪ್ರಾಮಾಣಿಕತೆ, ನಂಬಿಕೆ ಹಾಗೂ ಮುಗ್ದತೆಗೆ ಹೆಸರಾಗಿದ್ದು ಅವರಲ್ಲಿ ಅರಿವು ಮೂಡಿಸುವ ಸಲುವಾಗಿ ಏಳು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರವನ್ನು ಏರ್ಪಡಿಸಿದೆ. ಪ್ರತಿ ದಿನ ಒಂದೊಂದು ಇಲಾಖೆ ವತಿಯಿಂದ ಮಾಹಿತಿ ನೀಡುವುದು, ಗ್ರಾಮದ ಜನತೆಯೊಂದಿಗೆ ಬೆರತು ಸ್ವಚ್ಛತೆ ಕಾರ್ಯಗಳನ್ನು ಮಾಡುವುದು, ಸರ್ಕಾರಗಳ ಯೋಜನೆಗಳ ಬಗ್ಗೆ ಹಾಗೂ ಗ್ರಾಮದ ನಿರ್ವಹಣೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವಂತಹ ಸಮಾಜಿಕ ಸೇವೆ ಮಾಡುವುದು ರಾಷ್ಟ್ರೀಯ ಸ್ವಯಂಸೇವಾ ಯೋಜನೆಯ ಉದ್ದೇಶವಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಲ್ಲಿ ಭಾಗವಹಿಸಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ನಿಮ್ಮ ತಂದೆ ತಾಯಂದಿರಿಗೂ, ಕಾಲೇಜಿಗೂ ಹಾಗೂ ಗ್ರಾಮಕ್ಕೂ ಕೀರ್ತಿ ತರಬೇಕೆಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್ ಮಾತನಾಡಿ, ರಾಜ್ಯಾದ್ಯಂತ ೭೭೦ ಪದವಿಪೂರ್ವ ಕಾಲೆಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ೭೮ ಸಾವಿರ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ವಾರ್ಷಿಕ ವಿಶೇಷ ಶಿಬಿರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ನಾಯಕತ್ವ ಗುಣಗಳು ಬೆಳೆಸಿಕೊಳ್ಳಬಹುದು. ಗ್ರಾಮೀಣ ಪ್ರದೇಶಗಳಲ್ಲಿ ವಾಸಮಾಡುವ ಅನಕ್ಷರಸ್ಥರಿಗೆ ಸಂವಹನ ಮಾಡಲು ಅವಕಾಶಗಳು ದೊರೆಯುತ್ತವೆ. ಗ್ರಾಮ ನೈರ್ಮಲ್ಯ, ಸ್ವಚ್ಛತೆ ಮತ್ತು ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದು, ಗ್ರಾಮೀಣ ಪ್ರದೇಶಗಳ ಜನತೆಯಲ್ಲಿ ಬೆರೆತು ಅವರ ಕಷ್ಟಗಳನ್ನು ಅರಿತು ಕೈಲಾದ ಸೇವೆ ಮಾಡುವುದು ಶಿಬಿರದ ಉದ್ದೇಶವಾಗಿದೆ ಎಂದರು.
ಶಿಬಿರದಲ್ಲಿ ದೈನಂದಿನ ಕೆಲಸ ಕಾರ್ಯಗಳ ಜೊತೆ ಪ್ರತಿ ದಿನ ಒಬ್ಬೊಬ್ಬ ವಿಷಯ ಪರಿಣಿತರನ್ನು ಆಹ್ವಾನಿಸಿ ಹೊಸ ವಿಷಯದ ಬಗ್ಗೆ ಮಾಹಿತಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸಿ ಸೃಜನ ಶೀಲತೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಾಕಷ್ಟು ಅವಕಾಶಗಳಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಮಾಜ ಶಾಸ್ತ್ರ ಉಪನ್ಯಾಸಕ ಲಕ್ಷ್ಮಣ್, ಇತಿಹಾಸ ಉಪನ್ಯಾಸಕ ಲೋಕೇಶ್, ಉಪನ್ಯಾಸಕ ದೇವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.
ಮಾವು ಅಭಿವೃದ್ಧಿ ನಿಗಮದಿಂದ ಸಹಾಯಧನ
ಮಾವು ಅಭಿವೃದ್ಧಿ ನಿಗಮದಿಂದ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಒಂದು ಎಕರೆಗೆ ಎರಡು ಸಾವಿರ ರೂಗಳಂತೆ ಗರಿಷ್ಠ ಹತ್ತು ಎಕರೆಗೆ ಸಹಾಯಧನ ನೀಡಲಾಗುವುದು ಎಂದು ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ತಿಳಿಸಿದರು.
ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ಆಂಜಿನಪ್ಪನವರ ಮನೆಯ ಅವರಣದಲ್ಲಿ ಬುಧವಾರ ಚಿಂತಾಮಣಿಯ ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರ ಮಾವು ಬೆಳೆಗಾರರಿಗೆ ಆಯೋಜಿಸಿದ್ದ ಮಾವು ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾವಿನ ಸಾಗಾಣಿಕೆಗೆ ಬಳಸುವ ಕ್ರೇಟ್, ಕಾರ್ಟೂನ್ ಬಾಕ್ಸ್ ಮತ್ತು ಸೂಕ್ಷ್ಮ ಪೋಷಕಾಂಶಗಳಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸುತ್ತ ಮುತ್ತಲ್ಲಿನ ಗ್ರಾಮಗಳಾದ ಬೀರಪ್ಪನಹಳ್ಳಿ, ಕೊತ್ತನೂರು , ಪಲಿರ್ಚೇಲು, ವೈ. ಹುಣಸೇನಹಳ್ಳಿ ಗಳಿಂದ ಸುಮಾರು 120 ಜನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ರೈತರಿಗೆ ಮಾವಿನಲ್ಲಿ ಸವರುವಿಕೆ, ಕಾಂಡಕೊರಕದ ಹತೋಟಿ, ಕೀಟ ಮತ್ತು ರೋಗಗಳ ಕುರಿತಂತೆ ತಿಳಿಸಿಕೊಡಲಾಯಿತು. ರೈತರ ತೋಟದಲ್ಲಿ ಪ್ರಾತ್ಯಕ್ಷತೆ ಸಹ ಏರ್ಪಡಿಸಲಾಗಿತ್ತು.
ತೋಟಗಾರಿಕೆ ಉಪ ನಿರ್ದೇಶಕಿ ಎಂ. ಗಾಯಿತ್ರಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ. ಆರ್. ಗೀತಾ ಮತ್ತು ರಮಾದೇವಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ನಿತಿನ್ ಮತ್ತು ರವಿಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸರ್ಕಾರದ ಸವಲತ್ತುಗಳು ಅರ್ಹರಿಗೆ ತಲುಪಲಿ
ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಷ್ಟೇ ಅಲ್ಲದೇ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟಬೇಕು ಎಂದರು.
ಗ್ರಾಮೀಣ ಪ್ರದೇಶದ ಜನತೆಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಕೆಲವೇ ಕೆಲ ಪ್ರಭಾವಿಗಳು ಹಾಗು ಮಧ್ಯವರ್ತಿಗಳ ಮುಖಾಂತರ ಸರ್ಕಾರದ ವಿವಿಧ ಯೋಜನೆಗಳು ಅನರ್ಹರಿಗೆ ಸಿಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಮಾಹಿತಿ ನೀಡಿದಲ್ಲಿ ಆಯಾ ಕ್ಷೇತ್ರದ ತಾಲ್ಲೂಕು ಪಂಚಾಯತಿ ಸದಸ್ಯರೂ ಸೇರಿದಂತೆ ನಾವುಗಳು ನೂತನ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಸೂಕ್ತ ಕ್ರಮ ಜರುಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ದ್ರಾಕ್ಷಿ, ಮಾವು, ದಾಳಿಂಬೆ, ಆಲೂಗಡ್ಡೆ, ಮುಂತಾದ ಬೆಳೆಗಳನ್ನು ಬೆಳೆಯುವಂತಹ ರೈತರು ವಿಮೆ ಮಾಡಿಸಿದರೆ, ಪ್ರಕೃತಿ ವಿಕೋಪ, ಅನಾವೃಷ್ಟಿಯ, ಆಲಿಕಲ್ಲಿನ ಮಳೆ, ಅಥವಾ, ಬಿರುಗಾಳಿಗೆ ಸಿಲುಕುವಂತಹ ಬೆಳೆಗಳಿಗೆ ವಿಮೆಯನ್ನು ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಸಭೆಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನರೇಗಾ, ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಸಿಗುವ ವಿವಿಧ ಸವಲತ್ತುಗಳು ಹಾಗು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಸಭೆಗೆ ಸಲ್ಲಿಸಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇಓ ವೆಂಕಟೇಶ್, ಸದಸ್ಯರು ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.
ಗ್ರಂಥಾಲಯಕ್ಕೆ ಪುಸ್ತಕಗಳ ಅಗತ್ಯ ಪೂರೈಕೆ
ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿ ಸಧ್ಯದಲ್ಲೇ ಪ್ರಾರಂಭವಾಗುತ್ತಿದ್ದು ಅದಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಕೊಡಿಸುವುದಾಗಿ ನಗರಸಭಾ ಅಧ್ಯಕ್ಷ ಅಫ್ಸರ್ ಪಾಷ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಸಂಬಂಧಿಸಿದಂತೆ ಹಲವು ಅಗತ್ಯತೆಗಳನ್ನು ತಿಳಿಸಿದ್ದಾರೆ. ನಗರಸಭೆಯಿಂದ ಸಾಧ್ಯವಾದಷ್ಟೂ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿದ್ದು, ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿಗೆ ಕಾಂಪೌಂಡ್ ವ್ಯವಸ್ಥೆ, ಸ್ವಚ್ಛತೆ, ಕಾರ್ಯಾಗಾರಗಳನ್ನು ನಡೆಸಲು ಸಹಕಾರ ಕೋರಿ ಕಾಲೇಜು ಸಿಬ್ಬಂದಿ ಮನವಿಯನ್ನು ನೀಡಿದರು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಾನಾಯಕ್, ಉಪನ್ಯಾಸಕರಾದ ರಾಮಚಂದ್ರಪ್ಪ, ಉಮೇಶ್‌ರೆಡ್ಡಿ, ಜೆ.ಕೆ.ರಮೇಶ್, ಛಾಯಣ್ಣ, ಡಾ.ವೆಂಕಟೇಶ್, ರೋಷನ್, ಮುಖಂಡರಾದ ಗೊರಮಡುಗು ರಾಮಾಂಜಿನಪ್ಪ, ಅಕ್ರಂಪಾಷ, ನಾಸಿರ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರಸಭೆ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ
ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ನಗರದ ಅಂದ ಚಂದವನ್ನು ಹೆಚ್ಚಿಲು ಚರಂಡಿ ಹಾಗೂ ರಸ್ತೆಗಳ ಸ್ವಚ್ಚತೆಗೆ ಆಧ್ಯತೆ ನೀಡುವ ಮೂಲಕ ಆರೋಗ್ಯವಂತ ಹಾಗೂ ಸುಂದರ ನಗರವನ್ನಾಗಿ ರೂಪಿಸಬೇಕೆಂದು ನೂತನ ನಗರ ಸಭೆ ಆಡಳಿತ ಮಂಡಳಿಗೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಮಂಗಳವಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಸೇರಿ ನೈರ್ಮಲ್ಯ ಕಾಪಾಡುವಲ್ಲಿ ಶ್ರಮಿಸಿದಾಗ ಮಾತ್ರ ನಗರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷ ಅಫ್ಸರ್್ ಪಾಷ ಮಾತನಾಡಿ ನಗರ ಸಭೆಯ ಆಡಳಿತ ಮಂಡಳಿಯ ಮೊದಲ ಆಧ್ಯತೆ ಸ್ವಚ್ಛತೆ ಎಂದು ತೀರ್ಮಾನಿಸಲಾಗಿದೆ. ಈ ದಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆವಿಗೂ ಸ್ವಚ್ಛತೆ ಕಾರ್ಯವನ್ನು ನಡೆಸುತ್ತಿದ್ದೇವೆ. ಸ್ವಚ್ಚತೆ ಕಾರ್ಯದಲ್ಲಿ ಪೌರ ಕಾರ್ಮಿಕರು, ನಗರಸಭೆ ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮಿಸುತ್ತಿದ್ದಾರೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭೆ ಉಪಾದ್ಯಕ್ಷೆ ಪ್ರಭಾವತಿಸುರೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದ ಕಿಷನ್, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ರಾಘವೇಂದ್ರ, ಸಿಕಂದರ್, ಸಂದ್ಯಾಮಂಜುನಾಥ್, ಸರಳಶ್ರೀಧರ್, ಜಬೀವುಲ್ಲಾ, ಮಂಜುನಾಥ್, ಸುಮಿತ್ರರಮೇಶ್್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಬರಹಗಳು ದಾರಿ ದೀಪವಾಗಿವೆ
ಪಂಡಿತ್ ದೀನ್ ದಯಾಳ್ ಉಪಾಧ್ಯಾ್ಯಾಯ್ ಉತ್ತಮ ಬರಹಗಾರರಾಗಿದ್ದರು. ಪಾಂಚಜನ್ಯದಂತಹ ಅಪರೂಪದ ಪತ್ರಿಕೆಯನ್ನು ಹೊರತಂದು ಬ್ರಿಟಿಷರ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದರು. ಅವರ ಪುಸ್ತಕಗಳು ಜೀವನದ ದಾರಿ ದೀಪವಾಗಿವೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಕೋಲಾರದ ನೆಹರು ಯುವ ಕೇಂದ್ರ ಹಾಗೂ ಸರ್ವೋದಯ ಸ್ವಯಂ ಸೇವಾ ಸಂಸ್ಥೆ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಭಾರತೀಯ ಜನ ಸಂಘದ ಮುಖಂಡರಾಗಿದ್ದವರು. ಏಕಾತ್ಮ ಮಾನವತಾವಾದ ಎಂಬ ಪ್ರಬಂಧ ಮಂಡಿಸಿ ಸಾಮ್ಯವಾದ ಮತ್ತು ಬಂಡವಾಳಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದರು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಮಾತನಾಡಿ, ದೀನದಯಾಳ್ ಅವರು ಜನರ ನಾಡಿ ಮಿಡಿತವನ್ನು ಅರ್ಥೈಸಿಕೊಳ್ಳುವ ಮೂಲಕ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದರು. ಸರಳ ಜೀವಿಯಾಗಿದ್ದ ಅವರು, ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ನುಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಗೂ ಪ್ರತಿಯೊಬ್ಬ ನಾಗರಿಕರೂ ಇಂದು ಅವರ ಆದರ್ಶವನ್ನು ನೆನೆದು ಅವರ ಹಾದಿಯನ್ನು ಅನುಸರಿಸಬೇಕೆಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್, ಸದಸ್ಯ ರಾಘವೇಂದ್ರ, ಅಖಂಡ ಭಾರತ ಸೇವಾ ಸಮಿತಿ ಜಿಲ್ಲಾದ್ಯಕ್ಷ ಕಿರಣ್, ಭರತ್‌ರೆಡ್ಡಿ, ವೆಂಕಟೇಶ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪಾನ್ಯಾಸಕ ಮಂಜುನಾಥ್, ಸರ್ವೋದಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನರೇಶ್, ನಿರ್ದೇಶಕರಾದ ಅಶ್ವಥ್, ಸಂಪತ್, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಬೇಕು
ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲು, ಕನ್ನಡದ ಭಾಷೆಯ ಬಗ್ಗೆ ಅಭಿಮಾನ ಮೂಡಲು ಸರ್ಕಾರ ಕನ್ನಡಿಗರ ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಸಾಹಿತಿ ಕಾಗತಿ ವೆಂಕಟರತ್ನಂ ಒತ್ತಾಯಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಸರ್ಕಾರಿ ಪಿಯು ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ದಿನಪತ್ರಿಕೆಗಳು, ವಾರಪತ್ರಿಕೆಗಳು, ಉತ್ತಮ ಸಾಹಿತ್ಯಾತ್ಮಕ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು. ಹೆಚ್ಚು ಓದುವುದರಿಂದ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಜೀವನವನ್ನು, ನಮ್ಮ ಸುತ್ತ ಮುತ್ತಲಿನ ಜನಜೀವನವನ್ನು ನೋಡುವ ರೀತಿ ಬದಲಾಗುತ್ತದೆ. ನಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಪ್ರಯತ್ನವನ್ನೂ ಮಾಡಬೇಕು. ಆಗ ಅಭಿವ್ಯಕ್ತಿಸುವ ಕಲೆಯೂ ಸಿದ್ಧಿಸುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಮಾತನಾಡಿ, ಕನ್ನಡ ಶಾಲೆಯಲ್ಲಿಯೇ ಓದಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಎನ್.ಆರ್.ನಾರಾಯಣಮೂರ್ತಿಯವರು ನಮ್ಮ ತಾಲ್ಲೂಕಿನವರಾಗಿದ್ದಾರೆ. ವಿದ್ಯಾರ್ಥಿಗಳು ಅಂಥಹವರಿಂದ ಪ್ರೇರಣೆ ಹೊಂದಬೇಕು. ನಮ್ಮ ಭಾಷೆಯ ಬಗ್ಗೆ ಅಭಿಮಾನವಿರುವುದರ ಜೊತೆಗೆ ನಮ್ಮೊಂದಿಗಿರುವ ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸಿ ಎಂದು ಹೇಳಿ, ನೇತ್ರದಾನ ಮತ್ತು ರಕ್ತದಾನದ ಬಗ್ಗೆ ವಿವರಿಸಿದರು.
ಶಿಕ್ಷಕ ವಾಸವಿ ಆರ್.ಮಂಜುನಾಥ್ ಮಾತನಾಡಿ, ಪಾರಂಪರಿಕ ಮೌಲ್ಯಗಳು, ಕನ್ನಡದ ಸಾಹಿತಿಗಳು, ಜಿಲ್ಲೆಯ ಸಾಹಿತ್ಯ ಹಾಗೂ ಕಸಾಪ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡದ ಹಿರಿಮೆ ಸಾರುವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಏಳು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಎಚ್.ಎಂ.ವೇಣು, ದ್ವಿತೀಯ ಸ್ಥಾನ ಪಡೆದ ಎನ್.ನಂದಿತಾ ಮತ್ತು ತೃತೀಯ ಸ್ಥಾನ ಪಡೆದ ಡಿ.ಸುಧಾಕರ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಉಪನ್ಯಾಸಕರಾದ ಲಕ್ಷ್ಮಯ್ಯ, ಮುನಿರಾಜು, ರಾಘವೇಂದ್ರ, ಲೋಕೇಶ್, ಶಿಕ್ಷಕ ವಾಸವಿ ಆರ್.ಮಂಜುನಾಥ್, ಕಸಾಪ ಗೌರವ ಕಾರ್ಯದರ್ಶಿ ತ್ಯಾಗರಾಜು, ಸದಸ್ಯ ನಾಗರಾಜು, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಂಪತ್ತು ಸಾರ್ವಜನಿಕವಾಗಿ ವಿತರಣೆಯಾಗಬೇಕು ಎಂದಿದ್ದರು ದೀನದಯಾಳ್
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಂಘಟಕರು ಮತ್ತು ದಾರ್ಶನಿಕರು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ತಾಲ್ಲೂಕು ಬಿಜೆಪಿ ವತಿಯಿಂದ ನಡೆದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಂಡಿತ್ ದೀನದಯಾಳ್ ಅವರು ಭಾರತದ ರಾಜಕೀಯದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದರು. ಸಂಪತ್ತು ಸಾರ್ವಜನಿಕವಾಗಿ ವಿತರಣೆಯಾಗಬೇಕು ಎಂದು ನಂಬಿದ್ದರು. ಸರಳತೆಯ ಉದ್ದೇಶವನ್ನು ರಾಜಕೀಯ ಪಕ್ಷಗಳಿಗೆ ಹೇಳಿಕೊಟ್ಟವರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉದ್ಧಾರವಾಗಬೇಕೆಂದು ಕನಸುಕಂಡವರು. ಸರಳತೆ ಮತ್ತು ವೈಚಾರಿಕತೆಗೆ ಹೆಸರಾದ ಅವರು ಏಕವ್ಯಕ್ತಿಯಾಗಿ ದೇಶಾದ್ಯಂತ ಮಿಂಚಿನಂತೆ ಸಂಚರಿಸಿದರು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ನಾರ್ಥ್ ಈಸ್ಟ್ ಸುರೇಶ್, ಕೆಂಪರೆಡ್ಡಿ, ಬೈರರೆಡ್ಡಿ, ಸುಜಾತಮ್ಮ, ರಮೇಶ್ಬಾಯಿರಿ, ಮಂಜುಳಮ್ಮ, ಗಾಯಿತ್ರಮ್ಮ, ಪುರುಷೋತ್ತಮ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಸಿಯೂಟ ನೌಕರಿಯ ಹೆಣ್ಣುಮಕ್ಕಳ ಕೆಲಸ ಖಾಯಮ್ಮಾತಿಗೆ ಒತ್ತಾಯ
ಬಿಸಿಯೂಟದ ಯೋಜನೆಯಡಿಯಲ್ಲಿ ಕಡಿಮೆ ಕೂಲಿಗೆ ಬಡ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ. ಈಗ ಈ ಯೋಜನೆಯನ್ನು ಸರ್ಕಾರ ಖಾಸಗೀಕರಣ ಹಾಗೂ ಕೇಂದ್ರೀಕೃತ ಮಾಡಲು ಹೊರಟು ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡುತ್ತಿದೆ ಎಂದು ಬಿಸಿಯೂಟ ನೌಕರರ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಆರೋಪಿಸಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಬಿಸಿಯೂಟ ನೌಕರರ ಮೂರನೇ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಬಿಸಿಯೂಟ ಯೋಜನೆಯಲ್ಲಿ ಒಂದು ಲಕ್ಷ 19 ಸಾವಿರ ಮಹಿಳೆಯರು ದುಡಿಯುತ್ತಿದ್ದಾರೆ. ಅವರ ದೈಹಿಕ ಶ್ರಮಕ್ಕೆ ತಕ್ಕಂತೆ ವೇತನವನ್ನು ಹೆಚ್ಚಿಸುವ ಬದಲಿಗೆ ವಿದ್ಯಾರ್ಥಿಗಳ ಹಾಜರಾತಿಯ ನೆಪದಲ್ಲಿ ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ. ಹೆಚ್ಚುವರಿ ಕೆಲಸ, ಸೇವಾ ಭದ್ರತೆಯಿಲ್ಲದೆ, ಕಡಿಮೆ ಹಣಕ್ಕಾಗಿ ಬಡ ಹೆಣ್ಣು ಮಕ್ಕಳನ್ನು ದುಡಿಸುತ್ತಿರುವುದು ಶೋಷಣೆಯ ಪರಮಾವಧಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಬಿಸಿಯೂಟ ನೌಕರರ ಖಾಯಮ್ಮಾತಿಗೆ ಒತ್ತಾಯಿಸಲಾಯಿತು. ಬಿಸಿಯೂಟ ನೌಕರರು ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಬಿಸಿಯೂಟ ನೌಕರರ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಗುಲ್ಜಾರ್, ಖಜಾಂಚಿ ಪಾಪಣ್ಣ, ಗೀತಾ, ನಾಗರತ್ನ, ಶ್ರೀದೇವಿ, ಡಿವೈಎಫ್ಐ ತಾಲ್ಲೂಕು ಅಧ್ಯಕ್ಷ ಫಯಾಜ್, ಶಂಕರಪ್ಪ ಮತ್ತಿತರರು ಹಾಜರಿದ್ದರು.
ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಶ್ರೀಗಂಗಾಧರೇಶ್ವರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದು, ಅಲಂಕೃತ ಆನೆಯೊಂದಿಗೆ ಗಣೇಶ ಮೂರ್ತಿ ಹಾಗೂ ಗ್ರಾಮ ದೇವತೆಗಳ ಮೆರವಣಿಗೆಯನ್ನು ಮಾಡಿದರು. ಶಾಸಕ ಎಂ.ರಾಜಣ್ಣ ಅವರನ್ನು ಗ್ರಾಮಸ್ಥರು ಗೌರವಿಸಿದರು.

