20.1 C
Sidlaghatta
Thursday, January 1, 2026
Home Blog Page 961

ಕಂದಮ್ಮಗಳು ಕರೆಯುತ್ತಿವೆ ರಕ್ಷಣೆಗಾಗಿ – ಭಾಗ 2

0

ಯಾರು ಬಲಿಪಶುಗಳಾಗಬಹುದು?
ಹಿಂಸೆಗೆ ಒಳಪಡುವವರು ಸಾಮಾಜಿಕವಾಗಿ ಕೆಳಮಟ್ಟದವರೇ ಆಗಬೇಕೆಂದಿಲ್ಲ. ಎಲ್ಲಾ ಜಾತಿ, ಧರ್ಮ, ವರ್ಗ, ಜನಾಂಗದ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಆಗಬಹುದಾದ ಸಮಾನ ಸಾಧ್ಯತೆಗಳಿರುತ್ತದೆ. ಇದಕ್ಕೆ ಹಳ್ಳಿ ಪಟ್ಟಣಗಳ ವ್ಯತ್ಯಾಸ ಕೂಡ ಇರುವುದಿಲ್ಲ. ವಿದ್ಯಾವಂತರೂ ಕೂಡ ಅನಕ್ಷಸ್ಥರಷ್ಟೇ ಇದಕ್ಕೆ ಬಲಿಪಶುಗಳಾಗಬಹುದು. ಸುಂದರವಾಗಿರುವ ಮಕ್ಕಳ ಮೇಲೆ ಹಿಂಸಾಚಾರವಾಗುವ ಸಾಧ್ಯತೆ ಹೆಚ್ಚು ಎನ್ನುವುದೂ ಕೂಡ ತಪ್ಪು ಕಲ್ಪನೆ. ಮಾನಸಿಕ ರೋಗ ಅಥವಾ ಬುದ್ಧಿಮಾಂದ್ಯತೆ ಇರುವ ಮಕ್ಕಳು ಮತ್ತು ಅಂಗವಿಕಲರು ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳಿರುತ್ತದೆ.
ಇಷ್ಟೇ ಅಲ್ಲ ಲೈಂಗಿಕ ಹಿಂಸೆ ಹೆಣ್ಣು ಮಕ್ಕಳ ಮೇಲೆ ಮಾತ್ರ ನಡೆಯುತ್ತದೆ, ಗಂಡು ಮಕ್ಕಳು ಸುರಕ್ಷಿತರು ಎನ್ನುವುದೂ ಕೂಡ ನಿಜವಲ್ಲ. ಕೆಲವೇ ತಿಂಗಳ ಹಸುಳೆಗಳಿಂದ ಹಿಡಿದು, ತೊಂಬತ್ತು ವರ್ಷದ ವೃದ್ಧರ ಮೇಲೆ ಹಿಂಸಾಚಾರ ನಡೆದ ಸಾಕಷ್ಟು ಮೊಕದ್ದಮೆಗಳು ಪೋಲೀಸ್ ದಾಖಲೆಗಳಲ್ಲಿವೆ. ಒಂದು ಅಂದಾಜಿನ ಪ್ರಕಾರ ಸುಮಾರು ಶೇಕಡಾ 90ರಷ್ಟು ಹಿಂಸಾಚಾರಗಳು ನಾಲ್ಕನೇ ವಯಸ್ಸಿಗಿಂತ ದೊಡ್ಡ ಮಕ್ಕಳ ಮೇಲೆ ಆಗುತ್ತದೆ.
ಆದ್ದರಿಂದ ಯಾವ ಪೋಷಕರೂ ಕೂಡ ನಮ್ಮ ಮಕ್ಕಳು ಸುರಕ್ಷಿತರು, ನಾವೇನೂ ಮಾಡಬೇಕಾಗಿಲ್ಲ ಎಂದು ಮೈಮರೆಯುವಂತಿಲ್ಲ.
ನಾವು ಮಾಡಲೇಬೇಕಾದುದೇನು?
ಮಕ್ಕಳನ್ನು ಲೈಂಗಿಕ ಶೋಷಕರಿಂದ ರಕ್ಷಿಸುವುದು ಪೋಷಕರ ಕಟ್ಟುನಿಟ್ಟಿನ ಶಿಸ್ತಿನಿಂದ ಮಾತ್ರ ಸಾಧ್ಯವಾಗಲಾರದು. ಇದಕ್ಕಾಗಿ ನಿರಂತರ ಎಚ್ಚರದ ಅಗತ್ಯವಿದೆ.
1. ಮಾತು ಬಾರದ ಅಥವಾ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗದ ಐದು ವರ್ಷಕ್ಕಿಂತ ಚಿಕ್ಕ ಮಗುವನ್ನು ಅಪರಿಚಿತರ ಹತ್ತಿರ ಬಿಡಬಾರದು.
2. ಬೇಬಿ ಸಿಟ್ಟಿಂಗ್‍ಗಳಲ್ಲಿ ಮಗುವನ್ನು ಬಿಟ್ಟಾಗ ಮಾಮೂಲಿನ ಸಮಯದ ಹೊರತಾಗಿ ಕೆಲವೊಮ್ಮೆ ಧೀಡೀರ್ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿಗತಿಗಳ ಅರಿವಾಗುತ್ತದೆ.
3. ಮಕ್ಕಳು ಯಾರನ್ನಾದರೂ ಮುದ್ದಿಸಲು ಅಥವಾ ಹತ್ತಿರ ಸೇರಿಸಿಕೊಳ್ಳಲು ಇಷ್ಟಪಡದಿದ್ದರೆ ಬಲವಂತವಾಗಿ ಅವರನ್ನು ಅಂತಹ ಕೃತ್ಯಗಳಿಗೆ ತಳ್ಳಬಾರದು. ಮಗು ಎಷ್ಟೇ ಚಿಕ್ಕದಾಗಿದ್ದರೂ ಅದರ ಸ್ವಂತಿಕೆಯನ್ನು ಗೌರವಿಸಬೇಕು. ಪ್ರೀತಿಯನ್ನ ವ್ಯಕ್ತಪಡಿಸಲು ಮಗು ತನ್ನದೇ ಮಾರ್ಗಗಳನ್ನು ಉಪಯೋಗಿಸಲಿ. ಮನೆಯ ಹಿರಿಯರು ಮಗುವಿಗೆ ಇಷ್ಟವಿರದ ಇಂತಹ ಕೆಲಸವನ್ನು ಒತ್ತಾಯದಿಂದ ಹೇರುವುದನ್ನು ಪೋಷಕರು ತಡೆಯಬೇಕು.
4 ಗುರುಹಿರಿಯರನ್ನು ಗೌರವಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಆದರೆ ಅವರ ಯಾವುದೇ ಅನುಚಿತ ವರ್ತನೆಯನ್ನು ಪ್ರತಿಭಟಿಸಲು ಹೇಳಬೇಕು. ವಯಸ್ಸು, ಸ್ಥಾನ ಮುಂತಾದ ಯಾವ ಅಂಶಗಳನ್ನೂ ಗಮನಿಸದೆ ಮಕ್ಕಳು ತಮ್ಮ ಖಾಸಗೀತನವನ್ನು ಉಳಿಸಿಕೊಳ್ಳುವ ಶಿಕ್ಷಣ ನೀಡಬೇಕು.
5 ಮಗುವಿನ ಜನನಾಂಗ ಮತ್ತು ಪೃಷ್ಟಭಾಗನ್ನು ಬಟ್ಟೆಯ ಮೇಲೆ ಕೂಡ ಯಾರಾದರೂ ಅತಿಯಾಗಿ ಅಥವಾ ಮತ್ತೆಮತ್ತೆ ಸ್ಪರ್ಷಿಸಿದರೆ ಅದನ್ನು ಪ್ರತಿಭಟಿಸಬೇಕೆಂದು ತಿಳಿಸಬೇಕು. ಇಂತಹ ವರ್ತನೆಗಳನ್ನು ಮನೆಯವರೇ ಮಾಡಿದ್ದರೂ ಅದನ್ನು ನಮಗೆ ತಕ್ಷಣ ತಿಳಿಸಬೇಕೆಂದು ಪೋಷಕರು ಹೇಳಬೇಕು. ಹಾಗಂತ ಮಾಮೂಲಿನ ಪ್ರೀತಿಯ ಅಭಿವ್ಯಕ್ತಿಗಳಾದ ಎತ್ತಿಕೊಳ್ಳುವುದು, ಮುದ್ದಾಡುವುದು, ಆಟವಾಡುವುದು ಇವುಗಳನ್ನೇ ತಪ್ಪಿಸಬಾರದು. ಇದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಗುವಿಗೆ ದೈಹಿಕವಾಗಿ ನೋವುಂಟುಮಾಡಿದರೆ ಮತ್ತು ಪದೇ ಪದೇ ಸ್ಪರ್ಷ, ಹಿಸುಕುವುದು, ಜಿಗುಟುವುದು ಮುಂತಾದವು ಆಗುತ್ತಿದ್ದರೆ ಪೋಷಕರಿಗೆ ತಿಳಿಸಬೇಕೆಂದು ಹೇಳಿಕೊಡಬೇಕು.
6. ಮಕ್ಕಳು ಆಟವಾಗಲು ಹೋಗುವ ಮನೆಗಳ ಪೂರ್ಣ ಹಿನ್ನೆಲೆ ತಿಳಿದಿರಬೇಕು. ಯಾವುದೇ ವ್ಯಕ್ತಿ ನಮ್ಮ ಮಕ್ಕಳ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ ಅವನ ಬಗೆಗೆ ಮಕ್ಕಳಿಂದ ಮಾಹಿತಿ ಪಡೆಯಬೇಕು. “ನಿನಗೆ ಅವರು ಏಕೆ ಇಷ್ಟವಾಗುತ್ತಾರೆ? ನೀವಿಬ್ಬರೂ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತೀರಾ? ಇಬ್ಬರೇ ಇರುವಾಗ ಯಾವ ರೀತಿಯ ಆಟಗಳನ್ನು ಆಡುತ್ತೀರಾ?” ಮುಂತಾದ ಪ್ರಶ್ನೆಗಳನ್ನು ಮಗುವಿಗೆ ಕೇಳುತ್ತಾ ಹೋದರೆ ಅಗತ್ಯ ಮಾಹಿತಿಗಳು ನಿಧಾನವಾಗಿ ದೊರೆಯುತ್ತವೆ.
7. ನಮ್ಮ ಮಕ್ಕಳು ಕೂಡ ಇತರ ಮಕ್ಕಳ ಬಟ್ಟೆ ಎಳೆಯುವುದು, ದೇಹದ ಖಾಸಗೀ ಅಂಗಗಳಿಗೆ ಕೈಹಾಕುವುದು ಮುಂತಾದವನ್ನು ಮಾಡದಂತೆ ಎಚ್ಚರವಹಿಸಬೇಕು. ಕುತೂಹಲಕ್ಕಾಗಿ ಚಿಕ್ಕ ಮಕ್ಕಳು ಹಾಗೆ ಮಾಡುವ ಸಾದ್ಯತೆಗಳಿವೆ. ಆಗ ತಕ್ಷಣ ಬೈದು, ಹೊಡೆದು ಅಥವಾ ಇತರ ಮಕ್ಕಳ ಜೊತೆ ಸೇರದಂತೆ ಮಾಡಿ ಮಗುವಿಗೆ ಬುದ್ಧಿ ಕಲಿಸುವ ಪ್ರಯತ್ನಮಾಡಬಾರದು. ಇದರ ಬಗೆಗೆ ಸರಳವಾಗಿ ತಿಳುವಳಿಕೆ ಹೇಳುವುದರ ಮೂಲಕ ಮಗುವಿನ ಅರಿವನ್ನು ಬೆಳೆಸಬೇಕು. ಪೋಷಕರ ಎಲ್ಲಾ ಪ್ರಯತ್ನವನ್ನು ಮೀರಿ ಪದೇ ಪದೇ ಮಕ್ಕಳು ಇಂತಹ ಕೆಲಸವನ್ನು ಮಾಡುತ್ತಿದ್ದರೆ ತಜ್ಞರ ಸಹಾಯ ಪಡೆಯಬಹುದು.
8 ವಸತಿ ಶಾಲೆ, ಶಾಲಾಪ್ರವಾಸ ಅಥವಾ ಮತ್ತಿತರ ಕಾರಣಗಳಿಗಾಗಿ ಪೋಷಕರಿಂದ ದೂರವಿರುವ ಮಕ್ಕಳ ಬಗೆಗೆ ಹೆಚ್ಚು ಎಚ್ಚರ ವಹಿಸಬೇಕು. ಅವರಿಗೆ ಸಮಯೋಚಿವಾದ ಶಿಕ್ಷಣ ನೀಡುವುದಲ್ಲದೆ ಮನೆಗೆ ಬಂದಾಗ ಅವರ ವರ್ತನೆಗಳತ್ತ ಗಮನಹರಿಸಬೇಕು.
9. ಇಂತಹ ಕೃತ್ಯಗಳನ್ನು ಯಾರಾದರೂ ಮಾಡುವುದನ್ನು ನೋಡಿದರೆ ತಕ್ಷಣ ನಮಗೆ ತಿಳಿಸಲು ಮಕ್ಕಳಿಗೆ ಹೇಳಬೇಕು. ಅಂತಹ ಮಕ್ಕಳು (ಹಿಂಸೆ ಮಾಡುವವರು ಮತ್ತು ಹಿಂಸಾಚಾರಕ್ಕೊಳಪಡುವವರು) ಅಥವಾ ಅವರ ಪೋಷಕರು ನಮಗೆ ಪರಿಚಿತರಾಗಿದ್ದರೆ ಅವರನ್ನು ತಕ್ಷಣ ಎಚ್ಚರಿಸಲು ಇದರಿಂದ ಸಹಾಯವಾಗುತ್ತದೆ. ನಮಗೇಕೆ ‘ಊರ ಉಸಾಪರಿ’ ಎಂದು ಸುಮ್ಮನೆ ಕೂರುವಂತಿಲ್ಲ. ಏಕೆಂದರೆ ಸಮಾಜದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದರೆ ಅದರ ಪರಿಣಾಮ ನಮ್ಮ ಮಕ್ಕಳ ಮೇಲೂ ಆಗಬಹುದು. ಹಾಗಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಒಟ್ಟಾರೆ ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆಯೂ ನಮ್ಮದೇ ಎನ್ನುವುದನ್ನು ಮರೆಯಬಾರದು.
10 ಮಕ್ಕಳು ಬೆಳೆಯುತ್ತಾ ಬಂದಂತೆ ಸ್ನೇಹಿತರೊಡನೆ, ಶಾಲಾ ಕಾಲೇಜುಗಳಲ್ಲಿ ತಮ್ಮತನವನ್ನು ಕಳೆದುಕೊಳ್ಳದೆ ಎಲ್ಲರೊಡನೆ ಬೆರೆಯಲು ಸಾಧ್ಯವಾಗುವ ತರಬೇತಿ ನೀಡಬೇಕು. ಇದಕ್ಕಾಗಿ ವೈಯುಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕಿನ ನಡುವಿನ ತೆಳುವಾದ ಗೆರೆಯನ್ನು ಸರಿಯಾಗಿ ಗುರುತಿಸಿಕೊಳ್ಳುವ ಬಗೆಗೆ ಅವರನ್ನು ಎಚ್ಚರಿಸಬೇಕು.
11. ಯಾರಾದರೂ ಮಕ್ಕಳಿಗೆ ಪದೇಪದೇ ಚಾಕೋಲೇಟ್‍ಗಳು, ಉಡುಗೊರೆಗಳನ್ನು ಕೊಡುತ್ತಿದ್ದರೆ ಅದರ ಬಗೆಗೆ ಕಣ್ಣಿಡಬೇಕು. ಅಪರಿಚಿತರೊಡನೆ ವ್ಯವಹರಿಸಬೇಕಾದ ರೀತಿಯ ಬಗೆಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು.
12 ಕೆಟ್ಟ ಘಟನೆಗಳನ್ನು ಮಕ್ಕಳಿಂದ ಮರೆಮಾಚಿ ಅವರನ್ನು ರಕ್ಷಿಸಲು ಆಗುವುದಿಲ್ಲ. ಅವರವರ ವಯಸ್ಸಿಗನುಗುಣವಾಗಿ ಅಂತಹ ಘಟನೆಗಳ ವಿವರಣೆ ನೀಡಿ ಅವುಗಳನ್ನು ನಿಭಾಯಿಸುವ ತಯಾರಿ ಕೊಡಬೇಕು.
13 ಎಲ್ಲಾ ವಯಸ್ಸಿನ ಮಕ್ಕಳಿಗೆ ತಮ್ಮ ಭಾವನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವಂತಹ ಮುಕ್ತ ವಾತಾವರಣ ಮನೆಯಲ್ಲಿರಬೇಕು. ಇದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರಿಗೆ ಮುನ್ಸೂಚನೆಗಳು ಸಿಗುತ್ತವೆ.
ಹಿಂಸಾಚಾರ ನಡೆದೇ ಹೋದರೆ…..?
ಪೋಷಕರ ಎಲ್ಲಾ ಎಚ್ಚರಿಕೆಯನ್ನೂ ಮೀರಿ ಕೆಲವೊಮ್ಮೆ ಮಕ್ಕಳ ಮೇಲೆ ಹಿಂಸಾಚರದ ಘಟನೆ ನಡೆಯಬಹುದು. ಅಂತಹ ಸಂದರ್ಭಗಳನ್ನು ಮೂರು ಹಂತಗಳಲ್ಲಿ ಪೋಷಕರು ನಿಭಾಯಿಸಬೇಕು.
ಸೂಚನೆಗಳನ್ನು ಗುರುತಿಸುವುದು ಹೇಗೆ?
ಸಾಕಷ್ಟು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಮೇಲಿನ ಹಿಂಸೆಯನ್ನು ಅಜ್ಞಾನ, ಭಯ, ಅವಮಾನ ಮುಂತಾದ ಕಾರಣಗಳಿಂದಾಗಿ ಪೋಷಕರಿಗೆ ತಿಳಿಸದೇ ಹೋಗಬಹುದು. ಈ ಕೆಳಕಂಡ ಸಂದರ್ಭಗಳಲ್ಲಿ ಪೋಷಕರು ಹೆಚ್ಚಿನ ತನಿಖೆ ಮಾಡಬೇಕು.
1. ಪರಿಚಿತರ ಬಳಿ, ಬೇಬಿ ಸಿಟ್ಟಿಂಗ್ ಮುಂತಾದ ಕಡೆ ಬಿಟ್ಟಾಗ ಹಿಂತಿರುಗಿ ಬಂದ ಮೇಲೆ ಮಗುವಿನ ವರ್ತನೆಯಲ್ಲಿ ಆಗುವ ಬದಲಾವಣೆಗಳು. ಜನನಾಂಗ ಅಥವಾ ದೇಹದ ಇತರ ಕಡೆ ಆಗಿರುವ ಗಾಯಗಳು, ಅಥವಾ ಕಾರಣವೇ ಇಲ್ಲದೆ ಮಗು ಭಯಪಡುವುದು, ಅಳುವುದು.
2. ಊಟ ನಿದ್ದೆಗಳನ್ನು ಸರಿಯಾಗಿ ಮಾಡದೇ ಇರುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಬೆರಳು ಚೀಪುವುದು, ಪದೇಪದೇ ಬಟ್ಟೆ ಅಥವಾ ದೇಹದ ಭಾಗಗಳನ್ನು ತೊಳೆಯುವುದು ಮುಂತಾದ ಅಸಹಜ ವರ್ತನೆಗಳು.
3. ದೇಹವನ್ನು ಹೆಚ್ಚುಹೆಚ್ಚಾಗಿ ಮುಚ್ಚಿಕೊಳ್ಳಲು ಯತ್ನಿಸುವುದು, ದಿನನಿತ್ಯದ ಶುಚಿತ್ವವನ್ನು ಕಡೆಗಣಿಸುವುದು, ಕುರೂಪಿಯಾಗಿ ಕಾಣಲು ಇಚ್ಛಿಸುವುದು.
4. ಮಾತು, ಓದು ಮತ್ತಿತರ ದೈನಂದಿನ ವ್ಯವಹಾರಗಳಲ್ಲಿ ಗಮನಾರ್ಹ ಬದಲಾವಣೆ.
5. ಏಕಾಂಗಿಯಾಗಿರಲು ಭಯಪಡುವುದು, ಹೊರಗಡೆ ಹೋಗಲು ಅಥವಾ ಜನರೊಡನೆ ಬೆರೆಯಲು ಹಿಂಜರಿಯುವುದು.
6. ಆತ್ಮಹತ್ಯೆ ಅಥವಾ ಆತ್ಮಘಾತುಕ ಕೃತ್ಯಗಳಿಗೆ ಪ್ರಯತ್ನಿಸುವುದು.
7. ಅಸಹಜ ಅಥವಾ ಅಕಾಲಿಕ ಲೈಂಗಿಕ ವರ್ತನೆಗಳು, ಲೈಂಗಿಕ ರೋಗಗಳ ಸಂಪರ್ಕ, ಗರ್ಭಧರಿಸುವುದು ಇತ್ಯಾದಿ.
ಹೀಗೆ ಯಾವುದೇ ಅಸಹಜ ವರ್ತನೆಗಳು ಕಂಡುಬಂದಲ್ಲಿ ಪೋಷಕರು ಎಚ್ಚರಗೊಳ್ಳಬೇಕು. ಇಂತಹ ವರ್ತನೆಗಳು ಬರಿಯ ಲೈಂಗಿಕ ಹಿಂಸಾಚಾರದ ಲಕ್ಷಣಗಳಲ್ಲದಿದ್ದರೂ, ಮಕ್ಕಳ ಬಗೆಗೆ ತಕ್ಷಣ ಗಮನಹರಿಸಬೇಕೆನ್ನುವುದಕ್ಕೆ ಸೂಚನೆಗಳಾಗಿರುತ್ತವೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ

ಬೀಳ್ಕೊಡುಗೆ ಸಮಾರಂಭ

0

ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಉಪಾದ್ಯಾಯರಾಗಿ ೩೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮೇ ೩೧ ರಂದು ನಿವೃತ್ತಿ ಹೊಂದಿದ ಪ್ರಭಾರ ಮುಖ್ಯಶಿಕ್ಷಕ ಎನ್.ಸುಂದರನ್ ಹಾಗೂ ಪ್ರಯೋಗಾಲಯ ಸಹಾಯಕರಾದ ಕೆ.ವಿ.ಶ್ರೀನಿವಾಸಯ್ಯ ಅವರಿಗೆ ಶಾಲೆಯ ಆಡಳಿತ ಮಂಡಳಿ, ಪ್ರೌಢಶಾಲಾ ಸಿಬ್ಬಂದಿ ವರ್ಗ ಹಾಗೂ ಪೂರ್ವ ಪ್ರಾಥಮಿಕ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಭಾರ ಮುಖ್ಯಶಿಕ್ಷಕ ಎನ್ ಸುಂದರನ್ ತಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕುಹಾಕಿ ತಮ್ಮ ಉನ್ನತಿಗೆ ಕಾರಣಕರ್ತರಾದ ಪೋಷಕರು, ಕುಟುಂಬದವರು ಹಾಗೂ ತಮ್ಮ ಕರ್ತವ್ಯವನ್ನು ಸರಾಗವಾಗಿ ಮಾಡಲು ಸಹಕರಿಸಿದ ಎಲ್ಲಾ ಸಿಬ್ಬಂದಿವರ್ಗದವರಿಗೆ ಧನ್ಯವಾದ ಸಮರ್ಪಿಸಿದರು.
ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಎನ್.ವೆಂಕಟಸುಬ್ಬರಾವ್, ಅಧ್ಯಕ್ಷೆ ವಿ.ಸೀತಾಲಕ್ಷ್ಮಿ, ಕಾರ್ಯದರ್ಶಿ ಎನ್. ಶ್ರೀಕಾಂತ್, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್. ಕೆ. ಗೋಪಿನಾಥ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಹಿಷ್ಕಾರದ ನಿರ್ಧಾರ ಹಿಂಪಡೆದ ಸರ್ಕಾರಿ ನೌಕರರು

0

ಚುನಾವಣೆ ಕಾರ್ಯಕ್ಕೆ ನೇಮಕ ಮಾಡುವಾಗ ಚುನಾವಣೆಯ ನೇಮಕಾತಿಯ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚುನಾವಣೆಯ ಕಾರ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದ ಸರ್ಕಾರಿ ನೌಕರರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಕರೆಸಿ ಭಾನುವಾರ ಮಾತುಕತೆ ನಡೆಸಿ ಚುನಾವಣೆ ಕಾರ್ಯಕ್ಕೆ ನಿಯೋಜನೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದ ಮೇರೆಗೆ ಬಹಿಷ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡರು.
ಸುಮಾರು ೩೦ಕ್ಕೂ ಹೆಚ್ಚು ನೌಕರರ ನೇಮಕಾತಿಯ ಉಲ್ಲಂಘನೆಯನ್ನು ಸರಿಪಡಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.
ಚುನಾವಣೆ ಕಾರ್ಯ ತುರ್ತು ಹಾಗೂ ಜರೂರು ಆಗಿರುವುದರಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ, ಬೇರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಚುನಾವಣೆ ಕಾರ್ಯದಿಂದ ಕೈ ಬಿಡಲಾಯಿತು.
ಹಾಗೆಯೆ ಹೆಚ್ಚು ವೇತನ ಪಡೆಯುವ ಅಧಿಕಾರಿಗಳನ್ನು ಕಡಿಮೆ ವೇತನ ಪಡೆಯುವ ಅಧಿಕಾರಿಗಳಿಗೂ ಕೆಳ ಹಂತದಲ್ಲಿ ಕಾರ್ಯನಿರ್ವಹಿಸಲು ನೀಡಿದ್ದ ಆದೇಶ ಪತ್ರವನ್ನು ರದ್ದುಗೊಳಿಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಯಿತು. ನಂತರ ಸರ್ಕಾರಿ ನೌಕರರ ಪದಾಧಿಕಾರಿಗಳು ಚುನಾವಣೆಯ ಕಾರ್ಯಕ್ಕೆ ಬಹಿಷ್ಕಾರ ಹಾಕುವ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಘೋಷಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಪ್ರಧಾನ ಕಾರ್ಯದರ್ಶಿ ಅಕ್ಕಲರೆಡ್ಡಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಗೌರವಾಧ್ಯಕ್ಷ ಸಿ.ಎಂ.ಮುನಿರಾಜು, ಉಪಾಧ್ಯಕ್ಷ ಎಂ.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಸುದರ್ಶನ್, ಚಂದ್ರಕಾಂತ್, ಗಜೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಿವೃತ್ತರಾದ ಎ.ಎಸ್.ಐ ವೀರಪ್ಪ ಅವರಿಗೆ ಸನ್ಮಾನ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಎ.ಎಸ್.ಐ ವೀರಪ್ಪ ಅವರನ್ನು ಜಂಗಮಕೋಟೆಯ ಕನ್ನಡ ಸೇನೆ ವತಿಯಿಂದ ಗೌರವಿಸಲಾಯಿತು. ಪ್ರಕಾಶ್, ಮುರಳಿ, ಜಗದೀಶ್ ಬಾಬು, ಕುಟ್ಟಿ ಹಾಜರಿದ್ದರು.

ಗುಣಮಟ್ಟ ಎಲ್ಲಿಂದ ಬರುತ್ತದೆ?

0

ನಿರಂತರ ಗುಣಮಟ್ಟದ ಅಭಿಯಾನ ಇಂದು ಎಲ್ಲೆಡೆ ನಡೆಯುತ್ತಿದೆ. ಪದವಿ ಶಿಕ್ಷಣ ಸಂಸ್ಥೆಗಳು ಸದಾಗುಣ ಮಟ್ಟ/ಉತ್ಕøಷ್ಟತೆ ಸಾಧಿಸುವತ್ತ ನಿರಂತರ ಪ್ರಯತ್ನದಲ್ಲಿ ತೊಡಗಿರಬೇಕೆಂಬ ಸದಾಶಯ ಸರಕಾರ ಮತ್ತು ಇಲಾಖೆಗೆ ಇದೆ. ಆದರೆ ಕೇವಲ ಆಶಯಗಳು ಫಲನೀಡಬಲ್ಲದೇ ಎಂಬುದೇ ಪ್ರಸ್ತುತ ಪ್ರಶ್ನೆ.
ಉನ್ನತ ಶಿಕ್ಷಣ ಜನಸಾಮಾನ್ಯರಿಗೂ ಸಿಗುವಂತಾಗಬೇಕು. ತಾಲ್ಲೂಕು ಹೋಬಳಿ ಮಟ್ಟದ ವಿದ್ಯಾರ್ಥಿಗಳ ಕೈಗೆ ಉನ್ನತ ಶಿಕ್ಷಣ ಎಟಕುವಂತಾಗಬೇಕು ಅವರ ವಿದ್ಯಾಭ್ಯಾಸ ಅರ್ಧದಲ್ಲೇ ನಿಲ್ಲಕೂಡದು ಎಂಬ ಕಳಕಳಿಯಿಂದ ನಮ್ಮ ಘನ ಸರಕಾರ ರಾಜ್ಯದ ಎಲ್ಲ ತಾಲ್ಲೂಕು ಕೆಂದ್ರಗಳಲ್ಲಷ್ಟೇ ಅಲ್ಲದೆ ಹೋಬಳಿ ಮಟ್ಟದಲ್ಲೂ ಪದವಿ ಕಾಲೇಜನ್ನು ಪ್ರಾರಂಭಿಸಿದ್ದು, ಬಹುತೇಕ ಕಡೆಗಳಲ್ಲಿ ಕಟ್ಟಡಗಳೂ ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿವೆ. ಇಷ್ಟೆಲ್ಲ ಬಿ.ಎ., ಬಿ.ಕಾಂ., ಬಿ.ಬಿ.ಎಂ. ಇತ್ಯಾದಿ ಕೋರ್ಸ್‍ಗಳು ಪ್ರಾರಂಭವಾಗಿ ಬಹಳಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲು ಪ್ರವೇಶಾತಿಯನ್ನು ಪಡೆದದ್ದು ನಿಜ.
ಆದರೆ ಕಾಲೇಜುಗಳನ್ನು ಪ್ರಾರಂಭಿಸಲಿಕ್ಕೆ ತೋರಿದ ಉತ್ಸಾಹವನ್ನು ಕಳಕಳಿಯನ್ನು ಆ ಮೇಲೆ ಅವುಗಳ ನಿರ್ವಹಣೆಯಲ್ಲಿ ತೋರುವುದಕ್ಕೆ ಸಾಧ್ಯವಾಗದ್ದು–ಗುಣಮಟ್ಟದ ಶಿಕ್ಷಣ ನೀಡುವಲ್ಲಿ-ದೊಡ್ಡ ಅಡಚಣೆಯಾಗಿದ್ದು ಒಂದೆಡೆಯಾದರೆ-ಒಟ್ಟಾರೆ ಪದವಿಗೆ ಸೇರಿರುವುದಷ್ಟೇ ತಮ್ಮ ಕೆಲಸವೆಂದು ಭಾವಿಸಿ ಓಡಾಡುವ ವಿದ್ಯಾರ್ಥಿ ಸಮುದಾಯ ಇನ್ನೊಂದೆಡೆ.
ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ-ಕಛೇರಿ ಸಿಬ್ಬಂದಿಗಳ ಕೊರತೆ-ಕೊಠಡಿಗಳ ಕೊರತೆ ಅಷ್ಟೇ ಏಕೆ ಕುಡಿಯುವ ನೀರಿಗೂ ತತ್ವಾರ-ಶೌಚಾಲಯಗಳ ಸ್ಥಿತಿಯೂ ಸರಿ ಇರದಿರುವ ಸಂದರ್ಭಗಳಲ್ಲಿ-ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯೇ ಬತ್ತುವ ಸಾಧ್ಯತೆ ಇದೆ. ಶೈಕಣಿಕ ವಾತಾವರಣ-ಕನಿಷ್ಟ ಮೂಲಭೂತ ಸೌಕರ್ಯಗಳು ದೊರಕದಿದ್ದರೆ-ಯಾವುದೇ ವಿದ್ಯಾರ್ಥಿಗೆ ಅಲ್ಲಿ ಇರುವುದೇ ಕಷ್ಟವಾಗಬಹುದು. ಹೀಗಾದರೆ ಅದರ ನೇರ ಪರಿಣಾಮ ಶಿಕ್ಷಕರ ಮೇಲೂ ಆಗುತ್ತದೆ. ಬಂದರೆ ಬಂದರು-ಪುರುಸೋತ್ತು ಇದ್ದಾಗಷ್ಟೇ ಬಂದು ಹೋಗುವ – ಕಲಿಕೆಯನ್ನು ಒಂದು ಫ್ಯಾಶನ್ನಾಗಿ ನೋಡಲು ಹತ್ತಿದಾಗ ಶಿಕ್ಷಕರು ಪಾಠ ಹೇಳಲು ಹೋದರೆ ಕೊಠಡಿಗಳು ಖಾಲಿ-ಖಾಲಿ ಬೆಳಿಗ್ಗೆ ಇದ್ದವರು ಮಧ್ಯಾಹ್ನ ಮೇಲೆ ನಾಪತ್ತೆ, ಹೀಗೇ ದಿನನಿತ್ಯವೂ ನಡೆಯ ಹತ್ತಿದಾಗ-ಶಿಕ್ಷಕರು ಇದನ್ನು ನೋಡಿ ನೋಡಿ ಬೇಸತ್ತು ಇದ್ದ-ಬದ್ದ ಉತ್ಸಾಹವನ್ನು ಕಳೆದುಕೊಳ್ಳುವ ಹಂತ ತಲುಪಿಬಿಡಬಹುದು. ಹೀಗಾದರೆ ಗುಣಮಟ್ಟ ಹೇಗೆ ಸುಧಾರಿಸಲು ಸಾಧ್ಯ?
ಕೇವಲ ಶೈಕ್ಷಣಿಕ ಸಂಸ್ಥೆಗಳ ಸಂಖ್ಯಾಬಲವಾಗಲಿ ಅವುಗಳಲ್ಲಿ ಅಭ್ಯಾಸಿಸಲು ಹೆಸರನ್ನು ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯಾಬಲವಾಗಲಿ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ. ಬದಲಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ವಾತಾವಣದ ನಿರ್ಮಿತಿ ಇಂದಿನ ತುರ್ತಾದರೆ, ಗುಣಮಟ್ಟದ ಏರಿಕೆ ತನ್ನಿಂದ ತಾನೇ ಸಾಧ್ಯವಾಗಬಹುದು. ಇದಕ್ಕೆ ಅಗತ್ಯವಾದ ಕಟ್ಟಡ-ಕೊಠಡಿಗಳು-ಶೌಚಾಲಯ-ಶುದ್ಧ ಕುಡಿಯುವ ನೀರು-ಗಾಳಿ-ಬೆಳಕು ಸರಿ ಇರುವ ವಾಚನಾಲಯ-ಗ್ರಂಥಾಲಯ ಮತ್ತು ಚಿಕ್ಕದಾದರೂ ಸಾಕಷ್ಟು ಚೆನ್ನಾಗಿರುವ ಆಟದ ಮೈದಾನ ಇವನ್ನು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಬೋಧನೆಗೆ ಅಗತ್ಯವಾದ ಉಪನ್ಯಾಸಕರನ್ನು ನೇಮಿಸುವ ಕೆಲಸವಾಗಬೇಕು. ಬಹಳಷ್ಟು ಕಡೆಗಳಲ್ಲಿ ಹಂಗಾಮಿ ನೇಮಕಾತಿಯ ಮೇಲೆ ಬೋಧಕ ಸಿಬ್ಬಂದಿಗಳು (ಅವರ ಸಂಖ್ಯೇಯೇ ಅಧಿಕ) ಕರ್ತವ್ಯ ನಿರ್ವಹಿಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಪಾಠಗಳು ನಡೆದರೂ ಅದು ವ್ಯವಸ್ಥಿತವಾಗಿ ನಡೆಯುವುದು ಅನುಮಾನ. ಅಲ್ಲಿ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಇರಲು ಅವರುಗಳು ಅವರವರ ಅನುಕೂಲದ ದಿನಗಳಂದು ಮಾತ್ರ ಬಂದು ಹೋಗುವುದರಿಂದ ವಿದ್ಯಾರ್ಥಿಗಳಿಗಾಗುವ ತೊಂದರೆಗಳಿಗೆ ನಿರ್ದಿಷ್ಟ ಪರಿಹಾರ ಸೂಚಿಸುವವರು ಸಕಾಲದಲ್ಲಿ ಲಭ್ಯವಾಗದೆ ಹೋಗುವ ಸಂದರ್ಭಗಳೇ ಅಧಿಕ.
ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟದ ಸಮಸ್ಯೆ ಕಾಲೇಜುಗಳಲ್ಲಿ ಕ್ಯಾಂಟೀನ್ ಇರುವುದಿಲ್ಲ-ಇದ್ದರೂ ಎಲ್ಲರಿಗೂ ಹಣಕೊಟ್ಟು ಊಟಮಾಡುವ ಆರ್ಥಿಕ ಬಲ ಇರುವುದಿಲ್ಲ. ತಿಂಡಿ-ಊಟ ತಂದುಕೊಂಡರೆ ಕುಳಿತು ತಿನ್ನಲೂ ವ್ಯವಸ್ಥೆ ಇರದಿದ್ದರೆ ಅವರು ಮಧ್ಯಾಹ್ನವಾಗುತ್ತಲೇ ಜಾಗ ಖಾಲಿ ಮಾಡಲು ಪ್ರಾರಂಭಿಸುತ್ತಾರೆ. ಕೆಲವೆಡೆ ಬಸ್‍ನ ಸಮಸ್ಯೆಯೂ ಇರುವುದರಿಂದ ಬೇಗ ಊರು ಸೇರಲು ವಿದ್ಯಾರ್ಥಿಗಳು ಬಯಸುತ್ತಾರೆ. ಹಾಸ್ಟೆಲ್ ವ್ಯವಸ್ಥೆ ಕೂಡ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ಎಂಬುದೇನೋ ಒಪ್ಪತಕ್ಕದೇ, ಆದರೆ ವಿದ್ಯಾರ್ಥಿಗಳ ಅನುಕೂಲಕ್ಕೆ ಆದಷ್ಟು ಹೆಚ್ಚು ಪ್ರಯತ್ನಪಟ್ಟರೆ ತರಗತಿಗಳಲ್ಲಿ ಅವರು ಇರಬಹುದು. ಇದ್ದರೆ ಪಾಠ ಪ್ರವಚನಗಳು ಜರುಗಲು ಸಾಧ್ಯ ಖಾಲಿ ಬೆಂಚು ಡೆಸ್ಕುಗಳಿಗೆ ಏನೂ ಮಾಡಲಾಗುವುದಿಲ್ಲ.
ಹೀಗಾಗಿ ಗುಣಮಟ್ಟ ಬರಬೇಕು ಎಂದು ಪ್ರಾಮಾಣಿಕವಾಗಿ ಆಶಿಸುವುದಾದಲ್ಲಿ ಕಾಲೇಜು ನಡೆಯುವ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ಪಾಠ-ಪ್ರವಚನಗಳು ಕಡ್ಡಾಯವಾಗಿ ನಡೆಯುವಂತಾಗಬೇಕು. ವಿದ್ಯಾರ್ಥಿಗಳೂ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಿ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಆದಾಗ ಮಾತ್ರ-ವಿದ್ಯಾರ್ಥಿಗಳ-ಶಿಕ್ಷಕರ ಮತ್ತು ಶೈಕ್ಷಣಿಕ ಸಂಸ್ಥೆಯ ಗುಣಮಟ್ಟದಲ್ಲಿ ಏರಿಕೆಯಾಗಬಹುದು.
ಇಲ್ಲಿ ಜವಾಬ್ದಾರಿ ಒಂದು ಕಡೆಯಿಂದ ಸರಕಾರದ್ದಾಗಿದ್ದು ಅದು ಮೂಲಭೂತ ಸೌಕರ್ಯ ಮತ್ತು ವಾತಾವರಣ ಕಲ್ಪಿಸಲು ಮುಂದಾಗಬೇಕಿದೆ. ಇನ್ನೊಂದು ಕಡೆಯಿಂದ ಇದ್ದ ವ್ಯವಸ್ಥೆಯನ್ನೇ ಆದಷ್ಟು ಒಪ್ಪ ಓರಣದಿಂದ ಇರುವಂತೆ ನೋಡಿಕೊಳ್ಳುತ್ತಲೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತು ಉತ್ಸಾಹವನ್ನು ತುಂಬುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಅವರಿಗೆ ಸಿಗುವ ಎಲ್ಲ ಸೌಲತ್ತುಗಳು (ಬೇರೆ ಬೇರೆ ಸ್ಕಾಲರ್‍ಶಿಪ್‍ಗಳನ್ನು ಒಳಗೊಂಡತೆ) ಸಕಾಲದಲ್ಲಿ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಸಂಸ್ಥೆಗೆ ಸಂಬಂಧಿಸಿದವರೆಲ್ಲ ಮಾಡಿದರೆ ಮಾತ್ರ ಒಂದು ಹಂತದ ಉದ್ಧಾರವಾದರೂ ಸಾಧ್ಯವಾಗಬಹುದು.
ಊರಿನಲ್ಲೇ ಕಾಲೇಜಿದೆ ಎಂಬ ಏಕೈಕ ಕಾರಣಕ್ಕಾಗಿ ಓದಲು ಆಸಕ್ತಿ ಇಲ್ಲದಿದ್ದರೂ ಸೇರಿ ಓದುವವರಿಗೂ ಅಡಚಣೆಗಳನ್ನು ಮಾಡುತ್ತ ಕೇವಲ ಕಾಲಹರಣಕ್ಕೆ ಶೋಕಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೇನೂ ಕೊರತೆಯಿರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಿಳಿ ಹೇಳುವ ಕೆಲಸವು ಇಂದಿನ ಅಗತ್ಯ ಆದ್ಯತೆ ಎಂದು ಭಾವಿಸಬೇಕು. ಅಷ್ಟೆ ಅಲ್ಲದೆ ಅಂಥ ಕೆಲವರಿಂದ, ಒಟ್ಟಾರೆ ವಾತಾವರಣ ಕಲುಷಿತವಾಗುತ್ತದೆ ಎಂದಾಗ ಅವರನ್ನು ಯಾವುದೇ ಮುಲಾಜಿಗೊಳಗಾಗದೆ ಹೊರಗಿಡುವ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಅವರಲ್ಲಿ ಅನೇಕರು ಅನೇಕ ರೀತಿಯ ಪ್ರಭಾವಗಳನ್ನು ಹೊಂದಿರುವ ಕಾರಣದಿಂದ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಎಲ್ಲರೂ ಸುಮ್ಮನಿರುವ ಕಾರಣಕ್ಕೆ ಗುಣಮಟ್ಟದ ಕುಸಿತವನ್ನು ಮೌನವಾಗಿ ವೀಕ್ಷಿಸುವಂತಾಗಿದ್ದು ಕೂಡ ಪ್ರಸ್ತುತ ದುರಂತಗಳಲ್ಲಿ ಒಂದು.
ವಿದ್ಯಾರ್ಥಿಗಳು ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗುವುದು ಮತ್ತು ಪಾಠ-ಪ್ರವಚನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಸಾಧ್ಯವಾದರೆ ಅನಂತರ ಹೊಸ-ಹೊಸ ರೀತಿಯ ಪ್ರಯೋಗಗಳಿಗೆ ಪ್ರಯತ್ನಿಸಬಹದು. ಕಂಪ್ಯೂಟರ್ ಬಳಕೆ, ಡಿಜಿಟಲ್ ಬೋರ್ಡ್‍ಗಳ ಬಳಕೆ ಮಲ್ಪಿಮೀಡಿಯಾ ಸೆಂಟರ್ ಬಳಕೆ ಎಲ್ಲಾ ಹಂತ-ಹಂತವಾಗಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದದ್ದಕ್ಕೆ ಹಕ್ಕೊತ್ತಾಯ ಹೇರದ ಹೊರತೂ ಉಪನ್ಯಾಶಕರೂ ಕ್ರಿಯಾಶೀಲರಾಗುವುದು ಕಷ್ಟ. ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚುವುದು ಮತ್ತು ವೇಳಾಪಟ್ಟಿ ಅನುಗುಣವಾಗಿ ತರಗತಿಗಳು ನಡೆಯುವುದು ಸಾಧ್ಯವಾದಲ್ಲಿ ಗುಣಮಟ್ಟದ ಸಮಸ್ಯೆ ಅರ್ಧಕ್ಕರ್ಧ ಬಗೆ ಹರಿದಂತೆಯೇ ಸರಿ. ಇಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪ್ರತಿ ಕಾಲೇಜಿಗೂ ಸಾಕಷ್ಟು ಹಣ ಒದಗಿಸುತ್ತಿದೆ. ಅವುಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಲೇಜು ಆಡಳಿತ ಮಂಡಳಿಯದ್ದೂ ಹೌದು. ಕಾಲೇಜು ಅಭಿವೃದ್ಧಿ ಮಂಡಳಿ ಕೇವಲ ನಾಮಕಾವಸ್ತೆ ಆಗಿದ್ದಲ್ಲಿ ಅವರ ಊರಿನ ಸಂಸ್ಥೆಯೇ ಅಭಿವೃದ್ಧಿಯಿಂದ ವಂಚಿತವಾಗುತ್ತದೆ. ತಮ್ಮ ಮಕ್ಕಳ ಅಭ್ಯುದಯಕ್ಕೆ ಅವರು ಸ್ಪಲ್ಪವಾದರೂ ಕಾಳಜಿ ತೋರುವಂತಾದರೆ (ರಾಜಕೀಯ ಮಾಡುವುದನ್ನು ಬಿಟ್ಟು) ಸ್ಥಳೀಯ ಮಟ್ಟದಲ್ಲೇ ಪರಿಹರಿಸಬಹುದಾದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ.
ಆದರೂ ನಿರಾಸೆಯಿಂದ ಕೈ ಚೆಲ್ಲಿ ಕುಳಿತುಕೊಳ್ಳುವುದು ಸಲ್ಲದು. ನಿಜವಾಗಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯ ರೂಪಿಸುವ ರೂವಾರಿಗಳಾಗಲು ಪ್ರಾಂಶುಪಾಲರನ್ನು ಒಳಗೊಂಡತೆ ಸಂಸ್ಥೆಯ ಸಿಬ್ಬಂದಿವರ್ಗ ಶ್ರಮಿಸಿದರೆ ಅವರೇ ಖುದ್ದಾಗಿ ಕಿಡಿಗೇಡಿಗಳಿಂದ ದೂರಾಗಿ ಹೊಸ ಮಾರ್ಗ ಸೃಷಿಸಿಕೊಳ್ಳುವಂತಾದಾಗ ಮಾತ್ರ ಗುಣಮಟ್ಟಕ್ಕೆ ಅರ್ಥ ಪ್ರಾಪ್ರವಾಗಬಹುದು. ಯಾವುದಕ್ಕೂ ಇಚ್ಛಾಶಕ್ತಿ ಬೇಕು.
ರವೀಂದ್ರ ಭಟ್ ಕುಳಿಬೀಡು

ಬೀಕೋ ಎನ್ನುತ್ತಿದೆ ದಿಂಬಾರ್ಲಹಳ್ಳಿ ಗ್ರಾಮ

0

ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿಂಬಾರ್ಲಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದಿಸಿದ್ದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಸುಮಾರು ೬೦ ಕ್ಕೂ ಹೆಚ್ಚು ಮಂದಿಗೆ ಜ್ವರ ಬಂದಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಹೊಸಕೋಟೆ, ದೇವನಹಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗ್ರಾಮದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ.
ತಾಲ್ಲೂಕಿನಲ್ಲಿ ಇದೇ ಮೊದಲ ಭಾರಿಗೆ ನೂತನ ಗ್ರಾಮ ಪಂಚಾಯತಿಯಾಗಿ ಘೋಷಣೆಯಾಗಿರುವ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಬಾರ್ಲಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಜ್ವರಕ್ಕೆ ತುತ್ತಾಗಿರುವ ಸಾರ್ವಜನಿಕರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಫಲಕಾರಿಯಾಗಿಲ್ಲ.
ಗ್ರಾಮಸ್ಥರು ನೆರೆಯ ಚಿಕ್ಕಬಳ್ಳಾಪುರ ಸೇರಿದಂತೆ ವಿವಿದೆಡೆ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮದ ಬಹುತೇಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಡೀ ಗ್ರಾಮ ಜನರಿಲ್ಲದೇ ಬಿಕೋ ಎನ್ನುವಂತಿದೆ.
ಚುನಾವಣೆಯ ಸಂದರ್ಭದಲ್ಲಿ ಈ ರೀತಿಯಾಗಿ ಖಾಯಿಲೆಗಳಿಗೆ ಒಳಗಾಗುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದ್ದು ಇದುವರೆಗೂ ಗ್ರಾಮದಲ್ಲಿ ಈ ರೀತಿ ಸಾಮೂಹಿಕವಾಗಿ ಬರುತ್ತಿರುವ ಜ್ವರ ಎಂತಹುದು ಎಂಬುದರ ಮಾಹಿತಿ ಹಾಗು ಗ್ರಾಮದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ.
‘ಗ್ರಾಮದಲ್ಲಿ ಸ್ವಚ್ಚತೆಯಿಲ್ಲದಿರುವುದು, ಎಲ್ಲಂದರಲ್ಲಿ ನೀರು ನಿಂತಿರುವುದು, ತೊಟ್ಟಿಗಳಲ್ಲಿ ಲಾರ್ವಾ ಹೆಚ್ಚಾಗಿರುವುದರಿಂದ ಗ್ರಾಮದಲ್ಲಿ ಈ ರೀತಿಯ ಜ್ವರ ಕಾಣಿಸಿದೆ. ಕಳೆದ ಹದಿನೈದು ದಿನಗಳಿಂದ ವೈದ್ಯರ ತಂಡ ಗ್ರಾಮದಲ್ಲಿಯೇ ಮೊಕ್ಕಾಂ ಹೂಡುವುದರೊಂದಿಗೆ ಮನೆ ಮನೆಗೂ ತೆರಳಿ ಎಲ್ಲಿಯೂ ನೀರು ನಿಲ್ಲದಂತೆ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಆಸ್ಪತ್ರೆಯ ಕಡೆಯಿಂದ ಫಾಗಿಂಗ್ ಮಾಡಿಸಲಾಗುತ್ತಿದೆ.
ಕೆಲ ಗ್ರಾಮಸ್ಥರ ರಕ್ತದ ಮಾದರಿಗಳನ್ನು ಈಗಾಗಲೇ ಪಡೆದುಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದಾಗ ಒಂದು ಪ್ರಕರಣ ಮಾತ್ರ ಡೆಂಘ್ಯೂ ಜ್ವರ ಎಂಬುದು ಪತ್ತೆಯಾಗಿದೆ. ಪ್ರತಿನಿತ್ಯ ಗ್ರಾಮದ ೨೦ ರಿಂದ ೨೫ ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಇದೀಗ ಪರಿಸ್ಥಿತಿ ಸುದಾರಿಸುತ್ತಿದ್ದು ಈಗ ಐದಾರು ಮಂದಿಯಷ್ಟೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ಗ್ರಾಮ ಸಹಜಸ್ಥಿತಿಗೆ ಮರಳುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ತಿಳಿಸಿದರು.

ಪುರಾತನ ಶಾಮಣ್ಣ ಬಾವಿ ಕಲ್ಯಾಣಿ ಶುಚಿ ಕಾರ್ಯಾಚರಣೆ

0

ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಅತ್ಯಂತ ಪುರಾತನ ಕಲ್ಯಾಣಿ ಶಾಮಣ್ಣ ಬಾವಿಯನ್ನು ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರು ಚೊಕ್ಕಟಗೊಳಿಸುತ್ತಿದ್ದಾರೆ.
ಸುಮಾರು 400 ವರ್ಷಗಳಷ್ಟು ಹಳೆಯದಾದ ಶಾಮಣ್ಣ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಶಾಮಣ್ಣ ಬಾವಿಯು ಪಟ್ಟಣದ ಯುವಕರ ಈಜು ಕಲಿಯುವ ತಾಣವಾಗಿತ್ತು.
ಆದರೆ ನೀರಿನ ಸಮಸ್ಯೆ ಪ್ರಾರಂಭವಾದಂತೆ ಶಾಮಣ್ಣ ಬಾವಿಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುವಂತಾಯಿತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ನಿಲ್ಲುವಂತಾದ ಮೇಲೆ ಅಲ್ಲಿಂದ ಶಾಮಣ್ಣ ಬಾವಿಗೆ ನೀರು ಬರದೆ ಸೊರಗತೊಡಗಿತು. ಕಲ್ಲು ಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ ತ್ಯಾಜ್ಯ ತುಂಬಿಕೊಂಡು ಬಾವಿಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳತೊಡಗಿತು. ಆಗಾಗ ಕೆಲವು ಹಿರಿಯರು ಮತ್ತು ಪುರಸಭೆಯಿಂದ ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದರೂ, ಕಳೆಗಿಡ ವರ್ಷಕ್ಕೊಮ್ಮೆ ಬೆಳೆದು ಕಲ್ಲುಚಪ್ಪಡಿಗಳನ್ನು ಪಲ್ಲಟಗೊಳಿಸಿದ್ದವು.
ಕಳೆದ ಮೂರು ವರ್ಷಗಳ ಹಿಂದೆ ಶಾಮಣ್ಣಬಾವಿ ದುರಸ್ತಿ ಕಾರ್ಯ ನಡೆಯಿತು. ಪುರಸಭೆಯಿಂದ 2.5 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ, ಕಲ್ಲಿನ ಮಧ್ಯೆ ಇದ್ದ ಗಿಡ ಗೆಂಡೆಗಳನ್ನು ಬೇರು ಸಮೇತವಾಗಿ ತೆಗೆದು ಕಲ್ಲುಗಳಿಗೆ ಸಂದು ಗಾರೆ ಮಾಡಿದ್ದರು. ಉಲ್ಲೂರು ಪೇಟೆಯಿಂದ ಹೋಗುವ ವಾಹನಗಳು ಶಾಮಣ್ಣ ಬಾವಿಯ ಬಳಿಗೆ ಹೋಗಿ ಅಪಘಾತವಾಗದಂತೆ 48 ಮೀಟರ್ ಉದ್ದ ಹಾಗೂ ಮೂರುವರೆ ಅಡಿ ಎತ್ತರದ ತಡೆಗೋಡೆ ನಿರ್ಮಾಣ ಕೂಡ ನಡೆದಿತ್ತು.
ಪುನಃ ಗಿಡ ಗೆಂಡೆಗಳು ಬೆಳೆದು ಬಾವಿಯೇ ಕಾಣದಂತೆ ಆವರಿಸಿದ್ದುದನ್ನು ಕಳೆದ ಎರಡು ದಿನಗಳಿಂದ ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರು ಶುಚಿಗೊಳಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಕಾರ್ಯ ನಡೆಸಬೇಕೆಂದಿದ್ದ ಸದಸ್ಯರು ಎರಡು ದಿನಗಳಲ್ಲಿ ಮುಗಿಯುವುದಿಲ್ಲವಾದ್ದರಿಂದ ಕಲ್ಯಾಣಿ ಶುಚಿಯಾಗುವವರೆಗೂ ಕೆಲಸ ನಿಲ್ಲಿಸುವುದಿಲ್ಲ ಎನ್ನುತ್ತಾರೆ. ಕಲ್ಯಾಣಿಯ ಮಧ್ಯಭಾಗದಲ್ಲಿರುವ ಗಂಗಮ್ಮ ದೇವಿಯ ಮೂರ್ತಿಗೆ ಅಭಿಷೇಕ, ಪೂಜೆ ಸಲ್ಲಿಸಿದ ಯುವಬ್ರಿಗೇಡ್ನ ಸದಸ್ಯರು ಆಳವಾಗಿ ಬೇರೂರಿರುವ ಗಿಡ, ಮುಳ್ಳುಗಳನ್ನು ತೆಗೆಯುತ್ತಾ ನೀರು ನಿಲ್ಲುವೆಡೆ ತುಂಬಿರುವ ತ್ಯಾಜ್ಯವನ್ನೂ ಹೊರಸಾಗಿಸುತ್ತಿದ್ದಾರೆ.
ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರಾದ ಎಸ್.ಪ್ರಸಾದ್, ಬಿ.ಶ್ರೀಕಾಂತ್, ಕಿರಣ್, ಮುರಳಿ, ಪ್ರವೀಣ್, ನಾಗೇಶ್, ವರುಣ್, ಅಶ್ವತ್ಥ್, ಮಂಜುನಾಥ್, ರಘೋತ್ಥಮ್ ಮತ್ತಿತರರು ಕಲ್ಯಾಣಿ ಶುಚಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅತ್ತೆ ಸೊಸೆ, ತಂದೆ ಮಗ ಸ್ಪರ್ಧಿಗಳು

0

‘ಎಲೆಕ್ಷನ್ಗೆ ನಿಂತಿದೀವಲ್ಲ, ನಾವು ಅತ್ತೆ ಸೊಸೆ ಮಾತಾಡೋದಿಲ್ಲ. ಎಲೆಕ್ಷನ್ ಆದ್ಮೇಲೆ ಮಾತಾಡ್ತೀವಿ’ ಎನ್ನುತ್ತಾರೆ ತಾಲ್ಲೂಕಿನ ತುಮ್ಮನಹಳ್ಳಿ ಪಂಚಾಯತಿಯ ಚುನಾವಣಾ ಸ್ಪರ್ಧಿಗಳಾದ ತಿಮ್ಮಕ್ಕ ಮತ್ತು ರೂಪ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅತ್ತೆ ತಿಮ್ಮಕ್ಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದರೆ, ಸೊಸೆ ರೂಪ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯತಿಯಲ್ಲಿ ತಂದೆ ದೇವರಾಜ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದರೆ, ಮಗ ವಾಸುದೇವ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ಅತ್ತೆ ವಿಮಲಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದರೆ, ಸೊಸೆ ಶಾಂತ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.
ಗ್ರಾಮೀಣಾಭಿವೃದ್ಧಿಯನ್ನು ಸ್ಥಳೀಯರೇ ಮಾಡುವ ಉದ್ದೇಶದಿಂದ ರೂಪುಗೊಂಡ ವ್ಯವಸ್ಥೆಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಬಾರಿ ಹಲವೆಡೆ ಒಂದೇ ಕುಟುಂಬದ ಇಬ್ಬಿಬ್ಬರು ಸದಸ್ಯರು ಕಣದಲ್ಲಿದ್ದಾರೆ. ಗ್ರಾಮೀಣರನ್ನು ಒಗ್ಗೂಡಿಸುವ ಉದ್ದೇಶದ ವೈರುಧ್ಯದ ರೀತಿಯಲ್ಲಿ ಕುಟುಂಬದಲ್ಲೇ ವಿರೋಧಿಗಳಾಗಿ ಸ್ಪರ್ಧೆ ನಡೆಸುತ್ತಿದ್ದಾರೆ.
ಮೀಸಲಾತಿ ನೀಡಿರುವುದರಿಂದ ವಿವಿಧ ಪಕ್ಷಗಳಿಗೆ ಸ್ಪರ್ಧಿಗಳು ಸಿಗದಿದ್ದಾಗ ಒಂದೇ ಕುಟುಂಬದವರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಹಾಗಾಗಿ ತಂದೆಗೆ ಮಗ ಪ್ರತಿಸ್ಪರ್ಧಿ, ಅತ್ತೆಗೆ ಸೊಸೆ ಪ್ರತಿಸ್ಪರ್ಧಿಯಾಗಬೇಕಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಸರ್ಕಾರಿ ನೌಕರರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ

0

ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಲ್ಲೂಕಿನ ಯಾವುದೇ ಸರ್ಕಾರಿ ನೌಕರರು ಭಾಗವಹಿಸಬಾರದೆಂದು ತೀರ್ಮಾನಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ನೇಮಿಸುವಲ್ಲಿ ಸರ್ಕಾರಿ ನೀತಿ ನಿಯಮಗಳನ್ನು ಗಾಳಿಗೆ ತೂರುವುದರೊಂದಿಗೆ ಚುನಾವಣೆ ಕಾರ್ಯಕ್ಕಾಗಿ ನೇಮಿಸಿರುವ ಸಿಬ್ಬಂದಿಗೆ ವಿನಾಕಾರಣ ಚುನಾವಣಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಕಾರ್ಯಕ್ಕಾಗಿ ನೇಮಿಸುವಾಗ ಗರಿಷ್ಠ ಮೂಲ ವೇತನದಾರರಿಗೆ ಪಿಆರ್ಓ ಆಗಿ ಕೆಳಹಂತದ ಅಧಿಕಾರಿಗಳಿಗೆ ಎಪಿಆರ್ಓ, ಪಿಓ ಆಗಿ ನೇಮಿಸಬೇಕು ಎನ್ನುವ ಆದೇಶವಿದ್ದರೂ ಸರ್ಕಾರಿ ಆದೇಶನ್ನು ಗಾಳಿಗೆ ತೂರಿ ಕೆಳಹಂತದ ನೌಕರರನ್ನು ಪಿಆರ್ಓ ಆಗಿ ಗರಿಷ್ಠ ವೇತನ ಪಡೆಯುವ ಹಾಗು ೨೦-–೩೦ ವರ್ಷ ಸರ್ಕಾರಿ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳನ್ನು ಪಿಓ ಆಗಿ ನೇಮಿಸಿರುತ್ತಾರೆ.
ಇನ್ನು ಗರ್ಬಿಣಿ ಸ್ತ್ರೀಯರು ಸೇರಿದಂತೆ ಬಾಣಂತಿಯರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಚುನಾವಣೆ ಕಾರ್ಯಕ್ಕೆ ನೇಮಿಸುವುದರೊಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ಅದೇ ತಾಲ್ಲೂಕಿನಲ್ಲಿ ನೇಮಕ ಮಾಡಬೇಕೆಂಬ ಆದೇಶವಿದ್ದರೂ ಉದ್ದೇಶಪೂರ್ವಕವಾಗಿ ಬೇರೆ ತಾಲ್ಲೂಕಿಗೆ ನೇಮಕ ಮಾಡಿರುವ ಚುನಾವಣೆಯ ಅಧಿಕಾರಿ ಹಾಗು ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿರನ್ನು ಈ ಬಗ್ಗೆ ಕೇಳಿದರೆ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ಮಾಡಿದ್ದಾರೆ. ಹಾಗಾಗಿ ಆದೇಶ ಮಾಡಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೌಖಿಕವಾಗಿ ಹೇಳಿರುತ್ತಾರೆ.
ತಮಗೆ ಬೇಕಾದ ಸಿಬ್ಬಂದಿಗೆ ಮಾತ್ರ ಅನುಕೂಲ ಮಾಡಿಕೊಡಲು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ ಅವರು ಕೋರಿದ ಕಡೆ ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ತಾಲ್ಲೂಕು ಚುನಾವಣಾಧಿಕಾರಿಗಳು ಸರ್ಕಾರಿ ನೌಕರರ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ಹಾಗಾಗಿ ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಸರ್ಕಾರಿ ನೌಕರರು ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಈಗಾಗಲೇ ಸಂಘ ತೀರ್ಮಾನಿಸಲಾಗಿದೆ ಎಂದಿದ್ದಾರೆ.
‘ಪ್ರತಿಯೊಬ್ಬ ಸರ್ಕಾರಿ ನೌಕರರು ಚುನಾವಣೆಯಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಯಾವುದೇ ಕೆಲಸವನ್ನು ಕೊಟ್ಟರೂ ಪ್ರತಿಯೊಬ್ಬರೂ ನಿಷ್ಟೆಯಿಂದ ಮಾಡಬೇಕು. ಅದು ಬಿಟ್ಟು ನಮಗೆ ಇಂತಹುದೇ ಹುದ್ದೆ ಬೇಕು ಎಂದರೆ ಹೇಗೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಆಕ್ಷೇಪಣೆಯೇನಾದರೂ ಇದ್ದಲ್ಲಿ ಲಿಖಿತವಾಗಿ ನೀಡಿದಲ್ಲಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡುವುದರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಬ್ಬ ಬೇಕು ಹರುಷಕೆ

0

ಹಬ್ಬಗಳೆಂದರೆ ನಮ್ಮ ನಿತ್ಯಜೀವನಕ್ಕೆ ಮೆರುಗು ಕೊಡುವ ವಿಶೇಷ ಆಚರಣೆಯ ದಿನ. ಹಬ್ಬಗಳಿಗೆ ಪೌರಾಣಿಕ ಐತಿಹಾಸಿಕ ಸಂಬಂಧಗಳಿವೆ. ಈ ಹಬ್ಬಗಳಿಂದ ನಮ್ಮ ನಿತ್ಯ ಜೀವನದ ಏಕತಾನತೆಯು ದೂರವಾಗುತ್ತದೆ ಹಾಗೂ ಪ್ರಾಕೃತಿಕವಾಗಿ ನಮ್ಮ ಆರೋಗ್ಯಕ್ಕೆ ಈ ಹಬ್ಬಗಳು ಪೂರಕವಾಗುತ್ತವೆ.
1. ವಿವಿಧ ಧರ್ಮಗಳಿಗೆ ಅನುಸಾರವಾಗಿ ನಾವು ವಿವಿಧ ಹಬ್ಬಗಳನ್ನು ಆಚರಿಸುತ್ತೇವೆ. ಹಿಂದೂಗಳಿಗೆ ದಸರಾ, ದೀಪಾವಳಿ, ಯುಗಾದಿ, ಗಣೇಶ ಚತುರ್ಥಿ ಮೊದಲಾದವು ಮುಖ್ಯ ಹಬ್ಬಗಳು. ಕ್ರೈಸ್ತ ಬಾಂಧವರಿಗೆ ಕ್ರಿಸ್‍ಮಸ್, ಗುಡ್ ಫ್ರೈಡೇ ಮೊದಲಾದುವು: ಮುಸಲ್ಮಾನ ಮಿತ್ರರಿಗೆ ರಂಜಾನ್, ಬಕ್ರೀದ್, ಈದ್-ಮಿಲಾದ್ ಮೊದಲಾದ ಹಬ್ಬಗಳು ಮುಖ್ಯವಾದುವು.
2. ‘ದೇವರು’ ಎಂಬುದು ಪರಿಪೂರ್ಣ ರೂಪ. ಅಂತಹ ದೇವರನ್ನು ವಿಶೇಷ ರೀತಿಯಲ್ಲಿ ಪೂಜಿಸುವುದೇ ಹಬ್ಬದ ವಿಶೇಷ. ಈ ಕ್ರಮಗಳು ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸುವುದಕ್ಕೆ ಪೂರಕವಾದುವು.
3. ಹಬ್ಬಗಳು ಬಂಧು-ಮಿತ್ರರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತವೆ.
4. ಹಬ್ಬದ ಅಂಗವಾಗಿ ತಯಾರಿಸುವ ವಿಶೇಷ ಅಡುಗೆಗಳೂ ಕೂಡ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು ನಮಗೆ ಆರೋಗ್ಯವನ್ನು ಕೊಡುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ.
5. ಹಬ್ಬದ ಸಂದರ್ಭದಲ್ಲಿ ಆಡುವ ವಿವಿಧ ಆಟಗಳು ಮನಸ್ಸಿಗೆ ಸಂತೋಷವನ್ನು ನೀಡುತ್ತವೆ.
6. ಹಬ್ಬಗಳಲ್ಲಿ ನಾವು ಆಹಾರ, ವಸ್ತ್ರ (ಬಟ್ಟೆ), ಉಡುಗೊರೆಗಳನ್ನು ಬೇಕಾದವರಿಗೆ ವಿನಿಮಯ ಮಾಡಿಕೊಳ್ಳುತೇವೆ. ಇದರಿಂದ ನೀಡುವವರಿಗೆ ಹಾಗೂ ಸ್ವೀಕರಿಸುವವರಿಗೆ ಸಂತೋಷವು ದೊರೆಯುತ್ತದೆ.
7. ಹಬ್ಬಗಳಲ್ಲಿ ಮಾಡುವ ಹೂವಿನ ಅಲಂಕಾರ, ವಿವಿಧ ರಂಗೋಲಿಗಳು ಮನಸ್ಸಿಗೆ ಮುದವನ್ನು ನೀಡುತ್ತವೆ. ಕಲೆಗಳನ್ನು ಕಲಿಯಲೂ ಹಬ್ಬಗಳು ಸಹಕಾರಿ.
8. ಮನೋವಿಕಾಸವನ್ನು ಹೊಂದಲು, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಪಡೆಯಲು ಸಮಾಜದಲ್ಲಿ ಉತ್ತಮ ಸಂಪರ್ಕದಲ್ಲಿ ಇರಲು, ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಹಬ್ಬಗಳು ಸಹಕಾರಿ.
ಡಾ. ಶ್ರೀವತ್ಸ

error: Content is protected !!