Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯ ಮಹಿಳಾ ಫಲಾನುಭವಿಗಳ ಸಂಖ್ಯೆ 85,90,102 ಹಾಗೂ ವಿತರಿಸಿರುವ ಉಚಿತ ಟಿಕೆಟ್ ಗಳ ಮೊತ್ತ 30,71,48,142 ರೂ ಎಂದು KSRTC ಘಟಕ ವ್ಯವಸ್ಥಾಪಕ ಟಿ.ವಿ.ನಾಗೇಶ್ ತಿಳಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಸೋಮವಾರ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬಸ್ ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಅವರು ಮಾತನಾಡಿದರು.
2023 ರ ಜೂನ್ 11 ರಿಂದ 2025 ರ ಜುಲೈ 11 ರವರೆಗೂ ಉಚಿತ ಟಿಕೆಟಿನ ಯೋಜನೆಯ ಉಪಯೋಗವನ್ನು ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ಹೋಗುವ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಪಡೆದುಕೊಂಡಿದ್ದಾರೆ. ಹಲವಾರು ಹೆಚ್ಚುವರಿ ಬಸ್ ಗಳನ್ನು ಸಹ ಘಟಕದಿಂದ ಬಿಡಲಾಗಿದೆ ಎಂದು ಹೇಳಿದರು.
ಘಟಕ ಉಸ್ತುವಾರಿ ಅಧಿಕಾರಿ ಜೆ.ವಿ.ಶ್ರೀಧರ್, ಬಸ್ ನಿಲ್ದಾಣಾಧಿಕಾರಿ ಬಿ.ವಿ.ಚಲಪತಿ, ಘಟಕದ ಸಂಚಾರಿ ನಿರೀಕ್ಷಕ ಪರಮೇಶ್ವರ ಸಿಂಘಿ , ಗಣಕ ಮೇಲ್ವಿಚಾರಕ ಪಿ.ಎಂ. ನಾರಾಯಣಸ್ವಾಮಿ, ಸಿಬ್ಬಂದಿ ಬಾಬಾ, ಅರುಣ , ವಸಂತ್ ಗೌಡ , ಸೇರಿದಂತೆ ಪ್ರಯಾಣಿಕರು, ಸಾರ್ವಜನಿಕರು ಹಾಜರಿದ್ದರು.
Sidlaghatta : ಕುರ್ಚಿ ಭದ್ರಪಡಿಸಿಕೊಳ್ಳುವುದಕ್ಕೆ ಮಾತ್ರ ರಾಜ್ಯ ಕಾಂಗ್ರೆಸ್ ಪಕ್ಷ ಸೀಮಿತವಾಗಿದೆ. ರಾಜ್ಯದ ಅಭಿವೃದ್ಧಿಯ ಚಿಂತನೆ ಅವರಲ್ಲಿ ಎಳ್ಳಷ್ಟೂ ಇಲ್ಲ ಎಂದು ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಶಿಡ್ಲಘಟ್ಟದ ಹೊರವಲಯದ ಚೀಮನಹಳ್ಳಿ ಮತ್ತು ವರದನಾಯಕನಹಳ್ಳಿ ನಡುವಿನ ಖಾಸಗಿ ಜಮೀನಿನಲ್ಲಿ ನಡೆದ “ಜನರೊಂದಿಗೆ ಜನತಾದಳ” ಎಂಬ ಬೃಹತ್ ಜೆಡಿಎಸ್ ಪಕ್ಷದ ಸಮಾವೇಶ ಹಾಗೂ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಎಂಟರಿಂದ ಹತ್ತು ಪರ್ಸೆಂಟ್ ಅಪ್ ಗ್ರೇಡ್(ಕಮಿಷನ್) ಹಣ ಕೊಟ್ಟರೆ ನಮಗೆ ಕಾಮಗಾರಿಗಳು ಸಿಗಬಹುದೇನೋ ಎಂದು ಕಾಂಗ್ರೆಸ್ ಶಾಸಕರು ಹೇಳುವುದನ್ನು ಕೇಳುವಾಗ, ಎಂತಹ ಹೀನಾಯಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಲುಪಿದೆ. ನಾಲ್ಕೂವರೆ ಲಕ್ಷ ಕೋಟಿಯ ದೊಡ್ಡ ಬಡ್ಜೆಟ್ ಮಂದಿಸಿರುವುದಾಗಿ ಮುಖ್ಯ ಮಂತ್ರಿ ಹೇಳಿಕೊಳ್ಳುತ್ತಾರೆ. ಬಡ್ಜೆಟ್ ಪ್ರಮಾಣ ಹೇಳುತ್ತಾರೆ, ಆದರೆ ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ಗ್ಯಾರಂಟಿಗೆ ಹಂಚಲು ನಿಮಗೆ 55 ಸಾವಿರ ಕೋಟಿ ರೂ ಬೇಕು ಹಾಗಾಗಿ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಆದರೆ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದರು. ಯಾವುದೇ ಕ್ಷೇತ್ರಕ್ಕೂ ಅನುದಾನ ಕಡಿಮೆ ಮಾಡಿರಲಿಲ್ಲ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಭಿನ್ನ ಭಿನ್ನವಾಗಿ ಮಾತನಾಡುತ್ತಿದ್ದಾರೆ. ಗ್ಯಾರಂಟಿಗಳು ಕೊಡುವುದಕ್ಕೆ ಜನರ ಮೇಲೆ ತೆರಿಗೆ ಹೇರಲಾಗಿದೆ. ಗಾಳಿ, ಬೆಳಕು ಬಿಟ್ಟು, ಎಲ್ಲದರ ಮೇಲೆ ತೆರಿಗೆ ಹಾಕಿದ್ದಾರೆ. ಜೆಡಿಎಸ್ ಪಕ್ಷದ 12 ಮಂದಿ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಹಣಕ್ಕಾಗಿ, ಅಧಿಕಾರಕ್ಕಾಗಿ ಮಾರಾಟವಾಗುವ ಶಾಸಕರು ನಮ್ಮಲ್ಲಿ ಇಲ್ಲ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಇರುವ ದೊಡ್ಡ ಶ್ರೀರಕ್ಷೆಯೆಂದರೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣನವರು ಅವರ ಅಧಿಕಾರಾವಧಿಯಲ್ಲಿ ಮಾಡಿರುವ ಜನೋಪಯೋಗಿ ಕಾರ್ಯಗಳು. ಪ್ರತಿಯೊಂದು ಮನೆ ಮನಗಳಿಗೂ ಈ ವಿಚಾರವನ್ನು ನಮ್ಮ ಕಾರ್ಯಕರ್ತರು ತಲುಪಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ, ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕಿದೆ. 2028 ರ ಚುನಾವಣೆ ನಡೆಯಲ್ಲಿ ಎನ್.ಡಿ.ಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು, ಐದು ವರ್ಷಗಳ ಕಾಲ ನಮ್ಮ ಕುಮಾರಣ್ಣನವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬ ಸಂಕಲ್ಪ ನಮ್ಮದು ಎಂದರು.
ಕೃಷಿಗೆ ಮತ್ತು ಕುಡಿಯಲು ನೀರು ಒದಗಿಸಿಕೊಡಬೇಕು ಎಂಬ ನಮ್ಮ ಸಂಕಲ್ಪ ನೆರವೇರಬೇಕಾದರೆ, ಬಯಲು ಸೀಮೆಗೆ ನೀರು ಸಿಗಬೇಕಾದರೆ ನಮ್ಮ ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಕೂಟ ಅಧಿಕಾರಕ್ಕೆ ಬಂದು ನಮ್ಮ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂದು ನುಡಿದರು.
ನಗರಕ್ಕೆ ಆಗಮಿಸಿದ ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಬೃಹತ್ ಗಾತ್ರದ ಡ್ರಾಗನ್ ಫ್ರೂಟ್, ಚಕ್ಕೋತಾ ಮತ್ತು ಸೇಬಿನ ಹಾರಗಳನ್ನು ಕ್ರೇನ್ ಮೂಲಕ ಹಾಕಿ, ಕಳಸ ಸ್ವಾಗತ ಕೋರಲಾಯಿತು. ಹೊತ್ತ ಮಹಿಳೆಯರು ಮತ್ತು, ದೇವತಾ ವೇಷಧಾರಿಗಳು, ತಮಟೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಯಶಸ್ವಿನಿ ಎಂಬ ಡಿಪ್ಲೊಮ ಓದುವ ವಿಶೇಷಚೇತನ ಹೆಣ್ಣುಮಗುವಿಗೆ ಮೆಕ್ಯಾನಿಕ್ಸ್ ಸಾಫ್ಟ್ವೇರ್ ಸೊಲ್ಯೂಷನ್ಸ್ ಮುಖ್ಯಸ್ಥ ಕೃಷ್ಣಾ ಸಾಮಂತ್ ಲಾಪ್ ಟಾಪ್ ನೀಡಿದರು.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ನಾಗಮಂಗಲ ಸುರೇಶ್ ಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ರೋಷನ್ ಅಬ್ಬಾಸ್, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜುನಾಥ್, ಮಾಲೂರು ಜಿ.ಇ ರಾಮೇಗೌಡ, ಸಂದೀಪ್ ಪಾಟೀಲ್, ವಕ್ಕಲೇರಿ ರಾಮಣ್ಣ, ವೆಂಕಟೇಶ್ವರರಾವ್, ಕೋಲಾರ ಸಿಎಂಆರ್ ಶ್ರೀನಾಥ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ತೂಪಲ್ಲಿ ಚೌಡರೆಡ್ಡಿ, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ, ಡಾ.ಧನಂಜಯರೆಡ್ಡಿ, ಶಿವಾರೆಡ್ಡಿ, ಕೆ.ಲಕ್ಷ್ಮೀನಾರಾಯಣರೆಡ್ಡಿ, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಹುಜಗೂರು ರಾಮಣ್ಣ ಹಾಜರಿದ್ದರು.
Sidlaghatta : ಅಕ್ರಮ ಆಸ್ತಿಗಳಿಕೆ, ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಉಲ್ಲಂಘನೆ ಆರೋಪದಡಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ವಿವಿಧ ಕಡೆಯ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ್ದು ರಾಜಕೀಯ ಪ್ರೇರಿತ ಅಲ್ಲ, ಅದೊಂದು ಸಹಜ ಕಾನೂನು ಪ್ರಕ್ರಿಯೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದಲ್ಲಿನ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ದಾಳಿಯಿಂದ ಆತಂಕ, ಭಯ ಬಿದ್ದಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಯ ಪಿತೂರಿಯಿಂದ ಇಡಿ ದಾಳಿ ನಡೆಸಿದೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರ ಎಂದರು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ಆದಾಯದ ಅಫಿಡವಿಟ್‌ನಲ್ಲಿ ಕೆಲ ಆಸ್ತಿ, ಆದಾಯದ ಮೂಲಗಳನ್ನು ಮುಚ್ಚಿಟ್ಟು ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.
ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಇದೀಗ ಇಡಿ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಲಿದ್ದು ಶಾಸಕ ಸುಬ್ಬಾರೆಡ್ಡಿ ಅವರು ಸೂಕ್ತ ದಾಖಲೆ, ಉತ್ತರ ನೀಡಿದರೆ ಅವರು ಇಡಿ ದಾಳಿಯ ಕಾನೂನಿನ ಕುಣಿಕೆಯಿಂದ ಪಾರಾಗಲಿದ್ದಾರೆ.
ಒಂದೊಮ್ಮೆ ಸೂಕ್ತ ದಾಖಲೆ ನೀಡದಿದ್ದಲ್ಲಿ ಮತ್ತು ಕಾನೂನು ಉಲ್ಲಂಘಿಸಿ ಅಧಿಕ ಆಸ್ತಿ ಸಂಪಾದಿಸಿ ಮಾಹಿತಿ ಮುಚ್ಚಿಟ್ಟಿದರೆ ಅವರು ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ. ಇಡಿ ಕೇಳುವ ಎಲ್ಲ ಮಾಹಿತಿಯನ್ನು ಒದಗಿಸಿ ಅದು ಸರಿಯಾಗಿದ್ದಲ್ಲಿ ಏನೂ ಸಮಸ್ಯೆಯಾಗದು ಎಂದರು.
ಸಂವಿಧಾನ ಬದ್ಧವಾಗಿ ಶಾಸಕರಾಗಿ ಆಯ್ಕೆಯಾದವರು ಮೊದಲು ಕಾನೂನನ್ನು ಗೌರವಿಸುವಂತಾಗಬೇಕು, ಆ ಮೂಲಕ ಕ್ಷೇತ್ರದ ಮತದಾರರಿಗೆ ಮಾದರಿಯಾಗಬೇಕು, ಅದು ಬಿಟ್ಟು ಇನ್ನೊಬ್ಬರ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡುವುದು ಶಾಸಕರಿಗೆ ಸೂಕ್ತವಲ್ಲ ಎಂದರು.
ನೀವು ಈಗಾಗಲೇ ಸಚಿವ ಸ್ಥಾನಕ್ಕೆ ಕಣ್ಣಿಟ್ಟು ಟವೆಲ್ ಹಾಕಿದ್ದೀರಿ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಆಕಾಂಕ್ಷಿಗಳ ದಂಡು ಇದ್ದು ನಿಮಗೆ ಸಚಿವ ಸ್ಥಾನವನ್ನು ತಪ್ಪಿಸಲು ನಿಮ್ಮದೇ ಕಾಂಗ್ರೆಸ್ ಪಕ್ಷದ ಸಚಿವ ಸ್ಥಾನದ ಆಕಾಂಕ್ಷಿಗಳು ಏಕೆ ಪಿತೂರಿ ನಡೆಸಿರಬಾರದು ಎಂದು ಅವರು ಪ್ರಶ್ನಿಸಿದರು.
ಮೊದಲು ನಿಮ್ಮ ಪಕ್ಷದಲ್ಲಿನ ನಿಮ್ಮ ಶತ್ರುಗಳನ್ನು ಗುರುತಿಸಿ ಅವರು ಮಾಡುವ ಪಿತೂರಿಗಳಿಂದ ತಪ್ಪಿಸಿಕೊಳ್ಳಿ ಆನಂತರ ಬೇರೆ ಪಕ್ಷದವರ ಬಗ್ಗೆ ಮಾತನಾಡಿ ಎಂದರು.
Sidlaghatta : ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಕಲಿಸಿದಾಗ ಅವರು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉಪಯುಕ್ತರಾಗುತ್ತಾರೆ ಎಂದು ರಾಯಲ್ ಇಂಗ್ಲಿಷ್ ಪಬ್ಲಿಕ್ ಶಾಲೆಯ ವ್ಯಸಸ್ಥಾಪಕ ದೇವರಾಜ್ ತಿಳಿಸಿದರು.
ತಾಲ್ಲೂಕಿನ ಬೂದಾಳದ ರಾಯಲ್ ಇಂಗ್ಲಿಷ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಾತಾ ಪಿತೃ ವಂದನೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗಬಾರದು. ಗುಣ ಮಟ್ಟದ ಶಿಕ್ಷಣದೊಂದಿಗೆ ಜೀವನ ಕ್ರಮ, ಸಂಸ್ಕೃತಿ, ಆಚಾರ, ವಿಚಾರ, ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಶಿಕ್ಷಕರು ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿದರು.
ರಾಯಲ್ ಇಂಗ್ಲಿಷ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಭಾಸ್ಕರ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಆಚರಣೆಯ ಮೂಲಕ ಮಕ್ಕಳಿಗೆ ತಿಳಿಸಿಕೊಡುತ್ತಿದ್ದೇವೆ. ನಮ್ಮ ಶಾಲೆಗೆ ದಾಖಲಾದ ಎಲ್. ಕೆ.ಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಅವರ ಮುಂದಿನ ವ್ಯಾಸಂಗ ಸೂಸೂತ್ರವಾಗಿ ಸಾರಲಿ ಎಂಬ ಸದುದ್ದೇಶದಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು
ಮಕ್ಕಳು ಅಮ್ಮನ ತೊಡೆ ಮೇಲೆ ಕುಳಿತು ಅಕ್ಷರಾಭ್ಯಾಸವನ್ನು ಪ್ರಾರಂಭಿಸಿದರು. ಅರ್ಚಕ ವೈ.ಎನ್. ದಾಶರಥಿ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಮತ್ತು ಇತರ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯದಲ್ಲಿ ಕಕ್ಷಿದಾರರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವುದರಿಂದ ಪರಸ್ಪರರ ನಡುವೆ ವೈಷಮ್ಯ ಇಲ್ಲದಾಗಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ನೆಮ್ಮದಿಯ ಹಾಗೂ ಶಾಂತಿಯುತ ಬದುಕಿಗೂ ಇದು ಕಾರಣವಾಗಲಿದೆ ಎಂದು ಹೇಳಿದರು.
ಶಿಡ್ಲಘಟ್ಟ ನ್ಯಾಯಾಲಯದಲ್ಲಿ ಒಟ್ಟು 693 ಪ್ರಕರಣಗಳು ಇತ್ಯರ್ಥಗೊಂಡು, 1,69,64,235 ರೂ ಸಂದಾಯವಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ. ಎಸ್ ಅವರು ಕಾರ್ಯನಿರ್ವಹಿಸಿ ಲೋಕ ಅದಾಲತ್ ನಲ್ಲಿ ಹಲವು ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ವಕೀಲರಾದ ಕೆ. ಎಂ. ನಾಗಮಣಿ, ಆರ್.ಶರತ್ ಕುಮಾರ್, ವರುಣ ಕಾರ್ಯನಿರ್ವಹಿಸಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಬ್ಬಿಣಯುಗದ ಬೃಹತ್ ಶಿಲಾಯುಗದ ಕಲ್ಗೋರಿಗಳು ಪತ್ತೆಯಾಗಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟಮೊದಲಬಾರಿಗೆ ಈ ರೀತಿಯ ಶಿಲಾಯುಗದ ನೆಲೆಗಳು ಕಂಡುಬಂದಿದ್ದು, ಈ ಭಾಗದ ಇತಿಹಾಸವನ್ನು ಸುಮಾರು 2,300 ವರ್ಷಗಳ ಹಿಂದಕ್ಕೆ ಕೊಂಡೊಯ್ಯುತ್ತವೆ.
ಪುರಾತತ್ವ ಇಲಾಖೆಯ ವತಿಯಿಂದ ಗ್ರಾಮಾವಾರು ಸರ್ವೆ ನಡೆಸುತ್ತಿರುವ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರಿಗೆ ತಾಲ್ಲೂಕಿನ ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿ ಶಿಲಾಯುಗದ ಸಮಾಧಿಯ ಕುರುಹುಗಳು ಪತ್ತೆಯಾಗಿವೆ. ಇವುಗಳನ್ನು ಒರಟು ಬಂಡೆ ಮತ್ತು ಚಪ್ಪಡಿಗಳನ್ನು ಬಳಸಿ ನಿರ್ಮಿಸಲಾಗಿದ್ದು, 1.5 ರಿಂದ 2 ಮೀಟರ್ ಅಳತೆ ಹೊಂದಿವೆ. ಇವುಗಳ ನಿರ್ಮಾಣ ಕೂಡ ವಿಶಿಷ್ಟವಾಗಿದೆ.
“ಇವನ್ನು ಕಬ್ಬಿಣಯುಗದ ಬೃಹತ್ ಶಿಲಾಯುಗದ ಸಂಸ್ಕೃತಿಗಳೆಂದು ಕರೆಯುತ್ತೇವೆ. ಇವು ಸುಮಾರು ಕ್ರಿ.ಪೂ 300 ಅಂದರೆ ಇಂದಿಗೆ ಸುಮಾರು 2300 ವರ್ಷಗಳಷ್ಟು ಹಿಂದಿನವು. ಈ ಕಲ್ಗೋರಿಗಳು ಅಥವಾ ಕಲ್ಮನೆಗಳು ಶಿಲಾಯುಗದ ಜನರ ಜೀವನಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ವಲಸಿಗರಾಗಿ ಜೀವನ ನಡೆಸುತ್ತಿದ್ದ ಆಗಿನ ಜನರು ಯಾವುದಾದರೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ತಮ್ಮ ಗುಂಪಿನ ಹಲವರು ಸತ್ತಾಗ, ಅವರನ್ನೊಂದು ಕಡೆ ಹೂತು, ಹತ್ತಿರದಲ್ಲಿ ಈ ರೀತಿಯ ಕಲ್ಗೋರಿಗಳನ್ನು ನಿರ್ಮಿಸುತ್ತಿದ್ದರು. ಅವರು ಸಾಮಾನ್ಯವಾಗಿ ನೀರಿನ ಸೆಲೆಗಳ ಬಳಿಯೇ ವಾಸಿಸುತ್ತಿದ್ದರು” ಎಂದು ಶಿಲಾಗೋರಿಗಳ ಕುರಿತಾಗಿ ಅಧ್ಯಯನ ಮಾಡಿರುವ ಡಾ.ಶಿವತಾರಕ್ ಮಾಹಿತಿ ನೀಡಿದರು.
“ನಮ್ಮ ರಾಜ್ಯದಲ್ಲಿ 1440 ಕ್ಕೂ ಹೆಚ್ಚು ಬೃಹತ್ ಶಿಲಾ ತಾಣಗಳಿದ್ದು, ಅವುಗಳ ಪೈಕಿ ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಅತಿದೊಡ್ಡ ಶಿಲಾ ಗೋರಿಗಳಿರುವ ತಾಣವಾಗಿದ್ದು, ಆನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. ಕೋಲಾರದ ಅರಾಬಿ ಕೊತ್ತನೂರು ಮತ್ತು ಕೊಯಿರಾ ಗ್ರಾಮಗಳಲ್ಲಿ ಬೃಹತ್ ಕಲ್ಗೋರಿಗಳನ್ನು ನಾವು ಕಾಣಬಹುದು” ಎಂದು ಅವರು ಹೇಳಿದರು.
ಗ್ರಾಮಸ್ಥರಾದ ಮುನಿನಾರಾಯಣಪ್ಪ, ನರಸಪ್ಪ, ಮುನಿರಾಜು ಮತ್ತು ಶ್ರೀನಾಥ್ ಇದ್ದರು.
Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ , ತಾಲ್ಲೂಕು ಪಂಚಾಯಿತಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಜನಸಂಖ್ಯೆ ದಿನಾಚರಣೆ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಇದು ಜನರಲ್ಲಿ ಜವಾಬ್ದಾರಿಯುತ ಚಿಂತನೆ ಮೂಡಿಸಬೇಕಾದ ಮಹತ್ವದ ವೇದಿಕೆ. ಇನ್ನು ಕೆಲವು ವರ್ಷಗಳಲ್ಲಿ ಭಾರತವು ಸಾವಿರ ಕೋಟಿ ಜನಸಂಖ್ಯೆ ತಲುಪುವ ಸಾಧ್ಯತೆ ಇದೆ. ಇದರಿಂದ ನಿರುದ್ಯೋಗ, ಬಡತನ, ಆಹಾರ ಕೊರತೆ, ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ಹೇಳಿದರು.
ಇವತ್ತಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅನೇಕ ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ತಮ್ಮ ಬದುಕನ್ನು ರೂಪಿಸುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ದೊರಕಿದಾಗ ಮಾತ್ರ ನಿಜವಾದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಭಾರತ ಈಗ 141 ಕೋಟಿ ಜನರೊಂದಿಗೆ ಚೀನಾವನ್ನು ಹಿಂದಿಕ್ಕಿದ್ದು, ವಿಶ್ವದ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವಾಗಿದೆ. 805 ಕೋಟಿ ಜನ ವಿಶ್ವದಾದ್ಯಂತ ಬದುಕುತ್ತಿರುವ ಈ ಕಾಲಘಟ್ಟದಲ್ಲಿ, ಆರೋಗ್ಯ, ಆಹಾರ, ಉದ್ಯೋಗ ಮತ್ತು ವಾಸ್ತವ್ಯ ವ್ಯವಸ್ಥೆಗಳ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾ ವಸ್ತ್ರದ್, ಆಯುಷ್ ಇಲಾಖೆಯ ವೈದ್ಯ ಡಾ. ವಿಜಯ್ ಕುಮಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಡಾ. ಮಾಧವನ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಆರೋಗ್ಯ ಇಲಾಖೆಯ ಟಿ.ಟಿ. ನರಸಿಂಹಪ್ಪ, ನಂದಿನಿ, ಚೈತ್ರ, ಅಪೇಕ್ಷಾ,ಗೀತಾ,ಸುನಿಲ್,ಕೀರ್ತಿ, ಅಪ್ರೊಜ್, ಪ್ರಣತಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Sidlaghatta : ರೈತರು ಕೃಷಿ ಸಾಲದ ಸೆಪ್ಟೆಂಬರ್ ತಿಂಗಳ ಕಂತಿನ ಹಣವನ್ನು ಸೆಪ್ಟೆಂಬರ್ ವರೆಗೂ ಕಾಯದೆ ಅದಕ್ಕೂ ಮುಂಚೆಯೆ ಕಟ್ಟುವಂತೆ ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷ ಬಂಕ್ ಮುನಿಯಪ್ಪ ಅವರು ರೈತರಲ್ಲಿ ಮನವಿ ಮಾಡಿದರು.
ನಗರದಲ್ಲಿನ ಪಿ.ಎಲ್.ಡಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಲ ಮರುಪಾವತಿಸಿದ ರೈತರಿಗೆ ಸಾಲ ಪಡೆಯುವಾಗ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದ ಜಮೀನಿನ ದಾಖಲೆಗಳನ್ನು ರೈತರಿಗೆ ವಾಪಸ್ ಮಾಡಿ ಅವರು ಮಾತನಾಡಿದರು.
ಸಾಲ ವಸೂಲಾತಿಯ ಪ್ರಮಾಣದಲ್ಲಿ ಹೆಚ್ಚಳ ಆದರೆ ಮಾತ್ರ ನಮಗೆ ನಬಾರ್ಡ್ ನಿಂದ ಅನುದಾನ ಸಿಗುತ್ತದೆ. ಕಳೆದ ಮಾರ್ಚ್ ಗೆ ಶೇ 53 ರಷ್ಟು ಸಾಲ ವಸೂಲಾತಿಯಾಗಿದ್ದು ಸೆಪ್ಟೆಂಬರ್‌ಗೆ ಶೇ 80 ರಷ್ಟು ಸಾಲ ವಸೂಲು ಮಾಡಲು ನಮ್ಮ ಬ್ಯಾಂಕಿನ ಆಡಳಿತ ಮಂಡಳಿ ಗುರಿ ಇಟ್ಟುಕೊಂಡಿದೆ.
ರೈತರು ತಮ್ಮ ಸಾಲದ ಸೆಪ್ಟೆಂಬರ್ ತಿಂಗಳ ಕಂತಿನ ಹಣವನ್ನು ಆದಷ್ಟು ಬೇಗ ಕಟ್ಟಿದರೆ ನಬಾರ್ಡ್ ನಿಂದ ನಮಗೆ ಸಿಗುವ ಅನುದಾನ ಹೆಚ್ಚುತ್ತದೆ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ನೀಡಬಹುದು ಎಂದು ಹೇಳಿದರು.
ಸುಸ್ತಿ ಸಾಲ ವಸೂಲಿ ಮಾಡಿರುವ ಬ್ಯಾಂಕುಗಳಲ್ಲಿ ನಮ್ಮ ಬ್ಯಾಂಕು ರಾಜ್ಯದಲ್ಲಿಯೆ ಮುಂಚೂಣಿಯಲ್ಲಿದೆ. ಸುಸ್ತಿ ಸಾಲದ ಪೈಕಿ ಶೇ 20 ರಷ್ಟು ಸಾಲ ವಸೂಲಿ ಮಾಡಿದ್ದು ಇದರಿಂದ ಬ್ಯಾಂಕ್ ನ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದ್ದು ರೈತರಿಗೆ ಸಾಲ ನೀಡುವ ಸಾಮರ್ಥ್ಯ ಹೆಚ್ಚಲಿದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳ ಹಿಂದೆಯೆ ಪಡೆದ ಸಾಲವನ್ನು ಮರು ಪಾವತಿಸಿದ್ದರೂ ಅವರು ಸಾಲ ಪಡೆದುಕೊಳ್ಳುವಾಗ ಬ್ಯಾಂಕ್ ಗೆ ನೀಡಿದ್ದ ಜಮೀನಿನ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಬ್ಯಾಂಕ್ ನಿಂದ ವಾಪಸ್ ಪಡೆದುಕೊಳ್ಳದೆ ಇಲ್ಲೇ ಇದ್ದವು. ಅಂತಹ ಎಲ್ಲರ ದಾಖಲೆಗಳನ್ನು ಬ್ಯಾಂಕ್ ನ ಅಧಿಕಾರಿ ಸಿಬ್ಬಂದಿಯೆ ರೈತರ ಮನೆಗೆ ತಲುಪಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಲ ರೈತರಿಗೆ ಸಾಂಕೇತಿಕವಾಗಿ ದಾಖಲೆಗಳನ್ನು ಹಿಂತಿರುಗಿಸಿದ್ದು ಉಳಿದ 250 ಮಂದಿಗೆ ಅವರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಬೈರೇಗೌಡ ಮಾತನಾಡಿ, ಸಾಲ ನೀಡುವಷ್ಟು ಬ್ಯಾಂಕ್ ಆರ್ಥಿಕವಾಗಿ ಸದೃಡವಾಗದ ಸ್ಥಿತಿಯಲ್ಲೂ ಶೇ 20 ರಷ್ಟು ಸುಸ್ತಿ ಸಾಲವನ್ನು ಕಟ್ಟಿಸಿಕೊಳ್ಳುವ ಮೂಲಕ ಬ್ಯಾಂಕ್ ನ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ಆಡಳಿತ ಮಂಡಳಿ ಮತ್ತು ಸಾಲವನ್ನು ಮರು ಪಾವತಿ ಮಾಡಿದ ರೈತರ ಸಹಕಾರದಿಂದ ಇದೀಗ ಬ್ಯಾಂಕ್ ಸಾಲ ನೀಡುವಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಬೈರೇಗೌಡ, ವ್ಯವಸ್ಥಾಪಕ ಆರ್.ಶ್ರೀನಾಥ್, ಉಪಾಧ್ಯಕ್ಷ ಡಿ.ಎನ್.ರಾಮಚಂದ್ರರೆಡ್ಡಿ, ನಿರ್ದೇಶಕರಾದ ಎಂ.ಪಿ.ರವಿ, ಎಂ.ಮುರಳಿ, ಸುರೇಶ್, ಮಂಜುನಾಥ್, ಚಂದ್ರನಾಥ್, ಶ್ರೀನಿವಾಸ್, ಸುನಂದಮ್ಮ, ನರಸಿಂಹಪ್ಪ, ಸಿಬ್ಬಂದಿ ಟಿ.ಸಿ.ಶ್ಯಾಮಲ, ಚಂದ್ರಶೇಖರ್, ಪ್ರವೀಣ್ ಕುಮಾರ್, ಪಲ್ಲವಿ ಹಾಜರಿದ್ದರು.