Sidlaghatta : BESCOM ನಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಹಿರಿಯ ಯಂತ್ರಕರ್ಮಿ ಮೆಹಬೂಬ್ ಪಾಷಾ ಅವರನ್ನು ದಂಪತಿ ಸೇಮತ ನಗರದ ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂನ ಸಹುದ್ಯೋಗಿ ಅಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಪ್ರಕಾಶ್, ಇಲಾಖೆಯಲ್ಲಿ 38 ವರ್ಷಗಳ ಸುರ್ಘ ಸೇವೆ ಮಾಡಿದ ಹಿರಿಯ ಯಂತ್ರಕರ್ಮಿ ಮೆಹಬೂಬ್ ಪಾಷಾ ಬಾಬು ಅವರು ಗ್ರಾಹಕರು, ಸಾರ್ವಜನಿಕರಿಂದ ಉತ್ತಮ ಬಾಂಧವ್ಯ ಹೊಂದಿದ್ದರು.
ತಾವು ಮಾಡುವ ಕೆಲಸದಲ್ಲಿ ಸ್ವಲ್ಪ ಏರು ಪೇರು ಆದರೂ ಸಾರ್ವಜನಿಕರೊಂದಿಗೆ ನಾವು ಇಟ್ಟುಕೊಳ್ಳುವ ಒಡನಾಟ, ಉತ್ತಮ ಬಾಂಧವ್ಯವು ಅವೆಲ್ಲವನ್ನೂ ಮರೆಮಾಚಿ ಉತ್ತಮ ಸೇವೆ ಮಾಡಲು ನೆರವಾಗುತ್ತದೆ. ಸರ್ಕಾರಿ ನೌಕರರಿಗೆ ಮುಖ್ಯವಾಗಿ ತಾಳ್ಮೆ, ಸಹನೆ ಮುಖ್ಯವಾಗಿರಬೇಕು ಎಂದರು.
ಬಾಬು ಎಂದೆ ಎಲ್ಲರೂ ಕರೆಯುತ್ತಿದ್ದ ಮೆಹಬೂಬ್ ಪಾಷಾ ಅವರನ್ನು ದಂಪತಿ ಸಮೇತ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಕಾರಿ ಪ್ರಭು, ಸಹಾಯಕ ಎಂಜಿನಿಯರ್ ಗಳಾದ ಚಂದ್ರಶೇಖರ್, ವೇದ ಕಿರಣ್, ಅನಂತಗೌಡ, ದಿಬ್ಬೂರಹಳ್ಳಿ ಘಟಕದ ಸಹಾಯಕ ಇಂಜಿನಿಯರ್ ಮುನಿರಾಜು, ಲೈನ್ ಮ್ಯಾನ್ ಸಂತೋಷ್, ಲಕ್ಷ್ಮಣ್, ಕಿಶೋರ್, ಗುತ್ತಿಗೆದಾರ ಕೃಷ್ಣಪ್ಪ, ನಾಗರಾಜು ಹಾಜರಿದ್ದರು.
Devaramallur, Sidlaghatta : ರೇಷ್ಮೆ ಕೃಷಿಯಲ್ಲಿ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕ ಮಳ್ಳೂರು ಶಿವಣ್ಣ ತಿಳಿಸಿದರು.
ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ರೇಷ್ಮೆ ಇಲಾಖೆ ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಸಂಯೋಗದೊಂದಿಗೆ ಆಯೋಜಿಸಿದ್ದ, ನನ್ನ ರೇಷ್ಮೆ ನನ್ನ ಹೆಮ್ಮೆ ಕಾರ್ಯಕ್ರಮದ ಅಡಿಯಲ್ಲಿ ರೇಷ್ಮೆ ಬೆಳೆಗಾರರಿಗೆ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ರೇಷ್ಮೆ ಬೆಳೆಗಾರರಿಗೆ ನೂತನ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಚೀನಾ ದೇಶವನ್ನು ಮೀರಿಸಲು ನಾವು ತಾಂತ್ರಿಕತೆಯನ್ನು ಆದಷ್ಟು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಸಿ.ಎಸ್.ಬಿ ಸಹಾಯಕ ನಿರ್ದೇಶಕ ಮಹೇಶ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿಜ್ಞಾನಿಗಳು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿದರೆ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಆಗುತ್ತದೆ. ಅದರ ಮೂಲಕ ಗುಣಮಟ್ಟದ ನೂಲು ಸಹ ಉತ್ಪಾದನೆಯಾಗಿ ಗ್ರಾಹಕರಿಗೆ ಗುಣಮಟ್ಟದ ಸೀರೆ ಸಹ ಲಭಿಸುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪ ನಿರ್ದೇಶಕ ಮಾರಪ್ಪ ಬಾಲಪ್ಪ ಬೀರಲದಿನ್ನಿ, ವಿಜ್ಞಾನಿಗಳಾದ ಡಾ. ಪಿ. ಎಂ. ಮುನಿಸ್ವಾಮಿ ರೆಡ್ಡಿ, ಡಾ. ಪರಮೇಶ್ವರ ನಾಯಕ್, ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಜಗದೇವಪ್ಪ ಗುಗ್ಗಿರಿ, ದೇವರ ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ದೇವರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್, ಮುನಿರಾಜು, ಕಾರ್ಯದರ್ಶಿ ಅಶ್ವತಪ್ಪ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಮುಖಂಡರಾದ ನಂಜುಂಡಪ್ಪ, ಶ್ರೀರಾಮಪ್ಪ ಹಾಗೂ ರೇಷ್ಮೆ ಬೆಳೆಗಾರರು ಹಾಜರಿದ್ದರು.
Anur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಕುಂಟೆ ಅಭಿವೃದ್ಧಿ ಕಾಮಗಾರಿ, ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ಅಮೃತ ಸರೋವರ ಕಾಮಗಾರಿ, ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಪುರ ಗ್ರಾಮದ ಬೃಹತ್ ನೀರು ಸರಬರಾಜು ಟ್ಯಾಂಕ್ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಹೊಸಪೇಟೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ನೀರು ಸರಬರಾಜು ಆಗುವ ನಳ (ನಲ್ಲಿ) ಗಳನ್ನು ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾದೂರು ಗ್ರಾಮದ ಅಂಗನವಾಡಿ ಕೇಂದ್ರದ ಮಳೆ ನೀರು ಕೊಯ್ಲು ಕಾಮಗಾರಿ, ತಾದೂರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ನೀರು ಸರಬರಾಜು ಆಗುವ ನಳ (ನಲ್ಲಿ) ಗಳನ್ನು ಮತ್ತು ಬೃಹತ್ ನೀರು ಸರಬರಾಜು ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಎಇಇ ಲೋಕೇಶ, ಹೊಸಪೇಟೆ ಪಂಚಾಯಿತಿ ಪಿ.ಡಿ.ಒ ಯಮುನಾ ರಾಣಿ, ಮಳಮಾಚನಹಳ್ಳಿ ಪಿ.ಡಿ.ಒ ಶೈಲ, ತಾಲ್ಲೂಕು ತಾಂತ್ರಿಕ ಸಂಯೋಜಕ ನಾಗೇಂದ್ರ, ತಾಲ್ಲೂಕು ನರೇಗಾ ಸಂಯೋಜಕ ಲೋಕೇಶ, ಎಂಜಿನಿಯರ್ ವಿವೇಕ್, ಜೆಜೆಎಂ ಸಂಯೋಜಕ ಸಂತೋಷ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Sidlaghatta: ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯಲ್ಲಿರುವ ಶಕ್ತಿ ದೇವತೆ ಶ್ರೀ ಪೂಜಮ್ಮ ದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶ್ರೀಪೂಜಮ್ಮ ದೇವಿಯು ನಗರದ ಶಕ್ತಿ ದೇವತೆಗಳಲ್ಲಿ ಒಂದಾಗಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಭಕ್ತಾದಿಗಳ ಕಷ್ಟಗಳನ್ನು ನಿವಾರಿಸುವ ಶಕ್ತಿ ಮಾತೆಗೆ ವಿಶೇಷ ಪೂಜೆಯನ್ನು ನೆರವೇರಿಸಿ ಮಹಾಮಂಗಳಾರತಿ ನಂತರ ಭಕ್ತಾದಿಗಳ ಸಹಕಾರದಿಂದ ಅನ್ನ ದಾನವನ್ನು ನಡೆಸಲಾಗುತ್ತದೆ ಎಂದು ಶ್ರೀ ಪೂಜಮ್ಮ ದೇವಿ ದೇವಾಲಯ ಸೇವಾಭಿವೃದ್ದಿ ಟ್ರಸ್ಟ್ ನ ಕಾರ್ಯದರ್ಶಿ ಎಂ. ಕದಿರಪ್ಪ ತಿಳಿಸಿದರು.
ಶ್ರೀ ಪೂಜಮ್ಮ ದೇವಿ ದೇವಾಲಯ ಸೇವಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸಿದ್ದಾರ್ಥನಗರದ ಮುಖಂಡರು, ಹಲವಾರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Sidlaghatta : ನಾಡಪ್ರಭು ಕೆಂಪೇಗೌಡರ 516 ನೇ ಜನ್ಮ ಜಯಂತಿಯ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ನಡೆದ ಸನ್ಮಾನದಲ್ಲಿ ಶಿಡ್ಲಘಟ್ಟದ ಸಮಗ್ರ ಕೃಷಿ ಸಾಧಕ ಹಿತ್ತಲಹಳ್ಳಿ ಗೋಪಾಲಗೌಡ ಅವರಿಗೆ “ಕೆಂಪೇಗೌಡ ರತ್ನ” ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ.
ಅಖಿಲ ಭಾರತ ಒಕ್ಕಲಿಗರ ಮಹಾಸಭಾ, ಕರ್ನಾಟಕ ರಾಜ್ಯ ನವ ನಿರ್ಮಾಣ ವಕೀಲರ ಕ್ಷೇಮಾಭಿವೃದ್ದಿ ಸಂಘವು ಬೆಂಗಳೂರು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಅಲುಮಿನಿ ಅಸೋಸಿಯೇಷನ್ ನ ಆಫ್ ಯೂನಿವರ್ಸಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಗ್ರ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದ ಈಗಾಗಲೆ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದ ಗೋಪಾಲಗೌಡರಿಗೆ ಕೆಂಪೇಗೌಡ ರತ್ನ ಪ್ರಶಸ್ತಿಯನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಜಗದ್ಗುರು ನಿಶ್ಚಲಾನಂದ ಸ್ವಾಮಿ, ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಅಖಿಲ ಭಾರತ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ, ಕರ್ನಾಟಕ ರಾಜ್ಯ ನವ ನಿರ್ಮಾಣ ವಕೀಲರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಸಿ.ಎಸ್.ರಾಮಮೂರ್ತಿರಾವ್ ನೀಡಿ ಸತ್ಕರಿಸಿದ್ದಾರೆ.
Sidlaghatta : ಕಳೆದ ಚುನಾವಣೆಯಲ್ಲಿ ರಾಜೀವ್ ಗೌಡರಲ್ಲ, ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಿರೋದು. ಹಾಗೆ ಆಗಲು ಏನು ಕಾರಣ ಎಂಬುದು ಉಸ್ತುವಾರಿ ಸಚಿವರಿಗೂ ನಮಗೂ, ಎಲ್ಲರಿಗೂ ಗೊತ್ತಿದೆ. ಡಬಲ್ ಗೇಮ್ ಆಡುವ ಕಾರ್ಯಕರ್ತರಿಗೆ ಸಚಿವರು ಮಣೆ ಹಾಕಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ತಿಳಿಸಿದರು.
ಕೇಂದ್ರದ ಬಿಜೆಪಿ ಸರ್ಕಾರವು ಅಕ್ರಮ ಮತದಾರರ ಪಟ್ಟಿಯನ್ನು ಸೃಷ್ಟಿಸುತ್ತಿದೆ ಎಂದು ಆಗಸ್ಟ್ 5 ರಂದು ಬೆಂಗಳೂರಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನಲೆಯಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜೀವ್ ಗೌಡರನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೋ, ಪಕ್ಷದ ಪರವಾಗಿ ದುಡಿದಿರುವರೋ ಅವರಿಗೆ ಮೊದಲ ಪ್ರಾಧಾನ್ಯತೆ ನೀಡಿ. ಪಕ್ಷದ ಬಲವರ್ಧನೆಗಾಗಿ ಹೊರಗಿನಿಂದ ಬಂದವರಿಗೂ ಅವಕಾಶ ಮಾಡಿಕೊಡಲು ನಾವು ಸಿದ್ಧವಾಗಿದ್ದೇವೆ. ಶಿಡ್ಲಘಟ್ಟದಲ್ಲಿ ಮೂರು ಕಾಂಗ್ರೆಸ್ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಪ್ರಥಮ ಆದ್ಯತೆಯನ್ನು ಕೊಡಬೇಕು. ಅವರಿವರು ಹೇಳುವ ಮಾತುಗಳಿಗೆ ಸಚಿವರು ಕಿವಿಗೊಡಬಾರದು ಎಂದರು.
ಸಚಿವರು ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಎರಡನೇ ಸ್ಥಾನ ಪಡೆದವರಿಗೆ ಸ್ಥಾನಮಾನ ಕೊಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲು ಕಾರಣರಾದವರು, 2018 ರ ಚುನಾವಣೆಯಲ್ಲೂ ಹಿರಿಯ ಕಾಂಗ್ರೆಸ್ ನಾಯಕ ವಿ.ಮುನಿಯಪ್ಪ ಅವರಿಗೂ ತೊಂದರೆ ಕೊಟ್ಟಿದ್ದಾರೆ. ಈಗ ಅವರು ಪಕ್ಷದ ಬಲವರ್ಧನೆಗಾಗಿ ಬಂದಿದ್ದಾರೆ. ಅವರಿಗೆ ಸ್ವಾಗತವಿದೆ ಎಂದು ಹೆಸರು ಹೇಳದೇ ಪುಟ್ಟು ಆಂಜಿನಪ್ಪ ಅವರ ಬಗ್ಗೆ ಹೇಳಿದರು. ನಮ್ಮ ಆಗ್ರಹವೇನಿದ್ದರೂ ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದಾಗಿದೆ ಎಂದರು.
ನಾಣ್ಯ ಮಾತ್ರ ಸದ್ದು ಮಾಡುವುದು, ನೋಟು ಸದ್ದು ಮಾಡುವುದಿಲ್ಲ. ಕೆಲವರು ಅತ್ತು ಕರೆದು ನಾಟಕ ಮಾಡುತ್ತಿದ್ದಾರೆ. ಅಳುವ ಗಂಡಸನ್ನು ಯಾವತ್ತೂ ನಂಬಬಾರದು. ಯಾರು ಶಿಸ್ತಿನಿಂದ ಪಕ್ಷದ ಪರವಾಗಿ ನಿಂತಿರುವರೋ ಅವರನ್ನು ಮಾತ್ರ ನಂಬಬೇಕು. ಪಕ್ಷದ ಉಳಿವಿಗಾಗಿ ದುಡಿಯುವವರು ನಾವು ಎಂದು ನುಡಿದರು.
ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ 103 ಡೈರಿ ನಾಮನಿರ್ದೇಶನಗಳನ್ನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿಸಿದ್ದೇನೆ. ಕೆಲವರಿರುತ್ತಾರೆ ಅಧಿಕಾರವಿದ್ದಾಗ ಕಾಂಗ್ರೆಸ್ ನಿಂದ ಉಪಯೋಗ ಪಡೆದುಕೊಳ್ಳುವುದು, ನಂತರ ಬೇರೆಡೆಗೆ ಹೋಗುತ್ತಾರೆ. ಅಂತಹವರು ರಾಜಕೀಯ ಮಾಡಬಾರದು, ಕಾಂಗ್ರೆಸ್ ಪಕ್ಷಕ್ಕೆ ಬರಬಾರದು. ನಗರಸಭೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿತ್ತು. ಆದರೆ ನಮ್ಮಲ್ಲಿಯೇ ಇದ್ದ ಮೋಸಗಾರರು ಬೇರೆಡೆಗೆ ಹೋದರು. ಅವರನ್ನು ಅಮಾನತ್ತು ಮಾಡಿಸಿದೆವು. ಅವರು ಈಗ ಫೋನ್ ಮಾಡಿ ನಮ್ಮನ್ನು ಯಾರೋ ದಿಕ್ಕು ತಪ್ಪಿಸಿದರು ಎಂದು ಹೇಳುತ್ತಿದ್ದಾರೆ. ಎಲ್ಲೋ ಎ.ಸಿ ಕೋಣೆಯಲ್ಲಿ ಕುಳಿತು ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಹೇಳಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಸುಭದ್ರವಾಗಿಯೂ ಇದೆ. ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ನ್ನು ಮೊಳಕೆಯಲ್ಲೇ ಕಿತ್ತಾಕುವ ಚಿಂತೆ ಬಿಟ್ಟು ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕೆಲಸ ಮಾಡಲಿ. ಕಾಂಗ್ರೆಸ್ ಬಗ್ಗೆ ಹೇಳಿಕೆ ಕೊಡುವ ಮುಂಚೆ ಯೋಚಿಸಿ ಕೊಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ ಉದಯಕುಮಾರ್, ಕೃಷ್ಣಾರೆಡ್ಡಿ, ಕೆ.ಗುಡಿಯಪ್ಪ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಟಿ.ಕೆ.ನಟರಾಜ್, ಅಫ್ಸರ್ ಪಾಷ, ಚಿದಾನಂದಮೂರ್ತಿ, ಹೀರೆಬಲ್ಲ ರವಿ, ಮಾದೇನಹಳ್ಳಿ ರವಿ, ಗುಡಿಹಳ್ಳಿ ನಾರಾಯಣಸ್ವಾಮಿ, ಮುನೀಂದ್ರ, ಗಾಯಿತ್ರಮ್ಮ ಹಾಜರಿದ್ದರು.
ಪ್ರತಿಭಟನೆಗೆ 5 ಸಾವಿರ ಮಂದಿ
ಆಗಷ್ಟ್ 5 ರಂದು ಬೆಂಗಳೂರಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಶಿಡ್ಲಘಟ್ಟ ಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರು ತೆರಳಬೇಕಿದ್ದು ಅಂದು ಬೆಳಗ್ಗೆ 7 ಗಂಟೆಗೆ ಎಲ್ಲ ಗ್ರಾಮ ಪಂಚಾಯಿತಿಗಳಿಂದಲೂ ಬಸ್ ವ್ಯವಸ್ಥೆ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು, ಎಲ್ಲ ಮುಖಂಡರು ತಮ್ಮ ಶಕ್ತಿ ಮೀರಿ ಕೆಲಸ ಮಾಡಬೇಕೆಂದು ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್ ಗೌಡ ಕೋರಿದರು.
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಅಧ್ಯಕ್ಷೆ ಶಶಿಕಲಾರಮೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಮಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಗ್ರಾಮ ಪಂಚಾಯಿತಿಯಿಂದ, ಆರೋಗ್ಯ, ಪೊಲೀಸ್, ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಂಡು ಪೋರ್ಟಲ್ ಗೆ ನಮೂದಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ವಿವಿಧ ಇಲಾಖೆಗಳಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತ ಮಾಹಿತಿಯ ಬಗ್ಗೆ ಚರ್ಚೆ ನಡೆಸಿದರು. ಹಳ್ಳಿವಾರು ಎಷ್ಟು ಪಡಿತರ ಚೀಟಿಗಳಿವೆ, ಎಷ್ಟು ಬಿಪಿಎಲ್, ಎಪಿಎಲ್, ಅಂತ್ಯೋದಯ, ಎಷ್ಟು ಫಲಾನುಭವಿಗಳು ಆಹಾರ ಧಾನ್ಯಗಳು ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ, ಎನ್ನುವ ಮಾಹಿತಿಯ ಕುರಿತು ಚರ್ಚೆ ನಡೆಸಿದರು. ಕಂದಾಯ ಇಲಾಖೆಯಿಂದ ಎಷ್ಟು ಮಂದಿ ಪಿಂಚಣಿ ಪಡೆಯುತ್ತಿದ್ದಾರೆ, ಎಷ್ಟು ಮಂದಿ ಅನರ್ಹರಿದ್ದಾರೆ. ಪಿಂಚಣಿಗಾಗಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಮುಂತಾದ ಮಾಹಿತಿಗಳು ಪಡೆದುಕೊಂಡರು. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ, ಮನೆಗೆ ಕೊಳಾಯಿ ಸಂಪರ್ಕ ಕಲ್ಪಿಸಿದ್ದು, ಒಂದು ಕೊಳಾಯಿಗೆ ಎಷ್ಟು ನೀರಿನ ಶುಲ್ಕವನ್ನು ವಿಧಿಸಬೇಕು ಎನ್ನುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ತಾಯಿ, ಮಗುವಿನ ಮರಣ ಸಂಭವಿಸಿಲ್ಲ. ಗಂಡಾಂತರ ಮಹಿಳೆಯರಿಲ್ಲ 36 ಹೆರಿಗೆಗಳಾಗಿದ್ದು, ಎಲ್ಲಾ ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಆಗಿವೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯ ವಿವಾಹಗಳಾಗಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರು, ಗರ್ಭೀಣಿಯರಿಗೆ ಆಹಾರವನ್ನು ಒದಗಿಸಲಾಗುತ್ತಿದೆ. ಮಕ್ಕಳ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಗಾಗಲೇ ಮಳೆಯಾಗುತ್ತಿದ್ದು, ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಕೃಷಿ ಇಲಾಖೆಯಿಂದ ಅಗತ್ಯವಾಗಿರುವ ಬಿತ್ತನೆ ಬೀಜಗಳನ್ನು ರೈತರಿಗೆ ಒದಗಿಸುವಂತೆ ಸೂಚನೆ ನೀಡಲಾಯಿತು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳನ್ನು ಹೆಚ್ಚಿಸಿಕೊಳ್ಳಲು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶ್ರಮಿಸಬೇಕು. ಬಿಸಿಯೂಟ ಗುಣಮಟ್ಟದಲ್ಲಿರಬೇಕು, ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಚಗೊಳಿಸುವಂತಹ ಪ್ರಯತ್ನಕ್ಕೆ ಕೈ ಹಾಕಬಾರದು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಮಕ್ಕಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಯಿತು. ಆಶಾ ಕಾರ್ಯಕರ್ತೆಯರು, ಮಳೆಗಾಲದಲ್ಲಿ ಬರಬಹುದಾದ ರೋಗಗಳ ಕುರಿತು, ಸಾರ್ವಜನಿಕರಿಗೆ ಅಗತ್ಯವಾಗಿರುವ ಅರಿವು ಮೂಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ಶಾರದಾ ಅವರು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾರಮೇಶ್, ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸರೆಡ್ಡಿ, ಎಂ.ಜೆ.ಶ್ರೀನಿವಾಸ್, ದೇವರಾಜ್, ನಾರಾಐಣಸ್ವಾಮಿ, ಕಮಲಮ್ಮ, ಶೋಭಾ, ಗ್ರಾಮ ಆಡಳಿತ ಅಧಿಕಾರಿ ಸುಜ್ಞಾನಮೂರ್ತಿ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.