20.1 C
Sidlaghatta
Thursday, January 1, 2026
Home Blog Page 962

ಮತಗಟ್ಟೆಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

0

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ೨2 ಗ್ರಾಮ ಪಂಚಾಯತಿಗಳ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು, ಮತಗಟ್ಟೆಯ ಅಧಿಕಾರಿಗಳು ತೆಗೆದುಕೊಳ್ಳಬೇಕಾದಂತಹ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಈ ಚುನಾವಣೆಯಲ್ಲಿ ಬ್ಯಾಲೆಟ್ ಮುಖಾಂತರ ಮತದಾರರು ಮತಗಳನ್ನು ಚಲಾವಣೆ ಮಾಡುವುದರಿಂದ ಮತದಾನ ಕೇಂದ್ರದಲ್ಲಿ ಮತಪೆಟ್ಟಿಗೆಯನ್ನು ಬಳಕೆ ಮಾಡುವ ವಿಧಾನ, ಮತಪತ್ರಗಳ ನಿರ್ವಹಣೆ ಕೈಬೆರಳುಗಳಿಗೆ ಶಾಯಿ ಹಾಕುವುದು, ಮತದಾರರ ಪಟ್ಟಿಗಳ ಪರಿಶೀಲನೆ ಸೇರಿದಂತೆ ಅಧಿಕಾರಿಗಳಿಗೆ ತರಬೇತಿ ನೀಡಿ, ಮತಗಟ್ಟೆಯ ಅಧಿಕಾರಿಗಳಿಗಿರುವ ಅನುಮಾನಗಳನ್ನು ಪರಿಹರಿಸಲಾಯಿತು.
ಕೆಲವು ಮಂದಿ ಮಹಿಳಾ ಶಿಕ್ಷಕರನ್ನು ಆಯಾ ತಾಲ್ಲೂಕುಗಳಲ್ಲೆ ನೇಮಕ ಮಾಡಬೇಕೆನ್ನುವ ನಿಯಮವಿದ್ದರೂ ಕೂಡಾ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕುಗಳಿಂದ ಶಿಡ್ಲಘಟ್ಟ ತಾಲ್ಲೂಕಿಗೆ ನೇಮಕ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವುದಾಗಿ ಅಪರ ಜಿಲ್ಲಾಧಿಕಾರಿ ನವೀನ್ಕುಮಾರ್ಬಾಬು ಈ ಸಂದರ್ಭದಲ್ಲಿ ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ‘ತಾಲ್ಲೂಕಿನಲ್ಲಿ ಚುನಾವಣೆ ನಡೆಯಬೇಕಿದ್ದ 24 ಗ್ರಾಮ ಪಂಚಾಐತಿಗಳ ಪೈಕಿ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗಳು ಶಾಶ್ವತ ನೀರಾವರಿಗೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿರುವುದರಿಂದ 22 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯಲಿದೆ. ಆರು ಪಂಚಾಯತಿಗಳಲ್ಲಿ 18 ಜನ ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. 770 ಅಭ್ಯರ್ಥಿಗಳು 324 ಸ್ಥಾನಗಳಿಗೆ ಸ್ಪರ್ಧೆಯಲ್ಲಿದ್ದಾರೆ. 160 ಮತಗಟ್ಟೆ ಕೇಂದ್ರಗಳಿದ್ದು, ಅವುಗಳಲ್ಲಿ 67 ಸೂಕ್ಷ್ಮ ಮತ್ತು 38 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ, ಕಂದಾಯ, ಇಲಾಖೆ, ಸೇರಿದಂತೆ ವಿವಿಧ ಇಲಾಖೆಯಗಳ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಎಇಇ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮ ಲೆಕ್ಕಾಧಿಕಾರಿಗಳಾದ ಲಾರೆನ್ಸ್, ಅಕ್ಷತಾ, ಚಂದ್ರಮ್ಮ, ಅಧಿಕಾರಿಗಳಾದ ಅನಿಲ್ಕುಮಾರ್, ರೇಷ್ಮೆ ಇಲಾಖೆಯ ಎಸ್.ಇ.ಓ.ನಾರಾಯಣಸ್ವಾಮಿ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಚುನಾವಣೆ ಬಹಿಷ್ಕಾರಕ್ಕೆ ಬಯಲು ಸೀಮೆಯ ಜನರೆಲ್ಲರೂ ಬೆಂಬಲ ನೀಡಿಲ್ಲ

0

ಶಾಶ್ವತ ನೀರಿಗಾಗಿ ಒತ್ತಾಯಿಸಿ ತಾಲ್ಲೂಕಿನ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗಳು ಚುನಾವಣೆಯನ್ನು ಬಹಿಷ್ಕರಿಸಿರುವುದು ಕೇವಲ ಆಂತರಿಕ ತೀರ್ಮಾನವಷ್ಟೆ. ಅದು ಬಯಲು ಸೀಮೆ ಜನರ ಸಾಮೂಹಿಕ ನಿರ್ಣಯವಲ್ಲ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರಕ್ಕಾಗಿ ಗಂಜಿಗುಂಟೆ, ದಿಬ್ಬೂರಹಳ್ಳಿ ಭಾಗಗಳ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಯಲು ಸೀಮೆ ಪ್ರದೇಶದಲ್ಲಿ ಸುಮಾರು 74 ತಾಲ್ಲೂಕುಗಳಿದ್ದು, ಚುನಾವಣೆ ಬಹಿಷ್ಕಾರಕ್ಕೆ ಎಲ್ಲರೂ ಬೆಂಬಲ ನೀಡಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಎತ್ತಿನಹೊಳೆ ಯೋಜನೆಗೆ 500 ಕೋಟಿ ರೂಗಳನ್ನು ಖರ್ಚು ಮಾಡಿದ್ದು, 5000 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಗ್ರಾಮಗಳಲ್ಲಿ ಮನವರಿಕೆ ಮಾಡಿಕೊಡುತ್ತಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತಯಾಚಿಸಲಿದ್ದೇವೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಚಿಕ್ಕಮುನಿಯಪ್ಪ, ವೆಂಕಟೇಶ್, ತನ್ವೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಕಣದಲ್ಲಿರುವುದು ಆಶಾದಾಯಕ ಬೆಳವಣಿಗೆ

0

ತಾಲ್ಲೂಕಿನಲ್ಲಿ ಇದುವರೆಗೂ ಗ್ರಾಮ ಪಂಚಾಯತಿ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿರಲಿಲ್ಲ. ಆದರೆ ಈ ಬಾರಿ 186 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿರುವುದು ಆಶಾದಾಯಕ ಬೆಳವಣಿಗೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು 362 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಬಾರಿ ತಾಲ್ಲೂಕಿನಲ್ಲಿ ನಾಮಪತ್ರ ಸಲ್ಲಿಸಿದ್ದು, ಈಗ 186 ಕ್ಕೂ ಹೆಚ್ಚು ಮಂದಿ ಕಣದಲ್ಲಿದ್ದಾರೆ. ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುತ್ತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಬೆಂಬಲವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಿ ವಿಜೇತರಾಗುವಂತೆ ಅಭ್ಯರ್ಥಿಗಳಿಗೆ ಕರೆ ನೀಡಿದರು.
ದೇಶಾದ್ಯಂತೆ ನದಿ ಜೋಡಣೆಯು ವಾಜಪೇಯಿಯವರ ಕನಸಾಗಿದ್ದು, ಅದರ ಕುರಿತಂತೆ ಸಮೀಕ್ಷೆ ಹಾಗೂ ಯೋಜನೆಯ ರೂಪುರೇಷೆ ತಯಾರಾಗಿದೆ. ಮೋದಿಯವರು ಅದನ್ನು ಶೀಘ್ರವಾಗಿ ಪ್ರಾರಂಭಿಸಲಿದ್ದು, ಬಯಲು ಸೀಮೆಯ ಜನರಿಗೆ ವರದಾನವಾಗಲಿದೆ. ಭೂ ಕಾಯ್ದೆಯ ಉದ್ದೇಶವಿರುವುದು ಸಾರ್ವಜನಿಕ ಉಪಯುಕ್ತ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿ ಮಾತ್ರ. ಅದರಿಂದ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ರಿಯಲ್ ಎಸ್ಟೇಟ್ ಮಾಲೀಕರಿಗೆ ಅನುಕೂಲ ಮಾಡಲೆಂದು ಈ ಕಾಯ್ದೆ ಮಾಡಿಲ್ಲ. ಈ ಬಗ್ಗೆ ರೈತರಿಗೆ ಅರ್ಥ ಮಾಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ರೈತರಿಗೆ ಉಚಿತ ವಿದ್ಯುತ್ ಎಂದು ಆಮಿಷ ತೋರಿ ವಿದ್ಯುತ್ ನೀಡದೆ, ಲಾಟರಿ ದಂಧೆಯಲ್ಲಿ ಶಾಮೀಲಾದ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ. ದಕ್ಷ ಅಧಿಕಾರಿ ಡಿ.ಕೆ.ರವಿಯವರ ನಡತೆಯ ಮೇಲೆ ಕಳಂಕ ಬರುವಂತೆ ಮಾತನಾಡಿದ ಮುಖ್ಯಮಂತ್ರಿಯವರು ಕ್ಷಮಾಪಣೆ ಕೇಳಬೇಕು ಎಂದರು.
ಈ ಸಂದರ್ಭದಲ್ಲಿ ಚೀಮಂಗಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರ್ ಮತ್ತು ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಅರಿಕೆರೆ ಮುನಿರಾಜು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾ ಉಸ್ತುವಾರಿ ಕಾಂತರಾಜು, ಸಂಘಟನಾ ಕಾರ್ಯದರ್ಶಿ ರವೀಂದ್ರ, ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಲೋಕೇಶ್ಗೌಡ, ರಮೇಶ್ ಬಾಯರಿ, ದಾಮೋದರ್, ಮುನಿರತ್ನಮ್ಮ, ಅಶ್ವಕ್ ಪಾಷ, ಶಿವಕುಮಾರಗೌಡ, ಸೋಮನಾಥ, ನಂದೀಶ, ಮುನಿರಾಜು, ಅನಿಲ್ಕುಮಾರ್, ರತ್ನಮ್ಮ, ಮಂಜುಳಮ್ಮ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳಿಗೆ ರಂಗಭೂಮಿಯ ಪರಿಚಯ ಅತ್ಯಗತ್ಯ

0

ನಾಟಕದಂತಹ ಸೃಜನಶೀಲ ಕಲಾ ಮಾಧ್ಯಮದ ಮೂಲಕ ಮಕ್ಕಳಿಗೆ ಪಠ್ಯೇತರ ವಿಷಯಗಳ ಕಲಿಕೆ ಸಾಧ್ಯ ಎಂದು ಕವಿ, ನಾಟಕಕಾರ, ಹೋರಾಟಗಾರ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಬೇಸಿಗೆ ಶಿಬಿರ ಜೀರಂಗಿ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮನೆಯಲ್ಲಿ ನಡೆಯುವ ಕಲಿಕೆಗಿಂತ ಹತ್ತಾರು ಮಕ್ಕಳೊಂದಿಗೆ ಶಿಬಿರದಲ್ಲಿ ಸೇರಿದಾಗ ಮಗುವು ಹೆಚ್ಚು ಕ್ರಿಯಾಶೀಲವಾಗುತ್ತದೆ. ಸಮಾಜದ ಬಗ್ಗೆ ಗ್ರಹಿಕೆಯೂ ಉಂಟಾಗುತ್ತದೆ. ಕನ್ನಡ ರಂಗಭೂಮಿಯ ಕೊಡುಗೆಗಳು ಅಪಾರ. ಮಕ್ಕಳಿಗೆ ಈ ಕಲೆಯ ಪರಿಚಯ ಅತ್ಯಗತ್ಯ ಎಂದು ಹೇಳಿದರು. ಜನಪದ ಗಾಯಕ ಮುನಿರೆಡ್ಡಿ ಜನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.
‘ಜೀರಂಗಿ ಮೇಳ’ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು, ಡೊಳ್ಳು ಕುಣಿತ, ಕೋಲಾಟ, ಗಾಯನ, ‘ಕಲ್ ಕಮಲ್ ಕಲೆ ಪರಾಕ್’ ಮತ್ತು ‘ಹಕ್ಕಿ ಹಾಡು’ ನಾಟಕವನ್ನು ಪ್ರದರ್ಶಿಸಿದರು.
ಈಧರೆ ತಿರುಮಲ ಪ್ರಕಾಶ್, ಸತ್ಯನಾರಾಯಣಶೆಟ್ಟಿ, ರಾಮಾಂಜಿನಪ್ಪ, ದೇವರಾಜು, ಈಶ್ವರ್ ಸಿಂಗ್, ನಾಟಕ ನಿರ್ದೇಶಕರಾದ ಬಿ.ಆರ್.ಗೋಪಿನಾಥ್, ಹರೀಶ್ ಆದೀಮ, ಕೆ.ವಿ.ನಾಯಕ ಆಮಾಸ ಮತ್ತಿತರರು ಹಾಜರಿದ್ದರು.

ಕಂದಮ್ಮಗಳು ಕರೆಯುತ್ತಿವೆ ರಕ್ಷಣೆಗಾಗಿ – ಭಾಗ 1

0

ಮನೆಯ ಅಂಗಳದಲ್ಲಿ ಮಗು ಆಡುತ್ತಿದೆ. ಹತ್ತಿರದಲ್ಲಿ ಯಾರೂ ಇಲ್ಲದಿರುವ ಸಮಯವನ್ನು ನೋಡಿ ಅಪರಿಚಿತನೋ ಅಥವಾ ಸ್ವಲ್ಪ ಪರಿಚಿತನೋ ಆಗಮಿಸಿ ಮಗುವಿಗೆ ತಿಂಡಿತಿನಿಸುಗಳ ಆಸೆ ತೋರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಅವನ ವಿಕೃತ ಮನಸ್ಸು ಮಗುವಿಗೆ ಜೀವಮಾನವಿಡೀ ಕಾಡಬಲ್ಲ ಹಿಂಸೆಯನ್ನು ನೀಡುತ್ತದೆ.
ಕುಟುಂಬಕ್ಕೆ ಬಹಳ ಆಪ್ತರಾದವರಲ್ಲಿ ಅಥವಾ ಕುಟುಂಬದ ಸದಸ್ಯರಲ್ಲಿ ಒಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗುವನ್ನು ಒಲಿಸಿಕೊಳ್ಳುತ್ತಾರೆ. ಮುಂದೆ ಆ ಮುಗ್ಧ ಜೀವ ಏನೂ ತಿಳಿಯದ ಹಿಂಸೆಗೆ ಒಳಗಾಗುತ್ತದೆ.
ಅನಾಥಾಶ್ರಮಗಳಲ್ಲಿ ಏನೂ ಅರಿಯದ ಮಕ್ಕಳ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ಬೇರೆ ದಾರಿಯಿಲ್ಲದೆ ಅದನ್ನು ಸಹಿಸಿಕೊಳ್ಳುವ ಮಕ್ಕಳು ಯಾರ್ಯಾರದ್ದೋ ಲೈಂಗಿಕ ತೃಷೆಗೆ ಬಲಿಯಾಗುತ್ತಾರೆ.
3ಇದೆಲ್ಲಾ ಇವತ್ತು ದಿನನಿತ್ಯ ವರದಿಯಾಗುತ್ತಿರುವ ಘಟನೆಗಳ ಕೆಲವೇ ಪ್ರಾತಿನಿಧಿಕ ರೂಪಗಳು. ಏನಾಗುತ್ತಿದೆ ಈ ಮನುಕುಲಕ್ಕೆ? ಏಕಿಷ್ಟು ವಿಕೃತ ಮನಸ್ಸುಗಳನ್ನು ನೋಡುತ್ತಿದ್ದೇವೆ? ಎಲ್ಲವನ್ನೂ ಬರಿಯ ಕಾನೂನಿನ ಸಮಸ್ಯೆಯಾಗಿ ನೋಡಿ ಕೈತೊಳೆದುಕೊಳ್ಳವು ಸರ್ಕಾರಗಳ ಮಧ್ಯೆ ಜನಸಾಮಾನ್ಯರು ಅಸಹಾಯಕರೇ? ನಮ್ಮ ಕಂದಮ್ಮಗಳನ್ನು ಲೈಂಗಿಕ ಹಿಂಸಾಚಾರದಿಂದ ರಕ್ಷಿಸಲು ಪೋಷಕರು ತಮ್ಮ ಮಿತಿಗಳಲ್ಲಿ ಮಾಡಬಹುದಾದ್ದು ಏನಾದರೂ ಇದೆಯೇ? ಎಲ್ಲ ಎಚ್ಚರಿಕೆಯನ್ನೂ ಮೀರಿ ಇಂತಹ ಕರಾಳ ಘಟನೆಗಳು ಸಂಭವಿಸಿದಾಗ ಅವುಗಳನ್ನು ನಿಭಾಯಿಸುವುದು ಹೇಗೆ?
ಕಾಲ ಯಾವಾಗಲೂ ಕೆಟ್ಟಿಲ್ಲ!
ಮನೆಯಲ್ಲಿ ಹಳೆಯ ತಲೆಮಾರಿನ ಜನಗಳಿದ್ದರೆ, “ಅಯ್ಯೋ ಕಾಲು ಕೆಟ್ಟು ಹೋಗಿದೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಎಂದು ಆಗಾಗ ಹೇಳುತ್ತಲೇ ಇರುತ್ತಾರೆ. ಹೀಗೆ ಗೊಣಗುವವರನ್ನು ಸಮರ್ಥಿಸಲೋ ಎನ್ನುವಂತೆ ಇತ್ತೀಚೆಗೆ ಸ್ತ್ರೀಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳ, ಮತ್ತಿತರ ಲೈಂಗಿಕ ಅಪರಾಧಗಳ ವಿಷಯಗಳು ಟೀವಿ ಮತ್ತು ಪತ್ರಿಕೆಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ವಾಸ್ತವ ಅಂದರೆ ಇವು ಹಿಂದಿನ ಕಾಲದಲ್ಲೂ ಇದ್ದೇ ಇತ್ತು. ಇವತ್ತಿನ ಸಾಮಾಜಿಕ ವಾತಾವರಣ ಇವುಗಳನ್ನು ಸ್ವಲ್ಪ ಹೆಚ್ಚು ಮಾಡಿರಬಹುದು ಅಷ್ಟೆ.
ಹಿಂದಿನ ಕಾಲದಲ್ಲಿ ಲೈಂಗಿಕ ಹಿಂಸಾಚಾರದ ಬಗೆಗೆ ಕಟ್ಟುನಿಟ್ಟಿನ ಕಾನೂನುಗಳಿರಲಿಲ್ಲ. ಅದೂ ಅಲ್ಲದೆ ಈ ರೀತಿಯ ಹಿಂಸೆಗೆ ಒಳಪಡುವವರು ಯಾವಾಗಲೂ ಸ್ತ್ರೀಯರು ಅಥವಾ ಮಕ್ಕಳು ಆಗಿರುತ್ತಾರೆ. ಇವರಿಬ್ಬರೂ ಹೆಚ್ಚಿನ ಹಿಂಸಾಚಾರವೆಸಗುವ ಪುರುಷ ವರ್ಗದ ಮೇಲೆ ಒಂದಲ್ಲಾ ಒಂದು ರೀತಿಯಿಂದ ಅವಲಂಬಿತರು. ಇನ್ನೂ ಕ್ರೂರವಾದ ವಿಷಯವೆಂದರೆ ಹಿಂಸೆಗೆ ಒಳಪಟ್ಟವರೇ ಹಿಂಸಾಚಾರಿಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕಳಂಕವನ್ನು ಎದುರಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ಹಿಂಸಾಚಾರದ ಹೆಚ್ಚಿನ ಪ್ರಕರಣಗಳು ಪೋಲಿಸರಿಗೆ ದೂರಕೊಡುವುದಿರಲಿ, ಅಪ್ಪ ಅಮ್ಮಂದಿರಿಗೂ ತಿಳಿಯದೇ ಹೋಗುತ್ತಿತ್ತು.
ಹೀಗೆ ಅನ್ಯಾಯಕ್ಕೊಳಗಾದವರು ನೋವು ಅವಮಾನಗಳನ್ನು ನುಂಗಿಕೊಂಡು ಜೀವಮಾನವೆಲ್ಲಾ ನರಕಯಾತನೆಯನ್ನು ಅನುಭವಿಸುತ್ತಾರೆ. ಇನ್ನು ಹಿಂಸೆಗೊಳಗಾದವರು ಮಕ್ಕಳಾದರಂತೂ ಅದರ ಪರಿಣಾಮ ಅವರ ಜೀವನದುದ್ದಕ್ಕೂ ಇರುತ್ತದೆ. ಇದೇ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಒಂದು ಕಡೆಯಾದರೆ, ಬದುಕಿ ಉಳಿಯುವವರೂ ಕೂಡ ಭಾವನಾತ್ಮಕಾವಾಗಿ ಸತ್ತಂತೆಯೇ ಇರುತ್ತಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ಮಕ್ಕಳಲ್ಲಿ ಲೈಂಗಿಕ ಹಿಂಸಾಚಾರದ ಬಗೆಗೆ ಸಂಪೂರ್ಣ ಜಾಗೃತಿ ಮೂಡಿಸಬೇಕು. ಇಂತಹ ಜಾಗೃತಿಯ ಉದ್ದೇಶ ಅವರು ಹಿಂಸೆಗೆ ಒಳಗಾಗುವುದನ್ನು ತಪ್ಪಿಸುವುದಲ್ಲದೇ ನಮ್ಮ ಮಕ್ಕಳು ತಾವೇ ಹಿಂಸಾಚಾರಿಗಳಾಗುವುದನ್ನು ತಡೆಯುವಂತಾದ್ದೂ ಆಗಿರಬೇಕು.
ಲೈಂಗಿಕ ಹಿಂಸಾಚಾರವೆಂದರೇನು?
ಒತ್ತಾಯದ ಸಂಭೋಗ ಮಾತ್ರ ಲೈಂಗಿಕ ಹಿಂಸಾಚಾರವೆನ್ನುವುದು ನಮ್ಮೆಲ್ಲರ ತಪ್ಪು ತಿಳುವಳಿಕೆ. ಇದರಷ್ಟೇ ದೂರಗಾಮೀ ದುಷ್ಪÀರಿಣಾಮಗಳನ್ನು ಇನ್ನಿತರ ಸಾಮಾನ್ಯ ಎನ್ನಿಸುವ ವಿಕೃತಿಗಳೂ ಉಂಟುಮಾಡಬಹುದು. ಉದಾಹರಣೆಗೆ,
* ಒತ್ತಾಯದಿಂದ ಚುಂಬಿಸುವುದು.
* ಮಗುವಿನ ಖಾಸಗೀ ಆಂಗಗಳನ್ನು ಅನಗತ್ಯವಾಗಿ ಮುಟ್ಟುವುದು, ಹಿಸುಕುವುದು, ಬೆರಳು ತೂರಿಸುವುದು.
* ಮಗುವಿಗೆ ನಗ್ನ ದೇಹ, ನೀಲಿ ಚಿತ್ರ, ಹಸ್ತಮೈಥುನ ಅಥವಾ ಸಂಭೋಗ ಕ್ರಿಯೆಯನ್ನು ಒತ್ತಾಯದಿಂದ ತೋರಿಸುವುದು.
* ಮಗುವಿನ ಜೊತೆ ಲೈಂಗಿಕ ವಿಚಾರಗಳನ್ನು ಮಾತನಾಡುವುದು ಮತ್ತು ಪ್ರಚೋದಿಸುವುದು.
ಹೀಗೆ ಮಗುವಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುವ ಮತ್ತು ಅದರ ಮುಂದಿನ ಆರೋಗ್ಯಕರ ಲೈಂಗಿಕ ಜೀವನದ ಬೆಳವಣಿಗೆಗೆ ತೊಂದರೆಯಾಗುವ ಎಲ್ಲದರ ಬಗೆಗೂ ನಾವು ಎಚ್ಚರದಿಂದಿರಬೇಕಲ್ಲದೆ ಅವುಗಳನ್ನು ಕಡೆಗಣಿಸದೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.
ಪರಿಚಿತರೇ ಹೆಚ್ಚು ಅಪಾಯಕಾರಿ!
ಇನ್ನೊಂದು ಪ್ರಮುಖ ವಿಚಾರವೆಂದರೆ ಹಿಂಸಾಚಾರ ಮಾಡುವವರು ಅಪರಿಚಿತರು ಅಥವಾ ಕ್ರಿಮಿನಲ್‍ಗಳೇ ಆಗಬೇಕೆಂದಿಲ್ಲ. ಮನೆಯ ಹಿರಿಯರು, ಸ್ನೇಹಿತರು, ಪರಿಚಿತರು, ಶಾಲೆಯ ಬಸ್, ಆಟೋ ಚಾಲಕರು, ಶಿಕ್ಷಕರು, ಕಛೇರಿಯ ಮೇಲಧಿಕಾರಿಗಳು, ಕೊನೆಗೆ ಧಾರ್ಮಿಕ ಕ್ಷೇತ್ರದಲ್ಲಿರುವವರೂ ಕೂಡ ಇಂತಹ ಹೀನ ಕೃತ್ಯವನ್ನು ಮಾಡುವ ಸಾಧ್ಯತೆಗಳಿರುತ್ತವೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಹೆತ್ತ ತಂದೆಯೇ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರವೆಸಿಗೆದ ಘಟನೆಗಳೂ ಆಗಾಗ ವರದಿಯಾಗುತ್ತಿರುತ್ತದೆ.
ಅಮೇರಿಕಾದಲ್ಲಿ ನಡೆದ ಸಮೀಕ್ಷೆಯೊಂದರ ಫಲಿತಾಶ ಬೆಚ್ಚಿ ಬೀಳಿಸುವಂತಿದೆ. ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರವೆಸಗುವವರಲ್ಲಿ ಶೇಕಡ 60ರಷ್ಟು ಜನರು ಪರಿಚಿತರು ಮತ್ತು ಶೇಕಡಾ 30ರಷ್ಟು ಜನ ಕುಟುಂಬದವರೇ ಆಗಿರುತ್ತಾರೆ. ಕೇವಲ ಶೇಕಡಾ 10ರಷ್ಟು ಜನ ಮಾತ್ರ ಅಪರಿಚಿತರಾಗಿರುತ್ತಾರೆ. ಕೇವಲ ಅಪರಿಚಿತರಿಂದಾಗುವ ಘಟನೆಗಳಲ್ಲಿ ಕೆಲವು ಮಾತ್ರ ಪೋಲಿಸರಿಗೆ ವರದಿಯಾಗುತ್ತವೆ. ಅಂದರೆ ಯಾರ ಗಮನಕ್ಕೂ ಬಾರದ ಹಿಂಸಾಚಾರದ ಮಟ್ಟ ಎಷ್ಟಿರಬಹುದು ಎಂದು ಊಹಿಸುವುದೇ ಕಷ್ಟ ಮತ್ತು ಭಯಾನಕ. ಇವುಗಳ ಬಗೆಗೆ ಪೋಷಕರು ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ಹಿಂಸಾಚಾರವೆಸುಗುವವರು ವಯಸ್ಕರು ಅಥವಾ ಪುರುಷರೇ ಆಗಬೇಕೆಂದಿಲ್ಲ. ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಮೇಲಿನ ಅಥವಾ ಸ್ತ್ರೀಯರೂ ಕೂಡ ಗಂಡು ಹಾಗೂ ಹೆಣ್ಣು ಮಕ್ಕಳ ಮೇಲಿನ ಇಂತಹ ವಿಕೃತಿಗಳಿಗೆ ಕಾರಣರಾಗಬಹುದು.
ಮಧ್ಯವ್ಯಸನಿಗಳು, ಮಾನಸಿಕ ಅಸಮತೋಲನ ಇರುವವರು, ಅಥವಾ ಕ್ರಿಮಿನಲ್ ಹಿನ್ನೆಲೆ ಇರುವವರ ಬಗೆಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು.
ಮುಂದುವರೆಯುವುದು
ವಸಂತ್ ನಡಹಳ್ಳಿ

ಗುಟ್ಟಿನೊಳಗೆ ಗುಮಾನಿಗಳು

0

ಹಿಂದೆ ಗುರುಕುಲ ಪದ್ದತಿಯಿದ್ದಾಗಲೂ ಪರೀಕ್ಷೆಗಳಿದ್ದವು. ಉತ್ತೀರ್ಣ – ಅನುತ್ತೀರ್ಣ ಎಂಬುದು ಇತ್ತು. ಪರೀಕ್ಷೆ ಎಂಬ ನಿಕಶವಿರದೆ ವ್ಯಕ್ತಿಯ ಸಾಮಥ್ರ್ಯವನ್ನು ಅಳೆಯುವುದು ಅಸಾಧ್ಯ. ಒಬ್ಬರಿಂದ ಇನ್ನೊಬ್ಬರು ಹೆಚ್ಚು – ಕಡಿಮೆ ಎಂಬ ತೀರ್ಮಾನಕ್ಕೆ ಬರಲು ಪರೀಕ್ಷೆ ಎಂಬ ವ್ಯವಸ್ಥೆ ಅಗತ್ಯ. ಆದರೆ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಯ ಸಾಮಥ್ರ್ಯದ ಪರೀಕ್ಷೆ ಗುರು – ಹಿರಿಯರ ಮತ್ತು ಸಹಪಾಠಿಗಳ ಸಮ್ಮುಖದಲ್ಲೇ ಜರುಗುತ್ತಿತ್ತು. ಎಲ್ಲ ತೆರೆದಿಟ್ಟ ಪುಸ್ತಕದಂತೆ ಯಾರೂ ಬೇಕಾದರೂ ನೋಡಬಹುದಿತ್ತು, ಕೇಳಬಹುದಿತ್ತು. ಹಾಗಾಗಿ ಅಲ್ಲಿ ನಕಲು ಮಾಡಲಾಗಲೀ, ಅಂಕಗಳನ್ನು ತಿದ್ದಲಾಗಲೀ ಸಾಧ್ಯವಿರಲಿಲ್ಲ. ಹಾಗೇ ಸಿದ್ದ ಪ್ರಶ್ನೆ ಪತ್ರಿಕೆಗಳು ಬಯಲಾಗುವ ಭಯವಿರಲಿಲ್ಲ, ಬೇರೆ ಉತ್ತರ ಪತ್ರಿಕೆಗಳನ್ನು ಜೋಡಿಸುವ ವಾಮ ಮಾರ್ಗಕ್ಕೆ ಆಸ್ಪದವಿರಲಿಲ್ಲ. ಆದ್ದರಿಂದ ವ್ಯಕ್ತಿಯ ಸಾಮಥ್ರ್ಯದ ಕುರಿತು – ಪರೀಕ್ಷಾನಂತರ ಅಪಸ್ವರಗಳೂ ಹುಟ್ಟಲು ಕಷ್ಟವಾಗಿತ್ತು.
ಆದರೆ ಕಲಿಕಾ ಪದ್ಧತಿ ಬದಲಾದಂತೆ – ಪರೀಕ್ಷಾ ಪದ್ಧತಿಗಳೂ ಬದಲಾಗುತ್ತಾ ಬಂತು. ಈಗಂತೂ ಪಬ್ಲಿಕ್ ಪರೀಕ್ಷೆಗಳೂ ಪ್ರಶ್ನೆ ಪತ್ರಿಕೆಗಳು ಒಂದೆಡೆ ಸಿದ್ದವಾಗಿ, ಹಲವು ಕಡೆ ರವಾನೆಯಾಗಿ, ಹಲವು ಕೇಂದ್ರಗಳಲ್ಲಿ ಕುಳಿತ ವಿದ್ಯಾರ್ಥಿಗಳು – ಅವುಗಳಿಗೆ ಉತ್ತರಿಸಿ- ಅನಂತರ ಅವುಗಳು ಸೀಲಾಗಿ – ಕೋಡಿಂಗ್ ಮತ್ತು ಡಿಕೋಡಿಂಗ್ ಎಲ್ಲ ನಡೆಯುವ ಹೊತ್ತಿಗೆ ಏನೇನಾಗಿರುತ್ತದೋ ಹೇಳಲಾಗುವುದಿಲ್ಲ. ಒಂದಡೆ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮುನ್ನವೇ ಬಹಿರಂಗಗೊಳ್ಳುವುದು – ಇನ್ನೊಂದಡೆ ಉತ್ತರ ಪತ್ರಿಕೆಗಳನ್ನೆ ಬದಲಿಸಿ ಬಿಡುವುದು. ಒಟ್ಟಾರೆ ಅಂಕಗಳಿಸುವುದಕ್ಕೆ ಅನೇಕ ಅಡ್ಡದಾರಿಗಳು, ಅವುಗಳಿಗೆ ಅನೇಕ ಹಸ್ತಗಳ ಸಹಕಾರ, ಅದಕ್ಕೆ ತಕ್ಕಂತೆ ಹಣಮಾಡಿಕೊಳ್ಳುವ ವ್ಯವಸ್ಥಿತ ಸಂಚು. ಇದನ್ನೆಲ್ಲ ಗಮನಿಸಿದರೆ ಸದ್ಯ ಪರೀಕ್ಷೆಗಳೂ ಕೇವಲ ಪ್ರಹಸನಗಳಾಗುತ್ತಿವೆ. ಪ್ರಾಮಾಣಿಕವಾಗಿ ಪಾಠ ಮಾಡಿದ ಪ್ರಾಧ್ಯಾಪಕರಿಗೂ – ಪ್ರಯತ್ನಶೀಲರಾದ ವಿದ್ಯಾರ್ಥಿಗಳಿಗೂ ಆತಂಕ ಮೂಡುತ್ತಿದೆ. ವರ್ಷವಿಡೀ ಕಲಿತದ್ದನ್ನು ನೆನಪಿನಲ್ಲಿಟ್ಟುಕೊಂಡು ಕೊಟ್ಟ ಮೂರು ಘಂಟೆಯ ಅವಧಿಯೊಳಗೆ – ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವುದು ಸಾಮಾನ್ಯವಾದ ಸಂಗತಿಯೇನಲ್ಲ! ಹೀಗೆ ಉತ್ತರಿಸಲು ಸಿದ್ದರಾಗಿ – ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಅಂಕಗಳನ್ನು ಪಡೆಯಲು ಉತ್ಸುಕರಾದ ವಿದ್ಯಾರ್ಥಿಗಳಿಗೆ – ಇತ್ತೀಚಿನ ವಿದ್ಯಾಮಾನಗಳು ಗಾಬರಿಯ ಜೊತೆಗೇ ಜಿಗುಪ್ಸೆಯನ್ನು ಹುಟ್ಟಿಸುತ್ತಿದೆ. ಬಹುಶಃ ಗುಟ್ಟಿನಲ್ಲಿ ಪ್ರಶ್ನೆ ತಯಾರಿಸುವ – ಗುಟ್ಟಾಗಿ ಬರೆಯುವ (ಬರೆಯುವಾಗ ಯಾರೂ ನೋಡುತ್ತಾ ಕೂತಿರುವುದಿಲ್ಲ) – ಗುಟ್ಟಾಗಿಯೇ ಅವುಗಳನ್ನು ಮೌಲ್ಯಮಾಪನ ಮಾಡುವ – ಒಟ್ಟಾರೆ ಗುಟ್ಟಿನ ವ್ಯವಹಾರವೇ ಇಂದಿನ ಸ್ಥಿತಿಗೆ ಕಾರಣವಾಗಿರಬಹುದೇನೋ ಎಂಬ ಅನುಮಾನ. ಯಾಕೆಂದರೆ ಇರಬಹುದಾದ ಗುಟ್ಟನ್ನು ಮೊದಲೇ ಅರಿತು ಉತ್ತರಿಸುವ ಅಥವಾ ಗುಟ್ಟಲ್ಲೇ ಬೇರೆಯದನ್ನು ಸೇರಿಸಬಹುದಾದ ಸಾಧ್ಯತೆಗಳಿದ್ದಾಗ ಅವುಗಳ ಸಾಧ್ಯತೆಯನ್ನು ಸಂಬಂಧಪಟ್ಟವರು ಸೂಕ್ತವಾಗಿ ಬಳಸಿಕೊಂಡು – ಸಿರಿವಂತರಾಗುವುದು ಒಂದೆಡೆ – ಇನ್ನೊಂದೆಡೆ ಇವುಗಳ ಪ್ರಯೋಜನಕ್ಕೆ ಪ್ರಯತ್ನಿಸುತ್ತಾ – ಕಷ್ಟಪಟ್ಟು ಓದುವುದನ್ನೇ ಬಿಟ್ಟು ಹೇಗಾದರೂ ಸರಿ – ಕೈಯಲ್ಲೊಂದು ಅಂಕಪಟ್ಟಿ – ಸರ್ಟಿಫಿಕೇಟ್ ಇದ್ದರೆ ಯಾರನ್ನಾದರೂ ಹಿಡಿದು – ಹೇಗಾದರೂ ನೌಕರಿಗಿಟ್ಟಿಸಿಕೊಳ್ಳಬಹುದೆಂದು ನಂಬಿ ಬದುಕುವುದು. ಯಾವಲ್ಲಿ ಹೆಚ್ಚು ಹೆಚ್ಚು ಗೌಪ್ಯತೆ ಕಾಪಾಡಲು ಪ್ರಯತ್ನಗಳು ನಡೆಯುತ್ತವೋ ಅಲ್ಲಲ್ಲಿ ಹೆಚ್ಚು ಹೆಚ್ಚು ಅವುಗಳನ್ನು ಒಡೆಯುವ ಪ್ರಯತ್ನಗಳು ಜರುಗುತ್ತವೆ. ಎಲ್ಲ ಗುಟ್ಟಾಗಿ ನಡೆದರೆ ಎಡವಟ್ಟಾಗುವುದಿಲ್ಲ. ಎಂಬ ಹುಸಿ ಭರವಸೆ. ಆದರೆ ಅವರ ಗುಟ್ಟು ರಟ್ಟಾಗಿ – ಎಲ್ಲ ಬಹಿರಂಗಗೊಳ್ಳುತ್ತಿರುವಾಗ – ಅಸಲಿ ಮತ್ತು ನಕಲಿ ಎಂಬುದರ ನಡುವಿನ ವ್ಯತ್ಯಾಸ ಗುರುತಿಸುವುದೇ ಹರಸಾಹಸದ ಕೆಲಸ.
ಹಿಂದಿನ ಹಾಗೆ “ಗುರುಕುಲ” ಪದ್ಧತಿಗೆ ಮರಳುವುದು ಇಂದು ಸಾಧ್ಯವಿಲ್ಲ. ಇಂದಿನ ವ್ಯವಸ್ಥೆಗೆ ಹೊಂದಿಕೊಂಡಾಗಿದೆ. ಪರೀಕ್ಷೆ ಎನ್ನುವುದು ಪವಿತ್ರವಾದ ಕಾರ್ಯ. ಅದರಲ್ಲಿ ಭಾಗಿಗಳಾಗುವವರೆಲ್ಲ – ವಿದ್ಯಾರ್ಥಿಗಳನ್ನೂ ಒಳಗೊಂಡಂತೆ – ಪ್ರಾಮಾಣಿಕವಾಗಿ ನಡೆದುಕೊಂಡರೆ ಅದರ ಪಾವಿತ್ರ್ಯತೆಗೆ ಧಕ್ಕೆ ಬಾರಲು ಸಾಧ್ಯವೇ ಇಲ್ಲ. ಆದರೆ ಕೆಲವೇ ಕೆಲವು ಕುತ್ಸಿತ ಮನಸ್ಸುಗಳ ಧನದಾಹ – ಪ್ರಯತ್ನ ಪಡದೇ ಅಂಕಗಳಿಸಬೇಕೆಂಬ ವಿದ್ಯಾರ್ಥಿಗಳ – ಕುಟಿಲೋಪಾಯ – ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹಂತಕ್ಕೆ ಒಯ್ಯುತ್ತಿದೆ. ಪಾರದರ್ಶಕತೆ ಪ್ರಾಪ್ತವಾಗದೆ ಹೋದಲ್ಲಿ ಇದು ಹೀಗೆ ಮುಂದುವರಿಯುತ್ತ ಹೋದರೆ – ಒಂದಲ್ಲ ಒಂದು ದಿನ ಯಾವುದೇ ಅಂಕಪಟ್ಟಿಗಾಗಲಿ ಸರ್ಟಿಫಿಕೇಟ್ ಗಾಗಲೀ ಕವಡೆ ಕಿಮ್ಮತ್ತಿರುವುದಿಲ್ಲ. ಎಲ್ಲರನ್ನು ಅನುಮಾನದಿಂದಲೇ ನೋಡುವಂತಾಗುತ್ತದೆ.
ಪ್ರಶ್ನೆ ಪತ್ರಿಕೆಗಳ ಬಹಿರಂಗದ ಹಿಂದಿನ ಷಡ್ಯಂತ್ರವನ್ನು ಹಾಗೇ ಉತ್ತರ ಪತ್ರಿಕೆಗಳನ್ನು ಬದಲಿಸಿ – ಸೇರಿಸಿ ಮಾಡುವ ಸಂಚನ್ನು ಭೇದಿಸಿದವರಿಗೆ ನಿಜಕ್ಕೂ ಶಹಬ್ಬಾಸ್ ಎನ್ನಲೇಬೇಕು. ಇದು ಇಷ್ಟಕ್ಕೇ ಸೀಮಿತವಾಗದೆ ಸಂಬಂಧಪಟ್ಟವರೆಲ್ಲ ಶಿಕ್ಷೆಗೆ ಒಳಪಡಬೇಕು. ಯಾಕೆಂದರೆ ಇವರೆಲ್ಲ ಪ್ರಾಮಾಣಿಕ ವಿದ್ಯಾರ್ಥಿಗಳ ಬದುಕಿನೊಡನೆ ಚಲ್ಲಾಟವಾಡಿದವರು. ಅವರ ಕನಸುಗಳನ್ನು ಕಮರಿಸಿದ ಪಾಪಿಗಳು. ತಮ್ಮ ಸ್ವಾರ್ಥಕ್ಕೋಸ್ಕರ ಪ್ರಾಮಾಣಿಕರಿಗೆ ಅನ್ಯಾಯವೆಸಗಿದ ರಾಕ್ಷಸರು. ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಕರಣಗಳ ತನಿಖೆಯಾಗಿ ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಅಗತ್ಯ.
ಇಂದು ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳೂ ಒಂದಲ್ಲ ಒಂದು ಹಗರಣಗಳಲ್ಲಿ ಭಾಗಿಯಾಗಿ (ಗೊತ್ತಿದ್ದೋ – ಇಲ್ಲದೆಯೋ) ಇಡೀ ಶಿಕ್ಷಣ ವ್ಯವಸ್ಥೆಗೇ ಕಳಂಕವಾಗುತ್ತಿವೆ. ಪ್ರತಿಭಾವಂತ -ಪ್ರಾಮಾಣಿಕ ಶಿಕ್ಷಕವೃಂದಕ್ಕೆ ಆಘಾತವಾಗುತ್ತಿದೆ ಹಾಗೇ ಪ್ರತಿಭಾವಂತ – ಪ್ರಯತ್ನಶೀಲ ವಿದ್ಯಾರ್ಥಿವೃಂದಕ್ಕೆ ಅನ್ಯಾಯವಾಗುತ್ತಿದೆ. ಬಹುಶಃ ಪ್ರಾಮಾಣಿಕತೆಯ ಕೊರತೆ ಮತ್ತು ದಿಢೀರನೆ ಶ್ರೀಮಂತರಾಗುವ ಕನಸು ಕೂಡಿ – ಕೆಡುಕನ್ನು ಹುಟ್ಟುಹಾಕುತ್ತಿವೆ. ರಹಸ್ಯ ಎಂಬುದೇ ಇವರ ಪಾಲಿಗೆ ವರವಾದಂತಿದೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಈ ರೀತಿಯಾದರೆ – ಪರೀಕ್ಷೆಗಳಲ್ಲಿ ನೀಡುವ ಆಂತರಿಕ ಅಂಕಗಳಿಗೆ ಸಂಬಂಧಿಸಿದಂತೆ ಕೂಡ ಕೆಲವಡೆ ಗುಟ್ಟುಗಳು ನಡೆಯುತ್ತಿರುತ್ತವೆ. ಶಿಕ್ಷಕರು ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಅಧಿಕ ಅಂಕ ನೀಡುತ್ತಾರೆ ಎಂಬ ಆರೋಪ ಸಾಮಾನ್ಯವಾಗಿ ಎಲ್ಲಡೆ ಕೇಳಿಬರುತ್ತಿದೆ. ಪ್ರತಿಭಟಿಸಿದರೆ – ಪ್ರಶ್ನಿಸಿದರೆ ತಮ್ಮಗೆಲ್ಲಿ ಅನ್ಯಾಯವಾಗುವುದೋ ಎಂದು ಹೆದರಿ ಕುಳಿತ ವಿದ್ಯಾರ್ಥಿಗಳು ಒಂದೆಡೆಯಾದರೆ – ನಮಗೇಕೆ ಇನ್ನೊಬ್ಬರ ಉಸಾಬರಿ? ಎಂದು ನಿಷ್ಕ್ರಿಯವಾಗಿರುವ ಸಜ್ಜನ ಶಿಕ್ಷಕ ಸಮುದಾಯ ಇನ್ನೂಂದೆಡೆ. ಇದರ ಗರಿಷ್ಟ ಲಾಭ ಪಡೆಯುವವರು – ಮತ್ತದೇ ನೀತಿಗೆಟ್ಟ ಶಿಕ್ಷಕರು ಮತ್ತು ಲಜ್ಜೆಗೆಟ್ಟ ವಿದ್ಯಾರ್ಥಿಗಳು ಇಂತಹ ವ್ಯವಸ್ಥೆ ಕೂಡ ಅಗತ್ಯವಾಗಿ ಬದಲಾಗಬೇಕೆಂದರೆ – ಆಂತರಿಕ ಮೌಲ್ಯಮಾಪನ ಪಾರದರ್ಶಕವಾಗಿ ಸಂಸ್ಥೆಯ ಎಲ್ಲರೆದುರಿಗೆ ನಡೆಯಬೇಕು. ಆಗ ಕನಿಷ್ಟ ಭಯವಿರಲು ಸಾಧ್ಯ. ಭಂಡಗೆಟ್ಟವರ ಮಾತು ಬೇರೆ.
ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಜರುಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೂ ಕೂಡ – ಇಂಥ ಗುಟ್ಟಿನ ವ್ಯವಹಾರಗಳೇ ಮೂಲಕಾರಣವಾಗಿರುತ್ತದೆ. ತಮಗಿಷ್ಟವಾದವರನ್ನು ಮಾತ್ರ – ತರಗತಿಯ ಹೊರಗೆ – ತರಗತಿಗಳೆಲ್ಲ ಮುಗಿದ ಬಳಿಕವೂ – ತಮ್ಮ ಕೊಠಡಿಗೆ ಕರೆಸಿಕೊಂಡು ಹೆಚ್ಚುವರಿ ಪಾಠ ಹೇಳುತ್ತೇವೆ – ತಮ್ಮ ಅಗಾಧ ಜ್ಞಾನ ಸಂಪತ್ತನ್ನು ಧಾರೆಯೆರೆಯುತ್ತೇವೆ ಎಂದು ನಂಬಿಸಿ – ಮೋಸ ಮಾಡುವವರ ಕುರಿತು ಎಚ್ಚರವಿರಬೇಕಾದ ಅಗತ್ಯವಿದೆ. ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರೆ ಸಿಬ್ಬಂದಿ ಇಂಥ ವಿಶೇಷ ಮುತುವರ್ಜಿ ತೋರುವವರನ್ನು ಒಂದಿಷ್ಟು ಅನುಮಾನದಿಂದ ಮತ್ತು ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದರೆ ಪರಿಸ್ಥಿತಿ ಸರಿಯಾಗಿರುವ ಸಾಧ್ಯತೆಯಿದೆ. ಗುಟ್ಟಿನಲ್ಲಿ ಕೆಲವರಿಗಷ್ಟೇ ಕಲಿಸುವುದು – ಗುಟ್ಟಿನಲ್ಲಿ ಅಂಕ ನೀಡುವುದು – ಅವರನ್ನಷ್ಟೇ ಮೊದಲಿಗರನ್ನಾಗಿಸುವುದು ಕೂಡ ಶಿಕ್ಷಣದ ವ್ಯಭಿಚಾರವಲ್ಲದೆ ಮತ್ತೇನೂ ಅಲ್ಲ. ಪ್ರಶ್ನೆ ಪತ್ರಿಕೆಗಳ ಮಾರಾಟ ಮತ್ತು ಉತ್ತರ ಪತ್ರಿಕೆಗಳನ್ನು ತಿದ್ದುವ – ಮತ್ತೆಲೋ ಸರಿ ಉತ್ತರ ಬರೆದು ಸೇರಿಸುವ – ಅಂಕಗಳನ್ನು ತಿದ್ದುವ – ನಕಲಿ ಅಂಕಪಟ್ಟಿ ನೀಡುವ – ವಿಷವರ್ತುಲ ಎಷ್ಟೇ ಗುಟ್ಟಾಗಿ ಕಾರ್ಯಾಚರಣೆ ಮಾಡಿದರೂ ಒಂದಿಲ್ಲೊಂದು ದಿನ ಸತ್ಯ ಹೊರಬರುತ್ತದೆ, ತಪ್ಪಿತಸ್ಥರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬುದೇ ಸದ್ಯದ ಸಮಾಧಾನ. ಗುಟ್ಟಿನಲ್ಲಿ ಗಂಟುಮಾಡಿಕೊಳ್ಳುವ – ಗುಟ್ಟಿನಲ್ಲಿ ಲಾಭ ಗಳಿಸಿಕೊಳ್ಳುವ – ಗುಟ್ಟಿನಲ್ಲಿ ತಮ್ಮ ತೀಟೆ ತೀರಿಸಿಕೊಳ್ಳುವವರೆಲ್ಲ ತಿಳಿದಿರಬೇಕಾದ ಗಾದೆ – ‘ನೀರಿನ ಎಷ್ಟೇ ಆಳದಲ್ಲಿ ಗುಟ್ಟಾಗಿ ಮಲವಿಸರ್ಜನೆ ಮಾಡಿದರೂ ಅವರ ಮಲ ಮಾತ್ರ ಮೇಲೆ ಬಂದೇ ಬರುತ್ತದೆ’ (ಗಾದೆಯಲ್ಲಿನ ಶಬ್ದಗಳನ್ನಿಲ್ಲಿ ಆದಷ್ಟು ಸುಸಂಸ್ಕ್ರತಗೊಳಿಸಿದೆ) ಗುಟ್ಟಾಗಿ ತಿಂದು ಬೇಗುವವರಿಂದ ಗಂಧ ನಿರೀಕ್ಷಿಸುವುದು ನ್ಯಾಯವಲ್ಲ.
ರವೀಂದ್ರ ಭಟ್ ಕುಳಿಬೀಡು.

ಇನ್ನೂ ಕಾಲ ಮಿಂಚಿಲ್ಲ. ನಮ್ಮೊಂದಿಗೆ ಕೈಜೋಡಿಸಿ. ಚುನಾವಣೆ ಬಹಿಷ್ಕರಿಸಿ

0

ಪಕ್ಷಾತೀತವಾಗಿ ಜನರು ಒಗ್ಗೂಡಿ ನೀರಿಗಾಗಿ ಹೋರಾಡಬಹುದು ಎಂಬುದನ್ನು ಈ.ತಿಮ್ಮಸಂದ್ರ ಹಾಗೂ ಅಬ್ಲೂಡು ಪಂಚಾಯತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಮೂಲಕ ಸಾಧಿಸಿ ಹೋರಾಟಕ್ಕೆ ಮುನ್ನುಡಿ ಬರೆದಿದ್ದೇವೆ. ಗ್ರಾಮ ಪಂಚಾಯತಿ ಚುನಾವಣೆಯ ನಾಮಪತ್ರ ಹಿಂಪಡೆಯಲು ಸೋಮವಾರದವರೆಗೂ ಕಾಲಾವಕಾಶವಿದೆ. ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಈ ಹೋರಾಟಕ್ಕೆ ಇತರರೂ ಭಾಗಿಯಾಗಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಶ್ವತ ನೀರಾವರಿ ಹೋರಾಟಗಾರರು, ಬೈಕ್ ರ್ಯಾಲಿ ಮಾಡಿ ಚುನಾವಣೆ ಬಹಿಷ್ಕರಿಸಲು ಹೇಳಿದವರಲ್ಲಿ ಕೆಲವರು ಹಾಗೂ ಕೆಲವರ ಕುಟುಂಬದವರು ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನೀರಾವರಿ ಹೋರಾಟಗಾರರು ಈಗಲಾದರೂ ತಮ್ಮತಮ್ಮ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಲು, ನಾಮಪತ್ರವನ್ನು ಹಿಂಪಡೆಯಲು ಜನರನ್ನು ಮನವೊಲಿಸುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ನಮ್ಮ ಎರಡೂ ಗ್ರಾಮ ಪಂಚಾಯತಿಯವರು ಯಾವ ಸ್ವಾರ್ಥವೂ ಇಲ್ಲದೆ ಪಕ್ಷಾತೀತವಾಗಿ ರೈತರ ಜೀವನಾಧಾರ ನೀರಿನ ಕಾಳಜಿಯಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಈ ಮೂಲಕ ನಾವು ನೀರಿನ ಹೋರಾಟಕ್ಕೆ ತೊಡಗಿಸಿಕೊಂಡಿದ್ದೇವೆ. ನಮ್ಮ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಉಮೇದುವಾರರೂ ರೈತ ಮಕ್ಕಳೇ ಆಗಿರುವುದರಿಂದ ಎಲ್ಲರೂ ಚರ್ಚಿಸಿ ಸೋಮವಾರದೊಳಗೆ ನಾಮಪತ್ರಗಳನ್ನು ಹಿಂಪಡೆದು ಚುನಾವಣೆ ಬಹಿಷ್ಕರಿಸಿ. ಹಲವಾರು ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಡಿದರೂ ಚರಂಡಿ ನೀರನ್ನು ಸಂಸ್ಕರಿಸಿ ನೀಡುವುದಾಗಿ ಈಗ ಹೇಳುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯ ಮೂಲಕವೂ ನಮ್ಮ ಕೆರೆಗಳು ತುಂಬದೆಂದು ಈಗ ನಮಗೆಲ್ಲಾ ಮನವರಿಕೆಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಿ ಎಂದರು.
ಭೂಮಿಯಾಳದಿಂದ ಬಗೆದು ತರುತ್ತಿರುವ ವಿಷಪೂರಿತ ನೀರಿನಿಂದ ಈಗಾಗಲೇ ಆಯಸ್ಸನ್ನು ಕ್ಷೀಣಿಸಿಕೊಂಡಿರುವ ಬಯಲುಸೀಮೆಯ ಜನರು, ಇತ್ತ ಆರೋಗ್ಯವೂ ಇಲ್ಲದೆ, ಬೆಳೆ ಬೆಳೆಯಲಾಗದೆ, ಸಾಲಕ್ಕೆ ಸಿಲುಕಿ ನರಳುತ್ತಿದ್ದರೂ ನಮ್ಮನ್ನು ಆಳುವ ಸರ್ಕಾರಗಳಿಗೆ ಅರ್ಥವಾಗಿಲ್ಲ. ಅವರಿಗೆ ಅರ್ಥ ಮಾಡಿಸಲೆಂದೇ ಜನರು ಒಗ್ಗೂಡಬೇಕು. ನಮ್ಮೆರಡು ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದರೆ ಸಾಲದು. ಎಲ್ಲರೂ ಕೈ ಜೋಡಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ನಮ್ಮೊಂದಿಗೆ ಕೈಜೋಡಿಸಿ ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಾಥ್, ಕನಕಪ್ರಸಾದ್, ನಾರಾಯಣಸ್ವಾಮಿ, ಆರ್.ದೇವರಾಜ್, ಭಾಸ್ಕರರೆಡ್ಡಿ, ಮೌಲಾ, ವೆಂಕಟೇಶಪ್ಪ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪೋಷಕರಿಗೆ ಎಚ್ಚರಿಕೆ : ತಾಲ್ಲೂಕಿನ ಅನಧಿಕೃತ ಶಾಲೆಗಳು

0

ತಾಲ್ಲೂಕಿನಲ್ಲಿ 11 ಅನಧಿಕೃತ ಶಾಲೆಗಳಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವಾಗ ಶಾಲೆಯು ಅಧಿಕೃತ ಅಥವಾ ಅನಧಿಕೃತ ಎಂಬ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವರ:
ಅನಧಿಕೃತ ಪ್ರಾಥಮಿಕ ಶಾಲೆಗಳು(1 ರಿಂದ 5 ನೇ ತರಗತಿಗಳು):
ಮೇಲೂರು ಅಕ್ಷರ ವಿದ್ಯಾನಿಕೇತನ ಪ್ರಾಥಮಿಕ ಶಾಲೆ
ದ್ಯಾವಪ್ಪನಗುಡಿ ಲಕ್ಷ್ಮೀಹಯಗ್ರೀವ ಪ್ರಾಥಮಿಕ ಶಾಲೆ
ಎಚ್.ಕ್ರಾಸ್. ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆ
ಅನಧಿಕೃತ ಹಿರಿಯ ಪ್ರಾಥಮಿಕ ಶಾಲೆಗಳು(6 ರಿಂದ 8ನೇ ತರಗತಿಗಳು):
ಹನುಮಂತಪುರ ಗೇಟ್ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್(6–7ನೇ ತರಗತಿ)
ವರದನಾಯಕನಹಳ್ಳಿ ಗೇಟ್ ಯೂನಿವರ್ಸಲ್ ಪಬ್ಲಿಕ್ ಸ್ಕೂಲ್(6–8ನೇ ತರಗತಿ)
ಮೇಲೂರು ಸಂತ ಥಾಮಸ್ ಶಾಲೆ(6–8ನೇ ತರಗತಿ)
ಬಳುವನಹಳ್ಳಿ ಸೀತಾರಾಮಚಂದ್ರ ಪ್ರಾಥಮಿಕ ಶಾಲೆ(5–7ನೇ ತರಗತಿ)
ಶಿಡ್ಲಘಟ್ಟ ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆ(6–7ನೇ ತರಗತಿ)
ಎಚ್.ಕ್ರಾಸ್ ಸುಮುಖ ಹಿರಿಯ ಪ್ರಾಥಮಿಕ ಶಾಲೆ(6–8 ಆಂಗ್ಲ ಮಾಧ್ಯಮದ ವಿಭಾಗಗಳು).
ಅನಧಿಕೃತ ಪ್ರೌಢಶಾಲೆಗಳು(9–10ನೇ ತರಗತಿಗಳು):
ಮೇಲೂರು ಸಂತ ಥಾಮಸ್ ಶಾಲೆ(9–10ನೇ ತರಗತಿಗಳು)
ಎಚ್.ಕ್ರಾಸ್ ಸುಮುಖ ಪ್ರೌಢಶಾಲೆ(9–10 ಆಂಗ್ಲ ಮಾಧ್ಯಮದ ವಿಭಾಗಗಳು).

ಎಂ.ಶಶಿಧರ್ ಅವರಿಗೆ ಡಾಕ್ಟರ್ ಆಫ್ ಪ್ರೊಫೆಷನಲ್ ಎಂಟ್ರಪ್ರನ್ಯೂರ್ಷಿಪ್ ಪದವಿ

0

ವೆಂಕಟೇಶ್ವರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರಿಗೆ ಯುನೈಟೆಡ್ ಕಿಂಗ್ಡಮ್ನ ಯೂರೋಪಿಯನ್ ಕಾಂಟಿನೆಂಟಲ್ ಯೂನಿವರ್ಸಿಟಿ ಉನ್ನತ ಶಿಕ್ಷಣದ ನಿರ್ವಹಣೆಯ ವಿಷಯದಲ್ಲಿ ಡಾಕ್ಟರ್ ಆಫ್ ಪ್ರೊಫೆಷನಲ್ ಎಂಟ್ರಪ್ರನ್ಯೂರ್ಷಿಪ್ ಪದವಿಯನ್ನು ನೀಡಿದೆ.

ಜಿಲ್ಲಾಧಿಕಾರಿಗಳಿಂದ ನಗರದ ಕಾಮಗಾರಿಗಳ ಪರಿಶೀಲನೆ

0

ರಸ್ತೆಯಿಂದ ಎರಡು ಇಕ್ಕೆಲುಗಳಲ್ಲಿ ೫೦ ಅಡಿಗಳ ಅಗಲಕ್ಕೆ ಗುರುತು ಮಾಡಿ, ರಸ್ತೆಯಲ್ಲಿ ಒತ್ತುವರಿಯಾಗಿ ನಿರ್ಮಾಣವಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ನಗರಾಭಿವೃದ್ಧಿ ಯೋಜನಾಧಿಕಾರಿ ನಾಗರಾಜಶೆಟ್ಟಿ ಅವರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ನಗರಕ್ಕೆ ಶುಕ್ರವಾರ ಬೇಟಿ ನೀಡಿದ್ದ ಅವರು ನಗರೋತ್ಥಾನದಡಿಯಲ್ಲಿ ಮಾಡಿರುವ ರಸ್ತೆ ಡಾಂಬರು ಕಾಮಗಾರಿಗಳು ಮತ್ತು ರಸ್ತೆ ಅಗಲೀಕರಣ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಗರದ ಅಂಚೆ ಕಚೇರಿ ರಸ್ತೆ, ಉಲ್ಲೂರು ಪೇಟೆಯ ಬಳಿ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸಿದ್ದಾರ್ಥನಗರದ ಪೂಜಮ್ಮ ದೇವಾಲಯದ ರಸ್ತೆ, ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಅಂಚೆ ಕಚೇರಿಯ ಬಳಿಯಲ್ಲಿ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ರಾಶಿಯಾಗಿ ಬಿದ್ದಿದ್ದ ಕಸವನ್ನು ಕಂಡ ಅವರು ಸಂಜೆಯೊಳಗೆ ಕಸವನ್ನು ವಿಲೇವಾರಿ ಮಾಡಿ, ನಿಮಗೆ ಸಂಬಳ ಕೊಡುವುದು ತಡವಾದರೆ ನೀವು ಸಮ್ನೆ ಇರ್ತೀರಾ ಎಂದು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ದಿಬ್ಬೂರಹಳ್ಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲನೆ ನಡೆಸಿದ ಅವರು ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆಗಳಲ್ಲಿ ೫೦ ಅಡಿಗಳನ್ನು ಗುರ್ತಿಸಿ, ಗುರುತು ಮಾಡಿ, ಒತ್ತುವರಿಯಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ತಾಲ್ಲೂಕು ಕಚೇರಿಗೆ ಬೇಟಿ ನೀಡಿ, ಜೂನ್-೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಗೆ ನಡೆದಿರುವ ಸಿದ್ದತೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಕೆನರಾ ಬ್ಯಾಂಕಿನ ಸಮೀಪದಲ್ಲಿರುವ ನಗರಸಭಾ ಕಾರ್ಯಾಲಯ ನಿರ್ಮಾಣಕ್ಕೆ ಮೀಸಲಿಟ್ಟಿರುವ ನಗರಸಭೆಯ ಖಾಲಿ ನಿವೇಶನದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಕೆಳ ಹಂತಸ್ತಿನಲ್ಲಿ ಕಾರ್ಯಾಲಯ, ಮೇಲಂತಸ್ಥಿನಲ್ಲಿ ಸಭಾಂಗಣ ಸೇರಿದಂತೆ ಬೇರೆ ಕಚೇರಿಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಾಗರಾಜಶೆಟ್ಟಿ, ಎಇಇ ನರಸಿಂಹರಾಜು, ಇಂಜಿನಿಯರ್ ಗಂಗಾಧರ, ಪ್ರಸಾದ್, ಬಾಲಚಂದ್ರ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!