Home Blog Page 447

ಪದಕಗಳನ್ನು ಬಾಚಿಕೊಂಡು ಬಂದ ಸಿಂಹದ ಮರಿಗಳು

0

ನಗರದ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ತರಭೇತಿ ಪಡೆದ ಕ್ರೀಡಾಪಟುಗಳು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹದಿನೆಂಟಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೈತನ್ಯ 100,200 ಮತ್ತು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಮಾದೇಶ್ 200 ಮೀಟರ್ ಓಟದಲ್ಲಿ ಪ್ರಥಮ, ಪೃಥ್ವಿ 400 ಮತ್ತು 800 ಮೀಟರ್ ಓಟದಲ್ಲಿ ಪ್ರಥಮ, ಎಚ್.ಎಂ.ಬಾಬು 5000 ಮೀಟರ್ ಓಟದಲ್ಲಿ ದ್ವಿತೀಯ, ಗಿರೀಶ್ 400 ಮೀಟರ್ ಓಟದಲ್ಲಿ ದ್ವಿತೀಯ, ತೇಜು 100 ಮೀಟರ್ ಓಟದಲ್ಲಿ ತೃತೀಯ, 400 ಮೀಟರ್ ರಿಲೇಯಲ್ಲಿ ಮಾದೇಶ್, ಪೃಥ್ವಿ, ಮೋಹಿತ್ ನಾಯಕ್, ಭಗತ್ ಕುಮಾರ್ ಪ್ರಥಮ, 100 ಮೀಟರ್ ರಿಲೇಯಲ್ಲಿ ಮಾದೇಶ್, ಮೋಹಿತ್ ನಾಯಕ್, ಭಗತ್ ಕುಮಾರ್, ಬಾನು ದ್ವಿತೀಯ ಸ್ಥಾನ ಪಡೆದಿದ್ದಾರೆ.
‘ಸೆಪ್ಟೆಂಬರ್ 25 ರಂದು ನಡೆಯುವ ವಿಭಾಗ ಮಟ್ಟದಲ್ಲಿಯೂ ನಮ್ಮ ಮಕ್ಕಳು ಅತ್ಯುತ್ತಮ ಸಾಧನೆಯನ್ನು ಮಾಡಲಿದ್ದು, ತಾಲ್ಲೂಕಿಗೆ ಕೀರ್ತಿ ತರುವರು’ ಎಂದು ಆಶಾಭಾವನೆಯನ್ನು ತರಬೇತುದಾರ ಎಂ.ಮುನಿರಾಜು ತಿಳಿಸಿದರು.

ಬೆಟ್ಟದ ಜೇನುಗಳ ಧಾಳಿ

0

ಬೆಟ್ಟದ ಜೇನುನೊಣಗಳ ಧಾಳಿಯಿಂದ ತಾಲ್ಲೂಕಿನ ಜಯಂತಿ ಗ್ರಾಮದ ಹತ್ತು ಮಂದಿ ಅಸ್ವಸ್ಥರಾಗಿ ಸಾರ್ವಜನಿಕ ಆಸ್ವತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಜಯಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ತೋಟದಲ್ಲಿ ಹಿಪ್ಪು ನೇರಳೆ ಬೆಳೆಗೆ ಗೊಬ್ಬರ ಹಾಕುವಾಗ ಪಕ್ಕದಲ್ಲಿ ಗೊಡಂಬಿ ಬೆಳೆ ಇದ್ದ ಕಾರಣ ಅಲ್ಲಿಗೆ ಧಾವಿಸಿದ ಜೇನು ನೊಣದ ಗುಂಪು ಗೊಬ್ಬರ ಹಾಕುತ್ತಿದ್ದ ಜನರ ಮೇಲೆ ಏಕಾಏಕಿ ಧಾಳಿ ಮಾಡಿದೆ. ಜೇನುಗಳ ಧಾಳಿಯಿಂದ ಕಂಗಾಲಾದ ಜನರು ಅಕ್ಕ ಪಕ್ಕದ ತೋಟಗಳಿಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜೇನುಗಳಿಂದ ಹೆಚ್ಚು ಕಡಿತಕ್ಕೊಳಗಾದ ದ್ಯಾವಮ್ಮ ಎಂಬುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಅವರೊಂದಿಗೆ ಜೇನು ಕಡಿತಕ್ಕೊಳಗಾದ ಮಮತ, ಲಕ್ಷ್ಮಮ್ಮ, ಗಂಗಪ್ಪ, ಮಂಜುಳ, ಸ್ವಪ್ನ, ನಾಗೇಶ್, ನಾರಾಯಣಸ್ವಾಮಿ ಅವರುಗಳೂ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದರು.

ಮುಖ್ಯಮಂತ್ರಿಯವರ ಪರಿಹಾರ ನಿಧಿ

0

ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಎಸ್.ವಿ.ಗೋಪಾಲ್ಗೆ ಹೃದಯ ಸಂಬಂಧಿ ಖಾಯಿಲೆಯಿರುವ ಕಾರಣ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಮಂಜೂರಾಗಿದ್ದ ೫೦ ಸಾವಿರ ರೂಗಳ ಚೆಕ್ನ್ನು ತಹಸೀಲ್ದಾರ್ ಕೆ.ಎಂ.ಮನೋರಮಾ ತಮ್ಮ ಕಚೇರಿಯಲ್ಲಿ ಬುಧವಾರ ವಿತರಿಸಿದರು.

ಮಳೆರಾಯ ಬರಲೆಂದು ಗಂಡು ಮಕ್ಕಳಿಗೆ ಮದುವೆ

0

‘ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಹಾಡುತ್ತಾ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮಳೆಗಾಗಿ ಪ್ರಾರ್ಥಿಸಿದರು.
ಜಿಲ್ಲೆಯ ಗ್ರಾಮೀಣರು ಮಳೆ ಬಾರದಿದ್ದಾಗ ಹಲವು ಜಾನಪದ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ‘ಮಳೆರಾಯ’ನ ಪೂಜೆ ಅಥವಾ ‘ವಾನರಾಯ ಪೂಜ’ ಎಂದು ಕರೆಯುವ ಆಚರಣೆಗಳಲ್ಲಿ ಗ್ರಾಮಸ್ಥರೆಲ್ಲಾ ಒಗ್ಗೂಡುತ್ತಾರೆ. ಪಡ್ಡೆ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿ ಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸುತ್ತಾರೆ. ಅದನ್ನು ಹಲಗೆ ಮೇಲಿಟ್ಟು ಒಬ್ಬ ಹುಡುಗನ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮನೆಯವರು ರಾಗಿ, ಅಕ್ಕಿ, ಬೇಳೆ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸುರಿಯುತ್ತಾರೆ. ಪ್ರತಿ ದಿನ ಚಂದ್ರಮನ ಆಕಾರದ ರಂಗೋಲಿಯನ್ನು ಗ್ರಾಮದ ಒಂದು ಮುಖ್ಯ ಸ್ಥಳದಲ್ಲಿ ಹಾಕಿ ಮಳೆರಾಯನನ್ನು ಪೂಜಿಸಲಾಗುತ್ತದೆ. ಇದನ್ನು ಐದು ಅಥವಾ ಒಂಭತ್ತು ದಿನಗಳು ಮುಂದುವರೆಸುತ್ತಾರೆ. ಕೊನೆಯ ದಿನದಂದು ಹೀಗೆ ಊರೆಲ್ಲಾ ಸುತ್ತಿ ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಉತ್ಸವ, ಕಲೆ, ಕಾವ್ಯ, ಹಾಡು, ಗೇಯಗಳಿಂದ ಆಚರಣೆಗೆ ಮೆರುಗನ್ನು ತುಂಬುತ್ತಾರೆ.
ಚೌಡಸಂದ್ರ ಗ್ರಾಮದಲ್ಲಿ ಮಳೆರಾಯನ ಆಚರಣೆಯ ಕೊನೆಯ ದಿನ ಇಬ್ಬರು ಗಂಡು ಮಕ್ಕಳಿಗೆ ಯಥಾವತ್ ಗಂಡು ಹೆಣ್ಣಿನ ಮದುವೆಯ ರೀತಿಯಲ್ಲೇ ಮದುವೆಯನ್ನು ಮಾಡಿದರು. ಗ್ರಾಮದ ಮಹಿಳೆಯರು ರಾಗಿಮುದ್ದೆ, ಪಾಯಸ, ಅನ್ನ, ಸಾರನ್ನು ತಯಾರಿಸಿ ಎಲ್ಲರಿಗೂ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ಬಡಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯೆ ಮಮತಾ, ಮಾಜಿ ಸದಸ್ಯ ರವಿ, ಲಕ್ಷ್ಮಮ್ಮ, ಬೈರಮ್ಮ, ಇಂದಿರಮ್ಮ, ಪ್ರಭಾವತಮ್ಮ, ರಾಮಕೃಷ್ಣಪ್ಪ, ಮಾರೇಗೌಡ, ನಾರಾಯಣಸ್ವಾಮಿ ಮತ್ತಿತರರು ಮಳೆರಾಯನ ಉತ್ಸವದಲ್ಲಿ ಭಾಗಿಯಾಗಿದ್ದರು.
ಜನಪದರ ದೈವ ಮಳೆರಾಯ: ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ. ಕೃಷಿಯನ್ನೇ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು. ಮಳೆರಾಯನ ಮೆರವಣಿಗೆ, ಕಂಬಳಿ ಬೀಸುವುದು, ಗುರ್ಚಿ ಹೊರುವುದು, ತುಂಬಿದ ಕೊಡ ಪೂಜೆ, ಕಪ್ಪೆ ಒನಕೆ ಮೆರವಣಿಗೆ, ನವಧಾನ್ಯದ ಪೂಜೆ, ಕಪ್ಪೆದ್ಯಾವರು, ಕತ್ತೆಗಳ ಮದುವೆ ಮೊದಲಾದ ಮಳೆಪೂಜಾ ಆಚರಣೆಗಳಿವೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಗ್ರಾಮೀಣರದ್ದು. ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಮನೆಮನೆಗೂ ಹೋಗುತ್ತಾರೆ.
ಮಳೆರಾಯನ ಮೆರವಣಿಗೆ, ಪೂಜೆ ವಿಧಾನಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಹಾಡುಗಳೂ ಅಷ್ಟೇ. ಇವು ಜಾನಪದ ‘ಪದ’ಗಳು.
‘ಮಿದ್ದಿಮಿಂದ ಮಿರಪಸೆಟ್ಟು
ವಾನಲ್ಯಾಕ ಎಂಡಿಪೋಯ
ಮಾ ಮಾಮಗಾರಿ ಕೂತುಳ್ಳು
ಮಗುಳ್ಯಾಕ ಪಾರಿಪೋಯ್ರಿ
ಇಂಕಾನ ರಾರಾದ ವಾನದೇವುಡ’ ಎಂಬ ತೆಲುಗು ಭಾಷೆಯ ಮಳೆರಾಯನ ಪದಗಳು ಕೂಡ ಈ ಸಂದರ್ಭದಲ್ಲಿ ಹೇಳುತ್ತಾರೆ’ ಎಂದು ಚೌಡಸಂದ್ರ ಗ್ರಾಮದ ಸಿ.ಪಿ.ಈ. ಕರಗಪ್ಪ ವಿವರಿಸಿದರು.

ಜಂಗಮಕೋಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ತಾಲ್ಲೂಕಿನ ಜಂಗಮಕೋಟೆಯ ಜ್ಯೋತಿ ಆಂಗ್ಲ ಪ್ರೌಢಶಾಲೆಯ ಆವರಣದಲ್ಲಿ ಸೆಪ್ಟೆಂಬರ್ 25 ರ ಭಾನುವಾರ ಉಚಿತವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದೆ. ಹಲವಾರು ಮಂದಿ ತಜ್ಞ ವೈದ್ಯರು ಆಗಮಿಸುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಕಣ್ಣು, ಮೂಳೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರು ಹಾಜರಿರುತ್ತಾರೆ. ಈ ಸಂದರ್ಭದಲ್ಲಿ ಔಷಧಿಗಳನ್ನು ಉಚಿತವಾಗಿ ನೀಡಲಿದ್ದೇವೆ. ಯಶಸ್ವಿನಿ ಮತ್ತು ಆರ್ಎಸ್ಬಿವೈ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಯಶಸ್ವಿನಿ ಮತ್ತು ಆರ್ಎಸ್ಬಿವೈ ಕಾರ್ಡ್ ಹೊಂದಿಲ್ಲದ ಬಡವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಕಣ್ಣಿನ ಪೊರೆಯಿದ್ದವರಿಗೆ ಅಂದೇ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ತಜ್ಞ ವೈದ್ಯರ ತಂಡವೇ ಇರುವುದರಿಂದ ಈ ಶಿಬಿರದಲ್ಲಿ ತಮ್ಮ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಕೋರಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ನ ಛಲಪತಿ, ವಿಶ್ವನಾಥ ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಾನುಭವಿಗೆ ಅರಣ್ಯ ಇಲಾಖೆಯಿಂದ ಗ್ಯಾಸ್ ಸಂಪರ್ಕ

0

ಅರಣ್ಯದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಪರಿಸರ ಕಾಳಜಿಯಿಂದ ಅರಣ್ಯ ಇಲಾಖೆ ಅಡುಗೆ ಅನಿಲ ವಿತರಿಸುತ್ತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ವರದನಾಯಕನಹಳ್ಳಿ ಗೇಟ್ ಬಳಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಎಸ್ಸಿಪಿ ಮತ್ತು ಡಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ 12 ಮಂದಿ ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರನ್ನು ವಿತರಿಸಿ ಅವರು ಮಾತನಾಡಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ- ಮತ್ತು ಪಂಗಡದ ಕುಟುಂಬಗಳು ಅಡುಗೆ ಮಾಡಲು ಅರಣ್ಯದೊಳಗಿನ ಉರುವಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನು ತಡೆಗಟ್ಟಲು ಉಚಿತವಾಗಿ ಅನಿಲ ಸಿಲಿಂಡರ್ ಮತ್ತು ಸ್ಟೌ ವಿತರಿಸಲಾಗಿದೆ. ಅಡುಗೆ ಅನಿಲವನ್ನು ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ಒಟ್ಟು 37 ಮಂದಿ ಫಲಾನುಭವಿಗಳನ್ನು ಪಟ್ಟಿ ಮಾಡಿದ್ದು, ಹಂತಹಂತವಾಗಿ ಎಲ್ಲರಿಗೂ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರ್ ವಿತರಿಸಲಾಗುವುದು. ಅರಣ್ಯದಲ್ಲಿ ನಡೆಯುವ ಕಳ್ಳತನದ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಮಳ್ಳೂರಯ್ಯ, ತಾದೂರು ರಮೇಶ್, ಉಪ ವಲಯ ಅರಣ್ಯಾಧಿಕಾರಿ ರಾಮಾಂಜಿನೇಯುಲು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತನ ಆತ್ಮಹತ್ಯೆ

0

ಸಾಲಕ್ಕೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಜಿ.ನಕ್ಕಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ನರಸಿಂಹಪ್ಪ(45) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಮೂರೂವರೆಯಿಂದ ನಾಲ್ಕು ಲಕ್ಷ ರೂಗಳವರೆಗೂ ಸಾಲ ಮಾಡಿದ್ದ ರೈತ ನರಸಿಂಹಪ್ಪ ಸಾಲಕ್ಕೆ ಅಂಜಿ ಒಂದು ತಿಂಗಳಿನಿಂದ ಗ್ರಾಮವನ್ನು ಬಿಟ್ಟಿದ್ದ. ಕಳೆದ ಗುರುವಾರ ಈತ ಮನೆಗೆ ಬಂದಾಗ ಸಾಲದ ಬಗ್ಗೆ ಮನೆಯಲ್ಲಿ ಮಾತು ಬಂದು ಬೇಸರಗೊಂಡು ಜೋಳದ ತೋಟದಲ್ಲಿ ಕ್ರಿಮಿನಾಶಕವನ್ನು ಸೇವಿಸಿದ್ದಾನೆ. ಚಿಂತಾಮಣಿ ಸರ್ಕಾರಿ ಆಸ್ಪತ್ರೆ, ಎಸ್.ಎನ್.ಆರ್ ಆಸ್ಪತ್ರೆ ಹಾಗೂ ಕೋಲಾರದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾನೆ.
ನರಸಿಂಹಪ್ಪನಿಗೆ ತಾಯಿ, ಪತ್ನಿ ಹಾಗೂ ಎರಡು ಪುಟ್ಟ ಮಕ್ಕಳಿದ್ದು, ಮೃತರ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು.

ಆಧಾರ್ ಸಂಖ್ಯೆ ಒದಗಿಸದಿದ್ದರೆ ಪಿಂಚಣಿ ರದ್ದು

0

ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರ ಆಧಾರ್ ಸಂಖ್ಯೆಯನ್ನು ಬಿ.ಎಂ.ಎಸ್ ತಂತ್ರಾಂಶದಲ್ಲಿ ಅಳವಡಿಸಬೇಕಿದೆ. ಸೆಪ್ಟೆಂಬರ್ ತಿಂಗಳ ಒಳಗಾಗಿ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಂಬಂಧಪಟ್ಟ ಕಂದಾಯವೃತ್ತದ ಗ್ರಾಮಲೆಕ್ಕಿಗರಿಗೆ ನೀಡಬೇಕು. ತಪ್ಪಿದ್ದಲ್ಲಿ ಮಾಶಾಸನ ಅಥವಾ ಪಿಂಚಣಿ ರದ್ದಾಗುವುದು. ಆಧಾರ್ ಸಂಖ್ಯೆ ಒದಗಿಸದೇ ಬರುವ ಮಾಶಾಸನ ಅಥವಾ ಪಿಂಚಣಿ ರದ್ದಾಗದಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರ್ ಮನೋರಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ

0

ಕಷ್ಟದಲ್ಲಿರುವವರಿಗೆ ನೆರವಾಗುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘಟನೆಯ ಮುಖ್ಯ ಉದ್ದೇಶಗಳಾಗಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಾಲಯದ ಸಮುದಾಯಭವನದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಸಂಘಟನೆ ಮುಖ್ಯ. ಸಂಘಟನೆಯ ಮುಖ್ಯ ಉದ್ದೇಶ ಸಾಮಾಜಿಕ ಜಾಗೃತಿಯಾಗಿದೆ. ರಾಜಕೀಯವನ್ನು ದೂರವಿಟ್ಟು ಸಾಮಾಜಿಕ ಬದ್ಧತೆ ನಿಮ್ಮ ಧ್ಯೇಯವಾಗಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಡಿ.ಪಿ.ಮುನಿರಾಜು, ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಎನ್.ಸುರೇಶ್, ಉಪಾಧ್ಯಕ್ಷರಾಗಿ ಮುರಳಿ, ಸಹಕಾರ್ಯದರ್ಶಿಯಾಗಿ ತೊಟ್ಲಗಾನಹಳ್ಳಿ ವಿಶ್ವನಾಥ್, ಜಂಗಮಕೋಟೆ ಹೋಬಳಿ ಅಧ್ಯಕ್ಷರಾಗಿ ಯಣ್ಣಂಗೂರು ಮುರಳಿ ಅವರನ್ನು ಆಯ್ಕೆ ಮಾಡಲಾಯಿತು.

ಸರ್ಕಾರಿ ಶಾಲೆಗಳ ಪ್ರಗತಿಗೆ ನೆರವು ನೀಡಬೇಕು

0

ಶಿಕ್ಷಣ ವ್ಯವಸ್ಥೆಯಿಂದ ದೂರ ಉಳಿಯುತ್ತಿರುವ ಮಕ್ಕಳನ್ನು ಶಿಕ್ಷಣ ವ್ಯಾಪ್ತಿಗೆ ಒಳಪಡಿಸಲು ಸಮುದಾಯ್ ಮುಖಂಡರು ಶ್ರಮಿಸಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಸ್ವಯಂ ಸೇವಾ ಸಂಸ್ಥೆಗಳು ಶೈಕ್ಷಣಿಕ ನೆರವನ್ನು ಕಲ್ಪಿಸಲು ಶ್ರಮಿಸಬೇಕೆಂದು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಜಯನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಬಿ.ಬೆಟ್ಟೇಗೌಡ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಜಯನಗರ ಲಯನ್ಸ್ ಕ್ಲಬ್ ಹಾಗೂ ಸ್ಥಳಿಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋದಲ್ಲಿ ಆಯೋಜಿಸಿದ್ದ ಗ್ರಾಮೀಣ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಸಮಾರಂಭ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಲಯನ್ಸ್ ಕ್ಲಬ್ ವಿಶ್ವಮಟ್ಟದ ಸಂಸ್ಥೆಯಾಗಿದ್ದು ೧೦೦ವರ್ಷಗಳ ಸೇವಾವಧಿಯನ್ನು ಪೂರೈಸಿದೆ. ಕೇವಲ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲದೆ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಿ ಆರೋಗ್ಯ ಶಿಬಿರಗಳನ್ನು, ಅಂಗವಿಕಲ ಕಲ್ಯಾಣ ಕಾರ್ಯಕ್ರಮಗಳು, ಹಿರಿಯ ನಾಗರಿಕರ ಸೇವಾ ಕಾರ್ಯಕ್ರಮ, ಪರಿಸರ ಸಮೃದ್ಧಿ, ನೈರ್ಮಲ್ಯ ಮತ್ತು ಸ್ವಚ್ಚತೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೬ ವರ್ಷಗಳಿಂದ ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸಹಕಾರದೊಂದಿಗೆ ನೆರವನ್ನು ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನೆರವೇರಿಸಲು ನಮ್ಮ ಸಂಸ್ಥೆ ಸಿದ್ದವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಈ ಹಿಂದೆಯೂ ಸಾಕಷ್ಟುಬಾರಿ ಲಯನ್ಸ್ ಕ್ಲಬ್ ವಿಜಯನಗರ ಶಾಖೆಯ ಸಂಸ್ಥೆ ಹಾಗೂ ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹೆಚ್ಚಿನ ಪ್ರಮಾಣ ಶೈಕ್ಷಣಿಕ ನೆರವನ್ನು ಕಲ್ಪಿಸಿದ್ದು, ಈ ಬಾರಿ ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೫೦ ತಟ್ಟೆ ಲೋಟ, ೪೦೦ ನೋಟ್ ಪುಸ್ತಕಗಳನ್ನು ವಿತರಿಸುವ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಾದಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ೧೫೦ ತಟ್ಟೆ ಲೋಟ, ೪೦೦ ನೋಟ್ ಪುಸ್ತಕಗಳನ್ನು ವಿಜಯನಗರ ಲಯನ್ಸ್ ಕ್ಲಬ್ ವತಿಯಿಂದ ವಿತರಿಸಲಾಯಿತು.
ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ವಕೀಲ ಜಿ.ವಿ ವಿಶ್ವನಾಥ್, ವಿಜಯನಗರ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಕೃಷ್ಣಯ್ಯ, ಖಜಾಂಚಿ ಅರುಣ್ ಪ್ರಕಾಶ್, ಪದಾಧಿಕಾರಿಗಳಾದ ಆರ್. ರಾಮಮೂರ್ತಿ, ವಿ. ಗಂಗಾಧರ್ ರಾವ್, ವೆಂಕಟೇಶ್ ಮೂರ್ತಿ, ನರಸಿಂಹಮೂರ್ತಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹ ಕಾರ್ಯದರ್ಶಿ ಎನ್. ಮಂಜುನಾಥ್, ಸಿಆರ್ಪಿ ಗಂಗಾಧರ್, ಎಸ್ಡಿಎಂಸಿ ಅಧ್ಯಕ್ಷ ಎಸ್.ಎನ್.ರಾಜಣ್ಣ, ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕ ಕೆ.ಸಿ. ರಮೇಶ್, ಸಹ ಶಿಕ್ಷಕರಾದ ಯು.ರಾಮಾಂಜಿನೆಯ, ಜಿ. ಪದ್ಮಾವತಿ, ಪುಷ್ಪಲತ, ಅನಂತು, ದೈಹಿಕ ಶಿಕ್ಷಕ ಎಸ್.ಎನ್.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಎಂಟು ದಿನಗಳಿಂದ ನಿಂತಿದ್ದ ಹರಾಜು ಪ್ರಕ್ರಿಯೆ ಪ್ರಾರಂಭ

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದ್ದ ಇ-ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕಳೆದ ಎಂಟು ದಿನಗಳಿಂದ ನೂಲು ಬಿಚ್ಚಾಣಿಕೆದಾರರು(ರೀಲರುಗಳು) ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ನಡೆಸುತ್ತಿದ್ದ ಧರಣಿ ಕೊನೆಗೂ ಅಂತ್ಯವಾಗಿದ್ದು ಮಂಗಳವಾರ ಎಂದಿನಂತೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಿತು.
ದೇಶದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರ್ಚ್ ೧೦ ರಂದು ಪ್ರಾಯೋಗಿಕವಾಗಿ ಇ–ಹರಾಜು ಶುರುಮಾಡಿದ್ದು ಸಣ್ಣ ಪುಟ್ಟ ಲೋಪದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ಎರಡು ಮೂರು ಭಾರಿ ಸ್ಥಗಿತಗೊಳಿಸಲಾಗಿತ್ತು. ಇ–ಹರಾಜು ಪ್ರಕ್ರಿಯೆಯ ತಂತ್ರಾಂಶವನ್ನು ಉನ್ನತೀಕರಿಸಿ ಮೇ ೧೬ ರಂದು ಮತ್ತೇ ಚಾಲನೆ ನೀಡಲಾಗಿತ್ತು.
ಮುಖ್ಯವಾಗಿ ರೈತರು ಮತ್ತು ರೀಲರ್ಗಳಿಬ್ಬರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಶುರುಮಾಡಿದ್ದ ಇ-–ಹರಾಜು ಪ್ರಕ್ರಿಯೆಯಿಂದ ರೀಲರ್ಗಳಿಗೆ ಅಗತ್ಯ ವಿರುವಷ್ಟು ಗೂಡು ಖರೀದಿಸಲು ಆಗುವುದಿಲ್ಲ, ಅನಕ್ಷರಸ್ಥ ರೀಲರ್ಗಳಿಗೆ ಮೊಬೈಲ್ ಫೋನ್ ಬಳಕೆ ಮಾಡಲು ಆಗದಿರುವುದರಿಂದ ಶಾಲಾ ಮಕ್ಕಳನ್ನು ಹರಾಜಿನಲ್ಲಿ ಬಾಗವಹಿಸಲು ಕರೆತರಬೇಕು ಎಂಬ ಕಾರಣವನ್ನಿಟ್ಟಿಕೊಂಡು ಕಳೆದ ಸೆಪ್ಟೆಂಬರ್ ೧೨ ರಿಂದ ರೀಲರ್ಗಳು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯದಂತೆ ಮಾಡುವ ಮೂಲಕ ಎಂಟು ದಿನಗಳ ಕಾಲ ಧರಣಿ ನಡೆಸಿದ್ದರು.
ಸೋಮವಾರ ರೇಷ್ಮೆ ಗೂಡು ಕೃಷಿ ಅಭಿವೃದ್ಧಿ ಆಯುಕ್ತ ಸತೀಶ್ ಹಾಗೂ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ರೀಲರ್ ಹಾಗು ರೈತ ಮುಖಂಡರ ಸಭೆಯಲ್ಲಿ ಚರ್ಚಿಸಿ ಸರ್ಕಾರ ಜಾರಿಗೊಳಿಸಿರುವ ಇ-ಹರಾಜು ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಆಗುವುದಿಲ್ಲ. ಬದಲಿಗೆ ಇ–ಹರಾಜು ಪ್ರಕ್ರಿಯೆಯಲ್ಲಿ ಇರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸಲಾಗುವದು. ನೂತನ ವ್ಯವಸ್ಥೆಗೆ ರೀಲರ್ಗಳು ಹೊಂದಿಕೊಳ್ಳಬೇಕು. ಇಂದಿನಿಂದ ಮೂರು ದಿನಗಳ ಕಾಲ ಮೊದಲಿನಂತೆ ಬಹಿರಂಗ ಹರಾಜು ನಡೆಸುವುದು ಹಾಗೂ ಸೆಪ್ಟೆಂಬರ್ ೨೩ ರ ಶುಕ್ರವಾರದಿಂದ ಮಾರುಕಟ್ಟೆಯಲ್ಲಿ ಇ–ಹರಾಜು ಮೂಲಕ ವಹಿವಾಟು ನಡೆಸಲು ತೀರ್ಮಾನಿಸಲಾಯಿತು.
ಅದರಂತೆ ಮಂಗಳವಾರ ಬೆಳಗ್ಗೆ ಮಾರುಕಟ್ಟೆಗೆ ಎಂದಿನಂತೆ ಸುಮಾರು ೭೦೦ ಲಾಟು (೩೫ ಟನ್) ಗೂಡು ಆವಕವಾಗಿದ್ದು ರೇಷ್ಮೆ ಗೂಡಿನ ಗರಿಷ್ಠ ದರ ೪೩೮ ಕ್ಕೇರಿದೆ.
ಕಳೆದ ಎಂಟು ದಿನಗಳಿಂದ ಮಾರುಕಟ್ಟೆಯ ಮುಂಭಾಗದಲ್ಲಿದ್ದ ಶಾಮಿಯಾನದ ಕೆಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ನಗರದ ಬಹುತೇಕ ರೀಲರ್ಗಳು ಮಂಗಳವಾರ ಮಾರುಕಟ್ಟೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ರೇಷ್ಮೆ ಗೂಡು ಖರೀದಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ 125ನೇ ವರ್ಷಾಚರಣೆ ಪ್ರಯುಕ್ತ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಮುನಿರಾಜು, ಕೃಷ್ಣಾರೆಡ್ಡಿ, ಬೈರೇಗೌಡ, ಅಶ್ವಾಕ್ ಅಹ್ಮದ್, ನಯಾಜ್ಪಾಷ, ಪ್ರಕಾಶ್ ಹಾಜರಿದ್ದರು.

ಮುತ್ತೂರಿನ ಮಕ್ಕಳಿಗೆ ದೇಶ ವಿದೇಶಗಳ ಪತ್ರ ಸ್ನೇಹಿತರು

0

ಪತ್ರ ಲೇಖನ ಕೇವಲ ಪರೀಕ್ಷೆಯ ಅಂಕಕ್ಕಾಗಿ ಕಲಿಯುವ ಪ್ರಹಸನವಾಗಿರುವಾಗ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಪತ್ರ ಸ್ನೇಹಿತರನ್ನು ಹೊಂದಿದ್ದಾರೆ. ವಿಶೇಷವೆಂದರೆ ಅಮೆರಿಕೆಯಿಂದ ಮುತ್ತೂರಿನ ಮಕ್ಕಳಿಗೆ ಪತ್ರಗಳು ಬರುತ್ತಿವೆ, ಇಲ್ಲಿಂದಲೂ ಸಾಗುತ್ತಿವೆ.
ಈ ‘ಪತ್ರ ಸ್ನೇಹ’ದ ನಂಟು ಪ್ರಾರಂಭವಾದದ್ದು ಎರಡು ತಿಂಗಳ ಹಿಂದೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಶ್ವತಿ ಅಯ್ಯರ್ ಅವರು ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಅವರೊಂದಿಗೆ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಅವರ ಮನಸ್ಸಿನಲ್ಲಿದ್ದ ‘ಪತ್ರ ಸ್ನೇಹ’ದ ಯೋಜನೆಯನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು. ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಈ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ಅನೂಷಾ ಮತ್ತು ಆಕೆಯ ಮುಂಬೈನ ಪತ್ರಸ್ನೇಹಿತೆ.
ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ಅನೂಷಾ ಮತ್ತು ಆಕೆಯ ಮುಂಬೈನ ಪತ್ರಸ್ನೇಹಿತೆ.

ಆರು ಮತ್ತು ಏಳನೆ ತರಗತಿಯ 15 ಮಕ್ಕಳನ್ನು ಆಯ್ಕೆ ಮಾಡಿಕೊಂಡರು. ಶಿಕ್ಷಕ ಎಸ್.ದಾವೂದ್ಪಾಷ ಅವರನ್ನು ಸಹಕರಿಸಲು ಕೋರಿ ಅವರ ಭಾವಚಿತ್ರವನ್ನು ತೆಗೆದುಕೊಂಡು ಹೊರಟರು.
‘ನಮ್ಮ ಹದಿನೈದು ಮಕ್ಕಳಿಗೆ ಅಮೆರಿಕ ಮತ್ತು ಭಾರತದ ಪತ್ರ ಸ್ನೇಹಿತರನ್ನು ಹುಡುಕಿದ ಅಶ್ವತಿ ಅಯ್ಯರ್ ಅವರು ಈ ಮಕ್ಕಳ ಚಿತ್ರ ಮತ್ತು ವಿಳಾಸವನ್ನು ಅವರುಗಳಿಗೆ ನೀಡಿದರು. ಮುತ್ತೂರಿನ 15 ಮಕ್ಕಳು ಪತ್ರ ಬರೆಯಲು ಅನುಕೂಲವಾಗುವಂತೆ ಒಬ್ಬೊಬ್ಬರಿಗೆ ಮೂರು ಲಕೋಟೆಗಳು ಹಾಗೂ ಅಗತ್ಯವಿರುವಷ್ಟು ಅಂಚೆ ಚೀಟಿಗಳನ್ನು ನನಗೆ ಕಳುಹಿಸಿಕೊಟ್ಟರು. ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಪತ್ರ ಸ್ನೇಹಿತರಿಂದ ಪತ್ರ ಬಂದ ನಂತರ ಉತ್ತರಿಸಲು ಹೇಳಿ, ಅಂಚೆ ಚೀಟಿ ಹಚ್ಚಿ ಪೋಸ್ಟ್ ಮಾಡುವಂತೆ ಕೋರಿದರು. ಅದರಂತೆ ನಾನು ಮಕ್ಕಳಿಗೆ ಸಹಕರಿಸುತ್ತಿದ್ದೇನೆ’ ಎಂದು ಶಿಕ್ಷಕ ಎಸ್.ದಾವೂದ್ ಪಾಷ ತಿಳಿಸಿದರು.
‘ಮಕ್ಕಳಿಗೆ ಪತ್ರ ಲೇಖನ ಕಲೆ, ಭಾಷೆ, ಭಾವನೆಗಳನ್ನು ಅಭಿವ್ಯಕ್ತಿಸುವುದು, ಹೊಸ ಪರಿಚಯ, ದೇಶ ವಿದೇಶಗಳ ಸಂಪರ್ಕ ಮುಂತಾದ ಕಲಿಕೆ ಇದರಿಂದ ಸಾಧ್ಯವಾಗುತ್ತದೆ. ಮೂರು ತಿಂಗಳಿಗೆ ಆಗುವಷ್ಟು ಲಕೋಟೆ ಮತ್ತು ಅಂಚೆ ಚೀಟಿಗಳನ್ನು ಕೊಟ್ಟಿರುವ ಅಶ್ವತಿ ಅಯ್ಯರ್ ಅವರು ಡಿಸೆಂಬರಿನಲ್ಲಿ ಮುತ್ತೂರಿಗೆ ಬಂದು ಈ ಪತ್ರಸ್ನೇಹದ ವಿಸ್ತರಣೆಗೆ ಇನ್ನಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸ್ನೇಹ, ವಿಶ್ವಾಸಕ್ಕೆ ಗಡಿ ರೇಖೆಗಳಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತಿದೆ’ ಎಂದು ಅವರು ವಿವರಿಸಿದರು.
‘ಮುಂಬೈನಿಂದ ಪ್ರಿಯಾ ಎಂಬುವವರು ನನಗೆ ಪತ್ರವನ್ನು ಬರೆದಿದ್ದಾರೆ. ದೂರದ ಮಹಾರಾಷ್ಟ್ರದಿಂದ ಬಂದ ಪತ್ರವನ್ನು ಕಂಡು ನನಗೆ ಅತ್ಯಂತ ಸಂತಸವಾಯಿತು. ಅವರು ನನಗೆ ಕನ್ನಡ ಕಲಿಸಲು ಕೋರಿದ್ದಾರೆ. ಅವರ ಹವ್ಯಾಸಗಳ ಬಗ್ಗೆ ಬರೆದು ನನ್ನ ಗ್ರಾಮ ಮತ್ತು ಹವ್ಯಾಸಗಳ ಬಗ್ಗೆ ಬರೆಯಲು ಹೇಳಿದ್ದಾರೆ. ನಮ್ಮ ಗುರುಗಳ ಸಹಾಯದಿಂದ ಅವರಿಗೆ ಪತ್ರ ಬರೆಯುತ್ತೇನೆ’ ಎಂದು ಏಳನೇ ತರಗತಿಯ ಅಕ್ಷಯ್ ಹರ್ಷವ್ಯಕ್ತಪಡಿಸುತ್ತಾನೆ.

ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳು– ಯಶ್ವಂತ್, ಚಮದನ್, ಮನೋಜ್, ಭಿ, ನವೀನ್, ಮನೋಹರ, ಬಾಲಾಜಿ, ಮುಖೇಶ್, ಮಧು, ಧನುಷ್, ವಿಜಯ್, ಶ್ರೇಯಸ್, ಪವನ್.

ಗ್ರಂಥಾಲಯ ಜೀವಂತ ದೇವಾಲಯವಿದ್ದಂತೆ

0

ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಗ್ರಂಥಾಲಯಗಳು ಅವಶ್ಯಕ. ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯ ಜೀವಂತ ದೇವಾಲಯಗಳು ಎಂದು ಕವಿ ಚಂದ್ರಶೇಖರ ಹಡಪದ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ತಾಲ್ಲೂಕು ಕಸಾಪ ವತಿಯಿಂದ ‘ಶಾಲೆಗಳ ಗಂಥಾಲಯಕ್ಕೆ ಪುಸ್ತಕ ಕೊಡುಗೆ’ ಕಾರ್ಯಕ್ರಮದಡಿ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಶಾಲೆಯಲ್ಲಿನ ‘ಗ್ರಂಥಾಲಯ’ ಮಾಹಿತಿ ಒದಗಿಸುವುದರೊಂದಿಗೆ ಮಗುವಿನ ಸ್ವತಂತ್ರ ಕಲಿಕೆಗೆ ಸಹಾಯಕವಾಗಬೇಕು. ‘ಶಾಲೆಯ ಗ್ರಂಥಾಲಯ’ ಮಗುವಿನ ಕಲಿಕೆಗೆ ಪೂರಕ ಶಕ್ತಿಯಾಗಬೇಕು. ಶಾಲೆಯ ಗ್ರಂಥಾಲಯವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಮಗುವಿನ ಕೂತೂಹಲವನ್ನು ತಣಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಗ್ರಂಥಾಲಯ ಸಹಾಯಕವಾಗಬಲ್ಲದು ಮತ್ತು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ನಿರಂತರ ಅಧ್ಯಯನದ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ. ಗ್ರಂಥಾಲಯವು ಮಗುವಿನ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ ಮತ್ತು ವೈಯಕ್ತಿಕ ಗುಣಮಟ್ಟದ ವೃದ್ಧಿಗೆ ಸಹಾಯವಾಗುತ್ತದೆ ಎಂದು ವಿವರಿಸಿದರು.
ತಾಲ್ಲೂಕು ಕಸಾಪ ವತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸಿಕೊಟ್ಟು, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಅವರು ವಿವರವನ್ನು ನೀಡಿದರು.
ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಳುವನಹಳ್ಳಿಯ ಸೀತಾ ರಾಮಚಂದ್ರ ವಿದ್ಯಾಸಂಸ್ಥೆ, ಗಂಭೀರನಹಳ್ಳಿ, ಜಂಗಮಕೋಟೆಯ ಜ್ಞಾನಜ್ಯೋತಿ, ಜ್ಯೋತಿ, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಿದರು.
ಕಸಾಪ ಸದಸ್ಯ ಗುರುನಂಜಪ್ಪ ಹಾಜರಿದ್ದರು.

ಶಿಡ್ಲಘಟ ಕ.ಸಾ.ಪ ದಿಂದ ‘ಕಸದಿಂದ ರಸ’ ಕಲಾಶಿಬಿರಾರ್ಥಿಗಳಿಂದ ಪ್ರದರ್ಶನ

0

ಹೂಕುಂಡ, ದೀಪ, ಮನೆ, ಹೂಗಳು, ಉಯ್ಯಾಲೆ, ಪೆನ್ಸ್ಟ್ಯಾಂಡ್, ಫೋಟೋ ಫ್ರೇಮ್, ಚೈನೀಸ್ ಬೆಲ್, ಟೆಡ್ಡಿ ಬೇರ್, ಬೊಕೆ, ದೇವರ ಪಟ, ಓಲೆ ಮುಂತಾದ ಕಲಾಕೃತಿಗಳು ಮಕ್ಕಳಿಂದ ತಯಾರಾಗಿ ಪ್ರದರ್ಶಿಸಲಾಗಿತ್ತು. ಮಕ್ಕಳ ಪೋಷಕರು ತಮ್ಮ ಮಕ್ಕಳ ಕಲಾಚಾತುರ್ಯಕ್ಕೆ ಬೆರಗಾಗಿದ್ದರು.
ಕಳೆದ ಜೂನ್ ತಿಂಗಳಿನಲ್ಲಿ ತಾಲ್ಲೂಕು ಘಟಕದಿಂದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಶಿಬಿರವನ್ನು ಪ್ರಾರಂಭಿಸಲಾಗಿತ್ತು. ಶಿಬಿರವು ಹನ್ನೆರಡು ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಂಜೆ 4 ರಿಂದ 6 ಗಂಟೆಯವರೆಗೂ ನಡೆದಿದ್ದು, ಕಲಿತ ಕಲೆಯಿಂದ ತಯಾರಿಸಿರುವ ಕಲಾಕೃತಿಗಳನ್ನು 25 ಮಂದಿ ಶಿಬಿರಾರ್ಥಿಗಳು ಭಾನುವಾರ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಅವರ ಮನೆಯಲ್ಲಿ ಪ್ರದರ್ಶಿಸಿದ್ದರು.
ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರು ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಆಸಕ್ತ 25 ಮಂದಿ ಮಕ್ಕಳಿಗೆ 12 ವಾರಗಳು ಉಚಿತವಾಗಿ ಕಲಿಸಿದ್ದರು.
‘ಮೂರನೆಯ ತರಗತಿಯಿಂದ ಹಿಡಿದು 10ನೇ ತರಗತಿಯ ಮಕ್ಕಳವರೆಗೂ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಕಲಿಯುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ. ಮಕ್ಕಳಿಗೆ ಉಪಯುಕ್ತ ಕಲೆಯನ್ನು ಕಲಿಸುವುದೂ ಕನ್ನಡದ ಕೆಲಸವೆಂದೇ ತಾಲ್ಲೂಕು ಕಸಾಪ ವತಿಯಿಂದ ಈ ಶಿಬಿರವನ್ನು ಉಚಿತವಾಗಿ ನಡೆಸಲಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ಮುಂದಿನ ವಾರ ಶಿಬಿರದ ಮುಕ್ತಾಯ ಕಾರ್ಯಕ್ರಮದಲ್ಲಿ ಕಲಿತ ಮಕ್ಕಳಿಗೆ ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಪ್ರಮಾಣಪತ್ರ ಮತ್ತು ಉತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ರೂಪ ಪಾರ್ಥಸಾರಥಿ, ಮಂಜುನಾಥ್, ರಾಮಕೃಷ್ಣ, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಿಗಧಿತ ಸಮಯದಲ್ಲಿ ಸಾಲವನ್ನು ಮರುಪಾವತಿಸಿ

0

ಸಹಕಾರ ಸಂಘಗಳಿಂದ ಪಡೆಯುವ ಸಾಲಗಳನ್ನು ನಿಗಧಿತ ಸಮಯದಲ್ಲಿ ರೈತರು ಮರುಪಾವತಿ ಮಾಡಿದಲ್ಲಿ ಸಂಸ್ಥೆಯು ಮತ್ತಷ್ಟು ಸಾಲವನ್ನು ಕೊಡಲು ಅನುಕೂಲವಾಗುತ್ತದೆ. ರೈತರು ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್ ಹೇಳಿದರು.
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ೨೦೧೫–-೧೬ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ಪಡೆಯುವುದು ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದು ರೈತರ ಕರ್ತವ್ಯ. ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಈ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಥಳೀಯ ಜನತೆಯ ಹೆಚ್ಚಿನ ಸಹಕಾರ ಅಗತ್ಯವಿದೆ.
ಬ್ಯಾಂಕಿನ ಸಾಮಾನ್ಯ ಸದಸ್ಯರು ಯಶಸ್ವಿನಿ ಆರೋಗ್ಯ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರದಿಂದ ಹಳೇ ಕೃಷಿ ಸಾಲಕ್ಕೆ ಬಡ್ಡಿ ಮನ್ನಾ ಮಾಡಿದ್ದು, ಸೆಪ್ಟೆಂಬರ್ ೩೦ ರೊಳಗೆ ಅಸಲು ಪಾವತಿಸಿ ಋಣ ಮುಕ್ತರಾಗಬಹುದು. ಶೇ.೩ ರ ಬಡ್ಡಿ ದರದಲ್ಲಿ ಸಾಲ ಪಡೆದಿರುವ ರೈತರು ವಾಯಿದೆ ಒಳಗೆ ಕಂತುಗಳನ್ನು ಮರುಪಾವತಿ ಮಾಡಿ ಸರ್ಕಾರದಿಂದ ಬರಬಹುದಾದ ಬಡ್ಡಿ ರಿಯಾಯಿತಿ ಸದುಪಯೋಗ ಮಾಡಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಹಾಗು ಪಿಎಲ್ಡಿ ಬ್ಯಾಂಕ್ ನ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಪ್ರತಿಯೊಬ್ಬರೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ೨೦೧೫-–೧೬ನೇ ಸಾಲಿನ ಆಡಳಿತ ವರದಿ ಓದಿ ಅಂಗೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶ್ವತ್ಥರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಂ.ಪಿ.ರವಿ, ನಿರ್ದೇಶಕರಾದ ಸಿದ್ದಪ್ಪ, ಶಿವಾರೆಡ್ಡಿ, ಆಡಳಿತ ಮಂಡಳಿ ನಿರ್ದೇಶಕರು, ಬ್ಯಾಂಕಿನ ವ್ಯವಸ್ಥಾಪಕ ಮುನಿಯಪ್ಪ ಮತ್ತಿತರರು ಹಾಜರಿದ್ದರು.

ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

0

ತಮ್ಮ ಸುತ್ತಮುತ್ತಲಿನ ಪರಿಸರವನ್ನು ನಾಶಮಾಡಿ ಸುಂದರ ಮನೆ, ಕಟ್ಟಡ ನಿರ್ಮಿಸಿಕೊಂಡಿರುವ ನಗರದ ಬಹುತೇಕ ಜನರು ವಯಸ್ಸಾದಂತೆ ಉತ್ತಮ ಗಾಳಿ, ವಾತಾವರಣಕ್ಕಾಗಿ ಗ್ರಾಮೀಣ ಪ್ರದೇಶಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶೀಲಾ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ ಹಾಗು ಉಸಿರಿಗಾಗಿ ಹಸಿರು ತಂಡದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೊಂದು ಸಾಧನೆ ಮಾಡಬೇಕು. ತಮ್ಮ ಜೀವತಾವಧಿಯಲ್ಲಿ ಯಾವುದೇ ಗಿಡ, ಮರಗಳನ್ನು ಕಡಿಯದೇ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಿದರೆ ಅವನ ಜೀವನ ಸಾರ್ಥಕವಾಗುವುದರ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುತ್ತದೆ ಎಂದರು.
ನಗರದ ಬಹುತೇಕ ಜನತೆ ಇತ್ತೀಚೆಗೆ ನಗರ ಪ್ರದೇಶದ ಕಲುಷಿತ ವಾತಾವರಣದಿಂದ ಅನಾರೋಗ್ಯ ಪೀಡಿತರಾಗುತ್ತಿದ್ದು ನಿವೃತ್ತಿ ಜೀವನ ಕಳೆಯಲು ಗ್ರಾಮೀಣ ಪ್ರದೇಶಗಳಲ್ಲಿ ತೋಟದ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ನಾಗರಿಕತೆ ಹೆಸರಲ್ಲಿ ಮರ ಗಿಡಗಳನ್ನು ಕಡಿದಿರುವುದರಿಂದ ನಗರಗಳಲ್ಲಿ ಉತ್ತಮ ಗಾಳಿಯನ್ನು ಉಸಿರಾಡುವುದು ಕಷ್ಟ ಎಂದರು.
ಇನ್ನು ಬಯಲುಸೀಮೆ ಭಾಗದಲ್ಲಿರುವ ನೀಲಗಿರಿಯಿಂದ ಈ ಭಾಗದಲ್ಲಿ ಇನ್ನಷ್ಟು ಅಂತರ್ಜಲ ಕುಸಿತವುಂಟಾಗುತ್ತದೆ. ಹಾಗಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಬೇರೆ ಜಾತಿಯ ಸಸಿಗಳನ್ನು ನೆಡಲು ಈ ಭಾಗದ ಜನರು ಮುಂದಾಗಬೇಕು ಎಂದರು.
ಉಸಿರಿಗಾಗಿ ಹಸಿರು ತಂಡದ ಸಂಚಾಲಕ ಗಂಗಾಧರರೆಡ್ಡಿ ಮಾತನಾಡಿ, ನೀಲಗಿರಿ ಭೂಮಿಯ ಫಲವತ್ತತೆ ಹಾಗೂ ಅಂತರ್ಜಲವನ್ನು ನಾಶಪಡಿಸುತ್ತದೆ. ನೀಲಗಿರಿಯ ಅಕ್ಕ ಪಕ್ಕದ ಕೃಷಿ ಭೂಮಿಗಳಲ್ಲಿ ಯಾವುದೇ ಬೆಳೆಯಿಡಲಾಗುವುದಿಲ್ಲ. ಮುಖ್ಯವಾಗಿ ನೀಲಗಿರಿ ಮರಗಳು ಯಾವುದೇ ಪ್ರಾಣಿ ಮಪಕ್ಷಿಗಳಿಗೆ ಆವಾಸ ಸ್ಥಾನವಲ್ಲ, ಇತರೆ ಜಾತಿಯ ಮರಗಳಂತೆ ಹಣ್ಣು ಹಂಪಲು ಬೆಳೆಯುವ ಗಿಡವಲ್ಲ, ಮತ್ತು ಹಣ್ಣು ಹಂಪಲು ಬೆಳೆಯದ ನೀಲಗಿರಿ ಮರ ಆಮ್ಲಜನಕ ಉತ್ಪಾದನೆಯಲ್ಲಿಯೂ ನಗಣ್ಯ ಎಂದರು.
ಕೇವಲ ಉರವಲು ಸಮಸ್ಯೆಯನ್ನು ಮಾತ್ರ ನಿವಾರಿಸುವ ನೀಲಗಿರಿ ಇದೀಗ ಪ್ರಕೃತಿಯ ಅಸಮತೋಲನೆಗೆ ಕಾರಣವಾಗಿದೆ. ಬಯಲುಸೀಮೆಯ ರೈತರ ಬೆನ್ನೆಲುಬಾದ ಕೃಷಿಯ ಜೀವಾಳವಾಗಿದ್ದ ಅಂತರ್ಜಲಕ್ಕೆ ಮಾರಕವಾಗಿ ಪರಿಣಮಿಸಿದೆ. ಹಾಗಾಗಿ ಈ ಭಾಗದ ರೈತರು ನೀಲಗಿರಿಯನ್ನು ನಿಷೇಧಿಸದ ಹೊರತು ಉಳಿಗಾಲವಿಲ್ಲ. ನೀಲಗಿರಿಯನ್ನು ನಿಷೇಧಿಸಿ ಬೇರೆ ಗಿಡಗಳನ್ನು ನೆಡುವಂತೆ ಜನರಿಗೆ ಅರಿವು ಮೂಡಿಸುವ ಮೂಲಕ ಸಸಿ ನೆಡುವ ಕಾರ್ಯಕ್ಕೆ ನಮ್ಮ ಉಸಿರಿಗಾಗಿ ಹಸಿರು ತಂಡ ಮಾಡುತ್ತಿದೆ ಎಂದರು.
ಹಸಿರು ಉಸಿರು ತಂಡದಿಂದ ನ್ಯಾಯಾಲಯ ಆವರಣದಲ್ಲಿ ಸುಮಾರು ೭೦ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ತಮಗಿರುವ ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ತೆರವು ಗೊಳಿಸಿ ಬೇರೆ ಜಾತಿಯ ಸಸಿಗಳನ್ನು ನೆಟ್ಟಿರುವಂತಹ ಚಿಕ್ಕಬಳ್ಳಾಪುರ ತಾಲ್ಲೂಕು ಚಲುಮೇನಹಳ್ಳಿಯ ರೈತ ಮಹಿಳೆ ರಾಧಮ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ಸಹಾಯಕ ಸರ್ಕಾರಿ ವಕೀಲೆ ಎಸ್.ಕುಮುದಿನಿ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ವೆಂಕಟರೆಡ್ಡಿ, ಯಣ್ಣಂಗೂರು ಮಂಜುನಾಥ್, ಉಸಿರಿಗಾಗಿ ಹಸಿರು ತಂಡದ ರಾಮಾಂಜಿನಪ್ಪ, ಸಂದ್ಯಾ, ಪಲ್ಲವಿ, ವರಲಕ್ಷ್ಮಿ, ಪವಿತ್ರ, ಚೈತ್ರಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆರನೇ ದಿನಕ್ಕೆ ಕಾಲಿಟ್ಟ ರೀಲರುಗಳ ಮುಷ್ಕರಕ್ಕೆ ರಾಜ್ಯ ಮುಖಂಡರ ಬೆಂಬಲ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೀಲರುಗಳು ಇ–ಹರಾಜು ನಿಲ್ಲಿಸಿ ಬಹಿರಂಗ ಹರಾಜನ್ನು ನಡೆಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳೀಯರಿಗೆ ಬೆಂಬಲವಾಗಿ ರಾಜ್ಯದ ಮುಖಂಡರು ಶನಿವಾರ ಆಗಮಿಸಿದ್ದರು.
ರೀಲರುಗಳ ಸಂಘದ ರಾಜ್ಯ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಇ–ಹರಾಜಿನ ಸಮಸ್ಯೆಯ ಬಗ್ಗೆ ಆಯುಕ್ತರನ್ನು ಸೋಮವಾರ ಭೇಟಿ ಮಾಡಿ ತಿಳಿಸುತ್ತೇನೆ. ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲೂ ರೀಲರುಗಳ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಮನಗರ ರೀಲರುಗಳ ಸಂಘದ ಅಧ್ಯಕ್ಷ ಮೊಯುದ್ದೀನ್, ವಿಜಯಪುರ ಭಾರತ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಾದಿಕ್ ಪಾಷ ಹಾಜರಿದ್ದರು.
ಮೂವರು ಜಂಟಿ ನಿರ್ದೇಶಕರ ಭೇಟಿ: ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ರೇಷ್ಮೆ ಇಲಾಖೆಯ ಮೂವರು ಜಂಟಿ ನಿರ್ದೇಶಕರು ಶನಿವಾರ ಭೇಟಿ ನೀಡಿದ್ದರು. ಬೆಂಗಳೂರು ವಿಭಾಗದ ಎಚ್.ಆರ್.ಪ್ರಭಾಕರ್, ಮಾರುಕಟ್ಟೆ ವಿಭಾಗದ ವೆಂಕಟರಾವ್, ಸಹಕಾರ ಸಂಘದ ವಿಭಾಗದ ಸಂತೋಷ್ಕುಮಾರ್ ಭೇಟಿ ನೀಡಿದ್ದರು. ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ತಾದೂರು ಮಂಜುನಾಥ್ ಮತ್ತಿತರ ರೇಷ್ಮೆ ಬೆಳೆಗಾರರೊಂದಿಗೆ ಅವರು ಚರ್ಚಿಸಿದರು. ‘ರೀಲರುಗಳಿಗೆ ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಗೂಡು ಕೊಳ್ಳಲು ಲೈಸೆನ್ಸ್ ನೀಡಲಾಗಿರುತ್ತದೆ. ರೈತರು ನೂರಾರು ಕಿ.ಮೀ ದೂರದಿಂದ ರೇಷ್ಮೆ ಗೂಡು ತಂದು ತಮಗೆ ಅನುಕೂಲಕರವಾದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಮುಂದುವರೆಯಲಿ. ಬಹಿರಂಗ ಹರಾಜು ಬೇಕಿರುವವರು ಬಹಿರಂಗ ಹರಾಜು ನಡೆಯುವ ಮಾರುಕಟ್ಟೆಯಲ್ಲಿ ಹೋಗಿ ಕೊಳ್ಳಬಹುದು’ ಎಂದು ರೈತ ಮುಖಂಡರು ತಿಳಿಸಿದರು.
ಬಹಿರಂಗ ಹರಾಜು ಬೇಕು ಎಂದ ಕೆಲವು ರೈತರು: ತಾಲ್ಲೂಕಿನ ಹೇಮಾರ್ಲಹಳ್ಳಿ, ಮಳಮಾಚನಹಳ್ಳಿ, ಆನೂರು ಮೊದಲಾದೆಡೆಗಳಿಂದ ಬಂದಿದ್ದ ಕೆಲವು ರೈತರು ಮಾರುಕಟ್ಟೆಯಲ್ಲಿ ಬಹಿರಂಗ ಹರಾಜನ್ನೇ ಮುಂದುವರೆಸಬೇಕು. ಹರಾಜು ನಿಂತಿರುವುದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ರೀಲರುಗಳನ್ನು ಭೇಟಿಯಾಗದ ಅಧಿಕಾರಿಗಳು: ಕೇವಲ ಕೆಲವೇ ರೈತರನ್ನು ಭೇಟಿಯಾಗಿ ನಮ್ಮ ಸಮಸ್ಯೆಯನ್ನು ಆಲಿಸದೆ ಅಧಿಕಾರಿಗಳು ಹಿಂದಿನ ಬಾಗಿಲಿನಿಂದ ಬಂದು ಹೋಗಿದ್ದಾರೆ. ಭಾಷಣದಲ್ಲಿ ಮಾತ್ರ ರೈತರು ರೀಲರುಗಳು ಎರಡು ಕಣ್ಣುಗಳಿದ್ದಂತೆ ಎನ್ನುತ್ತಾರೆ. ಆದರೆ ತಾರತಮ್ಯ ಮುಂದುವರೆಸುತ್ತಾರೆ ಎಂದು ರೀಲರ್ ರಾಮಕೃಷ್ಣಪ್ಪ ತಿಳಿಸಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯ ಸಮಸ್ಯೆ ಬಗೆಹರಿಸಲು ರೈತರ ಒತ್ತಾಯ

0

ರಾಜ್ಯದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯೆಂದೇ ಪ್ರಸಿದ್ಧವಾದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಆರು ದಿನಗಳಿಂದ ರೀಲರುಗಳು ನಡೆಸುತ್ತಿರುವ ಮುಷ್ಕರದಿಂದ ಸ್ಥಗಿತಗೊಂಡಿದೆ. ರೇಷ್ಮೆ ಗೂಡಿನ ಹರಾಜು ನಡೆಯದೆ ರೈತರಿಗೆ ಅನ್ಯಾಯವಾಗುತ್ತಿದ್ದು, ತಕ್ಷಣ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಶನಿವಾರ ರೈತ ಸಂಘದ ಸದಸ್ಯರು ಆಗ್ರಹಿಸಿದರು.

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಬಗೆ ಹರಿಸುವಂತೆ ಶನಿವಾರ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಪ್ರಭಾಕರ್ ಅವರಿಗೆ ರೈತ ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಬಗೆ ಹರಿಸುವಂತೆ ಶನಿವಾರ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಪ್ರಭಾಕರ್ ಅವರಿಗೆ ರೈತ ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು.

ಪ್ರತಿ ದಿನ ಕೋಟ್ಯಾಂತರ ವ್ಯವಹಾರ ನಡೆಸುತ್ತಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಈಗ ರೀಲರುಗಳು ಇ–ಹರಾಜು ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ವ್ಯವಹಾರಗಳು ನಿಂತಿವೆ. ರೈತರು ಬೇರೆ ಗೂಡಿನ ಮಾರುಕಟ್ಟೆಗೆ ಹೋಗುತ್ತಿದ್ದರೂ ರೇಷ್ಮೆ ಗೂಡಿನ ಬೆಲೆ ಕುಸಿದಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರಕ್ಕೂ ಸಾಕಷ್ಟು ನಷ್ಟವಾಗುತ್ತಿರುವುದರಿಂದ ರೇಷ್ಮೆ ಸಚಿವರು ಮತ್ತು ಆಯುಕ್ತರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು. ರೈತರಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರ ಭರಿಸಬೇಕು, ರೇಷ್ಮೆ ಗೂಡುಗಳನ್ನು ಸರ್ಕಾರವೇ ಖರೀದಿಸಲು ಮುಂದಾಗಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಸಂಘಟನೆಯಿಂದ ಉಗ್ರವಾದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಪ್ರಭಾಕರ್ ಅವರಿಗೆ ರೈತ ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮಹಿಳಾ ಘಟಕದ ಅನಸೂಯಮ್ಮ, ಪಾರ್ವತಮ್ಮ, ಸಂಪತ್ಕುಮಾರ್, ನಾರಾಯಣಸ್ವಾಮಿ, ನರೇಂದ್ರ, ಭಕ್ತರಹಳ್ಳಿ ಪ್ರತೀಶ್, ಹುಸೇನ್ ಸಾಬ್, ಜೆ.ಎಸ್.ವೆಂಕಟಸ್ವಾಮಿ, ಎಸ್.ಎಂ.ಗೋವಿಂದಪ್ಪ, ಮುನಿಕೆಂಪಣ್ಣ, ಮಾರಪ್ಪ, ನಾಗೇಶ, ರಮೇಶ, ಶಂಕರಣ್ಣ, ಮುರಳಿ, ಪುರುಷೋತ್ತಮ, ನಾರಾಯಣಸ್ವಾಮಿ, ಬಾಜಿಸಾಬ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.