Sidlaghatta : ಶಿಡ್ಲಘಟ್ಟ ತಾಲ್ಲೂಕಿನ ರೈತರು ಬೆಳೆದ ಜಂಬುನೇರಳೆ ಹಣ್ಣು ಮೊಟ್ಟಮೊದಲ ಬಾರಿಗೆ ವಿದೇಶಕ್ಕೆ ಹಾರಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಂಬುನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಸಿಗುವ ಆಶಾಭಾವನೆ ರೈತರಲ್ಲಿ ಮೂಡಿದೆ.
ತಾಲ್ಲೂಕಿನ ಕನ್ನಮಂಗಲದ ರೈತ ಕೆ.ಎನ್.ಮಾರೇಶ್ ಅವರು ಬೆಳೆದಿರುವ ಒಂದು ಟನ್ ಜಂಬುನೇರಳೆ ಹಣ್ಣು ಈ ಬಾರಿ ಲಂಡನ್ನಿಗೆ ರಫ್ತಾಗಿದೆ. ಇದಕ್ಕೆ ಮೂಲ ಕಾರಣ ಚಿಂತಾಮಣಿಯ ಮ್ಯಾಂಗೋ ಬೋರ್ಡ್ ನ ವ್ಯವಸ್ಥಾಪಕ ಹರಿಪ್ರಸಾದ್.
“ನಮ್ಮದು ಎರಡೂವರೆ ಎಕರೆ ತೋಟದಲ್ಲಿ ಒಂದು ನೂರು ಜಂಬುನೇರಳೆ ಮರಗಳಿವೆ. ಸುಮಾರು ಎಂಟು ವರ್ಷಗಳಿಂದ ಫಸಲು ಕೊಡುತ್ತಿವೆ. ಹಣ್ಣು ಬಿಟ್ಟಾಗ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು, ಸಿಕ್ಕ ಬೆಲೆಗೆ ಮಾರಿ ಬರುವುದು ನಮಗೆ ರೂಢಿ. ಕೆಲ ಬಾರಿ ಹೆಚ್ಚಿನ ಹಣ್ಣುಗಳು ಆವಕವಾದಾಗ ಕೊಳ್ಳುವವರಿಲ್ಲದೆ ಬಿಸಾಡಿ ಬಂದದ್ದೂ ಇದೆ. ಇದೀಗ ಮ್ಯಾಂಗೋ ಬೋರ್ಡ್ ನ ವ್ಯವಸ್ಥಾಪಕ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಂಬುನೇರಳೆ ಹಣ್ಣಿಗೆ ವಿದೇಶಕ್ಕೆ ರಫ್ತಾಗುವ ಅವಕಾಶ ಲಭಿಸಿದೆ. ಮುಂದೆ ಒಳ್ಳೆಯ ದಿನಗಳು ಬರುತ್ತದೆ ಎಂಬ ನಂಬಿಕೆ ಬಂದಿದೆ” ಎಂದು ರೈತ ಕೆ.ಎನ್.ಮಾರೇಶ್ ತಿಳಿಸಿದರು.
“ನಾನು ಮ್ಯಾಂಗೋ ಬೋರ್ಡ್ ನಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿ ಮಾವಿನ ಹಣ್ಣನ್ನು ವಿದೇಶಕ್ಕೆ ರಫ್ತು ಮಾಡುವ ಮುನ್ನ ಪ್ಯಾಕಿಂಗ್ ಮಾಡುವ ಎರಡು ಘಟಕಗಳಿವೆ. ಅಲ್ಲಿಗೆ ಬರುವ ರಫ್ತುದಾರರೊಂದಿಗೆ ಒಡನಾಟವಿರುವ ನಮ್ಮ ವ್ಯವಸ್ಥಾಪಕರು, ನೇರಳೆಹಣ್ಣನ್ನು ಸಹ ರಫ್ತುದಾರರು ಕೇಳುತ್ತಿದ್ದಾರೆ, ಗುಣಮಟ್ಟದ್ದು ಇದ್ದರೆ ತಂದು ಕೊಡು ಎಂದು ನನಗೆ ತಿಳಿಸಿದರು. ಅದರಂತೆ ನಮ್ಮ ತೋಟದ ಜಂಬುನೇರಳೆ ಹಣ್ಣನ್ನು ಕೊಟ್ಟೆ” ಎಂದು ಅವರು ವಿವರಿಸಿದರು.
Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ಕೈಗಾರಿಕೆ ಪ್ರದೇಶ ಅಭಿವೃದ್ದಿಯ ಯೋಜನೆಯನ್ನು ಕೈ ಬಿಡಬೇಕು. ಭೂ ಸ್ವಾಧೀನದ ವಿರುದ್ದ ನಮ್ಮ ಹೋರಾಟ ಮುಂದುವರೆದಿದ್ದು ಜುಲೈ 1 ರಂದು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಟ್ರ್ಯಾಕ್ಟರ್ ಗಳ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನೆ ನಡೆಸುವ ಹಿನ್ನಲೆ ಶಿಡ್ಲಘಟ್ಟದ ರೈತರ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರತಿಭಟನೆಯ ವಿವರ ನೀಡಿ ಮಾತನಾಡಿದರು.
ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಭೂ ಸ್ವಾನ ಪ್ರಕ್ರಿಯೆ ಆರಂಭಿಸಿದಾಗಿನಿಂದಲೂ ಇದುವರೆಗೂ ನಾವು ಹಲವು ರೀತಿಯ ಪ್ರತಿಭಟನೆ ನಡೆಸಿದ್ದು ಭೂಮಿಯ ಸ್ವಾಧೀನವನ್ನು ವಿರೋಧಿಸುತ್ತಲೆ ಬಂದಿದ್ದೇವೆ. ಯಾವುದೆ ಕಾರಣಕ್ಕೂ ನಾವು ಕೃಷಿ ಭೂಮಿಯನ್ನು ಕೆಐಎಡಿಬಿಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದರು.
ಭೂ ಸ್ವಾನ ವಿಚಾರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಬಿ.ಎನ್.ರವಿಕುಮಾರ್ ಅವರು ರೈತರ ಪರ ನಿಂತಿಲ್ಲ. ರೈತರಿಂದ ಭೂಮಿಯನ್ನ ಕಿತ್ತುಕೊಂಡು ಕೈಗಾರಿಕೆಗಳನ್ನು ಆರಂಭಿಸುವತ್ತಲೆ ಅವರು ನಿಂತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದುವರೆಗೂ ನಾನಾ ಹಂತದ ಪ್ರತಿಭಟನೆ, ಹೋರಾಟದ ಮೂಲಕ ಕೆಐಎಡಿಬಿಯ ಭೂ ಸ್ವಾಧೀನ ವಿರುದ್ದ ನಿಂತಿರುವ ನಾವು ಇದೀಗ ಜಿಲ್ಲಾಧಿಕಾರಿಗಳ ಕಚೇರಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದಲೂ ಟ್ರ್ಯಾಕ್ಟರ್ ಗಳ ಮೂಲಕ ಆಗಮಿಸಿ ಅಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜಂಗಮಕೋಟೆಯಲ್ಲಿ ಭೂ ಸ್ವಾಧೀನದ ವಿರುದ್ದ ಇರುವ ರೈತರಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಾಜಿ ಕೇಂದ್ರ ಸಚಿವ ಇಬ್ರಾಹಿಂ ಇನ್ನಿತರೆ ಅನೇಕ ರಾಜ್ಯ, ರಾಷ್ಟ್ರೀಯ ನಾಯಕರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿವರಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಡಿಪಿನಾಯಕನಹಳ್ಳಿ ಅಜಿತ್, ಅಶ್ವತ್ಥಪ್ಪ ಇನ್ನಿತರೆ ರೈತ ಮುಖಂಡರು ಹಾಜರಿದ್ದರು.
J Venkatapura, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಅಧ್ಯಕ್ಷೆ ಆಗಿ ಚುನಾಯಿತರಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಹಾಗೂ ಬೈರಸಂದ್ರ ಗ್ರಾಮದ ಶಶಿಕಲಾ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 17 ಮಂದಿ ಸದಸ್ಯತ್ವ ಬಲ ಹೊಂದಿರುವ ಗ್ರಾ.ಪಂ ಯಲ್ಲಿ ಎಸ್.ನಯನಾ ಅವರಿಗೆ 10 ಮತ ಹಾಗು ಶಶಿಕಲಾ ಅವರಿಗೆ 7 ಮತಗಳು ಬಂದಿದ್ದು ಎಸ್.ನಯನಾ ಅವರು ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೃಷಿ ಸಹಾಯಕ ನಿರ್ದೇಶಕ ಪಿ.ರವಿ ಘೋಷಣೆ ಮಾಡಿದರು.
ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು, ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರಿಂದ ಪಕ್ಷದ ಸದಸ್ಯರಲ್ಲೆ ಗೊಂದಲವುಂಟಾಗಿತ್ತು. ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಬೆಳಗ್ಗೆಯಿಂದ ಸಂಧಾನ ನಡೆಸಿದರಾದರೂ ಸಂಧಾನ ವಿಫಲವಾಗಿದ್ದರಿಂದ ಚುನಾವಣೆ ಪ್ರಕ್ರಿಯೆ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ, ಮಾಜಿ ಅಧ್ಯಕ್ಷ ನಾಗೇಶ್, ಮಿತ್ತನಹಳ್ಳಿ ಹರೀಶ್, ಸುಗಟೂರು ದೇವರಾಜ್, ಸತೀಶ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ವಿರೂಪಾಕ್ಷಪ್ಪ, ಸುಧಾಕರ್, ಬಿಜ್ಜವಾರ ನಾಗರಾಜ್, ಮಿತ್ತನಹಳ್ಳಿ ಮುನಿಆಂಜಿನಪ್ಪ, ಪರಮೇಶಪ್ಪ, ನಾರಾಯಣಸ್ವಾಮಿ, ದ್ಯಾವಪ್ಪ, ನಾಗೇಶ್, ದೇವರಾಜ್, ಶಿವಶಂಕರ್, ತಿರುಪಳ್ಳಪ್ಪ, ಹಾಜರಿದ್ದರು.
Sidlaghatta : ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ಕೆಂಪನಿಗಳ ಸ್ದಾಪನೆಗೆ ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆಯನ್ನು ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್ ಮುಂದಿನಿಂದ
ತಾಲ್ಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆಯನ್ನು ಜಂಗಮಕೋಟೆ ಕೆಐಎಡಿಬಿ,13 ಹಳ್ಳಿಗಳ ರೈತ ಪರ ಹೋರಾಟ ಸಮಿತಿ ಹಾಗೂ ತಾಲ್ಲೂಕು ದಲಿತಪರ ಸಂಘಟನೆಗಳ ಓಕ್ಕೂಟಗಳು ಹಮ್ಮಿಕೊಂಡಿದ್ದವು.
ಸರ್ಕಾರ ಅಧಿಸೂಚನೆ ಹೊರಡಿಸಿರುವ 2823 ಎಕರೆಯಲ್ಲಿ ಸರ್ಕಾರಿ ಜಮೀನು ಹೊರತುಪಡಿಸಿ, ಉಳಿದ ಗ್ರಾಮಗಳಿಗೆ ಹೊಂದಿಕೊಂಡಿರುವ ನೀರಾವರಿ ಪ್ರದೇಶವನ್ನು ಕೈಬಿಡಬೇಕು. ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆಗಳನ್ನು ನಡೆಸುವಂತೆ ಒತ್ತಾಯಿಸಿದರು. ಚುರುಕುಗತಿಯಲ್ಲಿ ಭೂಸ್ವಾದೀನ ಪಡಿಸಿಕೊಂಡು ಭೂಮಿ ನೀಡಿದ ರೈತರಿಗೆ ಉತ್ತಮ ಭೂಪರಿಹಾರ, ಮನೆಗೊಂದು ಶಾಶ್ವತ ಕೆಲಸ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಂಗಮಕೋಟೆ ಹೋಬಳಿಯಲ್ಲಿ 520 ಎಕರೆ ಸಂಪೂರ್ಣವಾಗಿ ಪಿ.ಎಸ್.ಎಲ್ ಕೆಂಪನಿಯ ಹೆಸರಿನಲ್ಲಿದೆ. ಆ ಜಮೀನುಗಳ ಮೂಲ ರೈತರಿಗೆ ಸರ್ಕಾರದ ಭೂಪರಿಹಾರದ ಹಣ ಜಮಾ ಆಗಬೇಕು. ಪಿ.ಎಸ್. ಎಲ್ ಕೆಂಪನಿಯಿಂದ ಮೋಸ ಹೊಗಿರುವ ರೈತರಿಗೆ ನ್ಯಾಯ ಸಿಗುವವರೆವಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಮ್ಮ ಹೋರಾಟ ಕೆಐಎಡಿಬಿ ಪರ ಅಲ್ಲ, ಅಭಿವೃದ್ದಿಯ ಕಡೆಗೆ ನಮ್ಮ ಹೋರಾಟ.
ಭೂಮಿ ನೀಡಿದ ರೈತನ ಪ್ರತಿ ಎಕರೆಗೆ 3 ಕೋಟಿ ರೂ ಭೂ ಪರಿಹಾರ ನೀಡಲು ಕ್ರಮ ವಹಿಸಬೇಕು. ಜಂಗಮಕೋಟೆ ಹೋಬಳಿಯಲ್ಲಿ ಪಿ.ಎಸ್.ಎಲ್ ಕಂಪನಿಯ ಹೆಸರಿನಲ್ಲಿ ಕೆಲ ಮದ್ಯವರ್ತಿಗಳು ಅಮಾಯಕ ಮುಖ್ಯ ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಒಂದು ಎಕರೆಗೆ 50 ಸಾವಿರ,1 ಲಕ್ಷ ಹಣ ನೀಡಿ ಜಿಪಿಎ ಆಗ್ರಿಮೆಂಟ್ ಗಳನ್ನು ಮಾಡಿಕೊಂಡು ಹಣ ನೀಡದೆ ಮೋಸ ಮಾಡಿರುತ್ತಾರೆ. ಬಡವರಿಗೆ ನ್ಯಾಯಾಲಯಕ್ಕೆ ಹೊಗುವ ಶಕ್ತಿ ಇಲ್ಲ. ಹಾಗಾಗಿ ಸರ್ಕಾರ ಸಂಬಂಧಪಟ್ಟ ಕಾನೂನು ಇಲಾಖೆ ಮುಖಾಂತರ ರೈತರ ಪರವಾಗಿವಕೀಲರನ್ನು ನೇಮಿಸಿ ಕೆಲ ರೈತರ ಪಹಣಿಗಳಲ್ಲಿ ನಮೂದು ಆಗಿರುವ ತಡೆಯಾಜ್ಞೆ ಆದೇಶವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕು.
ಸರ್ಕಾರದಿಂದ ಭೂಮಿ ನೀಡಿದ ರೈತರಿಗೆ ಕೊಡುವ ಭೂ ಪರಿಹಾರ ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಕೆಐಎಡಿಬಿ ಪರ ಇರುವ ಕೆಲ ರೈತರ ಮೇಲೆ ಕೆಲವರು ಹಲ್ಲೆ ದಬ್ಬಾಳಿಕೆಗಳನ್ನು ಮಾಡುತ್ತಿದ್ದು, ಅಂತಹವರ ವಿರುದ್ಧ ಕೂನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಅವರಿಗೆ ನೀಡಿದರು. ಎ.ಸಿ ಅಶ್ವಿನ್, ಡಿ.ವೈ.ಎಸ್.ಪಿ ಮುರಳೀಧರ್ ಮತ್ತು ತಹಶೀಲ್ದಾರ್ ಗಗನಸಿಂಧು ಹಾಜರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕೆಐಎಡಿಬಿ 13 ಹಳ್ಳಿಗಳ ಹೋರಾಟ ಸಮಿತಿಯ ಮುಖಂಡರಾದ ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ, ಪ್ರಮೋದ್, ಬಸವಪಟ್ಟಣ ಆಂಜಿನಪ್ಪ, ಪ್ರಭುದೇವ್, ತಿಪ್ಪೇಗೌಡ, ರಾಮದಾಸ್, ನಾಗರಾಜ್, ಯಣ್ಣಂಗೂರು ಹರೀಶ್, ಗಂಗಾಧರ್, ಈರಪ್ಪ, ಮಧು, ನರಸಿಂಹಮೂರ್ತಿ, ಭಕ್ತರಹಳ್ಳಿ ವಿಶ್ವನಾಥ್, ಮುನಿಶಾಮಿ, ಜಂಗಮಕೋಟೆ ಜೆ.ಸಿ.ಮಂಜುನಾಥ್, ಮುನಿರಾಜು, ನಾಗರಾಜ್, ಚೀಮಂಗಲ ಚಿನ್ನಪ್ಪ, ಅತ್ತಿಗಾನಹಳ್ಳಿ ಮುನೇಗೌಡ, ನವೀನಕುಮಾರ್, ಮುನಿಕೆಂಚಪ್ಪ, ಹೀರೆಪಾಳ್ಯ ಕದೀರೇಗೌಡ, ಬೀಮಣ್ಣ, ನಾಗವೇಣಿ, ಗಾಯಿತ್ರೀ, ಶ್ಯಾಮ್, ರಾಜೇಶ್, ವಾರಹುಣಸೇನಹಳ್ಳಿ ನರಸಿಂಹ ಮೂರ್ತಿ, ಕರ್ನಾಟಕ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಪ್ರಕಾಶ, ಮಾನವ ಹಕ್ಕುಗಳ ಸಂಘಟನೆಯ ಮಳ್ಳೂರು ಅಶೋಕ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚಲಪತಿ, ಕೃಷ್ಣಪ್ಪ ಹಾಜರಿದ್ದರು.
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇತಿಹಾಸವನ್ನು ಅರಿಯಲು ಶಾಸನಾಧ್ಯಯನ ಬಹಳ ಮುಖ್ಯವಾದದ್ದು. ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆ ನಡೆಸುತ್ತಿರುವುದು ಸ್ವಾಗತಾರ್ಹ. ಮುಂದಿನ ಪೀಳಿಗೆಗೆ ಕ್ಷೇತ್ರದ ಐತಿಹ್ಯಗಳನ್ನು ಹೇಳಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಸಾಕಷ್ಟು ಹಳೆಯ ಕಲ್ಲುಗಳನ್ನು ನೋಡುತ್ತೇವಾದರೂ ಅವುಗಳ ಮಹತ್ವ ಎಲ್ಲರಿಗೂ ಗೊತ್ತಿರುವುದಿಲ್ಲ. ಪುರಾತತ್ವ ಇಲಾಖೆಯಿಂದ ನಡೆಸುತ್ತಿರುವ ಈ ಸರ್ವೆ ಕಾರ್ಯ ಸಂಪೂರ್ಣವಾದ ನಂತರ ಇಡೀ ಕ್ಷೇತ್ರದಲ್ಲಿ ಸಿಕ್ಕಿರುವ ಶಾಸನಗಳ ವಿಚಾರವನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.
ಶಾಸನತಜ್ಞ ಕೆ.ಧನಪಾಲ್ ಮಾತನಾಡಿ, “ನಾವುಗಳು ಶಿಡ್ಲಘಟ್ಟ ಗ್ರಾಮಾವಾರು ಸರ್ವೆ ಮಾಡುವಾಗ ಹಲವಾರು ಅಪರೂಪದ ಶಾಸನ ಮತ್ತು ವೀರಗಲ್ಲುಗಳನ್ನು ನೋಡುತ್ತಿದ್ದೇವೆ. ಅವುಗಳನ್ನು ಫೋಟೋ ಮತ್ತು ವೀಡಿಯೋ ಮೂಲಕ ದಾಖಲಿಸುತ್ತಾ, ಅವುಗಳ ಮೇಲೆ ಕೆತ್ತಿರುವ ಅಕ್ಷರಗಳನ್ನು ತಜ್ಞರಿಗೆ ಕಳುಹಿಸಿ ಓದಿಸುತ್ತಿದ್ದೇವೆ. ಗಂಗ, ನೊಳಂಬ, ಚೋಳ, ಹೊಯ್ಸಳ, ವಿಜಯನರದ ಅರಸರ ಕಾಲದ ಇತಿಹಾಸದ ಸಂಗತಿಗಳು ತಿಳಿಯುತ್ತಿವೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ಮಹತ್ವವನ್ನು ತಿಳಿಸಿದ್ದೇವೆ. ಗ್ರಾಮಸ್ಥರಲ್ಲಿಯೂ ಈ ಶಾಸನಗಳು ಮತ್ತು ವೀರಗಲ್ಲುಗಳನ್ನು ಉಳಿಸುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಲೂರಿನಲ್ಲಿರುವ ಆವತಿ ನಾಡಪ್ರಭು ಗೋಪಾಲಗೌಡರ ದಾನ ಶಾಸನ (ಕ್ರಿ.ಶ. 1698) ದ ಪಠ್ಯವನ್ನು ಮುದ್ರಿಸಿರುವ ಭಿತ್ತಿಪತ್ರವನ್ನು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಪುರಾತತ್ವ ಇಲಾಖೆಯ ಪರವಾಗಿ ಶಾಸನತಜ್ಞ ಕೆ.ಧನಪಾಲ್ ಅವರು ನೀಡಿದರು.
Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ, ಸುಬ್ರಮಣಿ ಎಂಬುವವರಿಗೆ ಸೇರಿದ 8 ಕುರಿಗಳನ್ನು, ಬೀದಿನಾಯಿಗಳು ಕಚ್ಚಿ ಸಾಯಿಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಸುಭ್ರಮಣಿ ಅವರ ಮನೆಯ ಮುಂಭಾಗದಲ್ಲಿನ ಶೆಡ್ ನಲ್ಲಿ ಕಟ್ಟಿದ್ದ ಕುರಿಗಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು, ಎಲ್ಲಾ ಕುರಿಗಳನ್ನು ಕಚ್ಚಿ ಸಾಯಿಸಿ, ಎರಡು ಕುರಿಗಳನ್ನು ಅರ್ಧಭಾಗದಷ್ಟು ತಿಂದು ಹಾಕಿವೆ.
ಮಾಲೀಕ ಸುಭ್ರಮಣಿ ಬೆಳಿಗ್ಗೆ ಎದ್ದು, ಕುರಿಗಳಿಗೆ ಮೇವು ಹಾಕುವುದಕ್ಕೆ ಹೋದಾಗ ಕುರಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಈ ಕುರಿತು ಮಾತನಾಡಿದ ಕುರಿಗಳ ಮಾಲೀಕ ಸುಭ್ರಮಣಿ, 8 ಕುರಿಗಳನ್ನು ಶೆಡ್ ನಲ್ಲಿ ಕಟ್ಟಿ ಮೇವು ಹಾಕಿ ಹೋಗಿ ಮಲಗಿದ್ದೆ, ಬೆಳಿಗ್ಗೆ ಎದ್ದು ಬಂದು ನೋಡುವಷ್ಟರಲ್ಲಿ 6 ಕುರಿಗಳು 2 ಮರಿಗಳನ್ನು ನಾಯಿಗಳು ಕಚ್ಚಿ ಸಾಯಿಸಿವೆ. ಇದರಿಂದ ಸುಮಾರು 80 ಸಾವಿರ ರೂಪಾಯಿಗಳು ನಷ್ಟವಾಗಿದೆ ಎಂದರು.
Sidlaghatta : ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ. ಆತ್ಮವೇ ಪರಮಾತ್ಮನ ಸ್ವರೂಪ ಎಂದು ಥಿಯಾಸಫಿ ವ್ಯಾಸಂಗದ ರಾಷ್ಟ್ರೀಯ ಉಪನ್ಯಾಸಕ ಡಾ.ಎಲ್.ನಾಗೇಶ್ ತಿಳಿಸಿದರು.
ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಆಯೋಜಿಸಿದ್ದ ಥಿಯಾಸಫಿ ವ್ಯಾಸಂಗದ ಕುರಿತಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಥಿಯಾಸಫಿ ಪ್ರಕಾರ, ಮಾನವ ಜೀವನದ ಮುಖ್ಯ ಉದ್ದೇಶವು ಆತ್ಮದ ಆಧ್ಯಾತ್ಮಿಕ ಮುಕ್ತಿ ಮತ್ತು ಜ್ಞಾನಾರ್ಜನೆ. ಇದರಲ್ಲಿ ಪುನರ್ಜನ್ಮ ಮತ್ತು ಆತ್ಮದ ಅನಂತತೆಯ ತತ್ವಗಳೂ ಸೇರಿವೆ. ಈ ವ್ಯಾಸಂಗವು ತತ್ವಶಾಸ್ತ್ರ, ಧರ್ಮ ಮತ್ತು ಮಾನವನ ಆಧ್ಯಾತ್ಮಿಕ ಶಕ್ತಿಗಳ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಜೀವನದ ಆಳವಾದ ಅರ್ಥ ಮತ್ತು ಸತ್ಯವನ್ನು ಅರಿಯಲು ಪ್ರಯತ್ನಿಸಬೇಕು. ಥಿಯಾಸಫಿ ವ್ಯಾಸಂಗದಲ್ಲಿ ಮಾನವ ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ವರ್ಗ ಅಥವಾ ಬಣ್ಣದ ಭೇದವಿಲ್ಲದೆ ಸರ್ವ ಮಾನವರ ನಡುವೆ ಸಹೋದರತ್ವವನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಎಲ್ಲಾ ಧರ್ಮಗಳ ತತ್ತ್ವಗಳನ್ನು ಗೌರವಿಸುವುದು ಮತ್ತು ಅವುಗಳ ಮಧ್ಯೆ ಏಕತೆ ಕಂಡುಹಿಡಿಯುವುದು ಗೋಷ್ಠಿಯ ಮುಖ್ಯ ಸಂಗತಿ ಎಂದು ಹೇಳಿದರು.
ಥಿಯಾಸಫಿ ಉಪನ್ಯಾಸಕಿ ಡಾ.ಜ್ಯೋತಿ ನಾಗೇಶ್ ಮಾತನಾಡಿ, ಥಿಯಾಸಫಿ 1875 ರಲ್ಲಿ ಸ್ಥಾಪಿತವಾದ ಒಂದು ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಸಂಘಟನೆ. ಇದರ ಮುಖ್ಯ ಉದ್ದೇಶ ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವವನ್ನು ನಿರ್ಮಿಸುವುದು, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವುದಾಗಿದೆ ಎಂದು ಹೇಳಿದರು.
ಬ್ರಹ್ಮವಿದ್ಯಾ ಸಮಾಜದ ಅಧ್ಯಕ್ಷ ಬಿ.ಕೆ.ವೇಣು, ಸದಸ್ಯರಾದ ಬಳೆ ರಘು, ಎಸ್.ಎಸ್.ಶಂಕರ್, ಕೆ.ಶ್ರೀನಾಥ್, ಚಿಕ್ಕಮುನಿಯಪ್ಪ, ಬಿ.ಸಿ.ನಂದೀಶ್ ಹಾಜರಿದ್ದರು.