Home Blog Page 550

ಪಾರಂಪರಿಕ ವೃಕ್ಷಗಳ ವೆಂಕಟಾಪುರ

0

ಸುತ್ತಲೂ ಏಳು ಬೆಟ್ಟಗಳು. ನಡುವೆ ಮೂರು ಕೆರೆಗಳು. ಮೊದಲ ಕೆರೆಯ ಕಟ್ಟೆಯ ಮೇಲೆ ಪುರಾತನ ಬೇವಿನ ಮರಗಳ ಸಾಲು. ಅವುಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಇದು ಕಥೆಯಲ್ಲ. ಮಲೆನಾಡಿನ ಪ್ರದೇಶವೊಂದರ ವರ್ಣನೆಯೂ ಅಲ್ಲ. ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿಯಿರುವ ಸುಂದರ ದೃಶ್ಯವಿದು.
ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಾಲಂ 63(2)(G) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರೆ ಮರಗಳು (ಹರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ವಿಶಿಷ್ಟ ರೀತಿಯ ಮರವೂ ಒಂದು. ಬಯಲುಸೀಮೆ ಮತ್ತು ಬರಡು ಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಇರುವುದು ವಿಶೇಷ.
ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್.ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್.ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ. ಎಸ್.ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ. ಆದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಹೆಸರಿನ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆಯ ಬಲಭಾಗದಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಮೂವರು ವೀರರ ವೀರಗಲ್ಲು ಇದೆ. ಎಷ್ಟೇ ಬಿರುಬಿಸಿಲಿದ್ದರೂ ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.
‘ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಾಲ್ಕೂ ಗ್ರಾಮಗಳ ಜನರು ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆಯ ಮೇಲಿರುವ ಮರಗಳ ಕಟ್ಟಿಗೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆಯು ಹಲವು ಜನರಲ್ಲಿದೆ’ ಎಂದು ದೇವಾಲಯದ ಅರ್ಚಕ ಗುರುಮೂರ್ತಿ ತಿಳಿಸಿದರು.
‘ಏಳು ಬೆಟ್ಟಗಳನ್ನೂ ನಲ್ಲಕೊಂಡಲು ಎಂದು ಕರೆಯುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆಯ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಂದಿರೆ ಇವನ್ನೂ ನೆಟ್ಟಿರಬೇಕು’ ಎನ್ನುತ್ತಾರೆ ಗ್ರಾಮದ ೯೪ರ ವಯೋವೃದ್ಧ ನರಸರಾಮಪ್ಪ.
‘ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೀ ಒಂದೊಂದು ವಿಶೇಷವಿದೆ. ಪರಂಪರೆ ವೃಕ್ಷವೆಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಸೂಕ್ತವಾಗಿ ಕೆಲಸ ಮಾಡಿದರೆ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಮೂಲೆಯಲ್ಲಿರುವ ಈ ಪ್ರದೇಶ ಮುಂದುವರೆಯಲು ಸಾಧ್ಯವಾಗುತ್ತದೆ’ ಎಂದು ಹಿರಿಯ ಶಿಕ್ಷಕ ಕೆ.ಎನ್.ಲಕ್ಷ್ಮೀನರಸಿಂಹಯ್ಯ ಹೇಳಿದರು.

ಬಶೆಟ್ಟಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ

0

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಈಚೆಗೆ ಉಚಿತ ಆರೋಗ್ಯ ತಪಾಸಣೆ ಹಾಗು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆ, ಎ. ಡಿ. ಎ. ಟಿ ಎಸ್ ಹಾಗೂ ಅಂಬೇಡ್ಕರ್ ಯುವಸೇನೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅಂಬೇಡ್ಕರ್ ಯುವಸೇನೆ ರಾಜ್ಯಾಧ್ಯಕ್ಷ ಕೋದಂಡರಾಮ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಬಡ ಕೂಲಿ ದಲಿತ ಕುಟುಂಬಗಳಿದ್ದು, ಅವರ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗಾಗಿ ಈ ರೀತಿಯ ಕಾರ್ಯಕ್ರಮಗಳು ಅತ್ಯವಶ್ಯಕ’ ಎಂದು ಹೇಳಿದರು
ಶಿಬಿರದಲ್ಲಿ 739 ಜನರಿಗೆ ಉಚಿತವಾಗಿ ಔಷಧಿ ನೀಡಲಾಯಿತು. ೭೭ ಜನರನ್ನು ಹೆಚ್ಚಿನ ಉಚಿತ ಚಿಕಿತ್ಸೆಗಾಗಿ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ಬರುವಂತೆ ತಿಳಿಸಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆಯ ಸಮಾಜ ಕಲ್ಯಾಣ ಅಧಿಕಾರಿ ಲಕ್ಷಿನಾರಾಯಣ, ಎ. ಡಿ. ಎ. ಟಿ. ಎಸ್ ವೆಂಕಟೇಶ್, ಪುಷ್ಪ, ಪಿ ವೆಂಕಟರಾಯಪ್ಪ, ಕಾಂತರಾಜ್, ಜಾರ್ಜಮಣಿ, ನಾಗಾರ್ಜುನ, ನಾರಾಯಣಸ್ವಾಮಿ,ು ಅಂಬೇಡ್ಕರ್ ಯುವಸೇನೆಯ ದೇವಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾಸಂಗಮ ಸಾಂಸ್ಕೃತಿಕ ಕಾರ್ಯಕ್ರಮ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ರತ್ನಾವಳಿ ನಾಟ್ಯ ಕ್ರೀಡಾ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಿಂದ ಕಲಾಸಂಗಮ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಯಿತು. ವಿಶ್ವ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಪೌರಾಣಿಕ ನಾಟಕ ‘ಸಮಾಗಮ’, ಎಚ್‌.ಕ್ರಾಸ್‌ನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯುವಕರ ಸಂಘದಿಂದ ಜಾನಪದ ನೃತ್ಯ, ಜಾನಪದ ಗೀತ ಗಾಯನ, ರಂಗಗೀತೆಗಳ ಗಾಯನ, ಗುಡಗೊಂಡಹಳ್ಳಿಯ ತಂಡದಿಂದ ರೌಡಿ ರಂಗ ಹಾಸ್ಯ ನಾಟಕ, ರತ್ನಾವಳಿ ನಾಟ್ಯ ಕ್ರೀಡಾ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಿಂದ ಐತಿಹಾಸಿಕ ನಾಟಕ ‘ಒತ್ತೆ’ ಪ್ರದರ್ಶಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಎಸ್‌.ಶಿವಶಂಕರ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ್‌, ಕಲಾವಿದರಾದ ಮುನಿನಾರಾಯಣ, ಸಿ.ಆಂಜಿನಪ್ಪ, ಕೆ.ಎ.ರಾಜಪ್ಪ, ಎಂ.ಆಶಾ, ಚೈತನ್ಯ, ಚಂದ್ರಿಕಾ, ಚೇತನ್‌, ಚೈತ್ರಾ, ಲಕ್ಷ್ಮಿ, ಸ್ವಾಮಿ ವಿವೇಕಾನಂದ ಮತ್ತಿತರರು ಹಾಜರಿದ್ದರು.

ರಾಘವೇಂದ್ರಸ್ವಾಮಿಯವರ ಆರಾಧನಾ ಮಹೋತ್ಸವ

0

ಪಟ್ಟಣದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾಘವೇಂದ್ರಸ್ವಾಮಿಯವರ 343ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಸೋಮವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆದು ಸಂಜೆ ಪತಂಜಲಿ ಯೋಗ ಶಿಕ್ಷಣ ಅಮಿತಿ ವತಿಯಿಂದ ಹಾಗೂ ಗಾಯಿತ್ರಿ ಮಹಿಳಾ ಮಂಡಳಿಯಿಂದ ಭಜನೆ ನಡೆಯಿತು.
ಮಂಗಳವಾರ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆಯ ನಂತರ ರಾಯರ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ನಡೆಸಲಾಯಿತು. ಹಸ್ತೋದಕ, ಮಹಾಮಂಗಳಾರತಿಯ ನಂತರ ಬ್ರಾಹ್ಮಣರ ಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ಪಟ್ಟಣದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ. ಬುಧವಾರ ಸಂಜೆ ಶೃಂಗೇರಿ ಸಹೋದರಿಯರಿಂದ ಸಂಗೋತ ಕಚೇರಿ ಹಾಗೂ ಎನ್‌.ಮೇಘನಾ ಅವರಿಂದ ದೇವರನಾಮಗಳನ್ನು ಆಯೋಜಿಸಿದ್ದೇವೆ’ ಎಂದು ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್‌ ತಿಳಿಸಿದರು.

ಸರ್ಕಾರಿ ಶಾಲೆಯ ಆವರಣದಲ್ಲಿ ನೂರು ಸಸಿ

0

ಶಾಲೆ, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಮತ್ತು ಸಮುದಾಯದ ಸಾಂಘಿಕ ಪ್ರಯತ್ನದಿಂದಾಗಿ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂರು ಸಸಿಗಳನ್ನು ನೆಡುವ ಕೆಲಸ ಶನಿವಾರ ನಡೆದಿದೆ.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದ್ದು, ಇತ್ತೀಚೆಗಷ್ಟೆ ಸರ್ಕಾರಿ ಹಣ ಮತ್ತು ಗ್ರಾಮಸ್ಥರ ನೆರವಿನಿಂದ ಕಾಂಪೋಂಡ್‌ ನಿರ್ಮಿಸಲಾಗಿತ್ತು. ‘ವಿಷನ್‌ ಗ್ರೀನ್‌’ ಎಂಬ ಸಂಘವನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶವನ್ನು ಹೊಂದಿರುವ ಒಂದು ತಂಡ ಹಾಲು ಸಕ್ಕರೆ ಬೆರೆತಂತೆ ಶಾಲೆಯೊಂದಿಗೆ ಸೇರಿಕೊಂಡು ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದೆ.
ಚಿಂತಾಮಣಿಯಲ್ಲಿ ಪಿಯುಸಿ ಓದುವಾಗ ಜೊತೆಗಾರರಾಗಿದ್ದವರು ಈಗ ಬೇರೆ ಬೇರೆ ನಗರಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಸುಮಾರು 20 ಮಂದಿಯ ಯುವ ತಂಡವು ತಮ್ಮ ಬೇರನ್ನು ಚಿಗುರಿಸುವ ಕನಸಿನಿಂದ ‘ವಿಷನ್‌ ಗ್ರೀನ್‌’ ಎಂಬ ಸಂಘ ಮಾಡಿಕೊಂಡಿದ್ದಾರೆ. ಜಿಲ್ಲೆಯ ಜ್ವಲಂತ ನೀರಿನ ಸಮಸ್ಯೆ ನಿವಾರಣೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ, ಮಹಾಗನಿ, ಬಸವನಪಾದ, ಮಾವು, ಗಸಗಸೆ, ಅರಳಿ, ಕಾಡುಬಾದಾಮಿ, ಅತ್ತಿ, ನುಗ್ಗೆ ಮುಂತಾದ ಸ್ಥಳೀಯ ಗಿಡಗಳನ್ನು ನೆಡಲಾಯಿತು.
‘ನಾವು ಸುಮಾರು 20 ಮಂದಿ ಸ್ನೇಹಿತರು ಮೂರು ತಿಂಗಳಿಗೊಮ್ಮೆ ಸೇರುತ್ತೇವೆ. ನಮ್ಮಿಂದ ನಮ್ಮ ಜಿಲ್ಲೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟು ಬೆಳೆಸಲು ಮುಂದಾದೆವು. ಆದರೆ ನಾವು ನೆಟ್ಟು ಹೋದ ಮೇಲೆ ಅದನ್ನು ಪೋಷಿಸಿ ಪೊರೆಯುವ ಜನರ ಅಗತ್ಯವಿದೆ. ನಾವು ಆ ರೀತಿಯ ಸ್ಥಳವನ್ನು ಹುಡುಕುವಾಗ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಎಚ್‌.ವಿ. ವೆಂಕಟರೆಡ್ಡಿ ಅವರ ಪರಿಚಯವಾಯಿತು. ಅವರ ಶಾಲೆಯ ಎರಡು ಎಕರೆ ಸ್ಥಳವಿದ್ದು, ಈಚೆಗಷ್ಟೆ ಕಾಂಪೋಂಡ್‌ ನಿರ್ಮಿಸಿದ್ದಾರೆ. ಅಲ್ಲಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡುವಂಥಹವರು. ಹೀಗಾಗಿ ನಮ್ಮ ಚೊಚ್ಚಲ ಪರಿಸರ ಪ್ರಯತ್ನಕ್ಕೆ ಈ ಶಾಲೆಯನ್ನು ಆರಿಸಿಕೊಂಡೆವು. ಶಿಕ್ಷಕರು ಸ್ಥಳೀಯ ಗಿಡಗಳಿಗೆ ಪ್ರಾತಿನಿದ್ಯ ನೀಡಬೇಕು ಎಂದು ಹೇಳಿ ಅರಣ್ಯ ಇಲಾಖೆಯ ನರ್ಸರಿಯಿಂದ ಗಿಡಗಳನ್ನು ತಂದರು. ನಾವು ಗುಂಡಿಗಳನ್ನು ಜೆಸಿಬಿ ಮೂಲಕ ತೋಡಿಸಿಕೊಟ್ಟೆವು. ಶಾಲೆಯಲ್ಲಿ ನೀರಿನ ವ್ಯವಸ್ಥೆಯಿದೆ. ನೂರು ಗಿಡಗಳಿಗೆ ಮಕ್ಕಳು ನೀರು ಹಾಕುವುದು ಕಷ್ಟ ಮತ್ತು ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಹನಿನೀರಾವರಿಯನ್ನು ನಾವು ಮಾಡಿಸಿಕೊಡುತ್ತಿದ್ದೇವೆ. ಮೂರು ತಿಂಗಳಿಗೊಮ್ಮೆ ಬಂದು ಮಕ್ಕಳಿಗೆ ಆಡಿಯೋ ವೀಡಿಯೋ ಮೂಲಕ ಪರಿಸರ ಪಾಠ ಮಾಡಿ ಹೋಗುವ ಉದ್ದೇಶವಿದೆ’ ಎಂದು ಭರತ್‌ ಮತ್ತು ರಾಜೇಶ್‌ ತಿಳಿಸಿದರು.
‘ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಪಶುವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿ, ಶಿಕ್ಷಕರು ಮುಂತಾದ ವಿವಿಧ ರಂಗಗಳಲ್ಲಿ ಜೀವನ ಕಂಡುಕೊಂಡಿರುವ ಯುವಕರ ತಂಡವು ‘ವಿಷನ್‌ ಗ್ರೀನ್‌’ ಎಂಬ ಸಂಘದ ರೂಪದಲ್ಲಿ ನಮ್ಮಲ್ಲಿ ಬಂದರು. ಸ್ಥಳೀಯ ಗಿಡಗಳನ್ನು ನೆಡುವುದರಿಂದ ಮುಂದೆ ಗಿಡ ಬೆಳೆದಂತೆ ಹಕ್ಕಿ ಚಿಟ್ಟೆಗಳೂ ಬರುತ್ತವೆಂದು ಅವರ ಮನವೊಲಿಸಿದೆವು. ಗುಣಿ ತೋಡಲು ಮತ್ತು ಹನಿನೀರಾವರಿಗಾಗಿ ನೆರವು ನೀಡುವುದರೊಂದಿಗೆ ಖುದ್ದಾಗಿ ಮಕ್ಕಳೊಂದಿಗೆ ಸೇರಿ ಗಿಡಗಳನ್ನು ನೆಟ್ಟರು. ಗ್ರಾಮಸ್ಥರೂ ನೆರವಾದರು. ಮಕ್ಕಳಿಗೆ ‘ವಿಷನ್‌ ಗ್ರೀನ್‌’ ತಂಡದವರು ಪರಿಸರದ ಬಗ್ಗೆ ಆಡಿಯೋ ವೀಡಿಯೋ ಕ್ಲಿಪ್ಪಿಂಗ್ಸ್‌ ತೋರಿಸಿ ಸಂವಾದವನ್ನು ನಡೆಸಿ ಸಿಹಿ ಹಂಚಿದರು. ಶಾಲೆಗೆ ಗ್ಲೋಬ್‌ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಮೂರು ತಿಂಗಳಿಗೊಮ್ಮೆ ಬಂದು ಗಿಡಗಳನ್ನು ಗಮನಿಸಿ, ಮಕ್ಕಳಿಗೆ ಪರಿಸರ ವಿಷಯವಾಗಿ ಕ್ಲಿಪ್ಪಿಂಗ್ಸ್‌, ಸಾಕ್ಷ್ಯಚಿತ್ರಗಳನ್ನು ತೋರಿಸುವುದಾಗಿ ಹೇಳಿರುವರು’ ಎಂದು ಶಿಕ್ಷಕ ಎಚ್‌.ವಿ.ವೆಂಕಟರೆಡ್ಡಿ ತಿಳಿಸಿದರು.
‘ವಿಷನ್‌ ಗ್ರೀನ್‌’ ತಂಡದ ರಾಜೇಶ್‌, ಬಿ.ಭರತ್‌, ಬಿ.ಎಸ್‌.ಭರತ್‌, ವಿನಯ್‌, ವಿನೋದ್‌, ಶ್ರೀನಾಥ, ಶ್ರೀನಿವಾಸ, ರಘು, ಚೇತನ್‌, ಮದನ್‌, ಸ್ಮಿತಾ, ಸೋಮಶೇಖರ್‌, ಸಾಗರ್‌, ಮಹೇಶ್‌, ಸಂದೀಪ್‌, ತೇಜುಕೃಷ್ಣ, ಕಿರಣ್‌, ವೆಂಕಟರೆಡ್ಡಿ, ಮಂಜುನಾಥ, ಹರೀಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್‌, ಗ್ರಾಮಸ್ಥರಾದ ಜಯರಾಮ್‌, ಕೇಶವ, ರಾಮಕೃಷ್ಣ, ದೇವರಾಜ್‌, ವೆಂಕಟರೆಡ್ಡಿ, ವಿನಯ್‌, ಶಿಕ್ಷಕರಾದ ನಾಗಭೂಷಣ್‌, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಬಿ.ಜೆ.ಪಿ ಮಹಿಳಾ ಮೋರ್ಚಾ ಸದಸ್ಯರಿಂದ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಹಬ್ಬ ಆಚರಣೆ

0

ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಸಮಾಜ ಮುಕ್ತರಾಗಬೇಕಾದರೆ ಸಮಾಜದಲ್ಲಿ ಮಮತೆ, ಭಾತೃತ್ವ, ಸ್ತ್ರೀಯನ್ನು ಗೌರವಿಸುವ ಬಗ್ಗೆ ಶಿಕ್ಷಣ ಸ್ವರೂಪೀ ಆಂಧೋಲನದ ಅಗತ್ಯವಿದೆ ಎಂದು ಬಿ.ಜೆ.ಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ರಕ್ಷಾಬಂಧನ ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಅವರು ಮಾತನಾಡಿದರು. ರಕ್ಷಾಬಂಧನವೆಂಬುದು ಸೋದರ ಸಂಬಂಧದ ಪ್ರೀತಿ ಮಮತೆಯ ಪ್ರತೀಕ. ಹೆಣ್ಣನ್ನು ಪೂಜ್ಯ ಭಾವದಿಂದ ನೋಡುವ ನಮ್ಮ ದೇಶದಲ್ಲಿ ಇಂದು ಹೆಣ್ಣಿನ ಸ್ಥಿತಿ ಆತಂಕಕಾರಿಯಾಗಿರುವುದು ದುರದೃಷ್ಟಕರ. ಹೆಣ್ಣಿಗೆ ರಕ್ಷಣೆ ಸಿಗಲು ಕೇವಲ ಕಾನೂನಿನ ಬಿಗಿಯಷ್ಟೇ ಸಾಲದು, ಸಮಾಜದ ಮಾನಸಿಕ ಪರಿವರ್ತನೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಾರ್ವಜನಿಕವಾಗಿ ಬಿ.ಜೆ.ಪಿ ಮಹಿಳಾ ಮೋರ್ಚಾ ವತಿಯಿಂದ ರಾಖಿ ಕಟ್ಟಿ, ತಿಲಕವನ್ನಿಟ್ಟು
ಸೋದರ ಭಾವನೆ, ಹೆಣ್ಣನ್ನು ಗೌರವಿಸುವ ಸಂದೇಶವನ್ನು ಸಾರುತ್ತಿದ್ದೇವೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದ ಸುಜಾತಮ್ಮ, ಮುನಿರತ್ನಮ್ಮ, ಸುಶೀಲಮ್ಮ, ಶಿವಮ್ಮ, ಸುರೇಂದ್ರಗೌಡ, ಲೋಕೇಶ್‌ಗೌಡ, ಶಿವಕುಮಾರಗೌಡ, ತ್ಯಾಗರಾಜ್‌, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿ ಉದ್ಘಾಟನೆ

0

ಸಹಕಾರ ತತ್ವದಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವೆಂದು ಮನಗಂಡು ಗ್ರಾಮಾಭಿವೃದ್ಧಿ ಯೋಜನೆಯು ರೂಪುಗೊಂಡಿದೆ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್‌ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯ ಕೆಂಪೇಗೌಡ ಕಟ್ಟಡದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಬಡತನ ಮುಂತಾದ ಸಾಮಾಜದ ನಕಾರಾತ್ಮಕ ಅಂಶಗಳಿಂದ ಮುಕ್ತರಾದಾಗ ಮಾತ್ರ ಪ್ರಗತಿಯು ಸಾಧ್ಯ. ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನಡೆಸಿ ಉತ್ತಮ ಆರೋಗ್ಯ, ಶಿಕ್ಷಣ ಪಡೆಯಲು ಸಾಂಘಿಕ ಪ್ರಯತ್ನದ ಅಗತ್ಯವಿದೆ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಡ್ಲಘಟ್ಟ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್‌. ಯೋಗೀಶ್‌ ಕನ್ಯಾಡಿ ಮಾತನಾಡಿ ‘ಈ ಸ್ವಯಂ ಸೇವಾ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಡಕೃಷಿಕರ, ಕೃಷಿಕೂಲಿ ಕಾರ್ಮಿಕರ ಅಭಿವೃದ್ಧಿಗೆ 8 ವರ್ಷಗಳ ಕಾಲ ಸತತವಾಗಿ ಅನುದಾನ, ಸಹಕಾರ ಹಾಗೂ ಮಾರ್ಗದರ್ಶನದ ಮೂಲಕ ಪ್ರಯತ್ನಿಸಲಾಗಿತ್ತು. ಆನಂತರ ವಿಸ್ತಾರಗೊಳ್ಳುತ್ತಾ ರಾಜ್ಯದ 22 ಜಿಲ್ಲೆ, ಕೇರಳ ರಾಜ್ಯದ ಒಂದು ಜಿಲ್ಲೆಯಲ್ಲಿ ವಿಸ್ತರಿಸಲ್ಪಟ್ಟಿದೆ. ಪ್ರಸ್ತುತ ವರ್ಷ ರಾಜ್ಯದ 3 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ವಿಸ್ತಾರಗೊಳ್ಳುತ್ತಿದೆ. ಜಿಲ್ಲೆಯಲ್ಲೇ ಪ್ರಥಮಬಾರಿಗೆ ಶಿಡ್ಲಘಟ್ಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗುತ್ತಿದೆ’ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2000 ದಿಂದ 2500 ಪ್ರಗತಿಬಂಧು, ಸ್ವಸಹಾಯ ಸಂಘಗಳ ರಚನೆಯ ಗುರಿಯಿರಿಸಿಕೊಂಡಿದ್ದು ಸದಸ್ಯರಿಗೆ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಯ ದಿಸೆಯಲ್ಲಿ ತರಬೇತಿ ಪ್ರವಾಸಗಳನ್ನು ಕೈಗೊಳ್ಳುವುದು, ಪುರುಷರಿಗಾಗಿ ಶ್ರಮವಿನಿಮಯವನ್ನು ಒಳಗೊಂಡ ಪ್ರಗತಿಬಂಧು ಎಂಬ ವಿಶೇಷ ಸ್ವಸಹಾಯಸಂಘಗಳನ್ನು ರಚಿಸಲಾಗುತ್ತದೆ. ಮಹಿಳೆಯರಿಗೆ ಸ್ವಸಹಾಯ ಸಂಘದ ಜೊತೆಯಲ್ಲಿ ಕೌಟುಂಬಿಕ ಸಾಮರಸ್ಯ, ಶಿಕ್ಷಣ, ಸಂಸ್ಕೃತಿ ಸಂಸ್ಕಾರ, ಶುಚಿತ್ವ, ಆರೋಗ್ಯ, ಕಾನೂನು, ಪೌಷ್ಠಿಕ ಆಹಾರ ತಯಾರಿ, ಹಬ್ಬ ಹರಿದಿನಗಳ ಮಹತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಜ್ಞಾನವಿಕಾಸ ಎಂಬ ಮಹಿಳಾ ಕಾರ್ಯಕ್ರಮವನ್ನು ಆರಂಭಿಸಲಾಗುವುದು.
ಆರೋಗ್ಯ ಹಾಗೂ ಶುಚಿತ್ವದ ದೃಷ್ಠಿಯಿಂದ ಶೌಚಾಲಯದ ರಚನೆಗೆ, ಅಡುಗೆ ಅನಿಲದ ಸಮಸ್ಯೆ ನೀಗಿಸಲು ಗೋಬರ್‌ ಗ್ಯಾಸ್‌, ವಿದ್ಯುತ್‌ ಅಭಾವದ ಸಮಸ್ಯೆಗೆ ಸೋಲಾರ್‌ ಅಳವಡಿಕೆಗೆ ಕ್ಷೇತ್ರದಿಂದ ಅನುದಾನ ನೀಡಿ ಪ್ರೋತ್ಸಾಹಿಸಲಾಗುವುದು. ಕೃಷಿ ಉಪಕರಣ, ಹೊಸ ಕೃಷಿ ಮಾಡುವವರಿಗೆ ಪ್ರೋತ್ಸಾಹಧನ ನೀಡಲಾಗುವುದು. ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಉದ್ಯೋಗ ಪೂರಕ ಶಿಕ್ಷಣಕ್ಕಾಗಿ ಶಿಷ್ಯವೇತನ, ಬಡವರಿಗೆ ಮಾಸಾಶನ ಒದಗಿಸಲಾಗುವುದು. ಮದ್ಯವರ್ಜನ ಶಿಬಿರವನ್ನು ಆಯೋಜಿಸಿ ಪಾನಮುಕ್ತರನ್ನಾಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗ ಸೃಷ್ಠಿ, ಕುಡಿಯುವ ನೀರಿನ ಶುದ್ಧಗಂಗಾ ಯೋಜನೆ ಮಾಡಲಾಗುವುದು’ ಎಂದು ಹೇಳಿದರು.
ಉಪತಹಶಿಲ್ದಾರ್‌ ಕೃಷ್ಣಪ್ಪ ನಾಯಕ್‌, ಶಿವಕುಮಾರಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಧಾಕೃಷ್ಣ, ಕಂದಾಯ ನಿರೀಕ್ಷಕ ಸುಬ್ರಮಣಿ, ಅನಂತಕೃಷ್ಣ, ಸುರೇಂದ್ರಗೌಡ, ಲೋಕೇಶ್‌ಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಾರುವ ಹಕ್ಕಿಯ ಸಾಕುವ ಹವ್ಯಾಸ

0

ಅಮೇರಿಕನ್ ಫ್ರಿಲ್‌ಬ್ಯಾಕ್, ಅಮೇರಿಕನ್ ಜಾಕೋಬಿನ್, ಪೌಟರ್‌, ರೇಸಿಂಗ್ ಹೋಮರ್… ಈ ಹೆಸರುಗಳನ್ನು ಕೇಳುತ್ತಿದ್ದರೆ ಯಾವುದೋ ವಿದೇಶೀ ಜನರ ನಾಮಧೇಯವಿರಬಹುದು ಎನಿಸಬಹುದು. ಹಾಗೇನಾದರೂ ನೀವು ಊಹಿಸಿದ್ದರೆ ಅದು ತಪ್ಪು. ಇವು ಅಪ್ಪಟ ವಿದೇಶೀ ಪಾರಿವಾಳಗಳ ಹೆಸರು. ಇವುಗಳನ್ನು ನೋಡಲು ವಿದೇಶಕ್ಕೆ ಹೋಗಬೇಕಿಲ್ಲ. ಶಿಡ್ಲಘಟ್ಟದ ರಿಜ್ವಾನ್‌ ಪಾಷಾ ಅವರನ್ನು ಭೇಟಿಯಾದರೆ ಸಾಕು, ಎಲ್ಲವನ್ನೂ ಪರಿಚಯಿಸುತ್ತಾರೆ.
ಪಟ್ಟಣದ ತಿಮ್ಮಯ್ಯ ಲೇಔಟ್‌ನಲ್ಲಿ ವಾಸಿಸುವ ರಿಜ್ವಾನ್ ಪಾಷ ಸುಮಾರು ಹತ್ತು ವರ್ಷಗಳಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ದೇಶ ವಿದೇಶಗಳ ವೈವಿಧ್ಯಮಯ ಪಾರಿವಾಳ ಸಾಕುತ್ತಿದ್ದಾರೆ. ಶಿಡ್ಲಘಟ್ಟದ ಹವಾಮಾನಕ್ಕೆ ಹೊಂದಿಕೊಂಡಿರುವ ಪಾರಿವಾಳಗಳು ತಮ್ಮ ತವರು ಮರೆತು ಇಲ್ಲಿಯೇ ನೆಲೆ ಕಂಡುಕೊಂಡಿವೆ.
ಮೈತುಂಬಾ ಸುರುಳಿ ಸುರುಳಿಯಾಕಾರದ ಮಲ್ಲಿಗೆ ಹೂಗಳಂತಹ ಪುಕ್ಕಗಳಿರುವ ಅಮೇರಿಕನ್ ಫ್ರಿಲ್‌ಬ್ಯಾಕ್, ಸಿಂಹದ ಕೇಸರದಂತೆ ತಲೆಯ ಸುತ್ತ ಪುಕ್ಕಗಳಿರುವ ಕಾಲಿನ ಪಕ್ಕದಲ್ಲಿ ಬೀಸಣಿಗೆಯಂತಹ ಪುಕ್ಕಗಳನ್ನು ಹೊಂದಿರುವ ಅಮೇರಿಕನ್ ಜಾಕೋಬಿನ್, ಎದೆಯುಬ್ಬಿಸಿ ಕಾಲಿನ ಬಳಿ ಪುಕ್ಕಗಳಿರುವ ಗಂಭೀರವದನದ ಹದ್ದಿನಗಾತ್ರದಲ್ಲಿರುವ ಪೌಟರ್‌, ಸಾವಿರ ಕಿಮೀ ದೂರದವರೆಗೂ ಹೋಗಿ ಬಿಟ್ಟರೂ ಪುನಃ ವಾಪಸ್ ಮನೆಗೆ ಕಡಿಮೆ ಸಮಯದಲ್ಲಿ ಬಂದು ಮುಟ್ಟುವ ರೇಸಿಂಗ್ ಹೋಮರ್, ಕಪ್ಪು ಬಿಳಿ ಹಾಗೂ ಪೂರಾ ಬಿಳಿ ಬಣ್ಣದ ಲಕ್ವಾ ಪಾರಿವಾಳಗಳು ಹಾಗೂ ಸಾಕಷ್ಟು ವಿಧದ ಪಾರಿವಾಳಗಳು ಇವರ ಪಾಲನೆಯಲ್ಲಿವೆ.
ಈ ಪಾರಿವಾಳಗಳು ಸಾಮಾನ್ಯವೇನಲ್ಲ. ಇವು ರೇಸಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡಿವೆ. ದೂರ ಹಾರಾಟದ ಸ್ಪರ್ಧೆಗಳಿಗೆ ರಿಜ್ವಾನ್ ಬೆಂಗಳೂರು, ತುಮಕೂರು, ಕಡಪಾ, ಮದನಪಲ್ಲಿ, ರಾಯಚೂಟಿ, ತಿರುಪತಿ, ಕೇರಳ, ಬಾಂಬೆ ಮುಂತಾದೆಡೆ ಒಯ್ದು ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ಎಲೆಕ್ಟ್ರಿಕ್, ಪಿ.ಓ.ಪಿ ಮತ್ತು ಪ್ಲಂಬಿಂಗ್ ಕೆಲಸ ಮಾಡುವ ಅವರು ತಮ್ಮ ಗಳಿಕೆ ಮತ್ತು ಶ್ರಮವನ್ನು ಪಾರಿವಾಳ ಸಾಕುವ ಹವ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಕೆ.ಜಿ.ಎಫ್‌ನ ಪಾರಿವಾಳದ ಕ್ಲಬ್ ಸದಸ್ಯರಾಗಿರುವ ಅವರು ಎಲ್ಲೇ ಪಾರಿವಾಳದ ಸ್ಪರ್ಧೆಯಿದ್ದರೂ ತಮ್ಮ ಎಲ್ಲ ಕೆಲಸ ಬದಿಗೊತ್ತಿ ಅಲ್ಲಿ ಹಾಜರಾಗುತ್ತಾರೆ.
‘ನನ್ನ ಈ ಹವ್ಯಾಸಕ್ಕೆ ತಂದೆ ಕೆ.ಎಚ್.ಬಶೀರ್ ಅಹ್ಮದ್ ಅವರ ಸ್ಫೂರ್ತಿಯೇ ಕಾರಣ. ಅವರಿಗೆ ಪಾರಿವಾಳ ಸಾಕುವ ಷೋಕಿಯಿತ್ತು. ಅದನ್ನೇ ನಾನು ಮುಂದುವರೆಸಿಕೊಂಡು ಸ್ಪರ್ಧೆಗೆ ಹೋಗುತ್ತಿದ್ದೇನೆ. ಪಾರಿವಾಳಗಳಿಗೆ ಕಡಲೆ, ಹುರಳಿ, ರಾಗಿ, ಹೆಸರುಬೇಳೆ, ಬಟಾಣಿ, ಬಾದಾಮಿ ಆಹಾರವಾಗಿ ನೀಡುತ್ತೇನೆ. ರೇಸಿಂಗ್ ಹೋಮರ್ ಪಾರಿವಾಳಗಳನ್ನು ೫೦ ಕಿಮೀ, ೧೦೦ ಕಿಮೀ, ೨೦೦ ಕಿಮೀ ಹೀಗೆ ೧,೦೦೦ ಕಿಮೀ ನಷ್ಟು ದೂರ ಕ್ರಮಿಸಲು ತಯಾರಿ ನೀಡಿ ತರಬೇತುಗೊಳಿಸುತ್ತೇನೆ. ದೂರ ಕ್ರಮಿಸುವುದರ ಜೊತೆಗೆ ಸಮಯವೂ ಅತೀ ಮುಖ್ಯವಾದದ್ದು. ಸ್ಪರ್ಧೆಗಳಲ್ಲಿ ಪಾರಿವಾಳದ ಕಾಲಿಗೆ ರಿಂಗ್ ತೊಡಿಸಿ ಬಣ್ಣದ ಸೀಲ್ ಹಾಕಿ ಹಾರಾಡಲು ಬಿಡಲಾಗುತ್ತದೆ. ನನ್ನ ರೇಸಿಂಗ್ ಹೋಮರ್ ಪಾರಿವಾಳ ಮಹಾರಾಷ್ಟ್ರದ ಸೋಲಾಪುರದಿಂದ ಕೆ.ಜಿ.ಎಫ್ ವರೆಗೂ ೧,೦೦೦ ಕಿಮೀ ದೂರವನ್ನು ಒಂದೂವರೆ ದಿನದಲ್ಲಿ ಕ್ರಮಿಸಿ ಪ್ರಶಸ್ತಿ ತಂದುಕೊಟ್ಟಿತು. ಪಾರಿವಾಳಗಳನ್ನು ೯ ರಿಂದ ೧೦ ಗಂಟೆ ನಿಲ್ಲದಂತೆ ಹಾರಾಡಿಸಿದ್ದೇನೆ. ಮನೆಮಂದಿ ಎಲ್ಲರಿಗೂ ಪಾರಿವಾಳದ ಮೇಲೆ ಆಸಕ್ತಿಯಿದೆ. ಎಲ್ಲರ ಸಹಕಾರವಿದೆ’ ಎಂದು ರಿಜ್ವಾನ್ ಪಾಷ ತಿಳಿಸಿದರು.
– ಡಿ.ಜಿ.ಮಲ್ಲಿಕಾರ್ಜುನ

ತಾಲ್ಲೂಕು ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು ಹಾಗೂ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಂಘವು ನಿರ್ವಹಿಸಬೇಕೆಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಇತರೇ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಸಾಮಾಜಿಕ ಕಾರ್ಯಗಳನ್ನು ನಡೆಸಬೇಕು. ಭೂತಾಯಿಯನ್ನು ನೆಚ್ಚಿದ ಜನಾಂಗದ ಮಂದಿ ಈಗ ಹಲವಾರು ಕಸುಬು ಹಾಗೂ ಉದ್ಯೋಗಗಳಲ್ಲಿದ್ದರೂ ಭೂತಾಯಿಯ ಆಶಯಕ್ಕೆ ಬದ್ಧರಾಗಿರಬೇಕು. ಒಗ್ಗಟ್ಟಿನಿಂದ ಮಾತ್ರ ಉತ್ತಮ ಉದ್ಧೇಶಗಳನ್ನು ಈಡೇರಿಸಲು ಸಾಧ್ಯ. ಯುವಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗಿ ಹಿರಿಯರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನ 20 ಮಂದಿ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ 20 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಪದವಿ ಸ್ವೀಕಾರ ಪತ್ರಗಳನ್ನು ವಿತರಿಸಲಾಯಿತು.
ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಆರ್‌.ವೆಂಕಟರಾಮ್‌, ಅಸಿಸ್ಟೆಂಟ್‌ ಕಮೀಷನರ್‌ ಡಿ.ಎಂ.ಸತೀಶ್‌, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಯಲುವಳ್ಳಿ ಎನ್‌.ರಮೇಶ್‌, ವಿ.ಇ.ರಾಮಚಂದ್ರ, ಎಂ.ಎಲ್‌.ಸತೀಶ್‌, ಜಿಲ್ಲಾ ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ, ಗೋಪಾಲ್‌, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜು, ಪದಾಧಿಕಾರಿಗಳಾದ ಚಂದ್ರಪ್ಪ, ಡಾ.ಮುನಿನಾರಾಯಣರೆಡ್ಡಿ, ಕೇಶವರೆಡ್ಡಿ, ಕೆಂಪಣ್ಣ, ಅಕ್ಕಲರೆಡ್ಡಿ, ಸೀತಾರಾಮರೆಡ್ಡಿ, ಟಿ.ವಿ.ಚಂದ್ರಶೇಖರ್‌, ಬಿ.ವಿ.ಶ್ರೀರಾಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣದ ಬಗ್ಗೆ ಪುನರ್ಮನನ ಕಾರ್ಯಾಗಾರ

0

ಶಿಡ್ಲಘಟ್ಟದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗೆ ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ಹಾಗೂ ತಾಲ್ಲೂಕು ಅಧಿನಾಯಕ ಎಂ.ರಾಮಕೃಷ್ಣಪ್ಪ ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣದ ಬಗ್ಗೆ ಪುನರ್ಮನನ ಕಾರ್ಯಾಗಾರವನ್ನು ಈಚೆಗೆ ನಡೆಸಿಕೊಟ್ಟರು.

ಅಥ್ಲೆಟಿಕ್ಸ್, ಖೋ ಖೋ ಪಂದ್ಯಾವಳಿಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ತಾಲ್ಲೂಕಿನ ಗೌಡನಹಳ್ಳಿಯಲ್ಲಿ ನಡೆದ ಹೋಬಳಿ ಮಟ್ಟದ ಅಥ್ಲೆಟಿಕ್ಸ್, ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಜಾನಪದ ನೃತ್ಯ ಕಲಿಕೆ

0

ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಈಚೆಗೆ ಉತ್ತರ ಕರ್ನಾಟಕದ ಜಾನಪದ ನೃತ್ಯಗಳನ್ನು ಕಲಿಸಲಾಯಿತು.
ಗುಲ್ಬರ್ಗಾದ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಕಠಾರಿಮಠ ಅವರನ್ನು ಶಾಲೆಯ ವತಿಯಿಂದ ಕರೆಸಿ ಉತ್ತರ ಕರ್ನಾಟಕದ ಜಾನಪದ ನೃತ್ಯಗಳಾದ ಕೊಂಕಣದ ಜಾಲಿಗರು, ಕೋಲಾಟ, ಕೊಡ ತುಂಬಾ ನೀರು ಮುಂತಾದ ಗೀತನೃತ್ಯಗಳನ್ನು ಕಲಿಸಿದರು.
‘ಸುಮಾರು ಒಂದು ವಾರಗಳ ಕಾಲ ಗುಲ್ಬರ್ಗಾದ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಅವರು ನಮ್ಮೊಡನಿದ್ದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಹಲವು ನೃತ್ಯರೂಪಕಗಳನ್ನು ಕಲಿಸಿಕೊಟ್ಟರು. ನಮ್ಮ ಜಾನಪದದಂತೆ ನಮ್ಮ ರಾಜ್ಯದ ಇನ್ನೊಂದು ಭಾಗದ ಜಾನಪದವೂ ನಮ್ಮ ಮಕ್ಕಳಿಗೆ ಈ ಮೂಲಕ ಕಲಿಸುವಂತಾಯಿತು. ಮಕ್ಕಳಿಗೆ ನೃತ್ಯವನ್ನು ಕಲಿಸಿಕೊಟ್ಟ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಕಠಾರಿಮಠ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿದೆವು’ ಎಂದು ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ಪ್ರಕಾಶ್‌ಬಾಬು ತಿಳಿಸಿದರು.
ಸಹಶಿಕ್ಷಕರಾದ ಆರ್‌.ನಾರಾಯಣಸ್ವಾಮಿ, ವೆಂಕಟರೆಡ್ಡಿ, ಕೆ.ಸಿ.ಲಕ್ಷ್ಮೀನಾರಾಯಣ, ಹೇಮಲತಾ ಈ ಸಂದರ್ಭದಲ್ಲಿ ಹಾಜರಿದ್ದರು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರೇಣುಕಾಎಲ್ಲಮ್ಮ ದೇವಿಯ ದೇವಾಲಯದಲ್ಲಿ ಬಳೆಯ ಅಲಂಕಾರ

0

ಶಿಡ್ಲಘಟ್ಟದ ರೇಣುಕಾಎಲ್ಲಮ್ಮ ದೇವಿಯ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬಳೆಯ ಅಲಂಕಾರವನ್ನು ಮಾಡಿ ವಿಶೀಷ ಪೂಜೆಯನ್ನು ನಡೆಸಲಾಯಿತು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

0

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಬಿಪಿಎಲ್‌ ಕಾರ್ಡುದಾರರಿಗೆ ಬೆಂಗಳೂರಿನ ಸಾಗರ್‌ ಆಸ್ಪತ್ರೆಯ ತಜ್ಞ ವೈದ್ಯರು ಉಚಿತ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.
ಹೃದಯ ರೋಗ ಹಾಗೂ ಮೂತ್ರಪಿಂಡದ ಖಾಯಿಲೆಗಳ ತಜ್ಞ ವೈದ್ಯರು ಆಗಮಿಸಿದ್ದು, ತಪಾಸಣೆಯನ್ನು ನಡೆಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಸರ್ಕಾರದ ಖರ್ಚಿನಲ್ಲೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಔಷದೋಪಚಾರವನ್ನು ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ನಡೆಯುವ ಈ ವಾಜಪೇಯಿ ಆರೋಗ್ಯಶ್ರೀ ಶಿಬಿರವನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಈ ಸಂದರ್ಭದಲ್ಲಿ ವೈದ್ಯರು ತಿಳಿಸಿದರು.
ಸುಮಾರು 150 ಮಂದಿ ತಪಾಸಣೆಗೆ ಬಂದಿದ್ದು ಅವರಲ್ಲಿ 20 ಮಂದಿಯನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ 10 ಮಂದಿ ಈಗಾಗಲೇ ಹೊರಟಿದ್ದು ಅವರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಅವರು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ವಾಜಪೇಯಿ ಆರೋಗ್ಯಶ್ರೀ ಜಿಲ್ಲಾ ಸಂಯೋಜಕ ನಯಾಜ್‌ ಖಾನ್‌, ಸಾಗರ್‌ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕೃಷ್ಣಪ್ಪ, ಡಾ.ಪ್ರಕಾಶ್‌, ಅಕ್ಕಲರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕುಂದಲಗುರ್ಕಿಯಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಮತ್ತು ಗ್ರಾಮ ಪಂಚಾಯತಿ ವತಿಯಿಂದ ರಕ್ತದಾನ ಶಿಬಿರ

0

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಮತ್ತು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 52 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು. ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಕುಂದಲಗುರ್ಕಿ ವೆಂಕಟೇಶ್‌, ರೆಡ್‌ ಕ್ರಾಸ್‌ ಸೊಸೈಟಿಯ ಗುರುರಾಜರಾವ್‌, ಸುಬ್ರಮಣಿ ಹಾಜರಿದ್ದರು.

ಎಂ.ಶಶಿಧರ್‌ಗೆ ಇಂಡೋ–ನೇಪಾಳ್‌ ಫ್ರೆಂಡ್‌ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ

0

ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್‌ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನಾಪಾಳದ ಕಠ್ಮಂಡುವಿನಲ್ಲಿ ಶನಿವಾರ ‘ಇಂಡೋ–ನೇಪಾಳ್‌ ಫ್ರೆಂಡ್‌ಶಿಪ್‌’ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಬಡ್ಡಿ ಹಾಗೂ ಸಾಲ ಮನ್ನಾ ಮಾಡದೇ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ

0

ಬಡ್ಡಿ ಮನ್ನಾ ಹಾಗೂ ಸಾಲ ಮನ್ನಾಗಳನ್ನು ಸರ್ಕಾರಗಳು ಮಾಡದೇ ಆ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸೋಮವಾರ 117 ಜನರಿಗೆ ಒಟ್ಟು ಒಂದು ಕೋಟಿ 40 ಲಕ್ಷ ರೂಗಳ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಉಳಿದರೆ ದೇಶ ಉಳಿಯುತ್ತದೆ. ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಸೌಲಭ್ಯ ನೀಡುವ ಹಾಗೂ ಸಮೂಹ ಸಾಲಗಳನ್ನು ನೀಡುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ರೈತರ ಪರವಾಗಿದೆ. ಸಾಲಗಳನ್ನು ಪಡೆದು ಸದುಪಯೋಗ ಮಾಡಿಕೊಂಡು ಸಕಾಲದಲ್ಲಿ ವಾಪಸ್‌ ಮಾಡಿ ಬ್ಯಾಂಕ್‌ ಹಾಗೂ ತಾವೂ ಆರ್ಥಿಕವಾಗಿ ಬೆಳೆಯಬೇಕು. ಒಂದು ವರ್ಷದ ವರೆಗೆ ಬಡ್ಡಿಯಿರದೇ ನೀಡುತ್ತೇವೆ. ಬೇರೆಡೆ ಯಥೇಚ್ಛ ಬಡ್ಡಿಗೆ ಕೈಸಾಲ ಮಾಡುವುದನ್ನು ಬಿಟ್ಟು ಬ್ಯಾಂಕ್‌ ಮೂಲಕ ವ್ಯವಹರಿಸಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಇನ್ನು ಒಂದು ವರ್ಷದೊಳಗೆ ಇತರೇ ಬ್ಯಾಂಕುಗಳಿಗಿಂತ ನಮ್ಮ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಮುಂಚೂಣಿಯಲ್ಲಿರುತ್ತದೆ. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಗಳನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ತೆರೆದು ವ್ಯವಹರಿಸಿ, ಬ್ಯಾಂಕ್‌ ಮೂಲಕ ಹಸುಗಳಿಗಾಗಿ ಸಾಲವನ್ನು ಪಡೆಯಬಹುದು. ಜಿಲ್ಲಾದ್ಯಂತ 150 ಕೋಟಿ ಸಾಲ ನೀಡುವ ಗುರಿಯಿದೆ ಎಂದು ಹೇಳಿದರು.
ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕರಾದ ಶಿವಾರೆಡ್ಡಿ, ದಯಾನಂದ್‌, ಮುಖಂಡ ಸಾದಲಿ ಜೈಪ್ರಕಾಶ್‌, ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಡಿ.ಸಿ.ಸಿ ಬ್ಯಾಂಕ್‌ ವ್ಯವಸ್ಥಾಪಕ ಲಿಂಗರಾಜು, ಸಹಕಾರ ಸಹಾಯಕ ನಿಬಂಧಕ ಆರೀಫುಲ್ಲ, ಚಂದ್ರಶೇಖರ್‌, ನಟರಾಜ್‌, ನರಸಿಂಹರೆಡ್ಡಿ, ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಭೀಮಪ್ಪ, ನಾಗರಾಜ್‌, ರಾಮಣ್ಣ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿ – ಶಾಸಕ ಎಂ.ರಾಜಣ್ಣ

0

ಸಮಾಜದ ತಪ್ಪು ಒಪ್ಪುಗಳನ್ನು ಪ್ರಚುರಪಡಿಸುವ ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಪ್ರಗತಿಯಾದಂತೆ ಪತ್ರಕರ್ತರ ಕಾರ್ಯಶೈಲಿಯೂ ಬದಲಾಗಿದೆ ಹಾಗೂ ಸವಾಲುಗಳೂ ಹೆಚ್ಚಿವೆ. ಜನಸಾಮಾನ್ಯರ ಕಷ್ಟ, ನೋವು, ತೊಂದರೆಗಳಿಗೆ ಪತ್ರಕರ್ತರು ಧ್ವನಿಯಾಗಬೇಕು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಪ್ಪುಗಳನ್ನು ತೋರಿಸಿ ತಿದ್ದುವ ಕೆಲಸದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಮತ್ತು ಎಲೆಮರೆ ಕಾಯಿಯಂಥಹ ಪ್ರತಿಭೆಗಳು ಹಾಗೂ ಉತ್ತಮ ಕಾರ್ಯಗಳ ಬಗ್ಗೆಯೂ ಬೆಳಕು ಚೆಲ್ಲಬೇಕು. ಪತ್ರಕರ್ತರು ವಸ್ತುನಿಷ್ಠ ಪತ್ರಿಕೋದ್ಯಮವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್‌ ಮಾತನಾಡಿ, ದೃಶ್ಯ ಮಾಧ್ಯಮದ ಹೆಚ್ಚಳದಿಂದಾಗಿ ಸುದ್ಧಿಯ ವೇಗ ಹೆಚ್ಚಿದ್ದು ಪತ್ರಕರ್ತರಿಗೆ ಸವಾಲಾಗಿ ಪರಿಣಮಿಸಿದೆ. ಸುದ್ಧಿಯನ್ನು ಪುನರ್ಪರಿಶೀಲಿಸಲು ಅತ್ಯಂತ ಕಡಿಮೆ ಸಮಯವಿರುವುದರಿಂದ ಅಚಾತುರ್ಯವಾಗದಂತೆ ಪತ್ರಕರ್ತರು ಸದಾ ಜಾಗರೂಕರಾಗಿರಬೇಕು. ಸ್ವಹಿತಕ್ಕಿಂತ ಸಮಾಜಮುಖಿಗಳಾಗಿ ದುಡಿಯುವ ಉತ್ತಮ ಪತ್ರಕರ್ತರಿಗೆ ಗೌರವ ಸದಾ ಇರುತ್ತದೆ. ಜಿಲ್ಲಾ ಸಂಘದ ವತಿಯಿಂದ ಜೀವವಿಮಾ ಮಾಡಿಸಲಾಗಿದೆ. ಕಾರ್ಯನಿರತ ಪತ್ರಕರ್ತರು ನಿಧನರಾದರೆ ಜಿಲ್ಲಾ ಸಂಘದಿಂದ 50 ಸಾವಿರ ರೂಗಳನ್ನು ನೀಡುತ್ತೇವೆ. ಗ್ರಾಮೀಣ ಪತ್ರಕರ್ತರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ತಲುಪಿಸಲು ಜಿಲ್ಲಾ ಸಂಘ ಶ್ರಮಿಸಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾನಪದ ಕಲಾವಿದರಿಂದ ಗೀತಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ರಾಧಾಕೃಷ್ಣ, ರಾಜ್ಯ ಸಮಿತಿ ಸದಸ್ಯ ಸೋ.ಸು. ನಾಗೇಂದ್ರನಾಥ್‌, ತಾಲ್ಲೂಕು ಅಧ್ಯಕ್ಷ ನಾಗರಾಜ್‌, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್‌, ರೈತ ಮುಖಂಡರಾದ ಮಳ್ಳೂರು ಹರೀಶ್‌, ಭಕ್ತರಹಳ್ಳಿ ಬೈರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಶೇಖರ್‌, ಖಜಾಂಚಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ರಾಜ್ಯ ರೇಷ್ಮೆ ಸಂಶೋಧನೆ ಮಂಡಳಿಯ ಸದಸ್ಯರಾಗಿ ಹಿತ್ತಲಹಳ್ಳಿಯ ಎಚ್‌.ಕೆ.ಸುರೇಶ್ ಆಯ್ಕೆ

0

ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್‌.ಕೆ.ಸುರೇಶ್‌ ಅವರು ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಸ್ತರಣೆ ಮತ್ತು ತರಬೇತಿ ವಿಭಾಗದ ಸಂಶೋಧನಾ ಮಂಡಳಿಯ ಸದಸ್ಯರಾಗಿ ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುವುದಾಗಿ ರೇಷ್ಮೆ ಅಭಿವೃದ್ಧಿ ಆಯುಕ್ತ ಜಿ.ಸತೀಶ್‌ ತಿಳಿಸಿದ್ದಾರೆ.

ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ

0

ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಬೆಸ್ಕಾಂ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬೆಸ್ಕಾಂ ಇಲಾಖೆಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಟಿ.ಬಿ.ರಸ್ತೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮೆರವಣಿಗೆ ನಡೆಸಿದ ನಂತರ ಬೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಾಗಿಲಲ್ಲೆ ತಡೆದ ಪೋಲಿಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಅನಿಯಮಿತ ಲೋಡ್‌ ಶೆಡ್ಡಿಂಗ್‌ ನಿಲ್ಲಿಸಬೇಕು. ರೈತರ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಬೇಕು, ನಿರಂತರವಾಗಿ ೮ ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಶೀಘ್ರ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್‌ ನಷ್ಟ ತಪ್ಪಿಸಿ ರೈತರ ಪಂಪ್‌ಸೆಟ್‌ ಉಳಿಸಬೇಕು. ಲೈನ್‌ಮನ್‌ಗಳ ಕೊರತೆ ನೀಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇಂಧನ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆಗಾಗಿ ವಿದ್ಯುತ್‌ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸಿದಾಗ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.
ಬೆಸ್ಕಾಂ ಇಲಾಖೆ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ಎಇಇ ಅನ್ಸರ್‌ಪಾಷಾ, ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಎಇಇ ಅನ್ಸರ್‌ಪಾಷಾ, ತಾಲ್ಲೂಕಿನಲ್ಲಿ ೦೮ ವಿದ್ಯುತ್ ಸ್ಟೇಷನ್‌ಗಳಿದ್ದು, ದಿನೇ ದಿನೇ ಕೊಳವೆಬಾವಿಗಳು ಕೊರೆಯುವಂತಹ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೈತರು ಕೊರೆದ ಕೊಳವೆಬಾವಿಗಳನ್ನು ೫೦ ರೂಪಾಯಿಗಳನ್ನು ನೀಡಿ ರಿಜಿಸ್ಟರ್ ಮಾಡಿಸಿಕೊಳ್ಳದೆ ಇರುವುದು ವಿದ್ಯುತ್ ಕೊರತೆ ಉಂಟಾಗಲು ಕಾರಣವಾಗಿದೆ. ರೈತರು ಇಲಾಖೆಯಲ್ಲಿ ನೊಂದಾವಣಿ ಮಾಡಿಕೊಂಡರೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಅನುಕೂಲವಾಗುತ್ತದೆ. ಮನೆಗಳಿಗೆ ಮೀಟರುಗಳನ್ನು ಅಳವಡಿಸಿಕೊಳ್ಳದೆ, ನೇರವಾಗಿ ವಿದ್ಯುತ್ ತಂತಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದು, ಕಡಿವಾಣ ಹಾಕಬೇಕಾಗಿದೆ ಎಂದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಸಿ.ವಿ.ಲೋಕೇಶ್‌ಗೌಡ, ಶಿವಕುಮಾರಗೌಡ, ಕೆಂಪರೆಡ್ಡಿ, ರಾಘವೇಂದ್ರ, ದಾಮೋದರ್, ಬಾಲಮುರಳೀಕೃಷ್ಣ, ಕೆಂಪೇಗೌಡ, ರವಿಪ್ರಕಾಶ್‌ ಚನ್ನಕೇಶವರೆಡ್ಡಿ, ನಾರಾಯಣಸ್ವಾಮಿ, ನಾಗನರಸಿಂಹ, ರವಿಚಂದ್ರ, ನರೇಶ್, ಮಂಜುಳಮ್ಮ, ಸುಜಾತಮ್ಮ, ಶಿವಮ್ಮ, ಟಿ.ರತ್ನಮ್ಮ, ಅಶ್ವಥ್, ಮಧುಸೂದನ್, ರಾಮಚಂದ್ರಪ್ಪ, ಅಶ್ವಕ್ ಅಹ್ಮದ್ ಮುಂತಾದವರು ಹಾಜರಿದ್ದರು.