ಬುಧವಾರ ಸಂಜೆ ಬಿದ್ದ ಬಾರೀ ಬಿರುಗಾಳಿ ಸಹಿತ ಆಲಿಕಲ್ಲಿನ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಗಂಗನಹಳ್ಳಿ, ಮೇಲೂರು, ಮಳ್ಳೂರು, ಮುತ್ತೂರು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ, ಹಿಪ್ಪುನೇರಳೆ, ಬಾಳೇಗಿಡ ಸೇರಿದಂತೆ ತರಕಾರಿ ಬೆಳೆಗಳು ನಷ್ಟವಾಗಿವೆ.
ಅಕಾಲಿಕ ಮಳೆಯಿಂದ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಮರೇಶ್, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೇರಿದಂತೆ ರೇಷ್ಮೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ನಿಮ್ಮ ಸಂಕಟ ನಮಗೂ ಅರ್ಥವಾಗುತ್ತದೆ, ನಾವು ರೈತರ ಮಕ್ಕಳು, ನಾವು ಅಧಿಕಾರಿಗಳೆನ್ನುವುದಕ್ಕಿಂತ ರೈತರಾಗಿ ನಾವು ದ್ರಾಕ್ಷಿ ಬೆಳೆಯುತ್ತಿದ್ದು, ನಮಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಸಮಾಧಾನಪಡಿಸಿದರು.

ನಂತರ ದ್ರಾಕ್ಷಿ ಬೆಳೆಗಳ ವೀಕ್ಷಣೆ ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಕಳೆದ ವರ್ಷದಂತೆ ಈ ಭಾಗದಲ್ಲಿ ಈ ವರ್ಷವೂ ಕೂಡಾ ಆಲಿಕಲ್ಲು ಮಳೆಯಿಂದಾಗಿ ರೈತರು ಬಹಳಷ್ಟು ಸಂಕಷ್ಟವನ್ನು ಅನುಭವಿಸುವಂತಾಗಿದೆ, ವಿಧಾನಸಭೆಯ ಅಧಿವೇಶನ ನಡೆಯುತ್ತಿರುವುದರಿಂದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರುಗಳ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟು ಈ ಭಾಗದ ರೈತರುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುಂವಂತೆ ಮನವಿ ಮಾಡುವುದಾಗಿ ಹೇಳಿದರು.
ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಗಂಗನಹಳ್ಳಿ, ಮುತ್ತೂರು, ಮಳ್ಳೂರು ಗ್ರಾಮಗಳಿಗೆ ಬೇಟಿ ನೀಡಿ ಅವರು ಬೆಳೆಗಳನ್ನು ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಜಿ.ವಿ.ದೇವರಾಜು, ರೈತರಾದ ಸುರೇಂದ್ರಗೌಡ, ಬಚ್ಚೇಗೌಡ, ಮುನಿಶಾಮಿಗೌಡ, ಚಿಕ್ಕಮುನಿಯಪ್ಪ, ಪ್ರಭಾಕರ್, ಶ್ರೀನಿವಾಸಮೂರ್ತಿ, ತ್ಯಾಗರಾಜ್, ಶ್ರೀನಿವಾಸ್, ಪ್ರಭಾಕರ್ ಮುಂತಾದವರು ಹಾಜರಿದ್ದರು.
ಆಲಿಕಲ್ಲಿನ ಮಳೆಯಿಂದಾಗಿ ಅಪಾರ ಬೆಳೆ ಹಾನಿ
ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ
ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರ ಜನರನ್ನು ದಿಕ್ಕುತಪ್ಪಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ನಾಗರೀಕರು ಪ್ರಮಾಣವಚನ ಸ್ವೀಕಾರ ಮಾಡಿದರು.
ತಾಲ್ಲೂಕಿನ ಈ-ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಘಟಕ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರಿಂದ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಮುಂಬರುವ ಚುನಾವಣೆಯಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ, ನೀರಿಗಾಗಿ ಹೋರಾಟಕ್ಕೆ ಇಳಿಯುವುದಾಗಿ ಪ್ರತಿಜ್ಞೆ ಮಾಡಿದರು.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ನೀರಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ಕೂಡಾ, ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಗಳ ಸಮಯದಲ್ಲಿ ನಮ್ಮ ಬಲಹೀನತೆ ಎಂಬಂತೆ ನೀರಾವರಿ ಯೋಜನೆಗಳನ್ನೆ ಚುನಾವಣೆಯ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಚುನಾವಣೆಗಳಲ್ಲಿ ಗೆದ್ದ ಮೇಲೆ ನಮ್ಮ ಕಡೆಗೆ ತಿರುಗಿಯೂ ನೋಡದೆ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾರೆ.
ಈ ಭಾಗದಿಂದ ಆಯ್ಕೆಯಾಗಿ ಹೋದಂತಹ ಜನಪ್ರತಿನಿಧಿಗಳೂ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರುವಂತಹ ಶಕ್ತಿಯನ್ನು ಕಳೆದುಕೊಂಡು ನಿಸ್ಪ್ರಯೋಜಕರಾಗಿದ್ದಾರೆ. ಚುನಾವಣೆಗಳಲ್ಲಿ ಮತದಾನ ಮಾಡಿದರೂ ಕೂಡಾ ನಮಗೆ ಯಾವುದೇ ಪ್ರಯೋಜನವಿಲ್ಲದಿರುವಾಗ ಮತದಾನ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಜನತೆಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು, ಉಚಿತವಾಗಿ ಅಕ್ಕಿಯನ್ನು ಕೊಡುತ್ತಿದ್ದಾರೆ, ನಮಗೆ ನೀರು ಕೊಡಲು ಸಾಧ್ಯವಾಗದೆ ಕೇವಲ ಅಕ್ಕಿಯನ್ನು ಕೊಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ತರಾತುರಿಯಲ್ಲಿ ಮತಗಳನ್ನು ಗಳಿಸಿಕೊಳ್ಳುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕುವ ಮುಖಾಂತರ ಈ ಜನರ ಭಾವನೆಗಳನ್ನು ಕಡೆಗಣಿಸಿದರು. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರದ ಭಾಗಗಳಿಗೆ ನೀರು ಬರುವುದಿಲ್ಲ, ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ, ಹೇಳಿಕೆ ನೀಡಿದ್ದಾರೆ.
ಎತ್ತಿನಹೊಳೆಯೋಜನೆಯ ನೀರು ಬರುವುದಿಲ್ಲವೆಂದು ಗೊತ್ತಾದ ಮೇಲೆ ಸರ್ಕಾರ ಈ ಭಾಗದ ಜನರನ್ನು ದಿಕ್ಕು ತಪ್ಪಿಸಲು ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಯಲು ಸೀಮೆಯ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸುವ ನಾಟಕವಾಡುತ್ತಿದ್ದು, ಸರ್ಕಾರದ ಉದ್ದೇಶ ಸ್ಪಷ್ಟವಾಗುತ್ತಿದೆ, ಆದ್ದರಿಂದ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮ ಪಂಚಾಯತಿಯ ಮುಖಂಡರೂ ಸೇರಿದಂತೆ ನಾಗರಿಕರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಳ್ಳೂರು ಹರೀಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಚಲಪತಿ, ವೆಂಕಟಸ್ವಾಮಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಾಥ್, ಕದಿರಪ್ಪ, ಯುವಶಕ್ತಿ ಘಟಕದ ಮುಖಂಡರಾದ ವಿಜಯಭಾವರೆಡ್ಡಿ, ಪ್ರತಾಪ್ರೆಡ್ಡಿ, ಶಿವಕುಮಾರ್, ಮುನಿರೆಡ್ಡಿ, ವಿಶ್ವನಾಥ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿ
ಕಳೆದ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಸಭೆಗೆ ವಿವರ ನೀಡಿ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿಎಸ್ಎನ್ ರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಸ್.ದೇವಗಾನಹಳ್ಳಿ, ಬಸವಾಪಟ್ಟಣ ಹಾಗೂ ಎಸ್.ದೇವಗಾನಹಳ್ಳಿಯ ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ಕ್ರಿಯಾ ಯೋಜನೆ ರೂಪಿಸಿ ೩ ವರ್ಷಗಳಾಗಿದೆ. ಆದರೂ ಇದುವರೆಗೂ ದುರಸ್ಥಿ ಕಾರ್ಯ ಆಗಿಲ್ಲ ಯಾಕೆ ? ಹಣ ಏನಾಗಿದೆ ? ಸಭೆಗೆ ವಿವರಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಣಪತಿ ಸಾಕರೆಯವರು, ಅಂದಾಜು ಕ್ರಿಯಾ ಯೋಜನೆಗೂ ಇರುವ ಹಣದ ಮೊತ್ತಕ್ಕೂ ಹೊಂದಾಣಿಕೆಯಾಗದೆ ದುರಸ್ಥಿ ಕೆಲಸ ನೆನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.
ಈ ಕುರಿತು ಶೀಘ್ರವಾಗಿ ಸ್ಪಷ್ಟ ಆದೇಶವನ್ನು ನೀಡುವಂತೆ ಮೇಲಧಿಕಾರಿಗಳಿಗೆ ವಿವರವಾದ ಪತ್ರವನ್ನು ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೃಷಿ ಸಹಾಯಕ ನಿರ್ದೇಶಕ ಬಿ.ಸಿದೇವೇಗೌಡರು ಈಗಾಗಲೆ ತಾಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ೮೦ ಕೃಷಿ ಹೊಂಡಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು. ರೇಷ್ಮೆ ಇಲಾಖೆಯ ವಿಸ್ತರಣಾಕಾರಿ ಎಂ.ನಾರಾಯಣಸ್ವಾಮಿ, ೧.೬೦ ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಿದ್ದು ಅಷ್ಟು ಹಣ ಬಿಡುಗಡೆ ಮಾಡಿದರೆ ೧೦ ರೂ.ಗಳ ಪ್ರೋತ್ಸಾಹದನ ವಿಲೇವಾರಿ ಮಾಡುತ್ತೇವೆ. ಇನ್ನು ೩೦ ರೂ.ಗಳ ಪ್ರೋತ್ಸಾಹದನ ಬಿಡುಗಡೆಯೆ ಆಗಿಲ್ಲ ಎಂದು ವಿವರಿಸಿದರು.
ಪಶುವೈದ್ಯಕೀಯ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಆರೋಗ್ಯ ಇಲಾಖೆಯ ಡಾ.ಅನಿಲ್ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪುರುಷೋತ್ತಮ್, ತೋಟಗಾರಿಕೆ ಇಲಾಖೆಯ ಆನಂದ್, ಬಿಸಿಎಂ ಇಲಾಖೆಯ ಎಸ್.ಶಂಕರ್ ಮತ್ತಿತರರು ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸಭೆಗೆ ವಿವರಿಸಿದರು.
ಪ್ರೀತಿ, ವಿಶ್ವಾಸಗಳ ಭಾವನಾತ್ಮಕ ಬೆಸುಗೆ ಸಮಾನತೆಗೆ ಮೂಲ
ಭಾರತೀಯ ಸಮಾಜದಲ್ಲಿ ಈಗಲೂ ಕಾಣಬರುವ ಮೇಲುಕೀಳೆಂಬ ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದು ದೊಡ್ಡ ಹೋರಾಟವನ್ನೇ ಬಸವಣ್ಣನವರು ಮಾಡಿದ್ದಾರೆ. ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಜಾತಿರಹಿತ ಆದರ್ಶ ಸಮಾಜದ ಕನಸು ಕಂಡ ಅವರು ತಿಳಿಸಿದ್ದಾರೆ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮಿಗಳು ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಸಂಜೆ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ಬಸವೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಜಗಜ್ಯೋತಿ ಕಲ್ಯಾಣ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜೊತೆಗೆ ಪ್ರಯಾಣಿಸಿದ ಮಾತ್ರಕ್ಕೆ, ಜೊತೆಯಲ್ಲಿ ಉಂಡ ಮಾತ್ರಕ್ಕೆ ಸಮಾನತೆ ಬಂತೆಂದು ಭಾವಿಸುವುದು ಬರೀ ಭ್ರಮೆ. ಅಂತರಂಗದಲ್ಲಿ ಮೇಲು-ಕೀಳೆಂಬ ಭಾವನೆ ಇನ್ನೂ ಹೋಗಿಲ್ಲ. ಭಾವನಾತ್ಮಕ ಬೆಸುಗೆಯಿಲ್ಲದ ಸಮಾನತೆ ಪರಿಪೂರ್ಣ ಸಮಾನತೆ ಅಲ್ಲ. ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ ಭಾವನಾತ್ಮಕ ಬೆಸುಗೆಯಿಂದ ಕೂಡಿದ್ದು, ಪ್ರೀತಿ ಮತ್ತು ಅಂತಃಕರಣದಿಂದ ಹುಟ್ಟಿದ್ದು. ಎಲ್ಲಿ ಪ್ರೀತಿ, ವಿಶ್ವಾಸಗಳ ಭಾವನಾತ್ಮಕ ಬೆಸುಗೆ ಇರುತ್ತದೆಯೋ ಅಲ್ಲಿ ಅಸಮಾನತೆಯ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮಾನವ ಜನ್ಮಕ್ಕಿಂತ ಮಾನವೀಯತೆ ದೊಡ್ಡದು ಎನ್ನುವುದನ್ನು ಅಡುವ ಬದಲು ಮಾಡಿ ತೋರಿದ ಸಮಾಜವಾದದ ಚಿಂತಕ ಬಸವಣ್ಣ. ಮಾನವತಾವಾದಿ ಬಸವೇಶ್ವರರ ಕಾಯಕ ಸಿದ್ಧಾಂತವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೇಲು ಕೀಳುಗಳೆಂಬ ಸಂಕುಚಿತ ಮನೋಭಾವ ತೊಡೆದು ಹಾಕಲು 12ನೇ ಶತಮಾನದಲ್ಲೇ ವೇದಿಕೆ ಸಿದ್ಧಪಡಿಸಿದ ಬಸವಣ್ಣ ನವರು ಜಾತಿ, ಧರ್ಮಗಳೆಂಬ ಗೋಡೆಗಳನ್ನು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಕೆಡವಿದ ಮಹಾನ್ ದಾರ್ಶನಿಕರೆಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಬಸವೇಶ್ವರ ಸೇವಾ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಪುರುಷೋತ್ತಮ್, ಬಿ.ಸಿ.ಎಂ. ಇಲಾಖೆಯ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ರಾಮಚಂದ್ರಾಚಾರಿ, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್ ಬಾಬು, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.
ಚಟುವಟಿಕೆಗಳಿರಲಿ ಚುರುಕುತನಕ್ಕೆ!
ಚುರುಕುತನ ಎಂದರೇನು? : ಯಾವ ವಿಷಯವೇ ಆಗಲಿ ನಮ್ಮ ಪ್ರತಿಕ್ರಿಯೆಯು ನಿರೀಕ್ಷಣೆ ಮಟ್ಟಕ್ಕೆ ಇದ್ದು ಅದರಿಂದ ಇಡೀ ಘಟನೆಗೆ ಉಪಯುಕ್ತವೆನಿಸಿದರೆ ಅದನ್ನು ಚುರುಕುತನ ಎನ್ನಬಹುದು. ಉದಾಹರಣೆಗೆ ರಾಮಾಯಣದ ಹನುಮಂತನಿಗೆ ಶ್ರೀರಾಮನು ಯಾವುದೇ ಜವಾಬ್ದಾರಿಯನ್ನು ವಹಿಸಿದಾಗ ವಿಷಯವನ್ನು ಸಮಗ್ರವಾಗಿ ಅರಿತು ಜವಾಬ್ದಾರಿಯನ್ನು ಯಾವುದೇ ಚ್ಯುತಿ ಇಲ್ಲದೆ ನಿರ್ವಹಿಸುತ್ತಿದ್ದನಂತೆ. ಇವನಂತೆ ನಾವು ಚುರುಕಾಗಿರಬೇಕು.
1. ಸದಾ ಯಾವುದಾದರೂ ಚಟುವಟಿಕೆಗಳಲ್ಲಿನಿಮ್ಮನ್ನು ತೊಡಗಿಸಿಕೊಳ್ಳಿರಿ.
2. ಆಟ-ಪಾಠಗಳ ಹೊರತಾಗಿ ನಿಮಗೆ ಆಸಕ್ತಿಯಿರುವ ಯಾವುದಾದರೂ ಕಲೆ, ಲಲಿತಕಲೆಗಳಲ್ಲಿನಿಮ್ಮನ್ನುತೊಡಗಿಸಿಕೊಳ್ಳಿರಿ.
3. ಮನೆಯ ಅಥವಾ ಶಾಲೆಯ ಸುತ್ತಮುತ್ತಲಿನ ಕೈತೋಟದ ಕೆಲಸಗಳನ್ನು ನಿರ್ವಹಿಸಿ. ಇದರಿಂದ ನಿಮಗೆ ತರಕಾರಿ, ಹೂವು, ಸೊಪ್ಪು, ಸಸ್ಯಗಳ ಬಗ್ಗೆ ಜ್ಞಾನವು ದೊರೆಯುತ್ತದೆ.
4. ಸಂಗೀತ, ನೃತ್ಯ, ಚಿತ್ರಕಲೆ, ಸಂಗೀತವಾದ್ಯ, ಶಿಲ್ಪಕಲೆ ಹೀಗೆ ಯಾವುದಾದರೂ ಒಂದು ನಿಮಗಿಷ್ಟವಾದ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.
5. ಬಾಲಕಿಯರಾದರೆ ಹೊಲಿಗೆ, ಕಸೂತಿ, ರಂಗೋಲಿ-ಮೊದಲಾದ ಕಲೆಗಳನ್ನು ಕಲೆಯಬಹುದು.
6. ಅಂಚೆ ಚೀಟಿಗಳು, ನಾಣ್ಯಗಳು, ಬೆಂಕಿಪಟ್ಟಣಗಳು, ಅಪರೂಪದ ವ್ಯಕ್ತಿಗಳ ಅಥವಾ ಪ್ರಕೃತಿಯ ದೃಶ್ಯಗಳು ಮೊದಲಾದುವುಗಳನ್ನು ಸಂಗ್ರಹಿಸುವ ಅಭ್ಯಾಸವು ನಿಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸುತ್ತದೆ. ನಿಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆ.
7. ಪಕ್ಷಿ ವೀಕ್ಷಣೆ, ಪ್ರಕೃತಿ ವೀಕ್ಷಣೆ, ಉದ್ಯಾನವನದಲ್ಲಿ ನಡಿಗೆ, ಓದುವುದು ಮೊದಲಾದ ಅಭ್ಯಾಸಗಳು ನಿಮಗೆ ಸಂತೋಷವನ್ನು ತಂದುಕೊಡುತ್ತದೆ.
8. ಹೊಸ ಭಾಷೆಯನ್ನು ಕಲಿಯುವುದು, ಅನುಕರಣೀಯ ಸ್ವಭಾವದ ಹೊಸ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳುವುದು ಇವೆಲ್ಲಾ ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ಮಾರ್ಪಾಡಿಸುವ ಅಭ್ಯಾಸಗಳು.
9. ಪ್ರತಿದಿನ ಒಂದು ಕನ್ನಡ ಪತ್ರಿಕೆ ಮತ್ತು ಆಂಗ್ಲ ಪತ್ರಿಕೆಯನ್ನು ಅವಲೋಕಿಸುವುದು ಒಳ್ಳೆಯದು. ಅದರಲ್ಲೂ ಸಂಪಾದಕೀಯ, ದೀರ್ಘಲೇಖನ, ಪದಬಂಧ ಮುಂತಾದ ವಿಭಾಗಗಳಿಗೆ ಲಕ್ಷ್ಯವನ್ನು ಕೊಟ್ಟರೆ ನಿಮ್ಮ ಜ್ಞಾನದ ಮಟ್ಟ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
10. ಅನುಕರಣೀಯ ಮತ್ತು ಉತ್ತಮ ಸಾಧನೆಗಳನ್ನು ಮಾಡಿದ ಮಹಾಪುರುಷರ ಜೀವನಚರಿತ್ರೆಗಳನ್ನು ಅಭ್ಯಸಿಸುವುದರಿಂದ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟ ಗುರಿ ದೊರೆಯುತ್ತದೆ. ರಾಮಕೃಷ್ಣ ಪರಮಹಂಸರು, ಶಾರದಾದೇವಿ, ಸ್ವಾಮಿ ವಿವೇಕಾನಂದರು, ಸಹೋದರಿ ನಿವೇದಿತಾ, ಸರ್.ಸಿ.ವಿ. ರಾಮನ್, ಮೇಡಂ ಕ್ಯೂರಿ, ಸರ್.ಐಸ್ಯಾಕ್ ನ್ಯೂಟನ್, ಆಲ್ಬರ್ಟ್ ಐನ್‍ಸ್ಟೈನ್ ಮೊದಲಾದ ಮಹಾವ್ಯಕ್ತಿಗಳ ಜೀವನಚರಿತ್ರೆಯನ್ನು ಸಂಗ್ರಹಿಸಿ ಗಮನವಿಟ್ಟು ಓದಿರಿ. ನಿಮಗೆ ಅದರಲ್ಲಿ ಕಂಡು ಬಂದ ಒಳ್ಳೆಯ ಗುಣಗಳನ್ನು ಅಥವಾ ಅಭ್ಯಾಸಗಳನ್ನು ನೀವೂ ಅನುಕರಿಸಲು ಪ್ರಯತ್ನಿಸಿರಿ.
11. ಪ್ರತಿ ದಿನ ಇಂಗ್ಲಿಷ್, ಕನ್ನಡ, ಸಂಸ್ಕøತ, ಹಿಂದಿ ಮೊದಲಾದ ಭಾಷೆಗಳ ಒಂದು ಹೊಸ ಪದ ಕಲೆಯಲು, ಕಲೆತ ಹೊಸ ಶಬ್ದವನ್ನು ಬಳಸಲು ಪ್ರಯತ್ನಿಸಿ. ನಿಮ್ಮ ಭಾಷೆಯು ಉತ್ತಮಗೊಳ್ಳುತ್ತದೆ. ನಿಮ್ಮ ಶಬ್ದಭಂಡಾರ ಶ್ರೀಮಂತವಾಗುತ್ತದೆ. ನೀವು ಉತ್ತಮ ವಾಗ್ಮಿಗಳಾಗುತ್ತೀರಿ.
12. ಶಾಲೆಯಲ್ಲಿ ನಡೆಯುವ ಇಲ್ಲ ರೀತಿಯ ಕ್ರೀಡಾ-ಸಾಂಸ್ಕøತಿಕ-ಸಾಹಿತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿರಿ. ಆದರೆ ಬಹುಮಾನದ ನಿರೀಕ್ಷೆಯಿಂದ ಭಾಗವಹಿಸಬೇಡಿರಿ.
13. ವರ್ಷಕ್ಕೊಮ್ಮೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡಲು ಸಾಧ್ಯವಾದರೆ ಒಳ್ಳೆಯದು ಹಾಗೂ ಆ ಸ್ಥಳದ ಸಂಪೂರ್ಣ ಮಾಹಿತಿಯನ್ನು ಬರೆದುಕೊಂಡು ಸಂಗ್ರಹಿಸಿರಿ.
ಡಾ. ಶ್ರೀವತ್ಸ
ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ
ಯಾವುದೆ ಕಟ್ಟಡ ಹಾಗೂ ಇತರೆ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಶಿಕ್ಷಾರ್ಹ ಅಪರಾಧ ಮಾತ್ರವಲ್ಲ ಅದು ಸಮಾಜದ ಮೇಲೆ ವಿಪರೀತವಾದ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್ ಅಭಿಪ್ರಾಯಪಟ್ಟರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯದ ಕಟ್ಟಡಕ್ಕೆ ಭಾನುವಾರ ಭೇಟಿ ನೀಡಿದ ಅವರು, ಅಲ್ಲಿ ಕೆಲಸದಲ್ಲಿ ತೊಡಗಿರುವ ಕೂಲಿ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಾರ್ಮಿಕ ನಿರೀಕ್ಷಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೀಗ ರಾಜ್ಯದ ಉಚ್ಚ ನ್ಯಾಯಾಲಯವು ಕಟ್ಟಡ ಹಾಗೂ ಇತರೆ ನಿರ್ಮಾಣದಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದು ಸಂಬಂದಿಸಿದ ಎಲ್ಲ ಇಲಾಖೆಗಳೂ ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ ಅವರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲು ಸೂಚಿಸಿದೆ ಎಂದರು.
ಈ ತಿಂಗಳ ೨೭ ರೊಳಗೆ ಶೇ. ೧೦೦ರಷ್ಟು ಗುರಿಯನ್ನು ಮುಟ್ಟಲು ಘನ ನ್ಯಾಯಾಲಯವು ಆದೇಶಿಸಿದ್ದು ಅದರಂತೆ ಸಂಬಂದಿಸಿದ ಎಲ್ಲ ಇಲಾಖೆಗಳೂ ಸಹ ಕಾರ್ಯೋನ್ಮುಖರಾಗಬೇಕು. ಈ ಆಂದೋಲನದಲ್ಲಿ ಸಂಘ ಸಂಸ್ಥೆಗಳೂ ಸಹ ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಎಲ್ಲಿಯೇ ಆಗಲಿ ಕಟ್ಟಡ ಇನ್ನಿತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರ, ಗುತ್ತಿಗೆದಾರರ ವಿವರ ನೀಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿರುವ ಅವರು ಇದರಿಂದ ಎಲ್ಲ ಕೂಲಿ ಕಾರ್ಮಿಕರ ನಿಖರ ಸಂಖ್ಯೆ ತಿಳಿಯಲಿದೆಯಲ್ಲದೆ ಮಂಡಳಿಯಿಂದ ಸವಲತ್ತುಗಳನ್ನು ನೀಡಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ನಿರೀಕ್ಷಕ ಟಿ.ಡಿ.ರಾಮಯ್ಯ ಮಾತನಾಡಿ, ೧೮-–೬೦ ವರ್ಷದೊಳಗಿನ ಕೂಲಿ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿದ್ದು ವರ್ಷದ ಎಲ್ಲ ದಿನಗಳಲ್ಲೂ ಸದಸ್ಯತ್ವವನ್ನು ಮಾಡಿಸಬಹುದೆಂದರು.
ಅರ್ಜಿ ನಮೂನೆ ೫ ಮತ್ತು ೬, ೨ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ವಯಸ್ಸಿನ ದೃಡೀಕರಣದ ದಾಖಲೆ, ಚುನಾವಣೆಯ ಗುರ್ತಿನ ಚೀಟಿಯ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗು ೩ ವರ್ಷಗಳ ಅವದಿಯ ಸದಸ್ಯತ್ವ ನೋಂದಣಿ ಹಾಗೂ ನವೀಕರಣ ಶುಲ್ಕವಾಗಿ ೧೭೫ ರೂ ಪಾವತಿಸಬೇಕು ಎಂದರು.
ಇದರಿಂದ ಕಾರ್ಮಿಕರ ಇಬ್ಬರು ಮಕ್ಕಳಿಗೆ ೫-–೭ನೇ ತರಗತಿಯವರೆಗೂ ವಾರ್ಷಿಕ ತಲಾ ೨ ಸಾವಿರ, ೮-–೧೦ನೇ ತರಗತಿಯವರೆಗೂ ವಾರ್ಷಿಕ ತಲಾ ೫ ಸಾವಿರ ರೂ, ಪಿಯುಸಿ, ಜೆಒಸಿ, ಎಂಜಿನಿಯರಿಂಗ್ ಇನ್ನಿತರೆ ತಾಂತ್ರಿಕ ತರಗತಿಗಳಿಗೆ ತಲಾ ೫ ಸಾವಿರ ಹಾಗೂ ಉನ್ನತ ಪದವಿಗೆ ತಲಾ ೧೫ ಸಾವಿರ ವಾರ್ಷಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಜತೆಗೆ ಇಬ್ಬರು ಮಕ್ಕಳ ಮದುವೆಗೆ ತಲಾ ೫೦ ಸಾವಿರ, ಹೆಣ್ಣು ಮಗುವಿನ ಹೆರಿಗೆಯ ಸಮಯ ೧೫ ಸಾವಿರ ರೂಪಾಯಿಯನ್ನು ನೀಡಲಾಗುವುದು. ಕಾರ್ಮಿಕರು ಅಪಘಾತದಲ್ಲಿ ಗಾಯಗೊಂಡರೆ ಅಂಗವಿಕಲತೆಯ ಪ್ರಮಾಣದ ಮೇಲೆ ಪಿಂಚಣಿ, ಚಿಕಿತ್ಸೆಗೆ ಹಣದ ಸಹಾಯವನ್ನು ನೀಡಲಾಗುವುದು. ಸದಸ್ಯತ್ವ ಪಡೆದ ಕಾರ್ಮಿಕರು ಮೃತಪಟ್ಟರೆ ಅವರ ಅಂತಿಮ ಸಂಸ್ಕಾರಕ್ಕೆ ೪ ಸಾವಿರ ರೂ ಹಾಗೂ ನಂತರ ಅವರ ಕುಟುಂಬಕ್ಕೆ ೧೫ ಸಾವಿರ ರೂಪಾಯಿಗಳನ್ನು ನೀಡುವುದರ ಜತೆಗೆ ೨ ಲಕ್ಷ ರೂಗಳ ಪರಿಹಾರವನ್ನು ಸಹ ನೀಡಲಾಗುವುದು.
ಹೀಗೆ ಹತ್ತು ಹಲವು ಯೋಜನೆಗಳು ಇದ್ದು ಎಲ್ಲ ಕೂಲಿ ಕಾರ್ಮಿಕರೂ ಸಹ ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿದರಲ್ಲದೆ ಈ ಕುರಿತು ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಲು ನಮ್ಮೊಂದಿಗೆ ಕೈ ಜೋಡಿಸುವಂತೆ ಗುತ್ತಿಗೆದಾರರು, ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ ಮತ್ತಿತರರು ಹಾಜರಿದ್ದರು.
ಬಸವಜಯಂತ್ಯುತ್ಸವ ಆಚರಣೆ
ತಾಲ್ಲೂಕಿನ ವಿವಿದೆಡೆ ಮಂಗಳವಾರ ಬಸವಜಯಂತ್ಯುತ್ಸವವನ್ನು ಬಸವಣ್ಣ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯ, ಉಲ್ಲೂರುಪೇಟೆಯ ಜೋಡಿ ಬಸವಣ್ಣ ದೇವಾಲಯ, ತಾಲ್ಲೂಕಿನ ಶೆಟ್ಟಿಹಳ್ಳಿ, ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಿ, ಹೆಸರುಬೇಳೆ ಪಾನಕ ವಿತರಣೆ ನಡೆಯಿತು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಆಡಳಿತ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಪರವಾಗಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ, ರಜಸ್ವ ನಿರೀಕ್ಷಕರಾದ ಸುಬ್ರಮಣಿ, ಕುಮಾರ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವೇಶ್ವರ ಸೇವಾ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್ ಬಾಬು, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.
ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವ
ಮೊರಸು ನಾಡೆಂದು ಹೆಸರಿದ್ದ ತಮಿಳುನಾಡಿನ ಮೂಲದ ಒಕ್ಕಲಿಗ ಸಮುದಾಯ ಕರ್ನಾಟಕಕ್ಕೆ ಬಂದ ಚಾರಿತ್ರಿಕ ಇತಿಹಾಸವುಳ್ಳ ಹಂಡಿಗನಾಳದ ಈರಣ ್ಣ– ಕೆಂಪಣ್ಣ ದೇವಾಲಯದಲ್ಲಿ ಸೋಮವಾರ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಿಥಿಲಗೊಂಡಿದ್ದ ಈರಣ ್ಣ– ಕೆಂಪಣ್ಣ ದೇವಾಲಯವನ್ನು ಎರಡು ದಶಕಗಳ ಹಿಂದೆ ಪುನರ್ಪ್ರತಿಷ್ಠಾಪಿಸಿದ್ದು, ಈಗ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸುಂದರ ದೇವಾಲಯ, ವಸತಿಗೃಹ ಮತ್ತು ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವಕ್ಕೆ ಹಲವಾರು ಜಿಲ್ಲೆಗಳಿಂದ ಒಕ್ಕಲಿಗ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಆಗಮಿಸಿದ್ದರು.
ಹೆಣ್ಣು ಮಕ್ಕಳು ವಿವಿಧ ಹೂಗಳಿಂದ ಅಲಂಕರಿಸಿದ ತಂಬಿಟ್ಟು ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ದೇವಾಲಯದವರೆಗೂ ಸಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆಗಮಿಸಿದ್ದ ಸಾವಿರಾರು ಮಂದಿ ಭಕ್ತರಿಗೆ ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು, ಹೆಸರುಬೇಳೆ ಪಾನಕವನ್ನು ಸಹ ಆಯೋಜಿಸಲಾಗಿತ್ತು. ಹಿರಿಯ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
‘ಒಕ್ಕಲು ತನಕ್ಕೆ ಮೂಲ ಭೂತಾಯಿ ಮತ್ತು ನೀರು. ಶಾಶ್ವತ ನೀರು ಜಿಲ್ಲೆಗೆ ಬಂದಲ್ಲಿ ನಮ್ಮ ಬಯಲು ಸೀಮೆಯ ಶ್ರಮಿಕರು ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು’ ಎಂದು ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ನಿವೃತ್ತ ಐ.ಜಿ.ಪಿ ಶಂಕರ್ ಬಿದಿರಿ, ನಿವೃತ್ತ ಎಸ್.ಪಿ. ಎನ್.ನಾಗರಾಜು, ಡಾಟಿ ಸದಾನಂದಗೌಡ, ವಾಣಿ ಕೃಷ್ಣಾರೆಡ್ಡಿ, ಬಿ.ಕೆ.ನಾರಾಯಣಸ್ವಾಮಿ, ಪಿ.ವಿ.ನಾಗರಾಜ್, ಮುನಿಕೃಷ್ಣಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್, ಬಿಳಿಶಿವಾಲೆ ರವಿ. ಕೆಂಪರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಮಂಗಲ ಶಾಲೆಯಲ್ಲಿ ಚಿಣ್ಣರ ಕಾಜಾಣ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಭಾನುವಾರ ಶಾಲೆಯಲ್ಲಿ ನಡೆಯುತ್ತಿರುವ ‘ಸಹಜ’ ಶಿಬಿರದ ಭಾಗವಾಗಿ ನಡೆದ ‘ಚಿಣ್ಣರ ಕಾಜಾಣ’ ಕಾರ್ಯಕ್ರಮವನ್ನು ಸಾಹಿತಿ ಹಾಗೂ ಚಿಣ್ಣರ ಕಾಜಾಣ ಕಾರ್ಯಕ್ರಮದ ಆಯೋಜಕ ಬೇಲೂರು ರಘುನಂದನ ರವರು ಉದ್ಘಾಟಿಸಿದರು.
‘ಮಕ್ಕಳು ಕವಿಗಳ ಕವಿತೆಗಳನ್ನು ವಾಚಿಸುವುದು ಹಾಗೂ ಕಲಿಯುವದರಿಂದ ಮಕ್ಕಳಲ್ಲೂ ಕವಿತೆ ಬರೆಯುವ ಹವ್ಯಾಸ ಉಂಟಾಗುವುದು. ಇದರಿಂದ ಮಕ್ಕಳ ಕಲ್ಪನಾಶೀಲತೆ ಹೆಚ್ಚುವುದು. ಕನ್ನಮಂಗಲದ ಈ ಶಾಲೆಯಲ್ಲಿ ಉತ್ತಮ ಸಾಹಿತ್ಯಕ ವಾತಾವರಣ ಸೃಷ್ಟಿಯಾಗಿರುವುದು ಸಂತಸದ ವಿಚಾರ’ ಎಂದು ಬೇಲೂರು ರಘುನಂದನ ಅಭಿಪ್ರಾಯಪಟ್ಟರು.
ಕನ್ನಮಂಗಲದ ಹದಿಮೂರು ಮಕ್ಕಳು ಕನ್ನಡದ ಹಲವು ಕವಿಗಳ ಕವಿತೆಗಳನ್ನು ವಾಚಿಸಿದರು. ಕಿರಣ್, ಭವಾನಿ, ಶೇಖರ್, ರಾಜೇಶ, ಧನುಷ್, ಗಾಯತ್ರಿ, ಮೀನಾಕ್ಷಿ, ವರ್ಷ, ಅಮೃತ, ವಾಣಿ, ಶಿಲ್ಪ ಈ ಮಕ್ಕಳು ಕನ್ನಡದ ಪ್ರಖ್ಯಾತ ಕವಿಗಳಾದ ಕುವೆಂಪು, ಅಡಿಗ, ಲಂಕೇಶ್, ವೆಂಕಟೇಶಮೂರ್ತಿ, ಲಕ್ಷ್ಮಣರಾವ್, ನಿಸಾರ್ ಅಹಮದ್, ಶಿವರುದ್ರಪ್ಪ, ನರಸಿಂಹಸ್ವಾಮಿ ಮುಂತಾದವರ ಕವನಗಳನ್ನು ವಾಚಿಸಿದರು.
ಕವನವಾಚನದ ನಂತರ ಮಕ್ಕಳೊಂದಿಗೆ ಬೇಲೂರು ರಘುನಂದನರವರು ಸಂವಾದ ನಡೆಸಿದರು. ಈ ಸಂವಾದದಲ್ಲಿ ಕವಿತೆಗಳನ್ನು ಬರೆಯುವ ಕುರಿತು ಮಕ್ಕಳಿಗೆ ಹಲವು ಸೂಚನೆಗಳನ್ನು ಸಲಹೆಗಳನ್ನು ನೀಡಿದರು. ಹಾಗೆಯೇ ಮಕ್ಕಳನ್ನು ಗುಂಪುಗಳಲ್ಲಿ ಕೂರಿಸಿ ಒಂದೊಂದು ವಿಷಯ ಕೊಟ್ಟು ಅದರ ಬಗ್ಗೆ ಕವಿತೆಗಳನ್ನು ಬರೆಯಲು ಸೂಚಿಸಿದರು.
ಶಾಲೆಯ ಶಿಕ್ಷಕರಾದ ಎಸ್. ಕಲಾಧರ್, ಕೆ.ಶಿವಶಂಕರ್, ಚಿಣ್ಣರ ಕಾಜಾಣ ಸಂಚಾಲಕಿ ಮಂಜುಳಾ, ಯುವ ಸಾಹಿತಿಗಳಾದ ಯೋಗೇಶ್ ಹಾಗೂ ಪುನೀತ್ ಹಾಗೂ ಗೋಕುಲ್ ಸಹೃದಯ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಳೇಗರಿಗಳ ಮೂಲಕ ಬಸವಣ್ಣನ ಮೆಲುಕು
ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ಜೀವನ ಚರಿತ್ರೆಯೆಂದೇ ಪರಿಗಣಿಸುವ ಭೀಮ ಕವಿಯ ‘ಬಸವ ಪುರಾಣ’ ತಾಳೆಗರಿಯ ರೂಪದಲ್ಲಿ ತಾಲ್ಲೂಕಿನಲ್ಲಿ ಕೆಲವಾರು ಮನೆಗಳಲ್ಲಿ ಈಗಲೂ ಜೋಪಾನವಾಗಿದೆ.
ಹದಿಮೂರನೇ ಶತಮಾನದಲ್ಲಿ ಕೆಲವಾರು ಲಿಪಿಕಾರರಿಂದ ಹಲವಾರು ತಾಳೇಗರಿಗಳ ಹಸ್ತಪ್ರತಿಗಳನ್ನು ಮಾಡಲ್ಪಟ್ಟ ಹಳಗನ್ನಡದ ಭೀಮ ಕವಿಯ ‘ಬಸವ ಪುರಾಣ’ ವನ್ನು ಮೂಲ ರೂಪದಲ್ಲಿ ಈಗಲೂ ಕಾಣಬಹುದಾಗಿದೆ. ನಗರದ ಎಂ.ಎಸ್.ಜ್ಞಾನೇಶ್ವರ್ ಮತ್ತು ಬಿ.ಎನ್.ಚಂದ್ರಪ್ಪ ಅವರ ಮನೆಯಲ್ಲಿ ‘ಬಸವ ಪುರಾಣ’ದ ತಾಳೇಗರಿಗಳ ಕಟ್ಟನ್ನು ಸಂರಕ್ಷಿಸಲಾಗಿದೆ.
ಬಸವಣ್ಣ, ಬಸವೇಶ್ವರ, ಬಸವೇಶ, ಬಸವರಾಜ ಎಂದೆಲ್ಲಾ ಕರೆಯಲ್ಪಟ್ಟ ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ(ಕ್ರಿ.ಶ.1134–1196) ಹಾಗೂ ಸಮಕಾಲೀನ ಶಿವಶರಣರ ಬಗ್ಗೆ ಮೊಟ್ಟ ಮೊದಲ ಕೃತಿಯನ್ನು ರಚಿಸಿದ್ದು ತೆಲುಗಿನಲ್ಲಿ ಎಂಬುದು ಇತಿಹಾಸದ ಮಹತ್ವದ ಸಂಗತಿ.
‘ಬಸವೇಶ್ವರರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ 13ನೇ ಶತಮಾನದಲ್ಲಿ ‘ಬಸವ ಪುರಾಣಂ’ ಕೃತಿ ರಚಿಸಿದ ‘ಪಾಲ್ಕುರಿಕೆ ಸೋಮನಾಥ’ರ ಬಗ್ಗೆ ಬಹಳ ಜನರಿಗೆ ಮಾಹಿತಿಯಿಲ್ಲ. ಕನ್ನಡ ಸಾಹಿತ್ಯಕ್ಕೆ ಹರಿಹರ ಹೇಗೆ ಮುಖ್ಯ ಎನಿಸುತ್ತಾನೋ, ಶರಣ ಸಾಹಿತ್ಯಕ್ಕೆ ಸೋಮನಾಥ ಕೂಡ ಅಷ್ಟೇ ಮುಖ್ಯ. ಆತ ರಚಿಸಿದ ಬಸವೇಶ್ವರರ ಬಗ್ಗೆ ಮಾಹಿತಿ ನೀಡುವ ದ್ವಿಪದಿ ಶೈಲಿಯಲ್ಲಿ ರಚಿಸಿರುವ ‘ಬಸವ ಪುರಾಣಂ’ ಕೃತಿಯು ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಕೃತಿ ಎನಿಸಿದೆ. ಪ್ರತಿಭಾವಂತ ಕವಿಯಾಗಿದ್ದ ಸೋಮನಾಥ, ಕನ್ನಡ ಭಾಷೆ, ಬಸವೇಶ್ವರರು ಹಾಗೂ ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದು, ಬಸವೇಶ್ವರ ಹಾಗೂ ಶಿವಭಕ್ತರನ್ನು ಕುರಿತು ಈ ಕೃತಿಯಲ್ಲಿ ಬರೆದಿದ್ದಾರೆ’ ಎನ್ನುತ್ತಾರೆ ವಿದ್ವಾಂಸರು.
1369ರಲ್ಲಿ ಭೀಮ ಕವಿ ‘ಪಾಲ್ಕುರಿಕೆ ಸೋಮನಾಥ’ರ ‘ಬಸವ ಪುರಾಣಂ’ ಅನ್ನು ಕನ್ನಡಕ್ಕೆ ಅನುವಾದಿಸಿದರು. ಅವರ ‘ಬಸವ ಪುರಾಣ’ ಕೃತಿಯು ಹಳಗನ್ನಡದಲ್ಲಿದ್ದು, ಅದನ್ನು ತಾಳೇಗರಿಗಳಲ್ಲಿ ನೂರಾರು ಹಸ್ತಪ್ರತಿಗಳನ್ನು ಮಾಡಿ ಶರಣರ ಮೂಲಕ ನಾನಾ ಕಡೆ ತಲುಪಿಸಲಾಯಿತು. ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಈ ರೀತಿಯ ತಾಳೇಗರಿಗಳನ್ನು ಸಂರಕ್ಷಿಸಲಾಗಿದೆ. ಹಲವಾರು ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ. ವೆಲ್ಚೆರು ನಾರಾಯಣರಾವ್ ಮತ್ತು ಜೀನ್.ಎಚ್.ರೋಘೇರ್ ‘ಶಿವಾಸ್ ವಾರಿಯರ್ಸ್’ ಎಂಬ ಹೆಸರಿನಲ್ಲಿ ಇಂಗ್ಲೀಷ್ಗೆ ಅನುವಾದಿಸಿದ್ದು, ಅದನ್ನು ಅಮೆರಿಕದ ಪ್ರಿನ್ಸ್ಟನ್ ಲೆಗೆಸಿ ಲೈಬ್ರರಿ ಪ್ರಕಟಿಸಿದ್ದಾರೆ. ಪಿ.ವಿ.ನಾರಾಯಣ ಅವರು ಆಧುನಿಕ ಕಾಲದಲ್ಲಿ ಸೋಮನಾಥನ ತೆಲುಗು ಬಸವ ಪುರಾಣವನ್ನು ಅದೇ ಛಂದಸ್ಸಿನಲ್ಲಿ ಅನುವಾದಿಸಿದ್ದಾರೆ. ಆರ್.ಸಿ.ಹಿರೇಮಠ್ ಅವರು ಭೀಮ ಕವಿಯ ಬಸವ ಪುರಾಣವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

