17.1 C
Sidlaghatta
Wednesday, December 31, 2025
Home Blog Page 970

ಐದು ಲಾರಿ ಮತ್ತು ಹನ್ನೊಂದು ಟ್ರಾಕ್ಟರ್ ವಶ

0

ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಗುರ್ಕಿ ಹಾಗೂ ಜಂಗಮಕೋಟೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಐದು ಲಾರಿ ಮತ್ತು ಹನ್ನೊಂದು ಟ್ರಾಕ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ವ್ಯಾಪ್ತಿಯ ಕೋರ್ಲಪರ್ತಿ ಕೆರೆಯಿಂದ ಅಕ್ರಮವಾಗಿ ಲಾರಿ ಮತ್ತು ಟ್ರಾಕ್ಟರ್ಗಳಲ್ಲಿ ಮರಳು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಡಿಯಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಚಾಲಕರ ಮೇಲೆ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಲಿಯಾಕತ್ ಉಲ್ಲಾ ತಿಳಿಸಿದ್ದಾರೆ.

ದ್ರಾಕ್ಷಿ ಮತ್ತು ಹಿಪ್ಪುನೇರಳೆ ತೋಟಗಳು ನಾಶ

0

ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಅಕಾಲಿಕ ಮಳೆಯು ದ್ರಾಕ್ಷಿ ಮತ್ತು ರೇಷ್ಮೆ ಬೆಳೆಗಾರರನ್ನು ಕಂಗಾಲಾಗಿಸಿದ್ದು ಅಪಾರ ಪ್ರಮಾಣದ ದ್ರಾಕ್ಷಿ ಮತ್ತು ಹಿಪ್ಪುನೇರಳೆ ತೋಟಗಳು ನಷ್ಟಕ್ಕಿಡಾಗಿವೆ.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ರೈತರಾದ ರಾಮಯ್ಯ, ಸುಗುಣ, ವಿ.ಎಸ್.ವೆಂಕಟೇಶಪ್ಪ, ಹನುಮೇಗೌಡ, ಮುನಿಕೆಂಪಣ್ಣ ಎಂಬ ರೈತರುಗಳ ತೋಟಗಳಲ್ಲಿ ಬೆಳೆದಿದ್ದ ಸುಮಾರು ೮ ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುವ ದ್ರಾಕ್ಷಿಬೆಳೆ ಆಲಿಕಲ್ಲಿನ ಮಳೆಗೆ ತುತ್ತಾಗಿದೆ. ಸುಮಾರು ೧೦ ಎಕೆರೆ ಪ್ರದೇಶದಷ್ಟು ಹಿಪ್ಪುನೇರಳೆ ತೋಟಗಳೂ ಕೂಡಾ ಮಳೆಗೆ ಆಹುತಿಯಾಗಿದ್ದು, ಸುಮಾರು ೧ ಲಕ್ಷ ರೂಪಾಯಿಗಳಷ್ಟು ಬೆಳೆ ನಷ್ಟವಾಗಿದೆ, ಹಾನಿಯಾಗಿರುವ ತೋಟಗಳಿಗೆ ಬೇಟಿ ನೀಡಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮತ್ತು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ತೋಟಗಳನ್ನು ಪರಿಶೀಲನೆ ನಡೆಸಿದ್ದಾರೆ, ಬೆಳೆಗಳು ನಷ್ಟವಾಗಿರುವ ಬಗ್ಗೆ ವರದಿಯನ್ನು ತಯಾರಿಸಿ, ತಹಶೀಲ್ದಾರರಿಗೆ ಸಲ್ಲಿಸಲಾಗುತ್ತದೆ, ತಹಶೀಲ್ದಾರರ ಕಡೆಯಿಂದ ರೈತರಿಗೆ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ ಎಂದು ಆನಂದ್ ತಿಳಿಸಿದ್ದಾರೆ.

ನೀರಿನ ಬವಣೆ ನೀಗಿಸಲು ಅತ್ಯಾಧುನಿಕ ಕೊರೆಯುವ ಯಂತ್ರ

0

ತಾಲ್ಲೂಕಿನಾದ್ಯಂತ ನೀರಿನ ಅಭಾವ ಎದುರಾಗುತ್ತಿದ್ದಂತೆ ಹಲವೆಡೆ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ. ಹಲವಾರು ಪಂಚಾಯತಿಗಳಿಗೆ ಸೇರಿರುವ ಕೆಲ ಗ್ರಾಮಗಳಿಗೆ ಏಕಾಏಕಿ ನೀರು ನಿಂತು ಪಂಚಾಯತಿ ವತಿಯಿಂದಲೂ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಆದರೆ ಸಾವಿರ ಅಡಿ ಆಳದಲ್ಲಿ ನೀರು ಸಿಗುವುದೇ, ಸಿಕ್ಕರೆ ಫ್ಲೋರೈಡ್ ಅಂಶ ಇದೆಯೇ ಎಂಬೆಲ್ಲಾ ಸಮಸ್ಯೆಗಳು ಎದುರಾಗುತ್ತವೆ.
ಇದಕ್ಕೆ ಪರಿಹಾರವೆಂಬಂತೆ ತಾಲ್ಲೂಕಿನ ಮಳ್ಳೂರಿನಲ್ಲಿ ಪಂಚಾಯತಿಯವರು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅತ್ಯಾಧುನಿಕ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ತರಿಸಿದ್ದಾರೆ. ಅಮೆರಿಕಾದಿಂದ ಬಂದಿರುವ ಏರ್ ಕಂಪ್ರೆಸರ್ ಸೇರಿದಂತೆ ಕೋಟ್ಯಾಂತರ ಬೆಲೆ ಬಾಳುವ ಯಂತ್ರದೊಂದಿಗೆ ಎಂಜಿನಿಯರುಗಳು ಹಾಗೂ ವಿಜ್ಞಾನಿಗಳ ತಂಡ ಕೂಡ ಇದೆ. ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ಸೂಚಿಸಿದ ಜಾಗದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದೆ. ಅರ್ಧ ಕಿ.ಮೀ ಆಳದವರೆಗೂ ನೆಲವನ್ನು ಕೊರೆಯುವ ಸಾಮರ್ಥ್ಯ ಹೊಂದಿರುವ ಯಂತ್ರ ಕೊರೆಯುತ್ತಾ ಹೋದಂತೆ ನೆಲದಾಳದ ಮಣ್ಣು, ಕಲ್ಲು, ನೀರನ್ನು ಎಂಜಿನಿಯರುಗಳು ಪರಿಶಿಲಿಸಿ ವರದಿ ತಯಾರಿಸುತ್ತಾರೆ. ನೆಲದಾಳದ ಬಿರುಕುಗಳು, ನೀರಿನ ಹರಿವು ಎಲ್ಲವನ್ನೂ ದಾಖಲಿಸುತ್ತಾ, ಈ ಯಂತ್ರದ ಮುಖೇನ ಸಿಕ್ಕ ನೀರು ಬಿರುಕುಗಳಲ್ಲಿ ಸೋರಿಕೆಯಾಗದಂತೆ ಸಿಮೆಂಟ್ ತಡೆಯನ್ನು ಕೂಡ ನಿರ್ಮಿಸುತ್ತಾರೆ. ಅತ್ಯಂತ ಗುಣಮಟ್ಟದ 10 ಅಂಗುಲ ವ್ಯಾಸದ ಕೇಸಿಂಗ್ ಪೈಪ್ ಅಳವಡಿಸುತ್ತಾರೆ. ನೀರಿನ ಗುಣಮಟ್ಟದ ವರದಿಯನ್ವಯ ಅದರ ಶುದ್ಧೀಕರಣಕ್ಕೂ ವಿಜ್ಞಾನಿಗಳು ಕ್ರಮ ಕೈಗೊಳ್ಳುತ್ತಾರೆ.
‘ನಮ್ಮ ಪಂಚಾಯತಿಯಲ್ಲಿ ಸುಮಾರು 13 ಕೊಳವೆ ಬಾವಿಗಳನ್ನು ಕೊರೆಸದರೂ ನೀರು ಸಿಕ್ಕಿಲ್ಲ. ಇದ್ದ ಕೆಲವು ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿ ಮಳ್ಳೂರು, ಅಂಗತಟ್ಟಿ, ಕಾಚಹಳ್ಳಿ, ಮುತ್ತೂರು ಗ್ರಾಮಗಳಿಗೆ ಏಕಾ ಏಕಿ ನೀರು ಸರಬರಾಜು ನಿಂತು ಸಾಕಷ್ಟು ತೊಂದರೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಅವರ ನೆರವಿನಿಂದ ಅತ್ಯಾಧುನಿಕ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ತರಿಸಿದ್ದೇವೆ. ಮಳ್ಳೂರಿನ ಕೆರೆಯ ಅಂಗಳದಲ್ಲಿ ಕೊರೆಸುತ್ತಿದ್ದೇವೆ’ ಎಂದು ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್ ತಿಳಿಸಿದರು.

ತುಲಸಿ

0

ತುಳಸಿ ಗಿಡದ ಪರಿಚಯ ಯಾರಿಗಿರದಿರಲು ಸಾಧ್ಯ? ನಿತ್ಯವೂ ಪೂಜೆಗೆ ಬಳಸುವ ಸಾಮಗ್ರಿಗಳಲ್ಲಿ ತುಳಸಿಯೂ ಒಂದು. ಹಿಂದೂ ಧರ್ಮದವರು ಈ ಗಿಡವನ್ನು ಪವಿತ್ರವೆಂದು ಪೂಜಿಸುವರು. ಎಲ್ಲರ ಮನೆಯೆದುರು ತುಳಸಿ ಕಟ್ಟೆಯನ್ನೊಳಗೊಂಡ ತುಳಸಿ ಗಿಡ ಸರ್ವೇ ಸಾಮಾನ್ಯ. ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು ತುಳಸಿ ಗಿಡವನ್ನು ವಿಷ್ಣುವಿನೊಂದಿಗೆ ವಿವಾಹ ನೆರವೇರಿಸಿ ಪೂಜಿಸುವುದು ಹಿಂದೂಗಳ ಸಂಪ್ರದಾಯ.
“ನಮಸ್ತುಲಸಿ ಕಲ್ಯಾಣೀ ನಮೋ ವಿಷ್ಣು ಪ್ರಿಯೆ ಶುಭೆ
ನಮೋ ಮೋಕ್ಷ ಪ್ರದೇ ದೇವಿ ನಮ: ಸಂಪತ್ ಪ್ರದಾಯಿಕೆ||
ಕಲ್ಯಾಣವನ್ನುಂಟು ಮಾಡುವ ತುಳಸಿಯೇ, ವಿಷ್ಣುವಿಗೆ ಪ್ರಿಯಳಾದವಳೇ, ಶುಭ ತರುವಳೇ ಮೋಕ್ಷ ನೀಡುವ ಹಾಗು ಸಂಪತ್ತು ನೀಡುವ ತುಳಸೀ ದೇವಿಯೇ ನಿನಗೆ ನಮನ.
ಈ ಮಂತ್ರದೊಂದಿಗೆ ತುಳಸಿ ಪೂಜೆಯು ನೆರವೇರುವುದು. ತುಳಸೀ ಗಿಡವು ವಾತಾವರಣದಲ್ಲಿರುವ ಗಾಳಿಯನ್ನು ಸ್ವಚ್ಛಗೊಳಿಸುವುದು, ಮನೆಯ ಸುತ್ತಲೂ 4 ರಿಂದ 5 ತುಳಸಿಯ ಸಸ್ಯಗಳನ್ನು ನೆಡುವುದರಿಂದ ಸರ್ಪ ಇತ್ಯಾದಿ ವಿಷಕಾರಕ ಜಂತುಗಳು, ಕ್ರಿಮಿಕೀಟಗಳು ಮನೆಯನ್ನು ಪ್ರವೇಶಿಸಲಾರವು.
ತುಳಸಿ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ocimum Sanctum. ಇದು Labiatae ಎನ್ನುವ ಸಸ್ಯಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ Sacred Basil ಎಂದೂ ಕರೆಯುತ್ತಾರೆ.
ಸಂಸ್ಕøತದ ವಿವಿಧ ಹೆಸರುಗಳು
1. ತುಳಸಿ: ಇದು ಅಸಾಧಾರಣ ಶ್ರೇಷ್ಠ ಗುಣಗಳನ್ನೊಳಗೊಂಡಿರುವುದರಿಂದ ಇದನ್ನು ಬೇರೆ ಸಸ್ಯಗಳೊಂದಿಗೆ ಹೋಲಿಕೆ ಮಾಡಲಾಗದು.
2. ಸುರಸಾ: ಇದರ ರಸ ಅತ್ಯುತ್ತಮವಾದಂಥಹುದು.
3. ದೇವದುಂದುಭಿ: ಈ ಸಸ್ಯವು ದೇವತೆಗಳಿಗೆ ಪ್ರಿಯವಾದುದಾಗಿದೆ. ಆದ್ದರಿಂದ ಇದನ್ನು ದೇವದುಂದುಭಿ ಎಂದೂ ಕೂಡ ಕರೆಯುತ್ತಾರೆ.
4. ಅಪೇತರಾಕ್ಷಸಿ: ಇದರ ಸೇವನೆಯಿಂದ ರಾಕ್ಷಸ ಸದೃಶವಾದ ರೋಗಗಳು ದೂರವಾಗುತ್ತವೆ. ಅಥವಾ ಇದರ ಸೇವನೆಯಿಂದ ಪಾಪ ಸಮಾನವಾದ ರೋಗಗಳು ದೂರವಾಗುತ್ತವೆ.
ತುಳಸಿಯು ಅತ್ಯಂತ ಚಿಕ್ಕ ಸಸ್ಯವಾಗಿದ್ದು 1 ರಿಂದ 2 ಅಡಿಗಳಷ್ಟು ಎತ್ತರವಾಗಿ ಬೆಳೆಯುತ್ತದೆ. ಎಲೆಗಳು ಎದುರುಬದುರಾಗಿದ್ದು, ಕತ್ತರಿ ಕತ್ತರಿ ಅಂಚುಗಳನ್ನು ಹೊಂದಿರುತ್ತದೆ. ಇದರ ಎಲೆ ಹಾಗು ಬೀಜಗಳಲ್ಲಿ volatile oil  ಇದ್ದು, ಇದು ವಾತಾವರಣದಲ್ಲರುವ ಕ್ರಿಮಿ ಕೀಟಗಳನ್ನು ನಾಶಪಡಿಸಿ, ಶುದ್ಧ ಹವೆಯನ್ನು ಒದಗಿಸುತ್ತದೆ.
ಉಪಯುಕ್ತ ಅಂಗ: ಎಲೆ ಮತ್ತು ಬೀಜ
ಗುಣ ವಿಸೇಷತೆ: ಇದು ಕಟು ಹಾಗೂ ಕಹಿ ರಸವನ್ನು ಹೊಂದಿದ್ದು ಉಷ್ಣ ವೀರ್ಯವನ್ನು ಒಳಗೊಂಡಿರುತ್ತದೆ. ವಾತ ಹಾಗೂ ಕಫ ದೋಷಗಳನ್ನು ಶಮನ ಮಾಡುವುದು. ಕೆಮ್ಮು, ಅಸ್ತಮಾ, ಪಕ್ಕೆಗಳ ಸೆಳೆತಗಳಲ್ಲಿ ಇದನ್ನು ಉಪಯೋಗಿಸಬಹುದು. ದುರ್ಗಂಧವನ್ನು ಹೋಗಲಾಡುಸುವುದು. ನಾಲಿಗೆ ರುಚಿಯನ್ನು ಹೆಚ್ಚಿಸುವುದು, ಜೀರ್ಣಶಕ್ತಿಯನನ್ನು ಹೆಚ್ಚು ಮಾಡುವುದು.
ರೋಗಗಳಲ್ಲಿ ಉಪಯೋಗಗಳು
1. ಕಫದಿಂದ ಕೂಡಿದ ಕೆಮ್ಮು ಇದ್ದಾಗ: ತುಳಸಿಯ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಆಗಾಗ ಸೇವಿಸುತ್ತಿರುವುದು ಉತ್ತಮ.
2. ನೇತ್ರ ರೋಗಗಳಲ್ಲಿ: ತುಳಸಿಯ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಕಣ್ಣಿಗೆ ಕಾಡಿಗೆಯ ರೀತಿಯಲ್ಲಿ ಬಳಸಬೇಕು.
3. ಕಿವಿ ಸೋರುತ್ತಿದ್ದರೆ ಅಥವಾ ಕಿವಿಯಿಂದ ದುರ್ಗಂಧ ಬರುತ್ತಿದ್ದಲ್ಲಿ: ತುಳಸಿ ರಸವನ್ನು ಕಿವಿಯಲ್ಲಿ ಹಾಕುವುದರಿಂದ ನಿವಾರಣೆಯಾಗುವುದು.
4. ಚರ್ಮ ರೋಗಗಳಲ್ಲಿ: ತುಳಸಿ ಗಿಡದ ರಸವನ್ನು ಪ್ರತಿ ದಿನ ಮುಂಜಾನೆ ಸೇವಿಸುವುದು ಉತ್ತಮ.
5. ಮೈಯಲ್ಲಿ ಪಿತ್ತದ ಗಂಧಗಳು ಏಳುತ್ತಿದ್ದಲ್ಲಿ ತುಳಸಿಯ ರಸದ ಲೇಪನ ಮಾಡುವುದು ಉತ್ತಮ.
6. ವಿಷಮ ಜ್ವರದಲ್ಲಿ: ತುಳಸಿಯ ರಸದೊಂದಿಗೆ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಬೇಕು.
7. ಕಿವಿ ನೋವು: ಇರುವಾಗ ತುಳಸಿಯ ರಸದಿಂದ ಸಿದ್ಧಪಡಿಸಿದ ತೈಲವನ್ನು ಕಿವಿಯಲ್ಲಿ ಹಾಕುವುದರಿಂದ ನೋವು ನಿವಾರಣೆಯಾಗುವುದು.
8. ತುಂಬಾ ದಿನಗಳಿಂದ ನೆಗಡಿಯಿಂದ ಬಳಲುತ್ತಿರುವವರು ತುಳಸಿಯ ರಸದಿಂದ ಸಿದ್ಧಪಡಿಸಿದ ತೈಲವನ್ನು ಎರಡೆರಡು ಹನಿ ಮೂಗಿಗೆ ಹಾಕಿಕೊಳ್ಳುವುದು ಉತ್ತಮ.
ಡಾ. ನಾಗಶ್ರೀ.ಕೆ.ಎಸ್.

ನಕಲಿ ಕಾಮವರ್ಧಕಗಳ ಜಾಹಿರಾತಿಗೇಕೆ ಇಲ್ಲ ಕಟ್ಟುಪಾಡುಗಳು?

0

ಸ್ತ್ರೀಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರದ ಪ್ರಕರಣಗಳು ಮಾಧ್ಯಮಗಳಲ್ಲಿ ಹೆಚ್ಚುಹೆಚ್ಚು ವರದಿಯಾಗುತ್ತಾ ಬಂದಂತೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವ ಬಗೆಗೆ ಮತ್ತೆ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ. ಕಾಮ ಮತ್ತು ಲೈಂಗಿಕತೆ ಎನ್ನುವ ಶಬ್ದಗಳನ್ನು ಸಾರ್ವಜನಿಕವಾಗಿ ಉಚ್ಛರಿಸುವುದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದ್ದ ನಮ್ಮ ಸಮಾಜದ ಒಳಪದರಗಳಲ್ಲಿ ಎಂತಹ ಅಜ್ಞಾನ ಮತ್ತು ಕ್ರೌರ್ಯಗಳೆಲ್ಲಾ ಅಡಗಿದೆ ಎಂಬುದರ ಸ್ವಲ್ಪ ಅರಿವು ಈಗ ನಮಗೆ ಆಗುತ್ತಿದೆ. ಈಗ ಹೊರ ಬರುತ್ತಿರುವುದೂ ಕೂಡ ಸಂಪೂರ್ಣ ವಾಸ್ತವಿಕತೆಯಲ್ಲ. ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವ ಇನ್ನೂ ಸಾಕಷ್ಟು ವಿಚಾರಗಳಿಗೆ ನಾವು ಮುಖಾಮುಖಿಯಾಗಬೇಕಿದೆ.
ಹಾಗಿದ್ದರೂ ಸಮಸ್ಯೆಗಳನ್ನು ಚಾಪೆಯ ಕೆಳಗೆ ತೂರಿಸಿ ಎಲ್ಲವೂ ಸರಿಯಾಗಿದೆ ಎನ್ನುವ ಡಾಂಬಿಕ ಮನೋಭಾವ ತೋರಿಸುವ ಪ್ರಯತ್ನ ಎಲ್ಲಾ ಹಂತಗಳಲ್ಲೂ ಕಾಣುತ್ತಿದೆ. ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಎದುರಿಸುವ ಸ್ಥೈರ್ಯ ನಮ್ಮನ್ನಾಳುವವರಿಗಷ್ಟೇ ಅಲ್ಲ, ಒಟ್ಟಾರೆ ಸಮಾಜಕ್ಕೆ ಬರುವವರೆಗೆ ಮೂಲಭೂತ ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟ.
ಮನುಷ್ಯನ ಲೈಂಗಿಕ ಕ್ರಿಯೆ ಖಾಸಗಿಯಾಗಿರಬೇಕು ನಿಜ. ಆದರೆ ಲೈಂಗಿಕತೆಗೆ ಸಂಬಧಿಸಿದ ಎಲ್ಲಾ ವಿಚಾರಗಳೂ ಗೌಪ್ಯವಾಗಿರಬೇಕು ಎನ್ನುವ ಮನೋಭಾವ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಇವತ್ತಿನ ಯಾವುದೇ ಪತ್ರಿಕೆಯನ್ನು ನೀವು ನೋಡಿದರೆ ನಿಮಗೆ ಡಾಳವಾಗಿ ಬಣ್ಣಬಣ್ಣದಲ್ಲಿ ಕಾಣಿಸುವುದು ಕಾಮವರ್ಧಕಗಳ ಜಾಹಿರಾತುಗಳು. ಲೈಂಗಿಕ ಶಿಕ್ಷಣ ನೀಡುವ ಬಗೆಗೆ ಗಹನವಾದ ಚರ್ಚೆಯನ್ನು ಮಾಡುವ ತಜ್ಞರು ಮತ್ತು ಸರ್ಕಾರ ಔಷಧಗಳ ಹೆಸರಿನಲ್ಲಿ ಮಾರಲಾಗುವ ಇಂತಹ ನಕಲಿ ವಸ್ತುಗಳಿಂದಾಗುವ ಅಪಾಯಗಳ ಬಗೆಗೆ ಏಕೆ ಎಚ್ಚತ್ತುಕೊಂಡಿಲ್ಲ ಎನ್ನುವುದು ನಿಗೂಢ. ನಮ್ಮ ವೈದ್ಯವೃಂದ ಮತ್ತು ಐ.ಎಮ್.ಎ. ನಂತಹ ಸಂಘಟನೆಗಳೂ ಕೂಡ ಇವುಗಳ ಬಗೆಗೆ ಪೂರ್ಣ ನಿರ್ಲಕ್ಷ ತೋರಿಸುತ್ತಿವೆ. ಮನೆಯಲ್ಲಿ ಮಕ್ಕಳ ಎದುರು ಲೈಂಗಿಕತೆಯ ಎಲ್ಲಾ ವಿಚಾರಗಳನ್ನು ಸಂಪೂರ್ಣ ಮರೆಮಾಚುವ ಪೋಷಕರು ಕಣ್ಣಿಗೆ ರಾಚುವ ಇಂತಹ ಜಾಹಿರಾತುಗಳ ಬಗೆಗೆ ಮಕ್ಕಳು ಕುತೂಹಲ ತೋರಿಸಿದಾಗ ಅಥವಾ ಪ್ರಶ್ನಿಸಿದಾಗ ಮುಜುಗರವನ್ನು ತೋರಿಸುವುದನ್ನು ಬಿಟ್ಟರೆ ಇನ್ನೇನು ಮಾಡಲು ಪೋಷಕರಿಗೆ ಗೊತ್ತಿರುವುದಿಲ್ಲ.
ಕಾಮಕ್ರಿಯೆಯ ಆಸಕ್ತಿಯನ್ನು ಹೆಚ್ಚಿಸುವ, ದೀರ್ಘಕಾಲ ಸಂಭೋಗ ನಡೆಸುವ ಶಕ್ತಿ ಕೊಡುವಂತಹ, ಪುರುಷರ ಶಿಶ್ನದ ಗಾತ್ರ ಮತ್ತು ಸ್ತ್ರೀಯರ ಸ್ತನದ ಗಾತ್ರವನ್ನು ಹೆಚ್ಚಿಸುವ-ಹೀಗೆ ವಿಧವಿಧ ವಸ್ತುಗಳ ಜಾಹಿರಾತುಗಳು ಇವತ್ತು ಎಲ್ಲಾ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿವೆ. ಜಾಹಿರಾತುಗಳ ಸಹಾಯವಿಲ್ಲದೆ ಊರೂರುಗಳಲ್ಲಿ ಗುಡಾರ ಕಟ್ಟಿ ಹಿಮಾಲಯದಿಂದ ತಂದಿರುವುದು ಎಂದು ಹೇಳುತ್ತಾ ನಕಲಿ ಲೈಂಗಿಕ ಶಕ್ತಿವರ್ಧಕ ಗಿಡಮೂಲಿಕೆಗಳನ್ನು ಮಾರುವವರಿದ್ದಾರೆ. ಇನ್ನೂ ಕೆಲವರು ವೈದ್ಯರೆಂದು ಹೇಳಿಕೊಳ್ಳುತ್ತಾ ಬೇರೆಬೇರೆ ಊರುಗಳ ಲಾಡ್ಜ್‍ಗಳಲ್ಲಿ ಕ್ಯಾಂಪ್‍ಗಳನ್ನು ಪ್ರಕಟಿಸಿ ಇಂತಹ ನಕಲಿ ಔಷಧಿಗಳನ್ನು ಮಾರುತ್ತಾರೆ. ಅಲೋಪತಿ ವೈದ್ಯ ವಿಜ್ಞಾನದ ಪ್ರಕಾರ ಪುರುಷರಿಗೆ ಸ್ವಲ್ಪ ಮಟ್ಟಿನ ಲೈಂಗಿಕ ಶಕ್ತಿಯನ್ನು (ನೆನಪಿಡಿ ಲೈಂಗಿಕ ಆಸಕ್ತಿಯನ್ನಲ್ಲ) ಕೊಡುವ ಔಷಧಿ ಇರುವುದು ಒಂದೇ. (ಇದರ ಹೆಸರು ಮತ್ತು ಇತರ ವಿವರಗಳನ್ನು ಇಲ್ಲಿ ಚರ್ಚೆ ಮಾಡುವುದು ಕಾನೂನುಬದ್ಧವಲ್ಲ.) ಕಾಮವರ್ಧಕಗಳ ಹೆಸರಿನಲ್ಲಿ ಮಾರಾಟವಾಗುವ ಉಳಿದೆಲ್ಲಾ ವಸ್ತುಗಳೂ ಸಂಪೂರ್ಣ ನಿರುಪಯುಕ್ತ ಎನ್ನವುದು ಲೈಂಗಿಕ ತಜ್ಞರ ಒಮ್ಮತದ ಅಭೀಪ್ರಾಯ. ನನ್ನ ಹತ್ತಿರ ಲೈಂಗಿಕ ಸಮಸೈಗಳ ಪರಿಹಾರ ಹುಡುಕಿಕೊಂಡು ಆಪ್ತಸಲಹೆಗೆ ಬರುವವರಲ್ಲಿ ಸುಮಾರಾಗಿ ಎಲ್ಲರೂ ಜಾಹಿರಾತುಗಳಲ್ಲಿ ಬರುವ ಇಂತಹ ವಸ್ತುಗಳನ್ನು ಪ್ರಯೋಗಿಸಿ ನಿರಾಸೆ ಹೊಂದಿದವರಾಗಿರುತ್ತಾರೆ. ಕೆಲವರಂತೂ ಹತ್ತಾರು ಬಗೆಯ ನಕಲಿ ಔಷಧಿಗಳನ್ನು ಉಪಯೋಗಿಸಿ ವಿಫಲರಾಗಿದ್ದರೂ ಹೊಸ ಹೊಸ ಜಾಹಿರಾತುಗಳಿಗೆ ನಿರಂತರವಾಗಿ ಆಕರ್ಷಿತರಾಗುತ್ತಾರೆ. ಎಲ್ಲೋ ಕೆಲವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದರೂ ಅದು ಆ ವಸ್ತುಗಳಲ್ಲಿರುವ ಔಷಧೀಯ ಗುಣಗಳಿಂದಲ್ಲ. ಅವುಗಳನ್ನು ಔಷಧವೆಂದು ನಂಬಿ ಸ್ವೀಕರಿಸಿದ ಇವರ ಮಾನಸಿಕ ಸ್ಥಿತಿಯಿಂದ ಮಾತ್ರ (ಪ್ಲಾಸಿಬೋ ಎಫೆಕ್ಟ್).
ದುರಂತವೆಂದರೆ ಈ ಎಲ್ಲಾ ಔಷಧಗಳೂ ಆಯುರ್ವೇದದ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಅಲೋಪತಿ ಔಷಧಗಳಂತೆ ಸಾರ್ವಜನಿಕವಾಗಿ ಪ್ರಚಾರ ಮಾಡಬಾರದೆಂಬ ಯಾವ ನಿಯಮವೂ ಇವುಗಳಿಗೆ ಲಾಗೂ ಆಗುವುದಿಲ್ಲ. ಈ ಕಾಮವರ್ಧಕಗಳಲ್ಲಿ ಇರಬಹುದಾದ ಅಂಶಗಳೇನು, ಅವುಗಳು ಹೇಗೆ ಕೆಲಸ ಮಾಡುತ್ತವೆ, ಅವುಗಳ ಅಡ್ಡಪರಿಣಾಮಗಳೇನು ಮುಂತಾದವುಗಳ ಬಗೆಗೆ ಯಾವುದೇ ವಿವರಗಳಿರುವುದಿಲ್ಲ. ಆಯುರ್ವೇದದ ಹಣೆಪಟ್ಟಿ ಹಚ್ಚಿಕೊಂಡ ತಕ್ಷಣ ಇವು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿದ ಕಾಮ ಸಂಜೀವಿನಿಗಳಾಗಿ ಬಿಡುತ್ತವೆ! ಸಮಸ್ಯೆಯ ಪರಿಹಾರದ ಬಗೆಗೆ ಯಾವುದೇ ಖಾತ್ರಿಯಲ್ಲದ ಇಂತಹ ವಸ್ತುಗಳಲ್ಲಿ ಅಪಾಯಕಾರಿಯಾದ ರಾಸಾಯನಿಕಗಳಿಲ್ಲ ಎಂದು ಹೇಗೆ ನಂಬುವುದು ಅನ್ನುವುದರ ಬಗೆಗೆ ಕೂಡ ನಮ್ಮ ಜನತೆ ಯೋಚಿಸುವುದಿಲ್ಲ.
ನಮ್ಮ ಸರ್ಕಾರೀ ವ್ಯವಸ್ಥೆ ಮತ್ತು ವೈದ್ಯರುಗಳು ಇಂತಹ ನಕಲಿ ವಸ್ತುಗಳ ಬಗೆಗೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಇವುಗಳ ಮಾರಾಟ ಮತ್ತು ಜಾಹಿರಾತುಗಳ ಬಗೆಗೆ ಕಟ್ಟುನಿಟ್ಟಾದ ನೀತಿ ನಿಯಮಗಳನ್ನು ರೂಪಿಸಬೇಕಿದೆ. ಅಲ್ಲಿಯವರೆಗೆ ನಮ್ಮ ಮುಗ್ಧ ಜನತೆ ಇವುಗಳಿಗಾಗಿ ಹಣವನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಎಷ್ಟೋ ಜನ ಇವುಗಳಿಂದಾಗಿ ಅಪಾಯಗಳನ್ನು ಆಹ್ವಾನಿಸಿಕೊಳ್ಳಬಹುದು. ನಾನು ನೋಡಿದಂತೆ ಸಾಕಷ್ಟು ಯುವಕ ಯುವತಿಯರೂ ಕೂಡ ಇಂತಹ ಜಾಹಿರಾತುಗಳಿಂದ ಮೋಸ ಹೋಗಿ ಮನಸ್ಸಮಾಧಾನವನ್ನು ಕಳೆದುಕೊಂಡಿದ್ದಾರೆ.
ನನ್ನಂತಹ ಆಪ್ತಸಲಹೆಗಾರರ ಮತ್ತು ಮನೋಚಿಕಿತ್ಸಕರ ಅನುಭವದಲ್ಲಿ ಹೆಚ್ಚಿನ ಲೈಂಗಿಕ ಸಮಸ್ಯೆಗಳು ಅಜ್ಞಾನದ, ತಪ್ಪು ತಿಳುವಳಿಕೆಗಳ ಅಥವಾ ಸಂಗಾತಿಗಳಲ್ಲಿರಬಹುದಾದ ಹೊಂದಾಣಿಕೆಯ ಸಮಸ್ಯೆಗಳ ಪರಿಣಾಮಗಳು. ತಜ್ಞರ ಸಹಾಯದಿಂದ ಇವುಗಳನ್ನು ಯಾವುದೇ ಔಷಧಿಗಳಿಲ್ಲದೆ ಕಾಯಮ್ಮಾಗಿ ಪರಿಹರಿಸಿಕೊಳ್ಳಲು ಸಾಧ್ಯ. ನಮ್ಮ ಜನ ಲೈಂಗಿಕ ವಿಷಯಗಳ ಬಗೆಗೆ ಸ್ವಲ್ಪ ಮುಕ್ತವಾಗದೆ ಎಲ್ಲವನ್ನೂ ಕದ್ದುಮುಚ್ಚಿ ಪರಿಹರಿಸಿಕೊಳ್ಳುವ ಮನೋಭಾವ ಹೊಂದಿರುವವರೆಗೆ ಇಂತಹ ನಕಲಿ ಕಾಮವರ್ಧಕಗಳು ಭರಪೂರ ಹಣವನ್ನು ಬಾಚಿಕೊಳ್ಳುತ್ತಿರುತ್ತವೆ.
ವಸಂತ್ ನಡಹಳ್ಳಿ

ಸುಡು ಬಿಸಿಲಿನ ಕಾರಣಕ್ಕೀಗ ಗೇರು ಹಣ್ಣಿಗೂ ಬೇಡಿಕೆ

0

ಶಿಡ್ಲಘಟ್ಟದಲ್ಲಿ ಸುಡು ಬಿಸಿಲಿನ ಕಾರಣಕ್ಕೀಗ ಮಾವು, ಕಲ್ಲಂಗಡಿ, ದ್ರಾಕ್ಷಿ ಹಣ್ಣುಗಳಿಗೆ ಬೇಡಿಕೆ ಬಂದಂತೆ ಗೇರು ಹಣ್ಣಿಗೂ ಬೇಡಿಕೆ ಇದೆ. ನಿತ್ಯ ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಣ್ಣುಗಳನ್ನು ಕೊಳ್ಳುವವರು ಗೇರು ಹಣ್ಣಿಗೂ ಮುಖ ಮಾಡಿದ್ದಾರೆ.

ಕರ್ನಾಟಕ ಜನಪರ ವೇದಿಕೆ ಸದಸ್ಯರ ಬೈಕ್ ರ್ಯಾಲಿ

0

ನಗರದ ತಾಲ್ಲೂಕು ಕಚೇರಿಯಿಂದ ಸೋಮವಾರ ಕರ್ನಾಟಕ ಜನಪರ ವೇದಿಕೆ ಸದಸ್ಯರು ಬೈಕ್ ರ್ಯಾಲಿ ನಡೆಸಿ ಬೆಂಗಳೂರಿಗೆ ತೆರಳಿದರು. ಜನಪರ ವೇದಿಕೆಯ ತಾಲ್ಲೂಕು ಘಟಕದ ಬೈಕ್ ರ್ಯಾಲಿಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿ ಬೈಕ್ನಲ್ಲಿ ಅವರೂ ತೆರಳಿದರು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಅಡ್ಡಗಾಲನ್ನು ಖಂಡಿಸಿ, ಜನಜಾಗೃತಿ ಮೂಡಿಸುತ್ತಾ ಸರ್ಕಾರಕ್ಕೆ ಈ ಯೋಜನೆ ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಿ ಬೆಂಗಳೂರು ಉದ್ಯಾನವನದಿಂದ ಮೇಕೆದಾಟು ವರೆಗೆ ಮಂಗಳವಾರ ನಡೆಸಲಿರುವ ಬೃಹತ್ ಬೈಕ್ ರ್ಯಾಲಿಗೆ ಜೊತೆಯಾಗಲು ಈ ದಿನ ಬೆಂಗಳೂರಿಗೆ ತೆರಳುತ್ತಿರುವುದಾಗಿ ಜನಪರ ವೇದಿಕೆ ಸದಸ್ಯರು ತಿಳಿಸಿದರು.
ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪವನ್ಕುಮಾರ್ಗೌಡ, ನಗರ ಘಟಕದ ಅಧ್ಯಕ್ಷ ಕಿಟ್ಟಿ, ರವಿ, ದೇವೇಂದ್ರ, ಶಶಿಧರ್, ಹರಿಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕೇಸು

0

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂರವರ ಜಯಂತಿ ಕಾರ್ಯಕ್ರಮವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕೇಸು ದಾಖಲಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ)ಯ ಮುಖಂಡರು ಎಚ್ಚರಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ತಾಲ್ಲೂಕು ಸಂಚಾಲಕ ಕೆ.ಎಸ್.ಅರುಣ್‌ಕುಮಾರ್ ಮಾತನಾಡಿ, ಏಪ್ರಿಲ್‌ ೧೪ರಂದು ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಅಂಬೇಡ್ಕರ್‌ರವರ ೧೨೪ನೇ, ಬಾಬು ಜಗಜೀವನ್‌ರಾಂರವರ ೧೦೮ನೇ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ. ಜಯಂತಿಯಂದು ಎಲ್ಲ ಇಲಾಖೆಗಳಿಂದಲೂ ಹಾಗೂ ಎಲ್ಲ ಗ್ರಾಮ ಪಂಚಾಯತಿಗಳಿಂದಲೂ ಪಲ್ಲಕ್ಕಿಗಳ ಉತ್ಸವ ನಡೆಸಲು ತಹಸೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾವುದೆ ಇಲಾಖೆಯ ಅಧಿಕಾರಿಗಳು ಅಥವಾ ಗ್ರಾಮ ಪಂಚಾಯತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು, ಭಾಗವಹಿಸಿದರೂ ಪಲ್ಲಕ್ಕಿಗಳ ನಿರ್ಮಾಣ ಮಾಡದಿರುವುದು ಸೇರಿದಂತೆ ಕಾರ್ಯಕ್ರಮ ಕುರಿತು ಯಾವುದೆ ರೀತಿಯಲ್ಲಾದರೂ ನಿರ್ಲಕ್ಷ್ಯವಹಿಸಿದ್ದೇ ಆದಲ್ಲಿ ನಮ್ಮ ಸಂಘಟನೆಯಿಂದ ಅಂತಹ ಅಧಿಕಾರಿಗಳ ವಿರುದ್ದ ಕೇಸು ದಾಖಲಿಸಲಾಗುವುದು ಎಂದರು.
ಪ್ರತಿ ಗ್ರಾಮ ಪಂಚಾಯತಿಯಿಂದಲೂ ಪಲ್ಲಕ್ಕಿಯನ್ನು ನಿರ್ಮಿಸುವ ಜತೆಗೆ ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಾಹನ ಸೌಕರ್ಯವನ್ನೂ ಸಹ ಮಾಡಬೇಕಿದೆ ಎಂದು ಸಭೆಯಲ್ಲಿ ತೀರ್ಮಾನವಾಗಿದ್ದು ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕೆಂದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಜಮೀನನ್ನು ಮೀಸಲು ಇರಿಸುವಂತೆ ಹಲವಾರು ವರ್ಷಗಳಿಂದಲೂ ಸಂಬಂದಿಸಿದವರನ್ನು ಕೋರಿತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಭಾರಿಯಾದರೂ ಜಮೀನು ಮೀಸಲಿರಿಸುವ ಮೂಲಕ ಜಯಂತಿಗೆ ಅರ್ಥಕಲ್ಪಿಸುವಂತೆ ಕೋರಿದರು.
ಹಾಗೆಯೆ ತಾಲ್ಲೂಕು ಕಚೇರಿ ಎದುರು ಅಂಬೇಡ್ಕರ್‌ರವರ ಪುತ್ಥಳಿಯನ್ನು ಸ್ಥಾಪಸುವಂತೆ ತಹಸೀಲ್ದಾರರನ್ನು ಕೋರಿದ್ದು ಅದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಸೊಣ್ಣೇನಹಳ್ಳಿ ಮುನಿವೆಂಕಟಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ಕೆ.ವಿ.ಕಿರಣ್‌ಕುಮಾರ್, ಎನ್.ಅಶೋಕ್, ಜಯಶೀಲನ್, ನರಸಿಂಹಮೂರ್ತಿ, ಶ್ರೀನಿವಾಸ್, ಶಿವಪ್ಪ, ನಾಗರಾಜ್, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೋದಗೂರು ಎಂ.ಪಿ.ಸಿ.ಎಸ್ ಚುನಾವಣೆ

0

ತಾಲ್ಲೂಕಿನ ಬೋದಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಗೋಪಾಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಬೋದಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಕಳೆದ ಮಾರ್ಚ್ ತಿಂಗಳ ೨೯ ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೦೯ ಮಂದಿ ಆಯ್ಕೆಯಾಗಿದ್ದರು, ಹಿಂದುಳಿದ ವರ್ಗಗಳ ಸ್ಥಾನಗಳಿಗೆ ಯಾರೂ ಅಭ್ಯರ್ಥಿಗಳು ಇಲ್ಲದ ಕಾರಣ ಎರಡು ಸ್ಥಾನಗಳು ಖಾಲಿಯಾಗಿದ್ದು, ಶನಿವಾರ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಗೋಪಾಲಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ಮುನಿರಾಜು, ಕೆ. ಆಂಜಿನಪ್ಪ, ಬಿ.ಎನ್.ಸುರೇಶ್, ಕೃಷ್ಣಪ್ಪ, ಬಿ.ಕೆಂಪಣ್ಣ, ಬಿ.ಎಂ. ಮುನಿರಾಜು, ನಿರ್ದೇಶಕರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ಮುನೇಗೌಡ, ಹೆಚ್. ಮುನಿನಾರಾಯಣಪ್ಪ. ಮಾಣಿಕ್ಯಮ್ಮ, ರಾಮಲಕ್ಷ್ಮಮ್ಮ, ಮುನಿಯಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕನ್ನಡಿಗರು ಸಂಘಟಿತರಾಗಬೇಕು

0

ಜಾತಿ, ಧರ್ಮ, ವರ್ಗ ಎಂಬುದನ್ನು ಬಿಟ್ಟು ಸಂಘಟಿತರಾಗದಿದ್ದಲ್ಲಿ ಕನ್ನಡಿಗರಾದ ನಮಗೆ ಕನ್ನಡ ನಾಡಿನಲ್ಲೇ ಉಳಿಗಾಲವಿಲ್ಲದಂತ ಪರಿಸ್ಥಿತಿ ಎದುರಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಮತ್ತು ಕೊತ್ತನೂರು ಗ್ರಾಮಗಳಲ್ಲಿ ಕರವೇ ನೂತನ ಗ್ರಾಮ ಶಾಖೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ನಾಡು, ನುಡಿ, ನೆಲ, ಜಲವನ್ನು ಸಂರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದಂತಹ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಬಯಲು ಸೀಮೆಯ ಈ ಭಾಗದ ಜನತೆ ಕುಡಿಯಲು, ಕೃಷಿಗಾಗಿ ನೀರು ಕೊಡುವಂತೆ ಕಳೆದ ಎರಡು ದಶಕಗಳಿಂದಲೂ ಸರ್ಕಾರವನ್ನು ಒತ್ತಾಯಿಸಿ ಹತ್ತು ಹಲವು ರೀತಿಯಲ್ಲಿ ಹೋರಾಟಗಳನ್ನು ನಡೆಸುತ್ತಿದ್ದರೂ ಈ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ. ಕಣ್ಣು ಕಾಣಿಸುತ್ತಿಲ್ಲ ಎಂಬಂತೆ ವರ್ತಿಸುತ್ತಿದೆ. ಇದೀಗ ಎದುರಾಗುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಹಾಗೂ ಆ ನಂತರದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲೂ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಬೇಕಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ತಮಿಳುನಾಡು ಮೇಕುದಾಟಿ ಯೋಜನೆಗೆ ತೆಗೆದ ಖ್ಯಾತೆ ವಿರುದ್ದ ಇದೇ ತಿಂಗಳು ೧೮ ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಬಂದ್ನಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ನಾಗರಿಕರು ಭಾಗವಹಿಸಿ ಯಶಸ್ವಗೊಳಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಚಲಪತಿ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಎನ್.ಚಂದ್ರಶೇಖರ್, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಆರ್.ಎಂ.ಶ್ರೀಧರ್, ಸೀನಪ್ಪಗೌಡ, ಕೊತ್ತನೂರು ಶ್ರೀಧರ್, ಸತೀಶ್, ರಾಜಗೋಪಾಲರೆಡ್ಡಿ, ಚಂದನ್, ರುದ್ರಾಚಾರಿ, ಶಶಿಕುಮಾರ್, ಮಹೇಶ್, ಹರೀಶ್, ಪ್ರಕಾಶ್, ಶಿವಕುಮಾರ್, ಮಂಜು, ನರಸಿಂಹಮೂರ್ತಿ, ಚನ್ನರಾಯಪ್ಪ, ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.

error: Content is protected !!