24.1 C
Sidlaghatta
Tuesday, December 30, 2025
Home Blog Page 976

ಡಿ.ಕೆ.ರವಿ ಸಾವಿನ ತನಿಖೆ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

0

ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಬುಧವಾರ ನಗರದ ಬಸ್ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕೋಲಾರದ ಜಿಲ್ಲಾಧಿಕಾರಿಗಳಾಗಿ ಸಮಾಜದ ಹಿತೈಶಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನರಾಗಿದ್ದ ಡಿ.ಕೆ.ರವಿ ಅವರ ಸಾವು, ಕೊಲೆಯೋ, ಆತ್ಮಹತ್ಯೆಯೋ ತಿಳಿಯದೇ ರಾಜ್ಯದ ಜನತೆ ತಲ್ಲಣಗೊಂಡಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಗೆ ರಕ್ಷಣೆ ಇಲ್ಲದಿದ್ದ ಮೇಲೆ ಜನಸಾಮಾನ್ಯರ ಗತಿಯೇನು. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಶೀಘ್ರ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದರು.
ಭಕ್ತರಹಳ್ಳಿ ಬೈರೇಗೌಡ, ಎ.ಎಸ್.ಚಂದ್ರೇಗೌಡ, ಬಿ.ನಾರಾಯಣಸ್ವಾಮಿ, ಕೆ.ವಿ.ವೇಣುಗೋಪಾಲ್, ಎಸ್.ಎಂ.ನಾರಾಯಣಸ್ವಾಮಿ, ತ್ಯಾಗರಾಜ್, ಅಂಬರೀಷ್, ಸುರೇಶ್, ದೇವರಾಜ್, ರಘು, ಅನಂತ್, ಶಂಕರ್, ವೆಂಕಟೇಶ್, ಅಶ್ವತ್ಥಪ್ಪ, ರವಿ, ಗಂಗಾಧರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಾವಲಂಭನೆಯ ಹಾದಿಯಲ್ಲಿ ಸೊಣ್ಣೇನಹಳ್ಳಿಯ ಮಹಿಳೆಯರು

0

ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿ ತಾಲ್ಲೂಕಿನ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ನೀರಿನ ಅಭಾವದಿಂದ ಹಲವಾರು ಗ್ರಾಮಗಳಲ್ಲಿ ರೇಷ್ಮೆ ಕೃಷಿ ಕುಂಠಿತಗೊಂಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮದ ಮಹಿಳೆಯರು ಸ್ವಾವಲಂಭಿಗಳಾಗಲು ನೆರವಾಗುವಂತೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಸೊಣ್ಣೇನಹಳ್ಳಿಯಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಯ ವಯಸ್ಕರ ಶಿಕ್ಷಣ ಇಲಾಖೆ, ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ 75 ದಿನಗಳ ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಗ್ರಾಮದ 20 ಮಂದಿ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದು, ಮನೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡ ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ತರಬೇತಿ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಪುಟ್ಟ ಮಕ್ಕಳನ್ನೂ ಕರೆತಂದು ಜೊತೆಯಲ್ಲಿಟ್ಟುಕೊಂಡೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.
‘ನಮಗೆ ನೀರು ಕಡಿಮೆಯಾದ ನಂತರ ರೇಷ್ಮೆ ಹುಳು ಸಾಕಾಣಿಕೆ ಕುಂಠಿತಗೊಂಡಿತು. ಕೇವಲ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುವುದು ಕಷ್ಟಕರ. ಇಂಥ ಸಂದರ್ಭದಲ್ಲಿ ನಾವಿರುವ ಗ್ರಾಮದಲ್ಲೇ ಹೊಲಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಹೊಸ ವಿದ್ಯೆಯನ್ನು ನಾವಿರುವ ಸ್ಥಳದಲ್ಲೇ ಕಲಿಸುವುದರಿಂದ ಮನೆ ಕೆಲಸದೊಂದಿಗೆ ಕಲಿಯತೊಡಗಿದೆವು. ಸುಮಾರು 65 ದಿನಗಳ ನಂತರ ನಮ್ಮಲ್ಲಿ ಒಂದು ರೀತಿಯ ಆತ್ಮಸ್ಥೈರ್ಯ ಬಂದಿದೆ. ಇದರಿಂದ ನಮ್ಮಲ್ಲಿ ಹಲವಾರು ಮಂದಿ ಜೀವನ ನಡೆಸಲು ಸಾಧ್ಯವಿದೆ’ ಎಂದು ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆ ಮಂಜುಳಮ್ಮ ತಿಳಿಸಿದರು.
‘ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಕೇವಲ ರಾಜಕೀಯ ಭಾಷಣವಾಕ್ಯವಲ್ಲದಂತೆ ನಮ್ಮ ಗ್ರಾಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯವರು ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಗಾರ್ಮೆಂಟ್ ಕೆಲಸಕ್ಕೂ ಇದರಿಂದ ಹಲವಾರು ಮಹಿಳೆಯರು ಹೋಗಿ ದುಡಿಯಬಹುದು. ನಮ್ಮ ಗ್ರಾಮದಲ್ಲಿ ಈ ತರಬೇತಿ ನಡೆಸಲು ಆಂಜಿನಪ್ಪ ಅವರು ಉಚಿತವಾಗಿ ಸ್ಥಳವನ್ನು ಕೊಟ್ಟಿದ್ದಾರೆ. ಮಹಿಳೆಯರಿಗೆ ತರಬೇತಿಯ ನಂತರ ಹೊಲಿಗೆ ಯಂತ್ರಗಳನ್ನು ಶೀಬಿರಾರ್ಥಿಗಳಿಗೆ ಉಚಿತವಾಗಿ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
‘ಮಹಿಳೆಯರು ಸೂಕ್ಷ್ಮಗ್ರಾಹಿಗಳು. ಹೊಸ ಕೆಲಸ ಅಥವಾ ವಿದ್ಯೆಯನ್ನು ಉತ್ಸಾಹದಿಂದ ಗ್ರಹಿಸಿ ಕಲಿಯುತ್ತಾರೆ. ಈ ಹೊಲಿಗೆ ತರಬೇತಿ ಕಾರ್ಯಾಗಾರಕ್ಕೆ ವಯಸ್ಸಾಗಲೀ ವಿದ್ಯಾರ್ಹತೆಯಾಗಲೀ ಅವಶ್ಯವಿಲ್ಲ. ಕಲಿಯುವ ಮನಸ್ಥಿತಿಯಿದ್ದರೆ ಸಾಕು. ಈ ವೃತ್ತಿ ಕೌಶಲ್ಯದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಲ್ಲರು’ ಎನ್ನುತ್ತಾರೆ ತರಬೇತಿ ನೀಡುತ್ತಿರುವ ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಸರಸ.

ಮಗು ಬೆರಳು ಕಚ್ಚುತ್ತಿದ್ದೆಯೇ?

0

ಸಾಮಾನ್ಯವಾಗಿ ಮಕ್ಕಳು ಬೆರಳು ಚೀಪುವುದು ಅಥವಾ ಉಗುರನ್ನು ಕಚ್ಚುವುದನ್ನು ಮಾಡುತ್ತಾರೆ. ಆರೋಗ್ಯಕರ ಮನೋದೈಹಿಕ ಬೆಳವಣಿಗೆ ಇರುವ ಮಕ್ಕಳಲ್ಲಿ ಬೆಳೆಯುತ್ತಾ ಬಂದಂತೆ ಇದು ತಾನಾಗಿ ನಿಲ್ಲುತ್ತದೆ. ನಾಲ್ಕೈದು ವರ್ಷಗಳ ನಂತರವೂ ಇದು ಮುಂದುವರೆದರೆ ಪೋಷಕರು ಇದರ ಕಡೆ ಗಮನ ಹರಿಸುವ ಅಗತ್ಯವಿರುತ್ತದೆ.
ಸುಮಾರಾಗಿ ಎಲ್ಲಾ ತಂದೆತಾಯಿಗಳೂ ಎರಡು ವರ್ಷದ ನಂತರದಿಂದಲೇ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ಇದನ್ನು ಮಾಡುವ ಅಗತ್ಯವಿದ್ದರೂ ಅವರು ಅನುಸರಿಸುವ ತಂತ್ರಗಳು ಮಾತ್ರ ಸೂಕ್ತವಾಗಿರುವುದಿಲ್ಲ. ಹೆಚ್ಚಿನ ಪೋಷಕರು ಇದೊಂದು ಅವಮಾನಕರ ಅಭ್ಯಾಸ, ಹಾಗಾಗಿ ಸಾರ್ವಜನಿಕವಾಗಿ ಮಕ್ಕಳು ಬೆರಳನ್ನು ಚೀಪುವುದು ತಮ್ಮ ಘನತೆಗೆ ಕುಂದು-ಎಂದುಕೊಳ್ಳುತ್ತಾರೆ. ಆದ್ದರಿಂದ ಬಲವಂತವಾಗಿ ಈ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ದೆವ್ವ ಭೂತಗಳ ಭಯ ಹುಟ್ಟುಸುವುದು, ಜನರೆಲ್ಲಾ ನಗುತ್ತಾರೆ ಎಂದು ಹಂಗಿಸುವುದು ಮುಂತಾದ ಅಡ್ಡ ದಾರಿಗಳನ್ನು ಅನುಸರಿಸುತ್ತಾರೆ. ಇದರಿಂದ ಉಪಯೋಗವಾಗದಿದ್ದರೆ ಕೈಮೇಲೆ ಹೊಡೆಯುವುದು ಮುಂತಾದ ದೈಹಿಕ ಶಿಕ್ಷೆಯನ್ನೂ ನೀಡುತ್ತಾರೆ. ಮಕ್ಕಳ ಕೈ ಅಥವಾ ಬೆರಳುಗಳ ಮೇಲೆ ಬಿಸಿ ಮುಟ್ಟಿಸುವ ಕ್ರೂರ ತಂದೆತಾಯಿಗಳೂ ಇದ್ದಾರೆ. ಹೀಗೆ ಭಯ ಹುಟ್ಟಿಸಿ ಬೆರಳು ಚೀಪುವ ಅಭ್ಯಾಸವನ್ನು ನಿಲ್ಲಿಸಿದರೂ, ಇದರಿಂದ ಮಕ್ಕಳ ಮನಸ್ಸಿನ ಮೇಲೆ ಇತರ ದುಷ್ಪರಿಣಾಮಗಳಾಗುತ್ತವೆ ಎನ್ನುವುದನ್ನು ಮರೆಯಬಾರದು.
ಏನಿದರ ಹಿನ್ನೆಲೆ?
ಮೊದಲು ಈ ಅಭ್ಯಾಸದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ಗರ್ಭದಿಂದ ಹೊರಬಂದ ನಂತರ ಮಗು ಸುತ್ತಲಿನ ಹೊರ ಜಗತ್ತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಗರ್ಭಾಶಯದ ಸುರಕ್ಷಿತ ಕೋಣೆಯಿಂದ ಹೊರಬಂದ ಮಗುವಿಗೆ ಸುತ್ತಲಿನ ಪ್ರಪಂಚ ಅಭದ್ರತೆಯ ಭಾವನೆಯನ್ನು ಕೊಡುತ್ತಿರುತ್ತದೆ. ತಾಯಿಯ ಅಪ್ಪುಗೆ ಮತ್ತು ಸ್ತನಪಾನ ಅದಕ್ಕೆ ಭದ್ರತೆಯನ್ನು ನೀಡುವ ಕ್ಷಣಗಳು. ಇಂತಹ ಭದ್ರತೆಯ ಭಾವವನ್ನು ಮಗು ಬೆರಳನ್ನು ಚೀಪುವುದರಲ್ಲಿಯೂ ಕಂಡುಕೊಂಡಿರುತ್ತದೆ. ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಾ ಬಂದಂತೆ ಈ ಅಭ್ಯಾಸ ಸಹಜವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆದರೂ ಕೆಲವೊಮ್ಮೆ ಮಗು ಅಭ್ಯಾಸ ಬಲದಿಂದ ಬೆರಳು ಚೀಪುವುದನ್ನು ಮುಂದುವರೆಸಿಯೇ ಇರುತ್ತದೆ.
ಯಾವಾಗ ಇದು ಸಮಸ್ಯೆ?
ಪೋಷಕರು ಗಮನಿಸಬೇಕಾದ ಅಂಶವೆಂದರೆ ಮಗು ಒಂದೇ ಇದ್ದಾಗ, ಅದಕ್ಕೆ ಬೇಸರವಾದಾಗ ಅಥವಾ ಸಕ್ರಿಯವಾಗಿ ಏನನ್ನೂ ಮಾಡದೆ ಇರುವಾಗ ಬೆರಳನ್ನು ಚೀಪುತ್ತದೆ. ಆಟವಾಡುವಾಗ ಅಥವಾ ಸಂತೋಷದಿಂದಿರುವಾಗ ಇದರ ಅಗತ್ಯವಿರುವುದಿಲ್ಲ. ಇದರ ಅರ್ಥವೇನೆಂದರೆ, ನಾಲ್ಕೈದು ವರ್ಷದ ಮಗುವಿಗೆ ಈ ಅಭ್ಯಾಸವಿದ್ದರೆ ಅದು ಬೆರಳು ಚೀಪುವ ಸಂದರ್ಭದಲ್ಲಿ ಮಾನಸಿಕವಾಗಿ ಖುಷಿಯಾಗಿರುವುದಿಲ್ಲ. ಯಾವುದೋ ಮುಜುಗರ ಅಥವಾ ಬೇಸರವನ್ನು ಅನುಭವಿಸುತ್ತಿರುತ್ತದೆ. ಅಷ್ಟು ಸಣ್ಣ ಮಗುವಿಗೆ ಅದೆಂತಹ ಬೇಸರ ಎಂದು ಮೂಗುಮುರಿಯಬೇಡಿ. ಭಾವನೆಗಳನ್ನು ಅನುಭವಿಸುವ ಮೆದುಳಿನ ಭಾಗವಾದ ಅಮಿಗ್ಡಾಲ ಹುಟ್ಟುವಾಗಲೇ ಸಂಪೂರ್ಣ ಬೆಳವಣಿಗೆಯಾಗಿರುತ್ತದೆ. ಆದರೆ ಮಗುವಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ಧಗಳ ಕೊರತೆ ಇರುವುದರಿಂದ ಅದನ್ನು ದೇಹಭಾಷೆಯಲ್ಲಿ ತೋರಿಸುತ್ತದೆ. ಇದನ್ನು ತಿಳಿಯದೆ ಬರಿ ಶಿಕ್ಷೆ, ಬುದ್ಧಿವಾದಗಳಿಂದ ಬದಲಾವಣೆ ಸಾಧ್ಯವಿಲ್ಲ.
ಎಲ್ಲಿದೆ ಪರಿಹಾರ?
1. ತಕ್ಷಣದಿಂದ ಎಲ್ಲಾ ರೀತಿಯ ಶಿಕ್ಷೆಯನ್ನು ನಿಲ್ಲಿಸಬೇಕು. ಇದೊಂದು ದೊಡ್ಡ ಅವಮಾನಕರ ಅಭ್ಯಾಸ ಎನ್ನುವ ಭಾವನೆಯನ್ನು ಮಗುವಿನಲ್ಲಿ ಉಂಟಾಗುವಂತೆ ವರ್ತಿಸಬಾರದು. ಎಲ್ಲರೆದುರು ಮಗುವನ್ನು ಬೈಯುವುದಾಗಲೀ ಅವಮಾನ ಮಾಡುವುದಾಗಲೀ ಸಂಪೂರ್ಣ ನಿಷಿದ್ಧ.
2. ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ ಎಂದು ಪದೇಪದೇ ಮನವರಿಕೆ ಮಾಡಿಕೊಡಬೇಕು.
3. ಮಗು ಬೆರಳು ಚೀಪುತ್ತಿದ್ದರೆ ಅದರ ಗಮನವನ್ನು ಬೇರೆ ಕಡೆ ತಿರುಗಿಸಿ, ಅಂದರೆ ಮಗುವಿಗೆ ಹೆಚ್ಚು ಖುಷಿ ಕೊಡುವ ಅಂಶಗಳ ಬಗೆಗೆ ಗಮನ ಸೆಳೆಯಲು ಯತ್ನಿಸಿದರೆ ಇಂತಹ ಅಭ್ಯಾಸ ಕಡಿಮೆಯಾಗುತ್ತದೆ. ಕೈಬೆರಳುಗಳನ್ನು ಬೇರೆ ಸಂತೋಷಕೊಡುವ ಕ್ರಿಯೆಗಳಲ್ಲಿ ತೊಡಗಿಸಿದಾಗ (ಉದಾ; ಚಂಡಿನ ಆಟ, ಚಪ್ಪಾಳೆ, ನೃತ್ಯ, ಮುಂತಾದವು) ಮಗುವಿಗೆ ಅದನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದಿಲ್ಲ. ಟೀವಿ ನೋಡುವ ಸಮಯವನ್ನು ನಿಯಂತ್ರಿಸದಿದ್ದರೆ ಬೆರಳು ಚೀಪುವ ಅಭ್ಯಾಸ ಮುಂದುವರೆಯುವ ಸಾಧ್ಯತೆಗಳು ಹೆಚ್ಚು.
4. ಮಗು ಯಾವ ಸಂದರ್ಭಗಳಲ್ಲಿ ಈ ಅಭ್ಯಾಸವನ್ನು ಹೆಚ್ಚಾಗಿ ಮಾಡುತ್ತಿದೆ ಎಂದು ಗಮನಿಸುತ್ತಿರಬೇಕು. ಅಂತಹ ಪರಿಸ್ಥಿತಿಗಳಲ್ಲಿ ಮಗುವಿನ ಮನಸ್ಸಿನಲ್ಲಿರಬಹುದಾದ ಬೇಸರ ಆತಂಕಗಳನ್ನು ಅರ್ಥಮಾಡಿಕೊಂಡು ಅದರ ನಿವಾರಣೆಗೆ ಯತ್ನಿಸಬೇಕು.
5. ಪೋಷಕರಿಗೆ ಅಗತ್ಯವಿರುವುದು ಸಹನೆ ಮತ್ತು ಸೂಕ್ಷ್ಮತೆ. ಆದ್ದರಿಂದ ಒರಟಾಗಿ ವರ್ತಿಸಿ ಮುಗ್ಧ ಮಗುವಿನಲ್ಲಿ ಅನಗತ್ಯ ಭಯವನ್ನು ಬಿತ್ತಬಾರದು.
ಐದಾರು ವರ್ಷಗಳ ನಂತರವೂ ಇಂತಹ ಅಭ್ಯಾಸ ಮುಂದುವರೆದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ವಸಂತ್ ನಡಹಳ್ಳಿ

ಈ.ತಿಮ್ಮಸಂದ್ರ ಗ್ರಾಮದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆ

0

ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ಯುವಕರ ಸಂಘ ಮತ್ತು ರೆಡ್ ಕ್ರಾಸ್ ಸೊಸೈಟಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆಯಾಯಿತು.

ಬೋದಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

0

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಈಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರೌಢಶಾಲಾ ಶಿಕ್ಷಕ ಬಿ.ಎಂ.ಕೆಂಪಣ್ಣ ಅವರನ್ನು ಸನ್ಮಾನಿಸಲಾಯಿತು. ಬೋದಗೂರು ವೆಂಕಟಸ್ವಾಮಿರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಹಾಜರಿದ್ದರು.

ನಾಗಮಂಗಲ ಗ್ರಾಮದಲ್ಲಿ ನೈರ್ಮಲ್ಯ ಸ್ವಚ್ಛತಾ ಸಪ್ತಾಹ

0

ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿರುವ ತಾಲ್ಲೂಕಿನಲ್ಲಿ ನೀರನ್ನು ಉಳಿತಾಯ ಮಾಡಿ ನೀರಿನ ಕೊರತೆಯನ್ನು ನೀಗಿಸಲು ಮಹಿಳೆಯರ ಸಹಕರಿಸಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ತಾಲ್ಲೂಕು ಪಂಚಾಯತಿ ್ತಿವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಬೀರ ಸ್ಚರೂಪವನ್ನು ಪಡೆಯುತ್ತಿದ್ದು ಕೊಳವೆಬಾವಿಗಳಲ್ಲಿ ಸುಮಾರು ೧೫೦೦ ಅಡಿಗಳಿಂದ ನೀರು ತೆಗೆಯಲಾಗುತ್ತಿದೆ, ನೀರಿನಲ್ಲಿ ಫ್ಲೋರೈಡ್ನ ಅಂಶ ಹೆಚ್ಚಾಗಿರುವುದರಿಂದ ಈ ಭಾಗದಜನತೆ ಹಲ್ಲುಗಳ ಸವೆತ, ಮೂಳೆಗಳ ಸವೆತ, ಹಾಗೂ ಕ್ಯಾನ್ಸರ್ ಖಾಯಿಲೆಗಳಿಂದ ಬಳಲುವಂತಾಗಿದೆ, ತಾಲ್ಲೂಕಿನಲ್ಲಿ ೧೬ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರುಗಳ ಮುಖಾಂತರ ನೀಡುತ್ತಿದ್ದೇವೆ. ೫ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರನ್ನು ಪಡೆಯಲಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ಪ್ರತಿಯೊಂದುಗ್ರಾಮದಲ್ಲಿನಜನರಿಗೆ ತಿಳುವಳಿಕೆಯನ್ನು ಹೇಳಿ ನೀರನ್ನು ಮಿತಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ರೈತರು ಮಳೆಯ ನೀರನ್ನು ತಮ್ಮ ಹೊಲಗಳಲ್ಲಿ ಇಂಗಿಸುವಂತಹ ಕೆಲಸವನ್ನು ಮಾಡಿ, ಅಂತರ್ಜಲದ ವೃದ್ಧಿಗಾಗಿ ಸಹಕಾರ ನೀಡಬೇಕು.
ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು, ಬಯಲು ಬಹಿರ್ದೇಸೆಯಿಂದಾಗಿಯೂ ಅನೇಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ ಸರ್ಕಾರದಿಂದ ಶೌಚಾಲಯಗಳ ನಿರ್ಮಾಣಕ್ಕೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ನಾಗರೀಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಇಇ ಗಣಪತಿ ಸಾಕರೆ ಮಾತನಾಡಿ ಲಭ್ಯವಿರುವ ನೀರನ್ನು ಶುದ್ಧೀಕರಿಸಿಕೊಳ್ಳಲು ಜಿಲ್ಲಾ ಪಂಚಾಯತಿಯಿಂದ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದರು.
ನೀರಿನ ಮಿತಬಳಕೆ ಹಾಗೂ ನೈರ್ಮಲ್ಯವನ್ನುಕಾಪಾಡುವ ಬಗ್ಗೆ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಗ್ರಾಮ ಪಂಚಾಯತಿ ಪಂಚಾಯತಿ ಅಧ್ಯಕ್ಷೆ ರೂಪಶಿವಕುಮಾರ್, ಉಪಾಧ್ಯಕ್ಷ ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಎಇಇ ಶಿವಾನಂದ, ತಾಲ್ಲೂಕು ಪಂಚಾಯತಿ ಸದಸ್ಯ ಚನ್ನಕೃಷ್ಣಪ್ಪ, ಶ್ರೀನಿವಾಸಗೌಡ, ಕೆ.ಎಂ.ರಾಮಕೃಷ್ಣಪ್ಪ, ಮಮತಾಗೋಪಾಲ್, ಮುನಿರತ್ನಮ್ಮ, ರಾಧಮ್ಮ, ಸ್ವಚ್ಛ ಭಾರತ ಅಭಿಯಾನದ ತಾಲ್ಲೂಕು ಸಂಯೋಜಕ ಬಾಸ್ಕರ್, ಸರೋಜಮ್ಮ, ಪಿ.ಡಿ.ಓ.ಗೋಪಿಗೋಪಾಲಕೃಷ್ಣ, ಕೆಂಪರೆಡ್ಡಿ, ರಘುರಾಮ್, ಟಿ.ಎಂ.ಅಶ್ವಥ್, ಪಿ.ವಿ.ಸಿದ್ದಣ್ಣ, ಗೌಸ್ಫಿರ್, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿವಿಧ ರೋಗಹರ ಹರೀತಕಿ (ಅಣಲೆಕಾಯಿ)

0

ಆಯುರ್ವೇದ ವೈದ್ಯರನ್ನು ಮತ್ತು ಹಳ್ಳಿಗಳಲ್ಲಿ ಗಿಡಮೂಲಕೆ ಔಷಧಿಗಳನ್ನು ಪಾರಂಪರಾಗತವಾಗಿ ನೀಡುತ್ತಾ ಬಂದಿರುವ ಪಂಡಿತರುಗಳನ್ನು “ಅಣಲೇಕಾಯಿ ಪಂಡಿತರು” ಎಂದು ಕರೆಯುವುದು ವಾಡಿಕೆ. ಹಿಂದೆಲ್ಲ ಬೇರೆ ಬೇರೆ ರೋಗಗಳಿಗೆ ಬೇರೆ ಬೇರೆ ಆಹಾರ ದ್ರವ್ಯಗಳ ಜೊತೆಗೆ (ಉದಾ: ಬೆಲ್ಲ, ಶುಂಠಿಪುಡಿ, ತುಪ್ಪ, ಜೇನುತುಪ್ಪ ಇತ್ಯಾದಿ) ಅಣಲೇಕಾಯಿಯನ್ನು ಕೊಡುವ ಪದ್ಧತಿ ರೂಢಿಯಲ್ಲಿತ್ತು. ಈ ಹರೀತಕಿ (ಅಣಲೇಕಾಯಿ)ಯ ವೈಶಿಷ್ಟ್ಯವೇ ಹಾಗೆ ಬೇರೆ ಬೇರೆ ದ್ರವ್ಯಗಳ ಜೊತೆಗೆ ಸೇರಿ ವಿವಿಧ ರೀತಿಯ ರೋಗಗಳನ್ನು ಗುಣಪಡಿಸುವ ಸಾಮಥ್ರ್ಯ ಇದಕ್ಕಿದೆ.
ಹರೀತಕಿ Combretaceae ಎನ್ನುವ ಕುಟುಂಬ ವರ್ಗಕ್ಕೆ ಸೇರಿದ್ದು, ಇದರ ಸಸ್ಯ ಶಾಸ್ತ್ರೀಯ ಹೆಸರು Terminalia Chebula
ವೃಕ್ಷ ಪರಿಚರ: ಇದು ಮಧ್ಯಮ ಗಾತ್ರದ ವೃಕ್ಷ ಎಲೆಗಳು 4 ರಿಂದ 8 ಇಂಚು ಉದ್ದವಾಗಿದ್ದು, ಸ್ವಲ್ಪ ಮೊಟ್ಟೆಯಾಕಾರದಲ್ಲದ್ದು, ನುಣುಪಾಗಿರುತ್ತದೆ. ಒಣಗಿದ ಫಲಗಳ ಮೇಲೆ 4 ರಿಂದ 5 ಗೆರೆಗಳು ಮೂಡಿರುತ್ತವೆ.
ರಾಸಾಯನಿಕ ಸಂಘಟನೆ: ಫಲದಲ್ಲಿ ಚೆಬುಲಿನಿಕ್ ಆಸಿಡ್ 20-40% ಗ್ಯಾಲಕ್ ಆಸಿಡ್, ಮೈರೋಬಾಲಿನಿನ್, ರಾಳ ಇರುತ್ತದೆ.
ವಿವಿಧ ಹೆಸರುಗಳು:
1. ಅಭಯಾ: ಇದನ್ನು ಸೇವಿಸುವುದರಿಂದ ಯಾವುದೇ ರೋಗಗಳ ಭಯ ಮನುಷ್ಯನಿಗೆ ಇರಲಾರದು.
2. ಅವ್ಯಥಾ: ಇದರ ಸೇವನೆಯಿಂದ ದು:ಖವು ಶಮನವಾಗುವುದು.
3. ಪಥ್ಯಾ: ಇದರ ಸೇವನೆಯು ದೇಹಕ್ಕೆ ಹಿತವನ್ನು ಉಂಟು ಮಾಡುವುದು.
4. ಕಾಯಸ್ಥಾ: ಇದರ ಸೇವನೆಯಿಂದ ಶರೀರವು ದೃಢವಾಗುತ್ತದೆ.
5. ಪೂತನಾ: ಇದು ದೇಹದಲ್ಲಿನ ದೂಷಿತ ವಾಯು ಹಾಗೂ ಮಲವನ್ನು ಹೊರ ಹಾಕುತ್ತದೆ.
6. ಹರೀತಕಿ: ಇದು ರೋಗವನ್ನು ಹೋಗಲಾಡಿಸುವುದು.
7. ಹೈಮವತಿ: ಇದು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಈ ಹೆಸರು.
8. ಚೇತಕಿ: ಇದರಿಂದ ದೇಹದ ಸ್ರೋತಸ್ಸುಗಳು ಶುದ್ಧವಾಗುವವು
9. ಶ್ರೇಯಸಿ: ಇದರ ಸೇವನೆಯು ಶ್ರೇಯಸ್ಸನ್ನುಂಟು ಮಾಡುವುದು.
ಹರೀತಕಿಯ ವಿಧಗಳು
1. ವಿಜಯಾ: ಸೋರೆಕಾಯಿಯಂತೆ ವೃತ್ತಾಕಾರವಾಗಿರುವುದು. ಇದು ಎಲ್ಲ ರೋಗಗಳನ್ನು ಗುಣ ಪಡಿಸುವುದು.
2. ರೋಹಿಣಿ: ವೃತ್ತಾಕಾರವಾಗಿರುತ್ತದೆ. ಯಾವುದೇ ರೀತಿಯ ವ್ರಣ (ಹುಣ್ಣುಗಳನ್ನೂ) ಗುಣಪಡಿಸುವುದು.
3. ಪೂತನ: ದೊಡ್ಡ ಬೀಜವನ್ನು ಹೊಂದಿದ್ದು, ಸೂಕ್ಷ್ಮವಾಗಿರುತ್ತದೆ. ಇದನ್ನು ವ್ರಣಗಳ ಮೇಲೆ ಲೇಪನಕ್ಕೆ ಬಳಸಲಾಗುತ್ತದೆ.
4. ಅಮೃತಾ: ಬೀಜವು ಚಿಕ್ಕದಾಗಿದ್ದು, ಸಿಪ್ಪೆ ಮತ್ತು ಒಳಗಿನ ಭಾಗವು ದಪ್ಪವಾಗಿರುತ್ತದೆ. ದೇಹ ಶುದ್ಧಿಗೆ ಇದನ್ನು ಬಳಸಲಾಗುತ್ತದೆ.
5. ಅಭಯಾ: ಹೊರ ಭಾಗದಲ್ಲಿ ಐದು ಗೆರೆಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ರೋಗಗಳಿಗೆ ಉತ್ತಮ.
6. ಜೀಮಂತಿ: ಬಂಗಾರದ ಬಣ್ಣವನನ್ನು ಹೊಂದಿರುತ್ತದೆ. ಎಲ್ಲ ರೋಗಗಳನ್ನು ಗುಣಪಡಿಸುವುದು.
7. ಚೇತಕಿ: ಹೊರ ಭಾಗದಲ್ಲಿ ಮೂರು ರೇಖೆಗಳನ್ನು ಹೊಂದಿರುತ್ತದೆ. ಚೂರ್ಣವನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ.
ಹರೀತಕಿಯ ಗುಣಧರ್ಮಗಳು
1. ಹರೀತಕಿಯು ಐದು ರಸಗಳನ್ನು ಹೊಂದಿದ್ದು, (ಸಿಹಿ, ಹುಳಿ, ಖಾರ, ಕಹಿ, ಒಗರು) ಒಗರು ರಸ ಪ್ರಧಾನವಾಗಿರುತ್ತದೆ.
2. ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ.
3. ರಸಾಯನವಾಗಿ ಕೆಲಸ ಮಾಡುತ್ತದೆ. (ದೇಹದ ಧಾತುಗಳನ್ನು ವರ್ಧಿಸುತ್ತದೆ)
4. ಉಷ್ಣ ವೀರ್ಯವನ್ನು ಹೊಂದಿರುತ್ತದೆ. (ವೀರ್ಯ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗಿ ಪರಿವರ್ತನೆ ಹೊಂದಿದ ನಂತರ ಶರೀರದಲ್ಲಿ ವ್ಯಕ್ತವಾಗುವ ರಸ)
5. ಮಧುರ ವಿಪಾಕವನ್ನು ಹೊಂದಿರುತ್ತದೆ. (ವಿಪಾಕ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗುವ ಹಂತದಲ್ಲಿ ವ್ಯಕ್ತವಾಗುವ ರಸ)
6. ಕಣ್ಣಿಗೆ ಹಿತಕರ
7. ಜೀರ್ಣಕ್ಕೆ ಹಗುರವಾದಂಥಹುದು.
8. ದೇಹದ ಧಾತುಗಳಿಗೆ ಪುಷ್ಠಿಯನ್ನು ಕೊಡುವುದು.
9. ದೇಹದಲ್ಲಿನ ದೂಷಿತ ವಾಯು, ಮಲಗಳನ್ನು ಗುದಮಾರ್ಗದ ಮೂಲಕ ಹೊರ ಹಾಕುವುದು.
10. ಶ್ವಾಸ (ದಮ್ಮು), ಕೆಮ್ಮು, ಮಧುಮೇಹ, ಅರ್ಶಸ್ಸು, ಚರ್ಮರೋಗಗಳು, ಬಾವು, ಉದರ ರೋಗ (ascites),  ಕ್ರಿಮಿ, ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ರೋಗಗಳು, ವಾಂತಿ ಹೃದ್ರೋಗ, ಕಾಮಲಾ ಪ್ಲೀಹ ಹಾಗೂ ಯಕೃತ್ ಸಂಬಂಧಿ ರೋಗಗಳು, ಮೂತ್ರ ಅಶ್ಮಂ ಕೆಲವೊಂದು ಮೂತ್ರ ಸಂಬಂಧಿ ರೋಗಗಳಲ್ಲಿ ಇದನ್ನು ಬೇರೆ ಬೇರೆ ದ್ರವ್ಯಗಳ ಜೊತೆಗೆ ಬಳಸಲಾಗುವುದು.
ಉತ್ತಮ ಹರೀತಕಿ ಫಲದ ಲಕ್ಷಣಗಳು
ಗಟ್ಟಿಯಾಗಿದ್ದು, ಜಿಡ್ಡಿನಿಂದ ಕೂಡಿದ್ದು, ವೃತ್ತಾಕಾರವಾಗಿರಬೇಕು, ನೀರಿನಲ್ಲಿ ಹಾಕಿದರೆ ಮುಳುಗಬೇಕು. ಇಂಥಹ ಅಣಲೇಕಾಯಿ ಬಳಕೆಗೆ ಉತ್ತಮ.
ಇತರೇ ಗುಣಗಳು
1. ಹರೀತಕಿ ಫಲವನ್ನು ಅಗಿದು ತಿನ್ನುವುದರಿಂದ ಜೀರ್ಣಶಕ್ತಿಯು ವೃದ್ಧಿಯಾಗುವುದು.
2. ಇದನ್ನು ಕಲ್ಲಿನಲ್ಲಿ ಅರೆದು ಉಪಯೋಗಿಸುವುದರಿಂದ ದೇಹದಲ್ಲಿ ಸಂಗ್ರಹವಾದ ಪುರಾಣ ಮಲವನ್ನು ಶೋಧನ ಮಾಡಿ ಗುದದ್ವಾರದ ಮೂಲಕ ಹೊರಗೆ ಹಾಕುವುದು.
3. ಹರೀತಕಿ ಫಲವನ್ನು ಬೇಯಿಸಿ ಉಪಯೋಗಿಸುವುದರಿಂದ ಮಲ ಬದ್ಧತೆಯನ್ನುಂಟು ಮಾಡುವುದು.
4. ಹರೀತಕಿ ಫಲವನ್ನು ಹುರಿದು ತಿನ್ನುವುದರಿಂದ ವಾತ, ಪಿತ್ತ ಹಾಗೂ ಕಫ ದೋಷಗಳನ್ನು ಶಮನ ಮಾಡುವುದು.
5. ಆಹಾರದ ಜೊತೆ ಸೇವಿಸುವುದರಿಂದ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದು. ಬಲವನ್ನು ಹೆಚ್ಚಿಸುವುದು ಮತ್ತು ಇಂದ್ರಿಯಗಳಿಗೆ ಶಕ್ತಿಯನ್ನು ಕೊಡುವುದು.
6. ಆಹಾರದ ನಂತರ ಸೇವಿಸುವುದರಿಂದ ಆಹಾರದಲ್ಲಿ ಏನಾದರೂ ದೋಷಗಳಿದ್ದರೆ ಶಮನ ಮಾಡುವುದು.
7. ಸೈಂಧವ ಲವಣದೊಂದಿಗೆ ಸೇವನೆ ಮಾಡಿದರೆ ಕಫ ದೋಷವನನ್ನು, ಸಕ್ಕರೆಯೊಂದಿಗೆ ಸೇವನೆ ಮಾಡಿದರೆ ಮಾತ ದೋಷವನ್ನು ಹಾಗು ಬೆಲ್ಲದೊಂದಿಗೆ ಸೇವೆನೆ ಮಾಡಿದರೆ ಎಲ್ಲ ರೋಗಗಳನ್ನು ಶಮನ ಮಾಡುವುದು.
ಋತುವಿಗನುಗುಣವಾಗಿ ಹರೀತಕಿಯ ಉಪಯೋಗಗಳು
ವರ್ಷಾ ಋತು – ಸೈಂಧವ ಲವಣ
ಶರದ್ ಋತು – ಸಕ್ಕರೆ
ಹೇಮಂತ ಋತು – ಶುಂಠಿ
ಶಿಶಿರ ಋತು _ ಹಿಪ್ಪಲಿ
ವಸಂತ ಋತು – ಜೇನುತುಪ್ಪ
ಗ್ರೀಷ್ಮ ಋತು – ಬೆಲ್ಲ
ಯಾರಿಗೆ ಹರೀತಕಿ ಸೇವನೆ ನಿಷಿದ್ಧ
ದಣಿದವರು, ದುರ್ಬಲರು, ಒಣ ಶರೀರದವರು, ಕೃಶರು, ಉಪವಾಸ ಮಾಡಿದವರು, ಪಿತ್ತ ಪ್ರಕೃತಿಯವರು, ಗರ್ಭಿಣಿ ಸ್ತ್ರೀ ಇವರೆಲ್ಲರಿಗೆ ಹರೀತಕಿ ಸೇವನೆ ನಿಷಿದ್ಧ.
ರೋಗಗಳಲ್ಲಿ ಹರೀತಕಿ ಪ್ರಯೋಗ
1. ಅರ್ಶಸ್ಸಿನಲ್ಲಿ ಇದರ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ಲೇಪಿಸುವುದು ಉತ್ತಮ.
2. ಬಾಯಿ ಹುಣ್ಣು ಆದಾಗ ಹರೀತಕಿ ಚೂರ್ಣದ ಕಷಾಯವನ್ನು ಮಾಡಿ ಆಗಾಗ ಆ ಕಷಾಯದಲ್ಲಿ ಬಾಯಿ ಮುಕ್ಕಳಿಸುತ್ತಿರಬೇಕು.
3. ಹರೀತಕಿಯ ಸೂಕ್ಷ್ಮಚೂರ್ಣವನ್ನು ಹಲ್ಲು ತಿಕ್ಕಲೂ ಕೂಡ ಬಳಸಬಹುದು.
4. ಮಲ ಬದ್ಧತೆ ಉಂಟಾದಾಗ ಬಿಸಿ ನೀರಿಗೆ ಒಂದರಿಂದ ಎರಡು ಚಮಚದಷ್ಟು ಹರೀತಕಿ ಚೂರ್ಣವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
5. ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದಾಗ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಹರೀತಕಿ ಚೂರ್ಣವನ್ನು ಬೆರೆಸಿ ಕುಡಿಯಬೇಕು.
6. ಕೆಲವೊಂದು ರೀತಿಯ ಗಂಟಲಿನ ರೋಗಗಳಲ್ಲಿ ಹರೀತಕಿ ಚೂರ್ಣದಿಂದ ಕಷಾಯವನ್ನು ತಯಾರಿಸಿ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು.
ಹೀಗೆ ದೋಷ, ಪ್ರಕೃತಿ, ರೋಗ, ದೇಶ, ಕಾಲ ಇವೆಲ್ಲವುಗಳನ್ನು ಗಮನಿಸಿಕೊಂಡು ಈ ಹರೀತಕಿ ಫಲದ ಬಳಕೆ ಮಾಡೋಣ.
ಡಾ. ನಾಗಶ್ರೀ ಕೆ.ಎಸ್.

ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು

0

‘ಡಿ.ಕೆ.ರವಿ ಅವರ ಈ ಸಾವು ನ್ಯಾಯವೇ?’, ‘ಭೂ ಮಾಫಿಯಾಗೆ ಧಿಕ್ಕಾರ. ಉತ್ತಮ ಅಧಿಕಾರಿಗಳಿಗೆ ರಕ್ಷಣೆ ನೀಡದ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗುತ್ತಾ ಒಂದೆಡೆ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯಿಂದ ರೈತ ಮುಖಂಡರು ಮೆರವಣಿಗೆ ನಡೆಸಿದರು. ಮತ್ತೊಂದೆಡೆ ಎಸ್.ಎಫ್.ಐ ನೇತೃತ್ವದಲ್ಲಿ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೂಡ ಡಿ.ಕೆ.ರವಿ ಅವರ ಈ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಶಿಡ್ಲಘಟ್ಟದಲ್ಲಿ ಮಂಗಳವಾರ ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟದಲ್ಲಿ ಮಂಗಳವಾರ ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
‘ನಮ್ಮ ನೆರೆಯ ಜಿಲ್ಲೆಯಾದ ಕೋಲಾರದಲ್ಲಿ ಕಾರ್ಯನಿರ್ವಹಿಸಿದ್ದ ದಕ್ಷ ಅಧಿಕಾರಿ ಡಿ.ಕೆ.ರವಿ ಅವರು ಭೂ ಮಾಫಿಯಾ, ಮರಳು ದಂಧೆಗೆ ಕಡಿವಾಣ ಹಾಕಿದ್ದಲ್ಲದೆ, ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಹಾಗೂ ತೆರಿಗೆ ವಂಚಕರಿಂದ ತೆರಿಗೆ ವಸೂಲಿ ಮಾಡುವ ಮೂಲಕ ಭ್ರಷ್ಟರಿಗೆ ಚುರುಕು ಮುಟ್ಟಿಸಿದ್ದರು. ಜನಸಾಮಾನ್ಯರ ಪರವಾಗಿದ್ದ ಅವರು ಸರ್ಕಾರಕ್ಕೆ ಅತ್ಯಧಿಕ ಆದಾಯ ತಂದುಕೊಟ್ಟಿದ್ದರು. ನಮ್ಮ ರಾಜ್ಯ ಹಾಗೂ ದೇಶಕ್ಕೆ ನಿಷ್ಟಾವಂತ ಮತ್ತು ದಕ್ಷ ಅಧಿಕಾರಿಗಳ ಅವಶ್ಯಕತೆಯಿದೆ. ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಸಾವು ಸಂಶಯಾಸ್ಪದವಾಗಿದ್ದು, ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು’ ರೈತ ಮುಖಂಡ ಮಳ್ಳೂರು ಹರೀಶ್ ಒತ್ತಾಯಿಸಿದರು.
ರೈತಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು. ಅಬ್ಲೂಡು ಆರ್.ದೇವರಾಜ್, ಭಕ್ತರಹಳ್ಳಿ ಬೈರೇಗೌಡ, ತ್ಯಾಗರಾಜ್, ರಾಮಚಂದ್ರ, ಚಿಕ್ಕಮಾರಪ್ಪ, ಅಂಬರೀಷ್, ಶ್ರೀನಿವಾಸ್, ಗೋವಿಂದಪ್ಪ, ರಾಜಗೋಪಾಲ್, ಎಸ್.ಎಫ್.ಐ ಮುಖಂಡ ಮುನೀಂದ್ರ, ನರಸಿಂಹಮೂರ್ತಿ, ಆನಂದಕುಮಾರ್, ನವೀನ್, ರಾಜೇಶ್, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ

0

ಗ್ರಾಮೀಣ ಭಾಗದ ಜನ ಜೀವನದ ಸ್ಥಿತಿ ಗತಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಹೆಬ್ಬಾಳ ಸಮೀಪದ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯ ಆಶ್ರಯದಲ್ಲಿ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ನಿಜವಾದ ಬದುಕು ಗ್ರಾಮೀಣ ಭಾಗದಿಂದಲೆ ಆರಂಭವಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಆಧಾರದ ಮೇಲೆ ನಗರ ಹಾಗೂ ಇಡೀ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಜತೆಗೆ ಗ್ರಾಮೀಣ ಭಾಗದ ಜನ ಜೀವನ ಕುರಿತು ತಿಳುವಳಿಕೆಯನ್ನು ಅನುಭವದ ಮೂಲಕವೇ ಕಟ್ಟಿಕೊಡಲು ಈ ಎನ್ಎಸ್ಎಸ್ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಪಚಯಪ್ಪನ್ ಶಿಬಿರದ ಕಾರ್ಯಯೋಜನೆಗಳನ್ನು ಕುರಿತು ವಿವರಿಸಿದರು. ಶಿಬಿರದ ಸಂಘಟಕರಾದ ಪ್ರಭುದೇವ್, ಪ್ರಾಧ್ಯಾಪಕರಾದ ಪ್ರೊ.ಪ್ರದೀಪ್ಕುಮಾರ್ ಶಿಂಧೆ, ಪ್ರೊ.ಬಬಿತ ಜೋಸೆಫ್, ಪ್ರೊ.ನಾರಾಯಣಸ್ವಾಮಿ, ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದ ನಿರ್ದೇಶಕ ಬಂಕ್ಮುನಿಯಪ್ಪ, ಕೋಚಿಮುಲ್ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಆರ್.ಶ್ರೀನಿವಾಸ್, ಲಕ್ಷ್ಮೀಪತಿರೆಡ್ಡಿ, ಸೂರ್ಯನಾರಾಯಣಗೌಡ, ವಿಶ್ವನಾಥ್, ಸುರೇಂದ್ರಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲಲ್ಯ ಸ್ವಚ್ಛತಾ ಸಪ್ತಾಹ

0

ಪ್ರತಿಯೊಬ್ಬ ನಾಗರೀಕರು ತಮ್ಮ ಗ್ರಾಮಗಳಲ್ಲಿ ನೈರ್ಮಲ್ಯವನ್ನು ಕಾಪಾಡುವ ಜೊತೆಗೆ ನೀರಿನ ಮಿತಬಳಕೆಯನ್ನು ಮಾಡಿಕೊಂಡು ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಲು ಸಜ್ಜಾಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲಲ್ಯ ಸ್ವಚ್ಛತಾ ಸಪ್ತಾಹ ಆಚರಣೆಯ ಅಂಗವಾಗಿ ಅವರು ಮಾತನಾಡಿದರು.
ಬೇಸಿಗೆ ಸಮೀಪಿಸುತ್ತಿದ್ದು ಜನರು ಸೇರಿದಂತೆ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರನ್ನು ವ್ಯರ್ಥಮಾಡದೆ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ರಾಜ್ಯಾಧ್ಯಂತ ಎಚ್೧ಎನ್೧ ಖಾಯಿಲೆ ಸಹಾ ಕಾಣಿಸಿಕೊಂಡು ಅನೇಕ ಮಂದಿ ಸಾವನ್ನಪ್ಪಿರುವ ಘಟನೆಗಳು ನಡೆಯುತ್ತಿದ್ದು, ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಬೇಕು, ಮನೆಗಳ ಸಮೀಪದಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅವರಿಗೆ ತಿಳುವಳಿಕೆ ಹೇಳಬೇಕು, ನೀರನ್ನು ಹೆಚ್ಚು ಕಾಲ ಶೇಖರಣೆ ಮಾಡಿ ಇಡದಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ಸ್ವಚ್ಚತೆಯ ಬಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಂದ ಮೆರವಣಿಗೆ ಮುಖಾಂತರ ಜಾಗೃತಿ ಮೂಡಿಸಲಾಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ವಿ.ಸಿದ್ದಣ್ಣ, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಶಾಲೆಗಳ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!