ದುಷ್ಟ ವ್ಯಕ್ತಿಗಳನ್ನು ಸಮಾಜ ಸಹಿಸಿಕೊಳ್ಳುತ್ತದೆ. ಆದರೆ ಪ್ರಾಮಾಣಿಕರನ್ನು ಸಹಿಸುವುದಿಲ್ಲ. ಸೋಲು, ನಿಂದನೆ, ಅಪಮಾನಗಳು ಬಂದರೂ ತತ್ವಗಳನ್ನು ಬಿಡದೇ ತಾಳ್ಮೆಯಿಂದ ಇರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮೂಲಭೂತ ಕರ್ತವ್ಯ’ಗಳ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ’ ಎಂಬ ಶೀರ್ಷಿಕೆಯ ನೈತಿಕ ಮೌಲ್ಯಗಳ ಒಂದು ಪುಟ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿಗಳು ಬರೆದ ಪ್ರಬಂಧಗಳನ್ನು ಅವಲೋಕಿಸಿದಾಗ ಅವರ ಬೌದ್ಧಿಕ ಪ್ರೌಢಿಮೆ ಕಂಡು ಅಚ್ಚರಿಯಾಗುತ್ತದೆ. ವೃದ್ಧ ತಂದೆ ತಾಯಿಯರನ್ನು ರಕ್ಷಿಸುವುದು, ನೀರು, ವಿದ್ಯುತ್ ಸದ್ಭಳಕೆ ಮುಂತಾದ ಅಂಶಗಳು ಮೂಲ ಕರ್ತವ್ಯಗಳಾಗಬೇಕು ಎಂದು ಮಕ್ಕಳು ಆಲೋಚಿಸಿರುವುದು ಮೆಚ್ಚುವ ಸಂಗತಿ ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾದ ವಕೀಲೆ ನೌತಾಜ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಕೀಲ ಎಂ.ಬಿ.ಲೋಕೇಶ್ ಸಕಾಲದ ಬಗ್ಗೆ ವಿವರಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರಾದ ಎಸ್.ಎಂ.ನಿವೇದಿತ, ಸಾದಲಿ ಪ್ರೌಢಶಾಲೆ, ಬಿ.ಎನ್.ಪವಿತ್ರ, ಬಿ.ಎಂ.ವಿ.ಭಕ್ತರಹಳ್ಳಿ ಪ್ರೌಢಶಾಲೆ, ಮೇಘನಾ, ವಾಸವಿ ಪ್ರೌಢಶಾಲೆ, ಚೈತ್ರ, ಸಾದಲಿ ಪ್ರೌಢಶಾಲೆ ಮತ್ತು ತೇಜಸ್, ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಅವರಿಗೆ ಪ್ರಶಸ್ತಿಪತ್ರವನ್ನು ನೀಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಿಂದನೆ, ಅಪಮಾನಗಳು ಬಂದರೂ ತತ್ವಗಳನ್ನು ಬಿಡಬಾರದು – ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್
ತೊಟ್ಲಗಾನಹಳ್ಳಿ ಗ್ರಾಮದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್‍ನಮೆಂಟ್ ನಲ್ಲಿ ವಿಜೇತರಾದ ಎಚ್.ಕ್ರಾಸ್ ತಂಡ
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಅದೇ ಗ್ರಾಮದ ಶಾಲಾ ಶಿಕ್ಷಕರಾಗಿದ್ದ ಮೇಲೂರಿನ ದಿ.ಧರ್ಮಪ್ರಕಾಶ್ ಅವರ ಜ್ಞಾಪಕಾರ್ಥ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್‍ನಮೆಂಟ್ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ಸೋಮವಾರ ಮುಕ್ತಾಯಗೊಂಡ ಕ್ರಿಕೆಟ್ ಟೂರ್‍ನಮೆಂಟ್‌ನಲ್ಲಿ ಪ್ರಥಮ ಬಹುಮಾನ 10 ಸಾವಿರ ರೂಪಾಯಿ ಮತ್ತು ಟ್ರೋಫಿಯನ್ನು ಎಚ್.ಕ್ರಾಸ್ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನ 5 ಸಾವಿರ ರೂಪಾಯಿ ಮತ್ತು ಟ್ರೋಫಿಯನ್ನು ತೊಟ್ಲಗಾನಹಳ್ಳಿ ಗ್ರಾಮದ ಡಾ.ರಾಜ್‌ಕುಮಾರ್ ತಂಡ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಗೌಡ, ಲೋಕೇಶ್ ಗೌಡ, ಮಂಜುನಾಥ್, ರಮೇಶ್, ಕನಕರಾಜು, ಮುನಿರಾಜು ಮತ್ತಿತರರು ಹಾಜರಿದ್ದರು.
ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ
ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪನವರ ಪುತ್ರ ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ಭದ್ರತೆ ರಾಜ್ಯ ಸಚಿವ ರಾವ್‍ಸಾಹೇ ಪಾಟೀಲ್ ಧನ್ವಿ ,ಜೋಗೇಂಧ್ರ ಸಿಂಗ್ ಐ.ಪಿ.ಎಸ್ ನಿವೃತ್ತ ಫಾರ್ಮರ್ ಸಿ.ಬಿ.ಐ ಡೈರೇಕ್ಟರ್,ಅಂಬಾಸಿಡರ್ ಡಾ.ಬಿ.ಬಿ.ಸೋನಿ ಫಾರ್ಮರ್ ಡಿಪ್ಲೇಮೆಟ್ ಇಂಡಿಯನ್ ಫಾರಿನ್ ಸರ್ವಿಸಸ್,ಅನೀಸ್ ದುರಾನಿ ಕಾರ್ಯದರ್ಶಿ ಎ.ಐ.ಸಿ.ಸಿ,ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಜಸಪಾಲ್ ರಾನಾ,ಡಾ.ಸಿ.ಆರ್.ಪಾರ್ಥಸಾರಥಿ ವ್ಯವಸ್ಥಾಪಕ ನಿರ್ದೇಶಕ ಸಾರಥಿ ಜಿಯೋಟೆಕ್ ಎಂಜಿನಿಯರಿಂಗ್ ಸರ್ವಿಸಸ್ ಪೈ.ಲಿಮಿಟೆಡೆ,ಬಾಲಿವುಡ್ ಫಿಲ್ಮ್ ಡೈರೆಕ್ಡರ್ ದೀಪಕ್ ತನ್ವರ್ ಮತ್ತಿತರರು ಉಪಸ್ಥಿತರಿದ್ದರು.
ತಲದುಮ್ಮನಹಳ್ಳಿಯಲ್ಲಿ ಕೆನರಾ ರೈತ ಸಂಪರ್ಕ ಅಭಿಯಾನ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ
ದೇಶದಲ್ಲಿ ಇನ್ನೂ ಸಾಕಷ್ಟು ಮಂದಿ ಬ್ಯಾಂಕ್ ಸಂಪರ್ಕಕ್ಕೆ ಬಾರದವರು ಇದ್ದಾರೆ. ಪ್ರತಿಯೊಬ್ಬರನ್ನು ಕೂಡ ಬ್ಯಾಂಕ್‌ನ ಜಾಲಕ್ಕೆ ತರುವುದು ಸರ್ಕಾರದ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಉದ್ದೇಶವಾಗಿದ್ದು ಪ್ರತಿ ಕುಟುಂಬದ ಪ್ರತಿಯೊಬ್ಬರು ಕೂಡ ತಮ್ಮ ಸೇವಾ ವ್ಯಾಪ್ತಿಯ ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಖಾತೆಯನ್ನು ತೆರೆಯವುಂತೆ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಸ್.ಪಾವಟಿ ಮನವಿ ಮಾಡಿದರು.
ಶಿಡ್ಲಘಟ್ಟದ ಕೆನರಾ ಬ್ಯಾಂಕ್ ಶಾಖೆ, ಟಿಪ್ಪು ವೆಲ್‌ಫೇರ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕೆನರಾ ರೈತ ಸಂಪರ್ಕ ಅಭಿಯಾನ ಹಾಗೂ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳು, ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುವುದರಿಂದ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಖಾತೆ ಇಲ್ಲದಿದ್ದರೆ ಸವಲತ್ತಿನಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.
ದೇಶದ ಉದ್ದಗಲಕ್ಕೂ ಸುಮಾರು ೬ ಲಕ್ಷ ಹಳ್ಳಿಗಳಿದ್ದು ಪ್ರತಿ ಹಳ್ಳಿಗೂ ತೆರಳಿ ಬ್ಯಾಂಕ್‌ನ ಸವಲತ್ತುಗಳ ಬಗ್ಗೆ ವಿವರಿಸಿ, ಪ್ರತಿಯೊಬ್ಬರಿಗೂ ವೈಯಕ್ತಿಕ ಬ್ಯಾಂಕ್ ಖಾತೆಯ ಅಗತ್ಯತೆ, ಅನಿವಾರ್ಯತೆ ಕುರಿತು ಮಾಹಿತಿ ನೀಡುವ ಜತೆಗೆ ಆರ್ಥಿಕ ಸಾಕ್ಷರತೆಯನ್ನು ನೀಡುವ ಕೆಲಸ ಬ್ಯಾಂಕ್‌ನಿಂದ ನಡೆಯುತ್ತಿದೆ. ಅದಕ್ಕಾಗಿ ಬ್ಯಾಂಕ್ ಜೂನ್ ೧ರಿಂದ ಸೆಪ್ಟೆಂಬರ್‌೩೦ರವರೆಗೂ ೪ ತಿಂಗಳ ಕಾಲ ಕೆನರಾ ರೈತ ಸಂಪರ್ಕ ಅಭಿಯಾನ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಿದ್ದು ನಾವು ನಮ್ಮ ವ್ಯಾಪ್ತಿಯಲ್ಲಿನ ಎಲ್ಲ ಹಳ್ಳಿಗಳಿಗೂ ತೆರಳಿ ಕಾರ್ಯಕ್ರಮದ ಉದ್ದೇಶವನ್ನು ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ವಿವರಿಸಿದರು.
ಶೂನ್ಯ ಮೊತ್ತದ ಖಾತೆ ತೆರೆಯುವುದು ಸೇರಿದಂತೆ ಬ್ಯಾಂಕ್‌ನಿಂದ ಎಲ್ಲ ವರ್ಗಗಳ ಜನರಿಗೂ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಅವರು ಮಾಹಿತಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೆನರಾ ಬ್ಯಾಂಕ್‌ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಗಿರೀಶ್, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಬಲಂಕರ್, ಟಿಪ್ಪು ವೆಲ್‌ಫೇರ್ ಸಂಸ್ಥೆಯ ಮುಸ್ತಾಕ್ ಅಹ್ಮದ್, ಮಮತ, ಕೆನರಾ ಬ್ಯಾಂಕ್‌ನ ಶಿವು, ಅಶೋಕ್, ಗ್ರಾಮದ ಮುಖಂಡರಾದ ರಾಮಚಂದ್ರಪ್ಪ, ಶಂಕರಪ್ಪ, ಬಚ್ಚೇಗೌಡ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ತಲದುಮ್ಮನಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ರೈತರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮೀಣ ಪ್ರದೇಶದ ಅಂಗವಿಕಲ ಯುವಕ ಯುವತಿಯರಿಗೆ ತರಬೇತಿ ಕಾರ್ಯಕ್ರಮ
ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ಹಾಗೂ ಎ.ಪಿ.ಡಿ ಸಂಸ್ಥೆಯ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಗ್ರಾಮೀಣ ಪ್ರದೇಶದ ಅಂಗವಿಕಲ ಯುವಕ ಯುವತಿಯರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆಯ ಮೂಲಕ 16 ರಿಂದ 30 ವರ್ಷದ ಅಂಗವಿಕಲರಿಗೆ ಇರುವ ಸೌಲಭ್ಯಗಳು, ತರಬೇತಿಗಳು ಮತ್ತು ಉದ್ಯೋಗ ಅವಕಾಶಗಳ ಕುರಿತು ಮಾಹಿತಿಯನ್ನು ತಿಳಿಸಲಾಯಿತು. ಉದ್ಯೋಗಾಕಾಂಕ್ಷಿಗಳಾದ ಅಂಗವಿಕಲರಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವಿವಿಧ ಕೌಶಲ್ಯಗಳನ್ನು ಪಡೆಯುವ ಬಗ್ಗೆಯೂ ವಿವರಿಸಲಾಯಿತು.
ಕೈಗಾರಿಕಾ ತರಬೇತಿ, ಮಾಹಿತಿ ತಂತ್ರಜ್ಞಾನ ತರಬೇತಿ, ಕಚೇರಿ ನಿರ್ವಹಣೆ ತರಬೇತಿ, ಟೈಲರಿಂಗ್ ಮತ್ತು ಎಂಬ್ರಾಯಿಡರಿ ತರಬೇತಿ, ತೋಟಗಾರಿಕಾ ತರಬೇತಿ, ದೈಹಿಕ ವ್ಯಾಯಾಮ ತರಬೇತಿ ಮುಂತಾದವುಗಳನ್ನು ಪಡೆದುಕೊಳ್ಳುವುದಲ್ಲದೆ ಉದ್ಯೋಗವಕಾಶಗಳು ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆಯೂ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಪಿ.ಡಿ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ವಿಭಾಗದ ಅಧಿಕಾರಿ ಮುನಿರೆಡ್ಡಿ, ‘ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಆದರೆ ಅವುಗಳನ್ನು ಹೊಂದಲು ಪೂರ್ವ ತಯಾರಿಯ ಅವಶ್ಯಕತೆ ಇರುತ್ತದೆ. ಉದ್ಯೋಗವನ್ನು ಪಡೆಯುವಲ್ಲಿ ಆಂಗ್ಲಭಾಷೆ ಹಾಗೂ ಕಂಪ್ಯೂಟರ್ ಜ್ಞಾನವು ಮುಖ್ಯವಾಗಿದೆ. ಕೌಶಲ್ಯಗಳನ್ನು ತರಬೇತಿಗಳ ಮೂಲಕ ಗಳಿಸಿಕೊಂಡು ಕೈಗಾರಿಕೆಗಳು, ಕಾಲ್ ಸೆಂಟರ್, ಗಾರ್ಮೆಂಟ್, ಮಾರ್ಕೆಟಿಂಗ್ ಮುಂತಾದ ಕಡೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಅಂಗವೈಕಲ್ಯತೆಯು ಮನಸ್ಸನ್ನು ಕಾಡದಂತೆ ಆತ್ಮಸ್ಥೈರ್ಯದಿಂದ ಮಾದರಿ ಬದುಕನ್ನು ನಡೆಸಿ‘ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶಿವಕುಮಾರ್, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಕಾರ್ಯದರ್ಶಿ ಗೋಪಿ, ಅಂಗನವಾಡಿ ಕಾರ್ಯಕರ್ತೆ ಎಸ್.ಭವ್ಯ, ಕನಕರತ್ನ, ದೇವರಾಜ್, ಎ.ಪಿ.ಡಿ ಸಂಸ್ಥೆಯ ಸವಿತಾ, ಕಮಲಾ, ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೊಬೈಲ್ ಕರೆ ಮೂಲಕ ಅಡುಗೆ ಗ್ಯಾಸ್ ಬುಕಿಂಗ್ ಸೇವೆ
ಶಿಡ್ಲಘಟ್ಟದ ನಾಗರೀಕರು ಇನ್ನು ಮುಂದೆ ಅಡುಗೆ ಗ್ಯಾಸ್ ಅನ್ನು Indane ಅವರ 24/7 IVRS ಸೇವೆಯ ಮೂಲಕ ಬುಕ್ ಮಾಡಬಹುದು.
ನೀವು Indane ರ ಪಡಿತರ ಗ್ಯಾಸ್ ಪಡೆಯುತ್ತಿದ್ದಲ್ಲಿ, ನಿಮ್ಮ ಮೊಬೈಲ್ ಮೂಲಕ 8970024365 ಗೆ ಕರೆ ಮಾಡಿ ರೀಫಿಲ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಈ ಸೇವೆಗೆ ಸೊಂದಾಯಿಕೊಳ್ಳುವ ಹಾಗೂ ರೀಫಿಲ್ ಬುಕಿಂಗ್ ಮಾಡುವ ಪ್ರಕ್ರಿಯೆಯ ಮಾಹಿತಿಯನ್ನು ಕರಪತ್ರದಲ್ಲಿ ಸೂಚಿಸಲಾಗಿದೆ.

ಕವರ್ ಪೇಜ್ ಕಲಾವಿದ ಅಜಿತ್ ಕೌಂಡಿನ್ಯ
ಕಲೆಯು ನಾನಾ ವಿಧದಲ್ಲಿ ಅಭಿವ್ಯಕ್ತವಾಗುತ್ತದೆ. ಕಾಲಾಂತರಗಳಲ್ಲಿ ‘ಕಲೆ’ಯನ್ನು ಕುರಿತ ತಿಳುವಳಿಕೆ, ವ್ಯಾಖ್ಯಾನಗಳು ಬದಲಾಗುತ್ತಲೇ ಬಂದಂತೆ. ಅವುಗಳನ್ನು ರಚಿಸುವ ವಿಧಾನ-,ತಂತ್ರ- ಹಾಗೂ ಉದ್ದೇಶಗಳೂ ಬದಲಾಗುತ್ತಲೇ ಇವೆ. ಮುದ್ರಣ ಕ್ಷೇತ್ರದಲ್ಲಿ ತಾಂತ್ರಿಕತೆ ಮಿಳಿತಗೊಂಡಂತೆ, ಪುಸ್ತಕಗಳ ಮುಖಪುಟ ವಿನ್ಯಾಸವೂ ಒಂದು ಕಲಾ ಪ್ರಕಾರವಾಗಿ ರೂಪುಗೊಂಡಿದೆ.
ಮುಖಪುಟ ವಿನ್ಯಾಸವೆಂಬುದನ್ನು ಒಂದು ಪರಿಪೂರ್ಣ ಕಲೆಯೆಂದು ಹಲವು ವಿಮರ್ಶಕರು ಒಪ್ಪದಿದ್ದರೂ ಅದನ್ನೊಂದು ಕಲೆಯೆಂಬಂತೆ, ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪುವ ಹೆಚ್ಚಿನವರು ನಮ್ಮ ನಡುವಿದ್ದಾರೆ. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ. ಇರುವ ತಂತ್ರಜ್ಞಾನವನ್ನು ಸೂಕ್ತವಾಗಿ, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಪರಿಪಾಟ ಹೆಚ್ಚಿದೆ.
ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ನ ನಿವಾಸಿ ಅಜಿತ್ ಕೌಂಡಿನ್ಯ. ವನಸುಮ ಪ್ರಕಾಶನ, ಪ್ರಗತಿ ಗ್ರಾಫಿಕ್ಸ್, ಟೋಟಲ್ ಕನ್ನಡ, ಕನ್ನಡ ಸಾಹಿತ್ಯ ಸೇವಾ ಸದನ, ಗೋಮಿನಿ, ತುಂತುರು ಮುಂತಾದ ಪ್ರಕಾಶಕರ ಸುಮಾರು ಅರವತ್ತಕ್ಕೂ ಹೆಚ್ಚು ಪುಸ್ತಕಗಳಿಗೆ ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಕೆಲವಾರು ಮಾಹಿತಿ ಕೈಪಿಡಿ, ಆಹ್ವಾನ ಪತ್ರಿಕೆ, ಲಾಂಚನ ಮುಂತಾದವುಗಳನ್ನು ಕೂಡ ರೂಪಿಸಿದ್ದಾರೆ.
ಎಂಜಿನಿರಿಂಗ್ ಪದವೀಧರರಾದ ಅಜಿತ್ಗೆ ಅಧ್ಯಾಪಕ ವೃತ್ತಿ ಅಚ್ಚುಮೆಚ್ಚು. ನಾಲ್ಕು ವರ್ಷ ಅಧ್ಯಾಪಕ ವೃತ್ತಿಯನ್ನು ಕೈಗೊಂಡಿದ್ದ ಅವರು ಈಗ ಎಂ.ಟೆಕ್ ಓದುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ನಲ್ಲಿ ಚಿತ್ರಕಲೆ ಹಾಗೂ ಮುಖಪುಟ ವಿನ್ಯಾಸಗಳನ್ನು ರಚಿಸುತ್ತಾರೆ.
’ನಾವೊಂದು ಸಮಾನ ಮನಸ್ಕರ ತಂಡ ಕಟ್ಟಿದ್ದು, ಲ್ಯಾಂಪ್ಸ್ ಎಂದು ಹೆಸರಿಸಿದ್ದೇವೆ. ಪ್ರವಾಸ ನಮ್ಮ ಪ್ರಮುಖ ಉದ್ದೇಶ. ನಮ್ಮ ತಂಡಕ್ಕೆ ಲೋಗೋ(ಲಾಂಚನ) ರಚಿಸಿಕೊಡಲು ಅಜಿತ್ರನ್ನು ಕೇಳಿದೆವು. ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತವಾಗಿ ಹಾಗೂ ವಿನೂತನವಾಗಿ ಲೋಗೋ ರಚಿಸಿಕೊಟ್ಟಿದ್ದಾರೆ. ನಮ್ಮ ಉದ್ದೇಶವನ್ನು ಸಮರ್ಥವಾಗಿ ಅದರಲ್ಲಿ ಧ್ವನಿಸಿದ್ದಾರೆ’ ಎನ್ನುತ್ತಾರೆ ದೇಶನಾರಾಯಣ ರಮೇಶ್ಬಾಬು.
’ಮೊದಲಿಂದಲೂ ನನಗೆ ಚಿತ್ರಕಲೆಯಲ್ಲಿ ಒಲವಿತ್ತು. ಕಂಪ್ಯೂಟರ್ ಮತ್ತು ಅಂತರ್ಜಾಲ ಬಂದನಂತರ ಕಲಾವಿದರಿಗೆ ಹೊಸ ಸಾಧ್ಯತೆಗಳು ಸಿಕ್ಕಿವೆ. ಮುಖಪುಟ ವಿನ್ಯಾಸ ಮಾಡುವುದು –ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ ಎಂಬುದನ್ನು ಮುಖಪುಟ ಕಲಾವಿದ ಅಪಾರ ಅವರಿಂದ ಕಂಡುಕೊಂಡೆ. ಅವರ ಪ್ರೇರಣೆಯಿಂದ ನಾನೂ ಪ್ರಯತ್ನಿಸಿದೆ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಆಕರ್ಷಣೆ ಮತ್ತು ಅಭಿವ್ಯಕ್ತಿ ನಡುವೆ ಜಗ್ಗಾಟವಂತೂ ಇದ್ದೇ ಇದೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು. ಆರ್ಥಿಕವಾಗಿ ಈ ಕಲೆಯ ಮೇಲೆ ಅವಲಂಭಿಸಿಲ್ಲ. ಇದು ಕೇವಲ ಹವ್ಯಾಸವಾಗಷ್ಟೇ ಇರುವುದರಿಂದ ನನಗೆ ಸಾಕಷ್ಟು ನೆಮ್ಮದಿ ಹಾಗೂ ಸಂತಸ ಸಿಗುತ್ತಿದೆ’ ಎನ್ನುತ್ತಾರೆ ಅಜಿತ್ ಕೌಂಡಿನ್ಯ.
’ಪ್ರಸಿದ್ಧ ತೆಲುಗು ಸಿನಿಮಾ ನಿರ್ದೇಶಕ ಹಾಗೂ ಚಿತ್ರಕಾರ ಬಾಪು ಅವರ ಚಿತ್ರವನ್ನು ಬಳಸಿ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಪುಸ್ತಕದ ಮುಖಪುಟ ರೂಪಿಸಿದ್ದೆ. ಬಾಪು ಅದನ್ನು ಮೆಚ್ಚಿ ಒಳ್ಳೆಯ ಮಾತುಗಳನ್ನಾಡಿದರು. ನನ್ನ ವಿದ್ಯಾರ್ಥಿನಿಯೊಬ್ಬರು ರಚಿಸಿದ್ದ ಚಿತ್ರಕಲೆ ಬಳಸಿ ’ಅಜ್ಜಿ ಹೇಳಿದ ಕಥೆಗಳು’ ಪುಸ್ತಕಕ್ಕೆ ಮುಖಪುಟ ರಚಿಸಿದ್ದೆ. ಆ ಪುಸ್ತಕಗಳನ್ನು ಪಡೆದು ಅದರಲ್ಲಿ ತನ್ನ ಹೆಸರನ್ನು ಕಂಡು ನನ್ನ ವಿದ್ಯಾರ್ಥಿನಿ ಸಂತಸಪಟ್ಟಿದ್ದರು. ಅನಂತ್ನಾಗ್ ಬರೆದ ’ನನ್ನ ತಮ್ಮ ಶಂಕರ’, ಡಾ.ಕೃಷ್ಣಾನಂದ ಕಾಮತರ ಪುಸ್ತಕಗಳು ಮುಂತಾದವುಗಳ ಬಗ್ಗೆ ಬಂದ ಪ್ರಶಂಸೆಗಳು ನನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿವೆ. ಓದು, ಕ್ಯಾಮೆರಾ ಮತ್ತು ತಿರುಗಾಟ ಇದಕ್ಕೆ ಪೂರಕವಾಗಿದೆ’ ಎಂದು ಅವರು ಹೇಳಿದರು.
ವಿಶಿಷ್ಟ ಕೃಷಿ ಪ್ರಯೋಗದ ರೂವಾರಿ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ
ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.
ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.
“ಐದು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ 40 ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, 2 ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, 2 ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ” ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
“ಜಮೀನಿನ ಸುತ್ತ 3 ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ 25 ಮೀಟರ್ ಉದ್ದ ಅಗಲ ಮತ್ತು 4 ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ” ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ.
“ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ” ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಎ.ಎಂ.ಮುನೇಗೌಡರ 'ಗ್ರಾಮೋದ್ಧಾರವಾಗುವುದೆಂದು' ಪುಸ್ತಕದ ಡಿಜಿಟಲ್ ಆವೃತ್ತಿ
ಈ ಹಿಂದೆ ನಿಮಗೆ ಆನೂರು ಎ.ಎಂ.ಮುನೇಗೌಡರ ಪರಿಚಯ ಮಾಡಿಸಿದ್ದೇವೆ (ಲೇಖನ ಇಲ್ಲಿ ಓದಬಹುದು). ಅವರು ಬರೆದು ಪ್ರಕಟಿಸಿದ ಪುಸ್ತಕಗಳಲ್ಲೊಂದಾದ ‘ಗ್ರಾಮೋದ್ಧಾರವಾಗುವುದೆಂದು’ ಪುಸ್ತಕದ ಬಗ್ಗೆ ನಾವು ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ. ಕಾಲಮಾನದ ಸೀಮಿತವನ್ನು ದಾಟಿ ಎಲ್ಲಾ ಕಾಲಕ್ಕೂ ಮಾರ್ಗದರ್ಶಕವಾಗಬಲ್ಲ ಈ ಪುಸ್ತಕದ ಡಿಜಿಟಲ್ ಆವೃತ್ತಿಯನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಗ್ರಾಮೋದ್ಧಾರವಾಗುವುದೆಂದು ಪುಸ್ತಕ ಇಲ್ಲಿ ಓದಬಹುದು
ಮೇಲೂರಿನ 'ಹಸಿರು' ಪಂಚಾಯಿತಿ ಕಚೇರಿ
‘ಆಡಳಿತದ ಕೇಂದ್ರ ಸ್ಥಾನ ಇಡೀ ಕ್ಷೇತ್ರವನ್ನೇ ಪ್ರತಿನಿಧಿಸುತ್ತದೆ’ ಎಂಬ ಮಾತಿಗೆ ಪೂರಕವಾಗಿ ಮಾದರಿಯಾಗಿದೆ ತಾಲ್ಲೂಕಿನ ಮೇಲೂರು ಪಂಚಾಯಿತಿ ಕಚೇರಿ.
ಹಸಿರು ಗಿಡಮರಗಳು, ಹೂವರಳಿ ನಿಂತಿರುವ ಹೂಗಿಡಗಳು, ಒಪ್ಪವಾಗಿ ಕತ್ತರಿಸಿ ಆಕಾರವನ್ನು ನೀಡಲಾಗಿರುವ ಬೇಲಿ ಗಿಡಗಳು, ಮೆತ್ತನೆಯ ಹುಲ್ಲುಹಾಸು, ಇವುಗಳೆಲ್ಲದರ ನಡುವೆ ಕೆಂಪು ಬಣ್ಣದ ಕಟ್ಟಡ ಆಕರ್ಷಕವಾಗಿ ಕಾಣಿಸುತ್ತದೆ. ಆವರಣದಲ್ಲಿನ ಹಸಿರು ವಾತಾವರಣ ಮತ್ತು ಸೌರ ವಿದ್ಯುತ್ ದೀಪಗಳು ಪರಿಸರ ಪ್ರೇಮವನ್ನು ವ್ಯಕ್ತಪಡಿಸುತ್ತವೆ.
ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಗನವಾಡಿ ಮತ್ತು ಗ್ರಂಥಾಲಯ ಒಂದೇ ಆವರಣದೊಳಗೆ ಗಿಡಮರಗಳ ನಡುವೆ ಇವೆ. ಪಂಚಾಯಿತಿ ಕಚೇರಿಯೊಳಗೆ ಗಣಕ ಕೊಠಡಿ, ಅಧಿಕಾರಿಗಳು ಮತ್ತು ಅಧ್ಯಕ್ಷರ ಕೊಠಡಿ ಹಾಗೂ ಸಭೆ ನಡೆಸುವ ವಿಶಾಲ ಕೊಠಡಿಯಿದೆ.
‘ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಧಾನರಾಗಿದ್ದ ಕಾಲದಲ್ಲಿ ಡಿಸೆಂಬರ್ ೧೯೯೦ ರಲ್ಲಿ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಹಿಂದೆ ಹತ್ತಿರದ್ಲಲಿ ಕುಂಟೆ ಇದುದರಿಂದಾಗಿ ಕಟ್ಟಡ ಬಿರುಕು ಬಿಟ್ಟು ಶಿಥಿಲವಾಗತೊಡಗಿತ್ತು. ೨೦೦೯ರಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಅವಧಿಯಲ್ಲಿ ನವೀಕರಣವನ್ನು ಮಾಡಲಾಯಿತು. ಗ್ರಾಮದ ರಾಜ್‌ಕುಮಾರ್ ಸಂಘದ ಸದಸ್ಯರು ಕಟ್ಟಡಕ್ಕೆ ಟೆರ್ರಾಕೋಟ ಬಣ್ಣವೇ ಇರಬೇಕು ಎಂದು ಕಟ್ಟಡದ ಅಂದ ಚಂದಕ್ಕಾಗಿ ಬಣ್ಣಗಳ ಆಯ್ಕೆಯನ್ನು ಮಾಡಿದರು. ಹಸಿರು ಪರಿಸರವನ್ನು ನಿರ್ಮಿಸಲು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ನೆರವಾದರು. ಪಂಚಾಯಿತಿಗೆ ನಿಶ್ಚಿತ ವರಮಾನವಿದ್ದರೆ ಮಾತ್ರ ಇವೆಲ್ಲವುಗಳ ನಿರ್ವಹಣೆ ಸಾಧ್ಯವೆಂದು ಐದು ಅಂಗಡಿಗಳನ್ನು ಕಟ್ಟಿದೆವು. ಈಗ ಅದರಿಂದ ತಿಂಗಳಿಗೆ ರೂ.೭,೫೦೦ ಬಾಡಿಗೆ ಬರುತ್ತಿದೆ. ರುದ್ರಭೂಮಿಯಲ್ಲಿ ಅರ್ಧ ಎಕರೆಯಷ್ಟು ಮುಳ್ಳು ಹಾಗೂ ಕಳ್ಳಿಗಿಡ ಆವರಿಸಿತ್ತು. ಅವನ್ನು ಸ್ವಚ್ಛಗೊಳಿಸಿ ೪೦ ಸಸಿಗಳನ್ನು ನೆಡಿಸಿದ್ದೆವು. ಈಗ ಅವು ಮರಗಳಾಗಿವೆ. ಅಲ್ಲಿ ಕೈಕಾಲು ತೊಳೆಯಲು ನೀರಿನ ಸಿಸ್ಟರ್ನ್ ಕೂಡ ಇರಿಸಿದ್ದೇವೆ. ನಮ್ಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆಂದೇ ಟಿಲ್ಲರನ್ನು ಹೊಂದ್ದಿದೇವೆ’ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.
‘


ತಾಲ್ಲೂಕಿನಲ್ಲಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಐದು ಕೋಟಿ ರೂ ಬೆಳೆ ನಷ್ಟ
ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಐದು ಕೋಟಿ ರೂಗಳಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಾಲ್ಲೂಕಿನ ಆನೂರು, ಕೊತ್ತನೂರು, ಮಳಮಾಚನಹಳ್ಳಿ ಮತ್ತು ತುಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಸುಮಾರು ಎರಡೂವರೆ ಕೋಟಿ ರೂಗಳಿಗೂ ಹೆಚ್ಚಿನ ಬೆಳೆ ನಷ್ಟವುಂಟಾಗಿದೆ.
ತಾಲ್ಲುಕಿನ ಹುಜಗೂರು, ತುಮ್ಮನಹಳ್ಳಿ, ಆನೂರು, ಗೊರಮಡುಗು, ಬಸವಾಪಟ್ಟಣ ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ, ಟೊಮೇಟೊ, ಬೀನ್ಸ್, ಹಿಪ್ಪುನೇರಳೆಸೊಪ್ಪು, ಸೌತೆಕಾಯಿ, ದಾಳಿಂಬೆ, ಸೀಬೆ, ಮಾವು, ಗೋಡಂಬಿ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿವೆ.
‘ಆರು ಎಕರೆ ದ್ರಾಕ್ಷಿ ಮತ್ತು ಮೂರು ಎಕರೆ ದಾಳಿಂಬೆ ನಿನ್ನೆ ಸಂಜೆ ಏಳುಗಂಟೆಗೆ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ದ್ರಾಕ್ಷಿ ಉತ್ತಮ ಫಸಲು ಬಿಟ್ಟಿದ್ದು ಇನ್ನು ಒಂದೂವರೆ ತಿಂಗಳಿಗೆ ಕಟಾವು ಮಾಡುವ ಹಂತದಲ್ಲಿತ್ತು. ಇದರಲ್ಲಿ ಸುಮಾರು 25 ಲಕ್ಷ ರೂ ನಷ್ಟವುಂಟಾಗಿದೆ. ದಾಳಿಂಬೆ ನಮ್ಮಲ್ಲಿ ಬೆಳೆಯುವುದೇ ಕಷ್ಟ ಅಂಥದ್ದನ್ನು ಬೆಳೆದರೂ ಪ್ರಕೃತಿ ನಮಗೆ ಸಹಕರಿಸದೇ ಅಪಾರ ನಷ್ಟವುಂಟಾಗಿದೆ’ ಎನ್ನುತ್ತಾರೆ ಹುಜಗೂರು ರಾಮಣ್ಣ.
ಹುಜಗೂರಿನ ರಾಮಣ್ಣ ಅವರ ಆರು ಎಕರೆ ದ್ರಾಕ್ಷಿ, ಮೂರು ಎಕರೆ ದಾಳಿಂಬೆ ತೋಟ, ಮುನಿನಾರಾಯಣಪ್ಪ ಅವರ ಒಂದೂವರೆ ಎಕರೆ ದ್ರಾಕ್ಷಿ, ಬೆಂಗಳೂರು ಬ್ಲೂ ಎರಡು ಎಕರೆ, ಮಾವು ಎರಡು ಎಕರೆ, ಕೃಷ್ಣಾರೆಡ್ಡಿ ಅವರ ಎರಡು ಎಕರೆ ಸೌತೆಕಾಯಿ, ಎಚ್.ಎಂ.ಕೃಷ್ಣಾರೆಡ್ಡಿ ಅವರ ಎರಡು ಎಕರೆ ಹಿಪ್ಪುನೇರಳೆ, ತುಮ್ಮನಹಳ್ಳಿಯ ನಾರಾಯಣಸ್ವಾಮಿ ಅವರ ಮೂರು ಎಕರೆ ದ್ರಾಕ್ಷಿ ಹಾಗೂ ಪ್ಲಾಸ್ಟಿಕ್ ಪೇಪರ್ ಹೊದಿಕೆಯ ಶೆಡ್, ಗೊರಮಡುಗು ಕೆಂಪರೆಡ್ಡಿ ಅವರ ಒಂದೂವರೆ ಎಕರೆ ದ್ರಾಕ್ಷಿ, ನಾಗೇಶ್ ಎರಡು ಎಕರೆ ದ್ರಾಕ್ಷಿ, ಮಂಜುನಾಥ್ ಅವರ ಮೂರು ಎಕರೆ ಟೊಮೆಟೋ, ಜಿ.ಆರ್.ರಾಜಣ್ಣ ಅವರ ಐದು ಎಕರೆ ಬಾಳೆ ತೋಟ, ಸೀಗೆಹಳ್ಳಿಯ ಈರಣ್ಣ ಅವರ ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ತೋಟ, ಆನೂರು ಗ್ರಾಮದ ಸುರೇಶ್ ಅವರ ಒಂದೂವರೆ ಎಕರೆ ರಿಂಗ್ ಬೀನ್ಸ್, ಹೀರೇಕಾಯಿ ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣ ನಾಶವಾಗಿವೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಸವಾಪಟ್ಟಣ ಗ್ರಾಮದಲ್ಲಿ ಶುದ್ಧ ನೀರಿನ ಘಟಕದ ಕಬ್ಬಿಣದ ಶೀಟ್‌ಗಳಿಂದ ನಿರ್ಮಿಸಿದ್ದ ಶೆಡ್ ಗಾಳಿಗೆ ಹಾರಿಹೋಗಿ ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಬಿದ್ದಿದ್ದು ಶನಿವಾರದ ಬಿರುಗಾಳಿಯ ತೀವ್ರತೆ ಮತ್ತು ಪರಿಣಾಮವನ್ನು ಪ್ರತಿಬಿಂಬಿಸುತ್ತಿತ್ತು.
ತಾಲ್ಲೂಕಿನ ಗಂಗನಹಳ್ಳಿ, ಮುತ್ತೂರು, ಮಳ್ಳೂರು, ಕಾಚಹಳ್ಳಿ, ಮಳಮಾಚನಹಳ್ಳಿಯಲ್ಲಿ ಸುಮಾರು 60 ಎಕರೆ ದ್ರಾಕ್ಷಿ ಬೆಳೆ ನೆಲಕಚ್ಚಿದ್ದು, 500 ಟನ್ ದ್ರಾಕ್ಷಿ ಹಾಳಾಗಿದೆ. ಇದರ ಮೊತ್ತವೇ ಒಂದೂವರೆ ಕೋಟಿ ರೂಗಳಾಗುತ್ತವೆ. ತಾಲ್ಲೂಕಿನ ಮಳ್ಳೂರು, ಮುತ್ತೂರು, ಗಂಗನಹಳ್ಳಿ, ಮೇಲೂರು, ಮುಗಿಲಡಿಪಿ ಗ್ರಾಮದ ವ್ಯಾಪ್ತಿಯಲ್ಲಿ 350 ರಿಂದ 400 ಎಕರೆ ಹಿಪ್ಪುನೇರಳೆ ತೋಟವು ನಾಶವಾಗಿದೆ. ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಸೊಪ್ಪು ಜರಡಿಯಂತಾಗಿದ್ದು, ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಇದಲ್ಲದೆ ತರಕಾರಿ, ಬಾಳೆ, ಟೊಮೇಟೋ, ಮಾವು,ತೆಂಗು ಮತ್ತು ದಾಳಿಂಬೆ ಬೆಳೆಗಳೂ ನಾಶವಾಗಿವೆ.
ಮೇಲೂರಿನ ಸೂರ್ಯನಾರಾಯಣಪ್ಪ ಅವರ ಹಿಪ್ಪುನೇರಳೆ ತೋಟ, ನಾಗರಾಜ್ ಅವರ ದ್ರಾಕ್ಷಿ ತೋಟ, ಟಿ.ಎನ್.ಮಂಜುನಾಥ್ ಅವರ ಪರಂಗಿ, ದ್ರಾಕ್ಷಿ, ದಾಳಿಂಬೆ ತೋಟ, ಶ್ರೀನಿವಾಸ್‌ಅವರ ಟೊಮೆಟೋ ಮತ್ತು ದ್ರಾಕ್ಷಿ ತೋಟ, ಮುಗಿಲಡಿಪಿ ರಾಮಯ್ಯ ಅವರ ದ್ರಾಕ್ಷಿ ತೋಟ, ಮುತ್ತೂರಿನ ರಾಮಕೃಷ್ಣಪ್ಪ ಅವರ ಬಾಳೆ ತೋಟ, ನಾರಾಯಣಸ್ವಾಮಿ ಅವರ ದ್ರಾಕ್ಷಿ ತೋಟಗಳಿಗೆ ಶಾಸಕರೊಂದಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸಿದರು.
‘ತಾಲ್ಲೂಕಿನಾದ್ಯಂತ ರೈತರು ಪ್ರಕೃತಿ ವಿಕೋಪದಿಂದಾಗಿ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಎಲ್ಲವನ್ನೂ ಸಮಗ್ರವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು’ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದ್ದಾರೆ.
ಬೆಳೆ ನಷ್ಟವಲ್ಲದೆ ತಾಲ್ಲೂಕಿನ ಹಲವೆಡೆ ಹುಳು ಸಾಕುವ ಮನೆಗಳ ಮೇಲೆ ಹೊದಿಸಿದ್ದ ಶೀಟುಗಳು ಹಾರಿಹೋಗಿದ್ದು ಅಪಾರ ನಷ್ಟವನ್ನು ತಂದಿದೆ. ತಾಲ್ಲೂಕಿನ ಚಿಕ್ಕದಾಸಾರ್‍ಲಹಳ್ಳಿ, ಮುತ್ತೂರು ಗ್ರಾಮಗಳಲ್ಲಿ ಹುಳುಮನೆಗಳಿಗೆ ನಷ್ಟವಾಗಿದ್ದರೆ, ಮುಗಿಲಡಿಪಿ ಗ್ರಾಮದಲ್ಲಿ ಮುನೇಗೌಡ, ನಾರಾಯಣಸ್ವಾಮಿ ಎಂಬುವರ ವಾಸದ ಮನೆಯ ಮೇಲಿನ ಶೀಟುಗಳು ಮುರಿದು, ಮನೆಯಲ್ಲಿನ ದಿನಬಳಕೆ ವಸ್ತುಗಳು ಹಾಳಾಗಿವೆ. ತಾಲ್ಲೂಕಿನ ಚೌಡಸಂದ್ರ ಮತ್ತು ಮೇಲೂರು ನಡುವೆ ರಸ್ತೆಯ ಪಕ್ಕದಲ್ಲಿದ್ದ ಮರಗಳು ಬುಡ ಸಮೇತ ರಸ್ತೆಗೆ ಬಿದ್ದಿದ್ದನ್ನು ಸಾರ್ವಜನಿಕರೇ ಜೆಸಿಬಿ ಬಳಸಿ ಅವುಗಳನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಕಾಲ ಬೆಂಗಳೂರಿಗೆ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
‘ಅಧಿಕಾರಿಗಳು ತಾಲ್ಲೂಕಿನಲ್ಲಿ ಅಕಾಲಿಕ ಬಿರುಗಾಳಿ ಸಮೇತದ ಆಲಿಕಲ್ಲಿನ ಮಳೆಯಿಂದಾದ ಸಮಗ್ರ ನಷ್ಟದ ವರದಿಯನ್ನು ತಯಾರಿಸಿದ ನಂತರ ಕೃಷಿ ಸಚಿವರು, ತೋಟಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ನಿಯೋಗದೊಂದಿಗೆ ತೆರಳಿ ನಷ್ಟ ಪರಿಹಾರಕ್ಕಾಗಿ ಒತ್ತಾಯಿಸುತ್ತೇನೆ. ನೀರೇ ಅಮೃತದ ಸಮಾನವಾಗಿರುವ ನಮ್ಮ ಭಾಗದ ರೈತರು ಅಪಾರ ಶ್ರಮದಿಂದ ಬೆಳೆದ ಫಲ ನೆಲಕಚ್ಚುವುದರಿಂದ ಅವರೆಲ್ಲ ಕಂಗಾಲಾಗಿದ್ದಾರೆ’ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಆಲಿಕಲ್ಲಿನಿಂದ ದ್ರಾಕ್ಷಿ ಬೆಳೆ ಹಾಳು
ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಕೊಯ್ಲಿನ ಹಂತದ ದ್ರಾಕ್ಷಿ ಬೆಳೆ ಬಳ್ಳಿಯಲ್ಲೇ ಒಡೆಯುತ್ತದೆ. ಒಡೆದ ದ್ರಾಕ್ಷಿಯಿಂದಾಗಿ ಇಡೀ ದ್ರಾಕ್ಷಿ ಗೊಂಚಲೇ ಕೊಳೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ಧಾರಣಿ ಕಳೆದುಕೊಳ್ಳುತ್ತದೆ. ಹಾಗಾಗಿ ಬಹುತೇಕ ಸಂದರ್ಭದಲ್ಲಿ ದ್ರಾಕ್ಷಿ ಮಾರಾಟಕ್ಕೂ ಯೋಗ್ಯವಾಗದೇ ತಿಪ್ಪೆಗೆ ಹಾಕಬೇಕಾಗುತ್ತದೆ. ಅದನ್ನು ಒಣ ದ್ರಾಕ್ಷಿ ಮಾಡಲೂ ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ರೈತರಿಗೆ ದ್ರಾಕ್ಷಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ದ್ರಾಕ್ಷಿ ತುಂಬ ನಿರ್ವಹಣೆ ಅಗತ್ಯವಿರುವ ಬೆಳೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿರುವ ದ್ರಾಕ್ಷಿ ಬೆಳೆ ಪ್ರಕೃತಿ ವೈಪರೀತ್ಯದಿಂದಾಗಿ ನಷ್ಟ ತಂದೊಡ್ಡಿದೆ. ಸರ್ಕಾರ ರೈತರ ಕೈ ಹಿಡಯಲೇಬೇಕು ಎಂದು ಹುಜಗೂರು ಗ್ರಾಮದ ದ್ರಾಕ್ಷಿ ಬೆಳೆಗಾರ ಮುನಿನಾರಾಯಣಪ್ಪ ಆಗ್ರಹಿಸಿದ್ದಾರೆ.
ಜರಡಿಯಂತಾದ ಹಿಪ್ಪುನೇರಳೆ ಸೊಪ್ಪು
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆಗೆ ಅತ್ಯಗತ್ಯವಾದ ಹಿಪ್ಪುನೇರಳೆ ಸೊಪ್ಪು ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಜರಡಿಯ ರೀತಿ ಆಗಿಬಿಡುತ್ತದೆ. ಕೆಲವೆಡೆಯಂತೂ ನೆಲಕ್ಕೆ ಸೊಪ್ಪುಗಳು ನೆಲಕ್ಕೆ ಮಲಗಿಬಿಟ್ಟಿವೆ. ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಈ ರೀತಿಯ ಸೊಪ್ಪನ್ನು ಆಹಾರವಾಗಿ ಜಾನುವಾರುಗಳಿಗೂ ರೈತರು ಬಳಸದಿರುವುದರಿಂದ ಅಪಾರ ನಷ್ಟವುಂಟಾಗಿದೆ ಎಂದು ಸುಮಾರು ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ನಷ್ಟವನ್ನು ಹೊಂದಿದ ಸೀಗೆಹಳ್ಳಿಯ ಈರಣ್ಣ ನೋವಿನಿಂದ ಹೇಳಿದರು.
ಮುಖ್ಯಮಂತ್ರಿಗಳಿಗೆ ಮನವಿ
ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೋಟ್ಯಾಂತರ ರೂಗಳ ಬೆಳೆ ನಷ್ಟವಾಗಿರುವುದರಿಂದ ಮುಖ್ಯಮಂತ್ರಿಗಳು ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮಂಗಳವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ರೈತರು ಸತತ ಬರಗಾಲವನ್ನು ಎದುರಿಸುತ್ತಾ ಬಂದಿದ್ದಾರೆ. 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ವಿಷಪೂರಿತವಾಗಿರುತ್ತದೆ. ಆದರೂ ರೈತರು ಹನಿಹನಿ ನೀರನ್ನೂ ಬಳಸಿ ಶ್ರಮದಿಂದ ಬೆಳೆ ಬೆಳೆದರೆ ಪ್ರಕೃತಿಯು ಸಹಕರಿಸದೇ ಶಾಪವಾಗಿ ಪರಿಣಮಿಸಿ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯ ಮೂಲಕ ಕೋಟ್ಯಾಂತರ ರೂಗಳ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರು ಬೆಳೆದಿದ್ದ ರೇಷ್ಮೆ, ದ್ರಾಕ್ಷಿ, ತರಕಾರಿ ಹಾಗೂ ಮನೆಗಳು ಉರುಳಿದ್ದು ರೈತರು ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ರೈತರ ಕಷ್ಟಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ ರೈತರಿಗೆ ನೆರವಾಗುವಂತೆ ಕೋರಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ರೇಷ್ಮೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನಾದ್ಯಂತ ನಾಶವಾದ ಬೆಳೆಗಳ ಬಗ್ಗೆ ವರದಿಯನ್ನು ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನನ್ನ ಮಿತಿಯಲ್ಲಿನ ಪರಿಹಾರದ ಹಣವನ್ನು ತಕ್ಷಣವೇ ನೀಡುತ್ತೇನೆ’ ಎಂದು ಹೇಳಿದರು.
ರೈತಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಮಂಜುನಾಥ್, ಆರ್.ದೇವರಾಜ್, ತ್ಯಾಗರಾಜ್, ರಾಮಚಂದ್ರ, ರವಿ, ಮುನಿರಾಜು, ಮುನಿವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆ.ಎಂ.ಎಫ್‌ನ ಗುಡ್ ಲೈಫ್ ಹಾಲು ವಿತರಣೆ
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಸೋಮವಾರ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆ.ಎಂ.ಎಫ್‌ನ ಗುಡ್ ಲೈಫ್ ಹಾಲನ್ನು ವಿತರಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ ಕೋಚಿಮುಲ್ ನೂತನ ನಿರ್ದೇಶಕ ಬಂಕ್‌ಮುನಿಯಪ್ಪ ಹಾಲಿನ ಪಾಕೆಟ್‌ಗಳನ್ನು ವಿತರಣೆ ಮಾಡಿ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು. ರೈತರು ಉತ್ಪಾದನೆ ಮಾಡುತ್ತಿರುವ ಗುಣಮಟ್ಟದ ಹಾಲನ್ನು ನಮ್ಮ ಡೈರಿಯ ಮುಖಾಂತರ ಮಾರಾಟ ಮಾಡುತ್ತಿದ್ದು, ಜನತೆ ಇಂತಹ ಗುಣಮಟ್ಟದ ಹಾಲನ್ನು ಖರೀದಿ ಮಾಡುವ ಮುಖಾಂತರ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಏಳು ದಿನಗಳ ಕಾಲ ಹಾಲಿನ ಉತ್ಪನ್ನಗಳ ಸಿಹಿತಿಂಡಿಗಳನ್ನು ಶೇ ೧೦ ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದರು.
ಉಪವ್ಯವಸ್ಥಾಪಕ ಗೋಪಾಲರಾವ್, ಸಾರ್ವಜನಿಕ ಆಸ್ಪತ್ರೆಯ ಡಾ.ಅಮರೇಶ್ ಗದ್ದಿ, ವಿವಿದೋದ್ಧೇಶ ಸಹಕಾರ ಸಂಘಗಳ ಕಾರ್ಯದರ್ಶಿ ಕೆ.ವಿ.ರೆಡ್ಡಿ, ಓ.ಟಿ.ಮುನಿಕೃಷ್ಣಪ್ಪ, ಶ್ರೀನಿವಾಸ್, ರಮೇಶ್, ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.
ಜಂಗಮಕೋಟೆಯ ಕೆ.ಎನ್.ನಾರಾಯಣಸ್ವಾಮಿ
ತಾಲ್ಲೂಕಿನ ಜಂಗಮಕೋಟೆಯವರಾದ ಇವರು ಗಾರುಡಿಗೊಂಬೆ ಕುಣಿತ ಕಲೆಯಲ್ಲಿ ಅಸಾಧಾರಣವಾದ ಪರಿಣತಿ ಪಡೆದು ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ಗಾರುಡಿಗೊಂಬೆಯನ್ನು ತಯಾರಿಸುವುದರಲ್ಲಿ ಹಾಗೂ ಕೀಲುಕುದುರೆಗಳನ್ನು ಕುಣಿಸುವುದರಲ್ಲಿ ಇವರು ಪ್ರಖ್ಯಾತರು. ಗೌರಿ ಮತ್ತು ಗಣೇಶನ ವಿಗ್ರಹಗಳು, ಕೀಲುಕುದುರೆ, ಗಾರುಡಿಗೊಂಬೆ, ಜಿರಾಫೆ, ನವಿಲು ಮುಂತಾದ ಆಕೃತಿಗಳನ್ನು ಮಣ್ಣಿನಲ್ಲಿ ಅಥವಾ ಬಿದಿರಿನಲ್ಲಿ ಹಾಗೂ ಸರಿಹೊಂದಬಹುದಾದ ಇನ್ನಾವುದೇ ವಸ್ತುಗಳಿಂದ ತಯಾರಿಸಿ ಆ ಆಕೃತಿಗಳಿಗೆ ರೂಪಕೊಟ್ಟು ಅವುಗಳಿಗೆ ಜೀವತುಂಬಿ ಕುಣಿಸುವುದು ಇವರಿಗೆ ವಂಶಪಾರಂಪರ್ಯವಾಗಿ ಬಂದ ಕಲೆ.
ಇವರು ಕಲೆಗಾಗಿ ಸತತವಾಗಿ ಶ್ರಮಪಟ್ಟು ತಂದೆ ಮುನಿಯಪ್ಪ ಅವರಿಂದ ತರಬೇತಿ ಪಡೆದು ಇತರರಿಗೂ ಕಲಿಸಿ ಜಾನಪದ ಕಲೆಯನ್ನು ಜೀವಂತವಾಗಿ ಇರಿಸಿದ್ದಾರೆ. ನಾಟಕ ಮತ್ತು ಯಕ್ಷಗಾನಗಳ ಕಿರೀಟಗಳನ್ನು ಪಾತ್ರಗಳಿಗೆ ತಕ್ಕಂತೆ ವಿನೂತನ ರೀತಿಯಲ್ಲಿ ತಯಾರಿಸಿ ರಂಗಭೂಮಿಗೂ ಸಹ ತಮ್ಮ ಸೇವೆಯನ್ನು ವಿಸ್ತಿರಿಸಿದ್ದಾರೆ. ಜಿಲ್ಲೆಯ ನಾನಾ ಕಡೆ ರಥೋತ್ಸವ ಪಲ್ಲಕ್ಕಿ ಉತ್ಸವಗಳಾದಾಗ ಅಲ್ಲಿಗೆ ಹೋಗಿ ವಿವಿಧ ರೀತಿಯಲ್ಲಿ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸಿಕೊಡುತ್ತಾರೆ.
ತಾಲ್ಲೂಕಿನ ಜಂಗಮಕೋಟೆ, ಕೋಲಾರ ತಾಲ್ಲೂಕಿನ ವೇಮಗಲ್, ಬೆಂಗಳೂರು, ತಿರುಪತಿಗಳಲ್ಲಿ ತರಬೇತಿ ನೀಡಿ ತಂಡಗಳನ್ನು ರಚಿಸಿದ್ದಾರೆ. ಮಂಡ್ಯದಲ್ಲಿರುವ ಜಾನಪದಲೋಕಕ್ಕೆ ತಮ್ಮ ಸಂಗ್ರಹದಲ್ಲಿನ ಹಲವು ಅಮೂಲ್ಯವಾದ ಜಾನಪದ ಗೊಂಬೆಗಳನ್ನು. ಅಮೂಲ್ಯ ಕಲಾಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಬೃಹತ್‌ಗಾತ್ರದ ಹತ್ತರಿಂದ ಹನ್ನೆರಡು ಅಡಿ ಎತ್ತರದ ಗಾರುಡಿಗೊಂಬೆಗಳು ಮಣ್ಣು ಮತ್ತು ಬಿದಿರು ಸೇರಿಸಿ ಹಗುರವಾಗಿ ನಿರ್ಮಿಸುವ ಕಲೆಯನ್ನು ಕಲಿತಿರುವ ರಾಜ್ಯದ ಕೆಲವೇ ಮಂದಿಯಲ್ಲಿ ನಾರಾಯಣಸ್ವಾಮಿ ಒಬ್ಬರು.
ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಬ್ರಹ್ಮರಥೋತ್ಸವ
ಪಟ್ಟಣದ ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಗಾಯತ್ರಿದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಚಂಡಿಕಾ ಮಹಾಯಾಗ, 16ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಮತ್ತು ಕಲ್ಯಾಣ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರದಿಂದ ಪ್ರಾರಂಭಗೊಂಡು ಬುಧವಾರದವರೆಗೂ ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಮಹಾಗಣಪತಿ ಪೂಜೆ, ಚಂಡಿಕಾ ಮಹಾಯಾಗ, ತೈಲಾಭಿಷೇಕ, ಪಂಚಾಮೃತಾಭಿಷೇಕ, ರಥ ಕಳಶಸ್ಥಾಪನೆ, ಜ್ಯೇಷ್ಠಾದೇವಿ, ನೀಳಾದೇವಿ ಸಮೇತ ಶನೈಶ್ಚರಸ್ವಾಮಿಯ ಕಲ್ಯಾಣೋತ್ಸವ, ಸಾಮೂಹಿಲ ಎಳ್ಳು ದೀಪೋತ್ಸವ, ತಿಲಹೋಮ, ಕ್ಷೀರಾಭಿಷೇಕ, ವಿಶೇಷ ಶಾಲ್ಯಾನ್ನ ಅಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು. ರಥದ ಮೆರವಣಿಗೆಯಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕೆ.ಎಚ್.ಬಿ.ಕಾಲೋನಿಯ ರಸ್ತೆಗಳಲ್ಲಿ ರಥವನ್ನು ಎಳೆದರು.
ವಿವಿಧ ದೇವರುಗಳಿಗೆ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ್ದು, ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ಪ್ರಧಾನ ಅರ್ಚಕ ರಾಮಮೋಹನ್ ಶಾಸ್ತ್ರಿ, ಭಾಸ್ಕರ ಸ್ವಾಮಿ, ಮುತ್ತೂರು ಶಿವಗುರು ಶರ್ಮ, ದೇವಾಲಯದ ಕಾರ್ಯಕಾರಿ ಮಂಡಲಿ ಸದಸ್ಯರು ಮತ್ತಿತರರು ಹಾಜರಿದ್ದರು.
ಬೆಳ್ಳೂಟಿ ರಂಗನಾಥಸ್ವಾಮಿಯ ತೃತೀಯ ತಿರುಕಲ್ಯಾಣ ಮಹೋತ್ಸವ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ರಂಗನಾಥಸ್ವಾಮಿಯ ತೃತೀಯ ತಿರುಕಲ್ಯಾಣ ಮಹೋತ್ಸವವನ್ನು ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಭೂನೀಳಾ ಸಮೇತ ರಂಗನಾಥಸ್ವಾಮಿಯ ಕಲ್ಯಾಣ ಮಹೋತ್ಸವವನ್ನು ಉತ್ತರಾಯಣ ವೈಶಾಖ ಮಾಸದ ಶನಿವಾರ ಮತ್ತು ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
ಬೆಳಿಗ್ಗೆಯಿಂದ ಪ್ರಾರಂಭವಾದ ಸುಪ್ರಭಾತಸೇವೆ, ವಿಶ್ವಕ್ಷೇನಪೂಜೆ, ತುಳಸಿಪೂಜೆ, ಅಗ್ನಿಮುಖ, ಗಣಪತಿಹೋಮ, ನವಗ್ರಹಹೋಮ, ಮಹಾಸುದರ್ಶನಹೋಮ, ಪ್ರಧಾನಹೋಮ, ಶಾಂತಿಹೋಮ, ಪೂರ್ಣಾಹುತಿ, ಪಂಚಾಮೃತಾಭಿಷೇಕ, ಮಹಾಕುಂಭಾಭಿಷೇಕ, ಅಲಂಕಾರ, ಕಲ್ಯಾಣೋತ್ಸವ, ಅಷ್ಟೋತ್ತರ, ರಾಷ್ಟ್ರಾಶಿರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ತಾಲ್ಲೂಕಿನ ವಿವಿದೆಡೆಗಳಿಂದ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ಅರ್ಚಕ ಕೆ.ವಿಷ್ಣುವರ್ಧನಾಚಾರ್, ರಂಗನಾಥಸ್ವಾಮಿ ಕುಲಬಾಂಧವರು, ಬೆಳ್ಳೂಟಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.

ಬಿ.ಎನ್.ಚಂದ್ರಪ್ಪ (ಬಿ.ಎನ್.ಸಿ) ಮೇಸ್ಟ್ರು
ಇವರಿಗೆ 76 ವರ್ಷಗಳಾದರೂ ಬಿ.ಎನ್.ಸಿ ಮೇಸ್ಟ್ರು ಎಂದೇ ತಾಲ್ಲೂಕಿನಾದ್ಯಂತ ಚಿರಪರಿಚಿತರು. ಇವರು ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಮೇಲೂರು, ಪಿಯುಸಿ ಬೋರ್ಡ್, ಜ್ಯೂನಿಯರ್ ಕಾಲೇಜು, ಗಂಜಿಗುಂಟೆ ಮತ್ತು ಚೀಮಂಗಲದಲ್ಲಿ ಹೈಸ್ಕೂಲ್ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇವರ ಶಿಷ್ಯರಲ್ಲಿ ಮೂವರು ಐಎಎಸ್, ೫ ಕೆಎಎಸ್ ಮತ್ತು ಒಬ್ಬರು ಐಪಿಎಸ್ ಆಗಿರುವರು. ಗ್ರಾಮಾಂತರ ಪ್ರದೇಶಗಳಲ್ಲಿ ರಜಾ ದಿನಗಳಲ್ಲಿ ಉಪಾದ್ಯಾಯರುಗಳ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿಗಳನ್ನು ನೀಡಿದ್ದಾರೆ.
1968ರಲ್ಲಿ ಕರ್ನಾಟಕ ಯುವಜನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಗಣೇಶೋತ್ಸವ ಹಾಗೂ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾಜ್ಯ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ಪಟ್ಟಣದಲ್ಲಿ ರಂಗಭೂಮಿ ಕಲೆ ಬೆಳೆಯಲು ಶ್ರಮಿಸಿರುವರು. ತಾಲ್ಲೂಕಿನಲ್ಲಿ ಹೆಚ್ಚಾಗಿ ತೆಲುಗು ಪೌರಾಣಿಕ ನಾಟಕಗಳೇ ನಡೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದರು. ಮಂಗಳಾ ನನ್ನ ಅತ್ತಿಗೆ, ದುಡ್ಡೇ ದೊಡ್ಡಪ್ಪ, ಮಕ್ಮಲ್ ಟೋಪಿ, ಸಂಸಾರ ನೌಕೆ, ದೇಶಭಕ್ತರು ಇವರು ನಿರ್ದೇಶಿಸಿ ನಟಿಸಿದ ನಾಟಕಗಳು. ನಾಟಕಗಳಲ್ಲಿ ಇವರು ಮಾಡುತ್ತಿದ್ದ ಹಾಸ್ಯ ಪಾತ್ರಗಳು ವಿಶಿಷ್ಟವಾಗಿರುತ್ತಿದ್ದವು.
ಪಟ್ಟಣಕ್ಕೆ ಹೆಸರಾಂತ ಗಾಯಕಿಯರಾದ ಎಸ್.ಜಾನಕಿ, ಪಿ.ಸುಶೀಲಾ ಮತ್ತು ಎಲ್.ಆರ್.ಈಶ್ವರಿ ಅವರನ್ನು ಕರೆಸಿದ್ದರು. ತಾಲ್ಲೂಕಿನಲ್ಲಿ ಕನ್ನಡ ರಂಗಭೂಮಿ ಪಸರಿಸಲು ಶ್ರಮಿಸಿದ್ದಾರೆ. ತಾಲ್ಲೂಕಿನಾದ್ಯಂತ ಥಿಯೋಸೋಫಿಕಲ್ ಸೊಸೈಟಿಯ ಮೂಲಕ ಮಾನಸಿಕ ಸದೃಢತೆಗಾಗಿ ಹಲವು ಶಿಬಿರಗಳನ್ನು ಆಯೋಜಿಸಿದ್ದಾರೆ.
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ದರ್ಗಾದಲ್ಲಿ ಗಂಧದ ಅಭಿಷೇಕ
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಅನುಯಾಯಿಗಳು ರಾಜೀವ್‌ಗಾಂಧಿ ಲೇಔಟ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಮೆರವಣಿಗೆಯಲ್ಲಿ ಸಾಗಿದರು. ದರ್ಗಾದಲ್ಲಿ ನಡೆಸುವ ಗಂಧದ ಅಭಿಷೇಕಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಅಲಂಕರಿಸಿಕೊಂಡು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ದರ್ಗಾದಲ್ಲಿ ಹೊದಿಸುವ ಚಾದರ್, ಮಲ್ಲಿಗೆ ಹೂಗಳು, ಮೆಕ್ಕಾ ಮುಂತಾದ ವಿವಿಧ ದರ್ಗಾಗಳ ಪ್ರತಿಕೃತಿಗಳು ವಾದ್ಯವೃಂದದೊಂದಿಗೆ ಸಾಗಿದವು. ಕೇಸರಿ ಮತ್ತು ಹಸಿರು ಬಣ್ಣದ ಉಡುಪುಗಳನ್ನು ಧರಿಸಿಕೊಂಡು ಪೂಜೆ ನಡೆಸುವ ಫಕ್ರಾಗಳ ಡೋಲಿನ ವಾದನದೊಂದಿಗೆ ರಸ್ತೆಯಲ್ಲಿ ಸಾಗಿದಾಗ ಆಕರ್ಷಕವಾಗಿ ಕಂಡುಬಂದಿತು.
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಅಸ್ಲಂ, ಉಪಾಧ್ಯಕ್ಷ ನಸೀರ್ ಅಹ್ಮದ್, ಕಾರ್ಯದರ್ಶಿ ನಿಜಾಮುದ್ದೀನ್, ಷೇಕ್‌ಹುಸೇನ್, ಫಕ್ರುದ್ದೀನ್ ಸಾಬ್, ಸಯ್ಯದ್ ನಯಾಜ್, ಅಲೀಖಾನ್, ಅಮ್ಜದ್ ಖಾನ್, ಸುಭಾನ್, ರಿಯಾಜ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿಜಯಲಕ್ಷ್ಮೀ ಟಾಕೀಸ್ ಬಳಿಯ ದಸ್ತು ನ HKGN ಟೀ ಸ್ಟಾಲ್
ವಿಜಯಲಕ್ಷ್ಮೀ ಟಾಕೀಸ್ ಬಳಿಯ HKGN ಟೀ ಸ್ಟಾಲ್ ಇಲ್ಲಿಯ ಜನರ ಮೆಚ್ಚಿನ ಸ್ಥಳಗಳಲ್ಲೊಂದು. ದಸ್ತು ನ ಟೀ ರುಚಿ ಎಲ್ಲರಿಗೂ ಅಚ್ಚುಮೆಚ್ಚು. ಕಛೇರಿಗೆ ಹೋಗುವವರಿಂದ ಹರಟೆಗೆ ಕೂರುವವರ ವರೆಗೂ ಈ ಟೀ ಸ್ಟಾಲ್ ಗೆ ಭೇಟಿ ನೀಡದ ವ್ಯಕ್ತಿಯಿಲ್ಲ. ಇನ್ನು ರೈಲ್ವೆ ಸ್ಟೇಷನ್ ನ ಬಳಿ ಗಾಳಿ ಸಂಚಾರಕ್ಕೆ ಬರುವ ಜನರಂತೂ ಈ ಸ್ಟಾಲ್ ನ ದರ್ಶನ ಮಾಡಿಯೇ ಮನೆಗಳಿಗೆ ತೆರಳುವುದು
ಜಾನಪದ ಕಲಾ ಪ್ರದರ್ಶನದೊಂದಿಗೆ ಮುಕ್ತಾಯಗೊಂಡ ಜೀರಂಗಿ ಮೇಳ ಮಕ್ಕಳ ಬೇಸಿಗೆ ಶಿಬಿರ
ಶಿಡ್ಲಘಟ್ಟ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ರಾತ್ರಿ ಜೀರಂಗಿ ಮೇಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಟ ಕುಣಿತ, ಕಂಸಾಲೆ ನೃತ್ಯ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ ಮುಂತಾದ ಜನಪದ ಪ್ರಕಾರಗಳನ್ನು ಮಕ್ಕಳು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದರು.
ಕಳೆದ ಹದಿನೈದು ದಿನಗಳಿಂದ ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಡೆಸಿಕೊಂಡು ಬಂದ ಜಾನಪದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಕಲಿತ ಕಲೆಗಳನ್ನು ಪ್ರದರ್ಶಿಸಲಾಯಿತು. ಮಕ್ಕಳು ಶಿಬಿರದಲ್ಲಿ ಕಲಿತಿರುವ ಚಿತ್ರಕಲೆ, ಕಾಗದ ಕಲೆ, ಮಣ್ಣಿನ ಗೊಂಬೆ, ಮುಖವಾಡ, ಹಸೆ ಚಿತ್ರಣ ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.
ಈಧರೆ ತಿರುಮಲ ಪ್ರಕಾಶ್ ರಚಿಸಿರುವ ‘ಮಳೆ ಹಕ್ಕಿ’ ನಾಟಕವನ್ನು ಮೈಸೂರು ಮೋಹನ್ ನಿರ್ದೇಶನದಲ್ಲಿ ಶಿಬಿರದ ಮಕ್ಕಳು ಅಭಿನಯಿಸಿದರು. ಹುಲಿಮಂಗಲ ಶಿವಕುಮಾರ್ ಮೇಳವನ್ನು, ಆದಿಮ ಹರೀಶ್ ಬೆಳಕಿನ ವಿನ್ಯಾಸವನ್ನು ಮತ್ತು ಬಂಗಾರಪೇಟೆ ಶಾಂತಮ್ಮ ಪ್ರಸಾದನ ಮಾಡಿದ್ದರು. ಮಕ್ಕಳು ಪ್ರದರ್ಶಿಸಿದ ಲಂಬಾಣಿಕುಣಿತ, ಪಟಾ, ಪೂಜಾ, ಸೋಮ, ವೀರಗಾಸೆ, ಕಂಸಾಳೆ ಕುಣಿತಕ್ಕೆ ಚನ್ನಪಟ್ಟಣ ಸಿ.ಎಸ್.ಶಿವಕುಮಾರ್ ನೃತ್ಯ ಸಂಯೋಜಿಸಿದ್ದರೆ, ವಸಂತಕಾಲದಲಿ ಎಂಬ ನೃತ್ಯರೂಪಕ ಮತ್ತು ಕಂಗೀಲು ಕುಣಿತಕ್ಕೆ ತಿರುಮಲಪ್ರಕಾಶ್ ನೃತ್ಯ ಸಂಯೋಜಿಸಿದ್ದರು.
ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಛಲಪತಿಗೌಡ ಮಾತನಾಡಿ,‘ಮಕ್ಕಳ ವಿವಿಧ ಪ್ರದರ್ಶನಗಳಿಂದ ಇಲ್ಲಿ ಪುಟ್ಟ ಜನಪದ ಲೋಕವೇ ಅನಾವರಣಗೊಂಡಿದೆ. ಕೇವಲ ಹದಿನೈದು ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವುದಲ್ಲದೆ, ವಿವಿಧ ಕಲೆಗಳನ್ನು ಕಲಿಸಿ ಪ್ರದರ್ಶನ ಕೊಡುವಷ್ಟು ತಯಾರಿ ನೀಡುವುದೂ ಬಹಳ ಕಷ್ಟ. ನಗರಗಳಲ್ಲಿ ಬೇಸಿಗೆ ಶಿಬಿರಗಳು ಆರ್ಥಕ ಸಂಪಾದನೆಯ ಮೂಲಗಳಾಗಿರುವಾಗ ಕೇವಲ ಕಲೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿರುವ ಇಂಥಹ ಶಿಬಿರಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ’ ಎಂದು ಹೇಳಿದರು.

