ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಯಾವುದೋ ಒಂದು ಇಲಾಖೆಗೆ ಸಂಬಂದಿಸಿದ್ದಲ್ಲ. ಎಲ್ಲ ಇಲಾಖೆಯ ಅಧಿಕಾರಿಗಳೂ ಸಹ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದರ ಜತೆಗೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ತಾಲ್ಲೂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾಮರ್ಥ್ಯ ಅಭಿವೃದ್ಧಿ ಹಾಗೂ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂಪತ್ತಾಗಬಹುದಾದ ಮಕ್ಕಳ ಬಾಳನ್ನು ಒಸಕಿ ಹಾಕುವ ಬಾಲ್ಯ ವಿವಾಹ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಪಿಡುಗಾಗಿ ಸಮಾಜವನ್ನು ಕಾಡುತ್ತಿದೆ. ಆಟ ಆಡುವ ವಯಸ್ಸಿನಲ್ಲಿ, ಈ ಸಮಾಜ, ಈ ಜೀವನ, ಸಂಸಾರದ ಬದುಕು ಏನೆಂಬುದೆ ಸರಿಯಾಗಿ ತಿಳಿಯದ, ಅರ್ಥವಾಗದ ಚಿಕ್ಕವಯಸಿನಲ್ಲಿಯೆ ಮದುವೆಯಾದರೆ ಅವರು ಆ ಜೀವನಕ್ಕೆ ದೈಹಿಕವಾಗಿ, ಮಾನಸಿಕವಾಗಿ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗುವ ಸಂಭವಗಳೆ ಹೆಚ್ಚು.ಹಾಗಾಗಿ ಬಾಲ್ಯವಿವಾಹದಂತ ಸಾಮಾಜಿಕ ಪಿಡುಗನ್ನು ತೊಲಗಿಸಲು ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಮುದಾಯ ಬದ್ದತೆಯಿಂದ ನಡೆದುಕೊಳ್ಳಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವಂತೆ ಒತ್ತಡ ಹಾಕುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ದೂರಿದರು.
ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಮುಗಿಸಿ ಮನೆಗೆ ಬಂದ ತಕ್ಷಣ ಮತ್ತೆ ಟ್ಯೂಷನ್, ಹೋಂ ವರ್ಕ್ ಎಂದು ಮಗುವಿನ ಮೇಲೆ ಇನ್ನಿಲ್ಲದ ಒತ್ತಡ ಹಾಕಲಾಗುತ್ತದೆ. ಇದರಿಂದ ಮಗುವಿನ ಆಟ ಆಡುವ, ಅವರ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳುವುದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಎಂದರು.
ಮಕ್ಕಳ ಸ್ಥಿತಿಗತಿ ಕುರಿತು ಎಂ.ಜಿ.ಗೋಪಾಲ್, ಮಕ್ಕಳ ಹಕ್ಕುಗಳ ವಿಷಯ ಕುರಿತು ಸತೀಶ್, ಬಾಲ ನ್ಯಾಯ ಕಾಯಿದೆ ಕುರಿತು ಡಿ.ಕೆ.ರಾಮೇಗೌಡ, ಕಡ್ಡಾಯ ಶಿಕ್ಷಣ ಕುರಿತು ಕುರಿತು ವೆಂಕಟೇಶ್ರವರು ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿಯಿತಿ ಕಾರ್ಯನಿರ್ವಾಹಣಾಧಿಕಾರಿ ಡಿ.ಎಸ್.ಗುರುಬಸಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀದೇವಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್ಕುಮಾರ್, ವಿಂಧ್ಯ, ಬಿಸಿಎಂ ಇಲಾಖೆಯ ಶಂಕರ್, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯ, ಸೌಮ್ಯ ಮುಂತಾದವರು ಹಾಜರಿದ್ದರು.
ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ
ರೈತರೊಂದಿಗೆ ಬೆಸ್ಕಾಂ ಅಧಿಕಾರಿಗಳ ಸಭೆ
ನಗರ ಸೇರಿದಂತೆ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ಈ ಹಿಂದೆ ರೈತರು ಪ್ರತಿಭಟಿಸಿ ಮೀಟರ್ ಹಿಂತಿರುಗಿಸಿದ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಬುಧವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಎಂಜಿನಿಯರ್ ಪರಮೇಶ್, ‘ನಗರ ಹಾಗೂ ಸುತ್ತಮುತ್ತ ವಿದ್ಯುತ್ ಉಪಕರಣಗಳು, ಟ್ರಾನ್ಸ್ಫಾರ್ಮರ್ ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ ಸುಮಾರು 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಸಿದ್ದೇವೆ. ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿದ್ದೆವು. ಆದರೆ ರೈತರಿಂದ ಹಣ ಪಡೆಯುವುದಿಲ್ಲ’ ಎಂದು ತಿಳಿಸಿದರು.
ಸಭೆಯಲ್ಲಿದ್ದ ರೈತರೆಲ್ಲ ಯಾವುದೇ ಕಾರಣಕ್ಕೂ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಲು ಬಿಡುವುದಿಲ್ಲ. ಈ ದಿನ ಹಣ ಪಡೆಯುವುದಿಲ್ಲವೆಂದು ಹೇಳಿ ಮುಂಬರುವ ದಿನಗಳಲ್ಲಿ ಯೂನಿಟ್ ಇಂತಿಷ್ಟು ನೀಡಬೇಕೆಂದು ಹೇಳುತ್ತೀರಿ. ಹಾಗಾಗಿ ನಾವು ಮೀಟರ್ ಅಳವಡಿಸುವುದನ್ನು ವಿರೋಧಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ನಡೆದ ವಿವರದ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ಹೇಳಿದರು. ಅಸಿಸ್ಟೆಂಟ್ ಎಂಜಿನಿಯರ್ ರಮೇಶ್, ಜ್ಯೂನಿಯರ್ ಎಂಜಿನಿಯರ್ ಅನ್ಸರ್ ಪಾಷ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಕೃಷ್ಣಪ್ಪ, ವೇಣುಗೋಪಾಲ್, ನಾರಾಯಣಸ್ವಾಮಿ, ಬಚ್ಚರೆಡ್ಡಿ, ವೆಂಕಟೇಗೌಡ, ಆರ್.ದೇವರಾಜ್, ದ್ಯಾವಪ್ಪ, ರಾಮಕೃಷ್ಣಪ್ಪ, ಅಶ್ವತ್ಥ್, ಅನಂತು, ಹರೀಶ್, ಶಂಕರ್, ರಾಘವೇಂದ್ರ, ಕೇಶವಮೂರ್ತಿ, ಶ್ರೀನಾಥ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಧರ್ಮರಾಯಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪತಮ್ಮನವರ 27 ವರ್ಷದ ಹೂವಿನ ಕರಗವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ವಾಲಗ, ತಮಟೆ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಬೇತಮಂಗಲ ರಾಮಚಂದ್ರಪ್ಪ ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.
ಹೂವಿನ ಕರಗ ಮಲ್ಲಿಗೆಮಯ ಕಳಸದ ಮೆರವಣಿಗೆ. ಪರಿಮಳಯುಕ್ತ ಮಲ್ಲಿಗೆ ಹೂವಿಂದ ಅಲಂಕರಿಸಲಾದ ಕರಗವು ಸುವಾಸನೆ ಬೀರುತ್ತಾ ಅಲೌಕಿಕವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಹೂವಿನ ಕರಗಕ್ಕೂ ಮೊದಲು ಅನೇಕ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆಯುತ್ತವೆ. ವೀರಕುಮಾರರು, ಗೌಡರು, ಗಣಾಚಾರಿ, ಘಂಟೆಪೂಜಾರರು ಹಾಗೂ ಚಾಕರಿದಾರರು ಶಕ್ತಿಪೀಠದಲ್ಲಿ ಕರಗಕರ್ತ ಪೂಜಾರಿಯನ್ನು ಕರಗ ಧರಿಸುವುದಕ್ಕೆ ಧಾರ್ಮಿಕ ಸಂಪ್ರದಾಯಗಳನ್ನು ಅಣಿಗೊಳಿಸುವರು.
ಹಾಲು ಬಣ್ಣದ ಸುವಾಸನೆ ಬೀರುವ ಸೌಂದರ್ಯದ ಹೂ ಮಲ್ಲಿಗೆ ಕರಗ ಕಳಸವೂ ಸೇರಿದಂತೆ ಎಲ್ಲೆಡೆ ಸಲ್ಲುತ್ತದೆ. ವೀರಕುಮಾರರ ಹಾರಗಳಿಂದ ಹಿಡಿದು ಕರಗದ ಎಲ್ಲಾ ಉತ್ಸವಗಳಲ್ಲೂ ಮಲ್ಲಿಗೆ ಹೂಗಳಿಗೆ ಮೊದಲ ಆದ್ಯತೆ.
ಗ್ರಾಮದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಶಾತ್ರೋಕ್ತವಾಗಿ ಜರುಗಿಸಲಾಯಿತು. ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ವಹ್ನೀಕುಲ ಕ್ಷತ್ರಿಯರ ಟ್ರಸ್ಟ್ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ಪರೀಕ್ಷೆ ಬೇಕು ಪ್ರಗತಿಗೆ
ಪರೀಕ್ಷೆ ಎನ್ನುವುದು ನಾವು ಏನನ್ನು, ಎಷ್ಟರಮಟ್ಟಿಗೆ, ಹೇಗೆ ಓದಿದೆವು ಎನ್ನುವುದರ ಮೌಲ್ಯ ಮಾಪನ ಆಗದಿದ್ದರೆ ನಮ್ಮ ಪ್ರಯತ್ನದ ಹಂತ ನಮಗೆ ಅರಿವಾಗುವುದಿಲ್ಲ. ಒಂದು ವೇಳೆ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳಬೇಕಾದಲ್ಲಿ ಪರೀಕ್ಷೆ ಒಂದು ಅತ್ಯುತ್ತಮ ಅವಕಾಶ. ಆದ್ದರಿಂದ ಪರೀಕ್ಷೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರಿ.
1. ಪರೀಕ್ಷೆಯ ಭೀತಿ ಬೇಡ. ಸಂತೋಷದಿಂದ ಸ್ವೀಕರಿಸಿರಿ. ಪರೀಕ್ಷೆಗೆ ಸಿದ್ಧತೆ ಬಹಳ ಮುಖ್ಯ. ವರ್ಷದ ಮೊದಲಿನಿಂದ ಸರಿಯಾದ ಕ್ರಮದಲ್ಲಿ ತಯಾರಿಯಾಗಿದ್ದರೆ ಪರೀಕ್ಷೆ ಸುಲಭವಾಗುತ್ತದೆ.
2. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಕೊಂಡು ಉತ್ತರಗಳನ್ನು ಉತ್ತರಿಸಿ. ಉತ್ತರಗಳನ್ನು ಬರೆದು ಅಭ್ಯಾಸ ಮಾಡುವುದು ಒಳ್ಳೆಯದು.
3. ಉತ್ತರಗಳನ್ನು ಪ್ರಶ್ನೆಗೆ ಎಷ್ಟು ಅಂಕಗಳನ್ನು ನಿಗದಿ ಮಾಡಿರುತ್ತಾರೋ ಅದಕ್ಕೆ ತಕ್ಕಂತೆ ಉತ್ತರವನ್ನು ಬರೆಯಬೇಕು
4. ಓದುವುದು, ಅರ್ಥ ಮಾಡಿಕೊಳ್ಳುವುದು, ಮನನ ಮಾಡಿಕೊಳ್ಳುವುದು ಹಾಗೂ ಪರೀಕ್ಷೆಯ ಸಮಯಕ್ಕೆ ಸರಿಯಾಗಿ ಬರಿಯುವುದೂ ಬಹಳ ಮುಖ್ಯ.
5. ಪರೀಕ್ಷೆಯ ಸಂದರ್ಭದಲ್ಲಿ ಸರಿಯಾದ ಪ್ರಮಾಣದ ಆಹಾರಸೇವನೆ, ಒಳ್ಳೆಯ ನಿದ್ದೆ, ಸಮಯ ಪಾಲನೆ ಬಹಳ ಮುಖ್ಯ. ಬಾಯಿಪಾಠ ಮಾಡಬೇಕಾದ ಅಂಶಗಳನ್ನು ಸರಿಯಾದ ಕಾಲಕ್ಕೆ ಮಾಡಬೇಕು.
6. ವಿಜ್ಞಾನ, ಗಣಿತಶಾಸ್ತ್ರ ವಿಷಯಗಳಲ್ಲಿ ಚಿತ್ರಗಳನ್ನು ಸರಿಯಾಗಿ ಬಿಡಿಸಿ ಭಾಗಗಳನ್ನು ಗುರುತಿಸುವ ಅಭ್ಯಾಸವನ್ನು ಬೆಳಿಸಿಕೊಳ್ಳಬೇಕು. ಮುಖ್ಯಾಂಶ, ಸಾರಾಂಶಗಳನ್ನೆಲ್ಲಾ ಕ್ರಮವಾಗಿ ಗುರುತು ಮಾಡಿಕೊಂಡಿರಬೇಕು. ಅಗತ್ಯವಿದ್ದಾಗ ಸುಲಭವಾಗಿ ನಮಗೆ ದೊರೆಯುವಂತಿರಬೇಕು
7. ಪ್ರತಿ ವಿಷಯಕ್ಕೆ ಸಂಬಂಧಿಸಿದ ನೋಟ್ಸ್ ಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಅತಿಯಾಗಿ ನಿದ್ದೆಗೆಡುವುದು, ಹೊರಗಿನ ತಿಂಡಿ ಸೇವನೆ, ಸ್ನೇಹಿತರೊಡನೆ ಅತಿಯಾದ ಹರಟೆ ಸಲ್ಲ.
8. ಪರೀಕ್ಷೆಯ ಸಮಯದಲ್ಲಿ ನೀರು-ಹಣ್ಣು-ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
9. ಪರೀಕ್ಷೆಗೆ ಬೇಕಾದ ಪೆನ್, ಪೆನ್ಸಿಲ್, ಎರೇಸರ್, ಜಾಮಿಟ್ರಿ ಬಾಕ್ಸ್, ಪರೀಕ್ಷಾ ಪ್ರವೇಶ ಪತ್ರ-ಮೊದಲಾದುವುಗಳನ್ನು ಜೋಡಿಸಿಕೊಂಡು ತೆಗೆದುಕೊಂಡು ಹೋಗಬೇಕು. ಈ ಕೆಲಸವನ್ನು ವಿದ್ಯಾರ್ಥಿಗಳು ಸ್ವತ: ಮಾಡಿಕೊಳ್ಳಬೇಕು. ಹಿರಿಯರನ್ನು ಸಹಾಯಕ್ಕಾಗಿ ಕಾಯಬಾರದು.
10. ನೀರು ಹಾಗೂ ಗ್ಲೂಕೋಸ್ ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದು ಒಳ್ಳೆಯದು (ಆದರೆ ಪರೀಕ್ಷಾ ಕೊಠಡಿಗೆ ಅವುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇದೆಯೇ ಎಂದು ಪರೀಕ್ಷಿಸಿ ನಂತರ ತೀರ್ಮಾನವನ್ನು ಕೈಗೊಳ್ಳಿರಿ)
11. ಪರೀಕ್ಷೆಯು ಪ್ರಾರಂಭವಾಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪಿ ನೀವು ಕುಳಿತುಕೊಳ್ಳುವ ಸ್ಥಳವನ್ನು ಖಚಿತಪಡಿಸಿಕೊಳ್ಳಿರಿ.
12. ಪರೀಕ್ಷೆಯ ಹಿಂದಿನ ದಿನದ ರಾತ್ರಿ ನಿದ್ದೆಗೆಡದೆ, ಆತಂಕಪಡದೆ ಹಾಗೂ ಸರಳವಾದ ಆಹಾರವನ್ನು ಸೇವಿಸಿ ಪರೀಕ್ಷೆಗೆ ತೆರಳಬೇಕು.
13. “ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸುತ್ತೇನೆ” ಎಂಬ ಆತ್ಮವಿಶ್ವಾಸ ಸದಾ ನಿಮಗಿರಬೇಕು. ಆಗ ಪರೀಕ್ಷೆಯು ನಿಮಗೆ ಸುಲಭವಾಗುತ್ತದೆ.
14. ಯಾವ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರ ತಿಳಿದಿದೆಯೋ ಅವುಗಳನ್ನು ಮೊದಲು ಉತ್ತರಿಸಿ. ಅನಂತರ ಉಳಿದ ಭಾಗವನ್ನು ಉತ್ತರಿಸಲು ಆರಂಭಿಸಿರಿ. ಮೊದಲು ಆಲೋಚಿಸಿ ನಂತರ ಉತ್ತರಿಸಿ.
15. ಪರೀಕ್ಷೆ ಆರಂಭವಾಗುವ ಮುನ್ನ ಮತ್ತು ನಂತರ ನಿಮ್ಮ ಸ್ನೇಹಿತರೊಡನೆ ಚರ್ಚಿಸಬೇಡಿರಿ. ಇದರಿಂದ ನಿಮ್ಮ ಮುಂದಿನ ಪರೀಕ್ಷೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.
16. ಪರೀಕ್ಷೆ ಮುಗಿದ ನಂತರ ಫಲಿತಾಂಶದ ಬಗ್ಗೆ ಅತಿನಿರೀಕ್ಷೆ ಬೇಡ. ಪರೀಕ್ಷೆಯನ್ನು ಚೆನ್ನಾಗಿ ಎದುರಿಸಿದ ತೃಪ್ತಿ ಇರಲಿ.
17. ದೇವರ ಧ್ಯಾನ, ಗುರುಹಿರಿಯರ ಆಶೀರ್ವಾದ-ಇವುಗಳು ಪರೀಕ್ಷೆಗೆ ಮುನ್ನ ಅತ್ಯಗತ್ಯ.
18. ಅಗತ್ಯವಿರುವ ಕಡೆಗಳಲ್ಲಿ ಚಿತ್ರ, ರೇಖಾಚಿತ್ರ, ಸರಳ ಅಂಶಗಳು-ಇವುಗಳ ಮುಖಾಂತರ ಉತ್ತರಿಸುವುದು ಒಳ್ಳೆಯದು. ಜೀವಶಾಸ್ತ್ರ, ಸಸ್ಯಶಾಸ್ತ್ರಗಳಂಥ ವಿಷಯಗಳಲ್ಲಿ ಚಿತ್ರ ಬರೆದ ನಂತರ ಅದರ ಬಿಡಿಭಾಗಗಳನ್ನು ಗುರುತಿಸುವುದನ್ನು ಮರೆಯದಿರಿ. ಇದರಿಂದ ಮೌಲ್ಯಮಾಪಕರಿಗೆ ನಿಮ್ಮ ಸ್ಪಷ್ಟತೆಯನ್ನು ತಿಳಿಸಿದಂತಾಗುತ್ತದೆ.
19. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ, ಸ್ಪಷ್ಟವಾಗಿ, ಸರಳವಾಗಿ ಉತ್ತರಿಸಿ. ಒಮ್ಮೆ ಬರೆದು ಅದನ್ನು ತಿದ್ದುವುದು ಮತ್ತು ಕತ್ತರಿಸುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಮೌಲ್ಯಮಾಪಕರಿಗೆ ನಿಮ್ಮ ಸ್ಪಷ್ಟತೆಯ ಬಗ್ಗೆ ಅನುಮಾನ ಬರುವ ಸಾಧ್ಯತೆ ಇರುತ್ತದೆ.
20. ಪರೀಕ್ಷೆಗೆ ಮೊದಲೇ ಆಯಾ ವಿಷಯದ ಗುರುಗಳ ಬಳಿ ಕುಳಿತು ಹೇಗೆ ಉತ್ತರಿಸಬೇಕು, ಹೇಗೆ ಉತ್ತರಿಸಿದರೆ ಉತ್ತಮ ಅಂಕಗಳನ್ನು ಪಡೆಯಬಹುದು ಎಂಬುದರ ಬಗೆಗೆ ವಿವರವಾಗಿ ತಿಳಿದುಕೊಳ್ಳಿರಿ. ಆ ದಿಕ್ಕಿನಲ್ಲಿ ಉತ್ತರಿಸಲು ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಿರಿ.
21. ಭಾಷೆ (ಇಂಗ್ಲಿಷ್, ಕನ್ನಡ, ಸಂಸ್ಕøತ ಮೊದಲಾದುವು) ಗಣಿತ, ಸಮಾಜವಿಜ್ಞಾನ, ವಿಜ್ಞಾನ-ಹೀಗೆ ಆಯಾ ವಿಷಯಗಳಿಗೆ ಅನುಸಾರವಾಗಿ ನಿಮ್ಮ ಉತ್ತರಿಸುವ ಶೈಲಿಯು ಬೇರೆ ಬೇರೆಯದಾಗಿರುತ್ತದೆ. ಆ ಶೈಲಿಗಳನ್ನು ಪರೀಕ್ಷೆಗೆ ಮೊದಲೇ ಅಭ್ಯಾಸ ಮಾಡಿಕೊಳ್ಳಿರಿ.
22. ನಿಮ್ಮ ಬರವಣಿಗೆಯಲ್ಲಿ, ಉತ್ತರಿಸುವ ರೀತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು.
23. ಪ್ರಶ್ನೆಯ ಸಂಖ್ಯೆಯನ್ನು ಯಾವ ಅನುಮಾನವೂ ಇಲ್ಲದೆ ನಮೂದಿಸಿ. ಅನಂತರ ಉತ್ತರವನ್ನು ಬರೆಯಲು ಆರಂಭಿಸಿರಿ.
24. ನಿಮ್ಮ ವಿದ್ಯಾಭ್ಯಾಸದಲ್ಲಿ ನೀವು ಮುಂದೆ ಸಾಗಲು ಪರೀಕ್ಷೆಯು ಒಂದು ಮಾಧ್ಯಮವಷ್ಟೇ. ಹಾಗಾಗಿ ಜ್ಞಾನಾರ್ಜನೆಯ ಬಗ್ಗೆ ಹೆಚ್ಚು ಗಮನಕೊಟ್ಟು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಡಾ. ಶ್ರೀವತ್ಸ
ನೀರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ
ನೀರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಬಯಲು ಸೀಮೆ ಜಿಲ್ಲೆಗಳಿಗೆ ಪರಮಶಿವಯ್ಯನವರ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ತಕ್ಷಣ ಜಾರಿಗೊಳಿಸಬೇಕು. ಬೇಸಿಗೆಯಿಂದಾಗಿ ತಾಲ್ಲೂಕಿನಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಗ್ರಾಮೀಣ ಭಾಗದಲ್ಲಿ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಜಾನುವಾರುಗಳಿಗೆ ಮೇವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ವಿತರಿಸಬೇಕು ಮತ್ತು ಗೋಶಾಲೆಗಳನ್ನು ತೆರೆಯಬೇಕು. ಕೆರೆಗಳಲ್ಲಿ ಹೂಳೆತ್ತಿಸಬೇಕು, ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಹಾಗೂ ಪ್ರತಿ ಹಳ್ಳಿಗೆ ಹೋಗುವ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿ ಗ್ರಾಮ ಪಂಚಾಯತಿಗಳಿಗೆ ವಹಿಸಬೇಕು. ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ಕೃಷಿ ಹೊಂಡಕ್ಕೆ ಶೇಕಡಾ 80 ರಷ್ಟು ಸಹಾಯದನ ನೀಡಬೇಕೆಂಬ ಮನವಿಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ತಹಶೀಲ್ದಾರರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಬಾಲಮುರಳಿಕೃಷ್ಣ, ಪ್ರತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಸ್ತ್ರ ಸಂಹಿತೆ ಮೊದಲು ಗಂಡಸರಿಗೆ!
ನಾನಾಗ ಪ್ರೌಢಶಾಲೆಯಲ್ಲಿದ್ದೆ. ನಾವಿದ್ದ ಹಳ್ಳಿಯಂತಹ ಊರಿನಲ್ಲಿ ಚಡ್ಡಿ ಹಾಕಿಕೊಂಡು ಶಾಲೆಗೆ ಬರುವುದೇ, ಗಂಗಾವತಿ ಪ್ರಾಣೇಶ್ ಹೇಳುವಂತೆ ಒಂದು ವೈಭವವಾಗಿತ್ತು. ಹೆಚ್ಚಿನವರ ಚಡ್ಡಿ ಕೂಡ ಕಡಲೆ ಹಿಟ್ಟು ಖಾಲಿಯಾದ ಮೇಲೆ ಉಳಿಯುವ ಚೀಲದಿಂದ ಹೊಲೆಸಿದ್ದು. ಆಗೊಂದು ದಿನ ನಾವು ನಾಲ್ಕೈದು ಸ್ನೇಹಿತರು ಶಾಲೆಗೆ ಪಂಚೆ ಉಟ್ಟುಕೊಂಡು ಬರಬೇಕೆಂದು ನಿರ್ಧರಿಸಿದೆವು. ಆದರೆ ನಾವು ಎಂತಹ ಪಂಚೆ ಎಂದು ಮಾತನಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದೆವು. ಮೂವರು ಬಿಳಿಯ ಮುಂಡು ಪಂಚೆಯಲ್ಲಿ ಬಂದರೆ ಉಳಿದಿಬ್ಬರು ಪಟ್ಟಿಪಟ್ಟಿ ಇರುವ ಲುಂಗಿ ಕಟ್ಟಿಕೊಂಡು ಬಂದುಬಿಟ್ಟರು. ಪ್ರಾರ್ಥನೆಯ ಸಮಯದಲ್ಲೇ ಇದನ್ನು ಗುರುತಿಸಿದ ಮುಖ್ಯೋಪಾಧ್ಯಯರು ಅವರಿಬ್ಬರನ್ನೂ ಮನೆಗೆ ಕಳುಹಿಸಿದರು. ಉಳಿದ ಮೂವರೂ ಸಂಜೆಯವರೆಗೆ ಕಷ್ಟದಿಂದ ಪಂಚೆಯನ್ನು ಜಾರಿಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡೇ ಕುಳಿತದ್ದೆವು. ಮರುದಿನದಿಂದ ಇಂತಹ ಪ್ರಯೋಗಗಳನ್ನು ಮಾಡುವ ಧೈರ್ಯವಾಗಲೇ ಇಲ್ಲ!
ಈ ವಸ್ತ್ರ ಸಂಹಿತೆ ಎನ್ನುವುದು ಎಲ್ಲ ಕಾಲ ದೇಶಗಳಲ್ಲೂ ಇರುವುದೇ ಎನ್ನುವುದಕ್ಕಾಗಿ ಮೇಲಿನ ಘಟನೆಯನ್ನು ಹೇಳಬೇಕಾಯಿತು. ಹೆಚ್ಚಿನ ಕಡೆ ಇದನ್ನು ಇದೇ ಹೆಸರಿನಲ್ಲಿ ವ್ಯವಸ್ಥಿತವಾಗಿ, ಕಡ್ಡಾಯವಾಗಿ ಜಾರಿಗೊಳಿಸಿರುವುದಿಲ್ಲ. ಆದರೆ ಅಲಿಖಿತ ರೂಪದಲ್ಲಿರುತ್ತದೆ, ಅಷ್ಟೇ. ಹೆಣ್ಣು ಮಕ್ಕಳು ಸಮಾರಂಭಗಳೆಂದರೆ ರೇಶ್ಮೆ ಸೀರೆ, ಆಭರಣಗಳಿಂದ ಅಲಂಕೃತರಾಗುವುದು, ಮೀಟಿಂಗ್‍ಗಳಿಗೆ ಸೂಟಿನಲ್ಲೇ ಬರುವ ಕಂಪನಿ ಅಧಿಕಾರಿಗಳು, ರಜಾದಿನಗಳಗಳಲ್ಲಿ ಟೀಷರ್ಟ್ ಜೀನ್ಸ್ ನಲ್ಲಿ ಮಿಂಚುವ ಪಟ್ಟಣದ ಮಧ್ಯವಯಸಿಗರು-ಹೀಗೆ. ಎಷ್ಟೋ ಮಠ, ದೇವಸ್ಥಾನಗಳಲ್ಲಿ ಪ್ರಾಂಗಣವನ್ನು ದಾಟಬೇಕಾದರೆ ಗಂಡಸರು ಪಂಚೆಯಲ್ಲಿ ಟಾಪ್‍ಲೆಸ್ ಅಗಿಯೇ ಬರಬೇಕು!
ಹಾಗೆ ನೋಡಿದರೆ ವ್ಯಕ್ತಿ ಸ್ವಾತಂತ್ರದ ಹರಿಕಾರರೆಂದು ಕರೆಸಿಕೊಳ್ಳುವ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿಯೂ ಕೂಡ ಅಲಿಖಿತ ವಸ್ತ್ರಸಂಹಿತೆ ಜಾರಿಯಲ್ಲಿದ್ದೇ ಇರುತ್ತದೆ. ನಮಗೆ ಸಂವಿಧಾನದ ಮೂಲಧಾತುವನ್ನು ಒದಗಿಸಿದ ಬ್ರಿಟಿಷರು ಕೂಡ ಉಡುಪಿನ ವಿಚಾರದಲ್ಲಿ ಆಷಾಡಭೂತಿಗಳೆನ್ನಿಸುವ ಮಟ್ಟದ ಸಂಪ್ರದಾಯವಾದಿಗಳು. ಎಲ್ಲ ಕಡೆಯ ಚರ್ಚ್‍ಗಳಲ್ಲಿ ವಸ್ತ್ರಸಂಹಿತೆ ಇದೆ. ಸ್ಕರ್ಟ್ ಧರಿಸಿದರೂ ಅದರ ಉದ್ದ ಮೊಳಕಾಲಿಗಿಂತ ಕೆಳಗಿರಲೇಬೇಕು. ಮಸೀದಿಗಳು, ಗುರುದ್ವಾರಗಳಲ್ಲೂ ಅಲಿಖಿತವಾದ ನಿಯಮಗಳಿರುತ್ತವೆ.
ಹಾಗಂತ ಎಲ್ಲ ಕಡೆಯೂ ಇರುವ ನಿಯಮಗಳನ್ನು ನಾವು ಪಾಲಿಸಬೇಕೆಂದೇನೂ ಇಲ್ಲ. ಪ್ರಶ್ನೆ ಇರುವುದು ಇದರ ಔಚಿತ್ಯದ್ದು ಮಾತ್ರ. ಬರೀ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ವಸ್ತ್ರಸಂಹಿತೆಯ ಅಗತ್ಯವಿದೆ. ನಾಗರಿಕ ಸಮಾಜವೊಂದರಲ್ಲಿ ಇದು ಚರ್ಚೆಯ ವಿಚಾರವಾಗಬಾರದು. ಹಾಗೆ ಆಗುವ ಪರಿಸ್ಥಿತಿ ಬಂದಿದೆ ಎಂದರೆ ಅಲ್ಲಿ ವ್ಯಕ್ತಿ ಸ್ವಾತಂತ್ರವನ್ನು ಅತಿರೇಕಕ್ಕೊಯ್ಯಲಾಗುತ್ತದೆ ಅಥವಾ ಸಂಪ್ರದಾಯವಾದಿಗಳ ದರ್ಬಾರು ನಡೆಯುತ್ತಿದೆ ಎನ್ನಿಸುತ್ತದೆ.
ಶ್ಲೀಲ ಅಶ್ಲೀಲಗಳೆಲ್ಲಾ ವ್ಯಕ್ತಿನಿಷ್ಟವಾದದ್ದು. ಇದನ್ನೆಲ್ಲಾ ಚರ್ಚಿಸುತ್ತಾ ಕೂತರೆ ಯಾವ ತೀರ್ಮಾನಗಳಿಗೂ ಬರುವುದು ಅಸಾಧ್ಯ. ಬಹುಷಃ ಬಟ್ಟೆ ಮೈಮುಚ್ಚುವಂತಿರಬೇಕು ಎನ್ನುವದಷ್ಟೇ ವಿಷಯವಾಗಿದ್ದರೆ ಯಾರದ್ದೂ ತಕರಾರುಗಳಿರುವುದಿಲ್ಲ. ಈ ಮೈಮುಚ್ಚುವ ಬಟ್ಟೆಯಲ್ಲಿಯೂ ಇಂತಾದ್ದನ್ನೇ ಧರಿಸಬೇಕೆಂದು ಕಡ್ಡಾಯವಾಗಿಸಿದಾಗ ಪ್ರತಿಭಟನೆಗಳು ಶುರುವಾಗುತ್ತವೆ. ಉದಾಹರಣೆಗೆ ಸ್ತ್ರೀಯರ ಪೂರ್ಣ
ಮೈಮುಚ್ಚುವ ಜೀನ್ಸ್, ಟೀಷರ್ಟ್‍ಗಳನ್ನೇಕೆ ಧರಿಸಬಾರದು? ಇದು ಮೈಗೆ ಅಂಟಿಕೊಂಡು ಅವರ ಮೈ ಮಾಟವನ್ನು ಎತ್ತಿ ತೋರಿಸುವುದರಿಂದ ಪ್ರಚೋದನಕಾರಿಯಗುತ್ತದೆ ಎನ್ನುವುದು ಸಂಪ್ರದಾಯವಾದಿಗಳ ಅಂಬೋಣ. ಪ್ರಚೋದನೆಗಳ ಹುಡುಕಾಟದಲ್ಲಿರುವವರು ಸೀರೆ, ಸೆಲ್ವಾರ್‍ಗಳಲ್ಲಿಯೂ ಅದನ್ನು ಕಂಡುಕೊಳ್ಳುತ್ತಾರೆ! ಹಾಗೊಮ್ಮೆ ಹೆಣ್ಣುಮಕ್ಕಳ ಬಿಗಿ ಉಡುಪು ಪ್ರಚೋದನಕಾರಿಯಾದರೆ, ಗಂಡಸರ ಬಿಗಿ ಉಡುಪು ಯಾಕೆ ಸಹನೀಯವಾಗಬೇಕು? ಅವರಿಗೆಲ್ಲಾ ತಮ್ಮ ಮೀನಖಂಡಗಳನ್ನು ತೋರಿಸುವ ಬರ್ಮುಡಾ ಚಡ್ಡಿಗಳನ್ನು ಧರಿಸಲು ಅವಕಾಶ ಕೊಡುವುದು ಏಕೆ?!!
ಹಾಗಾಗಿ ವಸ್ತ್ರಸಂಹಿತೆಯನ್ನು ಜಾರಿ ಮಾಡುವುದೇ ಆದರೆ ಅದು ಸ್ತ್ರೀ ಪುರುಷರಿಬ್ಬರಿಗೂ ಸಮಾನವಾಗಿರಬೇಕು ಮತ್ತು ಔಚಿತ್ಯಾಧಾರಿತವಾಗಿರಬೇಕು. ಈ ದೃಷ್ಟಿಯಿಂದ ನೋಡಿದರೆ ಪುರುಷರಿಗೆ ಸಂಹಿತೆಯ ಅಗತ್ಯ ಹೆಚ್ಚೇ ಇದೆ! ದಕ್ಷಿಣದ ಹೆಚ್ಚಿನ ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಗಂಡಸರ ಟಾಪ್‍ಲೆಸ್ ಪ್ರದರ್ಶನ ರದ್ದಾಗಬೇಕು! ನಮ್ಮ ವೈದಿಕರುಗಳು, ಮಠಾಧೀಶರುಗಳು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಗುಡಾಣ ಹೊಟ್ಟೆಗಳನ್ನು ಪ್ರದರ್ಶನ ಮಾಡದೆ ಮೈಮುಚ್ಚಿಕೊಳ್ಳಬೇಕು. ಜೈನ ಮುನಿಗಳೂ ಕೂಡ ಇದಕ್ಕೆ ಹೊರತಾಗಬಾರದು.
ಸ್ತ್ರೀಯರ ವಸ್ತ್ರಸಂಹಿತೆಯ ವಿಚಾರದಲ್ಲಿ ಮುಸ್ಲಿಂರದ್ದು ಒಂದು ಅತಿರೇಕವಾದರೆ, ವ್ಯಕ್ತಿಸ್ವಾತಂತ್ರದ ಪ್ರತಿಪಾದಕರದ್ದು ಇನ್ನೊಂದು. ಇವರಿಬ್ಬರೂ ತಮ್ಮ ತಮ್ಮ ಪ್ರತಿಷ್ಠೆಯ ಪ್ರಶ್ನೆಗಾಗಿ ಹಿಂಸೆಗೂ ಇಳಿಯುವುದನ್ನು ಸಹಿಸುವ ನಮ್ಮ ಸರ್ಕಾರಗಳು ಮತ್ತು ಜನತೆ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿನ ಅಸ್ಪಷ್ಟತೆಯ ದ್ಯೋತಕ.
ವಸಂತ್ ನಡಹಳ್ಳಿ
ಚೀಮನಹಳ್ಳಿಯ ಬಳಿ ಸಿಕ್ಕ ಎರಡು ತಲೆಯ ಹಾವು ವನಪಾಲಕರ ವಶಕ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಸಿ.ಕೆ.ರಾಮಪ್ಪನವರ ಮನೆಯ ಬಳಿ ಸಿಕ್ಕ ಎರಡು ತಲೆಯ ಹಾವನ್ನು ಶನಿವಾರ ರಾತ್ರಿ ವನಪಾಲಕ ಸಿ.ಎನ್.ಹನುಮಂತಯ್ಯ ಅವರಿಗೆ ನೀಡಿದರು. ಮುರಳಿ, ಬಸವರಾಜು, ಪ್ರಶಾಂತ, ಮುನಿರಾಜು ಮತ್ತಿತರರು ಹಾಜರಿದ್ದರು.
ಆತ್ಮಾವಲೋಕನ ಅಗತ್ಯ
ನಮ್ಮ ದೇಶ ಕೃಷಿ ಪ್ರಧಾನ ದೇಶ. ಶೇಕಡಾ 70 ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ರೈತನೇ ಈ ದೇಶದ ಬೆನ್ನೆಲುಬು. ಆದರೆ ಆತ ಮಳೆಯೊಂದಿಗೆ ಜೂಜಾಡುತ್ತಾನೆ. ಹಾಗಾಗಿ ಸರಿಯಾಗಿ ಬೆಳೆ ಬೆಳೆಯಲಾರದು. ಒಂದೊಮ್ಮೆ ಬೆಳೆ ಬಂದರೂ ಅದಕ್ಕೆ ಸರಿಯಾದ ವೈಜ್ಞಾನಿಕ ಬೆಲೆ ಆತನಿಗೆ ಸಿಗುತ್ತಿಲ್ಲ. ಆತನ ಬದುಕಿಗೆ ಬೇಕಾದ ಪ್ರೋತ್ಸಾಹ ಸರಕಾರಗಳಿಂದ ದೊರಕುತ್ತಿಲ್ಲ. ಸಾಲದ ಬಾಧೆಯಿಂದ ಆತ ತತ್ತರಿಸುತ್ತಿದ್ದಾನೆ. ತತ್ಪರಿಣಾಮವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವಿಷ್ಟು ಸಂಕ್ಷಿಪ್ತವಾಗಿ ಭಾರತದ ರೈತನ ಕುರಿತಾಗಿ ಹೇಳಬಹುದಾದ ಮಾತುಗಳು. ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ವಿಚಾರವೆಂದರೆ ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಕುರಿತು ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದು.
ಇಂಥ ಸ್ಥಿತಿಯೊಳಗೆ ರೈತ ತನ್ನ ಅವಸ್ಥೆಯ ಕುರಿತು ಚಿಂತಿಸುವುದರ ಜೊತೆ ಜೊತೆಗೇ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಹಜವಾಗಿಯೇ ಇದೆ. ಸೂಕ್ತ ಸಮಯದಲ್ಲಿ ಬೀಜಗೊಬ್ಬರ ಸಿಗದಿರುವುದು, ಸಬ್ಸಿಡಿ ಸಿಗದಿರುವುದು, ಸಾಲ ಸಿಗದಿರುವುದು, ಕಛೇರಿಗಳಿಂದ ಬೇಕಾದ ಕಾಗದ ಪತ್ರಗಳನ್ನು ಪಡೆದುಕೊಳ್ಳುವಲ್ಲಿ ವಿಳಂಬವಾಗುತ್ತಿರುವುದು. ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಇತ್ಯಾದಿ. ಇವುಗಳೊಂದಿಗೆ ಸರಕಾರಿ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕಛೇರಿಯಲ್ಲೇ ಇರುವುದಿಲ್ಲ. ಆದರೂ ಅವರಿಗೆ ನಿರ್ದಿಷ್ಟ ಸಂಬಳವಿದೆ. ಬದುಕಿಗೆ ಭದ್ರತೆ ಇದೆ ಎಂಬ ದೂರುಗಳು.
ಇವೆಲ್ಲವೂ ನಿಜ. ಆದರೆ ಚಿಂತಿಸುವುದರಿಂದ ಹಳಿಯುವುದರಿಂದ ಅವರ ಅಭಿವೃದ್ಧಿ ಸಾಧ್ಯವೇ? ಕಛೇರಿ ಸಿಬ್ಬಂದಿ ಸಂಬಳ ಪಡೆಯುತ್ತಾರೆ. ಸಾಪ್ಟವೇರ್ ಕಂಪನಿಯಲ್ಲಿ ಕೆಲಸಮಾಡುವವರು ಲಕ್ಷಗಟ್ಟಲೆ ಸಂಬಳ ಪಡೆಯುತ್ತಾರೆ. ಅವರು ಐಷಾರಾಮ ಬದುಕು ಸಾಗಿಸುತ್ತಾರೆ. ಅದು ಸದಾ ಕಣ್ಣೆದುರಿಗೇ ಕುಣಿಯುತ್ತಿರುವುದರಿಂದ ನಮ್ಮ ಮಕ್ಕಳನ್ನು ಅತ್ತಲೇ ಕಳುಹಿಸಬೇಕು. ಹಳ್ಳಿ ಮತ್ತು ಕೃಷಿ ಬದುಕು ಯಾರಿಗೆ ಬೇಕು? ಇಂಥ ಮನೋಸ್ಥಿತಿಯಿಂದಾಗಿ ಇಂದು ಪ್ರತಿಹಳ್ಳಿಯ ಪ್ರತಿಮನೆಯಲ್ಲೂ ದುಡಿಯುವ ವ್ಯಕ್ತಿಗಳಿಗೆ ಬದಲಾಗಿ ನಿಧಾನವಾಗಿ ವೃದ್ಧಾಶ್ರಮಗಳಾಗುತ್ತ ಸಾಗಿದಲ್ಲಿ ಆಶ್ಚರ್ಯವೇನಿಲ್ಲ. ಇರುವ ಅಲ್ಪಸ್ವಲ್ಪ ಜನರಿಗೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಲಿಗಳು ಸಿಗುತ್ತಿಲ್ಲ. ವಿದ್ಯುತ್ ಅಭಾವ ಆಧುನಿಕ ಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ಮತ್ತಲ್ಲಿ ಮನುಷ್ಯನ ದುರಾಸೆಯಿಂದ ಕಾಡುಗಳು ಕಣ್ಮರೆಯಾಗುತ್ತಿವೆ. ನದಿಗಳು ಬತ್ತುತ್ತಿವೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿಯ ಸುಧಾರಣೆಯ ಲಕ್ಷಣಗಳೇನೂ ಗೋಚರಿಸುತ್ತಿಲ್ಲ.
ಹೀಗಿದ್ದಾಗ ಬದುಕು ಸುಧಾರಿಸಬೇಕೆಂಬ ಕನಸಿಗಿಂತ ವಾಸ್ತವವನ್ನು ಅರಿತು ಕ್ರಿಯಾಶೀಲರಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಬಹುದೇನೋ?. ಹಾಗಾಗಲು ಮೊದಲು ಕೃಷಿಯನ್ನು ಕೂಡಾ ಒಂದು ಉದ್ದಿಮೆಯಂತೆ ಪರಿಭಾವಿಸಬೇಕು. ಕಛೇರಿ ಕೆಲಸಕ್ಕೆ ಮತ್ತು ಕಂಪನಿಯ ಕೆಲಸಕ್ಕೆ ಒಂದು ನಿರ್ದಿಷ್ಟ ಅವಧಿ ಇದೆ. ಅಲ್ಲಿ ಕೆಲಸಗಾರರು ಕೆಲಸಮಾಡುತ್ತಿರುತ್ತಾರೆ. ಸೋಮಾರಿಗಳಾದ ಕೆಲವರು ಹಾಗೇ ಕುಳಿತಿರಬಹುದು. ಆದರೂ ಆ ಅವಧಿಯಲ್ಲಿ ಅಲ್ಲಿರುವುದು ಕಡ್ಡಾಯ. ಹೀಗೆ ಕೃಷಿ ಭೂಮಿಯಲ್ಲಿ ಕೃಷಿಕರಿರುವುದೂ ಕಡ್ಡಾಯವಾದಲ್ಲಿ ಪರಿಸ್ಥಿತಿ ತನ್ನಿಂದ ತಾನೇ ಸುಧಾರಿಸಬಹುದು. ವರ್ಷದ ಕೆಲವೊಂದು ಕಾಲವನ್ನು ಹೊರತುಪಡಿಸಿದರೆ ಸದಾ ನೆಲದೊಂದಿಗೆ ಇರುವ ಕೃಷಿಕರ ಸಂಖ್ಯೆ ಕಡಿಮೆ. ಅಲ್ಲಿ ಅವರು ಕಡ್ಡಾಯವಾಗಿದ್ದಾಗ ಕೆಲಸಗಳು ತನ್ನಿಂದ ತಾನೇ ಗೋಚರಿಸುತ್ತವೆ. ಅದು ಕಳೆ ತೆಗೆಯುವುದೇ ಇದ್ದೀತು. ಕಸ ಕಡ್ಡಿಗಳನ್ನು ಒಟ್ಟುಮಾಡುವುದೇ ಇದ್ದೀತು. ಅವನ್ನಷ್ಟು ಮನೆಗೆ ತಂದು ಒಲೆ ಉರಿಸಿದರೆ ಉಳಿತಾಯವಾದೀತು. ಹಾಗಲ್ಲದೇ ಪೇಟೆಯಲ್ಲಿ ಕ್ಯೂ ನಿಂತು ಸಿಲಿಂಡರ್ ತಂದು ಒಲೆ ಹಚ್ಚುವುದೇ ಸಾಧನೆಯಾದರೆ ಅದಕ್ಕೆ ಸಮಯ ಮತ್ತು ಹಣ ಎರಡೂ ಹಾಳಾಗುತ್ತಿದೆ. ಕೊಟ್ಟಿಗೆಯ ಸಗಣಿ ಕರಡಿ, ಗೋಬರ್ ಗ್ಯಾಸ್ ಉತ್ಪಾದಿಸುವುದೂ ಸೂಕ್ತವಾದ ಮಾರ್ಗ. ಆದರೆ ಅದೆಷ್ಟು ಜನ ಇದಕ್ಕೆ ಮನಸ್ಸು ಮಾಡುತ್ತಾರೆ? ಹೊರಗಿನಿಂದ ಹಾಲನ್ನು ಖರೀದಿಸುತ್ತಾರೆ. ಗೊಬ್ಬರವನ್ನು ಖರೀದಿಸುತ್ತಾರೆ. ಖುದ್ಧಾಗಿ ತಯಾರಿಸಿಕೊಳ್ಳಲಾಗದ್ದಕ್ಕೆ ಕಂಡ ಕಂಡವರನ್ನು ಬಯ್ಯುತ್ತಾರೆ, ಕುಳಿತರು ಏನೂ ಬಗೆ ಹರಿಯುವುದಿಲ್ಲ.
ಯಾವುದೇ ಗಿಡ ಮರವಾಗಲೀ ಪ್ರಾಣಿಯಾಗಲೀ ಮನುಷ್ಯ ಸಂಪರ್ಕವನ್ನು ಬಯಸುತ್ತವೆ. ಮನೆಯ ಹತ್ತಿರದ ಗಿಡಗಳು ನಾವು ಸದಾ ಓಡಾಡುವ ಜಾಗೆಯಲ್ಲಿನ ಗಿಡ ಮರಗಳು ಅಧಿಕ ಬೆಳೆ ನೀಡಿವುದನ್ನು ನಾವು ಕಾಣುತ್ತೇವೆ. ಹೀಗೆ ಗಿಡ ಮರಗಳು ಅಧಿಕ ಇಳುವರಿ ನೀಡಲು ನಾವಲ್ಲಿ ಸದಾ ಅವುಗಳೊಂದಿಗೆ ಸಂವಾದಿಸುತ್ತಿರಬೇಕು, ಎಂಬ ಸತ್ಯವನ್ನರಿತು. ನಿರ್ದಿಷ್ಟ ಸಮಯದಲ್ಲಿ ಯಾವುದೇ ಬಗೆಯ ಸೋಮಾರಿತನವನ್ನು ಮೈಗೂಡಿಸಿಕೊಳ್ಳದೇ ಅಲ್ಲಿ ಇದ್ದಲ್ಲಿ ಆದಾಯ ತನ್ನಿಂದ ತಾನೇ ಹೆಚ್ಚಬಹುದು. ಹಾಗೇ ರೋಗ ತಗುಲಿದ್ದರ ಅರಿವು ಸಕಾಲದಲ್ಲೇ ಆಗುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಕೂಡಾ ಅನುಕೂಲ. ಕೊನೆಯ ಹೊತ್ತಿನ ಪ್ರಯತ್ನಗಳಿಗಿಂತ ಮೊದಲೇ ಎಚ್ಚರಗೊಂಡು ಪ್ರಯತ್ನಿಸಿದರೆ ಫಲ ಪರಿಣಾಮಕಾರಿಯಾಗಿ ದೊರೆಯಬಹುದು.
ಇನ್ನು ನೌಕರಿಯ ಜನ ಅಥವಾ ವ್ಯಾಪಾರಿ ಜನ ತಮ್ಮ ರಜೆಗಳನ್ನು ನಿರ್ದಿಷ್ಟವಾಗಿ ಹೊಂದಿರುತ್ತಾರೆ. ಅನಗತ್ಯವಾಗಿ ರಜೆ ಪಡೆಯುವುದಿಲ್ಲ. ಗಳಿಕೆ ರಜೆ ಪಡೆಯಲಂತೂ ಬಹಳಷ್ಟು ಹಿಂದೇಟು ಹಾಕುತ್ತಾರೆ. ರಜೆಯೆಂದರೆ ಹಣ ಹೋದಂತೆ ಎಂಬ ಕಲ್ಪನೆ ಅವರದ್ದು. ಅಂಥ ಕಲ್ಪನೆ ಕೃಷಿಕರಲ್ಲೂ ಜಾಗೃತವಾಗಿದ್ದಲ್ಲಿ ಅನವಶ್ಯಕ ತಿರುಗಾಟ, ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಸಾಧ್ಯ. ಹೀಗೇ ಕೃಷಿಗೆಂದು ಪಡೆದ ಸಾಲ ಕೃಷಿ ಅಭಿವೃದ್ಧಿಗಲ್ಲದೇ ಮದುವೆ ಮುಂಜಿಗಳಿಗೆ ಖರ್ಚಾದರೆ ಮತ್ತೆ ಕೃಷಿ ಚಟುವಟಿಕೆ ಕುಂಠಿತವಾಗುತ್ತದೆ. ಆತ್ಮಹತ್ಯೆ ಅನಿವಾರ್ಯವಾಗುತ್ತದೆ.
ಪರಿಸರ ಪ್ರೇಮಿ ಶ್ರೀ ನಾಗೇಶ ಹೆಗಡೆಯವರ “ಇರುವುದೊಂದೇ ಭೂಮಿ” ಯಲ್ಲಿ ಪ್ರಸ್ತಾಪಿಸಿದಂತೆ ಈ ನೆಲವು ನಾವು ಹಿರಿಯರಿಂದ ಬಳುವಳಿಯಾಗಿ ಪಡೆದದ್ದು ಎಂದು ಯೋಚಿಸುವುದಕ್ಕಿಂತ ಇದನ್ನು ನಾವು ನಮ್ಮ ಮೊಮ್ಮಕ್ಕಳಿಂದ ನ್ಯಾಸವಾಗಿಟ್ಟುಕೊಂಡಿದ್ದೇವೆ ಎಂಬ ಕಲ್ಪನೆ ಜಾಗೃತವಾಗಿದ್ದಲ್ಲಿ ಕೃಷಿಗೆ ಅವಶ್ಯಕವಾದ ಕಾಡು ಉಳಿದೀತು. ಅವರವರ ಊರಿನ ಕಾಡನ್ನು ಹಸಿರನ್ನು ರಕ್ಷಿಸಿಕೊಳ್ಳುವ ಕೆಲಸ ಕೃಷಿಕರಿಂದಲೇ ಸಾಧ್ಯವಾಗಬೇಕು. ದುರಾಸೆಯವರೊಂದಿಗೆ ಕೈಜೋಡಿಸಿದರೆ ಕಳೆದು ಕೋಳ್ಳುವುದೇ ಹೆಚ್ಚು. ತತ್ಕಾಲದ ಮೋಹಕ್ಕೆ ವಶವಾದಲ್ಲಿ ಭವಿಷ್ಯ ನಾಶವಾಗುವುದರಲ್ಲಿ ಸಂದೇಹವಿಲ್ಲ.
ಬೇರೆಯವರನ್ನು ದೂರುವುದರಿಂದ ನಾವು ಉದ್ಧಾರವಾಗುವುದಿಲ್ಲ. ಎಂಬ ಸತ್ಯವನ್ನರಿತು ಅವರಂತೆ ಸದಾ ಕ್ರಿಯಾಶೀಲವಾಗಿ ನೆಲದಲ್ಲಿ ಸದಾ ಇದ್ದು ಆದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ದಿನವೂ ಅಷ್ಟಷ್ಟು ಕೆಲಸ ಮಾಡುತ್ತಲೇ ಇದ್ದಲ್ಲಿ ಕೂಲಿ ಸಮಸ್ಯೆ ಕೂಡಾ ಅಷ್ಟಾಗಿ ಬಾಧಿಸಲಾರದು. ಪ್ರತಿಯೊಂದಕ್ಕೂ ಪರಾವಲಂಬಿಗಳಾಗಿ ಬದುಕಲು ಪ್ರಾರಂಭಿಸಿದರೆ ಉದ್ಧಾರ ಅಸಾಧ್ಯ. ಹಾಗಾಗಿ ತಮ್ಮೆಲ್ಲ ಸಂಕಟಗಳಿಗೆ ಬೇರೆಡೆಗೆ ಬೆಟ್ಟು ಮಾಡುವುದಕ್ಕೆ ಮುನ್ನ ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳುವುದು ಇಂದಿನ ಅಗತ್ಯ. ಅವರು ಸೋಮಾರಿಗಳು ಕಛೇರಿಯಲ್ಲೇ ಇರುವುದಿಲ್ಲ ಎನ್ನುವ ಮೊದಲು ನಾವೆಷ್ಟು ಕ್ರಿಯಾಶೀಲರು ನಾವೆಷ್ಟು ನಮ್ಮ ನೆಲದೊಂದಿಗಿದ್ದೇವೆ ಎಂದು ಯೋಚಿಸುವುದು ಒಳಿತು.
ರವೀಂದ್ರ ಭಟ್ ಕುಳಿಬೀಡು
ಮೇಲೂರಿನ ಪುರಾಣಪ್ರಸಿದ್ಧ ಗಂಗಾದೇವಿಯ ಬ್ರಹ್ಮರಥೋತ್ಸವ
ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಮುಖಂಡರುಗಳು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ವಿವಿಧ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಕೋಸಂಬರಿ ಪಾನಕಗಳನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾಮದ ಮುಖಂಡರಾದ ಬಿ.ಎನ್.ರವಿಕುಮಾರ್, ಆರ್.ಎ.ಉಮೇಶ್, ಕೆ.ಮಂಜುನಾಥ್, ಕೆ.ಎಸ್.ಮಂಜುನಾಥ್, ಸುದರ್ಶನ್, ಧಮೇಂದ್ರ, ಸುದೀರ್, ಶ್ರೀನಿವಾಸಮೂರ್ತಿ(ಪುಲಿ), ಕೆ.ಎನ್.ಬಚ್ಚೇಗೌಡ, ರಾಮಕೃಷ್ಣಪ್ಪ, ಶಿವಕುಮಾರ್, ಜೇಜೇಗೌಡ, ಅಶ್ವಥ್ಥಪ್ಪ, ಮುನಿಶಾಮಪ್ಪ, ಎಂ.ಜೆ.ಶ್ರೀನಿವಾಸ್ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು ಹಾಜರಿದ್ದರು.
ದ್ಯಾವಪ್ಪನಗುಡಿಯಲ್ಲಿ ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವವ
ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವವನ್ನು ದ್ಯಾವಪ್ಪನಗುಡಿ(ಜಯಂತಿ ಗ್ರಾಮ)ಯಲ್ಲಿ ಬಹಳ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕಳೆದ ಏಳು ದಿನಗಳಿಂದಲೂ ಆರಾಧನಾ ಮಹೋತ್ಸವ ಅಂಗವಾಗಿ ದ್ಯಾವಪ್ಪನ ಗುಡಿಯಲ್ಲಿ ನಾನಾ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೈವಾರ ಹೊರತುಪಡಿಸಿದರೆ ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಧಿಗೆ ದಿನ ನಿತ್ಯವೂ ಪೂಜೆ ನಡೆಯುವ, ವರ್ಷದ ೩೬೫ದಿನವೂ ದೀಪ ಬೆಳಗುವ ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಯ ಏಕೈಕ ಸ್ಥಳವಾದ ದ್ಯಾವಪ್ಪನಗುಡಿಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಬಳಿ ವಾರದಿಂದಲೂ ಭಕ್ತಿಯ ಝೇಂಕಾರ ಮೊಳಗುತ್ತಿದೆ.
ಪ್ರತಿ ವರ್ಷವೂ ಯುಗಾದಿ ಬಂದಾದ ಮೇಲೆ ಆರಂಭವಾಗುವ ದ್ಯಾವಪ್ಪತಾತನ ಆರಾಧನಾ ಮಹೋತ್ಸವವು ಈ ವರ್ಷವೂ ಆರಂಭವಾಗಿದ್ದು ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ ಭಕ್ತರು ದ್ಯಾವಪ್ಪ ತಾತನ ಸಮಾಧಿಗೆ ಹಾಲು ತುಪ್ಪದ ನೈವೇದ್ಯ ಅರ್ಪಿಸಿದರು.
ಚಿಕ್ಕಂದಿನಿಂದಲೂ ದನಕರುಗಳನ್ನು ಮೇಯಿಸುತ್ತಲೆ ಅವುಗಳೊಂದಿಗೆ ಅವಿನಾಭವ ಸಂಬಂಧ ಬೆಳೆಸಿಕೊಂಡ ಕೋಟಹಳ್ಳಿಯ ಚಿಕ್ಕದ್ಯಾವಪ್ಪ ಯಾವುದೆ ಪಶು ವೈದ್ಯರಿಗಿಂತಲೂ ಕಡಿಮೆ ಇಲ್ಲದಂತೆ ಪಶು ಚಿಕಿತ್ಸಕರಾಗಿ ಬೆಳೆದರು. ಅವರು ಯಾವುದೆ ರಾಸುವಿನ ಬೆನ್ನ ಮೇಲೆ ಕೈ ಸವರಿದರೂ ಸಾಕು ಆ ರಾಸುವಿನ ರೋಗ ವಾಸಿಯಾಗುತ್ತಿತ್ತು ಎಂಬ ಮಾತಿದೆ. ಕೇವಲ ನಾಲ್ಕಾಣೆ ಮಾತ್ರವೇ ಹಣ ಪಡೆದು ರೋಗಗಳನ್ನು ವಾಸಿ ಮಾಡುತ್ತಿದ್ದ ದ್ಯಾವಪ್ಪ ತನ್ನ ಗೋಸೇವೆಯಿಂದಲೆ ಗೋಪಾಲಕ ದ್ಯಾವಪ್ಪ ತಾತನಾಗಿ ಜನರ ಮನದಲ್ಲಿ ಉಳಿದಿದ್ದಾರೆ.
ನಾಲ್ಕಾಣೆಯಂತೆ ಸಂಗ್ರಹಿಸಿದ ಹಣವನ್ನು ಒಟ್ಟುಗೋಡಿಸಿ ಗೋವುಗಳಿಗೆ ಗೋಕುಂಟೆಯನ್ನು ಸಹ ನಿರ್ಮಿಸಿದ್ದರು. ಅವರ ಆಸೆಯಂತೆ ಅವರ ನಿಧನಾ ನಂತರ ಅವರ ಸಮಾಧಿಯನ್ನು ನಿರ್ಮಿಸಿ ಅಲ್ಲಿ ಪೂಜಿಸಿ ಮಂತ್ರಿಸಿದ ಉಪ್ಪನ್ನು ರಾಸುಗಳಿಗೆ ನೀರಿನ ಮೂಲಕ ತಿನ್ನಿಸುತ್ತಾರೆ. ಅಲ್ಲಿ ಸಿಗುವ ಕಪ್ಪು ಕಮ್ಮಳಿ ದಾರವನ್ನು ಕಟ್ಟಿದರೂ ಸಾಕು ಎಂತಹ ರೋಗವಾದರೂ ವಾಸಿಯಾಗುತ್ತದೆ ಎಂಬ ನಂಬಿಕೆ ಬೇರೂರಿದೆ.
ತಾತನವರ ಆರಾಧನಾ ಮಹೋತ್ಸವ ಸಮಯದಲ್ಲಂತೂ ವಾರದ ಕಾಲ ನಾನಾ ಪೂಜೆ, ತಂಬಿಟ್ಟು ದೀಪೋತ್ಸವ, ನಾನಾ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮುತ್ತಿನ ಪಲ್ಲಕ್ಕಿ, ಕ್ಷೀರ, ಮನರಂಜನಾ ಉಟ್ಲು ಮಹೋತ್ಸವೂ ನಡೆಯಲಿದೆ.
ಪ್ರತಿ ನಿತ್ಯವೂ ದಾನವಾಗಿ ಬಂದ ಅಕ್ಕಿ, ಬೇಳೆ, ದವಸ, ದಾನ್ಯ, ತರಕಾರಿಗಳಿಂದಲೆ ತಯಾರು ಮಾಡಿದ ಮುದ್ದೆ ಸಾಂಬಾರು ಊಟವನ್ನಂತೂ ಆರಾಧನಾ ಮಹೋತ್ಸವ ನಡೆಯುವ ವಾರದ ಕಾಲವೂ ನಿತ್ಯ ಮದ್ಯಾಹ್ನ ಸಾವಿರಾರು ಮಂದಿಗೆ ಉಣಬಡಿಸಲಾಗುತ್ತದೆ.

