Home Blog Page 449

ಪ್ರೇಮಿ ಮಣ್ಣಿನ ಗಣಪ

0

ಶಿಡ್ಲಘಟ್ಟದ ಅಂಜನಿ ಬಡಾವಣೆಯಲ್ಲಿ ಸತತವಾಗಿ ಐದನೇ ವರ್ಷ ಗಜಪಡೆಯ ಯುವಕರ ಸಂಘದವರು ಪರಿಸರ ಪ್ರೇಮಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿದ್ದು, ಮೈಕ್ ಸೆಟ್ ಹಾಕಿ ಶಬ್ಧಮಾಲಿನ್ಯವನ್ನೂ ಮಾಡದೆ ಬಡಾವಣೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.

ಇ-ಹರಾಜು ಪದ್ದತಿಯ ಕುರಿತಂತೆ ರೈತರು ಮತ್ತು ರೀಲರುಗಳ ನಡುವಿನ ಭಿನ್ನಾಭಿಪ್ರಾಯ

0

ಇ-ಹರಾಜು ಪ್ರಕ್ರಿಯೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿದ್ದು ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿನ ಇ-–ಹರಾಜು ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಿರುವ ಇ–ಹರಾಜು ಪದ್ದತಿಯನ್ನು ಕೈಬಿಡಬೇಕು ಎಂದು ಸ್ಥಳೀಯ ರೀಲರುಗಳು ನೀಡಿದ್ದ ಮನವಿಯ ಮೇರೆಗೆ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ರೈತರ ಹಾಗೂ ರೀಲರ್ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಇ – ಹರಾಜು ಪ್ರಕ್ರಿಯೆಯ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಅವರು ಮಾತನಾಡಿದರು.
ತಾಂತ್ರಿಕ ಯುಗದಲ್ಲಿ ಎಲ್ಲೆಡೆಯೂ ಬದಲಾವಣೆ ಆಗುವಾಗ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ. ಇ–ಹರಾಜಿನಿಂದ ರೈತರು ಸೇರಿದಂತೆ ರೀಲರ್ಗಳಿಗೆ ಲಾಭವಿದ್ದು ಹೊಸ ತಂತ್ರಜ್ಞಾನಕ್ಕೆ ಎಲ್ಲರೂ ಹೊಂದಿಕೊಳ್ಳಬೇಕು ಎಂದರು.
ಇ–ಹರಾಜು ಪ್ರಕ್ರಿಯೆಯಲ್ಲಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಜರುಗಿಸಲಾಗುವುದು. ತಾಲ್ಲೂಕಿನ ಬಹುತೇಕ ರೀಲರ್ಗಳು ಅವಿದ್ಯಾವಂತರಾಗಿದ್ದು ಇ–ಹರಾಜಿನಲ್ಲಿ ಮೊಬೈಲ್ ಮೂಲಕ ಬಿಡ್ ಮಾಡಲಾಗುವುದಿಲ್ಲ ಹಾಗಾಗಿ ಶಾಲೆಗೆ ಹೋಗುವ ಮಕ್ಕಳನ್ನು ಶಾಲೆಗೆ ರಜೆ ಹಾಕಿಸಿ ಮಾರುಕಟ್ಟೆಗೆ ಕರೆತಂದು ಬಿಡ್ ಮಾಡಿಸಬೇಕು ಎಂಬ ರೀಲರ್ಗಳ ಸಮಸ್ಯೆಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಇ–ಹರಾಜಿನಲ್ಲಿ ಬಿಡ್ ಮಾಡಲು ಸೂಕ್ತ ಸಿಬ್ಬಂದಿ ನೇಮಿಸಿಕೊಡುವುದಾಗಿ ಭರವಸೆ ನೀಡಿದರು. ಆದರೆ ಕೆಲವು ರೀಲರ್ಗಳು ಇದ್ಯಾವದಕ್ಕೂ ಒಪ್ಪದೇ ಕೂಡಲೇ ಇ–ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಇಲ್ಲವಾದಲ್ಲಿ ಸೋಮವಾರ ಮಾರುಕಟ್ಟೆಯ ಮುಂಭಾಗ ರೀಲರ್ಗಳೆಲ್ಲಾ ಸೇರಿ ಮುಷ್ಕರ ಮಾಡುವುದಾಗಿ ಹೇಳಿ ಸಭೆಯಿಂದ ಹೊರ ನಡೆದರು.
ಇ–ಹರಾಜಿನ ಪರ ನಿಂತ ರೈತರು: ಮಾರುಕಟ್ಟೆಯಲ್ಲಿ ಇ–ಹರಾಜು ಪದ್ದತಿಯನ್ನು ಜಾರಿಗೊಳಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರ ಫಲವಾಗಿ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭಿಸಿ ಮೂರೂವರೆ ತಿಂಗಳಾಗಿದೆ.
ಇದರಿಂದ ಈ ಹಿಂದೆ ಮಾರುಕಟ್ಟೆಯಲ್ಲಿ ಮದ್ಯವರ್ತಿಗಳಿಂದ ರೈತರಿಗೆ ಆಗುತ್ತಿದ್ದ ಮೋಸ ತಡೆಗಟ್ಟಿದಂತಾಗಿದೆ. ತಾವು ಬೆಳೆದ ಗೂಡಿಗೆ ಉತ್ತಮ ಧರ ಸೇರಿದಂತೆ ಸಮಯಕ್ಕೆ ಸರಿಯಾಗಿ ಹಣ ಪಡೆದು ವಾಪಸ್ಸಾಗುವ ಸ್ಥಿತಿಯಿದೆ.
ಶಿಡ್ಲಘಟ್ಟ ಮಾತ್ರವಲ್ಲದೇ ರಾಜ್ಯದ ರಾಮನಗರ, ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿಯೂ ಕೂಡಾ ಇ-–ಹರಾಜು ಪ್ರಾರಂಭವಾಗಿ ಸುಗಮವಾಗಿ ನಡೆಯುತ್ತಿದ್ದು, ಅದೇ ಮಾದರಿಯಲ್ಲ ಇಲ್ಲಿಯೂ ಪ್ರಾರಂಭವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆಯುತ್ತಿದ್ದು, ಮಾರುಕಟ್ಟೆಯಲ್ಲಿಯೂ ಕೂಡಾ ಈ ಪದ್ದತಿಯನ್ನು ಅಳವಡಿಸಿರುವುದು ಉತ್ತಮ. ರೈತರಿಗೂ ಕೂಡಾ ವೈಜ್ಞಾನಿಕವಾಗಿ ಜಾಗೃತಿ ಮೂಡುತ್ತಿದ್ದು ರೈತರು ಮಾರುಕಟ್ಟೆ ಗೂಡು ತೆಗೆದುಕೊಂಡು ಬಂದು ನಿರಾಯಾಸವಾಗಿ ವಾಪಸ್ಸು ಹೋಗುವಂತಾಗಿದೆ. ಯಾವುದೇ ಕಾರಣಕ್ಕೂ ಇ–-ಹರಾಜು ರದ್ದುಪಡಿಸಬಾರದು. ಒಂದು ವೇಳೆ ರದ್ದುಪಡಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರೈತರೆಲ್ಲಾ ಸೇರಿ ಉಗ್ರ ಹೋರಾಟಗಳನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಹವಾಲು ಮಂಡಿಸಿದರು.
ಇ–ಹರಾಜು ನಿಲ್ಲಿಸಬೇಕು ಎಂದ ರೀಲರ್ಗಳು: ರೀಲರುಗಳ ಸಭೆಯಲ್ಲಿ ಇ-–ಹರಾಜು ಪದ್ದತಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಗೂಡುಗಳನ್ನು ಖರೀದಿ ಮಾಡಲು ಸಾದ್ಯವಾಗುತ್ತಿಲ್ಲ. ಕೆಲವೊಮ್ಮೆ ನಾವು ಎಷ್ಟು ಲಾಟುಗಳಿಗೆ ಬಿಡ್ ಮಾಡುತ್ತೇವೊ ಅಷ್ಟು ಲಾಟುಗಳು ನಮಗೆ ಸಿಗುತ್ತವೆ. ಕೆಲವೊಮ್ಮೆ ಒಂದು ಲಾಟು ಸಹ ಸಿಗುವುದಿಲ್ಲ. ಗೂಡು ಹೆಚ್ಚಾಗಿ ಸಿಕ್ಕಾಗ ಹಣಕಾಸಿನ ತೊಡಕು ಉಂಟಾಗುತ್ತದೆ. ಸಿಗದಿದ್ದಾಗ ನಾವು ತಂದ ಹಣ ಹಾಗೆ ವಾಪಸ್ ತೆಗೆದುಕೊಂಡು ಹೋಗಬೇಕಾಗುತ್ತದೆ.
ನಗರದ ಶೇ. ೮೦ ರಷ್ಟು ಜನರು ಇದೇ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು ನಮಗೆ ಕಾರ್ಮಿಕರು ಸಿಗದೇ ಕುಟುಂಬದವರೆಲ್ಲರೂ ಇದೇ ಕಸುಬಿನಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ೪೦ ವರ್ಷಗಳಿಂದ ಗೂಡು ಖರೀದಿ ಮಾಡಿಕೊಂಡು ಬರುತ್ತಿರುವ ರೀಲರುಗಳಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದೇವೆ. ಮೊಬೈಲ್ಗಳ ಮೂಲಕ ಹರಾಜು ಬಿಡ್ ಮಾಡಲು ಬರುವುದಿಲ್ಲ ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವಂತಹ ಮಕ್ಕಳನ್ನು ಕರೆದುಕೊಂಡು ಬಂದು ಹರಾಜಿನಲ್ಲಿ ಭಾಗವಹಿಸಬೇಕು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಮಾರುಕಟ್ಟೆಯಲ್ಲಿ ತುಂಬಾ ತಡವಾಗುವುದರಿಂದ ಗುಣಮಟ್ಟದ ನೂಲು ಬಿಚ್ಚಾಣಿಕೆ ಆಗುತ್ತಿಲ್ಲ. ರೇಷ್ಮೆಯ ನೂಲನ್ನು ೨ ಸಾವಿರ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ನಾವು ವ್ಯಾಪಾರಸ್ಥರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಡ ರೀಲರುಗಳು ಉಳಿಯಬಹುದು, ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳು ಉಳಿಯುವುದು ಕಷ್ಟಕರವಾಗಿದೆ. ಇ-–ಹರಾಜು ಪದ್ದತಿಯನ್ನು ರದ್ದುಗೊಳಿಸಿ ಮೊದಲಿನಂತೆ ಹರಾಜು ಕೂಗಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.
ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆದ ಸಭೆ ವಿಫಲ: ರೈತರು ಹಾಗೂ ರೀಲರುಗಳೊಂದಿಗೆ ಚರ್ಚೆ ಮಾಡಿದ ಜಿಲ್ಲಾಧಿಕಾರಿಗಳು ಎರಡೂ ಕಡೆಯ ಮುಖಂಡರುಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸೋಣವೆಂದು ಮನವೊಲಿಸಲು ಯತ್ನಸಿದರು.
ಮಾರುಕಟ್ಟೆಯಲ್ಲಿ ರೀಲರುಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರೀಲರುಗಳಿಗೆ ಅನುಕೂಲವಾಗುವಂತೆ ಸಿಬ್ಬಂದಿಯನ್ನು ನೇಮಕ ಮಾಡಿ ಹರಾಜು ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಹರಾಜಿನ ಸಮಯ ಬದಲಾವಣೆ ಮಾಡಲು ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರೂ ಇದ್ಯಾವದಕ್ಕೂ ಒಪ್ಪದ ರೀಲರುಗಳು ನಮಗೆ ಯಾವುದೇ ಕಾರಣಕ್ಕೂ ಇ-–ಹರಾಜು ಪ್ರಕ್ರಿಯೆ ಬೇಕಿಲ್ಲ ಈ ಕೂಡಲೇ ಸ್ಥಗಿತಗೊಳಿಸಿ ಇಲ್ಲವಾದಲ್ಲಿ ಮುಂದಿನ ಸೋಮವಾರ ಮಾರುಕಟ್ಟೆಯ ಮುಂಭಾಗ ತಾಲ್ಲೂಕಿನಲ್ಲಿರುವ ಎಲ್ಲಾ ರೀಲರ್ಗಳು ಒಟ್ಟಾಗಿ ಮುಷ್ಕರ ನಡೆಸುವುದಾಗಿ ಹೇಳಿ ಸಭೆಯಿಂದ ಹೊರನಡೆದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎಸ್.ಆರ್.ಪ್ರಭಾಕರ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಶಿವಣ್ಣ, ವೇಣು, ಅಬ್ಲೂಡು ದೇವರಾಜ್, ರೀಲರ್ಗಳಾದ ಯೂಸುಫ್, ಅಕ್ಮಲ್ಪಾಷ, ಅನ್ವರ್ಪಾಷ, ಸಮೀವುಲ್ಲಾ, ಸೈಯ್ಯದ್, ನಾಗನರಸಿಂಹ, ಡಿ.ಎಂ.ಜಗದೀಶ್ವರ್, ರಾಮಕೃಷ್ಣಪ್ಪ, ರೆಹಮಾನ್, ಅಜೀಜ್ಸಾಬ್ ಮತ್ತಿತರರು ಹಾಜರಿದ್ದರು.

ಮುತ್ತೂರು ರೈತರಿಗೆ ಹಣ್ಣಿನ ಗಿಡಗಳು

0

ಜಿಲ್ಲೆಯಾದ್ಯಂತ ಸುಮಾರು ಐದು ಸಾವಿರ ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸಿರುವುದಾಗಿ ಟ್ರೀಸ್ ಫಾರ್ ಫ್ರೀ ಸಂಸ್ಥೆಯ ಜಾನೆಟ್ ಯಜ್ಞೇಶ್ವರಮ್ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಕೋರಮಂಗಲದ ರೋಟರಿ ಸಂಸ್ಥೆ ಮತ್ತು ಆರ್ಚರ್ಡ್ ಸಂಸ್ಥೆಗಳ ನೆರವಿನಿಂದ 200 ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.
ಹಣ್ಣಿನ ಮರಗಳು ಬೆಳೆಯುವುದರಿಂದ ಮಾನವರಿಗಷ್ಟೇ ಅಲ್ಲದೆ ಪಶು ಪಕ್ಷಿ ಕೀಟಗಳಿಗೂ ಅನುಕೂಲ. ಒಂದೆಡೆ ಪರಿಸರ ಕಾಪಾಡುವತ್ತ ಇಡುವ ಹೆಜ್ಜೆ ಇದಾಗಿದ್ದು, ಮತ್ತೊಂದೆಡೆ ಜೀವಿಗಳಿಗೆ ಆಹಾರ ಒದಗಿಸುವ ಪ್ರಕ್ರಿಯೆಯೂ ಇದಾಗಿದೆ. ಇದುವರೆಗೂ ನಮ್ಮ ಸಂಸ್ಥೆಯಿಂದ 58 ಸಾವಿರ ಗಿಡಗಳನ್ನು ಈ ರೀತಿಯಾಗಿ ವಿತರಿಸಿದ್ದೇವೆ. ಕೋರಮಂಗಲದ ರೋಟರಿ ಸಂಸ್ಥೆ ಮತ್ತು ಆರ್ಚರ್ಡ್ ಸಂಸ್ಥೆಗಳು ತಲಾ 100 ಗಿಡಗಳನ್ನು ಪ್ರಾಯೋಜಿಸಿದ್ದಾರೆ. ಮುತ್ತೂರು ಗ್ರಾಮದಲ್ಲಿ ಮುಂದಿನ ವರ್ಷಗಳಲ್ಲಿ ಈ ಗಿಡಗಳು ಮರಗಳಾಗಿ ಹಸುರು ವಾತಾವರಣದೊಂದಿಗೆ ಹಕ್ಕಿ ಕೀಟಗಳ ವಾಸಸ್ಥಾನವೂ ಆಗಲಿ. ಲಿಚಿ, ನೆಲ್ಲಿಕಾಯಿ, ನೇರಳೆ ಹಣ್ಣು ಮೊದಲಾದ ಗಿಡಗಳನ್ನು ನೀಡಿದ್ದು, ಅದು ರೈತರಿಗೆ ಆದಯ ಮೂಲವೂ ಆಗಲೆಂಬುದು ನಮ್ಮ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮದಲ್ಲಿರುವ ಮಹಿಳಾ ಹೊಲಿಗೆ ಕೇಂದ್ರಕ್ಕೆ ಕೋರಮಂಗಲದ ರೋಟರಿ ಸಂಸ್ಥೆಯವರು ನೂತನ ಮಾದರಿಯ ಹೊಲಿಗೆ ಯಂತ್ರಗಳನ್ನು ನೀಡಿದರು.
‘ಮುತ್ತೂರು ಗ್ರಾಮದ ಮಹಿಳೆಯರು ತಯಾರಿಸುವ ಬ್ಯಾಗುಗಳಿಗೆ ಬೇಡಿಕೆಯಿದೆ. ಅವರು ಆರ್ಥಿಕವಾಗಿ ಇನ್ನಷ್ಟು ಸಬಲರಾಗಲೆಂಬ ಉದ್ದೇಶದಿಂದ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದೇವೆ’ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಶಂಭು ಶರ್ಮ ತಿಳಿಸಿದರು.
ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಗ್ರಾಮದ ಕೆಂಪೇಗೌಡ, ರೋಟರಿ ಸಂಸ್ಥೆಯ ಎನ್.ಡಿ.ಪ್ರಸಾದ್, ರಾಜಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್, ನಮ್ಮೂರು ನಮ್ಮ ಜಿಲ್ಲೆಗಾಗಿ… ಪರಿಶೀಲಿಸಿ

0

ಇದೊಂದು ಜಿಲ್ಲೆಯ ವಿಶಿಷ್ಠ ಅಂಚೆ ಕಛೇರಿ. ಇದು ಇರುವುದು 1,478 ಮೀಟರ್ ಎತ್ತರದಲ್ಲಿ. ವಿಶೇಷವೆಂದರೆ ಈ ಅಂಚೆ ಕಛೇರಿಗೆ ದೇಶದ ನಾನಾ ಭಾಗಗಳಿಂದ ಪತ್ರಗಳು ಬರುತ್ತವೆ. ಎಲ್ಲೆಡೆ ಜನರಿಗೆ ಪತ್ರಗಳು ಬಂದರೆ ಇಲ್ಲಿ ಅಂಚೆ ಕಛೇರಿಗೇ ಪತ್ರಗಳು ಬರುತ್ತವೆ.
ಈ ಅಂಚೆ ಕಛೇರಿಯಿರುವುದು ಜಿಲ್ಲೆಯ ನಂದಿ ಬೆಟ್ಟದ ಮೇಲೆ, ಯೋಗನಂದೀಶ್ವರಸ್ವಾಮಿ ದೇವಸ್ಥಾನದ ಬಳಿ. ಈ ಅಂಚೆ ಕಛೇರಿಯ ‘ನಂದಿ’ ಆಕಾರದ ಠಸ್ಸೆಯ ಗುರುತಿಗಾಗಿ ಬೇಡಿಕೆಯಿಟ್ಟು ದೇಶದ ನಾನಾ ಭಾಗದಿಂದ ಪೋಸ್ಟ್ ಕಾರ್ಡುಗಳನ್ನು ಲಕೋಟೆಯಲ್ಲಿಟ್ಟು, ಜೊತೆಯಲ್ಲಿ ತಮ್ಮ ಸ್ವವಿಳಾಸದ ಅಂಚೆ ಚೀಟಿ ಲಗತ್ತಿಸಿರುವ ಲಕೋಟೆಯೊಂದಿಗೆ ಕಳಿಸುತ್ತಾರೆ. ಇಲ್ಲಿನ ಪೋಸ್ಟ್ ಮಾಸ್ಟರ್ ಸುರೇಶ್ ಅವರು ಕಳಿಸಿರುವ ಪೋಸ್ಟ್ ಕಾರ್ಡ್ಗಳಿಗೆ ಸ್ಪೆಷಲ್ ಕ್ಯಾನ್ಸಲೇಷನ್ ಎಂದೇ ಕರೆಯುವ ನಂದಿ ಗುರುತಿನ ಸೀಲ್ ಹಾಕಿ ಕಳುಹಿಸುತ್ತಾರೆ.

ದೇಶದ ನಾನಾ ಭಾಗಗಳಿಂದ ಸ್ಪೆಷಲ್ ಕ್ಯಾನ್ಸಲೇಷನ್ ಅಥವಾ ಠಸ್ಸೆ ಗುರುತಿನ ಬೇಡಿಕೆಯಿಟ್ಟು ಬರೆದ ಪತ್ರಗಳನ್ನು ಪೋಸ್ಟ್ ಮಾಸ್ಟರ್ ಸುರೇಶ್ ತೋರಿಸುತ್ತಿರುವುದು.
ದೇಶದ ನಾನಾ ಭಾಗಗಳಿಂದ ಸ್ಪೆಷಲ್ ಕ್ಯಾನ್ಸಲೇಷನ್ ಅಥವಾ ಠಸ್ಸೆ ಗುರುತಿನ ಬೇಡಿಕೆಯಿಟ್ಟು ಬರೆದ ಪತ್ರಗಳನ್ನು ಪೋಸ್ಟ್ ಮಾಸ್ಟರ್ ಸುರೇಶ್ ತೋರಿಸುತ್ತಿರುವುದು.

ಪ್ರವಾಸಿಗರನ್ನು ಮತ್ತು ಅಂಚೆ ಸಂಗ್ರಹಕಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ 1951 ರಲ್ಲಿಯೇ ದೇಶದ ಚಾರಿತ್ರಿಕ, ಸಾಂಸ್ಕೃತಿಕ ಸ್ಥಳಗಳನ್ನು ಪ್ರತಿನಿಧಿಸುವ ಸ್ಪೆಷಲ್ ಕ್ಯಾನ್ಸಲೇಷನ್ ಅಥವಾ ಠಸ್ಸೆಯನ್ನು ಆಯ್ದ ಅಂಚೆ ಕಛೇರಿಗಳಲ್ಲಿ ಪ್ರಾರಂಭಿಸಲಾಯಿತು. ನಂತರ ಹಂತಹಂತವಾಗಿ ಎಲ್ಲಾ ರಾಜ್ಯಗಳ ಆಯ್ದ ಅಂಚೆ ಕಛೇರಿಗಳಲ್ಲಿ ರೂಢಿಗೆ ತರಲಾಯಿತು. ನಮ್ಮ ರಾಜ್ಯದಲ್ಲಿ 38 ವಿವಿಧ ಅಂಚೆ ಕಛೇರಿಗಳಲ್ಲಿ ಸ್ಪೆಷಲ್ ಕ್ಯಾನ್ಸಲೇಷನ್ ಇದೆ. ಜಿಲ್ಲೆಯಲ್ಲಿ ನಂದಿ ಬೆಟ್ಟದ ಅಂಚೆ ಕಛೇರಿಯಲ್ಲಿ ಮಾತ್ರ ಸ್ಪೆಷಲ್ ಕ್ಯಾನ್ಸಲೇಷನ್ ಸೌಲಭ್ಯವಿದೆ. ಅದಕ್ಕಾಗಿ ಬೇಡಿಕೆಯಿಟ್ಟು ಕೆಲವರು ಪತ್ರ ಬರೆದರೆ, ಇನ್ನು ಕೆಲವರು ಇಲ್ಲಿಗೆ ಬಂದಾಗ ಖುದ್ದಾಗಿ ಪೋಸ್ಟ್ ಮಾಡುತ್ತಾರೆ.
ನಂದಿ ಬೆಟ್ಟಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ತಮ್ಮ ದೇಶಗಳಿಗೆ ಇಲ್ಲಿಂದ ಪೋಸ್ಟ್ ಕಾರ್ಡ್ ಅಥವಾ ಪತ್ರವನ್ನು ಕಳುಹಿಸುವುದು ರೂಢಿಯಿದೆ.
1,478 ಮೀಟರ್ ಎತ್ತರದಲ್ಲಿ ನಂದಿ ಬೆಟ್ಟದ ಮೇಲೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಚೆ ಕಛೇರಿ
1,478 ಮೀಟರ್ ಎತ್ತರದಲ್ಲಿ ನಂದಿ ಬೆಟ್ಟದ ಮೇಲೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಚೆ ಕಛೇರಿ

‘ನಮ್ಮ ದೇಶದ ಸುಮಾರು 135 ಅಂಚೆ ಕಚೇರಿಗಳಲ್ಲಿ ಈ ರೀತಿಯ ಸ್ಪೆಷಲ್ ಕ್ಯಾನ್ಸಲೇಷನ್ ಇದೆ. ಅಂಚೆ ಚೀಟಿ ಸಂಗ್ರಹಣೆಯಂತೆ ವಿಶಿಷ್ಠ ಠಸ್ಸೆ ಇರುವ ಕಾರ್ಡ್ಗಳನ್ನು ಸಂಗ್ರಹಿಸುವವರಿದ್ದಾರೆ. ವಿದೇಶಿ ಪ್ರವಾಸಿಗರು ತಾವು ಹೋದ ಸ್ಥಳಗಳಿಂದ ಕಾರ್ಡ್ಗಳನ್ನು ತಮ್ಮೂರಿಗೆ ಪೋಸ್ಟ್ ಮಾಡುವ ಹವ್ಯಾಸವಿರುತ್ತದೆ. ಅಂಥಹವರು ನಮ್ಮ ನಂದಿ, ಬೇಲೂರು, ಹಳೇಬೀಡು, ಹಂಪಿ ಮುಂತಾದೆಡೆ ಅಲ್ಲಿನ ವೈಶಿಷ್ಠ್ಯತೆಯ ಮುದ್ರೆ ಇರುವ ಠಸ್ಸೆ ಇಷ್ಟಪಡುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಸ್ಪೆಷಲ್ ಕ್ಯಾನ್ಸಲೇಷನ್ ಇರುವ ಅಂಚೆ ಕಚೇರಿಗಳಿರುವುದು ನಮ್ಮ ರಾಜ್ಯದಲ್ಲಿ ಎಂಬುದು ನಮಗೆಲ್ಲಾ ಹೆಮ್ಮೆ. ನಂದಿ ಬೆಟ್ಟದ ಸ್ಪೆಷಲ್ ಕ್ಯಾನ್ಸಲೇಷನ್ ಪರಿಚಯಿಸಲ್ಪಟ್ಟಿದ್ದು ಜೂನ್ 9. 1989 ರಂದು’ ಎನ್ನುತ್ತಾರೆ ಅಂಚೆ ಚೀಟಿ ಸಂಗ್ರಹಕಾರ ಮೇಲೂರು ಪ್ರಭಾಕರ್.
‘ನಮ್ಮದು ಪುಟ್ಟ ಅಂಚೆ ಕಛೇರಿ. ಬಹಳ ಹಳೆಯದು. ಆದರೂ ಇಲ್ಲಿನ ವಿಶಿಷ್ಠ ನಂದಿ ಗುರುತಿನ ಠಸ್ಸೆಯ ಆಕರ್ಷಣೆಯಿಂದ ವಿದೇಶಿಯರು ಬರುತ್ತಾರೆ. ಹಲವಾರು ರಾಜ್ಯಗಳಿಂದ ಪತ್ರ ಬರೆಯುತ್ತಾರೆ. ಅವರ ಆಸಕ್ತಿ ಕಂಡು ನಾನೂ ಸಹಕಾರ ನೀಡುತ್ತೇನೆ. ನಂದಿ ಬೆಟ್ಟದಲ್ಲಿ ಹಲವಾರು ಆಕರ್ಷಣೆಗಳ ಮಧ್ಯೆ ನಮ್ಮ ಅಂಚೆ ಕಛೇರಿಯ ‘ನಂದಿ’ ಗುರುತೂ ಒಂದು ಆಕರ್ಷಣೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪೋಸ್ಟ್ ಮಾಸ್ಟರ್ ಸುರೇಶ್.

ಕಾವೇರಿ ವಿವಾದ

0

ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿ ತಾಲ್ಲೂಕಿನ ಸೊಣ್ಣೇನಹಳ್ಳಿ ಗೇಟ್ ಬಳಿ ಸೋಮವಾರ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭುಗಿಲೆದ್ದ ಗಲಭೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ಲಾರಿಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ.

ನಗರಸಭೆ ಗಾದಿಯ ಮೇಲೆ ಹಲವರ ಕಣ್ಣು

0

ಸ್ಥಳಿಯ ನಗರಸಭೆಯ ಮೊದಲ ಅವಧಿ ಸೆಪ್ಟೆಂಬರ್ 17 ಕ್ಕೆ ಮುಕ್ತಾಯವಾಗಲಿದೆ. ಮುಂದಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಸೆಪ್ಟೆಂಬರ್ 16ಕ್ಕೆ ನಿಗದಿಪಡಿಸಲಾಗಿದೆ. ಆಕಾಂಕ್ಷಿಗಳು ಅಧಿಕಾರ ಗಿಟ್ಟಿಸಲು ರಾಜಕೀಯ ಕಸರತ್ತು ನಡೆಸಲಾರಂಭಿಸಿದ್ದಾರೆ.
ನಗರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ಇದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನ ಕಾಂಗ್ರೆಸ್ಗೆ ಲಭಿಸುವುದು ಖಚಿತವಾದರೂ, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್ನ ಒಬ್ಬ ಅಭ್ಯರ್ಥಿಯನ್ನು ತಮ್ಮೆಡೆಗೆ ಸೆಳೆದು ಅಧಿಕಾರವನ್ನು ಪಡೆಯುವ ತಂತ್ರಗಾರಿಕೆಯನ್ನು ಜೆಡಿಎಸ್ ಪಕ್ಷದವರು ನಡೆಸಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ, ಗಾಣಿಕ, ಗೊಲ್ಲ, ಪದ್ಮಶಾಲಿ, ಬೆಸ್ತ ಸಮುದಾಯದವರು ಮೀಸಲಿನ ಕಾರಣ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ನಿಂದ ಮೂವರು ಪುರುಷರು, ನಾಲ್ವರು ಮಹಿಳಾ ಸದಸ್ಯರು ಪ್ರಭಲ ಆಕಾಂಕ್ಷಿಗಳಾಗಿದ್ದರೆ, ಜೆಡಿಎಸ್ನಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳಾ ಸದಸ್ಯೆ ಶಾಸಕರ ಬೆಂಬಲದಿಂದ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದಾರೆ.
ವಿಧಾನ ಸಭೆಯ ಚುನಾವಣೆಗೆ ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದರಿಂದ ತಮಗೆ ಅಧಿಕಾರ ನೀಡಿದಲ್ಲಿ ನಗರ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಪಕ್ಷವನ್ನು ಸದೃಢಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ದೃಷ್ಟಿಯಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮುಂದಿನ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದಲ್ಲಿನ ಪೈಪೋಟಿಯಲ್ಲಿ ಯಾರ ಹೆಸರನ್ನು ಸೂಚಿಸುವರು ಎಂಬುದು ನಿಗೂಢವಾಗಿದೆ. ಇತ್ತ ಜೆಡಿಎಸ್ ಪಾಳೆಯದಲ್ಲೂ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಹಣದ ಹೊಳೆ ಹರಿಯುವ ಎಲ್ಲ ಸೂಚನೆಗಳೂ ಕಂಡುಬರುತ್ತಿದೆ. ಅಧ್ಯಕ್ಷ ಸ್ಥಾನವನ್ನು ಗುರಿಯಾಗಿಟ್ಟುಕೊಂಡವರು ತಮ್ಮನ್ನು ಆಯ್ಕೆ ಮಾಡಲು ಇತರ ಸದಸ್ಯರ ವಿಶ್ವಾಸ ಗಿಟ್ಟಿಸಲು ಸಕಲ ಪ್ರಯತ್ನಗಳಲ್ಲೂ ನಿರತರಾಗಿದ್ದಾರೆ.

ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವ

0

ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಮಂದಿರ ಜ್ಞಾನಮಂದಿರದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾರಿ ಸೆಪ್ಟೆಂಬರ್ 14 ರ ಬುಧವಾರದಂದು ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗಿದೆ.
ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೂಂಡ ಎಲ್ಲರಿಗೂ ಶ್ರೀ ಲಕ್ಷೀ ದೇವಿಯ ವಿಗ್ರಹವನ್ನು ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಇರುವ ಕಾರಣ ಈ ಕೂಡಲೇ ಭಕ್ತಾದಿಗಳು ದೇವಾಲಯದಲ್ಲಿ ತಮ್ಮ ಹೆಸರುಗಳನ್ನು ನಮೂದಿಸಬೇಕೆಂದು ಕೋರಲಾಗಿದೆ.
ಸೆಪ್ಟೆಂಬರ್ 15 ರ ಗುರುವಾರ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸುಮಂಗಲಿಯರಿಂದ ವೈಭವದ ಶೋಭಾ ಯಾತ್ರೆ ಹಾಗೂ ಸಾಯಿಬಾಬಾರವರ ಪಲ್ಲಕಿಯೊಂದಿಗೆ ಗ್ರಾಮ ದೇವತೆ ಶ್ರೀ ಲಕ್ಷೀ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಗ್ರಾಮ ಪ್ರದಕ್ಷಿಣೆಯನ್ನು ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಗೆ ವಿವಿಧ ಸಾಂಸ್ಕೃತಿಕ ತಂಡಗಳಿಂದ ಭರತನಾಟ್ಯ, ಮನರಂಜನಾ ಕಾರ್ಯಕ್ರಮ, ಸಾಹಸಮಯ ಕರಾಟೆ ಪ್ರದರ್ಶನ, ರಸಸಂಜೆ ಕಾರ್ಯಕ್ರಮ, ಹಾಡು ಮತ್ತು ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು ಎಲ್ಲರೂ ಪಾಲ್ಗೂಳ್ಳಬೇಕೆಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ಹಾಗೂ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.

ರೀಲರುಗಳ ಮುಷ್ಕರ ಪ್ರಾರಂಭ : ಗೂಡು ಖರೀದಿಸದೆ ಮಾರುಕಟ್ಟೆಯ ಹೊರಗೆ ಧರಣಿ ಕುಳಿತ ರೀಲರುಗಳು

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದ್ದ ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಸೋಮವಾರ ನೂಲು ಬಿಚ್ಚಾಣಿಕೆದಾರರು(ರೀಲರುಗಳು) ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ಧರಣಿ ಕುಳಿತರು. ರೇಷ್ಮೆ ಗೂಡನ್ನು ಮಾರಲು ತಂದಿದ್ದ ರೈತರ ಮನವೊಲಿಸಿದ ಅಧಿಕಾರಿಗಳು ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಕಳುಹಿಸಿಕೊಟ್ಟರು.
ಇ-–ಹರಾಜು ಪದ್ದತಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಗೂಡುಗಳನ್ನು ಖರೀದಿ ಮಾಡಲು ಸಾದ್ಯವಾಗುತ್ತಿಲ್ಲ. ಕೆಲವೊಮ್ಮೆ ನಾವು ಎಷ್ಟು ಲಾಟುಗಳಿಗೆ ಬಿಡ್ ಮಾಡುತ್ತೇವೊ ಅಷ್ಟು ಲಾಟುಗಳು ನಮಗೆ ಸಿಗುತ್ತವೆ. ಕೆಲವೊಮ್ಮೆ ಒಂದು ಲಾಟು ಸಹ ಸಿಗುವುದಿಲ್ಲ. ಗೂಡು ಹೆಚ್ಚಾಗಿ ಸಿಕ್ಕಾಗ ಹಣಕಾಸಿನ ತೊಡಕು ಉಂಟಾಗುತ್ತದೆ. ಸಿಗದಿದ್ದಾಗ ನಾವು ತಂದ ಹಣ ಹಾಗೆ ವಾಪಸ್ ತೆಗೆದುಕೊಂಡು ಹೋಗಬೇಕಾಗುತ್ತದೆ.
ನಗರದ ಶೇ. ೮೦ ರಷ್ಟು ಜನರು ಇದೇ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು ನಮಗೆ ಕಾರ್ಮಿಕರು ಸಿಗದೇ ಕುಟುಂಬದವರೆಲ್ಲರೂ ಇದೇ ಕಸುಬಿನಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ೪೦ ವರ್ಷಗಳಿಂದ ಗೂಡು ಖರೀದಿ ಮಾಡಿಕೊಂಡು ಬರುತ್ತಿರುವ ರೀಲರುಗಳಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದೇವೆ. ಮೊಬೈಲ್ಗಳ ಮೂಲಕ ಹರಾಜು ಬಿಡ್ ಮಾಡಲು ಬರುವುದಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವಂತಹ ಮಕ್ಕಳನ್ನು ಕರೆದುಕೊಂಡು ಬಂದು ಹರಾಜಿನಲ್ಲಿ ಭಾಗವಹಿಸಬೇಕು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ರೀಲರುಗಳು ದೂರಿದರು.

ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯದೇ ಖಾಲಿಯಾಗಿರುವ ಜಾಲರಿಗಳು.
ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯದೇ ಖಾಲಿಯಾಗಿರುವ ಜಾಲರಿಗಳು.

ಮಾರುಕಟ್ಟೆಯಲ್ಲಿ ತುಂಬಾ ತಡವಾಗುವುದರಿಂದ ಗುಣಮಟ್ಟದ ನೂಲು ಬಿಚ್ಚಾಣಿಕೆ ಆಗುತ್ತಿಲ್ಲ. ರೇಷ್ಮೆಯ ನೂಲನ್ನು ೨ ಸಾವಿರ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ನಾವು ವ್ಯಾಪಾರಸ್ಥರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಡ ರೀಲರುಗಳು ಉಳಿಯಬಹುದು, ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳು ಉಳಿಯುವುದು ಕಷ್ಟಕರವಾಗಿದೆ. ಇ-–ಹರಾಜು ಪದ್ದತಿಯನ್ನು ರದ್ದುಗೊಳಿಸಿ ಮೊದಲಿನಂತೆ ಹರಾಜು ಕೂಗಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ವೆಂಕಟರಾವ್ ಮತ್ತು ಮೊಮಿನ್ ರೀಲರುಗಳಿಗೆ ಇ–ಹರಾಜು ಪದ್ಧತಿಯ ಲೋಪದೋಷಗಳನ್ನು ಸರಿಪಡಿಸಲಾಗುವುದು. ಹರಾಜು ಕೂಗದೆ ಮುಷ್ಕರ ನಡೆಸಿದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ರೀಲರುಗಳ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ರೀಲರುಗಳು ಇ–ಹರಾಜು ನಿಲ್ಲಿಸುವವರೆಗೂ ನಾವು ಗೂಡು ಕೊಳ್ಳುವುದಿಲ್ಲ. ಹಳೆಯ ಪದ್ಧತಿಯಾದ ಬಾಯಿಂದ ಹರಾಜು ಕೂಗುವುದನ್ನು ನಾಳೆಯಿಂದಲೇ ಪ್ರಾರಂಭಿಸಿ, ನಾವು ಗೂಡು ಕೊಳ್ಳುತ್ತೇವೆಂದು ಪಟ್ಟು ಹಿಡಿದರು.
‘ಕೊಳ್ಳೇಗಾಲ ಮತ್ತು ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಇ–ಹರಾಜು ಪದ್ಧತಿ ಒಂದು ವರ್ಷದಿಂದ ಜಾರಿಯಲ್ಲಿದ್ದು, ಯಾವುದೇ ಸಮಸ್ಯೆಗಳಿಲ್ಲ. ಈಚೆಗೆ ಜಿಲ್ಲಾಧಿಕಾರಿಗಳೂ ಕೂಡ ರೈತರು ಮತ್ತು ರೀಲರುಗಳ ಸಮಸ್ಯೆಯನ್ನು ಆಲಿಸಿದ್ದಾರೆ. ಈ ದಿನದ ಬೆಳವಣಿಗೆಯನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು. ಇ–ಹರಾಜಿನ ಲೋಪದೋಷಗಳನ್ನು ಸರಿಪಡಿಸಲಾಗುವುದು’ ಎಂದು ಜಂಟಿ ನಿರ್ದೇಶಕ ವೆಂಕಟರಾವ್ ತಿಳಿಸಿದರು.
‘ರೈತರು ಮತ್ತು ರೀಲರುಗಳು ರೇಷ್ಮೆ ಗೂಡಿನ ವ್ಯವಹಾರದಲ್ಲಿ ಎರಡು ಕಣ್ಣುಗಳಿದ್ದಂತೆ. ಯಾರದೇ ಸಮಸ್ಯೆಯಿದ್ದರೂ ಮತ್ತೊಬ್ಬರು ಸ್ಪಂದಿಸಬೇಕು. ಅಧಿಕಾರಿಗಳೂ ಸಹ ಇಬ್ಬರನ್ನೂ ಸಮಾನವಾಗಿ ಕಾಣಬೇಕು. ದೊಡ್ಡ ರೈತರು ಹಾಗೂ ದೊಡ್ಡ ಮಟ್ಟದ ರೀಲರುಗಳಿಗೆ ತೊಂದರೆಯಾಗದು. ಆದರೆ ಸಣ್ಣ ರೈತರು ಮತ್ತು ಚಿಕ್ಕಮಟ್ಟದಲ್ಲಿ ಗೃಹಕೈಕಾರಿಕೆ ಹೊಂದಿರುವವರೇ ತೊಂದರೆಯನ್ನು ಅನುಭವಿಸುತ್ತಾರೆ. ಅವರಿಗೆ ಅನ್ಯಾಯವಾಗದಂತೆ ಹರಾಜನ್ನು ನಡೆಸಿ’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ರೀಲರುಗಳಾದ ಎಸ್.ಸಮೀವುಲ್ಲಾ, ಜಿ.ರಹಮಾನ್, ಎಂ.ರಾಮಕೃಷ್ಣ, ಜೆ.ಜೆ.ಸೀನಪ್ಪ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಬಕ್ಷು, ಅನ್ಸರ್ ಪಾಷ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಛಲದಿಂದ ಸಾಧನೆ ಮಾಡಿ

0

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಕ್ರೀಡಾಪಟುಗಳು ಛಲದಿಂದ ಸಾಧನೆ ಮಾಡಿದಾಗ ಮಾತ್ರ ಗುರಿಯ ಯಶಸ್ಸು ಮುಟ್ಟಲು ಸಾಧ್ಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಆನಂದ್ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಗುರುವಾರ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡೆ ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸ್ಪರ್ಧೆಗೆ ಮಹತ್ವ ಬರುತ್ತದೆ. ಹಾಗಾಗಿ ಕ್ರೀಡೆಗಳಲ್ಲಿ ಇನ್ನಷ್ಟು ಉತ್ತಮ ಅಭ್ಯಾಸವನ್ನು ಮುಂದುವರೆಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ನಗರದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಾಲಕರ ಹಾಗೂ ಬಾಲಕಿಯರ ವಾಲೀಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು ವಿಜೇತ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.
ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಎಚ್.ವಿ.ಶಿವಾರೆಡ್ಡಿ, ಉಪನ್ಯಾಸಕರಾದ ಕೆ.ಚಿತ್ತಯ್ಯ, ಡಿ.ಲಕ್ಷ್ಮಯ್ಯ, ಸಿ.ವೆಂಕಟಶಿವಾರೆಡ್ಡಿ, ಶಿವಶಂಕರ್, ದೀಪಕ್, ಎಚ್.ಸಿ.ಮುನಿರಾಜು, ಎ.ಲೋಕೇಶ್, ಮಂಗಳಗೌರಿ, ರಾಜ್ಯ ಪರಿಷತ್ ಸದಸ್ಯರಾದ ಕೆ.ಎನ್.ಸುಬ್ಬಾರೆಡ್ಡಿ, ರಮಾ, ಸಾವಿತ್ರಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ಶಾಲೆಗಳು ಮುಚ್ಚುವುದೆಂದರೆ ಪ್ರಜಾಪ್ರಭುತ್ವದ ಅಂತಃಸತ್ವವೇ ಸತ್ತುಹೋದಂತೆ

0

ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಓದುವುದು ಹೆಚ್ಚೂ ಕಡಿಮೆ ನಿಂತೇ ಹೋಗುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡದಲ್ಲಿ ಕಲಿತೆ ಎಂದು ಹೇಳುವವರು ಸಿಗದಂತಾಗಲಿದೆ. ಅಷ್ಟು ವೇಗವಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚುವುದೆಂದರೆ ಪ್ರಜಾಪ್ರಭುತ್ವದ ಅಂತಃಸತ್ವವೇ ಸತ್ತುಹೋದಂತೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಡಾಲ್ಫಿನ್ ಪದವಿ ಪೂರ್ವ ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪುಸ್ತಕಗಳನ್ನು ಕೊಂಡು ಕಪಾಠಿನಲ್ಲಿಟ್ಟರೆ ಕನ್ನಡ ಬೆಳೆಯುವುದಿಲ್ಲ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಯುವಜನತೆಯಲ್ಲಿ ಬೆಳೆಸದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ. ಮೌಲ್ಯಯುತವಾದ ಕೃತಿಗಳನ್ನು ಓದಲಿಕ್ಕೆ ವಿದ್ಯಾರ್ಥಿ ಯುವಜನರು ತಯಾರಿದ್ದಾರೆ. ಅವರಿಗೆ ಬೇಕಾದ ವೇದಿಕೆಗಳನ್ನು ನಾವು ಕಲ್ಪಿಸಬೇಕಿದೆ ಎಂದು ಹೇಳಿದರು.
ಕಾಲೇಜುಗಳಲ್ಲಿ ಅಂಕಗಳಿಕೆಯ ಕಡೆ ಒತ್ತು ನೀಡಲಾಗುತ್ತಿದೆ. ಅಂಕಗಳಿಕೆ ಮುಖ್ಯವಾದರೂ ಅದು ಕೇವಲ ಒಂದು ಕಾಲಿನ ನಡಿಗೆ ಮಾತ್ರ. ಕೇವಲ ರ್ಯಾಂಕ್ ಅಥವಾ ಅಂಕಗಳಿಸಿದ ವಿದ್ಯಾರ್ಥಿಗಳು ದೇಶವನ್ನು ಕಟ್ಟಲಾರರು. ವಿದ್ಯೆಯೊಂದಿಗೆ ವಿವೇಕವೂ ಇರಬೇಕು. ಒಳ್ಳೆಯ ಶಿಕ್ಷಣ ಪಡೆದಾಗ ಕೌಶಲ್ಯವಂತರಾಗುತ್ತಾರೆ. ಕೌಶಲ್ಯವಂತರಾದಷ್ಟೇ ಸಾಲದು. ಇವುಗಳೊಂದಿಗೆ ವ್ಯಕ್ತಿತ್ವ ಬೆಳೆಸುವ ಶಿಕ್ಷಣದ ಅಗತ್ಯವಿದೆ. ವಿದ್ಯೆ ಮತ್ತು ವ್ಯಕ್ತಿತ್ವ ಎರಡೂ ಒಟ್ಟಾದಾಗ ಮಾತ್ರ ಸುಸಂಸ್ಕೃತ ದೇಶ ಕಟ್ಟಲು ಸಾಧ್ಯ. ಕೇವಲ ನಾಗರಿಕರಾದರಷ್ಟೇ ಸಾಲದು ಸುಸಂಸ್ಕೃತರಾಗಬೇಕು.
ದಿಟ್ಟ ವ್ಯಕ್ತಿತ್ವ, ಪಕ್ವತೆಯುಳ್ಳ ವಿವೇಕಿಗಳಾಗದಿದ್ದರೆ ಇರುವ ಕೌಶಲ್ಯವನ್ನು ಸರಿಯಾಗಿ ಬಳಸಲು ಸಾಧ್ಯವಾಗದು. ಅದಕ್ಕಾಗಿಯೇ ಹೆಚ್ಚು ಓದಿದವರೂ ಆತ್ಮಹತ್ಯೆ ಮಾಡಿಕೊಳ್ಳುವ ನಿದರ್ಶನಗಳು ನಮ್ಮ ಮುಂದಿವೆ. ಅದನ್ನು ತಪ್ಪಿಸಲು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೂಡ ಕನ್ನಡ ಸಾಹಿತ್ಯ, ಇತಿಹಾಸ, ಪರಂಪರೆಯ ಪಠ್ಯಗಳನ್ನು ನಿಗದಿ ಪಡಿಸಬೇಕು. ಆಗ ಪೂರ್ಣ ವ್ಯಕ್ತಿತ್ವ ಬೆಳೆಯುತ್ತದೆ ಎಂದು ನುಡಿದರು.
ಪುಸ್ತಕ ಓದಿ ಕೆಟ್ಟವರಿಲ್ಲ. ಓದು ಆಲೋಚನೆಗೆ ಹಚ್ಚುತ್ತದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳಲ್ಲಿ ಸ್ಪಂದನಶೀಲತೆ ಹೆಚ್ಚುತ್ತದೆ. ಅವರ ಜ್ಞಾನವೂ ಬೆಳೆಯುತ್ತದೆ, ಮೌಲ್ಯಯುತವಾದ ಮನಸ್ಸಿಗೆ ಶಿಕ್ಷಣ ಕೊಡುವ ವೇದಿಕೆಗಳು ಶಾಲಾ ಕಾಲೇಜುಗಳಲ್ಲಿ ನಿರ್ಮಾಣವಾಗಬೇಕು ಎಂದರು.
ಸಾಹಿತಿ ಸ.ರಘುನಾಥ ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯಕ್ರಮಗಳ ವಿವರ ಮತ್ತು ಉದ್ದೇಶವನ್ನು ವಿವರಿಸಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹತ್ತು ವಿದ್ಯಾರ್ಥಿನಿಯರಲ್ಲಿ ಪ್ರಥಮ ಸ್ಥಾನ ಪಡೆದ ಸಂಪದ, ದ್ವಿತೀಯ ಸ್ಥಾನ ಪಡೆದ ದೀಕ್ಷಿತ ಮತ್ತು ತೃತೀಯ ಸ್ಥಾನ ಪಡೆದ ಚೈತ್ರಾ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಉಪಾಧ್ಯಕ್ಷ ಎನ್.ಅಶೋಕ್, ಸಾಹಿತಿ ಸ.ರಘುನಾಥ, ಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ಎಸ್.ವಿ.ನಾಗರಾಜರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರತಿ ಕಾಲೇಜಿನಲ್ಲೂ ‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’:ಶಿಕ್ಷಣ ಇಲಾಖೆಯ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ. ಇನ್ನು ಮುಂದೆ ಪ್ರತಿ ಕಾಲೇಜಿನಲ್ಲೂ ‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’ ಇರಬೇಕೆಂದು ಆದೇಶ ಮಾಡುತ್ತಾರೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತಿ ವರ್ಷ ಆಯಾ ಕಾಲೇಜುಗಳಿಗೆ 60 ಸಾವಿರ ರೂಗಳವರೆಗೆ ಎಂಟು ಕಾರ್ಯಕ್ರಮಗಳು ನಡೆಸಲು ನೀಡಲಾಗುವುದು. ಅದರ ಮೂಲಕ ಆಯಾ ಕಾಲೇಜುಗಳಲ್ಲಿ ನಿರಂತರವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆಶಯ ವ್ಯಕ್ತಪಡಿಸಿದರು.

ಗಣೇಶ ವಿಸರ್ಜನೆ

0

ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಬೇಕು ಹಾಗೂ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವ ಕಾರ್ಯಕ್ಕೆ ಕಡಿವಾಣ ಹಾಕಿ ಹಗಲು ಹೊತ್ತಿನಲ್ಲಿ ವಿಸರ್ಜನೆ ಮೆರವಣಿಗೆ ನಡೆಸಬೇಕೆಂದು ಪೊಲೀಸರು ತಾಕೀತು ಮಾಡಿದ ಕಾರಣ ಬುಧವಾರ ಸಂಜೆಯ ವೇಳೆಗೆ ಬಹುತೇಕ ಗಣೇಶ ವಿಸರ್ಜನೆಯನ್ನು ನಡೆಸಲಾಯಿತು.
ಸಾರ್ವಜನಿಕವಾಗಿ ಇಟ್ಟಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹನುಮಂತಪುರ ಗೇಟ್ ಬಳಿಯ ಕೃಷ್ಣಸ್ವಾಮಿ ದೇವಾಲಯದ ಬಳಿಯ ಕುಂಟೆಯನ್ನು ಪೊಲೀಸರು ನಿಗದಿಪಡಿಸಿದ್ದು, ಸುತ್ತ ಕಟಕಟೆಯನ್ನು ನಿರ್ಮಿಸಿದ್ದಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರನೇ ದಿನ ಅಂದರೆ ಬುಧವಾರ ಬಹುತೇಕರು ವಿಸರ್ಜಿಸಿದರು. ಸುಮಾರು 45 ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಡೋಲು, ತಮ್ಮಟೆ ಸದ್ದಿನೊಂದಿಗೆ ಯುವಕರು ಕುಣಿದು ಕುಪ್ಪಳಿಸುತ್ತಾ ಸಾಗಿದರು. ಬಣ್ಣಗಳನ್ನು ಪರಸ್ಪರ ಹಾಕಿಕೊಂಡು ಹೋಳಿ ಹಬ್ಬವನ್ನು ನೆನಪಿಸಿದರು. ಕೆಲವರದ್ದು ವಾಲಗದೊಂದಿಗಿನ ಮಂಗಳಸ್ವರವಾದರೆ, ಕೆಲವರದ್ದು ಅಬ್ಬರದ ವಾದ್ಯಗಳು. ಅಲ್ಲಲ್ಲಿ ಪಟಾಕಿ ಸಿಡಿಸುತ್ತಾ, ಚಂದಾ ಎತ್ತುತ್ತಾ, ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುತ್ತಾ, ಟ್ರಾಕ್ಟರ್ಗಳಲ್ಲಿ ಗಣೇಶನ ಮೂರ್ತಿಗಳನ್ನಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಇನ್ನೂ ನಗರದಲ್ಲಿ ಸುಮಾರು 20 ಗಣೇಶ ಮೂರ್ತಿಗಳನ್ನು ಇಟ್ಟಿದ್ದು ಶುಕ್ರವಾರ ಸಂಜೆ ಐದನೇ ದಿನ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಯಾಶೀಲ ಶಿಕ್ಷಕವೃಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಹೆಚ್ಚಿಸಲಿ

0

ಸರ್ಕಾರಿ ಶಾಲೆಗಳಲ್ಲಿ ಓದಿ ಪ್ರಸಿದ್ಧರಾದ ಅನೇಕ ಪ್ರತಿಭಾವಂತರಿದ್ದಾರೆ. ಇಂದಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಸಾಧಕರಾಗಲು ಅಧ್ಯಾಪಕರು, ಪೋಷಕರು ಒಟ್ಟಾಗಿ ಸೇರಿ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಲ್ಕೆಜಿ ಯುಕೆಜಿ ಮಕ್ಕಳಿಗೆ ‘ಮಕ್ಕಳ ಮನೆ’, ಆಡಲು ‘ಮಕ್ಕಳ ಕುಟೀರ’ ಹಾಗೂ ಶಿಕ್ಷಕ ಎಂ.ಜೆ.ರಾಜೀವ್ಗೌಡ ಅವರು ಮಕ್ಕಳ ಕಲಿಕೆಗಾಗಿ ಸಿದ್ಧಪಡಿಸಿರುವ ‘ಸಂಯೋಜಿತೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಹಲವಾರು ಮಂದಿ ದಾನಿಗಳು ಕೈಜೋಡಿಸುತ್ತಿದ್ದಾರೆ. ಅವರ ನೆರವಿನಿಂದ, ಕ್ರಿಯಾಶೀಲ ಶಿಕ್ಷಕವೃಂದ ಹಾಗೂ ಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಖಾಸಗಿ ಶಾಲೆಗಳಿಗಿಂತ ಕಲಿಕೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಮೇಲುಗೈ ಸಾಧಿಸಬೇಕು. ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರದ್ದು ಪ್ರಮುಖ ಪಾತ್ರವಿದೆ ಎಂದು ಹೇಳಿದರು.
ಶಾಲೆಯ ಆವರಣದಲ್ಲಿನ ‘ಮಕ್ಕಳಮನೆ’ಯನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರೆ, ‘ಮಕ್ಕಳ ಕುಟೀರ’ವನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಉದ್ಘಾಟಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎನ್.ಲಕ್ಷ್ಮೀನಾರಾಯಣರೆಡ್ಡಿ, ಮಕ್ಕಳ ಕಲಿಕೆಗಾಗಿ ಸಿದ್ಧಪಡಿಸಿರುವ ‘ಸಂಯೋಜಿತೆ’ ಪುಸ್ತಕ ಬಿಡುಗಡೆ ಮಾಡಿದರು. ಎಲ್ಕೆಜಿ ಯುಕೆಜಿ ಮಕ್ಕಳ ಆಟದ ಮನೆಗೆ ಬೇಕಾಗುವ ಆಟದ ಸಾಮಗ್ರಿಗಳನ್ನು ನಾರ್ಥ್ ಈಸ್ಟ್ ಸುರೇಶ್ ನೀಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ರಾಜಶೇಖರ್ ಮಕ್ಕಳಿಗೆ ಬ್ಯಾಗ್ಗಳನ್ನು ವಿತರಿಸಿದರು. ‘ಸಂಯೋಜಿತೆ’ ಪುಸ್ತಕ ಪರಿಚಯವನ್ನು ಕೇಂದ್ರ ಕಸಾಪ ತರಬೇತಿ ಸಂಚಾಲಕ ಕೆ.ರಾಜಕುಮಾರ್ ಮಾಡಿಕೊಟ್ಟರು.
ಶಿಕ್ಷಕ ಎಂ.ಜೆ ರಾಜೀವಗೌಡ ‘ಸಂಯೋಜಿತೆ’ ಪುಸ್ತಕದ ಕುರಿತಾಗಿ ಮಾತನಾಡಿ, ‘ಒಂಚೂರು ಆಟ, ಒಂಚೂರು ಗಣಿತ, ಒಂಚೂರು ಭಾಷೆ’ ಎಂಬ ಉದ್ದೇಶದಿಂದ ಪುಸ್ತಕವನ್ನು ರೂಪಿಸಲಾಗಿದೆ. ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್(ಐಎಫ್ಎ) ಸಂಸ್ಥೆಯವರು ಈ ಪುಸ್ತಕವನ್ನು ಹೊರತರಲು ಒಂದು ಲಕ್ಷರೂಗಳನ್ನು ನೀಡಿದ್ದಾರೆ. ಐದು ನೂರು ಪುಸ್ತಕವನ್ನು ಮುದ್ರಣ ಮಾಡಿಸಿದ್ದು, ನಮ್ಮ ಶಾಲೆಯ 3,4,5 ಮತ್ತು 6 ನೇ ತರಗತಿಯ 150 ಮಕ್ಕಳು ಈ ಪ್ರಯೋಗಕ್ಕೆ ಒಳಪಡುತ್ತಾರೆ. ನಮ್ಮ ತಾಲ್ಲೂಕಿನ 6 ಶಾಲೆಗಳ ಶಿಕ್ಷಕರು ಈ ಪ್ರಯೋಗಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಕನ್ನಡ ಭಾಷೆಯ ಕಲಿಕೆಯನ್ನು ಗಟ್ಟಿಗೊಳಿಸುವುದರ ಮೂಲಕ ಗಣಿತ ಕಲಿಕೆಯನ್ನು ಸುಲಭಗೊಳಿಸುವ ಅಭ್ಯಾಸ ಪುಸ್ತಕವಿದು. ಗಣಿತದ ಮೂಲ ಪರಿಕಲ್ಪನೆಯನ್ನು ಅರ್ಥೈಸಲು ಅದಕ್ಕೆ ಸಂಬಂಧಿಸಿದ ಶಿಶುಗೀತೆಗಳು, ಜನಪದ ಹಾಡುಗಳು ಮತ್ತು ಮಕ್ಕಳ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಅನುಕ್ರಮ ಸಂಖ್ಯೆಗಳು, ಏರಿಕೆ ಇಳಿಕೆ, ಸ್ಥಾನ, ಸ್ಥಾನಬೆಲೆ, ದಶಮಾಂಶ ಹೀಗೆ ಕೆಲವೇ ಕೆಲವು ಗಣಿತದ ಪರಿಕಲ್ಪನೆಗಳನ್ನು ಮಾತ್ರ ಈ ಪುಸ್ತಕದ ಮೂಲಕ ಕಲಿಸಲು ಯತ್ನಿಸಲಾಗಿದೆ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಮಂಜುನಾಥ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಮುಖ್ಯ ಶಿಕ್ಷಕರಾದ ಸಿ.ಎಂ.ಮುನಿರಾಜು, ಎಸ್.ಶಿವಶಂಕರ್, ಶ್ರೀರಾಮಯ್ಯ, ಬಿ.ಈಶ್ವರ್, ನಾರಾಯಣಮ್ಮ ರಾಮಪ್ಪ, ಗುರುರಾಜರಾವ್, ಸುರೇಶ್, ಸುಮಾ ಮಂಜುನಾಥ್, ಶಂಕರ್, ಪಾರ್ಥಸಾರಥಿ, ಅರಿಕೆರೆ ಮುನಿರಾಜು, ಬಸಪ್ಪ, ಸಿದ್ದಲಿಂಗಪ್ಪ, ನರಸಿಂಹಯ್ಯ, ರಮೇಶ್, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹಳೇ ಆಸ್ಪತ್ರೆ ರಸ್ತೆಯಲ್ಲಿ ಶ್ರೀರಾಮ ಯುವಕರ ಸಂಘದಿಂದ 25ನೇ ವರ್ಷದ ಗಣೇಶೋತ್ಸವ

0

ಶಿಡ್ಲಘಟ್ಟದ ಹಳೇ ಆಸ್ಪತ್ರೆ ರಸ್ತೆಯಲ್ಲಿ ಶ್ರೀರಾಮ ಯುವಕರ ಸಂಘದಿಂದ 25ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ.

ಉಲ್ಲೂರುಪೇಟೆಯ ದುನಿಯಾ ಗೆಳೆಯರ ಬಳಗದ ವತಿಯಿಂದ 11ನೇ ವರ್ಷದ ಗಣೇಶೋತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ದುನಿಯಾ ಗೆಳೆಯರ ಬಳಗದ ವತಿಯಿಂದ 11ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ.

ಶ್ರೀರಾಮ ಭಜನೆ ಮಂದಿರದಲ್ಲಿ 46ನೇ ವರ್ಷದ ಗಣೇಶ ಮಹೋತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ 46ನೇ ವರ್ಷದ ಗಣೇಶ ಮಹೋತ್ಸವವನ್ನು ಆಚರಿಸಲಾಗುತ್ತಿದೆ.

ದೇಶದಪೇಟೆಯ ಶಾನುಭೋಗರ ಬೀದಿಯಲ್ಲಿನ ಗಣೇಶೋತ್ಸವ

0

ಶಿಡ್ಲಘಟ್ಟದ ದೇಶದಪೇಟೆಯ ಶಾನುಭೋಗರ ಬೀದಿಯಲ್ಲಿನ ಗಣೇಶೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಶಿಡ್ಲಘಟ್ಟದ ನೆಲ್ಲೀಮರದಹಳ್ಳಿಯಲ್ಲಿ ನಡೆಯುತ್ತಿರುವ ಗಣೇಶೋತ್ಸವ

0

ಶಿಡ್ಲಘಟ್ಟದ ಹೊರವಲಯದ ನೆಲ್ಲೀಮರದಹಳ್ಳಿಯಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆ, ರವಿಕೆ ಬಟ್ಟೆ ಮತ್ತು ತಾಂಬೂಲ ನೀಡಲಾಯಿತು.

ಶಿಡ್ಲಘಟ್ಟದ ಮಯೂರ ವೃತ್ತದ ವಿನಾಯಕ ಗೆಳೆಯರ ಬಳಗದಿಂದ 23ನೇ ವರ್ಷದ ಗಣೇಶೋತ್ಸವ

0

ಶಿಡ್ಲಘಟ್ಟದ ಮಯೂರ ವೃತ್ತದ ವಿನಾಯಕ ಗೆಳೆಯರ ಬಳಗದಿಂದ 23ನೇ ವರ್ಷದ ಗಣೇಶೋತ್ಸವದ ಆಚರಣೆ ನಡೆಯುತ್ತಿದೆ.

ಶಾಮಣ್ಣ ಬಾವಿ ಯುವಕರ ಸಂಘದ 28ನೇ ವರ್ಷದ ಗಣೇಶನ ಪೂಜೆ

0

ಶಿಡ್ಲಘಟ್ಟದ ಶಾಮಣ್ಣ ಬಾವಿ ಯುವಕರ ಸಂಘದ 28ನೇ ವರ್ಷದ ಗಣೇಶನ ಪೂಜೆಯು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದೆ.

ಜೌಗುಪೇಟೆಯ ಸ್ನೇಹ ಯುವಕರ ಸಂಘದ ವತಿಯಿಂದ 17ನೇ ವರ್ಷದ ಗಣೇಶೋತ್ಸವ

0

ಶಿಡ್ಲಘಟ್ಟದ ಜೌಗುಪೇಟೆಯ ಸ್ನೇಹ ಯುವಕರ ಸಂಘದ ವತಿಯಿಂದ 17ನೇ ವರ್ಷದ ಗಣೇಶೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ.