Home Blog Page 450

ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗದಿಂದ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗದಿಂದ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ಆಚರಿಸುತ್ತಿದ್ದು ಆರು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ನಗರದ ಜೌಗುಪೇಟೆಯಲ್ಲಿ ಪರಿಸರ ಗಣಪ

0

ನಗರದ ಜೌಗುಪೇಟೆಯಲ್ಲಿ ಕೆಲವು ಯುವಕರು ಸೇರಿಕೊಂಡು ಪರಿಸರ ಪ್ರೇಮಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಂಪೂರ್ಣ ಮಣ್ಣಿನಲ್ಲಿ ತಯಾರಾದ, ಕೃತಕ ಬಣ್ಣವೂ ಇಲ್ಲದ ಅಪ್ಪಟ ಪರಿಸರ ಪ್ರೇಮಿ ಗಣೇಶನನ್ನು ಪೂಜೆ ಮಾಡುತ್ತಿರುವುದಲ್ಲದೆ, ಪ್ರಸಾದ ವಿತರಿಸಲು ಅಡಿಕೆಯ ತಟ್ಟೆಗಳನ್ನು ಬಳಸುತ್ತಾ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವದ ಆಚರಣೆ ನಡೆಸಿದ್ದಾರೆ. ಯುವಕರಾದ ಮಿಥುನ್‌, ವಿನಯ್‌, ಗೌತಮ್‌, ನವೀನ್‌, ರಾಕೇಶ್‌, ಮಂಜೇಶ್‌ ಮತ್ತು ಮೋನಿಶ್‌, ಗಣಪತಿಯನ್ನು ಪರಿಸರಕ್ಕೆ ಹಾನಿಮಾಡದಂತೆ ಪೂಜೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಶಿಡ್ಲಘಟ್ಟದಲ್ಲಿ 50ಕ್ಕೂ ಹೆಚ್ಚು ಸಾರ್ವಜನಿಕ ಗಣೀಶೋತ್ಸವಗಳು

0

ನಗರದಲ್ಲಿ ಸುಮಾರು 50 ಸಾರ್ವಜನಿಕ ಗಣೇಶೋತ್ಸವಗಳು ನಡೆದಿದ್ದು, ಪ್ರಮುಖ ರಸ್ತೆಗಳು, ಬಡಾವಣೆಗಳು, ದೇವಾಲಯಗಳು, ಕಿರುರಸ್ತೆಗಳಲ್ಲಿ ವಿವಿಧ ಗಣೇಶ ಮಂಡಳಿಗಳು, ಯುವಕರ ಸಂಘಗಳು, ಪುಟಾಣಿ ಹುಡುಗರು ಪ್ರತಿಷ್ಠಾಪಿಸಿರುವ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ವಾಸವಿ ದೇವಾಲಯ ರಸ್ತೆಯ ವರಸಿದ್ಧಿ ವಿನಾಯಕ ಮಂಡಲಿಯಿಂದ 59ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸುತ್ತಿದ್ದರೆ, ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ನಡೆಸುತ್ತಿದ್ದಾರೆ. ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ 46 ನೇ ವರ್ಷದ ವಿಘ್ನೇಶ್ವರನ ಆಚರಣೆಯಾದರೆ, ಒಂದನೇ ನಗರ್ತಪೇಟೆಯ ಆಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿಯಿಂದ 40ನೇ ವರ್ಷದ ಪ್ರಯುಕ್ತ ಶಂಖಾರೂಢ ಗಣಪತಿಯನ್ನು ಪೂಜಿಸಲಾಗುತ್ತಿದೆ. ಜೌಗುಪೇಟೆಯ ಸ್ನೇಹ ಯುವಕರ ಸಂಘದ್ದು 17ನೇ ವರ್ಷದ್ದಾದರೆ, ಶಾಮಣ್ಣ ಬಾವಿ ಯುವಕರ ಸಂಘದಿಂದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ 28ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಮಯೂರ ವೃತ್ತದ ಗೆಳೆಯರ ಬಳಗದಿಂದ 23 ನೇ ವರ್ಷದ ಗಣೇಶನ ಉತ್ಸವ ನಡೆದಿದೆ.
ಇವುಗಳೊಂದಿಗೆ ಇನ್ನೂ ಹಲವಾರು ಸಂಘಗಳು, ಯುವಕರು, ಪುಟಾಣಿ ಹುಡುಗರು ಸೇರಿದಂತೆ ಹಲವಾರು ಮಂದಿ ಸಾಂಘಿಕವಾಗಿ ಗಣೇಶನನ್ನು ಇಟ್ಟಿದ್ದಾರೆ.
ಗಣೇಶೋತ್ಸವಗಳಲ್ಲಿ ಸ್ಥಳೀಯ ಮಕ್ಕಳ ಪ್ರತಿಭಾ ಪ್ರದರ್ಶನ, ರಂಗೋಲಿ ಸ್ಪರ್ಧೆಗಳು, ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಸಾದ ವಿನಿಯೋಗಗಳು ಸಂಜೆ ವೇಳೆಯಲ್ಲಿ ನಡೆಯುತ್ತಿವೆ.
ಸಾರ್ವಜನಿಕವಾಗಿ ಇಟ್ಟಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹನುಮಂತಪುರ ಗೇಟ್‌ ಬಳಿಯ ಕೃಷ್ಣಸ್ವಾಮಿ ದೇವಾಲಯದ ಬಳಿಯ ಕುಂಟೆಯನ್ನು ಪೊಲೀಸರು ನಿಗದಿಪಡಿಸಿದ್ದು, ಸುತ್ತ ಕಟಕಟೆಯನ್ನು ನಿರ್ಮಿಸಿದ್ದಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರನೇ ದಿನ ಅಂದರೆ ಬುಧವಾರ ಬಹುತೇಕರು ವಿಸರ್ಜಿಸಲಿದ್ದಾರೆ. ಸುಮಾರು 32 ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆಯಲ್ಲಿನ ದೊಂಗರ; ಪ್ರಯಾಣಿಕರಿಗೆ ಸದಾ ತೊಂದರೆ

0

ನಗರದ ಪೂಜಮ್ಮ ದೇವಾಲಯದ ಮುಂಭಾಗದ ಬೈಪಾಸ್ ರಸ್ತೆಯು ಅತ್ಯಂತ ಜನಸಂಚಾರದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಬಾವಿಯಂತೆ 15 ಅಡಿ ಆಳದ ದೊಂಗರವು ಮೂಡಿದ್ದು ನಾಗರಿಕರ ದೂರು ದುಮ್ಮಾನುಗಳು ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತಲುಪಿಸಿದರೂ, ಸಮಸ್ಯೆ ಪರಿಹಾರ ಕಂಡಿಲ್ಲ. ಈ ಬಗ್ಗೆ ಈ ಭಾಗದ ಜನರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು 15 ಅಡಿ ಆಳದಲ್ಲಿ ತ್ಯಾಜ್ಯ ನೀರು ಹರಿಯುವ ವ್ಯವಸ್ಥೆಯನ್ನು ನಗರದಲ್ಲಿ ಮಾಡಲಾಗಿದ್ದು, ಹಲವೆಡೆ ಈ ರೀತಿ ಮೇಲೆ ಮುಚ್ಚಿರುವ ಪ್ಲೇಟುಗಳು ಒಡೆದಿವೆ. ಅವನ್ನು ಹಲವೆಡೆ ಬದಲಿಸಿದರೂ ಈ ರಸ್ತೆಯಲ್ಲಿ ಮಾತ್ರ ಮೇಲಿನ ದೊಂಗರವು ಹಾಗೇ ಉಳಿದಿದೆ.
ಈ ರಸ್ತೆಯಲ್ಲಿ ಪ್ರತಿದಿನ ಶಾಲೆಗೆ ಹೋಗಲು ಸುಮಾರು ಎರಡು ಸಾವಿರ ಮಕ್ಕಳು ಓಡಾಡುತ್ತಾರೆ. ದಿಬ್ಬೂರಹಳ್ಳಿ, ಬಾಗೇಪಲ್ಲಿಗೆ ಹೋಗಲು ಇದೇ ಮುಖ್ಯ ಮಾರ್ಗವಾಗಿದ್ದು, ಸಿ.ಡಿ.ಪಿ.ಒ ಕಚೇರಿ ಕೂಡ ಇದರ ಮುಂಭಾದಲ್ಲಿಯೇ ಇದೆ. ಅತ್ಯಂತ ಜನ ಸಂಚಾರದ ಈ ರಸ್ತೆಯಲ್ಲಿ ಅದರಲ್ಲೂ ಕತ್ತಲಾದಾಗ ಮೃತ್ಯು ಕೂಪವಾಗಿ ಪರಿಣಮಿಸಿದೆ. ಸ್ಥಳೀಯರು ಈ ಹಳ್ಳದಲ್ಲಿ ಜನರು ಬೀಳದಂತೆ ಸುತ್ತ ಕಲ್ಲುಗಳನ್ನು ಜೋಡಿಸಿಟ್ಟಿದ್ದರೂ ಕತ್ತಲಲ್ಲಿ ಕಾಣದೆ ಅನೇಕರು ಬಿದ್ದು ಗಾಯಮಾಡಿಕೊಂಡ ನಿದರ್ಶನಗಳಿವೆ.
‘ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಈ ರಸ್ತೆಯ ದುರವಸ್ಥೆಯನ್ನು ಸರಿಪಡಿಸಲು ಕೋರಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪಿಡಬ್ಲೂಡಿ ಇಲಾಖೆಗೆ ತಿಳಿಸಿದರೆ ನಗರಸಭೆಗೆ ಸಂಬಂಧಪಟ್ಟಿರುವುದು ಎನ್ನುತ್ತಾರೆ. ನಗರಸಭೆಯವರು ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದ್ದು ಎಂದು ಜಾರಿಕೊಳ್ಳುತ್ತಿದ್ದಾರೆ. ಪ್ರತಿದಿನ ಇಲ್ಲಿ ಬೀಳುವವರ ಆರೈಕೆ ಮಾಡುವುದೇ ನಮ್ಮ ಕೆಲಸವಾಗಿದೆ. ಅರ್ಧ ರಸ್ತೆ ಹಳ್ಳಬಿದ್ದಿದೆ ಇದನ್ನು ಆದಷ್ಟು ಬೇಗ ಸರಿಪಡಿಸಬೇಕು’ ಎಂದು ಇಲ್ಲಿನ ಅಂಗಡಿಯೊಂದರ ಮಾಲಿಕ ಬೈರೇಗೌಡ ತಿಳಿಸಿದ್ದಾರೆ.

ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು

0

ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಸಾಂಸ್ಕೃತಿಕವಾಗಿ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮಾದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಗೌರವಿಸುವಂತಹ ಕೆಲಸವಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್. ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಣ್ಣಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಯುವಕರ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಮತ್ತು ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ವಿವಿಧ ಸಮುದಾಯದವರಿಗೆ ಅವರದೇ ಆದಂತಹ ಪೇಟೆಗಳನ್ನು ನಿರ್ಮಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ನಾಡಪ್ರಭು ಕೆಂಪೇಗೌಡರು ಸಮಾಜದ ಎಲ್ಲಾ ವರ್ಗಗಳ ಪ್ರೀತಿ ಗಳಿಸಿದ್ದರು. ಮುಂದಿನ ಪೀಳಿಗೆಗಾಗಿ ನೂರಾರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ ಅವರು ಬರೀ ಒಕ್ಕಲಿಗರಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಅವರು ಎಲ್ಲಾ ಸಮುದಾಯಗಳಿಗೆ ಸೇರಿದ ಐತಿಹಾಸಿಕ ಮಾಹಾಪುರುಷ.
ಸರ್ಕಾರದಿಂದ ಎಲ್ಲಾ ಸಮುದಾಯದರಿಗಾಗಿ ಒಂದೊಂದು ಜಯಂತಿ ಆಚರಿಸಲಾಗುತ್ತಿದೆಯಾದರೂ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸದಿರುವುದು ಒಕ್ಕಲಿಗ ಸಮುದಾಯಕ್ಕೆ ಒಂದು ನೋವಿನ ಸಂಗತಿ. ಹಾಗಾಗಿ ಒಕ್ಕಲಿಗರ ಸಂಘ, ಯುವಸೇನೆಯಂತಹ ಸಂಘಟನೆಗಳಿಂದ ಸರ್ಕಾರಕ್ಕೆ ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿ ಪತ್ರ ಚಳುವಳಿ ಆರಂಭಿಸುವ ಮೂಲಕ ಒತ್ತಡ ಹೇರಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಉಳಿದಂತೆ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಎಲ್. ಸತೀಶ್ ಮಾತನಾಡಿ, ಯಾವುದೇ ಒಂದು ಜಾತಿಯಿಂದ ಅಥವ ಒಂದು ಕಸುಬಿನಿಂದ ಈ ಸಮಾಜ ಉದ್ದಾರವಾಗದು. ಬದಲಿಗೆ ಎಲ್ಲಾ ಸಮುದಾಯಗಳ ಎಲ್ಲಾ ಕಸುಬಿಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ವಿಶ್ವಖ್ಯಾತಿ ಪಡೆದಿದೆ. ಅವರ ಕಾಲದಲ್ಲಿ ಅವರು ನಿರ್ಮಿಸಿದ ಕೆರೆ, ಕುಂಟೆ, ಕಲ್ಯಾಣಿಗಳಿಂದ ಬರೀ ಒಕ್ಕಲಿಗರು ಮಾತ್ರ ನೀರು ಬಳಸಲಿಲ್ಲ. ಎಲ್ಲಾ ವರ್ಗದ ಜನರು ಸಾಮರಸ್ಯವಾಗಿ ಜೀವಿಸುವ ಮೂಲಕ ಉತ್ತಮ ಸಮಾಜ ನಿರ್ಮಣಕ್ಕೆ ಅಡಿಪಾಯ ಹಾಕಿಕೊಟ್ಟಂತಹ ಇಂತಹ ಮಹಾನುಭಾವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸ್ಮರಿಸುವ ಮೂಲಕ ಜಯಂತಿ ಆಚರಣೆ ಮಾಡಬೇಕು ಎಂದರು.
ಕೆಂಪೇಗೌಡರ ಜಯಂತಿಗೆ ಸರ್ಕಾರಿ ರಜೆ ಬೇಡ, ಸರ್ಕಾರಿ ಗೌರವ ಮಾತ್ರ ಬೇಕು. ಒಕ್ಕಲಿಗರಾದ ನಾವುಗಳು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ಕೆ.ಎನ್. ಸುಬ್ಬಾರೆಡ್ಡಿ, ದೊಣ್ಣಹಳ್ಳಿ ಯುವಕರ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ. ವೆಂಕಟೇಶ್ಮೂರ್ತಿ, ಒಕ್ಕಲಿಗ ಯುವಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್. ವೆಂಕಟಸ್ವಾಮಿ, ನಗರಾಧ್ಯಕ್ಷ ಪುರುಷೋತ್ತಮ್, ರೈತ ಸಂಘದ ರವಿಪ್ರಕಾಶ್, ತಾದೂರು ಮಂಜುನಾಥ್, ದೊಣ್ಣಹಳ್ಳಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆ.ಲಕ್ಷ್ಮಿಪತಿ, ಉಪಾಧ್ಯಕ್ಷ ಡಿ.ವಿ. ಲೋಕೇಶ್ ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

0

ಗುರುಗಳನ್ನು ಗೌರವಿಸುವ ಗುರುವಂದನಾ ಕಾರ್ಯಕ್ರಮ ಒಂದು ಸತ್ಸಂಪ್ರದಾಯ. ಗುರು – ಶಿಷ್ಯ ಬಾಂಧವ್ಯ ಸ್ಥಿರವಾಗಿ ಮುಂದುವರಿಯಬೇಕು ಎಂದು ಮೇಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 2003–04ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುಪರಂಪರೆಯನ್ನು ಗೌರವಿಸುವ ಗುರುವಂದನೆ ಎಂಬ ವಿನೂತನ ಕಾರ್ಯಕ್ರಮವು ಭಾರತೀಯ ಮೌಲ್ಯ ಪ್ರತಿಪಾದಕವಾಗಿದೆ. ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ. ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ ಎಂದು ಹೇಳಿದರು.
ಶಿಕ್ಷಕರಾದ ನಸ್ರೀನ್ತಾಜ್, ಎಲ್.ಅಶ್ವತ್ಥನಾರಾಯಣ, ಆರ್.ಟಿ.ವೇಣುಗೋಪಾಲ್, ಜಿ.ಸಿ.ರವಿಕುಮಾರ್, ಅಜರತ್ ತಬಸ್ಸುಮ್, ಜಿ.ಆರ್.ರಂಗಪ್ಪ, ಕೆ.ನರಸಿಂಹಮೂರ್ತಿ, ಆರ್.ನಾಗರಾಜ್, ಬಿ.ಆರ್.ಸರೋಜಮ್ಮ, ಆಶಾ, ಟಿ.ವಿಜಯ್ಕುಮಾರ್, ಶಿವಕುಮಾರ್ಬಾಬು ಪಟ್ಟೇದ್, ವಿದ್ಯಾ ವಿ.ಶಣೈ, ಪ್ರಸಾದ್, ಗೋವಿಂದರಾಜು, ಕೆ.ವಿ.ಶ್ರೀನಿವಾಸ್, ಸರಸ್ವತಮ್ಮ, ಲೀಲಾವತಮ್ಮ, ಗಿರಿಜಮ್ಮ, ರುಕ್ಮಿಣಿಯಮ್ಮ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಇಬ್ಬರು ಶಿಕ್ಷಕರಿಗೆ ‘ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ

0

ತಾಲ್ಲೂಕಿನ ಇಬ್ಬರು ಶಿಕ್ಷಕರು ಈ ಬಾರಿಯ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಉಪ್ಪಕುಂಟಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬುಡ್ಡೂಸಾಬಿ ಮತ್ತು ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಂ.ಎನ್. ಮಂಜುನಾಥ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುತ್ತಿರುವ ಶಿಕ್ಷಕರು.
ಬುಡ್ಡೂಸಾಬಿ: ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಮೂಲದ ಬುಡ್ಡೂಸಾಬಿ ಅವರು 26 ವರ್ಷಗಳ ಸುಧೀರ್ಘ ಸೇವೆಯನ್ನು ತಾಲ್ಲೂಕಿನ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಲ್ಲಿಸಿದ್ದಾರೆ. ದೇವನಾಯಕನಹಳ್ಳಿ, ಗಡಿಮಿಂಚೇನಹಳ್ಳಿ ಮತ್ತು ಉಪ್ಪುಕುಂಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡಿರುವ ಇವರು ಕಳೆದ 14 ವರ್ಷಗಳಿಂದ ಉಪ್ಪುಕುಂಟಹಳ್ಳಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ಉಪ್ಪುಕುಂಟಹಳ್ಳಿಯ ಶಾಲೆಯ ಸ್ಥಳವನ್ನು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವಿನೊಂದಿಗೆ ಸರಿಪಡಿಸಿ ಕಾಂಪೌಡ್ ಹಾಕಿಸಿ ಗಿಡಗಳನ್ನು ನೆಟ್ಟು ನಂದನವನವನ್ನಾಗಿಸಿದ್ದಾರೆ. ಏಕೋಪಾಧ್ಯಾಯ ಶಾಲೆಯಾಗಿದ್ದಾಗ ಇವರಿದ್ದ ಶಾಲೆಗೆ ಮಕ್ಕಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೊಳಿಸಿದ ಕಾರಣ ಉತ್ತಮ ಎಸ್ಡಿಎಂಸಿ ಮತ್ತು ಗುಣಾತ್ಮಕ ಶಿಕ್ಷಣ ಪ್ರಶಸ್ತಿ ಲಭಿಸಿದೆ. 2012–13ನೇ ಸಾಲಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಮಿತ್ರ ಜಿಲ್ಲಾ ಪ್ರಶಸ್ತಿ ವಿಭಾಗದಲ್ಲಿ ‘ಕಿತ್ತಳೆ ಶಾಲೆ’ ಪ್ರಶಸ್ತಿ ಲಭಿಸಿದೆ. ಶಾಲೆಗೆ ಬೇಕಾದ ಗೇಟ್, ಧ್ವಾರ, ಕುಡಿಯುವ ನೀರು, ಧ್ವಜಸ್ಥಂಭ, ನಲಿಕಲಿ ಕೊಠಡಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ನೆರವು ಪಡೆದು ಮಾಡಿಸಿರುವುದು ಇವರ ಹೆಗ್ಗಳಿಕೆ.

ಎಂ.ಎನ್. ಮಂಜುನಾಥ್
ಎಂ.ಎನ್. ಮಂಜುನಾಥ್

ಎಂ.ಎನ್. ಮಂಜುನಾಥ್: ತಾಲ್ಲೂಕಿನ ಮೇಲೂರು ಮೂಲದ ಎಂ.ಎನ್.ಮಂಜುನಾಥ್, ಚಿಕ್ಕಬಳ್ಳಾಪುರದ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಿಪಿಇಡಿ ವ್ಯಾಸಂಗ ಮಾಡಿ 1995 ರಲ್ಲಿ ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. 21 ವರ್ಷಗಳಿಂದ ಅಲ್ಲಿಯೇ ಕಾರ್ಯನಿರ್ವಹಿತ್ತಿದ್ದಾರೆ.
ಭರ್ಜಿ ಎಸೆತದಲ್ಲಿ ರಾಜ್ಯಮಟ್ಟವನ್ನು ಇವರ ಶಿಷ್ಯರು ಪ್ರತಿನಿಧಿಸಿದ್ದರು. ವಿಭಾಗಮಟ್ಟದಲ್ಲಿ ರಾಮನಗರ ಮತ್ತು ಚಿತ್ರದುರ್ಗದಲ್ಲಿ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ವಾಲಿಬಾಲ್ ಆಡಿದ್ದರು. ಪ್ರತಿಭಾ ಕಾರಂಜಿಯಲ್ಲಿ ಆರು ಭಾರಿ ಇವರ ತಂಡ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದಾರೆ. ಕೋಲಾಟ ಮತ್ತು ಜಾನಪದ ನೃತ್ಯ ಪ್ರಕಾರದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉಡುಪಿ, ಗುಲ್ಭರ್ಗಾ, ಬಿಜಾಪುರ, ಬಾಗಲಕೋಟೆ, ಮಂಡ್ಯಾ, ದೊಡ್ಡಬಳ್ಳಾಪುರಗಳಲ್ಲಿ ಇವರಿಂದ ತರಬೇತಿ ಪಡೆದವರು ಭಾಗವಹಿಸಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಅಕ್ರಮ ಮರಳು ಸಾಗಾಣಿಕೆ ವಾಹನಗಳ ವಶ

0

ತಹಸೀಲ್ದಾರ್ ಕೆ.ಎಂ. ಮನೋರಮಾ ನೇತೃತ್ವದ ಅಧಿಕಾರಿಗಳು ಗುರುವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಒಂದು ಲಾರಿ ಸೇರಿದಂತೆ ಎಂಟು ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ತಾದೂರು ಬಳಿ ಒಂದು ಲಾರಿ ಹಾಗು ನಾಲ್ಕು ಟ್ರಾಕ್ಟರ್ ಮತ್ತು ದಡಂಘಟ್ಟ ಸಮೀಪ ನಾಲ್ಕು ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಕೆ.ಎಂ.ಮನೋರಮಾ, ಗ್ರಾಮ ಲೆಕ್ಕಿಗರಾದ ಲಾರೆನ್ಸ್, ಆನಂದ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವೀಲ್ ಚೇರ್ ವಿತರಣೆ

0

ಅಂಗವೈಕಲ್ಯವುಳ್ಳವರು ಆದಷ್ಟೂ ಪರಾವಲಂಬಿಗಳಾಗದಂತೆ ವೀಲ್ ಚೇರ್ ನೀಡುತ್ತಿರುವುದಾಗಿ ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಸಾದಲಿ ಪಂಚಾಯತಿಯ ವಿವಿಧ ಗ್ರಾಮಗಳ ಅಂಗವಿಕಲರಿಗೆ ಗುರುವಾರ ವೀಲ್ ಚೇರ್ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಂಗವೈಕಲ್ಯತೆಯುಳ್ಳವರು ಇದ್ದಾರೆ. ಅವರಿಗೆ ವೀಲ್ ಚೇರ್ ನೀಡುವುದರಿಂದ ಅವರ ಕುಟುಂಬದವರಿಗೂ ಸಹಕಾರಿಯಾಗುತ್ತದೆ. ಕಾಮನಹಳ್ಳಿ ಚೌಡಪ್ಪ, ಸಾದಲಿಯ ಸತ್ಯಪ್ಪ ಮತ್ತು ನರಸಿಂಹಪ್ಪ ಅವರಿಗೆ ವೀಲ್ಚೇರ್ ನೀಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯತೆಯಿರುವವರಿಗೆ ವಿತರಿಸಲಾಗುವುದು ಎಂದು ಹೇಳಿದರು.

ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

0

ತಾಲ್ಲೂಕಿನಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಸಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಿಯಟಿಯು ಸಂಯೋಜಿತ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರ ಸಂಘ, ಡಿ ವೈ ಎಫ್ ಐ, ರೈತ ಸಂಘ ಮುಂತಾದ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನಾ ಬೆರವಣಿಗೆ ನಡೆಸಿದರು.
ಹೋಟೆಲ್, ಅಂಗಡಿ ಮುಂಗಟ್ಟುಗಳು, ಥಿಯೇಟರ್, ಬ್ಯಾಂಕುಗಳು, ಶಾಲಾ ಕಾಲೇಜುಗಳು ಬಂದ್ ಆದ್ದರಿಂದಾಗಿ ನಗರದ ರಸ್ತೆಗಳು ಬಿಕೋ ಎನ್ನುತ್ತಿತ್ತು.
ಬಸ್, ಆಟೋ ಸಂಚಾರವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ರಸ್ತೆಯಲ್ಲೇ ಅಡುಗೆ ತಯಾರಿಸಿದರು. ಖಾಸಗಿ ವಾಹನಗಳನ್ನು ಈ ಮಾರ್ಗದಲ್ಲಿ ತಡೆಯಲಾಗಿತ್ತು.
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ನೌಕರರ ಹಲವು ಸಮಸ್ಯೆಗಳನ್ನು ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಬೆಲೆ ಏರಿಕೆಯ ವಿರುದ್ಧ, ಕನಿಷ್ಠ ಕೂಲಿ ೧೮ ಸಾವಿರ ರೂಪಾಯಿಗಳ ವೇತನ ನೀಡಬೇಕು. ಅಂಗನವಾಡಿ ನೌಕರರು ದುಡಿಯುತ್ತಿರುವ ಸ್ಥಳಗಳಲ್ಲಿ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೂ ಕೂಡಾ ಇಲಾಖೆಯಿಂದ ಯಾವುದೇ ಭದ್ರತೆಯನ್ನು ನೀಡುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕೆಂಬ ನಿಯಮವಿದ್ದರೂ ಕೂಡಾ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ತಿಂಗಳು ಪೂರ್ತಿ ದುಡಿದರೂ ಕೂಡಾ ನೀಡುವಂತಹ ಗೌರವಧನವನ್ನು ನಿಗದಿತ ಸಮಯದಲ್ಲಿ ನೀಡುತ್ತಿಲ್ಲ. ಪಿಂಚಣಿಯನ್ನು ನಿಲ್ಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಿಷನ್ ಮೋಡ್ ವಿರೋಧಿಸಿ, 45ನೇ ಐ.ಎಲ್.ಸಿ ಶಿಫಾರಸ್ಸುಜಾರಿಗಾಗಿ ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಗನವಾಡಿ ನೌಕರರ ವಿರೋಧಿ ನೀತಿಗಳ ವಿರುದ್ಧ, ನಿವೃತ್ತಿ ಆದವರಿಗೆ ಇಡಿಗಂಟು ಪೆನ್ಷನ್ ಮುಂದುವರಿಸಲು ಒತ್ತಾಯಿಸಿ ಮುಷ್ಕರ ನಡೆಸುತ್ತಿರುವುದಾಗಿ ಮುಷ್ಕರ ನಿರತರು ತಿಳಿಸಿದರು.
ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷ ಸಿ.ಎಸ್.ಸುದರ್ಶನ್, ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಕೆ.ಎನ್.ಪಾಪಣ್ಣ, ಗುಲ್ಜಾರ್, ಶಂಕರಣ್ಣ, ದ್ಯಾವಪ್ಪ, ಗಂಗಪ್ಪ, ಜನಾರ್ಧನ್, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಬಿಸಿಯೂಟ ನೌಕರರ ಸಂಘದ ಮುನಿಲಕ್ಷ್ಮಮ್ಮ, ಡಿ ವೈ ಎಫ್ ಐ ಮುನೀಂದ್ರಮ ಫಯಾಜ್, ಆಶಾಕಾರ್ಯಕರ್ತೆಯರ ಸಂಘದ ಸೌಭಾಗ್ಯ, ಟಿ ಎಸ್ ಎಸ್ ಮೌಲಾ, ಸತ್ತಾರ್ಸಾಬ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಂಸ್ಕೃತಿಕ ಜ್ಞಾನವು ಮಕ್ಕಳಿಗೆ ಪಠ್ಯದಷ್ಟೇ ಮುಖ್ಯ

0

ಹಲವು ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ ಹಾಗೂ ಭೌಗೋಳಿಕ ಪರಿಸರವುಳ್ಳ ಭಾರತದ ವಿಭಿನ್ನತೆಯಲ್ಲಿ ಏಕತೆಯನ್ನು ಮಕ್ಕಳು ಸಾಂಸ್ಕೃತಿಕ ಪ್ರದರ್ಶನದ ಮೂಲಕ ಮಾಡಿದ್ದಾರೆ. ಈ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಮಕ್ಕಳಿಗೆ ವಿಶಾಲ ದೃಷ್ಟಿಕೋನ ಲಭಿಸಲಿದೆ, ಅವರ ಭವಿಷ್ಯಕ್ಕೆ ನೆರವಾಗಲಿದೆ ಎಂದು ಸುಗಮ ಸಂಗೀತ ಗಾಯಕ ಪಂಚಮ್ ಹಳಿಬಂಡಿ ತಿಳಿಸಿದರು.
ನಗರದ ಹನುಮಂತಪುರ ಗೇಟ್ ನಲ್ಲಿರುವ ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಜ್ಞಾನಾಂಕುರ ಕ್ಯಾಂಪಸ್ನಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಕ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನ ಮನಸ್ಸಿನಲ್ಲಿ ತನ್ನ ದೇಶ, ರಾಜ್ಯ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಗೌರವಭಾವನೆ ಮೂಡಿಸುವ ಸಾಂಸ್ಕೃತಿಕ ಹಬ್ಬಗಳು ಅತ್ಯಂತ ಅವಶ್ಯಕ. ಸಂಸ್ಕಾರದ ಬೀಜವು ಬಿತ್ತುವ ಈ ರೀತಿಯ ಕಾರ್ಯಕ್ರಮಗಳು ಪಠ್ಯಕ್ಕಿಂತಲೂ ಮುಖ್ಯವಾದುದು. ಈಗ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಸಾಂಸ್ಕೃತಿಕ ಬೀಜ ಮುಂದಿನ ಜನಾಂಗಕ್ಕೂ ಮಕ್ಕಳ ಮೂಲಕ ಮುಂದುವರೆಯುತ್ತದೆ. ಮಕ್ಕಳು ರೂಪಿಸಿದ್ದ ಕಲಾಕೃತಿಗಳು, ವೇಷಭೂಷಣಗಳು, ಸರ್ವಧರ್ಮ ಸಮನ್ವಯತೆಯ ರೂಪಕಗಳು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಿ.ಜಿ.ಎಸ್. ಸಂಸ್ಥೆಗಳ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕಗಳನ್ನು ಗಳಿಸಿಕೊಳ್ಳುವಂತಹ ಯಂತ್ರಗಳಂತೆ ಅಲ್ಲದೆ ಅವರನ್ನು ಸಮಾಜದಲ್ಲಿ ಪರಿಪೂರ್ಣವಾದ ವ್ಯಕ್ತಿಯನ್ನಾಗಿ ಮಾಡಬೇಕು ಎಂಬುದು ಸಾಂಸ್ಕೃತಿಕ ಹಬ್ಬದ ಹಿಂದಿನ ಉದ್ದೇಶ. ಪಠ್ಯಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಸಂಪ್ರದಾಯಿಕ ಆಚರಣೆಗಳ ಬಗ್ಗೆ ಶಿಕ್ಷಣ ನೀಡಬೇಕು. ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಒತ್ತಡ ಹೇರಬಾರದು. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಿದ್ದರೆ, ನಮ್ಮ ಸಂಪ್ರದಾಯಗಳು ಇತಿಹಾಸಗಳ ಪುಟಗಳನ್ನು ಸೇರುತ್ತವೆ ಎಂದರು.
ಶಾಲೆಯಲ್ಲಿ ಮಕ್ಕಳಿಂದ ಆಯೋಜನೆ ಮಾಡಲಾಗಿದ್ದ ವಿವಿಧ ಬಗೆಯ ಸಂಪ್ರದಾಯ, ಪರಂಪರೆಗಳನ್ನು ಬಿಂಬಿಸುವಂತಹ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶಾಲೆಯ ಮಕ್ಕಳು ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸ್ವಾಗತಿಸಿದರು. ದೇಶದ ಪ್ರಮುಖ ಹಬ್ಬಗಳ ಆಚರಣೆಗಳ ಮಾದರಿಗಳನ್ನು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಾಡಹಬ್ಬಗಳ ಮಾದರಿ, ತರಕಾರಿ ಮಾರಾಟ, ಬೆಂಕಿ ಬಳಸದೆ ಅಡುಗೆ ತಯಾರಿಕೆ, ಲಕ್ಷ್ಮೀ ಪೂಜೆ, ಚರ್ಚ್ ಮಸೀದಿ ಬೌದ್ಧ ಸ್ಥೂಪ ದೇವಾಲಯಗಳ ಮಾದರಿ ಹಾಗೂ ಆಚರಣೆಗಳು, ಪಾರಂಪರಿಕ ವಸ್ತುಗಳು, ರೈತ ಪರಿಕರಗಳು, ಗುಡಿ ಕೈಗಾರಿಕೆಗಳು, ವೇದಗಳ ಕಾಲದ ಸಂಸ್ಕೃತಿ, ಮೂಢ ನಂಬಿಕೆಗಳು, ಸುಗ್ಗಿ ಆಚರಣೆ, ಪುಷ್ಪಪ್ರದರ್ಶನ, ರಂಗೋಲಿ ಮೊದಲಾದ ಮಾದರಿಗಳನ್ನು ಪ್ರದರ್ಶಿಸಿ, ವಿವರಿಸಿದರು.
ಕವಿಗಳ ಗೀತೆಗಳನ್ನು ಹಾಡಿದ ಗಾಯಕ ಪಂಚಮ್ ಹಳಿಬಂಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರಾಂಶುಪಾಲ ಮಹದೇವಯ್ಯ, ನಗರಸಭಾ ಸದಸ್ಯ ವೆಂಕಟಸ್ವಾಮಿ, ಮುರಳಿ, ಜೆ.ಎಸ್. ವೆಂಕಟಸ್ವಾಮಿ, ಕೆಂಪರೆಡ್ಡಿ, ಪುರುಷೋತ್ತಮ್, ವಾರ್ಡನ್ ರಾಜು, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮುಖ್ಯಾಂಶಗಳು…
ಗಾಯಕ ಪಂಚಮ್ ಹಳಿಬಂಡಿಯವರಿಂದ ಗೀತಗಾಯನ
ಶಾಲಾ ಮಕ್ಕಳಿಂದ ಸಂಪ್ರದಾಯ, ಪರಂಪರೆಗಳನ್ನು ಬಿಂಬಿಸುವ ಪ್ರದರ್ಶನ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ

ಕಸಾಪ ವತಿಯಿಂದ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ

0

ಕನ್ನಡ ಸಾಹಿತ್ಯ ಪರಿಷತ್ತು 101 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ 101 ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕಸಾಪ ವತಿಯಿಂದ ನೀಡುತ್ತಿರುವುದಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಉಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗಾಗಿ ಮಕ್ಕಳನ್ನು ಕರೆತಂದಿದ್ದ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಿಗೆ ಅವರ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಈ ದಿನ ತಾಲ್ಲೂಕಿನ 50 ಶಾಲೆಗಳ ಗ್ರಂಥಾಲಯಗಳಿಗೆ ‘ಕನ್ನಡ ರತ್ನಕೋಶ’ ವನ್ನು ಕಸಾಪ ವತಿಯಿಂದ ನೀಡಿದ್ದೇವೆ. ಇದರ ಜೊತೆಯಲ್ಲಿ ಸಾಹಿತಿ ಕಾಗತಿ ವೆಂಕಟರತ್ನಮ್ ರಚನೆಯ ಕಾಮನಬಿಲ್ಲು, ಸಾಧಕರಾದ ಸರ್.ಎಂ.ವಿಶ್ವೇಶ್ವರಯ್ಯ, ಬಿ.ಜಿ.ಎಲ್.ಸ್ವಾಮಿ, ಬಾಲಗಂಗಾಧರ ತಿಲಕ್, ಕಸ್ತೂರಬಾ ಗಾಂಧಿ, ಎಂ.ಗೋವಿಂದಪೈ, ಮಾಸ್ತಿ, ಸುಶ್ರುತ ಮೊದಲಾದವರ ಕುರಿತ ಪುಸ್ತಕಗಳನ್ನೂ ನೀಡಿದ್ದೇವೆ. ಕನ್ನಡ ಸಾಹಿತ್ಯ ಸೇವೆವನ್ನು ಮಕ್ಕಳಿಗೆ ಪುಸ್ತಕ ತಲುಪಿಸುವ ಮೂಲಕ ತಾಲ್ಲೂಕು ಕಸಾಪ ಘಟಕ ಮಾಡುತ್ತಿದೆ ಎಂದು ಹೇಳಿದರು.

ಕರಾಟೆಯಲ್ಲಿ ಬಹುಮಾನ ಪಡೆದ ಪುಟ್ಟ ಹೇಮಂತ್

0

ನಗರದ ಅಂಜನಿ ಬಡಾವಣೆಯ ವಾಸಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಪಟು ಟಿ.ಟಿ.ನರಸಿಂಹಪ್ಪರ ಹಿರಿಯ ಪುತ್ರ ಟಿ.ಎನ್. ಹೇಮಂತ್ ರಾಷ್ಟ್ರ ಮಟ್ಟದ ಓಪನ್ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ವಾಡೊ ಕರಾಟೆ-ಡೊ ಇಂಡಿಯಾ ವಾಡೊ ಕರಾಟೆ ಇಂಟರ್ನ್ಯಾಷನಲ್ ಕರಾಟೆ ಅಕಾಡೆಮಿ ವತಿಯಿಂದ ಜಿಲ್ಲೆಯ ಗೌರಿಬಿದನೂರಿನಲ್ಲಿ ಈಚೆಗೆ ನಡೆಸಲಾದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಸ್ಪರ್ಧೆಯ ಕತಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಕರಾಟೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಟಿ.ಎನ್. ಹೇಮಂತ್ಗೆ ವಾಡೊ ಕರಾಟೆ-ಡೊ ಇಂಡಿಯಾ ಸಂಸ್ಥೆಯ ಶ್ರೀನಾಥ್ ಬಹುಮಾನ ವಿತರಿಸಿದರು.

ರಸ್ತೆ ಕಾಮಗಾರಿಯ ಪರಿಶೀಲನೆ

0

ಲೋಕೋಪಯೋಗಿ ಇಲಾಖೆಯ ಅಪೇಂಡಿಕ್ಸ್ ಸಿ ಲೆಕ್ಕಶಿರ್ಷಿಕೆಯ ಯೋಜನೆಯಡಿ ಸುಮಾರು ೪.೫ ಕೋಟಿ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ಜಂಗಮಕೋಟೆ- ಶಿಡ್ಲಘಟ್ಟ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಎಂ.ರಾಜಣ್ಣ ಗುರುವಾರ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಿಂದ ಆನೂರು ಗ್ರಾಮದವರೆಗಿನ ರಸ್ತೆ ಈ ಹಿಂದೆ ಬಹಳಷ್ಟು ಕಿರಿದಾಗಿದ್ದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಬಹುತೇಕ ರಸ್ತೆಯ ಮಣ್ಣಿನ ಕಾಮಗಾರಿ ಮುಗಿದಿದ್ದು ಸುಮಾರು ೩ ಕಿ.ಮೀ ನಷ್ಟು ಡಾಂಬರೀಕರಣ ಕಾಮಗಾರಿಯೂ ಮುಗಿದಿದೆ ಎಂದರು.
ಈ ರಸ್ತೆಯಲ್ಲಿ ಸಂಚಾರ ಮಾಡುವಂತಹ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ರಸ್ತೆ ಕಾಮಗಾರಿಯ ಗುಣಮಟ್ಟದಲ್ಲಿ ಸ್ಥಳೀಯ ನಾಗರೀಕರು ಸೇರಿದಂತೆ ಗುತ್ತಿಗೆದಾರರು ರಾಜಿಯಾಗದೇ ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸ್ಥಳೀಯ ಮುಖಂಡರು, ನಾಗರಿಕರು ಕೂಡಾ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರವಹಿಸಿದ್ದರಿಂದ ಗುಣಮಟ್ಟದ ರಸ್ತೆ ಕಾಮಗಾರಿ ಆಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ತಾವು ಶಾಸಕರಾಗಿ ಮೂರು ವರ್ಷ ಪೂರ್ಣಗೊಂಡಿದ್ದು ತಮ್ಮ ಅವಧಿಯಲ್ಲಿ ಕ್ಷೇತ್ರದ ಶೇ. ೬೫ ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸೇರಿದಂತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನುಳಿದ ೩೫ ರಷ್ಟು ಭಾಗದ ಕೆಲಸಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಲೊಕೋಪಯೋಗಿ ಇಲಾಖೆಯ ಎಇಇ ಲೋಕೇಶ್, ಇಂಜಿನಿಯರ್ ಮಹೇಂದರ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ವೇದಿಕೆ

0

ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ಶಾಸಕ ಎಂ ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಶಿಸಿ ಹೋಗುತ್ತಿರುವ ನಾಡಿನ ಸಾಂಸ್ಕೃತಿಕ, ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿ, ಅಧ್ಯಯನ, ಅಭ್ಯಾಸಗಳ ಮೂಲಕ ಸ್ಪರ್ಧಾ ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಸಂಗೀತ, ಜಾನಪದ ಗೀತೆ, ಕೋಲಾಟ ಮುಂತಾದ ಕಲೆಯಲ್ಲಿ ಮಕ್ಕಳು ಹೊಂದಿರುವ ಅಭಿರುಚಿಗೆ ತಕ್ಕಂತೆ ಉತ್ತಮ ವೇದಿಕೆ ಒದಗಿಸಿಕೊಡುವ ಉದ್ದೇಶದಿಂದ ಕ್ಲಸ್ಟರ್, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರತಿಭಾ ಕಾರಂಜಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಹೊರಹೊಮ್ಮಲಿ ಎಂದರು.

ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಣ್ಣಿನ ಮೊಸಳೆ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿ.
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಣ್ಣಿನ ಮೊಸಳೆ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿ.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಆಯಾಯ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು ಪೋಷಕರು, ಶಿಕ್ಷಕರು ಸಹಕರಿಸಬೇಕು ಎಂದು ಹೇಳಿದರು.
ಸುಮಾರು 350 ಶಾಲೆಗಳ 2500 ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಸರ್ಕಾರಿ ಪ್ರೌಢಶಾಲೆಯ ಮೈದಾನ ಮಕ್ಕಳ ನಂದನವನವಾಗಿ ಮಾರ್ಪಟ್ಟಿತ್ತು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್. ನರಸಿಂಹಯ್ಯ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮನ್ವಯಾಧಿಕಾರಿ ಜಿ.ಕೆ.ಸುಮ, ಶ್ರೀರಾಮಯ್ಯ, ಬಿ.ಆರ್ .ನಾರಾಯಣಸ್ವಾಮಿ, ಸಿ.ಎಂ.ಮುನಿರಾಜು, ಬೈರಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯು ಅಭಿವೃದ್ಧಿಯಲ್ಲಿ ‘ದೀಪದ ಕೆಳಗೆ ಕತ್ತಲೆ’ಯಂತಿದೆ

0

‘ದೀಪದ ಕೆಳಗೆ ಕತ್ತಲೆ’ ಎಂಬಂತಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ. ರೈತರು, ರೇಷ್ಮೆ ಬೆಳೆಗಾರರು, ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೀಡಿದ ಮನವಿಪತ್ರಗಳು ಈ ಭಾಗದ ಸಮಸ್ಯೆಗಳನ್ನು ತೋರಿಸುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗದ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಾರೋ ಇಲ್ಲವೋ ನಾನಂತೂ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ, ಸಂಸತ್ನಲ್ಲಿ ದನಿಯೆತ್ತುತ್ತೇನೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಗ್ರಾಮೀಣಾಭಿವೃದ್ಧಿಯ ಕೊರತೆ, ರೈತರಿಗೆ ಸಿಗಬೇಕಾದ ಸೌಲಭ್ಯದ ಕೊರತೆ ಎಲ್ಲವೂ ಕಣ್ಣು ಮುಂದೆ ಗೋಚರಿಸುತ್ತಿದೆ. ನೀರಿಗಾಗಿ ಎಷ್ಟು ವರ್ಷ ಕಾಯುತ್ತೀರಿ, ಫ್ಲೋರೈಡ್ ನೀರು ಸೇವಿಸಿ ನಿಮ್ಮ ಧ್ವನಿಯೂ ಉಡುಗಿಹೋಗಿಲ್ಲವೆ ಎಂದು ಪ್ರಶ್ನಿಸಿದರು.
ಮೂಗಿನ ಮೇಲೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ಬಯಲು ಸೀಮೆಗೆ ನೀರು ತರುವ ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಹಲವಾರು ಬ್ರಷ್ಟಾಚಾರ ನಡೆಸಿದೆ. ಪೈಪ್ ಲೈನ್ ಖರೀದಿಯ ನೆಪದಲ್ಲಿ 4000 ಕೋಟಿ ರೂಗಳ ಅವ್ಯವಹಾರ ನಡೆದಿದೆ. ಮೂರು ವರ್ಷ ಕಳೆದರೂ ನಿಮಗೆ ನೀರು ಸಿಗುವ ಭರವಸೆ ಕೊಂಚವೂ ಮೂಡಿಲ್ಲ. ರಾಜ್ಯದಲ್ಲಿ ಭಗವಂತ ನೀಡಿರುವ ನದಿಗಳ ಮೇಲ್ಮೈ ನೀರನ್ನು ಸಮರ್ಪಕವಾಗಿ ಕೊಡುವ ಕೆಲಸ ಸರ್ಕಾರ ಮಾಡಿಲ್ಲ. ಯಡಿಯೂರಪ್ಪನವರು ಆರಂಭಿಸಿದ್ದ ಭಾಗ್ಯಲಕ್ಷ್ಮ ಯೋಜನೆ, ಹಾಲಿಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಯೆಂದು ಪ್ರಾರಂಭಿಸಿ ಮೊದಲು 30 ಕೆಜಿ ಅಕ್ಕಿ ಕೊಟ್ಟ ರಾಜ್ಯ ಸರ್ಕಾರ ಈಗ 3 ಕೆಜಿ ಅಕ್ಕಿಗೆ ಸೀಮಿತವಾಗಿದೆ. ಕೇಂದ್ರ ಸರ್ಕಾರ ಒಂದು ಲಕ್ಷ 67 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಒಂದು ಕೆಜಿಗೆ 32 ರೂಗಳಿಗೆ ಖರೀದಿಸಿ 3 ರೂಗಳಿಗೆ ನಮ್ಮ ರಾಜ್ಯಕ್ಕೆ ಪ್ರತಿ ತಿಂಗಳೂ ನೀಡುತ್ತಿದೆ. ಗೋದಿಯನ್ನು ಒಂದು ಕೆಜಿಗೆ 22 ರೂಗಳಿಗೆ ಖರೀದಿಸಿ 2 ರೂಗಳಿಗೆ 57 ಸಾವಿರ ಮೆಟ್ರಿಕ್ ಟನ್ನೀಡುತ್ತಿದೆ. ಭ್ರಷ್ಟ ಅಧಿಕಾರಿಗಳಿಂದ ಇವೆಲ್ಲವೂ ಅಕ್ರಮವಾಗಿ ಪರರಾಜ್ಯಗಳಿಗೆ ಹೋಗುತ್ತಿವೆ. ಬರಗಾಲಕ್ಕಾಗಿ ಕೇಂದ್ರ ಸರ್ಕಾರ ನೀಡಿದ 1,520 ಕೋಟಿ ರೂಗಳಿಗೆ ರಾಜ್ಯ ಸರ್ಕಾರವೂ ಸೇರಿಸಿ ತೊಂದರೆಗೊಳಗಾದವರಿಗೆ ವಿತರಿಸಬೇಕಿತ್ತು. ಆದರೆ ಅದು ಆಗಿಲ್ಲ. ಕೇಂದ್ರದಿಂದ ಗ್ರಾಮೀಣಾಭಿವೃದ್ಧಿಗಾಗಿ ಬರುವ ಸದುಪಯೋಗವಾಗುತ್ತಿಲ್ಲ. ಈ ಬಗ್ಗೆ ತನಿಖೆಯಾದಾಗ ಜನರಿಗೆ ಸತ್ಯಾಂಶ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇಂಧನ ಖಾತೆಯನ್ನು ವಹಿಸಿದ್ದಾಗ ಕೇಂದ್ರದ ಯುಪಿಎ ಸರ್ಕಾರ ಸಹಾಯ ಮಾಡಲಿಲ್ಲ, ಕಲ್ಲಿದ್ದಲೂ ಸಹ ನೀಡಲಿಲ್ಲ. ಬೇರೆ ರಾಜ್ಯಗಳಲ್ಲಿ ಕಾಡಿಬೇಡಿ ವಿದ್ಯುತ್ ತಂದು ನಮ್ಮ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡೆ. ಆದರೆ ಈಗ ಕೇಂದ್ರ ಸರ್ಕಾರ ಕನಿಷ್ಠ ಹಣ ನೀಡಿ ವಿದ್ಯುತ್ ಕೊರತೆಯಿರುವ ರಾಜ್ಯಗಳು ವಿದ್ಯುತ್ ಖರೀದಿಸಬಹುದು ಎಂದು ಅಧಿಕೃತವಾಗಿ ಘೋಷಿಸಿದ್ದರೂ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ರೈತರಿಗೆ ಬವಣೆ ತಪ್ಪಿಲ್ಲ. ರೈತರ ಬಗ್ಗೆ, ಮಹಿಳೆಯರ ಬಗ್ಗೆ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಜನರು, ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ಇಲ್ಲದ ರಾಜ್ಯ ಸರ್ಕಾರದ ಕುರಿತಂತೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ಮಾತನಾಡಿ, ಅಲ್ಪಸಂಖ್ಯಾತರ ರಕ್ತದಲ್ಲಿ ಕಾಂಗ್ರೆಸ್ ‘ಬಿಜೆಪಿ ಕೋಮುವಾದಿ’ ಎಂಬ ವಿಷ ತುಂಬಿದ್ದಾರೆ. ಜಾತಿಯನ್ನು ಮೀರಿ ಮನುಷ್ಯತ್ವದ ನೆಲೆಯಲ್ಲಿ ಯೋಜನೆಗಳನ್ನು ನೀಡಿದ್ದು ಯಡಿಯೂರಪ್ಪನವರ ಸರ್ಕಾರ. ಬಿಜೆಪಿ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕಗಳ ಜವಾಬ್ದಾರಿ ಈಗ ಹೆಚ್ಚಿದೆ. ಜನರಲ್ಲಿ ಪ್ರೀತಿವಿಶ್ವಾಸ ತುಂಬಿ, ಮುಂದಿನ ಒಂದೂ ಮುಕ್ಕಾಲು ವರ್ಷವನ್ನು ದೇಶಕ್ಕೋಸ್ಕರ ಕಾರ್ಯಕರ್ತರು ಮೀಸಲಿಡಿ ಎಂದು ಸಲಹೆ ನೀಡಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ನೂತನ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಅವರಿಗೆ ಬಿಜೆಪಿ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರವನ್ನು ಬಿಜೆಪಿ ಮುಖಂಡರು ಮಾಡಿದರು.
ವಿಧಾನ ಪರಿಷತ್ ಸದಸ್ಯ ವೀರಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜ್ಯೋತಿರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ತರಬಳ್ಳಿ ಭಾಸ್ಕರರೆಡ್ಡಿ, ಮುನಿರಾಜು, ಸುರೇಂದ್ರಗೌಡ, ಶಿವಶಂಕರ್, ತಮ್ಮೇಶ್ಗೌಡ, ಶ್ರೀರಾಮರೆಡ್ಡಿ, ಗೋಪಿನಾಥ್, ಕಮರುದ್ದೀನ್, ರಾಮಲಿಂಗಪ್ಪ, ರವಿನಾರಾಯಣರೆಡ್ಡಿ, ಎಚ್.ಸುರೇಶ್, ದೊಣ್ಣಹಳ್ಳಿ ರಾಮಣ್ಣ, ರಾಘವೇಂದ್ರ, ರಮೇಶ್ ಬಾಯಿರಿ, ಸುಜಾತಮ್ಮ, ಮಂಜುಳಮ್ಮ, ಮುನಿವೆಂಕಟಪ್ಪ, ಲೋಕೇಶ್ಗೌಡ, ಸದಾಶಿವ, ಕೆಂಪರೆಡ್ಡಿ, ಲೀಲಾಭೂಷಣ್, ಶ್ರೀಧರ್, ಅಶ್ವಾಕ್ ಅಹ್ಮದ್, ಚಂದ್ರಪ್ಪ, ಶೋಭಾ, ನಿರ್ಮಲ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮನವಿಗಳು: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಬರಪೀಡಿತ ಜಿಲ್ಲೆಗಳ ರೈತಾಪಿ ವರ್ಗದವರ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.
ಚಿಂತಾಮಣಿಯ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೇಮಕಾತಿಯ ಕುರಿತಂತೆ ತಮ್ಮ ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರು ರೇಷ್ಮೆಯನ್ನು ಜಿ ಎಸ್ ಟಿಗೆ ಸೇರಿಸದಂತೆ ಹಾಗೂ ಇನ್ನಿತರೆ ಸಮಸ್ಯೆಗಳ ಪರಿಹಾರ ಕೋರಿ ಮನವಿ ಸಲ್ಲಿಸಿದರು.

‘ಪರಿಸರ ಸ್ನೇಹಿ ಗಣೇಶ ಮೂರ್ತಿ

0

ಮುಖ್ಯಾಂಶಗಳು:
ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
ದಾನಿಗಳಿರದ ಕಾರಣ ಮೂರ್ತಿಗಳಿಗೆ ಬೇಡಿಕೆ
ಮಾರಾಟಗಾರರಲ್ಲೂ ಮೂಡಿದ ಪರಿಸರಪ್ರೇಮ
ಪಿ.ಓ.ಪಿ ಗಣಪನ ಮೂರ್ತಿಗಳಿಗೆ ಎರಡನೇ ಸ್ಥಾನ
ದಾನಿಗಳಿರದ ಕಾರಣ ಮೂರ್ತಿಗಳಿಗೆ ಬೇಡಿಕೆ
ಗಣೇಶನ ಮೂರ್ತಿಗಳ ಮಾರಾಟದಲ್ಲೂ ಪರಿಸರ ಜಪ
ಗಣೇಶ ಪ್ರತಿಷ್ಠಾಪನೆಗೆ ಬೆರಳೆಣಿಕೆ ದಿನ ಬಾಕಿಯಿವೆ. ಎಲ್ಲೆಡೆ ‘ಪರಿಸರ’ದ ಜಪ ಶುರುವಾಗಿದೆ. ಮಣ್ಣಿನ, ಪುಟ್ಟ, ವಿಷಬಣ್ಣ ರಹಿತ ಗಣೇಶ ಮೂರ್ತಿಗಳನ್ನೇ ಸ್ಥಾಪಿಸಬೇಕು ಮತ್ತು ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕು ಎಂಬ ಕೂಗು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ಪರಿಸರವಾದಿಗಳಿಂದ ಕೇಳಿಬರುತ್ತದೆ. ಆದರೆ ಗಣೇಶ ಮೂರ್ತಿ ಕೊಳ್ಳುವವರು ನಮಗೆ ಮಾರಾಟಕ್ಕೆ ಪರಿಸರ ಗಣಪತಿ ಸಿಕ್ಕರೆ ತಾನೆ ಕೊಳ್ಳುವುದು ಎನ್ನುತ್ತಿದ್ದರು.
ಈ ಬಾರಿ ನಗರದ ವೇಣುಗೋಪಾಲಸ್ವಾಮಿ ಆವರಣದಲ್ಲಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಇಟ್ಟ ಸ್ಥಳದಲ್ಲಿ ‘ಪರಿಸರ ಸ್ನೇಹಿ ಗಣೇಶ ಮೂರ್ತಿ ದೊರೆಯುತ್ತದೆ’ ಎಂದು ಫಲಕ ಹಾಕುವ ಮೂಲಕ ಮಾರಾಟಗಾರರೂ ಪರಿಸರ ಸ್ನೇಹಿಗಳಾಗಿ ಪರಿವರ್ತಿತರಾಗಿದ್ದಾರೆ. ಅದರ ಮೂಲಕ ಗ್ರಾಹಕರನ್ನೂ ಪರಿಸರ ಸ್ನೇಹಿಗಳನ್ನಾಗಿಸುತ್ತಿದ್ದಾರೆ.
ನಗರದ ವಾಸವಿ ರಸ್ತೆ, ರಾಮ ದೇವಾಲಯ, ಕೋಟೆ ಈಶ್ವರ ದೇವಾಲಯ, ಯಲ್ಲಮ್ಮ ದೇವಸ್ಥಾನ ಸೇರಿದಂತೆ ಹಲವೆಡೆ ಗಣೇಶನ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಒಟ್ಟಾರೆ ಮಣ್ಣಿನ ಮೂರ್ತಿಗಳಿಗೆ ಈ ಬಾರಿ ತಾಲ್ಲೂಕಿನಲ್ಲಿ ಬೇಡಿಕೆ ಹೆಚ್ಚಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣದಿಂದ ಕೆರೆ ಕುಂಟೆ ಕಲುಷಿತಗೊಳ್ಳುವ ಅಪಾಯದ ಬಗ್ಗೆ ಜನರು ಜಾಗೃತರಾಗಿದ್ದಾರೆ.
ನಾನಾ ರೂಪದ, ಆಕಾರದ ಮಣ್ಣಿನ ಗಣಪನ ಮೂರ್ತಿಗಳನ್ನು ತರಿಸಿರುವ ಮಾರಾಟಗಾರರು ಅವುಗಳ ಬೇಡಿಕೆಯನ್ನು ಮನಗಂಡು ಪಿ.ಓ.ಪಿ ಗಣಪನ ಮೂರ್ತಿಗಳಿಗೆ ಎರಡನೇ ಸ್ಥಾನ ನೀಡಿದ್ದಾರೆ. ಆದರೂ ಅವುಗಳ ಮಾರಾಟ ಸಂಪೂರ್ಣವಾಗಿ ನಿಂತಿಲ್ಲ.
‘ಪಿ.ಓ.ಪಿ ಗಣೇಶ ಮೂರ್ತಿಗಳು ನೋಡಲು ಆಕರ್ಷಕ. ಅದರ ಹೊಳಪು, ಬಣ್ಣ ಎಂಥಹವರನ್ನೂ ಸೆಳೆಯುತ್ತದೆ. ಈ ಮೂರ್ತಿಗಳ ಬೆಲೆ ಹೆಚ್ಚು. ಮೊದಲೆಲ್ಲಾ ಈ ರೀತಿಯ ಮೂರ್ತಿಗಳಿಗೆ ಬೇಡಿಕೆಯಿತ್ತು. ಈ ವರ್ಷ ಬಹುತೇಕರು ಮಣ್ಣಿನ ಮೂರ್ತಿಗಳನ್ನೇ ಕೇಳುತ್ತಿದ್ದಾರೆ ಮತ್ತು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ನಮಗೂ ಈ ಬಗ್ಗೆ ಅರಿವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟದ ಬಗ್ಗೆ ಫಲಕವನ್ನು ಹಾಕಿದ್ದೇವೆ’ ಎನ್ನುತ್ತಾರೆ ಮಾರಾಟಗಾರ ಅನಿಲ್ಕುಮಾರ್.
‘ನಮಗೆ ಪಿಓಪಿ ಗಣಪ ಮೂರ್ತಿಗಳು ಉಳಿದರೆ ಮುಂದಿನ ವರ್ಷಕ್ಕೂ ಎತ್ತಿಟ್ಟುಕೊಳ್ಳಬಹುದು. ಆದರೆ ಮಣ್ಣಿನ ಗಣೇಶ ಮೂರ್ತಿಗಳು ಮುಂದಿನ ವರ್ಷಕ್ಕೆ ಉಳಿಯುವುದಿಲ್ಲ. ನಮಗೆ ನಷ್ಟವಾಗುತ್ತದೆ. ಕಳೆದ ಬಾರಿ ಹಲವರು ಗಣೇಶನ ಮೂರ್ತಿಗಳನ್ನು ದಾನವಾಗಿ ನೀಡಿದ್ದರಿಂದ ನಮಗೆ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ತಾಲ್ಲೂಕಿನಲ್ಲಿ ಗಣೇಶನ ಮೂರ್ತಿಗಳನ್ನು ದಾನ ಮಾಡುವ ದಾನಿಗಳಿನ್ನೂ ಹುಟ್ಟಿಕೊಂಡಿಲ್ಲವಾದ್ದರಿಂದ ಮೂರ್ತಿಗಳಿಗೆ ಬೇಡಿಕೆ ಬಂದಿದೆ’ ಎಂದು ಅವರು ತಿಳಿಸಿದರು.
‘ಗಲ್ಲಿ ಗಲ್ಲಿಯ, ಓಣಿ ಓಣಿಯಲ್ಲೂ ಪ್ರತಿಷ್ಠಾಪನೆಗೆ ಸಿದ್ಧತೆ ಬಿರುಸಾಗಿದೆ. ಮನೆ ಮನೆಯಲ್ಲೂ ಗಣೇಶ ಪ್ರತಿಷ್ಠಾಪನೆಗೆ ಸಂಪ್ರದಾಯಬದ್ಧ ಸಿದ್ಧತೆ ನಡೆದಿವೆ. ಸಾಧ್ಯವಿದ್ದಷ್ಟೂ ಮಣ್ಣಿನ, ಚಿಕ್ಕ ಗಣಪನನ್ನೇ ಬಳಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ರೂಪಿತ ಗಣಪ ಬೇಡ. ಬಣ್ಣ ಬೇಕೇ ಬೇಕು ಎಂದಿದ್ದರೆ ನಿಸರ್ಗದತ್ತ ಬಣ್ಣ (ನ್ಯಾಚುರಲ್ ಡೈ) ಹಚ್ಚಿ, ಪ್ಲಾಸ್ಟಿಕ್ ಅಲಂಕಾರ ಬೇಡ, ಪಟಾಕಿ ಸುಟ್ಟು ಕಸ ಮಾಡಬೇಡಿ ಎಂದು ಜನರಿಗೆ ತಿಳಿಹೇಳುವ ಕೆಲಸ ನಗರಸಭೆಯವರಿಂದ ಆಗಬೇಕು. ಕೆಲ ನಗರಸಭೆಗಳ ಆಯುಕ್ತರು ಪಿಓಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಿಲ್ಲ. ಅಕಸ್ಮಾತ್ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ನೀಡಿದ್ದಾರೆ. ನಮ್ಮಲ್ಲೂ ಈ ಬೆಳವಣಿಗೆ ಆಗಬೇಕು. ಇದರಿಂದ ಜಲಮೂಲಗಳು ಕಲುಷಿತಗೊಳ್ಳುವುದು ತಪ್ಪುತ್ತದೆ’ ಎಂದು ರೈತ ಮುಖಂಡ ರವಿಪ್ರಕಾಶ್ ತಿಳಿಸಿದರು.

ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಯ ಕೊಲೆ

0

ಕುಡಿದ ಅಮಲಿನಲ್ಲಿ ಪತಿಯು ರಾಡ್ನಿಂದ ತಲೆಗೆ ಹೊಡೆದು ಪತ್ನಿಯನ್ನ ಕೊಂದ ಘಟನೆ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಮತಾ (30) ಪತಿಯಿಂದಲೇ ಕೊಲೆಯಾದ ದುರ್ಧೈವಿ. ಗಂಜಿಗುಂಟೆ ಗ್ರಾಮದ ಮುನಿರಾಜುವಿನಿಂದ ಈ ಕೃತ್ಯ ನಡೆದಿದ್ದು, ಗ್ರಾಮಾಂತರ ಪೊಲೀಸರು ಮುನಿರಾಜುನನ್ನು ಬಂಧಿಸಿದ್ದಾರೆ. ಇವರಿಗೆ ಆರು ವರ್ಷದ ಗಂಡು ಮಗು ಮತ್ತು 9 ವರ್ಷದ ಹೆಣ್ಣು ಮಗುವಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಂಡಿಗನಾಳ ಮೂಲದ ಮಮತಾಳನ್ನು ಗಂಜಿಗುಂಟೆ ಗ್ರಾಮದ ಮುನಿರಾಜುವಿಗೆ ವಿವಾಹ ಮಾಡಿಕೊಡಲಾಗಿತ್ತು. ಕುಡಿದು ಕಾಟ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಮಮತಾ ತನ್ನ ತವರುಮನೆಗೆ ಮಕ್ಕಳೊಂದಿಗೆ ಬಂದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹಂಡಿಗನಾಳಕ್ಕೇ ಬಂದು ಹೆಂಡತಿಯೊಂದಿಗೆ ನೆಲೆಸಿದ್ದ ಮುನಿರಾಜು ಬುಧವಾರ ರಾತ್ರಿ ಕುಡಿದು ಬಂದು ಹಣಕ್ಕಾಗಿ ಹೆಂಡತಿಯನ್ನು ಪೀಡಿಸಿದ್ದಾನೆ. ನಂತರ ಹೆಂಡತಿಗೆ ಹೊಡೆಯುವ ಮೂಲಕ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೊ ಖೊ, ಬಾಲಕರ ಖೊ ಖೊ ಮತ್ತು ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಛದ್ಮವೇಷಧಾರಿ

0

ಶಿಡ್ಲಘಟ್ಟದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷಧಾರಿ ಸ್ಪರ್ಧೆಗಾಗಿ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಬಾಲಾಜಿಯನ್ನು ಶಿಕ್ಷಕ ರಾಮಕೃಷ್ಣ ಅವರು ಅಲಂಕಾರ ಮಾಡುತ್ತಿರುವುದು. ಯಕ್ಷಗಾನದ ಬಬ್ರುವಾಹನನ ಈ ವೇಷಕ್ಕೆ ಪ್ರಥಮ ಸ್ಥಾನ ಲಭಿಸಿತು.