ನಗರಸಭಾ ಕಾರ್ಯಾಲಯದಿಂದ ಸೋಮವಾರ ನಡೆಯಬೇಕಿದ್ದ ಒಳಚರಂಡಿ ಶುದ್ಧೀಕಣ ಘಟಕದ ತ್ಯಾಜ್ಯ ನೀರಿನ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಹಿತ್ತಲಹಳ್ಳಿಯ ಹಾಗೂ ಇನ್ನಿತರ ರೈತರು ನಗರಸಭೆ ಕಚೇರಿಗೆ ಆಗಮಿಸಿ ಅಧಿಕಾರಿಗಳು ಹಾಗೂ ರೈತಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ನಗರಸಭೆ ವ್ಯಾಪ್ತಿಯ ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ ಒಳಚರಂಡಿ ಶುದ್ಧೀಕರಣ ಘಟಕದಲ್ಲಿ ಸುಮಾರು 3.1 ಎಂ.ಎಲ್.ಡಿ ತ್ಯಾಜ್ಯ ನೀರು ಶೇಖರಣೆಯಾಗುತ್ತಿದ್ದು, ವ್ಯವಸಾಯದ ಉಪಯೋಗಕ್ಕಾಗಿ ಈ ನೀರನ್ನು ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಲು ಯೋಜಿಸಿ ಕರಪತ್ರ ಹಂಚಲಾಗಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ರೈತರು ಹರಾಜು ಮುಂದೂಡಿರುವುದಾಗಿ ನಗರಸಭೆ ಮುಖ್ಯಾಧಿಕಾರಿಗಳ ಪತ್ರ ಕಂಡು ಅಸಮಧಾನಗೊಂಡರು. ಕೆಲ ರೈತರ ಆಕ್ಷೇಪಣೆ ಮೇರೆಗೆ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಸೂಚಿಸಿರುವಂತೆ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಈ ಸಂದರ್ಭದಲ್ಲಿ ನಗರಸಭೆ ಮುಖ್ಯಾಧಿಕಾರಿ ತಿಳಿಸಿದರು.
ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಹಿತ್ತಲಹಳ್ಳಿ ಗ್ರಾಮದ ಪ್ರಭಾವಿ ರೈತರೊಬ್ಬರು ಸರ್ಕಾರದ ಭೂಮಿಯಲ್ಲಿ ಅಕ್ರಮವಾಗಿ ಉಳುಮೆ ಮಾಡಿಕೊಂಡು ನಗರಸಭೆಯ ಯುಜಿಡಿಯಿಂದ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ, ಕಳೆದ 1೦ ವರ್ಷಗಳಿಂದ ಪುರಸಭೆಗೆ ಒಂದು ರೂಪಾಯಿಯಷ್ಟು ಆದಾಯವನ್ನು ನೀಡಿಲ್ಲ, ಸುಮಾರು ೧೫೦ ಮಂದಿ ಸಣ್ಣ ರೈತರು ಈಗ ಲಕ್ಷಾಂತರ ರೂಪಾಯಿಗಳ ಹಣವನ್ನು ಸಾಲಮಾಡಿಕೊಂಡು ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದ್ದರೂ ಕೂಡಾ ಒಂದಿಂಚು ನೀರು ಲಭ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಗಳಲ್ಲಿ ನಗರಸಭೆಯಿಂದ ತ್ಯಾಜ್ಯ ನೀರನ್ನು ಹರಾಜು ಮಾಡುವ ಪ್ರಯತ್ನ ಮಾಡಿದ್ದು, ಶ್ರೀಮಂತ ರೈತನ ಪರವಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರು ಬೇರೆ ರೈತರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ಒಬ್ಬ ರೈತನ ಹಿತವನ್ನು ಕಾಪಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹರಾಜಿನ ಮೂಲಕ ನೀರು ಪಡೆಯುವಂತಾಗಬೇಕು ಎಂದು ರೈತರು ಒತ್ತಾಯಿಸಿದರು.
ನಡೆದ ಹರಾಜು – ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ತ್ಯಾಜ್ಯ ನೀರು
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಪುರಸಭಾ ಸದಸ್ಯ ಲಕ್ಷ್ಮಯ್ಯ ಅವರ ನಡುವೆ ಮನವಿ ಪತ್ರದ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು, ನಂತರ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಗರಸಭೆಯಿಂದ ಹರಾಜು ಪ್ರಕ್ರಿಯೆಗೆ ಸಿದ್ದತೆ ಮಾಡಿಕೊಂಡಿರುವ ಬಗ್ಗೆ ರೈತ ಎಚ್.ಕೆ.ರಮೇಶ್ ಅವರ ಮನವಿಯಂತೆ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಚರ್ಚೆ ನಡೆಸಿ ಎರಡು ತಿಂಗಳ ಕಾಲಾವಕಾಶವನ್ನು ಕೇಳಿ ಮನವಿ ಕೊಟ್ಟಿರುವುದು ನಿಜ, ಆದರೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಹೇಳಿಲ್ಲ ಎಂದು ಸಮಜಾಯಿಶಿ ನೀಡಿದರು. ಇಷ್ಟಕ್ಕೆ ತೃಪ್ತರಾಗದ ರೈತರು ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕು ಎಂದು ಪಟ್ಟುಹಿಡಿದಾಗ ನಗರಸಭೆಯ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಅವರು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು ನಗರಸಭೆಯ ಸಭಾಂಗಣದಲ್ಲಿ ರೈತರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಿದರು. ಹಿತ್ತಲಹಳ್ಳಿಯ ರೈತ ಎಚ್.ಕೆ.ರಮೇಶ್ ಅವರು ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಕೂಗಿ ಪಡೆದರು.
ರೈತರಾದ ಚಿಕ್ಕಮುನಿಯಪ್ಪ, ಎಚ್.ಜಿ.ಗೋಪಾಲಗೌಡ, ನಂಜುಂಡಪ್ಪ, ಜಿ.ಗೋಪಾಲಪ್ಪ, ಮುರಳಿ, ಪಿ.ವೇಣು, ರಾಮಾಂಜಿನಪ್ಪ, ಲೋಕೇಶ್, ನಗರಸಭಾ ಸದಸ್ಯ ಲಕ್ಷ್ಮಯ್ಯ, ಷಫಿ ಮುಂತಾದವರು ಹಾಜರಿದ್ದರು.
ನಗರಸಭೆಯಲ್ಲಿ ನಡೆದಿದೆ ಲೆಕ್ಕಾಚಾರ
ಕೇವಲ ಒಂದು ವರ್ಷದ ಅವಧಿಗೆ ೧೫ ಲಕ್ಷ ೧೦ ಸಾವಿರ ರೂಪಾಯಿಗಳಷ್ಟು ತ್ಯಾಜ್ಯದ ನೀರು ಹರಾಜಿನಲ್ಲಿ ಬಂದಿರುವುದರಿಂದ ಕಳೆದ ಹತ್ತು ವರ್ಷದಿಂದ ಎಷ್ಟು ಹಣ ಬರಬಹುದಿತ್ತು ಎಂಬ ಲಕ್ಕಾಚಾರೆ ನಡೆದಿದೆ. ಈ ತ್ಯಾಜ್ಯದ ನೀರು ಬಳಸುವುದರಿಂದ ಬೇಸಾಯದ ಅಗತ್ಯವಿರುವುದಿಲ್ಲ. ನೀರು ಹೋದ ನಂತರ ಉಳಿಯುವ ಘನತ್ಯಾಜ್ಯವೂ ನಗರಸಭೆಗೆ ಲಕ್ಷಾಂತರ ಆದಾಯ ತರಲಿದೆ.
ತ್ಯಾಜ್ಯ ನೀರಿನ ಹರಾಜಿಗಾಗಿ ರೈತರ ಒತ್ತಾಯ
ದಿಬ್ಬೂರಹಳ್ಳಿ ಮದ್ದೇಗಾರಹಳ್ಳಿಯಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳ ವಶ
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ದೇಗಾರಹಳ್ಳಿಯಲ್ಲಿ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಸುಮಾರು 75 ಸಾವಿರ ರೂಪಾಇ ಬೆಲೆಬಾಳುವ ಮರಳನ್ನು ಹಾಗೂ ಅದನ್ನು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಚಾಲಕರ ಮೇಲೆ ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ.
ಫೌಂಡೇಷನ್ ವತಿಯಿಂದ ಎಚ್1ಎನ್1 ಖಾಯಿಲೆ ತಡೆಗಟ್ಟಲು ಡ್ರಾಪ್ಸ್ ಮತ್ತು ಮಾತ್ರೆಗಳ ವಿತರಣೆ
ಶಿಡ್ಲಘಟ್ಟದ ಕೋಟೆ ವೃತ್ತದ ಮದೀನ ಮಸೀದಿ ಮುಂಭಾಗದಲ್ಲಿ ಭಾನುವಾರ ಯೂನಿಟಿ ಸಿಲ್ಸಿಲಾ ಫೌಂಡೇಷನ್ ವತಿಯಿಂದ ಎಚ್1ಎನ್1 ಖಾಯಿಲೆ ತಡೆಗಟ್ಟಲು ಡ್ರಾಪ್ಸ್ ಮತ್ತು ಮಾತ್ರೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು.
ಸುಲುಭದ ಹಣಕ್ಕೆ ಮರುಳಾಗದಿರಿ!
ಗಂಡ, ಮನೆ, ಮಕ್ಕಳು ಎಂದು ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡ ಮಹಿಳೆಯರನ್ನು ಹಿಂದೆಲ್ಲಾ ‘ಹೌಸ್ ವೈಫ್’ ಎಂದು ಕರೆಯಲಾಗುತ್ತಿತ್ತು. ಈಗ ಅವರನ್ನು ಗೌರವಯುತವಾಗಿ ‘ಹೋಮ್ ಮೇಕರ್’ ಎನ್ನಲಾಗುತ್ತದೆ. ಹೆಸರು ಬದಲಾದರೇನು, ಅವರ ಪರಿಸ್ಥಿತಿಗಳು ಮಾತ್ರ ಹಾಗೆಯೇ ಇವೆ.
ನಮ್ಮಲ್ಲಿ ಬಹಳಷ್ಟು ಮಹಿಳೆಯರು ಆರ್ಥಿಕ ವಿಚಾರಗಳಲ್ಲಿ ಹೆಚ್ಚು ತಿಳಿದವರಲ್ಲ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ, ಅದರಲ್ಲೂ ಹೆಚ್ಚಾಗಿ ಮನೆವಾರ್ತೆಯಲ್ಲಿ ಮಾತ್ರ ತೊಡಗಿಕೊಂಡವರಿಗೆ ತಮ್ಮ ಸ್ವಂತದ ಖರ್ಚುಗಳಿಗಾಗಿ ಹೇಗಾದರೂ ಸ್ವಲ್ಪ ಹಣವನ್ನು ಗಳಿಸುವ ಆಸೆಯಿರುತ್ತದೆ. ಜೊತೆಗೆ ತಮ್ಮ ಮನೆಗಳಿಗಾಗಿ ಕಡಿಮೆ ಹಣದಲ್ಲಿ ಅಥವಾ ಕಂತುಗಳಲ್ಲಿ ಗ್ರಾಹಕ ವಸ್ತುಗಳನ್ನು ಕೊಳ್ಳುವ ಆಸೆಯೂ ಇರುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕøತಿಯಲ್ಲಿ ಈ ಆಸೆಯ ಬೆಂಕಿಗೆ ತುಪ್ಪಸುರಿದು ಅವರನ್ನು ಆಕರ್ಷಿಸುವುದಕ್ಕೆ
ಸಾಕಷ್ಟು ಜನ ಕಾದಿರುತ್ತಾರೆ. ಆಸೆ ಇರುವುದು ತಪ್ಪೇನಲ್ಲ, ಬಿಡಿ. ಆದರೆ ಅದನ್ನು ಪೂರೈಸಿಕೊಳ್ಳಲು ಬೇಕಾದ ದಾರಿಗಳು ಅವರಿಗೆ ಕಾಣುವುದಿಲ್ಲ. ಇದಕ್ಕಾಗಿ ಸರಿಯಾದ ಮಾರ್ಗದಲ್ಲಿ ಒಂದು ಖಾಯಮ್ಮಾದ ಆದಾಯದ ಮೂಲವನ್ನು ಹುಡುಕಿಕೊಳ್ಳುವ ಬಗೆಗೆ ಸಂಪೂರ್ಣ ಮಾಹಿತಿ ಮತ್ತು ಮನಸ್ಥಿತಿ ಇಲ್ಲದ ಅವರೆಲ್ಲಾ ಯವ್ಯಾವುದೋ ಶಾರ್ಟ್ ಕರ್ಟ್‍ಗಳನ್ನು ಹಿಂದೆ ಬಿದ್ದು ಮೋಸ ಹೋಗುತ್ತಾರೆ. ಮಹಿಳೆಯರಿಗೆ ಸಮಾನ ಸಂಖ್ಯೆಯಲ್ಲಿ ಗಂಡಸರೂ ಇಂತಹ ಆಮಿಷಗಳಿಗೆ ಸಿಲುಕಿ ಮೋಸ ಹೋಗಿರುತ್ತಾರೆ. ಆದರೆ ಆರ್ಥಿಕವಾಗಿ ಸ್ವಾವಲಂಬಿಗಳಲ್ಲದ ಮಹಿಳೆಯರು ಮಾತ್ರ ಹೆಚ್ಚಿನ ಕಿರಿಕಿರಿಗಳನ್ನು ಅನುಭವಿಸುತ್ತಾರೆ.
ವಿನಿವಿಂಕ್ ಶಾಸ್ತ್ರಿಯ ಮೋಸದ ಕಥೆ ನಿಮಗೆಲ್ಲಾ ನೆನಪಿರಬೇಕಲ್ಲ್ವಾ? ಬಹುಷಃ ಮರೆತಿರಲೂಬಹುದು. ಜನ ಹೀಗೆ ಮರೆಯುವುದನ್ನೇ ಈ ರೀತಿಯ ವಂಚಕರ ಬಂಡವಾಳವಾಗಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಶಾಸ್ತ್ರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಗ್ಧ ಬಳಕೆದಾರರನ್ನು ವಂಚಿಸಿದವರ ಕಥೆಗಳು ಸಾಕಷ್ಟಿವೆ. ಈ ದಗಲಬಾಜಿಗಳಿಗೆ ಶಿಕ್ಷೆಯಾಯಿತೋ ಬಿಟ್ಟಿತೋ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಒಂದಂತೂ ಖಾತ್ರಿ-ಇವರಿಂದ ವಂಚನೆಗೊಳಗಾದವರ ಹಣದ ಹೆಚ್ಚಿನ ಪಾಲು ಹಿಂತಿರುಗಿ ಬಂದಿಲ್ಲ. ಅದಕ್ಕಿಂತ ಹೆಚ್ಚು ಆತಂಕಕಾರಿಯಾದ ಸಂಗತಿಯೆಂದರೆ ಈ ವಂಚಕರ ಜಾಲ ಬೀದಿಗಳನ್ನು, ಬಡಾವಣೆಗಳನ್ನು ಅಥವಾ ಊರುಗಳನ್ನು ಬದಲಾಯಿಸುತ್ತಿದ್ದಾರೆ ಮತ್ತು ತಮ್ಮ ಆಳ, ವಿಸ್ತಾರಗಳನ್ನು ಪಸರಿಸಿಕೊಳ್ಳುತ್ತಿದ್ದಾರೆ.
ಹಾಗಿದ್ರೆ ಯಾಕೆ ಇಂತಹ ವಂಚನೆಯ ಪ್ರಕರಣಗಳು ಪುವರಾವರ್ತನೆಯಾಗುತ್ತಲೇ ಇರುತ್ತವೆ? ಇವನ್ನೆಲ್ಲಾ ನಿಲ್ಲಿಸಲು ಮತ್ತು ವಂಚಿತರಿಗೆ ನ್ಯಾಯ ಒದಗಿಸಲು ಸರ್ಕಾರಿ ವ್ಯವಸ್ಥೆ ಇಲ್ಲವೇ?
ನಮ್ಮ ಸರ್ಕಾರಿ ವ್ಯವಸ್ಥೆಯ ಬಗೆಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು. ಇದರ ವೇಗ, ನಿಷ್ಠೆ, ಪ್ರಾಮಾಣಿಕತೆಯ ಬಗೆಗೆ ಎಲ್ಲರಿಗೂ ತಿಳಿದೇ ಇದೆ. ನ್ಯಾಯವನ್ನು ಕೇಳುವವರೇ ವಂಚಿಸುವವರಿಗಿಂತ ತೊಂದರೆಗೊಳಗಾಗುವ ಸಂದರ್ಭಗಳೇ ಹೆಚ್ಚು. ಹಾಗಾಗಿ ವಂಚನೆಗೊಳಗಾಗದಂತೆ ನಾವು ಎಚ್ಚೆತ್ತುಕೊಳ್ಳುವುದು ಮತ್ತು ನಮ್ಮ ಸುತ್ತಲಿನವರನ್ನು ಎಚ್ಚರಿಸುವುದರ ತುರ್ತು ಅಗತ್ಯವಿದೆ.
ವಂಚನೆಯ ವಿಧಾನಗಳು
ದಶಕಗಳ ಹಿಂದೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಜನರನ್ನು ವಂಚಿಸುವ ಸಾಕಷ್ಟು ಕಂಪನಿಗಳು ಎಲ್ಲ ಕಡೆ, ಅದರಲ್ಲೂ ಹೆಚ್ಚಾಗಿ ಕೇರಳದಲ್ಲಿ ಹುಟ್ಟಿಕೊಂಡಿದ್ದವು. ಅವುಗಳನ್ನು “ಬ್ಲೇಡ್ ಕಂಪನಿಗಳು” ಎಂದು ಕರೆಯಲಾಗಿತ್ತು. ಇವುಗಳನ್ನು ಹಿಡಿತದಲ್ಲಿಡಲು ಸರ್ಕಾರ ಸಾಕಷ್ಟು ಕ್ರಮಗಳನ್ನೇನೋ ತೆಗೆದುಕೊಂಡಿದೆ. ಆದರೆ ಈಗ ವಂಚನೆಯ ಸ್ವರೂಪ, ಆಳ, ವಿಸ್ತಾರಗಳೆಲ್ಲಾ ಬದಲಾಗಿವೆ ಮತ್ತು ಹೆಚ್ಚಾಗಿವೆ. ಸಧ್ಯಕ್ಕೆ ಈ ರೀತಿ ಜನರನ್ನು ವಂಚಿಸುವ ಎಲ್ಲಾ ಕಂಪನಿಗಳನ್ನೂ ಒಟ್ಟಾಗಿ “ಬ್ಲೇಡ್ ಕಂಪನಿಗಳು” ಎಂದು ಕರೆಯೋಣ. ಇವುಗಳ ವೈವಿಧ್ಯತೆಯ ಕೆಲವು ಮಾದರಿಗಳನ್ನು ಮೊದಲು ನೋಡೋಣ.
ನೆಟ್‍ವರ್ಕ್ ಮಾರ್ಕೆಟಿಂಗ್
ನೀವು ಒಂದು ನಿಗದಿತ ಮೊತ್ತವನ್ನು ನೀಡಿ ಸದಸ್ಯರಾಗಬೇಕು. ಈ ಮೊತ್ತ ಸಾವಿರ ರೂಪಾಯಿನಿಂದ ಲಕ್ಷಾಂತರ ರೂಪಾಯಿಗಳಿರಬಹುದು. ಜಪಾನಿನ ಮ್ಯಾಗ್ನೆಟಿಕ್ ಬೆಡ್ ಕೊಡುವ ಯೋಜನೆ ಹೊಂದಿದ್ದ ಕಂಪನಿಯೊಂದರ ಸದಸ್ಯತ್ವದ ಹಣ ಒಂದು ಲಕ್ಷ ರೂಪಾಯಿಗಳಾಗಿತ್ತು! [ಆ ಕಂಪನಿ ಈಗ ಮಂಗಮಾಯವಾಗಿದೆ ಎಂದು ಹೇಳಲೇಬೇಕಿಲ್ಲ.] ನೀವು ಕೊಟ್ಟ ಹಣಕ್ಕೆ ಕೆಲವು ವಸ್ತುಗಳನ್ನು ಕೊಡುತ್ತಾರೆ. ಅದರ ಬೆಲೆ ನಿಮ್ಮ ಹಣಕ್ಕೆ ಸಮಾನವಾದುದು ಎಂದು ಕಂಪನಿಯವರು ಹೇಳಿದರೂ, ಅದರ ನಿಜ ಬೆಲೆ ತೀರ ಕಡಿಮೆ ಇರುತ್ತದೆ. ನಂತರ ನೀವು ಹೊಸ ಹೊಸ ಸದಸ್ಯರನ್ನು ಸರಣಿಯಲ್ಲಿ ನಿಮ್ಮ ಕೆಳಗೆ ನೋಂದಾಯಿಸುತ್ತಾ ಹೋದಂತೆ ನಿಮಗೆ ಕಮೀಷನ್ ಬರುತ್ತಾ ಹೋಗುತ್ತದೆ. ನೀವು ಹಾಕಿದ ಹಣದ ಸಾವಿರಾರು ಪಟ್ಟು ಗಳಿಸಬಹುದು ಎಂದು ಕಂಪನಿಗಳು ಪ್ರಚಾರ ಮಾಡುತ್ತವೆ.
ಪ್ರಾಂರಂಭದಲ್ಲಿ ಇವರು ಉತ್ತಮ ಹೋಟೆಲ್‍ಗಳಲ್ಲಿ ಸಭೆ ಕರೆದು ಯಾರ್ಯಾರದ್ದೋ ಯಶೋಗಾಥೆಗಳನ್ನು ಆಕರ್ಷಕವಾಗಿ ವರ್ಣಿಸಿ, ನೀವೆಲ್ಲಾ ಕೆಲಸವನ್ನೇ ಮಾಡದೆ ಜೀವನ ಪರ್ಯಂತ ಲಕ್ಷ, ಕೋಟಿ ಗಳಿಸಿ ಪ್ರಪಂಚವನ್ನೆಲ್ಲಾ ಸುತ್ತಬಹುದೆಂದೆಲ್ಲಾ ಹೇಳಿ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸುತ್ತಾರೆ. ಕಷ್ಟಪಟ್ಟು ದುಡಿದು ಗಳಿಸುವವರೆಲ್ಲಾ ಇವರ ದೃಷ್ಟಿಯಲ್ಲಿ ಮೂರ್ಖರು ಎನ್ನುವಂತೆ ಬಣ್ಣಿಸುತ್ತಾ ಕೆಲವೇ ತಿಂಗಳಲ್ಲಿ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಾರೆ. ನಮ್ಮ ಹಣವನ್ನು ಕಳೆದುಕೊಂಡಿದ್ದಲ್ಲದೇ, ಮುಲಾಜನ್ನು ಖರ್ಚು ಮಾಡಿ ನೆಂಟರಿಷ್ಟರನ್ನೆಲ್ಲಾ ಸದಸ್ಯರನ್ನು ಮಾಡಿದ ನಾವು, ಅವರಿಂದ ತಪ್ಪಿಸಿಕೊಂಡು ಓಡಾಡಬೇಕಾಗುತ್ತದೆ; ಕೆಲವೊಮ್ಮೆ ಅವರಿಂದ ಚನ್ನಾಗಿ ಉಗಿಸಿಕೊಂಡು ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.
ಹಣದ ಸರಪಳಿಗಳು
ಇವು ಮೇಲೆ ಹೇಳಿದ ನೆಟ್‍ವರ್ಕ್ ಮಾರ್ಕೆಟಿಂಗ್ ಕಂಪನಿಗಳಂತೆಯೇ ಕೆಲಸ ಮಾಡುತ್ತವೆ. ಒಂದೇ ವ್ಯತ್ಯಾಸವೆಂದರೆ ನಾವು ಸದಸ್ಯತ್ವಕ್ಕಾಗಿ ಕೊಡುವ ಹಣಕ್ಕೆ ಬದಲಾಗಿ ಇವು ಯಾವುದೇ ವಸ್ತುಗಳನ್ನು ನೀಡುವುದಿಲ್ಲ. ನೀವು ನೊಂದಾಯಿಸಿದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ನಿಮಗೆ ಆಕರ್ಷಕ ಕಮೀಷನ್ ನೀಡುವ ಭರವಸೆ ನೀಡುತ್ತಾರೆ. ನೀವು ಕೊಡುವ ಹಣವನ್ನು ಅವರು ಹೇಗೆ ಮತ್ತು ಎಲ್ಲಿ ಹೂಡುತ್ತಾರೆ ಮತ್ತು ಅವರ ಆದಾಯದ ಮೂಲಗಳೇನು ಎಂಬ ಯಾವುದೇ ಪ್ರಶ್ನೆಗಳಿಗೆ ಉತ್ತರವಿಲ್ಲ.
ಬಹುಮಾನ ಅಥವಾ ಬಡ್ಡಿ ನೀಡುವ ಕಂಪನಿಗಳು
ನಿಮ್ಮಿಂದ ನಿಗದಿತ ಮೊತ್ತದ ಹಣವನ್ನು ಡಿಪಾಸಿಟ್ ಆಗಿ ಪಡೆಯುವ ಈ ಕಂಪನಿಗಳು ನಿರ್ದಿಷ್ಟ ಅವಧಿಯ ನಂತರ ಹಣದ ಮೊತ್ತದ ಹತ್ತಾರು ಪಟ್ಟು ಬೆಲೆಯ ವಸ್ತುಗಳನ್ನು ನೀಡುವುದಾಗಿ ಆಶ್ವಾಸನೆ ನೀಡುತ್ತವೆ. ಉದಾಹರಣೆಗೆ ನೀವು ಈಗ ಹತ್ತುಸಾವಿರ ರೂಪಾಯಿ ಕೊಟ್ಟರೆ ಮೂರು ತಿಂಗಳ ನಂತರ ಮೂವತ್ತು ಸಾವಿರ ಬೆಲೆಯ ಎಲ್.ಸಿ.ಡಿ. ಟೀ.ವಿ. ಕೊಡುವ ಭರವಸೆ ಕೊಡುತ್ತಾರೆ.
ಇನ್ನೂ ಕೆಲವರು ಸ್ವಲ್ಪ ಬದಲಾವಣೆ ಮಾಡಿ, ನಮ್ಮ ಹತ್ತುಸಾವಿರ ರೂಪಾಯಿಗೆ ಪ್ರತಿಯಾಗಿ ತಿಂಗಳಿಗೊಮ್ಮೆ ಸಾವಿರ ರೂಪಾಯಿಯನ್ನು ನಿರಂತರವಾಗಿ ನೀಡುತ್ತಾ ಬರುವ ಭರವಸೆ ನೀಡುತ್ತಾರೆ. ಇನ್ನೂ ಹಲವರು ಅವಧಿ ಮುಗಿದ ಮೇಲೆ ಅಸಲನ್ನೂ ಹಿಂತಿರುಗಿಸುವ ಆಸೆ ತೋರಿಸುತ್ತಾರೆ. ಅವರು ಕೊಡುತ್ತೇವೆಂದು ಹೇಳುವ ಬಡ್ಡಿ ವಾರ್ಷಿಕ 120% ಆಗುತ್ತದೆ. ಬ್ಯಾಂಕ್‍ಗಳು ಕೇವಲ 8-10% ಬಡ್ಡಿ ಕೊಡುವಾಗ ಇಂತಹ ಸ್ಕೀಮ್ ಗಳು ಜನರನ್ನು ಸೆಳೆಯುವುದರಲ್ಲಿ ಆಶ್ಚರ್ಯವೇನು?
ತಮ್ಮ ಪ್ರಾಮಾಣಿಕತೆಯನ್ನು ತೋರಿಸಲು ಆರಂಭದಲ್ಲಿ ಕೆಲವು ಜನರಿಗೆ ಅವರು ಭರವಸೆ ನೀಡಿದಂತೆ ವಸ್ತುಗಳು ಅಥವಾ ಬಡ್ಡಿಯನ್ನು ಕೊಟ್ಟಿರುತ್ತಾರೆ. ಕೆಲವು ನಯವಂಚಕರು ತಮ್ಮ ಕಡೆಯ ಜನಗಳನ್ನೇ ಜನರ ಮಧ್ಯೆ ಬಿಟ್ಟು ತಮಗೆ ಹಣ ಅಥವಾ ಬಹುಮಾನಗಳು ಈಗಾಗಲೇ ಬಂದಿದೆಯೆಂದು ಸುಳ್ಳು ಪ್ರಚಾರ ಮಾಡಿಸಿರುತ್ತಾರೆ! ನಂತರ ಕೆಲವೇ ದಿನಗಳಲ್ಲಿ ಅವರು ಸಾಕಷ್ಟು ಹಣ ಸಂಗ್ರಹಿಸಿ ರಾತ್ರೋರಾತ್ರಿ ಜಾಗ ಖಾಲಿಮಾಡುತ್ತಾರೆ.
ಚಿನ್ನದ ಸ್ಕೀಮ್‍ಗಳು
ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಂದ ಹಿಡಿದು ಬಡಾವಣೆ ಮೂಲೆಯಲ್ಲಿರುವ ಅಂಗಡಿಗಳವರೂ ಮಾಡುತ್ತಿರುವ ಈ ರೀತಿಯ ಸ್ಕೀಮ್‍ಗಳಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿದ್ದು ವರ್ಷಗಳಿಂದ ನಡೆಯುತ್ತಾ ಬಂದಿವೆ. ಪ್ರತಿ ತಿಂಗಳು ಸದಸ್ಯರಿಂದ ನಿರ್ದಿಷ್ಟ ಮೊತ್ತದ
ಹಣವನ್ನು ತೆಗೆದುಕೊಂದು ತಿಂಗಳಿಗೊಮ್ಮೆ ಲಾಟರಿ ನಡೆಸುತ್ತಾರೆ. ವಿಜೇತರಾದ ಒಬ್ಬರಿಗೆ ಆ ತಿಂಗಳೇ ಭರವಸೆ ನೀಡೀದ ಬಂಗಾರದ ಆಭರಣ ನೀಡುತ್ತಾರೆ ಮತ್ತು ಅವರು ಮುಂದೆ ಹಣ ಕಟ್ಟುವ ಅಗತ್ಯವಿರುವುದಿಲ್ಲ. ಲಾಟರಿಯಲ್ಲಿ ವಿಜೇತರಾಗದೇ ಉಳಿದವರಿಗೆ ಅವಧಿಯ ನಂತರ ಅವರು ನೀಡಿದ ಹಣದ ಮೊತ್ತಕ್ಕೆ ಸಮನಾದ ಆಭರಣ ನೀಡುತ್ತಾರೆ.
ಈ ಸ್ಕೀಮ್‍ಗಳನ್ನು ನಡೆಸುವವರು ತಮಗೆ ಬರುವ ಲಾಭದ ಒಂದಂಶದಲ್ಲಿ ಪ್ರತಿ ತಿಂಗಳೂ ಬಹುಮಾನ ನೀಡುತ್ತಾರೆ ಎಂದು ತರ್ಕಿಸಿರಬಹುದು. ಹಾಗಿದ್ದರೂ ಯೋಜನೆ ನಡೆಸುವವರ ವಿಶ್ವಾಸಾರ್ಹತೆ, ಅವಧಿ ಮುಗಿದ ಮೇಲೆ ನೀಡುವ ಆಭರಣಗಳ ಬೆಲೆ ಮತ್ತು ಗುಣಮಟ್ಟ ಮುಂತಾದ ಅಂಶಗಳನ್ನೆಲ್ಲಾ ನಿಧಾನವಾಗಿ ಯೋಚಿಸಿ ಹಣ ಹೂಡುವ ನಿರ್ಧಾರ ಮಾಡಬೇಕು.
ಚಿಟ್ ಫಂಡ್‍ಗಳು
ಜನಸಾಮಾನ್ಯರ ಭಾಷೆಯಲ್ಲಿ “ಚೀಟಿ” ಎಂದು ಕರೆಸಿಕೊಳ್ಳುವ ಇದು ಸರ್ವವ್ಯಾಪಿ. ಕಛೇರಿ, ಬಡಾವಣೆ, ಹೆಂಗಸರ ಕಿಟ್ಟಿಪಾರ್ಟಿ, ಸ್ನೇಹಿತರ ಗುಂಪು-ಹೀಗೆ ಎಲ್ಲಾ ಕಡೆ ಇದರ ವ್ಯವಹಾರವಿದೆ. ದೊಡ್ಡ ದೊಡ್ಡ ಫೈನಾನ್ಸ್ ಕಂಪನಿಗಳು ಇದನ್ನು ನಿರಂತರವಾಗಿ ವಿಶ್ವಾಸಾರ್ಹವಾಗಿ ನಡೆಸಿಕೊಂಡು ಬಂದಿವೆ. ಇವೆಲ್ಲದರ ನಡುವೆ ಅನಾಮಾಧೇಯರಿಂದ ಜನರು ಹಣ ಕಳೆದುಕೊಂಡ ಉದಾಹರಣೆಗಳೂ ದಂಡಿಯಾಗಿ ಸಿಗುತ್ತವೆ. ಸ್ನೇಹಿತರ ಗುಂಪುಗಳಲ್ಲಿ ಚೀಟಿ ನಡೆಸಿ ಸ್ನೇಹ ಮತ್ತು ಹಣ ಎರಡನ್ನೂ ಕಳೆದುಕೊಂಡವರೂ ಇದ್ದಾರೆ. ಹಾಗಾಗಿ ಸಂಪೂರ್ಣ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳದೆ, ಹೆಚ್ಚಿನ ಬಡ್ಡಿಯ ಆಸೆಗೆ ಚಿಟ್ ಗಳ ಸದಸ್ಯರಾಗಬಾರದು.
ಟೀಕ್ ಪ್ಲಾಂಟೇಷನ್‍ಗಳು
ನೀವು ನಿರ್ದಿಷ್ಟ ಮೊತ್ತದ ಹಣವನ್ನು ಕೊಟ್ಟರೆ ನಿಮಗಾಗಿ ಕಂಪನಿಯ ಜಾಗದಲ್ಲಿ ತೇಗದ ಮರವೊಂದನ್ನು ಕಾದಿರಿಸಲಾಗುತ್ತದೆ. ಹದಿನೈದು ಇಪ್ಪತ್ತು ವಷರ್Àಗಳ ನಂತರ ಆ ಮರದಿಂದ ಬರುವ ಹಣ ನಿಮ್ಮದಾಗುತ್ತದೆ. ಈ ರೀತಿ ನೀವು ಹೂಡಿದ ಹಣದ ಹತ್ತಾರು ಪಟ್ಟು ಹಣ ನಿಮಗೆ ಸಿಗುತ್ತದೆ ಎನ್ನುವುದು ಅವರ ಅಂಬೋಣ. ಇತ್ತೀಚೆಗೆ ಈ ಕಂಪನಿಗಳ ಭರಾಟೆ ಕಡಿಮೆಯಾಗಿರುವುದನ್ನು ನೋಡಿದರೆ ಹಳೆಯ ಕಂಪನಿಗಳೆಲ್ಲಾ ಪಾಪರ್ ಚೀಟಿ ತೆಗೆದುಕೊಂಡಂತೆ ಕಾಣುತ್ತದೆ.
ವಂಚನೆಯ ನೂತನ ಮಾದರಿಗಳು
ಇಲ್ಲಿ ಹೇಳಿರುವುದು ಕೆಲವೇ ಉದಾಹರಣೆಗಳು ಮಾತ್ರ. ನಾನು ಮೇಲೆ ಹೇಳಿದಂತೆ ಸರ್ಕಾರ ಒಂದು ರೀತಿಯ ವಂಚನೆಯನ್ನು ನಿಭಾಯಿಸಲು ಕಾನೂನು ರೂಪಿಸುತ್ತಿದ್ದಂತೇ, ಹೊಸ ಹೊಸ ಮೋಸದ ಯೋಜನೆಗಳು ಶುರುವಾಗುತ್ತವೆ. ಅಂದರೆ ಎಲ್ಲಾ ಕ್ಷೇತ್ರಗಳಲ್ಲಿ ಆಗುವಂತೆ ಇಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿರುತ್ತವೆ!
ಇತ್ತೀಚೆಗೆ ಸಿಂಗಪೂರ್ ಮೂಲದ “ಸ್ಪೀಕ್ ಏಷಿಯಾ” ಎನ್ನುವ ಕಂಪನಿಯು ಪತ್ರಿಕೆ ಮತ್ತು ಟೀವಿಗಳಲ್ಲಿ ಪ್ರಚಾರ ಮಾಡುವುದನ್ನು ಗಮನಿಸುತ್ತಿದ್ದೆ. ಕೆಲವು ದಿನಗಳ ಹಿಂದೆ ಪರಿಚಿತನೊಬ್ಬ ಇದರ ಸದಸ್ಯನಾಗಲು ಪುಸಲಾಯಿಸಿದ. ಹತ್ತುಸಾವಿರ ರೂಪಾಯಿ ಕೊಟ್ಟು ಸದಸ್ಯರಾದರೆ ನಮಗೆ ಪ್ರತಿ ತಿಂಗಳು ನಾಲ್ಕು ಮಾರುಕಟ್ಟೆ ಸರ್ವೆಗಳಿಗೆ ಪ್ರತಿಕ್ರಿಯಿಸುವ ಅವಕಾಶ ಸಿಗುತ್ತದೆ. ಅಂತರ್ ರ್ಜಾಲದ ಮೂಲಕ ನಡೆಯುವ ಸರ್ವೆಯೊಂದಕ್ಕೆ ನಮಗೆ ಸಾವಿರ ರೂಪಾಯಿಗಳ ಸಂಭಾವನೆ ಸಿಗುತ್ತದೆ. ಅಂದರೆ ಮೂರು ತಿಂಗಳಿಗೆ ನೀವು ಹೂಡಿದ ಹಣ ಹಿಂತಿರುಗಿ ನಿಮ್ಮ ಕೈಸೇರಿ ನಂತರ ತಿಂಗಳಿಗೆ ನಾಲ್ಕು ಸಾವಿರ ಮುಫತ್ತಾಗಿ ಸಿಗುತ್ತದೆ. ಜೊತೆಗೆ ಹೊಸ ಸದಸ್ಯರನ್ನು ಪರಿಚಯಿಸುವವರಿಗೆ ಹೆಚ್ಚಿನ ಆದಾಯವಿದೆ. ಎಂತಹ ವಿದ್ಯಾವಂತರನ್ನೂ ಆಕರ್ಷಿಸಬಲ್ಲ ಇಂತಹ ಯೋಜನೆಗಳು ಹಲವಾರು ಇರಬಹುದು.
ನಾನು ಕಂಪನಿಯ ಮೂಲವನ್ನೆಲ್ಲಾ ಜಾಲಾಡಿದರೂ ಖಚಿತ ಮಾಹಿತಿಗಳು ಸಿಗಲಿಲ್ಲ. ಕಂಪನಿಯ ವೆಬ್ ಸೈಟ್ ಒಮ್ಮೆಯೂ ತೆರೆದುಕೂಳ್ಳಲೇ ಇಲ್ಲ. ನಂತರದ ದಿನಗಳಲ್ಲಿ ಭಾರತ ಸರ್ಕಾರ ಈ ಕಂಪನಿಯ ಬ್ಯಾಂಕ್ ಖಾತೆಯನ್ನು ಫ್ರೀಜ್ [ಅಂದರೆ ಕಂಪನಿ ಖಾತೆಯಿಂದ ಸರ್ಕಾರದ ಒಪ್ಪಿಗೆ ಇಲ್ಲದೆ ಹಣ ತೆಗೆಯುವಂತಿಲ್ಲ] ಎಂಬ ಸುದ್ದಿ ಓದಿದೆ. ಇತ್ತೀಚೆಗೆ ಕಂಪನಿಯ ವಿರುದ್ಧ ಕಾನೂನು ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಆದರೆ ಅದಕ್ಕೂ ಮೊದಲೇ ಸಾಕಷ್ಟು ಜನರು ಹಣ ಕಳೆದುಕೊಂಡಿರುವ ಸಾಧ್ಯತೆಗಳಿವೆ.
ಆದಾಯದ ಮೂಲಗಳೇನು?
ನಾವು ಹಣ ಹೂಡುವ ಕಂಪನಿಯ ಬಗೆಗೆ ಯಾವುದೇ ಅಂತೆಕಂತೆಗಳನ್ನು ನಂಬದೆ, ಮೊದಲು ಸಂಪೂರ್ಣ ವಿವರ ಪಡೆಯಬೇಕು. ಸಾಮಾನ್ಯವಾಗಿ ಬ್ಯಾಂಕ್‍ಗಳು ವಾರ್ಷಿಕ 8-10% ಬಡ್ಡಿ ನೀಡುತ್ತವೆ. ಶೇರು ಮತ್ತು ಮ್ಯೂಚುಯಲ್ ಫಂಡ್‍ಗಳಲ್ಲಿ ಸುಮಾರು 15-20%
ಆದಾಯ ಬರಬಹುದು. ಆದರೆ ಬ್ಯಾಂಕ್‍ಗಳು ನೀಡುವ ಮಟ್ಟದ ಸ್ಥಿರತೆ ಮತ್ತು ಭದ್ರತೆ ಇವುಗಳಿಗಿರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮದ ಅಗತ್ಯ ಮತ್ತು ಬಹಳ ಅಸ್ಥಿರತೆ ಇದ್ದು, 25% ನಿವ್ವಳ ಆದಾಯ ಬರಬಹುದು. ಹೀಗಿರುವಾಗ ಈ ಕಂಪನಿಗಳು ತಮಗೂ ಲಾಭ ಮಾಡಿಕೊಂಡು ಹಣ ಹೂಡಿದವರಿಗೆ ಶೇಕಡ ನೂರಕ್ಕಿಂತ ಹೆಚ್ಚಿನ ಪ್ರತಿಫಲ ಕೊಡುವುದು ಹೇಗೆ ಸಾಧ್ಯ? ಹೆಚ್ಚಿನ ಕಂಪನಿಗಳು ತಮ್ಮ ಆದಾಯದ ಮೂಲಗಳ ಬಗೆಗೆ ಮಾತನಾಡುವುದೇ ಇಲ್ಲ. ಆದರೆ ಹಣ ಹೂಡುವ ನಾವು ಅದನ್ನೆಲ್ಲಾ ಪ್ರಶ್ನಿಸಲೇಬೇಕಾಗುತ್ತದೆ. ಇದಕ್ಕೆ ಸರಿಯಾದ ಉತ್ತರವಿಲ್ಲವೆಂದಾದರೆ ಅವರು ನಮಗೆ ಹಣ ಕೊಡಲು ಇನ್ನೊಬ್ಬರಿಗೆ ಮೋಸ ಮಾಡುತ್ತಾರೆ ಎಂಬುದು ಖಚಿತ. ಯಾರಿಗೆ ಟೋಪಿ ಬಿದ್ದರೇನು, ನಮಗೆ ಹಣ ಸಿಕ್ಕರಾಯಿತು-ಎಂದು ಯೋಚಿಸುವವರೆಲ್ಲಾ ನೆನಪಿಟ್ಟುಕೊಳ್ಳಬೇಕಾದದ್ದು, ಆ ರೀತಿ ಟೋಪಿ ಹಾಕಿಸಿಕೊಳ್ಳುವವರು ನಾವೇ ಆಗಿರುವ ಸಾಧ್ಯತೆ ಇರಬಹುದಲ್ಲವೇ?
ಗ್ರಾಹಕರ ಅಜ್ಞಾನ ಮತ್ತು ಅತಿ ಆಸೆಯೇ ಹೆಚ್ಚಿನ ಸಂದರ್ಭಗಳಲ್ಲಿ ವಂಚನಗೆ ಕಾರಣ. ಮೋಸಗಾರರು ಹೊಸ ವೇಷ ಆಶ್ವಾಸನೆಗಳೊಂದಿಗೆ ಬರುತ್ತಲೇ ಇರುತ್ತಾರೆ. ಅವರಿಂದ ದೂರ ಉಳಿಯುವ ಎಚ್ಚರಿಕೆ ನಮಗಿರಬೇಕು. ಹಣ ಕಳೆದುಕೊಂಡ ಮೇಲೆ ಕಂಪನಿ ಆಫೀಸನ್ನು ಘೇರಾವ್ ಮಾಡುವುದು, ಪೋಲೀಸ್ ಸ್ಟೇಷನ್ ಎದುರು ಪ್ರತಿಭಟಿಸುವುದು ಅಥವಾ ಟೀವಿ ಕ್ಯಾಮರಾಗಳ ಮುಂದೆ ಗೋಳು ತೋಡಿಕೊಳ್ಳುವುದರಿಂದ ಏನು ಪ್ರಯೋಜನ? ಇಂತಹ ಬ್ಲೇಡ್ ಕಂಪನಿಗಳು ನಿಮ್ಮ ಬಡಾವಣೆಗೆ ಬಂದ ತಕ್ಷಣ ಪೋಲೀಸರಿಗೆ ದೂರು ನೀಡಿ ಮತ್ತು ಜನರನ್ನು ಎಚ್ಚರಿಸಿ. ಇಲ್ಲದಿದ್ದರೆ ಈ ರೀತಿಯ ವಂಚನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ.
ನಡಹಳ್ಳಿ ವಸಂತ್
ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ
ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ ಎಂಬ ತಿಳುವಳಿಕೆ ಮೂಡದ ವಿನಃ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಾಗದ ಮಾತು. ತಾನು ತಿಳಿದುಕೊಳ್ಳುವುದಕ್ಕೂ, ಬೇರೆಯವರಿಗೆ ತಿಳಿಸಿ ಹೇಳುವುದಕ್ಕೂ ವ್ಯತ್ಯಾಸವಿದೆ. ತಾನು ತಿಳಿದುಕೊಂಡದ್ದನ್ನು ತನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಲೆ ಕರಗತವಾಗದಿದ್ದಲ್ಲಿ ಆತ ಉತ್ತಮ ಶಿಕ್ಷಕನಾಗಲಾರವೆನ್ನಿಸುತ್ತದೆ. ಇಂದು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಬೇಕು, ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಯಾಗಬೇಕು, ವಿದೇಶಿ ವಿಶ್ವವಿದ್ಯಾಲಯಗಳೂ ಇಲ್ಲಿ ಲಗ್ಗೆ ಇಡುತ್ತಿರುವ ಸಂದರ್ಭದಲ್ಲಿ ಸಮರ್ಥ ಪೈಪೋಟಿ ನೀಡುವುದು ಅಗತ್ಯ ಎಂಬಿತ್ಯಾದಿ ಮಾತುಗಳು ಸತತವಾಗಿ ಕೇಳಿಬರುತ್ತಿವೆ. ಹಾಗಂತ ಆಯೋಗಗಳು, ಸುತ್ತೋಲೆಗಳು, ಕಾಟಾಚಾರದ ತರಬೇತಿಗಳು ತಲೆತಿನ್ನುವ ಮೀಟಿಂಗುಗಳಿಂದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ, ಗುಣಮಟ್ಟದ ಹೆಚ್ಚಳವಾಗಬೇಕೆಂದರೆ, ಶಿಕ್ಷಕರ ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಬೇಕು.
ಇಂದು ಪ್ರಾಥಮಿಕ ಶಿಕ್ಷಣ ನೀಡಲು ನೇಮಕವಾಗುವ ಶಿಕ್ಷಕರಿಗೆ ಡಿ.ಎಡ್. ತರಬೇತಿಯ ವ್ಯವಸ್ಥೆಯಿದೆ. ಪ್ರೌಢ ಶಿಕ್ಷಣ ನೀಡಲು ನೇಮಕವಾಗುವ ಶಿಕ್ಷಕರಿಗೆ ಬಿ.ಎಡ್. ತರಬೇತಿಯ ವ್ಯವಸ್ಥೆ ಇದೆ. ಅಲ್ಲಿ ಅವರು ಕಲಿಸುವ ಕಲೆಯ ಕುರಿತು ಸಾಮಾನ್ಯ ಜ್ಞಾನ ಪಡೆಯಲು ಸಾಧ್ಯವಿದೆ. ಆನಂತರ ಅದರ ಬಳಕೆ ಆದರೆ ಕಾಲೇಜು ಶಿಕ್ಷಕರಾಗುವವರಿಗೆ ಇಂಥ ಯಾವುದೇ ತರಬೇತಿಯ ವ್ಯವಸ್ಥೆ ಇಲ್ಲ. ಇಲ್ಲಿಯವರೆಗೂ ಅದು ಅಗತ್ಯವೆಂತಲೂ ಇಲಾಖೆ ಭಾವಿಸಿದಂತಿಲ್ಲ. ಸ್ನಾತಕೋತ್ತರ ಪದವಿ ಪೂರೈಸಿದರೆ ಆತ, ಆಕೆ ಕಾಲೇಜುಗಳಲ್ಲಿ ಶಿಕ್ಷಕರಾಗಲು ನಂಬಿಕೆ ಸಾರ್ವತ್ರಿಕವಾಗಿದೆ. ಪದವಿ ಕಾಲೇಜುಗಳಲ್ಲಿ ಶಿಕ್ಷಕರಾಗಲು ಇತ್ತೀಚೆಗೆ NET/SLET ಎಂಬ ಪರೀಕ್ಷೆಗಳು ಕಡ್ಡಾಯವಾಗಿದೆ ನಿಜ. ಆದರೆ ಇವೆಲ್ಲ ವ್ಯಕ್ತಿಯ ಒಳಗಿನ ಜ್ಞಾನದ ಅಳತೆಗೋಲಾಗಬಹುದೇ ವಿನಃ ಆತನ ಕಲಿಸುವಿಕೆಯ ಸಾಮಥ್ರ್ಯದ ಒರೆಗಲ್ಲುಗಳಲ್ಲ. ಇಂಥ ಪರೀಕ್ಷೆಗಳು ಬೇಡವೇ ಬೇಡವೆಂಬುದು ವಾದವಲ್ಲ ಯಾಕೆಂದರೆ ಒಳಗಡೆಗೆ ಜ್ಞಾನ ತುಂಬಿರದೆ ಹೊರಗಡೆಗೆ ನೀಡಲಾಗುವುದಿಲ್ಲ. ಆದರೆ ಒಳಗಡೆಗೆ ಜ್ಞಾನವಿದ್ದಾಕ್ಷಣ ಅದನ್ನು ಹೊರಗಡೆಗೆ ಸಮರ್ಥವಾಗಿ ನೀಡಲಾಗುತ್ತದೆ ಎಂಬ ಕುರಿತೂ ಯಾವುದೇ ಗ್ಯಾರಂಟಿಯಿಲ್ಲ. ಹಾಗಾಗಿ ಪಡೆದ ಜ್ಞಾನವನ್ನು, ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿಸಲು ಅಗತ್ಯವಾದ ಸಂವಹನ ಕಲೆ ಸಾಧ್ಯವಾಗುವಂತಹ ಒಂದು ನಿರ್ದಿಷ್ಟ ತರಬೇತಿಯ ಅಗತ್ಯವಿದೆಯೆನ್ನಿಸುತ್ತದೆ. ಯಂತ್ರಗಳೊಂದಿಗಿನ ವ್ಯವಹಾರಕ್ಕೆ ಬುದ್ಧಿವಂತಿಕೆ ಸಾಕು. ಆದರೆ ಮನುಷ್ಯರೊಂದಿಗಿನ ವ್ಯವಹಾರಕ್ಕೆ ಅಷ್ಟೆ ಸಾಲುವುದಿಲ್ಲ, ಪಾಠ ಹೇಳುವುದು ಗೋಡೆಗಳಿಗಲ್ಲ ಅಥವಾ ತಮ್ಮಷ್ಟಕ್ಕೆ ತಾವೇ ಗೊಣಗಿಕೊಳ್ಳುವುದೂ ಅಲ್ಲ.
ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಮೊದಲು TCH ಇತ್ತು. SSLC ಮುಗಿಸಿದವರು ಇದನ್ನು ಮಾಡಬಹುದಿತ್ತು. ಆದರೆ ಈಗ ಆ ಜಾಗೆಯಲ್ಲಿ ಡಿ.ಎಡ್ ಬಂದಿದೆ. ಪಿಯುಸಿ ಮುಗಿಸಿರಬೇಕು. ಹಾಗೇ ಪ್ರೌಢಶಿಕ್ಷಣಕ್ಕೆ ಶಿಕ್ಷಕರಾಗಲು ಬಿ.ಎಡ್. ಇದೆ ಪದವಿ ಪೂರೈಸಿದ ಆನಂತರ ಒಂದು ವರ್ಷದ ಅವಧಿಯ ತರಬೇತಿ ಇದಾಗಿದ್ದು ಈಗ ಇದನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಆದರೆ ಇದೇ ಮಾದರಿಯಲ್ಲಿ ಕಾಲೇಜು ಶಿಕ್ಷಕರಿಗೂ ತರಬೇತಿ ನೀಡಲು ಯಾವುದೇ ಕೋರ್ಸ್‍ಗಳಿಲ್ಲ. ಇತ್ತೀಚಿಗೆ ಪದವಿ ಶಿಕ್ಷಣವನ್ನು ಮೂರರಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಲು ಯೋಚಿಸುತ್ತಿದ್ದಾರೆ. ಆದರೆ ಪದವಿ ಕಾಲೇಜುಗಳ ಶಿಕ್ಷಕರಿಗೆ ಪಾಠ ಹೇಳಲು ತರಬೇತಿಯನ್ನು ನೀಡುವ ಕುರಿತು ಯಾವುದೇ ಯೋಚನೆ ಅಥವಾ ಯೋಜನೆ ಸದ್ಯಕ್ಕಂತೂ ಇದ್ದಂತಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿ ಪೂರೈಸಿದಾಕ್ಷಣ ಪಾಠ ಹೇಳುವ ಕೌಶಲ್ಯವೂ ಪ್ರಾಪ್ತವಾಗಿರುತ್ತದೆ ಎಂಬ ನಂಬಿಕೆ ಎಷ್ಟರ ಮಟ್ಟಿಗೆ ಸರಿ ಎಂಬುವುದೇ ವರ್ತಮಾನದ ಪ್ರಶ್ನೆ.
ಕಾಲೇಜು ಶಿಕ್ಷಕರಿಗೆ ಕಾಲಕಾಲಕ್ಕೆ ಓರಿಯಂಟೇಶನ್ ಮತ್ತು ರಿಪ್ರೆಶನ್ ಕೋರ್ಸ್‍ಗಳನ್ನು ನಡೆಸಲಾಗುತ್ತದೆ ಎಂಬುದೇನೋ ನಿಜ. ಆದರೆ ಒಮ್ಮೆ ಕೆಲಸಕ್ಕೆ ಸೇರಿದ ನಂತರ, ಇದರಲ್ಲಿ ಭಾಗವಹಿಸುವುದು ಕೇವಲ ಪದೋನ್ನತಿಗೆ ಮಾತ್ರವಾಗುತ್ತಿರುವುದು ವಾಸ್ತವ. ಹಾಗಂತ ಇವನ್ನು ನಿರಾಕರಿಸಲಾಗುವುದಿಲ,್ಲ ಆದರೆ ಅದು ಸತತವಾಗಿ ಪ್ರತಿಯೊಬ್ಬರಿಗೂ ಮೂರು ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಸಿಗುವಂತಾದರೆ ಕನಿಷ್ಠ ಆಸಕ್ತಿ ಇರುವವರಿಗಾದರೂ ಅನುಕೂಲವಾದೀತು. ಅದೇನೇ ಇದ್ದರೂ ಇಂದು ಉನ್ನತ ಶಿಕ್ಷಣದಲ್ಲಿ ನಿಜವಾದ ಸುಧಾರಣೆ ಬಯಸುವುದೇ ಆದಲ್ಲಿ, ಗುಣಮಟ್ಟ ಹೆಚ್ಚಿಸಬೇಕೆಂದು ನೈಜ ಕಳಕಳಿಯಾಗಿದ್ದಲ್ಲಿ, ಕಾಲೇಜುಗಳಲ್ಲಿ ಶಿಕ್ಷಕರಾಗುವವರಿಗೆ ಕನಿಷ್ಠ ಒಂದು ವರ್ಷದ ಸೂಕ್ತ ತರಬೇತಿ ನೀಡುವುದರತ್ತ ಗಮನಹರಿಸಬೇಕಾದ್ದು ಅಗತ್ಯವೆನ್ನಿಸುತ್ತದೆ. ಕಾಲೇಜಿನಲ್ಲಿ ಶಿಕ್ಷಕರೇ ಆಗಬೇಕೆಂದು ಬಯಸುವವರಿಗೆ ಮಾತ್ರ ಈ ತರಬೇತಿಯನ್ನು ಕಡ್ಡಾಯಗೊಳಿಸಿ ಕೇವಲ ಪದವಿ ಮಾತ್ರದಿಂದ ಸಂತೃಪ್ತಿ ಪಡುವವರಿಗೆ ಇದರಿಂದ ವಿನಾಯಿತಿ ನೀಡಬಹುದು. ಕಲಿಸಲಿಕ್ಕೆ ಬರುವುದರಲ್ಲಿ ಆಸಕ್ತಿಯುಳ್ಳವರಿಗೆ ಈಗ ರೀಜನಲ್ ಕಾಲೇಜಿನಲ್ಲಿ ಬಿಎಡ್, ಬಿಎಸ್ಸಿ, ಬಿಎಡ್ ಎಂದು ಒಟ್ಟಿಗೆ ನಾಲ್ಕು ವರ್ಷದ ಕಲಿಕೆ ಇರುವಂತೆ ಸ್ನಾತಕೋತ್ತರ ಪದವಿಯಲ್ಲೂ ಇಂಥದ್ದನ್ನೇ ಜಾರಿಗೊಳಿಸಬಹುದು ಅಥವಾ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪೂರೈಸಿದ ಅನಂತರ ವಿಶ್ವವಿದ್ಯಾಲಯಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಕನಿಷ್ಠ ಒಂದು ವರ್ಷದ ತರಬೇತಿ ನೀಡುವ ವ್ಯವಸ್ಥೆ ಜಾರಿಯಾದರೆ ಒಳ್ಳೆಯದಾಗಬಹುದು. ಅಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕಲಿತ ವಿಷಯಗಳನ್ನೆ ಪುನಃ ಪುನಃ ಓದಿ ಪರೀಕ್ಷೆ ಬರೆಯುವ ಪದ್ಧತಿಗೆ ಬದಲಾಗಿ ಕಲಿತದ್ದನ್ನು ಕೌಶಲ್ಯವನ್ನು ನೀಡುವ ಪದ್ಧತಿ ಜಾರಿಯಾದರೆ, ಕ್ಲಾಸ್ ರೂಂ ಒಳಗಡೆಯ ಪಾಠಕ್ಕೆ ಅದು ನೆರವಾದೀತು. ಅದು ಬೋಧನಾ ಕೌಶಲ್ಯ ತರಬೇತಿ (Teacher skill training) ಆದರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದು. ಶಿಕ್ಷಕರ ಗುರಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೇಂದ್ರಿಕೃತವಾಗಿರಬೇಕೆ ವಿನಃ ಕೇವಲ ತಮ್ಮ ಜ್ಞಾನಾಭಿವೃದ್ಧಿಯತ್ತ ಅಲ್ಲ. ಯಾಕೆಂದರೆ ಪಿಹೆಚ್‍ಡಿ ಪಡೆದವರಿಗೆ ಕೂಡ ಆ ವಿಷಯದ ಮೇಲೆ ಅಧಿಕೃತವಾಗಿ ಹೆಚ್ಚಿನ ಜ್ಞಾನವಿರಬಹುದಾದರೂ, ವಿಶ್ವವಿದ್ಯಾಲಯ ನಿಗದಿಗೊಳಿಸಿದ ಪಠ್ಯದ ಬೋಧನೆಯೂ ಒಂದು ಕಲೆ ಎನ್ನುವುದನ್ನು ಒಪ್ಪಿಕೊಳ್ಳುವುದಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ತರಬೇತಿಯ ಚೌಕಟ್ಟು ಇರಬೇಕಾದುದು ಅನಿವಾರ್ಯ.
ಶಿಕ್ಷಕರಿಗೆ ಇರಬೇಕಾದ ಕನಿಷ್ಠ ಶಿಸ್ತು (ವಿಷಯದ ಕುರಿತು ಮತ್ತು ತಮ್ಮ ಡ್ರೆಸ್ ಅನ್ನು ಕುರಿತೂ ಸಹ) ಕಲಿಸುವ ಕೇಂದ್ರಗಳಂತೆ ಅವು ಕರ್ತವ್ಯ ನಿರ್ವಹಿಸುವುದು ಅಗತ್ಯ. ಪಡೆದ ಜ್ಞಾನ ವಿದ್ಯಾರ್ಥಿಗಳಿಗೆ ತಲುಪುವುದು ಸಂವಹನ ಕಲೆಯಿಂದ ಹಾಗಾಗಿ ಇಂಥ ತರಬೇತಿ ಒತ್ತು ನೀಡಬೇಕಾದದ್ದು ಸಂವಹನ ಕಲೆಗೆ, ಭಾಷಾ ಬಳಕೆಗೆ, ಇದಕ್ಕಾಗಿ ಅಲ್ಲಿ ಬಂದೆ ಪಾಠ ಹೇಳುವುದಕ್ಕೆ ಬದಲಾಗಿ ಪಾಠ ಹೇಳಿಸುವ, ಅದನ್ನು ತಿದ್ದಿ ತೀಡುವ ತರಬೇತಿಬೇಕು. ಅದಕ್ಕೆ ಸಂಬಂಧಿಸಿದಂತೆ ಚರ್ಚೆ, ವಿಚಾರ ಸಂಕಿರಣ, ಪ್ರಬಂಧಗಳ ಮಂಡನೆ, ಗುಂಪು ಚರ್ಚೆ, ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಪದ್ಧತಿ ಇವುಗಳಿಗೆ ಆದ್ಯತೆ ಇದ್ದು ಮುಂದೆ ತರಗತಿಗಳಲ್ಲಿ ನಿರ್ಭಯವಾಗಿ ಮತ್ತು ನಿರರ್ಗಳವಾಗಿ ಪಾಠ ಹೇಳಲು ಸಾಧ್ಯವಾಗುವಂತೆ ಆಗಬೇಕಾದ ಅಗತ್ಯವಿದೆ. ಹಾಗೇ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಬಳಕೆ ತಿಳಿದಿರುವುದು ಕಡ್ಡಾಯವಾಗಬೇಕಾದ ಅಗತ್ಯ ಇವತ್ತಿನ ಸಂದರ್ಭದಲ್ಲಿ ಇದೆ. ತಾವು ಬಳಸುವುದಕ್ಕೆ ಮತ್ತು ಬಳಸಲು ಮಾರ್ಗದರ್ಶನ ನೀಡುವುದಕ್ಕೆ ಗೊತ್ತಿದ್ದರೆ, ಪ್ರತಿಯೊಂದಕ್ಕೂ ಟಿಪ್ಪಣಿ ನೀಡುತ್ತ ಸಮಯ ಕಳೆಯುವುದು ತಪ್ಪುತ್ತದೆ. ಕಲಿಕೆಯ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ಎಂಬ ಎಚ್ಚರ ಕಲಿಸುವವರಲ್ಲೂ ಕಲಿಯುವವರಲ್ಲೂ ಸದಾ ಇರುವಂತೆ ನೋಡಿಕೊಳ್ಳಬೇಕಿದೆ.
ಇಂದಿನ ಗೋಳೀಕರಣ (globalization) ವ್ಯವಸ್ಥೆಯೊಳಗೆ ಹೊಂದಿಕೊಳ್ಳುವುದು ಮತ್ತು ಹೊಸ ಹೊಸ ಸಾಧ್ಯತೆಗಳನ್ನು ಅವಕಾಶಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಅಗತ್ಯವಾಗಿರುವುದರಿಂದ ಇದರ ಕುರಿತು ತಮ್ಮ ತಮ್ಮ ವಿಷಯಗಳಿಗೆ ಸಂಬಂಧಿದಂತೆ ಲಭ್ಯವಿರುವ ಸಂಗತಿಗಳನ್ನು ವಿದ್ಯಾಥಿಗಳಿಗೆ ತಿಳಿಹೇಳುವ ಜವಬ್ಧಾರಿಯನ್ನು ಶಿಕ್ಷಕರು ಹೊರಬೇಕಾದ್ದು, ಅವರ ಕರ್ತವ್ಯದ ಒಂದು ಭಾಗವೇ ಅಗಿರಬೇಕು. ಕಾಲೇಜಿನ ಯಾವುದೂ ಒಂದು ಮೂಲೆಯ ಕೊಠಡಿಯಲ್ಲಿ ‘ನೌಕರಿ ಕುರಿತಾದ ಮಾಹಿತಿ ಕೇಂದ್ರ’ ಸ್ಥಾಪಿಸಿ ಕೈ ತೊಳೆದುಕೊಂಡರೆ ಯಾವುದೇ ಪ್ರಯೋಜನವಾಗುವುದು ಅಷ್ಟರಲ್ಲೇ ಇದೆ.
ಶಿಕ್ಷಕನಾದವನಿಗೆ ತಾನು ಜ್ಞಾನ ಸಂಪಾದಿಸಿಕೊಂಡು ಬೆಳೆಯಬೇಕೆಂಬ ಆಸೆಯಷ್ಟೇ ಇದ್ದರೆ ಸಾಲದು ತಾನು ಸಂಪಾದಿಸಿಕೊಂಡದ್ದನ್ನು ವಿದ್ಯಾರ್ಥಿಗಳಿಗೆ ಹಂಚುವ ಚೈತನ್ಯ ಕೂಡ ಇರಬೇಕಾಗುತ್ತದೆ. ಹಾಗಲ್ಲದಿದ್ದಲ್ಲಿ ಒಟ್ಟಾರೆ ಬೆಳವಣಿಗೆ ಅಸಾಧ್ಯ.
ಯಾಕೆ ಈಗೇನಾಗಿದೆ? ಕಾಲೇಜುಗಳಲ್ಲಿ ಪಾಠ ಹೇಳುತ್ತಿಲ್ಲವಾ? ಉತ್ತಮವಾದ ಉಪನ್ಯಾಸಕರಿಲ್ಲವೇ? ಅವರು ವಿದ್ಯಾರ್ಥಿಗಳಿಗೆ ಸೂಕ್ತವಾಗಿ ತಮ್ಮ ಜ್ಞಾನವನ್ನು ಧಾರೆಯರೆಯುತ್ತಿಲ್ಲವೇ? ವಿದ್ಯಾರ್ಥಿಗಳು ಕಲಿಯುತ್ತಿಲ್ಲವೆ ಎಂಬತ್ಯಾದಿ ಪ್ರಶ್ನೆಗಳೆನ್ನೆತ್ತಿ, ಮತ್ತೆ ತರಬೇತಿಯ ಅಗತ್ಯವೇನಿದೆ? ಯಾಕ್ ಸುಮ್ಮನೇ ಒಂದು ವರ್ಷಗಟ್ಟಲೇ ಹಾಳುಮಾಡಿಕೊಳ್ಳಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿರುವುದನ್ನು ತಳ್ಳಿಹಾಕಲಾಗುವುದಿಲ್ಲ.
ಆದರೆ ಒಟ್ಟಾರೆ ಗುಣಮಟ್ಟದ ಹೆಚ್ಚಳಕ್ಕೆ (ಶಿಕ್ಷಕರ ಮತ್ತು ವಿದ್ಯಾರ್ಥಿಗಳ) ಇಂಥದೊಂದ್ದು ತರಬೇತಿಯ ಅಗತ್ಯವಿರುವುದನ್ನು ಅನಗತ್ಯವೆಂದು ವಾದಿಸುವುದಕ್ಕೂ ಮುನ್ನ ವಾಸ್ತವವನ್ನು ಯಾವುದೇ ಪೂರ್ವಗ್ರಹವನ್ನು ಇಟ್ಟುಕೊಳ್ಳದೇ ಗಮನಿಸಿದರೆ, ಸತ್ಯ ದರ್ಶನವಾಗಬಹುದು? ನೆಟ್, ಸ್ಲೇಟ್ ಪರೀಕ್ಷೆಗಳಿಗಾಗಿ ವರ್ಷಗಟ್ಟಲೆ ಕೆಲವೊಮ್ಮೆ ಕೆಲವು ವರ್ಷಗಟ್ಟಲೇ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಇಂಥ ತರಬೇತಿ ಅವಧಿ, ಅಂಥ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ ಹೊರಬರುವುದಕ್ಕೂ ಸಹಾಯಕವಾಗುವಂತಿದ್ದರೆ, ಅಧ್ಯಯನಕ್ಕೆ ಪೂರಕವಾಗುವಂತಿದ್ದರೆ ಎಂದು ಚಿಂತಿಸುವುದು ಕೂಡ ಸೂಕ್ತವೆನಿಸುತ್ತದೆ. ಇಂಥ ಯಾವುದೇ ತರಬೇತಿಗಳು ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ವ್ಯರ್ಥವಲ್ಲ, ಮುಂದೆ 25-30 ವರ್ಷಗಳಷ್ಟು ಕಾಲ ಬೊಧಿಸುವ ವೃತ್ತಿಗಿಳಿಯುವವರಿಗೆ ಒಂದು ವರ್ಷದ ತರಬೇತಿ ನಿರುಪಯುಕ್ತವಾಗದೆ ಅವರನ್ನು ಅಷ್ಟು ವರ್ಷ ತಾಳಿಕೊಳ್ಳುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲದು ಎಂದಷ್ಟೆ ಹೇಳಿದರೆ ಸಾಕು ಎನ್ನಿಸುತ್ತದೆ.
ರವೀಂದ್ರ ಭಟ್ ಕುಳಿಬೀಡು
ಮುದ್ದು ಮಕ್ಕಳಿಗೆ ಗ್ರಾಜುಯೇಷನ್ ಡೇ
ಪುಟಾಣಿ ಮಕ್ಕಳ ಕಲರವ ಶಾಲೆಯೆಲ್ಲಾ ತುಂಬಿಕೊಂಡಿತ್ತು. ಒಂದೆಡೆ ಮಕ್ಕಳು ಹಾಡುತ್ತಿದ್ದರೆ, ಮತ್ತೊಂದೆಡೆ ಥರ್ಮೋಕೋಲ್ ಬಳಸಿ ಕೋಣೆಯ ತುಂಬೆಲ್ಲಾ ಜೋಡಿಸಿಟ್ಟಿದ್ದ ವಿವಿಧ ಪ್ರತಿಕೃತಿಗಳನ್ನು ಮಕ್ಕಳು ತಮ್ಮ ಮುದ್ದು ಮಾತುಗಳಿಂದ ಬಣ್ಣಿಸುತ್ತಿದ್ದವು.
ನಗರದ ಹೊರವಲಯದ ಬಿ.ಜಿ.ಎಸ್ ಶಾಲೆಯಲ್ಲಿ ಶನಿವಾರ ಯು.ಕೆ.ಜಿ ಪಾಸಾಗಿ ಒಂದನೇ ತರಗತಿಗೆ ಹೋಗುವ ಪುಟಾಣಿಗಳಿಗೆ ಗ್ರಾಜುಯೇಷನ್ ಡೇ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪುಟ್ಟ ಮಕ್ಕಳು ತಮ್ಮ ತೊದಲು ನುಡಿಗಳಿಂದ ಹಾಡುತ್ತಾ, ಕುಣಿಯುತ್ತಾ, ತಮ್ಮ ಕಲಿಕೆಯನ್ನು ಪ್ರದರ್ಶಿಸುತ್ತಾ ಪೋಷಕರು ಹಾಗೂ ಶಿಕ್ಷಕರನ್ನು ರಂಜಿಸಿದರು. ಶಾಲೆಯ ವಿವಿಧ ಕೊಠಡಿಗಳಲ್ಲಿ ಜೋಡಿಸಿಟ್ಟಿದ್ದ ಪ್ರಾಣಿಗಳು, ಪಕ್ಷಿಗಳು, ಲಾಂಚನ, ಬಾವುಟ, ಗಿಡಗಳು ಮುಂತಾದ ಪ್ರತಿಕೃತಿಗಳನ್ನು ಮಕ್ಕಳು ಪಟಪಟನೆ ಬಣ್ಣಿಸುತ್ತಿದ್ದುದು ಆಕರ್ಷಕವಾಗಿತ್ತು.
‘ಮಕ್ಕಳಿಗೆ ಶಾಲೆ ಆಕರ್ಷಣೀಯವಾಗಿರಬೇಕು. ನಲಿಯುತ್ತಾ ಅವರು ಕಲಿಕೆ ನಡೆಸಬೇಕು. ಮಾತನಾಡುವ, ಬರೆಯುವ, ಹಾಡುವ, ಮನಸ್ಸಿನಲ್ಲಿ ಚಿತ್ರಣ ಮೂಡಿಸಿಕೊಳ್ಳುವ ಅವರ ಕೌಶಲ್ಯಗಳು ವೃದ್ಧಿಸಬೇಕು. ಒಂದನೇ ತರಗತಿಗೆ ಹೋಗುವ ಮುನ್ನ ಅತ್ಯಂತ ಕ್ರಿಯಾಶಿಲವಾದ ಮಕ್ಕಳ ಮನಸ್ಸಿನಲ್ಲಿ ಅಕ್ಷರ, ಕಥೆ, ಹಾಡು, ಚಿತ್ರ ಮುಂತಾದ ಅವರನ್ನು ಅರಳಿಸುವ ಬೆಳೆಸುವ ಅಂಶಗಳು ಮೂಡಿಸುವುದು ನಮ್ಮ ಉದ್ದೇಶ. ಈ ಉದ್ದೇಶ ಈಡೇರಿದ ಸಂಭ್ರಮದಲ್ಲಿ ಮಕ್ಕಳಿಗೆ ಗ್ರಾಜುಯೇಷನ್ ಡೇ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳ ಕಲಿಕೆಯ ಪ್ರದರ್ಶನ ಕಂಡು ಪೋಷಕರು ಮತ್ತು ಕಲಿಸಿದ ಶಿಕ್ಷಕರು ಧನ್ಯತೆ ಕಾಣುವ ಗಳಿಗೆಯಿದು’ ಎಂದು ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ಶಾರದ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಎಂ.ಕೆಂಪಣ್ಣ ಅವರಿಗೆ 2015ನೇ ಸಾಲಿನ ಕನ್ನಡರತ್ನ ಪ್ರಶಸ್ತಿ
ಶಿಡ್ಲಘಟ್ಟದ ಶಾರದ ಬಾಲಕಿಯರ ಪ್ರೌಢಶಾಲೆಯ ಕನ್ನಡ ಶಿಕ್ಷಕ ಎಂ.ಕೆಂಪಣ್ಣ ಅವರ ಕನ್ನಡ ಸೇವೆಯನ್ನು ಗುರುತಿಸಿ ಈಚೆಗೆ ಚಿತ್ರದುರ್ಗದ ಸಿರಿಗನ್ನಡ ಪ್ರತಿಭಾ ಪ್ರಕಾಶನ ಸಂಸ್ಥೆಯವರು 2015ನೇ ಸಾಲಿನ ಕನ್ನಡರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.
ಎಂ.ಶಶಿಧರ್ ಅವರ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ
ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಥಾಯ್ಲೆಂಡ್ ದೇಶದ ರಾಜಧಾನಿ ಬ್ಯಾಂಕಾಕ್ನಲ್ಲಿ ಈಚೆಗೆ ಮಾಜಿ ಉಪ ಪ್ರಧಾನಿ ಕೋರ್ನ್ ದಬ್ಬರನ್ಸಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ವೈವಿಧ್ಯಮಯ ಹೂಗಳ ಮೆರವಣಿಗೆ
ಶಿವರಾತ್ರಿ ಕಳೆಯುತ್ತಿದ್ದಂತೆ ಶಿವಶಿವಾ ಎನ್ನುವಂತೆ ತಾಪಮಾನ ಏರತೊಡಗಿದೆ. ಬೇಸಿಗೆ ಪ್ರಾರಂಭವಾಯಿತು ಎನ್ನುತ್ತಾ ಬಿಸಿಲಿನ ತಾಪಮಾನಕ್ಕೆ ಜನರು ಛತ್ರಿ, ಟೊಪ್ಪಿಗೆಯ ಆಸರೆ ಪಡೆಯುತ್ತಿದ್ದಾರೆ. ಆದರೆ ಋತುಗಳ ರಾಜ ವಸಂತ ಯುಗಾದಿಯ ಮುನ್ನ ಆಗಮಿಸಿ ಮರಗಿಡಗಳನ್ನು ಚಿಗುರಿಸುತ್ತಾ, ಹಲವೆಡೆ ಸುಂದರ ಹೂವರಳಿಸುತ್ತಾ ಸಾಗಿದ್ದಾನೆ. ಬಿಸಿಲಿನ ಝಳಕ್ಕೆ ಹೆದರಿ ತಲೆ ತಗ್ಗಿಸಿ ನಿಸರ್ಗದ ಚೆಲುವನ್ನು ನೋಡಲು ಮರೆಯದಿರಿ ಎನ್ನುತ್ತಾ ಕರೆನೀಡಿದ್ದಾನೆ.
ನಗರದ ಹೊರವಲಯದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಈಗ ಹಳದಿ ಹೂಗಳ ಪ್ರದರ್ಶನವಿದೆ. ಹಳದಿ ರಂಗು ಚೆಲ್ಲಿದಂತೆ ಕಾಣುವ ಈ ಹೂವು ಬಿಗ್ನಾನಿಯಸ್ ಮರಗಳ ಗುಂಪಿಗೆ ಸೇರುವ ‘ಟಾಬೆಬುಯಾಸ್’ ಎನ್ನುವ ಮರದ್ದು. ಅಮೆರಿಕಾದಲ್ಲಿ ಇದನ್ನು ಕರೆಯುವುದು ‘ಚಿನ್ನದ ಮರ’ ಎಂದು ಕರೆಯುತ್ತಾರೆ. ವಸಂತ ಋತುವಿನ ಆಗಮನಕ್ಕೆ ಭವ್ಯ ಪರದೆ ನಿರ್ಮಿಸಿಕೊಡುವ ಈ ಹಳದಿ ಗಂಟೆ ಹೂಗಳು ಜೇನುನೊಣಗಳಿಗೆ ಬಹುಪ್ರಿಯ. ಈ ಹೂಗಳ ಮಧುಪಾತ್ರೆಯಿಂದ ಮಧು ಹೀರಲು ಜೇನುನೊಣಗಳ ಗುಂಪು ಈ ಮರಗಳಿಗೆ ದಾಳಿ ಇಡುತ್ತವೆ.
ಚಳಿಯಲ್ಲಿ ಮುದುಡಿ ಹೋಗಿದ್ದ ಸಸ್ಯಲೋಕದಲ್ಲಿ ಈಗ ಜೀವ ಸಂಚಾರ. ನೇಸರನ ಪ್ರಖರತೆ ಹೆಚ್ಚುತ್ತಿದ್ದಂತೆ ಬೋಳು ಬೋಳಾಗಿದ್ದ ಮರ-ಗಿಡಗಳೆಲ್ಲ ಹೊಸ ಚಿಗುರು ಕಾಣಿಸಿಕೊಂಡು ಹೊಸ ರೂಪ ಪಡೆಯುತ್ತಿವೆ. ನೂತನ ವರ್ಷಾರಂಭದ ಮುನ್ಸೂಚನೆ ಈಗಾಗಲೇ ಕಾಣಿಸಿಕೊಂಡು ಹೇಮಂತ ಋತು ಕಳೆದು ಶಿಶಿ ಋತುವಿನ ಆಗಮನಕ್ಕೆ ಸ್ವಾಗತ ಶುರುವಾಗಿದೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಕ್ರಾಸ್ ಬಳಿ ಗುಲಾಬಿ ಬಣ್ಣದ ಹೂಗಳಿರುವ ಪಿಂಕ್ ಟ್ರಂಪೆಟ್ ಮರ, ಮುತ್ತುಗದ ಮರ, ಹನುಮಂತಪುರ ರಸ್ತೆಯಲ್ಲಿ ಮತ್ತು ನ್ಯಾಯಾಲಯದ ಆವರಣದಲ್ಲಿರುವ ಗುಲ್ಮೊಹರ್ ಮರಗಳು, ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿನ ಆಕಾಶ ಮಲ್ಲಿಗೆ, ಗುಲಗಂಜಿ ಮರ, ನಗರದ ಅಂಚೆ ಕಚೇರಿ ರಸ್ತೆಯಲ್ಲಿರುವ ಮಳೆ ಮರಗಳು … ನೋಡುತ್ತಾ ಸಾಗಿದಂತೆ ಬಣ್ಣ ಬಣ್ಣದ ಹೂಗಳ ಸಂಖ್ಯೆ ಬೆಳೆಯುತ್ತದೆ.
‘ಋತುಮಾನಕ್ಕೆ ತಕ್ಕಂತೆ ವೈವಿಧ್ಯಮಯ ಹೂಗಳು ನಿಸರ್ಗದಲ್ಲಿ ಕಾಣಸಿಗುತ್ತವೆ. ನಮ್ಮ ಸುತ್ತಮುತ್ತಲಿನ ಮರ, ಗಿಡ, ಅವುಗಳಲ್ಲಿ ಅರಳುವ ವಿವಿಧ ಹೂಗಳ ಪರಿಚಯ ಮಾಡಿಕೊಳ್ಳಬೇಕು ಮತ್ತು ಮಕ್ಕಳಿಗೆ ತೋರಿಸಿ ತಿಳಿಸಬೇಕು. ಈ ಹೂಗಳು ಮತ್ತು ಮರಗಳನ್ನಾಶ್ರಯಿಸಿ ಬದುಕುವ ಅಸಂಖ್ಯ ಕೀಟ, ಪಕ್ಷಿ, ಚಿಟ್ಟೆಗಳ ಪರಿಚಯವೂ ಇದರ ಮೂಲಕ ಆಗುತ್ತದೆ. ನಮ್ಮ ಸುತ್ತಲಿನ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುವ ಮನಸ್ಥಿತಿ ಬೆಳೆದಲ್ಲಿ ಅವುಗಳ ಸಂರಕ್ಷಿಸುವ ತುಡಿತವೂ ಮೂಡುತ್ತದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಣ ಸಂಯೋಜಕ ತಲದುಮ್ಮನಹಳ್ಳಿ ಆರ್.ಕೃಷ್ಣಪ್ಪ.
–ಡಿ.ಜಿ.ಮಲ್ಲಿಕಾರ್ಜುನ.
ಕೆಟ್ಟ ಯಂತ್ರಗಳಿಗೆ ಪೋಲಾಗುತ್ತಿರುವ ನಗರಸಭೆ ಹಣ
ಶಿಡ್ಲಘಟ್ಟದ ಪುರಸಭೆಯು ನಗರಸಭೆಯಾಯಿತು. ಅನುದಾನಗಳು ಹೆಚ್ಚಾಗಿ, ಅಭಿವೃದ್ಧಿ ಹೆಚ್ಚುತ್ತದೆ ಎಂದು ಜನಪ್ರತಿನಿಧಿಗಳು ನೀಡುತ್ತಿರುವ ಆಶ್ವಾಸನೆ ಕೇವಲ ಆಶಾಗೋಪುರದಂತೆ ಕಾಣಿಸುತ್ತಿದೆ. ಅದಕ್ಕೆ ಪೂರಕವಾಗುವಂತೆ ಲಕ್ಷಾಂತರ ಬೆಲೆ ಬಾಳುವ ಹಲವಾರು ಉಪಕರಣಗಳು ಮತ್ತು ವಾಹನಗಳು ನಗರದ ವಿವಿದೆಡೆ ಪಳೆಯುಳಿಕೆಗಳಂತೆ ಕೊಳೆಯುತ್ತಿವೆ.
ನಗರಸಭೆ ಕಟ್ಟಡಕ್ಕೆ ತಿಲಕದಂತೆ ಕಚೇರಿ ಆವರಣದಲ್ಲಿ ಗಾಳಿಯಿಂದ ನೀರನ್ನು ತಯಾರಿಸಬಹುದೆಂದು ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತರಿಸಿದ ಯಂತ್ರ ಕೆಲಸ ಮಾಡದೆ ಬಿಸಿಲು ಗಾಳಿಗೆ ಮೈಯೊಡ್ಡಿ ನಿಂತಿದೆ. ಅಂಚೆ ಕಚೇರಿ ಮುಂಭಾಗದಲ್ಲಿ ಜೆಸಿಬಿ ಯಂತ್ರವು ತುಕ್ಕುಹಿಡಿಯುತ್ತಾ ನಿಂತಿದ್ದು, ಯಂತ್ರದೊಳಗೆ ನಿಂತ ನೀರು ಹಾಗೂ ಕಸ ತ್ಯಾಜ್ಯವು ಸೊಳ್ಳೆಗಳ ತಾಣವಾಗಿ ಬದಲಾಗಿದೆ. ಸೋಕು ನಿವಾರಕ ಸಿಂಪಡಿಸಿ ರೋಗ ತಡೆಗಟ್ಟಬೇಕಾದ ನಗರಸಭೆ ಇಲ್ಲಿ ಸೋಂಕು ಉತ್ಪಾದನಾ ಘಟಕವಾಗಿದೆ.
ನಗರಸಭೆಯು ತಲಾ 9 ಲಕ್ಷ ರೂಪಾಯಿಗಳು ಬೆಲೆ ಬಾಳುವ ಐದು ಟ್ರಾಕ್ಟರ್ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಕೆಟ್ಟು ಗೋಡೋನ್ನಲ್ಲಿ ಕೊಳೆಯುತ್ತಿದೆ. ವಿಶೇಷವೆಂದರೆ ಈ ಕೆಟ್ಟಿರುವ ಟ್ರಾಕ್ಟರ್ ರಿಪೇರಿಗೆ ಕಳೆದ ವರ್ಷ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಸುಮಾರು 24 ಲಕ್ಷ ರೂಪಾಯಿ ಬೆಲೆಯ ಒಂದು ಜೆಸಿಬಿ ಕಾರ್ಯನಿರ್ವಹಿಸುತ್ತಿದ್ದರೆ, 10 ಲಕ್ಷ ರೂಪಾಯಿಯ ಜೆಸಿಬಿ ಮಾತ್ರ ಹಲವಾರು ವರ್ಷಗಳಿಂದ ತುಕ್ಕುಹಿಡಿದು ನಿಂತಿದೆ. ಇದರೊಂದಿಗೆ ಒಳಚರಂಡಿ ಶುದ್ದೀಕರಿಸುವ 12 ಲಕ್ಷ ರೂಪಾಯಿಗಳ ಯಂತ್ರ, ದೀಪಗಳನ್ನು ದುರಸ್ತಿಗೊಳಿಸುವ 10 ಲಕ್ಷ ರೂಪಾಯಿಗಳ ವೆಚ್ಚದ ಕ್ರೇನ್ ಅಳವಡಿಸಿರುವ ಜೀಪ್, 17 ಲಕ್ಷ ರೂಪಾಯಿಗಳ ಶವಸಾಗಾಣಿಕಾ ವಾಹನವೂ ನಗರಸಭೆಯ ಆಸ್ತಿಯಾಗಿದೆ. ನಗರದ ಹಲವೆಡೆ ಕಸ ಹಾಕಲೆಂದು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಂದಿದ್ದ ಕಂಟೈನರ್ಗಳು ಈಗಾಗಲೇ ಹಲವೆಡೆ ಮಾಯವಾಗಿವೆ.
‘ಸಾರ್ವಜನಿಕರ ಹಣವನ್ನು ನಗರಸಭೆಯವರು ಅವೈಜ್ಞಾನಿಕವಾಗಿ ದುರುಪಯೋಗ ಮಾಡುತ್ತಾ, ಪೋಲು ಮಾಡುತ್ತಾ, ಕಣ್ಣಿಗೆ ರಾಚುವಂತೆ ಕೆಟ್ಟ ಯಂತ್ರಗಳನ್ನಿಟ್ಟುಕೊಂಡು ರಿಪೇರಿಗೆಂದು ಹಣ ಖರ್ಚು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಮೌನದಿಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತವೆ. ಕಸವಿಲೇವಾರಿ, ನೀರಿನ ಸಮರ್ಪಕ ಹಂಚಿಕೆಯೆಡೆಗೆ ಗಮನ ಹರಿಸದೇ ಅಧಿಕಾರಿಗಳು ಕೆಟ್ಟ ಯಂತ್ರಗಳಿಗೆ ಹಣ ಸುರಿಯುತ್ತಿರುವುದು ಕಂಡಾಗ ನಗರದ ಅಭಿವೃದ್ಧಿಯ ಬಗ್ಗೆ ನಿರಾಶೆಯಾಗುತ್ತದೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

