Home Blog Page 553

ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿಯನ್ನು ಬೆಂಗಳೂರಿನ ಬೆಲ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಬಾರ್ಡ್‌ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಜಿ.ಆರ್‌.ಚಿಂತಾಲ, ಕೆನರಾ ಬ್ಯಾಂಕಿನ ಉಪಮಹಾ ಪ್ರಬಂಧಕ ಎಂ.ಎಂ.ಚಿನ್ನಿವಾರ್‌, ಸಿಂಡಿಕೇಟ್‌ ಬ್ಯಾಂಕಿನ ಸುಧೀರ್‌ ಕುಮಾರ್‌ ನೀಡಿದರು. ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ಸಿ.ಎಸ್‌.ನಾಗೇಂದ್ರ ಪ್ರಸಾದ್‌, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ ಪ್ರಶಸ್ತಿಯನ್ನು ಸ್ವೀಕರಿಸಿದರು.

ಎಚ್‌.ಕ್ರಾಸ್‌ನಲ್ಲಿ ನೂತನ ನಂದಿನಿ ಹಾಲಿನ ಮಳಿಗೆ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ ಎಚ್‌.ಕ್ರಾಸ್‌ನಲ್ಲಿ ಶನಿವಾರ ಶಾಸಕ ಎಂ.ರಾಜಣ್ಣ ನೂತನ ನಂದಿನಿ ಹಾಲಿನ ಮಳಿಗೆಯನ್ನು ಉದ್ಘಾಟಿಸಿದರು. ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಮಾರುಕಟ್ಟೆ ಮೇಲ್ವಿಚಾರಕರು ವಿಜಯ್‌ಕುಮಾರ್‌, ಸಹಾಯಕ ವ್ಯವಸ್ಥಾಪಕರು ಸೋಮಶೇಖರ್‌ ಹಾಜರಿದ್ದರು.

ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಗುರುಪೂರ್ಣಿಮಾ ಪೂಜೆ

0

ಪಟ್ಟಣದ ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಶನಿವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು 51 ಸಾಯಿಬಾಬಾ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು.
ವಾಸವಿ ರಸ್ತೆಯ ಕಾಶೀನಾಥ್‌ ಅವರ ಮನೆಯಲ್ಲಿ ಗುರುಪೂರ್ಣಿಮಾ ಪೂಜೆಯನ್ನು ಆಯೋಜಿಸಿದ್ದು, ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನದಾರತಿ, ಸಾಯಂಕಾಲದ ಧೂಪಾರತಿ ಹಾಗೂ ಶೇಜಾರತಿಯನ್ನು ನಡೆಸಲಾಗುತ್ತಿದೆ. ಮಹಿಳೆಯರು ಸಾಯಿಬಾಬಾ ವಚನಾಮೃತದ ಗೀತೆಗಳನ್ನು, ಬಾಬಾ ಸ್ತುತಿ ಪದ್ಯಗಳನ್ನು ಹಾಡಿದರು.
‘ಆಷಾಡಮಾಸದ ಹುಣ್ಣಿಮೆಯಂದು ಪ್ರತಿ ವರ್ಷ ಗುರುಪೂರ್ಣಿಮೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ. ಕಳೆದ ಐದು ವರ್ಷಗಳಿಂದ ಮಹಿಳಾ ಮಂಡಳಿಯ ಸದಸ್ಯೆಯರು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ಪೂಜೆಯನ್ನು ಆಯೋಜಿಸುತ್ತಿದ್ದೇವೆ. ಎಲ್ಲರಿಗೂ ಆ ಸದ್ಗುರು ಒಳ್ಳೆಯದನ್ನು ಮಾಡಲಿ ಎಂಬ ಉದ್ದೇಶದಿಂದ ಆಚರಿಸುವ ಈ ಪೂಜೆಗೆ ಎಲ್ಲರೂ ತಮ್ಮ ಮನೆಗಳಿಂದ ವಿವಿಧ ಪ್ರಸಾದಗಳನ್ನು ತಂದು ನೈವೇದ್ಯ ಮಾಡಿ ಹಂಚುತ್ತೇವೆ. ಜ್ಞಾನ, ಭಕ್ತಿ ಹಾಗೂ ಆರೋಗ್ಯವನ್ನು ಕರುಣಿಸಿದ ಶಿರಡಿ ಸಾಯಿಬಾಬಾ ಅವರ 51 ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದೇವೆ’ ಎಂದು ಆರ್ಯ ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ತಿಳಿಸಿದರು.
ಆರ್ಯ ವೈಶ್ಯ ಮಹಿಳಾ ಮಂಡಳಿಯ ಸತ್ಯಲಕ್ಷ್ಮಿ, ರೂಪಾ, ಜಯಶ್ರೀ, ಸರಳಾ, ಪ್ರತಿಮಾ ಮತ್ತಿತರರು ಹಾಜರಿದ್ದರು.

ಸಾಯಿನಾಥ ಜ್ಞಾನಮಂದಿರದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನಮಂದಿರದಲ್ಲಿ ಶನಿವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಮೂರು ದಿನಗಳಿಂದ ರಾಮಕೋಟಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು. ಮಳ್ಳೂರು, ಸೊಣ್ಣೇನಹಳ್ಳಿ, ಅಪ್ಪೇಗೌಡನಹಳ್ಳಿ, ಸೀಗೆಹಳ್ಳಿ, ಮೇಲೂರು, ಕೊಮ್ಮಸಂದ್ರ, ಹಿತ್ತಲಹಳ್ಳಿ, ಬೆಳ್ಳೂಟಿ, ಆನೂರು, ಬೋದಗೂರು, ಮುತ್ತೂರು, ಕಾಕಚೊಕ್ಕಂಡಹಳ್ಳಿ, ವೀರಾಪುರ, ಹೊಸಹುಡ್ಯ, ಗಂಗನಹಳ್ಳಿ, ಗಿಡ್ನಹಳ್ಳಿ ಸೇರಿದಂತೆ 35 ಗ್ರಾಮದ ಭಕ್ತರಿಂದ ಸರದಿಯಂತೆ ಹಗಲೂ ರಾತ್ರಿ ರಾಮಕೋಟಿ ಭಜನೆ ನಡೆಯಿತು. ಹತ್ತು ದಿನಗಳ ಕಾಲ ದಿನಕ್ಕೊಂದು ಗ್ರಾಮದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಶನಿವಾರ ಗುರುಪೂರ್ಣಿಮಾ ಅಂಗವಾಗಿ ಕಾಕಡಾರತಿ, ಪಂಚಾಮೃತಾಭಿಷೇಕ, ಸತ್ಯನಾರಾಯಣಸ್ವಾಮಿ ಪೂಜೆ, ಸಾಯಿ ಹೋಮ, ದತ್ತಾತ್ರೇಯ ಹೋಮ, ಶ್ರೀರಾಮ ತಾರಕ ಹೋಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮೂವ್ವತ್ತೈದು ಶಾಲೆ ಹಾಗೂ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ರಾಮಕೃಷ್ಣ ವಿವೇಕಾನಂದ ಮಠದ ಪೂರ್ಣಾನಂದ ಸ್ವಾಮಿಗಳು ಮಾಡಿದರು. ವಿವಿಧ ಶಾಲೆಗಳ ಮಕ್ಕಳಿಗೆ ನೋಟ್‌ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಭಜನೆ ನಡೆಸಿದ ಗ್ರಾಮಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು. ತಾಲ್ಲೂಕಿನ ಹಿರಿಯ ಕಲಾವಿದರಾದ ಪಿಟೀಲು ವಿದ್ವಾನ್‌ ಹೊಸಪೇಟೆ ನಾರಾಯಣಾಚಾರ್‌, ಮೃದಂಗ ವಿದ್ವಾನ್‌ ವೆಂಕಟರಮಣಪ್ಪ ಅವರನ್ನು ಸನ್ಮಾನಿಸಲಾಯಿತು.
‘ಸಾಯಿನಾಥ ಜ್ಞಾನ ಮಂದಿರದಲ್ಲಿ ಹಲವಾರು ವರ್ಷಗಳಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ತಾಲ್ಲೂಕಿನ ಪ್ರತಿಭಾವಂತ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ. ಈ ವಿಶಿಷ್ಠ ದಿನ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆ ನಡೆಸುವುದರಿಂದ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದವನ್ನು ವಿನಿಯೋಗಿಸುತ್ತಿದ್ದೇವೆ’ ಎಂದು ದೇವಾಲಯದ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು.
ಸಾಯಿನಾಥ ಜ್ಞಾನ ಮಂದಿರದ ಸಂಸ್ಥಾಪಕ ಎಂ ವೆಂಕಟೇಶ್, ನೈರುತ್ಯ ರೇಲ್ವೆ ವಿಭಾಗೀಯ ಕಾರ್ಮಿಕ ಅಧಿಕಾರಿ ಟಿ.ಶಿವಣ್ಣ, ಡಿ.ಸಿ.ಪಿ ಕಚೇರಿಯ ಸಂಚಾರಿ ವಿಭಾಗದ ಮುಖ್ಯಸ್ಥೆ ಆರ್.ಮಂಜುಳ, ಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮರೆಡ್ಡಿ, ಹಿರಿಯ ಜಾನಪದ ಕಲಾವಿದ ಎಂ.ಆರ್.ಲಕ್ಷೀಪತಿ, ಗೋವಿಂದಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಜನಸಂಖ್ಯಾ ಜಾಗೃತಿ ಜಾಥಾ

0

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ‘ಯೋಜಿತ ಪರಿವಾರ –ಸುಖ ಸಂತೋಷ ಅಪಾರ’ ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಜನಸಂಖ್ಯಾ ಜಾಗೃತಿ ಜಾಥಾ ನಡೆಸಿದರು.
‘ಜನಸಂಖ್ಯೆಯ ಹೆಚ್ಚಳದಿಂದ ಸರ್ಕಾರ ರೂಪಿಸುವ ವಿವಿಧ ಯೋಜನೆಗಳು ಎಲ್ಲರನ್ನೂ ತಲುಪಲಾಗುತ್ತಿಲ್ಲ. ಭೂಮಿಯು ಇರುವಷ್ಟೇ ಇರುತ್ತದೆ. ವಿಸ್ತರಿಸಲಾಗದು. ಆದರೆ ಹೆಚ್ಚುವ ಜನಸಂಖ್ಯೆಯ ಭಾರ ಹಾಗೂ ಒತ್ತಡ ಭೂಮಿಯ ಮೇಲೆ ಬೀಳುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ. ವೈದ್ಯಕೀಯ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಆಗಿರುವುದರಿಂದ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವು ಮಹಿಳೆಯರು ಮನೆಯಲ್ಲೂ ಹಾಗೂ ಹೊರಗೂ ದುಡಿಯುವುದಿದ್ದಲ್ಲಿ ಪುರುಷರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್‌ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಂತರ್ಜಲ ಕುಸಿದು, ಕೊಳವೆ ಬಾವಿಗಳನ್ನು ಕೊರೆಸಿ ಕೊರೆಸಿ ರೈತರು ಹಾಳಾಗಿದ್ದಾರೆ. ಭೂಮಿಯಲ್ಲಿ ಬೆಳೆ ತೆಗೆಯುವುದೇ ಕಷ್ಟಕರ ಪರಿಸ್ಥಿತಿಯಲ್ಲಿ ಹೆಚ್ಚುವ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟಕರ. ಈ ಬಗ್ಗೆ ಜನರೇ ಜಾಗೃತರಾಗಬೇಕು. ಪ್ರತಿಯೊಬ್ಬರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಲೀಲಾ ರಾಜಣ್ಣ, ಪಿ.ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ಎ.ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್‌.ಕೆ.ಗುರುರಾಜರಾವ್‌, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್‌ ಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮನೆಯೊಂದರಲ್ಲಿ ಕಂಡ ವಿಷಕಾರಿಯಲ್ಲದ ಹಸಿರುಹಾವು ಸುರಕ್ಷಿತವಾಗಿ ಕಾಡಿಗೆ

0

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮನೆಯೊಂದರ ಹಿತ್ತಲಿನ ಬಾಳೆಗಿಡದಲ್ಲಿ ಬುಧವಾರ ಕಂಡು ಬಂದ ಹಸಿರುಹಾವನ್ನು ಅದೇ ಗ್ರಾಮದ ಸ್ನೇಕ್‌ ನಾಗರಾಜ್‌ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಬಾಳೆಯ ಗಿಡದಲ್ಲಿ ಕಂಡುಬಂದ ವಿಷಕಾರಿಯಲ್ಲದ ಹಸಿರುಹಾವು ಕೋಪವನ್ನು ಪ್ರದರ್ಶಿಸುತ್ತಾ ಭುಸುಗುಡುತ್ತಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಬಾಳೆಯ ಗಿಡದಲ್ಲಿ ಕಂಡುಬಂದ ವಿಷಕಾರಿಯಲ್ಲದ ಹಸಿರುಹಾವು ಕೋಪವನ್ನು ಪ್ರದರ್ಶಿಸುತ್ತಾ ಭುಸುಗುಡುತ್ತಿತ್ತು.

ಗ್ರೀನ್‌ ವೈನ್‌ ಸ್ನೇಕ್‌ ಎಂದು ಕರೆಯುವ ಅಚ್ಚ ಹಸಿರು ಬಣ್ಣದ ಹಸಿರಾವು ನೋಡಲು ಸುಂದರವಾದ ಹಾವು. ಹಸಿರು ಬಣ್ಣದ ಮರಗಿಡಗಳ ಕಾಂಡಗಳಲ್ಲಿರುವ ಅದನ್ನು ಗುರುತಿಸುವುದು ಕಷ್ಟ. ಅದನ್ನು ಕಡ್ಡಿಯೊಂದರ ಮೇಲೆ ಸ್ನೇಕ್‌ ನಾಗರಾಜ್‌ ಹತ್ತಿಸಿದಾಗ ಸಾಧುವಂತೆ ಕಂಡ ಹಾವು, ಅದರ ಫೋಟೋ ತೆಗೆಯಲು ಹೋದೊಡನೆ ಲೆನ್ಸ್‌ನಲ್ಲಿ ಕಂಡ ತನ್ನ ಪ್ರತಿಬಿಂಬವನ್ನು ಕಂಡು ಭುಸುಗುಡತೊಡಗಿತು. ಅದರ ಆ ಪ್ರತಿಕ್ರಿಯೆಯಿಂದ ಉತ್ತಮ ಚಿತ್ರ ದಾಖಲಾಯಿತು.
‘ನಾಗರಹಾವನ್ನು ಕಂಡಲ್ಲಿ ಮಾತ್ರ ಜನರು ನನ್ನನ್ನು ಕರೆಯುತ್ತಾರೆ. ಉಳಿದ ಯಾವುದೇ ಹಾವನ್ನು ಕಂಡರೂ ತಾವೇ ಕೋಲೆತ್ತಿ ಕೊಂದು ಬಿಡುತ್ತಾರೆ. ಈ ರೀತಿಯ ವಿಷವಿಲ್ಲದ ಹಾವನ್ನು ಕಂಡರೆ ಕರೆಯುವವರು ಅಪರೂಪ. ಯಾವ ಹಾವಾದರೂ ಸರಿ ಅಕಸ್ಮಾತಾಗಿ ಮನುಷ್ಯರ ವಾಸಸ್ಥಾನದ ಬಳಿ ಬರುತ್ತವೆಯಷ್ಟೆ. ಅವನ್ನು ಸುರಕ್ಷಿತವಾಗಿ ಅವುಗಳ ವಾಸಸ್ಥಾನದಲ್ಲಿ ಬಿಡಬೇಕು. ಅವೂ ಕೂಡ ನಮ್ಮಂತೆಯೇ ಜೀವಿಗಳು’ ಎನ್ನುತ್ತಾರೆ ಸ್ನೇಕ್‌ ನಾಗರಾಜ್‌.
’ಹಸಿರು ಹಾವು ವಿಷಕಾರಿ ಅಲ್ಲ. ಆದರೂ ಅದು ಭುಸುಗುಡುತ್ತದೆ ಮತ್ತು ಕಚ್ಚುತ್ತದೆ. ಇದರ ಆಹಾರವಾದ ಕಪ್ಪೆ, ಹಲ್ಲಿ ಮುಂತಾದವನ್ನು ಕೊಲ್ಲಲು ಇದರಲ್ಲಿ ಸ್ವಲ್ಪ ಮಟ್ಟದ ವಿಷ ಇರುತ್ತದೆ. ಇದು ಮನುಷ್ಯರಿಗೆ ಕಚ್ಚಿದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಯಾವುದೇ ಅಪಾಯವಿಲ್ಲ’ ಎಂದು ಅವರು ಹೇಳಿದರು.

ಸರ್ಮಸ್ತ್‌ ಹುಸೇನಿ ಷಾವಾಲಿ ಮಸೀದಿಯಲ್ಲಿ ರಮ್‌ಜಾನ್ ‘ರೋಜಾ’ ಆಚರಣೆ

0

ಹಿಂದುಗಳ ದೀಪಾವಳಿ ಹಬ್ಬದಂತೆ ಮುಸ್ಲೀಮರಿಗೆ ರಮ್‌ಜಾನ್ ಸಂತೋಷದ ದೊಡ್ಡ ಹಬ್ಬ. ಹಿಜರಿ ಶಕೆಯ ಒಂಬತ್ತನೆಯ ತಿಂಗಳು ರಮ್‌ಜಾನ್ ಆಗಿದೆ. ಈ ತಿಂಗಳಿನಲ್ಲಿ ‘ರೋಜಾ’ (ಉಪವಾಸ ವೃತ) ಆಚರಿಸುವುದರಿಂದ ಪಾಪಗಳು ಸುಟ್ಟು ಬೂದಿಯಾಗುತ್ತವೆಂಬ ನಂಬಿಕೆಯಿದೆ.
ಪಟ್ಟಣದ ಸರ್ಮಸ್ತ್‌ ಹುಸೇನಿ ಷಾವಾಲಿ ಮಸೀದಿಯಲ್ಲಿ ರೋಜಾ ಕೈಗೊಂಡವರಿಗೆಲ್ಲಾ ಸಂಜೆ ರೋಜಾ ಬಿಡುವ ಸಮಯದಲ್ಲಿ ಬಾಳೆ ಹಣ್ಣು, ಖರ್ಜೂರ, ಸಮೋಸಗಳನ್ನು ಮಸೀದಿಯ ವತಿಯಿಂದ ನೀಡಲಾಗುತ್ತಿದೆ.
ಇಡೀ ತಿಂಗಳು ರೋಜಾ ಇರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯ. ದುಃಖದಿಂದ ಪಾರಾಗಲು ಅಲ್ಲಾಹನ ಪ್ರೇಮ ಸಂಪಾದಿಸಲು ರೋಜಾ ಪವಿತ್ರಮಾರ್ಗವೆಂದು ಮುಸ್ಲಿಂ ಬಾಂಧವರು ನಂಬುತ್ತಾರೆ.
‘ಪ್ರತಿದಿನ ಬೆಳಿಗ್ಗೆ ‘ಫಜ್ರ’ ನಮಾಜಿನ ವೇಳೆಗಿಂತ ಮೊದಲು ಹಿತ-ಮಿತ ಆಹಾರ ಸೇವಿಸಿ ‘ಸಹರಿ’ (ರೋಜಾ ಆರಂಭಿಸುವುದು) ಮಾಡುತ್ತಾರೆ. ಇದಕ್ಕೆ ಅನೇಕ ನಿಯತ್ (ವಿಧಿ, ನಿಯಮ) ಇದ್ದು ಅದರಲ್ಲಿ ಒಂದು ಹೀಗಿದೆ “ನವಾಯಿತನ್ ಆರ್ ಮೊಗದಮ್ ಸೌಮ ರಮಧಾನ್ ಮನ ಫರ್ದುಲ್ಲಾ ಹಿತಾಲಾ” ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಂದರೆ ರೋಜಾ ಸ್ವೀಕೃತಿಯಾಗುತ್ತದೆ. ಅನಂತರ ಇಡೀ ದಿನ ಆಹಾರ ನೀರು ಸ್ವೀಕರಿಸದೆ, ಸೂರ್ಯಾಸ್ತವಾದ ನಂತರ ಮಗರಿಬ್ ನಮಾಜಿನ ವೇಳೆಗೆ ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಮನೆಯಲ್ಲಿ ಅಥವಾ ಮಸೀದೆಯಲ್ಲಿ ಕುಳಿತು ‘ರೋಜಾ’ ಬಿಡಬೇಕು.
“ಅಲ್ಲಾಹೂಮಾ ಲಕಾಸಂತೋ ವ ಬಿಕಾಮಂತೊ ವ ಅಲಾಯಿಕಾ ತವಕ್ಕಿಲ್ ತೋ ವ ಅಲಾರಿಸ್‌ತಿಕಾ ಆಪ್ತರತೋ ವತ್ ಖಬ್ಬಲ್ ಮಿನ್ನಿ” (ಅಲ್ಲಾಹ, ನಾನು ನಿನ್ನ ಸಲುವಾಗಿ ಉಪವಾಸ ವೃತ ಕೈಗೊಂಡಿದ್ದೆನು ಮತ್ತು ನಿನ್ನ ಆಜ್ಞೆಯ ಮೇರೆಗೆ ನಾನು ಉಪವಾಸ ವೃತ ಬಿಡುತ್ತೇನೆ) ಎಂದು ಹೇಳಿ ಖರ್ಜೂರ ಅಥವಾ ಬಾಳೆಯ ಹಣ್ಣು (ಅಥವಾ ಸ್ವಲ್ಪ ಆಹಾರ) ಸೇವಿಸಿ ರೋಜಾ ಬಿಡುತ್ತಾರೆ. ‘ಆಜಾನ್’ (ಪ್ರಾರ್ಥನೆಯ ಕರೆ) ಆದೊಡನೆ ಮಸೀದೆಯಲ್ಲಿ ಜಮಾ ಅತ್‌ನೊಂದಿಗೆ ‘ಮಗರಿಬ್’ ನಮಾಜು ಮಾಡಿ ಮನೆಗೆ ಮರಳುತ್ತಾರೆ’ ಎಂದು ಹಫೀಜುಲ್ಲಾ ತಿಳಿಸಿದರು.

ರಸ್ತೆ ಬದಿಯ ವ್ಯಾಪಾರ, ಅಪಘಾತಕ್ಕೆ ಆಹ್ವಾನ

0

ಸುಸಜ್ಜಿತ ಸಂತೆ ಮೈದಾನ ಹಾಗೂ ಮಳಿಗೆಗಳಿದ್ದರೂ ತಾಲ್ಲೂಕಿನ ಹೊಸಪೇಟೆ ಗೇಟ್‌ ಬಳಿ ರಸ್ತೆಯ ಬದಿಯಲ್ಲೇ ಸಂತೆ ವ್ಯಾಪಾರ ನಡೆಸುತ್ತಿದ್ದು ಅಪಘಾತಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಗೆ ಸೇರಿರುವ ಜಂಗಮಕೋಟೆ ಕ್ರಾಸ್‌ ಅತಿ ಹೆಚ್ಚು ವ್ಯಾಪಾರ ನಡೆಯುವ ಕೇಂದ್ರವಾಗಿದೆ. ಪ್ರತಿ ಮಂಗಳವಾರ ನಡೆಯುವ ಇಲ್ಲಿನ ಸಂತೆಯಿಂದ ಪಂಚಾಯಿತಿಗೆ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಗಳಷ್ಟು ಆದಾಯವಿದೆ. ಜಂಗಮಕೋಟೆ ಕ್ರಾಸ್‌ನಲ್ಲಿ ನಾಲ್ಕು ರಸ್ತೆಗಳ ಕೂಡುವ ಸ್ಥಳ ಹಾಗೂ ಜನಜಂಗುಳಿ ಹೆಚ್ಚೆಂದು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ರಸ್ತೆ ಬದಿಯಲ್ಲಿ ಸಂತೆ ನಡೆಯುತ್ತಿದ್ದುದನ್ನು ಬದಲಿಸಿ ಹೊಸಪೇಟೆ ಗೇಟ್‌ ಬಳಿ ಪಂಚಾಯಿತಿ ಸ್ಥಳದಲ್ಲಿ ಸುಮಾರು 19 ಲಕ್ಷ ರೂಗಳ ವೆಚ್ಚದಲ್ಲಿ ಸುಸಜ್ಜಿತ ಸಂತೆ ಮೈದಾನ, ಶೆಡ್ ಹಾಗೂ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿತ್ತು. ನೆರಳು, ಕುಡಿಯುವ ನೀರು, ಶೌಚಾಯಲ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿದ್ದರೂ ಮಳಿಗೆಗಳ ಮುಂದೆ ರಸ್ತೆಬದಿಯಲ್ಲೇ ಜನರು ವ್ಯಾಪಾರಕ್ಕೆ ಅಂಗಡಿಗಳನ್ನು ತೆರೆದಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ರಸ್ತೆ ಬದಿಯಲ್ಲಿ ಕೆಲವರು ಅಂಗಡಿ ಇಡುವುದರಿಂದಾಗಿ ಸಂತೆಯ ದಿನ ಟೆಂಪೊ, ಟ್ರಾಕ್ಟರ್‌ ಮುಂತಾದ ವಾಹನಗಳಲ್ಲಿ ತರಕಾರಿ ಮೊದಲಾದ ವಸ್ತುಗಳನ್ನು ಮಾರಾಟಕ್ಕೆ ತರುವವರು ಸಂತೆ ಮೈದಾನದೊಳಕ್ಕೆ ಹೋಗಲಾಗುವುದಿಲ್ಲ. ವಾಹನ ಸಂಚಾರ ಹೆಚ್ಚಾಗಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಿದಾಗಿದ್ದು, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಒಂದೆಡೆ ವಾಹನ ಸಂಚಾರಕ್ಕೆ ಅಡಚಣೆಯುಂಟಾದರೆ, ತರಕಾರಿ ಮುಂತಾದವುಗಳನ್ನು ತಂದವರು ಸಂತೆ ಮಳಿಗೆಯವರೆಗೂ ರಸ್ತೆಯಿಂದ ಸಾಗಿಸಬೇಕಾದ ಅನಿವಾರ್ಯತೆ ಎದುರಿಸುವಂತಾಗುತ್ತದೆ.
‘ಸಂತೆ ನಡೆಯುವ ಸ್ಥಳ ಬದಲಿಸಿರುವುದಿಂದ ಜನರಿಗೆ ಗೊತ್ತಾಗಲೆಂದು ಮಿಠಾಯಿ ಮತ್ತು ಪ್ಲಾಸ್ಟಿಕ್‌ ಅಂಗಡಿಗಳನ್ನು ರಸ್ತೆ ಬದಿ ಇಡಲು ಅನುಮತಿ ಕೊಟ್ಟಿದ್ದೇವೆ. ಆದರೆ ಬೇರೆ ಎಲ್ಲಾ ವ್ಯಾಪಾರಸ್ಥರೂ ಸಂತೆಯ ಒಳಗೇ ವ್ಯಾಪಾರ ಮಾಡಬೇಕೆಂದು ತಿಳಿಸಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು.
ವಿಪರೀತವಾದ ವಾಹನ ಸಂಚಾರವಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಬದಿಯಲ್ಲೇ ಎಲ್ಲಾ ರೀತಿಯ ಸಂತೆಯ ಅಂಗಡಿಗಳೂ ಮಂಗಳವಾರದಂದು ಸ್ಥಾಪಿತವಾಗುತ್ತವೆ. ಜನರು ರಸ್ತೆಯ ಬದಿಯಲ್ಲೇ ನಿಂತು ವ್ಯಾಪಾರ ಮಾಡುತ್ತಿರುತ್ತಾರೆ. ವೇಗವಾಗಿ ಹೋಗುವ ವಾಹನಗಳಿಂದ ಅನಾಹುತವಾಗುವುದರಿಂದ ಅಧಿಕಾರಿಗಳು ರಸ್ತೆ ಬದಿಯ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟ ಮಳಿಗೆಯಲ್ಲೇ ವ್ಯಾಪಾರ ಮಾಡುವಂತೆ ನಿರ್ಬಂಧಿಸಬೇಕು. ಇದರಿಂದ ರಸ್ತೆಯ ಧೂಳು, ಅಪಘಾತ ಹಾಗೂ ವ್ಯಾಪಾರ ಮಾಡುವ ಜನರಿಗೆ ಸುರಕ್ಷೆಯೂ ಇರುವಂತಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

0

ಶಿಡ್ಲಘಟ್ಟದ ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಗಿಡ ನೆಡುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ ಪರಿಸರ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರ.ಮು.ಶಿ ವೆಂಕಟರಮಣಪ್ಪ ಪರಿಸರದ ಅವಶ್ಯಕತೆ, ಮಾಲಿನ್ಯದ ದುಷ್ಪರಿಣಾಮಗಳು, ಓಜೋನ್ ಪದರದ ಸದ್ಯದ ಪರಿಸ್ಥಿತಿಯನ್ನು ವಿವರವಾಗಿ ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ಅಮರನಾಥ್ ಮತ್ತು ನಾಗರಾಜ್ ರವರು ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಸೋಮೇಶ್ವರಸ್ವಾಮಿ ಕ್ರಿಕೆಟ್‌ ಕ್ಲಬ್ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್‌ ಅಸೋಸಿಯೇಷನ್‌ ತಂಡಕ್ಕೆ ವಿಜಯ

0

ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗೇಟ್‌ ಬಳಿ ಸೋಮೇಶ್ವರಸ್ವಾಮಿ ಕ್ರಿಕೆಟ್‌ ಕ್ಲಬ್‌ ಸೋಮವಾರ ಆಯೋಜಿಸಿದ್ದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್‌ ಅಸೋಸಿಯೇಷನ್‌ ತಂಡ ವಿಜೇತರಾಗಿ 12 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ಪಡೆದರೆ, ದ್ವಿತೀಯರಾದ ಯಣ್ಣಂಗೂರು ತಂಡದವರು 6 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಹೊಸಪೇಟೆ ಗ್ರಾಮ ಪಂಚಾಯಿತಿ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ

0

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರು ಯೂನಿಟ್‌ ಸಂಗ್ರಹವಾಯಿತು.

ರೇಷ್ಮೆ ಉದ್ದಿಮೆಯ ಅಭಿವೃದ್ಧಿಗಾಗಿ ಬಜೆಟ್ ಪೂರ್ವ ಸಲಹೆ ಸ್ವೀಕಾರ ಸಭೆ

0

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ಬಜೆಟ್ ಪೂರ್ವ ಸಲಹೆ ಸ್ವೀಕಾರ ಸಭೆಯನ್ನು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.
ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕೆದಾರರು, ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಮೊಟ್ಟೆ ತಯಾರಕರು ಸೇರಿದ ಸಭೆಯಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿರುವವರಿಗೆ ಪೂರಕವಾಗಿ ಸರ್ಕಾರದ ಬಜೆಟ್‌ ಜುಲೈ 10 ರಂದು ಮೂಡಿಬರಲು ಸಲಹೆ ಸೂಚನೆಗಳನ್ನು ನೀಡಲಾಯಿತು. ಮುಂಬರುವ ಬಜೆಟ್‌ನಲ್ಲಿ ರೇಷ್ಮೆಕೃಷಿ ಅಭಿವೃದ್ಧಿಗೆ ವಿಶೇಷ ಸೌಲಭ್ಯವನ್ನು ನೀಡುವ ವಿಚಾರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸರ್ಕಾರವು ಮಂಡಿಸುವ ಆಯವ್ಯಯದಲ್ಲಿ ರೇಷ್ಮೆ ಕೃಷಿಕರ ಪರವಾಗಿ ಅಭಿವೃದ್ಧಿಪೂರಕ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಯೋಜನೆಯನ್ನು ರೂಪಿಸಿ ಸಂಕಷ್ಟದಲ್ಲಿರುವ ರೇಷ್ಮೆ ಕೃಷಿಕರನ್ನು ಉಳಿಸಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಂಡು ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು. ನೂಲು ಬಿಚ್ಚಾಣಿಕೆದಾರರು ಖಾಸಗಿ ವರ್ತಕರಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಮತ್ತು ರೇಷ್ಮೆಗೂಡಿನ ದರದಲ್ಲಿ ಸ್ಥಿರತೆಯನ್ನು ಕಾಪಾಡಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (KSMB)ಗೆ ಕೂಡಲೇ 50 ಕೋಟಿ ಹಣವನ್ನು ಬಿಡುಗಡೆ ಮಾಡಿ, ಆ ಸಂಸ್ಥೆಯನ್ನು ಪುನಃಶ್ಚೇತನಗೊಳಿಸುವುದು. ರೇಷ್ಮೆಹುಳು ಸಾಕಾಣಿಕೆ ಮನೆಗೆ ನೀಡುತ್ತಿದ್ದ ಸಹಾಯ ಧನವನ್ನು ಕಡಿತಗೊಳಿಸಿದ್ದು, ಈ ಹಿಂದಿನಂತೆ ಮುಂದುವರೆಸುವುದು.
ಹನಿನೀರಾವರಿಗೆ ಕೊಡುತ್ತಿದ್ದ ಸಹಾಯ ಧನದ ಸೌಲಭ್ಯವನ್ನು ಕಡಿತಗೊಳಿಸಿದ್ದು, ಯಥಾಸ್ಥಿತಿ ಮುಂದುವರೆಸುವುದು. 2003-–04ನೇ ಸಾಲಿನ ಬಜೆಟ್‌ನಲ್ಲಿ ಮಿಶ್ರತಳಿ ಗೂಡಿಗೆ ಪ್ರೋತ್ಸಾಹ ಧನವಾಗಿ ಕೊಡಲು ತೀರ್ಮಾನಿಸಿದ್ದ ೩೦ ರೂ. ಗಳನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾದ್ದರಿಂದ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳುವುದು. ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ 20 ಶೀತಲ ಗೃಹ ನಿರ್ಮಾಣವನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾಗಿದ್ದು, ಈ ಕೂಡಲೇ ಅನುಷ್ಠಾನಗೊಳಿಸತಕ್ಕದ್ದು. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ೧ ಲಕ್ಷ ರೂ.ಗಳ ಕಡಿಮೆ ಬಡ್ಡಿಯ ಸಾಲ ಯೋಜನೆಯು ಇದುವರೆವಿಗೂ ಜಾರಿಯಾಗಿಲ್ಲವಾದ್ದರಿಂದ ನೂಲು ಬಿಚ್ಚಾಣಿಕೆದಾರರನ್ನು ಉಳಿಸಲು ಕೂಡಲೇ ಅನುಷ್ಠಾನಗೊಳಿಸುವುದು. ರೇಷ್ಮೆಗೂಡು ಮಾರುಕಟ್ಟೆಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವುದು. ಸಣ್ಣ-ಸಣ್ಣ ನೂಲು ಬಿಚ್ಚಾಣಿಕೆದಾರರಿಗೆ ಅನುಕೂಲವಾಗುವಂತೆ 2 ಬೇಸಿನ್‌ಗಳ ಸಣ್ಣ ನೂಲು ಬಿಚ್ಚಾಣಿಕೆ ಘಟಕಗಳನ್ನು ಅಳವಡಿಸಿಕೊಳ್ಳಲು ಸಹಾಯಧನ ಒದಗಿಸುವುದು. ರೇಷ್ಮೆ ಕೃಷಿಗೆ ಸೌಲಭ್ಯ ನೀಡುವಿಕೆಯಲ್ಲಿನ ಜಾತಿ ಆಧಾರಿತ ಸಹಾಯಧನ ವಿತರಣೆಯ ನೀತಿಯನ್ನು ಕೈಬಿಟ್ಟು, ರೇಷ್ಮೆ ಕೃಷಿಕರನ್ನು ಒಂದೇ ಎಂದು ಪರಿಗಣಿಸಿ ಸೌಲಭ್ಯ ವಿತರಿಸುವುದು. ಬಯಲುಸೀಮೆ ಭಾಗದ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳಿಂದ ಅತಿ ಕಡಿಮೆ ನೀರು ಲಭ್ಯವಿರುವುದರಿಂದ, ನೀರನ್ನು ಶೇಖರಿಸಿ ತೋಟಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ನೀರಿನ ತೊಟ್ಟಿಗಳಿಗೆ ಸಹಾಯ ಧನ ನೀಡುವುದು. ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡಾ 15 ರಿಂದ ಈ ಹಿಂದಿನಂತೆ 31.5ಕ್ಕೆ ಏರಿಸಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು, ರೇಷ್ಮೆ ಕೃಷಿಯನ್ನು ಉಳಿಸಲು ಕ್ರಮ ಕೈಗೊಳ್ಳುವುದು ಎಂಬ ವಿಷಯಗಳನ್ನು ಬಜೆಟ್‌ನಲ್ಲಿ ಸೇರಿಸಲು ರೈತರು ಚರ್ಚಿಸಿದರು. ತಮ್ಮ ಬೇಡಿಕೆಗಳ ಪಟ್ಟಿಯನ್ನು ರೇಷ್ಮೆಕೃಷಿ ಅಭಿವೃದ್ಧಿ ಆಯುಕ್ತರು ಮತ್ತು ಉಪನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ಸಭೆಯಲ್ಲಿ ಒಮ್ಮತವಾಗಿ ತೀರ್ಮಾನಿಸಲಾಯಿತು.
ರೈತ ಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಕೆಂಪರೆಡ್ಡಿ, ಶ್ರೀರಾಮಣ್ಣ, ರೀಲರುಗಳಾದ ಅನ್ವರ್, ರಾಮಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಡ್ತಿ ಪಡೆದು ವರ್ಗಾವಣೆಗೊಂಡ ಪೊಲೀಸ್‌ ಸಿಬ್ಬಂದಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ

0

ನಮ್ಮ ಠಾಣೆಗೆ 40 ಪೇದೆಗಳ ಅಗತ್ಯವಿದ್ದು ಕೇವಲ 20 ಮಂದಿ ಇರುವುದರಿಂದ ಅವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹಾಗಾಗಿ ಪೇದೆಗಳಿಗೆ ರಜೆಗಳನ್ನು ನೀಡಲಾಗದೆ ಅವರಿಂದ ಹೆಚ್ಚು ಕೆಲಸ ಮಾಡಿಸಬೇಕಾಗಿದೆ ಎಂದು ಪುರಠಾಣೆ ಸಬ್‌ಇನ್ಸ್‌ಪೆಕ್ಟರ್‌ ಪುರುಷೋತ್ತಮ್‌ ತಿಳಿಸಿದರು.
ಪುರಠಾಣೆಯಲ್ಲಿ ಭಾನುವಾರ ಬಡ್ತಿ ಪಡೆದು ವರ್ಗಾವಣೆಗೊಂಡ ನಾಲ್ವರು ಪೊಲೀಸ್‌ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಠಾಣೆಯಲ್ಲಿ ಇದ್ದ ಒಬ್ಬ ಮಹಿಳಾ ಸಿಬ್ಬಂದಿಯ ವರ್ಗಾವಣೆಯಿಂದಾಗಿ ಅವರ ಕೊರತೆಯುಂಟಾಗಿದೆ. ಎಲ್ಲಿದ್ದರೂ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಿ ಇಲಾಖೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಹೇಳಿದರು.
ಮುಖ್ಯಪೇದೆಯಿಂದ ಎ.ಎಸ್‌.ಐ ಆಗಿ ಬಡ್ತಿಹೊಂದಿದ ನಾರಾಯಣಪ್ಪ, ಪೇದೆಯಿಂದ ಮುಖ್ಯಪೇದೆಯಾಗಿ ಬಡ್ತಿಹೊಂದಿದ ನಾಗರಾಜ್‌ ಮತ್ತು ಶ್ರೀನಿವಾಸ್‌ ಹಾಗೂ ವರ್ಗಾವಣೆಗೊಂಡ ಮುಖ್ಯಪೇದೆ ಚಂದ್ರಕಲಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪುರಠಾಣೆ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು

ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ

0

ಒಂದಿಷ್ಟು ತ್ರಿಭುಜಗಳು, ಕೆಲವು ವೃತ್ತಗಳು. ಹಾಗೆಯೇ ಕೆಲವು ರೇಖೆಗಳು..ಇವಿಷ್ಟನ್ನು ಒಂದು ಹದದಲ್ಲಿ ಬೆರೆಸಿದಾಗ ಕಣ್ಣ ಮುಂದೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದು ಕಂಡುಬರುತ್ತದೆ. ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಆಟವಾಡುತ್ತಿರುತ್ತಾರೆ. ಒಂದೆಡೆ ಗುಡಿಸಲಿನ ಮುಂದೆ ರಾಗಿ ಬೀಸುತ್ತಿದ್ದರೆ, ಮತ್ತೊಂದೆಡೆ ಹೊಲ ಉಳುತ್ತಿರುತ್ತಾರೆ. ಇಷ್ಟೆಲ್ಲ ಬಿಡಿಬಿಡಿಯಾಗಿ ನೋಡುವ ಹೊತ್ತಿಗೆ ನಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು!!
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೇಲೆ ಈ ಚಿತ್ರಗಳು ರಾರಾಜಿಸುತ್ತಿವೆ. ಸರ್ಕಾರಿ ಶಾಲೆಗಳು ನಿಯಯಪಾಲನೆಗಾಗಿ ಕೆಟ್ಟದಾಗಿ ಬಿಡಿಸಿದ ಚಿತ್ರಗಳಿಂದ ವಿಕಾರವಾಗಿ ಕಾಣುತ್ತದೆಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಅಂತಹುದರಲ್ಲಿ ಕಲಾಪ್ರಕಾರವನ್ನು ಶಾಲಾ ಗೋಡೆಗಳ ಮೇಲೆ ಬಿಂಬಿಸುವುದರೊಂದಿಗೆ ಅತ್ತ ಶಾಲೆಗೂ ಅಂದ, ಇತ್ತ ವಿದ್ಯಾರ್ಥಿಗಳಿಗೂ ಕಲೆಯ ಬಗ್ಗೆ ಅವಗಾಹನೆ ಮೂಡಿಸುತ್ತಿದ್ದಾರೆ ಶಿಕ್ಷಕರು. ಈ ಕಲೆಯನ್ನು ಚಿತ್ರಿಸಿದವರೂ ಶಿಕ್ಷಕರೇ ಆಗಿರುವುದು ವಿಶೇಷವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರು ಈ ಚಿತ್ರಗಳನ್ನು ಬಿಡಿಸಿದ್ದಾರೆ. ಹಣವನ್ನು ಬಯಸದೆ ಕೇವಲ ತಮ್ಮ ಸ್ನೇಹಿತರಾದ ಚೀಮಂಗಲದ ಶಿಕ್ಷಕರ ಒತ್ತಾಸೆಯಿಂದ ಈ ಚಿತ್ರಗಳನ್ನು ಬಿಡಿಸಿದ ಅವರನ್ನು ಶಾಲೆಯವರು ಗೌರವಿಸಿದ್ದಾರೆ.
ವರ್ಲಿ ಚಿತ್ರಗಳು ಹೆಸರೇ ಸೂಚಿಸುವಂತೆ ಮಹಾರಾಷ್ಟ್ರದವರ್ಲಿ ಬುಡಕಟ್ಟು ಜನಾಂಗದವರು ತಮ್ಮ ಗುಡಿಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ. ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಅವರು ಪ್ರಕೃತಿಯ ಆರಾಧಕರು. ಅವರ ಚಿತ್ರಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ ಚಂದ್ರನಿಂದ ಪ್ರಭಾವಿತವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ. ಅವರ ಚಿತ್ರಗಳಲ್ಲಿ ಕೃಷಿಯ ಹಲವು ಹಂತಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣಬಹುದು. ಬೇಟೆ,ಹಬ್ಬದ ಆಚರಣೆಗಳು, ಪ್ರಕೃತಿ, ನೃತ್ಯ, ವಿನೋದ ಮುಂತಾದ ಚಿತ್ತಾರಗಳೂ ಕಾಣಬರುತ್ತವೆ.
ಸಾಂಪ್ರದಾಯಿಕ ರೀತಿಯ ಈ ಚಿತ್ರಗಳು ಆಧುನಿಕ ರೂಪ ತಾಳುತ್ತಿವೆ. ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೈಂಟುಗಳು ಬಳಕೆಯಾಗುತ್ತಿವೆ. ಅಕ್ಕಿಯ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಅಲಂಕಾರದಲ್ಲಿ, ವಸ್ತ್ರಗಳ ಮೇಲೆ,ಕಾಫಿ ಕಪ್ ಗಳ ಮೇಲೆ, ಪೆನ್ ಸ್ಟಾಂಡ್ ಗಳ ಮೇಲೆ ಹೀಗೆ ವರ್ಲಿಯ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿದೆ.
’ನಮ್ಮ ಶಾಲೆಯನ್ನು ಈ ಅಪರೂಪದ ಕಲೆಯಿಂದ ಅಲಂಕರಿಸಬೇಕು. ಮಕ್ಕಳಿಗೂ ಇಂಥಹ ಕಲೆಯ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳು ಕಲೆಯ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಲಿ ಎಂಬ ಆಸೆಯಿಂದ ನಾವು ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರನ್ನು ಕೇಳಿದೆವು. ಈ ಚಿತ್ರಗಳನ್ನು ಬಿಡಿಸಲು ಸಾಕಷ್ಟು ಸಮಯ ಹಾಗೂ ಶಾರೀರಿಕ ದಣಿವಾಗುತ್ತದೆ. ಆದರೂ ಯಾವ ಫಲಾಪೇಕ್ಷೆಯಿಲ್ಲದೆ ಅವರು ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿದೆವು’ ಎಂದು ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್‌.ಶಿವಶಂಕರ್‌ ತಿಳಿಸಿದರು.

ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸಿದ ಸ್ನೇಕ್‌ ನಾಗರಾಜ್

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಹರಿಜನ ಕಾಲೋನಿಯ ಗಂಗಲಪ್ಪ ಎಂಬುವರ ಮನೆಯಲ್ಲಿ ಸೇರಿಕೊಂಡಿದ್ದ ಭಾರೀಗಾತ್ರದ ನಾಗರಹಾವನ್ನು ಶುಕ್ರವಾರ ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಹೊರತೆಗೆದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟರು.
ಸುಮಾರು ಹದಿನೈದು ದಿನಗಳ ಹಿಂದಷ್ಟೆ ಹರಿಜನ ಕಾಲೋನಿಯ ವಾಸಿ ಮಹೇಶ್‌(16) ಹಾವು ಕಡಿದು ಮೃತಪಟ್ಟಿದ್ದರಿಂದ ನಾಗರಹಾವು ಮನೆಯೊಳಗೆ ಸೇರಿಕೊಂಡಾಗ ಎಲ್ಲರೂ ಗಾಬರಿ ಬಿದ್ದು ಓಡಿದೆವು. ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಬಂದು ಹಾವನ್ನು ಮನೆಯಿಂದ ಹೊರಕ್ಕೆ ತೆಗೆದುಕೊಂಡು ಬಂದರು. ನಮ್ಮ ಕಾಲೋನಿಯ ಪಕ್ಕದಲ್ಲೇ ಕಾಲುವೆಯೊಂದಿದ್ದು ಕಲುಷಿತ ಹಾಗೂ ತ್ಯಾಜ್ಯದಿಂದ ತುಂಬಿಹೋಗಿದೆ. ಅದರ ಪಕ್ಕದಲ್ಲೇ ಗಿಡಗಂಟೆಗಳು ಬೆಳೆದಿದ್ದು ಹಾವುಗಳು ಸೇರಿಕೊಳ್ಳುತ್ತವೆ. ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಗುಲಪ್ಪ ದೂರಿದರು.

ಚೀಮಂಗಲದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ

0

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಚೀಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 77 ರಾಸುಗಳಿಗೆ ಕೆಚ್ಚಲು ಬಾವು, ಜ್ವರ, ಬಂಜೆ ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಜಂತು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಶ್ರೀನಿವಾಸ್‌, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಪಶುವೈದ್ಯಾಧಿಕಾರಿಗಳಾದ ಡಾ.ರಮೇಶ್‌, ಡಾ.ಪ್ರಶಾಂತ್‌, ಡಾ.ರವಿಚಂದ್ರ, ಪಶುವೈದ್ಯ ಸಹಾಯಕರಾದ ಎಂ.ಮುನಿಯಪ್ಪ, ಸೀನಪ್ಪ, ರವೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ಗಂಜಿಗುಂಟೆ ನರಸಿಂಹಮೂರ್ತಿ ಆಯ್ಕೆ

0

ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಗಂಜಿಗುಂಟೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಅವರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಯರ್ರಬಚ್ಚಪ್ಪ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಹಂಗಾಮಿ ಅಧ್ಯಕ್ಷರಾಗಿರುವವರೆಗೂ ತಾಲ್ಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡುವ ಮುಖಾಂತರ ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸದಸ್ಯರಾದ ರಾಜಣ್ಣ, ವೇಣುಗೋಪಾಲ್, ವೆಂಕಟೇಶ್, ಮುಖಂಡರಾದ ಬಶೆಟ್ಟಿಹಳ್ಳಿ ದ್ಯಾವಪ್ಪ, ಟಿ.ಎ.ಚಲಪತಿ, ನರಸಿಂಹಪ್ಪ ಮುಂತಾದವರು ಹಾಜರಿದ್ದರು.

ಜಯಂತಿ ಗ್ರಾಮದಲ್ಲಿ ಹೈಟೆನ್ಶನ್ ವಿದ್ಯುತ್‌ ತಂತಿಗಳನ್ನು ತೆರವುಗೊಳಿಸಲು ರೈತರ ಒತ್ತಾಯ

0

ತಾಲ್ಲೂಕಿನ ಜಯಂತಿ ಗ್ರಾಮದಲ್ಲಿ ಕೆಲ ಮನೆಗಳ ಮೇಲೆ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್‌ ತಂತಿಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆಯಿದ್ದು ತಕ್ಷಣ ಅವುಗಳನ್ನು ತೆರವುಗೊಳಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಬುಧವಾರ ಒತ್ತಾಯಿಸಿ ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಹನ್ನೊಂದು ಕಿಲೋ ವ್ಯಾಟ್‌ ಹೈಟೆನ್ಶನ್ ವಿದ್ಯುತ್‌ ತಂತಿಗಳು ಮನೆಗಳ ಮೇಲೆ ಹಾದು ಹೋಗಿರುವುದರಿಂದ ಇಲ್ಲಿ ವಾಸಿಸುವವರು ಭಯದಿಂದ ಬದುಕುವಂತಾಗಿದೆ. ಹಿಂದೆ ಹನ್ನೆರಡು ವರ್ಷದ ಬಾಲಕ ವಿದ್ಯುತ್‌ ತಂತಿ ತಗುಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ಬೆಸ್ಕಾ ಕಚೇರಿಯ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅನ್ಸರ್‌ ಪಾಷ ಅವರನ್ನು ಸ್ಥಳಕ್ಕೆ ಕರೆಸಿ ಅಲ್ಲಿನ ಸಮಸ್ಯೆಯನ್ನು ವಿವರಿಸಿ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅನ್ಸರ್‌ ಪಾಷ ರೈತರಿಂದ ಮನವಿಯನ್ನು ಸ್ವೀಕರಿಸಿ ಶೀಘ್ರವೇ ಕಂಬಗಳನ್ನು ಬದಲಾಯಿಸಿ ಹೈಟೆನ್ಶನ್ ವಿದ್ಯುತ್‌ ತಂತಿಗಳು ಮನೆಗಳಿಂದ ದೂರ ಹಾಕಿಸುವುದಾಗಿ ಭರವಸೆ ನೀಡಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಕೃಷ್ಣಪ್ಪ, ಯಲುವಳ್ಳಿ ಸೊಣ್ಣೇಗೌಡ, ಮಂಜುನಾಥ, ಮಳಮಾಚನಹಳ್ಳಿ ದೇವರಾಜ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಸಕ್ತ ಜನರ ಶ್ರಮದಿಂದ ಪುನಶ್ಚೇತನ ಪಡೆದ ಸಂತೆಮೈದಾನದ ಆಂಜನೇಯಸ್ವಾಮಿ ದೇವಾಲಯ

0

ಪುರಸಭೆ ಮತ್ತು ತಾಲ್ಲೂಕು ಆಡಳಿತ ಮಾಡಬೇಕಿದ್ದ ಕೆಲಸವನ್ನು ಕೆಲವು ಆಸಕ್ತ ಜನರೇ ನಿಂತು ನಿರ್ವಹಿಸಿರುವ ಉದಾಹರಣೆಯು ಅಪರೂಪ. ಕಸ ತ್ಯಾಜ್ಯ ಹಾಗೂ ಹಂದಿಗಳ ಆಶ್ರಯ ತಾಣವಾಗಿದ್ದ ಪಟ್ಟಣದ ಸಂತೆಮೈದಾನದಲ್ಲಿರುವ ಆಂಜನೇಯಸ್ವಾಮಿ ದೇವಾಲಯವನ್ನು ಕೆಲವು ಆಸಕ್ತರು ಸೇರಿಕೊಂಡು ಸಭ್ಯ ಸ್ಥಳವನ್ನಾಗಿಸಿದ್ದಾರೆ.
ಪಟ್ಟಣದಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎಡಭಾಗದಲ್ಲಿ ರಾಜಕಾಲುವೆ ಹತ್ತಿರವಿರುವ ಈ ದೇವಾಲಯದ ಮುಂಭಾಗದಲ್ಲಿ ಕೆಸರು, ಕಲ್ಮಶ ಸೇರಿಕೊಂಡು ಹಂದಿಗಳ ಆಹಾರ ಮತ್ತು ಪೋಷಣೆಯ ಕೇಂದ್ರವಾಗಿ ಪರಿಣಮಿಸಿತ್ತು. ಕೆಲಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿ ಸದಸ್ಯರು ಸೇರಿಕೊಂಡು ದೇವಾಲಯಕ್ಕೆ ಸುಣ್ಣ ಬಣ್ಣ, ಮುಂದೆ ನೆರಳಿಗಾಗಿ ಶೀಟ್‌ ಹೊದಿಕೆ, ನೀರಿನ ವ್ಯವಸ್ಥೆ ಹಾಗೂ ಶುಚಿತ್ವವನ್ನು ಕಾಪಾಡಿದ್ದಾರೆ.
ಪಟ್ಟಣದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಶಿಡ್ಲಘಟ್ಟದ ನಿರ್ಮಾತೃ ಕೆಂಪೇಗೌಡನ ಮಡದಿ ಹಲಸೂರಮ್ಮ ಮತ್ತು ಆಗ್ನೇಯಕ್ಕಿರುವ ಗೌಡನಕೆರೆಯನ್ನು ಆಕೆಯ ಮಗ ಶಿವನೇಗೌಡನು ಕಟ್ಟಿಸಿದರೆಂದು ಪ್ರತೀತಿಯಿದೆ. ಈ ಕೆರೆಯನ್ನು ನಿರ್ಮಿಸಿದ ಶಿವನೇಗೌಡನೇ ಈ ಆಂಜನೇಯಸ್ವಾಮಿ ದೇವಾಲಯವನ್ನು ನಿರ್ಮಿಸಿರುವುದಾಗಿ ಹಿರಿಯರು ಹೇಳುತ್ತಾರೆ. ಬಾಲಾಂಜನೇಯಸ್ವರೂಪಿಯಾಗಿ ಆಗ್ನೇಯ ದಿಕ್ಕಿಗೆ ದೃಷ್ಟಿಯಿಟ್ಟಂತಿರುವುದು ಇಲ್ಲಿನ ವಿಗ್ರಹದ ವಿಶೇಷವಾಗಿದೆ.
ಈ ದೇವಾಲಯದ ಪಕ್ಕದಲ್ಲಿರುವ ಸಂತೆ ಮೈದಾನವು ಹಿಂದೆ ಉದ್ಯಾನವನವಾಗಿತ್ತು. ಅದಕ್ಕಾಗಿಯೇ ಇದನ್ನು ಗಾರ್ಡನ್‌ ರಸ್ತೆಯೆಂದೇ ಈಗಲೂ ಕರೆಯಲಾಗುತ್ತದೆ. ರೇಡಿಯೋದಲ್ಲಿ ಪ್ರಸಾರವಾಗುವ ಪ್ರದೇಶ ಸಮಾಚಾರವನ್ನು ಧ್ವನಿವರ್ಧಕದ ಮೂಲಕ ಇಲ್ಲಿ ಬಿತ್ತರಿಸಲಾಗುತ್ತಿತ್ತು. ವಾಯವಿಹಾರಾರ್ಥವಾಗಿ ಬಂದವರು ವಾರ್ತೆಗಳನ್ನು ಆಲಿಸುತ್ತಾ ಪಾರ್ಕ್‌ನಲ್ಲಿ ಅಡ್ಡಾಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅದರ ಮುಂದಿನ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತಿದ್ದುದಾಗಿ ಹಿರಿಯರು ನೆನೆಸಿಕೊಳ್ಳುತ್ತಾರೆ. ಆಗ ದೇವಾಲಯದ ಮುಂಭಾಗದಲ್ಲಿ ಕಲ್ಯಾಣಿ ಇತ್ತು, ಕೆರೆ ತುಂಬಿದಾಗ ಹೆಚ್ಚಾದ ನೀರು ಮೆಟ್ಟಿಲವರೆಗೂ ಬರುತ್ತಿದ್ದುದಾಗಿ ಜ್ಞಾಪಿಸಿಕೊಳ್ಳುತ್ತಾರೆ.
ದುರಂತವೆಂದರೆ ಆಗ ಕಲ್ಯಾಣಿಯಾಗಿದ್ದ ಜಾಗ ನಂತರ ಕೆಸರಿನ ಹೊಂಡವಾಯಿತು. ಊರಿನ ಚರಂಡಿಗಳ ತ್ಯಾಜ್ಯ ನೀರೆಲ್ಲಾ ದೇವಸ್ಥಾನದ ಪಕ್ಕದಲ್ಲೇ ಹರಿಯುವಂತೆ ಮಾಡಿದ್ದರಿಂದ ತ್ಯಾಜ್ಯದ ನೀರು ಹರಿದು ಬಂದು ಇಲ್ಲಿ ನಿಲ್ಲುವಂತಾಯಿತು. ಹಿಂದೆ ಕಲ್ಯಾಣಿಯಿದ್ದ ಸ್ಥಳ ಕೆಸರಿನ ಹೊಂಡವಾಗಿ ಹಂದಿಗಳ ತಾಣವಾಯಿತು. ಯಾವುದೇ ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ಆಹ್ಲಾದಕರ ವಾತಾವರಣ ಸ್ವಾಗತಿಸುವಂತಿರಬೇಕು. ಆದರೆ ಹಂದಿಗಳಿಂದ ಕೆಸರು ಹೊಂಡಗಳಿಂದ ಸ್ವಾಗತಿಸುವಂತಹ ಸ್ಥಿತಿಯಲ್ಲಿ ನಮ್ಮ ಪುರಸಭೆಯವರು ವಾತಾವರಣ ನಿರ್ಮಾಣ ಮಾಡಿದೆಯೆಂದು ಸಾರ್ವಜನಿಕರು ಗೇಲಿಮಾಡುವಂತಾಯಿತು.
‘ಕೆಲ ತಲೆಮಾರುಗಳಿಂದ ನಾವು ಈ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದೇವೆ. ಹಿಂದೆ ಶ್ರೀರಾಮನವಮಿ ಮತ್ತು ಹನುಮಜ್ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿತ್ತು. ಗಣಪತಿ ಹಬ್ಬದ ನಂತರ ಎಲ್ಲಾ ಗಣಪತಿಗಳನ್ನೂ ಇಲ್ಲಿನ ಕಲ್ಯಾಣಿಯಲ್ಲೇ ಬಿಡುತ್ತಿದ್ದರು. ಸಂತೆ ನಡೆಯುವುದು ಪ್ರಾರಂಭವಾದ ಮೇಲೆ ಇಲ್ಲಿ ಗಲೀಜು ಹೆಚ್ಚಾಯಿತು. ಊರಿನ ತ್ಯಾಜ್ಯದ ನೀರು ಹರಿಯಲು ದೇವಾಲಯದ ಪಕ್ಕ ಚರಂಡಿ ಮಾಡಿದ್ದರಿಂದ ಆ ನೀರು ಬಂದು ದೇವಸ್ಥಾನದ ಮುಂದೆ ಸಂಗ್ರಹವಾಗತೊಡಗಿತು. ಕೆಟ್ಟ ವಾಸನೆ ಮತ್ತು ಹಂದಿಗಳ ತಾಣವೆಂದು ಜನರು ಬರುವುದು ಕಡಿಮೆಯಾಯಿತು. ಇತ್ತೀಚೆಗೆ ಸ್ಥಳೀಯ ಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿಯ ರಮೇಶ್‌ ಮತ್ತು ತಂಡದವರು ಸೇರಿ ತಹಶೀಲ್ದಾರ್‌ ಅವರಿಗೆ ತಿಳಿಸಿ ದೇವಾಲಯಕ್ಕೆ ಸುಣ್ಣ, ನೀರು ಮತ್ತು ಹೊದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ’ ಎಂದು ಅರ್ಚಕ ಸತ್ಯನಾರಾಯಣರಾವ್‌ ಹೇಳುತ್ತಾರೆ.
‘ವಾರಕ್ಕೊಮ್ಮೆ ನಡೆಯುವ ಸಂತೆಯ್ಲಲಿ ಉಳಿಯುವ ತ್ಯಾಜ್ಯವನ್ನು ದೇವಾಲಯದ ಸನಿಹದಲ್ಲಿ ಸುರಿಯುವುದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು. ದೇವಸ್ಥಾನಕ್ಕೆ ವಿದ್ಯುತ್‌ ದೀಪ, ಕಾಂಪೌಂಡ್‌ ಮತ್ತು ಸಂತೆ ಗೇಟಿನಿಂದ ರಸ್ತೆಯನ್ನು ನಿರ್ಮಾಣ ಮಾಡಿದಲ್ಲಿ ದೇವಾಲಯವು ತನ್ನ ಗತ ವೈಭವಕ್ಕೆ ಹಿಂದಿರುಗುತ್ತದೆ’ ಎಂದು ಅವರು ಹೇಳಿದರು.

ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶಾಲಾ ಮಟ್ಟದಲ್ಲಿ ವಿಜ್ಞಾನ ಸಂಘದ ವತಿಯಿಂದ ಲಿಖಿತ ಹಾಗೂ ಮೌಖಿಕ ಕ್ವಿಜ್‌ ಮತ್ತು ಸಿ.ಎನ್‌.ಆರ್‌. ರಾವ್‌ ಅವರ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ನೀಡಿ ವಿದ್ಯಾರ್ಥಿಗಳಿಂದ ಭಾಷಣವನ್ನು ಏರ್ಪಡಿಸಿದ್ದರು.
ಮುಖ್ಯಶಿಕ್ಷಕ ಶಿವಶಂಕರ್‌, ಶಿಕ್ಷಕರಾದ ದೊಡ್ಡನಾಯಕ್‌, ವಿಟ್ಟಲ್‌, ನವೀನ್‌ಕುಮಾರ್‌, ಶ್ರೀನಿವಾಸ್‌, ಸವಿತಾ, ಭವ್ಯಾ, ಸೌಭಾಗ್ಯ ಈ ಸಂದರ್ಭದಲ್ಲಿ ಹಾಜರಿದ್ದರು.