27.1 C
Sidlaghatta
Wednesday, December 31, 2025
Home Blog Page 964

ಹಾರಿದೆ ನೌಕೆ ದೂರ ದೂರಕೆ

0

ಒಂದಲ್ಲ, ಎರಡಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಒಂದೇ ಓಟ ಕಿತ್ತು ಓಡುತ್ತಿದೆ ವಾಯೇಜರ್.
ಏನಿದು ವಾಯೇಜರ್?
ಇದೊಂದು ಮಾನವನಿರ್ಮಿತ ಅಂತರಿಕ್ಷನೌಕೆ. 1977ರಲ್ಲಿ ಉಡ್ಡಯನಗೊಂಡು ಅಂದಿನಿಂದ ಇಂದಿನವರೆಗೂ ಹಾರುತ್ತಲೇ ಇದೆ. ಸೂರ್ಯನ ಪ್ರಭಾವವಲಯದ ಆಚಿನ ಲೋಕಕ್ಕೆ ಹೊರಟಿರುವ ಪ್ರಪ್ರಥಮ ನೌಕೆ ಇದು.
ಮಾನವ ಆಗಸಕ್ಕೆ ಹಾರಿಬಿಟ್ಟ ಉಪಗ್ರಹಗಳು, ಗಗನನೌಕೆಗಳು ಇಂದಿನ ದಿನಗಳಲ್ಲಿ ವಿಶೇಷವೇನಲ್ಲ ನಿಜ. ಒಂದು ಕಾಲದಲ್ಲಿ ಮುಂದುವರಿದ ದೇಶಗಳಿಗಷ್ಟೇ ಸೀಮಿತವಾಗಿದ್ದ ಆ ಕೈಚಳಕವನ್ನು, ತಂತ್ರಜ್ಞಾನವನ್ನು ಇಂದು ಹಲವಾರು ದೇಶಗಳು ತಮ್ಮದಾಗಿಸಿಕೊಂಡಿವೆ. ಭೂಉಪಗ್ರಹಗಳನ್ನು ಬಿಟ್ಟರೆ, ಚಂದ್ರ, ಮಂಗಳರ ಅಧ್ಯಯನಕ್ಕೆ ತೊಡಗಿದ ನೌಕೆಗಳು ಹತ್ತಾರಿವೆ. ಇನ್ನೂ ದೂರಕ್ಕೆ ಹೊರಟರೆ, ಪಯೋನೀರ್ ಹೆಸರಿನ ನೌಕಾಜೋಡಿಗಳು, ಪ್ಲೂಟೋನತ್ತ ಓಟ ಕಿತ್ತಿರುವ ನ್ಯೂಹಾರಿಝಾನ್ಸ್ ಹಾಗೂ ವಾಯೇಜರ್ ಜೋಡಿಗಳು ಹಾರುತ್ತಿವೆ. ಇವುಗಳಲ್ಲಿ ವಾಯೇಜರ್ 1 ಇತ್ತೀಚೆಗೆ ತಾನೇ 35 ವರ್ಷಗಳ ಓಟಗಳನ್ನು ಪೂರೈಸಿ, ದಣಿವಿಲ್ಲದೆ ಮತ್ತೂ ಮುಂದಕ್ಕೆ ಸಾಗುತ್ತಿದೆ. ಸೌರಮಂಡಲದ ಅಂಚಿನಲ್ಲಿರುವ ಸೂರ್ಯಗೋಲದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳುಹಿ ಆನಂತರ ಶಕ್ತಿ ಇರುವವರೆಗೂ ಓಡುತ್ತಿರಲು ಅದನ್ನು ಸಜ್ಜುಗೊಳಿಸಲಾಗಿದೆ. ವಾಯೇಜರ್‍ನಲ್ಲಿರುವ ಅಣುವಿಕಿರಣ ಮೂಲದ ವಿದ್ಯುತ್ 2025 ವರೆಗೆ ನೌಕೆಯನ್ನು ಹೊತ್ತೊಯ್ಯಲಿದೆ. ಅಲ್ಲಿಯವರೆಗೂ ಮಾಹಿತಿಗಳ ಅಲೆ ಸೌರವ್ಯೂಹದ ಅಂಚಿನಿಂದ ಈ ಭೂಗ್ರಹದವರೆಗೆ ಹರಿದು ಬರಲಿದೆ.
ಹಿನ್ನೆಲೆ:
ನಿಸರ್ಗದ ದಿನನಿತ್ಯದ ವಹಿವಾಟುಗಳನ್ನು ಮಾನವ ಅಚ್ಚರಿಯಿಂದ ಕಾಣುತ್ತಿದ್ದ ದಿನಗಳಿದ್ದವು, ಸೂರ್ಯಕೇಂದ್ರಿತ ವ್ಯವಸ್ಥೆಯಲ್ಲಿ ನಾವಿದ್ದೇವೆ, ನಮ್ಮೆಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ ಎಂದು ಕೊಪರ್ನಿಕಸ್ ಸಾರಿದಾಗ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಅಲ್ಲಿಂದ ನಾವೀಗ ಬಹು ದೂರ ಸಾಗಿ ಬಂದಿದ್ದೇವೆ. ನಮ್ಮ ಸುತ್ತಲ ಬ್ರಹ್ಮಾಂಡದ ಬಗ್ಗೆ ಅರಿವು ಅನೇಕ ಪಟ್ಟು ಹೆಚ್ಚಿದೆ. ಕಣ್ಣಿಗೆ ಕಂಡದ್ದನ್ನು ಪ್ರಯೋಗಗಳ ಮೂಲಕ ಒರೆಹಚ್ಚಿ, ಕಾಣದ್ದನ್ನು ಮೊದಲು ಕಲ್ಪಿಸಿ, ಆನಂತರ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುವಂಥಹ ಬುದ್ಧಿಮಟ್ಟ ಮಾನವನದ್ದಾಗಿದೆ.
1977 ಬಾನಾಸಕ್ತಿ ಉಳ್ಳವರಿಗೆ ವಿಶೇಷ ವರ್ಷ. ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು ಒಂದರ ಪಕ್ಕ ಒಂದು ಹಾದುಹೋಗುತ್ತ ಒಂದೇ ಗೆರೆಯಲ್ಲಿ ಕೆಲಕಾಲ ಸಾಗುವ, 170 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ವಿದ್ಯಮಾನ, ಖಗೋಳಶಾಸ್ತ್ರಜ್ಞರಿಗೆ ಈ ಅವಕಾಶವನ್ನು ಬಳಸಿಕೊಂಡು ಆಚೆ ಹಾರಹೊರಟಿರುವ ಬಾನನೌಕೆಗಳಿಗೆ ಈ ಗ್ರಹಗಳ ಗುರುತ್ವದ ನೂಕುಬಲ ದೊರೆಯುವಂತೆ ಮಾಡುವ ಹಂಬಲ ಹೊಂದಿದ್ದರು.*
ಇದಕ್ಕೆಂದು ಅಮೆರಿಕದಲ್ಲೊಂದೇ ಹತ್ತಾರು ಯೋಜನೆಗಳು ಸಿದ್ಧಗೊಂಡವು. ಕೊನೆಯಲ್ಲಿ ಹಣಕಾಸಿನ ಅನುಮತಿ ದೊರೆತಿದ್ದು ವಾಯೇಜರ್ ಯೋಜನೆಗೆ ಮಾತ್ರ. ವಾಯೇಜರ್ ಹೆಸರಿನ ಎರಡು ನೌಕೆಗಳು ನಿರ್ಮಾಣಗೊಂಡು 1977ರ ಅಗಸ್ಟ್ ನಲ್ಲಿ ವಾಯೇಜರ್ 2 ಹಾಗೂ ಸೆಪ್ಟೆಂಬರಿನಲ್ಲಿ ವಾಯೇಜರ್ 1 ಮ್ಯಾರಥಾನ್ ಓಟಕ್ಕೆ ತೊಡಗಿದವು. ಎರಡೂ ಹಾರಿದ್ದು ಅಮೆರಿಕದ ಕೇಪ್ ಕಾರ್ನಿವಲ್‍ನಿಂದಲೇ ದರೂ ಅವುಗಳ ಹಾರುಮಾರ್ಗಗಳು ಬೇರೆಬೇರೆ. ವಾಯೇಜರ್ 1 ಕೊನೆಗೆ ಹೊರಟರೂ ವೇಗದ ಓಟ ಹಾಗೂ ಸಮೀಪದ ಮಾರ್ಗದಿಂದಾಗಿ ಮುಂದೆಮುಂದಕ್ಕೆ ಹಾರುತ್ತಾ ಹೊರಟಿತು. ಗುರು ಮತ್ತು ಶನಿ ಗ್ರಹಗಳ ಮಾರ್ಗವಾಗಿ ಹಾರಿದ ವಾಯೇಜರ್ 1 90ರ ದಶಕದಲ್ಲಿ ಇನ್ನೆರಡು ಬಾಹ್ಯಾಕಾಶ ನೌಕೆಗಳಾದ ಪಯೊನಿರ್ 10 ಮತ್ತು ಪಯೊನಿರ್ 11 ರನ್ನು ಹಿಂದಿಕ್ಕಿ ಭೂಮಿಯಿಂದ ಮತ್ತೂ ದೂರಕ್ಕೆ ಹಾರಿತು. ಮಾನವನಿರ್ಮಿತ ಹಾಗೂ ಮಾನವನಿಂದ ಅತಿ ದೂರಕ್ಕೆ ಹಾರುತ್ತಿರುವ ಬಾನ ನೌಕೆ ಎಂಬ ಹೆಗ್ಗಳಿಕೆಯನ್ನು ವಾಯೇಜರ್ 1990ರಲ್ಲಿಯೇ ಪಡೆಯಿತು.
ಪುಟ್ಟ 64 ಕಿಲೋಬೈಟ್ ಸಾಮಥ್ರ್ಯದ ಕಂಪ್ಯೂಟರ್ ಪೆಟ್ಟಿಗೆ, ದೊಡ್ಡದಾದ ಅಂಟೆನಾ, ಕ್ಯಾಮೆರಾಗಳು, ವಿಕಿರಣ ಮೂಲದ ಶಕ್ತಿ ಆಕರ, ಸೂರ್ಯನ ಕಾಂತವನ್ನು ಅಳೆಯುವ ಸಾಧನ ಇಷ್ಟೇ ಅಲ್ಲ, ಅಮೂಲ್ಯವಾದ ಮಾನವಮಾಹಿತಿಯನ್ನು ಹೊಂದಿದ ಗೋಲ್ಡನ್ ರೆಕಾರ್ಡನ್ನೂ ಕೂಡ ವಾಯೇಜರ್ ತನ್ನೊಡನೆ ಒಯ್ದಿದೆ. ದೂರದ ಅಂತರಿಕ್ಷದಲ್ಲಿ ಅನ್ಯಜೀವಿಗಳೇನಾದರೂ ಎದುರಾಗಿ ವಾಯೇಜರನ್ನು ಜಪ್ತಿ ಮಾಡಿದರೆ? (ಅಂಥ ಅವಕಾಶಗಳು ಅತೀ ಕಡಿಮೆ, ಏಕೆಂದರೆ ಬೃಹತ್ ವಿಶ್ವದಲ್ಲಿ ಸೂಜಿಮೊನೆಗಿಂತ ಚಿಕ್ಕದಾಗಿರುವ ವಾಯೇಜರ್ ಇನ್ನೊಂದು ನಕ್ಷತ್ರದ ಪಕ್ಕ ಹಾದುಹೋಗುವುದಾದರೂ ಅದಿನ್ನೂ ನಲವತ್ತು ಸಾವಿರ ವರ್ಷಗಳ ನಂತರ!)
ಗೋಲ್ಡನ್ ರೆಕಾರ್ಡ್ ಸಿಡಿಯಲ್ಲಿ 55 ಭಾಷೆಗಳಲ್ಲಿ ಶುಭಾಶಯ ನುಡಿಗಳು, ಸಂಗೀತ, ಪ್ರಾಣಿಗಳ ಕೂಗುಗಳು, ಸೌರಮಂಡಲದ, ಭೂಮಿ, ಮನುಷ್ಯ, ಪ್ರಾಣಿ ಪಕ್ಷಿಗಳ ರೇಖಾಚಿತ್ರಗಳು ಇತ್ಯಾದಿ ಭೂಮಿಯ ಜೀವಜಗತ್ತಿನ ಪ್ರಮುಖ ಲಕ್ಷಣಗಳೆಲ್ಲವೂ ಇವೆ.
ಸೂರ್ಯನ ಸುತ್ತ ಮೂರನೇ ಗ್ರಹವಾಗಿ ನಾವು ಹಾರುತ್ತಿದ್ದೇವೆವಷ್ಟೆ? ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಗಟ್ಟಿಗ್ರಹಗಳು, ಅವುಗಳ ನಂತರ ಕ್ಷುದ್ರಗ್ರಹಗಳ ಪಟ್ಟಿ, ಆ ಬಳಿಕ ಗುರು,ಶನಿ, ಯುರೇನಸ್ ಮತ್ತು ನೆಪ್ಚೂನ್ ಅನಿಲಗ್ರಹಗಳು ಈ ನಡುವೆ ನೂರಾರು ಉಪಗ್ರಹಗಳು, ಕಿರುಗ್ರಹಗಳು ಕೊನೆಯಲ್ಲಿ ಸೂರ್ಯಗೋಲ ಮತ್ತು ಅದರಾಚೆ ದೀರ್ಘಕಕ್ಷೆಯ ಧೂಮಕೇತುಗಳ ಮೂಲನೆಲೆಯಾಗಿರುವ ವೈಪರ್ ಪಟ್ಟಿ ಹಾಗೂ ಕಟ್ಟಕಡೆಗಿನ ಊರ್ತ್ ಮೋಡದ ಕಡಗದೊಂದಿಗೆ ಸೂರ್ಯನ ಶೃಂಗಾರ ಮುಗಿಯುತ್ತದೆ. ಊರ್ತ್ ಕಡಗದ ಆಚೆ ಅಂತರತಾರಾ ವಲಯ. ಅಲ್ಲಿ ಸೂರ್ಯನದ್ದೇನೂ ಪ್ರಭಾವವಿಲ್ಲ. ಅಲ್ಲಿ ವಿಕಿರಣಭರಿತ ಕಾಸ್ಮಿಕ್ ಕಿರಣಗಳ ಹೊಯ್ದಾಟ ನಡೆಯುತ್ತಿದೆ.
2009ರ ಅಗಸ್ಟ್ ತಿಂಗಳಲ್ಲಿ ಸೂರ್ಯನಿಂದ 1600 ಕೋಟಿ ದೂರದಲ್ಲಿ ತಾಸಿಗೆ ಅರವತ್ತು ಸಾವಿರ ಕಿಮೀ ವೇಗದಲ್ಲಿ ಹಾರುತ್ತಿದ್ದ ವಾಯೇಜರ್ ಸೆಕೆಂಡಿಗೆ ಲಕ್ಷಗಟ್ಟಲೆ ಕಿಮೀ ವೇಗದಲ್ಲಿ ಬೀಸುತ್ರಿದ್ದ ಸೂರ್ಯಗಾಳಿ ಒಮ್ಮೆಗೇ ಕಡಿಮೆಯಾಗಿದೆಯೆಂದು ವರದಿ ಮಾಡಿದೆ.
ಸೂರ್ಯ ಬಿಸಿಲು ಬೆಳಕನ್ನಷ್ಟೇ ಅಲ್ಲ, ವಿದ್ಯುತ್ ಕಣಗಳನ್ನೂ ಸದಾಕಾಲ ಫೂತ್ಕರಿಸುತ್ತಿದ್ದಾನೆ. ಭೂಮಿಯ ಕಾಂತಗುಣ ಹಾಗೂ ವಾಯುಮಂಡಲದಿಂದಾಗಿ ಆ ಸೌರಗಾಳಿಯಿಂದ ನಮಗೆ ರಕ್ಷಣೆ ದೊರೆಯುತ್ತಿದೆ. ಆ ವಿದ್ಯುತ್ ಕಣಗಳು ಸೌರಮಂಡಲದ ಅಂಚಿನವರೆಗೂ ಸಾಗಿ ಅಲ್ಲಿ ಶಕ್ತಿಕಳೆದುಕೊಂಡು ಗುಡ್ಡೆಯಾಗಿ ಬೀಳುತ್ತವೆ. ಅದೇ ಸೂರ್ಯಗೋಲ. ಈ ಗೋಲದ ಒಳಗಡೆ ಇರುವ ಪ್ರತಿಯೊಂದು ವಸ್ತುವೂ ಸೌರವ್ಯೂಹಕ್ಕೆ ಸೇರಿದ್ದು. ಬಾಹ್ಯಆಕಾಶದ ಕಾಸ್ಮಿಕ್ ಕಿರಣಗಳು ಸೌರವ್ಯೂಹವನ್ನು ಪ್ರವೇಶಿಸದಂತೆ ಈ ಗೋಲ ತಡೆಯುತ್ತದೆ. ಸೂರ್ಯಗೋಲದ ಅಂಚೆಂದರೆ ಸದಾ ತುಮುಲದ ಪ್ರದೇಶ, ಅಲ್ಲಿ ಆಚಿನ ಬ್ರಹ್ಮಾಂಡದಿಂದ ಜಿಗಿದು ಬರುತ್ತಿರುವ ವಿಕಿರಣದ ಬಾಣಗಳಿವೆ, ಇಲ್ಲಿಂದ ಆಚೆ ಜಿಗಿಯಲೆತ್ನಿಸುವ ಸೂರ್ಯಕಣಗಳಿವೆ, ಕಾಂತಕಿರಣಗಳಿಲ್ಲಿ ಗುಡ್ಡೆಯಾಗಿ ಬಿದ್ದಿವೆ, ಆಗೀಗೊಂದಿಷ್ಟು ಚಿಮ್ಮಿ ಹೊರಕ್ಕೆ ಜಿಗಿಯುತ್ತಿವೆ. ಅದೊಂದು ಕದನ ಸ್ಥಳ ಅಲ್ಲಿ ಸದಾಕಾಲ ಸೂರ್ಯನಿಂದ ಚಿಮ್ಮುವ ಕಿರಣಗಳಿಗೂ ಬಾಹ್ಯ ಕಾಸ್ಮಿಕ್ ಕಿರಣಗಳಿಗೂ ಜಟಾಪಟಿ. ಸೋತು ಬಿದ್ದ ಸೂರ್ಯಕಣಗಳು ಗುಳ್ಳೆಯಾಗಿ ಹರಡಿವೆ. ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿದೆಯೆಂದು ವಾಯೇಜರ್ ತಿಳಿಸಿದೆ.
ಸೌರಮಂಡಲದ ಹೊರಗಣ ನಾಲ್ಕೂ ಅನಿಲದೈತ್ಯಗಳ ಬಗ್ಗೆ ಬಹಳಷ್ಟು ವಿವರಗಳನ್ನು ವಾಯೇಜರ್ ನೌಕೆಗಳು ಕಳುಹಿಸಿವೆ. ಗುರುಗ್ರಹವನ್ನು ಹಾದು ಹೋಗುವಾಗ ಅದಕ್ಕಿರುವ ಅಸ್ಪಷ್ಟ ಬಳೆಗಳು, ಎರಡು ಪುಟ್ಟದಾದ ಉಪಗ್ರಹಗಳು, ಅದರ ವಾತಾವರಣದ ಸಮೀಪದ ದೃಶ್ಯಗಳು, ಯುರೋಪಾ ಹೆಸರಿನ ಉಪಗ್ರಹದ ಹಿಮಗಡ್ಡೆಯ ಬಿರುಕಿನಲ್ಲಿ ಸಮುದ್ರವಿರುವ ಲಕ್ಷಣ, ಶನಿಯ ಉಂಗುರದೊಳಗಡೆಯಿಂದ ಇಣುಕಿದ ಉಪಗ್ರಹಗಳು, ಟೈಟಾನ್ ಉಪಗ್ರಹದ ವಾತಾವರಣದಲ್ಲಿ ಸಾರಜನಕ ಮತ್ತು ಮಿಥೇನ್ ಅನಿಲಗಳ ಇರುವಿಕೆ, ನೆಪ್ಚೂನಿನ ಆಗಸದಲ್ಲಿ ವೇಗವಾಗಿ ಬೀಸುತ್ತಿದ್ದ ಬಿರುಗಾಳಿ ಇವೆಲ್ಲವೂ ವಾಯೇಜರ್ ಜೋಡಿನೌಕೆಗಳ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ನೋಟಗಳು.
ಲೋ, ಗುರುಗ್ರಹವನ್ನು ಸುತ್ತುತ್ತಿರುವ ಉಪಗ್ರಹ. ಲೋ ದಿಂದ ಬರೀ 20 ಸಾವಿರ ಕಿಮೀ ದೂರದಿಂದ 1979 ರಲ್ಲಿ ಹಾದುಹೋದ ವಾಯೇಜರ್ ಮೇಲ್ಮೈನಲ್ಲಿ ಜ್ವಾಲಾಮುಖಿಯ ಕುರುಹನ್ನು ಪತ್ತೆ ಮಾಡಿತ್ತು. ಸೌರಮಂಡಲದಲ್ಲಿ ಭೂಮಿಯನ್ನು ಬಿಟ್ಟರೆ ಜ್ವಾಲಾಮುಖಿ ಬೇರೆಡೆ ಇರಬಹುದೆಂಬ ಊಹೆಯೇ ವಿಜ್ಞಾನಿಗಳಲ್ಲಿ ಉದ್ವೇಗ ಮೂಡಿಸಿತ್ತು. ಗುರುವಿನ ಯುರೋಪಾ, ಶನಿಯ ಟೈಟಾನ್ ಹಾಗೂ ನೆಪ್ಚೂನಿನ ಟ್ರೈಟಾನ್ ಉಪಗ್ರಹಗಳಲ್ಲಿ ನೀರಿನ ಮೂಲ ಇರÀಬಹುದೆಂದು ವಾಯೇಜರಿನ ಮಾಹಿತಿಗಳು ತಿಳಿಸಿದವು.
ದೂರ ಹೋದಂತೆ ವಾಯೇಜರ್‍ನಿಂದ ಬರುತ್ತಿದ್ದ ಮಾಹಿತಿಯ ವೇಗವೂ ತಗ್ಗಿದೆ. ಆದರೆ ವಿಜ್ಞಾನಿಗಳ ಉತ್ಸಾಹ ಕುಂದಿಲ್ಲ. ಭೌತ, ಗಣಿತಶಾಸ್ತ್ರಗಳ ಲೆಕ್ಕಾಚಾರ ಹಾಕಿ ಭೂಮಿಯ ಮೇಲೆ ರೇಡಿಯೋ ಅಲೆಗಳನ್ನು ಸಂಗ್ರಹಿಸುವ ಅಂಟೆನಾಗಳ ಸಾಮಥ್ರ್ಯವನ್ನು ಹೆಚ್ಚಿಸಿ ವಾಯೇಜರ್ ಬಾನಾಡಿಯ ನಾಡಿಮಿಡಿತವನ್ನು ಇನ್ನೂ ದಶಕಗಳ ಕಾಲ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
ಸೂರ್ಯನಿಂದ ದೂರ ಹೋಗುವುದೆಂದರೆ, ಬಿಸಿಲ ತಾಪದಿಂದ, ಬೆಳಕಿನಿಂದ ವಿಮುಖರಾಗುತ್ತ ಹಾರುವುದು, ಜೊತೆಜೊತೆಗೇ ಅಂತರಿಕ್ಷದ ಕೊರೆಯುವ ಚಳಿಯ ವಾತಾವರಣದಲ್ಲಿ ಉಪಕರಣಗಳು ಕೆಲಸ ಮಾಡಬೇಕು. ವಾಯೇಜರ್ ಗೆ ಶಕ್ತಿಯ ಮೂಲ ವಿಕಿರಣವಸ್ತು ಪ್ಲುಟೋನಿಯಂ. ಪ್ರತಿ 87 ವರ್ಷಕ್ಕೆ ಅರ್ಧದಷ್ಟಾಗುವ ಪ್ಲುಟೋನಿಯಂ-238. ಅದು ಕರಗುತ್ತಾ ಬಂದಂತೆ ನೌಕೆಗೆ ದೊರೆಯುವ ವಿದ್ಯುತ್ ಕೂಡಾ ಕಡಿಮೆಯಾಗುತ್ತ ಬರುತ್ತದೆ. ಹೀಗಾಗಿ ಆಗಾಗ ನೌಕೆಯ ಕೆಲವು ಉಪಕರಣಗಳಿಗೆ ವಿಶ್ರಾಮ ನೀಡಲೇಬೇಕಾಗುತ್ತದೆ. 17 ವರ್ಷಗಳ ಹಿಂದೆಯೇ ಬಣ್ಣದ ಚಿತ್ರಗಳನ್ನು ದಾಖಲಿಸುವ ಸ್ಪೆಕ್ಟ್ರೋಮೀಟರಿನ ಸುತ್ತಲ ಬಿಸಿಮಾಡುವ ಉಪಕರಣಗಳನ್ನು ಸಂದೇಶ ನೀಡಿ ಆರಿಸಲಾಗಿತ್ತು. -35 ಡಿಗ್ರಿ ಸೆಲ್ಶಿಯಸ್ ತಡೆದುಕೊಳ್ಳಬಹುದೆಂದುಕೊಂಡ ವಿಜ್ಞಾನಿಗಳ ಅಂದಾಜನ್ನು ಮೀರಿ ವಾಯೇಜರ್ -56 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲೂ ಕೆಲಸ ಮಾಡುತ್ತಲೇ ಇದೆ.
ವಾಯೇಜರ್ ಹಾರಾಟಕ್ಕೆ ಕಳೆದ ಕೆಲವು ವರ್ಷಗಳಿಂದ ಎಲ್ಲಿಲ್ಲದ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಜೋಡಿ ನೌಕೆಗಳಿಂದ ಬರುವ ಸಂದೇಶಗಳು ಮಾನವನಿಗೆ ಅತ್ಯಮೂಲ್ಯವೆಂದು ಭಾವಿಸಲಾಗುತ್ತಿದೆ. ಬಾನವಿಸ್ತಾರದಲ್ಲಿ ಹಾರುತ್ತಲೇ ಮನುಜನ ಜ್ಞಾನದ ಕ್ಷಿತಿಜವನ್ನೂ ವಾಯೇಜರ್ ಜೋಡಿ ವಿಸ್ತರಿಸುತ್ತಿವೆ.
* ಗುರುತ್ವವೇ ಕವಣೆಗೋಲು
ನಾವು ಭೂಮಿಗೆ, ಭೂಮಿ ಸೂರ್ಯನಿಗೆ, ಸೂರ್ಯ ಕ್ಷೀರಪಥ ಎಂಬ ಗೆಲಾಕ್ಸಿಗೆ ಗುರುತ್ವಾಕರ್ಷಣೆಯ ಮೂಲಕ ಬಂಧಿತರಾಗಿದ್ದೇವಷ್ಟೆ? ಇದೇ ಗುರುತ್ವವನ್ನು ಚಿಮ್ಮುಕವಣೆಯಂತೆ ಬಳಸಿಕೊಂಡು ಬಾನನೌಕೆಗಳ ಹಾರಾಟದ ಸಮಯ ಹಾಗೂ ಇಂಧನದ ಉಳಿತಾಯ ಮಾಡುವ ತಂತ್ರವೊಂದನ್ನು ಖಗೋಳಶಾಸ್ತ್ರಜ್ಞರು ರೂಢಿಸಿಕೊಂಡಿದ್ದಾರೆ.
ಸೂರ್ಯನ ಸಮೀಪವಿರುವ ಅಥವಾ ಭೂಮಿಯಿಂದ ಸೂರ್ಯನ ಕಡೆ ಇರುವ ಗ್ರಹಗಳತ್ತ ನೌಕೆಯೊಂದು ಹಾರುವುದಾದರೆ, ಅದರ ವೇಗ ಹೆಚ್ಚುತ್ತದೆ, ಸೂರ್ಯನ ಗುರುತ್ವವನ್ನು ಮೀರಿ ದೂರ ಹಾರುವುದಾದಲ್ಲಿ ಅದರ ವೇಗಕ್ಕೆ ಬಲ ಹೆಚ್ಚು ಬೇಕಾಗುತ್ತದೆ. ಹೊರಗ್ರಹಗಳಿಗೆ ಹಾರುವ ನೌಕೆ ಉದಾಹರಣೆಗೆ ಗುರುಗ್ರಹದ ಸಮೀಪ ಸಾಗಿತು ಎಂದಿಟ್ಟುಕೊಳ್ಳಿ, ಆಗ ಗುರುವಿನ ಗುರುತ್ವದ ಎಳೆತ ನೌಕೆಯ ವೇಗವನ್ನು ಅಧಿಕಗೊಳಿಸುತ್ತದೆ. ಅಂತೆಯೇ ವೇಗವಾಗಿ ಸೂರ್ಯನನ್ನು ಸುತ್ತುತ್ತಿರುವ ಗುರುವಿನ ಆವೇಗ ತನ್ನೊಂದಿಗೆ ನೌಕೆಯನ್ನೂ ಎಳೆದು ಬಿಸಾಕುತ್ತದೆ. ಅಲ್ಲಿಂದ ಚಿಮ್ಮಿದ ನೌಕೆ ಮುಂದೆ ಯುರೇನಸ್, ಆನಂತರ ನೆಪ್ಚೂನಿನ ಕಕ್ಷೆಗಳಲ್ಲೂ ಈ ರೀತಿಯಾಗಿ ಹಾರಿ ತನ್ನ ವೇಗವರ್ಧನೆ ಮಾಡಿಕೊಳ್ಳಬಹುದು. ಆದರೆ ನೌಕೆಯ ಉಡ್ಡಯನದ ಸಮಯ, ಅದರ ವೇಗ, ಗ್ರಹಗಳು ಹಾರುವ ದಿಕ್ಕು ಮತ್ತವುಗಳ ವೇಗ ಇವೆಲ್ಲವೂ ಪರಿಗಣಿತವಾಗುತ್ತವೆ. ಸ್ವಲ್ಪ ಅಜಾಗರೂಕತೆಯಾದರೂ ನೌಕೆ ಉಪಗ್ರಹದ ಮೇಲ್ಮೈಯನ್ನು ಅಪ್ಪಳಿಸಬಹುದು.
ವಾಯೇಜರ್ ಮತ್ತು ನಾವು
ವಾಯೇಜರುಗಳು ತಮ್ಮ ಪಯಣವನ್ನು ಆರಂಭಿಸಿದಾಗ ಈಗಿನ ತರುಣರಲ್ಲಿ ಬಹಳಷ್ಟು ಜನರು ಹುಟ್ಟಿಯೇ ಇರಲಿಲ್ಲ, ಕೆಲವರು ಇನ್ನೂ ಚಿಕ್ಕವರಾಗಿದ್ದರು. ಆದರೆ ಎಡ್‍ವರ್ಡ್ ಸ್ಟೋನ್ ಎಂಬ ತಂತ್ರಜ್ಞ ವಾಯೇಜರ್ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವನು ಇಂದು ಎಪ್ಪತ್ತಾರು ವರ್ಷದ (ಆದರೆ ಇನ್ನೂ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿ ದುಡಿಯುವ) ಮುದುಕ. ಆತ ‘ವಾಯೇಜರ್ ಗಳಿಂದಾಗಿಯೇ ಸೌರಮಂಡಲದ ನಮ್ಮ ಜ್ಞಾನ ಇನ್ನೂ ಹೆಚ್ಚಾಗಿದೆ’ ಎಂದು ಹೆಮ್ಮೆ ಪಡುತ್ತ ಸೂರ್ಯಗೋಲವನ್ನು ದಾಟಿ ಆಚಿನ ಲೋಕದ ಬಗ್ಗೆ ವಾಯೇಜರ್ ಕಣ್ಣು ದಾಖಲಿಸುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಶನಿಗ್ರಹದ ಸಮೀಪದಿಂದ ಶನಿಯ ಉಂಗುರದಲ್ಲಿರುವ ತಿರುವನ್ನು ವಾಯೇಜರ್ ಬಹಿರಂಗಗೊಳಿಸಿದಾಗ ಉಂಟಾದ ಸಂತೋಷವನ್ನು ಎಡ್ ಇಂದಿಗೂ ನೆನೆಯುತ್ತಾರೆ.
ನೂರಾರು ಚಿಗುರು ಮೀಸೆಯ ಯುವಕರೂ ವಾಯೇಜರಿನ ಅನ್ವೇಷಣೆಗಳ ಬಗ್ಗೆ ಬೆರಗು ಪಟ್ಟಿದ್ದಾರೆ. ಹೀಗೆ ವಯಸ್ಸಿನ ಬೇಧವಿಲ್ಲದೆ ವಾಯೇಜರ್ ಎಲ್ಲರಿಗೂ ಅರಿವಿನ ಫಲ ಹಂಚುತ್ತಿದೆ.
ವಾಯೇಜರ್ ಭೂಮಿಯಲ್ಲಿ
ಅದೊಂದು ಅತಿ ಸಾಮಾನ್ಯದ ಕೊಠಡಿ, ಅಲ್ಲಿಮೂಲೆಯಲ್ಲಿ ಓಬೀರಾಯನ ಕಾಲದ ಕಂಪ್ಯೂಟರ್. ಅಲ್ಲೆರಡು ಫಲಕಗಳು, ’ಮಿಶನ್ ಕಂಟ್ರೋಲರ್À’ ಹಾಗೂ ‘ವಾಯೇಜರಿನ ಪ್ರಮುಖ ಯಂತ್ರಾಂಶಗಳು, ದಯವಿಟ್ಟು ಮುಟ್ಟಬೇಡಿ’
ವಾಯೇಜರ್ ಯೋಜನೆಗೆಂದು ಬಳಸಲಾಗುತ್ತಿರುವ ಹೆಚ್ಚಿನ ತಂತ್ರಾಂಶಗಳನ್ನು ಬದಲಿಸಲಾಗಿದೆ, ಆದರೆ ಕೆಲವು ಯಂತ್ರಭಾಗಗಳು ಇನ್ನೂ ಹಾಗೇ ಇವೆ. ಹಾರ್ಡ್‍ವೇರ್ ಭಾಗಗಳು ಶಿಥಿಲಗೊಳ್ಳುತ್ತಿವೆ. ಇಂದಿನ ಬಳಸಿಬಿಸಾಕುವ ತಂತ್ರಜ್ಞಾನ ಪೃವೃತ್ತಿಯ ನಡುವೆಯೂ ಕಳೆದ 35 ವರ್ಷಗಳಿಂದ ಒಂದೆಡೆ ಕೂತು ಕಾರ್ಯನಿರ್ವಹಿಸುತ್ತಿರುವ ಈ ಯಂತ್ರೋಪಕರಣಗಳು…ಕಾಲಯಂತ್ರಗಳೂ ಆಗಿವೆ.
20 ಅರೆಕಾಲಿಕ ವಿಜ್ಞಾನಿಗಳು ಪಾಳಿಯ ಮೇಲೆ ಕೆಲಸ ಮಾಡುತ್ತ ಬಂದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಣೆ ನಡೆಸುತ್ತಾರೆ. ವಾಯೇಜರ್1 ಕಳಿಸಿದ ಸಂದೇಶ ಇಲ್ಲಿಗೆ ತಲುಪಲು 17 ಗಂಟೆಗಳು ಬೇಕು. ಅಂಕಿಅಂಶಗಳನ್ನು ಸಂಸ್ಕರಿಸಿ ಅರ್ಥಪೂರ್ಣ ಮಾಹಿತಿಗಳನ್ನಾಗಿಸಲು ತಿಂಗಳುಗಟ್ಟಲೆ ಕಾಲ ಹಿಡಿಯುತ್ತದೆ.
ಮಂದನೀಲಿ ಬಣ್ಣದ ಭೂಮಿ
1990ರಲ್ಲಿ ವಾಯೇಜರ್ 1 ಅರವತ್ತು ದಶಕೋಟಿ ಕಿಮೀ ದೂರದಿಂದ ಮಂದನೀಲಿ ಬಣ್ಣದ ಭೂಮಿಯ ಚಿತ್ರವನ್ನು ತೆಗೆದು ಭೂಮಿಗೆ ರವಾನಿಸಿತು. ಅದು ಪ್ರಸಿದ್ಧ ವೈಜ್ಞಾನಿಕ ಬರಹಗಾರ ಕಾರ್ಲ್ ಸಾಗನ್ ಅವರ ವಿನಂತಿಯ ಮೇರೆಗೆ ತೆಗೆದ ಚಿತ್ರ. ಅಂದು ಮುಂದೆ ನೆಟ್ಟಿದ್ದ ವಾಯೇಜರಿನ ಕ್ಯಾಮೆರಾ ಕಣ್ಣನ್ನು ತಿರುಗಿಸಿ ಅನಂತ ವಿಸ್ತಾರದ ಹಿನ್ನೆಲೆಯಲ್ಲಿ ಭೂಗ್ರಹದ ಚಿತ್ರವನ್ನು ತೆಗೆಯುವಂತೆ ನಾಸಾ ಆದೇಶಿಸಿತು. ಸಾಗನ್ನರ ಮುಂದಿನ ಪುಸ್ತಕಕ್ಕೆ ನೀಲಿ ಚುಕ್ಕೆಯ ಆ ಚಿತ್ರ ಮುಖಪುಟ ಚಿತ್ರವಾಗಿ ರಾರಾಜಿಸಿದೆ. ಸಾಗನ್ ಅವರಿಂದ ಬಂದ ಮನವಿಯನ್ನು ವಿಜ್ಞಾನಿಗಳು ಅಂಜುತ್ತಲೇ ಸ್ವೀಕರಿಸಿದರು, ಏಕೆಂದರೆ, ಕ್ಯಾಮೆರಾವನ್ನು ಸೂರ್ಯನತ್ತ ತಿರುಗಿಸುವುದೆಂದರೆ ಸೌರತಾಪದ ಅಪಾಯವನ್ನು ಎದುರಿಸಿದಂತೆಯೇ. ಮೊದಲು ಭೂಹೊರಗ್ರಹಗಳ ನೋಟವನ್ನು ದಾಖಲಿಸಿ, ಆನಂತರ ಭೂಮಿಯ ಚಿತ್ರ ತೆಗೆಯಲಾಯಿತು.
ಸರೋಜಾ ಪ್ರಕಾಶ

ಚುನಾವಣೆ ಬಹಿಷ್ಕಾರ ಮಾಡುವಂತೆ ಬೈಕ್ ರ್ಯಾಲಿ

0

ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾಮಪತ್ರಗಳನ್ನು ಸಲ್ಲಿಸದೆ, ಮತದಾನ ಮಾಡದೆ ಎಲ್ಲಾ ಜನರು ಒಗ್ಗಟ್ಟಿನಿಂದ ಚುನಾವಣೆ ಬಹಿಷ್ಕಾರ ಮಾಡುವಂತೆ ಮನವೊಲಿಸುವಂತಹ ಕೆಲಸಗಳು ಆರಂಭವಾಗಿದೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಬೈಕ್ ರ್ಯಾಲಿಯ ಮುಖಾಂತರ ಶುಕ್ರವಾರ ತೆರಳಿದ ಅಬ್ಲೂಡು ಪಂಚಾಯತಿಯ ಗ್ರಾಮಸ್ಥರು ಹಾಗೂ ಮುಖಂಡರು, ಬಯಲು ಸೀಮೆ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ತನಕ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಪ್ರತಿಯೊಂದು ಚುನಾವಣೆಗಳಲ್ಲಿ ನೀರಾವರಿ ಯೋಜನೆಯನ್ನೆ ಅಜೆಂಡವನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರುಗಳು ಬಯಲು ಸೀಮೆ ಭಾಗದ ಜನತೆಯನ್ನು ದಿಕ್ಕುತಪ್ಪಿಸಿ, ನಮಗೆ ಮಂಕು ಬೂದಿಯನ್ನು ಎರಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ, ನಾವು ಬದುಕಲು ನೀರು ಕೊಡಲು ಸಾಧ್ಯವಾಗದಿರುವ ಸರ್ಕಾರಗಳ ಮೇಲೆ ಯಾವ ರೀತಿಯಾದ ನಂಬಿಕೆಯನ್ನು ಇಡಬೇಕು, ಚುನಾವಣೆಗಳಲ್ಲಿ ಮತದಾನ ಮಾಡಿ ನಮಗೇನು ಬರಬೇಕು, ಮೊದಲು ನಾವು ಉಳಿಯಬೇಕು, ನಮ್ಮ ಜಾನುವಾರುಗಳು ಉಳಿಯಬೇಕು, ನಮ್ಮ ಭಾಗದ ಭೂಮಿಗಳಲ್ಲಿ ಹಸಿರು ಕಾಣಿಸಬೇಕು ಆಗಲೇ ಚುನಾವಣೆಗಳಿಗೆ ಅರ್ಥವಿದೆ, ಎಷ್ಟು ಚುನಾವಣೆಗಳು ನಡೆದರೂ ಕೂಡಾ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಸ್ಥಳೀಯ ಆಡಳಿತ ಸಂಸ್ಥೆಗಳ ಅಗತ್ಯತೆಯೂ ನಮಗಿಲ್ಲ, ಈ ಚುನಾವಣೆ ಮಾತ್ರವಲ್ಲ, ಮುಂಬರುವ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳನ್ನೂ ಬಹಿಷ್ಕಾರ ಮಾಡುವಂತೆ ಮನವೊಲಿಸುತ್ತಿರುವ ನಾಗರೀಕರು, ಕ್ಷೇತ್ರದ ಎಲ್ಲಾ ಜನತೆಯು ಕೂಡಾ ಈ ಭಾಗದ ಉಳಿವಿಗಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು

0

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು:
ದಿ ಕ್ರೆಸೆಂಟ್ ಶಾಲೆ, ಶಿಡ್ಲಘಟ್ಟ

  • ಸಿ.ಆರ್.ಶುಭಾ, 593(ಶೇ.94.88)
  • ಎಂ.ಗಾನವಿ, 592(ಶೇ.94.72)
  • ಎಸ್.ಕೆ.ಶಾಲಿನಿ, 588(ಶೇ.94.08)
  • ಜಿ.ಎಂ.ಅಸಿತ್ ದೇವ್, 586(ಶೇ.93.76)
  • ಜಾನ್ಸನ್ ಸ್ಯಾಮ್ಯುಯಲ್, 586(ಶೇ.93.76)
  • ಜಿ.ಎನ್.ಸುಪ್ರಿಯಾ, 586(ಶೇ.93.76)
  • ಎಸ್.ಮೊಯುದ್ದೀನ್, 582(ಶೇ.93.12)
  • ಹಿಮಬಿಂದು, 581(ಶೇ.92.96)
  • ಮೊಹಮ್ಮದ್ ಜಾಯಿದ್ ಪಾಷ, 577(ಶೇ.92.32)
  • ಕೀರ್ತಿ ಸಾಗರ್, 576(ಶೇ.92.16)
  • ಸಿ.ತರುಣ್ ಕುಮಾರ್, 573(ಶೇ.91.68)
  • ನೂರ್ ಅಂಜುಮ್, 570(ಶೇ.91.20)
  • ಕೆ.ಪಿ.ಚಂದನಾ, 569(ಶೇ.91.04)
  • ಜಿ.ಎಂ.ನಿಸರ್ಗ, 567(ಶೇ.90.72)
  • ಜಿ.ಆರ್.ಚಂದನಾ, 567(ಶೇ.90.72)
  • ಎನ್.ಮೇಘಾ, 566(ಶೇ.90.56)

ಬಿ.ಜಿ.ಎಸ್ ಪ್ರೌಢಶಾಲೆ, ಶಿಡ್ಲಘಟ್ಟ

  • ಎನ್.ಪವನ್ ಕುಮಾರ್, 591(ಶೇ.94.56)
  • ಪಿ.ಪವನ್ ಕಲ್ಯಾಣ್, 585(ಶೇ.93.6)
  • ಎ.ಎಂ.ನಿಖಿಲ್ ಗೌಡ, 568(ಶೇ.90.88)
  • ಎಂ.ಲಿಖಿತಾ, 566(ಶೇ.90.56)
  • ಪಿ.ಎನ್.ಮನೋಜ್, 566(ಶೇ.90.56)
  • ಬಿ.ನೇಹಾ ಕೌಸರ್, 566(ಶೇ.90.56)
  • ಚಿ.ಹೀನಾ ತಾಜ್, 565(ಶೇ.90.4)

ವಾಸವಿ ವಿದ್ಯಾಸಂಸ್ಥೆ, ಶಿಡ್ಲಘಟ್ಟ

  • ಎಂ.ದಿವ್ಯಾ, 585(ಶೇ.93.6)
  • ಸಹನಾಶ್ರೀ, 571(ಶೇ.91.36)

ಡಾಲ್ಫಿನ್ ಪಬ್ಲಿಕ್ ಶಾಲೆ, ಶಿಡ್ಲಘಟ್ಟ

  • ಜಿ.ಕೈಲಾಶ್, 588 (ಶೇ.94)
  • ಎಂ.ನಿತಿನ್ ಕುಮಾರ್, 588 (ಶೇ.94)
  • ಕೆ.ಶ್ರಾವಂತಿ, 582 (ಶೇ.93.12)
  • ಎಂ.ಭಾಸ್ಕರ್, 572 (ಶೇ.91.52)
  • ಪ್ರವಲ್ಲಿಕಾ, 572 (ಶೇ.91.52)
  • ಎಂ.ಅಮೃತಾ, 565 (ಶೇ.90.40)
  • ಎಸ್.ಬಿ.ಪ್ರಿಯಾಂಕಾ, 564 (ಶೇ.90.24)
  • ಟಿ.ವಿ.ಮುರಳಿ, 563 (ಶೇ.90.08)

ಶ್ರೀ ಶಾರದಾ ಆಂಗ್ಲ ಪ್ರೌಢಶಾಲೆ

  • ವಿ.ಜಿ.ಭಾವನಾ, 594(ಶೇ.95)
  • ಪುರುಷೋತ್ತಮ್, 573(ಶೇ.91)
  • ವಿ.ಎಸ್.ಮಿಥುನ್ ಕುಮಾರ್, 564(ಶೇ.90)
  • ಎಂ.ಅರುಣ್, 564(ಶೇ.90)

ಉಲ್ಲೂರು ಪೇಟೆ ಸರ್ಕಾರಿ ಶಾಲೆ ಆವರಣದಲ್ಲಿ ಬೇಸಿಗೆ ಶಿಬಿರ ಪ್ರಾರಂಭ

0

ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ತುಂಬಾ ಸಹಕಾರಿಯಾಗುತ್ತವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಧಾರವಾಡದ ಬಾಲವಿಕಾಸ ಅಕಾಡೆಮಿಯಿಂದ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರಗಳಲ್ಲಿ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಒಳ್ಳೆಯ ನಾಯಕತ್ವ ಗುಣಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ ಎಂದರು.
ಗ್ರಾಮೀಣ ಭಾಗದಲ್ಲಿ ಶಾಲೆಗೆ ಬೇಸಿಗೆ ರಜೆ ಬಂದರೆ ಮಕ್ಕಳು ಮನೆ, ಕೃಷಿ, ಹೈನುಗಾರಿಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಾವುದೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಗ್ರಾಮೀಣ ಭಾಗದ ಪರಿಸ್ಥಿತಿ ಹಾಗೂ ಪೋಷಕರ ಆರ್ಥಿಕ, ಸಾಮಾಜಿಕ ಇನ್ನಿತರೆ ಕಾರಣಗಳೂ ಸಹ ಅದಕ್ಕೆ ಕಾರಣವಾಗಿರಬಹುದು.
೧೦ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಪೇಪರ್ಕಟಿಂಗ್ ಮಾಡುವುದು. ಹಾಡು ಹಾಡುವುದು, ಕೊಲಾಜ್. ಕ್ಲೇ ಮಾಡಲಿಂಗ್ ರಚನೆ. ಹಾಗೆಯೆ ಕಥೆ, ಕವನ, ಲೇಖನಗಳ ಬರವಣಿಗೆ ಇತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಸಂಬಂಧಿಸಿದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.
ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಮೇಲ್ವಿಚಾರಕಿ ಗಿರಿಜಾಂಬಿಕೆ, ರಾಧಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಕರಾಟೆ ಶಿಕ್ಷಕ ಅರುಣ್ಕುಮಾರ್, ಸಂಗೀತ ಶಿಕ್ಷಕಿ ಮಮತ, ಚಿತ್ರಕಲೆಯ ಕೃಷ್ಣಮೂರ್ತಿ, ಅಂಗನವಾಡಿ ಶಿಕ್ಷಕಿ ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪೌರನೌಕರನಿಗೆ ಆರ್ಥಿಕ ಸಹಾಯ

0

ನಗರಸಭೆಯ ನೌಕರ ವೆಂಕಟೇಶಪ್ಪ ಎಂಬುವವರಿಗೆ ಟಿ.ಬಿ ಕಾಯಿಲೆ ಬಂದಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವುದರಿಂದ ನಗರಸಭೆಯ ನೌಕರರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ 12,500 ರೂ ಹಣ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ವೆಂಕಟೇಶಪ್ಪ ಅವರ ಪತ್ನಿಯು ಎರಡು ಬಾರಿ ಕಾಲು ಮುರಿದುಕೊಂಡಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಕಳೆದ ತಿಂಗಳಿನಿಂದ ಕಾಯಿಲೆಯಿಂದ ನರಳುತ್ತಿದ್ದ ವೆಂಕಟೇಶಪ್ಪ ಅವರಿಗೆ ಟಿ.ಬಿ ಕಾಯಿಲೆ ಇದೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಲ್ಲಿದ್ದ ಅವರಿಗೆ ನಗರಸಭೆಯ ನೌಕರರು ತಮ್ಮತಮ್ಮಲ್ಲೇ ಹಣ ಸಂಗ್ರಹಿಸಿ ನೀಡಿದ್ದಾರೆ. ಪೌರಾಯುಕ್ತರು ಹಾಗೂ ಜಿಲ್ಲಾ ಪೌರನೌಕರರ ಸಂಘದವರಿಗೂ ವಿಷಯ ತಿಳಿಸಿ ಹಣ ಒದಗಿಸಲು ಪ್ರಯತ್ನಿಸುವುದಾಗಿ ತಾಲ್ಲೂಕು ಪೌರನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಚೇತನ್, ಶಂಕರಪ್ಪ, ಸುಧಾಕರ್, ಮುನಿನಾರಾಯಣಪ್ಪ, ಮುನಿಕೃಷ್ಣಪ್ಪ, ಸುರೇಶ, ಲೋಕೇಶ, ಮುರಳಿ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕುಡಿಯುವ ನೀರಿಗಾಗಿ ಪ್ರತಿಭಟನೆ

0

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ವಿಫಲರಾಗಿದ್ದಾರೆ ಎಂದು ೧೫ ನೇ ವಾರ್ಡಿನ ನಾಗರಿಕರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಇದ್ಲೂಡು ರಸ್ತೆಯಲ್ಲಿರುವ ಮಾರುತಿನಗರದ ನಿವಾಸಿಗಳು ಖಾಲಿಬಿಂದಿಗೆಗಳನ್ನು ಹಿಡಿದುಕೊಂಡು ಬೀದಿಗಿಳಿದು ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ನೀಡುತ್ತಿಲ್ಲ, ಕುಡಿಯುವ ನೀರಿಲ್ಲದೆ ನಾವೆಲ್ಲಾ ಪರದಾಡುವಂತಾಗಿದೆ, ನಗರಸಭಾ ಸದಸ್ಯರ ಮನೆಯ ಬಳಿಯಲ್ಲಿ ಹೋಗಿ ಕೇಳಿದರೆ, ಮನೆಗಳ ಬಳಿಗೆ ಬರಬೇಡಿ ಎನ್ನುತ್ತಾರೆ, ಹೋಗಿ ನಗರಸಭೆಯ ಮುಂದೆ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ, ನಗರಸಭೆಯ ಬಳಿಗೆ ಹೋದರೆ, ಮಹಿಳೆಯರು ಬರಬೇಡಿ ಎನ್ನುತ್ತಾರೆ ಈ ರೀತಿ ನಗರಸಭಾ ಸದಸ್ಯರು, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾವು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಶಿಡ್ಲಘಟ್ಟದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಆಯ್ಕೆ

0

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಶಿಡ್ಲಘಟ್ಟದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ (ನಂದಾ ಮುನಿಕೃಷ್ಣಪ್ಪ) ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಂಜಿನಪ್ಪನವರ ರಾಜೀನಾಮೆಯಿಂದ ಬಹಳಷ್ಟು ದಿನಗಳಿಂದಲೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಾಲಿಯಾಗಿಯೆ ಉಳಿದಿತ್ತು.
ಕಳೆದ ಜನವರಿ ೧೩ ರಂದು ಹಂಗಾಮಿ ಅಧ್ಯಕ್ಷರಾಗಿ ಮಾಜಿ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಸುಭ್ರಮಣಿ ಅವರನ್ನು ಕೆ.ಪಿ.ಸಿ.ಸಿ.ಅಧ್ಯಕ್ಷ ಜಿ.ಪರಮೇಶ್ವರ್ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದರಾದರೂ ಕಾರಣಾಂತರಗಳಿಂದ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿತ್ತು.
ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಮುನಿಕೃಷ್ಣಪ್ಪ ೧೯೫೭ ರಲ್ಲಿ ಅಂದಿನ ಸಂಯುಕ್ತರಂಗ (ಸೈಕಲ್ ಗುರುತು) ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಮಾಡಿದರಾದರೂ ೧೯೭೨ ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಈವರೆಗೂ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ.
೧೯೭೯ ರಲ್ಲಿ ಮೊದಲ ಭಾರಿಗೆ ಶಿಡ್ಲಘಟ್ಟ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವುದರೊಂದಿಗೆ ೧೯೮೩ ರಲ್ಲಿ ಟೌನ್ ಎಸ್.ಎಫ್.ಸಿ.ಎಸ್ನ ಅಧ್ಯಕ್ಷರಾಗಿ, ೧೯೮೯ ಮತ್ತು ೧೯೯೨ ರಲ್ಲಿ ಪುನಃ ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ನಗರದ ಪಿಎಲ್ಡಿ ಬ್ಯಾಂಕಿನ ನಿರ್ದೇಶಕರಾಗಿ ಮೂರು ಭಾರಿ ಆಯ್ಕೆಯಾಗಿದ್ದ ಇವರು ಒಂದು ಭಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಸತತವಾಗಿ ೨೦ ವರ್ಷಗಳ ಕಾಲ ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವ

0

ನಗರದ ಮಯೂರ ವೃತ್ತದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವವನ್ನು ಮೂರು ದಿನಗಳ ಕಾಲ ನಡೆಸಿದ್ದು, ಬುಧವಾರ ದಿ.ಎಂ.ಆರ್.ರಂಗಪ್ಪನವರ ಕುಟುಂಬದ ಸದಸ್ಯರು ಪುರಜನರ ನೇತೃತ್ವದಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ದಶಮಿ ಪೂರ್ವಬಾದ್ರ ನಕ್ಷತ್ರಾದಿ ಸ್ವಾಮಿಯ ಅಲಂಕಾರದೊಂದಿಗೆ ಮಹಾಮುಖ್ಯ ಪ್ರಾಣ ಏಕಾದಶ ರುದ್ರ ಹನುಮ ಬ್ರಹ್ಮಪುರ ದರ್ಶನ ಹಾಗೂ ನಾಗದೇವತೆಗಳ ದಿವ್ಯ ಪ್ರತಿಷ್ಠಾಪನ ದರ್ಶನ ಆಯೋಜಿಸಲಾಗಿತ್ತು. ಹನುಮಕೃತಾಶ್ವ ಯಾಗ, ಪವಮಾನ ಯಾಗ ನಡೆಸಿ ನಾದಸ್ವರ ಪೂಜಾ ವಿಧಿವಿಧಾನದೊಂದಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ಅವರ ರಚನೆಯ ‘ಹನುಮ ಸಂಕೀರ್ತನೆ’ ಆಡಿಯೋ ಸಿಡಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
‘ಶಿಡ್ಲಘಟ್ಟದಲ್ಲಿ ನಮ್ಮ ಕುಟುಂಬದ ಹಲವಾರು ಮಂದಿ ಇದ್ದು, ದೇವಸ್ಥಾನ ಪುನರ್ ಪ್ರತಿಷ್ಠಾಪನ ಮಹೋತ್ಸವದ ಸಂದರ್ಭದಲ್ಲಿ ದೇವರ ಹಾಡುಗಳನ್ನು ಬರೆಯಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯನಾಗಿದ್ದು, ಇದು ತಾನು ಊರಿಗೆ ಹಾಗೂ ದೇವರಿಗೆ ಮಾಡುವ ಸೇವೆ’ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ತಿಳಿಸಿದರು. ಮಾರುತಿ ಗುರೂಜಿ, ನಾರಾಯಣಾಚಾರಿ ಮತ್ತಿತರರು ಹಾಜರಿದ್ದರು.

ಅಂಧ ಮಕ್ಕಳ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ

0

ನಗರದ ಆಶಾಕಿರಣ ಅಂಧ ಮಕ್ಕಳ ಉಚಿತ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಅಂಧ ಮಕ್ಕಳ ಶಾಲೆಯು ಆರನೇ ವರ್ಷ ಸತತವಾಗಿ ಶೇ.100 ರಷ್ಟು ಫಲಿತಾಂಶವನ್ನು ದಾಖಲಿಸಿದೆ.
ಈ ಬಾರಿ ಎಂಟು ಮಂದಿ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಮರಜ್ಯೋತಿ 455(72.8%), ಎನ್.ಸೋಮಶೇಖರ 433(69.28%), ಶಿವಪ್ಪ 430(68.8%), ಕೆ.ಎಸ್.ಪ್ರದೀಪ್ 427(68.32%), ಗಂಗಾದೇವಿ 415(66.40%), ನೇತ್ರಾವತಿ 405(64.8%), ಬಿ.ಆರ್.ಸುನೀತಾ 389(62.24%), ಸರಸ್ವತಿ 385(61.60%) ಅಂಕಗಳನ್ನು ಪಡೆದಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.87.51 ರಷ್ಟು ಫಲಿತಾಂಶ

0

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ ಶೇ.87.51 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಯ 1,220, ಅನುದಾನಿತ ಶಾಲೆಗಳ 869, ಅನುದಾನ ರಹಿತ ಶಾಲೆಗಳ 602 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 2,691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,355 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕವನ್ನು ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ಟಿ.ಆರ್.ಬೃಂದಾ, 614(98.24%) ಪಡೆದು ಮೊದಲಿಗರಾಗಿದ್ದರೆ, ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ಜೆ.ಶ್ರೇಯಸ್ ಮತ್ತು ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಇಂದುಶ್ರೀ 613(98.08%) ಪಡೆದು ದ್ವಿತೀಯರಾಗಿದ್ದಾರೆ. ಕ್ರೆಸೆಂಟ್ ಶಾಲೆಯ ನುಸೈಬಾ ಫರ್ಹೀನ್ 612(97.92%) ಪಡೆದು ತೃತೀಯರಾಗಿದ್ದಾರೆ.
ಶೇಕಡಾ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು:
ಸರ್ಕಾರಿ ಶಾಲೆಗಳು: ಸರ್ಕಾರಿ ಪ್ರೌಢಶಾಲೆ ಕುಂದಲಗುರ್ಕಿ, ಸರ್ಕಾರಿ ಪ್ರೌಢಶಾಲೆ ದೊಡ್ಡತೇಕಹಳ್ಳಿ, ಸರ್ಕಾರಿ ಪ್ರೌಢಶಾಲೆ ಆನೆಮಡುಗು, ಸರ್ಕಾರಿ ಪ್ರೌಢಶಾಲೆ ತುಮ್ಮನಹಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಪುರಬೈನಹಳ್ಳಿ, ಮೊರಾರ್ಜಿ ದೇಸಾಯಿ ಶಾಲೆ ಹನ್ನೊಂದನೇ ಮೈಲಿ,.
ಅನುದಾನಿತ ಶಾಲೆ: ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ
ಅನುದಾನರಹಿತ ಶಾಲೆಗಳು: ಶಿಡ್ಲಘಟ್ಟದ ಶಾರದಾ ಇಂಗ್ಲಿಷ್ ಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ದಿ.ಕ್ರೆಸೆಂಟ್ ಶಾಲೆ, ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆ, ಶಿಡ್ಲಘಟ್ಟದ ಆಶಾಕಿರಣ ಅಂಧಮಕ್ಕಳ ಶಾಲೆ, ಬೂದಾಳದ ರಾಯಲ್ ಶಾಲೆ, ತುಮ್ಮನಹಳ್ಳಿಯ ಚೇತನ ಶಾಲೆ.

  • ಟಿ.ಆರ್.ಬೃಂದಾ, 614(98.24%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
  • ಜೆ.ಶ್ರೇಯಸ್, 613(98.08%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
  • ಬಿ.ವಿ.ಹರ್ಷಿತಾ ಗೌಡ, 605(96.8%), ಜ್ಞಾನಜ್ಯೋತಿ ಶಾಲೆ, ಜಂಗಮಕೋಟೆ ಕ್ರಾಸ್.
  • ಕೆ.ಯಶಸ್ವಿನಿ, 596(95.36%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
  • ಎನ್.ಪಿ.ಬೃಂದಾ, 595(95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
  • ಟಿ.ಎಂ.ಕಲ್ಪನಾ, 595(95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
  • ಎ.ಅಶ್ವತ್ಥ್, 600(96%), ಡಾಲ್ಫಿನ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ.
  • ವಿ.ಜಿ.ಭಾವನಾ, 594(95%), ಶ್ರೀಶಾರದಾ ಆಂಗ್ಲ ಪ್ರೌಢಶಾಲೆ,ಶಿಡ್ಲಘಟ್ಟ.
  • ಇಂದುಶ್ರೀ, ೬೧೩ (95.20%), ನವೋದಯ ಪ್ರೌಢಶಾಲೆ, ನಡಿಪಿನಾಯಕನಹಳ್ಳಿ.
  • ಹರ್ಷಿಕಾ, ೬೧೧(97.76%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
  • ಸೌರವ್, ೬೦೨(96.32%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
  • ಜಿ.ಕೆ.ತೇಜಸ್, ೬೦೦(96%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.
  • ಎಂ.ಸಂತೋಷ್ಕುಮಾರ್, ೬೦೦(96%), ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಳ್ಳೂರು.

error: Content is protected !!