ಮಹಾರಾಷ್ಟ್ರದ ಖಂಡಾಲದ ಡಿ.ಸಿ.ಹೈಸ್ಕೂಲ್ನಲ್ಲಿ ನಡೆದ ಎರಡನೇ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು ರಾಜ್ಯದಿಂದ ಪ್ರತಿನಿಧಿಸಿದ್ದು, ಶಿಬಿರಾಂತ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದಿದ್ದಾರೆ. ನಗರದ ಕೂಡೋ ಕರಾಟೆ ಶಿಕ್ಷಕ ಹಾಗೂ ಕೆ.ಐ.ಎಫ್.ಐ ರಾಜ್ಯ ಪ್ರತಿನಿಧಿ ಮಹಮ್ಮದ್ ಜಬೀವುಲ್ಲಾ ನೇತೃತ್ವದಲ್ಲಿ ತಂಡ ತೆರಳಿತ್ತು.
ಎಚ್.ಜಿ.ವಿಶಾಲ್ ಚಿನ್ನದ ಪದಕವನ್ನು ಪಡೆದರೆ, ಬಿ.ಸುಬ್ರಮಣ್ಯ ಮತ್ತು ರೋಹಿತೇಶ್ವರ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಟಿ.ಎನ್.ಹೇಮಂತ್, ಕೆ.ನರೇಂದ್ರಬಾಬು ಮತ್ತು ಎಂ.ಅಂಕಿತ್ ಹಯಕ್ ಕಂಚಿನ ಪದಕವನ್ನು ಪಡೆದಿದ್ದಾರೆ. ಎಚ್.ಉಮೇಶ್, ಬಿ.ಎ.ತೇಜಸ್, ಓಂ ದೇಶಮುದ್ರೆ, ಓಂಕಾರ್.ಎಸ್.ಆಚಾರ್, ಜಿಶಾನ್ ಸಿದ್ದಿಕಿ, ಮೊಹಮ್ಮದ್ ರೆಹಾನ್, ಸಯ್ಯದ್ ಮೂಯಿಜ್ ಪಾಷ, ಮೊಹಮ್ಮದ್ ಬಕ್ಷಿ, ಶೋಯಬ್ ಬಕ್ಷಿ, ಸಮೀರ್ ಪಾಷ, ನಿತೀಶ್ ಕುಮಾರ್, ಸಚಿನ್ ಪ್ರಶಸ್ತಿಪತ್ರವನ್ನು ಪಡೆದಿದ್ದಾರೆ.
ಏಳು ದಿನಗಳ ಕಾಲ ನಡೆದ ಎರಡನೇ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಕರಾಟೆ ಇಂಟರ್ ನ್ಯಾಷನಲ್ ಫೆಡರೇಷನ್ ಇಂಡಿಯಾ ಅಧ್ಯಕ್ಷ ಸೋಶಿಹಾನ್ ಮೆಹುಲ್ ವೋರಾ, ಪ್ರಧಾನ ಕಾರ್ಯದರ್ಶಿ ರೆನ್ಶಿ ವಿಸ್ಪಿ ಬಿ.ಕಸದ್, ನಿರ್ದೇಶಕ ಶಿಹಾನ್ ಪರ್ಸಿ ಬಹ್ಮನಿ ತರಬೇತಿ ನೀಡಿದರು.
ಮಹಾರಾಷ್ಟ್ರದ ಖಂಡಾಲದಲ್ಲಿ ನಡೆದ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು
ಮಾತೃಭಾಷೆ ತೆಲುಗಿದ್ದರೂ ಕನ್ನಡದಲ್ಲಿ 125 ಅಂಕ
ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ತಾಲ್ಲೂಕಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿ ಕೆ.ಗಗನ್ ಮನೆಯಲ್ಲಿ ಮಾತೃಭಾಷೆ ತೆಲುಗಿದ್ದರೂ ಕನ್ನಡದಲ್ಲಿ 125 ಅಂಕಗಳನ್ನು ಪಡೆದು ಒಟ್ಟಾರೆ 601(ಶೇ.96.16) ಪಡೆದಿದ್ದಾರೆ. ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ಆನೂರು ಗ್ರಾಮದ ನುಸೈಬಾ ಫರ್ಹೀನ್ 612(ಶೇ.97.92) ಪಡೆದಿದ್ದು, ಹಿಂದಿಯಲ್ಲಿ 100 ಅಂಕಗಳನ್ನು ಪಡೆದಿದ್ದರೆ, ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿ ಎ. ಸ್ವರೂಪ್ 603(ಶೇ.96.48) ಪಡೆದಿದ್ದು, ಗಣಿತದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ಆನೂರು ಗ್ರಾಮದ ಕೆ.ರಾಣಿ 603(ಶೇ.96.48) ಪಡೆದಿದ್ದು, ಹಿಂದಿಯಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.
ನಾಯಿಗಳ ಧಾಳಿಗೆ ಕುರಿಗಳು ಬಲಿ
ನಾಯಿಗಳ ಧಾಳಿಗೆ ಸಿಕ್ಕು ತಾಲ್ಲೂಕಿನ ಸೊಣ್ಣೇನಹಳ್ಳಿಯ ಮಾಸಪ್ಪನವರ ಆಂಜಿನಪ್ಪನವರ ಮನೆಯ ಆವರಣದಲ್ಲಿನ ಕುರಿ ದೊಡ್ಡಿಯಲ್ಲಿದ್ದ ನಾಲ್ಕು ಕುರಿಗಳು ಹಾಗೂ ಒಂದು ಮರಿ ಮೃತಪಟ್ಟಿದ್ದರೆ ೧೪ ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು ಉಳಿದುಕೊಳ್ಳುವುದು ಅನುಮಾನವಾಗಿದೆ.
ಕುರಿಗಳ ಮಾಲೀಕ ರೈತನಿಗೆ ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆಂಜಿನಪ್ಪನವರ ಕುಟುಂಬದವರೆಲ್ಲರೂ ತಮ್ಮ ಬಂಧುವೊಬ್ಬರ ಮಕ್ಕಳ ಹೂ ಮುಡಿಸುವ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾರುಕಟ್ಟೆಯಲ್ಲಿ ೨ ವರ್ಷದ ಕುರಿಯೊಂದಕ್ಕೆ ೬-–೧೦ ಸಾವಿರ ರೂ ಬೆಲೆ ಇದ್ದು ಅದರಂತೆ ರೈತನಿಗೆ ೧ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಕಷ್ಟದಲ್ಲಿ ರೇಷ್ಮೆ ಉದ್ಯಮ
ಆಮದು ರೇಷ್ಮೆಯ ಮೇಲಿನ ಸುಂಕ ಕಡಿತ, ಹೆಚ್ಚಾದ ಗೂಡಿನ ಉತ್ಪಾದನೆ, ಚೀನಾ ರೇಷ್ಮೆಯತ್ತ ಒಲವು ತೋರುತ್ತಿರುವ ಬಟ್ಟೆ ತಯಾರಕರು, ಮಾರುಕಟ್ಟೆಯಲ್ಲಿ ಹಣದ ಮುಗ್ಗಟ್ಟು ಮುಂತಾದ ಕಾರಣಗಳು ಸೇರಿಕೊಂಡು ಕಳೆದೊಂದು ವಾರದಿಂದ ರೇಷ್ಮೆಗೂಡು ಹಾಗೂ ರೇಷ್ಮೆನೂಲಿನ ಬೆಲೆ ದಿನ ದಿನಕ್ಕೂ ಇಳಿಮುಖವಾಗತೊಡಗಿದ್ದು ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರಲ್ಲಿ ಆತಂಕ ಮನೆ ಮಾಡಿದೆ.
ದೇಶದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡು ಹಾಗೂ ರೇಷ್ಮೆನೂಲಿನ ವಹಿವಾಟು ನಡೆಯುವ ಶಿಡ್ಲಘಟ್ಟದಲ್ಲಿ ಕಳೆದ ಐದಾರು ದಿನಗಳಿಂದ ದಿನ ದಿನಕ್ಕೂ ರೇಷ್ಮೆನೂಲಿನ ಧಾರಣೆ ಕುಸಿಯತೊಡಗಿದೆ. ಅದೇ ರೀತಿಯಾಗಿ ರೇಷ್ಮೆಗೂಡಿನ ಧಾರಣೆ ಸಹ ಇಳಿಮುಖವಾಗುತ್ತಿದೆ.
ಕೇಂದ್ರ ಸರ್ಕಾರ ವಿದೇಶಿ ಆಮದು ರೇಷ್ಮೆಯ ಮೇಲಿನ ಸುಂಕವನ್ನು ಶೇ. ೧೫ರಿಂದ ೧೦ಕ್ಕೆ ಇಳಿಸಿದ ಪರಿಣಾಮ ದೇಶಕ್ಕೆ ಚೀನಾದಿಂದ ಆಮದಾಗುತ್ತಿರುವ ರೇಷ್ಮೆನೂಲಿನ ಪ್ರಮಾಣ ಏರಿಕೆಯಾಗಿದ್ದು, ಬೆಲೆಯೂ ಕಡಿಮೆಯಾಗಿದ್ದು, ದೇಶೀಯ ರೇಷ್ಮೆನೂಲಿನ ಬೇಡಿಕೆ ಕೊಂಚ ತಗ್ಗಿದೆ ಮತ್ತು ಬೆಲೆ ಕುಸಿಯತೊಡಗಿದೆ. ರೇಷ್ಮೆನೂಲಿನ ಜತೆ ಜತೆಗೆ ರೇಷ್ಮೆಗೂಡಿನ ಬೆಲೆಯೂ ಕುಸಿಯತೊಡಗಿದೆ.
ಕಳೆದ ವಾರದ ಹಿಂದೆ ೩೭೦ರ ಆಸುಪಾಸಿನಲ್ಲಿ ಇದ್ದ ರೇಷ್ಮೆಗೂಡಿನ ಗರಿಷ್ಠ ಬೆಲೆ ಇದೀಗ ೩0೦ರ ಆಸುಪಾಸಿಗೆ ಇಳಿದಿದೆ. ದಿನ ಕಳೆದಂತೆ ಇನ್ನಷ್ಟು ಕುಸಿಯಲಿದೆ. ಸೋಮವಾರ ಮಾರುಕಟ್ಟೆಯಲ್ಲಿ ಸರಾಸರಿ ಗೂಡಿನ ಬೆಲೆ 200 ರೂಗಳಿಗೆ ಇಳಿದಿದೆ. ಇದು ರೇಷ್ಮೆ ಬೆಳೆಗಾರರನ್ನು ಹೆಚ್ಚಿನ ಸಂಕಷ್ಟಕ್ಕೆ ದೂಡಿದೆ.
ಕಳೆದ ವಾರದ ಹಿಂದೆ ೨೬೦೦-–೨೭೦೦ ರೂಪಾಯಿ ಇದ್ದ ಸಣ್ಣ ರೇಷ್ಮೆನೂಲಿನ ಬೆಲೆ ಇದೀಗ ೨೪೦೦-–೨೫೦೦ಕ್ಕೆ ಕುಸಿದಿದೆ. ಹಾಗೆಯೆ ದಪ್ಪ ರೇಷ್ಮೆನೂಲಿನ ಬೆಲೆಯಲ್ಲೂ ಸಹ ಇಳಿಕೆ ಕಂಡಿದ್ದು ೨೪೦೦–-೨೭೦೦ ರೂಪಾಯಿ ಇದ್ದದ್ದು ಇದೀಗ ೨೦೦೦–-೨೩೦೦ಕ್ಕೆ ಕುಸಿದಿದೆ.
ಬೆಲೆ ಕುಸಿತಕ್ಕೂ ಮಿಗಿಲಾಗಿ ರೇಷ್ಮೆನೂಲಿಗೆ ಬೇಡಿಕೆಯೆ ಇಲ್ಲ. ಹಾಗಾಗಿಯೆ ಈ ಏರು ಪೇರಾಗುತ್ತಿದೆ ಎನ್ನುವುದು ರೇಷ್ಮೆ ಮಾರುಕಟ್ಟೆಯ ಪರಿಣಿತರ ಲೆಕ್ಕಾಚಾರ. ಮಾರುಕಟ್ಟೆಯಲ್ಲಿ ಹಣವೇ ಇಲ್ಲ. ಮಾರಿರುವ ರೇಷ್ಮೆಗೆ ಹಣದ ವಿವರದ ಪಟ್ಟಿ ಹಿಡಿದುಕೊಂಡು ಕೂರುವಂತಾಗಿದೆ. ಲಾಭವಿಲ್ಲದೆಯೂ ಮಾರಲು ಹೋದರೂ ಹಣ ಸಿಗುತ್ತಿಲ್ಲ ಎನ್ನುತ್ತಾರೆ ರೇಷ್ಮೆ ನೂಲು ಉತ್ಪಾದಕ ಸಮೀವುಲ್ಲ.
ಇಡೀ ದೇಶದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ೪೫-೫೦ ಸಾವಿರ ಟನ್ನಷ್ಟು ರೇಷ್ಮೆಗೂಡಿನ ವಹಿವಾಟು ನಡೆಯುತ್ತದೆ. ತಾಲ್ಲೂಕಿನಲ್ಲಿ ದಿನವೂ ೬-೮ ಟನ್ನಷ್ಟು ರೇಷ್ಮೆನೂಲು ಉತ್ಪಾದನೆಯಾಗುತ್ತದೆ.ದೇಶದ ಪ್ರಮುಖ ಬಟ್ಟೆ ತಯಾರಕ ನಗರಗಳಿಗೆ ಶಿಡ್ಲಘಟ್ಟದಿಂದ ವಿವಿಧ ಗುಣಮಟ್ಟದ ರೇಷ್ಮೆನೂಲು ರಫ್ತು ಆಗುತ್ತದೆ.
ಮಾರುಕಟ್ಟೆ ವ್ಯತ್ಯಯ ಅಥವಾ ಕುಸಿತ ಕಂಡಾಗ ರೇಷ್ಮೆನೂಲು ಖರೀದಿಸುವವರು ಖರೀದಿ ನಿಲ್ಲಿಸಿಬಿಡುತ್ತಾರೆ. ಇದನ್ನೇ ನಂಬಿ ಗುಡಿ ಕೈಗಾರಿಕೆಯಂತೆ ನಡೆಸುವ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿದೆ. ಇಲ್ಲಿನ ರೀಲರುಗಳ ಕೈಯಲ್ಲಿ ಹಣ ಇಲ್ಲದಾಗಿದೆ. ಪರಿಣಾಮ ರೇಷ್ಮೆಗೂಡಿನ ಬೆಲೆಯೂ ಕುಸಿದಿದೆ. ಲಕ್ಷಾಂತರ ರೇಷ್ಮೆಬೆಳೆಗಾರರ ಹಾಗೂ ರೀಲರುಗಳ ಕುಟುಂಬಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಡಗಿಸಿಕೊಂಡ ಬಹುಕೋಟಿ ರೂಪಾಯಿಗಳ ವಹಿವಾಟಿನ ರೇಷ್ಮೆ ಉದ್ದಿಮೆ ಸಂಕಷ್ಟದಲ್ಲಿದೆ.
ನಗರದಲ್ಲೂ ತಲೆಯೆತ್ತಲಿದೆ ಒಂದು ಅಠಾರಾ ಕಚೇರಿ
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕಬ್ಬನ್ಪಾರ್ಕಿನ ಅಂಚಿನಲ್ಲಿರುವ 1868 ರಲ್ಲಿ ನಿರ್ಮಾಣವಾದ ಉಚ್ಚ ನ್ಯಾಯಾಲಯದ ಕೆಂಪು ಕಟ್ಟಡ ಅಠಾರಾ ಕಚೇರಿಯ ಮಾದರಿಯಲ್ಲಿ ನಗರದಲ್ಲಿ ನ್ಯಾಯಾಲಯ ಸಮುಚ್ಚಯ ನಿರ್ಮಾಣವಾಗುತ್ತಿದೆ.
ನ್ಯಾಯಾಲಯ ಸಮುಚ್ಚಯ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು ಶೀಘ್ರದಲ್ಲೆ ಸಾರ್ವಜನಿಕರ ಬಳಕೆಗೆ ಸಮರ್ಪಣೆಯಾಗಲಿದೆ.
ನಗರದ ದಿಬ್ಬೂರಹಳ್ಳಿ ರಸ್ತೆಯ ಸಂತೋಷನಗರದ ಸಮೀಪ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸಮುಚ್ಚಯದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಮುಕ್ತಾಯದ ಹಂತಕ್ಕೆ ತಲುಪಿದೆ.
ಮುಂದಿನ ಎರಡು ಮೂರು ತಿಂಗಳಲ್ಲಿ ಈ ಮೂರೂ ನ್ಯಾಯಾಲಯಗಳ ಎಲ್ಲ ಕಾರ್ಯ ಕಲಾಪಗಳು ಸಹ ನಿರ್ಮಾಣವಾಗುತ್ತಿರುವ ಈ ಭವ್ಯವಾದ ಬೃಹತ್ ನ್ಯಾಯಾಲಯದ ಸಮುಚ್ಚಯದಲ್ಲಿಯೆ ನಡೆಯಲಿವೆ. ಹಾಗಾಗಿ ಹತ್ತು ಹಲವು ವರ್ಷಗಳಿಂದಲೂ ಹೊಸ ನ್ಯಾಯಾಲಯದ ಕಟ್ಟಡದ ಕನಸು ಕಂಡಿದ್ದ ಕಕ್ಷಿದಾರರ, ನಾಗರೀಕರ, ನ್ಯಾಯವಾದಿಗಳ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದೆ.
42 ಮೀಟರ್ ಅಗಲ 30 ಮೀಟರ್ ಉದ್ದವಿರುವ ಸುಮಾರು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬಹುತೇಕ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಉಚ್ಚ ನ್ಯಾಯಾಲಯಕ್ಕೆ ಬಳಿದ ಕಡು ಕೆಂಪು ಬಣ್ಣವನ್ನೆ ಇಲ್ಲಿನ ನ್ಯಾಯಾಲಯದ ಕಟ್ಟಡಕ್ಕೂ ಬಳಿಯುತ್ತಿದ್ದು ಕಣ್ಣಿಗೆ ಆಕರ್ಷಣೀಯವಾಗಿ ಕಾಣತೊಡಗಿದೆ.
ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸಭಾಂಗಣ(ಕೋರ್ಟ್ ಹಾಲ್). ಹೆಚ್ಚುವರಿಯಾಗಿ ಒಂದು ನ್ಯಾಯಾಲಯದ ಹಾಲ್ ಕೂಡ ಇರಲಿದೆ(ವಿಶೇಷ ಹಾಗೂ ತುರ್ತು ಸಂದರ್ಭಗಳಲ್ಲಿ ನ್ಯಾಯ ಕಲಾಪ ನಡೆಸಲು ಮೀಸಲು). ನ್ಯಾಯಾಧೀಶರಿಗೆ ಪ್ರತ್ಯೇಕ ಹಾಲ್, ಕೊಠಡಿಗಳನ್ನು ಹಾಲ್ಗೆ ಹೊಂದಿಕೊಂಡಂತೆಯೆ ನಿರ್ಮಿಸಲಾಗುತ್ತಿದೆ.
ವಕೀಲರ ಸಂಘಕ್ಕೆ(ಮಹಿಳಾ ವಕೀಲರಿಗೆ ಪ್ರತ್ಯೇಕ)ಸ್ಥಳಾವಕಾಶ ಇರಲಿದೆ. ವಕೀಲರ ಸಂಘದ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಯನ್ನು ಮೀಸಲಿರಲಿದೆ. ನ್ಯಾಯಾಲಯಕ್ಕೆ ಹಾಜರಾಗುವ ಕಕ್ಷಿದಾರರು, ಸಾಕ್ಷಿಗಳು, ಪೊಲೀಸ್ ಸಿಬ್ಬಂದಿಗೂ ಕೂರಲು ಪ್ರತ್ಯೇಕ ಸ್ಥಳಾವಕಾಶದ ಜತೆಗೆ ಶೌಚಾಲಯದ ವ್ಯವಸ್ಥೆ ನೂತನ ನ್ಯಾಯಾಲಯದ ಕಟ್ಟಡದಲ್ಲಿ ಇರಲಿದೆ.
ಅಪರಾಧ ಪ್ರಕರಣಗಳಲ್ಲಿ ವಶಕ್ಕೆ ತೆಗೆದುಕೊಂಡ ವಸ್ತುಗಳ ಸಂಗ್ರಹಕ್ಕೆ ಕಟ್ಟಡ, ಉಪಹಾರ ಗೃಹ, ವಿಶ್ರಾಂತ ಗೃಹವನ್ನೂ ನಿರ್ಮಿಸಲಾಗುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಕಡತಗಳನ್ನು ಇರಿಸಲು ಪ್ರತ್ಯೇಕ ದಾಸ್ತಾನು ಕೊಠಡಿ(ಸ್ಟ್ರಾಂಗ್ ರೂಂ) ಇರಲಿದೆ. ಹಿರಿಯ ನಾಗರೀಕರು ಹಾಗೂ ಅಂಗವಿಕಲರು ಕಾರ್ಯಕಲಾಪಗಳಿಗೆ ಹಾಜರಾಗಲು ಅನುಕೂಲ ಆಗುವಂತೆ ಲಿಪ್ಟ್ ಅಳವಡಿಸುವ ಕೆಲಸವೂ ನಡೆದಿದೆ. ಮಳೆಕೊಯ್ಲು ಪದ್ಧತಿಯನ್ನು ಈ ಕಟ್ಟಡಕ್ಕೆ ಅಳವಡಿಸುತ್ತಿದ್ದು, ತಾಲೂಕಿನಲ್ಲಿ ಮಳೆಕೊಯ್ಲು ಅಳವಡಿಸಿರುವ ಸರ್ಕಾರಿ ಕಟ್ಟಡ ಸಧ್ಯಕ್ಕೆ ಇದೊಂದೆ ಆಗಿದೆ.
ಮಿನಿ ಉದ್ಯಾನವನವೂ ಇರಲಿದೆ. ಜತೆಗೆ ನ್ಯಾಯಾಲಯದ ಮುಂಭಾಗದಲ್ಲಿ ರಾಷ್ಟ್ರ ಧ್ವಜ ಆರೋಹಣ ಹಾಗೂ ಅವರೋಹಣೆಗೆ ಅನುಕೂಲ ಆಗುವಂತೆ ರಾಷ್ಟ್ರಧ್ವಜ ವೇದಿಕೆಯ ನಿರ್ಮಾಣ, ವಾಹನ ನಿಲ್ದಾಣಕ್ಕೂ ಪ್ರತ್ಯೇಕ ಸ್ಥಳಾವಕಾಶ ಮೀಸಲಿರಿಸಿ ಅಲ್ಲಿಯೂ ಮೂಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
‘ಹಿಂದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನ್ಯಾಯಾಲಯದ ಕಾರ್ಯಕಲಾಪಗಳು ಇದೀಗ ಪುರಾತನ ತಾಲ್ಲೂಕು ಕಚೇರಿಯ ಶಿಥಿಲಗೊಂಡ ಕಟ್ಟಡದಲ್ಲಿ ನಡೆಯುತ್ತಿದೆ. ಹಲವು ಅನಾನುಕೂಲಗಳ ನಡುವೆ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ನಡೆಸಲಾಗುತ್ತಿದೆ. ಕಕ್ಷಿದಾರರ, ಸಾಕ್ಷಿಗಳಿಗೂ ಕನಿಷ್ಠ ಮಟ್ಟದ ಸೌಕರ್ಯಗಳೂ ಅಲ್ಲಿಲ್ಲ. ಆದರೆ ಇದೀಗ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಎಲ್ಲ ರೀತಿಯ ಮೂಲ ಸೌಕರ್ಯಗಳೂ ಇರಲಿವೆ. ಕಕ್ಷಿದಾರರಿಗೂ, ಸಾಕ್ಷಿಗಳಿಗೂ ಅವರ ಹಕ್ಕುಗಳನ್ನು ರಕ್ಷಿಸಲು ಅಲ್ಲಿ ಸಾಧ್ಯವಾಗಲಿದೆ’ ಎಂದು ವಕೀಲರಾದ ವಿಶ್ವನಾಥ್ ಮತ್ತು ನಾಗರಾಜ್ ತಿಳಿಸಿದರು.
‘ನಗರದ ಹೊರಭಾಗದಲ್ಲಿ ಈ ರೀತಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದರಿಂದ ಹಲವಾರು ವ್ಯಾಪಾರಸ್ಥರಿಗೆ ಹೋಟೆಲು ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಹಿಂದುಳಿದ ಈ ಪ್ರದೇಶದ ಮೂಲಭೂತ ಸೌಕರ್ಯಗಳು ವೃದ್ಧಿಸಲಿವೆ. ನಗರದ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ’ ಎನ್ನುತ್ತಾರೆ ಮುಷಾಯಿದ್ ಪಾಷ.
ಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಿಂದ ಲೋಕಕಲ್ಯಾಣಾರ್ಥ ರಾಜಯೋಗ ಧ್ಯಾನ
ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಿಂದ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ನಡೆಸಲಾಯಿತು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಪುರದ ಗವಿಗಂಗಾಧರೇಶ್ವರ ದೇವಾಲಯದ ಗುಟ್ಟದಲ್ಲಿ ಭಾನುವಾರ ನೆರೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸದಸ್ಯರು ೩ ಗಂಟೆಗಳಿಗೂ ಹೆಚ್ಚು ಕಾಲ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ಮಾಡಿದರು.
ಇತ್ತೀಚೆಗೆ ನಡೆದ ನೇಪಾಳದ ಭೂಕಂಪದಲ್ಲಿ ಮಡಿದ ಸಾವಿರಾರು ಮಂದಿ ಸಹೋದರರ, ಸಹೋದರಿಯರು ಸೇರಿದಂತೆ ಎಲ್ಲರ ಆತ್ಮಕ್ಕೂ ಶಾಂತಿ, ಮೋಕ್ಷ ದೊರಕಲೆಂದು ಈ ಯೋಗ ಧ್ಯಾನವನ್ನು ನಡೆಸುತ್ತಿದ್ದೇವೆ ಎಂದು ಬ್ರಹ್ಮಕುಮಾರಿಯ ಜಯಕ್ಕ ತಿಳಿಸಿದರು.
ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತಿಲ್ಲ. ಇದಲ್ಲದೆ ಜನರಲ್ಲಿ ದುರಾಸೆ ನೆಲೆಸಿ ಶಾಂತಿ, ನೆಮ್ಮದಿ, ಆರೋಗ್ಯ ಇಲ್ಲದಾಗಿದೆ. ಹಾಗಾಗಿ ಎಲ್ಲೆಲ್ಲೂ ಅಶಾಂತಿಯೆ ನೆಲೆಸಿದೆ. ಆದ್ದರಿಂದ ಈ ಲೋಕದಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸಲೆಂಬುದು ಈ ಧ್ಯಾನದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಶಿಡ್ಲಘಟ, ಮೇಲೂರು, ಮಳ್ಳೂರು ಶಾಖೆಗಳಿಂದ ವಿದ್ಯಾರ್ಥಿಗಳಲ್ಲದೆ ಇತರರೂ ಈ ಸಾಮೂಹಿಕ ಯೋಗ ಧ್ಯಾನದಲ್ಲಿ ಭಾಗವಹಿಸಿದ್ದರು. ಧ್ಯಾನದ ನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ಭೋಜನ ಕಾರ್ಯಕ್ರಮವೂ ನಡೆಯಿತು.
ಮಂಜನಾಥ್, ಚಂದ್ರಶೇಖರ್, ಪಿಳ್ಳವೆಂಕಟಸ್ವಾಮಿ, ನಾರಾಯಣಸ್ವಾಮಿ, ಮುನಿರೆಡ್ಡಿ, ಅರುಣ್ಕುಮಾರ್, ಅಮರ್, ದೇವಿಕಾ ಮತ್ತಿತರರು ಧ್ಯಾನದಲ್ಲಿ ಭಾಗವಹಿಸಿದ್ದರು.
ತಲದುಮ್ಮನಹಳ್ಳಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಆರಂಭೋತ್ಸವ
ತಾಲೂಕಿನ ತಲದುಮ್ಮನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಆರಂಭೋತ್ಸವ ನಡೆಯಿತು.
ಬೆಳಗ್ಗೆಯ ವಿಘ್ನನಿವಾರಕ ವಿನಾಯಕನ ಪೂಜೆಯೊಂದಿಗೆ ಆರಂಭವಾದ ಪೂಜಾ ಪುನಸ್ಕಾರಗಳು ಸಂಜೆಯವರೆಗೂ ನಡೆದವು. ಶ್ರೀಪ್ರಸನ್ನ ಆಚಿಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಾನಾ ಪೂಜೆ, ಹೋಮ, ಹವನಗಳನ್ನು ನಡೆಸಲಾಯಿತು.
ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮದ ಮುಖಂಡರಾದ ಟಿ.ಎಸ್.ರಾಮಚಂದ್ರಪ್ಪ, ಬಚ್ಚೇಗೌಡ, ಚನ್ನಕೃಷ್ಣ, ಕಂಬದಹಳ್ಳಿ ಶ್ರೀನಿವಾಸ್, ಮುನಿರಾಜು, ಮುನೇಗೌಡ, ದೇವರಾಜ್, ದ್ಯಾವಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಸೀಮೆ ಹಸುಗಳಿಗೆ ಸಾಲ ಹಾಗು ಪ್ರೋತ್ಸಾಹ ಧನದ ಮಂಜೂರಾತಿ ಪತ್ರ ವಿತರಣೆ
ಅಂತರ್ಜಲ ಮಟ್ಟ ಕುಸಿದು ಕೃಷಿ ಕೈಕಚ್ಚುವಂತಾಗಿದ್ದರೂ ಹೈನುಗಾರಿಕೆ ರೈತರ ಕೈ ಹಿಡಿದಿದೆ. ಹಾಗಾಗಿ ಸರಾಕರವೂ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪಶು ಸಂಗೋಪನೆ ಇಲಾಖೆಯ ಕಚೇರಿ ಆವರಣದಲ್ಲಿ ಹಾಲು ಉತ್ಪಾಧಕರಿಗೆ ನೀಡುವ ಪ್ರೋತ್ಸಾಹ ಧನದ ಬದಲಿಗೆ ಸೀಮೆ ಹಸುಗಳಿಗೆ ಸಾಲ ಹಾಗು ಪ್ರೋತ್ಸಾಹ ಧನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಅಂತರ್ಜಲ ಮಟ್ಟ ಕುಸಿದು ಕುಡಿಯಲು ನೀರಿನ ಕೊರತೆಯಾಗಿದ್ದರೂ ಹಾಲು ಉತ್ಪಾಧನೆಯಲ್ಲಿ ಮಾತ್ರ ಈ ಭಾಗದ ರೈತರು ಎಂದಿಗೂ ಹಿಂದೆ ಬಿದ್ದಿಲ್ಲ. ತಮ್ಮ ಶ್ರಮದಿಂದಾಗಿ ಇಡೀ ರಾಜ್ಯದಲ್ಲಿಯೆ ಹಾಲು ಉತ್ಪಾಧನೆಯಲ್ಲಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೆಶಕ ಬಂಕ್‍ಮುನಿಯಪ್ಪ ಮಾತನಾಡಿ, ಸರಕಾರದಿಂದ ಈ ಸೌಲಭ್ಯ ಪಡೆದುಕೊಳ್ಳುವುದು ಮುಖ್ಯವಲ್ಲ. ಈ ಹಣವನ್ನು ಬೇರೆ ಯಾವುದಕ್ಕೂ ಉಪಯೋಗಿಸಿಕೊಳ್ಳದೆ ಹಸು ಖರೀಸಲು ಮಾತ್ರವೇ ಬಳಸಿಕೊಳ್ಳಲು ಸೂಚಿಸಿದರು.
ಪಶು ವೈಧ್ಯಕೀಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಹಾಲಿಗೆ ನೀಡುವ ಪ್ರೋತ್ಸಾಹ ಧನವಾಗಿ ತಾಲೂಕಿಗೆ 50.05 ಲಕ್ಷ ರೂ.ಬಿಡುಗಡೆಯಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ 53, ಪಂಗಡದ 14 ಮಂದಿ ರೈತರಿಗೆ ಸೀಮೆ ಹಸುಗಳನ್ನು ಖರೀ ಮಾಡಲು ತಲಾ 75 ಸಾವಿರ ರೂ.ಪ್ರೋತ್ಸಾಹ ಧನ ಹಾಗೂ 25 ಸಾವಿರ ರೂ.ಸಾಲವಾಗಿ ನೀಡಲಾಗುತ್ತಿದೆ.
ಇಲಾಖೆಯ ವಿಸ್ತರಣಾ ವಿಭಾಗದ ಡಾ.ಮಂಜುನಾಥ್, ಮುಖಂಡರಾದ ಸೂರ್ಯನಾರಾಯಣಗೌಡ, ಬಿ.ಮುನಿರೆಡ್ಡಿ, ಮಳ್ಳೂರಯ್ಯ ಇನ್ನಿತರರು ಹಾಜರಿದ್ದರು.
ರೇಷ್ಮೆಗೂಡು ಹಾಗೂ ನೂಲಿನ ಬೆಲೆ ಕುಸಿದಿರುವುದನ್ನು ವಿರೋಧಿಸಿ ಪ್ರತಿಭಟನೆ
ನಗರದ ಸರಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರುಗಳು ಸೇರಿ ರೇಷ್ಮೆಗೂಡು ಹಾಗೂ ನೂಲಿನ ಬೆಲೆ ಕುಸಿದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಚೀನಾದಿಂದ ಆಮದು ಆಗುವ ರೇಷ್ಮೆ ಮೇಲಿನ ಸುಂಕವನ್ನು ಶೇ10ಕ್ಕೆ ಇಳಿಸಿರುವುದರಿಂದ ಆಮದು ರೇಷ್ಮೆ ಪ್ರಮಾಣ ಹೆಚ್ಚಾಗಿ ಸ್ಥಳೀಯ ರೇಷ್ಮೆಗೂಡು, ನೂಲಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.
ಇದೀಗ ಕೇಂದ್ರದ ಬಿಜೆಪಿ ಸರಕಾರ ಶೇ 15ರಿಂದ ಶೇ 10ಕ್ಕೆ ಆಮದು ಸುಂಕವನ್ನು ಇಳಿಸಿ ರೈತರು ಹಾಗೂ ರೀಲರುಗಳನ್ನು ನಾಶ ಮಾಡುವಂತ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಇದರಿಂದಾಗಿ ಪ್ರತಿ ಕೆ.ಜಿ ರೇಷ್ಮೆಗೂಡಿನ ಬೆಲೆಯಲ್ಲಿ 100ರೂಪಾಯಿಷ್ಟು ಇಳಿಮುಖಗೊಂಡಿದೆ. ರೇಷ್ಮೆನೂಲಿನ ಬೆಲೆಯೂ ಅಷ್ಟೇ. ಸಾಕಷ್ಟು ಕುಸಿತ ಕಂಡಿದೆ ಎಂದು ಅಂಕಿ ಅಂಶಗಳೊಂದಿಗೆ ಬೆಲೆ ಇಳಿಕೆಯ ವಿವರಗಳನ್ನು ನೀಡಿದರು.
ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಮೊದಲಿನಂತೆ ಆಮದು ಸುಂಕವನ್ನು ಹೆಚ್ಚಿಸಬೇಕೆಂದು ಸಂಬಂಸಿದ ಎಲ್ಲ ಸಚಿವರು, ಉನ್ನತ ಮಟ್ಟದ ಅಕಾರಿಗಳಿಗೆ ಮನವಿ ಮಾಡುತ್ತೇವೆ. ಆಗಲೂ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಬೀದಿಗೆ ಇಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ರೇಷ್ಮೆಗೂಡಿನ ಉತ್ಪಾಧನಾ ವೆಚ್ಚ ಹೆಚ್ಚಾಗುತ್ತಿದೆ. ಆದರೆ ರೇಷ್ಮೆಗೂಡಿನ ಬೆಲೆ ಕುಸಿಯುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರು ಮಾತ್ರವಲ್ಲದೆ ರೀಲರುಗಳೂ ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇಂತಹ ಪರಿಸ್ಥಿತಿ ಇರುವಾಗ ಕೇಂದ್ರ ಸರಕಾರ ಆಮದು ಸುಂಕವನ್ನು ಕಡಿಮೆ ಮಾಡಿ ಈಗಾಗಲೆ ರೈತರಿಗೆ ಆಗಿರುವ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.
ಈಗಾಗಲೆ ಅಂತರ್ಜಲ ಮಟ್ಟ ಕುಸಿದು ಕೃಷಿಯನ್ನೆ ಕೈ ಬಿಡುವ ಪರಿಸ್ಥಿತಿಯಲ್ಲಿ ರೇಷ್ಮೆ, ಹಾಲು ಮಾತ್ರವೇ ರೈತನ ಕೈ ಹಿಡಿದಿದೆ. ಈ ರೇಷ್ಮೆ ಕೃಷಿಯಲ್ಲಿ ಲಕ್ಷಾಂತರ ರೈತರ ಹಾಗೂ ರೀಲರುಗಳ ಕುಟುಂಬಗಳು ಅವಲಂಬಿತವಾಗಿವೆ.
ಕೇಂದ್ರ ಸರಕಾರ ಈ ಧೋರಣೆಯನ್ನೆ ಅನುಸರಿಸಿದರೆ ರೇಷ್ಮೆ ಉದ್ದಿಮೆಯಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ಈ ಮೊದಲಿನಂತೆ ಶೇ 15ಕ್ಕೆ ಅಥವಾ ಅದಕ್ಕೂ ಮಿಗಿಲಾಗಿ ಆಮದು ಸುಂಕವನ್ನು ಹೆಚ್ಚಿಸುವವರೆಗೂ ನಾವು ವಿರಮಿಸುವ ಪ್ರಶ್ನೆಯೆ ಇಲ್ಲ. ರೈತರು ಹಾಗೂ ರೀಲರುಗಳು ಒಂದಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹಸಿರು ಸೇನೆಯ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಅಬ್ಲೂಡು ದೇವರಾಜ್, ರಾಮಕೃಷ್ಣಪ್ಪ, ರಮೇಶ್, ನಾರಾಯಣಸ್ವಾಮಿ, ರೀಲರುಗಳ ಸಂಘದ ಅಧ್ಯಕ್ಷ ಅಕ್ಮಲ್‍ಪಾಷ ಇನ್ನಿತರರು ಹಾಜರಿದ್ದರು.
ಗ್ಯಾಡ್ಗೆಟ್ (ಗ್ಯಾಜೆಟ್) ಬಳಸಿದರೂ ಅವುಗಳ ದಾಸರಾಗಬೇಡಿ
ಮೂವತ್ತು ವರ್ಷದ ಹಿಂದೆ
1. ಸಂಜೆ ಐದರ ನಂತರ ಯಾವುದೇ ಹಳ್ಳಿಯ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದರೆ ಊರಿನ ಹೆಚ್ಚಿನ ಜನರನ್ನು ಭೇಟಿಯಾಗಿಬಿಡಬಹುದಿತ್ತು. ಊರ ಹೆಂಗಸರೆಲ್ಲಾ ಅವರವರ ಮನೆಯೆದುರಿನ ಕಟ್ಟೆಯ ಮೇಲೆ ಕುಳಿತು ಯಾವ್ಯಾವುದೋ ಗಾಸಿಪ್‍ಗಳನ್ನು ಸವಿಯುತ್ತಿದ್ದರು! ಊರ ಗಂಡಸರೂ ಅದರಲ್ಲಿ ಭಾಗವಹಿಸುತ್ತಿದ್ದರು ಅಥವಾ ಊರ ಮುಂದಿನ ದೊಡ್ಡ ಮರದಡಿಯಲ್ಲಿ, ಇಲ್ಲವೇ ದೇವಸ್ಥಾನಗಳ ಜಗಲಿಯ ಮೇಲೆ ಅವರ ವಿಶೇಷ ಸಭೆಗಳು ನಡೆಯುತ್ತಿದ್ದವು. ಯಾವುದೇ ಹಳ್ಳಿಗೆ ಹೋದರೂ ಸಂಜೆ ಊರಿನಲ್ಲಿ ಸುತ್ತಾಡಿದರೆ ಅಲ್ಲಿನ ಹೆಚ್ಚಿನ ಜನರ ಪರಿಚಯ ಮಾಡಿಕೊಳ್ಳುವುದು ಸಾಧ್ಯವಾಗುತ್ತಿತ್ತು.
2. ಎಪ್ಪತ್ತರ ದಶಕದಲ್ಲಿ ನಾನು ಶಿವಮೊಗ್ಗದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಸಂಜೆ ಐದು ಗಂಟೆಯಾಗುವುದಕ್ಕಾಗಿಯೇ ಕಾಯುತ್ತಿದ್ದೆ. ಸ್ನೇಹಿತರೆಲ್ಲಾ ಸೇರಿ ಬಡಾವಣೆಯ ರಸ್ತೆಯಲ್ಲಿ ತಿರುಗಾಡುವುದೆಂದರೆ ನಮಗೆ ರೋಮಾಂಚಕಾರಿ ಅನುಭವ. ಯಾಕೇಂದ್ರೆ ಆಗ ಹುಡುಗಿಯರೆಲ್ಲಾ ಮನೆಯ ಕಾಂಪೌಂಡಿಗೋ, ಗೇಟಿಗೋ ಆತುಕೊಂಡು ಹರಟೆ ಕೊಚ್ಚುತ್ತಾ ಇರುತ್ತಿದ್ದರು. ನಡುನಡುವೆ ನಮ್ಮ ಕಡೆ ಒಮ್ಮೆ ಕುಡಿನೋಟ ಹರಿಸಿಬಿಟ್ಟರೆ ಅವತ್ತಿನ ಕೂಲಿ ಗಿಟ್ಟಿತು ಎಂಬ ಸಾರ್ಥಕತೆಯನ್ನು ಅನುಭವಿಸುತ್ತಿದ್ದೆವು!
3. ನಮ್ಮ ಮನೆಯಲ್ಲಿ ರಾತ್ರಿ ಊಟವಾದ ಮೇಲೆ ಒಂದು ಗಂಟೆ ನಾವು ಐದು ಮಕ್ಕಳು ಮತ್ತು ನಮ್ಮಪ್ಪ ಅಮ್ಮ ಎಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದೆವು. ಸರಸ ಮಾತುಗಾರನಾದ ನಮ್ಮಣ್ಣ ಇದ್ದರಂತೂ ಸಮಯ ಕಳೆಯುವುದು ತಿಳಿಯುತ್ತಲೇ ಇರಲಿಲ್ಲ. ನಮ್ಮ ಮನೆಗೆ ಬರುವ ನೆಂಟರೂ ಇದರಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದರು. ಎಷ್ಟೋ ನೆಂಟರುಗಳು ಇದಕ್ಕಾಗಿಯೇ ನಮ್ಮ ಮನೆಯಲ್ಲಿ ರಾತ್ರಿ ಉಳಿಯಲೂ ಬರುತ್ತಿದ್ದರು.
4. ಜನ ಬಸ್ ನಿಲ್ದಾಣದಲ್ಲಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ಕಳೆಯಲು ಪಕ್ಕದವರೊಡನೆ ಮಾತು ಬೆಳೆಸುತ್ತಿದ್ದರು. ಇದರಿಂದ ಉತ್ತಮ ಸ್ನೇಹಿತರು ಸಿಗುವ ಸಾಧ್ಯತೆಗಳಿತ್ತು. ಹಲವಾರು ಬಾರಿ ಹೆಣ್ಣು ಗಂಡಿನ ವ್ಯವಹಾರಗಳು ಕೂಡ ಇಂತಹ ಕಡೆಗಳಲ್ಲಿ ಕುದುರಿ ಕೆಲವರಿಗೆ ಕಂಕಣ ಬಲ ಕೂಡಿ ಬರುತ್ತಿತ್ತು! ಆಸ್ತಿ ಖರೀದಿ ಅಥವಾ ಮಾರಾಟಗಳು ಕಮೀಷನ್ ರಹಿತವಾಗಿ ನಡೆಯುತ್ತಿತ್ತು.
5. ಹಳ್ಳಿಗಳಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ನೆಂಟರಿಷ್ಟರು ಒಂದೆರೆಡು ದಿನ ಮೊದಲೇ ಬಂದು, ಕಾರ್ಯಕ್ರಮದ ಒಂದೆರೆಡು ದಿನ ನಂತರ ಹೋಗುತ್ತಿದ್ದರು. ಪಟ್ಟಣಗಳಲ್ಲಿ ಆ ದಿನ ಬೆಳಗ್ಗೆಯಿಂದ ಸಂಜೆಯವರೆಗಾದರೂ ಒಟ್ಟಿಗಿದ್ದು ಒಬ್ಬರಿಗೊಬ್ಬರು ನೆರವನ್ನು ನೀಡುತ್ತಿದ್ದರು ಮತ್ತು ಸರಸವಾಗಿ ಸಮಯವನ್ನು ಕಳೆಯುತ್ತಿದ್ದರು. ಒಂದು ಮದುವೆ ಅಥವಾ ಸಮಾರಂಭ ಇತರ ಹತ್ತಾರು ಮದುವೆಗಳಿಗೆ ನಾಂದಿಯಾಗುತ್ತಿತ್ತು.
ಆದರೆ ಈಗ?
1. ಸಂಜೆಯಾದೊಡನೆ ಹಳ್ಳಿಯ ಜನರೆಲ್ಲಾ ತಮ್ಮ ನೆಚ್ಚಿನ ಮೆಗಾಧಾರವಾಹಿಗಳಿಗಾಗಿ ಟೀವಿಯ ಮುಂದೆ ಸ್ಥಾಪಿತಗೊಂಡಿರುತ್ತಾರೆ. ರಸ್ತೆಯೆಲ್ಲಾ ಭಣಭಣ, ಮುಚ್ಚಿದ ಬಾಗಿಲುಗಳಿಂದ ಟೀವಿಯ ಸದ್ದು ಮಾತ್ರ ಕೇಳುತ್ತದೆ.
2. ಪೇಟೆಯ ಹುಡುಗರು ಮತ್ತು ಹುಡುಗಿಯರು ಮೊಬೈಲ್‍ನ ಮಾಯಾಜಾಲಕ್ಕೆ ಸಿಕ್ಕು “ಲೈನು” ಹೊಡೆಯುವುದನ್ನೇ ಮರೆತಂತಿದೆ. ದೊಡ್ಡ ಪಟ್ಟಣಗಳಲ್ಲಿ ಬಿಡಿ ಈ ಡೇಟಿಂಗ್ ಅನ್ನುವುದು ಇರಬೇಕಾದರೆ ಲೈನು ಹೊಡೆಯುವುದಕ್ಕೆ ಅರ್ಥವೇ ಇಲ್ಲ! ಸಣ್ಣ ಊರುಗಳಲ್ಲಿಯೂ ಅದರ ಪ್ರಾದೇಶಿಕ ರೂಪಾಂತರಗಳಿವೆ!
3. ನಮ್ಮ ಮನೆಯಲ್ಲಿ ಮಕ್ಕಳೆಲ್ಲಾ ಚದುರಿ ಹೋಗಿದ್ದೇವೆ. ನೆಂಟರೂ ಬರುವುದೂ ಕಡಿಮೆಯಾಗಿದೆ. ಬಂದವರೂ ನಮ್ಮ ಜೊತೆ ಕುಳಿತು ಟೀವಿ ನೋಡುವ ತವಕದಲ್ಲಿರುತ್ತಾರೆಯೇ ಹೊರತು, ಮೊದಲಿನಂತೆ ಮಾತನಾಡಲು ಆಸಕ್ತಿ ತೋರುವುದಿಲ್ಲ. ‘ಮುಕ್ತ’ ಮಾತುಕತೆಗಳಿಗಿಂತ ‘ಮುಕ್ತ ಮುಕ್ತ’ ಹೆಚ್ಚು ಆಕರ್ಷಣೀಯವಾಗಿದೆ!
4. ಬಸ್‍ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನ ಮೊಬೈಲ್‍ನಲ್ಲಿ ಮಾತನಾಡುವುದರಲ್ಲಿಯೋ ಅಥವಾ ಎಫ್ ಎಮ್ ರೇಡಿಯೋ ಕೇಳುವುದರಲ್ಲಿಯೋ ಮುಳುಗಿರುತ್ತಾರೆ. ಅಕ್ಕಪಕ್ಕದವರೊಡನೆ ನಾವಾಗಿಯೇ ಮಾತು ಬೆಳೆಸುವುದು ಸೌಜನ್ಯತೆಯಲ್ಲ ಎನ್ನುವ ಪಾಶ್ಚಿಮಾತ್ಯರ ತಪ್ಪು ತಿಳುವಳಿಕೆಯು ನಮ್ಮಲ್ಲೂ ಬೇರೂರುತ್ತಿದೆ.
5. ಮದುವೆ ಮತ್ತಿತರ ಸಮಾರಂಭಗಳಿಗೆ ಆಹ್ವಾನಿತರು ಊಟಕ್ಕೆ ಅರ್ಧ ತಾಸು ಮೊದಲು ಬಂದು, ಗುದ್ದಾಡಿ ಜಾಗ ಮಾಡಿಕೊಂಡು ಉಂಡ ಮರುಕ್ಷಣವೇ ವಾಹನವನ್ನೇರುತ್ತಾರೆ. ಅಲ್ಲಿರುವ ಸಮಯದ ಹೆಚ್ಚಿನ ಪಾಲನ್ನು ಕೂಡ ಮೊಬೈಲು ತಿಂದಿರುತ್ತದೆ.
ಹಾಗಿದ್ದರೆ ಯಾವುದು ಸರಿ?
ಇಷ್ಟೆಲ್ಲಾ ಬರೆದಿರುವುದು ಹಳೆಯದೆಲ್ಲಾ ಸರಿ ಮತ್ತು ಹೊಸದೆಲ್ಲಾ ತಪ್ಪು ಎಂದು ಸೂಚಿಸುವುದಕ್ಕಾಗಿ ಅಂತ ತೀರ್ಮಾನಿಸಬೇಕಿಲ್ಲ. ಹಾಗೆ ನೋಡಿದರೆ ಹಳೆಯದೆಲ್ಲಾ ಅತ್ಯುತ್ತಮವೇನೂ ಆಗಿರಲಿಲ್ಲ. ಆದರೆ ಅದನ್ನು ಸುಧಾರಿಸುವುದು ಅಂದರೆ ಹೊಸ ಸಮಸ್ಯೆಗಳಿಗೆ ಸಿಲುಕಿಕೊಳ್ಳುವುದು ಅಂತೇನೂ ಆಗಬೇಕಿಲ್ಲವಲ್ಲ. ಈ “ಅಭಿವೃದ್ಧಿ ಹೊಂದುವುದು” ಅಥವಾ “ಮುಂದುವರೆಯುವುದು” ಎನ್ನುವುದರ ಪರಿಣಾಮ ಮನುಷ್ಯ ಮನುಷ್ಯರ ನಡುವಿನ ಸಂಪರ್ಕವನ್ನೇ ಕಡಿದು ಹಾಕುವುದು ಎಂದಾಗಿದೆಯೆಲ್ಲಾ, ಇದೆಷ್ಟು ಆರೋಗ್ಯಕರ ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ.
ಹಿಂದೆಲ್ಲಾ ಜನರು ಒಟ್ಟಾಗಿ ಸೇರಿದಾಗ ಹೆಚ್ಚಿನ ಸಮಯದಲ್ಲಿ ಅನಗತ್ಯ ಗಾಸಿಪ್‍ಗಳು, ಯಾರನ್ನಾದರೂ ಹಣಿಯುವ ಕುತಂತ್ರಗಳು, ಬರೀ ಒಣ ರಾಜಕೀಯ ಚರ್ಚೆ, ಬೇಡದ ಊರ ಉಸಾಪರಿ-ಇಂತಹವುಗಳೇ ನಡೆಯುತ್ತಿದ್ದವು ಎಂದುಕೊಳ್ಳೋಣ. ಆದರೆ ಅಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸಂಪರ್ಕ ಮತ್ತು ಸಂವಹನವೇರ್ಪಡುತ್ತಿತ್ತು. ಆಗ ನಮ್ಮೊಳಗಿನ ಭಾವನೆಗಳು ಹೊರಬಂದು ಮನಸ್ಸು ನಿರಾಳವಾಗುತ್ತಿತ್ತು. ಇದರಿಂದ ಜಗಳ, ಹೊಡೆದಾಟಗಳಾಗುವ ಸಾಧ್ಯತೆಗಳು ಇದ್ದರೂ, ಸಂವಹನವೇ ಇಲ್ಲದ ಸ್ಥಿತಿಗಿಂತ ಇಂತಹ ಋಣಾತ್ಮಕ ಸಂವಹನೆಯಾದರೂ ಇರುವುದು ಉತ್ತಮ ಎಂದು ಮನಶ್ಯಾಸ್ತ್ರಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳೆಲ್ಲರೂ ಒಪ್ಪುತ್ತಾರೆ. ಸಂಘಜೀವಿಯಾದ ಮನುಷ್ಯನ ಭಾವನಾತ್ಮಕ ಅಗತ್ಯಗಳು ಇಂತಹ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪೂರ್ಣಗೊಳ್ಳುತ್ತಿದುದರಿಂದ ಆತ ಮಾನಸಿಕವಾಗಿ ಸಮಸ್ಥಿತಿಯಲ್ಲಿರುವ ಸಾಧ್ಯತೆಗಳೂ ಹೆಚ್ಚಾಗಿದ್ದವು.
ಇವತ್ತಿನ ಸ್ಥಿತಿಯ ಬಗೆಗೆ ಮೇಲೆ ಹೇಳಿರುವ ಕೆಲವು ಪ್ರಾತಿನಿಧಿಕ ಸಂದರ್ಭಗಳನ್ನು ಗಮನಿಸಿದರೆ, ಎಲೆಕ್ಟ್ರಾನಿಕ್ ಗ್ಯಾಡ್ಗೆಟ್‍ಗಳ ಆಕರ್ಷಣೆ, ಮಾನವೀಯ ಸಂಬಂಧಗಳ ಕರುಳಬಳ್ಳಿಯನ್ನು ಕತ್ತರಿಸುತ್ತಿದೆ ಎನ್ನುವುದು ಅರಿವಾಗುತ್ತದೆ. ಹೀಗೆ ಮನುಷ್ಯರ ನಡುವಿನ ಸಂವಹನ ಕಡಿಮೆಯಾಗುತ್ತಾ ಬಂದಂತೆ ನಮ್ಮ ಭಾವನಾತ್ಮಕ ಅಸ್ಥಿರತೆಗಳು ಹೆಚ್ಚುತ್ತವೆ. ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆ, ಹಾಳಾಗುತ್ತಿರುವ ಕೌಟುಂಬಿಕ ಸಂಬಂಧಗಳು, ಹೆಚ್ಚುತ್ತಿರುವ ವಿಚ್ಛೇದನಗಳು, ಏರುತ್ತಿರುವ ಮಧುಮೇಹ ಮತ್ತಿತರ “ಲೈಫ್ ಸ್ಟೈಲ್ ಕಾಯಿಲೆಗಳು” -ಇವೆಲ್ಲವುಗಳಿಗೆ ಸಾಕಷ್ಟು ಕಾಣಿಕೆ ನೀಡುತ್ತಿರುವುದು ನಮ್ಮಲ್ಲಿ ವ್ಯಕ್ತಪಡಿಸದೇ ಉಳಿದಿರುವ ಭಾವನೆಗಳ ಒತ್ತಡ ಎಂದು ಇತ್ತೀಚೆಗೆ ಎಚ್ಚರಿಸಲಾಗುತ್ತಿದೆ.
ಎಲ್ಲಾ ಗ್ಯಾಡ್ಗೆಟ್‍ಗಳೂ ಹಾನಿಕರವೇ?
ಕಳೆದ ಐದಾರು ವರ್ಷಗಳಲ್ಲಿ ಗ್ಯಾಡ್ಗೆಟ್‍ಗಳ ಮಹಾಪೂರದಲ್ಲಿ ಮಾರುಕಟ್ಟೆಗಳು ಕೊಚ್ಚಿಕೊಂಡು ಹೋಗಿವೆ. ಇವುಗಳಲ್ಲಿ ಹಲವಂತೂ ನಮಗೆ ಗಾಳಿ, ನೀರುಗಳಷ್ಟೇ ಅನಿವಾರ್ಯ ಎನ್ನುವ ಮನಸ್ಥಿತಿಯನ್ನು ನಾವು ತಲುಪಿದ್ದೇವೆ. ಹಾಗಾಗಿ ಇವುಗಳನ್ನು ತೊರೆಯುವುದಂತೂ ಆಸಾಧ್ಯ. ಹೆಚ್ಚೆಂದರೆ ಇವುಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದರ ಬಗೆಗೆ ಯೋಚಿಸಬಹುದೇನೋ.
ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಆತಂಕಗಳನ್ನೊಡ್ಡಿರುವುದು ದೂರಸಂಪರ್ಕ ಸಾಧನಗಳು, ಅದರಲ್ಲೂ ಪ್ರಮುಖವಾಗಿ ಟೀವಿ, ಮೊಬೈಲ್, ಕಂಪ್ಯೂಟರ್ ಹಾಗೂ ಅಂತರ್ಜಾಲ. ವಿಪರ್ಯಾಸವನ್ನು ನೋಡಿ. ಈ ದೂರಸಂಪರ್ಕ ಸಾಧನಗಳು ನಮ್ಮನ್ನು ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲಡೆ ಕರೆದೊಯ್ಯುತ್ತವೆ, ಆದರೆ ಪಕ್ಕದಲ್ಲೇ ಇರುವವರಿಂದ ನಮ್ಮನ್ನು ದೂರಮಾಡಿದೆ! ಇವುಗಳು ಭೌತಿಕ ಪ್ರಪಂಚವನ್ನು ಚಿಕ್ಕದಾಗಿಸಿದೆ, ಆದರ ಜೊತೆಗೆ ವಿಶ್ವಕ್ಕಿಂತ ವಿಶಾಲವಾಗಿದ್ದ ನಮ್ಮ ಮನೋಪ್ರಪಂಚವನ್ನೂ ಅನುಭವಕ್ಕೇ ಬರದಷ್ಟು ಚಿಕ್ಕದಾಗಿಸಿದೆ!
ನಾವೆಲ್ಲಾ ನೆನಪಿಡಬೇಕಾದದ್ದು ಪಾಶ್ಚಿಮಾತ್ಯರ ಭೌತಿಕ ಸಾಧನಗಳಷ್ಟೇ ನಮಗೆ ಬೇಕು, ಆದರೆ ಅವರ ಜೀವನ ಶೈಲಿ ಮಾತ್ರ ಬೇಡ ಎಂದರೆ ಅದು ಸಾಧ್ಯವಿಲ್ಲದ ಕನಸು. ಗ್ಯಾಡ್ಗೆಟ್‍ಗಳ ಜೊತೆಗೆ ಅಲ್ಲಿನ ಸಾಮಾಜಿಕ ಪಿಡುಗುಗಳಾದ ಮುಕ್ತ ವಿಚ್ಛೇದನಗಳು, ಸಡಿಲಗೊಂಡ ಕೌಟುಂಬಿಕ/ಸಾಮಾಜಿಕ ಸಂಬಂಧಗಳು, ಹೆಚ್ಚುತ್ತಿರುವ ಭಾವನಾತ್ಮಕ ಮತ್ತು ಆರೋಗ್ಯದ ಸಮಸ್ಯೆಗಳು-ಎಲ್ಲವನ್ನೂ ನಾವು ಒಪ್ಪಿಕೊಳ್ಳಬೇಕು. ಈ ಸಮಸ್ಯೆಗಳಿಗೆ ಗ್ಯಾಡ್ಗೆಟ್‍ಗಳು ಮಾತ್ರ ಕಾರಣವೆಂದೇನಲ್ಲ. ಆದರೆ ಇವುಗಳ ಕಾಣಿಕೆ ಸಾಕಷ್ಟಿದೆ. ಕುಟುಂಬದ ಸದಸ್ಯರ ಮಧ್ಯದ ಸಂವಹನೆಯೂ ಕೂಡ ಈ ಗ್ಯಾಡ್ಗೆಟ್‍ಗಳ ಆಗಮನದ ನಂತರ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವುದಕ್ಕೆ ನಮ್ಮೆಲ್ಲರ ಮನೆಗಳಲ್ಲೇ ಉದಾಹರಣೆಗಳಿವೆ. ಮಾತು ಕಡಿಮೆಯಾಗುತ್ತಾ ಬಂದಂತೆ ಭಾಷೆ, ಸಾಹಿತ್ಯ, ಕಲೆ ಇವೆಲ್ಲವೂ ದುರ್ಬಲವಾಗುತ್ತಾ ಬರುತ್ತವೆ. ಇವತ್ತಿನ ಮಕ್ಕಳಿಗೆ ಯಾವುದಾದರೂ ನಮಗೆ ಗೊತ್ತಿಲ್ಲದೇ ಇರುವ ವಿಷಯದಲ್ಲಿ ಅಥವಾ ಕೊನೆಗೆ ವಿಷಯವೇ ಇಲ್ಲದೆ ಹರಟೆಹೊಡೆಯಲು ಸಾಧ್ಯ ಎಂದರೆ ಆಶ್ಚರ್ಯಪಡುತ್ತಾರೆ. ಅಷ್ಟೇ ಅಲ್ಲ ಅದು ಸಮಯವನ್ನು ವ್ಯರ್ಥವಾಗಿ ಕಳೆಯುವ ಮಾರ್ಗ ಎಂದುಕೊಂಡಿದ್ದಾರೆ. ಇಂತಹ ಹರಟೆಗೂ ಕೂಡ ಮಾನವನ ಸಂಸ್ಕøತಿಯ ಬೆಳವಣಿಗೆಯಲ್ಲಿ ಪ್ರಮುಖ ಸ್ಥಾನವಿತ್ತು ಎನ್ನುವುದನ್ನು ಮಕ್ಕಳಿಗೆ ತಿಳಿಸಬೇಕಾಗಿದೆ.
ಹಾಗಾಗಿ ತಕ್ಷಣ ಗ್ಯಾಡ್ಗೆಟ್‍ಗಳ ಬಳಕೆಯನ್ನು ನಿಯಂತ್ರಿಸಬೇಕು. ಈ ನಿಯಂತ್ರಣದ ಪ್ರಾರಂಭ ಈ ತಲೆಮಾರಿನಿಂದಲೇ ಆರಂಭವಾಗಬೇಕು. ಏಕೆಂದರೆ ಮುಂದಿನ ತಲೆಮಾರುಗಳು ಹುಟ್ಟಿನಿಂದಲೇ ಗ್ಯಾಡ್ಗೆಟ್‍ಗಳ ಬಳಕೆ ಪ್ರಾರಂಭಿಸಿರುವುದರಿಂದ ನಿಯಂತ್ರಣ ಮಾತೇ ಅವರ ಕಲ್ಪನೆಯನ್ನು ಮೀರಿರುತ್ತದೆ. ನಮ್ಮ ನಡುವೆ ಮುಖಾಮುಖಿಯಾದ ಸಂಪರ್ಕವನ್ನು (ಮೆಸೇಜು, ಈಮೈಲ್ ಫೇಸ್ ಬುಕ್ ಸಂಪರ್ಕಗಳಲ್ಲ!) ಮತ್ತೆ ಸ್ಥಾಪಿಸಿಕೊಳ್ಳುವ ಬಗೆಗೆ ನಾವೆಲ್ಲಾ ಕ್ರಿಯಾಶೀಲರಾಗಬೇಕಿದೆ. ಮಕ್ಕಳಿಗೆ ಗ್ಯಾಡ್ಗೆಟ್‍ಗಳ ಹೊರತಾದ ಪ್ರಪಂಚವಿರುವುದರ ಅರಿವು ಮೂಡಿಸಬೇಕು.
ವಸಂತ್ ನಡಹಳ್ಳಿ

