ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಹೆಚ್ಚಿನ ಆಸಕ್ತಿವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಂತಡಿಪಿ ಗ್ರಾಮದ ಜನತೆಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಓವರ್ ಹೆಡ್ ಟ್ಯಾಂಕ್ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಓವರ್ಹೆಡ್ ಟ್ಯಾಂಕ್ಗೆ ನೀರೊದಿಗಿಸುವ ಸಲುವಾಗಿ ಶಾಸಕರ ಅನುದಾನದಿಂದ ಸುಮಾರು ೨.೪ ಲಕ್ಷದಲ್ಲಿ ಮರು ಕೊಳವೆಬಾವಿ ಕೊರೆಸಲಾಗಿದೆ. ಗ್ರಾಮದಲ್ಲಿ ಪೈಪ್ ಲೈನ್ ಅಳವಡಿಸಿದ್ದು ಗ್ರಾಮದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ಮುನಿಯಪ್ಪ, ತನುಜಾರಘು, ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಚಿಂತಡಿಪಿ ಗಮ ಪಂಚಾಯತಿ ಸದಸ್ಯ ರಮೇಶ್, ಮುನಿನಾರಾಯಣಪ್ಪ, ಮಾರುತಿ, ಮುರಳಿ, ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮದಲ್ಲಿ ಉತ್ತಮ ಸೇವೆ ಒದಗಿಸಿ
ಕಲೆಯನ್ನು ಪ್ರವೃತ್ತಿಯಿಂದ ವೃತ್ತಿಯನ್ನಾಗಿಸಿಕೊಳ್ಳಿ
ದೇಶಿಯ ಕಲಾಕೃತಿಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಕಲೆಯು ಈಗ ಕೇವಲ ಹವ್ಯಾಸವಾಗಿ ಉಳಿದಿಲ್ಲ. ಕಲೆಯನ್ನು ಪ್ರವೃತ್ತಿಯಿಂದ ವೃತ್ತಿಯನ್ನಾಗಿಸಿಕೊಳ್ಳಬಹುದು. ಅದಕ್ಕೆ ನಿರಂತರ ಸಾಧನೆ ಮಾಡಬೇಕು. ತನ್ಮೂಲಕ ಸ್ವಾವಲಂಬಿಗಳಾಗಬಹುದು ಶಾಸಕ ಎಂ. ರಾಜಣ್ಣ ತಿಳಿಸಿದರು.
ನಗರದ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಅವರ ಮನೆಯಲ್ಲಿ ಭಾನುವಾರ ಕ.ಸಾ.ಪ ತಾಲ್ಲೂಕು ಘಟಕದಿಂದ ನಡೆದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ನಮ್ಮಲ್ಲಿ ಎಲೆಮರೆಯ ಕಾಯಿಗಳಂತೆ ಹಲವಾರು ಮಂದಿ ಕಲಾವಿದರಿದ್ದಾರೆ. ನಾವು ಪ್ರಯೋಜನಬಾರದೇ ಬಿಸಾಡುವ ವಸ್ತು ಕೂಡ ಉಪಯೋಗವಾಗುವಂತೆ ಮಾಡುವುದು ವಿಶಿಷ್ಟ ಕಲೆಯಾಗಿದೆ. ಈ ರೀತಿಯ ಕಲಾಕಾರರನ್ನು ತಾಲ್ಲೂಕು ಕಸಾಪ ಗುರುತಿಸಿ ಅವರ ಮೂಲಕ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ,‘ಕಳೆದ ಜೂನ್ ತಿಂಗಳಿನಲ್ಲಿ ತಾಲ್ಲೂಕು ಘಟಕದಿಂದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಶಿಬಿರವನ್ನು ಪ್ರಾರಂಭಿಸಲಾಗಿತ್ತು. ಶಿಬಿರವು ಹನ್ನೆರಡು ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಂಜೆ 4 ರಿಂದ 6 ಗಂಟೆಯವರೆಗೂ ನಡೆದಿದೆ, ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರು ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಆಸಕ್ತ 25 ಮಂದಿ ಮಕ್ಕಳಿಗೆ ಉಚಿತವಾಗಿ ಕಲಿಸಿದ್ದರು. ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಕಲಿಯುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ. ಮಕ್ಕಳಿಗೆ ಉಪಯುಕ್ತ ಕಲೆಯನ್ನು ಕಲಿಸುವುದೂ ಕನ್ನಡದ ಕೆಲಸವೆಂದೇ ತಾಲ್ಲೂಕು ಕಸಾಪ ವತಿಯಿಂದ ಈ ಶಿಬಿರವನ್ನು ಉಚಿತವಾಗಿ ನಡೆಸಲಾಗಿತ್ತು’ ಎಂದು ಹೇಳಿದರು.
ಶಿಬಿರದಲ್ಲಿ ಕಲಿತ ಮಕ್ಕಳಲ್ಲಿ ಉತ್ತಮ ಕಲಾಕೃತಿಗಳನ್ನು ತಯಾರಿಸಿದ ಹರ್ಷಿತಾ ಮತ್ತು ಯಾಮಿನಿಗೆ ಪ್ರಥಮ ಸ್ಥಾನ, ಭೂಮಿಕಾ ಮತ್ತು ಪಾವನಿಗೆ ದ್ವಿತೀಯ ಸ್ಥಾನ, ಶ್ರೇಯಸಿಗೆ ತೃತೀಯ ಸ್ಥಾನವನ್ನು ನೀಡಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್, ರೂಪ ಪಾರ್ಥಸಾರಥಿ, ಮಂಜುನಾಥ್, ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಸದಸ್ಯರಾದ ಮಂಜುನಾಥ್, ಮಾಲತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮೀಣ ಭಾಗದ ಜನರಿಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗಬೇಕು
ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗಿರುವ ಕಾರಣ ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೆಂದು ಟ್ರಸ್ಟ್ ತಜ್ಞ ವೈದ್ಯರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಶ್ರೀ ಜ್ಯೋತಿ ಆಂಗ್ಲ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಎಸ್. ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯವರ ಸಹಯೋಗದಲ್ಲಿ ನಡೆಸಿದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಉತ್ತಮ ಚಿಕಿತ್ಸೆಗಾಗಿ ಬಹುದೂರ ಹೋಗಬೇಕು. ಅದರಲ್ಲೂ ವಯಸ್ಕರಿಗೆ ಹಲವಾರು ಸಮಸ್ಯೆಗಳಿರುತ್ತವೆ. ಹಾಗಾಗಿ ಎಂ.ವಿ.ಜೆ ಆಸ್ವತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದು, ಆರೋಗ್ಯ ಕಾರ್ಡ್ ಕೊಡಿಸುತ್ತಿದ್ದೇವೆ. ಈ ಕಾರ್ಡ್ ಬಡವರಿಗೆ ನೀಡುತ್ತಿದ್ದು, ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಹಲವಾರು ಮಂದಿ ತಜ್ಞ ವೈದ್ಯರು ಆಗಮಿಸಿದ್ದಾರೆ. ಮಧುಮೇಹ, ರಕ್ತದೊತ್ತಡ, ಕಣ್ಣು, ಮೂಳೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರು ಬಂದಿರುವರು. ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಯಶಸ್ವಿನಿ ಮತ್ತು ಆರ್ಎಸ್ಬಿವೈ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಯಶಸ್ವಿನಿ ಮತ್ತು ಆರ್ಎಸ್ಬಿವೈ ಕಾರ್ಡ್ ಹೊಂದಿಲ್ಲದ ಬಡವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗುವುದು ಎಂದರು.
ಕಣ್ಣಿನ ಪೊರೆಯಿದ್ದವರಿಗೆ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ನಮ್ಮದೇ ವಾಹನದಲ್ಲಿ ಅವರನ್ನು ಕರೆದೊಯ್ದು ನಂತರ ಕರೆತಂದು ಬಿಡುತ್ತೇವೆ. ತಜ್ಞ ವೈದ್ಯರ ತಂಡವೇ ಇರುವುದರಿಂದ ಈ ಶಿಬಿರದಲ್ಲಿ ತಮ್ಮ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಶ್ರವಣ ದೋಷವುಳ್ಳರಿಗೆ ಟ್ರಸ್ಟ್ ವತಿಯಿಂದ ಶ್ರವಣ ಸಾಧನಗಳು ಮತ್ತು ಕಣ್ಣಿನ ಸಮಸ್ಯೆ ಇರುವವರಿಗೆ ಕನ್ನಡಕಗಳನ್ನು, ಅಂಗವಿಕಲರಿಗೆ ವೀಲ್ಚೇರುಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಶಿಬಿರದಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯ ನುರಿತ ತಜ್ಞರಿಂದ ಸ್ತ್ರೀಯರ ಸಮಸ್ಯೆಗಳು, ಮೂಳೆ ಸಾಂದ್ರತೆ ಮತ್ತು ಕೀಲುರೋಗ ತಪಾಸಣೆ, ನೇತ್ರ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮತ್ತು ಇನ್ನೂ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಎಂ.ವಿ.ಜೆ ಆಸ್ವತ್ರೆಯ ವ್ಯವಸ್ಥಾಪಕ ಡಾ. ಪ್ರಮೋದ್, ಶ್ರೀ ಜ್ಯೋತಿ ಆಂಗ್ಲ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕ ಶ್ರೀನಿವಾಸ್, ಶ್ರೀಧರ್, ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರ್, ನಸೀಮಾ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್. ಪ್ರತೀಶ್, ತಮ್ಮಣ್ಣ, ಚಂದ್ರೇಗೌಡ, ಆನೂರು ಶ್ರೀನಿವಾಸ್, ಸೀತಪ್ಪ, ವಕೀಲ ಕೃಷ್ಣಮೂರ್ತಿ, ಮುನಿರಾಜು, ರಾಜಣ್ಣ, ನಾರಾಯಣಪ್ಪ, ಬಾಲಮುರಳಿಕೃಷ್ಣ, ಮೌಲಾ, ಮುನಿರೆಡ್ಡಿ, ಸಚಿನ್, ಛಲಪತಿ, ವಿಶ್ವನಾಥ, ಲಕ್ಷ್ಮಣ್, ತಿರುಪಳ್ಳಪ್ಪ, ನಂಜೇಗೌಡ, ರಾಮಾಂಜಿನಪ್ಪ, ಶಿವಣ್ಣ, ವೆಂಕಟಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾಷೆ ಉಳಿವಿಗೆ ಕನ್ನಡ ಪ್ರೀತಿ, ನಿಷ್ಠೆ ಅಗತ್ಯ
ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಪ್ರೀತಿ ಹಾಗೂ ಜ್ಞಾನ ಬೆಳೆಯಲು ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಸಮೃದ್ಧವಾದ ಸಾಹಿತ್ಯವಿದ್ದು ಎಷ್ಟು ಓದಿದರೂ ಮುಗಿಯದ ಅಕ್ಷಯಪಾತ್ರೆಯಂತಿದೆ ಎಂದು ಕಸಾಪ ಜಿಲ್ಲಾ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತಕುಮಾರ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ವಿವೇಕಾನಂದ ಪಿಯು ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕುವುದೇ ಸಾಧನೆಯಾಗಬಾರದು, ನಮ್ಮ ಸಾಧನೆಗಳ ಮೂಲಕ ಸಮಾಜವು ನೆನಪಿನಲ್ಲಿ ಉಳಿಸಿಕೊಳ್ಳುವಂತಹ ಬದುಕು ನಮ್ಮದಾಗಬೇಕು. ನಮ್ಮ ನಾಡಿನಲ್ಲಿ ಅನೇಕ ಮಂದಿ ಸಾಧಕರಿದ್ದು, ಅವರು ಪ್ರೇರಣೆಯಾಗಬೇಕು. ಪಠ್ಯದೊಂದಿಗೆ ಆಸಕ್ತಿಕರವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪುಸ್ತಕವು ಆಪ್ತ ಸ್ನೇಹಿತನಂತೆ. ಓದುತ್ತಾ ಹೋದಂತೆ ನಾವು ಎಷ್ಟೊಂದು ಓದಿಲ್ಲ ಎಂಬುದು ಅರಿವಾಗುತ್ತಾ ಹೋಗುತ್ತದೆ. ನಿಮ್ಮ ಗ್ರಂಥಾಲಯದಲ್ಲಿನ ಪುಸ್ತಕಗಳ ಓದುವಿಕೆ ಬಹು ಮುಖ್ಯ ಎಂದು ಹೇಳಿದರು.
ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಭಾಷೆ, ಕನ್ನಡ ಸಾಹಿತ್ಯ, ವಿದ್ಯಾಭ್ಯಾಸ ಕ್ರಮ, ವಚನಕಾರರು, ಸಾಹಿತಿಗಳ ಕುರಿತಂತೆ ವಿವರಿಸಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹನ್ನೆರಡು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಎನ್.ಪುನೀತ್ಕುಮಾರ್, ದ್ವಿತೀಯ ಸ್ಥಾನ ಪಡೆದ ಎ.ಪ್ರಿಯಾಂಕ ಮತ್ತು ತೃತೀಯ ಸ್ಥಾನ ಪಡೆದ ಬಿ.ಇಂದುಶ್ರೀ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್, ಸಾಹಿತಿ ಗೋಪಾಲಗೌಡ ಕಲ್ವಮಂಜರಿ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ದೇವರಾಜ್, ಕಸಾಪ ತಾಲ್ಲೂಕು ಘಟಕದ ಸಂಚಾಲಕರಾದ ಮೇಲೂರು ಸುದರ್ಶನ್, ಸುಧೀರ್, ಸದಸ್ಯ ಗುರುನಂಜಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ನೀಡುತ್ತಿದ್ದ ಸಹಾಯಧನ ಹೆಚ್ಚಿಸಲಾಗಿದೆ
ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಠ ಜಾತಿ ಹಾಗೂ ಪಂಗಡದ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ಪಂಪ್ ಮತ್ತು ಮೋಟರ್ ಹಾಗೂ ಪೂರಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಗಂಗಾ ಕಲ್ಯಾಣ ಯೋಜನೆಯಲ್ಲಿ ನೀಡುತ್ತಿದ್ದ ೧.೫ ಲಕ್ಷ ಸಹಾಯಧನವನ್ನು ಸರ್ಕಾರ ಇದೀಗ ೩.೫ ಲಕ್ಷಕ್ಕೇರಿಸಿದೆ. ಈ ಭಾಗದ ಆರ್ಥಿಕವಾಗಿ ಹಿಂದುಳಿದ ಎಸ್ಸಿ ಮತ್ತು ಎಸ್ಟಿ ಜನಾಂಗದ ಸುಮಾರು ೫೩ ಕೊಳವೆಬಾವಿಗಳ ಪೈಕಿ ೫೧ ರಲ್ಲಿ ನೀರು ದೊರೆತಿರುವುದು ಸಂತೋಷದ ವಿಷಯ. ಇದೀಗ ಇಲಾಖೆಯಿಂದ ನೀಡುತ್ತಿರುವ ಮೋಟರ್ ಪಂಪು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಬೇಡಿ. ಯಾವುದೇ ಕಾರಣಕ್ಕೂ ಯಾರೊಬ್ಬರಿಗೂ ಹಣ ನೀಡಬಾರದು ಎಂದು ಎಚ್ಚರಿಸಿದರು.
ಇನ್ನು ಇಲಾಖೆಯ ಕೆಲ ಅಧಿಕಾರಿಗಳು ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಶಾಸಕರ ಪತ್ರ ತೆಗೆದುಕೊಂಡು ಬನ್ನಿ ನಿಮಗೆ ಕೊಳವೆಬಾವಿ ಹಾಕಿಸಿಕೊಡುತ್ತೇನೆ ಎಂದು ಹೇಳಿ ಹಣ ಕೀಳುವ ಕಾಯಕ ರೂಡಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು ಫಲಾನುಭವಿಗಳು ಯಾರೊಬ್ಬರೂ ಅಧಿಕಾರಿಗಳಿಗಾಗಲಿ ಅಥವ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ದುರ್ಬಲರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡುತ್ತಿರುವ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿನ ಸುಮಾರು ೫೧ ಫಲಾನುಭವಿಗಳಿಗೆ ಮೋಟರ್, ಪಂಪು ಹಾಗು ಪೂರಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ನಗರಸಭೆ ಅಧ್ಯಕ್ಷ ಅಪ್ಸರ್ ಪಾಷ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ನಿಗಮದ ವ್ಯವಸ್ಥಾಪಕಿ ಕಾಮಾಕ್ಷಿ, ಮುಖಂಡರಾದ ಡಿ.ಬಿ.ವೆಂಕಟೇಶ್, ಮುನಿನಾರಾಯಣಪ್ಪ, ರವಿ, ರಮೇಶ್, ಲಕ್ಷ್ಮಿನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಡಿಯುವ ನೀರು ಕಲುಷಿತವಾಗಿದೆ
ನಗರದ ಗಾರ್ಡನ್ ರಸ್ತೆಯಲ್ಲಿರುವ ದರ್ಗಾ ಮೊಹಲ್ಲಾದಲ್ಲಿ ಸುಮಾರು ಐವತ್ತು ಮನೆಗಳಿಗೆ ಕುಡಿಯುವ ನೀರು ತ್ಯಾಜ್ಯದ ನೀರಿನೊಂದಿಗೆ ಮಿಶ್ರಣವಾಗಿ ಬರುತ್ತಿದ್ದು, ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
ನಗರದ ಎರಡನೇ ವಾರ್ಡ್ಗೆ ಸೇರುವ ದರ್ಗಾ ಮೊಹಲ್ಲಾದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದು, ಚರಂಡಿಯ ತ್ಯಾಜ್ಯದ ನೀರು ಮಿಶ್ರಣವಾಗುತ್ತಿದೆ. ಕುಡಿಯುವ ನೀರು ಕಪ್ಪುಬಣ್ಣವಾಗಿ ಬರುತ್ತಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ಮುನಿರಾಜು, ಮೂರ್ತಿ ಮತ್ತು ದೇವರಾಜ್(ದೇವಿ) ದೂರಿದ್ದಾರೆ.
ಈಗಾಗಲೇ ನಗರದಲ್ಲಿ ಸ್ವಚ್ಛತೆಯ ಕೊರತೆಯಿಂದ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಡೆಂಗ್ಯೂ ಕೂಡ ಹಲವರನ್ನು ಕಾಡುತ್ತಿದೆ. ಕುಡಿಯುವ ನೀರು ಕಲುಷಿತಗೊಂಡರೆ ಖಾಯಿಲೆಗಳು ಹೆಚ್ಚಾಗುತ್ತವೆ. ಈ ಬಗ್ಗೆ ನಗರಸಭೆಯವರು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಈ ಭಾಗದ ಜನರು ತಿಳಿಸಿದ್ದಾರೆ.
ಆಮ್ ಆದ್ಮಿ ಅಧ್ಯಕ್ಷ
ಶಿಡ್ಲಘಟ್ಟದ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷರನ್ನಾಗಿ ಬಿ.ಆರ್.ರಾಮಚಂದ್ರ ಅವರನ್ನು ನೇಮಕ ಮಾಡಿರುವುದಾಗಿ ತಾಲ್ಲೂಕು ಸಂಚಾಲಕ ವಿ.ನಾಗರಾಜ್ ತಿಳಿಸಿದ್ದಾರೆ.
ಸರಾಗವಾಗಿ ನಡೆದ ಇ–ಹರಾಜು
ಯಾವುದೇ ಗೊಂದಲವಾಗಲೀ, ತಕರಾರಾಗಲೀ ಇಲ್ಲದೆ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆ ಸರಾಗವಾಗಿ ನಡೆಯಿತು.
ಶುಕ್ರವಾರ ರೀಲರುಗಳು ಇ–ಹರಾಜು ಬೇಡ, ಬಹಿರಂಗ ಹರಾಜು ನಡೆಸಿ ಎಂದು ಪಟ್ಟುಹಿಡಿದು, ಹರಾಜಿನಲ್ಲಿ ಪಾಲ್ಗೊಳ್ಳದಿದ್ದುದರಿಂದ ಹಲವಾರು ರೈತರು ರೇಷ್ಮೆ ಗೂಡನ್ನು ವಾಪಸ್ ತೆಗೆದುಕೊಂಡು ಹೋಗುವ ಪರಿಸ್ಥಿತಿ ಮೂಡಿತ್ತು. ತಹಶೀಲ್ದಾರ್ ಮನೋರಮಾ ಅವರು ರೀಲರುಗಳೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಬಹಿರಂಗ ಹರಾಜನ್ನು ನಡೆಸಿದ್ದರೂ ಬಹುತೇಕ ರೈತರು ಬೇಸರಗೊಂಡು ತಮ್ಮ ರೇಷ್ಮೆ ಗೂಡನ್ನು ವಾಪಸ್ ತೆಗೆದುಕೊಂಡು ಹೋಗಿದ್ದರು. ತುರ್ತು ಸಭೆ ನಡೆಸಿದ್ದ ರೈತರು ಇ–ಹರಾಜು ನಡೆಸದಿದ್ದಲ್ಲಿ ಸೋಮವಾರದಿಂದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಬಂದ್ ಮಾಡುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಚ್ಚರಿಯೆಂಬಂತೆ ಹಿಂದಿನ ಯಾವ ಘಟನೆಯೂ ಆಗಿಲ್ಲವೆಂಬಂತೆ ಇ–ಹರಾಜು ಸುಗಮವಾಗಿ ಶನಿವಾರ ನಡೆಯಿತು. ಸುಮಾರು 370 ಲಾಟ್ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರಲಾಗಿತ್ತು. 200 ಮಂದಿ ರೀಲರುಗಳು ತಮ್ಮ ಮೊಬೈಲ್ ಬಳಸಿ ಇ–ಹರಾಜಿನಲ್ಲಿ ಅಷ್ಟೂ ರೇಷ್ಮೆ ಗೂಡನ್ನು ಕೊಂಡರು.
‘16,497 ಕೆಜಿ ರೇಷ್ಮೆ ಗೂಡನ್ನು ಇ–ಹರಾಜಿನ ಮೂಲಕ ಯಾವುದೇ ತೊಂದರೆಗಳಿಲ್ಲದೆ ರೀಲರುಗಳು ಕೊಂಡರು. ಗರಿಷ್ಠ 432 ರೂಗಳಾದರೆ ಕನಿಷ್ಠ 200 ರೂಗಳಾಯಿತು. ಸರಾಸರಿ 375 ರೂಗಳಂತೆ ರೇಷ್ಮೆ ಗೂಡು ಹರಾಜಾಯಿತು. ನಿನ್ನೆಯ ಗೊಂದಲದಿಂದ ಈ ದಿನ ಕಡಿಮೆ ಲಾಟ್ ರೇಷ್ಮೆ ಗೂಡನ್ನು ತಂದಿದ್ದರು. ಸುಗಮವಾಗಿ ಇ–ಹರಾಜು ನಡೆದಿದ್ದರಿಂದ ನಾಳೆಯಿಂದ ಎಂದಿನಂತೆ 800 ರಿಂದ 900 ಲಾಟ್ ಗೂಡು ಆವಕವಾಗುವ ನಿರೀಕ್ಷೆಯಿದೆ’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದರು.
ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಮನವಿ
ಸೆಪ್ಟೆಂಬರ್ 25ರ ಭಾನುವಾರದಂದು ವಿಶ್ವಕರ್ಮರ ನೇತಾರ ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ಬೆಂಗಳೂರಿನ ಚಾಮರಾಜನಗರದಲ್ಲಿ ನಡೆಯಲಿರುವ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲ್ಗೊಳ್ಳಲು ತೆರಳಲಿದ್ದು, ಕುಲಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘದ ತಾಲ್ಲೂಕು ಅಧರ್ಯಕ್ಷ ಅಮರನಾರಾಯಣಾಚಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ತಾಲ್ಲೂಕಿನಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮನವಿ
ನಗರದಿಂದ ಹೊರಗೆ ತಾಲ್ಲೂಕಿನಲ್ಲಿ ವಿಶಾಲವಾದ ಪ್ರದೇಶವನ್ನು ಗುರುತಿಸಿ ಶಿಡ್ಲಘಟ್ಟ ತಾಲ್ಲೂಕಿಗೆಂದು ಮಂಜೂರಾಗಿರುವ ಹೈಟೆಕ್ ಮಾರುಕಟ್ಟೆಯನ್ನು ಕೂಡಲೇ ನಿರ್ಮಾಣ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ಒತ್ತಾಯಿಸಿ ರೇಷ್ಮೆ ಇಲಾಖೆಯ ಆಯುಕ್ತರಿಗೆ, ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮುಖಾಂತರ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಏಷಿಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಅತಿ ಹೆಚ್ಚಿನ ರೇಷ್ಮೆ ಗೂಡು ಇಲ್ಲಿ ವಹಿವಾಟಾಗುತ್ತಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ರೈತರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ರೇಷ್ಮೆ ಕೃಷಿಕರ ಬಹುದಿನಗಳ ಬೇಡಿಕೆಯಾದ ಹೈಟೆಕ್ ಮಾರುಕಟ್ಟೆಯನ್ನು ಇಲಾಖಾ ವತಿಯಿಂದ ಸುಮಾರು ಮೂರು ವರ್ಷಗಳ ಹಿಂದೆಯೇ ಮಂಜೂರು ಮಾಡಲಾಗಿದ್ದರೂ ಅನುಷ್ಠಾನಗೊಳಿಸದಿರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ.
ರೇಷ್ಮೆ ಗೂಡಿನ ಮಾರುಕಟ್ಟೆ ನಗರದ ಮಧ್ಯಭಾಗದಲ್ಲಿದ್ದು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ರೇಷ್ಮೆ ಗೂಡಿನ ಸಾಗಾಟಕ್ಕೆ ತೊಂದರೆಯಾಗಿದೆ. ರೇಷ್ಮೆ ಗೂಡಿನ ವಹಿವಾಟಿಗೆ ತಕ್ಕಹಾಗೆ ಮಾರುಕಟ್ಟೆ ಪ್ರದೇಶದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವುದರಿಂದ ರೈತರಿಗೆ ಪ್ರಯಾಸವಾಗುತ್ತಿದೆ. ನಿರಂತರವಾಗಿ ಮೂಲಭೂತ ಸಮಸ್ಯೆಗಳಾದ ಶೌಚಾಲಯ, ಕುಡಿಯುವ ನೀರು, ರಾತ್ರಿ ವೇಳೆ ದೂರದ ರೈತರಿಗೆ ತಂಗುದಾಣ ಮುಂತಾದ ಸಮಸ್ಯೆಗನ್ನು ನಿವಾರಿಸುವಂತೆ ಹಲವಾರು ಮನವಿಯನ್ನು ಕೊಟ್ಟಿದ್ದರೂ ಸಹ ಇದುವರೆಗೂ ಈಡೇರಿಸಿಲ್ಲ. ಅನಧಿಕೃತ ವ್ಯಕ್ತಿಗಳು ಪದೇಪದೇ ಮಾರುಕಟ್ಟೆಯನ್ನು ಪ್ರವೇಶಿಸಿ ಇಲ್ಲಿನ ಸಾಮರಸ್ಯ ವಾತಾವರಣವನ್ನು ಕದಡುತ್ತಿರುವುದರಿಂದ ರೈತರಿಗೆ ಪ್ರತಿನಿತ್ಯ ನೆಮ್ಮದಿ ಇಲ್ಲದಂತಾಗಿದೆ.
ಇವೆಲ್ಲಾ ಕಾರಣಗಳಿಂದ ನಗರದಿಂದ ಹೊರಗೆ ತಾಲ್ಲೂಕಿನಲ್ಲಿ ಉತ್ತಮ ಸ್ಥಳವನ್ನು ಆಯ್ಕೆ ಮಾಡಿ ತುರ್ತಾಗಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಬೇಕು. ವಿಳಂಬವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ತಾದೂರು ಮಂಜುನಾಥ್, ವೇಣುಗೋಪಾಲ್, ದೇವರಾಜ, ಮೂರ್ತಿ, ರಾಮಚಂದ್ರ, ರಾಮಕೃಷ್ಣಪ್ಪ, ತಮ್ಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರೋಗ್ಯವಂತ ನಗರವನ್ನು ರೂಪಿಸಬೇಕು
ನಗರದಲ್ಲಿ ಬಹುತೇಕರು ರೇಷ್ಮೆ ಗುಡಿ ಕೈಗಾರಿಕೆಯನ್ನು ಅವಲಂಭಿಸಿದ್ದಾರೆ. ಸುಮಾರು ಐದು ಸಾವಿರ ಕುಟುಂಬಗಳು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಚರಂಡಿ, ರಸ್ತೆ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆಯನ್ನು ನೀಡುವ ಮೂಲಕ ಆರೋಗ್ಯವಂತ ನಗರವನ್ನು ರೂಪಿಸಬೇಕೆಂದು ನೂತನ ನಗರಸಭೆ ಆಡಳಿತ ಮಂಡಳಿಗೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಸ್ವಚ್ಛಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ನಗರಸಭೆಯ ಸದಸ್ಯರು, ತಾಲ್ಲೂಕಿನ ಜನಪ್ರತಿನಿಧಿಗಳು ಪ್ರತಿ ವಾರಕ್ಕೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ‘ನಮ್ಮ ಊರು, ನಮ್ಮ ಬೀದಿ’ ಎಂಬ ಅಭಿಮಾನ ಮೂಡುವಂತೆ ಸ್ಪರ್ಧಾತ್ಮಕವಾಗಿ ಅವರವರ ವಾರ್ಡುಗಳನ್ನು ನೈರ್ಮಲ್ಯರಹಿತವಾಗಿಸಬೇಕು. ಇದರಿಂದ ಆರೋಗ್ಯವಂತ ಊರು ನಮ್ಮದಾಗುತ್ತದೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ಅಫ್ಸರ್ಪಾಷ ಮಾತನಾಡಿ, ನಮ್ಮ ನೂತನ ನಗರಸಭಾ ಆಡಳಿತ ಮಂಡಳಿಯ ಮೊದಲ ಆಧ್ಯತೆ ಸ್ವಚ್ಛತೆಯಾಗಿದೆ. ಈ ದಿನ ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಆಸ್ಪತ್ರೆಯಿಂದ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ವರೆಗೂ ಸ್ವಚ್ಛಗೊಳಿಸಲಿದ್ದೇವೆ. ಮಂಗಳವಾರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ಸ್ವಚ್ಛತೆ ಕಾರ್ಯವನ್ನು ನಡೆಸಲಿದ್ದೇವೆ. ಪೌರಕಾರ್ಮಿಕರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುತ್ತಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್, ಶೂ, ಕೋಟುಗಳನ್ನು ನಗರಸಭೆ ವತಿಯಿಂದ ವಿತರಿಸಲಾಯಿತು.
ನಗರಸಭಾ ಸದಸ್ಯರಾದ ನಂದಕಿಶನ್, ರಾಘವೇಂದ್ರ, ಸಿಕಂದರ್, ವೆಂಕಟಸ್ವಾಮಿ, ಲಕ್ಷ್ಮಯ್ಯ, ಡಾ.ತಿಮ್ಮೇಗೌಡ, ಡಾ.ಮಮತ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ್, ಮಂಜುನಾಥ್, ಸುರೇಶ್, ಮುಕ್ತಿಯಾರ್ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಇ–ಹರಾಜು ನಡೆಸದಿದ್ದಲ್ಲಿ ಸೋಮವಾರದಿಂದ ರೇಷ್ಮೆ ಗೂಡಿನ ಮಾರುಕಟ್ಟೆ ಬಂದ್
ಇ–ಹರಾಜು ನಡೆಸದಿದ್ದಲ್ಲಿ ಸೋಮವಾರದಿಂದ ರೇಷ್ಮೆ ಗೂಡಿನ ಮಾರುಕಟ್ಟೆ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.
ಶುಕ್ರವಾರ ತುರ್ತು ಸಭೆಯನ್ನು ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ನಡೆಸಿದ ರೈತರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಕಳೆದ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ಶಾಸಕ ಎಂ.ರಾಜಣ್ಣನವರ ಸಮಕ್ಷಮದಲ್ಲಿ ರೈತರು ಮತ್ತು ರೀಲರುಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಗುರುವಾರದವರೆಗೂ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಡಲಾಗಿತ್ತು. ಶುಕ್ರವಾರದಿಂದ ಯಥಾ ಪ್ರಕಾರ ಇ–ಹರಾಜು ನಡೆಯುವಂತೆ ಒಕ್ಕೊರಲಿನಿಂದ ತೀರ್ಮಾನಿಸಲಾಗಿತ್ತು.
ಅದರಂತೆ ಮಂಗಳವಾರ, ಬುಧವಾರ ಮತ್ತು ಗುರುವಾರ ಬಹಿರಂಗ ಹರಾಜಿನಲ್ಲಿ ಭಾಗವಹಿಸಿದ ರೀಲರುಗಳು ಶುಕ್ರವಾರದಿಂದ ಇ–ಹರಾಜಿನಲ್ಲಿ ಭಾಗವಹಿಸದೆ ತಮ್ಮ ಮಾತಿಗೆ ತಪ್ಪಿದ್ದಾರೆ. ಶನಿವಾರ ಮತ್ತು ಭಾನುವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜಿನಲ್ಲಿ ರೀಲರುಗಳು ಭಾಗವಹಿಸದಿದ್ದಲ್ಲಿ ಸೋಮವಾರದಿಂದ ಮಾರುಕಟ್ಟೆಯನ್ನು ಅನಿರ್ಧಿಷ್ಟಾವಧಿಯವರೆಗೂ ಬಂದ್ ಮಾಡಲು ತೀರ್ಮಾನಿಸಿದ್ದಾರೆ.
ರೇಷ್ಮೆ ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಾಧ್ಯವಾದಷ್ಟು ಶನಿವಾರದಿಂದಲೆ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ರೈತ ಮುಖಂಡರು ವಿನಂತಿಸಿಕೊಂಡರು. ಇ–ಹರಾಜು ಪದ್ಧತಿಯಿಂದ ರೈತರ ಶೋಷಣೆ ತಪ್ಪಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಇ–ಹರಾಜು ಪದ್ಧತಿಯನ್ನು ವಾಪಸ್ ಪಡೆಯಬಾರದೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಶಿವಣ್ಣ, ನಾರಾಯಣಸ್ವಾಮಿ, ತಾದೂರು ಮಂಜುನಾಥ್, ಈರಣ್ಣ, ರಾಮಕೃಷ್ಣಪ್ಪ, ಹಿತ್ತಲಹಳ್ಳಿ ಮುನಿರಾಜು, ಆಯಾಖಾನ್, ಕುಮಾರ್, ನಾಗರಾಜು, ಆನಂದ್, ಹೇಮಣ್ಣ, ರಾಮಾಂಜಿನಪ್ಪ, ದೇವರಾಜು, ಮಂಜುನಾಥ್, ಮುನಿನಂಜಪ್ಪ, ಬೈರಸಂದ್ರ ಮೂರ್ತಿ, ಭಯ್ಯಣ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಇ–ಹರಾಜನ್ನು ನಿಲ್ಲಿಸಬೇಕೆಂದು ಪಟ್ಟುಹಿಡಿದ ರೀಲರುಗಳು
ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ರೀಲರುಗಳು ಮತ್ತು ರೈತರ ಸಭೆಯಲ್ಲಿ ೨೩ ರಿಂದ ಇ-ಹರಾಜು ಪ್ರಾರಂಭ ಮಾಡಲು ಒಪ್ಪಿಕೊಳ್ಳಲಾಗಿತ್ತು. ಆದರೆ ಶುಕ್ರವಾರ ಇ–ಹರಾಜಿನಲ್ಲಿ ರೀಲರುಗಳು ಪಾಲ್ಗೊಳ್ಳದೆ ಇ-ಹರಾಜು ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದರಿಂದ ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರೀಲರುಗಳ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಯಾವೊಂದು ಸಮಸ್ಯೆಯನ್ನೂ ಬಗೆಹರಿಸದೆ ಇ–ಹರಾಜು ಮಾಡಲು ಬಿಡುವುದಿಲ್ಲ ಎಂದು ರೀಲರುಗಳು ಪಟ್ಟುಹಿಡಿದರು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗೂಡು ಆವಕವಾಗಿತ್ತಾದರೂ ಹರಾಜಿನ ಸಮಯದಲ್ಲಿ ಇ-ಹರಾಜಿಗೆ ಸೈರನ್ ಹಾಕಲಾಯಿತು. ರೀಲರುಗಳು ಹರಾಜಿನಲ್ಲಿ ಭಾಗವಹಿಸಲಿಲ್ಲ, ಪುನಃ ಎರಡು ಬಾರಿ ಸೈರನ್ ಹಾಕಿದರೂ ಕೂಡಾ ಹರಾಜಿನಲ್ಲಿ ಭಾಗವಹಿಸದೆ ಇ–ಹರಾಜು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ನಂತರ ರೈತರು ತಂದಿರುವ ಗೂಡುಗಳನ್ನು ಬೇರೆ ಮಾರುಕಟ್ಟೆಗಳಿಗೆ ಸ್ಥಳಾಂತರ ಮಾಡಲು ಮುಂದಾದಾಗಲೂ ಗೂಡನ್ನು ಹೊರಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲವೆಂದು ರೀಲರುಗಳು ಪಟ್ಟು ಹಿಡಿದರು. ಬೇರೆ ಮಾರುಕಟ್ಟೆಗೆ ಹೋದರೂ ಅಲ್ಲಿಯೂ ಸಹ ಬಹಿರಂಗ ಹರಾಜೇ ನಡೆಯುತ್ತದೆ. ನಿಮಗೆ ವೃಥಾ ಸಾಗಾಣಿಕೆಯ ನಷ್ಟವಾಗುತ್ತದೆ. ಇಲ್ಲಿಯೇ ಬಹಿರಂಗ ಹರಾಜನ್ನು ನಡೆಸಿ ಎಂದು ಒತ್ತಾಯ ಮಾಡಿದರು. ಈ ವೇಳೆ ಕೆಲಕಾಲ ಮಾರುಕಟ್ಟೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಮಧ್ಯ ಪ್ರವೇಶಿಸಿದ ಮಾರುಕಟ್ಟೆಯ ಅಧಿಕಾರಿಗಳು ರೀಲರುಗಳ ಮನವೊಲಿಸಲು ಮುಂದಾದರೂ ಕೂಡಾ ಸಾಧ್ಯವಾಗಲಿಲ್ಲ, ನಂತರ ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ಕೆ.ಎಂ.ಮನೋರಮಾ ರೀಲರುಗಳೊಂದಿಗೆ ಚರ್ಚೆ ನಡೆಸಿದರು. ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಂತರ ಒಂದು ದಿನದ ಮಟ್ಟಿಗೆ ಇ–ಹರಾಜು ಪ್ರಕ್ರಿಯೆಯನ್ನು ಮುಂದೂಡಿ ಎಂದಿನಂತೆ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಟ್ಟರು.
ಸಂಜೆ ೪ ಗಂಟೆಯ ನಂತರ ಹರಾಜು ಮಾಡಲಾಯಿತಾದರೂ ಬಂದಿದ್ದ 700 ಲಾಟ್ಗಳಲ್ಲಿ 426 ಲಾಟ್ ಮಾತ್ರ ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಬಹಳಷ್ಟು ಮಂದಿ ರೈತರು ತಮ್ಮ ಗೂಡನ್ನು ಹರಾಜಿನಲ್ಲಿ ಸೇರಿಸದೆ ವಾಪಸ್ಸು ತೆಗೆದುಕೊಂಡು ಹೋದರು.
ನಿವೃತ್ತ ಶಿಕ್ಷಕ ಎಂ.ಕೃಷ್ಣಪ್ಪ ನಿಧನ
ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎಂ.ಕೃಷ್ಣಪ್ಪ(81) ಗುರುವಾರ ರಾತ್ರಿ ನಿಧನರಾದರು. ಪತ್ನಿ, ಓರ್ವ ಪುತ್ರ ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ 32 ವರ್ಷ ಸೇವೆಯನ್ನು ಸಲ್ಲಿಸಿದ್ದ ಅವರು ಎಂ.ಕೆ ಮಾಸ್ಟರೆಂದೇ ಪ್ರಸಿದ್ಧರು. ವಿವಿಧ ದೇವಾಲಯಗಳ ಸಂಘದ ನಿರ್ದೇಶಕರಾಗಿ, ಸಾಂಸ್ಕೃತಿಕ ಸಂಘಟಕರಾಗಿ ಸಮಾಜ ಸೇವೆಯನ್ನು ಅವರು ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅವರ ತೋಟದಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ, ಸದಸ್ಯರು, ಅಪಾರ ಮಂದಿ ಅವರ ಶಿಷ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮಳೆಗಾಗಿ ಮೇಲೂರು ಗ್ರಾಮದಲ್ಲಿ ಕತ್ತೆಗಳ ಮದುವೆ
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ ಎಲ್ಲಿಲ್ಲದ ಸಂಭ್ರಮ. ಗ್ರಾಮದ ಗಂಗಮ್ಮನ ದೇವಸ್ಥಾನದ ಬಳಿ ಚಪ್ಪರವನ್ನು ಹಾಕಲಾಗಿತ್ತು. ಮಂಗಳ ವಾದ್ಯ ಮೊಳಗುತ್ತಿತ್ತು. ಇಡೀ ಗ್ರಾಮದಲ್ಲಿ ಹಬ್ಬದ ಸಡಗರ ಹಾಗೂ ಮದುವೆ ಸಂಭ್ರಮ. ಅದನ್ನು ನೋಡಲು ಹೋದವರಿಗೆ ಅಚ್ಚರಿಯೋ ಅಚ್ಚರಿ.
ಏಕೆಂದರೆ ಮದುವೆಯಾಗುತ್ತಿದ್ದವರು ಬಡಾವಣೆಯ ನಿವಾಸಿಗಳಲ್ಲ. ಅಲ್ಲಿ ಬಾಸಿಂಗ ಕಟ್ಟಿಕೊಂಡು, ಹಾರ ಹಾಕಿಕೊಂಡು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು ದೇವನಹಳ್ಳಿ ತಾಲ್ಲೂಕು ಚೀಮಾಚನಹಳ್ಳಿಯಿಂದ ಬಂದಿದ್ದ ಎರಡು ಪ್ರಾಯದ ಕತ್ತೆಗಳು. ವಿಳಂಬವಾಗಿರುವ ಮಳೆಗಾಗಿ ಜಿಲ್ಲೆಯ ಜನತೆ ಸಲ್ಲಿಸುತ್ತಿರುವ ಬಗೆಬಗೆಯ ಪ್ರಾರ್ಥನೆಗೆ ಇದೀಗ ಮೇಲೂರಿನ ಕತ್ತೆ ಮದುವೆಯೂ ಸೇರ್ಪಡೆಗೊಂಡಿದೆ.
ಗಂಡು, ಹೆಣ್ಣು ಜೋಡಿ ಕತ್ತೆಗಳಿಗೆ ಗ್ರಾಮಸ್ಥರು ಅರಿಶಿನ ಹಚ್ಚಿ, ಸುರಿಗೆ ನೀರು ಹಾಕಿ, ಬಾಸಿಂಗ ತೊಡಿಸಿದ್ದು ಮಾತ್ರವಲ್ಲ, ಮಾಂಗಲ್ಯ ಧಾರಣೆಯನ್ನೂ ಮಾಡಿಸಿ ಅಕ್ಷತೆ ಹಾಕಿದರು. ಈ ಭಾಗದ ಮದುವೆಯಲ್ಲಿ ಆಚರಿಸಲಾಗುವ ಎಲ್ಲಾ ಬಗೆ ಸಂಪ್ರದಾಯಗಳನ್ನೂ ಕತ್ತೆ ಮದುವೆಯಲ್ಲಿ ಮಾಡಿದ್ದು ವಿಶೇಷ.
ಜಿಲ್ಲೆಯಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರು ವರುಣನ ಮೊರೆ ಹೋಗಲು ಕತ್ತೆಗಳಿಗೆ ಮದುವೆ ಮಾಡುವುದರ ಮೂಲಕ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಂಡರು.
ಶುಕ್ರವಾರ ಬೆಳಿಗ್ಗಿನಿಂದಲೇ ಗ್ರಾಮದ ಗಂಗಾದೇವಿ ದೇವಾಲಯದ ಆವರಣದಲ್ಲಿ ಹಸಿರು ಚಪ್ಪರಗಳಿಂದ ಸಿಂಗರಿಸಿ ಗೊಡ್ಡುಕಲ್ಲುಗಳನ್ನು ಪೂಜಿಸಿದ ನಂತರ ವಾದ್ಯವೃಂದದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭವನ್ನು ಗ್ರಾಮಸ್ಥರು ಸಡಗರ, ಸಂಭ್ರಮದಿಂದ ಪ್ರಾರಂಭಿಸಿದರು.
ವರನನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಕಂಕಣ ಕಟ್ಟಿ ಪಾದ ಪೂಜೆ ಮಾಡುವುದರ ಮೂಲಕ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ಕರೆತರಲಾಯಿತ್ತಲ್ಲದೇ ಮದುವೆ ಸಂಪ್ರದಾಯದಂತೆ ವಧುವಿಗೆ ಮಾಂಗಲ್ಯಧಾರಣೆಯನ್ನು ಮಾಡಲಾಯಿತು.
ವಿವಾಹ ಕಾರ್ಯಕ್ರಮದಲ್ಲಿ ನೆರೆದಿಂದ ನೂರಾರು ಗ್ರಾಮಸ್ಥರು ವಧು, ವರರಿಗೆ ಹಾಲಿನ ಸೇವೆ, ಅಕ್ಷತೆಯನ್ನು ಹಾಕುವ ಮೂಲಕ ನೂತನ ದಂಪತಿಗಳನ್ನು ಆಶೀರ್ವದಿಸಿದರು. ಗ್ರಾಮಸ್ಥರು ಮದುವೆಗಳಲ್ಲಿ ನೀಡುವ ರೀತಿಯಲ್ಲಿ ಉಡುಗೊರೆಗಳನ್ನು ಸಹ ನೀಡಿದ್ದು ವಿಶೇಷವಾಗಿತ್ತು.
ಗಂಡು ಕಡೆಯವರಾಗಿ ಹಿರಿಯರಾದ ಜೆ.ಜೆ.ಗೌಡ ಮತ್ತು ನಂಜಮ್ಮ ಶಾಸ್ತ್ರದಲ್ಲಿ ಭಾಗಿಯಾದರೆ, ಹೆಣ್ಣಿನ ಕಡೆಯವರಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಮತ್ತು ಧರ್ಮೇಂದ್ರಕುಮಾರ್ ಧಾರೆಯೆರೆಯುವ ಕಾರ್ಯದಲ್ಲಿ ಭಾಗಿಯಾದರು.
ಕಳೆದ ಐದು ದಿನಗಳಿಂದ ದೇವಸ್ಥಾನದ ಬಳಿಯಿರುವ ಗೊಡ್ಡುಕಲ್ಲುಗಳಿಗೆ ಪೂಜೆಯನ್ನು ಸಲ್ಲಿಸಲಾಗಿತ್ತು. ಕತ್ತೆಗಳ ವಿವಾಹ ಸಂಬಂಧ ಗ್ರಾಮದಲ್ಲಿ ವಿವಿಧ ಆಚರಣೆ, ಪೂಜೆಗಳನ್ನು ನಡೆಸಲಾಗಿತ್ತು. ಮದುವೆಯ ಮಹೂರ್ತವನ್ನು ಬೆಳಿಗ್ಗೆ 9 ರಿಂದ 10.30 ರವರೆಗೆ ನಿಗಧಿ ಮಾಡಿ ಶುಕ್ರವಾರ ನೂರಾರು ಮಂದಿಯ ಸಮ್ಮುಖದಲ್ಲಿ ವಿವಾಹ ಏರ್ಪಟಿತ್ತಲ್ಲದೇ ಗ್ರಾಮದಲ್ಲಿ ನೂತನ ವಧು, ವರರನ್ನು ಮೆರವಣಿಗೆ ನಡೆಸಲಾಯಿತು.
ಹಿರಿಯರ ಮಾತಿನಂತೆ ಹಿಂದಿನ ಪದ್ಧತಿಯಂತೆ ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆಂಬ ನಂಬಿಕೆಯಿಂದಾಗಿ ಇಂದು ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ಧರ್ಮೇಂದ್ರಕುಮಾರ್ ತಿಳಿಸಿದರು.
ಚೌಡಸಂದ್ರ ಗ್ರಾಮದ ಮಹಿಳೆಯರು ಜನಪದ ಮಳೆಹಾಡುಗಳನ್ನು ಹಾಡುವ ಮೂಲಕ ವಿವಾಹಕ್ಕೆ ಮೆರುಗು ತಂದರು. ಸ್ಥಳೀಯ ಅರ್ಚಕ ಸುಬ್ರಮಣ್ಯಾಚಾರಿ ಕತ್ತೆ ಮದುವೆಯ ಪೌರೋಹಿತ್ಯ ವಹಿಸಿದ್ದರು. ಮದುವೆಯ ಕಾರ್ಯದಲ್ಲಿ ಭಾಗವಹಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸ್ಥಳೀಯರಾದ ಆರ್.ಕೃಷ್ಣಪ್ಪ, ಜಯರಾಮ್, ಕೆ.ಪ್ರದೀಪ್, ವಿಜಯ್, ಮುನೇಗೌಡ, ಎಂ.ಎನ್.ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಮಂಜುನಾಥ್, ರೂಪೇಶ್, ಆರ್.ಎ.ಉಮೇಶ್, ಮುಖಂಡರಾದ ರೂರ್ಯನಾರಾಯಣಗೌಡ, ಎಚ್.ಟಿ.ನಾರಾಯಣಸ್ವಾಮಿ, ವಿ.ಕೃಷ್ಣಮೂರ್ತಿ, ಗೋಪಾಲ್, ಜನಾರ್ಧನ್, ಸಚಿನ್, ಚೌಡಸಂದ್ರ ಆಂಜನೇಯರೆಡ್ಡಿ, ಸಿ.ಎಚ್.ಆನಂದ್, ನಾರಾಯಣಸ್ವಾಮಿ, ಕಂಬದಹಳ್ಳಿ ಸುರೇಂದ್ರಗೌಡ ಮತ್ತಿತರರು ಹಾಜರಿದ್ದರು. ಕಾಕತಾಳೀಯವೇನೋ ಎಂಬಂತೆ ಸಂಜೆಯ ವೇಳೆಗೆ ಗ್ರಾಮದಲ್ಲಿ ತುಂತುರು ಮಳೆಯಾಯಿತು.
ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಆದ್ಯತೆ ನೀಡಿ
ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಯಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ೨೦೧೫–-೧೬ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆರ್ಥಿಕವಾಗಿ ಸಬಲರಾಗಲು ಹಾಗೂ ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಹೈನೋದ್ಯಮವನ್ನು ಉಳಿಸಿ ಬೆಳೆಸಬೇಕಾದಂತಹ ಅನಿವಾರ್ಯತೆಯ ನಡುವೆ ತೀವ್ರ ಬರಗಾಲದಲ್ಲಿಯೂ ಉತ್ತಮ ಇಳುವರಿಯ ಹಾಲನ್ನು ಉತ್ಪಾದನೆ ಮಾಡುವ ಹೊಣೆಗಾರಿಕೆ ರೈತರದ್ದಾಗಿದೆ. ೧೦ ಲಕ್ಷ ೨೫ ಸಾವಿರ ಲೀಟರ್ನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು, ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಒಕ್ಕೂಟವು ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಿದೆ. ಉತ್ಪಾದಕರು ಕಲಬೆರಕೆ ಹಾಲನ್ನು ಪೂರೈಕೆ ಮಾಡುವುದರಿಂದ ಸಹಕಾರ ಸಂಘ ದಿವಾಳಿಯಾಗುವುದರ ಜೊತೆಗೆ ಉತ್ಪಾದಕರಿಗೆ ಸಿಗಬೇಕಾದಂತಹ ಪ್ರೋತ್ಸಾಹಧನ ಕಡಿತಗೊಳ್ಳಲಿದೆ. ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರಿಂದ ಉತ್ತಮ ಮಾರುಕಟ್ಟೆಯ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸಲು ಸಹಕಾರಿಯಾಗಲಿದೆ.
ಒಕ್ಕೂಟದಿಂದ ೨ ಲಕ್ಷ ರೂಪಾಯಿಗಳನ್ನು ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತದೆ. ಈ ಅನುದಾನವನ್ನು ಸದುಪಯೋಗಪಡಿಸಿಕೊಂಡು ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಸಹಕಾರ ಸಂಘದ ಅಧ್ಯಕ್ಷ ಎಸ್.ಮುನಿಆಂಜಿನಪ್ಪ ಮಾತನಾಡಿ, ಸಂಘದಲ್ಲಿ ೬ ಲಕ್ಷ ರೂಪಾಯಿಗಳ ಹಣವನ್ನು ಉಳಿಸಲಾಗಿದ್ದು ಒಕ್ಕೂಟದಿಂದ ಆರ್ಥಿಕ ನೆರವು ಪಡೆದು ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹಾಲು ಉತ್ಪಾದಕರು ನಿಗದಿತ ಸಮಯದಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳಬೇಕು. ಸಹಕಾರ ಸಂಘದ ಮೂಲಕ ಸಿಗುವಂತಹ ಸೌಲಭ್ಯಗಳಾದ ಯಶಸ್ವಿನಿ ಯೋಜನೆಯು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಉತ್ಪಾದಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ರಾಸುಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಯ ಮೂಲಕ ನೀಡುವಂತಹ ಅನುದಾನಗಳಲ್ಲಿ ರಾಸುಗಳ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಎಂ.ಅಮರೇಶ್, ಗ್ರಾಮ ಪಂಚಾಯತಿ ಸದಸ್ಯ ಹರೀಶ್, ಸಹಕಾರ ಸಂಘದ ನಿರ್ದೇಶಕರಾದ ಎಂ.ಬಿ.ನರಸಿಂಹಮೂರ್ತಿ, ಎಂ.ದೇವರಾಜ್, ಪಿ.ರಾಮರೆಡ್ಡಿ, ನಂಜಪ್ಪ, ದೇವಮ್ಮ, ರೇವಣ್ಣಸಿದ್ದಯ್ಯ, ಭಾಗ್ಯಮ್ಮ, ಮುನಿಮರಿಯಪ್ಪ, ಮಹೇಶ, ಎಂ.ನಾರಾಯಣಪ್ಪ, ಸಿಬ್ಬಂದಿ ಎನ್.ಸುಭ್ರಮಣ್ಯಪ್ಪ, ಎಂ.ಬಿ.ಆಂಜಿನಪ್ಪ, ಎಂ.ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಚ್ಛತೆಯಿಲ್ಲದೆ ಖಾಯಿಲೆಗಳು ಹರಡುತ್ತಿದೆ ತುಮ್ಮನಹಳ್ಳಿ ಗ್ರಾಮದಲ್ಲಿ
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಇಡೀ ಗ್ರಾಮದ ಜನತೆ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ.
ಗ್ರಾಮದಲ್ಲಿರುವ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪುಗಳು ಒಡೆದು ಹೋಗಿರುವುದರಿಂದ ರಸ್ತೆಯಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರು ಒಂದೆಡೆಯಾದರೆ, ಮತ್ತೊಂದು ಕಡೆ ಬಳಸಿದ ನೀರು ಹರಿಯಲು ನಿರ್ಮಿಸಿರುವ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿರುವುದರಿಂದ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗು ಪ್ರೌಡಶಾಲೆಗೆ ಹೋಗುವ ಮುಖ್ಯರಸ್ತೆಯಲ್ಲಿಯೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಲ್ಲಿ ಬಳಸಿದ ನೀರು ರಸ್ತೆಯ ಮಧ್ಯೆ ಹರಿಯುತ್ತಿದೆ. ಈ ಕೊಳಚೆ ನೀರಿನಲ್ಲಿಯೇ ಪ್ರತಿನಿತ್ಯ ನೂರಾರು ಶಾಲಾ ಮಕ್ಕಳು ನಡೆದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಮೂಡಿದೆ.
ಗ್ರಾಮದ ದಲಿತ ಕಾಲೋನಿಯಲ್ಲಿ ಯಾವುದೇ ಸ್ವಚ್ಚತೆ ಕಾರ್ಯ ಮಾಡಲು ಮುಂದಾಗದ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಒಂದೆಡೆಯಾದರೆ ಸ್ಥಳೀಯ ಜನರು ವಾಸಿಸುವ ಸ್ಥಳದಲ್ಲಿ ಸಣ್ಣ ಪುಟ್ಟ ಚರಂಡಿಗಳಿಗೂ ಅಡ್ಡಲಾಗಿ ಕಲ್ಲುಗಳನ್ನು ಹಾಕಿಕೊಂಡಿರುವುದರಿಂದ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವುದಿಲ್ಲ. ಇದರಿಂದ ವಿಪರೀತ ವಾಸನೆ ಸೇರಿದಂತೆ ಸೊಳ್ಳೆಗಳ ಕಾಟದಿಂದ ಕಾಲೋನಿಯ ಸುಮಾರು ನಾಲ್ಕೈದು ಮಕ್ಕಳು ಅನಾರೋಗ್ಯದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ನಿರಂತರವಾಗಿ ವಿವಿಧ ರೀತಿಯ ಜ್ವರ ಹಾಗು ಖಾಯಿಲೆಗಳಿಂದ ಗ್ರಾಮದ ಬಹುತೇಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮದ ದಲಿತ ಕಾಲೋನಿ ಹಾಗು ಶಾಲೆಯ ಮುಂಭಾಗದಲ್ಲಿರುವ ಚರಂಡಿ ಸ್ವಚ್ಚಗೊಳಿಸುವಂತೆ ಗ್ರಾಮ ಪಂಚಾಯತಿಗೆ ಅರ್ಜಿ ನೀಡಿ ಮೂರು ತಿಂಗಳು ಕಳೆದರೂ ಈವರೆಗೂ ಸ್ವಚ್ಚಗೊಳಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತಾಗಲಿ
ಶಾಲೆಯ ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತೆ ಮಾರ್ಪಡಿಸಬೇಕು ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಬುಡ್ಡೂಸಾಬಿ ತಿಳಿಸಿದರು.
ತಾಲ್ಲೂಕಿನ ಸಾದಲಿಯ ಶ್ರೀ ರಾಜೀವ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕಸಾಪ ವತಿಯಿಂದ ‘ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಮಕ್ಕಳು ಸ್ವತಃ ಪುಸ್ತಕ ತೆಗೆದುಕೊಳ್ಳುವ, ಜೋಡಿಸುವ, ಮತ್ತು ಯಾವುದೇ ಗ್ರಂಥದ ಆಯ್ಕೆಗೆ ಮುಕ್ತ ವಾತಾವರಣವಿರಬೇಕು. ಶಾಲೆಯ ಗ್ರಂಥಾಲಯದ ಪುಸ್ತಕದಲ್ಲಿನ ವಿಷಯಗಳನ್ನು ಆಧರಿಸಿ ಚರ್ಚೆ, ಪ್ರಬಂಧ. ಭಾಷಣ ಮತ್ತು ಯೋಜನೆಗಳನ್ನು ರೂಪಿಸಲು ವಿವಿಧ ಸ್ಪರ್ಧೆ ಏರ್ಪಡಿಸುವುದು ಸೂಕ್ತ. ಪ್ರತೀ ಶೈಕ್ಷಣಿಕ ವರ್ಷದ ಮೊದಲ ಮಾಸದಲ್ಲಿ ಒಂದು ದಿನ ಶಾಲೆಯ ಗ್ರಂಥಾಲಯದಲ್ಲಿರುವ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ ಶಾಲೆಯ ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು, ಅದರಲ್ಲಿರುವ ವಿವರಗಳ ಸಂಕ್ಷಿಪ್ತ ಪರಿಚಯ ಮಾಡಬೇಕು. ಮಕ್ಕಳೇ ಸ್ವತಃ ಪುಸ್ತಕ ಆಯ್ಕೆಮಾಡಿಕೊಳ್ಳುವಂತೆ ಮತ್ತು ಮಕ್ಕಳೇ ಗ್ರಂಥಾಲಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಗ್ರಂಥಾಲಯವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಶಾಲೆಯ ಅವಧಿಯಲ್ಲಿ ಓದಿದ ವಿಷಯಗಳನ್ನು ಮುಂದೊಂದು ದಿನ ಅದೇ ವಿಷಯ ಬಂದಾಗ ಸಂಬಂಧ ಕಲ್ಪಿಸಿ ವಿಷಯವನ್ನು ಹೋಲಿಕೆ ಮಾಡಲು ಸಹಾಯಕವಾಗುತ್ತದೆ. ಮಗುವಿನ ಕೂತೂಹಲವನ್ನು ತಣಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಗ್ರಂಥಾಲಯ ಸಹಾಯಕವಾಗಬಲ್ಲದು ಮತ್ತು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ನಿರಂತರ ಅಧ್ಯಯನದ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ. ಇದಕ್ಕೆ ಪೂರಕವಾಗಿ ತಾಲ್ಲೂಕು ಕಸಾಪ ತಾಲ್ಲೂಕಿನ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂದು ವಿವರಿಸಿದರು.
ತಾಲ್ಲೂಕಿನ ಉಪ್ಪುಕುಂಟಹಳ್ಳಿ ಸರ್ಕಾರಿ ಶಾಲೆ, ಸಾದಲಿ ಸ.ಹಿ.ಪ್ರಾ. ಶಾಲೆ, ಶ್ರೀಶಾಲವಿ ಹಿರಿಯ ಪ್ರಾಥಮಿಕ ಶಾಲೆ, ಸಾದಲಿಯ ಸರ್ಕಾರಿ ಪ್ರೌಢಶಾಲೆ, ಸಾದಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಿದರು.
ಎಸ್.ದೇವಗಾನಹಳ್ಳಿ, ಎಸ್.ಗುಂಡ್ಲಹಳ್ಳಿ, ಸೊಣ್ಣಗಾನಹಳ್ಳಿ, ಕೋಟಗಲ್, ಪೂಸಗಾನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೂ ಪುಸ್ತಕಗಳನ್ನು ನೀಡುವುದಾಗಿ ಅವರು ತಿಳಿಸಿದರು. ತಾಲ್ಲೂಕು ಕಸಾಪ ಸಾದಲಿ ಹೋಬಳಿ ಘಟಕದ ಅಧ್ಯಕ್ಷ ಜಗದೀಶ್ ಬಾಬು ಹಾಜರಿದ್ದರು.
ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ಒತ್ತಾಯಿಸಲಾಗುತ್ತಿದ್ದು, ದೇಶಾದ್ಯಂತ ಇರುವ ಮಾದಿಗ ಸಮುದಾಯದವರು ಸಂಘಟಿತರಾಗಿ ಬೆಂಬಲಿಸಬೇಕು ಎಂದು ಮಾದಿಗ ದಂಡೋರ ರಾಷ್ಟ್ರಾಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸಮುದಾಯದ ಮುಖಂಡರೊಂದಿಗೆ ಮಾತನಾಡಿದ ಅವರು, ೧೯೭೬ ರಲ್ಲಿ ಹಾವನೂರ ಅವರು ಸಲ್ಲಿಸಿರುವ ವರದಿಯನ್ನು ಸರ್ಕಾರಗಳು ಪರಿಗಣಿಸಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂಧರ್ಭದಲ್ಲಿ ವರದಿಗಳನ್ನು ತಯಾರಿಸಲು ಅನುದಾನ ಕೊಟ್ಟಿರುವುದು ಬಿಟ್ಟರೆ ಇದುವರೆಗೂ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವೇ ಸದಾಶಿವ ಆಯೋಗವನ್ನು ರಚನೆ ಮಾಡಿ ವರದಿಯನ್ನು ತಯಾರಿಸುವಂತೆ ಹೇಳಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರವೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿದೆ. ಸರ್ಕಾರವೇ ನಡೆಸಿರುವ ಜಾತಿಗಣತಿಯ ಪ್ರಕಾರ ಒಂದು ಕೋಟಿ ಎಂಟ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಹಾವನೂರ ವರದಿಯಂತೆ ಹೆಚ್ಚಾಗಿರುವ ಮಾದಿಗ ಜನಾಂಗಕ್ಕೆ ಶೇ. ೮ ರಷ್ಟು ಮೀಸಲಾತಿ ಸಿಗಬೇಕು ಅಲ್ಲಿಯತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ನವೆಂಬರ್ ೨೦ ರಂದು ಹೈದ್ರಾಬಾದ್ನಲ್ಲಿ ಸಮುದಾಯದ ೩೦ ಲಕ್ಷಕ್ಕೂ ಹೆಚ್ಚಿನ ಜನಾಂಗವನ್ನು ಒಟ್ಟಾಗಿ ಸೇರಿಸಿ ಸಮಾವೇಶವನ್ನು ನಡೆಸುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡವೇರುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ವಿವರಿಸಿದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಮಂದಿ ಸಚಿವರುಗಳು ಅಡ್ಡಗಾಲಾಗಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು, ಸರ್ಕಾರಗಳ ಮೇಲೆ ಒತ್ತಡ ಹೇರಬೇಕು, ಕೇವಲ ಅಧಿಕಾರದ ಆಸೆಯಿಂದ ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳಬಾರದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಾದಿಗ ಸಮುದಾಯದ ಮುಖಂಡರಾದ ದೇವನಹಳ್ಳಿ ಎಂ.ಎನ್.ನಾರಾಯಣಸ್ವಾಮಿ, ಚಿಕ್ಕಮುನಿಯಪ್ಪ, ನಾಗನರಸಿಂಹ, ನರಸಿಂಹಮೂರ್ತಿ, ಸಿ.ವಿ.ಲಕ್ಷ್ಮಣರಾಜು, ಗುರುಮೂರ್ತಿ, ಯಾ.ಮಾ.ನಾರಾಯಣಸ್ವಾಮಿ, ಆಂಜಿನಪ್ಪ, ಮುನಿಪೂಜಪ್ಪ, ಕೆ.ನಾರಾಯಣಸ್ವಾಮಿ, ಎಂ.ಮುನಿನಾರಾಯಣ, ಕದಿರಪ್ಪ, ಟಿ.ಎ.ಚಲಪತಿ, ದೇವರಮಳ್ಳೂರು ಕೃಷ್ಣಪ್ಪ, ಗಂಭೀರನಹಳ್ಳಿ ಶಿವಣ್ಣ, ವಿಜಯಪುರ ವೇಣು, ದೊಡ್ಡಕುರುಬರಹಳ್ಳಿ ನಾಗರಾಜ್, ಪಿ.ರಂಗನಾಥಪುರ ಮುನಿಆಂಜಿನಪ್ಪಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು
ನಗರದಲ್ಲಿನ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲಾ ಸಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಪಾತವಿಲ್ಲದೆ ಅಭಿವೃದ್ಧಿಯ ಕಡೆಗೆ ಚಿಂತನೆ ನಡೆಸಲಾಗುತ್ತದೆ ಎಂದು ನಗರಸಭಾ ನೂತನ ಅಧ್ಯಕ್ಷ ಅಫ್ಸರ್ಪಾಷ ತಿಳಿಸಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿ ಅವರು ಮಾತನಾಡಿದರು. ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ನಗರಸಭೆಗೆ ಬರಬೇಕಾಗಿರುವ ಆದಾಯವನ್ನು ಹೆಚ್ಚಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಗರಸಭೆಗೆ ಬರುವಂತಹ ಹೆಚ್ಚಿನ ಆದಾಯವನ್ನು ಪೌರಕಾರ್ಮಿಕರಿಗೆ ವೇತನ ಪಾವತಿ ಸೇರಿದಂತೆ ವಾಹನಗಳ ನಿರ್ವಹಣೆಗೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ನಗರವನ್ನು ಪ್ರವೇಶ ಮಾಡುವಲ್ಲಿ ಕಾಲುವೆಯು ತ್ಯಾಜ್ಯದ ನೀರಿನಿಂದ ತುಂಬಿದೆ. ಆ ಸ್ಥಳವನ್ನು ದುರಸ್ಥಿಗೊಳಿಸಲು ಶಾಸಕರ ಅನುಧಾನದಲ್ಲಿ ಸುಮಾರು ೭೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲಿದ್ದೇವೆ. ಗೌಡನಕೆರೆಗೆ ಹಾದುಹೋಗುವ ಕಾಲುವೆಯ ದುರಸ್ಥಿಗಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಮಾಡಲು ಮನವಿ ಸಲ್ಲಿಸಲಾಗಿದೆ. ಕುಡಿಯುವ ನೀರಿಗಾಗಿ ನಗರದ ವ್ಯಾಪ್ತಿಯಲ್ಲಿ ಸುಮಾರು 10 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಲಾಗುತ್ತಿದೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಕೂಡಾ ನಗರಸಭೆಯ ಮೂಲಕ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗುತ್ತದೆ. ಆಶ್ರಯ ಸಮಿತಿಯಲ್ಲಿ ೨೨ ಎಕರೆಯನ್ನು ಗುರ್ತಿಸಿ ಸರ್ವೆ ಮಾಡಲಾಗಿದೆ. ಬಂದಿರುವ ಅರ್ಜಿಗಳಲ್ಲಿ ಫಲಾನುಭವಿಗಳನ್ನು ಗುರ್ತಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಎಚ್.ಹರೀಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕೋಚಿಮುಲ್ ನಿರ್ದೆಶಕ ಬಂಕ್ ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜು, ಡಾ.ಧನಂಜಯರೆಡ್ಡಿ, ಆಯುಕ್ತ ಎಚ್.ಎ.ಹರೀಶ್, ಸದಸ್ಯರಾದ ವೆಂಕಟಸ್ವಾಮಿ, ಸಂಧ್ಯಾ ಮಂಜುನಾಥ್, ಸುಮಿತ್ರಾ ರಮೇಶ್, ಸಿಕಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

