ನಗರದ ಮುತ್ತೂರು ಬೀದಿಯ ದೇವಿಯ ಹೂವಿನ ಕರಗ ಮಹೋತ್ಸವವನ್ನು ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ಕೀಲುಕುದುರೆ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಮುಳಬಾಗಿಲ ವೆಂಕಟೇಶ್ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.
ಕರಗದಮ್ಮ ದೇವಿಯ ಹೂವಿನ ಕರಗ
ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ
ತಾಲ್ಲೂಕಿನ ಪುರಾಣ ಪ್ರಸಿದ್ಧ ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ತರಾಯಣ ವಸಂತ ಋತು ಚೈತ್ರ ಬಹುಳ ಏಕಾದಶಿ ಶುಕ್ರವಾರದಂದು ನೂತನವಾಗಿ ನಿರ್ಮಿಸಿರುವ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ತೇರಿನಲ್ಲಿ ಉತ್ಸವ ಮೂರ್ತಿಗಳನ್ನಿರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದು, ಗ್ರಾಮದಲ್ಲಿ ದೇವರ ರಥ ಸಾಗಿದಾಗಿ ಜನಜಂಗುಳಿ ಏರ್ಪಟ್ಟಿತ್ತು. ಪುರಾತನ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದಲ್ಲಿ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆಯನ್ಉ ವಿತರಿಸಿದರು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಸಮ್ಮೇಳ ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು. ಗಾರ್ಡಿ ಗೊಂಬೆ, ಕೀಲು ಕುದುರೆ ಮುಂತಾದ ಆಕರ್ಷಕ ಸ್ಥಳೀಯ ಕಲೆಯು ಕೂಡ ಮೆರವಣಿಗೆಯಲ್ಲಿದ್ದವು. ರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ತಂಡದಿಂದ ತಮಟೆಗಳ ವಾದನಕ್ಕೆ ಭಕ್ತಾದಿಗಳು ಜಾನಪದ ತಂಡಗಳೊಂದಿಗೆ ಹೆಜ್ಜೆಹಾಕುತ್ತಾ ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದಿದ್ದರು.
ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಧಾರ್ಮಿಕವಾದ ಕಾರ್ಯಕ್ರಮಗಳಿಂದ ಮಾತ್ರ ಜನರಿಗೆ ಶಾಂತಿ ದೊರೆಯಲು ಸಾಧ್ಯವಾಗುತ್ತದೆ, ಬಯಲು ಸೀಮೆಯ ಜನತೆ ತೀವ್ರವಾದ ಮಳೆಯ ಕೊರತೆಯಿಂದಾಗಿ ಅಭಾವದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ಜನತೆಗೆ ಭಗವಂತ ಈ ವರ್ಷದಲ್ಲಿಯಾದರೂ ಉತ್ತಮವಾದ ಮಳೆ ಬೆಳೆಗಳನ್ನು ಕೊಟ್ಟು ಬಯಲು ಸೀಮೆಯ ಪ್ರದೇಶಗಳಲ್ಲಿನ ಜನ, ಜಾನುವಾರುಗಳು ಸುಬೀಕ್ಷವಾಗಿರಲಿ ಎಂದು ಹಾರೈಸಿದರು.
ದೇವಾಲಯದ ಆವರಣದಲ್ಲಿ ಹೋಮಕುಂಡವನ್ನು ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು ಪ್ರಸನ್ನ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೇಹಣ್ಣಿಗೆ ದವನವನ್ನಿ ಸಿಕ್ಕಿಸಿ ರಥಕ್ಕೆ ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಕೋಸಂಬರಿ ಪಾನಕಗಳನ್ನು ಭಕ್ತರಿಗೆ ಹಂಚಿಕೆ ಮಾಡಿದರು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ರಮೇಶ್, ಶ್ರೀನಿವಾಸ್, ಮಂಜುನಾಥ್, ವೆಂಕಟೇಶ್, ಬಿ.ರಾಜಣ್ಣ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಈ ದೇಶದ ಎಲ್ಲ ಜಾತಿ, ಧರ್ಮ, ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಜ್ಯಾತ್ಯಾತೀತೆಯ ನೆಲಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ನಿಂದ ಮಾತ್ರವೇ ಈ ದೇಶದ ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಏಳಿಗೆ ಸಾಧ್ಯ ಎಂದರು.
ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ನೀಡಿದ ಆಧ್ಯತೆಯಿಂದ ಇಡೀ ದೇಶಕ್ಕೆ ವರ್ಷಗಳ ಗಟ್ಟಲೆ ಆಹಾರ ಪದಾರ್ಥಗಳನ್ನು ಪೂರೈಸುವಷ್ಟು ಆಹಾರ ದಾನ್ಯಗಳ ದಾಸ್ತಾನು ನಮ್ಮಲ್ಲಿ ಇದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೆಲ್ಲವೂ ಸಾಧ್ಯವಾಗಿದ್ದು ಇದುವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಯೋಜನೆಗಳೆ ಕಾರಣ ಎಂದು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕುರಿತು ವಿವರಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಾರಿಕೆಯಿಂದ ಮತದಾರರನ್ನು ಮೋಡಿ ಮಾಡಿ ಅಂಗೈಯಲ್ಲಿ ಅರಮನೆ ತೋರಿಸುವ ಕೆಲಸ ಮಾಡುತ್ತಿದ್ದಾರೆಯೆ ವಿನಹ ಇದುವರೆಗೂ ಯಾವುದೆ ರೀತಿಯ ದೂರದೃಷ್ಟಿಯ ಜನಪರ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ದೂರಿದರು.
ಅಧಿಕಾರವಹಿಸಿಕೊಂಡ ಏಳೆಂಟು ತಿಂಗಳಿಂದಲೂ ವಿದೇಶಗಳನ್ನು ಸುತ್ತುವುದು, ಟಿ.ವಿ, ರೆಡಿಯೋ, ಫೇಸ್ಬುಕ್ನ ಜಾಲತಾಣಗಳಲ್ಲಿ ತಮ್ಮ ಭಾಷಣಗಳನ್ನು ಕೇಳಿಸುತ್ತಿರುವುದಷ್ಟೆ ಅವರ ಸಾಧನೆಯಾಗಿದ್ದು ಬೇರೇನೂ ಆಗಿಲ್ಲ ಎಂದು ಆರೋಪಿಸಿದರು.
ಭಾಷಣದಿಂದ ಬಡವನ ಹೊಟ್ಟೆ ತುಂಬುವುದಿಲ್ಲ. ಸಮಾಜದ ಉದ್ದಾರವೂ ಆಗುವುದಿಲ್ಲ ಎಂದ ಅವರು, ಚುನಾವಣೆ ಸಮಯದಲ್ಲಿ ಮತದಾರನಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು. ಹಾಗಾಗಿ ಮತದಾರರು ಬಿಜೆಪಿಗೆ ಮತ ಕೊಟ್ಟಿದ್ದಕ್ಕೆ ಪಶ್ಚಾತ್ಯಾಪ ಪಡುವಂತಾಗಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.
ಇದೀಗ ಇಡೀ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ಕೆಲಸ ಪುನರಾರಂಭಗೊಂಡಿದ್ದು ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಪಕ್ಷದ ಸದಸ್ಯತ್ವನ್ನು ಮಾಡಿಸಲಿದ್ದೇವೆ.ಈ ಹಿಂದೆ ಕೇಂದ್ರದಲ್ಲಿ ಅಕಾರ ನಡೆಸಿದ ಯುಪಿಎ ಅವಯಲ್ಲಿ ಕೈಗೊಂಡ ನರೇಗಾ ಯೋಜನೆ, ೬೫ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜನರಿಗೆ ತಿಳಿಸಿ ಸದಸ್ಯತ್ವನ್ನು ಮಾಡಿಸಲಾಗುತ್ತದೆ. ಪ್ರತಿ ಬೂತುವಾರು ಕನಿಷ್ಟ ೫-೬ಮಂದಿ ಸಕ್ರೀಯ ಸದಸ್ಯರನ್ನು ನೋಂದಾಯಿಸುವ ಕೆಲಸ ಮಾಡಲಾಗುವುದು. ಇದಕ್ಕಾಗಿ ತಾಲೂಕಿನಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಹೇಳಿದರು.
ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಉಪಾಧ್ಯಕ್ಷ ರವಿ, ಮುಖಂಡರಾದ ವಿ.ಸುಬ್ರಮಣಿ, ಕೆ.ಗುಡಿಯಪ್ಪ, ಆರ್.ಶ್ರೀನಿವಾಸ್, ಎನ್.ಮುನಿಯಪ್ಪ, ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶ್, ಬಿ.ಎಂ.ಮುನಿಕೃಷ್ಣಪ್ಪ, ನಂದಮುನಿಕೃಷ್ಣಪ್ಪ, ಮೌಲಾ, ಗೊರಮಡಗು ಕೃಷ್ಣಪ್ಪ, ಬಿ.ವಿ.ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರಿನ ಗ್ರಾಮದೇವತೆ ಗಂಗಾದೇವಿಯ ಜಾತ್ರೆ
ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು.
ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು.
ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ
ಶಿಡ್ಲಘಟ್ಟದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಪುರಂದರದಾಸರ, ಕನಕದಾಸರ, ತ್ಯಾಗರಾಜರ ಹಾಗೂ ಯೋಗಿ ನಾರೇಯಣ ತಾತಯ್ಯನವರ ಕೃತಿಗಳ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿತ್ತು. ಗಾಯನ ವಿದ್ವಾನ್ ಎಸ್.ವಿ.ರಾಮಮೂರ್ತಿ, ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮೃದಂಗ ಎಸ್.ಎನ್.ಲಕ್ಷ್ಮೀನಾರಾಯಣ, ಖಂಜಿರ ಕೆ.ವಿ.ಕೃಷ್ಣಮೂರ್ತಿ ಕಚೇರಿಯನ್ನು ನಡೆಸಿಕೊಟ್ಟರು.
ಬಾಯಲ್ಲಿ ನೀರು ತರಿಸುವ ಬೊಂಬಾಯಿ ಮಿಠಾಯಿ
ಶಾಲೆಯ ಬಳಿ ಬಣ್ಣದ ಲಂಗ, ಕಿವಿಗೆ ನೇತಾಡುವ ಲೋಲಾಕು, ಕೈಯಲ್ಲಿ ಬಳೆ ತೊಟ್ಟ ಈ ಹುಡುಗಿ ಕೈಯಲ್ಲಿನ ತಾಳದಲ್ಲಿ ಶಬ್ಧವನ್ನು ಹೊಮ್ಮಿಸುತ್ತಿದ್ದರೆ, ಮಕ್ಕಳಿಗೆ ಪಾಠ ಮರೆತು ಇತ್ತ ಗಮನ ಹರಿಯುತ್ತದೆ. ಆ ಬಾಲೆ ಮಕ್ಕಳಿಗೆ ಬಣ್ಣದ ಮಿಠಾಯಿ ಹಂಚಲೆಂದೇ ಬರುತ್ತಾಳೆ. ಅವಳೇ ಬೊಂಬಾಯಿ ಮಿಠಾಯಿ ಹುಡುಗಿ.
ಬೊಂಬಾಯಿ ಮಿಠಾಯಿ ಗೊಂಬೆ ನೋಡುವುದೇ ಚಂದ. ಬಣ್ಣದ ಅಂಗಿ ತೊಟ್ಟು ಅಲಂಕಾರ ಮಾಡಿದ ಮುದ್ದಾದ ಹುಡುಗಿ ಗೊಂಬೆಯನ್ನು ಮಿಠಾಯಿ ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಕಾಣುವಂತೆ ಮಾಡಿ ಮಕ್ಕಳನ್ನು ಆಕರ್ಷಿಸುವ ಪರಿ ನಿಜಕ್ಕೂ ಖುಷಿ ನೀಡುತ್ತದೆ. ಮಿಠಾಯಿವಾಲಾ ನಗರದ ಕೆಲವು ಶಾಲೆಗಳ ಬಳಿ ತನ್ನ ಗೊಂಬೆ ಹುಡುಗಿಯ ಜೊತೆ ನಿಂತು ಮಕ್ಕಳು ಹೊರ ಬರುವುದನ್ನೇ ಕಾದು ಕುಳಿತಿರುವುದು ನೋಡಿದಾಗ ಬಾಲ್ಯದ ನೆನಪು ಮರುಕಳಿಸುವಂತೆ ಮಾಡುತ್ತಿದೆ.
ನಗರದ ಕೆಲ ಶಾಲೆಗಳ ಮುಂದೆ ಬಣ್ಣದ ಮಿಠಾಯಿ ಹಂಚಲು ಕಾಯುತ್ತಿದ್ದ ಬಸವರಾಜ್ ಮೈಸೂರು ಬಳಿಯ ಮಲೆ ಕ್ಯಾತಮಾರನಹಳ್ಳಿಯವರು. ಸುಮಾರು 15 ವರ್ಷಗಳಿಂದ ರಾಜ್ಯದ ವಿವಿಧ ಊರುಗಳಲ್ಲಿ ಮಿಠಾಯಿ ವ್ಯಾಪಾರ ಮಾಡಿಯೇ ಬದುಕುತ್ತಿದ್ದಾರೆ. ಈಗ ಚಿಕ್ಕಬಳ್ಳಾಪುರದಲ್ಲಿ ಉಳಿದುಕೊಂಡಿದ್ದು, ಜಿಲ್ಲೆಯ ವಿವಿಧ ಊರುಗಳಲ್ಲಿ ಒಂದೊಂದು ವಾರ ತಿರುಗುತ್ತಾ ವ್ಯಾಪಾರ ಮಾಡುತ್ತಿದ್ದಾರೆ.
ನಗರದ ಸಂತೆಬೀದಿ, ತಾಲ್ಲೂಕು ಕಚೇರಿ, ಅಶೋಕ ರಸ್ತೆ, ಪೂಜಮ್ಮನ ದೇವಸ್ಥಾನ ಹೀಗೆ ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡುತ್ತಾರೆ. ಸಂತೆ, ಜಾತ್ರೆ ಮತ್ತಿತರ ಜನ ಸೇರುವ ಸಂದರ್ಭಗಳು ಸೃಷ್ಟಿಯಾದರೆ ಅಲ್ಲೆಲ್ಲಾ ಇವರು ಆಕರ್ಷಣೆಯ ಕೇಂದ್ರವಾಗುತ್ತಾರೆ. ಗೊಂಬೆಯ ಕೈಯಲ್ಲಿ ತಾಳಗಳಿರುತ್ತವೆ. ಅದರ ಗುಂಡಿ ಒತ್ತಿದೆ ಸಾಕು ಎರಡು ತಾಳ ಸೇರಿ ಸದ್ದಾಗುತ್ತದೆ. ಮಿಠಾಯಿ ಮಾರಬೇಕಾದರೆ ಅವರು ಮಾಡಿಕೊಳ್ಳುವ ಇಂತಹ ಪುಟ್ಟಪುಟ್ಟ ವ್ಯವಸ್ಥೆಗಳೇ ಹೆಚ್ಚು ಆಸಕ್ತಿಕರವೆನಿಸುತ್ತದೆ.
ಬೊಂಬಾಯಿ ಮಿಠಾಯಿ ಮಾರಾಟದ ವೈಖರಿ ನಿಜಕ್ಕೂ ವಿಭಿನ್ನ. ಕೋಲೊಂದಕ್ಕೆ ಮಿಠಾಯಿ ಮತ್ತು ಗೊಂಬೆಯನ್ನು ಜೋಡಿಸಿದ್ದಾರೆ. ಸಕ್ಕರೆ ಪಾಕಕ್ಕೆ ಬಣ್ಣ ಲೇಪಿಸಿದ ಅಂಟಿನ ಮಿಠಾಯಿಯನ್ನು ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿಕೊಡುವ ರೀತಿಯೂ ಸೃಜನಶೀಲವಾಗಿರುತ್ತದೆ. ನಿಮಿಷ ಮಾತ್ರದಲ್ಲಿ ಬಣ್ಣಬಣ್ಣದ ಹಕ್ಕಿ, ಸೈಕಲ್, ಗುಲಾಬಿ, ವಿಮಾನ, ನಕ್ಷತ್ರ, ನವಿಲು, ವಾಚು, ನೆಕ್ಲೇಸ್ ಮಾಡಿ ಕೊಡುವಾಗ ಅಪ್ಪಟ ಕಲಾವಿದರಂತೆಯೇ ಕಾಣುತ್ತಾರೆ.
‘ಎಲ್ಲೆಲ್ಲಿ ಜಾತ್ರೆ ನಡೆಯುತ್ತದೋ ಅಲ್ಲೆಲ್ಲ ಹೋಗುತ್ತೇನೆ. ಒಮ್ಮೆಲೆ ಐದು ಕೆ.ಜಿ. ಮಿಠಾಯಿ ತಯಾರಿಸುತ್ತೇನೆ. ಐದು ಕೆ.ಜಿ. ಸಕ್ಕರೆ ಪಾಕ ತಯಾರಿಸಿ, ಎರಡು ಅಥವಾ ಮೂರು ಬಣ್ಣಗಳ ಟ್ರೇಗಳಲ್ಲಿ ಪ್ರತ್ಯೇಕ ಪಾಕ ಸುರಿದು ತಣಿದ ನಂತರ ಎಲ್ಲವನ್ನೂ ಒಂದೇ ಸುರುಳಿ ಸುತ್ತಿ ಗೊಂಬೆಯ ಕೋಲಿಗೆ ಅಂಟಿಸಲಾಗುತ್ತದೆ. ಅಡುಗೆಗೆ ಬಳಸುವ ಬಣ್ಣಗಳನ್ನೇ ಬಳಸುತ್ತೇನೆ. ಇದು ಸ್ವಲ್ಪ ದುಬಾರಿಯೇ. ಮಿಠಾಯಿಯನ್ನು ಪುಟ್ಟಮಕ್ಕಳೇ ಇಷ್ಟಪಡುವ ಕಾರಣ ಮಾರುವಾಗ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುತ್ತೇನೆ. ಮೊದಲೆಲ್ಲ ಮಿಠಾಯಿ ಮಾರುವವರ ಸಂಖ್ಯೆ ತುಂಬಾ ಇತ್ತು. ಆದರೆ ಈಗಿನ ಯುವಕರು ಈ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ದಿನವೆಲ್ಲಾ ಸುತ್ತಿದರೂ ಐದು ನೂರು ಸಂಪಾದಿಸುವುದು ಕೂಡ ಕಷ್ಟ. ಸಕ್ಕರೆಯ ಬೆಲೆಯೂ ಹೆಚ್ಚಿದ್ದು, ನಮಗೆ ಲಾಭ ಬರುವುದು ಅಷ್ಟಕ್ಕಷ್ಟೆ. ಮುಂದೆ ನಮ್ಮ ಜೊತೆಗೇ ಬೊಂಬಾಯಿ ಮಿಠಾಯಿಯ ಕಾಲ ಕೂಡ ಮುಗಿದು ಹೋಗಲಿದೆ’ ಎಂದು ಹೇಳುವಾಗ ಬಸವರಾಜ್ ಮುಖದಲ್ಲಿ ವಿಷಾದದ ಛಾಯೆ.
ಬಯಲು ಸೀಮೆಯ ರೈತರಿಗೆ ನೆರವು ನೀಡಿ – ವಿ.ಮುನಿಯಪ್ಪ
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆಯ ರೈತರುಗಳ ಅಭಿವೃದ್ಧಿಗಾಗಿ ಭೂ ಅಭಿವೃದ್ಧಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ನೆರವಾಗಬೇಕು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ನಗರದ ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಸಹಕಾರಿ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲಾ ಅರ್ಹ ರೈತರುಗಳಿಗೆ ಸಾಲಗಳನ್ನು ನೀಡಬೇಕು. ಬಯಲು ಸೀಮೆಯ ಪ್ರದೇಶ ಕಳೆದ ೨೦ ವರ್ಷಗಳಿಂದ ಮಳೆ ಕಡಿಮೆಯಾಗುತ್ತಿದೆ. ಕಷ್ಟಕಾಲದಲ್ಲಿ ಹಿಪ್ಪುನೇರಳೆ, ಹೈನುಗಾರಿಕೆಯ ಮುಖಾಂತರ ಕುಟುಂಬಗಳನ್ನು ನಿರ್ವಹಣೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿದೆ. ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ಜನತೆಯ ನಿರಂತರ ಹೋರಾಟದ ಫಲವಾಗಿ ೫೦೦ ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅಣೆಕಟ್ಟು ಕಟ್ಟುವಂತಹ ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ೨ ವರ್ಷದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದರು.
ನೂತನವಾಗಿ ಆಯ್ಕೆಯಾಗಿ ಪದಗ್ರಹಣ ಮಾಡಿದ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಉಪಾಧ್ಯಕ್ಷ ರವಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ನಿರ್ದೇಶಕರಾದ ಭೀಮೇಶ್, ರಮಾದೇವಿ, ಅಶ್ವತ್ಥನಾರಾಯಣರೆಡ್ಡಿ, ಶಂಕರ್, ಮಯೂರ, ನಗರಸಭಾ ಸದಸ್ಯರಾದ ಕೇಶವಮೂರ್ತಿ, ಜೆ.ಎಂ.ಬಾಲಕೃಷ್ಣ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ರಾಮಚಂದ್ರಪ್ಪ, ವೆಂಕಟೇಶಪ್ಪ, ನಾಗರಾಜು, ಮೌಲಾ, ಭಕ್ತರಹಳ್ಳಿ ಮುನೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಾಕಲೇಟ್ ತಿಂದೀರಿ, ಜೋಕೆ!
ವಾಸ್ತವವಾಗಿ ಇದು ನಿಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಸೂಚಿಸಲು ತಯಾರಿಸಿದ ಲೇಖನವಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮಾದರಿಯ ಚಾಕಲೇಟ್‍ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನವದೆಹಲಿಯ ಕನ್ಸ್ಯೂಮರ್ ವಾಯ್ಸ್‍ನ ವರದಿಯ ಮಾಹಿತಿ ಓದಿದವರು ಹೇಳಲೇಬೇಕಾಗುತ್ತದೆ, ಚಾಕಲೇಟ್ ತಿಂದೀರಿ, ಜೋಕೆ!
ಭಾರತದಲ್ಲಿ ಚಾಕಲೇಟ್ ಬಳಕೆ ರುಚಿಗೆ, ಮಜಕ್ಕೆ. ಅದೇ ಅಮೇರಿಕದಲ್ಲಿ, ಒಂದರ್ಥದಲ್ಲಿ ಇದು ಆಹಾರ ಪದಾರ್ಥ. ಅಲ್ಲಿನ ಎಫ್‍ಡಿಎ ಕಾನೂನು ಶೇ. 100ರಷ್ಟು ಪ್ರಮಾಣದಲ್ಲಿ ಕೊಕೋ ಬೆಣ್ಣೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಹಾಲಿನ ಕೆನೆ ಬಳಸಬಹುದಷ್ಟೆ. ಖಾದ್ಯ ತೈಲ ಬಳಸುವಂತಿಲ್ಲ. ಕಡಿಮೆ ಸಕ್ಕರೆ, ಬರೀ ಕೊಕೋ ಬೆಣ್ಣೆಯ ಮೃದು ತಯಾರಿಗಳು ಅಲ್ಲಿ ಆಹಾರ ಪದಾರ್ಥವಾಗಿ ಪರಿಗಣನೆಯಾದುದರಲ್ಲಿ ಅಚ್ಚರಿಯಿಲ್ಲ. ಅಲ್ಲೂ ಖಾದ್ಯ ತೈಲ ಬಳಸಿ ಸೃಷ್ಟಿಸಿದವುಗಳಿವೆ. ಅವುಗಳನ್ನು ಚಾಕಲೇಟ್ ಎನ್ನುವಂತಿಲ್ಲ! ಚಾಕಲೇಟ್‍ಗೆ ಪೂರಕ ಎನ್ನುತ್ತಾರಷ್ಟೆ. ಈ ಮಾಹಿತಿಗಳು ಲೇಬಲ್‍ನಲ್ಲಿ ಸ್ಪಷ್ಟವಾಗಿರುವುದರಿಂದ ಗ್ರಾಹಕ ಪಿಗ್ಗಿ ಬೀಳುವುದಿಲ್ಲ.
ಅತ್ತ ಬೆಲ್ಜಿಯಂನಲ್ಲಿ ವರ್ಷಕ್ಕೆ 172 ಮಿಲಿಯನ್ ಟನ್ ಚಾಕಲೇಟ್ ತಯಾರಾಗುತ್ತದೆ! ವರ್ಷವೊಂದಕ್ಕೆ ಅಲ್ಲಿನ ವ್ಯಕ್ತಿ ಸರಾಸರಿ 9 ಕೆ.ಜಿ. ಚಾಕಲೇಟ್ ತಿನ್ನುತ್ತಾನೆ. ಅಲ್ಲಿ ಚಾಕಲೇಟ್‍ಗೇ ಮೀಸಲಾದ ಮ್ಯೂಸಿಯಂಗಳಿವೆ. ಅಷ್ಟಕ್ಕೂ ಬೆಲ್ಜಿಯಂ ಚಾಕಲೇಟ್‍ಗಳು ವಿಶ್ವದಲ್ಲಿಯೇ ಶ್ರೇಷ್ಟವೆಂಬ ಖ್ಯಾತಿ ಪಡೆದಿವೆ. ಈಗಲೂ ಅಲ್ಲಿ ಚಾಕಲೇಟ್‍ಗಳು ಹಳೆಯ ತಾಂತ್ರಿಕತೆಯಲ್ಲಿ ತಯಾರಾಗುತ್ತಿವೆ. ಅವೆಲ್ಲ ನುರಿತ ಕೈಗಳಿಂದಲೇ ಸೃಷ್ಟಿಯಾಗುತ್ತಿವೆ!
2000ದಲ್ಲಿ ಯುರೋಪಿಯನ್ ಒಕ್ಕೂಟ ಚಾಕಲೇಟ್‍ಗಳಲ್ಲಿ ಶೇ.5ರ ಖಾದ್ಯತೈಲ ಬಳಕೆಯನ್ನು ಒಪ್ಪಿ ನಿಯಮ ರೂಪಿಸಿತು. ಬೆಲ್ಜಿಯಂನಲ್ಲಿ ಸಮಾಜ ತೀಕ್ಷ ್ಣವಾಗಿ ಪ್ರತಿಕ್ರಿಯಿಸಿತು. ಜನಾಂದೋಲನವಾಯಿತು. ಅಲ್ಲಿನ ಸಚಿವಾಲಯ ಪೂರ್ಣ ಕೊಕೋ ಬಳಕೆಯ ಚಾಕಲೇಟ್‍ನ್ನೇ ಸಮರ್ಥಿಸಿ ವಿಶೇಷ ನಿಯಮ, ಎಎಂಬಿಎಓವನ್ನು ಜಾರಿಗೊಳಿಸಬೇಕಾಯಿತು.
ಇಂತಹ ರಾಷ್ಟ್ರಗಳ ಉದಾಹರಣೆಗಳ ಹಿನ್ನೆಲೆಯಲ್ಲಿ ಭಾರತದೆಡೆಗೆ ನೋಡಿದರೆ ನಿರಾಶೆಯಾಗುತ್ತದೆ. ಜನಪ್ರಿಯ 13 ಬ್ರಾಂಡ್‍ಗಳ ಪೈಕಿ ಏಳರಲ್ಲಿ ಖಾದ್ಯ ತೈಲ ಬಳಕೆಯಾಗಿದೆ. ಆರೋಗ್ಯ ಸಚಿವಾಲಯದ ಆಹಾರ ಕಲಬೆರಕೆ ತಡೆ ಕಾಯ್ದೆ ಪಿಎಫ್‍ಎ ಪ್ರಕಾರ ಚಾಕಲೇಟ್‍ಗಳಲ್ಲಿ ಖಾದ್ಯ ತೈಲ ಉಪಯೋಗ ಸಂಪೂರ್ಣ ನಿಷಿದ್ಧ. ಕೆಲವು ಚಾಕಲೇಟ್‍ಗಳಲ್ಲಂತೂ ಅತ್ಯಂತ ಕೆಟ್ಟ ಪರಿಣಾಮದ ಹೈಡ್ರೋಜನರೇಟೆಡ್ ಖಾದ್ಯತೈಲ ಕಂಡುಬಂದಿವೆ.
ತಾವು ಖಾದ್ಯ ತೈಲ ಬಳಸಿರುವುದನ್ನಾಗಲೀ, ಯಾವ ಪ್ರಮಾಣದಲ್ಲಿ ಕೊಕೋ ಸೇರಿಸಿದ್ದೇವೆನ್ನುವುದನ್ನಾಗಲೀ ಭಾರತೀಯ ತಯಾರಿಕೆಗಳು ಲೇಬಲ್‍ನಲ್ಲಿ ನಮೂದಿಸಿರುವುದು ಕಡಿಮೆ. ಇಲ್ಲಿ ಲಭ್ಯವಾಗುವ ಟೋಬ್ಲರ್ ಕೊಕೋ ಬಳಸಿದ ಪ್ರಮಾಣವನ್ನು ನಮೂದಿಸಿವೆ. ಸ್ವಾರಸ್ಯವೆಂದರೆ, ಇವೆರಡೂ ಆಮದು ಚಾಕಲೇಟ್‍ಗಳು!
ಭಾರತೀಯ ಚಾಕಲೇಟ್ ತಯಾರಿಕೆಗಳಿಗೆ ಹಿಂಬಾಗಿಲ ಹಾದಿಗೆ ರಾಜಮಾರ್ಗವೇ ತೆರೆದಿದೆ. ಚಾಕಲೇಟ್‍ಗಳಲ್ಲಿನ ಕೊಕೋ ಪರಿಮಾಣವನ್ನು ಪತ್ತೆ ಹಚ್ಚಲು ತಾಂತ್ರಿಕತೆಯ ಕೊರತೆಯಿದೆ. ಕನ್ಸ್ಯೂಮರ್ ವಾಯ್ಸ್ ಸಂಸ್ಥೆಯು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್ (ಬಿಐಎಸ್), ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‍ಟಿಆರ್‍ಐ) ಹಾಗೂ ಚೆನ್ನೈನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಷನ್‍ನ್ನು ಸಂಪರ್ಕಿಸಿದರೂ ಅದಕ್ಕೆ ಅಗತ್ಯ ತಾಂತ್ರಿಕತೆ ಪಡೆಯಲು ಸಾಧ್ಯವಾಗದ್ದು ಇದಕ್ಕೆ ಸಾಕ್ಷಿ.
ಇದು ಬಿಐಎಸ್‍ಗೂ ಗೊತ್ತಿದೆ, ಹಾಗಾಗಿ ನಿಯಮ ಐಎಸ್ 1163:1992 ಮೂಲಕ ತಯಾರಿಕೆ ವೇಳೆಯಲ್ಲಿ ಬೆರೆಸುವ ಕೊಕೋ ದ್ರವ್ಯ ಪ್ರಮಾಣವನ್ನು ದಾಖಲಿಸಬೇಕೆಂಬ ಸಲಹೆ ನೀಡುತ್ತದೆ. ಇದೊಂದು ತರಹ ಹಾವು ಸಾಯದ, ಕೋಲೂ ಮುರಿಯದ ಸ್ಥಿತಿ. ಚಾಕ್‍ಲೇಟ್‍ನಲ್ಲಿರಬೇಕಾದ ಕನಿಷ್ಟ ಕೊಕೋ ಬಗ್ಗೆ ಯಾವುದೇ ಮಾನದಂಡ ಇಲ್ಲದಿರುವಾಗ ಲೇಬಲ್‍ನಲ್ಲಿ ಆ ಮಾಹಿತಿ ಕೊಡಬೇಕಾದ ಅಗತ್ಯವೇನು ಎಂದೇ ವಿಶ್ವ ಮಾರುಕಟ್ಟೆ ಹೊಂದಿರುವ ಕ್ಯಾಡ್‍ಬರಿ `ಭಾರತದಲ್ಲಿ’ ವಾದಿಸುತ್ತದೆ!
ಚಾಕಲೇಟ್‍ಗಳಲ್ಲಿ ಬಳಸುವ ಕೊಕೋ ಬೆಣ್ಣೆ ಸಸ್ಯಜನ್ಯವಾದುದು. ನಮ್ಮಲ್ಲಿನ ತೋಟ, ಗುಡ್ಡಗಳಲ್ಲಿ ಬೆಳೆಸುವ ಕೊಕೋ ಗಿಡಗಳ ಕಾಯಿಯೊಳಗೆ ಕೊಕೋ ಬೀಜಗಳಿರುತ್ತವೆ. ಕಾಯಿ ಹಣ್ಣಾದಂತೆ ಈ ಬೀಜಗಳನ್ನು ಬೇರ್ಪಡಿಸಿ, ನಿರ್ದಿಷ್ಟ ಉಷ್ಣತೆಯಲ್ಲಿ ಒಣಗಿಸಲಾಗುತ್ತದೆ. ಕರ್ನಾಟಕದಲ್ಲಿ ಕ್ಯಾಂಪ್ಕೋದಂತ ಸಹಕಾರಿ ಸಂಸ್ಥೆ ಕೊಕೋ ಬೀಜಗಳನ್ನು ಖರೀದಿಸಿ, ಸಂಸ್ಕರಿಸುತ್ತದೆ. ಆಫ್ರಿಕನ್ ದೇಶಗಳಲ್ಲಿ ರೈತರೇ ಸ್ವತಃ ಬೀಜ ಒಣಗಿಸುವ ಸಂಪ್ರದಾಯವಿದೆ.
ಆದರೆ ಕೊಕೋ ಬೀಜದೊಳಗಿನಿಂದ ಬೆಣ್ಣೆಯನ್ನು ಯಾಂತ್ರಿಕ ಸಹಾಯದಿಂದ ತೆಗೆಯಲಾಗುತ್ತದೆ. ಇದೇ ಚಾಕಲೇಟ್‍ನ ಮುಖ್ಯ ಕಚ್ಚಾ ಪದಾರ್ಥ. ಈ ಕೊಕೋ ಬೆಣ್ಣೆಯ ಕೊಬ್ಬಿನ ಅಂಶ ಆರೋಗ್ಯಕ್ಕೆ ಏನೇನೂ ಹಾನಿಕರವಲ್ಲ ಎಂಬುದು ಯುನೈಟೆಡ್ ಸ್ಟೇಟ್ಸ್ ಫುಡ್ ಎಂಡ್ ಡ್ರಗ್ಸ್ ಅಡ್ಮಿನಿಸ್ಟೇಷನ್‍ನ ಸಂಶೋಧನೆಯಿಂದ ಖಚಿತವಾಗಿದೆ. ಹಾಗಾಗಿಯೇ ಅದು ಅಮೆರಿಕದಲ್ಲಿ ಶೇ. 100ರ ಕೊಕೋ ಬೆಣ್ಣೆಯನ್ನೇ ಬಳಸಬೇಕೆಂಬ ಕಟ್ಟುನಿಟ್ಟಿನ ಮಾನದಂಡವನ್ನು ನಿಗದಿಪಡಿಸಿದೆ.
ಚಾಕಲೇಟ್‍ನಲ್ಲಿ ಬಾಯಲ್ಲಿ ಕರಗುವ ಬೆಣ್ಣೆಯ ಅಂಶವಂತೂ ಬೇಕು. ಕೊಕೋ ಬೆಣ್ಣೆಯಲ್ಲವಾದರೆ ಇನ್ನಾವುದೇ ಖಾದ್ಯ ತೈಲವನ್ನಾದರೂ ಬಳಸಲೇಬೇಕು. ತಾಳೆ, ಶೇಂಗಾ, ಸೂರ್ಯಕಾಂತಿ ಎಣ್ಣೆಗಳನ್ನು ಮತ್ತು ಅವುಗಳ ಪರಿಷ್ಕರಿಸಿದ ರೂಪದಲ್ಲಿ ಬಳಸಬಹುದು. ಇವುಗಳ ಕೊಬ್ಬಿನ ಅಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಗುವಂತದಲ್ಲ. ಅದರಲ್ಲೂ ಚಿಕ್ಕ ಮಕ್ಕಳೇ ಚಾಕಲೇಟ್‍ಗಳನ್ನು ಹೆಚ್ಚಾಗಿ ತಿನ್ನುವ ಭಾರತೀಯ ಸನ್ನಿವೇಶದಲ್ಲಿ ಖಾದ್ಯ ತೈಲದ ವಿಪರೀತ ಉಪಯೋಗದ ಅಪಾಯ ಅರ್ಥವಾಗುವಂತದು.
ಭಾರತೀಯ ಚಾಕಲೇಟ್ ತಯಾರಕರು ಖಾದ್ಯ ತೈಲ ಸೇರಿಸಿಯೂ ಮುಗುಂ ಆಗಿದ್ದಕ್ಕೆ ಇಟಲಿಯಲ್ಲಿ ಉತ್ಪಾದಿಸಲ್ಪಡುವ, ಇಲ್ಲಿ ಖರೀದಿಗೆ ಲಭಿಸುವ ಫೆರೆರೋ ರೋಚರ್ ತಾನು ತಾಳೆ ಎಣ್ಣೆ ಬೆರೆಸಿರುವುದನ್ನು ರ್ಯಾಪರ್‍ನಲ್ಲಿಯೇ ಒಪ್ಪಿಕೊಳ್ಳುತ್ತದೆ!
ಭಾರತೀಯ ಮಾರುಕಟ್ಟೆಯಲ್ಲಿ ಅನಧಿಕೃತ, ಬೇನಾಮಿ ಚಾಕಲೇಟ್‍ಗಳು ಹೇರಳ. ತಿನ್ನುವ ನಾವೂ ಅಧಿಕೃತತೆಯ ಪರೀಕ್ಷೆಗೆ ಹೋಗುವುದಿಲ್ಲ. `ಮಂಚ್’ ಇಲ್ಲದಿದ್ದರೆ, ಅದೇ ರೂಪದ ನಕಲಿ `ಪಂಚ್’ ಆದರೂ ಆದೀತು. ನಮ್ಮ ಅಜ್ಞಾನ, ಅಲಕ್ಷ್ಯ ಚಾಕ್‍ಲೇಟ್ ತಯಾರಕರಿಗಂತೂ ವರದಾನವಾಗಿದೆ.
ನಾವು ನಿರೀಕ್ಷಿಸುವುದು ಸಿಹಿ. ಬಿಐಎಸ್ ಚಾಕಲೇಟ್‍ಗಳಲ್ಲಿ ಗರಿಷ್ಟ ಶೇ.55 ಸಕ್ಕರೆ ಅಂಶ ಇರಬಹುದು ಎಂದಿದೆ. ವಾಸ್ತವದಲ್ಲಿ, ಕಡಿಮೆ ಸಕ್ಕರೆ ಇದ್ದಲ್ಲಿ ಹೆಚ್ಚಿನ ಕೊಕೋ ಪ್ರಮಾಣಕ್ಕೆ ಅವಕಾಶ. ಕ್ಯಾಡ್‍ಬರಿ ಕ್ರಾಕ್ಲ್‍ನಲ್ಲಿ ಶೇ.54.23ರಷ್ಟು ಸಕ್ಕರೆ ಇದೆ. ನೆಸ್ಲೆ ಬಾರ್ ಒನ್, ಕ್ಯಾಡ್‍ಬರಿ 5 ಸ್ಟಾರ್, ಅಮುಲ್ ಚಾಕೋಜೂಗಳಲ್ಲಿ ಹೈಡ್ರೋಜನರೇಟೆಡ್ ಖಾದ್ಯತೈಲವಿದೆ. ಇದಕ್ಕಿಂತ ಸಕ್ಕರೆ ಹೆಚ್ಚಿರುವ ಕ್ರಾಕ್ಲ್‍ನಂತವು ಕ್ಷೇಮ!
ಭಾರತೀಯರು ಮಿಲ್ಕೀಬಾರ್ ಚಾಕಲೇಟ್‍ಗಳಿಗೆ ಮುಗಿಬೀಳುವುದು ಕಂಡುಬರುತ್ತದೆ. ಹಾಲಿನಿಂದ ತಯಾರಿಸಲ್ಪಡುವ ಚಾಕಲೇಟ್ ಇದ್ದುದರಲ್ಲಿ ಒಳ್ಳೆಯದು ಎಂಬ ಕಲ್ಪನೆಯಿದೆ. ನಿಜ, ಹಾಲಿನ ಪ್ರಮಾಣ ಹೆಚ್ಚಿದ್ದರೆ ಒಳ್ಳೆಯದೇ. ಅಸಲಿಗೆ ಅವು ಚಾಕಲೇಟ್‍ನಲ್ಲಿ ಎಷ್ಟು ಇದೆ ಎಂಬುದು ಸಂಶಯ! ನವದೆಹಲಿಯ `ವಾಯ್ಸ್’ ಸಂಸ್ಥೆ ಎನ್‍ಎಬಿಎಲ್ ಪ್ರಯೋಗಾಲಯದಲ್ಲಿ 6 ತಿಂಗಳ ಕಾಲ ಚಾಕಲೇಟ್‍ಗಳ ನಾನಾತರದ ಪರೀಕ್ಷೆ ಮಾಡುತ್ತದೆ. ನೆಸ್ಲೆ ಬಾರ್ ಒನ್ ಹಾಗೂ ಅಮುಲ್ ಚಾಕೋಜೂನಂತ ಬ್ರಾಂಡ್‍ನಲ್ಲಿ ಇರುವ ಹಾಲಿನ ಪ್ರಮಾಣ ಎಷ್ಟು ಕಡಿಮೆ ಎಂದರೆ ಲ್ಯಾಬ್ ಟೆಸ್ಟ್‍ನಲ್ಲಿ ಪತ್ತೆಯಾಗುವುದೇ ಇಲ್ಲ! ಮಾರ್ಸ್ ಬ್ರಾಂಡ್‍ನಲ್ಲಿ ಶೇ.14.58ರ ಹಾಲು ಪ್ರಮಾಣವಿರುವುದು ಉಲ್ಲೇಖಾರ್ಹ. ಉಳಿದವುಗಳಲ್ಲಿ ಶೇ. 5ರ ಆಚೀಚೆಯಲ್ಲಿಯೇ ಹಾಲಿನ ಪ್ರಮಾಣವಿರುವುದು ವ್ಯಕ್ತ.
ಯೋಚಿಸಬೇಕಾದವರು ನಾವು. ಶೇ.50 ಸಕ್ಕರೆ, ಶೇ.5 ಹಾಲು ಎಂದರೆ ಉಳಿದ ಶೇ.45 ಭಾಗದಲ್ಲಿ ಪ್ರಿಜರ್‍ವೇಟಿವ್, ಬಣ್ಣ, ಸ್ವಾದದ ರಾಸಾಯನಿಕಗಳು. ಮಕ್ಕಳನ್ನೇ ಹೆಚ್ಚಾಗಿ ಆಕರ್ಷಿಸುವ ಚಾಕಲೇಟ್‍ಗಳನ್ನು ಹಟಕ್ಕೆ ಬಿದ್ದವರಂತೆ ತಿನ್ನಿಸುವ ನಾವು ಅಕ್ಷರಶಃ ಮಾಡುತ್ತಿರುವುದೇನು? ಮಕ್ಕಳಿಗೆ ಖುದ್ದು ವಿಷ ಇಕ್ಕುತ್ತಿದ್ದೇವೆ!
ಎರಡು ವಿಷಯ ಪ್ರಸ್ತಾಪಾರ್ಹ. ಇನ್ನು ಮುಂದೆ ಚಾಕಲೇಟ್ ಖರೀದಿಸುವವರು, ಅದರೊಳಗೆ ಅಳವಡಿಸಿರುವ ಅಂಶಗಳನ್ನು ಲೇಬಲ್‍ನಲ್ಲಿ ಓದಿ ನಂತರವೇ ಕೊಳ್ಳುವುದು ಕ್ಷೇಮ. ಆದರೆ ಲೇಬಲ್‍ನಲ್ಲಿ ಮಾಹಿತಿ ಇರುವುದಿಲ್ಲ, ಮುದ್ರಿಸಿರುವುದಿಲ್ಲ ಎಂಬುದೇ ದೊಡ್ಡ ದೂರು. ಆಗಲೂ ಒಳ್ಳೆಯ ಚಾಕಲೇಟ್‍ನ ಪರೀಕ್ಷೆಗೆ ಒಂದು ಸರಳ ಕ್ರಮವಿದೆ. ಆ ಚಾಕಲೇಟ್‍ನಲ್ಲಿ ಕೆಲಕಾಲ ಕೈಯಲ್ಲಿ ಭದ್ರವಾಗಿ ಹಿಡಿದುಕೊಳ್ಳಬೇಕು. ಅದೆಷ್ಟು ಬೇಗ ಮೆದುವಾಗುತ್ತದೋ ಅಷ್ಟು ಯೋಗ್ಯ. ಕೊಕೋ ಪ್ರಮಾಣ ಹೆಚ್ಚಿದೆ ಎಂದುಕೊಳ್ಳಬಹುದು.
ಲೇಬಲ್‍ನಲ್ಲಿ ಅದನ್ನು ಚಾಕೋಲೇಟ್ ಎಂದು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಅಮುಲ್ ಚಾಕೋಜೂ ಬ್ರಾಂಡ್ ಚಾಕಲೇಟ್ ಅಲ್ಲವೇ ಅಲ್ಲ. ಅದು ಚಾಕೋಬೈಟ್! ನೆಸ್ಲೆ ಬಾರ್ ಒನ್‍ನ ರ್ಯಾಪರ್ ಹೇಳುತ್ತದೆ luscious nought and caramel with delicious chocolayer! ಅದೂ ಚಾಕಲೇಟ್ ಎನ್ನುವುದಿಲ್ಲ!!
ಇನ್ನೊಂದು ಮುಖ
ಚಾಕಲೇಟ್‍ನ ಸವಿಯನ್ನು ಮೆಂದು ಮೈ ಮರೆತಿರುವವರಿಗೆ ಹಿಂದಿನ ಕರಾಳ ವ್ಯವಸ್ಥೆಯೊಂದರ ಅರಿವು ಇರಲಿಕ್ಕೆ ಸಾಧ್ಯವಿಲ್ಲ. ಚಾಕಲೇಟ್‍ನ ಮುಖ್ಯ ಪದಾರ್ಥ ಕೊಕೋನ ಬಹುಪಾಲು ಆಮದುಗೊಳ್ಳುವುದು ಬಡ ಆಫ್ರಿಕನ್ ದೇಶಗಳಿಂದ. ಘಾನಾ ದೇಶ ತನ್ನ ರಫ್ತಿನಿಂದ ಗಳಿಸುವ ಆದಾಯದಲ್ಲಿ ಶೇ. 46 ಕೊಕೋ ಬಾಬತ್ತಿನದು-ಅದೇ ಐವರಿ ಕೋಸ್ಟಾ ವಿಶ್ವ ಮಾರುಕಟ್ಟೆಯ ಶೇ. 43 ಭಾಗವನ್ನು ತಾನೇ ಪೂರೈಸುತ್ತದೆ. ಅತ್ಯಂತ ಕಡಿಮೆ ಬೆಲೆಗೆ ಕೊಕೋವನ್ನು ರಫ್ತು ಮಾಡಲು ಪಶ್ಚಿಮ ಆಫ್ರಿಕಾ ದೇಶಗಳಿಗೆ ಸಾಧ್ಯವಾಗುವುದು ಬಾಲ ಕಾರ್ಮಿಕರಿಂದ! ಒಂದು ಅಂದಾಜಿನ ಪ್ರಕಾರ, 2 ಲಕ್ಷದ 84 ಸಾವಿರ ಮಕ್ಕಳು ಅಹರ್ನಿಶಿ ಜುಜುಬಿ ಸಂಬಳಕ್ಕೆ ದುಡಿಯುತ್ತಿದ್ದಾರೆ. 2000ದಲ್ಲೊಮ್ಮೆ ಅಮೆರಿಕದ ಕಾರ್ಮಿಕ ಇಲಾಖೆ ತನಿಖೆ ನಡೆಸಿ ಕಂಡುಹಿಡಿದಿತ್ತು. ಆ ವರ್ಷ ಘಾನಾದಲ್ಲಿ 9 ರಿಂದ 12ರ ಮಧ್ಯದ 15 ಸಾವಿರ ಮಕ್ಕಳು ಹತ್ತಿ, ಕಾಫಿ, ಕೊಕೋ ಪ್ಲಾಂಟೇಷನ್‍ಗೆ ಮಾರಲ್ಪಟ್ಟಿದ್ದರು. ಇವರೆಲ್ಲ ಕಳ್ಳ ಸಾಗಾಣಿಕೆಯಾದ ಮಕ್ಕಳು! ಅಲ್ಲಿನ ಕಾರ್ಮಿಕರ, ಅವರ ಕುಟುಂಬಗಳ ಸ್ಥಿತಿ ಹೀನಾಯ.
ಚಾಕಲೇಟ್ ಕಂಪನಿಗಳು ಮಾತ್ರ ಅದಕ್ಕೂ ತಮಗೂ ಸಂಬಂಧವಿಲ್ಲ ಎಂತಲೇ ವಾದಿಸುತ್ತವೆ. ತಾವು ಕೊಕೋವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಯೇ ವಿನಃ ಕಾರ್ಮಿಕ ಶೋಷಣೆಯನ್ನು ಬೆಂಬಲಿಸುವುದಿಲ್ಲ. ಆದರೆ ಸದರಿ ವಿಚಾರದಲ್ಲಿ ತಾವು ಅಸಹಾಯಕರು ಎನ್ನುತ್ತಾರೆ.
ಕೊನೆ ಪಕ್ಷ ಅಮೆರಿಕನ್ ಕಂಪನಿಗಳ ವಿಚಾರದಲ್ಲಿ ಇದು ಸುಳ್ಳು. ಅಲ್ಲಿನ ಹೆರ್ಷೆಯ್ ಹಾಗೂ ಮಾರ್ಸ್ ಚಾಕಲೇಟ್ ಕಂಪನಿಗಳು ಬೃಹತ್ ಮಾರುಕಟ್ಟೆಯ ಭಾಗವಾಗಿದ್ದು, ಅವು ಅನಾಯಾಸವಾಗಿ ಕೊಕೋ ಕಾರ್ಮಿಕರ ಕಲ್ಯಾಣದ ಷರತ್ತು ಒಡ್ಡಿ ಕಚ್ಚಾ ಕೊಕೋ ಖರೀದಿಸಬಹುದು. ಈ ಕಂಪನಿಗಳ ಒತ್ತಡವನ್ನು ಭರಿಸಲು ಪ್ಲಾಂಟೇಶನ್ ಮಾಲಿಕರಿಗೆ ಸಾಧ್ಯವಿಲ್ಲ. ಒಂದು ಪೌಂಡ್ ಚಾಕಲೇಟ್‍ಗೆ 400 ಕೊಕೋ ಬೀಜ ಹೆಕ್ಕುವ ಆಫ್ರಿಕನ್ ಬಾಲಕ ಮಾತ್ರ ತನ್ನ ಜೀವಮಾನದಲ್ಲಿ ಹೊಳೆಯುವ ಪ್ಯಾಕ್‍ನಲ್ಲಿರುವ ಚಾಕಲೇಟ್ ರುಚಿ ನೋಡುವುದೇ ಇಲ್ಲ!
ಕೊನೆ ಮಾತು – ಚಾಕಲೇಟ್‍ಗಳಲ್ಲೂ ಕೆಲವು ಮೊಟ್ಟೆಯ ಬಿಳಿ ಅಂಶ ಬಳಸಿಕೊಂಡಿರುತ್ತವೆ. ಉದಾಹರಣೆಗೆ, ಮಾರ್ಸ್ ಹಾಗೂ ಟೋಬ್ಲೆರಾನ್ ಚಾಕಲೇಟ್‍ಗಳು ಸಸ್ಯಹಾರಿ ಅಲ್ಲ! ಹಾಗೆಂದು ಇವ್ಯಾವುದೇ ಚಾಕಲೇಟ್ ರ್ಯಾಪರ್‍ನಲ್ಲಿ ಕೆಂಪು ಚುಕ್ಕೆ, ಹಸಿರು ಚುಕ್ಕೆ ಇಲ್ಲ! ಇನ್ನುಳಿದಂತೆ, ಚಾಕಲೇಟ್ ಬಗ್ಗೆ ತೀರ್ಮಾನ ನಿಮ್ಮದು.
ಮಾ.ವೆಂ.ಸ. ಪ್ರಸಾದ
ಅವಿಭಜಿತ ಕೋಲಾರ ಜಿಲ್ಲೆಯ ಲೇಖಕರ ಕೃತಿ ಸಂಗ್ರಹ
ಸಾಮಾಜಿಕ, ಸಾಹಿತ್ಯ, ಕಲೆ, ಸಂಗೀತ, ಜಾನಪದ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಬಳಿಯ ನಿಸರ್ಗ ವಿದ್ಯಾಮಂದಿರದ ಹತ್ತಿರದ ಶ್ರೀ ಗುರುಮಲ್ಲಯ್ಯ -ಸರ್ವಮಂಗಳ ಪ್ರತಿಷ್ಠಾನದ ‘ಸರ್ವೋದಯ ಗುರುಕುಲ’ದಲ್ಲಿ ಏಪ್ರಿಲ್ ೫ರಂದು ಲೋಕಾರ್ಪಣೆಯಾಗಲಿರುವ ‘ಜಗನ್ನಾಥ್ ಪುಸ್ತಕ ಮನೆ’ಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಲೇಖಕರ ಕೃತಿಗಳನ್ನು ಪ್ರತ್ಯೇಕ ವಿಭಾಗದಲ್ಲಿ ಸಂಗ್ರಹಿಸಿಡುವ ಕಾರ್ಯಕ್ರಮವನ್ನು ರೂಪಿಸಿದೆ.
ಅಧ್ಯಯನ ಮಾಡುವವರಿಗೆ ನೆರವಾಗುವ ಉದ್ದೇಶದಿಂದ ಆಕರ ಗ್ರಂಥಗಳಿಗೆ ಮೀಸಲಾದ ಈ ಪಸ್ತಕ ಮನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಲೇಖಕರ ಎಲ್ಲಾ ಪ್ರಕಾರದ ಕೃತಿಗಳನ್ನು ಇಲ್ಲಿ ಇಡಲಾಗುವುದು. ಹಾಗೆಯೇ ಈ ಲೇಖಕರ ಪರಿಚಯಾತ್ಮಕ ದಾಖಲೆಗಳನ್ನೂ ನಿರ್ವಹಿಸಲಾಗುದು ಎಂದು ಗುರುಕುಲದ ಕಾರ್ಯ ನಿರ್ವಾಹಕ, ಸಾಹಿತಿ ಸ.ರಘುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವಲ್ಲದೆ ಈ ಎರಡೂ ಜಿಲ್ಲೆಗಳಿಗೆ ಸೇರಿದ ಲೇಖಕರು ಕನ್ನಡಕ್ಕೆ ಅನುವಾದ ಮಾಡಿದ ಕೃತಿಗಳನ್ನಷ್ಟೇ ಅಲ್ಲದೆ, ಕನ್ನಡದಿಂದ ಇತರೆ ಭಾಷೆಗಳಿಗೆ ಮಾಡಿದ ಕೃತಿಗಳನ್ನು ಸಹ ಇಡಲಾಗುವುದು. ಆದುದರಿಂದ ಲೇಖಕರು, ಪ್ರಕಾಶಕರು, ಆಸಕ್ತರು, ಸ್ನೇಹಿತರು ಕೃತಿಗಳನ್ನು ಲೇಖಕರ ಸಂಕ್ಷಿಪ್ತ ಪರಿಚಯದೊಂದಿಗೆ ಸ,ರಘುನಾಥ, ಕಂಟ್ರಾಕ್ಟರ್ ರಾಜಣ್ಣನವರ ಮನೆ, ವೇಣು ವಿದ್ಯಾ ಸಂಸ್ಥೆ ಎದುರು, ಕುವೆಂಪು ವೃತ್ತ, ಶ್ರೀನಿವಾಸಪುರ– ೫೬೩೧೩೫, ಕೋಲಾರ ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಕೃತಿಗಳೊಂದಿಗೆ ಪರಿಚಯ ಪತ್ರವನ್ನು ಕಳುಹಿಸಬೇಕಲ್ಲದೆ, ಪರಿಚಯ ಪತ್ರವನ್ನಷ್ಟೇ ಕಳುಹಿಸಿದರೆ ಸ್ವೀಕರಿಸಲಾಗುವುದಿಲ್ಲ. ಒಂದು ವೇಳೆ ಕೃತಿ ರಚನೆ ಮಾಡಿಯೂ ಪ್ರಕಟಿಸಲಾಗದೆ ಇರುವವರು ಎ೪ ಹಾಳೆಯಲ್ಲಿ ಒಂದೇ ಮಗ್ಗುಲಿನಲ್ಲಿ ಟೈಪು ಮಾಡಿಸಿ, ಅಚ್ಚುಕಟ್ಟಾಗಿ ಬೈಂಡು ಮಾಡಿಸಿ ಕಳುಹಿಸಬಹುದಾಗದೆ ಎಂದು ತಿಳಿಸಿರುವ ಅವರು, ಮಾಸ್ತಿ, ಡಿವಿಜಿ, ದೇವುಡು, ಇಡಗೂರು ರುದ್ರಕವಿ, ಜಚನಿ, ಕೈವಾರ ತಾತಯ್ಯ, ತೊರ್ಲ ಭೈಯ್ಯಾರೆಡ್ಡಿ, ವೇದಾಂತಂ ವೆಂಕಟರೆಡ್ಡಿ, ಪುಲ್ಲಕವಿ, ಗಟ್ಟಳ್ಳಿ ಆಂಜನಪ್ಪ ಮುಂತಾದವರ ಕೃತಿಗಳನ್ನು ಕೊಡುಗೆಯಾಗಿ ಸ್ವೀಕರಿಸುವುದಲ್ಲದೆ, ಕುಮುದೇಂದು, ಪಾಲವೇಕರಿ ಕದಿರೀಪತಿ ಮುಂತಾದ ಪ್ರಾಚೀನ ಲೇಖಕರ ಕೃತಿಗಳನ್ನೂ, ತಾಳೆಗರಿ ಗ್ರಂಥ, ಹಸ್ತಪ್ರತಿಗಳನ್ನೂ ಸ್ವೀರಿಸಡಲಾಗುವುದು. ಹೀಗೆ ಪ್ರಾಚೀನ ಗ್ರಂಥಗಳನ್ನು ನೀಡುವವರ ವಿವರಗಳನ್ನೂ ಸಹ ಗುರುಕುಲವು ದಾಖಲಿಸುವುದಾಗಿ ಎಂದು ತಿಳಿಸಿದ್ದಾರೆ.
ಭಕ್ತರಹಳ್ಳಿಯ ಬಳಿ ಟೆಂಪೋ ಮುಗುಚಿ ೧೫ ಮಂದಿಗೆ ಗಾಯ
ಕ್ಯಾರೆಟ್ ತುಂಬಿಕೊಂಡು ಹೋಗುತ್ತಿದ್ದ ಟೆಂಪೊವೊಂದು ಉರುಳಿಬಿದ್ದ ಪರಿಣಾಮ, 15 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ಭಕ್ತರಹಳ್ಳಿಯ ಸಮೀಪದ ಹಳ್ಳಿಯೊಂದರ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಟೆಂಪೊನಲ್ಲಿ ಕ್ಯಾರೆಟ್ ತುಂಬಿಕೊಂಡು ಹೋಗುವಾಗ ಭಕ್ತರಹಳ್ಳಿಯ ಸಮೀಪದ ತಿರುವಿನಲ್ಲಿ ಟೆಂಪೋ ಮುಗುಚಿಬಿದ್ದಿದೆ, ಟೆಂಪೋ ಮುಗುಚಿಬಿದ್ದ ಪರಿಣಾಮವಾಗಿ ಟೆಂಪೋನಲ್ಲಿದ್ದ 15 ಮಂದಿಗೆ ಗಾಯಗಳಾಗಿವೆ. ಎಂಟು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟೆಂಪೊನಲ್ಲಿ ಅಧಿಕವಾದ ಲೋಡ್ಮಾಡಿದ್ದ ಕಾರಣ ಕಾರ್ಮಿಕರು ಟೆಂಪೋ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ನಾರಾಯಣಮ್ಮ ಮತ್ತು ಲಕ್ಷ್ಮಮ್ಮ ಎಂಬುವರನ್ನು ಕಳುಹಿಸಲಾಗಿದೆ.
ಗಾಯಾಳುಗಳು ಚಿಕ್ಕಬಳ್ಳಾಪುರ ಸಮೀಪದ ತಿಪ್ಪೇನಹಳ್ಳಿಯವರು. ಆಸ್ಪತ್ರೆಯಲ್ಲಿ ಗಾಯಾಳುಗಳ ಆಕ್ರಂಧನ ಮುಗಿಲು ಮುಟ್ಟಿತ್ತು, ಎಲ್ಲಾ ಗಾಯಾಳುಗಳನ್ನು ಕೂಡಲೇ 108 ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ ಹಾಜರಿದ್ದರು.

