ಕಾಯವೆಂದರೆ ದೇಹ, ಕಾಯಕವೆಂದರೆ ದೇಹಶ್ರಮವೆಂದು ಅತ್ಯಂತ ಸರಳವಾಗಿ ಹೇಳುವವರೇ ಬಹಳ. ಅದು ತಪ್ಪೆಂದು ಹೇಳಲಾಗದಿದ್ದರು ಅದೇ ಸಂಪೂರ್ಣ ಸರಿ ಎಂದೂ ವಾದಿಸಲಿಕ್ಕಾಗದು. ಕಾಯಕವನ್ನು ಕೆಲಸದೊಂದಿಗೆ ಸಮೀಕರಿಸಿ ಮಾತನಾಡುವುದನ್ನು ನಾವು ಕಾಣುತ್ತೇವೆ. ಒಂದೊಮ್ಮೆ ಅದೇ ಸರಿ ಎಂದಾಗಿದ್ದರೆ ಬಸವಣ್ಣನವರು ಅತ್ಯಂತ ಸರಳವಾಗಿ ‘ಕೆಲಸವೇ ಕೈಲಾಸ’ ಎಂದು ಬಿಡುತ್ತಿದ್ದರೇನೋ, ಬದಲಿಗೆ ಅವರು ‘ಕಾಯಕವೇ ಕೈಲಾಸ’ ಎಂದಿದ್ದರ ಹಿಂದೆ ಬಹುಶಃ ‘ಕೆಲಸ’ದ ಕಲ್ಪನೆ ಮಾತ್ರ ಅಡಗಿದ್ದಿರಲು ಸಾಧ್ಯವಿಲ್ಲವೆನ್ನಿಸುತ್ತದೆ. ಬಹುಶಃ ಕಾಯಕವೆಂದರೆ. ಜವಾಬ್ದಾರಿಯ – ಎಚ್ಚರಿಕೆಯ ಕೆಲಸ ಅಥವಾ ಕೆಲಸದಲ್ಲಿ ಜವಾಬ್ದಾರಿ ಎಚ್ಚರಿಕೆ. ಮುಂದುವರೆದು ಹೇಳುವುದಾದರೆ ‘ಹೊಣೆಗಾರಿಕೆ’. ಇಷ್ಟೇ ಅಲ್ಲ ಕಾಯಕವು ಕೈಲಾಸವನ್ನೊದಗಿಸುವ ಸನ್ನೆಯಾಗಬೇಕೆಂದಾದರೆ, ಅದು ಪ್ರಾಮಾಣಿಕತೆಯಿಂದ ಪರಿಶುದ್ಧತೆಯಿಂದ ಮತ್ತು ಆತ್ಮಸಾಕ್ಷಿಗನುಗುಣವಾಗಿ ನೆರವೇರುವಂಥದ್ದಾಗಿರಬೇಕು ಅದು ಕೇವಲ ‘ಕೆಲಸ’ವಾಗದೆ ಕರ್ತವ್ಯವಾಗುವುದು ಅಗತ್ಯವೆನ್ನಿಸುತ್ತದೆ.
ಸ್ವಲ್ಪ ವಿಷದವಾಗಿ ಹೇಳುವುದಾದರೆ, ಇಂಗ್ಲೀಷ್‍ನಲ್ಲಿ Seeing and observing ನೋಡುವುದು ಮತ್ತು ಗ್ರಹಿಸುವುದು, ಕೆಲವರು ಸುಮ್ಮನೆ ನೋಡುತ್ತಾರೆ, ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ, ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನದ ಕುರಿತು, ಅಲ್ಲಿನ ಶಿಲ್ಪಕಲೆ ಕುರಿತು, ಸಂಪ್ರದಾಯದ ಕುರಿತು ಮಾಹಿತಿ ಪಡೆದು ಬರುವುದು ಬೇರೆ, ಒಂದು ಬರಿದೆ ನೋಡುವುದು ಇನ್ನೊಂದು ಚಿಕಿತ್ಸಕ ದೃಷ್ಟಿಯಿಂದ ನೋಡುವುದು, ಹಾಗೇ,hearing and listening ಕೇಳುವುದು ಮತ್ತು ಆಲಿಸುವುದು. ನಮ್ಮ ಕಿವಿಯ ಮೇಲೆ ಬೀಳುವ ಧ್ವನಿಗಳನ್ನು ಕೇಳುತ್ತವೆ ಸಹಜ. ಆದರೆ ಉದ್ದೇಶಪೂರ್ವಕವಾಗಿ ಏನನ್ನಾದರೂ ಲಕ್ಷಗೊಟ್ಟು ಕೇಳಿದರೆ ಅದು ಆಲಿಸುವ ಪ್ರಕ್ರಿಯೆಯಾಗುತ್ತದೆ, ಅಲ್ಲಿ ಕೇಳಿದ್ದು ನಮ್ಮೊಳಗೆ ಇಳಿದಿರುತ್ತದೆ, ಸುಮ್ಮನೆ ಹಾದು ಹೋಗಿರುವುದಿಲ್ಲ, ಬಹುಶಃ ಹೀಗೇ Work and duty ಕೆಲಸ ಮತ್ತು ಕರ್ತವ್ಯ, ಕರ್ತವ್ಯವೂ ಕೆಲಸವೇ ಹೌದಾದರೂ ಅಲ್ಲಿ ಕೆಲಸಕ್ಕೆ ಒಂದು ವಿಶಿಷ್ಟ ಜವಬ್ದಾರಿ ಇರುತ್ತದೆ, ಅದರ ಅರಿವಿರುತ್ತದೆ, ಅಲ್ಲಿ ಬದ್ಧತೆ, ಸಿದ್ಧತೆಗಳೆರಡೂ ಇರುತ್ತದೆ, ಇದು ಸಾಧ್ಯವಾಗುವುದು ಮನುಷ್ಯರಿಗೆ ಮಾತ್ರ, ಕತ್ತೆ ಹೊರೆಯನ್ನು ಹೊರುವ ಕೆಲಸಮಾಡುತ್ತದೆ, ನಿಜ ಆದರೆ ಅಲ್ಲಿ ಅವುಗಳಿಗೆ ಜವಬ್ದಾರಿಯ ಪ್ರಶ್ನೆ ಎದುರಾಗುವುದಿಲ್ಲ, ಅದು ಕೇವಲ ಅವುಗಳ ದೈಹಿಕ ಶ್ರಮವಾಗಬಹುದೇ ವಿನಃ ಅದಕ್ಕೆ ಬೌದ್ಧಿಕ ಆಯಾಮ ಲಭ್ಯವಾಗಿರುವುದಿಲ್ಲ, ಅದೇ ಮನುಷ್ಯರ ‘ಕಾಯಕ’ವೆಂದರೆ ಅಲ್ಲಿ ದೈಹಿಕ ಶ್ರಮದೊಟ್ಟಿಗೆ ಬೌದ್ಧಿಕತೆಯೂ ಸಕ್ರಿಯವಾಗಿ ಸ್ಪಂದಿಸಿರುತ್ತದೆ, ಬುದ್ಧಿ ಭಾವಗಳು ಕೂಡ ಮಿಳಿತವಾಗುವುದು, ಹೀಗಿರುವುದರಿಂದ ಕಾಯಕವೆಂದರೆ ದೇಹದ ಶ್ರಮ ಎನ್ನುವುದರ ಜೊತೆಗೇ ಇದೇ ದೇಹದ ಅಂಗವಾದ ಮಿದುಳಿನ ಶ್ರಮವನ್ನು ಮರೆಯಲಾಗದು. ಬೇರ್ಪಡಿಸಿ ವ್ಯಾಖ್ಯಾನಿಸುವೂದೂ ಅಪ್ರಸ್ತುತವಾಗಿಬಿಡಬಹುದು.
ಕಾಯಕಕ್ಕೆ ಪರ್ಯಾಯವಾಗಿ ‘ದುಡಿಮೆ’ ಎಂದರೂ ಸರಿಯಾಗಲಾರದು ಕಾರಣವಿಷ್ಟೇ ‘ದುಡಿಮೆ’ ಕೆಲಸವಾದರೂ ಅದು ಪ್ರತಿಫಲವನ್ನು ನಿರೀಕ್ಷಿಸುವಂಥದ್ದು, ದುಡಿದದ್ದಕ್ಕೆ ಕೂಲಿ ಯಾ ಸಂಬಳವನ್ನು ಬಯಸುವಂಥದ್ದು, ಅದು ಬದುಕಿನ ನಿರ್ವಹಣೆಗೆ ಅಗತ್ಯವಾದದ್ದು, ಇಂದು ನಾವು ಸಾಮಾನ್ಯವಾಗಿ ಹೇಳುವ ‘ವೃತ್ತಿಯ’ ಹಿಂದಿನ ಮನಸ್ಥಿತಿಯೂ ಇದೇ ಬಗೆಯದ್ದು ‘ವಿತ್ತ’ ಮೂಲಧಾರದ್ದು. ನಾವಿಂದು ಎಲ್ಲೆಡೆಗೆ ಕಾಣುವ ಸಾಮಾನ್ಯ ಸಂಗತಿಯೆಂದರೆ ವಿತ್ತದ ಮೇಲಿನ ಪ್ರೀತಿ, ಹಾಗಾಗಿಯೇ ಎಲ್ಲ ಬುಕ್‍ಗಳಿಗಿಂತ ಚೆಕ್ ಬುಕ್ ಮಹತ್ವವುಳ್ಳದ್ದಾಗಿರುವುದು!
ದಿನನಿತ್ಯದ ಬದುಕಿನಲ್ಲಿ ನಿಜವಾದ ಅರ್ಥದಲ್ಲಿ duty ಗೆ ಹೋಗುವವರೇ ಬೇರೆ, ಕೇವಲ ಶಬ್ದವನ್ನಷ್ಟೇ ಉದುರಿಸಿದರೆ ಪ್ರಯೋಜನವಿಲ್ಲ ಕೆಲಸಕ್ಕೆ, ಗೇಯಲು ಹೋಗುವವರೇ ಬೇರೆ, ವೃತ್ತಿಯ ಮೇಲಿನ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವವರು ‘ಕಾಯಕ’ ದವರು. ಕೇವಲ ಹೊತ್ತು ಕಳೆದು – ಸಂಬಳಕ್ಕಾಗಿ ಕೈಯೊಡ್ಡುವುದಕಷ್ಟೇ ಸೀಮಿತವಾದರು ‘ಕಾಯಕ’ದವರಲ್ಲ, ಕೆಲಸದ ಹೆಸರಿನಡಿ ಮೋಸ ಮಾಡುವವರು ಕಂಡಕಂಡದ್ದಕ್ಕೆಲ್ಲ ಕೈಯೊಡ್ಡಿ, ಮನಃಶಾಂತಿಯನ್ನು ಕೆಡಿಸಿಕೊಂಡು ಒಂದಿಷ್ಟು ಕುಡಿದೇ ನಿದ್ದೆಮಾಡುವವರೇ ವಿನಃ ಮನಃಶಾಂತಿಯಿಂದ ಸಹಜವಾಗಿ ನಿದ್ದೆ ಕೂಡ ಮಾಡಲಾರದವರು, ಇಂಥ ಕೆಲಸವನ್ನು ಬಹುಶಃ ಬಸವಣ್ಣನವರ ಕಾಯಕ ತತ್ವ ಖಂಡಿತ ಬೆಂಬಲಿಸುವುದಿಲ್ಲ. ಬಸವಣ್ಣನವರು ಪ್ರತಿಪಾದಿಸಿದ ‘ಕಾಯಕ ತತ್ವ’ ಬದುಕಿನ ಆದರ್ಶಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವುಳ್ಳದ್ದು, ಕಾಯಕವೆಂದರೆ ದೇಹಶ್ರಮದಿಂದ ದುಡಿದು ಉಣ್ಣುವುದು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲು ಹೊರಟಾಗಲು ಕೂಡ ಅದಕ್ಕೆ ಒಂದು ನಿಯತ್ತು ಇರಬೇಕಾದದ್ದು ಅನಿವಾರ್ಯ. ರಾಜನಾಗಲಿ, ಮಂತ್ರಿಯಾಗಲಿ ದೇಹಶ್ರಮವಿರದೆ ಉಣ್ಣಬಾರದು, ಎಂದರೆ ಒಂದು ಅವರ ದೇಹಾರ್ಯೋಗ್ಯದ ಪರಿಪಾಲನೆಯ ಸೂತ್ರವದರಲ್ಲಿ ಅಡಗಿರಬಹುದು. ‘Sound mind in the sound body’ ಎಂಬ ತತ್ವಕ್ಕನುಗುಣವಾಗಿ ಅವರ ಬೌದ್ದಿಕತೆಯ ಪುಷ್ಟಿಗಾಗಿ, ದೇಹದ ಪುಷ್ಟಿ ಅಗತ್ಯವಾಗಿರುವುದರಿಂದ ಹಾಗೇ ಕುಳಿತಲ್ಲೇ ಎಲ್ಲವನ್ನೂ ನಿರ್ಧರಿಸುವ ಬದಲು ಸ್ವಲ್ಪ ಎದ್ದು ಓಡಾಡಿ, ಖುದ್ದಾಗಿ ಜನರ ಸ್ಥಿತಿ ಗತಿ ತಿಳಿದು ವ್ಯವಹರಿಸುವ ಸದ್ಬುದ್ಧಿ ಬರಲೆಂಬ ಆಶಯವೂ ಅದರಲ್ಲಿ ಅಡಕವಾಗಿದ್ದೀತು. ಕೇವಲ ಕಡತಗಳ ಮೂಲಕ ಅಭಿವೃದ್ಧಿಯನ್ನು ಅಳೆದು ಹೇಳುವವರಿಗೆ ಇದು ಅಗತ್ಯ ಪಾಠವೂ ಆದೀತು. ತತ್ವ ಹೇಳಲಿಕ್ಕಾಗಿರುವುದಲ್ಲ, ಅದರ ಅರಿವಿದ್ದರಷ್ಟೇ ಸಾಲದು ಅದರ ಆಚರಣೆ ಕೂಡ ಅಷ್ಟೇ ಮುಖ್ಯ, ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸದಲ್ಲಿ, ವೃತ್ತಿಯಲ್ಲಿ, ದುಡಿಮೆಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ ಅಗತ್ಯ. ಆದರೆ ಅದೇ ಸಂದರ್ಭದಲ್ಲಿ ಮಾಡುವ ಕೆಲಸದ ಕುರಿತು, ವೃತ್ತಿಯ ಕುರಿತು, ದುಡಿಮೆಯ ಕುರಿತು ಪ್ರೀತಿ ಶ್ರದ್ಧೆ ಮತ್ತು ಬದ್ದತೆ ಇದ್ದಲ್ಲಿ ಅದು ಕಾಯಕವಾಗಿ ಆಗ ಅವರ ಕಾಯಕವೇ ಕೈಲಾಸವಾದೀತು, ಒಂದೆ ಕೆಲಸಕ್ಕಾಗಿ ಕೆಲಸವೆಂಬ ತತ್ವ ಒಳ್ಳೆಯದಲ್ಲ, ಕಾಯಕಕ್ಕಾಗಿ ಕೆಲಸವೆಂಬಂತಿರಬೇಕು. ಇದನ್ನು ಸ್ಪಷ್ಟವಾಗಿ ಅರಿತ ಇಂಗ್ಲೀಷ್ ಕವಿ ತನ್ನ ‘Work’ ಎಂಬ ಕವಿತೆಯಲ್ಲಿ ಈ ರೀತಿ ಉದ್ಧರಿಸಿದ್ದಾನೆ, ಅದರ ಕನ್ನಡಾನುವಾದ ಈ ರೀತಿ ಇದೆ,
ಕಾಯಕವೇ ಅರ್ಥವಿಲ್ಲ
ಅದು ನಿನ್ನಲ್ಲಿ ಆವಾಹನೆಗೊಳ್ಳದಿದ್ದಲ್ಲಿ
ಆಟದೊಳಗೆ ಮಗ್ನಗೊಂಡಂತೆ
ಅದು ನಿನ್ನನ್ನೂ ಆವರಿಸಿಕೊಳ್ಳದಿದ್ದಲ್ಲಿ
ಅದು ಎಂದೂ ವಿನೋದವೆನ್ನಿಸದಿದ್ದಲ್ಲಿ
ಕೈ ಹಾಕದಿರು ಅದಕ್ಕೆ.
(ಅಂತರಂಗದ ಮಾತು, ಸಂಕಲನದಿಂದ)
ಅಂದರೆ ವ್ಯಕ್ತಿಯೋರ್ವ ನಿರ್ವಹಿಸುವ ಕೆಲಸದಲ್ಲಿ ಆತ ತನ್ಮಯನಾಗದೆ ಅದು ಆವಾಹಿಕೊಳ್ಳದೆ, ಖುಷಿಯಿರದೆ ಕಾಟಾಚಾರಕ್ಕೆಂಬಂತಾದರೆ ಅದು ಅರ್ಥಹೀನ, ಕಾಯಕವೆನ್ನುವುದು ಅರ್ಥಹೀನ ಚಟುವಟಿಕೆಯಾಗಬಾರದು. ಅದು ಸಿದ್ಧತೆ, ಬದ್ದತೆ, ಶ್ರದ್ಧೆ ನಿಯತ್ತುಗಳಿಂದ ಕೂಡಿದ್ದಾದರೆ ಮಾತ್ರ ಕಾಯಕ, ಕೈ ಬಾಯಿ ಶುದ್ಧವಾಗಿದ್ದು, ಅತ್ಮಸಾಕ್ಷಿಗನುಗುಣವಾಗಿ ನಿರ್ವಹಿಸುವ ಕರ್ತವ್ಯದಿಂದ ಮಾತ್ರ ಕುಟುಂಬ, ಸಮಾಜದ ಒಳಿತು ಸಾಧ್ಯ. ಕೆಲಸ ಯಾವುದೇ ಆಗಿರಲಿ ಅದು ಚಿಕ್ಕದಲ್ಲ, ಅದಕ್ಕೆ ಅದರದ್ದೇ ಆದ ಘನತೆ ಇದ್ದೇ ಇರುತ್ತದೆ. ಆ ಘನತೆಗೆ ಮುಕ್ಕುಬಾರದು ಎಚ್ಚರ ಸದಾ ಜಾಗೃತವಾಗಿದ್ದಲ್ಲಿ ಮಾಡುವ ಕೆಲಸ, ಕರ್ತವ್ಯದಿಂದ, ಕಾಯಕದ ಅರ್ಥಪ್ರಾಪ್ತಿಯಾಗುತ್ತದೆ, ದಿವ್ಯತೆಯೊದಗುತ್ತದೆ, ಅಂದಾಗ ಮಾತ್ರ ಕಾಯಕವೇ ಕೈಲಾಸ, ಹಾಗಲ್ಲದಿದ್ದಲ್ಲಿ ಅದು ಕೇವಲ ತೌಡುಕಟ್ಟುವ ಕೆಲಸ.
ರವೀಂದ್ರ ಭಟ್, ಕುಳಿಬೀಡು.
ಕಾಯಕವೆಂದರೆ
ರೈತರ ಭೂಮಿಯನ್ನು ಉಳಿಸಿಕೊಳ್ಳಲು ಹಾಗೂ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ
ರೈತರ ಭೂಮಿಯನ್ನು ಉಳಿಸಿಕೊಳ್ಳಲು ಹಾಗೂ ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದು, ಏಪ್ರಿಲ್ 28 ರಂದು ವಿಧಾನಸೌಧಕ್ಕೆ ತೆರಳಿ ಪ್ರತಿಭಟಿಸುವುದಾಗಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದಲ್ಲಿ ಶನಿವಾರ ಘೋಷಣೆಗಳನ್ನು ಕೂಗುತ್ತಾ ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ದೂರದೃಷ್ಟಿ ಯೋಜನೆಗಳನ್ನು ರೂಪಿಸಬೇಕು. ಭೂ ಸ್ವಾಧೀನ ಕಾಯ್ದೆ ವಾಪಸ್ ಪಡೆಯಬೇಕು. ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಫಯಾಜುಲ್ಲಾ, ಗುಲ್ಜಾರ್, ಮಂಜುನಾಥ್, ನರಸಿಂಹಪ್ಪ, ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ನಗರದ ಸಿದ್ದಾರ್ಥನಗರದ ಮಾನಸ ಆಸ್ಪತ್ರೆಯಲ್ಲಿ ಭಾನುವಾರ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇ.ಸಿ.ಜಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಡಿ.ವೈ.ಎಸ್.ಪಿ ಸಣ್ಣತಿಮ್ಮಪ್ಪ, ‘ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳು ಒತ್ತಡದ ಜೀವನ ಹಾಗೂ ಕಲುಶಿತ ವಾತಾವರಣದ ಬಳುವಳಿಗಳಾಗಿದ್ದು, ಆರೋಗ್ಯ ತಪಾಸಣಾ ಶಿಬಿರದಲ್ಲಿ ಪೊಲೀಸರು ಕುಟುಂಬ ಸಮೇತ ಭಾಗವಹಿಸಿ, ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ’ ಎಂದು ಪೊಲೀಸರಿಗೆ ಕರೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್, ಡಾ.ಮೋಹನ್ ಭಾರ್ಗವ್, ಪೊಲೀಸ್ ಬಿಬ್ಬಂದಿ ಹಾಜರಿದ್ದರು.
ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸಬೇಕು
ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು ಮುಂತಾದ ಕಡೆಗಳಲ್ಲಿ ಬಿದ್ದಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿ, ಬೆಳೆಗಳನ್ನು ಇಡುವಂತಹ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸುವಲ್ಲಿ ಹಿಂದೆ ಇದ್ದಾರೆ, ಇದರಿಂದಾಗಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾದಾಗ ಸರ್ಕಾರದಿಂದ ಬರುವಂತಹ ಸಹಾಯಧನಕ್ಕಿಂತ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮಾ ಸೌಲಭ್ಯ ಸಿಗಲಿದ್ದು, ರೈತರಿಗೆಅಗತ್ಯವಾಗಿರುವ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ನೀಡಬೇಕು. ವಿಮಾ ಸೌಲಭ್ಯಗಳ ಬಗ್ಗೆ ದ್ರಾಕ್ಷಿ ಬೆಳೆಗಾರರ ಸಂಘಗಳಿಗೆ ಮಾಹಿತಿಗಳನ್ನು ನೀಡಿ, ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸುಮಾರು ೧೦ ಕೋಟಿ ರೂಪಾಯಿಗಳಷ್ಟು ಬೆಳೆಗಳು ನಷ್ಟವಾಗಿವೆ, ಈ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ, ಮಾವು, ತರಕಾರಿ ಬೆಳೆಗಳು ನಷ್ಟವುಂಟಾಗಿವೆ, ದ್ರಾಕ್ಷಿಯನ್ನು ಪ್ರತಿ ಕೆ.ಜಿಗೆ ೩೦ ರೂಪಾಯಿಗಳಂತೆ ಮಾರಾಟ ಮಾಡಿದ್ದೆವು, ೫೦ ಸಾವಿರ ಮುಂಗಡ ಹಣವನ್ನು ನೀಡಿದ್ದರು, ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದರಿಂದ ಕೆ.ಜಿ.ದ್ರಾಕ್ಷಿಯನ್ನು ೮ ರೂಪಾಯಿಗಳಿಗೆ ಕೇಳುತ್ತಿದ್ದಾರೆ, ಮುಂಗಡ ಹಣವನ್ನು ವಾಪಸ್ಸು ಪಡೆದುಕೊಂಡು ಹೋಗಿದ್ದಾರೆ, ಮಾರುಕಟ್ಟೆಯ ಸೌಲಭ್ಯವಿಲ್ಲ, ಅವರು ಕೇಳಿದ ಧರಕ್ಕೆ ದ್ರಾಕ್ಷಿಯನ್ನು ಮಾರಾಟ ಮಾಡಬೇಕು, ಮಾರಾಟ ಮಾಡಿದ ನಂತರ ಕಟಾವು ಮಾಡಬೇಕಾದರೂ, ಏಜೆಂಟರ ಬಳಿಯಲ್ಲಿ ಹೋಗಿ ಗೋಗರೆಯಬೇಕು, ಅವರು ನೀಡುವಂತಹ ಬಿಲ್ಲುಗಳು ಅಧಿಕೃತವಾಗಿರುವುದಿಲ್ಲ, ಒಂದುಚೀಟಿಯಲ್ಲಿ ಬರೆದುಕೊಡುತ್ತಾರೆ, ಆ ಚೀಟಿಗಳು ಕಳೆದು ಹೋದರೆ ನಾವು ದ್ರಾಕ್ಷಿಯನ್ನು ಮಾರಾಟ ಮಾಡಿರುವ ಬಗ್ಗೆ ಖಾತ್ರಿಯಿರುವುದಿಲ್ಲ, ಆದ್ದರಿಂದ ರೈತರಿಗೆ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ರೈತಗೋವಪ್ಪ ಅಧಿಕಾರಿಗಳ ಬಳಿಯಲ್ಲಿ ಮನವಿ ಮಾಡಿದರು.
ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಎಂ.ಗಾಯಿತ್ರಿ ಮಾತನಾಡಿ, ಮಹಾರಾಷ್ಟ್ರದ ಮಾದರಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಘಗಳ ಮುಖಾಂತರವೇ ದರವನ್ನು ನಿಗಧಿ ಮಾಡುವಂತಹ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ, ರೇಷ್ಮೆಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಆನಂದ್ ಮುಂತಾದವರು ಹಾಜರಿದ್ದರು.
ಮಾರುತಿ ನಗರದಲ್ಲಿ ಉಟ್ಲು ಮಹೋತ್ಸವ
ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 20ನೇ ವರ್ಷದ ಉಟ್ಲು ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಹಾಲು ಉಟ್ಲು ಹಾಗೂ ಮನರಂಜನಾ ಉಟ್ಲು ಮಹೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಲಕ್ಷ್ಮಣ, ವೆಂಕರಾಯಪ್ಪ, ಯರ್ರಪ್ಪನವರ ಕುಟುಂಬದವರು ಹಾಗೂ ಸಂಗಡಿಗರು ಉಟ್ಲು ಕಾಯನ್ನು ಹೊಡೆಯುವುದನ್ನು ಜನರು ವೀಕ್ಷಿಸಿ ಹುರಿದುಂಬಿಸಿದರು.
ಇದ್ಲೂಡಿನಲ್ಲಿ ಜಾತ್ರೆಯಂತೆ ಜನರು ಸೇರಿದ್ದು, ಸಾಕಷ್ಟು ಸಿಹಿ ತಿಂಡಿಗಳ, ಬತ್ತಾರು, ಖಾರ ಸೇರಿದಂತೆ ವಿವಿಧ ಆಟಿಕೆಗಳ ಅಂಗಡಿಗಳು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆಗಮಿಸಿದ್ದ ಜನರಿಗೆ ಹೆಸರುಬೇಳೆ ಹಾಗೂ ಪಾನಕವನ್ನೂ ವಿತರಿಸಲಾಯಿತು. ಅನ್ನದಾನವನ್ನು ಸಹ ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು. ಮಾರುತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.
ಭಗೀರಥ ಜಯಂತ್ಯುತ್ಸವ
ಕಠಿಣ ಶ್ರಮ, ತಪೋನಿಷ್ಠೆ, ಏಕಾಗ್ರತೆ, ದೈವಭಕ್ತಿ ಮತ್ತು ಸಾಹಸಕ್ಕೆ ‘ಭಗೀರಥ ಪ್ರಯತ್ನ’ ಎಂಬ ನುಡಿಗಟ್ಟಿಗೆ ಕಾರಣರಾದ ಭಗೀರಥ ಪುಣ್ಯಪುರುಷ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಉಪ್ಪಾರ ಸಂಘದ ಸಹಯೋಗದಲ್ಲಿ ಆಚರಿಸಿದ ಭಗೀರಥ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪ್ಪಾರ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುವುದರೊಂದಿಗೆ ಸಮಾಜಮುಖಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ದೊಡ್ಡತೇಕಹಳ್ಳಿ ಟಿ.ಗಂಗಪ್ಪ ಮಾತನಾಡಿ, ‘ಸೂರ್ಯವಂಶದ ಕ್ಷತ್ರಿಯರು ಕ್ಷತ್ರಿಯತ್ವವನ್ನು ತ್ಯಜಿಸಿ ‘ಉಪವೀರ’ ಎಂಬ ಹೆಸರಿನಿಂದ ಭೂಮಿಯ ಮಣ್ಣಿನ ಕ್ಷಾರ ಲವಣದಿಂದ ಉಪ್ಪು ತಯಾರಿಸಿ ವೃತ್ತಿ ಜೀವನ ನಡೆಸಿ ಉಪ್ಪಾರರಾಗಿದ್ದಾರೆ. ಕ್ಷತ್ರಿಯ ಕುಲದಲ್ಲಿ ಹುಟ್ಟಿ ತನ್ನ ತಪೋಬಲದಿಂದ ಮಹರ್ಷಿ ಎನಿಸಿಕೊಂಡ ಭಗೀರಥ ನಮ್ಮ ಕುಲದೈವವಾಗಿದ್ದು, ಪ್ರತಿವರ್ಷ ಆತನ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಈ ಬಾರಿಯಿಂದ ಸರ್ಕಾರವೂ ಆಚರಣೆಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಿ.ಎನ್.ಗುರುಬಸಪ್ಪ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಘುನಾಥರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾವನಾ ಮಹರ್ಷಿ ಜಯಂತ್ಯುತ್ಸವ
ತಾಲ್ಲೂಕು ಪದ್ಮಶಾಲಿ ಸಂಘದ ವತಿಯಿಂದ ನಗರದಲ್ಲಿ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವೈಶಾಖ ಶುದ್ಧ ಸಪ್ತಮಿ ಶನಿವಾರ ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಗಂಗಾಪೂಜೆ, ಕಳಶಸ್ಥಾಪನೆ, ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವೀರಾಂಜನೇಯಸ್ವಾಮಿ, ಭದ್ರಾವತಿ ಹಾಗೂ ಭಾವನಾ ಮಹರ್ಷಿಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಲಾಯಿತು. ತಾಲ್ಲೂಕು ಪದ್ಮಶಾಲಿ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆಯಲ್ಲಿ ಪಾಲ್ಗೊಂಡರು. ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ, ಟಿ.ಲಕ್ಷ್ಮೀನಾರಾಯಣ, ಸಿ.ಎನ್.ವಾಸು, ಎಲ್.ಕೃಷ್ಣಮೂರ್ತಿ, ಬಿ.ಲಕ್ಷ್ಮಿನಾರಾಯಣ, ಪಾರ್ಥಸಾರತಿ, ಎನ್.ಲಕ್ಷ್ಮೀನಾರಾಯಣ, ಮಂಜುನಾಥ್, ರಾಜ್ಕುಮಾರ್, ಯಶ್ವಂತ್, ಪ್ರದೀಪ್, ಮುರಳಿ, ಪೃಥ್ವಿ, ಪವನ್, ಚೇತನ್, ಗುರು, ಸುರೇಶ್ ಮತ್ತಿತರರು ಹಾಜರಿದ್ದರು.
ಡಾ.ರಾಜ್ಕುಮಾರ್ ಜನ್ಮದಿನಾಚರಣೆ
ತಾಲ್ಲೂಕಿನ ಜಂಗಮಕೋಟೆ ಹೋಬಳಿ ತೊಟ್ಲಗಾನಹಳ್ಳಿಯಲ್ಲಿ ಶುಕ್ರವಾರ ಡಾ.ರಾಜ್ಕುಮಾರ್ ಅವರ 87 ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮವನ್ನೆಲ್ಲಾ ಸಿಂಗರಿಸಿ ವರನಟ ಡಾ.ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಅನ್ನಸಂತರ್ಪಣೆಯನ್ನು ನಡೆಸಿದರು. ಗ್ರಾಮದ ಯುವಕರು ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರಿಗೆ ಜಯಘೋಷವನ್ನು ಕೂಗುತ್ತಾ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು.
ಕನಕರಾಜು, ಲೋಕೇಶ್ಗೌಡ, ಚೌಡೇಗೌಡ, ಗೋಪಾಲ್, ಮಂಜುನಾಥ್, ಅಶ್ವತ್ಥ್, ಮುನಿರಾಜು ಮತ್ತಿತರರು ಹಾಜರಿದ್ದರು.
ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ
ಶಿಡ್ಲಘಟ್ಟದ ಅರಳೆಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮದಲ್ಲಿ ಕಡುಗದರೆಯ ಮುನಿರಾಜು ಮತ್ತು ತಂಡದವರು ವಚನ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ
ಕಳೆದ ನಾಲ್ಕು ದಶಕಗಳಿಂದ ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಕೂಡಾ ನಮ್ಮನ್ನಾಳುತ್ತಿರುವ ಸರ್ಕಾರಗಳು ಮಾತ್ರ ನಮ್ಮ ಭಾಗಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದರ ಭಾಗವಾಗಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.
ನಗರದ ಪ್ರವಾಸಿಮಂದಿರದ ಬಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ, ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ಯಾವುದೇ ಸರ್ಕಾರಗಳು ನಮ್ಮ ಭಾಗದ ರೈತರುಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ, ನೀರಾವರಿ ಯೋಜನೆಗಳ ವಿಚಾರದಲ್ಲಿ ಮೂಲೆಗುಂಪು ಮಾಡಲು ಹೊರಟಿವೆ, ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಭಾಗದ ಹೋರಾಟಗಾರರು, ರೈತರನ್ನು ದಿಕ್ಕುತಪ್ಪಿಸುವಂತಹ ಹುನ್ನಾರವನ್ನು ನಡೆಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದರೂ ಕೂಡಾ ಯೋಜನೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಧು ಸೀತಪ್ಪ ಅವರು ತಯಾರಿಸಿರುವ ೯೦ ನಿಮಿಷಗಳ ಕಾಲದ ಸಿ.ಡಿ.ಗಳನ್ನು ರಾಜಕಾರಣಿಗಳು ವೀಕ್ಷಣೆ ಮಾಡಬೇಕು. ಗಾಯದ ಮೇಲೆ ಬರೆಎಳೆದಂತೆ ಕೇಂದ್ರ ಸರ್ಕಾರವೂ ಕೂಡಾ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ೨೮ ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ನಡೆಸಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯಾಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಆನೆಮಡಗು ಶಿವಣ್ಣ, ಹಿತ್ತಲಹಳ್ಳಿ ದೇವರಾಜ್, ದೊಡ್ಡತೇಕಹಳ್ಳಿ ಕದಿರಪ್ಪ ಮುಂತಾದವರು ಹಾಜರಿದ್ದರು.

