Home Blog Page 555

ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

0

ಶಿಡ್ಲಘಟ್ಟದ ಪುರ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪೊಲೀಸ್‌ ಪೇದೆಗಳಾದ ಶ್ರೀನಿವಾಸ ಅವರ ಮಗಳು ಭುವನಶ್ರೀ(546), ರವೀಂದ್ರ ಅವರ ಮಗಳು ಪಿ.ಆರ್‌.ಶ್ರೀಲಕ್ಷ್ಮಿ(542), ಅಶ್ವತ್ಥ ಅವರ ಮಗ ಮಹೇಶ್‌(517) ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದರೆ, ನಾರಾಯಣಸ್ವಾಮಿ ಅವರ ಮಗ ಸಿ.ಚಂದನ್‌(511) ಮತ್ತು ಆನಂದರೆಡ್ಡಿ ಅವರ ಮಗ ಕೆ.ಚರಣ್‌(416) ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಪ್ರತಿಭಾವಂತ ಮಕ್ಕಳನ್ನು ಗೌರವಿಸಿ ಪುರಠಾಣೆ ಸಬ್‌ಇನ್ಸ್‌ಪೆಕ್ಟರ್‌ ಪುರುಷೋತ್ತಮ್‌ ಮಾತನಾಡಿ,‘ಪೊಲೀಸರು ತಮ್ಮ ಕೆಲಸದ ಒತ್ತಡದಲ್ಲಿ ಸಂಸಾರ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಲಿಕ್ಕಾಗದು. ಪೊಲೀಸರ ಮನೆಗಳಲ್ಲೂ ಪ್ರತಿಭಾವಂತ ಮಕ್ಕಳು ಇದ್ದು, ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ತಮ್ಮ ಪೋಷಕರಿಗೆ ಹಾಗೂ ತನ್ಮೂಲಕ ಪೊಲೀಸ್‌ ಇಲಾಖೆಗೂ ಹೆಮ್ಮೆ ತಂದಿದ್ದಾರೆ. ಅಂಥಹ ಮಕ್ಕಳನ್ನು ಗೌರವಿಸಿ ಪ್ರೋತ್ಸಾಹಿಸುವುದರ ಮೂಲಕ ಅವರ ಯಶಸ್ಸು ಮತ್ತು ಶ್ರೇಯಸ್ಸನ್ನು ಕೋರಿದ್ದೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಠಾಣೆಯ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

ವೀರಕೆಂಪಣ್ಣರ ವೀರಗಾಥೆ

0

ಪಿಯುಸಿ ಪಾಸಾಗಿದ್ದ ಹದಿನೆಂಟರ ಯುವಕ ಕೃಷಿ ಪ್ರದರ್ಶನದಲ್ಲಿ ಕುರಿಗಳನ್ನು ನೋಡಿದ. ತಾನೂ ತಂದು ಸಾಕಬೇಕೆಂದು ಆಸೆಪಟ್ಟ. ಆದರೆ ಉತ್ಸಾಹ ಮತ್ತು ಬಿಸಿರಕ್ತವಿರುವೆಡೆ ಹಣವಿರಬೇಕಲ್ಲ. ಹಣ ಹೊಂಚಿ ಎರಡು ಕುರಿ ತರುವಷ್ಟರಲ್ಲಿ ಐದು ವರ್ಷ ಕಳೆದಿತ್ತು. ಇದೆಲ್ಲಾ ನಡೆದು ಮೂವತ್ತೈದು ವರ್ಷಗಳಾಗಿವೆ. ಈಗ ಈತನ ಕಣ್ಮುಂದೆ ಸಾವಿರದ ಮುನ್ನೂರು ‍ರಾಂಬೊಲೇಟ್, ಡಾರ್ಸೆಟ್, ಬನ್ನೂರು ಮುಂತಾದ ಕುರಿಗಳಿವೆ. ಈತನೇ ಕುರಿಸಾಕಾಣಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆನೂರಿನ ವೀರಕೆಂಪಣ್ಣ. ಇವರ ಈ ಸಾಧನೆಗೆ ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ತಳಿಯ ಅಭಿವೃದ್ಧಿ ವಿಧಾನಗಳನ್ನು ಅಳವಡಿಸಿಕೊಂಡಿರುವುದಲ್ಲದೆ, ಪರಿಶ್ರಮ, ಸಂಶೋಧನಾ ಪ್ರವೃತ್ತಿ ಮತ್ತು ಪ್ರಯೋಗಶೀಲತೆಯೇ ಕಾರಣ.
1978ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕುರಿ ಸಂವರ್ಧನ ಕೇಂದ್ರದಲ್ಲಿ ಒಂದು ಕಾರಿಡಾಲ್ ತಳಿ ಖರೀದಿಸಿ, ಆ ಟಗರಿನಿಂದ ಸ್ಥಳೀಯ ಬನ್ನೂರು ಕುರಿಗಳಿಗೆ ಸಂವರ್ಧನೆ ಮಾಡಿ ಹೊಸ ತಳಿಗಳನ್ನು ಸಾಕಲು ಪ್ರಾರಂಭಿಸಿದರು. ೧೯೮೦ರಲ್ಲಿ ಚಳ್ಳಕೆರೆ ಕುರಿ ಅಭಿವೃದ್ಧಿ ಕೇಂದ್ರದಲ್ಲಿ ಆಗ ತಾನೆ ಆಮದು ಮಾಡಿದ ಟಗರನ್ನು ವೀಕ್ಷಿಸಿ, ತಮಗೂ ಕುರಿ ಸಾಕುವ ಅನುಭವವಿರುವುದರಿಂದ ವಿದೇಶದಿಂದ ತರಿಸಿದ ಮೂಲ ತಳಿ ನೀಡಬೇಕೆಂದು ಕೇಳಿಕೊಂಡರು. ಅಲ್ಲಿಯ ತಜ್ಞರು ಈ ತಳಿಗಳನ್ನು ವೃದ್ಧಿ ಮಾಡುವ ಕಾರ್ಯ ತಳಿ ವರ್ಧಕರಿಗೆ ಮಾತ್ರ ಗೊತ್ತು ಎಂದು ಹೇಳಿ ಇವರನ್ನು ತಿರಸ್ಕರಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಕೆಂಪಣ್ಣ ದೆಹಲಿಯ ಕೃಷಿ ಭವನದಲ್ಲಿರುವ ಕುರಿ ಸಂಗೋಪನಾ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ತಿಳಿಸಿ ತಮಗೂ ಒಂದು ಆಮದಾಗಿರುವ ಮೂಲ ತಳಿ ಟಗರನ್ನು ನೀಡಬೇಕೆಂದು ಕೋರಿದರು. ಇವರ ಆಸಕ್ತಿ, ಅನುಭವ, ಜ್ಞಾನವನ್ನು ಪರೀಕ್ಷಿಸಿ ವಿದೇಶದಿಂದ ಆಮದು ಮಾಡಿದ ಮೂರು ಟಗರುಗಳನ್ನು ಮತ್ತು ೨೫ ಮೂಲ ತಳಿ ಮೆರೀನೋ ಹೆಣ್ಣು ಕುರಿ ಮತ್ತು ಹತ್ತು ಟಗರುಗಳನ್ನು ಚಳ್ಳಕೆರೆ ಮತ್ತು ತಮಿಳುನಾಡಿನ ಕೊಯಿಮತ್ತೂರಿನ ಫಾರಂನಿಂದ ನೀಡಲು ಆದೇಶಿಸಿದರು. ಇವರಿಗೆ ತರಬೇತಿ ನೀಡಲೂ ಆದೇಶಿಸಿದರು. ಇಕ್ರಿಸೆಟ್‌ನಿಂದ ಕುದುರೆ ಮಸಾಲೆಯನ್ನು ಬಿತ್ತನೆಗೆ ತರಿಸಿ ನಾಲ್ಕು ಎಕರೆ ಪ್ರದೇಶದ ನೀರಾವರಿ ಮೇವು ಬೆಳೆದರು. ೧೯೮೫ರಲ್ಲಿ ಆಸ್ಟ್ರೇಲಿಯಾದ ಕುರಿ ತಳಿ ಸಂವರ್ಧಕರಿಂದ ರಾಜ್ಯದ ರಾಣೇಬೆನ್ನೂರಿನಲ್ಲಿ ತರಬೇತಿ ಪಡೆದರು.
ಕುರಿಗಳಿಗೆ ಬರುವ ರೋಗ ಪರೀಕ್ಷಿಸುವುದು, ಕಾಲಕಾಲಕ್ಕೆ ಲಸಿಕೆ ಹಾಕುವುದು, ಮೇವನ್ನು ಸಣ್ಣ ಸಣ್ಣಗೆ ಕತ್ತರಿಸಿ, ಕುರಿಗಳನ್ನು ಕೊಟ್ಟಿಗೆಗಳಲ್ಲಿ ಸಾಕುವ ಪದ್ಧತಿ ಪ್ರಾರಂಭಿಸಿದರು. ವೈದ್ಯರು, ವಿಜ್ಞಾನಿಗಳು ಬೇಕೆಂದಾಗ ಸಿಗುವುದಿಲ್ಲ. ಹಾಗಾಗಿ ಅನಿವಾರ್ಯತೆಯಿಂದ ತಾನೇ ಕುರಿ ವಿಜ್ಞಾನಿ ಮತ್ತು ವೈದ್ಯನಾಗಬೇಕಾಯಿತು ಎನ್ನುತ್ತಾರೆ ಕುರಿಗಳ ರೋಗಗಳನ್ನು ನೋಡಿದ ತಕ್ಷಣ ಕಂಡುಹಿಡಿಯಬಲ್ಲ ಈ ತಜ್ಞ ಕೆಂಪಣ್ಣ. ಆಹಾರ ಪದ್ಧತಿ, ರೋಗಗಳಿಗೆ ಬಳಸುವ ಔಷಧಿ, ತಳಿಸಂವರ್ಧನೆಗಳಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಇವರು ಸಫಲತೆ ಸಾಧಿಸಿದ್ದಾರೆ. ಕೊಟ್ಟಗೆಯಲ್ಲೇ ಆಹಾರ ನೀಡುವುದು ಮತ್ತು ಪ್ರತಿ ಜಾತಿಯ ಕುರಿಗಳನ್ನು ಸ್ವಚ್ಛವಾದ ಗಾಳಿ ಬೆಳಕು ಬರುವ ಕೊಟ್ಟಿಗೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಇವರು ಯಾವ ತಜ್ಞರಿಗೂ ಕಡಿಮೆಯಿಲ್ಲ ಎನ್ನಬಹುದು.
ಇವರ ಪಿತ್ರಾರ್ಜಿತ ೨ ಎಕರೆ ಜಮೀನನ್ನು ೧೧ ಎಕರೆವರೆಗೂ ವಿಸ್ತರಿಸಿ ಹೆಚ್ಚಿನ ಪಾಲು ಕುರಿ ಮೇವಿಗಾಗಿ ಉತ್ತಮ ಮೇವಿನ ತಳಿಗಳನ್ನು ಬೆಳೆಸಿದ್ದಾರೆ. ಪ್ರತಿ ಮುಂಗಾರಿನಲ್ಲಿ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಸೈಲೇಜ್ ಮಾಡಿ ಶೇಖರಿಸಿಡುವುದು ಇವರ ವೈಶಿಷ್ಟ್ಯ.
ರೈತರಿಗೆ, ಸ್ವಸಹಾಯ ಸಂಘದ ಸದಸ್ಯರುಗಳಿಗೆ, ಹೊರ ರಾಜ್ಯದ ರೈತರಿಗೆ, ಪಶುಸಂಗೋಪನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕುರಿ ಸಾಕುವ ತರಬೇತಿ ನೀಡುತ್ತಾರೆ. ಕುರಿಗಳ ಆರೋಗ್ಯ, ಮೂಲ ತಳಿಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಯಾವ ತಿಂಗಳಲ್ಲಿ ಸಂತಾನ ಕ್ರಿಯೆ ಮಾಡಿಸಬೇಕು, ಆಹಾರ, ಲಸಿಕೆ, ರೋಗಗಳನ್ನು ಕಂಡುಹಿಡಿಯುವುದು, ರಕ್ತ ಪರೀಕ್ಷೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡುತ್ತಾರೆ. ಇವರ ಫಾರಂಗೆ ದೇಶ ವಿದೇಶಗಳಿಂದ ರೈತರು, ಅಧಿಕಾರಿಗಳು ಹೇಗೆ ಇವರು ಕುರಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಮಾಡುತ್ತಿದ್ದಾರೆಂದು ಅರಿಯಲು ಭೇಟಿ ನೀಡುತ್ತಾರೆ.
1995 ರಲ್ಲಿ ಭಾರತ ಸರ್ಕಾರದ ಬೆಸ್ಟ್ ಶೀಪ್ ಬ್ರೀಡರ್ ಪ್ರಮಾಣಪತ್ರ ಗಳಿಸಿರುವ ಇವರು ಭಾರತದ ಪಶುಗಳ ಪ್ರದರ್ಶನದಲ್ಲಿ ತಮ್ಮ ತಳಿಗಳನ್ನು ಪ್ರದರ್ಶಿಸಿ ಬಹುಮಾನಗಳನ್ನು ಪಡೆದ್ದಿದಾರೆ. ಆಂದ್ರ ಸರ್ಕಾರದ ತಳಿ ವರ್ಧಕ ರೈತ ಪ್ರಮಾಣ ಪತ್ರ, ರಾಜ್ಯ ಸರ್ಕಾರದ 2007ರ ಕೃಷಿ ಪಂಡಿತ್ ಪ್ರಶಸ್ತಿ, 2008ರಲ್ಲಿ ಜಗಜೀವನರಾಂ ಕಿಸಾನ್ ಪುರಸ್ಕಾರಗಳು ಇವರ ಸಾಧನೆಗೆ ಸಂದಿವೆ. ಭಾರತ ಸರ್ಕಾರದ ಕುರಿ, ಮೇಕೆ ಮತ್ತು ಮೊಲ ಅಭಿವೃದ್ಧಿಯ ಕೇಂದ್ರ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯ ಸರ್ಕಾರದ ಪಶು ವೈದ್ಯ ವಿಶ್ವವಿದ್ಯಾನಿಲಯದ ಎಜುಕೇಷನ್ ಕೌನ್ಸಿಲ್ ಸದಸ್ಯರೂ ಆಗಿದ್ದಾರೆ. ಕೇಂದ್ರ ಕೃಷಿ ಮಂತ್ರಿ ಶರತ್ ಪವಾರ್ “ಹಾರ್ವೆಸ್ಟ್ ಆಫ್ ಹೋಪ್” ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ಪ್ರಧಾನ ಮಾಡಿದ್ದಾರೆ.
ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಬ್ಯಾಂಕಿನಲ್ಲಿ ಹಣವಿದ್ದಂತೆ. ವಿದ್ಯಾವಂತ ಯುವಕರು ಕೈಗೊಳ್ಳಬಹುದಾದ ಲಾಭದಾಯಕ ಉದ್ದಿಮೆಯಿದು. ರೈತರು ತಮ್ಮ ಶಕ್ತ್ಯಾನುಸಾರ ಕುರಿ ಸಾಕುವುದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನುತ್ತಾರೆ ವೀರಕೆಂಪಣ್ಣನವರು.

ವೆಂಕಿಸ್ ಜ್ಯೂಸ್ ಸೆಂಟರ್

0

ಶಿಡ್ಲಘಟ್ಟ ತಾಲ್ಲೂಕು ಕಛೇರಿಯ ಮುಂಭಾಗ ಕಾಣಸಿಗುವ ವೆಂಕಿಸ್ ಜ್ಯೂಸ್ ಸೆಂಟರನ ಕಬ್ಬಿನ ಹಾಲು ಇಲ್ಲಿನ ಜನರ ಮೆಚ್ಚುಗೆ ಗಳಿಸುತ್ತಿದೆ.

ಆಶಾಕಿರಣ ಅಂಧ ಮಕ್ಕಳ ಶಾಲೆಗೆ SSLC ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ

0

ಶಿಡ್ಲಘಟ್ಟದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
1992 ರಿಂದ ಪ್ರಾರಂಭವಾದ ಅಂಧಮಕ್ಕಳ ಶಾಲೆಯು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂಧ ಮಕ್ಕಳಿಗೆ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದೆ. 2009 ರಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮೊದಲು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಬರೆದರು. ಅಂದಿನಿಂದ ಈ ಶಾಲೆಯು ಪ್ರತಿ ವರ್ಷ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು ಮಾದರಿಯಾಗಿದೆ.
‘ಕಣ್ಣಿರದಿದ್ದರೂ ಮಕ್ಕಳಲ್ಲಿ ಅಪಾರ ಪ್ರತಿಭೆಯನ್ನು ಹೊಂದಿರುತ್ತಾರೆ. ಹೆಚ್ಚು ಅಂಕಗಳನ್ನು ಪಡೆದು ಮಕ್ಕಳು ಆತ್ಮವಿಶ್ವಾಸದಿಂದ ಮುಂದೆ ಟೀಚರಾಗುತ್ತೇನೆ, ಸ್ವಂತ ಉದ್ಯೋಗವನ್ನು ಕೈಗೊಳ್ಳುತ್ತೇನೆ ಎಂದೆಲ್ಲಾ ಹೇಳುವುದನ್ನು ಕಂಡಾಗ ಹೆಮ್ಮೆ ಎನಿಸುತ್ತದೆ. ಇಲ್ಲಿಯವರೆಗೂ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ 45 ಅಂಧ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಶಾಲೆಯ ಸಂಯೋಜಕ ಗೋಪಾಲಯ್ಯ ತಿಳಿಸಿದರು.
ಈ ಬಾರಿ ಒಂಭತ್ತು ಮಂದಿ ಅಂಧ ಮಕ್ಕಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು:
ಗೌತಮಿ(503), ಚಿಕ್ಕರೆಡ್ಡಪ್ಪ(499), ಎಲ್‌.ಗಾಯಿತ್ರಿ(475), ರಾಧಾ(458), ವೈ.ವಿ.ನಂದಿನಿ(457), ಎಲ್‌.ಮಮತಾ(448), ಗಾಯಿತ್ರಿ(446),ಚಿಟ್ಟಮ್ಮ(392), ಎಂ.ಭವ್ಯ(382).

ಬೇಸಿಗೆ ರಜೆಯಲ್ಲೂ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ

0

ಬೇಸಿಗೆ ರಜೆಯಲ್ಲೂ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ರಿಂಗಣಿಸುತ್ತಿದೆ. ಹಾಗೆಂದು ಇಲ್ಲೇನೂ ಬೇಸಿಗೆ ಶಿಬಿರವನ್ನು ಏರ್ಪಡಿಸಿಲ್ಲ. ಮಕ್ಕಳೇ ಸ್ವಯಂಪ್ರೇರಿತರಾಗಿ ಶಾಲೆಯ ಆವರಣದೊಳಕ್ಕೆ ಬರುತ್ತಾರೆ.
ಕೇರಂ, ಅಳಗುಳಿಮನೆ, ಕ್ರಿಕೆಟ್‌, ಮರಕೋತಿಯಾಟ, ಗಿಲ್ಲಿದಾಂಡ್ಲು, ಕುಂಟೆಬಿಲ್ಲೆ, ಶಟಲ್‌ ಕಾಕ್‌ ಮುಂತಾದ ಆಟಗಳನ್ನು ಮನಸೋ ಇಚ್ಛೆ ಆಡುತ್ತಾರೆ. ಶಾಲೆಯ ಆವರಣದಲ್ಲಿ ಕೆಂಪಾದ ಹೂವರಳಿಸಿಕೊಂಡು ಗುಲ್‌ಮೊಹರ್‌ನ ಸಾಲು ಮರಗಳು ಮಕ್ಕಳ ಮರಕೋತಿ ಆಟಕ್ಕೆ ಮತ್ತು ಉಯ್ಯಾಲೆ ಜೀಕಲಿಕ್ಕೆ ಬಳಕೆಯಾಗುತ್ತಿವೆ. ಕೆಂಪು ಹೂಗಳ ಕೆಳಗೆ ನಲಿವ ಮಕ್ಕಳ ಆಟವನ್ನು ನೋಡುವುದೇ ಒಂದು ಆನಂದ.
ಮಧ್ಯಾನ್ಹವಾಗುತ್ತಿದ್ದಂತೆ ಶಿಕ್ಷಕರು ಪೀಪಿ ಊದುತ್ತಿದ್ದಂತೆಯೇ ಸಾಲಾಗಿ ಬಂದು ಕೈಕಾಲು ಹಾಗೂ ತಮ್ಮ ತಟ್ಟೆ ಲೋಟಗಳನ್ನು ತೊಳೆದುಕೊಂಡು ಬಿಸಿಬಿಸಿ ಮುದ್ದೆಯನ್ನು ಅನ್ನ ಸಾರನ್ನು ಸೇವಿಸುತ್ತಾರೆ. ಯಾವುದಾದರೂ ಮಗುವಿನ ಹುಟ್ಟಿದ ದಿನವಿದ್ದಲ್ಲಿ ಆವತ್ತು ಮಕ್ಕಳಿಗೆಲ್ಲಾ ಪಾಯಸದ ಔತಣ.
ಆಟದ ನಡುವೆ ಶಿಕ್ಷಕರು ಮಕ್ಕಳಿಗೆ ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ ತರಗತಿಗಳನ್ನೂ ನಡೆಸುತ್ತಿದ್ದಾರೆ. ಕಂಪ್ಯೂಟರಿನಲ್ಲಿ ಬೆರಳಚ್ಚು ಮತ್ತು ಚಿತ್ರ ಬಿಡಿಸುವುದರಲ್ಲಿ ಮಕ್ಕಳು ಈಗಾಗಲೇ ಪಳಗಿದ್ದಾರೆ. ಶಿಕ್ಷಣ ಇಲಾಖೆಯ ವಿವಿಧ ಸಿಡಿಗಳನ್ನು ಮತ್ತು ಉತ್ತಮ ಶೈಕ್ಷಣಿಕ ಸಂಬಂಧಿ ಸಾಕ್ಷ್ಯಚಿತ್ರಗಳನ್ನೂ ತೋರಿಸುತ್ತಾರೆ. ಮಕ್ಕಳು ಕಂಪ್ಯೂಟರನ್ನು ತಾವೇ ಬಳಸುವಷ್ಟು ಶಕ್ತರಾಗಿದ್ದಾರೆ. ಇಂಗ್ಲಿಷ್‌ ಕಲಿಕೆ ಕೂಡ ನಡೆಸಲಾಗುತ್ತಿದೆ.
‘ನಮ್ಮ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದು ಪೋಷಕರೊಬ್ಬರು ಒಮ್ಮೆ ಸಲಹೆ ನೀಡಿದರು. ಅದೇ ವಿಷಯವನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರ ಮುಂದೆ ಪ್ರಸ್ತಾಪಿಸಿದೆವು. ತಕ್ಷಣವೇ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದವರು ದೇಣಿಗೆ ನೀಡುವ ಮೂಲಕ ಶಾಲೆಗೆ ಕಂಪ್ಯೂಟರನ್ನು ತಂದೆವು. ರಜೆ ಸಮಯದಲ್ಲಿ ಈಗದರ ಬಳಕೆ ಹೆಚ್ಚಾಗಿ ಆಗುತ್ತಿದೆ. ಶಾಲೆಗೆ ರಜೆಯಿದ್ದರೂ ಸುಮಾರು 70 ರಿಂದ 80 ಮಕ್ಕಳು ಬಂದೇ ಬರುತ್ತಾರೆ. ಹೇಗಿದ್ದರೂ ಆಡುತ್ತಾರೆ ಮತ್ತು ಬಿಸಿಯೂಟ ಕೂಡ ಇರುತ್ತದೆ. ಅದರೊಂದಿಗೆ ಮಕ್ಕಳಿಗೆ ಕೊಂಚ ಕಲಿಕೆಯೂ ಆಗಲೆಂದು ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ ಕಲಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.
‘ನಮಗೆ ರಜೆ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ. ಬೆಳಿಗ್ಗೆ ಬಂದರೆ ನಾವು ಮನೆಗೆ ಹೋಗುವುದು ಸಂಜೆಯೇ. ನಮ್ಮ ಸ್ನೇಹಿತರು ಇರುವುದರಿಂದ ಎಲ್ಲಾ ತರಹದ ಆಟಗಳನ್ನೂ ಆಡುತ್ತೇವೆ. ಊಟ ಮಾಡುತ್ತೇವೆ. ಕಂಪ್ಯೂಟರಿನಲ್ಲಿ ಆಡುತ್ತೇವೆ. ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಗಿಂತ ನಮಗೆ ಶಾಲೆಯೇ ಇಷ್ಟ‘ ಎಂದು ಶಾಲೆಯ ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ನಯನ ತಿಳಿಸಿದರು.

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹಜಯಂತಿಯ ಪೌರ್ಣಿಮೆ ಪೂಜೆ

0

ಪಟ್ಟಣದ ಶಂಕರಮಠ ಬೀದಿಯಲ್ಲಿರುವ ಶಾಮಣ್ಣನ ಬಾವಿಯ ಬಳಿಯ ಪುರಾತನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹಜಯಂತಿಯ ಪೌರ್ಣಿಮೆ ಪೂಜೆಯನ್ನು ಬುಧವಾರ ಆಚರಿಸಲಾಯಿತು.
ಐದು ಗರ್ಭಗುಡಿಗಳಿರುವ ಪಟ್ಟಣದ ಏಕೈಕ ಕಲ್ಯಾಣಿ ಇರುವ ಪುರಾತನ ದೇವಾಲಯದಲ್ಲಿ ಸೂರ್ಯನಾರಾಯಣಸ್ವಾಮಿ, ಗಣಪತಿ, ಸುಬ್ರಮಣ್ಯಸ್ವಾಮಿ, ಶ್ರೀಕಂಠೇಶ್ವರ, ಗಿರಿಜಾಂಬ, ಚಂಡಿಕೇಶ್ವರ, ಲಕ್ಷ್ಮೀನರಸಿಂಹಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ವಿಗ್ರಹಗಳಿವೆ.
ಲಕ್ಷ್ಮೀನರಸಿಂಹಸ್ವಾಮಿ ಜಯಂತಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆಯನ್ನು ನಡೆಸಲಾಗಿದ್ದು, ಪಾರಣೆಯ ಪೂಜೆಯ ಪ್ರಯುಕ್ತ ಬುಧವಾರವೂ ವಿಶೇಷ ಪೂಜೆಯನ್ನು ಆಯೋಜಿಸಿದ್ದರಿಂದ ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವರುಗಳಿಗೆಲ್ಲಾ ವಿವಿಧ ಹೂಗಳಿಂದ ಅಲಂಕರಿಸಿದ್ದು, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.
ಪುರಸಭಾ ಸದಸ್ಯೆ ಸುಗುಣಾ ಲಕ್ಷ್ಮಿನಾರಾಯಣ್‌, ಎ.ಎಸ್‌.ರವಿ, ಅನಂತಕೃಷ್ಣ, ಎಸ್‌.ವಿ.ನಾಗರಾಜರಾವ್‌, ವಿ.ಕೃಷ್ಣ, ಅರ್ಚಕ ರಾಜಶೇಖರ್‌, ಸಾಯಿಈಶ ಮತ್ತಿತರರು ಹಾಜರಿದ್ದರು.

ಬಾವಲಿಗಳು ಮತ್ತು ಗ್ರಾಮಸ್ಥರ ನಡುವಿನ ಸಹಬಾಳ್ವೆ

0

ಜೀವಜಂತುಗಳಿರುವ ಕಾಡು, ಮಾನವನ ವಾಸಸ್ಥಳವಾದ ಊರು ಒಂದಕ್ಕೊಂದು ಬೆಸೆದುಕೊಂಡಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಸಾಮರಸ್ಯ ಇಲ್ಲದಿದ್ದರೆ ಅನೇಕ ಜೀವಿಗಳು ನಾಶವಾಗುತ್ತವೆ.
ಬದುಕಿಗಾಗಿ ನಡೆಯುವ ಇಂಥ ಸಹಬಾಳ್ವೆಯು ಬಾವಲಿಗಳು ಮತ್ತು ಗ್ರಾಮಸ್ಥರ ನಡುವೆ ತಾಲ್ಲೂಕಿನ ಕೋಟಹಳ್ಳಿ ಬಳಿ ಏರ್ಪಟ್ಟಿದೆ. ಪಟ್ಟಣದಿಂದ ದಿಬ್ಬೂರಹಳ್ಳಿಗೆ ಹೋಗುವ ದಾರಿಯಲ್ಲಿ ಕೋಟಹಳ್ಳಿ ಬಳಿ ರಸ್ತೆ ಬದಿಯಿರುವ ನಾಲ್ಕು ಆಲದ ಮರ ಮತ್ತು ಒಂದು ಬೇವಿನ ಮರ ನೂರಾರು ಬಾವಲಿಗಳ ವಾಸಸ್ಥಾನವಾಗಿದೆ. ಮೊದಲು ಒಂದು ಮರದಲ್ಲಿ ವಾಸಿಸುತ್ತಿದ್ದ ಬಾವಲಿಗಳು ಸಂತಾನೋತ್ಪತ್ತಿ ಮಾಡುತ್ತಾ ಈಗ ಐದು ಮರಗಳಿಗೆ ವಿಸ್ತರಿಸಿವೆ. ಇದಕ್ಕೆ ಮುಖ್ಯ ಕಾರಣ ಕೋಟಹಳ್ಳಿ ಮತ್ತು ಶೆಟ್ಟಹಳ್ಳಿ ಗ್ರಾಮಸ್ಥರು ಈ ಬಾವಲಿಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುತ್ತಿರುವುದು. ಹಾರಾಡುವ ಸಸ್ತನಿಯಾದ ಬಾವಲಿ ಉದ್ದುದ್ದ ಕೈಕಾಲುಗಳು, ಜೋತಾಡುವ ರೆಕ್ಕೆಯ ಪರೆ, ದೊಡ್ಡ ಕಿವಿ, ತೀಕ್ಷ್ಣ ಕಣ್ಣುಗಳು ಮತ್ತು ನರಿಯನ್ನು ಹೋಲುವ ಮುಖದಿಂದಾಗಿ ಕುರೂಪಿಯಾಗಿ ಕಾಣುತ್ತದೆ. ಆದರೆ ಕೋಟಿಗಟ್ಟಲೆ ಹಾನಿಕಾರಕ ಕೀಟಗಳನ್ನು ತಿಂದು ರೈತರ ಬೆಳೆಗೆ ರಕ್ಷಣೆ ಒದಗಿಸುತ್ತದೆ ಮತ್ತು ಇದರ ಮಲ ಉತ್ತಮ ಗೊಬ್ಬರ ಕೂಡ. ಇವು ಸಮೂಹ ಜೀವಿಗಳು. ಹಗಲ್ಲೆಲಾ ತಲೆಕೆಳಗಾಗಿ ನಿದ್ರಿಸುತ್ತಿದ್ದು ಮುಸ್ಸಂಜೆಯ ಸಮಯದಲ್ಲಿ ಆಹಾರ ಸಂಪಾದನೆಗೆ ಹೊರಡುವ ಬಾವಲಿ ನಿಶಾಚರ ಜೀವಿ.
ಬಾವಲಿಯ ರಾತ್ರಿ ಹಾರಾಟಕ್ಕೆ ಸಹಾಯಕವಾಗುವುದು ಅದರ ವಿಶಿಷ್ಟವಾದ ಧ್ವನಿಪೆಟ್ಟಿಗೆ ಮತ್ತು ಕಿವಿ. ಅದು ನಿರ್ದಿಷ್ಟ ಸಮಯಗಳಲ್ಲಿ ೧೦,೦೦೦ ದಿಂದ ೫೦,೦೦೦ದ ತನಕ ಆವರ್ತಾಂಕವುಳ್ಳ ಧ್ವನಿಯ ಸ್ಪಂದನಗಳನ್ನು ಹೊರಡಿಸುತ್ತದೆ. ಸುತ್ತಮುತ್ತಲ ವಸ್ತುಗಳಿಂದ ಬಂದ ಪ್ರತಿಧ್ವನಿಯನ್ನು ಕಿವಿಗಳು ವಿಶ್ಲೇಷಿಸುವುದರಿಂದ ಕತ್ತಲಲ್ಲಿ ಬಾವಲಿ ಅಡೆತಡೆ ಮತ್ತು ಆಹಾರವನ್ನು ಗುರುತಿಸುತ್ತದೆ. ಈ ತಂತ್ರಜ್ಞಾನವನ್ನು ರಾಡಾರ್ ಮತ್ತು ಸೋನಾರ್ ಉಪಕರಣಗಳಲ್ಲಿ ಕಾಣಬಹುದು.
‘ಹಲವಾರು ವರ್ಷಗಳಿಂದ ಈ ಬಾವಲಿಗಳು ಇಲ್ಲಿವೆ. ಮೊದಲು ಕಡಿಮೆಯಿದ್ದವು. ಈಗ ಹೆಚ್ಚಾಗಿವೆ. ಇವುಗಳಿಂದ ನಮಗೇನೂ ತೊಂದರೆಯಿಲ್ಲ. ಬದಲಿಗೆ ಬೆಳೆಗಳಿಗೆ ತೊಂದರೆ ಮಾಡುವ ಕೀಟಗಳನ್ನು ತಿಂದು ಸಹಾಯ ಮಾಡುತ್ತವೆ. ಬಾವಲಿಗಳನ್ನು ಬೇಟೆಯಾಡಲು ಇಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಕೋಟಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.

ಜೀರಂಗಿ ಮೇಳದಲ್ಲಿ ಪವಾಡ ರಹಸ್ಯ ಬಯಲು

0

ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಈಧರೆ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ‘ಜೀರಂಗಿ ಮೇಳ’ ಮಕ್ಕಳ ಬೇಸಿಗೆ ಶಿಬಿರದಲ್ಲಿ ಶನಿವಾರ ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಎಂ.ಎ.ರಾಮಕೃಷ್ಣಪ್ಪ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮವನ್ನು ನೀಡಿ ಮಕ್ಕಳಿಗೆ ವೈಜ್ಞಾನಿಕ ವಿವರಣೆಗಳನ್ನು ನೀಡಿದರು.
ನಾಲಿಗೆಯಿಲ್ಲದ ಗಂಟೆಯಿಂದ ಶಬ್ದ ಮಾಡುವುದು, ತ್ರಿಶೂಲದಿಂದ ನಾಲಿಗೆ ಚುಚ್ಚಿಕೊಳ್ಳುವುದು, ಖಾಲಿ ಬಾಟಲಿಯಿಂದ ಪೆನ್ಸಿಲ್‌ ಹೊರತೆಗೆಯುವುದು, ಹಗ್ಗವನ್ನು ತುಂಡು ಮಾಡಿ ಪುನಃ ಜೋಡಿಸುವುದು ಮುಂತಾದ ಪ್ರದರ್ಶನಗಳನ್ನು ನೀಡಿ ಅವುಗಳ ಹಿಂದಿನ ವೈಜ್ಞಾನಿಕ ರಹಸ್ಯವನ್ನು ವಿವರಿಸಿದರು. ಜನರಿಗೆ ಈ ರೀತಿಯ ಪವಾಡಗಳ ಮೂಲಕ ವಂಚಿಸುವವರ ಬಗ್ಗೆಯೂ ಹೇಳಿ ಮೋಸ ಹೋಗದಂತೆ ಕಿವಿಮಾತನ್ನು ಹೇಳಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಿದರು.
ಈಧರೆ ತಿರುಮಲ ಪ್ರಕಾಶ್‌, ಮೋಹನ್‌, ವೇಣುಗೋಪಾಲ್‌, ಮಂಜುನಾಥ್‌, ನಾಗಭೂಷಣ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟದಲ್ಲಿ ವಾಸವಿ ಜಯಂತಿ

0

ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ವಾಸವಿ ಜಯಂತಿಯ ಪ್ರಯುಕ್ತ ಆರ್ಯವೈಶ್ಯ ಮಂಡಳಿಯ ವತಿಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜಾ ವಿಧಿಗಳಲ್ಲಿ ಅಗ್ರೋದಕಾಕರಣ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ದೇವೀ ಸಪ್ತಶತಿ ಪಾರಾಯಣ, ಕಳಶಸ್ಥಾಪನೆ, ವಾಸವಿ ನವಗ್ರಹ ಕಲ್ಪೋಕ್ತ ಹೋಮಾದಿಗಳು, ಪೂರ್ಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ಗಣಪತಿ, ಕನ್ನಿಕಾಪರಮೇಶ್ವರಿ, ವಾಸವಿದೇವಿ ಮತ್ತು ಆಂಜನೇಯ ದೇವರುಗಳಿಗೆ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಮೂರು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪ್ರತಿದಿನವೂ ಅಭಿಷೇಕ, ಲಲಿತಾ ಸಪ್ತಶತಿ ಪಾರಾಯಣ, ವಿಶೇಷ ಅಲಂಕಾರಗಳನ್ನು ಮಾಡಿದ್ದು, ಭಕ್ತರಿಗೆ ತೀರ್ಥಪ್ರಸಾದಗಳನ್ನು ವಿತರಿಸಲಾಗುತ್ತಿತ್ತು. ವಾಸವಿ ದೇವಿಗೆ ಉಯ್ಯಾಲೋತ್ಸವವನ್ನೂ ನಡೆಸಲಾಯಿತು.
ಋತ್ವಿಜ ವಿ.ನಾಗರಾಜಶರ್ಮ, ಅರ್ಚಕರಾದ ಎಸ್‌,ಸತ್ಯನಾರಾಯಣರಾವ್‌, ವೈ.ಎನ್‌.ದಾಶರಥಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಜಿ.ನಾಗೇಂದ್ರ, ವಿ.ರಾಧಾಕೃಷ್ಣಯ್ಯಶೆಟ್ಟಿ, ಎಲ್‌.ವಿ.ವಿ.ಗುಪ್ತ, ಎಸ್‌.ಎನ್‌.ಸತ್ಯನಾರಾಯಣಶೆಟ್ಟಿ, ಕೆ.ವಿ.ಎಲ್‌.ಪ್ರಸಾದ್‌, ಕಾಶಿನಾಥ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪಿ.ಎನ್‌.ಗಜಲಕ್ಷ್ಮಿ, ಜಯಶ್ರೀ, ಅರುಣಾ, ಗಾಯಿತ್ರಿ, ಪ್ರತಿಮಾ, ವಾಸವಿ ಯುವಜನ ಸಂಘದ ಅಧ್ಯಕ್ಷ ಎ.ಎನ್‌.ಕೇದಾರನಾಥ್‌, ವಿ.ರಾಜೇಂದ್ರಪ್ರಸಾದ್‌, ಸಂತೋಷ್‌, ಮುರಳಿಕೃಷ್ಣ, ಸಂದೀಪ್‌ರಾಜ್‌, ಟಿ.ಕೆ.ಅರವಿಂದ್‌ ಮತ್ತಿತರರು ಹಾಜರಿದ್ದರು.

ಶಿಡ್ಲಘಟ್ಟದ ಮುಸ್ಸಂಜೆಯ ಮೆರುಗು

0

ಶುಕ್ರವಾರ 09/05/2014 ರಂದು ಶಿಡ್ಲಘಟ್ಟದ ರೈಲ್ವೆ ಮೇಲ್ಸೇತುವೆಯಿಂದ ಮುಸ್ಸಂಜೆಯ ದೃಶ್ಯಾವಳಿ ಕಂಡದ್ದು ಹೀಗೆ

ಸುಡುವ ನೆಲಕೆ ತಂಪೆರೆದ ಮಳೆರಾಯ

0

ಗುರುವಾರ 08/05/2014 ಮಧ್ಯಾಹ್ನ ಆಗಮಿಸಿದ ಮಳೆರಾಯ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಶಿಡ್ಲಘಟ್ಟಕ್ಕೆ ತಂಪೆರೆದ.

ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ

0

ತಾಲ್ಲೂಕಿನ ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ, ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದ ವಾರ್ಷಿಕೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಪುರಾತನ ನಗರೇಶ್ವರ ದೇವಾಲಯದಲ್ಲಿ ಬುಧವಾರ ಸಂಜೆಯಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಅಗ್ರೋಧಕ ಗಂಗಾಪೂಜೆ, ಗಣಪತಿಪೂಜೆ, ವರುಣ ವಾಸ್ತುಪೂಜೆ, ನಾಂದಿ, ಋತ್ವಿಗಾವರಣ, ರಕ್ಷಾಬಂಧನ, ಅಸ್ತ್ರರಾಜ ಪೂಜೆ, ಮೃತ್ರಂಗರಣ, ಅಂಕುರಾರ್ಪಣೆ, ವಾಸ್ತುಹೋಮ, ಗಣಪತಿಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಗುರುವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜೆಗಳಲ್ಲಿ ಭಕ್ತರೆಲ್ಲ ಪಾಲ್ಗೊಂಡಿದ್ದರು. ಗಣಪತಿ ಪೂಜೆ, ಸರ್ವದೇವತಾ ಕಳಶಗಳ ಪೂಜೆ, ನವಗ್ರಹ ಪೂಜೆ, ಪ್ರಧಾನ ಕಳಶಗಳ ಪೂಜೆ, ಧ್ವಜಾರೋಹಣ, ಮೂಲದೇವರಿಗೆ ರುದ್ರಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ ನಂತರ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಲಾಯಿತು. ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
‘ನಗರ್ತ ಮಂಡಳಿ ವತಿಯಿಂದ ಆಯೋಜಿಸಿರುವ ದೇವರ ಕಲ್ಯಾಣೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನ ಆಚರಣೆಯ ಉದ್ದೇಶ ದೇವರ ಅನುಗ್ರಹ ಎಲ್ಲರ ಮೇಲೂ ಆಗಿ ಮಳೆ ಬೆಳೆ ಕಾಲಕಾಲಕ್ಕೆ ಆಗಲಿ ಎಂಬುದಾಗಿದೆ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಪೂಜಾ ಕಾರ್ಯಕ್ರಮಗಳು ಸದ್ಭಾವನೆಯಿಂದ ಕೂಡಿದ್ದು, ಎಲ್ಲರ ಪಾಲ್ಗೊಳ್ಳುವಿಕೆಯಿಂದ ಅರ್ಥಪೂರ್ಣವಾಗಿದೆ’ ಎಂದು ಶಾಸಕ ಎಂ.ರಾಜಣ್ಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಳಿಸಿದರು.
ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್‌, ಕಾರ್ಯದರ್ಶಿ ಕೆ.ಎಂ.ವಿನಾಯಕ, ಕೆ.ಸಿ.ಸುರೇಶ್‌ಬಾಬು, ಆರ್‌.ಮಲ್ಲಿಕಾರ್ಜುನ, ಎಸ್‌.ನಾಗರಾಜ್‌, ನಗರ್ತ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಸುರೇಶ್‌ಬಾಬು, ಉಷಾ ನಾಗರಾಜ್‌, ರೂಪಾ, ವಿದ್ಯಾ, ಮುಕ್ತಾಂಬ, ಶುಭಾ, ನಗರ್ತ ಯುವಕ ಮಂಡಳಿ ಅಧ್ಯಕ್ಷ ಮಂಜುನಾಥ್‌, ದೇವರಾಜ್‌, ಮುಖೇಶ್‌, ನವೀನ್‌, ಅನಿಲ್‌ಕುಮಾರ್‌, ರೋಹಿತ್‌, ರೋಹನ್‌ ಆರ್‌.ಗಂಧರ್ವ, ಮಹೇಶ್‌, ಶಿವಶಂಕರ್‌, ಭರತ್‌, ಮುರಳಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ.ಕೆ.ಚಂಗಲ್‌ರಾವ್ ನಿಧನ.

0

ಕಳೆದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಬಚ್ಚಹಳ್ಳಿಯ ಬಿ.ಕೆ.ಚಂಗಲ್‌ರಾವ್(೯೪)ರವರು ಬುಧವಾರ ಬೆಳಗ್ಗೆ ೫ ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಐವರು ಪುತ್ರಿಯರು, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುಟ್ಟೂರು ಬಚ್ಚಹಳ್ಳಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಿತು.
ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಹಾರ್‍ನಳ್ಳಿ ಅಶೋಕ್, ಶಾಸಕ ಎಂ.ರಾಜಣ್ಣ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪಾರ ಬಂಧು ಬಳಗ, ಅಭಿಮಾನಿಗಳ ಸಾಕ್ಷಿಯಲ್ಲಿ ಅಂತಿಮ ಸಂಸ್ಕಾರದ ವಿದಿವಿಧಾನಗಳನ್ನು ಪೂರೈಸಲಾಯಿತು.

ಶ್ರೀ ಬಿ.ಕೆ.ಚಂಗಲ್‌ರಾವ್ ರ ಕುರಿತಾದ ಲೇಖನವನ್ನು ಇಲ್ಲಿ ಓದಬಹುದು

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ.ಕೆ.ಚಂಗಲ್‌ರಾವ್

0

‘ತಾಲ್ಲೂಕು ಕಚೇರಿ ಮುಂದೆ ಸತ್ಯಾಗ್ರಹ ಕುಳಿತಿದ್ದೆವು. ನಾನು ಇನ್ನಿತರೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹರತಾಳ ಮಾಡುತ್ತಿದ್ದಾಗ ಅಲ್ಲಿಗೆ ಡಿಸಿ ಜಾರ್ಜ್ ಮ್ಯಾಥ್ಯೂನ್ ಹಾಗೂ ಎಸ್‌ಪಿ ಜೈಸಿಂಗ್ ಬಂದು ನಮ್ನನ್ನು ಸತ್ಯಾಗ್ರಹ ಬಿಡುವಂತೆ ಹೇಳಿದರು. ನಾವು ಒಪ್ಪದೆ ಸತ್ಯಾಗ್ರಹ ಮುಂದುವರೆಸಿದಾಗ ಬ್ರಿಟೀಷ್ ಪೊಲೀಸರ ಬಂದೂಕಿನಿಂದ ಹಾರಿದ ಗುಂಡಿಗೆ ಭಕ್ತರಹಳ್ಳಿಯ ಕುಂಬಾರದೊಡ್ಡಿ ನಾರಾಯಣಪ್ಪ ಬಲಿಯಾಗಿದ್ದು ಇನ್ನೂ ನನ್ನ ಕಣ್ಣೆದುರಿಗೆ ಕಟ್ಟಿದಂತಿದೆ’ ಎಂದು ಸ್ವಾತಂತ್ರ್ಯ ಹೋರಾಟದ ದಿನಗಳನ್ನುನೆನೆಸಿಕೊಂಡು ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನೂ ಕಂಡ ಬಚ್ಚಹಳ್ಳಿಯ ಚಂಗಲ್‌ರಾವ್ ತನ್ನ ಕಳೆದ ಹೋರಾಟದ ದಿನಗಳ ಬಗ್ಗೆ ವಿವರಿಸುತ್ತಿದ್ದರು.
ನನಗೆ ಜನವಾಣಿ ಪತ್ರಿಕೆಯು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ನೀಡಿತಲ್ಲದೆ ಆಗಿನ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಪುರದ ಜಿ.ನಾರಾಯಣಗೌಡರ ಸಂಪರ್ಕ ಕೂಡ ನೇರವಾಗಿ ಹೋರಾಟಕ್ಕೆ ದುಮುಕಲು ಕಾರಣವಾಯಿತು. ೧೯೪೧ನೇ ವರ್ಷ ಇರಬೇಕು. ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ನಾನು ಸೇರಿದಂತೆ ಮಳ್ಳೂರಿನ ಪಾಪಣ್ಣ, ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ, ಕುಂಬಾರದೊಡ್ಡಿ ನಾರಾಯಣಪ್ಪ, ಜಿ.ನಾರಾಯಣಗೌಡರು, ವೀರಪ್ಪ, ಕೆ.ಎಂ.ನಂಜುಂಡಪ್ಪ, ಕಂಬದಹಳ್ಳಿಯ ಮುನಿಸ್ವಾಮಪ್ಪ, ಮಳಮಾಚನಹಳ್ಳಿಯ ದ್ಯಾವಪ್ಪ ಇನ್ನಿತರರು ನೇತೃತ್ವದಲ್ಲಿ ಕೊತ್ತನೂರು, ತಿಪ್ಪೇನಹಳ್ಳಿ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಬೋದಗೂರು ಹಾಗೂ ಪಟ್ಟಣದ ನೂರಾರು ನಾಗರೀಕರು ಪಾಲ್ಗೊಂಡಿದ್ದೆವು. ಒಂದು ದಿನ ಕಂಬದಹಳ್ಳಿಯ ಮುನಿಸ್ವಾಮಿ ತನ್ನ ಸೈಕಲ್ ಮಾರಿ ಬುರುಗು ಖರೀದಿಸಿ ಅದನ್ನು ಪಟ್ಟಣದ ಎಲ್ಲಾ ಶಾಲೆಗಳ ಮಕ್ಕಳಿಗೂ ಹಂಚಿ ೧ ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಆ ಸತ್ಯಾಗ್ರಹಕ್ಕೆ ಕರೆದುಕೊಂಡು ಬಂದಿದ್ದ. ಸತ್ಯಾಗ್ರಹ ಜೋರಾಗಿತ್ತು.
ಅಲ್ಲಿಗೆ ಬಂದ ಎಸ್‌ಪಿ ಹಾಗೂ ಡಿಸಿ ಸತ್ಯಾಗ್ರಹವನ್ನು ಕೈ ಬಿಡುವಂತೆ ಹೇಳಿದರು. ನಾವು ಜಗ್ಗಲಿಲ್ಲ. ಆಗ ಎಸ್‌ಪಿ ಬಂದೂಕು ತೆಗೆದು ಗುಂಡು ಹಾರಿಸ್ತೇನೆ ಅಂತ ಬೆದರಿಸಿದರು. ಆಗ ಕಂಬದಹಳ್ಳಿಯ ಮುನಿಸ್ವಾಮಪ್ಪ ತನ್ನ ಅಂಗಿಯನ್ನು ಹರಿದು ಹಾಕಿ ನಿನ್ನ ಬಂದೂಕಿನಲ್ಲಿ ಗುಂಡು ಇದ್ದರೆ, ನಿನಗೆ ದೈರ್ಯ ಇದ್ದರೆ ನನಗೆ ಗುಂಡು ಹಾರಿಸು ಎಂದು ಎಸ್‌ಪಿಯವರಿಗೆ ಸವಾಲು ಹಾಕಿದರು. ಆಗ ಜತೆಯಲ್ಲಿದ್ದ ಎಸ್‌ಐ ನಾರಾಯಣ್ ಏಯ್ ಎಸ್ಪಿ ಸಾಹೇಬರಿಗೆ ನೀನು ರೋಫ್ ಹಾಕ್ತೀಯ ಅಂತ ಮುನಿಸ್ವಾಮಿಗೆ ಒಂದು ಬಾರಿಸಿದರು. ಆಗ ಮುನಿಸ್ವಾಮಿಯೂ ಎಸ್‌ಐ ನಾರಾಯಣ್‌ರಿಗೆ ಬಲವಾಗಿ ಗುದ್ದಿದರು. ಆಗ ನಾರಾಯಣ್‌ರ ಪೊಲೀಸ್ ಟೋಪಿ ಕೆಳಗೆ ಬೀಳುತ್ತಿದ್ದಂತೆ ಲಾಠಿ ಚಾರ್ಜ್ ಮಾಡಲಾಯಿತು. ಲಾಠಿ ಏಟಿನಿಂದ ಕಂಬದಹಳ್ಳಿಯ ಮುನಿಸ್ವಾಮಿಯ ತಲೆಗೆ ಬಲವಾದ ಏಟುಬಿದ್ದರೂ ಬದುಕುಳಿದ. ಆದರೆ ಬಂದೂಕಿನ ಗುಂಡಿಗೆ ಕುಂಬಾರದೊಡ್ಡಿ ನಾರಾಯಣಪ್ಪ ತೀವ್ರವಾಗಿ ಗಾಯಗೊಂಡರು. ಚಿಕ್ಕಬಳ್ಳಾಪುರದ ಸಿಎಸ್‌ಐ ಆಸ್ಪತ್ರೆಗೆ ಕರೆದೊಯ್ದರು ಕೂಡ ಬದುಕುಳಿಯಲಿಲ್ಲ.
ಇದರಿಂದ ರೊಚ್ಚಿಗೆದ್ದ ಜನ ಇಷ್ಟೆಲ್ಲಾ ರಾದ್ದಾಂತಕ್ಕೂ ಕಾರಣವಾದ ಎಸ್‌ಐ ನಾರಾಯಣ್‌ರ ಮನೆ ಮೇಲೆ(ಪಟ್ಟಣದ ಅಶೋಕ ರಸ್ತೆಯ ಕೊಂಡಪ್ಪನವರ ಮನೆ ಸಮೀಪದಲ್ಲಿ ಮನೆಯಿತ್ತು) ದಾಳಿ ನಡೆಸಿ ಲೂಠಿ ಮಾಡಿದರು. ಮೊದಲೆ ದಾಳಿಯ ಸುಳಿವು ಅರಿತಿದ್ದ ಎಸ್‌ಐ ನಾರಾಯಣ್‌ರ ಮನೆಯವರು ಮನೆಯಲ್ಲಿ ಎಲ್ಲವನ್ನೂ ಇದ್ದಹಾಗೆ ಬಿಟ್ಟು ಮನೆ ಬಿಟ್ಟು ಬಚ್ಚಿಟ್ಟುಕೊಂಡಿದ್ದರು. ಮನೆ ದರೋಡೆ ಹಾಗೂ ಕೊಲೆ ಯತ್ನದ ಮೇಲೆ ನನ್ನನ್ನು ಸೇರಿ ೩೦ಕ್ಕೂ ಹೆಚ್ಚು ಮಂದಿಯನ್ನು ಚಿಕ್ಕಬಳ್ಳಾಪುರದ ಜೈಲಿಗೆ ಅಟ್ಟಲಾಯಿತು. ೫೨ ದಿನ ಜೈಲುವಾಸ ಕಂಡು ಬೇಷರತ್ ಮೇಲೆ ಬಿಡುಗಡೆಯಾಗಿ ಬಂದೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಚಂಗಲರಾವ್‌ರವರು ಸ್ವಾತಂತ್ರ್ಯ ನಂತರ ಗಾಂಧೀಜಿವರ ಸ್ವಾವಲಂಬನೆಯ ಕರೆಗೆ ಒಗೊಟ್ಟು ಪಟ್ಟಣದಲ್ಲಿನ ತನ್ನ ಮನೆಯನ್ನು ತೊರೆದು ತಮ್ಮ ವಂಶಪಾರಂಪರ್‍ಯವಾಗಿ ಬಂದಿದ್ದ ಜೋಡಿ ಗ್ರಾಮ ಬಚ್ಚಹಳ್ಳಿಗೆ ಬಂದು ನೆಲೆಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಬದುಕುತ್ತಿದ್ದರು.

ಕೋಟೆ ಶ್ರೀ ಆಂಜನೇಯಸ್ವಾಮಿಯ 19ನೇ ವರ್ಷದ ವಾರ್ಷಿಕೋತ್ಸವ

0

ಶಿಡ್ಲಘಟ್ಟದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ 19ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಿ, ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವಿತರಣೆಯನ್ನು ನಡೆಸಿ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಮಾಡಲಾಯಿತು.

ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮ ಸಪ್ತಾಹ, 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮ ಯುವಕರ ಸಂಘದ ವತಿಯಿಂದ ಶ್ರೀರಾಮ ಸಪ್ತಾಹ ಮತ್ತು 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಮೂರು ದಿನಗಳ ಕಾಲ ನಡೆದ ಅಖಂಡ ಶ್ರೀರಾಮ ನಾಮ ಸಪ್ತಾಹವು ಸೋಮವಾರಕ್ಕೆ ಕೊನೆಗೊಂಡಿತು. ಹಗಲು ರಾತ್ರಿ ನಡೆದ ಭಜನೆಯ ಸಂದರ್ಭದಲ್ಲಿ ದೇವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಡಿದ್ದಲ್ಲದೆ, ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವಿತರಣೆಯನ್ನೂ ನಡೆಸಲಾಗುತ್ತಿತ್ತು. ಸೋಮವಾರ ಸಂಜೆ ತಂಬಿಟ್ಟು ದೀಪೋತ್ಸವವನ್ನು ಆಚರಿಸಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಮಹಿಳೆಯರು ದೀಪಗಳನ್ನು ತಂದು ದೇವರಿಗೆ ಪೂಜೆ ಸಲ್ಲಿಸಿದರು.
‘ಲೋಕಕಲ್ಯಾಣಕ್ಕಾಗಿ, ಕಾಲಕಾಲಕ್ಕೆ ಮಳೆ ಬೆಳೆ ಆಗಲೆಂಬ ಸದುದ್ದೇಶದಿಂದ ರಾಮಕೋಟಿ ಭಜನೆಯನ್ನು ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಪರಹಿತ ಚಿಂತನೆಯುಳ್ಳ ರಾಮನ ಅನುಗ್ರಹವಾಗಿ ನಮ್ಮೆಲ್ಲರ ಕಷ್ಟ ನಿವಾರಣೆಯಾಗಿ ನೆಮ್ಮದಿಯಿಂದ ಬದುಕುವಂತೆ ಪ್ರಾರ್ಥಿಸುತ್ತೇವೆ’ ಎಂದು ಶ್ರೀರಾಮ ಯುವಕರ ಸಂಘದವರು ತಿಳಿಸಿದರು.

ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾವನಾ ಮಹರ್ಷಿ ಜಯಂತ್ಯುತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ತಾಲ್ಲೂಕು ಪದ್ಮಶಾಲಿ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಚಿಂತಾಮಣಿ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಕಳಶಗಳಿಗೆ ಗಂಗಾಜಲವನ್ನು ತುಂಬಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಸ್ಥಾನಕ್ಕೆ ಬಂದು ಕಳಶಸ್ಥಾಪಿಸಿದರು. ನಂತರ ಭಾವನಾ ಮಹರ್ಷಿ ಮತ್ತು ಭದ್ರಾದೇವಿಯ ಕಲ್ಯಾಣೋತ್ಸವ ನಡೆಸಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಅನಂತರಾಮಯ್ಯ, ಬಿ.ಲಕ್ಷ್ಮೀನಾರಾಯಣಪ್ಪ, ಎ.ತಿಪ್ಪಯ್ಯ, ಎನ್‌.ಲಕ್ಷ್ಮೀನಾರಾಯಣ, ನಾಗರಾಜ್‌, ರಮೇಶ್‌, ಮೂರ್ತಿ, ವೆಂಕಟನಾರಾಯಣಯ್ಯ, ಅರ್ಚಕ ಬಿ.ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
 

ಪ್ರೀತಿಯಿಂದ www.sidlaghatta.com

0

ಪ್ರೀತಿಯ ಸ್ನೇಹಿತರೇ,
www.sidlaghatta.com ನ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಆತ್ಮೀಯ ಅಭಿನಂದನೆಗಳು.
www.sidlaghatta.com ನಮ್ಮ ಹೆಮ್ಮೆಯ ತಾಲ್ಲೂಕಿನ ಜನ, ಜೀವನ, ದೈನಂದಿನ ಆಗು ಹೋಗುಗಳ ಕುರಿತಾದ ಸುದ್ದಿ, ಸಂಗತಿಗಳನ್ನು ಕಂಪ್ಯೂಟರ್ ಹಾಗೂ ಮೊಬೈಲ್ ತಂತ್ರಜ್ಞಾನ ಮಾಧ್ಯಮದ ಮೂಲಕ ನಿಮ್ಮೆಲ್ಲರಿಗೂ ತಲುಪಿಸುವ ಒಂದು ಪ್ರಾಮಾಣಿಕ ಪ್ರಯತ್ನ. ಈ ಪ್ರಯತ್ನವನ್ನು ಪ್ರೀತಿಯಿಂದ ಸ್ವಾಗತಿಸಿ ಹಾರೈಸಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ಓದುಗ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು.
30 ದಿನಗಳನ್ನು ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಹರ್ಷವನ್ನು ಹಂಚಿಕೊಳ್ಳುತ್ತಾ ಮುಂಬರುವ ದಿನಗಳಲ್ಲಿ www.sidlaghatta.com ನ ಯೋಜನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.
ಈಗಾಗಲೇ ಕಂಪ್ಯೂಟರ್ ಹಾಗೂ ಮೊಬೈಲ್ ಮಾಧ್ಯಮಗಳಲ್ಲಿ www.sidlaghatta.com ಲಭ್ಯವಿದ್ದು, Internet ಸಂಪರ್ಕವಿರುವ ಯಾವುದೇ mobile handset/computer ನಿಂದ ಮಾಹಿತಿ ಪಡೆಯಲು ಸಾಧ್ಯವಿದೆ, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪ್ರತಿ ಲೇಖನದ “Comments” ವಿಭಾಗದಲ್ಲಿ ತಿಳಿಸಬಹುದು. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳಲು ಪ್ರಮುಖ ಅಂತರ್ಜಾಲ ತಾಣಗಳಾದ Facebook, Twitter, Google+ ಗಳ ಲಿಂಕ್ ಗಳನ್ನೂ ಸಹ ನೀಡಲಾಗಿದೆ.
Facebook (www.facebook.com/sidlaghatta) ಹಾಗೂ Twitter (www.twitter.com/HiSidlaghatta)ನಲ್ಲಿ www.sidlaghatta.com ನ ಪ್ರತಿಗಳಿದ್ದು, ನಿರಂತವಾಗಿ ಸಂಪರ್ಕದಲ್ಲಿರಲು ಅನುಕೂಲವಾಗುತ್ತದೆ.
ಈಗಾಗಲೇ www.sidlaghatta.com ಅನ್ನು WhatsApp ನಲ್ಲಿ ಪರಿಚಿಯಿಸಿದ್ದು ಎಲ್ಲಾ WhatsApp ಉಪಯೋಗಿಸುವ ಸ್ನೇಹಿತರು +919986904424 ಗೆ “HI” ಎಂದು ಕಿರುಸಂದೇಶ ‘Text/SMS’ ಕಳುಹಿಸುವ ಮೂಲಕ ಎಲ್ಲಾ ಶಿಡ್ಲಘಟ್ಟ ದ ದೈನಂದಿನ ವಿಚಾರಗಳ ಮಾಹಿತಿ ಪದೆಯಬಹುದಲ್ಲದೇ ನೀವೂ ಸಹ ನಿಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ Photos, Videos ಗಣನ್ನು www.sidlaghatta.com ಜೊತೆ ಹಂಚಿಕೊಳ್ಳಬಹುದು. ಈ ವಿಧಾನವು ಈಗಾಗಲೇ ನಿಮ್ಮೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನೀವೆಲ್ಲಾರೂ News, Photos, Videos ಗಣನ್ನು ಹಂಚಿಕೊಳ್ಳುತ್ತಿರುವುದು ಸಂತೋಷದ ಸಂಗತಿಯೇ ಸರಿ.
WhatsApp ಸೇವೆಯನ್ನು ಮತ್ತಷ್ಟು ಉಪಯುಕ್ತಗೊಳಿಸಲು ‘Emergency Service’ ಅನ್ನು ಪ್ರಾರಂಭಿಸಿದ್ದು, ಯಾವುದೇ ಸಾರ್ವಜನಿಕ ಸೇವೆಯ ಉಪಯುಕ್ತ ಸಂಖ್ಯೆಗಳನ್ನು ಇದರಿಂದ ಪಡೆಯಬಹುದಾಗಿದೆ. ಈ ಸೇವೆಯನ್ನು ಶೀಘ್ರದಲ್ಲಿಯೇ website ಹಾಗೂ social media ಮಾಧ್ಯಮಗಳಿಗೂ ವಿಸ್ತರಿಸಲಾಗುವುದು.
ನಮ್ಮ ಊರಿಗಾಗಿ, ಜನ ಸೇವೆಗಾಗಿ ನಮ್ಮ ಪೂರ್ವಜರ ಕೊಡುಗೆ ಅಪಾರ. ಅವರು ಬರೆದು, ಪ್ರಕಟಿಸಿದ ಪುಸ್ತಕ, ಪ್ರಕಟಣೆಗಳು ಅವರ ನಿಸ್ವಾರ್ಥ ಸೇವೆಯ ಪ್ರತೀಕ. ಅಂಥಹ ಎಷ್ಟೋ ಕೊಡುಗೆಗಳು ನಮ್ಮ ಇಂದಿನ ಜೀವನಶೈಲಿಗೂ ಮಾದರಿಯಾಗಿದೆ. ಅವರ ಪ್ರಯತ್ನಗಳನ್ನು ಸಾರ್ವಕಾಲಿಕಗೊಳಿಸಲು ನಾವುಗಳು ಧ್ಯೇಯಬಧ್ಧರಾಗಿದ್ದೇವೆ. www.sidlaghatta.com ನಮ್ಮ ಪೂರ್ವಜರ ಕೃತಿಗಳನ್ನು ತಂತ್ರಜ್ಞಾನದ ಸಹಾಯದಿಂದ Digitize ಮಾಡಿ, ಶೀಘ್ರದಲ್ಲಿಯೇ ಡಿಜಿಟಲ್ ಲೈಬ್ರರಿ (Digital Library)ಯನ್ನು ಪ್ರಾರಂಭಿಸುತ್ತಿದೆ.
ಈ ನಿಟ್ಟಿನಲ್ಲಿ ಆನೂರು ಶ್ರೀ ಎ ಎಮ್ ಮುನೇಗೌಡರ ‘ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕವನ್ನು ಮೊದಲ ಪ್ರಕಟಣೆಯಾಗಿ ಹೊರತರಲಿದೆ (ಆನೂರು ಶ್ರೀ ಎ ಎಮ್ ಮುನೇಗೌಡರ ಕುರಿತಾದ ಲೇಖನವನ್ನು ಇಲ್ಲಿ ಓದಬಹುದು). ಈ ವ್ಯವಸ್ಥೆಯ ಉಪಯೋಗವನ್ನು ಎಲ್ಲಾ ಸ್ನೇಹಿತರು website ಮೂಲಕ ಪಡೆಯಬಹುದು.
ಇನ್ನು ಮುಂಬರುವ ದಿನಗಳಲ್ಲಿ www.sidlaghatta.com ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಿದ್ದು, ನಮ್ಮ ಊರಿನ ಪ್ರತಿ ಸೇವೆಗೆ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಲಿದೆ.
ನಿಮ್ಮ ಅಭಿಪ್ರಾಯಗಳನ್ನು hi@sidlaghatta.com ಗೆ email ಮೂಲಕ ಕಳುಹಿಸಬಹುದು.
www.sidlaghatta.com ನಮ್ಮ ತಾಯ್ನೆಲ, ಜನ, ಜೀವನ ದ ಹಿರಿಮೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಒಂದು ಹೊಸ ಪ್ರಯತ್ನ. ಈ ಹೊಸ ಪ್ರಯತ್ನಕ್ಕೆ ಪ್ರತಿ ಹಂತದಲ್ಲಿಯೂ ಮೆಚ್ಚಿಗೆಯನ್ನು ವ್ಯಕ್ತಪಡಿಸಿ, ಸಲಹೆ ಸಹಕಾರಗಳೊಂದಿಗೆ ಹುರಿದುಂಬಿಸುತ್ತಿರುವ ನಿಮ್ಮಲ್ಲರಿಗೂ ಹೃತ್ಪೂರ್ವಕ ವಂದನೆಗಳು.
ಪ್ರೀತಿಯಿಂದ,
www.sidlaghatta.com ತಂಡ

ಕಣ್ಮರೆಯಾಗುತ್ತಿರುವ ಗ್ರಾಮೀಣ ಸೊಗಡು

0

ಬೇಸಿಗೆಯ ಬಿಸಿ ಕಡಿಮೆಯಾಗದಿದ್ದರೂ ಮಕ್ಕಳಿಗೆ ಬೇಸಿಗೆ ರಜೆ ಜಾರಿಯಲ್ಲಿರುವುದರಿಂದ ಕುಣಿಯುತ್ತಾ ಕುಪ್ಪಳಿಸುತ್ತಾ ಸದಾ ಚಟುವಟಿಕೆಯಿಂದ ಪುಟಿದೇಳುವ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲು ಅಸಾಧ್ಯ.
ಟಿವಿಯಲ್ಲಿ ಮೂಡಿ ಬರುವ ಕಾರ್ಟೂನು, ಬೇಸಿಗೆ ಶಿಬಿರಗಳು, ಕ್ರಿಕೆಟ್ಟು, ವೀಡಿಯೋ ಗೇಮ್ಸ್, ಪ್ರವಾಸ ಮುಂತಾದ ಹಲವು ಆಕರ್ಷಣೆಗಳು ಮಕ್ಕಳನ್ನು ತಮ್ಮೆಡೆಗೆ ಸೆಳೆಯುವ ಈ ದಿನಗಳಲ್ಲಿ ತಾಲ್ಲೂಕಿನಲ್ಲಿ ಕೆಲವೆಡೆ ಮಕ್ಕಳು ಗ್ರಾಮೀಣ ಜಾನಪದ ಆಟಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಮಕ್ಕಳು ಲಗೋರಿ ಆಡುವುದರಲ್ಲಿ ಸಂತೋಷಪಡುತ್ತಿದ್ದರೆ, ವರದನಾಯಕನಹಳ್ಳಿಯಲ್ಲಿ ಹೆಣ್ಣು ಮಕ್ಕಳು ಕಲ್ಲಾಟ, ಹಳಗುಣಿಮನೆ ಆಡುತ್ತಾ ನಲಿಯುತ್ತಿದ್ದಾರೆ. ಹನುಮಂತಪುರ ಗ್ರಾಮದಲ್ಲಿ ಕುಂಟೆಬಿ್ಲೆ, ಕಣ್ಣಾಮುಚ್ಚಾಲೆ ಆಟದಲ್ಲಿ ಮಕ್ಕಳು ತಲ್ಲೀನರು. ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯ ಬಳಿಯಿರುವ ಗುಲ್ಮೊಹರ್ ಮರವಂತೂ ಹುಡುಗರಿಗೆ ಮರಕೋತಿ ಆಟ ಆಡಲು ಹೇಳಿ ಮಾಡಿಸಿದಂತಿದೆ.
ಯಾವುದೇ ಕಾಸು ಖರ್ಚಿಲ್ಲದೇ ಪರಿಸರದಲ್ಲೇ ಸಿಗುವ ಪರಿಕರಗಳನ್ನು ಬಳಸಿಕೊಂಡು ಆಡುವ ಈ ಆಟಗಳು ಕೂಡಿ ಬಾಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುವಂತಹವು. ಜನಪದ ಸಾಹಿತ್ಯದಂತೆ ಜನಪದ ಆಟಗಳೂ ಕೂಡ ನಾಡಿನ ಸಾಂಸ್ಕೃತಿಯ ಪ್ರತೀಕ. ಈ ಆಟಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಐಪಿಎಲ್ ಹುಚ್ಚು ಎಲೆಡೆ ಪಸರಿಸಿ ಕ್ರಿಕೆಟ್ ಗುಂಗಿನಲ್ಲಿ ಕಣ್ಮರೆಯಾಗುವಂತಹ ಈ ಆಟಗಳನ್ನು ಮುಂದೆ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗಬಹುದು. ಅಥವಾ ಇಂತಹ ಆಟಗಳನ್ನು ಕಲಿಸುಂತಹ ಬೇಸಿಗೆ ಶಿಬಿರಗಳು ಹುಟ್ಟಿಕೊಂಡು ಹೊಸ ವಿದ್ಯೆಯೆಂಬಂತೆ ಕಲಿಸಲೂಬಹುದು.
ಮೌಖಿಕ ಪರಂಪರೆ ಹೊಂದಿದ ಈ ಆಟಗಳು ಜನಾಂಗದಿಂದ ಜನಾಂಗಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅಲ್ಪ ಬದಲಾವಣೆ ಹೊಂದುತ್ತದೆ. ಒಂದೇ ಆಟ ಬೇರೆ ಬೇರೆ ಹೆಸರಿನಿಂದ ವಿವಿಧ ಪ್ರದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಜಾನಪದ ಆಟಗಳು ಹಲವು ನೆಲೆಯಲ್ಲಿ ಕುತೂಹಲ ಕೆರಳಿಸಿ ಆಸಕ್ತಿಯನ್ನು ಅರಳಿಸುತ್ತವೆ.
ಜಾನಪದ ಆಟಗಳು ಮನರಂಜನೆ ಕೊಡುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಕಸರತ್ತನ್ನು ನೀಡುತ್ತವೆ. ಮನುಷ್ಯ ಸಂಬಂಧದ ಸಾಮರಸ್ಯವನ್ನು ಹೆಚ್ಚಿಸುವ ಇವು ನಮ್ಮ ಬದುಕಿನಿಂದ ಮರೆಯಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಾಯಕ ಸಾಧನಗಳಾಗಿ ನಿಲ್ಲುವ ಈ ಆಟಗಳು ಆಡುವವರಿಗೂ, ನೋಡುವವರಿಗೂ, ಕೇಳುವವರಿಗೂ ಆನಂದ ಹಂಚುವಂಥವುಗಳು.
ಸಂಕೀರ್ಣವಾಗುತ್ತಿರುವ ನಮ್ಮ ಬದುಕು ಜಾಗತೀಕರಣ, ವ್ಯಾಪಾರೀಕರಣ, ನಗರೀಕರಣಗಳ ಸುಳಿಯೊಳಗೆ ಸುತ್ತುತ್ತಿದೆ. ದೇಶೀಯತೆ ದೂರಸಾಗುತ್ತಾ ಗ್ರಾಮಸಂಸ್ಕೃತಿಯ ವೈವಿಧ್ಯಮಯ ಆಚರಣೆಗಳು ಅಳಿಯುತ್ತಿವೆ. ಕೆಲವು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಹೊಸ ರೂಪ ಪಡೆಯುತ್ತಿವೆ. ಮನುಷ್ಯ ಬದುಕಿನ ವಿಕಾಸದ ಜೊತೆ ತಳುಕು ಹಾಕಿಕೊಂಡಿರುವ ಈ ಆಟಗಳ ಪುನರುತ್ಥಾನದ ಚಿಂತನೆಯ ಅಗತ್ಯವಿದೆ.

ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನ

0

ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಭಾನುವಾರ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಡಾ.ಡಿ.ಟಿ.ಸತ್ಯನಾರಾಯಣರಾವ್‌ ಹಾಗೂ ಸ್ಥಳೀಯ ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ವಕೀಲ ಟಿ.ಎಸ್‌.ವಿಜಯಶಂಕರ್‌ ಅವರಿಂದ ‘ಶಂಕರ ವಿಜಯ’ ಉಪನ್ಯಾಸವನ್ನು ನಡೆಸಲಾಯಿತು.
ಭಾನುವಾರ ದಿ.ಬಿ.ಆರ್‌.ಪ್ರಕಾಶ್‌ರವರ ವೇದಿಕೆಯಲ್ಲಿ ಹತ್ತು ಮಂದಿ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್‌ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
‘ಕಳೆದ ಮೂವತ್ತೆರಡು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್‌.ರವಿ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್‌, ತಾಲ್ಲೂಕು ಅಧ್ಯಕ್ಷ ಎ.ಎಸ್‌.ರವಿ, ವಿ.ಕೃಷ್ಣ, ಬಿ.ಆರ್‌.ಅನಂತಕೃಷ್ಣ, ಬಿ.ಕೃಷ್ಣಮೂರ್ತಿ, ಶ್ರೀನಿವಾಸಮೂರ್ತಿ, ಶ್ರೀನಾಥ್‌, ಎಸ್‌.ವಿ.ನಾಗರಾಜರಾವ್‌, ಮಂಜುನಾಥ್‌, ಬಿ.ಆರ್‌.ನಟರಾಜ್‌, ಭಾಸ್ಕರ್‌, ಎಸ್‌.ಆರ್‌.ಸಕಲೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.