22.1 C
Sidlaghatta
Thursday, January 1, 2026
Home Blog Page 963

ಶಾಶ್ವತ ನೀರಾವರಿ ಬೇಕೆಂದು ಒತ್ತಾಯಿಸಿ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಪಂಚಾಯತಿಯ ಚುನಾವಣೆ ಬಹಿಷ್ಕಾರ

0

ತಾಲ್ಲೂಕಿನ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಪಂಚಾಯತಿಯ ಎಲ್ಲಾ ಗ್ರಾಮಸ್ಥರೂ ಶಾಶ್ವತ ನೀರಾವರಿ ಬೇಕೆಂದು ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಾಂಜಿನಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಚುನಾವಣಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಮನವೊಲಿಸಲು ಅಬ್ಲೂಡಿಗೆ ಆಗಮಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗೆ ಶುಕ್ರವಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದ ತಂಡ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗೆ ಶುಕ್ರವಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದ ತಂಡ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ.
ಅಬ್ಲೂಡು ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪಂಚಾಯತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು, ‘ನಾವು ಸ್ವಾರ್ಥಕ್ಕಾಗಿ ಚುನಾವಣೆ ಬಹಿಷ್ಕರಿಸಿಲ್ಲ. ಬಯಲು ಸೀಮೆಯ ಎಲ್ಲಾ ಜನರ ನೋವು ಹಾಗೂ ತೊಂದರೆ ನೀಗಿಸಲು ಶಾಶ್ವತ ನೀರಿಗಾಗಿ ಒತ್ತಾಯಿಸಿ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ. ಶಾಶ್ವತ ನೀರು ಸಿಗುವವರೆಗೂ ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸುತ್ತೇವೆ’ ಎಂದು ಒಗ್ಗಟ್ಟಿನಿಂದ ತಿಳಿಸಿದರು.
ಅಬ್ಲೂಡು ಗ್ರಾಮದ ಹೊರವಲಯದಲ್ಲಿ ಕಂಡುಬಂದ ಚುನಾವಣೆ ಬಹಿಷ್ಕಾರದ ಬಗ್ಗೆ ಕಂಡು ಬಂದ ಬ್ಯಾನರ್.
ಅಬ್ಲೂಡು ಗ್ರಾಮದ ಹೊರವಲಯದಲ್ಲಿ ಕಂಡುಬಂದ ಚುನಾವಣೆ ಬಹಿಷ್ಕಾರದ ಬಗ್ಗೆ ಕಂಡು ಬಂದ ಬ್ಯಾನರ್.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಚುನಾವಣೆಯು ಪ್ರಜೆಗಳಿಗೆ ಹಕ್ಕನ್ನು ನೀಡುವ ಪ್ರಕ್ರಿಯೆ. ಸರ್ಕಾರಕ್ಕೆ ಈ ಭಾಗದ ನೀರಿನ ಸಮಸ್ಯೆ ತಿಳಿದಿದ್ದು, ನೀರಿ ಬವಣೆ ನಿವಾರಿಸಲು ಎಲ್ಲಾ ಪ್ರಕ್ರಿಯೆಗಳೂ ಸಾಗಿವೆ. ಚುನಾವಣೆಯನ್ನು ಬಹಿಷ್ಕರಿಸದೆ ಭಾಗವಹಿಸಿ ಎಂದು ಕೋರಿದರೂ ಜನರು ಒಪ್ಪದ ಕಾರಣ ಹಿಂದಿರುಗುತ್ತಿದ್ದೇವೆ’ ಎಂದು ಹೇಳಿದರು.
ಅಬ್ಲೂಡು ಪಂಚಾಯತಿಯ 12 ಗ್ರಾಮಗಳಿಂದ 16 ಸದಸ್ಯರ ಆಯ್ಕೆ ನಡೆಯಬೇಕಿದ್ದುದು ಗ್ರಾಮಸ್ಥರ ಒಗ್ಗಟ್ಟಿನಿಂದ ಸ್ಥಗಿತಗೊಂಡಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಭಕ್ತರಹಳ್ಳಿ ಬೈರೇಗೌಡ ಶಾಶ್ವತ ನೀರಾವರಿಗಾಗಿ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರನ್ನು ಅಭಿನಂದಿಸಿದರು.
ಅಬ್ಲೂಡು ಸೊಣ್ಣಪ್ಪ, ಪಿಳ್ಳಪ್ಪ, ಸೋಮಶೇಖರ್, ಆರ್.ದೇವರಾಜ್, ಮುನಿವೆಂಕಟಸ್ವಾಮಿ, ಆಂಜಿನಪ್ಪ, ರಮೇಶ, ಆಂಜಿನಪ್ಪ, ಕನಕಪ್ರಸಾದ್, ಸೀನಪ್ಪ, ದೇವು, ವೀರಪ್ಪ, ಬೈರಪ್ಪ, ದ್ಯಾವಪ್ಪ, ಚಾಗೆ ಬೈರಪ್ಪ, ನಾರಾಯಣಪ್ಪ, ಬೈರೇಗೌಡ, ಶೆಟ್ಟಹಳ್ಳಿ ಮಂಜು, ಶ್ರೀರಾಮಪ್ಪ, ರಾಮಚಂದ್ರ, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಚುನಾವಣೆಯ ಬಹಿಷ್ಕಾರವನ್ನು ಹಿಂಪಡೆಯುವುದಿಲ್ಲ

0

‘ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಚುನಾವಣೆಯ ಬಹಿಷ್ಕಾರವನ್ನು ಹಿಂಪಡೆಯುವುದಿಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ಗ್ರಾಮ ದೇವತೆಯ ಹೆಸರಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನತೆ ಪಕ್ಷ ಬೇಧ ಮರೆತು ಬಹಿಷ್ಕಾರ ಮಾಡಿದ್ದೇವೆ. ಶಾಶ್ವತ ನೀರಿಗಾಗಿ ನಾವು ಈ ಭಾಗದ ಜನತೆಯ ಹಿತದೃಷ್ಠಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಯಾವ ಪಂಚಾಯತಿಯವರಾದರೂ ಚುನಾವಣೆ ಮಾಡಿಕೊಳ್ಳಲಿ. ನಾವಂತೂ ನಾಮಪತ್ರ ಸಲ್ಲಿಸಲ್ಲ’ ಎಂದು ಅಬ್ಲೂಡು ಪಂಚಾಯತಿಯ ನಾಗರಿಕರು ಗುರುವಾರ ಖಡಾಖಂಡಿತವಾಗಿ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಎಲ್ಲಾ ಹಳ್ಳಿಗಳ ಜನರು ಗ್ರಾಮಪಂಚಾಯತಿಯ ಚುನಾವಣೆಯಲ್ಲಿ ನಾಮಪತ್ರಗಳನ್ನೂ ಹಾಕದೆ ಚುನಾವಣೆ ಬಹಿಷ್ಕಾರ ಮಾಡಿರುವ ಬಗ್ಗೆ ಮಾದ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ಧಿಗಳನ್ನು ಆಧರಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಳುಹಿಸಿದ್ದ ಪತ್ರವನ್ನಾಧರಿಸಿ ಗ್ರಾಮಕ್ಕೆ ಆಗಮಿಸಿದ್ದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನಪ್ಪ ಅವರು ಪಂಚಾಯತಿಯ ಮುಖಂಡರುಗಳನ್ನು ಮನವೊಲಿಸುವಂತಹ ಪ್ರಯತ್ನವನ್ನು ಮಾಡಿದರಾದರೂ ಅಧಿಕಾರಿಗಳ ಪ್ರಯತ್ನ ಫಲನೀಡಲಿಲ್ಲ.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾಡಿಕೊಂಡಿರುವ ನಾವೇ ಅದನ್ನು ಮುರಿಯುವುದು ಬೇಡ. ಚುನಾವಣೆಗಳ ಮುಖಾಂತರ ಆಯ್ಕೆಯಾಗುವಂತಹ ಜನಪ್ರತಿನಿಧಿಗಳ ಮುಖಾಂತರವೇ ಸರ್ಕಾರದ ಕೆಲವು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತಹ ವ್ಯವಸ್ಥೆಯನ್ನು ಮಾಡಿಕೊಂಡಿರುವುದರಿಂದ ಅಭಿವೃದ್ದಿಗೆ ತೊಡಕಾಗಲಿದೆ. ತಾಲ್ಲೂಕಿನ ೨೪ ಗ್ರಾಮ ಪಂಚಾಯತಿಗಳ ಪೈಕಿ ೨ ಪಂಚಾಯತಿಗಳಲ್ಲಿ ಮಾತ್ರ ಈವರೆಗೂ ನಾಮಪತ್ರಗಳನ್ನು ಸಲ್ಲಿಸಿಲ್ಲ, ಶುಕ್ರವಾರದಂದು ಕಡೆಯ ದಿನವಾಗಿರುವುದರಿಂದ ತಮ್ಮ ತೀರ್ಮಾನಗಳನ್ನು ಪರಿಶೀಲನೆ ಮಾಡಿ, ಚುನಾವಣೆಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.
ಮುಖಂಡರು ಹಾಗೂ ಗ್ರಾಮಸ್ಥರು ನಮ್ಮ ತೀರ್ಮಾನಗಳಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ, ಒಂದು ವೇಳೆ ನಮಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾದರೆ ಹೋರಾಟದ ಮುಖಾಂತರವೇ ಪಡೆದುಕೊಳ್ಳುತ್ತೇವೆ ಎಂದರು.
ಚುನಾವಣಾಧಿಕಾರಿ ಸುಬ್ಬರಾವ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಅಬ್ಲೂಡು ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಪ್ಪ, ರಮೇಶ್, ಆರ್.ದೇವರಾಜ್, ಮುನಿರೆಡ್ಡಿ, ಕೆ.ಎಸ್.ದ್ಯಾವಕೃಷ್ಣಪ್ಪ, ಚಂದ್ರು, ದ್ಯಾವಪ್ಪ, ಸೀನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಇ-ಬೀಡ್ ವ್ಯವಸ್ಥೆಯಲ್ಲಿನ ಗೊಂದಲ: ರೈತರ ಆಕ್ರೋಷ

0

ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಚನ್ನಪಟ್ಟಣ, ರಾಮನಗರದ ಮಾದರಿಯಲ್ಲಿ ಇ-–ಬೀಡ್ ವ್ಯವಸ್ಥೆಯನ್ನು ಬುಧವಾರದಂದು ಅಧಿಕೃತವಾಗಿ ಚಾಲನೆ ನೀಡಿದ್ದರಾದರೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಮತ್ತು ಮಾರುಕಟ್ಟೆಗೆ ಗೂಡು ಹೆಚ್ಚಾಗಿ ಆವಕವಾದ ಕಾರಣ ಗುರುವಾರ ಮಾರುಕಟ್ಟೆಯಲ್ಲಿ ಗೊಂದಲ ಏರ್ಪಟ್ಟಿತ್ತು. ರೇಷ್ಮೆ ಗೂಡನ್ನು ಹಾಕಲು ಜಾಲರಿ ಸಿಗದೇ ಓಡಾಡುವ ದಾರಿಯಲ್ಲೆಲ್ಲಾ ಕೆಲ ರೈತರು ಹಾಕಬೇಕಾದ ಪರಿಸ್ಥಿತಿ ಏರ್ಪಟ್ಟಿದ್ದು, ರೈತರ ಆಕ್ರೋಷಕ್ಕೆ ಕಾರಣವಾಗಿತ್ತು.
ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.
ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಧರದ ಬಗ್ಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ.
ಈ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಗುರುವಾರ ನೆರೆಯ ಆಂದ್ರ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆಗಳಿಂದ ಬರುವಂತಹ ಗೂಡುಗಳಿಗೆ ಮೊದಲೇ ಜಾಲರಿಗಳನ್ನು ನಿಗದಿಪಡಿಸಿರುವುದರಿಂದ ಮಾರುಕಟ್ಟೆಯ ಎಲ್ಲಾ ಜಾಲರಿಗಳಲ್ಲಿ ಅವರೇ ಗೂಡನ್ನು ತುಂಬಿಸಿಕೊಂಡಿದ್ದಾರೆ, ಸ್ಥಳೀಯ ರೈತರು ಬೆಳಗ್ಗೆ ೭ ಗಂಟೆಗೆ ಬಂದರೂ ಕೂಡಾ ಜಾಲರಿಗಳು ಸಿಗದೆ ಗೂಡನ್ನು ಹೊರಗೆ ಹಾಕುವಂತಾಯಿತು.
ನಮಗೆ ಟೋಕನ್ಗಳನ್ನೂ ಕೊಡುತ್ತಿಲ್ಲ, ಜಾಲರಿಗಳೂ ಇಲ್ಲ, ಮಾರುಕಟ್ಟೆಯ ಅಧಿಕಾರಿಗಳು ಮೊದಲೇ ಸ್ಥಳೀಯ ರೈತರುಗಳಿಗೆ ಮಾಹಿತಿಗಳನ್ನು ನೀಡದೆ, ಈ ವ್ಯವಸ್ಥೆಯನ್ನು ಮಾಡಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ, ಕೌಂಟರಿನಲ್ಲಿ ಟೋಕನ್ ತೆಗೆದುಕೊಂಡು ಹೋಗಿ ಜಾಲರಿಗಳಲ್ಲಿ ಹಾಕಿರುವವರ ಗೂಡಿಗೆ ಒಳ್ಳೆಯ ಬೆಲೆ ಬರುತ್ತದೆ, ಹೊರಗೆ ಹಾಕಿರುವ ಗೂಡಿಗೆ ತೀರಾ ಕಡಿಮೆ ಬೆಲೆ ಸಿಗುತ್ತದೆ, ಬಿಸಿಲಿನಲ್ಲಿ ಗೂಡೆಲ್ಲವೂ ಮೆತ್ತಗಾಗುತ್ತಿದೆ ಕಳೆದ ಒಂದು ತಿಂಗಳಿನಿಂದ ಕಷ್ಟಪಟ್ಟು ಬೆಳೆದಿರುವ ಗೂಡು ನಷ್ಟವಾಗಿದ್ದು ನಮಗೆ ನಷ್ಟಪರಿಹಾರವನ್ನು ಕೊಡಬೇಕು ಮುಂದಿನ ಹದಿನೈದು ದಿನಗಳ ಕಾಲ ಯಥಾಸ್ಥಿತಿ ಮುಂದುವರೆಸಿ ರೈತರಿಗೆ ಇ – ಬೀಡ್ನ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವೇ ಇ – ಬೀಡ್ ಪದ್ಧತಿಯನ್ನು ಅಳವಡಿಸಲಿ ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ, ‘ಕಳೆದ ವಾರದಲ್ಲಿ ಎರಡು ಬಾರಿ ರೈತರು, ರೀಲರುಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಆಯುಕ್ತರೂ ಕೂಡಾ ಬಂದು ರೈತರಿಗೆ, ರೀಲರುಗಳಿಗೆ ಇ – ಬೀಡ್ ಪದ್ದತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ, ಬುಧವಾರದಿಂದ ಪದ್ದತಿಯನ್ನು ಜಾರಿಗೆ ತಂದಿದ್ದು, ಕಳೆದ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೫ ಘಂಟೆಯವರೆಗೆ ಕಂಪ್ಯೂಟರ್ಗಳ ಮುಖಾಂತರ ಗೂಡಿನ ಮೂಟೆಗಳಿಗೆ ಟೋಕನ್ ನೀಡಿ, ಬಿನ್ಗಳನ್ನು ನೀಡಲಾಗಿದೆ, ಸ್ಥಳೀಯರು ಇಂದು ಬೆಳಿಗ್ಗೆ ಬಂದಿರುವುದರಿಂದ ಬಿನ್ಗಳು ಸಿಕ್ಕಿಲ್ಲ. ಗೂಡು ಕೂಡಾ ಹೆಚ್ಚಾಗಿ ಬಂದಿದೆ. ಪ್ರಾಯೋಗಿಕವಾಗಿ ಸ್ವಲ್ಪ ಅಡಚಣೆ ಉಂಟಾಗಿದ್ದು ಸಮಸ್ಯೆ ಬಗೆಹರಿಯಲಿದೆ’ ಎಂದರು.
ಪ್ರಾಂತ ರೈತ ಸಂಘದ ತಾಲ್ಲೂಕು ಅದ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ, ಸೇರಿದಂತೆ ವಿವಿಧ ರೈತರು ಮುಖಂಡರು ಹಾಜರಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು

0

pu2
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಬಿ.ಜಿ.ಎಸ್ಪದವಿ ಪೂರ್ವ ಕಾಲೇಜು, ಶಿಡ್ಲಘಟ್ಟ
ವಾಣಿಜ್ಯ ವಿಭಾಗ:
ಸಲ್ಮಾ, 552(ಶೇ.92)
ದೀಪಿಕಾ, 552(ಶೇ.92)
ಸುಧಾಶ್ರೀ, 549(ಶೇ.91.5)
ಎ.ಎಂ.ಕವನಾ, 542(ಶೇ.90.33)
ಬಿ.ಕೆ.ನಯನಾ, 541(ಶೇ.90.16)
ಕೆ.ಬಬೀತಾ, 539(ಶೇ.89.83)
ವಿಜ್ಞಾನ ವಿಭಾಗ:
ಜಿ.ಎಂ.ರಾಜೇಶ್, 525(ಶೇ.87.5)
ಎನ್.ಎಲ್.ನಳಿನಿ, 518(ಶೇ.86.33)
ವಿದ್ಯಾದ್ರಿ ಪದವಿ ಪೂರ್ವ ಕಾಲೇಜು, ಅಂಕತಟ್ಟಿ ಗೇಟ್
ವಿಜ್ಞಾನ ವಿಭಾಗ:
ಬಿ.ಕೆ.ವಿವೇಕ್, 582(ಶೇ.97)
ಕೆ.ದಿಲೀಪ್, 580(ಶೇ.96.67)
ಬಿ.ಕೀರ್ತನಾ, 576(ಶೇ.96)
ಎಸ್.ಮನಸ್ವಿನಿ, 573(ಶೇ.95.5)
ಬಿ.ಎನ್.ನಿತಿನ್, 573(ಶೇ.95.5)
ಸಿ.ಆರ್.ರಂಜಿತ್ ಕುಮಾರ್, 570(ಶೇ.95)
ಎಸ್.ಭಾರ್ಗವ್, 568(ಶೇ.94.67)
ಕೆ.ಎಂ.ರಾಕೇಶ್, 566(ಶೇ.94.33)
ಕೆ.ಎನ್.ಜ್ಯೋತಿ, 565(ಶೇ.94.17)
ಪಿ.ಆರ್.ನಿವೇದಿತಾ, 565(ಶೇ.94.17)
ಕೆ.ಅಭಿಷೇಕ್, 564(ಶೇ.94)
ಬಿ.ಎಂ.ನಿತಿನ್ ಕುಮಾರ್, 564(ಶೇ.94)
ಎಸ್.ವಿ.ಬಿಂದುಶ್ರೀ, 559(ಶೇ.93.17)
ವಿ.ಕೆ.ಮನೋಜ್ ಕುಮಾರ್, 559(ಶೇ.93.17)
ಎಸ್.ಆರ್.ಶ್ರಾವಣಿ ರಾಜ್, 559(ಶೇ.93.17)
ಎನ್.ಲಿಖಿತಾ, 558(ಶೇ.93)
ಎಸ್.ಸಹನಾ, 558(ಶೇ.93)
ಎಸ್.ಎಂ.ಆನಂದಕುಮಾರ್, 557(ಶೇ.92.83)
ಎಸ್.ಪಿ.ಸುಚಿತ್ರಾ, 557(ಶೇ.92.83)
ಬಿ.ಆರ್.ಸ್ಪೂರ್ತಿ, 555(ಶೇ.92.5)
ಕೆ.ಆರ್.ವರ್ಷಿಣಿ, 555(ಶೇ.92.5)
ಎಂ.ರಾಕೇಶ್, 552(ಶೇ.92)
ಎಂ.ಎಸ್.ವಿಜಯ್ ಕುಮಾರ್, 552(ಶೇ.92)
ಎಚ್.ಎನ್.ದೀಕ್ಷಿತ್ ಗೌಡ, 550(ಶೇ.91.66)
ಎನ್.ಸಹನಾ, 549(ಶೇ.91.5)
ಸಿ.ಆರ್.ಹರೀಶ್ ಬಾಬು, 548(ಶೇ.91.33)
ಡಿ.ವಿ.ಮದನ್ ಕುಮಾರ್, 548(ಶೇ.91.33)
ಎಂ.ಎನ್.ಬಿಂದು, 547(ಶೇ.91.17)
ಸಿ.ಎನ್.ವಿನುತಾ, 547(ಶೇ.91.17)
ವಿ.ಸೌಮ್ಯ, 546(ಶೇ.91.)
ಜಾವಿದ್ ಹುಸೇನ್, 544(ಶೇ.90.67)
ಜಿ.ಎಂ.ವಾಣಿಶ್ರೀ, 542(ಶೇ.90.33)
ವಿ.ಶೇಷಮನೋಜ್ಞ, 541(ಶೇ.90.17)
ಎಂ.ರಕ್ಷಿತಾ, 540(ಶೇ.90)
ಕೆ.ಎನ್.ಪ್ರಸನ್ನ, 538(ಶೇ.89.67)
ಆರ್.ಸಾಯೀಶ್, 538(ಶೇ.89.67)
ಆರ್.ಸುಶೋಬಿತಾ, 538(ಶೇ.89.67)
ಕೆ.ಎಸ್.ತೇಜಸ್ವಿನಿ, 538(ಶೇ.89.67)
ಡಿ.ಎಂ.ಯಶ್ವಂತ್, 538(ಶೇ.89.67)
ಆರ್.ನಯನಾ, 536(ಶೇ.89.33)
ಎಸ್.ಸುಚಿತ್ರಾ, 535(ಶೇ.89.17)
ಎಸ್.ಹರ್ಷಿತಾ, 534(ಶೇ.89)

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ಯು.ಪಿ.ಎ ಸರ್ಕಾರದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಗೆ ವಾರ್ಷಿಕ ಕನಿಷ್ಠ ೫೦–-೬೦ ಲಕ್ಷ ನೆರವು ನೀಡಲಾಗಿತ್ತು. ಇಂದಿನ ಬಿಜೆಪಿ ಸರ್ಕಾರ ನರೇಗಾ ಅನುದಾನವನ್ನು ಕಡಿತಗೊಳಿಸುವ ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಬುಧವಾರ ಜೆ.ಡಿ.ಎಸ್ ಹಾಗೂ ಇನ್ನಿತರೆ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಅವರು ಮಾತನಾಡಿದರು. ಜನಪರ ಯೋಜನೆಗಳಿಂದ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ಪ್ರತಿಯೊಬ್ಬರೂ ಉಚಿತವಾಗಿ ಆಹಾರಧಾನ್ಯಗಳನ್ನು ಪಡೆಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಗ್ರಾಮದಲ್ಲಿ ಕಳೆದ ೧೫ ವರ್ಷಗಳ ನಂತರ ತಮ್ಮಿಂದ ದೂರ ಉಳಿದಿದ್ದ ಗ್ರಾಮಸ್ಥರು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಗ್ರಾಮದಲ್ಲಿ ಏನೇ ಸಮಸ್ಯೆ ಬಂದರೂ ಹಿರಿಯರ ಸಮ್ಮುಖದಲ್ಲಿ ಸಾಮೂಹಿಕವಾಗಿ ಇತ್ಯರ್ಥ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಪಕ್ಷ ತೊರೆದು ರಾಮಣ್ಣ, ನಾಗಣ್ಣ, ವೆಂಕಟಪ್ಪ, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಶ್ರೀನಿವಾಸ್,ರಾಮಾಂಜಿನಪ್ಪ, ಸುಬ್ರರಾಯಪ್ಪ, ಮುನಿಯಪ್ಪ, ರಮೇಶ್, ರವಿಕುಮಾರ್, ವೆಂಕಟೇಶ್, ಶಿವಕುಮಾರ್, ನಂದೀಶ್, ಮೂರ್ತಿ, ಗೋಪಾಲಕೃಷ್ಣ, ಮಂಜುನಾಥ್ ಮತ್ತಿತರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ, ಲಕ್ಷ್ಮೀನಾರಾಯಣಪ್ಪ, ಟಿ.ಎಂ.ಜಯಣ್ಣ, ಗಣೇಶ್, ದೇವರಾಜ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕುಮಾರಿ (ಲೋಳೆಸರ)

0

ಹೆಸರೇ ಸೂಚಿಸುವಂತೆ ಈ ಗಿಡವು ಕುಮಾರಿಯರ (ಹೆಂಗಸರ) ಸಮಸ್ಯೆಗಳನ್ನು ದೂರ ಮಾಡುವುದು ಅಲ್ಲದೆ ಇದರ ಪೌಷ್ಟಿಕಾಂಶ ಗುಣಗಳಿಂದ ಇದನ್ನು ಸೇವಿಸುವವರಿಗೆ ಚಿರ ಯೌವ್ವನವನ್ನು ನೀಡುವುದು ಅಂದರೆ ಕೌಮಾರ್ಯವನ್ನು ಉಂಟುಮಾಡುವುದು.
Aloe Vera ಎಂಬ ಹೆಸರಿನಿಂದ ಪರಿಚಿತವಾಗಿರುವ ಈ ಸಸ್ಯವನ್ನು ಶ್ಯಾಂಪು, ಕ್ರೀಮ್ ಹಾಗೂ ಸಾಬೂನುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಇದರ ಲ್ಯಾಟಿನ್ ಹೆಸರು Aloe barbadensis “ಲಿಲಿಯೇಷಿಯೆ” ಎನ್ನುವ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿದೆ.
ಸಂಸ್ಕøತದ ಇತರೇ ಹೆಸರುಗಳು
1. ಕುಮಾರಿ: ಈ ಗಿಡವು ಶೀತ ಗುಣವನ್ನು ಹೊಂದಿದ್ದು, ಸ್ವಲ್ಪವೇ ನೀರಿನ ಅಂಶದಲ್ಲೂ ಬೆಳೆಯುತ್ತದೆ. ಅಲ್ಲದೆ ಯಾವಾಗಲೂ ಚಿರ ಯೌವ್ವನೆಯಂತೆ ನಳನಳಿಸುತ್ತಿರುತ್ತದೆ. ಈ ಗಿಡವು ತನ್ನ ರಾಸಾಯನಿಕ ಗುಣಗಳಿಂದ ಶರೀರಕ್ಕೆ ಬಲ ಮತ್ತು ಪುಷ್ಠಿಯನ್ನು ಕೊಡುತ್ತದೆ.
2. ಘೃತ ಕುಮಾರಿ: ಇದರ ಎಲೆಯಿಂದ ತುಪ್ಪದಂತಿರುವ ಸ್ರಾವವು ಸ್ರವಿಸುತ್ತದೆ. ಆದ್ದರಿಂದ ಈ ಹೆಸರು.
3. ಗೃಹಕನ್ಯಾ: ಈ ಸಸ್ಯವು ತನ್ನ ಸಿಹಿ ಇತ್ಯಾದಿ ಗುಣಗಳಿಂದ ಮನೆಯಲ್ಲಿ ಕನ್ಯೆಯ ಸಮಾನವಾಗಿರುತ್ತದೆ ಅಥವಾ ಕನ್ಯೆಯರ ರೀತಿಯಲ್ಲಿ ಮೃದು ಗುಣಗಳನ್ನು ಹೊಂದಿರುವುದರಿಂದ ಈ ಹೆಸರಿನಿಂದ ಕರೆಯುವರು.
4. ಸಹಾ: ಈ ಗಿಡವು ತೀವ್ರವಾದ ಬಿಸಿಲನ್ನು ಸಹಿಸುತ್ತದೆ.
5. ಕನ್ಯಾ: ಈ ಗಿಡವು ರಸಾಯನ ಗುಣಗಳಿಂದ ಪ್ರಕಾಶಮಾನವಾಗಿರುತ್ತದೆ.
ಉಪಯುಕ್ತ ಅಂಗ
1. ಪತ್ರ, ಪುಷ್ಪ.
2. ಸ್ತ್ರೀಯರಲ್ಲಿ ಮುಟ್ಟಿನ ಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲದಿದ್ದಲ್ಲಿ ಇದರ ತಿರುಳನ್ನು ‘ಕಾಸೀಸ’ ಹಾಗೂ ‘ಟಂಕಣದ’ (ಆಯುರ್ವೇದ ಔಷಧಿ) ಜೋತೆಗೆ ಸೇವಿಸಿದರೆ ಸ್ರಾವವು ಸರಿಯಾದ ಪ್ರಮಾಣದಲ್ಲಿ ಆಗುವುದು.
3. ಜಲೋದರ (ascites) ದಲ್ಲಿ ಲೋಳೆಸರದ ತಿರುಳು ಅಥವಾ ರಸವನ್ನು ನಿತ್ಯವೂ ಸೇವಿಸುವುದು ಹಿತಕರ.
4. ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಲೋಳೆಸರದ ತಿರುಳನ್ನು ಬಿಸಿ ಮಾಡಿ ಆ ಭಾಗಕ್ಕೆ ಲೇಪಿಸುವುದು ಒಳ್ಳೆಯದು.
5. ಕಾಮಾಲೆಯಲ್ಲಿ ಲೋಳೆಸರದ ತಿರುಳನ್ನು ಅರಿಶಿಣದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
6. ಲೋಳೆಸರದ ತಿರಳನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯುವುದರಿಂದ ಮುಖವು ಕಾಂತಿಯುಕ್ತವಾಗುವುದು.
7. ಲೋಳೆಸರದ ತಿರುಳನ್ನು ಕೂದಲ ಬುಡಕ್ಕೆ ಹಚ್ಚಿ, ತಿಕ್ಕಿ ಒಂದು ಘಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ತಲೆ ಕೂದಲು ಉದುರುವಿಕೆಯು ನಿಲ್ಲುವುದು, ಅಲ್ಲದೆ ಕೂದಲು ಕಾಂತಿಯುಕ್ತವಾಗುವುದು. ಕೂದಲಿಗೆ ಕಂಡೀಶನರ್ ರೀತಿಯಲ್ಲಿ ಕೆಲಸ ಮಾಡುವುದು.
8. ಮಲ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಇತರೇ ವಾತಾನುಲೋಮಕ ಔಷಧಿಗಳ ಜೊತೆಗೆ ಇದನ್ನು ಬಳಸುವುದರಿಂದ ಮಲ ವಿಸರ್ಜನೆ ಆಗುತ್ತದೆ.
ಡಾ. ನಾಗಶ್ರೀ ಕೆ.ಎಸ್.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು

0

ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಮಳ್ಳೂರು
ವಿಜ್ಞಾನ ವಿಭಾಗ:

  • ಎನ್.ಸಚಿನ್ ಕುಮಾರ್, 574(ಶೇ.95.67)
  • ಎಸ್.ಭೂಮಿಕಾ, 559(ಶೇ.93.17)
  • ಎಂ.ಡಿ.ಮುಖೇಶ್, 550(ಶೇ.91.67)

ಕಾಮರ್ಸ್(ಇ.ಬಿ.ಎ.ಸಿ) ವಿಭಾಗ:

  • ಎ.ಮೇಘನಾ, 565(ಶೇ.94.17)
  • ಆರ್.ಸಿಂಧು, 563(ಶೇ.93.83)
  • ಎಚ್.ವಿ.ಬಾಲಾಜಿ, 533(ಶೇ.88.83)

ಕಾಮರ್ಸ್(ಎಚ್.ಇ.ಬಿ.ಎ) ವಿಭಾಗ:

  • ಎಂ.ಗೀತಾ, 574(ಶೇ.95.67)
  • ಕೆ.ಎಂ.ಪ್ರಜ್ವಲ್, 560(ಶೇ.93.33)
  • ಆರ್.ನಾಗೇಂದ್ರ, 551(ಶೇ.91.83)

ಕಲಾ ವಿಭಾಗ:

  • ಪಿ.ಸಂಧ್ಯಾ, 554(ಶೇ.92.33)
  • ಕೆ.ರಾಘವೇಂದ್ರ ಗೌಡ, 525(ಶೇ.87.5)
  • ಎನ್.ಲಕ್ಷ್ಮೀ, 519(ಶೇ.86.05)

ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
ವಿಜ್ಞಾನ ವಿಭಾಗ:

  • ಎನ್.ಡಿ.ಕಾವ್ಯ, ೫೬೩ (ಶೇ.೯೩.೮೩)
  • ರಹೀಂ ಬೇಗ್, ೫೫೧ (ಶೇ.೯೧.೮೩)
  • ಎನ್.ಕಾರ್ತಿಕ್, ೫೪೩ (ಶೇ.೯೦.೫೦)
  • ಆರ್.ನಟರಾಜ್, ೫೪೨ (ಶೇ.90.೩೩)

ವಾಣಿಜ್ಯ ವಿಭಾಗ:

  • ವೈ.ಎನ್.ಅರುಣ, ೫೨೩ (ಶೇ.೮೭.೧೬)

ಕಲಾ ವಿಭಾಗ:

  • ಐ.ಎಂ. ಸೌಜನ್ಯ, ೫೦೪ (ಶೇ.೮೪)
  • ಬಿ.ಕೆ.ವಿವೇಕ್, 582(ಶೇ.97)

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವೆ
ತಾಲ್ಲೂಕಿನ ಅಂಕತಟ್ಟಿ ಗೇಟ್ ಬಳಿ ಇರುವ ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ.ಕೆ.ವಿವೇಕ್ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 582(ಶೇ.97) ಅಂಕಗಳನ್ನು ಪಡೆದು ತಾಲ್ಲೂಕಿಗೇ ಮೊದಲಿಗನಾಗಿದ್ದಾನೆ.
ನಗರದ ಶಾರದಾ ಪ್ರೌಢಶಾಲೆಯ ಶಿಕ್ಷಕ ಕೆಂಪಣ್ಣ ಮತ್ತು ಪ್ರಭಾವತಿ ಅವರ ಪುತ್ರ ಬಿ.ಕೆ.ವಿವೇಕ್ ಐಐಟಿ ಜೆಇಇ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದಾನೆ. ಗಣಿತದಲ್ಲಿ 100 ಅಂಕ, ಜೀವಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 99 ಪಡೆದಿದ್ದು, ಭೌತಶಾಸ್ತ್ರದಲ್ಲಿ 97 ಹಾಗೂ ಆಂಗ್ಲಭಾಷೆಯಲ್ಲಿ 89 ಅಂಕಗಳನ್ನು ಗಳಿಸಿದ್ದಾರೆ.
ತಾಲ್ಲೂಕಿಗೆ ಮೊದಲಿಗನಾಗಿದ್ದು, ಜಿಲ್ಲೆಗೆ ಮೂರನೆಯವನಾಗಿರುವ ಬಿ.ಕೆ.ವಿವೇಕ್, ಆಂಗ್ಲಭಾಷೆಯಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಕಡಿಮೆ ಅಂಕಗಳು ಬಂದಿವೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವೆ ಎನ್ನುತ್ತಿದ್ದಾರೆ. ಹೆಚ್ಚಿನ ಅಂಕಗಳ ಬಂದಲ್ಲಿ ಜಿಲ್ಲೆಗೇ ಮೊದಲಿಗನಾಗಿ ರಾಜ್ಯಕ್ಕೆ ಮೂರನೆಯವನಾಗುವ ಸಾಧ್ಯತೆಯಿದೆ.
‘ಬೆಳಿಗ್ಗೆ ಮೂರು ಗಂಟೆಗೇ ಎದ್ದು ಓದುತ್ತಿದ್ದೆ. ರಾತ್ರಿ ಹೆಚ್ಚು ನಿದ್ರೆ ಕೆಡುತ್ತಿರಲಿಲ್ಲ. ಸತತವಾಗಿ ಅಭ್ಯಾಸ ಮಾಡಿದ್ದು, ಕಾಲೇಜಿನಲ್ಲಿ ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದಿಂದ ಹೆಚ್ಚಿನ ಅಂಕ ಗಳಿಸುವಂತಾಯಿತು. ಆಂಗ್ಲಭಾಷೆಯಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಕಡಿಮೆ ಅಂಕಗಳು ಬಂದಿವೆ. ಮರುಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬರುವ ವಿಶ್ವಾಸವಿದೆ’ ಎಂದು ಬಿ.ಕೆ.ವಿವೇಕ್ ತಿಳಿಸಿದ್ದಾರೆ.

ಶನೈಶ್ಚರಸ್ವಾಮಿಯ ಬ್ರಹ್ಮರಥೋತ್ಸವ

0

ನಗರದ ಕೆ.ಎಚ್.ಬಿ ಕಾಲೋನಿಯ ಗಾಯತ್ರಿನಗರದಲ್ಲಿನ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಸೋಮವಾರ ಮಹಾಲಕ್ಷ್ಮಿಯಾಗ ಹಾಗೂ 17ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಶನೈಶ್ಚರ ಜಯಂತಿ ಪ್ರಯುಕ್ತ ಸಾಮೂಹಿಕ ಎಳ್ಳು ದೀಪೋತ್ಸವ, ಶನೈಶ್ಚರಸ್ವಾಮಿಯ ಹೋಮ, ತೈಲಾಭಿಷೇಕ, 108 ಲೀಟರ್ ಹಾಲು ಮತ್ತು 108 ಲೀಟರ್ ಮೊಸರು ಅಭಿಷೇಕ, ಪಂಚಾಮೃತಾಭಿಷೇಕ, ಶಾಲ್ಯಾನ್ನ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ಆರು ದಿನಗಳ ಕಾಲ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳು ಶನಿವಾರ ಪ್ರಾರಂಭಗೊಂಡಿದ್ದು, ಗುರುವಾರದ ತನಕ ಸಾಗಲಿದೆ. ಈ ಪೂಜಾ ಕಾರ್ಯಗಳ ನಡುವೆ ಸೋಮವಾರ ಕೆ.ಎಚ್.ಬಿ. ಕಾಲೋನಿಯ ಮುಖ್ಯರಸ್ತೆಗಳಲ್ಲಿ ಬ್ರಹ್ಮರಥೋತ್ಸವದ ಮೆರವಣಿಗೆಯನ್ನು ಮಾಡಲಾಯಿತು. ನೂರಾರು ಭಕ್ತರು ನೆರೆದಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ನಗರ್ತಮಂಡಳಿಯ ಶಿವಶಂಕರ್, ವಸಂತಕುಮಾರ್, ವಿ.ಎನ್.ರಾಮಮೋಹನ್ ಶಾಸ್ತ್ರಿ, ದಾಶರಥಿ, ತೀರ್ಥಂಕರ ಮತ್ತಿತರರು ಹಾಜರಿದ್ದರು.

“ಸ್ಕೋಪ್”ನ ಬೆನ್ನು ಹತ್ತಿ

0

“ಈಗೆಲ್ಲಾ ಕಂಪ್ಯೂಟರ್ ಸೈನ್ಸ್‍ಗೆ ಸ್ಕೋಪಿಲ್ಲ, ಎಲೆಕ್ಟ್ರಾನಿಕ್ಸ್‍ಗೇ ಸೇರಿಕೊಬೇಕು;
ಬೇಸಿಕ್ ಸೈನ್ಸ್‍ಗೆ ಇನ್ನು ಮುಂದೆ ಬಾಳಾ ಸ್ಕೊಪಿರುತ್ತೆ. ಅದಕ್ಕೆ ಹೋಗಿ;
ಸಿಎ ಮಾಡಿದರೆ ನೋಡು ಯಾವಾಗಲೂ ಸ್ಕೋಪಿರತ್ತೆ:
ಬಿಎ, ಎಂಬಿಎ ಗೆಲ್ಲಾ ಏನೇನೂ ಸ್ಕೋಪಿಲ್ಲ, ಬರೀ ದುಡ್ಡು ದಂಡಕ್ಕೆ ಅದನ್ನು ಯಾಕೆ ಓದ್ತೀರಾ”
ಪಿ ಯು ಮುಗಿಯುತ್ತಿದ್ದಂತೆ ಪೋಷಕರು, ಸ್ನೇಹಿತರು, ಉಪಾಧ್ಯಯರು, ಕೌನ್ಸೆಲರ್‍ಗಳು-ಹೀಗೆ ಕಂಡಕಂಡವರೆಲ್ಲಾ ಅವರವರಿಗೆ ತಿಳಿದಂತೆ ಸಲಹೆಗಳನ್ನು ಕೊಡತೊಡಗುತ್ತಾರೆ. ಇವುಗಳ ಭಾರಕ್ಕೆ ನಲುಗಿ ಹೋದ ವಿದ್ಯಾರ್ಥಿಗಳು ಕೊನೆಗೆ ಏನೂ ನಿರ್ಧರಿಸಲಾರದೆ ತಮ್ಮ ಭವಿಷ್ಯದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿ ಯಾವುದಾದರೂ ಕೋರ್ಸ್‍ಗೆ ಸೇರುತ್ತಾರೆ.
ಈ “ಸ್ಕೋಪ್”ನ ಚಕ್ರವ್ಯೂಹವೇ ಅಂತಾದ್ದು. ಇನ್ನು ನಾಲ್ಕೈದು ವರ್ಷಗಳ ನಂತರ ಏನಾಗಬಹುದು ಎಂದು ಯಾರಿಗೂ ಖಚಿತವಾಗಿ ಹೇಳಲಾಗದಿರುವುದರಿಂದ ಎಲ್ಲರೂ ಅವರವರ ಲೆಕ್ಕಾಚಾರಗಳನ್ನು ಮುಂದಿಡುತ್ತಾ ಹೋಗುತ್ತಾರೆ. ತಮ್ಮ ಆಸಕ್ತಿಗಳೇನು ಎಂದು ನಿರ್ದಿಷ್ಟವಾಗಿ ಗುರುತಿಸಿಕೊಳ್ಳಲಾಗದ ವಿದ್ಯಾರ್ಥಿಗಳು ಯಾವ್ಯಾವುದೋ ಒತ್ತಡಕ್ಕೆ ಮಣಿದು ಓದನ್ನು ಮುಗಿಸುತ್ತಾರೆ. ಇದರಿಂದಾಗಿ ಅವರು ವೃತ್ತಿಜೀವನದಲ್ಲಿ ಅತೃಪ್ತರಾಗಿಯೇ ಕಳೆಯವ ಸಾಧ್ಯತೆಗಳಿರುತ್ತವೆ.
ನನ್ನ ಬಂಧುಗಳ ಮಗನೊಬ್ಬ ಗಣಿತದಲ್ಲಿ ಅದ್ಭುತ ಪ್ರತಿಭಾವಂತನಾಗಿದ್ದ. ಪ್ರೌಢಶಾಲೆಯಲ್ಲಿರುವಾಗಲೇ ಕಾಲೇಜಿನವರಿಗೆ ಗಣಿತದ ಲೆಕ್ಕ ಬಿಡಿಸುವುದಕ್ಕೆ ಸಹಾಯ ಮಾಡುತ್ತಿದ್ದ. ಹೈಸ್ಕೂಲ್‍ನ ನಂತರ ಅವರ ತಂದೆ ಅವನನ್ನು ಒತ್ತಾಯದಿಂದ ಕಲಾವಿಭಾಗಕ್ಕೆ ಸೇರಿಸಿದರು. ಪರಿಣಾಮ ಅಂದರೆ ಆತ ಪಿ ಯು ಪರೀಕ್ಷೆಯಲ್ಲಿ ಮೂರನೇ ದರ್ಜೆಗೆ ಇಳಿದ. ನಂತರ ಜೀವನೋಪಾಯಕ್ಕಾಗಿ ಏನೋ ದಾರಿ ಹುಡುಕಿಕೊಂಡರೂ ಆತನ ಗಣಿತದ ಪ್ರತಿಭೆ ಮುಕ್ಕಾಗಿಹೋಯಿತು.
ಇತ್ತೀಚಿನ ಇನ್ನೊಂದು ಘಟನೆ ನೋಡಿ. ನನ್ನ ಪರಿಚಿತರೊಬ್ಬರು ಮಗನನ್ನು ಒತ್ತಾಯದಿಂದ ಎಂಬಿಬಿಎಸ್‍ಗೆ ಕಳಿಸಿದರು. ಎರಡೇ ತಿಂಗಳಲ್ಲಿ ಆ ವಿದ್ಯಾರ್ಥಿ ಮನೆಗೆ ಹಿಂತಿರುಗಿದ. ಮುಂದಿನ ವರ್ಷ ಮತ್ತೆ ಅಖಿಲ ಭಾರತ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ತನ್ನಿಷ್ಟದಂತೆ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ.
ದುರಾದೃಷ್ಟವೆಂದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಹೀಗೆ ಪೋಷಕರ ವಿರುದ್ಧ ನಿಂತು ತಮ್ಮದೇ ದಾರಿಯನ್ನು ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನೂ ಹೆಚ್ಚಿನ ತೊಂದರೆ ಇರುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳ ಬಗೆಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಹಾಗಾಗಿ ಅವರೆಲ್ಲಾ “ಸ್ಕೋಪ್” ನ ಬೆನ್ನು ಹತ್ತುತ್ತಾರೆ.
ಇವತ್ತಿನ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳಿಗೂ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯದಲ್ಲಿ ಬರೀ ಮೇಲ್ಮೈ ಜ್ಞಾನಕ್ಕೆ ತೃಪ್ತರಾಗದೇ ಆಳವಾಗಿ ಅಧ್ಯಯನ ಮಾಡಬೇಕು. ಇದಕ್ಕೆ ಸಾಕಷ್ಟು ಶ್ರಮ, ಸಮಯ, ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಉನ್ನತ ಶಿಕ್ಷಣಕ್ಕೆ ಸ್ವಲ್ಪ ಮಟ್ಟಿನ ಹಣದ ಅಗತ್ಯವಿದ್ದರೂ ಅದಕ್ಕಿಂತ ಮುಖ್ಯವಾದದ್ದು ವಿದ್ಯಾರ್ಥಿಗಳಲ್ಲಿರಬೇಕಾದ ಗುರಿಯ ಬಗೆಗಿನ ಸ್ಪಷ್ಟ ಚಿತ್ರಣ.
ನಮ್ಮ ಅಭಿರುಚಿಗಳನ್ನು ಸರಿಯಾಗಿ ಗುರುತಿಸುವುದು ಅಂತಹ ಸರಳವಾದುದ್ದಲ್ಲ. ಹದಿವಯಸ್ಸಿನವರೆಗೆ ವೈದ್ಯರನ್ನು ನೋಡಿದರೆ ವೈದ್ಯ, ಹಾಡನ್ನು ಕೇಳಿದೊಡನೆ ಹಾಡುಗಾರ, ಕಾರ್ಖಾನೆಗಳನ್ನು ನೋಡಿದರೆ ಉದ್ಯಮಿ-ಹೀಗೆ ಕಂಡಿದ್ದೆಲ್ಲಾ ಆಗಬೇಕೆನ್ನುವ ಹಗಲು ಕನಸು ಕಾಣುತ್ತೇವೆ. ಸುಮಾರು ಹದಿನೆಂಟನೇ ವಯಸ್ಸಿಗೆ ಕವಲು ದಾರಿಯಲ್ಲಿ ನಿಂತಾಗ ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿ ಯಾವುದೋ ಒಂದು ದಾರಿಯಲ್ಲಿ ನುಗ್ಗುತ್ತೇವೆ. ಅದು ನಮ್ಮಿಷ್ಟದ ದಾರಿಯಲ್ಲ ಎಂದು ತಿಳಿಯುವಷ್ಟರಲ್ಲಿ ಹಿಂತಿರುಗಿ ಬರಲಾರದಷ್ಟು ದೂರ ಹೋಗಿರುವುದರಿಂದ ಅಲ್ಲಿಯೇ ಮುಂದುವರೆಯುವ ಅನಿವಾರ್ಯತೆ ಉಂಟಾಗಿರುತ್ತದೆ.
ಈ ದೃಷ್ಟಿಯಿಂದ ನೋಡಿದರೆ ವಿದ್ಯಾರ್ಥಿಗಳ ಅಭಿರುಚಿಗಳನ್ನು ಗುರುತಿಸುವುದರಲ್ಲಿ ಶಾಲಾ ಕಾಲೇಜುಗಳಿಗಿಂತ ಹೆಚ್ಚಿನ ಹೊಣೆಗಾರಿಕೆ ಪೋಷಕರ ಮೇಲಿರುತ್ತದೆ. ಹದಿನೆಂಟನೆ ವರ್ಷಕ್ಕೆ ಒಮ್ಮೆಲೆ ಮಕ್ಕಳಿಗೆ ನಿಮ್ಮ ಅಭಿರುಚಿಗಳನ್ನು ತಿಳಿಸಿ ಎಂದರೆ ಅವರಿಗೂ ತೊಳಲಾಟವುಂಟಾಗುತ್ತದೆ. ಮನಃಶಾಸ್ತ್ರಜ್ಞರು ನಡೆಸುವ “ಆಪ್ಟಿಟ್ಯೂಡ್ ಟೆಸ್ಟ್” ಗಳೂ ಕೂಡ ಸ್ಪಷ್ಟ ದಿಕ್ಸೂಚಿಯೇನೂ ಆಗಿರುವುದಿಲ್ಲ. ಹಾಗಾಗಿ ಬಾಲ್ಯದಿಂದಲೇ ಪೋಷಕರು ಮಕ್ಕಳ ಅಭಿರುಚಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾಗುತ್ತದೆ. ನಮ್ಮ ಮಕ್ಕಳಲ್ಲಿ ಹೇಳಿಕೊಳ್ಳುವಂತಹ ಏನೂ ವಿಶೇಷವಿಲ್ಲ ಎಂದು ಯಾವ ಪೋಷಕರೂ ಅಂದುಕೊಳ್ಳಲೇಬಾರದು. ಐ್ರನ್ಸಾಕ್ಷನಲ್ ಅನಾಲಿಸಿಸ್ ಎನ್ನುವ ಮನೋಚಿಕಿತ್ಸಾ ವಿಧಾನವನ್ನು ರೂಪಿಸಿದ ಎರಿಕ್ ಬರ್ನ್ ಹೇಳುತ್ತಾನೆ, “ನಮ್ಮ ಮಕ್ಕಳು ರಾಜಕುಮಾರ/ರಿಯರಾಗಿ ಹುಟ್ಟುರುತ್ತಾರೆ, ನಾವು ಅವರನ್ನು ಕಪ್ಪೆಗಳನ್ನಾಗಿ ಮಾಡುತ್ತೇವೆ”.
ಆದ್ದರಿಂದ ಮಕ್ಕಳ ಅಭಿರುಚಿಗಳನ್ನು ಗೌರವಿಸಿ, ಅವರಿಗೆ ಅದನ್ನು ಬೆಳೆಸಲು ಸಹಾಯ ಮಾಡಬೇಕಾತ್ತದೆ. ಇದಕ್ಕೆ ಪೋಷಕರಿಗೆ ಬೇಕಾಗಿರುವುದು ವಿಶೇಷ ಪರಿಣಿತಿಯಲ್ಲ, ಕಾಳಜಿ ಮತ್ತು ತಾಳ್ಮೆ ಮಾತ್ರ. ಮಕ್ಕಳನ್ನು ಟೀವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ವಿಮುಖರನ್ನಾಗಿಸಿ ಸುಮ್ಮನೆ ಸಮಯ ಕಳೆಯಲು ಹೇಳಿ. ನಾವಂದುಕೊಳ್ಳುವಂತೆ ಅವರು ಸೋಮಾರಿಗಳಾಗಿ ಕೂರುವುದಿಲ್ಲ. ತಮ್ಮ ಕ್ರಿಯಾಶೀಲತೆಯನ್ನು ಯಾವುದಾದರೂ ದಿಕ್ಕಿನಲ್ಲಿ ಹರಿಸಿಯೇ ಹರಿಸುತ್ತಾರೆ. ಅದು ಅವರ ನಿಜವಾದ ಆಸಕ್ತಿಯ ಕ್ಷೇತ್ರವಾಗಿರುತ್ತದೆ.
ಹಾಗೊಮ್ಮೆ ಮಕ್ಕಳು ಎರಡು ಮೂರು ಕ್ಷೇತ್ರಗಳಲ್ಲಿ ಅಭಿರುಚಿಯನ್ನು ತೋರಿಸಿದರೆ ಎಲ್ಲಾ ಕ್ಷೇತ್ರಗಳ ಬಗೆಗೆ ಹೆಚ್ಚಿನ ಮಾಹಿತಿ ಒದಗಿಸುತ್ತಾ ಬಂದರೆ ನಿಧಾನವಾಗಿ ಅವರ ಯೋಚನೆಗಳು ಹರಳುಗಟ್ಟುತ್ತವೆ. ಯಾವುದೇ ಹಂತದಲ್ಲಿಯೂ ಮಕ್ಕಳ ಅಭಿರುಚಿಗಳನ್ನು ಕೀಳುಗೈದು, “ಇದರಲ್ಲಿ ಸಂಬಳ ಕಡಿಮೆ; ಅದಕ್ಕೆ ಸ್ಕೋಪ್ ಜಾಸ್ತಿ” ಎಂದು ತಮ್ಮ ಯೋಚನೆಗಳನ್ನು ಹೇರಲು ಯತ್ನಿಸಿದರೆ ಅವರಿಗೆ ಗೊಂದಲಗಳಾಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು. ಆರಿಸಿಕೊಂಡ ಕ್ಷೇತ್ರದಲ್ಲಿ ಒಂದು ದೀರ್ಘಕಾಲೀನ ಯೋಜನೆ ಇಟ್ಟುಕೊಂಡು ಪರಿಶ್ರಮಪಡುವುದರ ಅಭ್ಯಾಸ ಮಾಡಿಸಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿರುತ್ತವೆ.
ವಸಂತ್ ನಡಹಳ್ಳಿ

ನಷ್ಟಕ್ಕೆ ಒಳಗಾಗಿರುವ ರೈತರು ಹಾಗೂ ರೀಲರುಗಳಿಗೆ ನೆರವಾಗಲು ಸರ್ಕಾರ ಚಿಂತನೆ

0

ರೇಷ್ಮೆ ಆಮದು ಸುಂಕದ ಇಳಿಕೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ರೈತರು ಹಾಗೂ ರೀಲರುಗಳಿಗೆ ನೆರವಾಗಲು ಸರ್ಕಾರ ಈಗಾಗಲೇ ಚಿಂತನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಹಣಕಾಸು ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ರೇಷ್ಮೆ ಕೃಷಿ ಆಯುಕ್ತ ಜಿ.ಸತೀಶ್ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಭಾನುವಾರ ಸಂಜೆ ಭೇಟಿ ನೀಡಿ, ರೈತರು ಹಾಗೂ ರೀಲರುಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರತಿ ಬಜೆಟ್ ಸಮಯದಲ್ಲೂ ರಾಜ್ಯ ಸರ್ಕಾರದಿಂದ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳ ಸಮಸ್ಯೆಗಳ ಬಗ್ಗೆ ಹಾಗೂ ಅವರ ಅಗತ್ಯತೆಗಳ ಬಗ್ಗೆ ಪತ್ರವನ್ನು ಬರೆಯಲಾಗುತ್ತಿದೆ. ಈ ಮುಂಚೆಯೂ ಕೂಡಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು, ಕೇಂದ್ರ ಸರ್ಕಾರದಿಂದಲೂ ಕೂಡಾ ರಾಜ್ಯಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ದುರಾದೃಷ್ಟವಶಾತ್ ಶೇ. ೧೦ ಕ್ಕೆ ಇಳಿಕೆಯಾಗಿದ್ದ ಪರಿಣಾಮ ಒಂದೇ ಬಾರಿಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಗೂಡಿನ ಧರ ಹಾಗೂ ರೇಷ್ಮೆ ನೂಲಿನ ಧರದಲ್ಲಿ ಇಳಿಮುಖವಾಯಿತು. ರಾಜ್ಯದ ಇಂಧನ ಸಚಿವರು ಸೇರಿದಂತೆ ಎಲ್ಲಾ ಸಂಸದರ ನಿಯೋಗ ಕೇಂದ್ರದ ವಿತ್ತಸಚಿವರನ್ನು ಸಂಪರ್ಕ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳನ್ನು ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಪ್ರತಿನಿತ್ಯ ಸುಮಾರು ೭೦ ಟನ್ಗಿಂತಲೂ ಹೆಚ್ಚು ಗೂಡು ಬರುತ್ತಿರುವ ಶಿಡ್ಲಘಟ್ಟದ ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರುಗಳಿಗೆ ಉಪಯೋಗವಾಗುವ ರೀತಿಯಲ್ಲಿ ಇ–-ಬೀಡ್ ಪದ್ಧತಿಯನ್ನು ಜಾರಿಗೆ ತರುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಪದ್ದತಿಯಲ್ಲಿ ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ, ರೈತರಿಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದು, ರೈತರು ಗೂಡು ತಂದು ಕೌಂಟರ್ನಲ್ಲಿ ನೀಡುತ್ತಿದ್ದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.
ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯು ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಮಾರುಕಟ್ಟೆಯಾಗಿದ್ದರೂ ಕೂಡಾ ಇಲ್ಲಿನ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯಿಲ್ಲದೆ, ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಕಷ್ಟಕರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೂ ಸಮಸ್ಯೆಯುಂಟಾಗಲಿದೆ, ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನೇಮಕ ಮಾಡಬೇಕು, ರೈತರೊಂದಿಗೆ ಸಿಬ್ಬಂದಿ ಉತ್ತಮ ವರ್ತನೆಯನ್ನು ಹೊಂದಿರಬೇಕು, ಬಹಳಷ್ಟು ಮಂದಿ ರೈತರು ಅವಿದ್ಯಾವಂತರು ಬರುತ್ತಾರೆ ಅವರಿಗೆ ಸಿಬ್ಬಂದಿ ನೆರವಾಗಬೇಕು. ಗೂಡುತರುವಂತಹ ವಾಹನಗಳು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಮಹಿಳಾ ರೈತರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಮಾರುಕಟ್ಟೆಯ ಆವರಣದಲ್ಲೆ ಬ್ಯಾಂಕಿನ ವ್ಯವಸ್ಥೆಯನ್ನು ಮಾಡಿಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೆ ಒಂದೇ ಕಡೆಯಲ್ಲೆ ಜಾಲರಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರಾಮನಗರ, ಚನ್ನಪಟ್ಟಣದ ರೀಲರುಗಳಿಗೆ ನೀಡುವಂತೆ ಸಾಲದ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ನಮಗೆ ಬಡ್ಡಿಯಲ್ಲಿ ಶೇ. ೫ ರಷ್ಟಿ ರಿಯಾಯಿತಿ ನೀಡಬೇಕು, ಪ್ರತಿವರ್ಷದಲ್ಲಿ ರೇಷ್ಮೆ ಆಮದು ಸುಂಕದ ಬೆಲೆ ಕಡಿಮೆಯಾದಾಗಲೆಲ್ಲಾ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದ್ದೇವೆ, ಆದರೆ ನಮಗೆ ಮಾರುಕಟ್ಟೆಯ ಸೌಲಭ್ಯವೂ ಇಲ್ಲದೆ, ಗೂಡಿನಿಂದ ಬಿಚ್ಚಾಣಿಕೆ ಮಾಡಿದ ರೇಷ್ಮೆಯನ್ನು ಮನೆಯಲ್ಲಿಟ್ಟುಕೊಂಡು ನಷ್ಟವನ್ನು ಅನುಭವಿಸುತ್ತಿದ್ದೇವೆ, ರೇಷ್ಮೆ ನೂಲನ್ನು ಕೆ.ಎಸ್.ಎಂ.ಬಿ ಯಿಂದ ಖರೀದಿ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ರೀಲರುಗಳು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಅಪರ ನಿರ್ದೇಶಕ ಅರಹುಣಸೆ, ಜಂಟಿ ನಿರ್ದೇಶಕ ಪ್ರಭಾಕರ್, ಚಿಕ್ಕಬಳ್ಳಾಪುರ ಉಪನಿರ್ದೇಶಕ ನಾಗಭೂಷಣ್, ಕೇಂದ್ರ ಕಚೇರಿಯ ಉಪನಿರ್ದೇಶಕ ಸುಭ್ರಮಣ್ಯಂ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಉಪನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಎಚ್.ಕೆ.ಸುರೇಶ್, ರೀಲರುಗಳಾದ ಅನ್ವರ್, ನಾಗನರಸಿಂಹ, ನರಸಿಂಹಮೂರ್ತಿ, ಎಸ್.ಎಂ.ರಮೇಶ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!