ಶ್ರೀ ಬಿ.ಎ. ಸನದಿಯವರ ಒಂದು ಪ್ರಸಿದ್ಧ ಕವಿತೆ ಆದೇಶ ದಲ್ಲಿ ಹೀಗೆ ಹೇಳುತ್ತಾರೆ
‘ಆದೇಶ ಬಂದೊಡನೆ
ಆ! ಎಂದು ಆಕಳಿಸಿ ಮೆರವಣಿಗೆ
ಜೈ! ಎಂದು ಎದ್ದು ಹೊರಡುವವರು
ಯಾ ದೇಶದುದ್ದಾರ ಮಾಡುವರು ಸ್ವಾಮಿ!
ನಿಜ ಯಾವುದಾದರು ಆದೇಶ ಬಂದಾಗ ಇಲ್ಲವೇ ಒತ್ತಡ ಒತ್ತರಸಿ ಬಂದಾಗಲಷ್ಟೆ ಕಾರ್ಯಕ್ಕೆ ಮುಂದಾಗುವ ನಮ್ಮ ಬದುಕಿನ ವಿಡಂಬನೆಯಲ್ಲಡಗಿದೆ. ನಾವು ನಾವಾಗಿಯೇ ತಿಳಿದುಕೊಂಡು ಮಾಡುವುದು ಅಷ್ಟರಲ್ಲೆ ಇದೆ. ಬಹತೇಕ ಸಂದರ್ಭಗಳಲ್ಲಿ ಜನರು ಹೇಳುವ ಮಾತು ನಮಗೀಗ ಪುರುಸೊತ್ತಿಲ್ಲ, ಬಿಡುವಿಲ್ಲ ಕೆಲಸದ ಒತ್ತಡ ಇತ್ಯಾದಿ.
ಆದರೆ ಯಾರಿಗೆ ತಮ್ಮ ಕೆಲಸವನ್ನು ಸರಿಯಾದ ಸಮಯದಲ್ಲಿ ಪೂರೈಸಲು ಕಾಲದ ಹೊಂದಣಿಕೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಲ್ಲರೋ ಅವರಿಗೆ ಪುರುಸೊತ್ತಿನ, ಬಿಡುವಿನ ಕೊರತೆಯಿರುವುದಿಲ್ಲ.
ಆಗಾಗ ನಾನು ಹೇಳುವ ಮಾತೆಂದರೆ ‘You can stop Your Watch but not time’ ಅಂತ ಕಾಲ ಯಾರಿಗೂ ಕಾಯುವುದಿಲ್ಲ ಅದು ಸದಾ ಚಲನಶೀಲ. ಅದಕ್ಕೆ ಸೂರ್ಯನನ್ನು ಕುರಿತು Exact day Labourer ಎಂದು ಕೊಂಡಾಡಿದ್ದು. ಇದನ್ನು ಗಮನಿಸಿಯೆ ಇಂಗ್ಲಿಷನ ಖ್ಯಾತ ಕವಿ ಎಂಡ್ರ್ಯು ಮಾರ್ವೆಲ್ ತನ್ನ ಪ್ರಸಿದ್ಧ ಕವಿತೆ‘ To His Coy Mistress’ ಎಂಬ ಕವಿತೆಯಲ್ಲಿ ‘Time is a Winged Chariot hurrying near’ಎಂದು ತನ್ನ ಪ್ರಿಯತಮೆಗೆ ಹೇಳಿದ್ದು. ಕಾಲಕ್ಕೆ ಕಾಯುವ ಗುಣವಿಲ್ಲ. ನಮಗಾದರೆ ಕಾಯುತ್ತಿರುವುದೆ ಕಾಯಕವಾಗುತ್ತಿದೆ. ಹಾಗೇ ಕಾಯುತ್ತಲೆ ಕಾಲ ಸರಿಯುತ್ತಿರುತ್ತದೆ. ಏನನ್ನು ಸಾಧಿಸದೆ ವೃದ್ಧಾಪ್ಯ ಸಮೀಪಿಸುತ್ತದೆ. ಮತ್ತೆ ಹಿಂದೆ ಕಳೆದ ಕಾಲದ ಕುರಿತು ಹಳಹಳಿಕೆ ಪ್ರಾರಂಭವಾಗುತ್ತದೆ. ಕೊನೆಗೆ ‘ಕಾಲಾಯ ತಸ್ಮಯೇ ನಮಃ’ ಎಂದು ಸುಮ್ಮನಾಗುವುದೆ ಅಧಿಕ. ಬದುಕಿನಲ್ಲಿ ಬೇಕಾದದ್ದನ್ನು ಖರೀದಿಸಬಹುದು. ಆದರೆ ಕಾಲ ಖರೀದಿಗೆ ಸಿಗುವಂಥದ್ದಲ್ಲ. ಹಾಗಾಗಿ ಅದರ ಬಳಕೆ ನಿರ್ವಹಣೆಯ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದು.
ಕಾಲಾ ನಿರ್ವಹಣಾ ಕೌಶಲ್ಯದ ಕುರಿತು ಆನೇಕಾನೇಕ ರೀತಿಯ ತರಬೇತಿಗಳಿವೆ ಆದರೆ ತರಗತಿಗಳಿಗೆ ಸೀಮಿತವಾದದ್ದೆಲ್ಲ ಬದುಕಿಗೂ ಬರುತ್ತದೆ ಎಂಬ ಕುರಿತು ಯಾವುದೇ ಗ್ಯಾರಂಟಿಯಿಲ್ಲ. ಕಾಲ ನಿರ್ವಹಣೆಯ ಕುರಿತು ಪ್ರತಿಯೊಬ್ಬರು ತಮ್ಮ ದಿನಚರಿಯನ್ನು ಮಾಡಿಟ್ಟುಕೊಂಡು ಕರಾರುವಕ್ಕಾಗಿ ಅದನ್ನು ಪಾಲಿಸಬೇಕೆಂಬ ವಾದವು ನನ್ನದಲ್ಲ. ಯಾಕೆಂದರೆ ಹಾಗೇನಾದರು ಆದರೆ ನಾವು ನಾವಾಗಿರುವ ಬದಲಿಗೆ ಯಂತ್ರಗಳಾಗಿ ಬಿಡುವ ಆಪಾಯವೇ ಹೆಚ್ಚು. ದಿನಚರಿ ಸ್ಥೂಲವಾಗಿರಬೇಕೆ ವಿನಃ ಸೂಕ್ಷ ಅನುಕರಣೆಯಲ್ಲ್ಲ.
ಸಮಯಕ್ಕೆ ಬೆಲೆ ನೀಡುವುದನ್ನು ನಾವು ಕಲಿತರೆ, ನಮಗೂ ಬೆಲೆ ಬರಲೂ ಸಾಧ್ಯ. ಯಾವುದೇ ಸಭೆ ಸಮಾರಂಭಗಳನ್ನು ಗಮನಿಸಿ ಸಕಾಲಕ್ಕೆ ಪ್ರಾರಂಭವಾಗುವುದು ಇಲ್ಲ. ಮುಗಿಯುವುದು ಇಲ್ಲ. ಅಲ್ಲಿನ ಕಾರ್ಯಕ್ರಮಗಳಿಗೂ ವೇಳೆ ನಿಗದಿಯಾಗಿರುವುದಿಲ್ಲ. ಮಾತನಾಡುವ ಮಹಾನೀಯರಿಗಂತು ಮೈಕೊಂದು ಮುಂದಿದ್ದರೆ ಅವರು ಅವರನ್ನೆ ಮರೆಯುತ್ತಾರೆ. ಕುಳಿತ ಜನ ಆಕಳಿಸುತ್ತಾರೆ, ಬಯ್ಯುತ್ತಿರುತ್ತಾರೆ. ಹಾಗೇ ಹಲವರು ಎದ್ದು ಹೋಗುತ್ತಿರುತ್ತಾರೆ. ಕಾರಣವೆಂದರೆ ಕಾಲದ ಮಿತಿಗೆ ಒಳಪಡದ ಸಭೆ ಸಮಾರಂಭಗಳ ಆಯೋಜಕರು ಅದನ್ನು ಗಮನಿಸಿ ಅದಷ್ಟು ಸಮಯಪಾಲನೆಗೆ ಮಹತ್ವ ನೀಡುವುದರಿಂದ ಅವರಿಗೂ ಸಮಯದ ಉಳಿತಾಯವಾಗುತ್ತದೆ. ಬಂದ ಜನರಿಗೂ ಅವರವರ ಸಮಯ ಉಳಿದರೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ. ಅದಕ್ಕೆ ಬೇಕಾದರೆ ಒಂದು ಸಭಾ ಸಂಸ್ಕಾರ ಪಡೆದುಕೊಳ್ಳುವುದು ಒಳ್ಳೆಯದು. ಶಾಲೆ, ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ಕೂಡ ಇಂಥ ಪಿಡುಗುಗಳು ಕಾಣಿಸಿಕೊಳ್ಳುತ್ತಲೆ ಇರುತ್ತವೆ. ಮಕ್ಕಳ ಮನೋರಂಜನೆ ವೀಕ್ಷಿಸಲು ಬಂದ ಪಾಲಕರು ಮತ್ತಿತರರಿಗೆ, ಅತಿಥಿಗಳ ಉದ್ದುದ್ದ ಭಾಷಣಗಳೆ ಸಮಯ ತಿನ್ನುತ್ತಿದ್ದರೆ ಸಹಜವಾಗಿಯೆ ಕಿರಿಕಿರಿಯುಂಟಾಗುತ್ತದೆ. ಪ್ರದರ್ಶನ ನೀಡಲು ಸಿದ್ಧವಾಗಿ ನಿಂತ ಮಕ್ಕಳಿಗಂತೂ ಹಿಂಸೆಯೆ ಸರಿ. ಹಾಗಾಗಿ ಕಾ¯ದ ಚೌಕಟ್ಟು ಇಂಥಲ್ಲೆಲ್ಲ ಅಗತ್ಯ. ನಾವು ಬಿಡುವು ಮಾಡಿಕೊಂಡು ಬಂದದ್ದರ ಉದ್ದೇಶವೇ ವಿಫಲವಾದರೆ ಬಿಡುವು ಮಾಡಿಕೊಂಡದ್ದರ ಔಚಿತ್ಯವೇ ನಾಪತ್ತೆಯಾಗಿ ಬಿಡುತ್ತದೆ.
ದಿನನಿತ್ಯದ ಬದುಕಿನಲ್ಲೂ ಕಾಲದ ಬಳಕೆಯ ಕುರಿತು ಒಂದಿಷ್ಟು ತಿಳಿವಳಿಕೆ ಇರುವುದು ಒಳಿತು. ಹೇಳಿದ ಸಮಯಕ್ಕೆ ಹೇಳಿದಲ್ಲಿಗೆ ಹೋಗುವುದರಿಂದ ಹಿಡಿದು ಇಷ್ಟು ಹೊತ್ತಿಗೆ ಅಥವಾ ಇಂಥ ದಿನಕ್ಕೆ ಮುಗಿಸಿ ಕೊಡುತ್ತೇನೆಂದ ಕೆಲಸವನ್ನು ಅಷ್ಟು ಹೊತ್ತಿಗೆ ಮತ್ತು ಅಂಥ ದಿನಕ್ಕೆ ಮುಗಿಸಿ ಕೊಡುವ ಜವಾಬ್ದಾರಿ ಇರಬೇಕಾಗುತ್ತದೆ. ಹಾಗಲ್ಲದೇ ಸುಮ್ಮನೆ ಕಾಯಿಸುವ, ಸತಾಯಿಸುವ ಗುಣ ಬೆಳಸಿಕೊಂಡರೆ ನಾವು ಹಾಗೆ ಕಾಯುವ ಸತಾಯಿಸಿಕೊಳುವುದನ್ನು ತಾಳಿಕೊಳ್ಳಬೇಕಾಗುತ್ತದೆ. ಯಾರಾದರೂ ಬರುತ್ತೇನೆ, ಭೇಟಿಯಾಗುತ್ತೇನೆ ಎಂದು ತಿಳಿಸಿದಾಗ ಸಮಯವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆ ಸಮಯಕ್ಕೆ ಅವರು ಬಾರದಿದ್ದರೆ ನಾವು ನಮ್ಮ ಕೆಲಸಕ್ಕೆ ತೆರಳಿಬಿಡಬೇಕೇ ವಿನಃ ಅವರಿಗಾಗಿ ಅನವಶ್ಯಕವಾಗಿ ಕಾಯುತ್ತಾ ಕೂಡ್ರುವುದು ಯುಕ್ತವಲ್ಲ. ಅವರಿಗೇನೋ ಅವರ ಸಮಯಕ್ಕೆ ಬೆಲೆಯಿಲ್ಲದಿರಬಹುದು ಆದರೆ ನಮಗೆ ನಮ್ಮ ಸಮಯಕ್ಕೆ ಬೆಲೆಯಿದೆಯೆಂಬ ಎಂಬ ಪ್ರಜ್ಞೆ ಜಾಗೃತವಾಗಿದ್ದರೆ ಸಾಕು. ಒಮ್ಮೆ ನಮ್ಮ ಗುಣ ತಿಳಿದಾದ ಮೇಲೆ ಮತ್ತವರು ಅಂಥ ತಪ್ಪುಗಳನ್ನು ಬಹುಶಃ ಮಾಡಲು ಮುಂದಾಗುವುದಿಲ್ಲ.
ಕಾಲದ ಸದ್ಭಳಕೆಗೆ ಆದ್ಯತೆ ನೀಡಲು, ಆ ಬಳಕೆಯ ಕೌಶಲ್ಯ ಅಗತ್ಯ. ಯಾವ ಯಾವುದಕ್ಕೆ ಎಷ್ಟೆಷ್ಟು ಸಮಯವನ್ನು ಮೀಸಲಿಡಬಹುದೆಂದು ನಾವೇ ಗುರಿಯೊಂದನ್ನು ನಿಗದಿಪಡಿಸಿಕೊಳ್ಳುವುದು ಸರಿಯಾದ ಮಾರ್ಗ. ಬೇರೆಯವರು ನಿಗದಿಪಡಿಸಿಕೊಟ್ಟರೆ ಅದೆಂದೂ ನಮಗೆ ಹೊಂದಲಾರದು. ವಿದ್ಯಾರ್ಥಿಗಳಿಗಾದರೆ ಪ್ರತಿನಿತ್ಯ ಓದುವ ಅವಧಿ, ಆಟವಾಡುವ ಅವಧಿ ಹೀಗೆ ಒಂದು ನಿಗದಿ ಇರುವುದು ಒಳ್ಳೆಯದು. ಹಾಗಲ್ಲದೇ ಕೇವಲ ಪರೀಕ್ಷಾ ಸಮಯದಲ್ಲಿ ಸಂಪೂರ್ಣವಾಗಿ ಓದುವುದಕ್ಕೆ ಮಾತ್ರ ಸಮಯ ನಿಗದಿಯಾದರೆ ಆಟೋಟಗಳೇ ಆಗ ಇಲ್ಲದಂತಾದರೆ, ಒಂದು ರೀತಿಯ ಏಕತಾನತೆಯಿಂದ ಮಾನಸಿಕ ಒತ್ತಡಗಳಿಗೆ ತುತ್ತಾಗುವ ಸಂಭವವಿರುತ್ತದೆ. ಹಾಗಾಗಿ ಒತ್ತಡ ಮುಕ್ತವಾಗಿರಲು ವರ್ಷ ಪೂರ್ಣ ಒಂದು ನಿರ್ಧಿಷ್ಟ ಕಾಲ ಚೌಕಟ್ಟನ್ನು ಹಾಕಿ ಕೊಂಡಲ್ಲಿ ಸಾಧ್ಯ. ಶಿಕ್ಷಕರಿಗೂ ಇದನ್ನೆ ಅನ್ವಯಿಸುವುದಾದಲ್ಲಿ ಇಂತಿಷ್ಟು ಇಂತಿಷ್ಟು ತರಗತಿಗಳಲ್ಲಿ ಇಷ್ಟಿಷ್ಟು ಪಠ್ಯ ಮುಗಿಯಬೇಕೆಂಬ ನಿಯೋಜಕವಿದ್ದಲ್ಲಿ, ಕೊನೆಯಲ್ಲಿ ಒಟ್ಟಾರೆ ಮುಗಿಯಿತೆಂದು ಮುಗಿಸುವ ಅವಸರದ ಅಧ್ವಾನ ತಪ್ಪುತ್ತದೆ. ವಿದ್ಯಾóರ್ಥಿಗಳಿಗೂ ಒತ್ತಡ ತಪ್ಪುತ್ತದೆ. ಕೊನೆ ಘಳಿಗೆಯಲ್ಲಿ ಅವಸರ ಅವಸರವಾಗಿ ತುರುಕಿದ್ದು ಜೀರ್ಣವಾಗುವ ಸಂಭವವೇ ಕಡಿಮೆ.
ಕಾಲವನ್ನು ಗ್ರಹಿಸಿಯೇ ಊಟ, ತಿಂಡಿ, ನಿದ್ದೆ ಸಾಮಾನ್ಯ ಆದರೆ ಅನಿವಾರ್ಯವಾದ ಸಂಗತಿಗಳು ಜರುಗುವುದು ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗಬಲ್ಲದು. ‘ಊಟ ಬಲ್ಲವನಿಗೆ ರೋಗವಿಲ್ಲ. ಎಂಬ ನಾಣ್ನುಡಿಯನ್ನು ಸ್ವಲ್ಪ ಮಾರ್ಪಡಿಸಿ ಹೇಳುವುದಾದರೆ ಊಟದ ವೇಳೆ ಬಲ್ಲವನಿಗೆ ಗ್ಯಾಸ್ಟ್ರಿಕ್ ರೋಗವಲ್ಲ. ಯಾವುದು ಯಾವ ಯಾವ ಕಾಲದಲ್ಲಿ ಜರುಗಬೇಕೋ ಅದು ಅದೇ ಕಾಲದಲ್ಲಿ ಜರುಗುವಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿಯಾಗಬೇಕು. ಕಲಿಕೆಯ ಕಾಲದಲ್ಲಿ ಕಲಿಕೆ ಕೆಲಸದ ಕಾಲದಲ್ಲಿ ಕೆಲಸ, ವಿಶ್ರಾಂತಿಯ ಅವಧಿಯಲ್ಲಿ ವಿಶ್ರಾಂತಿ ಸಮಯವನ್ನು ಹೊಂದಿಸಿಕೊಳ್ಳಬೇಕಾದದ್ದು ನಾವೇ ವಿನಃ ಸಮಯವಲ್ಲ. ಒತ್ತಡ ಮುಕ್ತ ಬದುಕಿಗೆ ಇದು ಸೂಕ್ತ. ಇಂದಿನ ಯಾಂತ್ರೀಕೃತ ಬದುಕಲ್ಲಿ ಪ್ರತಿಯೊಂದಕ್ಕೂ ಧಾವಂತವಿರುವಾಗ, ಸುಧಾರಿಸಿಕೊಳ್ಳುವುದು ಕೂಡ ಸೂಕ್ತವಾದ ಸಂಗತಿ. ನಿರ್ಲಕ್ಷ್ಯ ತೋರಿದರೆ ಭವಿಷ್ಯದಲ್ಲಿ ಅದರ ಅಡ್ಡಪರಿಣಾಮಗಳನ್ನು ಎದುರಿಸಬೇಕಾದವರು ನಾವೇ ವಿನಃ ಬೇರೆಯವರಲ್ಲ, ಅದರ ನಿರ್ವಹಣೆಯ ಕೌಶಲ್ಯ ಕೂಡ ಕಲಿಯಬೇಕಾದ ಸಂಗತಿ.
ಎಲ್ಲಾ ವ್ಯಕ್ತಿಗಳೆದುರು ಇರುವ ಕಾಲ ಒಂದೇ, ಆದರೆ ಅದನ್ನು ಬಳಸುವ ಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಅವರವರ ನಡುವೆ ಏರಳಿತಗಳು ಉಂಟಾಗುತ್ತವೆ ಎನ್ನಬಹುದು. ಸೋಮಾರಿತನವೆನ್ನುವುದು ಜಾಡ್ಯ. ಈ ಜಾಡ್ಯಕ್ಕೆ ಬಲಿಯಾದವರು ಸದಾ ಗೊಣಗುತ್ತಿರುವುದು ಸಾಮಾನ್ಯ. ಯಾವುದಕ್ಕು ಸಮಯವೇ ಅವರಿಗೆ ಹೊಂದಣಿಕೆಯಾಗುವುದಿಲ್ಲ. ಕಿಂಚಿತ್ತೂ ಪರಿಶ್ರಮ ಪಡದೆ ಕಾಲದ ಕೌಶಲ್ಯ ಕರಗತವಾಗುವುದಿಲ್ಲ. ಪ್ರತಿಯೊಂದುರಲ್ಲೂ ವಿಳಂಬ. ವಿಳಂಬ ನೀತಿಗೆ ಒಳಪಟ್ಟ ವ್ಯಕ್ತಿಯಾಗಲಿ ಸಂಸ್ಥೆಯಾಗಲಿ, ಸಮಾಜವಾಗಲಿ ಉದ್ಧಾರವಾಗುವುದಿಲ್ಲ. ಆದಕ್ಕೆ ಒಂದು ಮಾತಿದೆ ‘Justice Delayed is justice denied’ ಅಂತ ನಮ್ಮ ನಡುವಿನ ಕಾನೂನು ವ್ಯವಸ್ಥೆಯಲ್ಲಿನ ವಿಳಂಬ ನೀತಿಯನ್ನು ನೋಡಿಯೆ ಈ ಮಾತು ಹುಟ್ಟಿದೆನಿಸುತ್ತದೆ. ಕಾಲಾದ ಬಳಕೆಯಲ್ಲಿ ಕೌಶಲ್ಯ ಹೊಂದಿದ್ದಲ್ಲಿ ಕೇಸುಗಳ ಇತ್ಯರ್ಥ ತ್ವರಿತವಾಗಲು ಸಾಧ್ಯ. ಹಾಗಾಲ್ಲದೆ ನ್ಯಾಯಕ್ಕಾಗಿ ಅಲೆದಾಡುವುದರಿಂದ ಕಕ್ಷಿದಾರರ ಕಾಲ, ಶ್ರಮ, ಹಣ ಎಲ್ಲವೂ ವ್ಯರ್ಥವಾಗುತ್ತದೆ. ಅದೇ ಕಾಲ, ಶ್ರಮ, ಹಣದ, ಉಳಿಕೆಯಾದಷ್ಟು ಅದನ್ನು ಬೇರೆಡೆಗೆ ಬಳಕೆ ಮಾಡಿ ಕಳುಹಿಸಬಹುದಾಗಿದೆ. ಕೆಲವೂಮ್ಮೆ ಕೇಸನ್ನು ಗೆದ್ದು ಪಡೆಯುವ ಪರಿಹಾರಕ್ಕಿಂತ ಕೇಸನ್ನೆ ಹಾಕದೇ ಉಳಿಸಿಕೊಳ್ಳುವ ಕಾಲ, ಶ್ರಮ, ಹಣವನ್ನು ಬೇರೆಯದರಲ್ಲಿ ತೊಡಗಿಸಿದ್ದರೆ ಹೆಚ್ಚಿನದನ್ನು ಪಡೆಯಬಹುದಾದ ಸಾಧ್ಯತೆಯನ್ನು ಕೂಡ ತಳ್ಳಿಹಾಕಲಾಗದು.
ನಾವು ಹಣವನ್ನು ಯಾವುದಕ್ಕಾದರು ಬಳಸುವಾಗ ಬಹಳ ಲೆಕ್ಕಾಚಾರ ಹಾಕುತ್ತವೆ. ಹಾಗಾದಾಗ ತಿರುಗಿ ಬಾರದ ಕಾಲದ ಬಳಕೆಯ ಕುರಿತು ದಿವ್ಯ ನಿರ್ಲಕ್ಷ ತಾಳುವುದು ಎಷ್ಟರ ಮಟ್ಟಿಗೆ ಸರಿ?
ಮತ್ತೆ ಈ ಕುರಿತು ಬರಿದೇ ಚಿಂತಿಸುತ್ತಿದ್ದರೆ ಕಳೆಯುತ್ತಿರುವ ಅಷ್ಟಷ್ಟೂ ಕಾಲ, ಕಾಲವಶರಾಗುವುದಕ್ಕೆ ಹತ್ತಿರ ಸರಿಯುತ್ತಿದ್ದಂತೆ. ‘ತೆಪ್ಪಾರ ಗೌಡ್ರು ಮುಂಡಾಸು ಸುತ್ತ ತನಕ ಮಂಜುಗುಣಿ ತೇರು ನೆಲೆನಿಂತಿತ್ತು’ ಎಂದು ನಮ್ಮ ಕಡೆ ಚಾಲ್ತಿಯಲ್ಲಿರುವ ಮಾತು. ಕಾಲದ ನಿರ್ವಹಣಾ ಕೌಶಲ್ಯದ ಕೊರತೆಯನ್ನು ಸಮರ್ಥವಾಗಿ ಹೇಳುವಂತದ್ದು ಇಂತಹ ಕೊರತೆಯ ನಿವಾರಣೆ ಸಾಧ್ಯವಾದರೆ ತೇರು ನೆಲೆ ನಿಲ್ಲುವುದರೊಳಗೆ ಹಗ್ಗಕ್ಕೆ ಕೈ ಹಚ್ಚಲು ಸಾದ್ಯವಾಗಬಹುದು!
ರವೀಂದ್ರ ಭಟ್ ಕುಳಿಬೀಡು
ಕಾಲ ನಿರ್ವಾಹಣಾ ಕೌಶಲ್ಯ
ಮೇಲೂರಿನ ಹೊಯ್ಸಳ ಬಡಾವಣೆಯ ಚಿತ್ರರೂಪಕಗಳು
ಬಡಾವಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಸಿರು ನಳನಳಿಸುತ್ತಿರಬೇಕು. ಆಹ್ಲಾದಕರ ವಾತಾವರಣ, ಜ್ಞಾನ ಬಂಡಾರ, ಸಾಧಕರ ಪ್ರೇರಣೆಯುಂಟುಮಾಡುವ ರೀತಿಯಲ್ಲಿಟ್ಟುಕೊಳ್ಳಲು ಕೆಲ ನಗರಗಳಲ್ಲಿ ಪಾಲಿಕೆಯ ವತಿಯಿಂದ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ.
ಆದರೆ ತಾಲ್ಲೂಕಿನ ಮೇಲೂರಿನ ಗ್ರಾಮದ ಮುತ್ತೂರು ರಸ್ತೆಯ ಹೊಯ್ಸಳ ಬಡಾವಣೆಯ ನಾಗರಿಕರು ಸ್ವಯಂಪ್ರೇರಿತರಾಗಿ ತಮ್ಮ ಬಡಾವಣೆಯನ್ನು ಮಾದರಿಯಾಗಿಸಿದ್ದಾರೆ. ಬಡಾವಣೆಗೆ ಹೋಗುವ ದಾರಿಯುದ್ದಕ್ಕೂ ಇರುವ ಆಸ್ಪತ್ರೆ ಕಾಂಪೋಂಡ್ ಗೋಡೆಯ ಮೇಲೆ ಸರ್.ಎಂ.ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಕುವೆಂಪು, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಗೌತಮ ಬುದ್ಧ, ದ.ರಾ.ಬೇಂದ್ರೆ, ಮಾಸ್ತಿ, ಕೈಲಾಸಂ, ತ್ರಿವೇಣಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರ ವರ್ಣಚಿತ್ರಗಳನ್ನು ಜೊತೆಯಲ್ಲಿ ಅವರ ಕುರಿತಾದ ಮಾಹಿತಿಯೊಂದಿಗೆ ಚಿತ್ರಿಸಲಾಗಿದೆ. ಗೋಡೆಯ ಮುಂದಿನ ಚರಂಡಿಯನ್ನು ಕಲ್ಲು ಚಪ್ಪಡಿಗಳಿಂದ ಮುಚ್ಚಿ, ಚಿತ್ರಗಳ ನಡುವೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು, ಅಲ್ಲಲ್ಲಿ ಪಕ್ಷಿಗಳಿಗೆ ಆಹಾರವಾದ ಧಾನ್ಯಗಳನ್ನು ಮತ್ತು ನೀರನ್ನು ಇಡಲು ಸ್ಟಾಂಡ್ಗಳನ್ನು ಇಡುವ ಯೋಜನೆ ರೂಪಿಸಲಾಗಿದೆ.
ವಿಶೇಷವೆಂದರೆ, ಒಂದೊಂದು ಚಿತ್ರಕ್ಕೂ ಬಡಾವಣೆಯ ಒಬ್ಬೊಬ್ಬರು ಹಣ ನೀಡಿದ್ದಾರೆ. ಗುಣಮಟ್ಟದಲ್ಲಿ ರಾಜಿಯಾಗದೆ ದಾರಿಯಲ್ಲಿ ಸಾಗುವವರು ಸಾಧಕರನ್ನು ಕಂಡು ಹೆಮ್ಮೆ ಪಡುವಂತೆ ಚಿತ್ರಗಳನ್ನು ಬಿಡಿಸಿ ಜೊತೆಗೆ ವಿವರಗಳನ್ನು ಕೊಡಲಾಗಿದೆ.
‘ಸ್ವಚ್ಛಭಾರತ್ ಅಭಿಯಾನ ಪ್ರಾರಂಭವಾದಾಗ ನಮ್ಮ ಬಡಾವಣೆಯ ಜನರಲ್ಲೂ ಈ ಬಗ್ಗೆ ಚಿಂತನೆ ನಡೆದುದರ ಫಲವಿದು. ಹೊಸಕೋಟೆಯ ಚಿರು ಆರ್ಟ್ಸ್ನ ಭಾನು ಎಂಬ ಕಲಾವಿದನನ್ನು ಕರೆಸಿ ಮೊದಲು ನಮ್ಮ ಬಡಾವಣೆಯ ಹೆಸರನ್ನು ಜೊತೆಯಲ್ಲಿ ಹೊಯ್ಸಳ ಲಾಂಚನವನ್ನೂ ಚಿತ್ರಿಸಲು ಹೇಳಿದೆವು. ಬಡಾವಣೆಯ ನಾಗರಿಕರು ಸ್ವಪ್ರೇರಣೆಯಿಂದ ತಾವೊಂದು ಚಿತ್ರಕ್ಕೆ ನಾವೊಂದು ಚಿತ್ರಕ್ಕೆ ಎಂಬಂತೆ ಹಣ ನೀಡಲು ಮುಂದಾಗಿ ತಲಾ 1,200 ರೂಪಾಯಿಗಳು ಕೊಟ್ಟು ವಿವಿಧ ಮಹನೀಯರ ಚಿತ್ರಗಳನ್ನು ಅವರ ಬಗ್ಗೆ ಮಾಹಿತಿಯನ್ನೂ ಚಿತ್ರಿಸಲಾಯಿತು. ನಮ್ಮ ಅದೃಷ್ಟಕ್ಕೆ ಬಡಾವಣೆಯ ದಾರಿಯಲ್ಲಿ ಆಸ್ಪತ್ರೆಯ ಗೋಡೆಯಿದ್ದು, ಚಿತ್ರ ಬರೆಸಲು ಅನುಕೂಲವಾಯಿತು. ಇನ್ನೂ ಬರೆಸಲು ಆಸಕ್ತರಿದ್ದರೂ ಕಾಂಪೋಂಡ್ ಗೋಡೆಯಿದ್ದಷ್ಟು ಮಾತ್ರ ಬರೆಸಲು ಸಾಧ್ಯವಾಗಿದೆ. ಇನ್ನು ಮುಂದಿನ ಹಂತವಾಗಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು, ಅಲ್ಲಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯಗಳನ್ನು ಮತ್ತು ನೀರನ್ನು ಇಡಲು ಸ್ಟಾಂಡ್ಗಳನ್ನು ಇಡುವ ಯೋಜನೆ ರೂಪಿಸಲಾಗಿದೆ. ಇದು ಒಬ್ಬರ ಕೆಲಸವಲ್ಲ ಹಲವರ ಪರಿಶ್ರಮ ಈ ಕಾರ್ಯದಲ್ಲಿದೆ’ ಎಂದು ಬಡಾವಣೆಯ ವ್ಯಕ್ತಿಯೊಬ್ಬರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಸಮಾಜದಿಂದ ಪಡೆದದ್ದು ಸಮಾಜಕ್ಕೆ ನೀಡಿ
ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ವಿಜ್ಞಾನ ತಂತ್ರಜ್ಞಾನ ಮುಂದುವರೆದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನ ನಿತ್ಯದ ಒತ್ತಡ ಜೀವನದಲ್ಲಿ ಹುಟ್ಟದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮಗಳು ಇದೀಗ ಅಗತ್ಯವಿದೆ. ಈ ಮೂಲಕ ಶಾಲೆ ಹಾಗೂ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಯುವಕ ಯುವತಿಯರು ಹಾಗೂ ಶಾಲಾ ಮಕ್ಕಳಿಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾದೇವರಾಜ್ ಹಾಗೂ ಸಹೋದರರು ನೀಡಿದ ಸಮವಸ್ತ್ರಗಳನ್ನು ವಿತರಿಸಲಾಯಿತು.
ಶಾಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕರಾದ ಕೆ.ಮುನಿಯಪ್ಪ, ಎಸ್.ಎನ್.ರಂಗನಾಥ್, ಕೆ.ಎಸ್.ಸುಗುಣ, ನಾರಾಯಣಸ್ವಾಮಿ, ಸಧ್ಯ ಮುಖ್ಯ ಶಿಕ್ಷಕರಾಗಿರುವ ಕೆ.ಮಂಜುನಾಥ್, ಸಹಶಿಕ್ಷಕಿ ಎಚ್.ಎಂ.ಸುಜಾತರವರನ್ನು ಹಾಗೂ ಇದೆ ಶಾಲೆಯಲ್ಲಿ ಓದಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಇಇಯಾಗಿರುವ ಎಂ.ವೆಂಕಟೇಶಪ್ಪ, ಬಳ್ಳಾರಿಯಲ್ಲಿ ಶಿಕ್ಷಕರಾಗಿರುವ ಸಿ.ವಿ.ಶಿವಣ್ಣ, ಎಸ್.ನಾರಾಯಣಸ್ವಾಮಿರವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಎನ್.ಹರಿಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷ ದ್ಯಾವಪ್ಪ, ಗುಚ್ಚ ಸಂಪನ್ಮೂಲ ವ್ಯಕ್ತಿ ಪ್ರಸನ್ನಕುಮಾರ್, ಶಿಕ್ಷಕರ ಸಂಘದ ನಿರ್ದೆಶಕ ಮುನಿನಾರಾಯಣಪ್ಪ, ರಾಜ್ಯ ಪ್ರಶಸ್ತಿ ಶಿಕ್ಷಕ ಆರ್.ಮುನಿವೆಂಕಟಸ್ವಾಮಿ, ಕಂದಾಯ ನಿರೀಕ್ಷಕ ಸುಬ್ರಮಣಿ, ಗ್ರಾಮ ಲೆಕ್ಕಿಗ ಮುನಿಶಾಮಿ ಇನ್ನಿತರರು ಹಾಜರಿದ್ದರು.
ಗ್ರೀಷ್ಮ ಋತು
ಈ ಋತುವಿನಲ್ಲಿ ಸೂರ್ಯನ ತಾಪ ಅಧಿಕವಾಗಿರುವುದರಿಂದ ಅಲ್ಲದೆ ಒಣ ಹವೆ ಇರುವುದರಿಂದ ದೇಹದಲ್ಲಿ ವಾತ ಪ್ರಕೋಪವಾಗುತ್ತದೆ. ಆಯಾಸ, ಸುಸ್ತು, ಬೆವರು, ದೇಹ ದೌರ್ಗಂಧ್ಯ ಇವೆಲ್ಲವು ಈ ಋತುವಿನ ಲಕ್ಷಣಗಳು, ಅತಿಯಾಗಿ ದೇಹ ಬೆವರುವುದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆ ಕಂಡು ಬರುತ್ತದೆ. ಆದ್ದರಿಂದ ದ್ರವ ಪ್ರಧಾನವಾಗಿರುವ, ತಣ್ಣಗಿನ, ಸಿಹಿ ರಸವನ್ನು ಹೊಂದಿರುವ ಜೀರ್ಣಕ್ಕೆ ಹಗುರವಾದ ಜಿಡ್ಡಿನ ಅಂಶದಿಂದ ಕೂಡಿದ ಆಹಾರ ಸೇವನೆ ಮಾಡಬೇಕು. ಎನ್ನುವುದು ಆಯುರ್ವೇದ ಆಚಾರ್ಯರ ಅಭಿಮತ.
ಆಹಾರ
1. ಈ ಋತುವಿನಲ್ಲಿ ಉಪ್ಪು ಹುಳಿ, ಖಾರ ಹಾಗೂ ಬಿಸಿಯಾದ ಆಹಾರ ಪದಾರ್ಥಗಳ ಸೇವನೆ ವಜ್ರ್ಯ.
2. ತಣ್ಣಗಿನ, ಸಿಹಿ ಪ್ರಧಾನವಾಗಿರುವ, ದ್ರವ ಪದಾರ್ಥಗಳಾದ ಕೋಕಂ ಪಾನಕ, ಲಿಂಬೆ ಹಣ್ಣಿನ ಪಾನಕ, ಸೊಗದೆ ಬೇರಿನ ಪಾನಕ ಹಾಗೂ ಮಾವಿನ ಹಣ್ಣಿನ ಪಾನಕ ದಾಳಿಂಬೆ ಹಣ್ಣಿನ ಪಾನಕಗಳು ಈ ಋತುವಿನಲ್ಲಿ ಉತ್ತಮ.
3. ಅರಳಿನ ಹಿಟ್ಟನ್ನು ನೀರಿಗೆ ಬೆರೆಸಿ ಅದಕ್ಕೆ ಒಂದರಿಂದ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಿ, ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.
4. ಮೊಸರಿನಿಂದ ತಯಾರಿಸಿದ ಶ್ರೀಖಂಡ ಕೂಡ ಒಂದು ಒಳ್ಳೆಯ ಆಹಾರ.
5. ದ್ರಾಕ್ಷಿ, ಖರ್ಜೂರ, ಚಿಕ್ಕು ಹಣ್ಣುಗಳಿಂದ ತಯಾರಿಸಿದ ಪಾನಕ ಕೂಡ ಒಳ್ಳೆಯದು.
6. ಸಿಹಿ ಹಣ್ಣುಗಳಿಂದ ತಯಾರಿಸಿದ ಮಿಲ್ಕ್ ಶೇಕ್ ಕೂಡ ಹಿತಕರ. (ಹುಳಿ ಹಣ್ಣನ್ನು ಹಾಲಿಗೆ ಸೇರಿಸಕೂಡದು)
7. ಸೌತೆಕಾಯಿ, ಕುಂಬಳಕಾಯಿ, ಸೀಮೆ ಬದನೆಕಾಯಿ, ಮಂಗಳೂರು ಸೌತೆ, ಹೀರೆಕಾಯಿ, ಪಡುವಲಕಾಯಿ ಇತ್ಯಾದಿ ತರಕಾರಿಗಳನ್ನು ಬಳಸಬಹುದು. ಗಡ್ಡೆ, ಗೆಣಸುಗಳನ್ನು ಬಳಸದಿದ್ದರೆ ಒಳ್ಳೆಯದು.
8. ಜೀರಿಗೆ, ಮೆಂತೆ, ಶುಂಠಿ, ಬೆಳ್ಳುಳ್ಳಿ ಇತ್ಯಾದಿಗಳಿಂದ ತಂಬುಳಿಗಳನ್ನು ತಯಾರಿಸಿ ಊಟದಲ್ಲಿ ಬಳಸಬಹುದು. ಇವು ವಾತ ಶಮನವನ್ನು ಮಾಡಲು ಸಹಾಯಕಾರಿ.
9. ಮಜ್ಜಿಗೆಗೆ ನೀರನ್ನು ಬೆರೆಸಿ ಬೆಲ್ಲ ಅಥವಾ ಸಕ್ಕರೆಯೊಂದಿಗೆ ಸೇವಿಸುವುದು ಉತ್ತಮ.
ವಿಹಾರ
1. ಅತಿಯಾದ ವ್ಯಾಯಾಮ, ಅತಿಯಾಗಿ ಬಿಸಿಲಿನಲ್ಲಿ ಓಡಾಡುವುದು ಸಲ್ಲದು.
2. ಹಗಲು ಸ್ವಲ್ಪ ಹೊತ್ತು ಕುಳಿತ ಭಂಗಿಯಲ್ಲಯೇ ನಿದ್ದೆ ಮಾಡುವುದು ಉತ್ತಮ.
3. ಸ್ನಾನದ ನಂತರ ಕರ್ಪೂರ, ಚಂದನ ಇತ್ಯಾದಿ ಸುಗಂಧ ದ್ರವ್ಯಗಳನ್ನು ಮೈಗೆ ಲೇಪಿಸಿಕೊಳ್ಳುವುದು ಹಿತಕರ.
4. ಉದ್ಯಾನವನದಲ್ಲಿ ವಿಹರಿಸುವುದು ಹಿತಕರ.
ಡಾ. ನಾಗಶ್ರೀ ಕೆ.ಎಸ್.
ಕಾನೂನು ಅರಿವು ನೆರವು ಕಾರ್ಯಕ್ರಮ
ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಮತ್ತು ಹೆಣ್ಣು ಭ್ರೂಣ ಹತ್ಯೆ ನಿಷೇಧದಂತಹ ಕಾಯ್ದೆಗಳು ಜಾರಿಯಲ್ಲಿದ್ದರೂ ಮಹಿಳೆಗೆ ಶೋಷಣೆ ತಪ್ಪಿಲ್ಲ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಾನೂನು ಅರಿವು ಅತ್ಯಗತ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರಿಗಾಗಿ ಇರುವ ಸೌಲಭ್ಯಗಳುಳ್ಳ ಕಾನೂನಿನಿಂದ ಮಹಳೆಯರು ಉತ್ತಮ ಜೀವನ ನಡೆಸಬಹುದಾಗಿದೆ. ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಶೋಷಣೆಗೆ ಒಳಗಾದ ಮಹಿಳೆಗೆ ಯಾರಿಂದಲೂ ಸಹಕಾರ ಸಿಗದಿದ್ದಾಗ ಆಕೆ ನೇರವಾಗಿ ನ್ಯಾಯಾಲಯಕ್ಕೆ ಬಂದು ಮನವಿ ಸಲ್ಲಿಸಬಹುದು. ಅಂತಹ ಮಹಿಳೆಗೆ ಕಾನೂನು ಸೇವಾ ಸಮಿತಿ ಮೂಲಕ ಉಚಿತವಾಗಿ ನ್ಯಾಯಾಂಗ ಸೇವೆ ಒದಗಿಸಲಾಗುವುದು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮುಕ್ತವಾಗಿ ಕರ್ತವ್ಯ ನಿರ್ವಹಿಸಿ ಸ್ವತಂತ್ರ್ಯ ಜೀವನ ನಡೆಸುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್, ಅಪರ ಸಿವಿಲ್ ನ್ಯಾಯಾಧೀಶರಾದ ಎನ್.ಎ. ಶ್ರೀಕಂಠ, ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ನಾರಾಯಣಪ್ಪ, ಸುಬ್ರಮಣ್ಯಪ್ಪ, ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ತಾಲ್ಲೂಕು ಸಮಿತಿ
ಮೌಡ್ಯ ಮತ್ತು ಅಭಿವೃದ್ದಿ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು, ಅದನ್ನು ತಡೆಯುವುದು ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಉದ್ದೇಶ ಮಾನವ ಹಕ್ಕುಗಳ ಹಿತರಕ್ಷಣಾ ರಾಜ್ಯ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ .ಜಿ. ಹೊಸ್ಕೋಟೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಶಿಡ್ಲಘಟ್ಟದಲ್ಲಿ ತಾಲ್ಲೂಕು ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ನಂತರ ಅವರು ಮಾತನಾಡಿದರು.
ಸಮಿತಿಯ ನಿಬಂಧನೆಗನುಗುಣವಾಗಿ, ಸಂಘಟನೆ, ಸಮಾಜಮುಖಿ ಕಾರ್ಯಗಳನ್ನು ನಡೆಸುವುದಾಗಿ ಹೇಳಿದರು.
ಶೋಷಣೆ, ಅವ್ಯವಹಾರ, ಬಡ ಕೂಲಿ ಕಾರ್ಮಿಕರು, ಮಹಿಳಾ ಸ್ವಾತಂತ್ರ್ಯ, ಮುಂತಾದ ಜನಪರ ಕಾಳಜಿಯುಕ್ತ ಹೋರಾಟಗಳು ನಮ್ಮದಾಗಲಿವೆ. ಹಲವೆಡೆ ಬಹುಕೋಟಿ ಹಗರಣಗಳನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಸಂಗಟನೆ ಯಶಸ್ವಿಯಾಗಿದೆ ಎಂದು ನುಡಿದರು.
ಗಂಗಾಧರಪ್ಪ(ತಾಲ್ಲೂಕು ಗೌರವಾಧ್ಯಕ್ಷ), ನರಸಿಂಹಮೂರ್ತಿ(ತಾಲ್ಲೂಕು ಅಧ್ಯಕ್ಷ), ಉಪಾಧ್ಯಕ್ಷರಾಗಿ ಸಿಎಚ್.ಆಂಜಿನಪ್ಪ, ಕೆ.ಎಂ.ನಾರಾಯಣಸ್ವಾಮಿ(ಪ್ರಧಾನ ಕಾರ್ಯದರ್ಶಿ), ಬಿ.ನರಸಿಂಹಪ್ಪ(ಖಜಾಂಚಿ), ಜಿ.ಎಂ.ಜನಾರ್ಧನ್(ಸಹ ಕಾರ್ಯದರ್ಶಿ), ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಎಸ್.ಗಿರೀಶ್ ನಾಯಕ್, ಅಂಬರೀಷ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗೇಂದ್ರಪ್ಪ, ಕೃಷ್ಣಮೂರ್ತಿ, ಅನ್ವರ್, ಯುವ ಸಮಿತಿ ಅಧ್ಯಕ್ಷರಾಗಿ ಸಿ.ಎನ್.ಪ್ರಶಾಂತ್ ಆಯ್ಕೆಯಾಗಿದ್ದಾರೆ.
ರಾಜ್ಯ ಸಮಿತಿ ಅಧ್ಯಕ್ಷ ಎಂ.ಹನುಮಯ್ಯ, ಖಜಾಂಚಿ ಮುನಿಕೃಷ್ಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ವೀರಬ್ರಹ್ಮೇಂದ್ರಸ್ವಾಮಿಯವರ ಆರಾಧನೆ
ನಗರದ ಒಂದನೇ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಮಂಗಳವಾರ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಲಿ, ಕಾಳಿಕಾಂಬ ಕಮಠೇಶ್ವರ ಯುವಕ ಮಂಡಲಿ ವತಿಯಿಂದ ಪೋತಲೂರು ವೀರಬ್ರಹ್ಮೇಂದ್ರಸ್ವಾಮಿಯವರ ಆರಾಧನೆ ಮತ್ತು ಸಾಮೂಹಿಕ ಉಪನಯನಗಳನ್ನು ನಡೆಸಲಾಯಿತು.
ಮೂಲ ವಿಗ್ರಹಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಕಳಾಕರ್ಶನದ ಯಜ್ಞ, ಹೋಮ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು.
‘ಚಿನ್ನ, ಬೆಳ್ಳಿ, ಮರಗೆಲಸ, ಕಮ್ಮಾರಿಕೆ, ಶಿಲ್ಪಕಲೆ ಮತ್ತಿತರ ಕುಶಲಕರ್ಮಿ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರಿಂದ ಸಿಗುವ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ’ ಎಂದು ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ವೀರಬ್ರಹ್ಮಾಚಾರಿ ಈ ಸಂದರ್ಭದಲ್ಲಿ ತಿಳಿಸಿದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್ಯ, ದಿಬ್ಬೂರಹಳ್ಳಿ ಈಶ್ವರಾಚಾರ್ಯ, ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ, ಕಾಳಿಕಾಂಬ ಕಮಠೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರ್ಯ, ಉಪಾಧ್ಯಕ್ಷ ಸುಂದರಾಚಾರ್ಯ, ಕೃಷ್ಣಾಚಾರ್ಯ, ಆರ್.ಜಗದೀಶ್ಕುಮಾರ್, ಸುಬ್ರಹ್ಮಣ್ಯಾಚಾರ್ಯ, ಟಿ.ವಿ.ಬ್ರಹ್ಮಾಚಾರ್ಯ, ಶ್ರೀನಿವಾಸಾಚಾರ್ಯ, ಕಲಾವತಮ್ಮ, ಚಂದ್ರಾಚಾರ್ಯ, ಗೋವಿಂದಮ್ಮ, ಷರತ್ಬಾಬು, ಪ್ರಧಾನ ಅರ್ಚಕ ಎ.ಜಿ.ಮುನೀಶ್ವರಾಚಾರ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸೌರಮಂಡಲದಲ್ಲೀಗ ಬರೀ ಎಂಟು ಗ್ರಹಗಳು
ಸೌರವ್ಯೂಹದಲ್ಲೆಷ್ಟು ಗ್ರಹಗಳಿವೆ? ಈ ಪ್ರಶ್ನೆ ಕೇಳುತ್ತಿದ್ದಂತೆ ’ಒಂಭತ್ತು ಗ್ರಹಗಳು: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚ್ಯೂನ್, ಪ್ಲೂಟೋ’ ಎಂಬುದಾಗಿ ಒಂದೇ ಉಸಿರಿಗೆ ಪಟಪಟ ಹೇಳಿಬಿಡುತ್ತೀರಿ, ಅಲ್ಲವೆ? ಆದರೀಗ ನಮ್ಮನಿಮ್ಮೆಲ್ಲರ ವಿಜ್ಞಾನವನ್ನು ಸ್ವಲ್ಪ ತಿದ್ದುಪಡಿ ಮಾಡುವ ದಿನಗಳು ಬಂದಿವೆ. ಸೂರ್ಯನನ್ನು ಸುತ್ತುವ ಗ್ರಹಗಳು ಎಂಟು. ಇನ್ನುಮುಂದೆ ಪ್ಲೂಟೋವನ್ನು ಗ್ರಹವೆಂದು ಕರೆಯುವ ಹಾಗಿಲ್ಲ.
’ಅಂತರ್ರಾಷ್ಟ್ರೀಯ ಖಗೋಳ ವಿಜ್ಞಾನ ಸಂಸ್ಥೆ’ ಝೆಕ್ ಗಣರಾಜ್ಯದ ಪ್ರೇಗ್ನಲ್ಲಿ ನಡೆದ ಎಂಟನೆಯ ಮಹಾ ಅಧಿವೇಶನದಲ್ಲಿ ನಡೆದ ಚರ್ಚೆಗಳ ನಂತರ ’ಗ್ರಹ’ ಎಂಬ ಶಬ್ದದ ವ್ಯಾಖ್ಯೆಯನ್ನು ಘೋಷಿಸಿತು. ಈ ಹೊಸ ವ್ಯಾಖ್ಯೆಯನ್ವಯ ಸೌರವ್ಯೂಹದ ಕಡೆಯ ಮತ್ತು ಪುಟ್ಟ ಗ್ರಹ ಪ್ಲೂಟೋ ತನ್ನ ಸದಸ್ಯತ್ವವನ್ನು ಕಳೆದುಕೊಂಡಿದೆ. ೭೫ ದೇಶಗಳ ೨೫೦೦ ಖಗೋಳ ವಿಜ್ಞಾನಿಗಳು ಪ್ರೇಗ್ನಲ್ಲಿ ಎರಡು ವಾರಗಳ ಚರ್ಚೆ ನಡೆಸಿದ ನಂತರ ನಮ್ಮ ಸೂರ್ಯನಿಗೀಗ ಗ್ರಹಗಳು ಒಂಭತ್ತಲ್ಲ, ಬರೀ ಎಂಟು ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಎರಡು ವಾರಗಳ ಹಿಂದೆ ಆರಂಭಗೊಂಡ ಆ ಸಭೆಯ ಪ್ರಾರಂಭದಲ್ಲಿ ಸೌರಮಂಡಲದ ಗ್ರಹಗಳ ಗುಂಪಿಗೆ ಸಿರಿಸ್, ಝೇನಾ ಮತ್ತು ಕ್ಯಾರನ್ ಈ ಮೂರನ್ನು ಸೇರ್ಪಡೆಗೊಳಿಸಬೇಕೆಂಬ ಪ್ರಸ್ತಾಪವನ್ನು ಮುಂದಿಡಲಾಗಿತ್ತು. ’ಗ್ರಹ’ ಎಂದರೇನು? ಈ ಪ್ರಶ್ನೆಗೆ ಸಮರ್ಪಕವಾದ, ವೈಜ್ಞಾನಿಕವಾದ ಹಾಗೂ ಸರ್ವಸಮ್ಮತ ವ್ಯಾಖ್ಯೆಯೊಂದನ್ನು ನೀಡುವ ಜವಾಬ್ದಾರಿಯೂ ಸಂಸ್ಥೆಯ ಹೆಗಲ ಮೇಲಿತ್ತು.
ಇನ್ನೂ ಮೂರು ಗ್ರಹಗಳು ನಮ್ಮ ಸೂರ್ಯನ ಬಳಗಕ್ಕೆ ಸೇರುವವೆ? ಇಡೀ ಜಗತ್ತೇ ಪ್ರೇಗ್ನ ಸಭೆ ಕೈಗೊಳ್ಳಲಿರುವ ನಿರ್ಣಯವನ್ನು ಎದುರು ನೋಡುತ್ತಿತ್ತು.
ಖಗೋಳ ಶಾಸ್ತ್ರಜ್ಞರ ಸಂಘ ತನ್ನ ಹೊಸ ನಿರ್ಣಯಗಳನ್ನು ಜನರ ಮುಂದಿಟ್ಟಿದೆ. ’ಗ್ರಹ’ದ ಹೊಸ ವ್ಯಾಖ್ಯೆಯನ್ನು ಈಗಿರುವ ಗ್ರಹಗಳಿಗೊಂದೇ ಅಲ್ಲ, ಮುಂದೆ ಕಂಡುಹಿಡಿಯಲಾಗುವ ಆಕಾಶಕಾಯಗಳಿಗೂ ಅನ್ವಯಿಸುವ ರೀತಿಯಲ್ಲಿ ರೂಪಿಸಲಾಗಿದೆ. ಇದರ ಪರಿಣಾಮವಾಗಿ ಪ್ಲೂಟೋಕ್ಕೆ ಗ್ರಹದ ಪಟ್ಟದಿಂದ ಕೊಕ್ ಕೊಡಲೇಬೇಕಾಗಿದೆ.
’ಗ್ರಹ’ದ ನವವ್ಯಾಖ್ಯೆಯ ಪ್ರಕಾರ ಅದು ಸೂರ್ಯನನ್ನು ಸುತ್ತುತ್ತಿರುವ ಗುಂಡನೆಯ ಆಕಾಶಕಾಯವಾಗಿರಬೇಕು, ಗುರುತ್ವಬಲದ ಮೂಲಕ ತನ್ನ ಗೋಳಾಕೃತಿಯನ್ನು ಉಳಿಸಿಕೊಳ್ಳುವಷ್ಟು ದ್ರವ್ಯರಾಶಿಯನ್ನು ಒಳಗೊಂಡಿರಬೇಕು, ಅದರ ಪಥಕ್ಕೆದುರಾಗಿ ಎಡತಾಕುವ ಇತರ ಆಕಾಶಕಾಯಗಳಿರಬಾರದು.
ಈ ನಿಬಂಧನೆಗಳೆಲ್ಲವನ್ನೂ ಪ್ಲೂಟೋ ಒಂದುಳಿದು ಉಳಿದ ಎಂಟೂ ಗ್ರಹಗಳು ಪಾಲಿಸುತ್ತಿವೆ. ಸೂರ್ಯನನ್ನು ಸುತ್ತುವಾಗ ಒಂದು ಪ್ರದಕ್ಷಿಣೆಯಲ್ಲಿ ಎರಡೆರಡು ಬಾರಿ ನೆಪ್ಚೂನಿನ ಕಕ್ಷೆಯೊಳಗೆ ಪ್ರವೇಶಿಸುವ ಪ್ಲೂಟೋದ ಪಥಚಲನವೇ ಅದನ್ನು ಗ್ರಹಗಳ ಬಣದಿಂದ ಉಚ್ಛಾಟಣೆಗೊಳಿಸಲು ಕಾರಣ. *
ನಮ್ಮ ಸೂರ್ಯನ ಬಳಗದ ಇತರ ಸದಸ್ಯರುಗಳಿಗೂ ಸಂಸ್ಥೆ ಹೊಸ ನಾಮಕರಣಗಳನ್ನು ಮಾಡಿದೆ. ಸೂರ್ಯನನ್ನು ಸುತ್ತುವ ಗುಂಡನೆಯ ಮತ್ತು ಉಪಗ್ರಹವಲ್ಲದ ಆಕಾಶಕಾಯಗಳನ್ನು ’ಕುಬ್ಜಗ್ರಹ’ಗಳೆಂಬ ಹೆಸರಿನಿಂದ ಕರೆಯಲಾಗುವುದು.(ನಾವಿವನ್ನು ಏನೆಂದು ಕರೆಯೋಣ? ’ಕುಬ್ಜಗ್ರಹಗಳು’, ’ಮರಿಗ್ರಹಗಳು’ ಅಥವಾ ’ಕಿರುಗ್ರಹಗಳು’?) ಉಳಿದೆಲ್ಲವೂ ಅಂದರೆ ಧೂಮಕೇತುಗಳು, ಉಪಗ್ರಹಗಳು ಹಾಗೂ ಇನ್ನಿತರ ಚಿಕ್ಕ, ಪುಟ್ಟ ಆಕಾಶಕಾಯಗಳೆಲ್ಲವೂ ’ಇತರೇ ಆಕಾಶಕಾಯಗಳು’ ಎಂಬ ಗುಂಪಿಗೆ ಸೇರಲಿವೆ. ಹೀಗಾಗಿ ಈಗ ಪ್ಲೂಟೋ, ಸಿರಿಸ್ ಮತ್ತು ಝೇನಾ ಕಿರುಗ್ರಹಗಳೆನಿಸಿದರೆ ಕ್ಯಾರನ್ ನಮ್ಮ ಚಂದ್ರನಂತೆ ’ಸೌರಮಂಡಲದ ಇತರೆ ಆಕಾಶಕಾಯಗಳು’ ಎಂಬ ಪಟ್ಟಿಗೆ ಸೇರಿದೆ. ಇವೆಲ್ಲವೂ ಒಟ್ಟೂ ಸೇರಿ ’ಪ್ಲೂಟಾನ್’ಗಳೆನಿಸುತ್ತವೆ.
ಕಳೆದ ಅಗಸ್ಟ್ ಇಪ್ಪತ್ತನಾಲ್ಕರಂದು ಸಭೆಯ ನಿರ್ಧಾರಗಳು ಪ್ರಕಟವಾದಾಗ ’ಮೂರು ಹೊಸ ಹೆಸರುಗಳನ್ನು ಮನನ ಮಾಡಬೇಕಿಲ್ಲ, ಬದಲಾಗಿ ಸೌರಮಂಡಲದಲ್ಲೀಗ ಎಂಟೇ ಗ್ರಹಗಳು ಎಂಬುದನ್ನು ನೆನಪಿಟ್ಟರೆ ಸಾಕು’ ಎಂದು ಜಗತ್ತಿನಾದ್ಯಂತದ ಪಠ್ಯಪುಸ್ತಕ, ಜ್ಞಾನ – ವಿಜ್ಞಾನ ಕೋಶಗಳನ್ನು ಬರೆಯುವವರು (ವಿಶ್ವಕೋಶದ ೨೦೦೭ರ ಆವೃತ್ತಿ ಖಗೋಳ ಶಾಸ್ತ್ರಜ್ಞರ ನಿರ್ಣಯಕ್ಕಾಗಿ ತನ್ನ ಮುದ್ರಣವನ್ನು ಮುಂದೂಡಿತ್ತು), ಪಾಠ ಮಾಡುವವರು, ಸಂಶೋಧಕರು ಅಷ್ಟೇ ಏಕೆ ಸೌರವ್ಯೂಹ ಮಾದರಿಯ ಆಟಿಗೆ ವಸ್ತುಗಳ ತಯಾರಕರು ನಿಟ್ಟುಸಿರು ಬಿಟ್ಟಿರಲಿಕ್ಕೆ ಸಾಕು.
ಸಿರಿಸ್: ೧೮೦೧ರಲ್ಲಿ ಸಿರಿಸ್ ಅನ್ನು ಕಂಡುಹಿಡಿದಾಗ ಸೂರ್ಯನನ್ನು ಸುತ್ತುವ ಗೋಳಾಕಾರದ ಆಕಾಶಕಾಯವೆಂದು ಅದನ್ನು ಗ್ರಹಗಳ ಗುಂಪಿಗೆ ಸೇರಿಸಲಾಯಿತು. ಮುಂದೆ ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಅನೇಕ ಆಕಾಶ ಕಾಯಗಳ ಗುಂಪಿನಲ್ಲಿ ಸಿರಿಸ್ ಕೂಡ ಒಂದು ಎಂಬುದು ತಿಳಿದಾಗ ಅದನ್ನು ಗ್ರಹದಿಂದ ಕ್ಷುದ್ರಗ್ರಹಗಳ ಪಟ್ಟಿಗೆ ಸೇರಿಸಲಾಯಿತು. ಈಗ ಪ್ಲೂಟೋ, ಝೇನಾಗಳ ಗಾತ್ರಕ್ಕೆ ಹೋಲಿಸಿ ಮತ್ತೊಮ್ಮೆ ಸಿರಿಸ್ ಅನ್ನು ಗ್ರಹವೆಂದು ಕರೆಯುವ ಸನ್ನಾಹ ನಡೆದಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಗುಂಡಗಿರುವ ಸಿರಿಸ್ ಒಂದು ಕಿರುಗ್ರಹವಷ್ಟೆ.
ಝೇನಾ: ತಂತ್ರಜ್ಞಾನ ಮುಂದುವರೆದಂತೆ ಹೊಸ ನಮೂನೆಯ, ಉಚ್ಚ ಗುಣಮಟ್ಟದ ದೂರದರ್ಶಕಗಳು, ಆಕಾಶಕಾಯಗಳ ಸ್ವರೂಪವನ್ನು ವಿಶ್ಲೇಷಿಸುವ ಕಂಪ್ಯೂಟರುಗಳು ಬಳಕೆಗೆ ಬಂದಿವೆ. ೨೦೦೩ರಲ್ಲಿ ಬ್ರೌನ್ ಎಂಬ ವಿಜ್ಞಾನಿ ಸೂರ್ಯನಿಂದ ೯೦೦ಕೋಟಿ ಮೈಲು ದೂರದಲ್ಲಿ ಸೂರ್ಯನನ್ನು ಸುತ್ತುತ್ತಿರುವ ಪ್ಲೂಟೋಕ್ಕಿಂತ ದೊಡ್ಡದಾದ ಹೊಸ ಆಕಾಶ ಕಾಯವೊಂದನ್ನು ಪತ್ತೆಹಚ್ಚಿದ. ಉಳಿದ ಗ್ರಹಗಳ ಲಕ್ಷಣಗಳನ್ನು ಹೋಲುತ್ತಿದ್ದುದರಿಂದ ಮತ್ತು ಪ್ಲೂಟೋಕ್ಕಿಂತಲೂ ದೊಡ್ದದಿದ್ದುದರಿಂದ ಅದನ್ನೂ ಸೂರ್ಯನ ಬಳಗಕ್ಕೆ ಸೇರಿಸುವುದೆಂತಾಯಿತು. ಯುಬಿ ೧೦೩ ಎಂಬ ಹಣೆಪಟ್ಟಿ ಹೊತ್ತ ಹಾಗೂ ಅನ್ವೇಷಕನಿಂದ ಝೇನಾ ಎಂಬ ಮುದ್ದು ಹೆಸರು ಪಡೆದ ಆ ಆಕಾಶಕಾಯವೂ ಈಗ ’ಕುಬ್ಜಗ್ರಹ’ಗಳ ಗುಂಪಿಗೆ ಸೇರಿದೆ.
ಕ್ಯಾರನ್: ಸೇರ್ಪಡೆಯಾಗಬಹುದಾಗಿದ್ದ ಮೂರನೆಯ ಗ್ರಹವೆಂದರೆ ಕ್ಯಾರನ್. ಹಬ್ಬಲ್ ದೂರದರ್ಶಕ ರಲ್ಲಿ ಪತ್ತೆ ಹಚ್ಚಿದ ಕ್ಯಾರನ್ ಇದುವರೆಗೂ ಪ್ಲೂಟೋದ ಉಪಗ್ರಹವೆನಿಸಿತ್ತು. ಗಾತ್ರದಲ್ಲಿ ಹೆಚ್ಚೂ ಕಡಿಮೆ ಪ್ಲೂಟೋದಷ್ಟೇ ಇರುವ ಕ್ಯಾರನ್ ಅನ್ನೂ ಸೌರವ್ಯೂಹದ ಗ್ರಹಗಳಲ್ಲೊಂದೆಂದು ಸೇರಿಸುವುದೆಂದಾಗಿತ್ತು. ಆದರೀಗ ಪ್ಲೂಟೋವನ್ನು ಸುತ್ತುತ್ತ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತಿರುವ ಕ್ಯಾರನ್ ’ಸೌರಮಂಡಲದ ಇತರೆ ಆಕಾಶಕಾಯಗಳ’ಲ್ಲೊಂದಾಗಿದೆ.
* ಸದಾ ಸುದ್ದಿಯಲ್ಲಿರುವ ಪುಟ್ಟ ಪ್ಲೂಟೊ ೧೯೩೦ರಲ್ಲಿ ಪ್ಲೂಟೋವನ್ನು ಕಂಡು ಹಿಡಿದಾಗ ಅದು ಅತ್ತ ಮೊದಲಿನ ನಾಲ್ಕು ಗ್ರಹಗಳಂತೆ ಶಿಲೆ, ಬಂಡೆಗಳ ಲಕ್ಷಣವನ್ನೂ ಹೊಂದದೆ, ಇತ್ತ ಉಳಿದ ನಾಲ್ಕು ಗ್ರಹಗಳಂತೆ ಅನಿಲದ ಗೋಳವೂ ಆಗಿರದೆ ಭಿನ್ನವಾಗಿತ್ತು. ಅದರ ನಿಲುವು ಉಳಿದ ಗ್ರಹಗಳಿಗಿಂತ ೧೭ ಡಿಗ್ರಿ ಓರೆ. ಅದರ ಕಕ್ಷೆಯೋ ಉಳಿದವಕ್ಕೆ ಹೋಲಿಸಿದರೆ ಉದ್ದಕ್ಕೆ ಜಗ್ಗಿ ಬಿಟ್ಟ ಹಾಗಿತ್ತು. ಒಮ್ಮೆ ಸೂರ್ಯನಿಗೆ ಸಮೀಪವಾಗಿ ಇನ್ನೊಮ್ಮೆ ಅತಿ ದೂರವಾಗಿ ಅದು ಚಲಿಸುತ್ತಿತ್ತು. ಇಷ್ಟಾದರೂ ಗ್ರಹಗಳ ಗುಣಲಕ್ಷಣಗಳನ್ನು ಅಂದರೆ ದುಂಡನೆಯ ಆಕಾರ, ವ್ಯಾಸ ೮೦೦ ಕಿಮೀ ಗಿಂತ ಹೆಚ್ಚು, ಸೂರ್ಯನನ್ನು ಸುತ್ತುತ್ತಿದೆ ಇತ್ಯಾದಿಗಳಿಂದಾಗಿ ಪ್ಲೂಟೋಕ್ಕೆ ಸೌರವ್ಯೂಹದ ಸದಸ್ಯ ಪಟ್ಟ ದೊರೆತಿತ್ತು. ಮುಂದೆ ’ಗ್ರಹ’ದ ಎಲ್ಲಾ ಲಕ್ಷಣಗಳನ್ನೂ ಪ್ಲೂಟೋ ಹೊಂದಿಲ್ಲ ಎಂಬುದು ಸಾಬೀತಾದ ಮೇಲೂ ಅದು ಆ ಪಟ್ಟದಲ್ಲೇ ಉಳಿದಿತ್ತು.
ಸೌರವ್ಯೂಹದ ರಚನೆಯ ಬಗ್ಗೆ ವಿಜ್ಞಾನಿಗಳಲ್ಲಿ ಒಟ್ಟಾಭಿಪ್ರಾಯಗಳಿಲ್ಲ. ’ನೆಪ್ಚೂನ್ ಆಚೆಯಿರುವ ವೈಪರ್ ಪಟ್ಟಿಯಲ್ಲಿ ಸುತ್ತುತ್ತಿರುವ ಆಕಾಶಕಾಯಗಳಲ್ಲಿ ಪ್ಲೂಟೋ ಕೂಡ ಒಂದು, ಅದೊಂದು ಗ್ರಹವೇ ಅಲ್ಲ’ ಎಂದು ಮುಂಚಿನಿಂದಲೂ ವಾದಿಸಿದವರಿದ್ದಾರೆ. ’ಪ್ಲೂಟೋದ ಬದಲು ಝೇನಾವನ್ನು ಒಂಭತ್ತನೆಯ ಗ್ರಹವೆಂದು ಗುರುತಿಸಬೇಕು’ ಎಂಬುದಾಗಿ ಒಂದು ಬಣ, ’ಪ್ಲೂಟೋ ಇರಲಿ, ಝೇನಾ ಕೂಡ ನಮ್ಮ ಸೌರವ್ಯೂಹದ ಸದಸ್ಯನಾಗಲಿ’ ಇನ್ನೊಂದು ಬಣ, ’ಇಷ್ಟೆಲ್ಲಾ ರಗಳೆ ಯಾಕೆ, ಸಾಂಪ್ರದಾಯಿಕವಾದ ಎಂಟು ಗ್ರಹಗಳನ್ನಷ್ಟೇ ಮನ್ನಿಸೋಣ’ ಎಂಬುದಾಗಿ ಕೆಲ ವಿಜ್ಞಾನಿಗಳು. ಪ್ಲೂಟೋಕ್ಕಿಂತ ದೊಡ್ಡದಾದ ಕೆಲವು ಹೊಸ ಆಕಾಶಕಾಯಗಳನ್ನು ಈಗಾಗಲೇ ಗುರುತಿಸಲಾಗಿದೆ. ’ಪ್ಲೂಟೋ ಗ್ರಹವಾದರೆ ಅವಕ್ಕೂ ಆ ಮನ್ನಣೆ ದೊರೆಯಬೇಕು’ ಎಂದೂ ವಾದ ಸಾಗಿದೆ. ನ್ಯೂಯಾರ್ಕಿನ ಹೇಡನ್ ತಾರಾಲಯದಲ್ಲಿ ೨೦೦೦ರಲ್ಲಿ ಪ್ಲೂಟೋವನ್ನು ಗ್ರಹವೆಂದು ಪ್ರದರ್ಶಿಸುವುದನ್ನು ಕೈಬಿಡಲಾಗಿದೆ.
ಅಂತರ್ರಾಷ್ಟ್ರೀಯ ಖಗೋಳ ಶಾಸ್ತ್ರ ಸಂಘಟನೆ: ೧೯೧೯ರಲ್ಲಿ ಜನ್ಮ ತಾಳಿದ ಈ ಸಂಸ್ಥೆಯಲ್ಲಿ ಜಗತ್ತಿನ ೮೬ ದೇಶಗಳ ನುರಿತ ಖಗೋಳಶಾಸ್ತ್ರಜ್ಞರು ಸದಸ್ಯರಾಗಿದ್ದಾರೆ. ಸರಕಾರೀ ಹಾಗೂ ಖಾಸಗಿ ರಂಗದಲ್ಲಿ ನಡೆಯುವ ಎಲ್ಲ ರೀತಿಯ ಖಗೋಳ ಅಧ್ಯಯನಗಳನ್ನೂ ಬೆಂಬಲಿಸುವ ಈ ಸಂಸ್ಥೆ ಹೊಸದಾಗಿ ಗುರುತಿಸಲಾದ ಎಲ್ಲ ಆಕಾಶಕಾಯಗಳನ್ನು ಹಾಗೂ ಆಗಸದಲ್ಲಿ ನಡೆಯುವ ವಿದ್ಯಮಾನಗಳನ್ನು ವ್ಯಾಖ್ಯಾನಿಸುವ ಹೊಣೆ ಹೊತ್ತಿದೆ. ಆಕಾಶಕಾಯಗಳು ಅವು ಗ್ರಹ, ನಕ್ಷತ್ರ, ಕ್ಷೀರಪಥ, ನೀಹಾರಿಕೆ ಅಥವಾ ಕ್ಷುದ್ರಗ್ರಹ, ಧೂಮಕೇತು, ಉಲ್ಕೆ ಯಾವುದೇ ಆಗಿರಲಿ- ಸೂಕ್ತವಾದ ವ್ಯಾಖ್ಯೆ ನೀಡಿ ಅವುಗಳಿಗೆ ನಾಮಕರಣ ಮಾಡುವ ಅಧಿಕಾರ ಈ ಸಂಸ್ಥೆಯದ್ದು.
ಸರೋಜಾ ಪ್ರಕಾಶ
ಸಹಜ ಶಿಬಿರದ ಸಮಾರೋಪ ಸಮಾರಂಭ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಒಂಭತ್ತು ದಿನಗಳ ಕಾಲ ನಡೆದ ಸಹಜ ಬೇಸಿಗೆ ಶಿಬಿರದ ಸಮಾರೊಪ ಸಮಾರಂಭ ಭಾನುವಾರ ನಡೆಯಿತು.
ಈ ಸಮಾರಂಭದಲ್ಲಿ ಮಕ್ಕಳು ಶಿಬಿರದಲ್ಲಿ ರಚಿಸಿದ ಕಲಾಕೃತಿಗಳನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಅನುಪಮಾ ಪ್ರಕಾಶ್ ಮಾತನಾಡಿ, ‘ಶಿಬಿರದಲ್ಲಿ ಮಕ್ಕಳ ಕಲಿಕೆಗಳು ಜೀವನಪೂರ್ತಿ ಇರುವಂತದ್ದು ಹಾಗೂ ಇದರಿಂದ ಮಕ್ಕಳು ಹೆಚ್ಚು ಸೃಜನಶೀಲರಾಗಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘವು ನಮ್ಮೂರ ಶಾಲೆಗೆ ನಮ್ಮೂರ ಯುವಜನರು ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್ ಮತ್ತು ಸದಸ್ಯರನ್ನು ಗೌರವಿಸಲಾಯಿತು.
ಎಲ್ಲಾ ಮಕ್ಕಳಿಗೂ ಶಿಬಿರದ ಪ್ರಮಾಣಪತ್ರಗಳನ್ನು, ಚಿಣ್ಣರ ಕಾಜಾಣ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘವು ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿತು. ಶಾಲೆಯ ಮಾಸಿಕ ಪತ್ರಿಕೆಯಾದ ಬೇಲಿಹೂ ಏಪ್ರಿಲ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಪವನ್, ಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಬಸವರಾಜ್, ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್. ಕಲಾಧರ್, ಎನ್.ಪದ್ಮಾವತಿ, ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ಚೆಕ್ ವಿತರಣೆ ಕಾರ್ಯಕ್ರಮ
ರೇಷ್ಮೆಗೆ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ಇತ್ತೀಚೆಗೆ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೃತಪಟ್ಟ ರಾಸುಗಳಿಗೆ ವಿಮೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದಲ್ಲಿ ಒಕ್ಕೂಟವೂ ಉಳಿಯುವುದರೊಂದಿಗೆ ಈ ಭಾಗದ ಜನರ ಜೀವನಾಡಿಯಾಗುತ್ತದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹಾಲಿನಲ್ಲಿ ಶೇ. ೩.೫ ರಷ್ಟು ಫ್ಯಾಟ್ ಮತ್ತು ಕನಿಷ್ಠ ಶೇ ೮.೫ ಎಸ್ಎನ್ಎಫ್ ಇರಲೆಬೇಕು. ಇಲ್ಲವಾದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುತ್ತಿರುವ ೪ ರೂಪಾಯಿಗಳ ಪ್ರೋತ್ಸಾಹದನ ಸೇರಿದಂತೆ ಇತರೆ ಸರ್ಕಾರಿ ಸವಲತ್ತುಗಳಿಗೆ ಕಡಿವಾಣ ಬೀಳಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬಳಿ ನಿರ್ಮಾಣವಾಗುತ್ತಿರುವ ಕೋಚಿಮುಲ್ ಮೆಗಾಡೈರಿ ಕಾಮಗಾರಿ ಶೇ. ೭೦ ರಷ್ಟು ಮುಗಿದಿದ್ದು ಸ್ಥಳೀಯರಿಗೆ ಉದ್ಯೋಗವಾಕಾಶ ಕಲ್ಪಿಸುವುದರೊಂದಿಗೆ ಪ್ರತಿನಿತ್ಯ ೫ ಲಕ್ಷ ಲೀ ಗುಡ್ಲೈಫ್ ಫ್ಲೆಕ್ಸಿ ಪ್ಯಾಕ್ ಹಾಲು ಸಿದ್ದವಾಗುತ್ತದೆ. ಹಾಗಾಗಿ ಗುಣಮಟ್ಟದ ಹಾಲಿನ ಪೂರೈಕೆಗೆ ರೈತರು ಸಹಕರಿಸಬೇಕೆಂದರು.
ಕಳೆದ ವರ್ಷ ಮೃತಪಟ್ಟ ಸುಮಾರು ೨೭ ರಾಸುಗಳಿಗೆ ತಲಾ ೪೦ ಸಾವಿರದಂತೆ ಹಾಗು ೨೧ ವಿದ್ಯಾರ್ಥಿಗಳಿಗೆ ಒಟ್ಟು ೧,೫೭ ಸಾವಿರ ರೂ ವಿದ್ಯಾರ್ಥಿವೇತನದ ಚೆಕ್ಕನ್ನು ವಿತರಿಸಲಾಯಿತು.
ಕೋಚಿಮುಲ್ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರದ ವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ಸಹಕಾರಿ ಯೂನಿಯನ್ ನಿರ್ದೇಶಕ ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

