24.1 C
Sidlaghatta
Tuesday, December 30, 2025
Home Blog Page 975

ಹಾಸ್ಟೆಲ್ ಮಕ್ಕಳಿಗೊಂದು ಪತ್ರ

0

ಮಗೂ,
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲಿಕ್ಕುತ್ತಾ, ಏಳುತ್ತಾ ಬೀಳುತ್ತಾ ನಡೆದಾಡಿ, ತೊದಲು ನುಡಿಯಿಂದ ನಮ್ಮೆಲ್ಲರ ಕಣ್ಮನಗಳಿಗೆ ತಂಪೆರೆಯುತ್ತಿದ್ದ ನೀನು ಅದೆಷ್ಟು ಬೇಗ ನಮ್ಮೆತ್ತರಕ್ಕೆ ಬೆಳೆದು ನಿಂತಿದ್ದೀಯಾ. ತಂದೆ ತಾಯಿಯರ ಮನಸ್ಸಾದರೂ ಎಂತಹ ವಿಚಿತ್ರ ನೋಡಿ. ಮಗುವಿನ ಬಾಲಲೀಲೆಗಳನ್ನು ನೋಡುತ್ತಾ ಮೈಮರೆಯುವ ಅವರು, ಆ ಸಂತೋಷವನ್ನು ಅನುಭವಿಸಲು ಕಾಲ ನಿಂತು ಬಿಡಬಾರದೇ ಎಂದುಕೊಳ್ಳುತ್ತಾರೆ. ಜೊತೆಜೊತೆಗೆ ತಮ್ಮ ಮಗುವಿನ ಭವಿಷ್ಯವನ್ನು ರೂಪಿಸುವ ಮತ್ತು ಅದನ್ನು ತಮ್ಮ ಜೀವಿತಾವಧಿಯಲ್ಲೇ ಸವಿಯುವ ಕಾತರದಿಂದ ಸಮಯ ನಾಗಾಲೋಟದಲ್ಲಿ ಏಕೆ ಓಡುತ್ತಿಲ್ಲ ಎಂದೂ ಅವರು ಕೊರಗುತ್ತಾರೆ! ಆದರೆ ಕಾಲ ಇದಾವುದನ್ನೂ ಲೆಕ್ಕಿಸದೆ ತನ್ನದೇ ನಿಯಮಗಳಿಗನುಸಾರವಾಗಿ ಚಲಿಸುತ್ತದೆ.
ಇಂತಹ ಕಾಲದ ಒಂದು ನಿರ್ಣಾಯಕ ಘಟ್ಟದಲ್ಲಿ ನೀನಿದ್ದೀಯಾ ಮಗೂ. ನಿನ್ನ ವಿದ್ಯಾಭ್ಯಾಸದ ಅಗತ್ಯಗಳಿಗಾಗಿ ನೀನೀಗ ನಮ್ಮಿಂದ ದೂರ ಹೋಗಿ ಹಾಸ್ಟೆಲ್‍ನಲ್ಲಿ ವಸತಿ ಹೂಡಬೇಕಾಗಿದೆ. ಒಮ್ಮೆಲೆ ಇದು ನಿನ್ನ ಮೇಲೆ ಅನೇಕ ರೀತಿಯ ಒತ್ತಡಗಳನ್ನು ಹೇರುತ್ತದೆ. ನಿನ್ನ ವಿದ್ಯಾಭ್ಯಾಸ ನಿನ್ನ ಭವಿಷ್ಯದ ಜೀವನದ ಹಾದಿಯನ್ನು ನಿರ್ಧರಿಸುವ ತಿರುವಿನಲ್ಲಿದೆ. ಜೊತೆಗೆ ನಿನ್ನಲ್ಲಿ ಮೂಡುತ್ತಿರುವ ಹರೆಯ ನಿನ್ನನ್ನು ವಿವಿಧ ಕಾಮನೆ, ಸಾಹಸ, ಪ್ರಯೋಗಗಳಿಗೆ ಸೆಳೆಯುಲು ಹೊಂಚು ಹಾಕುತ್ತಿರುತ್ತದೆ. ಬರಿಯ ನಿನ್ನ ವೈಯುಕ್ತಿಕ ಬದುಕನ್ನಷ್ಟೇ ಅಲ್ಲ, ಇಡೀ ಜಗತ್ತನ್ನು ನೋಡುವ ನಿನ್ನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗುವ ಸಂಕ್ರಮಣ ಸಮಯವಿದು. ಇಂತಹ ಕಾಲದಲ್ಲಿ ಪೋಷಕರಿಂದ ದೂರವಿರುವ ಕೊರಗೂ ನಿನ್ನನ್ನು ಕಾಡಬಹುದು. ಅಥವಾ ಅಂತಹ ಸ್ವಾತಂತ್ರವನ್ನು ಸವಿಯುವ ಕಾತರದಲ್ಲೂ ನೀನಿರಬಹುದು! ಅದೇನೇ ಇದ್ದರೂ ನಮ್ಮ ಕಣ್ಣಳತೆಯಿಂದ ದೂರ ಹೋಗುತ್ತಿರುವ ನಿನಗೆ ನಮ್ಮ ಕೆಲವು ಅನಿಸಿಕೆಗಳನ್ನು ಹೇಳುವ ಸಮಯ ಒದಗಿ ಬಂದಿದೆ.
“ಇದೇನಪ್ಪಾ ಹೊಸದು ಇಷ್ಟು ದಿನ ಹೇಳದೇ ಇದ್ದದ್ದು” ಎಂದೋ ಅಥವಾ “ಈ ಅಪ್ಪ ಅಮ್ಮಂದು ಅದೇ ಹಳೇ ಗೋಳಿರಬೇಕು” ಎಂದೋ ಕಡೆಗಣಿಸಬೇಡ ಮಗೂ, ನಿನ್ನೆಲ್ಲಾ ಹರೆಯದ ತುಮುಲಗಳು ನಿನಗೆ ಮಾತ್ರ ವಿಶಿಷ್ಟವಾದದ್ದೆಂದು ನಿನಗನ್ನಿಸಿದರೂ, ನಾವೆಲ್ಲಾ ನಿನಗಿಂತ ಭಿನ್ನವಾದ ಕಾಲಘಟ್ಟದಲ್ಲಿ ಮತ್ತು ಬಹುಶಃ ಭಿನ್ನವಾದ ರೀತಿ ಅಥವಾ ತೀವ್ರತೆಗಳಲ್ಲಿ ಅವೆಲ್ಲವನ್ನೂ ಅನುಭವಿಸಿದ್ದೇವೆ. ಹಾಗಾಗಿ ನಿನ್ನ ಬಗೆಗಿನ ನಮ್ಮ ಕಾಳಜಿ ಮತ್ತು ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ನಮ್ಮ ಮಾತುಗಳಿಗೊಂದಿಷ್ಟು ಕಿವಿಯಗಲಿಸು. ನಂತರದ ನಿನ್ನೆಲ್ಲಾ ನಿರ್ಧಾರಗಳಿಗೆ, ಅವು ಕಾನೂನು ಬಾಹಿರ, ಅನೈತಿಕ ಅಥವಾ ಅನಾಗರಿಕವಾಗಿಲ್ಲದಿದ್ದಲ್ಲಿ, ನಮ್ಮ ಸಂಪೂರ್ಣ ಬೆಂಬೆಲವಿದೆಯೆಂದು ನಾನು ಆಶ್ವಾಸನೆ ಕೊಡುತ್ತೇನೆ.
ಮನೆಯಿಂದ ದೂರ ಹೋದ ಮೇಲೆ ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನಿನ್ನ ಸುತ್ತೆಲ್ಲಾ ಹರೆಯದ ಹೊಳೆಯೇ ಹರಿಯುತ್ತಿರುತ್ತದೆ. ಇದು ನಿನ್ನಲ್ಲಿ ಚಿಗುರುತ್ತಿರುವ ಭಾವೀ ಜೀವನದ ಕನಸುಗಳಿಗೆ ಸೂಕ್ತ ವಾತಾವರಣ ಕೂಡ. ವಿಪರ್ಯಾಸವೆಂದರೆ, ನಿನ್ನ ಕನಸುಗಳಿಗೆ ಜೀವಜಲವಾಗಬೇಕಾದದ್ದು ನಿನ್ನನ್ನು ಕೊಚ್ಚಿಕೊಂಡು ಹೋಗಿ ದೂರದ ನಿರ್ಜನ ಪ್ರದೇಶದಲ್ಲಿ ಬೀಸಾಕಬಲ್ಲ ಪ್ರವಾಹವೂ ಆಗಬಲ್ಲದು. ಹಾಗಾಗಿ ಮೊದಲು ನಿನ್ನ ಜೀವನದ ದೂರಗಾಮೀ ಗುರಿಗಳನ್ನು ಸ್ಪಷ್ಟ ಪಡಿಸಿಕೊ. ಅದನ್ನು ವಾರ್ಷಿಕ, ಮಾಸಿಕ ಮತ್ತು ದೈನಿಕ ಗುರಿಗಳಾಗಿ ವಿಘಟನೆಗೊಳಿಸು. ನಂತರ ಸಕಲ ಸಿದ್ಧತೆಯೊಂದಿಗೆ ಜೀವನ ಸಮುದ್ರಕ್ಕೆ ಹಾರಿಬಿಡು.
ನಿನ್ನ ದೂರಾಗಾಮಿ ಗುರಿ ಮಾತ್ರ ನಾವಿಕನಿಗೆ ದಿಕ್ಸೂಚಿಯಾಗಿರುವ ಲೈಟ್ ಹೌಸ್‍ನಂತೆ ಯಾವಾಗಲೂ ನಿನ್ನ ಕಣ್ಣಳತೆಯಲ್ಲೇ ಇರಲಿ. ಆಗ ನಿನ್ನ ಹಾದಿಯಲ್ಲಿ ಬರುವ ಹರೆಯದ ಸಂಪೂರ್ಣ ಮಸ್ತಿಯನ್ನು ಅನುಭವಿಸು. ಲೈಟ್ ಹೌಸ್ ಕಣ್ಮರೆಯಾದೊಡನೆ ತಕ್ಷಣ ಎಚ್ಚೆತ್ತು ಅದನ್ನು ಅರಸಿದ ನಂತರ ಮಾತ್ರ ಮುಂದುವರೆ.
ಮಾನವನ ಲೈಂಗಿಕತೆಯ ಮೂಲಪಾಠಗಳನ್ನು ನಿನಗೀಗಾಲೇ ತಿಳಿಹೇಳಿದ್ದೇವೆ. ನಾನು ಇಲ್ಲಿಯವರೆಗೆ ಹೇಳಿರುವುದೆಲ್ಲಾ ಬರಿಯ ಥಿಯರಿ ಮಾತ್ರ! ಎಲ್ಲಾ ವಿಷಯಗಳಲ್ಲೂ ಥಿಯರಿಯಲ್ಲಿ ಕಲಿತಿದ್ದನ್ನು ಸದಾ ಕಾಲ ಉಳಿಯಬಲ್ಲಂತೆ ಮೆದುಳಿನಲ್ಲಿ ದಾಖಲಿಸಿಕೊಳ್ಳಲು ಪ್ರಾಕ್ಟಿಕಲ್‍ಗಳನ್ನು ಮಾಡಬೇಕು ಅಂತ ಕೂಡ ನಾನೇ ಹೇಳಿದ್ದೆ. ಹಾಗಾಗಿ ಸದ್ಯದ ನಿನ್ನ ಪರಿಸ್ಥಿತಿಗಳು ಇಂತಹ ಪ್ರಾಕ್ಟಿಕಲ್‍ಗಳಿಗೆ ಸರಿಯಾದ ಸಮಯ ಎಂದುಕೊಳ್ಳಬೇಡ! ನಿನ್ನ ಈಗಿನ ಗುರಿ ಅದಲ್ಲ ಎನ್ನುವುದನ್ನು ಮರೆಯದೆ ಭವಿಷ್ಯತ್ತಿಗೆ ನಿನ್ನ ಪ್ರಯೋಗಗಳನ್ನು ಮುಂದೂಡು! ಜೀವನದ ಮೊದಲ ಇಪ್ಪತ್ತೈದು ವರ್ಷಗಳನ್ನು ಉದ್ದೇಶರಹಿತವಾಗಿ ಕಳೆದರೆ ನಂತರದ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿವೆ.
ಲೈಂಗಿಕ ಸಾಹಸಗಳಿಂದ ತಪ್ಪಿಸಿಕೊಂಡರೂ, ಪ್ರೀತಿ ಪ್ರೇಮಗಳ ಬಲೆಗೆ ಬೀಳದೆ ಉಳಿಯುವುದು ಸುಲಭವಲ್ಲ. ನಮ್ಮ ಸಿನಿಮಾ, ಟೀವಿ ಧಾರಾವಾಹಿಗಳನ್ನು ಮಾದರಿಯಾಗಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳು ಇದನ್ನು ಅನಿವಾರ್ಯವಾಗಿಸಿಕೊಂಡಿದ್ದಾರೆ. ನಾವೇನು ಈ ಲವ್ವು ಗಿವ್ವುಗಳನ್ನು ಢೋಂಗಿ ಎಂದು ಹೇಳುತ್ತಿಲ್ಲ. ಅದೂ ಅಲ್ಲದೆ ನಮಗೆ ಜಾತಿ ಧರ್ಮಗಳ ಬಂಧನವೂ ಇಲ್ಲವೆಂದು ನಿನಗೂ ಗೊತ್ತಿದೆ. ಹಾಗಿದ್ದರೂ ನಾವು ಸೂಚಿಸುತ್ತಿರುವುದು ಸದ್ಯದ ನಿನ್ನ ಗುರಿಗಳಿಗೆ ಈ ರೀತಿಯ ಭಾವನಾತ್ಮಕ ಎಳೆತಗಳು ಪೂರಕವಾಗಲಾರವು, ಬದಲಾಗಿ ಕಂಟಕಗಳೇ ಆಗಬಹುದು, ಎನ್ನುವುದು ಮಾತ್ರ. ಪ್ರೀತಿ ಪ್ರೇಮವೆಲ್ಲಾ ಗೊತ್ತಿಲ್ಲದೆ ಆಗಿಬಿಡುತ್ತದೆ ಎನ್ನುವ ಮಾತುಗಳಿಂದ ಕೂಡ ಮೋಸ ಹೋಗಬೇಡ. ಇವೆಲ್ಲಾ ಷೋಡಷ ಮನಸ್ಸುಗಳನ್ನು ಮರುಳು ಮಾಡಿ ಹಣ ಮಾಡುವ ಸಿನಿಮಾದವರ ಹುನ್ನಾರು ಮಾತ್ರ! ನಿನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ನಿನ್ನ ಭಾವನಾತ್ಮಕ ಅಗತ್ಯಗಳನ್ನು ಸರಿತೂಗಿಸಬಲ್ಲ ಸಂಗಾತಿಯನ್ನು ಹುಡುಕಿಕೊಳ್ಳಲು ನಿನಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ.
ತಕ್ಷಣದ ಥ್ರಿಲ್‍ಗಳನ್ನು, ಅದೂ ಪದೇಪದೇ ಹೊಸ ಹೊಸ ರೀತಿಯ ರೋಮಾಂಚನಗಳನ್ನು ಅರಸುವುದು ಇಂದಿನ ಜೀವನಶೈಲಿಯೇ ಆಗಿಬಿಟ್ಟಿದೆ. ಇದರ ಬಗೆಗೆ ಎಚ್ಚರ ವಹಿಸದಿದ್ದರೆ ನಶೆಯ ವಸ್ತುಗಳತ್ತ ಸೆಳೆಯಲ್ಪಡುವ ಸಾಧ್ಯತೆಗಳು ಹೆಚ್ಚು. “ಒಮ್ಮೆ ಮಾತ್ರ” ಎನ್ನುವ ಯಾವುದೇ ಆಮಿಷಗಳಿಗೆ, “ಏ ಗಂಡಸಲ್ವೇನೋ, ಇದಕ್ಕೆಲ್ಲಾ ಹೆದರ್ತಾರಾ; ನಿನ್ಹತ್ರ ಏನೂ ಮಾಡೋಕೆ ಆಗಲ್ಲ, ಗಾಂಧೀ ನೀನು” ಎನ್ನುವ ಯಾವುದೇ ಸವಾಲುಗಳಿಗೆ ಮರುಳಾಗಬೇಡ. ನಶೆಯ ವಸ್ತುಗಳು ಉಸುಬಿನ ನೆಲವಿದ್ದಂತೆ, ನಿನಗೆ ಗೊತ್ತಿಲ್ಲದಂತೇ ನಿನ್ನನ್ನು ತನ್ನಲ್ಲಿ ಸಿಲುಕಿಸಿ ಸರ್ವನಾಶದತ್ತ ಕೊಂಡೊಯ್ಯುತ್ತದೆ.
ಸದ್ಯಕ್ಕೆ ನಮ್ಮ ಕಾಳಜಿಗಳು ಇಷ್ಟೇ ಮಗೂ, ನಿನ್ನ ದೂರಗಾಮೀ ಗುರಿಗಳತ್ತ ಮಾತ್ರ ಗಮನವಿಟ್ಟುಕೊ; ತಾತ್ಕಾಲಿಕ ಸೋಲುಗಳಿಂದ ಕಳೆಗುಂದಬೇಡ; ಸಣ್ಣ ಪುಟ್ಟ ಗೆಲುವುಗಳನ್ನು ಆನಂದಿಸು, ಆದರೆ ಅವುಗಳಿಂದ ಮೈಮರೆಯಬೇಡ; ಉತ್ತಮ ದೈಹಿಕ ಆರೋಗ್ಯವನ್ನಿಟ್ಟುಕೊ; ಮಾನಸಿಕ ಸಮತೋಲನವನ್ನು ಕಾಪಾಡಿಕೊ. ಯಾವುದೇ ಆತುರದ ನಿರ್ಧಾರಗಳನ್ನು ಕೈಕೊಳ್ಳಬೇಡ. ನಿನ್ನ ಮೇಲಿನ ನಮ್ಮ ಪ್ರೀತಿ ಷರತ್ತುರಹಿತವಾಗಿರುತ್ತದೆ; ನಿನ್ನ ಮನಃಪೂರ್ವಕ ಪ್ರಯತ್ನಗಳ ಯಾವುದೇ ಫಲಿತಾಂಶವೂ ನಮಗೆ ಸಂಪೂರ್ಣ ಒಪ್ಪಿಗೆ; ನಿನ್ನ ಕಷ್ಟ ಸುಖಗಳಲ್ಲೆಲ್ಲಾ ನಾವು ಸಂಪೂರ್ಣ ಪಾಲುದಾರರು ಎನ್ನುವ ಭರವಸೆಯನ್ನು ಮಾತ್ರ ನಾವು ಕೊಡಬಲ್ಲೆವು.
ಪ್ರೀತಿಯೊಂದಿಗೆ,
ನಿನ್ನ ಅಪ್ಪ ಅಮ್ಮ
ನಡಹಳ್ಳಿ ವಸಂತ್

ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಯುಗಾದಿ ಹಬ್ಬದ ಆಚರಣೆ

0

ನಗರದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಯುಗಾದಿ ಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ೫ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯಾಭಿಮುಖವಾಗಿ ನಿಂತು ಸೂರ್ಯ ನಮಸ್ಕಾರವನ್ನು ಮಾಡಲಾಯಿತು. ವಿದ್ವಾನ್ ಶ್ಯಾಂಸುಂದರ್ ಮತ್ತು ತಂಡದರು ಪಿಟೀಲು ಮತ್ತು ಕೊಳಲಿನ ವಾದ್ಯವನ್ನು ನುಡಿಸಿದರು.
ಹೊಸವರ್ಷವನ್ನು ಸೂರ್ಯಾಭಿಮುಖವಾಗಿ ಕುಳಿತು ಗಾಯಿತ್ರಿ ಮಂತ್ರದೊಂದಿಗೆ ಸೂರ್ಯದೇವನಿಗೆ ಅರ್ಘ್ಯವನ್ನು ನೀಡಿದರು. ಯುಗಾದಿ ಹಬ್ಬದ ವಿಷೇಶತೆಯನ್ನು ವಿ. ಕೃಷ್ಣ ವಿವರಿಸಿ, ಬೇವು ಬೆಲ್ಲ ಜೀವನದಲ್ಲಿ ಸುಖ ಮತ್ತು ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವುದರ ಸಂಕೇತ. ಹೋಳಿಗೆಯೂ ಆಯಾ ಋತುಮಾನಕ್ಕೆ ಅನುಗುಣವಾಗಿ ದೇಹಕ್ಕೆ ಬೇಕಾದ ಪ್ರೋಟೀನ್ಸ್ ಮತ್ತು ವಿಟಮೀನ್ಸ್ ಗಳನ್ನು ನೀಡುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ಪೂಜೆಯನ್ನು ಸಲ್ಲಿಸಿ ಬೇವು ಬೆಲ್ಲ ಸವಿದು ನಂತರ ಆಗಮಿಸಿದ್ದ ಎಲ್ಲರಿಗೂ ಪ್ರಸಾದದ ರೂಪದಲ್ಲಿ ಹೋಳಿಗೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಸುಂದರಾ ಚಾರಿ, ತಾಲ್ಲೂಕು ಸಮಿತಿಯ ಅಧ್ಯಕ್ಷ ಶಂಕರಣ್ಣ, ಪ್ರಧಾನ ಕಾರ್ಯದರ್ಶಿ ಪಿ. ಶ್ರೀಕಾಂತ,ಸಂಸ್ಕಾರ ಭಾರತಿಯ ಅಧ್ಯಕ್ಷ ಬಿ.ಸಿ.ನಂದೀಶ್, ಚಂದ್ರಶೇಖರ್, ರವೀಂದ್ರನಾಥ, ಪ್ರಕಾಶ್, ಶಶಿಕಾಂತ್ ನಕ್ಷತ್ರಿ, ನಲ್ಲಿಮರದಹಳ್ಳಿ ಮಂಜುನಾಥ್, ಕಾಶೀನಾಥ ಮತ್ತಿತರರು ಹಾಜರಿದ್ದರು.

ಮಂಗಳನ ಅಂಗಳದಲ್ಲಿ ಕುತೂಹಲಿ ಸಂಚಾರಿ – ಭಾಗ 1

0

ಹೌದು, ಅದರ ಹೆಸರೇ ಕುತೂಹಲಿ ಸಂಚಾರಿ, ಕ್ಯೂರಿಯಾಸಿಟಿ ರೋವರ್. ಅದೊಂದು ರೋಬಾಟ್ ಯಂತ್ರ. ಅದರ ಸ್ವಭಾವವೇ ಸಹಜ ಕುತೂಹಲ, ಕಂಡದ್ದನ್ನು ಒರೆಹಚ್ಚಿ ಕಾಣದ್ದರ ಬಗ್ಗೆ ಮಾಹಿತಿ ಪಡೆಯುವ ಹಂಬಲ ಅದಕ್ಕೆ. ಅದಕ್ಕೆಂದೇ ಅತ್ಯಾಧುನಿಕವಾದ ಸಾಧನಗಳನ್ನು ಒಡಲಲ್ಲಿರಿಸಿಕೊಂಡು ಮಂಗಳನಡಿಗೆಯನ್ನು ಪ್ರಾರಂಭಿಸ ಹೊರಟಿದೆ ಅದು. ಮಂಗಳನ ಮೇಲ್ಮೈ ಹಿಂದೆ ಜೀವಿಗಳಿಗೆ ಇರಲು ಅನುಕೂಲಕರವಾಗಿತ್ತೇ, ಮುಂದೆ ಈ ಕೆಂಪುಗ್ರಹ ಮನುಕುಲಕ್ಕೆ ವಾಸಯೋಗ್ಯವಾಗಲಿದೆಯೇ ಎಂಬುದು ಸಂಶೋಧನೆಯ ಮೂಲ ವಿಷಯ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಎರಡೂವರೆ ನೂರು ಕೋಟಿ ಡಾಲರ್ ವೆಚ್ಚದ ‘ಮಾರ್ಸ್ ವಿಜ್ಞಾನ ಪ್ರಯೋಗಾಲಯ’ವಾದ ಕ್ಯೂರಿಯಾಸಿಟಿ ಬಾನನೌಕೆಯೊಂದರಲ್ಲಿ ಅಚ್ಚುಕಟ್ಟಾಗಿ ಕುಳಿತು ಕಳೆದ ಅಗಸ್ಟ್ ಆರರಂದು ಆಗಸಕ್ಕೆ ಹಾರಿತ್ತು. ಭೂಮಿಯ ಗುರುತ್ವಬಲವನ್ನು ಮೀರಿ ಬಾಹ್ಯಾಕಾಶದಲ್ಲಿ ಮಂಗಳನನ್ನು ಗುರಿಯಾಗಿಸಿ ಸುಮಾರು 566 ದಶಲಕ್ಷ್ಷ ಕಿಮೀ ದೂರದ ಪ್ರಯಾಣವನ್ನು ಎಂಟು ತಿಂಗಳಲ್ಲಿ ಕ್ರಮಿಸಿತ್ತು. ನೌಕೆ ರೊಬಾಟ್ ಯಂತ್ರವನ್ನು ನೆಲಕ್ಕಿಳಿಸುವÀ ವೇಳೆಗೆ ಮಂಗಳನ ಬಾನಂಚಿನ ಕೆಳಗೆ ಸರಿದ ಭೂಮಿಗೆ ನೇರ ಸಂದೇಶಗಳು ತಲುಪುವ ಹಾಗಿರಲಿಲ್ಲ. ಆದರೇನು, ಮಂಗಳನ ಸುತ್ತ ಗಸ್ತು ಹೊಡೆಯುತ್ತಿದ್ದ ರಿಕನ್ಸೈನ್ಸ್, ಒಡಿಸ್ಸಿ ಉಪಗ್ರಹಗಳು ಇಲ್ಲಿನ ಸುದ್ದಿ ತಿಳಿಸಲು ಸಜ್ಜಾಗಿದ್ದವು. ಕೆಲವೇ ದಿನಗಳ ಹಿಂದೆ ಒಡಿಸ್ಸಿ ಉಪಗ್ರಹದ ಕಕ್ಷೆಯನ್ನು ಓರೆಯಾಗಿಸಿ ಈ ಸಂಚಾರಿ ವಾಹನದ ಲ್ಯಾಂಡಿಗ್ನ ದೃಶ್ಯಗಳನ್ನು ಸೆರೆಹಿಡಿವುದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಅಂತೂ ರಂಗಸಜ್ಜಿಕೆ ತಯಾರಾಗಿತ್ತು. ಲ್ಯಾಂಡಿಗಿನ ಪ್ರತಿಯೊಂದು ಹಂತವೂ ರೋಮಾಂಚಕ, ಮನಮೋಹಕ ದೃಶ್ಯಚಿತ್ರಣವಾಗಿ ತಂತ್ರಜ್ಞರ ಎದುರಿಗಿನ ಪರದೆಯ ಮೇಲೆ ಮೂಡಿ ಬರತೊಡಗಿದವು.
ಸೆಕೆಂಡಿಗೆ ಆರು ಕಿಮೀ ವೇಗದಲ್ಲಿ ವಾತಾವರಣವನ್ನು ಪ್ರವೇಶಿಸುವಾಗ ಕ್ಯೂರಿಯಾಸಿಟಿಯನ್ನು ಸುಮಾರು 2100 ಡಿಗ್ರಿ ಸೆಂಟಿಗ್ರೇಡ್ ಬಿಸಿಯಿಂದ ರಕ್ಷಿಸಿದ್ದು ಬಿಸಿಲುಗುರಾಣಿ ಅಥವಾ ಹೀಟ್ಶೀಲ್ಡ್. ಅದೇ ನೌಕೆಯ ವೇಗ ತಗ್ಗಿಸುವ ಸಾಧನವೂ ಕೂಡ. ವೇಗವನ್ನು ತಗ್ಗಿಸಿಕೊಂಡು ಓರೆಯಾಗಿ 125 ಕಿಮೀ ಎತ್ತರದಲ್ಲಿ ಮಂಗಳನ ವಾತಾವರಣವನ್ನು ಪ್ರವೇಶಿಸಿದ ನೌಕೆಯಿಂದ ಗರಿಬಿಚ್ಚಿಕೊಂಡು ಹೊರಗಿಣುಕಿತು ಪ್ರಯೋಗಾಲಯವನ್ನು ಹೊತ್ತ ದೊಡ್ಡದೊಂದು ಪ್ಯಾರಾಶೂಟ್. ನೆಲದಿಂದ ಎಂಟು ಕಿಮೀ ಎತ್ತರದಲ್ಲಿರುವಾಗ ಬಿಸಿಲುಗುರಾಣಿ ತನ್ನ ಕೆಲಸ ಮುಗಿಯಿತೆಂಬಂತೆ ಕಳಚಿಕೊಂಡಿತು.
ಸುಮಾರು 35 ಮೀಟರ್ ನೇರ ಎತ್ತರದಿಂದ ನೌಕೆ ಸೆಕೆಂಡಿಗೆ 4 ಮೀ ವೇಗದಲ್ಲಿ ಕೆಳಗಿಳಿಯತೊಡಗಿತು. ರೊಬಾಟನ್ನು ಕಚ್ಚಿ ಹಿಡಿದ ಆಚೀಚೆಗೆ ಹಾಗೂ ಮಧ್ಯಕ್ಕೆ ಒಂದರಂತಿದ್ದ ಮೂರು ಟೆಕ್ನೋರಾ ನಾರುಲೋಹದ ಮೂಗುದಾಣಗಳು ಕೆಳಗಿಳಿದವು. ಈಗ ಪ್ಯಾರಾಶೂಟ್ ಪ್ರತ್ಯೇಕಗೊಂಡಿತು. ಕೆಳಕ್ಕಿಳಿಯುತ್ತಾ ಬಂದು ವೇಗ ಸೆಕೆಂಡಿಗೆ ಮುಕ್ಕಾಲು ಮೀಟರಿನಷ್ಟಿರುವಾಗ ನೆಲಕ್ಕೆ ತಾಗಿದವು ರೋವರಿನ ಆರು ಗಾಲಿಗಳು. ಕಡಿವಾಣಗಳ ಮತ್ತು ಸಂಚಾರಿಯ ನಡುವಿನ ಕೊಂಡಿಗಳು ಕಳಚಿಕೊಂಡವು, ಸಂಚಾರಿವಾಹನ ಸ್ವತಂತ್ರವಾಯಿತು, ತನ್ನ ಶೋಧನಾ ಕಾರ್ಯವನ್ನು ಆರಂಭಿಸಿತು. ಕ್ಯೂರಿಯಾಸಿಟಿ ತೆಗೆದ ಚಿತ್ರಗಳು ರೇಡಿಯೋ ಅಲೆಗಳ ರೂಪದಲ್ಲಿ ಒಂದೊಂದಾಗಿ ಭೂಮಿಗೆ ರವಾನೆಯಾಗತೊಡಗಿದವು.
ತಂತ್ರಜ್ಞಾನದ ಖಚಿತತೆಯ ಬಗ್ಗೆ ತಂತಜ್ಞರು ಅದೆಷ್ಟು ವಿಶ್ವಾಸ ಹೊಂದಿದ್ದರೂ ದೂರದ ಬಾನಲ್ಲಿ ಏನೂ ಆಗಬಹುದಿತ್ತು. ಕ್ಯೂರಿಯಾಸಿಟಿ ತನ್ನ ಮಾತೃನೌಕೆಯಿಂದ ಕಳಚಿಕೊಂಡು ಮಂಗಳನೆಲವನ್ನು ಮುಟ್ಟಲು ತೆಗೆದುಕೊಂಡಿದ್ದು ಏಳೇ ಏಳು ನಿಮಿಷಗಳು. ಆವೇಗಕ್ಕೊಳಗಾದ ನಾಸಾದ ಸಿಬ್ಬಂದಿ ಆ ಏಳು ನಿಮಿಷಗಳ ಆತಂಕದ ಅವಧಿ ಕಳೆದು ಕ್ಯೂರಿಯಾಸಿಟಿ ಮಂಗಳನ ನೆಲವನ್ನು ಸ್ಪರ್ಶಿಸಿದಂತೆ ಸಂತಸದಿಂದ ‘ತಂತ್ರಜ್ಞಾನದ ಚಮತ್ಕಾರ ಇದು’ ಎಂದು ಉದ್ಗಾರವೆತ್ತಿದರು.
ಕ್ಯೂರಿಯಾಸಿಟಿ ಕಳಿಸಿದ ಚಿತ್ರಗಳನ್ನು ತಂತ್ರಜ್ಞರು ಎರಡು ಬಗೆಯವಾಗಿ ವಿಂಗಡಿಸಿದ್ದಾರೆ. ಮೊದಲನೆಯದು, ಮಂಗಳನ ಬೆಳಕಿನಲ್ಲಿ ತೆಗೆದ ಚಿತ್ರಗಳು, ಥೇಟ್ ನಮ್ಮ ಸೆಲ್ ಫೋನಿನಿಂದ ತೆಗೆದ ಚಿತ್ರಗಳಂತೆಯೇ ಇರುವಂಥವು. ಎರಡನೆಯಯದು, ಅವೇ ಚಿತ್ರಗಳನ್ನು ಭೂಮಿಯ ಮೇಲಿನ ಬಿಸಿಲಿನ ಹಿನ್ನೆಲೆಯಲ್ಲಿ ತೆಗೆದರೆ ಹೇಗಿರುತ್ತವೋ ಹಾಗಿರುವ ಚಿತ್ರಗಳು, ಅವನ್ನು ‘ವೈಟ್ ಬ್ಯಾಲನ್ಸಿಂಗ್’ ಎನ್ನುತ್ತಾರೆ. ಇವು ವಿಜ್ಞಾನಿಗಳಿಗೆ ಇಲ್ಲಿಯ ಶಿಲಾಚೂರುಗಳಿಗೆ ಹೋಲಿಸಿ ಅಧ್ಯಯನ ನಡೆಸಲು ಅನುಕೂಲವಾಗುತ್ತವೆ.
ಸೆಕೆಂಡಿಗೆ ಒಂದೂವರೆ ಇಂಚು ದೂರವನ್ನು ಕ್ರಮಿಸುವ ಕ್ಯೂರಿಯಾಸಿಟಿ ಹತ್ತಾರು ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.
ಕ್ಯಾಮೆರಾಗಳು
1. ಮಸ್ತ್ಕ್ಯಾಮ್: ನಮ್ಮ ಡಿಜಿಟಲ್ ಕ್ಯಾಮೆರಾದಂತೆಯೇ ಇರುವ ಎರಡು ಕ್ಯಾಮೆರಾಗಳನ್ನು ಪ್ರಯೋಗಾಲಯ ಮುಂಭಾಗದಲ್ಲಿ ಎತ್ತರದ ಲೋಹದ ಗೂಟವೊಂದು ಎತ್ತಿ ಹಿಡಿದಿದೆ. ಸಂಚಾರಿ ಮುಂದೆ ಮುಂದೆ ಸಾಗಿದಂತೆ ಮಂಗಳನ ನೆಲದೃಶ್ಯ, ಕಲ್ಲು ಬಂಡೆಗಳು, ವಾತಾವರಣ ಬದಲಾವಣೆ ಇತ್ಯಾದಿಗಳ ದೂರದ ಹಾಗೂ ಸಮೀಪದ ಚಿತ್ರಗಳನ್ನು ತೆಗೆಯಲು ಇದು ಸಹಕಾರಿ.
2. ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್: ಕ್ಯೂರಿಯಾಸಿಟಿ ಕೈಯ್ಯಲ್ಲಿರುವ ಭೂತಗನ್ನಡಿಸಹಿತವಾದ ಕ್ಯಾಮೆರಾ ಇದು. ಒಂದೂವರೆ ಇಂಚಿನ ಈ ಕ್ಯಾಮೆರಾ ಎದುರಾಗುವ ವಸ್ತುಗಳ (ಕೂದಲೆಳೆಗಿಂತ ತೆಳುವಸ್ತುಗಳನ್ನೂ ಬಿಡದೆ) ದೊಡ್ಡದಾದ ಚಿತ್ರಗಳನ್ನು ತೆಗೆಯುತ್ತದೆ. ಮಾಮೂಲು ವರ್ಣಚಿತ್ರಗಳನ್ನಲ್ಲದೆ ಕಲ್ಲಿನ ಚೂರುಗಳಲ್ಲಿ ಇರಬಹುದಾದ ಕಾರ್ಬನ್ ಸಂಯುಕ್ತಗಳ ಪತ್ತೆಗೆ ನೆರವಾಗುವ ಅತಿನೇರಳೆ ಬೆಳಕಿನ ಚಿತ್ರಗಳನ್ನೂ ಇದು ಸೆರೆಹಿಡಿಯುತ್ತದೆ.
ಮಾರ್ಸ್ ಡಿಸೆಂಟ್ ಇಮೇಜರ್
ಸಂಚಾರಿ ವಾಹನ ಬಿಸಿಲುಗುರಾಣಿಯನ್ನು ಹೊರಕ್ಕೆಸೆದು ಕೆಳಗಿಳಿಯುವಾಗ ಎದುರಾದ ಚಿತ್ರಗಳನ್ನು ತೆಗೆದ ಕ್ಯಾಮೆರಾ ಇದು. ಸೆಕೆಂಡಿಗೆ ನಾಲ್ಕು ಫ್ರೇಮಿನಂತೆ ವಿಡಿಯೋ ಮಾಡಿ ವಾಹನ ನೆಲ ಮುಟ್ಟಿದ ನಂತರ ಭೂಮಿಗೆ ಆ ಚಿತ್ರಗಳನ್ನು ಕಳುಹಿಸಿತು. ರೋವರ್ನ ಕೆಳಪಥದ ಚಿತ್ರದೊಂದಿಗೆ ಸುತ್ತಲ ಭೌಗೋಳಿಕ ದೃಶ್ಯಗಳೂ ದೊರೆತಿರುವುದರಿಂದ ಕ್ಯೂರಿಯಾಸಿಟಿ ಇಂಥಲ್ಲೇ ಇದೆ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಿದೆ.
ಕ್ಯೂರಿಯಾಸಿಟಿಯಲ್ಲಿ ನಾಲ್ಕು ರೀತಿಯ ಸ್ಪೆಕ್ಟ್ರೋಮೀಟರುಗಳಿವೆ
ಸ್ಪೆಕ್ಟ್ರೋಮೀಟರ್ ಎಂದರೆ ವಿದ್ಯುತ್ ಕಾಂತೀಯ ರೋಹಿತವನ್ನು ಅಳೆಯುವ ಉಪಕರಣ. ಇವುಗಳಲ್ಲೊಂದು ಬಂಡೆಗಲ್ಲುಗಳಲ್ಲಿ ಇರಬಹುದಾದ ಎಕ್ಸ್ರೇಯಂಥಹ ಶಕ್ತಿಕಿರಣಗಳನ್ನು ಗುರುತಿಸಿದರೆ, ಇನ್ನೊಂದು ಕೆಮ್ಕ್ಯಾಮ್ ಎಂಬ ಹೆಸರಿನದು ಲೇಸರ್ ಕಿರಣಗಳನ್ನು ಹಾಯಿಸಿ ಶಿಲೆಗಳನ್ನು ಪುಡಿಮಾಡಿ ಅದರಿಂದ ಹೊರಹೊಮ್ಮುವ ಪ್ಲಾಸ್ಮಾ ಅಥವಾ ಬಿಸಿ ಹೊಗೆಯ ಸೂಕ್ಷ್ಮಾತಿಸೂಕ್ಷ್ಮವಿವರಗಳನ್ನು ಪಡೆಯುತ್ತದೆ. ಮೂರನೆಯದು ಕೆಮ್ಮಿನ್ ಅಥವಾ ಕೆಮಿಸ್ಟ್ರಿ ಎಂಡ್ ಮಿನರಾಲಜಿ ಎಕ್ಸ್ಪರಿಮೆಂಟ್, ಇದು ಶಿಲಾಪುಡಿಗಳಲ್ಲಿರಬಹುದಾದ ರಾಸಾಯನಿಕಗಳ ಪತ್ತೆಗೆ ಪ್ರಯತ್ನಿಸುತ್ತದೆ. ನಾಲ್ಕನೆಯದು ಸ್ಯಾಮ್ ಅಥವಾ ಸ್ಯಾಂಪಲ್ ಎನಲಿಸಿಸ್ ಎಟ್ ಮಾರ್ಸ್. ನಿಜಾರ್ಥದಲ್ಲಿ ಇದೊಂದು ವೈಜ್ಞಾನಿಕ ಪ್ರಯೋಗಾಲಯವೇ. ಏಕೆಂದರೆ ವಿವಿಧ ಉಪಕರಣಗಳ ಮೂಲಕ ಇಲ್ಲಿ ಮಂಗಳನ ಕಲ್ಲು, ಮಣ್ಣು, ಶಿಲಾಚೂರುಗಳೆಲ್ಲವುಗಳ ವಿಶ್ಲೇಷಣೆ ನಡೆಯುತ್ತದೆ. ಮಾಸ್ ಸ್ಪೆಕ್ಟೋಗ್ರಾಫ್ ಎಂಬ ಉಪಕರಣ ಪುಡಿಗಳನ್ನು ಅವುಗಳ ದ್ರವ್ಯರಾಶಿಯ ಆಧಾರದ ಮೇಲೆ ವರ್ಗೀಕರಿಸಿದರೆ, ಗ್ಯಾಸ್ ಕ್ರೊಮ್ಯಾಟೋಗ್ರಾಫ್ ಅವುಗಳನ್ನು ಬಿಸಿಮಾಡಿ ಹೊರಚಿಮ್ಮುವ ಅನಿಲಹಬೆಯನ್ನು ವಿಂಗಡಿಸುತ್ತದೆ ಹಾಗೂ ಲೇಸರ್ ಸ್ಪೆಕ್ಟ್ರೋಮೀಟರ್ ಅವುಗಳಲ್ಲಿ ಮಿಥೇನ್ನಂತಹ ಇಂಗಾಲದ ಸಂಯುಕ್ತಗಳಲ್ಲದೆ ಜಲಜನಕ, ಆಮ್ಲಜನಕ, ಸಾರಜನಕ ಇತ್ಯಾದಿ ಜೀವಿಗಗತ್ಯ ಮೂಲವಸ್ತುಗಳಿಗಾಗಿ ಶೋಧ ನಡೆಸುತ್ತದೆ.
ವಿಕಿರಣಶೋಧಕಗಳು
ಇವುಗಳಲ್ಲಿ ಮೊದಲನೆಯದು ಸಿಲಿಕಾನ್ ಮತ್ತು ಸೀಸಿಯಂ ಅಯೋಡೈಡ್ಗಳುಳ್ಳ ಪುಟ್ಟ ಶೋಧಕಪೆಟ್ಟಿಗೆ. ಮಂಗಳ ಗ್ರಹದ ವಾತಾವರಣದಲ್ಲಿ ಬೀಸಿ ಬರುವ ಶಕ್ತಿಯುತ ಕಿರಣಗಳನ್ನು ಹೀರಿಕೊಂಡು ಅವುಗಳನ್ನು ದಾಖಲಿಸುತ್ತದಷ್ಟೇ ಅಲ್ಲ, ಮಂಗಳನ ನೆಲ, ಶಿಲೆಗಳ ಮೇಲೆ ಈ ವಿಕಿರಣಗಳಿಂದಾದ ಪರಿಣಾಮವನ್ನೂ ಇದು ಅಳೆಯಲಿದೆ. ಇನ್ನೊಂದು ಡೈನಮಿಕ್ ಅಲ್ಬಿಡೋ ಆಫ್ ನ್ಯೂಟ್ರಾನ್ಸ್. ಈ ಉಪಕರಣ ನ್ಯೂಟ್ರಾನ್ ಕಿರಣಗಳನ್ನು ಎರಡೂವರೆ ಅಡಿ ಎತ್ತರದಿಂದ ಮಂಗಳದ ನೆಲ ಹಾಗೂ ಬಂಡೆಗಳ ಮೇಲೆ ಸಿಡಿಸುತ್ತದೆ. ಈ ಕಿರಣಗಳು ಮತ್ತೂ 3-6 ಅಡಿ ನೆಲದೊಳಗೆ ಸಾಗಬಲ್ಲವು. ಅಲ್ಲೇನಾದರೂ ನೀರು ಹಿಮಗಡ್ಡೆಗಳ ರೂಪದಲ್ಲಿ ಅಥವಾ ಬಂಡೆಯ ಖನಿಜಗಳೊಳಗೆ ಸಂಯುಕ್ತವಾಗಿ ಅವಿತಿದ್ದರೆ ನ್ಯೂಟ್ರಾನುಗಳನ್ನು ನೀರಿನಲ್ಲಿರುವ ಜಲಜನಕದ ಅಣುಗಳು ಹೀರಿಕೊಳ್ಳುತ್ತವೆ. ಅಲ್ಲಿಂದ ಪ್ರತಿಫಲಿತಗೊಂಡ ನ್ಯೂಟ್ರಾನ್ಗಳು ಶಕ್ತಿಗುಂದಿರುತ್ತವೆ. ಅವುಗಳ ಬಲವನ್ನು ಅಳೆದು ಆ ಮೂಲಕ ಜಲಪತ್ತೆಗೆ ಈ ಸಾಧನ ನೆರವಾಗುತ್ತದೆ.
ಪರಿಸರ ಸಂವೇದಕಗಳು
ಇದೊಂದು ಮಂಗಳ ಗ್ರಹದ ವಾತಾವರಣವನ್ನು ಸದಾಕಾಲ ಗಮನಿಸುತ್ತಿರುವ ಸಾಧನ. ರೋವರಿನ ಸುತ್ತಮುತ್ತಲ ಪರಿಸರದ ಒತ್ತಡ, ಆದ್ರ್ರತೆ, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದಲ್ಲಿನ ಅತಿನೇರಳೆ ಕಿರಣಗಳು, ವಾಯುಮಂಡಲದ ಉಷ್ಣತೆ ಇವೆಲ್ಲವುಗಳನ್ನು ಇದು ಕಾಲಕಾಲಕ್ಕೆ ದಾಖಲಿಸುತ್ತಿರುತ್ತದೆ. ಇವು ಸಂಚಾರಿ ವಾಹನದ ಪ್ರಮುಖ ಭಾಗಗಳಷ್ಟೇ. ಹಾಗೆ ನೋಡಿದರೆ, ಕ್ಯೂರಿಯಾಸಿಟಿಯ ಪ್ರತಿಯೊಂದೂ ಭಾಗವೂ ಒಂದೊಂದು ಪ್ರಯೋಗ ಉಪಕರಣವೇ ಆಗಿದೆ. ವಿವಿಧ ದೇಶಗಳ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕ್ಯೂರಿಯಾಸಿಟಿಯ ಯಂತ್ರೋಪಕರಣಗಳು ಹಾಗೂ ತಂತ್ರಾಂಶಗಳನ್ನು ರೂಪಿಸುವಲ್ಲಿ ನೆರವಾಗಿದ್ದಾರೆ. ಹಾಗಾಗಿ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸಾಹಸವೇ ಸರಿ. ಮಂಗಳನನ್ನು ತಲುಪಿದ ಒಂದು ವಾರದ ಬಳಿಕ ಕುತೂಹಲಿಯ ಕಂಪ್ಯೂಟರ್ ಮಿದುಳಿಗೆ ಮತ್ತಷ್ಟು ದೇಶಗಳನ್ನು(ಬ್ರೈನ್ಸ್ಟಾರ್ಮಿಂಗ್) ವಿಜ್ಞಾನಿಗಳು ಕಳುಹಿದ್ದಾರೆ. ಸಂಚರಿಸುವಾಗ ಅಥವಾ ರೊಬಾಟ್ ಕೈ ಚಲಿಸುವಾಗ ಎದುರಾಗುವ ಅಡಚಣೆಗಳನ್ನು ತಾನೇ ನಿವಾರಿಸಿಕೊಳ್ಳುವ ಆದೇಶಗಳು ಅವು. ಉಪಗ್ರಹ ಚಿತ್ರವೊಂದು ಕ್ಯೂರಿಯಾಸಿಟಿಯನ್ನು ಹೊತ್ತೊಯ್ದ ಕೋಟ್ಯಂತರ ಹಣದಿಂದ ತಯಾರಾದ ಬಾನನೌಕೆ, ಬಿಸಿಲು ಗುರಾಣಿ, ಪ್ಯಾರಾಚ್ಯೂಟ್ ಇವುಗಳ ಅವಶೇಷಗಳನ್ನು ತೋರಿಸಿದೆ. ‘ಇವೆಲ್ಲ ಅನಿವಾರ್ಯ’ ಎಂದೆನ್ನುವ ವಿಜ್ಞಾನಿಗಳ ದೃಷ್ಟಿಯಲ್ಲಿ ಕ್ಯೂರಿಯಾಸಿಟಿ ಒದಗಿಸಲಿರುವ ಮಾಹಿತಿ ಕಣಜವೇ ಅತಿ ಹೆಚ್ಚು ಬೆಲೆಬಾಳುವಂಥದ್ದಾಗಿದೆ. ಕುತೂಹಲಿ ಸಂಚಾರಿ ಮಾನವನ ಕುತೂಹಲಗಳಿಗೆ ಮಂಗಳ ಹಾಡುವುದೇ? ಕಾಲವೇ ಉತ್ತರ ಹೇಳಬೇಕು.
ಮನುಕುಲದ ಅಮೋಘ ಸಾಧನೆ, ಶ್ಲಾಘನೆ
ಅಂತರಿಕ್ಷಕ್ಕೆ ಸಾವಿರಾರು ಉಪಗ್ರಹಗಳನ್ನು ಕಳಿಸಲಾಗಿದೆ. ಸೌರಮಂಡಲದ ಅಂಚಿನ ನಸುಗತ್ತಲಲ್ಲಿ ಓಟ ನಡೆಸಿರುವ ಸೂರ್ಯನ ಕಿರುಗ್ರಹ ಪ್ಲೂಟೋದ ಬಗ್ಗೆಯೂ ಸಂಶೋಧನೆಗಳು ನಡೆದಿವೆಯಷ್ಟೇ ಅಲ್ಲ, ಬಾಹ್ಯ ಆಕಾಶದಲ್ಲಿಯೂ ನೂರಾರು ಬಾನನೌಕೆಗಳು ಅಧ್ಯಯನಶೀಲವಾಗಿವೆ. ಆದರೆ ಮೊನ್ನೆಮೊನ್ನೆಯಷ್ಟೇ ಮಂಗಳ ಗ್ರಹಕ್ಕೆ ಹಾರಿ ಅಲ್ಲಿ ಪ್ರಯೋಗ ನಡೆಸುತ್ತಿರುವ ಕ್ಯೂರಿಯಾಸಿಟಿ ಪ್ರಯೋಗಾಲಯವನ್ನು ಮನುಕುಲದ ಅಮೋಘ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಜ್ಜೆಹೆಜ್ಜೆಯಾಗಿ ಪ್ರಗತಿ ಸಾಧಿಸಿದ್ದ ಮಾನವ ಈಗಿಟ್ಟಿದ್ದು ದಾಪುಗಾಲೇ ಸರಿ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷ ಒಬಾಮಾ ನಾಸಾದ ವಿಜ್ಞಾನಿಗಳಿಗೆ ಶಹಬ್ಬಾಸ್ ಎಂದಿದ್ದಾರೆ.
ಮಂಗಳನ ಮೇಲೆ ಇಳಿದ ರೋವರ್ ಇದೇ ಮೊದಲನೆಯದೇನೂ ಅಲ್ಲ. 2004 ರಿಂದ ಅಲ್ಲಿ ಅಪಾರ್ಚುನಿಟಿ ಓಡಾಡುತ್ತಲೇ ಇದೆ. ಅವಳಿ ಸಂಚಾರಿಗಳಾದ ಸ್ಪಿರಿಟ್ ಮತ್ತು ಅಪಾರ್ಚುನಿಟಿಗಳು ಸಾಕಷ್ಟು ಮಾಹಿತಿಗಳನ್ನೂ ಕಳಿಸಿಕೊಟ್ಟಿವೆ. ಅದಕ್ಕಿಂತ ಮೊದಲು ಸೋಜರ್ನರ್ ರೋವರ್ ಮಂಗಳನಲ್ಲಿ ನೀರಿದ್ದಿರಬಹುದಾದ ಕುರುಹುಗಳನ್ನು ಕಂಡುಹಿಡಿದಿದೆ. ಹಾಗಿದ್ದರೆ ಈ ಕುತೂಹಲಿ ಸಂಚಾರಿಯಲ್ಲಿ ಅಂಥದ್ದೇನಿದೆ ಹೊಸತು?
ಮುಂದುವರೆಯುವುದು….
ಸರೋಜ ಪ್ರಕಾಶ

ರೇಣೂಕಾ ಯಲ್ಲಮ್ಮ ದೇವಿಯ ಹಸಿ ಕರಗ

0

ಶಿಡ್ಲಘಟ್ಟದ ಕುಕ್ಕಲಚಿನ್ನಪೇಟೆಯ ರೇಣೂಕಾ ಯಲ್ಲಮ್ಮ ದೇವಿಯ ಹಸಿ ಕರಗವು ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಚೌಡಸಂದ್ರ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಣ್ಣೆ ಅಲಂಕಾರ

0

ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರವನ್ನು ಮಾಡಲಾಗಿತ್ತು.
ಸುಮಾರು 28 ಕೆಜಿ ಬೆಣ್ಣೆ ಮತ್ತು ಚೆರ್ರಿ ಹಣ್ಣುಗಳನ್ನು ಬಳಸಿ ಆಂಜನೇಯಸ್ವಾಮಿಯನ್ನು ಅಲಂಕರಿಸಿದ್ದು, ಭಕ್ತರು ವರ್ಷದ ಮೊದಲ ದಿನವಾದ ಯುಗಾದಿಯ ದಿನದಂದು ಪೂಜೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆಯ ನಂತರ ಬೇವು ಬೆಲ್ಲ ಹಾಗೂ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು.

ಆಸನಗಳ ವ್ಯವಸ್ಥೆಯಿಲ್ಲದೆ ಮಣ್ಣಿನಲ್ಲೆ ಕುಳಿತು ಪರೀಕ್ಷೆ ಬರೆದ ಮಕ್ಕಳು

0

ನಗರದ ಸರಸ್ವತಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 7 ನೇ ತರಗತಿಯ 43 ಮಂದಿ ವಿದ್ಯಾರ್ಥಿಗಳು ಶುಕ್ರವಾರ ಮಣ್ಣಿನ ನೆಲದಲ್ಲಿ ಕುಳಿತು ಪರೀಕ್ಷೆ ಬರೆದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅವರಿಗೆ ಸೂಕ್ತವಾದ ಆಸನಗಳ ವ್ಯವಸ್ಥೆಯಿಲ್ಲದಂತಾಗಿದ್ದು, 43 ಮಂದಿ ಮಕ್ಕಳು ಶಾಲೆಯ ಸರ್ಜಾದ ನೆರಳಿನಲ್ಲಿ ಮಣ್ಣಿನಲ್ಲೆ ಕುಳಿತು ಪರೀಕ್ಷೆ ಬರೆದರು.
ವಿಪರ್ಯಾಸವೆಂದರೆ ಈ ಶಾಲೆಯ ಮುಂಭಾಗದಲ್ಲೆ ತಾಲ್ಲೂಕು ಕಚೇರಿ ಸೇರಿದಂತೆ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಪ್ರತಿವರ್ಷ ಸಾವಿರಾರು ರೂಪಾಯಿಗಳ ಹಣವನ್ನು ಕಟ್ಟಿಸಿಕೊಳ್ಳುವ ಶಾಲಾಡಳಿತ ಮಂಡಳಿಯವರು ಮಕ್ಕಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ. ಪ್ರತಿಯೊಂದು ಕೊಠಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಲಾಗುತ್ತಿದ್ದು, ಮಕ್ಕಳು ವ್ಯವಸ್ಥಿತವಾಗಿ ಕಲಿಯುವಂತಹ ವಾತಾವರಣವಿಲ್ಲದಂತಾಗಿದೆ ಎಂದು ಕೆಲ ಪೋಷಕರು ಆರೋಪಿಸಿದ್ದಾರೆ.

ಬಾಲ್ಯವಿವಾಹ ತಡೆಯಬೇಕು – ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ

0

ಸಣ್ಣ ವಯಸ್ಸಿನಲ್ಲೆ ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಜೀವನವನ್ನು ಕತ್ತಲೆಯ ಕೂಪಕ್ಕೆ ದೂಡಿದಂತಾಗುತ್ತದೆ ಮತ್ತು ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮವಾಗಿ ವ್ಯಕ್ತಿಗಳಾಗಿ ಬೆಳೆಯಬೇಕಾದಂತಹ ಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆಯೆಂಬ ಬಂಧನಕ್ಕೆ ಒಳಪಡಿಸುವುದು ಮಾನಸಿಕ, ದೈಹಿಕ, ಸದೃಢತೆಗೆ ಸಮಸ್ಯೆಯುಂಟಾಗುತ್ತದೆ. ಬಾಲ್ಯದಲ್ಲಿಯೆ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಂತಹ ಚಾಕಚಕ್ಯತೆ ಮಕ್ಕಳಲ್ಲಿ ಇರುವುದಿಲ್ಲ. ಚಿಕ್ಕವಯಸಿನಲ್ಲೆ ಮಕ್ಕಳಾದರೂ ಅವರಿಗೆ ಬಹಳಷ್ಟು ದೈಹಿಕ ನ್ಯೂನ್ಯತೆಗಳು ಕಾಣಿಸಿಕೊಂಡು ಪೌಷ್ಠಿಕಾಂಶದ ಕೊರತೆಯಿಂದಾಗಿ ಸಾವನ್ನಪ್ಪುವಂತಹ ಲಕ್ಷಣಗಳು ಹೇರಳವಾಗಿರುವುದರಿಂದ ಪೋಷಕರು ಮಕ್ಕಳ ಮದುವೆಯ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಮಾತನಾಡಿ, ಎಳೆಯ ವಯಸ್ಸಿಗೆ ಮಕ್ಕಳಿಗೆ ಬಲವಂತದ ಮದುವೆ ಮಾಡಿದರೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ತಾಲ್ಲೂಕಿನಲ್ಲಿ ಹಲವಾರು ಕಡೆಗಳಲ್ಲಿ ಇಂತಹ ವಿವಾಹಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ಜಾಗೃತರಾಗಬೇಕು. ಕಲ್ಯಾಣಮಂಟಪಗಳನ್ನು ಬಾಡಿಗೆಗೆ ನೀಡುವ ಮುನ್ನಾ ಮಾಲೀಕರು ಮದುವೆಯಾಗುವಂತಹ ಗಂಡು ಮತ್ತು ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಸೂಕ್ತವಾದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಮದುವೆಗಳನ್ನು ಮಾಡಿಸುವಂತಹ ಪುರೋಹಿತರೂ ಕೂಡಾ ವಯಸ್ಸುಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮಸೀದಿಗಳು, ಚರ್ಚ್ಗಳಲ್ಲಿಯೂ ಕೂಡಾ ಮದುವೆಗಳನ್ನು ಮಾಡಿಸುವ ಮುನ್ನಾ ವಯೋಮಿತಿಯ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ಸುಷ್ಮಾ, ಸಿ.ಡಿ.ಪಿ.ಓ.ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಕರಣೆಗಳ ವಿತರಣೆ

0

ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಭವಿಷ್ಯವನ್ನು ರೂಪಿಸುವ ಪ್ರಮುಖ ಘಟ್ಟ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸಲಿರುವ 115 ಮಕ್ಕಳಿಗೆ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಕೊಡುಗೆಯಾಗಿ ನೀಡಿದ ರಟ್ಟು, ಜಾಮಿಟ್ರಿ ಬಾಕ್ಸ್, ಲೇಖನ ಸಾಮಗ್ರಿಗಳು ಮುಂತಾದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಮಕ್ಕಳು ಈ ಪರೀಕ್ಷೆಗೆ ಸನ್ನದ್ಧಗೊಳ್ಳಲು ಪೂರಕ ಸಲಕರಣೆಗಳನ್ನು ನೀಡುವ ಮೂಲಕ ಸಮುದಾಯಿಕ ನೆರವು ಸಿಗುತ್ತಿದೆ. ಶಿಕ್ಷಕರ ಮೂಲಕ ಉತ್ತಮ ಮಾರ್ಗದರ್ಶನ ಕೂಡ ಲಭಿಸುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುವ ಮೂಲಕ ತಮಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಬಹುದು ಹಾಗೂ ಮುಂದೆ ಪರೀಕ್ಷೆ ಬರೆಯುವವರಿಗೆ ಮಾದರಿಯಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಸುಮಾರು 25 ಸಾವಿರ ರೂಪಾಯಿಗಳ ಮೌಲ್ಯದ ಸಲಕರಣೆಗಳನ್ನು 115 ವಿದ್ಯಾರ್ಥಿಗಳಿಗೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಂಜುಳಾ, ಶಿಕ್ಷಕರಾದ ಸರ್ದಾರ್, ಇಷ್ರತ್, ಮಧು, ಬಾಸ್ಕರ್, ಶಿವಕುಮಾರ್, ರಾಮಚಂದ್ರ, ನರಸಿಂಹಮೂರ್ತಿ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0

ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘ, ನಾಗರಿಕ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿ ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕೋಲಾರದ ಜಿಲ್ಲಾಧಿಕಾರಿಗಳಾಗಿ ಸಮಾಜದ ಹಿತೈಶಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ದಕ್ಷ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಸಾವು, ಕೊಲೆಯೋ, ಆತ್ಮಹತ್ಯೆಯೋ ರಾಜ್ಯದ ಜನತೆಗೆ ತಿಳಿಯಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಶೀಘ್ರ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಂಗ ಕಲಾಪವನ್ನು ಬಹಿಷ್ಕರಿಸಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು. ನಾಗರಿಕ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಬಸ್ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಬೈರಾರೆಡ್ಡಿ, ಸುಬ್ರಮಣಿ, ಲೋಕೇಶ್, ಮಂಜುಕಿರಣ್, ಬಿಜೆಪಿ ಪಕ್ಷದ ಸುರೇಂದ್ರಗೌಡ, ಮುನಿರಾಜು, ಶಿವಕುಮಾರಗೌಡ, ಸೋಮನಾಥ್, ಮಂಜುನಾಥ, ರವಿ, ನಂದೀಶ, ದಾಮೋದರ, ರತ್ನಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಕಿ ಆರಿಸಿ, ಗೋಮಾಳ ಉಳಿಸಿ

0

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ವೆಂಕಟಕೃಷ್ಣಮ್ಮನಹಳ್ಳಿಯಲ್ಲಿ ಮಂಗಳವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಕಾರ್ಯಕರ್ತರಾದ ಕೃಷ್ಣಪ್ಪ, ನಿಖತ್, ಯೋಜನಾಧಿಕಾರಿ ಶಿಲ್ಪಾ ಹಾಗೂ ಪ್ರತಿನಿಧಿಗಳಾದ ಗೋಪಿ, ಲೀಲಾವತಿ ಮತ್ತು ಸೌಭಾಗ್ಯ ಅವರು ಬೆಂಕಿಯ ಅನಾಹುತ ಮತ್ತು ಮುಂಜಾಗೃತಾ ಕ್ರಮಗಳ ವಿಷಯದ ಕುರಿತಾಗಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ, ಗ್ರಾಮದ ಜನರು ಇಂತಹ ಬೆಂಕಿಯ ಅವಘಡಗಳು ತಡೆಯಲು ಅಗತ್ಯ ಮಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜನರಿಗೆ ಹಾಡುಗಳ ಮೂಲಕ ಗ್ರಾಮದ ಆಸ್ತಿ ಸಂರಕ್ಷಣೆಯ ಬಗ್ಗೆ ತಿಳಿಸಿದರು.

error: Content is protected !!