Home Blog Page 448

ಪ್ರಕೃತಿಯನ್ನೇ ದೇವರೆಂದು ಪೋಜಿಸಿ

0

ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು. ಮರಗಳ ಮಾರಣ ಹೋಮದಿಂದ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆ ನಷ್ಟವುಂಟಾಗುತ್ತಿದೆ ಎಂದು ಮುಕ್ತಿನಾಗ ದೇವಾಲಯದ ಧರ್ಮಕರ್ತರಾದ ಶ್ರೀ ಸುಬ್ರಮಣ್ಯ ಶಾಸ್ತ್ರಿಗಳು ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುವಾರ ೧೧ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡಿ ಅವರು ಮಾತನಾಡಿದರು. ವೃಕ್ಷಗಳ ರಕ್ಷಣೆಯನ್ನು ಮಾಡುವುದೂ ಕೂಡ ಧರ್ಮವನ್ನು ರಕ್ಷಿಸಿದಂತೆಯೇ, ಸಸ್ಯ ಸಂಪತ್ತಿನಲ್ಲಿ ದೇವರನ್ನು ಕಾಣಬೇಕೆಂದರು.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕನ್ನಡತಿ, ಚಾಮುಂಡೇಶ್ವರಿಯ ದರ್ಶನಕ್ಕಾಗಿ ಪದೇ ಪದೇ ಮೈಸೂರಿಗೆ ಭೇಟಿ ನೀಡುವ ಅವರು ಇಲ್ಲಿನ ಮಳೆ ಬೆಳೆಯ ಬಗ್ಗೆ, ನೀರು ಸಂಗ್ರಹಣೆಯ ಬಗ್ಗೆ ಹಾಗೂ ರೈತರ ಸಂಕಷ್ಟದ ಬಗ್ಗೆ ಸ್ವಷ್ಟವಾಗಿ ಅರಿತಿದ್ದರೂ ಕನ್ನಡಿಗರಿಗೆ ತೊಂದರೆ ಉಂಟುಮಾಡುವುದು ಶೋಭೆಯಲ್ಲ ಎಂದರು.
ಸಂಜೆ ತಿರುಮಲ ತಿರುಪತಿ ಪುರೋಹಿತರಾದ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನೂರಾರು ದಂಪತಿಗಳು ಪಾಲ್ಗೂಂಡಿದ್ದರು. ಸುಮಂಗಲಿಯರು, ದುರ್ಗಾದೇವಿಯ ಕುಂಕುಮಾರ್ಚನೆಯಲ್ಲಿ ಪಾಲ್ಗೂಂಡಿದ್ದರು.
ಇದಕ್ಕೂ ಮುನ್ನ ಗ್ರಾಮ ದೇವತೆ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಾಲಯಕ್ಕೆ ಕಲಶ ಹೊತ್ತ ಸುಮಂಗಲಿಯರು ವಿವಿಧ ಸಾಂಸೃತಿಕ ಕಲಾತಂಡಗಳೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೂಂಡಿದ್ದರು.
ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿ ಎಂ.ನಾರಾಯಣಸ್ವಾಮಿ, ಎಂ,ಆರ್.ಮುನಿಕೃಷ್ಣಪ್ಪ, ಕೇಶವ ನಾರಾಯಣ, ಜಂಗಮಕೋಟೆ ಜಯರಾಂ, ಗೋಪಾಲಪ್ಪ, ಎಚ್.ವಿ.ರಾಮಕೃಷ್ಣಪ್ಪ ಮತ್ತಿತರರು ಇದ್ದರು.

ರೀಲರುಗಳಿಂದ ಮನವಿಪತ್ರ ಸಲ್ಲಿಕೆ

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ರೀಲರುಗಳು ಧರಣಿ ಕುಳಿತಿರುವುದು ಐದನೇ ದಿನವಾದ ಶುಕ್ರವಾರವೂ ಮುಂದುವರೆದಿದ್ದು, ರೀಲರುಗಳು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ರೇಷ್ಮೆ ಇಲಾಖೆಯ ಆಯುಕ್ತರಿಗೆ, ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕಳೆದ ಐದು ದಿನಗಳಿಂದ ಇ–ಹರಾಜು ನಿಲ್ಲಿಸುವಂತೆ ಒತ್ತಾಯಿಸಿ ರೀಲರುಗಳು ರೇಷ್ಮೆ ಗೂಡಿನ ಮಾರುಕಟ್ಟೆಯ ಹೊರಗೆ ಧರಣಿ ನಡೆಸುತ್ತಿದ್ದೇವೆ. ಇದಕ್ಕೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅದು ರಾಜ್ಯ ಸರ್ಕಾರದ ತೀರ್ಮಾನವೆಂದು ಕೈಚೆಲ್ಲಿದ್ದಾರೆ. ನಮಗೆ ದಿನನಿತ್ಯದ ಊಟಕ್ಕೂ ತೊಂದರೆಯಾಗಿದೆ. ಕೆಲವು ಮಂದಿ ರೈತರು ಇ–ಹರಾಜು ಬೇಕೆಂದು ರೇಷ್ಮೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಮಾನವೀಯ ದೃಷ್ಟಿಯಿಂದ ಈ ಕೂಡಲೇ ಇ–ಹರಜು ಸ್ಥಗಿತಗೊಳಿಸಿ, ರೀಲರುಗಳ ಬವಣೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕೆಂದು ಕೋರಿದ್ದಾರೆ.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ, ರಮೇಶ್, ಗಣೇಶ್, ರವಿ, ಯೂಸುಫ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಎಲ್ಲರೂ ರೂಡಿಸಿಕೊಳ್ಳಬೇಕು

0

ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು ಎಂದು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎಂ.ಮನೋರಮಾ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೨ ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಜಿಡ್ಡುಗಟ್ಟಿರುವ ಮೌಢ್ಯಗಳ ವಿರುದ್ದ ಹೋರಾಟ ನಡೆಸಿದ ಶ್ರೀ ನಾರಾಯಣ ಗುರುಗಳು ಶೋಷಿತರ ಪಾಲಿಗೆ ದಾರಿ ದೀಪವಾಗಿದ್ದರು ಎಂದ ಅವರು ದೇಶದ ಯುವಜನತೆ ಇವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕಾರಣಕರ್ತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಇಓ ವೆಂಕಟೇಶ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್ ಮತ್ತಿತರರು ಮಾತನಾಡಿದರು.
ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಬಿಸಿಎಂ ಇಲಾಖೆಯ ಶಂಕರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್, ಅರಣ್ಯ ಇಲಾಖೆಯ ತಿಮ್ಮರಾಯಪ್ಪ ಮತ್ತಿತರರು ಹಾಜರಿದ್ದರು.

ನಗರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

0

ನಗರದಲ್ಲಿ ಶುಕ್ರವಾರ ನಡೆದ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹತ್ತೊಂಬತ್ತನೇ ವಾರ್ಡ್ನ ಜೆಡಿಎಸ್ ಸದಸ್ಯ ಅಧ್ಯಕ್ಷರಾಗಿ, ಹದಿನೈದನೇ ವಾರ್ಡ್ನ ಜೆಡಿಎಸ್ ಸದಸ್ಯೆ ಎಸ್.ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಆದರೂ ಜೆಡಿಎಸ್ ಪಕ್ಷ ಅಧಿಕಾರ ಗಿಟ್ಟಿಸಿಕೊಂಡಿರುವುದು ಕುತೂಹಲಕ್ಕೆ ಎಡೆಮಾಡಿತು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿತ್ತು. ವಿಧಾನ ಸಭೆಯ ಚುನಾವಣೆಗೆ ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದರಿಂದ ಯಾವ ಪಕ್ಷ ನಗರಸಭೆಯ ಚುಕ್ಕಾಣಿ ಹಿಡಿಯುವುದೆಂಬ ಕುತೂಹಲ ಜನಸಾಮಾನ್ಯರದ್ದಾಗಿತ್ತು. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ದೃಷ್ಟಿಯಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕುತೂಹಲ ಮೂಡಿಸಿತ್ತು.
ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದು ಅದರಲ್ಲಿ ಕಾಂಗ್ರೆಸ್ ನ ಸಿಕಂದರ್ ಮತ್ತು ಜೆಡಿಎಸ್ನ ಲಕ್ಷ್ಮಯ್ಯ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಂತಿಮವಾಗಿ ಜೆಡಿಎಸ್ನ ಅಪ್ಸರ್ ಪಾಷ ಮತ್ತು ಕಾಂಗ್ರೆಸ್ನ ಯಮಹ ಬಾಬು ಮಾತ್ರ ಕಣದಲ್ಲಿ ಉಳಿದುಕೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಪ್ರಭಾವತಿ ಸುರೇಶ್ ಮತ್ತು ಕಾಂಗ್ರೆಸ್ನ ಸುಗುಣ ಲಕ್ಷ್ಮಿನಾರಾಯಣ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ನ ಅಪ್ಸರ್ ಪಾಷ ಮತ್ತು ಪ್ರಭಾವತಿ ಸುರೇಶ್ ಅವರ ಪರವಾಗಿ ೧೭ ಸದಸ್ಯರು ಹಾಗೂ ಶಾಸಕ ಎಂ.ರಾಜಣ್ಣ ಮತ ಚಲಾಯಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಬಾಬು ಮತ್ತು ಸುಗುಣ ಲಕ್ಷ್ಮಿನಾರಾಯಣ ಅವರ ಪರವಾಗಿ ಒಟ್ಟು ೧೦ ಸದಸ್ಯರು ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಕೈಯೆತ್ತುವ ಮುಖಾಂತರ ಸಹಮತ ವ್ಯಕ್ತಪಡಿಸಿದ್ದರಿಂದ ಜೆಡಿಎಸ್ನ ಅಪ್ಸರ್ಪಾಷ ಅಧ್ಯಕ್ಷರಾಗಿ ಹಾಗು ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆ ಮುಂದೆ ಬೆಳಗ್ಗೆಯಿಂದಲೇ ಹಾಜರಿದ್ದ ಜೆಡಿಎಸ್ ಬೆಂಬಲಿಗರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ವಿಷಯ ತಿಳಿಯುತ್ತಿದ್ದಂತೆ ನಗರದ ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯ ಹಿನ್ನಲೆಯಲ್ಲಿ ನಗರಸಭೆ ಸುತ್ತ ಮುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳದಲ್ಲಿ ಚಿಂತಾಮಣಿ ಉಪಾವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಸೇರಿದಂತೆ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್, ನಗರಠಾಣೆ ಪಿಎಸ್ಸೈ ನವೀನ್ ಹಾಜರಿದ್ದರು.
ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಅಮರೇಶ್ ಕರ್ತವ್ಯ ನಿರ್ವಹಿಸಿದರೆ ತಹಸೀಲ್ದಾರ್ ಕೆ.ಎಂ.ಮನೋರಮಾ, ನಗರಸಭಾ ಆಯುಕ್ತ ಎಚ್.ಎ.ಹರೀಶ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮೇಲೂರು ರವಿಕುಮಾರ್, ಆರ್.ಎ.ಉಮೇಶ್ ಹಾಜರಿದ್ದರು.
ಶಾಸಕ ಹಾಗು ಸಂಸದರ ಮತ ಚಲಾವಣೆ: ಸಂಖ್ಯಾಬಲದ ಕೊರತೆಯನ್ನು ಮೊದಲೇ ಅರಿತಿದ್ದ ಕಾಂಗ್ರೆಸ್ ಪಕ್ಷದವರು ಎರಡನೇ ಭಾರಿಗೆ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಮತಚಲಾಯಿಸಲು ಕರೆತಂದಿದ್ದರಾದರೂ ಈ ಭಾರಿಯ ನಗರಸಭೆ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಸಿಕಂದರ್ ಹಾಗೂ ಮೂವರು ಬೆಂಬಲಿಗರು ಸೇರಿ ಒಟ್ಟು ನಾಲ್ಕು ಮಂದಿ ಸದಸ್ಯರು ಜೆಡಿಎಸ್ ಅಭ್ಯರ್ಥಿಯ ಪರ ಮತ ಚಲಾಯಿಸಿದ್ದರಿಂದ ನಗರಸಭೆಯಲ್ಲಿ ೧೪ ಜನ ಸದಸ್ಯರ ಸಂಖ್ಯೆಯನ್ನು ಹೊಂದಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಗರಸಭೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರಾಗಿ ಆಯ್ಕೆಯಾಗದೇ ಸೋಲನ್ನು ಅನುಭವಿಸುವಂತಾಯಿತು.
ಜೆಡಿಎಸ್ ಪಕ್ಷದ ಒಟ್ಟು ೧೧ ಸದಸ್ಯರು ಹಾಗು ಪಕ್ಷೇತರ ಅಭ್ಯರ್ಥಿ ಪಿ.ಕೆ.ಕಿಷನ್(ನಂದು) ಮತ್ತು ಬಿಜೆಪಿ ಅಭ್ಯರ್ಥಿ ಎಸ್.ರಾಘವೇಂದ್ರ ಸೇರಿದಂತೆ ಶಾಸಕ ಎಂ.ರಾಜಣ್ಣ ಹಾಗೂ ಕಾಂಗ್ರೆಸ್ನ ಸದಸ್ಯರಾದ ನಗರದ ೪ ನೇ ವಾರ್ಡಿನ ಸುಹೇಲ್, ೭ ನೇ ವಾರ್ಡಿನ ನಯಾಜ್, ೧೬ ನೇ ವಾರ್ಡಿನ ಸಿಕಂದರ್ ಮತ್ತು ೨೬ ನೇ ವಾರ್ಡಿನ ವಹೀದಾಕೌಸರ್ ಜೆಡಿಎಸ್ ಅಭ್ಯರ್ಥಿ ಅಪ್ಸರ್ಪಾಷ ಹಾಗೂ ಪ್ರಭಾವತಿಸುರೇಶ್ ಪರವಾಗಿ ಮತ ಚಲಾಯಿಸಿದ್ದರಿಂದ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಯಿತು.
ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಸಹ ಜೆಡಿಎಸ್ ಅಭ್ಯರ್ಥಿಗಳು ಅತ್ಯಂತ ಹೆಚ್ಚಿನ ಬಹುಮತದಿಂದ ಜಯಭೇರಿಯನ್ನು ಸಾಧಿಸಿದ್ದಾರೆ. ಮತ ಹಾಕಿ ಬೆಂಬಲಿಸಿದ ಸದಸ್ಯರಿಗೆ ಧನ್ಯವಾದಗಳು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಬೇಕು.
– ಶಾಸಕ ಎಂ.ರಾಜಣ್ಣ
ನಮಗೆ ಮತ ನೀಡಿ ಗೆಲ್ಲಿಸಿದ ಮತ ಬಾಂಧವರು ಹಾಗೂ ಈ ದಿನ ಬೆಂಬಲಿಸಿದ ನಗರಸಭೆ ಸದಸ್ಯರಿಗೆ ಋಣಿಯಾಗಿರುತ್ತೇನೆ. ಶಾಸಕರು ಮತ್ತು ನಮ್ಮ ಮುಖಂಡರ ಸಲಹೆಯ ಮೇರೆಗೆ ನಗರದ ಅಭಿವೃದ್ಧಿಗೆ ಕಾರ್ಯಪ್ರವೃತ್ತನಾಗುತ್ತೇನೆ.
– ನೂತನ ಅಧ್ಯಕ್ಷ ಅಫ್ಸರ್ಪಾಷ

ರೈತರ ಹಿತ ಕಾಪಾಡಬೇಕೆಂದು ರೇಷ್ಮೆ ಆಯುಕ್ತರಿಗೆ ಮನವಿ

0

ನಗರದ ರೇಷ್ಮೆ ಗೂಡು ವಹಿವಾಟಿಗೆ ಸಂಬಂಧಿಸಿದಂತೆ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ರೇಷ್ಮೆ ಇಲಾಖೆಯ ಆಯುಕ್ತರಿಗೆ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನ ರೀಲರ್ಗಳು ಮಾರುಕಟ್ಟೆಯಲ್ಲಿನ ಇ–ಹರಾಜು ಪದ್ಧತಿ ನಿಲ್ಲಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿಯಿಂದ ರೇಷ್ಮೆ ಗೂಡು ಮಾರುಕಟ್ಟೆಯ ವಹಿವಾಟು ನಿಂತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದ್ದು ತಾವು ಬೆಳೆದ ಗೂಡಿನ ವಹಿವಾಟಿಗಾಗಿ ಬೇರೆ ತಾಲ್ಲೂಕಿನ ಮಾರುಕಟ್ಟೆಗೆ ಹೋಗಬೇಕಾಗಿದೆ.
ಈ ಬಗ್ಗೆ ಗುರುವಾರ ಮಾರುಕಟ್ಟೆಯಲ್ಲಿ ರೈತರ ಸಭೆ ನಡೆಸಿ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಸೇರಿದಂತೆ ರೈತರ ಹಾಗು ರೀಲರ್ಗಳ ನಡುವೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಶುರುಮಾಡಿರುವ ಇ–ಹರಾಜು ಪ್ರಕ್ರಿಯೆ ಉತ್ತಮವಾಗಿದೆ. ಪ್ರಸ್ತುತ ಇ-ಹರಾಜಿನಲ್ಲಿರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ರೈತ ಮುಖಂಡರು ಸೇರಿದಂತೆ ರೀಲರ್ ಪ್ರತಿನಿಧಿಗಳ ಸಭೆ ನಡೆಸಿ ಮುಕ್ತ ಚರ್ಚೆಯ ಮೂಲಕ ಸರಿಪಡಿಸಲು ಕ್ರಮ ಜರುಗಿಸುವುದರೊಂದಿಗೆ ಇ-ಹರಾಜು ಪದ್ಧತಿ ಮುಂದುವರೆಸಬೇಕು.
ಇಲಾಖೆಯು ಈ ಕೂಡಲೇ ಮಾರುಕಟ್ಟೆ ವಹಿವಾಟು ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶ ಮಾಡಿ ಸರ್ಕಾರಿ ಫಿಲೇಚರ್ಗಳಿಗೆ ರೇಷ್ಮೆ ಗೂಡನ್ನು ಖರೀದಿಸುವ ವ್ಯವಸ್ಥೆ ಮಾಡಬೇಕು. ಶಿಡ್ಲಘಟ್ಟ, ಕೋಲಾರ, ವಿಜಯಪುರ ಮುಂತಾದ ಕಡೆ ನೂತನ ಸರ್ಕಾರಿ ಫಿಲೇಚರ್ ಸ್ಥಾಪಿಸಲು ಮುಂದಾಗುವ ಮೂಲಕ ತಾಲ್ಲೂಕಿನ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮೂಲಕ ರೇಷ್ಮೆ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಗೌರವಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕಾರ್ಯಾಧ್ಯಕ್ಷ ಮಳ್ಳೂರುಹರೀಶ್, ಹಿತ್ತಲಹಳ್ಳಿ ಗೋಪಾಲಗೌಡ, ರೈತ ಮುಖಂಡರಾದ ರಾಮಕೃಷ್ಣಪ್ಪ, ತಾದೂರು ಮಂಜುನಾಥ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಣಕು ಶವಯಾತ್ರೆ ನಡೆಸಲು ತೀರ್ಮಾನ

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ರೀಲರುಗಳು ಧರಣಿ ಕುಳಿತಿರುವುದು ನಾಲ್ಕನೇ ದಿನವಾದ ಗುರುವಾರವೂ ಮುಂದುವರೆದಿದೆ.
ರೀಲರ್ ಮುಖಂಡ ಜಿ.ರೆಹಮಾನ್ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟಿಲ್ಲದೇ ಕೋಟ್ಯಾಂತರ ರೂಗಳ ವ್ಯವಹಾರ ನಿಂತಿದ್ದರೂ ಈವರೆಗೂ ರೀಲರ್ಗಳ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಅಧಿಕಾರಿಗಳ ಮತ್ತು ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕರೂ ಸೇರಿದಂತೆ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರ ಅಣಕು ಶವಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ನಂತರವೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಲಿಲ್ಲವಾದರೆ ರೇಷ್ಮೆ ಇಲಾಖೆಯ ಆಯುಕ್ತರೂ ಸೇರಿದಂತೆ ಮುಖ್ಯಮಂತ್ರಿಗಳ ಅಣಕು ಶವಯಾತ್ರ ಮಾಡಲಾಗುವುದು ಹಾಗೂ ಇದರ ಜೊತೆಗೆ ಈಗಾಗಲೇ ರಾಜ್ಯದ ಎಲ್ಲಾ ರೇಷ್ಮೆ ಗೂಡು ಮಾರುಕಟ್ಟೆಯ ರೀಲರ್ಗಳಿಗೂ ಪತ್ರ ರವಾನಿಸಿದ್ದು ನೆರೆಯ ತಾಲೂಕಿನ ರೀಲರ್ಗಳ ಸಹಾಯದಿಂದ ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡು ಮಾರುಕಟ್ಟೆಯನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಮನಗರ ಮತ್ತು ಕೊಳ್ಳೇಗಾಲದಲ್ಲೂ ರೀಲರುಗಳು ಸಹ ಇ-–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಕೂಗು ಪ್ರಾರಂಭಿಸಿದ್ದು ಅವರೂ ನಮ್ಮಂತೆಯೇ ಇದನ್ನು ವಿರೋಧಿಸಿ ಮುಷ್ಕರ ಹೂಡಲಿದ್ದಾರೆ ಎಂದರು.
ಕೂಡಲೇ ಸರ್ಕಾರ ಮದ್ಯ ಪ್ರವೇಶಿಸಿ ರೀಲರ್ಗಳಿಗೆ ಅನ್ಯಾಯವಾಗುತ್ತಿರುವ ಇ-–ಹರಾಜು ಪದ್ಧತಿ ಸ್ಥಗಿತಗೊಳಿಸಲು ಮುಂದಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಅನಾಹುತಗಳಿಗೆ ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಕಾರಣವಾಗುತ್ತಾರೆ ಎಂದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ, ರಮೇಶ್, ಗಣೇಶ್, ರವಿ, ಯೂಸುಫ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಈ. ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಈ.ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ 2015–16ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಪಿ.ಶಿವಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 24 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ. ಸಂಘದ ಸದಸ್ಯರು ಸಭೆಗೆ ಆಗಮಿಸುವಂತೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ಅಕ್ಕಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಗೊಂದು ಮನಕ್ಕೊಂದು ಗಿಡ ನೆಟ್ಟು ಪೋಷಿಸಬೇಕು

0

ಮನೆಗೊಂದು ಮನಕ್ಕೊಂದು ಗಿಡ ನೆಟ್ಟು ಪೋಷಿಸಬೇಕು. ನಮಗೆ ಬಾಯರಿಕೆಯಾದರೆ ನೀರನ್ನು ಕೇಳಿ ಪಡೆಯುತ್ತೇವೆ ಆದರೆ ಪ್ರಾಣಿಗಳಾಗಲಿ ಪಕ್ಷಿಗಳಾಗಲಿ ಕೇಳುವುದಿಲ್ಲ. ಈ ಹಿನ್ನಲೆಯಲ್ಲಿ ಪರಿಸರವನ್ನು ಉಳಿಸಿ ಬೆಳಸಬೇಕಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ಪುರಾನಾ ಮಕಾನ್ ಹಾಗೂ ಖಾಲೆ ಮಸ್ತಾನ್ ಷಾವಲಿ ದರ್ಗಾ ಮತ್ತು ಕೆ.ಇ.ಬಿ ಆವರಣದಲ್ಲಿ ಗುರುವಾರ 150 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನದಲ್ಲಿ ಮರಗಳನ್ನು ಕಡಿಯುವ ಸಂಖ್ಯೆ ಹೆಚ್ಚಾಗಿದೆ. ಆದರೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದರ ಜೊತೆಯಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ, ಇದರಿಂದ ಭೂಮಿ ಹಾಳಾಗುತ್ತಿದೆ. ಇದರ ಬಗ್ಗೆ ಯಾರು ಸಹಾ ಆಲೋಚನೆ ಮಾಡುತ್ತಿಲ್ಲ, ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಪರಿಸರವನ್ನು ಉಳಿಸಿ ಬೆಳಸುವಂತ ಕೆಲಸ ಮಾಡಬೇಕಿದೆ ಎಂದು ನುಡಿದರು.
ಜಾಮಿಯಾ ಮಸೀದಿ ಅಧ್ಯಕ್ಷ ತಾಜ್ಪಾಷ, ಮದೀನಾ ಮಸೀದಿಯ ಮುನೀರ್, ಬಾಬು, ಷಫೀವುಲ್ಲಾ, ಮೌಲಾ, ಖಾಜಾ, ಟಿ.ಎಸ್.ಎಸ್.ಮೌಲಾ, ಎಸ್.ಎನ್.ಕ್ರಿಯಾ ಟ್ರಸ್ಟ್ನ ಬೆಳ್ಳೂಟಿ ರಮೇಶ್, ಛಲಪತಿ, ಮುನಿರಾಜು, ಮಳಮಾಚನಹಳ್ಳಿ ಸಂತೋಷ್, ಷಬ್ಬೀರ್, ಜಬೀವುಲ್ಲಾ, ಜಮೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು

0

ಸಾಧಕರ ಸಾಧನೆಗೆ ಕಾರಣ ಶಿಕ್ಷಕರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸಮಾಜದ ಬೆಳವಣಿಗೆಗೆ ಕಾರಣಕರ್ತರಾಗುವ ಶಿಕ್ಷಕರು ಕೇವಲ ಪಾಠಪ್ರವಚನಗಳನ್ನು ಕಲಿಸುವುದಷ್ಟೆ ಅಲ್ಲದೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಡೆಗೆ ಚಿಂತನೆ ನಡೆಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆ.ವಿ.ಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ಆಯೋಜನೆ ಮಾಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಿದ್ದಾಗ ಮಾತ್ರ ಸಮಾಜ ಆರೋಗ್ಯವಂತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ಸಮಾಜದ ನಿರ್ಮಾಣಕ್ಕೆ ಶಿಕ್ಷಕರು ಕಾರಣಕರ್ತರಾಗಬೇಕು. ಶಿಕ್ಷಣ ಕ್ಷೇತ್ರವನ್ನು ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸಮಾಜದಲ್ಲಿನ ಪರಿವರ್ತನೆ ಹಾಗೂ ಅಭಿವೃದ್ಧಿ ಸಾಧ್ಯವಾಗುವುದಿಲ್ಲವೆಂದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ರಘು ಮಾತನಾಡಿ, ಶಿಕ್ಷಕರು ವೃತ್ತಿ, ಶಾಲೆಗೆ ಮಾತ್ರ ಸೀಮಿತರಾಗಬಾರದು. ವಿದ್ಯಾರ್ಥಿಗಳನ್ನು ಬೆಳೆಸುತ್ತಾ ತಾವೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ತಿರುತ್ತಣಿಯಿಂದ ದೆಹಲಿವರೆಗಿನ ಪಯಣದಲ್ಲಿ ಛಲ, ಆದರ್ಶ, ಮೌಲ್ಯ, ವೃತ್ತಿ ಗೌರವ, ಜ್ಞಾನ, ಕಲಿಯುವ ದಾಹ ಎಲ್ಲವೂ ಇತ್ತು. ಅವು ಶಿಕ್ಷಕರಿಗೆ ಪ್ರೇರಣೆಯಾಗಬೇಕು. ಜಾತಿಯೆಂಬುದು ಶಿಕ್ಷಣ ಕ್ಷೇತ್ರದಿಂದ ಹೊರತಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಶಿಕ್ಷಕರಿಗೆ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿಕ್ಷಕಿಯರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದ ಭವನದಲ್ಲಿ ಅಲ್ಲಲ್ಲಿ ಹಾಕಲಾಗಿದ್ದ ಸೂಕ್ತಿಫಲಕಗಳು ಎಲ್ಲರ ಗಮನಸೆಳೆದವು. ವೇದಿಕೆಯ ಅಲಂಕಾರವನ್ನು ವಿಶಿಷ್ಠವಾಗಿ ವರ್ಲಿಚಿತ್ರಕಲೆ ಹಾಗೂ ವಿವಿಧ ಹೂಗಳಿಂದ ಮಾಡಿದ್ದ ಶಿಕ್ಷಕರಾದ ಎಂ.ದೇವರಾಜ್, ಎಸ್.ಕಲಾಧರ್, ಡಿ.ನಾರಾಯಣಸ್ವಾಮಿ ಮತ್ತು ಎಂ.ಬಾಲಚಂದ್ರ ಅವರನ್ನು ಅಭಿನಂದಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಕೆ.ವಿ.ಭವನ ಅಧ್ಯಕ್ಷ ಬಿಳಿಶಿವಾಲೆ ರವಿ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸಮನ್ವಯಾಧಿಕಾರಿ ಕೆ.ಸುಮಾ, ನಿವೃತ್ತ ಎಸ್ಪಿ ನಾಗರಾಜ್, ಬಿ.ವಿ.ಶ್ರೀರಾಮಯ್ಯ, ವಿಜಯಕುಮಾರ್, ಮುನಿರಾಜು, ಗೋಪಿನಾಥ್, ನಾರಾಯಣಸ್ವಾಮಿ, ಪಿಳ್ಳಣ್ಣ, ಕೆಂಪಣ್ಣ, ಬೈರಾರೆಡ್ಡಿ, ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸನ್ಮಾನಿತ ನಿವೃತ್ತ ಶಿಕ್ಷಕರು
ಪ್ರಾಥಮಿಕ ವಿಭಾಗ
ವಿ.ಪ್ರಕಾಶ್, ವಿ.ಮುನಿರಾಜು, ಎನ್.ನಾರಾಯಣಸ್ವಾಮಿ, ರಜಿಯಾಖಾನಂ, ನಾರಾಯಣಸ್ವಾಮಿ, ಎಚ್.ಕೆ.ಮಧುರಾ, ಎಚ್.ಮುನಿಯಪ್ಪ, ಡಿ.ರಾಜೇಶ್ವರಿ, ಸಿ.ಲಕ್ಷ್ಮಿದೇವಮ್ಮ, ಎಂ.ಪಾರ್ವತಮ್ಮ, ಸಿ.ಎನ್.ರತ್ನಮ್ಮ, ಪಿ.ಗೋದಾವರಿ, ಎಸ್.ಎಂ.ಶಾರದಮ್ಮ, ಜಿ.ಎನ್.ಶಾಮಸುಂದರ್, ಎಸ್.ರವಿ, ಲಕ್ಷ್ಮೀನರಸಪ್ಪ.
ಪ್ರೌಢಶಾಲೆ ವಿಭಾಗ
ಕೆ.ಆರ್.ಜಗದೀಶ್, ಎನ್.ನಾರಾಯಣಸ್ವಾಮಿ, ಎಂ.ಆರ್.ಬಾಲಗಂಗಾಧರ ತಿಲಕ, ವೆಂಕಟರಮಣಪ್ಪ, ಎಸ್.ಎಂ.ಮುನಿಯಪ್ಪ, ಬಿ.ಕೃಷ್ಣಮೂರ್ತಿ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರು
ಬುಡ್ಡೂಸಾಬಿ, ಎಂ.ಎನ್.ಮಂಜುನಾಥ್

ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವ

0

ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಮಂದಿರ ಜ್ಞಾನಮಂದಿರದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಬುಧವಾರ ಸಂಜೆ ಶ್ರೀದೇವಿ, ಭೂದೇವಿ ಸಮೇತ ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಸುಮಂಗಲಿಯರಿಂದ ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ ಮುಂತಾದ ಕಾರ್ಯಕ್ರಮಗಳು ನಡೆದವು. ಪೂಜೆಯಲ್ಲಿ ಪಾಲ್ಗೂಂಡ ಸುಮಂಗಲಿಯರಿಗೆ ಶ್ರೀ ಲಕ್ಷೀ ದೇವಿಯ ವಿಗ್ರಹವನ್ನು ನೀಡಲಾಯಿತು.
ಶ್ರೀ ಲಕ್ಷೀ ವೆಂಕಟರಣಸ್ವಾಮಿ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಹಾ ಪೂರ್ಣಾಹುತಿ, ಮಂತ್ರ ಪುಷ್ಪ, ಮಹಾಮಂಗಳಾರತಿ ನಡೆಯಿತು.
ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಹೋಮ ಪೂಜೆಯಲ್ಲಿ ಭಾಗವಹಿಸಿದ್ದರು.
ಭಕ್ತರಿಗೆಲ್ಲಾ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದವನ್ನು ವಿನಿಯೋಗಿಸಲಾಯಿತು.
ರಾತ್ರಿ ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಶಯನೋತ್ಸವವನ್ನು ಭಕ್ತಿಗೀತೆಗಳೊಂದಿಗೆ ಆಚರಿಸಲಾಯಿತು.

ಚದುರಿದ ಸಂಬಂಧಗಳ ಒಟ್ಟುಗೂಡಿಸುವ ಸಂಭ್ರಮ

0

ಒಟ್ಟು ಕುಟುಂಬಗಳು ಈಗ ಅಪರೂಪ. ಒಟ್ಟು ಕುಟುಂಬಗಳು ಬೇರೆ ಬೇರೆ ದಿಕ್ಕಿಗೆ ಒಡೆದ ಚೂರುಗಳಂತೆ ಹರಡಿ ಚದುರಿ ಹೋಗಿರುತ್ತವೆ. ಜೀವನ ನಿರ್ವಹಣೆಗಾಗಿ ಹಲವು ಉದ್ಯೋಗ, ಅದಕ್ಕಾಗಿ ಹಲವು ಊರುಗಳನ್ನು ಸೇರಿರುತ್ತಾರೆ. ಯಾವುದೋ ಮದುವೆ, ನಾಮಕರಣ ಮುಂತಾದ ಸಮಾರಂಭಗಳಲ್ಲಿ ಸೇರಿದರೂ ಅಲ್ಲಿ ಹಾಜರಾತಿ ಮಾತ್ರವಿರುತ್ತದೆ ಆತ್ಮೀಯತೆಯಲ್ಲ.
ಬೇರೆ ಬೇರೆ ಚದುರಿದ್ದ ಶಿಡ್ಲಘಟ್ಟ ಮೂಲದ ಕುಟುಂಬದ 300 ಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಸಂಬಂಧವನ್ನು ಬೆಸೆದಂಥಹ ವಿಶೇಷತೆ ಈಚೆಗೆ ನಡೆದಿದೆ.
ಶಿಡ್ಲಘಟ್ಟ ಮೂಲದ ಎಸ್.ಎಂ.ಕೃಷ್ಣಪ್ಪ ತಮ್ಮ ಕೌಟುಂಬಿಕ ಸಂಬಂಧವುಳ್ಳ ಎಲ್ಲ ಬೇರು, ಕೊಂಬೆ, ಟಿಸಿಲು, ಹೂ, ಹಣ್ಣು, ಎಲೆ ಎಲ್ಲವನ್ನೂ ಒಂದೆಡೆ ಸೇರಿಸುವ ಕನಸು ಕಂಡು, ಮದುವೆ ಮನೆಯಲ್ಲಿ ಆಗುವಂತೆ ಛಾಯಾಚಿತ್ರಕ್ಕೆ ಸೀಮಿತವಾಗದಂತೆ ಸಂಬಂಧಿಕರೆಲ್ಲಾ ಆಟ, ಪೂಜೆ, ಸ್ಪರ್ಧೆ, ಸಂಗೀತ, ಮಾತು ಮುಂತಾದವುಗಳ ಮೂಲಕ ಅಪರೂಪದ ಕ್ಷಣಗಳನ್ನು ಅನುಭವಿಸಲು ತಯಾರಿ ನಡೆಸಿದರು.
ಶಿಡ್ಲಘಟ್ಟ, ಅಕ್ಕಪಕ್ಕದ ಗ್ರಾಮಗಳು, ನಾಮಗೊಂಡ್ಲು, ಬೆಂಗಳೂರು, ಶಿರಾ, ಚಿತ್ರದುರ್ಗ, ತುಮಕೂರು, ಮಾಲೂರು, ಚಿಂತಾಮಣಿ, ಆನೆಕಲ್ಲು, ದೇವನಹಳ್ಳಿ, ಗುಡಿಬಂಡೆ, ಗೌರಿಬಿದನೂರು ಮುಂತಾದೆಡೆಯ 50 ಕುಟುಂಬಗಳ 300 ಕ್ಕೂ ಹೆಚ್ಚು ಮಂದಿಯನ್ನು ಒಂದೆಡೆ ಸೇರಿಸಿ ಸಂಬಂಧಗಳಿಗೆ ಹೊಸತನವನ್ನು ನೀಡಿದರು.
‘ಹಲವಾರು ಕಡೆ ಹರಿದು ಹಂಚಿಹೋಗಿದ್ದ ಸಂಬಂಧಿಕರನ್ನು ಹುಡುಕಿ ಸಂಪರ್ಕಿಸಿ, ಒಪ್ಪಿಸಲು ಆರು ತಿಂಗಳು ಹಿಡಿಯಿತು. ತಮ್ಮ ಮನೆಯ ದೇವರಾದ ಆವಲಬೆಟ್ಟದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಎಲ್ಲರೂ ಸೇರಲು ಎರಡು ದಿನ ದೈನಂದಿನ ಬದುಕಿನಿಂದ ಮುಕ್ತವಾಗಿ ಸಂಬಂಧವನ್ನು ಪುನರ್ ಸ್ಥಾಪಿಸಲು ಸೂಕ್ತ ಸ್ಥಳ ಎಂದು ಆಲೋಚಿಸಿದೆವು.
ಮಕ್ಕಳಿಗೆ ಹಿರಿಯರು, ಹಿರಿಯರಿಗೆ ಮಕ್ಕಳನ್ನು ಪರಿಚಯಿಸಲಾಯಿತು. ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಸಂಗೀತ, ಗಾಯನ, ಮಿಮಿಕ್ರಿ, ನೃತ್ಯ ನಡೆಸಲಾಯಿತು. ಚಿತ್ರಕಲೆ, ಕವನ ರಚನೆ, ಲೇಖನಗಳ ಬರವಣಿಗೆಯನ್ನು ಮಾಡಿಸಲಾಯಿತು. ಮಹಿಳೆಯರಿಗಾಗಿ ಹೂಕಟ್ಟುವ ಸ್ಪರ್ಧೆ, ರಾಗಿ ಮುದ್ದೆ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ದೇವರ ಅಭಿಷೇಕ, ಕಲ್ಯಾಣೋತ್ಸವದಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು. ಆರ್.ಮಾನ್ಯ ಎಂಬ ಪುಟ್ಟ ಬಾಲೆಯ ಹುಟ್ಟು ಹಬ್ಬದಾಚರಣೆ, 60 ವರ್ಷ ಮೇಲ್ಪಟ್ಟ 15 ಮಂದಿ ಹಿರಿಯರ ಸನ್ಮಾನ ವಿಶೇಷವಾಗಿತ್ತು. ಆವಲಬೆಟ್ಟವನ್ನು ಶಕ್ತರು ಸರಕು ಸರಂಜಾಮುಗಳೊಂದಿಗೆ ನಡೆದು ಹೋದರೆ, ಹಿರಿಯರನ್ನು ಡೋಲಿಯ ಮೂಲಕ ಕರೆತರಲಾಯಿತು.
ಆವಲಬೆಟ್ಟದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಲಕ್ಷ್ಮೀ ಅಮ್ಮನ ಗುಡಿ, ಆಂಜನೇಯ ಗುಡಿ, ನಾಮದೋಣಿ ಎಂಬ ಹಳೆಯ ಬಾವಿ, ಗೋಪುರಗಳು, ಪ್ರಪಾತ ಬಂಡೆ ಎಲ್ಲವನ್ನೂ ವೀಕ್ಷಿಸಿ ಸಂಭ್ರಮಿಸಿದರು. ಕೌಟುಂಬಿಕ ಮೌಲ್ಯಗಳು ಹೆಚ್ಚಿಸಲು, ನಿಸರ್ಗದ ಮಡಿಲಲ್ಲಿ ಎರಡು ದಿನಗಳ ಕಾಲ ಇದ್ದದ್ದು ಸಾರ್ಥಕವಾಯಿತು. ಇತರರಿಗೂ ನಮ್ಮ ಪ್ರಯತ್ನ ಪ್ರೇರಣೆಯಾಗಲಿ’ ಎಂದು ಹಿರಿಯರಾದ ಎಸ್.ಎಂ.ಕೃಷ್ಣಪ್ಪ ವಿವರಿಸಿದರು.

ಎರಡನೇ ದಿನಕ್ಕೆ ಕಾಲಿಟ್ಟ ರೀಲರುಗಳ ಪ್ರತಿಭಟನೆ

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ರೀಲರುಗಳು ಧರಣಿ ಕುಳಿತಿರುವುದು ಎರಡನೇ ದಿನಕ್ಕೆ ಮುಂದುವರೆದಿದೆ.
ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರೀಲರುಗಳು ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಕೆಂಪರೆಡ್ಡಿ, ‘ರೈತ ಮತ್ತು ರೀಲರು ಎರಡೂ ಆಗಿರುವ ನನಗೆ ಎರಡರ ಕಷ್ಟ ಸುಖ ತಿಳಿದಿದೆ. ಒಂದು ಕೈಯಿಂದ ನಾವು ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಅಧಿಕಾರಿಗಳು ರೈತರು ಮತ್ತು ರೀಲರುಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಒಬ್ಬರ ನಡುವೆ ಕಂದಕವನ್ನು ಸೃಷ್ಟಿಸಬಾರದು’ ಎಂದು ತಿಳಿಸಿದರು.
ಪ್ರತಿ ದಿನ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆಗೆ 800 ರಿಂದ 900 ಲಾಟ್ ರೇಷ್ಮೆ ಗೂಡುಗಳು ಬರುತ್ತವೆ. ಎರಡು ದಿನಗಳಿಂದ ರೀಲರುಗಳು ಮುಷ್ಕರ ನಡೆಸುತ್ತಿರುವುದರಿಂದ ಅಧಿಕಾರಿಗಳು ರೈತರು ತಂದ ಗೂಡುಗಳನ್ನು ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಇ–ಹರಾಜು ಪದ್ಧತಿ ಇಲ್ಲ. ಹಳೆಯ ರೀತಿಯಲ್ಲಿ ಹರಾಜು ಮಾಡಲಾಗಿದೆ. ಅದನ್ನೇ ನಮ್ಮೂರಿನ ಮಾರುಕಟ್ಟೆಯಲ್ಲಿಯೇ ಮಾಡಬಹುದಿತ್ತು. ಹಲವಾರು ವರ್ಷಗಳಿಂದ ರೈತರು ಮತ್ತು ರೀಲರುಗಳು ಹೊಂದಿಕೊಂಡು ಇರುವಾಗ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು.
ರಾಮನಗರ ಮತ್ತು ಕೊಳ್ಳೇಗಾಲದಲ್ಲೂ ರೀಲರುಗಳು ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಕೂಗು ಪ್ರಾರಂಭಿಸಿದ್ದಾರೆ. ಅವರೂ ನಮ್ಮಂತೆಯೇ ಇದನ್ನು ವಿರೋಧಿಸಿ ಮುಷ್ಟಕ ಹೂಡಲಿದ್ದಾರೆ ಎಂದರು.
ರೀಲರುಗಳಲ್ಲಿ ಬಹುತೇಕ ಮಂದಿ ಮುಸ್ಲೀಮರೇ ಇರುವ ಕಾರಣ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲೀಂ ರೀಲರುಗಳು ಪ್ರಾರ್ಥನೆಗೆ ತೆರಳಿ ವಾಪಸಾಗಿ ಧರಣಿಯಲ್ಲಿ ಸಹಕರಿಸಿದ ಹಿಂದೂ ರೀಲರ್ಗಳಿಗೆ ಸಿಹಿ ಹಂಚಿದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜ್ಞಾನವನ್ನು ಹಂಚುವವರು ಶ್ರೇಷ್ಠರು

0

ಬಡ ಹುಡುಗರಿಗೆ ವೇದಪಾಠವನ್ನು ಕಲಿಸಿ ಅವರು ಜೀವನದಲ್ಲಿ ಒಂದು ನೆಲೆ ಕಂಡುಕೊಳ್ಳಲು ಕಾರಣರಾದ ಸೋಮೇಶ್ವರ ನಾರಾಯಣಶಾಸ್ತ್ರಿಗಳು ಪ್ರಾತಃಸ್ಮರಣೀಯರು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ನಗರದ ಕೆ.ಎಚ್.ಬಿ ಕಾಲೋನಿಯ ಮಹಾಗಣಪತಿ ಮತ್ತು ಗಾಯಿತ್ರಿ ದೇವಸ್ಥಾನದಲ್ಲಿ ಮಂಗಳವಾರ ಜಿಲ್ಲಾ ವಿಪ್ರ ಪೌರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಲಿಯ ಗೌರವಾಧ್ಯಕ್ಷ ಸೋಮೇಶ್ವರ ನಾರಾಯಣಶಾಸ್ತ್ರಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಜ್ಞಾನವನ್ನು ಹಂಚುವವರು ಶ್ರೇಷ್ಠರು. ತಾವು ಅನುಸರಿಸುತ್ತಿರುವ ಧರ್ಮ ಹಾಗೂ ತಮ್ಮನ್ನು ಒಳಗೊಳ್ಳುವ ಸಮಾಜಕ್ಕೆ ನಾವು ಸದಾ ಋಣಿಗಳಾಗಿರುತ್ತೇವೆ. ವೇದಪಾಠ ಶಾಲೆಯನ್ನು ನಡೆಸುತ್ತಾ ಬಡಹುಡುಗರಿಗೆ ಉಚಿತವಾಗಿ ಕಲಿಸುತ್ತಾ ಸಮಾಜಸೇವೆಯನ್ನು ನಾರಾಯಣಶಾಸ್ತ್ರಿಗಳು ಮಾಡಿ ಮಾದರಿಯಾಗಿದ್ದಾರೆ ಎಂದು ನಾರಾಯಣಶಾಸ್ತ್ರಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಎಲ್ಲರೂ ಮೌನಾಚರಣೆಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವಿಪ್ರ ಪೌರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಲಿಯ ಜಿಲ್ಲಾ ಅಧ್ಯಕ್ಷ ಗುರುಶರ್ಮ, ತಾಲ್ಲೂಕು ಅಧ್ಯಕ್ಷ ವೈ.ಎನ್.ದಾಶರಥಿ, ಬ್ರಾಹ್ಮಣ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಎಸ್.ಸತ್ಯನಾರಾಯಣರಾವ್, ಉಮಾಶಂಕರ್ ಶರ್ಮ, ಸಿ.ಕೆ.ಸುದರ್ಶನ್, ಬಿ.ಕೃಷ್ಣಮೂರ್ತಿ, ರಾಮಾಂಜಿಭಟ್ಟ, ನಟರಾಜ್, ಕೆ.ಎಸ್.ಕೃ್ಣಮೂರ್ತಿ, ಹರೀಶ್, ರಾಮದಾಸು, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಆಚರಣೆ

0

ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಮುಸ್ಲೀಂ ಬಾಂಧವರು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ.
ಶಾಸಕ ಎಂ.ರಾಜಣ್ಣ ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಜನಾಂಗದವರೂ ಕೂಡಾ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.

ಮೇಲೂರಿನಲ್ಲಿ ರಂಗೋಲಿ ಸ್ಪರ್ಧೆ

0

ಗಣೇಶೋತ್ಸವದ ಅಂಗವಾಗಿ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಮಹಿಳೆಯರಿಗಾಗಿ ರಂಗೋಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕಿನ ಮೇಲೂರು ಗ್ರಾಮದ ಭಕ್ತರಹಳ್ಳಿ ರಸ್ತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸ್ಥಳೀಯ ಯುವಕರು ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ್ದ ರಂಗೋಲೆ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಯುವತಿಯರು ಭಾಗವಹಿಸಿ ಆಕರ್ಷಕವಾದ ರಂಗೋಲೆಗಳನ್ನು ಬಿಡಿಸಿ ಎಲ್ಲರ ಗಮನಸೆಳೆದರು.
ಮೇಲೂರು ಗ್ರಾಮದ ಭಕ್ತರಹಳ್ಳಿ ರಸ್ತೆಯ ಸುಗ್ಗಲಮ್ಮ ದೇವಾಲಯದಿಂದ ಸಿನಿಮಾ ಮಂದಿರದವರೆಗೆ, ಮಹಿಳೆಯರು ಹಾಗೂ ಯುವತಿಯರು ರಂಗೋಲೆಗಳನ್ನು ಬಿಡಿಸಿದ್ದರು.
ರಾಜ್ಯಾಂದ್ಯಂತ ಸಂಚಲನ ಮೂಡಿಸಿರುವ ಕಾವೇರಿ ನೀರು ಬಿಡುವ ವಿಚಾರ ಯುವಕರು ಆಯೋಜನೆ ಮಾಡಿದ್ದ ರಂಗೋಲೆ ಸ್ಪರ್ಧೆಯಲ್ಲಿಯೂ ಚಿತ್ರಿಸಲ್ಪಟ್ಟಿತ್ತು.
ಕಾವೇರಿ ಉಳಿಸಿ ನಾಡನ್ನು ರಕ್ಷಿಸಿ ಎಂಬ ಘೋಷಣೆಯುಳ್ಳ ರಂಗೋಲೆ ಬಿಡಿಸುವ ಮೂಲಕ ಮಹಿಳೆಯರು ಕಾವೇರಿನದಿಯ ಬಗ್ಗೆ ಇಟ್ಟುಕೊಂಡಿರುವ ಕಾಳಜಿ ಎದ್ದು ಕಾಣುತ್ತಿತ್ತು.
ರಂಗೊಲೆ ಸ್ಪರ್ದೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

0

ಗರ್ಭಿಣಿ, ಬಾಣಂತಿಯರು ಹಾಗೂ ಕಿಶೋರಿಯರಿಗೆ ಪೌಷ್ಠಿಕಾಂಶ ಅಗತ್ಯವಿರುವುದರಿಂದ ಆಹಾರದಲ್ಲಿ ಸಮತೋಲನ ಇರಬೇಕು. ಇಂದು ಬಹುತೇಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಪೌಷ್ಠಿಕ ಆಹಾರ ಸೇವಿಸದಿರುವುದೇ ಕಾರಣ ಎಂದು ಜಂಗಮಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಶುಚಿತ್ವ ಮತ್ತು ಸಮತೋಲನವಾದ ಆಹಾರದ ಕುರಿತಂತೆ ಅವರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು.
ದಿನನಿತ್ಯದ ನಮ್ಮ ಆಹಾರದಲ್ಲಿ ಮೊಳಕೆ ಕಾಳು, ಹಸಿ ತರಕಾರಿ, ಸೊಪ್ಪು ಬಳಕೆ ಮಾಡಬೇಕು. ಆರೋಗ್ಯವಂತರಾಗಿರಲು ಹಣ್ಣು, ಹಾಲು, ಮೊಟ್ಟೆಗಳನ್ನು ಉಪಯೋಗಿಸಬೇಕು. ಜೊತೆಗೆ ಶುದ್ಧವಾದ ಕುಡಿಯುವ ನೀರಿನ ಕಡೆಗೂ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಕಾಳುಗಳು, ಸೊಪ್ಪು, ತರಕಾರಿಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಶಿವಕುಮಾರ್, ಅಂಗನವಾಡಿ ಕಾರ್ಯಕರ್ತೆಯರಾದ ಭವ್ಯ, ಕನಕರತ್ನಮ್ಮ, ಆಸ್ಪತ್ರೆಯ ದಾದಿ ನಕ್ಷತ್ರ ಮೇರಿ, ಆಶಾ ಕಾರ್ಯಕರ್ತೆಯರಾದ ಸುಶೀಲಾ, ಪ್ರಭಾವತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತಾಲ್ಲೂಕು ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ

0

ಹಾಲು ಒಕ್ಕೂಟದಿಂದ ಸಿಗುವಂತಹ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಇನ್ನೂ ಹೆಚ್ಚು ಒತ್ತು ನೀಡಬೇಕು ಎಂದು ಕೋಚಿಮುಲ್ ಅಧ್ಯಕ್ಷ ಜಿ.ಕಾಂತರಾಜು ಹೇಳಿದರು.
ಕೋಚಿಮುಲ್ ಶಿಬಿರ ಕಚೇರಿ ವತಿಯಿಂದ ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ಪಾದಕರ ಶ್ರೇಯೋಭಿವೃದ್ಧಿ, ಹಾಲು ಉತ್ಪಾದಕರ ಮಕ್ಕಳ ಶಿಕ್ಷಣ, ಬೆಂಬಲ ಬೆಲೆಗಳ ಮುಖಾಂತರ ಹಾಲು ಉತ್ಪಾದಕರಿಗೆ ಒಕ್ಕೂಟ ಉತ್ತೇಜಿಸುತ್ತಿದೆ. ತಾಲ್ಲೂಕಿನಲ್ಲಿ ಶೇ. ೯೬ ರಷ್ಟು ಹಾಲಿನ ಗುಣಮಟ್ಟವನ್ನು ಕಾಯ್ದುಕೊಂಡಿರುವುದರೊಂದಿಗೆ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನದಲ್ಲಿರುವುದು ಶ್ಲಾಘನೀಯ ಎಂದರು.
ಮುಂಬರುವ ದಿನಗಳಲ್ಲಿ ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿವೇತನ ಸೇರಿದಂತೆ ವಸತಿನಿಲಯ ನಿರ್ಮಿಸಿ ಇನ್ನೂ ಹೆಚ್ಚಿನ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಒಕ್ಕೂಟ ಮಾಡಲಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಸುಮಾರು ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೈರಿ ನಿರ್ಮಾಣ ಕಾರ್ಯ ಮುಗಿದಿದ್ದು ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಮುಂಬರುವ ಜನವರಿ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ಈ ಮೆಗಾಡೈರಿಯಿಂದ ಈ ಬಾಗದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆಯಲ್ಲಿ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟದಿಂದ ಪ್ರತಿನಿತ್ಯ ೧ ಲಕ್ಷ ೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಶೇ. ೯೫ ರಷ್ಟು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತಾಗಲು ಹಾಲು ಉತ್ಪಾದಕರು ಸೇರಿದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಕಾರಣೀಕರ್ತರು ಎಂದರು.
ತಮ್ಮ ಎರಡು ವರ್ಷದ ಅಧಿಕಾರಾವಧಿಯಲ್ಲಿ ನಗರದ ಶಿಭಿರ ಕಚೇರಿಗೆ ೪ ಗುಂಟೆ ಸ್ವಂತ ಸ್ಥಳ ಗುರುತಿಸಿದ್ದು ಕಟ್ಟಡ ಕಾಮಗಾರಿ ಶುರುಮಾಡಲು ಈಗಾಗಲೇ ಸುಮಾರು ೬೫ ಲಕ್ಷ ಹಣ ಬಿಡುಗಡೆಯಾಗಿದ್ದು ಕಾಮಗಾರಿ ತ್ವರಿತವಾಗಿ ಶುರುವಾಗಲಿದೆ ಎಂದರು.
ತಾಲ್ಲೂಕಿನ ಹಾಲು ಉತ್ಪಾದಕರು ನೀಡುವಂತಹ ಒಂದು ಲೀಟರ್ ಹಾಲಿಗೆ ೧೦ ಪೈಸೆಯಂತೆ ದತ್ತಿ ನಿಧಿಗೆ ಬರುವಂತಹ ಹಣದಲ್ಲಿ ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೮ ನೇ ತರಗತಿಯ ಸುಮಾರು ೧,೩೦೦ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ಗಳು ಸೇರಿದಂತೆ ಮರಣಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ತಲಾ ೫,೦೦೦ ರೂಗಳಂತೆ ೨೨ ಮಂದಿಗೆ ಚೆಕ್ಕುಗಳನ್ನು ವಿತರಣೆ ಹಾಗೂ ತಾಲ್ಲೂಕಿನ ೫೬ ಸಂಘಗಳಿಗೆ ಎನ್ಡಿಪಿ ಯೋಜನೆಯಡಿ ಒಂದು ಬೀರು ಮತ್ತು ತಲಾ ಐದು ಕುರ್ಚಿಗಳನ್ನು ವಿತರಿಸಲಾಯಿತು.
ತಾಲ್ಲೂಕಿನ ಸುಮಾರು ೨೩ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳನ್ನು ಉತ್ತಮ ಸಹಕಾರ ಸಂಘಗಳು ಎಂದು ಗುರುತಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಗು ನೌಕರರ ಸಮಸ್ಯೆಗಳ ಬಗ್ಗೆ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿದರು.
ಕೋಚಿಮುಲ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎ.ಜಿ.ಲೋಕೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮುಖಂಡರಾದ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ರಾಮಲಿಂಗಾರೆಡ್ಡಿ, ಡಿ.ಪಿ.ನಾಗರಾಜ್, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಗೋವಿಂದರಾಜು, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ರಾಮದಾಸ್, ಶಿಡ್ಲಘಟ್ಟ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಹನುಮಂತರಾವ್, ಸುರೇಶ್ಬಾಬು, ಅಮರೇಶ್ ಮತ್ತಿತರರು ಹಾಜರಿದ್ದರು.

ಸರ್ಕಾರವು ತಂತ್ರಜ್ಞಾನದ ಹೊರೆಯನ್ನು ತಂದಿಟ್ಟಿದೆ

0

ಸರ್ಕಾರವು ತಂತ್ರಜ್ಞಾನದ ಹೊರೆಯನ್ನು ತಂದಿಟ್ಟು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ತೊಂದರೆಯನ್ನುಂಟು ಮಾಡಿದೆ. ಇದನ್ನು ಮಂತ್ರಿಗಳ ಬಳಿ ಹೋಗಿ ಚರ್ಚಿಸೋಣ, ಮುಖ್ಯಮಂತ್ರಿಗಳ ಗಮನಕ್ಕೂ ತರಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂಭಾಗ ರೇಷ್ಮೆ ಗೂಡನ್ನು ಖರೀದಿಸದೆ ಧರಣಿ ಕುಳಿತ ರೀಲರುಗಳ ಪ್ರತಿಭಟನೆ ಬುಧವಾರ ಮೂರನೆ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಆಗಮಿಸಿದ ಅವರು ಸಮಸ್ಯೆಯ ವಿವರ ಪಡೆದು ಮಾತನಾಡಿದರು.
ತಂತ್ರಜ್ಞಾನದ ಲೋಪದೋಷಗಳನ್ನು ಸರಿಪಡಿಸಬೇಕು. ರೀಲರುಗಳಿಗೆ ಬೇಕಿರುವಷ್ಟು ರೇಷ್ಮೆ ಗೂಡು ಸಮಯಕ್ಕೆ ಸರಿಯಾಗಿ ಸಿಕ್ಕರೆ ಅವರು ನೆಮ್ಮದಿಯಾಗಿ ಗೃಹಕೈಗಾರಿಕೆಯನ್ನು ನಡೆಸಿಕೊಂಡಿರುತ್ತಾರೆ. ಶಿಡ್ಲಘಟ್ಟದ ಇತಿಹಾಸದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ವಹಿವಾಟಿಲ್ಲದೆ ಈ ರೀತಿಯಾಗಿ ನಿಂತಿರುವುದು ಇದೇ ಮೊದಲು. ಇದು ನಮ್ಮ ದುರ್ದೈವ. ತಾಲ್ಲೂಕಿನ ಅರ್ಥ ವ್ಯವಸ್ಥೆಯೇ ಇದರಿಂದ ನಾಶವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ರೈತರು ಮತ್ತು ರೀಲರುಗಳೊಂದಿಗೆ ನೂತನ ತಂತ್ರಜ್ಞಾನದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ಸಮಸ್ಯೆಗೆ ಪರಿಷ್ಕಾರವನ್ನು ಹುಡುಕಬೇಕಿತ್ತು. ಸಾವಿರಾರು ಮಂದಿ ಈ ಉದ್ದಿಮೆಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದಾರೆ ಅವರ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಜವಾಬ್ದಾರಿ ಅಧಿಕಾರಿಗಳದ್ದು. ಮುರು ದಿನಗಳ ಕಾಲ ರೇಷ್ಮೆ ಗೂಡಿನ ಮಾರುಕಟ್ಟೆ ಮುಚ್ಚಿದ್ದರಿಂದ ಎಷ್ಟೊಂದು ಜೀವನದ ಮೇಲೆ ಪರಿಣಾವ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ರೈತರು ಮತ್ತು ರೀಲರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿರಲು ಸಾಧ್ಯವಿಲ್ಲ. ಇಬ್ಬರಿಗೂ ಅನಾನುಕೂಲವಾದ್ದನ್ನು ಸರಿಪಡಿಸಬೇಕು. ರೇಷ್ಮೆ ಆಯುಕ್ತರಿಗೆ ಇಲ್ಲಿನ ಪರಿಸ್ಥಿತಿ ಹಾಗೂ ಸಮಸ್ಯೆಗಳನ್ನು ವಿವರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ, ಇಮ್ತಿಯಾಜ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ರಂಗೋಲಿ ಸ್ಪರ್ಧೆ

0

ನಗರದ ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗದಿಂದ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಶುಕ್ರವಾರ ಸಂಜೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರಥಮ ಬಹುಮಾನವನ್ನು ರೂಪ ನಾಗರಾಜ್, ದ್ವಿತೀಯ ಬಹುಮಾನವನ್ನು ದಿವ್ಯಾ ಮಂಜುನಾಥ್, ಮಂಜುಳಾ ಮುರಳಿ ಮತ್ತು ತೃತೀಯ ಬಹುಮಾನವನ್ನು ಸುಮಾ ಹಾಗೂ ದಿವ್ಯಾ ಅವರಿಗೆ ಪದ್ಮಶಾಲಿ ಸಂಘದಿಂದ ನೀಡಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಂದ್ ಯಶಸ್ವಿ

0

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಶುಕ್ರವಾರ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರೇಷ್ಮೆ ಗೂಡಿನ ಮಾರುಕಟ್ಟೆ, ತಾಲ್ಲೂಕು ಕಚೇರಿ, ಬಸ್ ನಿಲ್ದಾಣ, ಬ್ಯಾಂಕ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ಗೆ ಸಹಕರಿಸಿದರು. ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಬಂದ್ಗೆ ಬೆಂಬಲಿಸಿದರು. ನಗರದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ರೈತ ಸಂಘ ಹಾಗೂ ಹಸಿರುಸೇನೆಯ ಪುಟ್ಟಣ್ಣಯ್ಯ ಬಣ, ಕೋಡಿಹಳ್ಳಿ ಚಂದ್ರಶೇಖರ್ ಬಣ, ತಾಲ್ಲೂಕು ಬಿಜೆಪಿ ಘಟಕ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲಯನ್ ಯುವಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪಕ್ಷಾತೀತವಾಗಿ ಬೈಕ್ ರ್ಯಾಲಿ ನಡೆಸಿ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯನ್ನು ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ಬಂದ್ ಆಚರಿಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ಬಂದ್ ಆಚರಿಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.

ಬಸ್ ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು ಜಯಲಲಿತಾ ಪ್ರತಿಕೃತಿಯನ್ನು ದಹನ ಮಾಡಿ ಘೋಷಣೆ ಕೂಗಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಾರಾಯಣಸ್ವಾಮಿ, ತಾದೂರು ಮಂಜುನಾಥ್, ವೇಣುಗೋಪಾಲ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ಕನ್ನಡ ರಕ್ಷಣಾ ವೇದಿಕೆಯ(ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಸಂತಕುಮಾರ್, ಮಂಜುನಾಥ್, ನಾರಾಯಣಸ್ವಾಮಿ, ರಾಜೇಶ್, ಸಯ್ಯದ್ ಬಾಬಾ, ಸೈಕಲ್ ಮಂಜುನಾಥ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸತೀಶ್, ರೂಪಸಿ ರಮೇಶ್, ವಿ.ಕೃಷ್ಣ, ಪುರುಷೋತ್ತಮ್, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ದ ವೆಂಕಟರೋಣಪ್ಪ, ದೇವರಾಜ್, ಲಯನ್ಯುವಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು, ಲಕ್ಷ್ಮೀಪತಿ, ಪುರುಷೋತ್ತಮ್, ರಾಜಶೇಖರ್, ನವಾಜ್, ಕ್ರೆಸೆಂಟ್ ತಮೀಮ್ಪಾಷ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.