Home Blog Page 556

ಮೇ ತಿಂಗಳಿನ ಅತಿಥಿ ಗುಲ್ಮೊಹರ (May Flower)

0

ತಾಲ್ಲೂಕಿನಲ್ಲಿ ರಸ್ತೆಯಂಚಿನಲ್ಲಿ ಬೆಳೆಯುವ ಗುಲ್ಮೊಹರ್ ಮರಗಳು ಉಜ್ವಲ ಕೆಂಬಣ್ಣದ ಹೂಗಳನ್ನು ಅರಳಿಸಿದ್ದು ದಾರಿಹೋಕರಿಗೆ ನೆರಳು, ತಂಪಿನೊಂದಿಗೆ ಆನಂದವನ್ನೂ ನೀಡುತ್ತಿದೆ.
ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್‌ ಬಳಿ ಬೆಳೆದಿರುವ ಈ ಮರಗಳು ದೂರದಿಂದಲೇ ನೀಲಿ ಆಗಸದ ಹೊಂದಿಕೆಯಲ್ಲಿ ಕೆಂಪುಬಣ್ಣದಿಂದ ಆಹ್ಲಾದವನ್ನು ಉಂಟುಮಾಡುತ್ತಿದೆ. ಸಾಮಾನ್ಯವಾಗಿ ವರ್ಷದ ಕಡುಬಿಸಿಲಿರುವ ಸಮಯದಲ್ಲಿ ಮುಂಗಾರಿಗೆ ಮುಂಚೆ ರಸ್ತೆ ಬದಿಯಲ್ಲಿ ಜ್ವಾಲೆಯಂತಹ ಹೂಗೊಂಚಲಿನ ಗುಲ್ಮೊಹರನ್ನು ಕಾಣಬಹುದು. ರಸ್ತೆಯ ಬದಿಯ ಹೆದ್ದಾರಿ ಮರಗಳಲ್ಲೊಂದಾದ ಈ ವೃಕ್ಷ ಸೌಂದರ್ಯಯುಕ್ತವಾದುದು.
ಈ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಡೆಲೋನಿಕ್ಸ್ ಎಂದರೆ “ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ” ಎಂದರ್ಥ. ಇದು ಹೂವಿನ ಎಸಳಿನ ಆಕಾರವನ್ನು ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ ‘ಕೋಳಿ ಪಂದ್ಯ’ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ಗುಲ್ಮೊಹರ್ ಎನ್ನುವರು. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್ಮೊಹರ್ ಎಂದಾಗಿದೆ. ಇಂಗ್ಲಿಷ್‌ ನಲ್ಲಿ ಫ್ಲಾಂಬೊಯಾಂಟ್, ರಾಯಲ್ ಗೋಲ್ಡ್ ಮೊಹರ್, ರಾಯಲ್ ಪೀಕಾಕ್ ಫ್ಲವರ್, ಫೈರ್ ಟ್ರೀ ಎನ್ನುತ್ತಾರೆ. ಈಸ್ಟರ್ ಉತ್ಸವವು ಆದ ೫೦ ದಿನಗಳ ಬಳಿಕ ಪೆಂಟೆಕಾಸ್ಟ್ ಹಬ್ಬದ ಹೊತ್ತಿಗೆ ಈ ಮರದ ಹೂಗಳು ಅರಳುತ್ತವೆಂದು ಕ್ರಿಶ್ಚಿಯನ್ನರು ಇದಕ್ಕೆ ಪೆಂಟೆಕಾಸ್ಟ್ ಟ್ರೀ ಎಂದು ಕರೆಯುವರು.
ಏಪ್ರಿಲ್ ಕೊನೆ ಮತ್ತು ಮೇ ತಿಂಗಳಿನಲ್ಲಿ ಹೂವರಳುವುದರಿಂದ ಮೇ ಫ್ಲವರ್ ಎಂದೂ ಕರೆಯುವರು. ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಇದು ಕೆಂಬಣ್ಣದಿಂದ ಹೋರಾಟದ, ಶ್ರಮದಾನದ ಮತ್ತು ಕಾರ್ಮಿಕರ ಸಂಕೇತವಾಗಿ ಕೆಂಬಣ್ಣವನ್ನು ಪ್ರತಿಧ್ವನಿಸುತ್ತದೆ. ಇದರ ಕಾಯಿಗಳು ಕತ್ತಿಯಂತೆ ಉದ್ದ ಮತ್ತು ಅಗಲವಿರುವುದರಿಂದ ಈ ಮರವನ್ನು ಕತ್ತಿಕಾಯಿ ಮರವೆಂದೂ ಕರೆಯುತ್ತಾರೆ.
ಈ ಮರದ ಮೂಲ ಮಡಗಾಸ್ಕರ್. ಮಾರಿಷಿಯಸ್ ಮೂಲಕ ಭಾರತಕ್ಕೆ ಇದು ಬಂದಿದೆ. ಹೂ ಬಿಡುವ ಸ್ವಲ್ಪ ಮುಂಚಿತವಾಗಿ ಈ ಮರದ ಎಲೆಗಳು ಉದುರುತ್ತವೆ. ಗೊಂಚಲುಗಳಲ್ಲಿ ಹೂ ಬಿಟ್ಟಾಗ ಕೆಂಪುಬಣ್ಣದಿಂದ ಕಂಗೊಳಿಸುವ ಮರವನ್ನು ‘ಬೆಂಕಿಮರ’ವೆಂದೇ ಕರೆಯುತ್ತಾರೆ. ಉರ್ದು ಕವಿತೆಗಳಲ್ಲಿ ಗುಲ್ಮೊಹರ್ ವಿಶೇಷ ಪ್ರತಿಮೆಯಾಗಿ ರೂಪಕವಾಗಿ ಬಳಸಲಾಗಿದೆ.
‘ಮುಂಗಾರಿನ ಮುನ್ಸೂಚನೆಯಾಗಿ ಅರಳುವ ಗುಲ್ಮೊಹರ್ ಹೂಗಳು ಬೇಸಿಗೆಯ ಬಿಸಿಯಲ್ಲೂ ಮನಕ್ಕೆ ತಂಪನ್ನೆರೆಯುತ್ತವೆ. ದಾರಿಹೋಕರಿಗೆ ನೆರಳು, ದನಗಳಿಗೆ ಇದರ ಎಲೆ ಆಹಾರ ಹಾಗೂ ಹಲವು ಹಕ್ಕಿಗಳು ಮತ್ತು ಜೇನುಗಳಿಗೆ ಮಧು ನೀಡುತ್ತದೆ ಈ ಮರ. ರಸ್ತೆ ಬದಿಯಲ್ಲಿ ಈ ರೀತಿಯ ಮರಗಳನ್ನು ನೆಡುವ ಸಂಸ್ಕೃತಿ ಹೆಚ್ಚಾಗಬೇಕು’ ಎನ್ನುತ್ತಾರೆ ಶಿಕ್ಷಕ ಕೃಷ್ಣಪ್ಪ.

ಬೇಸಿಗೆಯ ಬಂಧು ಈಚಲು

0

ತಾಲ್ಲೂಕಿನಾದ್ಯಂತ ಬೇಸಿಗೆಯಲ್ಲಿ ಬಿಡುವ ಕಾಡುಹಣ್ಣುಗಳಲ್ಲಿ ಒಂದಾದ ಈಚಲ ಹಣ್ಣುಗಳು ಗೊಂಚಲು ಗೊಂಚಲಾಗಿ ಬಿಟ್ಟಿದ್ದು ಹಕ್ಕಿಗಳು ಸೇರಿದಂತೆ ಜನರ ಹೊಟ್ಟೆ ತುಂಬಿಸುತ್ತಿವೆ. ಎಲ್ಲೆಡೆ ಈಚಲು ಮರಗಳಲ್ಲಿ ಹಣ್ಣುಗಳು ಹಳದಿಬಣ್ಣದಿಂದ ಕೂಡಿವೆ.
ಈಚಲ ದೊರೆಗಾಯಿ ಸಿಹಿ ಮತ್ತು ಒಗರಿನಿಂದ ಕೂಡಿರುತ್ತವೆ. ಅವು ವಿಶಿಷ್ಠ ರುಚಿಯನ್ನು ನೀಡುವುದರಿಂದ ಇದರ ಬೀಜವನ್ನು ಮಕ್ಕಳು ಬಾಯಿಯಲ್ಲಿ ಅಡಿಕೆಯಂತೆ ನೆನೆಸುತ್ತಾ ಮೆಲ್ಲುತ್ತಾರೆ. ಈ ರೀತಿ ಬೀಜವನ್ನು ಮೆಲ್ಲುವುದರಿಂದ ಲಾಲಾ ರಸದ ಗ್ರಂಥಿ ಚಟುವಟಿಕೆಗೊಂಡು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡಿ ಆಹಾರದ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ಈಚಲ ದೋರೆ ಹಾಗೂ ಹಣ್ಣುಗಳು ಎಂದರೆ ಹಳ್ಳಿ ಹೈದರ ಬಾಯಲ್ಲಿ ನೀರೂರುತ್ತದೆ.
ಈಚಲು ಹಣ್ಣಿನ ಅರಿಶಿನ ಬಣ್ಣದ ಕಾಯಿ ಹಣ್ಣಾದಾಗ ಕಡುಗಪ್ಪುಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆ ತೆಳುವಾಗಿದ್ದು ಹೆಚ್ಚೂ ಕಡಿಮೆ ಕರ್ಜೂರವನ್ನು ಹೋಲುತ್ತದೆ. ಈಚಲು ಹಣ್ಣಿನಿಂದ ರಕ್ತ ವೃದ್ಧಿ ಹಾಗೂ ಶುದ್ಧಿ ಆಗುತ್ತದೆ. ಇದರಲ್ಲಿ ಕರ್ಜೂರದ ಗುಣಗಳೇ ಇವೆ ಎಂದು ನಾಟಿ ವೈದ್ಯರು ಹೇಳುತ್ತಾರೆ.
ಈಚಲು ಹಣ್ಣನ್ನು ಬಯಲು ಸೀಮೆಯ ಕರ್ಜೂರ ಎಂದೂ ಸಹ ಹೇಳುವುದುಂಟು. ಹಾಗೆಯೇ ಬಡವರ ಕರ್ಜೂರ ಎಂದೂ ಇದು ಹೆಸರುವಾಸಿಯಾಗಿದೆ. ಈ ಹಣ್ಣು ಕೋತಿಗಳಿಗೂ ಪ್ರಿಯ. ಆದರೆ ಕೋತಿ ಮುಳ್ಳು ಗರಿಗಳನ್ನು ದಾಟಿ ಹೋಗಲಾರವು. ಹಣ್ಣು ಉದುರಿದಾಗ ಅವು ಆರಿಸಿ ತಿನ್ನುವುದುಂಟು. ಇನ್ನುಳಿದಂತೆ ಅಳಿಲುಗಳು ಮತ್ತು ಕೆಲವು ಹಕ್ಕಿಗಳಿಗೆ ಇದು ಆಹಾರ.
ಶಾಲೆಯ ರಜೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇವು ಯಥೇಚ್ಛವಾಗಿ ಸಿಗುತ್ತದೆ. ಮುಳ್ಳಿನಂತೆ ಚೂಪಾದ ಗರಿಗಳಿರುವುದರಿಂದ ಕೆಲವು ಹಕ್ಕಿಗಳು ಈಚಲಿನ ಮರದ್ಲಲಿ ಗೂಡು ಕಟ್ಟುತ್ತವೆ. ಈಚೆಗೆ ಈಚಲಿನ ಗೆಲ್ಲುಗಳಿಂದ ಚಾಪೆ ಹೆಣೆಯುವುದು ಹಾಗೂ ಬುಟ್ಟಿ ತಯಾರಿಸುವುದರಿಂದಾಗಿ ಹಣ್ಣುಗಳು ಬಿಡುವುದು ಕಡಿಮೆಯಾಗಿದೆ.

ಹಾದಿ ಬದಿಯ ಪಿಟೀಲು ವಾದಕ

0

ಶಿಡ್ಲಘಟ್ಟದಲ್ಲಿ ಶನಿವಾರ ಉತ್ತರ ಭಾರತದಿಂದ ಬಂದಿದ್ದ ವ್ಯಕ್ತಿಯೊಬ್ಬ ಕಡಿಮೆ ವೆಚ್ಚದ ಬಿದಿರಿನ ಪಿಟೀಲು ಮಾರುತ್ತಿರುವುದು.

ಶಿಡ್ಲಘಟ್ಟದಲ್ಲಿ ವೈಭವದಿಂದ ಬಸವ ಜಯಂತಿ ಆಚರಣೆ

0

ಬಸವಣ್ಣನವರು ಜೀವಿಸಿದ 12 ನೇ ಶತಮಾನದ ಕಾಲವನ್ನು ಪುನವಿರ್‌ಮರ್ಶೆ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ, ಜಾತಿ ಜಾತಿಗಳಲ್ಲಿನ ದ್ವೇಷಭಾವಗಳನ್ನು ತ್ಯಜಿಸಿ ಮಾನವಕುಲ ಒಂದಾಗಬೇಕಾಗಿದೆ. ಇಂದಿನ ಮಂತ್ರಿಗಳೂ ಕೂಡಾ ಬಸವಣ್ಣನವರ ಆಳ್ವಿಕೆಯ ದಿನಗಳಲ್ಲಿ ಆಡಳಿತ ನಡೆಸುತ್ತಿದ್ದ ವಿಧಾನಗಳು ಹಾಗೂ ಪ್ರಜೆಗಳ ಕೆಲಸಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿದ್ದ ಚಾಕಚಕ್ಯತೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ವಿಜಯಪುರ ಶಾಖಾ ಮಠದ ಮಹದೇವ ಸ್ವಾಮಿಜೀ ಆಶೀರ್ವಚನ ನೀಡಿ ಮಾತನಾಡಿದರು.
ಪಟ್ಟಣದ ಅರಳೇಪೇಟೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಬಸವೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ನಡೆದ ಕಲ್ಯಾಣ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮೂಢನಂಬಿಕೆ ಹಾಗು ಶೋಷಣೆಯನ್ನು ನಿವಾರಿಸಿ ಸಮಾನತೆ, ಸಹೋದರತೆ, ಕಾಯಕ, ದಾಸೋಹ ದಂತಹ ಉದಾತ್ತ ತತ್ವಗಳ ಮೂಲಕ ಸಮಾಜದ ಎಲ್ಲರ ಶ್ರೇಯಸ್ಸನ್ನು ಬಯಸಿದ ಮಹಾಮಾನವತಾವಾದಿ, ವಿಶ್ವಮಾನವ, ಜಗಜ್ಯೋತಿ ಬಸವೇಶ್ವರರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೇ ದೀನ ದಲಿತರ ಹಾಗು ದುರ್ಬಲರ ಏಳಿಗೆಗಾಗಿ ಹಾಗು ಮಹಿಳೆಯರಿಗೆ ಸಮಾನವಾದ ಹಕ್ಕು ನೀಡುವಲ್ಲಿ ಶ್ರಮಿಸಿದ್ದರು. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಇಡೀ ಜಗತ್ತೇ ಮಾರುಹೋಗಿದ್ದು ಅಂತಹ ಮಹಾಪುರುಷರ ಜಯಂತಿಯನ್ನು ಅವರ ನುಡಿಮುತ್ತಾದ ಕಾಯಕವೇ ಕೈಲಾಸ ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಎಲ್ಲಾ ವರ್ಗದವರು ಸೇರಿ ಆಚರಿಸುವಂತಾಗಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ವಾಗೀಶ್‌ಪ್ರಸಾದ್ ಮಾತನಾಡಿ ಬಸವಣ್ಣನವರು ಕಂಡಿದ್ದ ಕನಸನ್ನು ನನಸು ಮಾಡುವಂತಹ ಕೆಲಸವನ್ನು ಎಲ್ಲಾ ಜನಾಂಗಗಳು ಮಾಡಬೇಕು, ಜಾತಿಯ ಕಾಲಂಗಳನ್ನು ತೆಗೆದುಹಾಕಿದರೆ ಎಲ್ಲಾ ಜಾತಿ ಜನಾಂಗದವರು ಒಂದಾಗಲು ಸಾಧ್ಯವಿದೆ, ಯಾವುದೇ ಜಾತಿ, ಧರ್ಮ, ಮತವೆಂಬುದಾಗಿ ವಿಂಗಡನೆ ಮಾಡಬೇಡಿ, ನಾವೆಲ್ಲ ಮನುಷ್ಯರು ಎಂದಷ್ಟೆ ಭಾವಿಸಬೇಕಾಗಿದೆ, ಶಾಸಕರು ಎಲ್ಲಾ ಹಿಂದುಳಿದ ವರ್ಗಗಳ ಕೇರಿಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಹೆಚ್ಚಿನ ಅನುಧಾನಗಳನ್ನು ಮೀಸಲಿಟ್ಟು ಸುದಾರಣೆ ಮಾಡಲು ಸಹಕಾರ ನೀಡಬೇಕು. ಯುವಕರಲ್ಲಿ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ದುಂದುವೆಚ್ಚ ಮಾಡಿ ಮದುವೆ ಮಾಡಬೇಡಿ, ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ, ರಕ್ತದಾನ ಮಾಡಿ, ವರದಕ್ಷಿಣೆ ಪಿಡಗನ್ನು ತೊಲಗಿಸಿ ಅಂತರ್ಜಾತಿ ವಿವಾಹಗಳನ್ನು ಮಾಡಿಕೊಳ್ಳಬೇಕು, ಶತಶತಮಾನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಬಸವೇಶ್ವರರ ಹೆಸರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ, ಮತ್ತು ಅಕ್ಕಮಹಾದೇವಿಯ ಹೆಸರನ್ನು ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಾಲಿಂಗಯ್ಯ ಮಠದ್ ಅವರ ಅಂಧಕಲಾವಿದರ ತಂಡದಿಂದ ವಚನಗಾಯನವನ್ನು ಏರ್ಪಡಿಸಲಾಗಿತ್ತು.
ಸಂಜೆ ದೇವಾಲಯದಿಂದ ವಿದ್ಯುತ್‌ ದೀಪಾಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿರಿಸಿ ನಂದೀಧ್ವಜ ಸಮೇತ ರೇಣುಕಾರಾಧ್ಯ ಮತ್ತು ತಂಡದವರಿಂದ ವೀರಭದ್ರ ನೃತ್ಯ, ದಕ್ಷಬ್ರಹ್ಮನ ಸಂವಾದ, ಕರಡಿ ಮಜಲು, ಚಿಟ್ಟಿಮೇಳ, ನಾದಸ್ವರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಉಲ್ಲೂರುಪೇಟೆಯ ಜೋಡಿ ಬಸವೇಶ್ವರ ದೇಗುಲದಲ್ಲಿ ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ವಿಜಯಪುರ ಮಠದ ಮಹದೇವ ಸ್ವಾಮಿಜಿ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ್‌ಪ್ರಸಾದ್, ಡಾ.ಸತ್ಯನಾರಾಯಣರಾವ್, ಬಸವೇಶ್ವರ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಉಪಾಧ್ಯಕ್ಷ ಡಿ.ಜಿ.ಮಲ್ಲಿಕಾರ್ಜುನ, ಎಸ್.ಜಿ.ಚಂದ್ರಶೇಖರ್‌ಬಾಬು, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್‌ಬಾಬು, ಎಂ.ಎನ್,ನಾಗಭೂಷಣ್, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.

ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರ

0

ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ರಾ.ಕೃಷ್ಣಪ್ಪ ಅವರು ತಮ್ಮ ಕನ್ನಡ ಪ್ರೇಮವನ್ನು ಆರು ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರವನ್ನು ಮಾಡಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್‌.ಶಿವರುದ್ರಪ್ಪ, ಹಾಸ್ಯಲೇಖಕ ಬೀಚಿ, ನಾಟಕಕಾರ ಟಿ.ಪಿ.ಕೈಲಾಸಂ, ಶಿಕ್ಷಣತಜ್ಞ ಎಚ್‌.ನರಸಿಂಹಯ್ಯ, ಲೇಖಕ ಲಂಕೇಶ್‌ ಅವರನ್ನೊಳಗೊಂಡ ತೇಗದ ಗಡಿಯಾರವು ಕನ್ನಡದ ಸುಸಮಯವನ್ನು ತೋರಿಸುತ್ತಿದೆ.

ರೇಷ್ಮೆ ಗೂಡಿಗಿಂತ ಬದುಕು ಭಾರ!

0

ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಫುಲವಾಗಿದ್ದರೂ, ಅವುಗಳ ನೆರವಿಲ್ಲದೇ -ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ 30 ರಿಂದ 50 ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್‌ನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.
ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.
‘ನಾವು ಸುಮಾರು 268 ಕಾರ್ಮಿಕರಿದ್ದೇವೆ. ನಿತ್ಯವೂ 20 ರಿಂದ 50 ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ 150 ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು’ ಎಂದು ಹಮಾಲಿ ಕಾರ್ಮಿಕರು ಹೇಳುತ್ತಾರೆ.
‘ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.
‘ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದರು.
Say ‘HI’ to Sidlaghatta.com on WhatsApp: +91 9986904424

ಗ್ರಾಮದ ಶ್ರೇಯಸ್ಸಿಗೆ ನೆಟ್ಟಿನಿಲ್ಲಿಸಿರುವ ಯಂತ್ರದ ಕಲ್ಲುಗಳು

0

ಮಕ್ಕಳು ರಚ್ಚೆ ಹಿಡಿದಾಗ, ಹುಶಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ಈಗಲೂ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ ಹಾಳೆಯ ಮೇಲೆ ಬೀಜಾಕ್ಷರ, ಮಂತ್ರ ಇತ್ಯಾದಿಗಳನ್ನು ಬರೆದು ತಾಯತದಲ್ಲಿಟ್ಟು ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ, ವ್ಯಾಧಿಗಳಿಂದ ವಿಮುಕ್ತಿ ಸಿಗುವುದೆಂಬ ನಂಬುಗೆಯದು. ಇದೇ ರೀತಿ ಇಡೀ ಗ್ರಾಮಕ್ಕೇ ಪೀಡಾ ಪರಿಹಾರಕ್ಕೆಂದು ಬಹಳ ಹಿಂದೆ ಕಲ್ಲುಗಳನ್ನು ನಿರ್ಮಿಸುತ್ತಿದ್ದರು. ಇವನ್ನು ಯಂತ್ರದ ಕಲ್ಲುಗಳೆಂದು ಕರೆಯುತ್ತಾರೆ.
ಗ್ರಾಮದ ಶ್ರೇಯಸ್ಸಿಗಾಗಿ ನಿರ್ಮಿಸುತ್ತಿದ್ದ ಇಂತಹ ಪುರಾತನ ಕಲ್ಲುಗಳು ತಾಲ್ಲೂಕಿನ ಕೆಲವೆಡೆಯಿದ್ದು ನಮ್ಮಲ್ಲೂ ಈ ರೀತಿಯ ಪದ್ಧತಿ ಆಚರಣೆಯಲ್ಲಿದ್ದುದಕ್ಕೆ ನಿದರ್ಶನವಾಗಿದೆ. ಇಂತಹ ಕಲ್ಲುಗಳನ್ನು ಅದರ ಬಗ್ಗೆ ತಿಳಿಯದೇ ಪೂಜನೀಯ ವಸ್ತುವೆಂದು ಭಾವಿಸಿ ಕೆಲವೆಡೆ ಪೂಜಿಸುತ್ತಿದ್ದರೆ, ಇನ್ನು ಕೆಲವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್‍ವೇಶ್ವರ ದೇವಾಲಯದ ಬಳಿಯೊಂದು ಯಂತ್ರದಕಲ್ಲಿದ್ದು ಅದನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳು ಪೂಜಿಸುವರು. ತಾಲ್ಲೂಕಿನ ಹನುಮಂತಪುರ ಗ್ರಾಮದ ಬಸವಣ್ಣನ ದೇಗುಲದ ಬಳಿ ಮೂರು ಯಂತ್ರದ ಕಲ್ಲುಗಳಿವೆ. ಆದರೆ ಹಳೆಯ ಗ್ರಾಮ ತಗ್ಗಿನಲ್ಲಿದ್ದುದರಿಂದ ಏರಿನೆಡೆಗೆ ಗ್ರಾಮವು ಅಭಿವೃದ್ಧಿ ಕಂಡುಕೊಳ್ಳುತ್ತಾ ಈ ಕಲ್ಲುಗಳು ತಗ್ಗಿನಲ್ಲೇ ಉಳಿದಿವೆ.
ಸಾಮಾನ್ಯವಾಗಿ ಈ ಬಗೆಯ ಶಾಸನಗಳನ್ನು ಹಳ್ಳಿಗಳ ಮುಂದೆ ಗಮನಿಸಬಹುದು. ಪೀಡಾ ಪರಿಹಾರಕ್ಕಾಗಿ ಯಂತ್ರವನ್ನು ಬರೆದು ನಿಲ್ಲಿಸಿರುತ್ತಾರೆ. ಇವುಗಳನ್ನು ಹಳ್ಳಿಯ ಜನ ಇಂದಿಗೂ ಹಲವೆಡೆ ಪೂಜಿಸುತ್ತಾರೆ. ಈ ರೀತಿ ಪೂಜಿಸುವುದರಿಂದ ತಮ್ಮ ದನಕರುಗಳಿಗೆ ಅಥವಾ ತಮಗೆ ಒದಗಿರುವ ಪೀಡೆಯು ಪರಿಹಾರವಾಗುತ್ತದೆಂದು ಅವರ ನಂಬಿಕೆ.
ಕೆಲವು ಯಂತ್ರಗಳಲ್ಲಿ ಕೇವಲ ಬೀಜಾಕ್ಷರಗಳಿದ್ದರೆ ಕೆಲವು ಪೀಡಾ ಪರಿಹಾರಕ್ಕೆ ಹಾಕಿಸಿರುವ ಕಟ್ಟುಯಂತ್ರ ಅಥವಾ ದಿಗ್ಬಂಧನ ಯಂತ್ರವಾಗಿರುತ್ತವೆ.
ಹೆಚ್ಚಾಗಿ ತಾಮ್ರಪಟಗಳ ಮೇಲೆ ಈ ರೀತಿಯ ಯಂತ್ರ ಮಂತ್ರಗಳನ್ನು ಬರೆದಿರುವುದೇ ಹೆಚ್ಚು. ಈಗಲೂ ಚಿಕ್ಕದಾದ ತಾಮ್ರದ ಹಾಳೆಯಲ್ಲಿ ಬರೆದು ತಾಯತದಲ್ಲಿಟ್ಟು ಕಟ್ಟುವುದು, ಕೊಂಚ ದೊಡ್ಡದಾದರೆ ಅದಕ್ಕೆ ಚೌಕಟ್ಟನ್ನು ಹಾಕಿಸಿ ಅಂಗಡಿ ಮನೆಗಳಲ್ಲಿ ನೇತುಹಾಕುವುದು ಬಳಕೆಯಲ್ಲಿದೆ.
ಈ ಪುರಾತನ ಯಂತ್ರದ ಕಲ್ಲುಗಳಿಂದ ಯಂತ್ರ ಮಂತ್ರ ಚಿಕಿತ್ಸಾ ವಿಧಾನಗಳು ಕರ್ನಾಟಕದಲ್ಲಿ ಅದರಲ್ಲೂ ನಮ್ಮ ತಾಲ್ಲೂಕಿನಲ್ಲಿ ಪ್ರಚಲಿತವಿತ್ತು ಎಂದು ತಿಳಿದುಬರುತ್ತದೆ. ಈ ರೀತಿಯ ಚಿಕಿತ್ಸಾ ಕ್ರಮದ ಒಂದು ಅನುಸರಣೆಯೇ ಈ ಬಗೆಯ ಶಾಸನಗಳಿಗೆ ಪ್ರೇರಣೆಯನ್ನು ನೀಡಿ ಕಾಲಾಂತರದಲ್ಲಿ ಅಜ್ಞಾನದಿಂದ ಜನರಿಗೆ ಯಾವುದು ಯಂತ್ರ ಯಾವುದು ಅಲ್ಲ ಎಂಬುದು ತಿಳಿಯದಂತಾಗಿದೆ. ಈ ಯಂತ್ರ ಚಿಕಿತ್ಸಾ ಕ್ರಮದ ಬಗ್ಗೆ, ಅದರ ಯಶಸ್ಸಿನ ಬಗ್ಗೆ ವೈಜ್ಞಾನಿಕ ಯುಗದಲ್ಲಿರುವ ನಮ್ಮ ಧೋರಣೆ ಬದಲಾಗಿರಬಹುದು. ಆದರೆ ಯಂತ್ರ ಮಂತ್ರಗಳ ಮೂಲಕವೂ ನಮ್ಮ ಜನ ತಮ್ಮ ಶ್ರೇಯಸ್ಸಿಗಾಗಿ ಪ್ರಯತ್ನಿಸಿದರು ಎಂಬುದು ಈ ಶಾಸನಗಳಿಂದ ತಿಳಿದುಬರುತ್ತದೆ.

ವೀರಾಪುರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪೂಜೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ

0

ಶ್ರೀರಾಮನವಮಿ ನಂತರದ ದಿನಗಳಲ್ಲಿ ಆಚರಿಸುವ ವಿಶೇಷ ಪೂಜೆ ಅಂಗವಾಗಿ ಸೋಮವಾರ ವೀರಾಪುರದಲ್ಲಿ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿತ್ತಲ್ಲದೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ನೆಲೆಸಿರುವ ವರಸಿದ್ದಿ ವಿನಾಯಕಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವರಿಗೆ ವಿಶೇಷ ವೀಳ್ಯದ ಎಲೆ ಹಾಗೂ ಒಂಭತ್ತು ವಿಧದ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಪೂಜೆ ಆರಂಭಿಸಿ ಪಂಚಾಮೃತಾಭಿಷೇಕ ಸೇರಿದಂತೆ ನಾನಾ ವಿಧವಾದ ಪೂಜೆಗಳನ್ನು ನೆರವೇರಿಸಿ ಮಹಾ ಮಂಗಳಾರತಿ ನೀಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಜತೆಗೆ ಗ್ರಾಮಸ್ಥರು ದಾನಿಗಳಿಂದ ಸಂಗ್ರಹಿಸಿದ ದವಸ ದಾನ್ಯ, ತರಕಾರಿಗಳಿಂದಲೆ ತಯಾರು ಮಾಡಿದ ಮುದ್ದೆ, ಸಾಂಬಾರು, ಅನ್ನ, ರಸ ಮುಂತಾದ ಖಾದ್ಯಗಳಿಂದ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟದಲ್ಲಿ 48ನೇ ದಿನದ ಹೋಮ ಮತ್ತು ದೀಪೋತ್ಸವ

0

ತಾಲ್ಲೂಕಿನ ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಗಡಿಯಲ್ಲಿರುವ ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟದಲ್ಲಿ ಸೋಮವಾರ ದೇವಾಲಯ ನಿರ್ಮಾಣದ 48ನೇ ದಿನದ ಹೋಮ ಮತ್ತು ದೀಪೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವರ ಮೂರ್ತಿ, ಪಾದಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಿ ಭಕ್ತರೆಲ್ಲಾ ಸೇರಿ ಗುಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಿದ್ದು, 48 ದಿನಗಳಿಂದ ಪೂಜಾವಿಧಿಯನ್ನು ಆಚರಿಸುತ್ತಾ ಸೋಮವಾರ ಹೋಮವನ್ನು ನಡೆಸಿ ಮಹಿಳೆಯರು ದೀಪಗಳನ್ನು ಹೊತ್ತು ತಂದು ಪೂಜೆ ಸಲ್ಲಿಸಿದರು.
ಮಾಗಡಿಯಿಂದ ಮಳಮಾಚನಹಳ್ಳಿ ಗ್ರಾಮಕ್ಕೆ ಬ್ಯಾಟರಾಯಸ್ವಾಮಿ ಬಂದಿದ್ದರು. ಕೆಲ ಕಾಲ ಅಲ್ಲಿ ನೆಲೆಸಿದ್ದವರು, ಅಲ್ಲಿಂದ ತನ್ನ ಪಾದವನ್ನು ಈ ಗುಟ್ಟದ ಮೇಲೆ ಇಟ್ಟರಂತೆ. ಇಲ್ಲಿಂದ ಇನ್ನೊಂದು ಪಾದವನ್ನು ಚಿಕ್ಕದಾಸರಹಳ್ಳಿ ಬಳಿಯ ಗುಟ್ಟದ ಮೇಲಿಟ್ಟು ಅಲ್ಲಿಯೇ ನೆಲೆಸಿದರೆಂಬುದು ಅತ್ಯಂತ ಹಿಂದಿನ ಕಥೆ. ಹೀಗೆ ಪಾದವನ್ನಿಟ್ಟ ಗುರುತಿರುವ ಈ ಗುಟ್ಟವು ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟವೆಂದೇ ಹೆಸರಾಗಿದೆ. ಇಲ್ಲಿ ಪ್ರತಿ ವರ್ಷವೂ ಪೂಜೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಭಕ್ತರೆಲ್ಲಾ ಸೇರಿ ದೇವರನ್ನು ಪ್ರತಿಷ್ಠಾಪಿಸಿ ಪುಟ್ಟ ಗುಡಿಯನ್ನು ಕಟ್ಟಿದ್ದಾರೆ. ಈ ಗುಟ್ಟದಿಂದ ನೋಡಿದಾಗ ಈಗ ಬ್ಯಾಟರಾಯಸ್ವಾಮಿ ನೆಲೆಸಿರುವರೆಂದು ನಂಬಿರುವ ತಾಲ್ಲೂಕಿನ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯವು ಕಣ್ಣಿಗೆ ಗೋಚರಿಸುತ್ತದೆ.
ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಮಹಿಳೆಯರು ದೀಪೋತ್ಸವ ನಡೆಸಿದರೆ, ಉಳಿದ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುಬ್ಬಾಚಾರಿ, ಜಿ.ಕೆ.ವೆಂಕಟೇಶ್‌, ಮುನಿರಾಜು, ದೇವರಾಜ್‌, ನಾಗರಾಜ್‌, ಮೋಹನ್‌, ಅರ್ಚಕ ರಂಗಪ್ಪ, ರಾಜಣ್ಣ, ರಮೇಶ್‌, ಗೋಪಾಲ್‌,ರತ್ನಮ್ಮ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.

ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕ ಎಚ್.ಎಲ್.ಶಶಿಧರರವರ ನೀಲನಕ್ಷೆ

0

ರಾಜಧಾನಿಯಂಥಹ ದೊಡ್ಡ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ರಸ್ತೆಯ ನಿರ್ಮಾಣ, ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಗಳಿರುತ್ತವೆ. ಅದರಿಂದಾಗಿಯೇ ವಾಹನ ದಟ್ಟಣೆ, ಪಾದಚಾರಿಗಳು, ಮರಗಿಡಗಳು ಮತ್ತು ಅಂಗಡಿ ಮುಂಗಟ್ಟುಗಳು ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ರಸ್ತೆಗಳ ನಿರ್ಮಾಣವಾಗುತ್ತವೆ. ಇಂಥಹ ಅನುಕೂಲ ಸಣ್ಣ ಊರುಗಳಿಗೆ ಲಭ್ಯವಿರುವುದಿಲ್ಲ. ಆದರೆ ಶಿಡ್ಲಘಟ್ಟ ಪಟ್ಟಣಕ್ಕೂ ವಿದೇಶಿ ಮಾದರಿಯ ಉನ್ನತ ದರ್ಜೆಯ ರಸ್ತೆ ಹಾಗೂ ಪರಿಸರವನ್ನು ನಿರ್ಮಾಣಮಾಡಬೇಕೆಂಬ ಕನಸನ್ನು ಕೆಲವರು ಕಂಡಿದ್ದರು.
ಪಟ್ಟಣದಲ್ಲಿ ಉತ್ತಮ ರಸ್ತೆ ನಿರ್ಮಾಣದ ಕನಸು ಕಂಡಿದ್ದ ವ್ಯಕ್ತಿಯೊಬ್ಬರ ಕನಸು ಹಾಗೇ ಉಳಿದಿದೆ. ಅವರ ಕನಸಿಗೆ ಮೂರು ವರ್ಷಗಳು ಸಂದಿವೆ. ಶಿಡ್ಲಘಟ್ಟ ಪುರಸಭೆ ಮೇಲ್ದರ್ಜೆಗೆ ಏರಿ ನಗರಸಭೆಯಾಗಲಿದೆ. ಈ ಕಾರಣಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರು ಹುರುಪಿನಲ್ಲಿದ್ದಾರೆ. ಪಟ್ಟಣವನ್ನು ಅಭಿವೃದ್ಧಿಗೊಳಿಸುವುದಾಗಿ ಶಾಸಕ ಎಂ.ರಾಜಣ್ಣ ಕೂಡ ಭರವಸೆ ನೀಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಹಳೆ ಕನಸಿಗೆ ಮತ್ತೆ ಮರುಜೀವ ದೊರೆತೀತೆ ಎಂಬ ಆಶಾಭಾವ ಮೂಡಿದೆ.
ಶಿಡ್ಲಘಟ್ಟದಲ್ಲಿ ಓದಿ, ಬೆಳೆದು ಈಗ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್ ಪಟ್ಟಣದ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿಕೊಟ್ಟಿದ್ದರು. ಶಿಸ್ತು ಬದ್ಧ ಸಂಚಾರ, ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ ಹಾಗೂ ರಸ್ತೆ ಬದಿಯಲ್ಲಿ ಮರಗಿಡ ಬೆಳೆಸುವುದು ಈ ನೀಲನಕ್ಷೆಯ ಪ್ರಮುಖ ಉದ್ದೇಶಗಳಾಗಿತ್ತು.
ರಸ್ತೆಯ ಅಗಲ 12.2 ಮೀಟರ್(40 ಅಡಿಗಳು) ಇರಬೇಕು. ಇದರಲ್ಲಿ ಎರಡೂ ಬದಿಯಲ್ಲಿ 2 ಮೀಟರ್ ಅಗಲ ವಾಹನ ನಿಲುಗಡೆಗೆ, 1.2 ಮೀಟರ್ ಪಾದಚಾರಿ ರಸ್ತೆಗೆ ಬಿಟ್ಟು ಉಳಿದ 5.8 ಮೀಟರ್ ಸ್ಥಳವನ್ನು ವಾಹನ ಸಂಚಾರಕ್ಕೆ ಬಳಸಬಹುದಾಗಿದೆ. ಅಲ್ಲಲ್ಲಿ ಪಾದಚಾರಿಗಳಿಗಾಗಿ ರಸ್ತೆಯನ್ನು ದಾಟಲು ಉಬ್ಬುಗಳು, ಮರ ಗಿಡ ಬೆಳೆಸಲೆಂದೇ ಸ್ಥಳಗಳು, ರಸ್ತೆ ತಿರುವುಗಳು ಎಲವನ್ನೂ ವೈಜ್ಞಾನಿಕವಾಗಿ ಮತ್ತು ಕಾರ್ಯರೂಪಕ್ಕೆ ತರಬಲ್ಲಂತೆ ರೂಪುರೇಷೆಯನ್ನು ತಯಾರಿಸಿದ್ದಾರೆ.

ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿರುವ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್.
ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿರುವ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್.

‘ನೂರು ವರ್ಷಗಳ ಹಿಂದೆ ಅಂದರೆ 1891ರಲ್ಲಿ ಶಿಡ್ಲಘಟ್ಟದ ಜನಸಂಖ್ಯೆಯಿದ್ದದ್ದು ಕೇವಲ 6,572. ಆದರೆ 2001 ರಲ್ಲಿ 41,105 ಕ್ಕೆ ಏರಿತ್ತು. ಈಗ ಹತ್ತು ವರ್ಷಗಳ ತರುವಾಯ ಇನ್ನಷ್ಟು ಏರಿದೆ. ಭವಿಷ್ಯದ ದೃಷ್ಟಿಯಿಂದ ಮಾದರಿ ನಗರವಾಗುವಂತೆ ಪಟ್ಟಣವನ್ನು ರೂಪಿಸುವ ಅಗತ್ಯವಿದೆ. ನಾನು ಓದಿ ಬೆಳೆದ ಊರಿಗೆ ಏನಾದರೂ ಸೇವೆ ಸಲ್ಲಿಸುವ ಉದೇಶದಿಂದ ಈ ನೀಲನಕ್ಷೆಯನ್ನು ತಯಾರಿಸಿದೆ. ಬೆಂಗಳೂರು ನಗರದಲ್ಲಿರುವ ವಿಟ್ಟಲ್ ಮಲ್ಯ ರಸ್ತೆಯಂತೆ ನಮ್ಮೂರಿನ ಎರಡು ಪ್ರಮುಖ ರಸ್ತೆಗಳಾದ ಅಶೋಕ ಮತ್ತು ಟಿ.ಬಿ.ರಸ್ತೆಗಳು ಮಾದರಿ ರಸ್ತೆಗಳಾಗಬೇಕೆಂಬುದು ನನ್ನಾಸೆ. ಶಿಸ್ತು ಬದ್ಧ ಸಂಚಾರದಿಂದ ಅಪಘಾತಗಳು ಇಲ್ಲವಾಗುತ್ತವೆ. ಗಿಡಮರಗಳಿರುವುದರಿಂದಾಗಿ ಕಣ್ಮನ ತಣಿಯುವುದರೊಂದಿಗೆ ಆರೋಗ್ಯವೂ ವೃದ್ಧಿಸುತ್ತದೆ. ಸಂಜೆ ವೇಳೆ ಮರಗಳ ಅಡಿಯಿರುವ ಕಟ್ಟೆಗಳ ಮೇಲೆ ಜನರು ಬಂದು ಕೂರುವುದರಿಂದ ವಾಣಿಜ್ಯ ವ್ಯವಹಾರಗಳೂ ಅಭಿವೃದ್ಧಿಯಾಗುತ್ತವೆ’ ಎಂದು ಎಚ್.ಎಲ್.ಶಶಿಧರ್ ವಿವರಿಸಿದರು.
‘ಮೊದಲು ಹೂ ವೃತ್ತದಿಂದ ವೇಣುಗೋಪಾಲಸ್ವಾಮಿ ರಸ್ತೆಯವರೆಗೆ ಸುಮಾರು ೨೨೦ ಅಡಿಗಳಷ್ಟು ದೂರದ ರಸ್ತೆಯನ್ನು ಈ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಜನರಿಗೆ ಒಂದು ಮಾದರಿ ಸಿದ್ಧವಾದಾಗ ಅವರಲ್ಲೂ ವಿಶ್ವಾಸ ಮೂಡುತ್ತದೆ. ಮುಂದೆ ರಿಂಗ್ ರೋಡ್ ನಿರ್ಮಾಣ, ದೊಡ್ಡದಾದ ಸರಕು ಸಾಗಾಣಿಕೆ ವಾಹನಗಳ ಪಥ ಬದಲಾವಣೆ, ಮೂಲಭೂತ ಸೌಕರ್ಯಗಳಾದ ನೀರಿನ ನಿರ್ವಹಣೆ, ಮಳೆಕೊಯ್ಲು ಮುಂತಾದವುಗಳನ್ನು ಅಭಿವೃದ್ಧಿ ಪಡಿಸಿ ನಮ್ಮ ಊರನ್ನು ಮಾದರಿ ಪಟ್ಟಣವನ್ನಾಗಿಸುವ ಉದ್ದೇಶವಿದೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು. ಮೂರು ವರ್ಷಗಳ ಹಿಂದೆ ಆಗಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಹಕಾರ ನೀಡಿದ್ದರು. ಪುರಸಭೆಯ ಅಧಿಕಾರಿಗಳಿಗೆ ಈ ನೀಲನಕ್ಷೆಯನ್ನು ನೀಡಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ನಮ್ಮ ಕ್ಷೇತ್ರದ ಕೇಂದ್ರ ಸಚಿವರನ್ನೂ ಸಂಪರ್ಕಿಸಿ ವಿವರಿಸಿದ್ದೆ. ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇದೇ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ಕೇಂದ್ರ ಸಚಿವ ಕಮಲ್‌ನಾಥ್‌ ಅವರಿಗೂ ತೋರಿಸಿದೆ. ತಕ್ಷಣವೇ ಅವರು ಮಧ್ಯಪ್ರದೇಶದ ಚಿಂದವಾಡದಲ್ಲಿ ರೂಪಿಸಲು ನನ್ನನ್ನು ಕಳುಹಿಸಿದರು. ನಮ್ಮ ಊರಿನಲ್ಲಿ ಆಗಬೇಕಾದ ಅಭಿವೃದ್ಧಿ ಮಧ್ಯಪ್ರದೇಶದಲ್ಲಾಯಿತು. ನಮ್ಮ ಊರಿನ ಅಭಿವೃದ್ಧಿಗಾಗಿ ಈಗಲೂ ಆಶಾವಾದಿಯಾಗಿದ್ದೇನೆ’ ಎಂದು ಅವರು ಹೇಳಿದರು.

ಪರಿಸರ ಸಂರಕ್ಷಕ ಕೊತ್ತನೂರಿನ ಸ್ನೇಕ್ ನಾಗರಾಜ್

0

ಪರಿಸರ ಸಂರಕ್ಷಣೆಗಾಗಿ ಕೆಲವರು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರೆ, ಕೆಲವರು ಗಿಡಮರಗಳನ್ನು ನೆಟ್ಟು ಪರಿಸರಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತಿರುತ್ತಾರೆ. ಸಾಂಘಿಕ ಪ್ರಯತ್ನ ಕೆಲವರದ್ದಾದರೆ, ಏಕಾಂಗಿ ಹೋರಾಟ ಕೆಲವರದ್ದು. ಆದರೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ತಮ್ಮ ಚಟುವಟಿಕೆಯಿಂದ ತಮಗೇ ಅರಿವಿಲ್ಲದೆ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಿರುವವರೂ ಕೆಲವರಿದ್ದಾರೆ. ಅವರ ಸಾಲಿನಲ್ಲಿ ಸೇರುವವರು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್.
ಯಾವುದೇ ರೀತಿಯ ಹಾವಾದರೂ ಸಲೀಸಾಗಿ ಹಿಡಿದು ರಕ್ಷಿಸಿ ಸುರಕ್ಷಿತ ಸ್ಥಾನಕ್ಕೆ ಬಿಡುವ ಇವರು ಹಾವನ್ನಷ್ಟೇ ಅಲ್ಲದೆ ಹಲವಾರು ಹಕ್ಕಿಗಳು ಹಾಗೂ ವಿವಿಧ ಜೀವಜಂತುಗಳನ್ನೂ ರಕ್ಷಿಸಿದ್ದಾರೆ. ದ್ರಾಕ್ಷಿ ತೋಟಗಳಲ್ಲಿ ಹಕ್ಕಿಗಳಿಂದ ಬೆಳೆಯನ್ನು ರಕ್ಷಿಸಲು ತೆಳ್ಳನೆಯ ಬೇಲಿಯನ್ನು ಕಟ್ಟಿರುತ್ತಾರೆ. ಆ ಬೇಲಿಗೆ ಸಿಕ್ಕಿ ನರಳುವ ಬಾವಲಿ, ಮಿಂಚುಳ್ಳಿ, ಗೂಬೆ, ಅಳಿಲು, ಕಾಗೆ, ಭರಧ್ವಾಜ, ಗಿಳಿ, ಕೋಗಿಲೆ, ಕೆಂಬೂತ ಮುಂತಾದ ಹಲವಾರು ಹಕ್ಕಿಗಳನ್ನು ರಕ್ಷಿಸಿದ್ದಾರೆ.
‘ಹಾಲಿನ ಡೈರಿಯಲ್ಲಿ ಕೆಲಸ ಮಾಡುವುದರಿಂದ ಬೆಳಿಗ್ಗೆ ಬೇಗ ಎದ್ದು ಹೊರಡುತ್ತೇನೆ. ದ್ರಾಕ್ಷಿ ತೋಟಗಳ ಬೇಲಿಗುಂಟ ನಡೆದು ಹೋಗುವಾಗ ಯಾವುದಾದರೂ ಹಕ್ಕಿ ಅಥವಾ ಬಾವಲಿ ತೋಟದ ಬಲೆಗೆ ಸಿಕ್ಕಿದ್ದು ಕಂಡು ಬಂದಲ್ಲಿ ಬಿಡಿಸಿ ನೀರು ಕುಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಡುತ್ತೇನೆ. ನನ್ನ ಚಟುವಟಿಕೆಗಳನ್ನು ಕಂಡಿರುವ ನಮ್ಮ ಗ್ರಾಮದವರು ಏನಾದರೂ ಜಂತುಗಳನ್ನು ಕಂಡರೆ ನನಗೆ ತಿಳಿಸುತ್ತಾರೆ. ಕೆಲವು ಬಾರಿ ಅವುಗಳ ಜೀವ ಉಳಿಸಲು ಅಸಾಧ್ಯವಾದಾಗ ತುಂಬ ಬೇಸರವಾಗುತ್ತದೆ.
ನಮ್ಮಲ್ಲಿ ಹಾವನ್ನು ವಿಷಜಂತು ಎಂದು ಪರಿಗಣಿಸಿರುದರಿಂದ ಎಲ್ಲಾದರೂ ಹಾವು ಕಂಡಲ್ಲಿ ದೂರವಾಣಿ ಮೂಲಕ ತಿಳಿಸುತ್ತಾರೆ. ನಾನು ಹಿಡಿದು ರಕ್ಷಿಸುತ್ತೇನೆ. ಸುರಕ್ಷಿತ ಸ್ಥಳಕ್ಕೆ ಬಿಟ್ಟುಬರುತ್ತೇನೆ. ಹಾಗೆಯೇ ಯಾವುದೇ ಹಕ್ಕಿ, ಚೇಳು ಮುಂತಾದ ಯಾವುದೇ ಜೀವಿಗೆ ತೊಂದರೆಯಾಗಿರುವುದು ಕಂಡರೂ ರಕ್ಷಿಸಲು ಪ್ರಯತ್ನಿಸುತ್ತೇನೆ. ಅವೂ ನಮ್ಮಂತೆಯೇ. ಆದರೆ ಮಾತು ಬರದಷ್ಟೇ. ಎಲ್ಲಾ ಪ್ರಾಣಿಗಳಿಗೂ ಬದುಕಲು ನಮ್ಮಷ್ಟೇ ಹಕ್ಕಿದೆ. ಸುತ್ತ ಮುತ್ತ ಯಾವುದೇ ಜೀವಿಗೆ ತೊಂದರೆಯಾದರೂ ಸಾಧ್ಯವಾದಷ್ಟೂ ಸಹಾಯ ಮಾಡುವುದು ನನ್ನ ಹವ್ಯಾಸವಾಗಿಬಿಟ್ಟಿದೆ’ ಎನ್ನುತ್ತಾರೆ ಕೊತ್ತನೂರಿನ ಸ್ನೇಕ್ ನಾಗರಾಜ್.
ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಸ್ನೇಕ್ ನಾಗರಾಜ್ ರ ಅನಿಯಮಿತ ಕೊಡುಗೆ ಪ್ರಶಂಸನೀಯ ಹಾಗೂ ಜೀವ ಜಂತುಗಳ ಪ್ರತಿ ಅವರ ಕಾಳಜಿ ನಮ್ಮೆಲ್ಲರಿಗೂ ಮಾದರಿಯೇ ಸರಿ.
ನಾಗರಾಜ್ ರನ್ನು ಸಂಪರ್ಕಿಸಲು ಕರೆಮಾಡಿ +91 9342515443

ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಸಭೆ

0

ಶಿಡ್ಲಘಟ್ಟದಲ್ಲಿ ಶನಿವಾರ ಔಷಧಿ ವ್ಯಾಪಾರಿಗಳು ಸಭೆ ಸೇರಿ ಸಂಘದ ಚಟುವಟಿಕೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.

ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

0

ಪಟ್ಟಣದ ಹೊರವಲಯದ ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 19 ನೇ ವರ್ಷದ ಉಟ್ಲು ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ದೇವರಿಗೆ ಪೂಜೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿಯ ನಂತರ ಹಾಲು ಉಟ್ಲು ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಮನರಂಜನಾ ಉಟ್ಲು ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಗಳು ಹಾಗೂ ಪಟ್ಟಣದಿಂದ ನೂರಾರು ಮಂದಿ ಭಕ್ತರು ಪೂಜೆಯಲ್ಲಿ ಮತ್ತು ಉಟ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಗಮಿಸಿದ್ದ ಭಕ್ತರಿಗೆಲ್ಲಾ ಮಾರುತಿ ನಗರದ ಯುವಕ ಬಳಗದ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ಇದ್ಲೂಡು ಗ್ರಾಮಸ್ಥರು ಮತ್ತು ಮಲ್ಲೆಪ್ಪನವರ ಮಠದಿಂದ ಪಾನಕವನ್ನು ವಿನಿಯೋಗಿಸಲಾಯಿತು.

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ದೀಪೋತ್ಸವ

0

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಶನಿವಾರ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ದೀಪೋತ್ಸವ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸತ್ತಮುತ್ತಲಿನ ಗ್ರಾಮಗಳಿಂದ ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಬೆಳಗಿದರು. ದೇವರಿಗೆ ಬೆಳಿಗ್ಗೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ಈ ಪುರಾತನ ದೇವಾಲಯಕ್ಕೆ ಆಗಮಿಸಲು ಇತ್ತೀಚೆಗಷ್ಟೆ ನರೇಗಾ ಯೋಜನೆಯಲ್ಲಿ ರಸ್ತೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಯನ್ನು ಮಾಡಲಾಗುವುದು. ಮಳೆ ಬೆಳೆ ಚೆನ್ನಾಗಿ ಆಗಲೆಂದು ಮಹಿಳೆಯರು ದೀಪೋತ್ಸವ ನಡೆಸಿದ್ದಾರೆ. ಪ್ರಕೃತಿಯ ನೆರವಿದ್ದಾಗ ಮಾತ್ರ ರೈತರು ಉತ್ತಮ ಬೆಳೆಯಲು ಸಾಧ್ಯ‘ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಲೀಲಾ ರಾಜಣ್ಣ, ಬಂಕ್‌ ಮುನಿಯಪ್ಪ, ಕೆ.ಎಂ.ವೆಂಕಟೇಶ್‌, ಜಿ.ಟಿ.ನಾರಾಯಣಸ್ವಾಮಿ, ಮುನಿಯಪ್ಪ, ನಂಜಪ್ಪ, ನಾರಾಯಣಪ್ಪ, ಆರ್‌.ವಿ.ನಾಗರಾಜ್‌, ಕೆ.ಎಸ್‌.ವೀರಣ್ಣ, ವೆಂಕಟೇಶ್‌, ಅರುಣ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್‌ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್‌ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕನ್ನಡ ರೈತ ಯುವಕ ಸಂಘ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದೊಂದಿಗೆ ಮೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ರಕ್ತದಾನ ಶಿಬಿರವನ್ನು ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಉದ್ಘಾಟಿಸಿದರು.
‘ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲೇ ಹೆಚ್ಚು ರಕ್ತದಾನ ಮಾಡಿದ ದಾಖಲೆ ಮತ್ತು ಕೀರ್ತಿ ಶಿಡ್ಲಘಟ್ಟ ತಾಲ್ಲೂಕಿಗೆ ಲಭಿಸಿದೆ. ರಕ್ತದಾನದ ಬಗ್ಗೆ ಅರಿವು ಗ್ರಾಮಾಂತರ ಪ್ರದೇಶಗಳಲ್ಲೂ ಹರಡಿ ವ್ಯಾಪಕವಾಗಬೇಕು. ಜಿಲ್ಲಾ ಕೇಂದ್ರದಲ್ಲಿ ರಕ್ತನಿಧಿ ಬ್ಯಾಂಕ್‌ ಸ್ಥಾಪಿಸಿರುವುದರಿಂದ ಸಂಗ್ರಹಿಸಿದ ರಕ್ತ ಅವಶ್ಯಕತೆಯಿರುವವರಿಗೆ ಲಭ್ಯವಾಗುತ್ತದೆ. ಡಾ.ರಾಜ್‌ಕುಮಾರ್‌ ಮಾದರಿ ವ್ಯಕ್ತಿತ್ವವುಳ್ಳವರು. ಅವರು ಎಲ್ಲರಿಗೂ ಪ್ರೇರಕರಾಗಿದ್ದವರು. ಅವರ ಸವಿನೆನಪಿನಲ್ಲಿ ರಕ್ತದಾನ ಶಿಬಿರವನ್ನು ಕಳೆದ ಹದಿನೈದು ವರ್ಷಗಳಿಂದ ಆಯೋಜಿಸುತ್ತಿರುವುದು ಗ್ರಾಮಸ್ಥರ ಸಾಮಾಜಿಕ ಕಾಳಜಿಯನ್ನು ಪ್ರತಿನಿಧಿಸುತ್ತದೆ’ ಎಂದು ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಹೇಳಿದರು. ಒಟ್ಟು 70 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು.
ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ನಾರಾಯಣಾಚಾರ್‌, ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್‌, ಡಾ.ಉಷಾರಾಣಿ, ಪಶುವೈದ್ಯಾಧಿಕಾರಿ ಡಾ.ಜಯಶೀಲರೆಡ್ಡಿ, ಶ್ರೀನಿವಾಸಮೂರ್ತಿ, ರಾಮಾಂಜಿನಪ್ಪ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಧರ್ಮೇಂದ್ರ, ಸುಧೀರ್‌, ಸುದರ್ಶನ್‌, ಆನಂದ್‌, ಶ್ರೀನಿವಾಸ್‌, ಗೋಪಾಲ್‌, ಲಕ್ಷ್ಮಣ್‌, ಗ್ರಾಮಪಂಚಾಯಿತಿ ಸದಸ್ಯರಾದ ಕೆ.ಮಂಜುನಾಥ್‌, ರೂಪೇಶ್‌, ಮುನಿಕೃಷ್ಣಪ್ಪ, ರೇಣುಕಾ ಆನಂದ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೇಲೂರು ಗ್ರಾಮದಲ್ಲಿ 26 ನೇ ವರ್ಷದ ಧರ್ಮರಾಯಸ್ವಾಮಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗವನ್ನು ಬುಧವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದಲ್ಲಿ ನಡೆಯುತ್ತಿರುವ 26 ನೇ ವರ್ಷದ ಹೂವಿನ ಕರಗ ಮಹೋತ್ಸವದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರು. ಮನೆಗಳ ಮುಂದೆ ರಂಗವಲ್ಲಿಯನ್ನು ಹಾಕಿ ಕರಗಕ್ಕೆ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿದರು. ವಹ್ನೀಕುಲ ಕ್ಷತ್ರಿಯರ ಟ್ರಸ್ಟ್‌ ವತಿಯಿಂದ ಆಯೋಜಿಸಲಾಗಿದ್ದ ಕರಗ ಮಹೋತ್ಸವಕ್ಕೆಂದು ಧರ್ಮರಾಯಸ್ವಾಮಿ ದ್ರೌಪದಮ್ಮನವರ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದರು. ಪ್ರಮುಖ ಬೀದಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.
ಕರಗವನ್ನು ಧರ್ಮೇಂದ್ರ ಅವರು ಹೊತ್ತಿದ್ದು, ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆಯಲ್ಲಿ ತೆರಳಿ ಪ್ರತಿ ಮನೆಯ ಬಳಿಯೂ ಪೂಜೆಯನ್ನು ಸ್ವೀಕರಿಸಿದರು. ಕರಗದೊಂದಿಗೆ ತಮಟೆ, ನಾದಸ್ವರ ಸೇರಿದ ವಾದ್ಯಗೋಷ್ಠಿ, ವೀರಕುಮಾರರು ಮೆರವಣಿಗೆಯಲ್ಲಿ ಸಾಗಿದರು.
Now sidlaghatta.com is on WhatsApp, text ‘HI’ to +91 9986904424

ಎಂ.ಶಶಿಧರ ಗೆ ‘ಇಂಡಿಯನ್‌ ಲೀಡರ್‌ಷಿಪ್‌ ಅವಾರ್ಡ್‌ ಫಾರ್‌ ಎಜುಕೇಷನ್‌ ಎಕ್ಸಲೆನ್ಸ್‌’ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ, ನವದೆಹಲಿಯ ಗ್ಲೋಬಲ್‌ ಅಚೀವರ್ಸ್‌ ಫೌಂಡೇಷನ್‌ ನೀಡುವ ‘ಇಂಡಿಯನ್‌ ಲೀಡರ್‌ಷಿಪ್‌ ಅವಾರ್ಡ್‌ ಫಾರ್‌ ಎಜುಕೇಷನ್‌ ಎಕ್ಸಲೆನ್ಸ್‌’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜೂನ್‌ 12 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

Now sidlaghatta.com is on WhatsApp, text ‘HI’ to +91 9986904424

ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕ

0

ಪಟ್ಟಣದ ಗಾರ್ಡನ್‌ ರಸ್ತೆಯಲ್ಲಿರುವ ಸುಮಾರು ಏಳುನೂರು ವರ್ಷಗಳ ಇತಿಹಾಸವಿರುವ ಪುರಾತನ ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕವನ್ನು ಬುಧವಾರ ರಾತ್ರಿ ಆಯೋಜಿಸಲಾಗಿತ್ತು.
ಗಂಧದ ಅಭಿಷೇಕದ ನಿಮಿತ್ತ ಉಚಿತವಾಗಿ ಬಡಮಕ್ಕಳಿಗೆ ಸಾಮೂಹಿಕ ಸುನ್ನತಿ, ವೈದ್ಯಕೀಯ ಚಿಕಿತ್ಸೆ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ನೆರವು ಕಾರ್ಯಕ್ರಮದಲ್ಲಿ ನಾನ್ನೂರು ಮಂದಿ ಚಿಕಿತ್ಸೆ ಪಡೆದುಕೊಂಡರು. ಬೆಂಗಳೂರು ಬಿಜಾಪುರ ಮತ್ತು ಮೈಸೂರಿನಿಂದ ಆಗಮಿಸಿದ್ದ ವೈದ್ಯರು ಚಿಕಿತ್ಸೆ ನೀಡಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಸುಮಾರು 20 ಮಂದಿ ಬಡ ಮಕ್ಕಳಿಗೆ ಸುನ್ನತಿಯನ್ನು ಉಚಿತವಾಗಿ ವೈದ್ಯರಿಂದ ಮಾಡಿಸಲಾಯಿತು. ನಂತರ ಸುನ್ನತಿ ಮಾಡಿಸಿಕೊಂಡ ಮಗುವಿಗೆ ಅಕ್ಕಿ, ತುಪ್ಪ, ಬಟ್ಟೆ, ಗೋದಿ, ಬೆಲ್ಲ, ಕೊಬ್ಬರಿಗಳನ್ನು ದರ್ಗಾ ಸಮಿತಿಯ ವತಿಯಿಂದ ನೀಡಲಾಯಿತು.
ರಾತ್ರಿ ನಡೆದ ಗಂಧದ ಅಭಿಷೇಕ್ಕೆ ದರ್ಗಾವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಗಂಧವನ್ನು ಅಭಿಷೇಕ ಮಾಡಿ ಮಲ್ಲಿಗೆ ಹೂಗಳಿಂದ ಅಲಂಕರಿಸಿದ ಚಾದರ್‌ ಹೊದಿಸಿದ ನಂತರ ಧರ್ಮಗುರುಗಳು ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ಅವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂರ್ಭದಲ್ಲಿ ಖವ್ವಾಲಿಯನ್ನು ಹಾಗೂ ಪ್ರಾರ್ಥನಾ ಗೀತೆಗಳು ವಾದ್ಯದೊಂದಿಗೆ ಹಾಡುಗಾರರು ಹಾಡಿ ಮಲ್ಲಿಗೆ ಕಂಪಿನೊಂದಿಗೆ ತಮ್ಮ ಕಂಠದ ಇಂಪನ್ನೂ ಸೇರಿಸಿದರು.
ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾ ಸಮಿತಿ ಮುಖಂಡರಾದ ಹಫೀಜುಲ್ಲಾ, ಷಫೀಯುಲ್ಲಾ, ಆಜಂಖಾನ್‌, ಸರ್ದಾರ್‌ಖಾನ್‌, ಗುರುಗಳಾದ ನೂರ್‌ ಮೌಲಾ ಹಾಜರಿದ್ದರು.

ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"

0

ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
1807 ರಲ್ಲಿ ಪ್ರಕಟವಾದ ಅವರ ಪುಸ್ತಕ “A journey from Madras through the countries of Mysore, Canara, and Malabar” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. 1799ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.
ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ 13ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.
 

 
ಬುಕನನ್ ನ ಅಧ್ಯಯನವನ್ನು ವಿವರವಾಗಿ ತಿಳಿಸುವ ಈ ಪುಸ್ತಕ University of Pittsburgh online library ಅಲ್ಲಿ ಲಭ್ಯವಿದೆ ಓದಲು ಇಲ್ಲಿ click ಮಾಡಿ
ಶಿಡ್ಲಘಟ್ಟದ ಇತಿಹಾಸವನ್ನು ತಿಳಿಯಲು ಇಲ್ಲಿ click ಮಾಡಿ

ಶಿಡ್ಲಘಟ್ಟ ತಾಲ್ಲೂಕು ಬೂದಾಳ ಗ್ರಾಮಕ್ಕೆ ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಭೇಟಿ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಸೊಪ್ಪಿಗೆ ಈಚೆಗೆ ಧಾಳಿಯಿಡುತ್ತಿರುವ ಹೊಸ ಬಕಾಸುರ ಕೀಟಗಳ ಬಗ್ಗೆ ಪರಿಶೀಲಿಸಲು ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಬೂದಾಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು. ತಾಲ್ಲೂಕಿನ ಬೂದಾಳದ ಕೆರೆಯಂಚಿನ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ಕಳೆದ ಮೂರು ರಾತ್ರಿಗಳಿಂದ ಹೊಸ ರೀತಿಯ ಜೀರುಂಡೆಗಳು ಧಾಳಿಯಿಡುತ್ತಿದ್ದು, ಜೇನು ನೊಣಗಳಂತೆ ನೂರಾರು ಜೀರುಂಡೆಗಳು ರಾತ್ರಿಯಾಗುತ್ತಿದ್ದಂತೆಯೇ ಆಗಮಿಸಿ ಹಿಪ್ಪುನೇರಳೆ ಸೊಪ್ಪಿನ ಸುಳಿಗಳಿಗೆ ಜೋತು ಬೀಳುತ್ತಿವೆ. ಅವುಗಳು ಸೊಪ್ಪನ್ನು ತಿನ್ನುವ ವೇಗವಂತೂ ಗಾಬರಿಗೊಳ್ಳುವಂತಿದೆ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳೊಂದಿಗೆ ಆಗಮಿಸಿದ್ದ ಅಧಿಕಾರಿಗಳು ರೈತರು ಹಿಡಿದಿಟ್ಟಿದ್ದ ಜೀರುಂಡೆಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಬೂದಾಳದ ರೈತರಾದ ರಾಮಾಂಜಿನಪ್ಪ, ಸದಾಶಿವರೆಡ್ಡಿ, ಮುನಿಶಾಮಿರೆಡ್ಡಿ, ಶಂಕರ್‌, ವೆಂಕಟಪ್ಪ ತಮ್ಮ ಹಿಪ್ಪುನೇರಳೆ ತೋಟಕ್ಕೆ ಬಂದು ಸೊಪ್ಪು ತಿನ್ನುವ ಕೀಟಗಳ ಕುರಿತಂತೆ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ಈ ಜೀರುಂಡೆಗಳು ನೂರಾರು ಸಂಖ್ಯೆಯಲ್ಲಿ ರಾತ್ರಿ ವೇಳೆ ಹಿಪ್ಪುನೇರಳೆ ತೋಟಗಳಿಗೆ ಬಂದು ಎಲೆಗಳಿಗೆ ಕುಚ್ಚುಕುಚ್ಚಾಗಿ ಜೋತು ಬಿದ್ದು ಒಂದು ಕಡೆಯಿಂದಾ ತಿನ್ನುತ್ತಾ ಬರುತ್ತಿವೆ. ಇವು ರಾತ್ರಿ ವೇಳೆಯಲ್ಲಿ ಮಾತ್ರ ಬರುತ್ತಿವೆ. ಎಲ್ಲಿಂದ ಬರುತ್ತಿವೆಯೋ, ಎಲ್ಲಿಗೆ ಹೋಗುತ್ತವೆಯೋ ತಿಳಿಯದು. ಇವುಗಳ ಸಂಖ್ಯೆಯನ್ನು ನೋಡಿದರೆ ರೈತರ ಪಾಲಿನ ಬಕಾಸುರರಂತೆ ಕಾಣುತ್ತಿವೆ’ ಎಂದು ರೈತರು ತಿಳಿಸಿದರು.
‘ಈ ಕೀಟಗಳನ್ನು ಮೇ ಜೂನ್‌ ಬೀಟಲ್‌ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯಾ ಸೆರ್ರಾಟ ಎಂದಿದೆ. ಇದರ ಜೀವನ ಚಕ್ರ ಒಂದು ವರ್ಷ ಕಾಲವಿದ್ದು ಎಲ್ಲಾ ನೆಲದೊಳಗೇ ನಡೆಯುತ್ತದೆ. ಮೊದಲ ಮಳೆ ಬಿದ್ದೊಡನೆಯೇ ನೆಲದಿಂದ ಹೊರ ಬರುವ ಈ ಕೀಟಗಳು ಸಾಮಾನ್ಯವಾಗಿ ಗುಲಾಬಿ, ಜಾಲಿ, ಬೇವು, ಕಬ್ಬು ಮುಂತಾದವುಗಳ ಎಲೆಗಳನ್ನು ತಿನ್ನುತ್ತವೆ. ಅಚ್ಚರಿಯಾಗುವಂತೆ ಹಿಪ್ಪುನೇರಳೆ ಸೊಪ್ಪಿಗೂ ಆಕರ್ಷಿತವಾಗಿವೆ. ಒಂದು ತಿಂಗಳು ಮಾತ್ರ ಇವುಗಳು ನೆಲದಿಂದ ಹೊರವಿರುತ್ತವೆಯಷ್ಟೆ. ಒಂದು ಬಾರಿ ಸುಮಾರು ಎಂಟು ನೂರು ಮೊಟ್ಟೆಗಳನ್ನಿಡುವ ಇವುಗಳ ಸಂಖ್ಯೆಯೂ ದೊಡ್ಡದೇ. ಕಟಾವಿಗೆ ಬಂದಿರುವ ಸೊಪ್ಪಿಗೆ ಔಷಧಿಯನ್ನು ಸಿಂಪಡಿಸಲಾಗದು. ಆದ್ದರಿಂದ ತೋಟದಲ್ಲಿ ಅಲ್ಲಲ್ಲಿ ಬೇವಿನ ಸೊಪ್ಪನ್ನು ಕಟ್ಟಿ ಹುಳುಗಳನ್ನು ಆಕರ್ಷಿಸಿ ಹಿಡಿದು ಸೀಮೆಎಣ್ಣೆ ಮಿಶ್ರಿತ ನೀರಲ್ಲಿ ಹಾಕಿ ಸಾಯಿಸಬೇಕು. ಅಲ್ಲಲ್ಲಿ ಪ್ರಕರವಾದ ಬೆಳಕು ಹಾಯಿಸಿ ಈ ಹುಳುಗಳನ್ನು ಆಕರ್ಷಿಸಿ ಸಾಯಿಸಬಹುದು ಅಥವಾ ಸುಡಬಹುದು. ಈ ರೀತಿ ಸಾಯಿಸುವುದರಿಂದ ಇವುಗಳ ಸಂತತಿಗೆ ಕಡಿವಾಣ ಬಿದ್ದು ಮುಂದಿನ ಬಾರಿ ಇವು ಬರದಂತಾಗುತ್ತದೆ’ ಎಂದು ವಿಜ್ಞಾನಿ ಡಾ.ಎಚ್‌.ಎಸ್‌.ಫಣಿರಾಜ್‌ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್‌, ಸಹಾಯಕ ನಿರ್ದೇಶಕ ಚಂದ್ರಪ್ಪ, ಅಧಿಕಾರಿಗಳಾದ ಕೃಷ್ಣಪ್ಪ, ತಿಮ್ಮಪ್ಪ, ರೈತರಾದ ಜೆ.ವಿ.ವೆಂಕಟಸ್ವಾಮಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು