Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ದೇವಾಲಯವನ್ನು ವಿಶೇಷ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು.
ದೇವಾಲಯದಲ್ಲಿ ಗೋಪೂಜೆ, ಮಂದಿರ ಪ್ರವೇಶ, ಗಣಪತಿ ಹೋಮ, ಪುಣ್ಯಾಹ ನಾಂದಿ, ಕಳಶಾರಾಧನೆ, ಗಣಹೋಮ ನವಗ್ರಹಹೋಮ, ಪವಮಾನ ಹೋಮ, ಪೂರ್ಣಾಹುತಿ, ಸುಪ್ರಭಾತ, ಪಾದುಕೆಪೂಜೆ, ಪಾದುಕೆ ಪ್ರದಕ್ಷಿಣೆ, ವ್ಯಾಸ ಪೂಜೆ, ಸುದರ್ಶನ ಹೋಮ, ಸತ್ಯನಾರಾಯಣ ಪೂಜೆ, ಸಾಯಿನಾಥಹೋಮ, ಮುಂತಾದ ಪೂಜಾ ಕಾರ್ಯಕ್ರಮಗಳು ನಡೆದವು.
ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ದೇವಾಲಯಕ್ಕೆ ಬಂದು ಸಾಲಾಗಿ ನಿಂತು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡು ಹೋದರು. ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಭರತ ನಾಟ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು.
ಸಾವಿರಾರು ಮಂದಿ ಭಕ್ತರು, ದೇವಾಲಯದ ಹೊರಗಿನಿಂದ ಸಾಲಾಗಿ ಬಂದು ದೇವರ ದರ್ಶನ ಪಡೆದುಕೊಂಡರು. ಜೂನಿಯರ್ ಘಂಟಸಾಲ ಲಕ್ಷ್ಮೀಪತಿ, ನಾಗಭೂಷಣ್, ಮುನಿರೆಡ್ಡಿ, ನಾರಾಯಣಸ್ವಾಮಿ, ಸುಭ್ರಮಣ್ಯ, ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
Sidlaghatta : ಮಾವಿನ ಹಣ್ಣಿನ ಬೆಲೆ ಕುಸಿದರೂ ನಷ್ಟ ಹೊಂದದೆ ಸ್ವಯಂ ಮಾರಾಟ ಮಾಡುವ ಮೂಲಕ ಲಾಭ ಗಳಿಸಿರುವ ರೈತ ಸುರೇಂದ್ರಗೌಡ ಅವರಂತಹ ರೈತರು ಹೆಚ್ಚಾಗಬೇಕು ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದ ಬಳಿ ಆಯ್ದ ಕೆಲವು ರೈತರು ಹಾಗೂ ಅಧಿಕಾರಿಗಳೊಂದಿಗೆ, ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆಸಿದ ಸಂವಾದದಲ್ಲಿ ಪಾಲ್ಗೊಂಡು ಅವರು, ರೈತರಿಗೆ ಉತ್ಸಾಹ ತುಂಬುವಂತಹ ಮಾದರಿ ರೈತರ ಪರಿಚಯ ಹಾಗೂ ಅವರು ಅಳವಡಿಸಿಕೊಂಡ ವಿಧಾನ ಇತರರಿಗೂ ಆಗಬೇಕು ಎಂದರು.
ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ರೈತ ಸುರೇಂದಗೌಡ ಮಾತನಾಡಿ, ಇಮಾಮ್ ಪಸಂದ್ ಮಾವಿನ ಹಣ್ಣನ್ನು ನಮ್ಮ ತೋಟದಲ್ಲಿ ಬೆಳೆದಿರುವೆ. ಮರದಲ್ಲಿ ಸುಮಾರು 200 ಗ್ರಾಂ ತೂಗುವಾಗ, ಒಂದೊಂದು ಹಣ್ಣಿಗೂ ಬ್ಯಾಗ್ ಕಟ್ಟುತ್ತೇವೆ. ಇದರಿಂದ ಹೂಜಿ ನೊಣಗಳಿಂದ ಸಂರಕ್ಷಣೆ, ಆಲಿಕಲ್ಲು ಮಳೆಯಿಂದ ರಕ್ಷಣೆ ಸಿಗುತ್ತದೆ. ಪೂರ್ತಿ ಬೆಳೆದ ಹಣ್ಣಿನ ಬ್ಯಾಗ್ ತೆಗೆದಾಗ ಹಣ್ಣು ಯಾವುದೇ ಕಲೆಯಿಲ್ಲದೆ, ಹೊಳಪಿನಿಂದ ಕೂಡಿರುತ್ತದೆ. ಒಂದೊಂದು ಹಣ್ಣೂ ಸುಮಾರು ಒಂದು ಕೇ.ಜಿ.ತೂಗುತ್ತದೆ. ಸಹಜವಾಗಿ ಹಣ್ಣು ಮಾಡಿ, ಒಂದು ಕೇಜಿಗೆ 200 ರೂಗಳಂತೆ ಸ್ವಯಂ ಮಾರಾಟ ಮಾಡಿ ಲಾಭ ಗಳಿಸಿರುವುದಾಗಿ ತಿಳಿಸಿದರು.
ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಡಾ. ಹಿತ್ತಲಮನಿ, ಜಯಚಂದ್ರ ಮತ್ತು ಉಪನಿರ್ದೇಶಕಿ ಗಾಯಿತ್ರಿ ಅವರ ಮಾರ್ಗದರ್ಶನದಲ್ಲಿ ಹಣ್ಣು ಮಾಗಿಸುವಿಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಮಾಡುತ್ತಿದ್ದೇವೆಂದು ಹೇಳಿದರು.
ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ ಮಾತನಾಡಿ, ನಾವು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ನಮ್ಮ ಮಕ್ಕಳು ಸಹ ಕೃಷಿಯನ್ನೆ ನಂಬಿ ಕೋಳಿಸಾಕಾಣಿಕೆ, ಹೈನುಗಾರಿಕೆ, ಸಮಗ್ರಕೃಷಿ ಅಳವಡಿಸಿಕೊಂಡಿರುವುದರಿಂದ ಈಗ ನಮ್ಮ ಮಕ್ಕಳಿಗೆ ಯಾರು ಹೆಣ್ಣು ನೀಡುತ್ತಿಲ್ಲ ಎಂದು ತಮ್ಮ ಕಷ್ಟವನ್ನು ವಿವರಿಸಿದರು.
ರೈತ ಚಂದಪ್ಪ ಮಾತನಾಡಿ, ರಸಗೊಬ್ಬರ ಬೆಲೆಗಳಲ್ಲಿ ಡಿಎಪಿ ಮತ್ತು ಯೂರಿಯಾ ಕಡಿಮೆ ಧರ ಇದ್ದು ಉಳಿದ ಗೊಬ್ಬರಗಳು ಹೆಚ್ಚಾಗಿವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಂದು ಸಚಿವರ ಗಮನ ಸೆಳೆದರು. ಇದರ ಬಗ್ಗೆ ಒಂದು ಪತ್ರವನ್ನು ನಮ್ಮ ಸಚಿವಾಲಯಕ್ಕೆ ಕಳುಹಿಸಬೇಕೆಂದು ಸಚಿವರು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಪಾಪಿರೆಡ್ಡಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿ ಬರುವ ಕೃಷಿ ಸಂಶೋಧನಾ ಅಳವಡಿಕೆ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವೆಂಕಟಸುಬ್ರಮಣಿಯನ್, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ತುಶಾರ್ ಕ್ರಾಂತಿ ಬೆಹೆರ, ರಾಷ್ಟ್ರೀಯ ಮಣ್ಣಿನ ಸಮೀಕ್ಷೆ ಮತ್ತು ಭೂ ಬಳಕೆ ಯೋಜನೆ ಬ್ಯೂರೋ ನಿರ್ದೇಶಕ ಡಾ. ರಾಮಮೂರ್ತಿ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಜಂಟಿನಿರ್ದೇಶಕ ಡಾ. ಪಲ್ಲಭ ಚೌದರಿ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಆಚರಿಸಲಾಯಿತು. ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಕಾಯಕವೇ ಪ್ರಧಾನ ಎಂಬುದು ಹಡಪದ ಅಪ್ಪಣ್ಣನ ಆದರ್ಶ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸಮರ್ಪಣೆಯಿಂದ ಮಾಡಿದರೆ ಅದು ಸಮೃದ್ಧ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗುತ್ತದೆ ಎಂದು ಹೇಳಿದರು.
ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ನೈತಿಕ ಮೌಲ್ಯಗಳು, ಮಾನವೀಯತೆ, ಶ್ರಮದ ಹಾಗೂ ಸೇವಾ ಮನೋಭಾವನೆಯ ಮಹತ್ವವನ್ನು ಸಾಮಾಜಿಕ ಬದುಕಿಗೆ ದಾರಿದೀಪವಾಗಿ ತೋರಿದ್ದಾರೆ. ಇಂದಿನ ದಿನಗಳಲ್ಲಿ ಅವರ ಚಿಂತನೆಗಳು ಅವಶ್ಯಕವಾಗಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಐ.ಎನ್. ಟಿ.ಯು.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಸಾಂಸ್ಕೃತಿಕ ವಿಭಾಗದ ಪ್ರತಿನಿಧಿ ವೇಣು ಹಾಗೂ ಶಂಕರಣ್ಣ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ನಾಗರಿಕರು ಹಾಜರಿದ್ದರು.
Kundalagurki, Sidlaghatta : ಶಿಡ್ಲಘಟ್ಟ : ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಜುಲೈ 12 ಮತ್ತು 13 ರಂದು “ರಾಜೀವ್ ಗೌಡ ಕ್ರಿಕೆಟ್ ಕಪ್” ಎಂಬ ತಾಲ್ಲೂಕು ಮಟ್ಟದ ಗ್ರಾಮಾಂತರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮಾಂತರ ತಂಡಗಳು ಭಾಗವಹಿಸಬೇಕೆಂದು ಐ ಎನ್ ಟಿ ಯು ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀoದ್ರ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಗೆದ್ದ ತಂಡಕ್ಕೆ 40 ಸಾವಿರ ರೂ ಮತ್ತು ಆಕರ್ಷಕ ಟ್ರೋಫಿ ಬಹುಮಾನವಾಗಿ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ 30 ಸಾವಿರ ರೂ ಮತ್ತು ತೃತೀಯ ಬಹುಮಾನವಾಗಿ 10 ಸಾವಿರ ರೂ ನೀಡಲಾಗುತ್ತದೆ. ಪ್ರತಿ ತಂಡಕ್ಕೂ ಪ್ರವೇಶ ಶುಲ್ಕ 1399 ರೂ ಇರುತ್ತದೆ. ಎಲ್ಲೋ ವಿಕ್ಕಿ ಬಾಲ್ ನಿಂದ ಆಡಿಸುವ ಈ ಕ್ರಿಕೆಟ್ ಪಂದ್ಯಕ್ಕೆ ಗ್ರಾಮೀಣ ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಪ್ರತೀ ತಂಡದಲ್ಲಿ ಆಡುವ ಆಟಗಾರರು ಒಂದೇ ಗ್ರಾಮದವರಾಗಿರಬೇಕು. ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಿದರು.
ಹೆಚ್ಚಿನ ವಿವರಗಳಿಗೆ ರಘು : 9740744707 ; ಶೇಖರ್ : 9380922946 ; ಶಶಾಂಕ್ : 7899762443 ; ಮಂಜು : 8904357266 ಅವರನ್ನು ಸಂಪರ್ಕಿಸಲು ಕೋರಿದರು.
ಕುಂದಲಗುರ್ಕಿ ಗ್ರಾಮದ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ರಘು, ಪ್ರಮೋದ್, ವೆಂಕಟೇಶ್, ಮಂಜುನಾಥ್, ಎಲ್ಲಪ್ಪ, ಬ್ಲಾಕ್ ಕಾಗ್ರೆಸ್ ಉಪಾಧ್ಯಕ್ಷ ಶ್ರೀನಾಥ್ ಹಾಜರಿದ್ದರು.
Sidlaghatta : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಜಿ ಸಂಧಾನದ ಮೂಲಕ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶಿಲ್ಪಾ ಅವರು ತಿಳಿಸಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗಾಗಲೇ ನಡೆದಿರುವ ಹಲವಾರು ಲೋಕ್ ಅದಾಲತ್ ನಲ್ಲಿ ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಉತ್ತಮ ಸಂಖ್ಯೆಯ ಪ್ರಕರಣಗಳ ವಿಲೇವಾರಿ ಆಗಿದೆ. ಆದರೂ ಜಿಲ್ಲೆಯಲ್ಲಿ ಚಿಂತಾಮಣಿ ಮತ್ತು ಗೌರಿಬಿದನೂರಿನ ನಂತರದ ಸ್ಥಾನದಲ್ಲಿದೆ. ಈ ಬಾರಿ ವಕೀಲರೂ ಆಸಕ್ತಿ ವಹಿಸಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಕೋರಿದ್ದೇವೆ. ಕೌಟುಂಬಿಕ ವ್ಯಾಜ್ಯ, ಸಿವಿಲ್, ಹಣಕಾಸಿನ ವಿಚಾರ, ಬ್ಯಾಂಕ್ ನಲ್ಲಿ ಸಾಲ ಪಡೆದಿರುವ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಮಾತನಾಡಿ, ನ್ಯಾಯಾಲಯದಲ್ಲಿ ರಾಜೀ ಮಾಡಿಕೊಂಡರೆ ಮಾನವ ಸಂಬಂಧ, ಮೌಲ್ಯಗಳು, ಶಾಂತಿ, ನೆಮ್ಮದಿಯ ವಾತಾವರಣ ಮೂಡಿ ಕಕ್ಷಿದಾರರ ಅಮೂಲ್ಯವಾದ ಸಮಯ ಮತ್ತು ಹಣ ಇದರಿಂದ ಉಳಿಯುತ್ತದೆ. ರಾಜಿಗೆ ಯೋಗ್ಯವಾದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಇಚ್ಛಿಸುವ ಕಕ್ಷಿದಾರರು ಸ್ವಯಂ ಪ್ರೇರಿತರಾಗಿ ತಮ್ಮ ವಕೀಲರ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ರಾಜಿ ಮಾಡಿಕೊಳ್ಳುವ ಮೂಲಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್., ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲರಾದ ಎಂ.ಪಾಪಿರೆಡ್ಡಿ, ಡಿ.ಅಶ್ವತ್ಥನಾರಾಯಣ, ಗೋಪಿನಾಥ್ ಹಾಜರಿದ್ದರು.
Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಮತ್ತು ಬಿಸಿಯೂಟದ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಬುಧವಾರ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಹೊರಟು ಬಸ್ ನಿಲ್ದಾಣದವರೆಗೂ ಅಂಗನವಾಡಿ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕುಳಿತ ಪ್ರತಿಭಟನಾಕಾರರು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ 50 ವರ್ಷಗಳಾಗಿವೆ. ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು, ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಹೆಚ್ಚಿಸಬೇಕು. ಎಲ್ಲ ಅಂಗನವಾಡಿ ಶಿಕ್ಷಕರು, ಸಹಾಯಕರನ್ನು ಖಾಯಂಗೊಳಿಸಬೇಕು, ಅದುವರೆಗೂ 26 ಸಾವಿರ ರೂ.ಕನಿಷ್ಠ ವೇತನ ನೀಡಬೇಕು ಮತ್ತು ನಿವೃತ್ತಿ ನಂತರ 10 ಸಾವಿರ ರೂ,ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಹೊಸದಾಗಿ ಟಿ.ಎಚ್.ಆರ್ ಮೂಲಕ ಫಲಾನುಭವಿಗಳ ಫೋಷಣ್ ಟ್ರ್ಯಾಕರ್ ಕೆಲಸಗಳಿಗೆ ಅಪ್ ಡೇಟೆಡ್ ಮೊಬೈಲ್ ಹ್ಯಾಂಡ್ ಸೆಟ್ ವಿತರಿಸಬೇಕು, ನೆಟ್ ಗಾಗಿ ವಾರ್ಷಿಕವಾಗಿ ನೀಡುತ್ತಿರುವ 2 ಸಾವಿರ ರೂಗಳನ್ನು ಇನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಪ್ರತಿ ತಿಂಗಳೂ ಮಗುವಿನ ಫೋಟೋವನ್ನು ಅಪ್ ಡೇಟ್ ಮಾಡುವ ಕೆಲಸವನ್ನು ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ಫೋಟೋ ಅಪ್ ಡೇಟ್ ಮಾಡಲು ಅವಕಾಶ ನೀಡಬೇಕು ಎಂದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ನೌಕರರು ಸಂಘಗಳನ್ನು ರಚಿಸುವ, ಸಂಘಟಿಸುವ ಮತ್ತು ಮುಷ್ಕರ, ಪ್ರತಿಭಟನೆ ನಡೆಸುವ ಹಕ್ಕುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ತಿದ್ದುಪಡಿ ಮಾಡುವ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೆ 2023 ಏಪ್ರಿಲ್ 1 ರಂದು 1972 ರ ಗ್ರಾಜ್ಯುಟಿ ಪಾವತಿ ಕಾಯಿದೆಗೆ ತಿದ್ದುಪಡಿ ತಂದು 287 ಕಾರ್ಯಕರ್ತೆಯರು, 1204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದ್ದು ಅದೇ ರೀತಿ 2011 ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೂ ಇದರ ಅನ್ವಯ ಗ್ರಾಜ್ಯುಟಿ ನೀಡಬೇಕೆಂದು ಮನವಿ ಮಾಡಿದರು.
ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಯಮ್ಮ, ಉಮಾ, ಪಾಪಣ್ಣ, ವೇಣುಗೋಪಾಲ್, ಬಿಸಿಯೂಟ ನೌಕರರ ಸಂಘದ ಮಂಜುಳಾ, ನಾಗರತ್ನ, ಕಲಾವತಿ ಹಾಜರಿದ್ದರು.
Sidlaghatta : ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕೆಲ ಪದಾಧಿಕಾರಿಗಳು ಸಂಘಟನೆಯ ಆಂತರಿಕ ಶಿಸ್ತನ್ನು ಉಲ್ಲಂಘನೆ ಮಾಡಿ ಸಂಘಟನೆಯ ತತ್ವ, ಸಿದ್ದಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ತಾತಹಳ್ಳಿ ಟಿ.ಎ.ಚಲಪತಿ ಮತ್ತಿತರ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಲು ದಸಂಸ ಜಿಲ್ಲಾ ಸಮಿತಿ ಆದೇಶಿಸಿದೆ.
ದಸಂಸ ರಾಜ್ಯ ಸಮಿತಿಯ ಮುಖಂಡ ಎನ್.ವೆಂಕಟೇಶ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ದಸಂಸ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ಶಿಡ್ಲಘಟ್ಟ ತಾಲ್ಲೂಕು ಸಮಿತಿ ವಿಸರ್ಜನೆಗೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ದಸಂಸ ತಾಲ್ಲೂಕು ಸಂಚಾಲಕ ತಾತಹಳ್ಳಿ ಟಿ.ಎ.ಚಲಪತಿ ಸೇರಿದಂತೆ ಕೆಲ ಪದಾಧಿಕಾರಿಗಳು ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ ಕೆಐಎಡಿಬಿ ಭೂ ಸ್ವಾಧೀನದ ವಿಚಾರದಲ್ಲಿ ಸಂಘಟನೆಯ ಆಂತರಿಕ ಶಿಸ್ತನ್ನು ಉಲ್ಲಂಘಟನೆ ಮಾಡುವ ಜೊತೆಗೆ ಸಂಘಟನೆಯ ತತ್ವ ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುತಿರುವ ಬಗ್ಗೆ ದಸಂಸ ರಾಜ್ಯ ಮುಖಂಡರೂ ಸೇರಿದಂತೆ ಜಿಲ್ಲಾಧ್ಯಕ್ಷರ ಜೊತೆ ಸುಧೀರ್ಘ ಚರ್ಚೆ ನಡೆಸಿ ದಸಂಸ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ ನೇತೃತ್ವದ ತಾಲ್ಲೂಕು ಸಮಿತಿ ವಿಸರ್ಜಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ದಸಂಸ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ.ವಿ.ವೆಂಕಟರವಣ, ಎನ್.ಎ.ವೆಂಕಟೇಶ್, ಜಿಲ್ಲಾ ಖಜಾಂಚಿ ಜಿ.ವಿ.ಗಂಗಪ್ಪ ಹಾಜರಿದ್ದರು.