19.1 C
Sidlaghatta
Tuesday, December 30, 2025
Home Blog Page 978

ನೀರಿಗಾಗಿ ಮನವಿ

0

ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಶುಕ್ರವಾರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಡಿ.ಎಸ್. ಗುರುಬಸಪ್ಪ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣಪತಿ ಸಾಕರೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ೧,೫೦೦ ಕ್ಕೂ ಹೆಚ್ಚು ಮಂದಿ ಜನಸಂಖ್ಯೆಯಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ, ಈಗಿರುವ ೨ ಕೊಳವೆಬಾವಿಗಳಲ್ಲಿ ಕೇವಲ ಒಂದಿಂಚು ನೀರು ಮಾತ್ರ ಬರುತ್ತಿದ್ದು, ಕೂಡಲೇ ೨ ಕೊಳವೆಬಾವಿಗಳನ್ನು ಕೊರೆಯಿಸಿಕೊಡಬೇಕು ಎಂದು ಅವರು ಸಲ್ಲಿಸಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರಧಾನಕಾರ್ಯದರ್ಶಿ ಆನೂರು ಬಾಲಮುರಳೀಕೃಷ್ಣ, ಭಕ್ತರಹಳ್ಳಿ ಪ್ರತೀಶ್, ದೊಡ್ಡತೇಕಹಳ್ಳಿ ಕದಿರಪ್ಪ, ಆನೆಮಡಗು ಶಿವಣ್ಣ, ಡಿ.ವಿ.ನಾರಾಯಣಸ್ವಾಮಿ, ಎಚ್.ಕೆ.ದೇವರಾಜ್, ಚಂದ್ರಶೇಖರ್, ಗೋವಿಂದಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಕುರಿಗಳ ಬಂಡ ತೆಗೆಯುವವರಿಗೆ ಹೆಚ್ಚಿರುವ ಬೇಡಿಕೆ

0

ಕುರಿ ಉಣ್ಣೆ ತೆಗೆಯುವವರಿಗೆ ಬೇಡಿಕೆ ಹೆಚ್ಚಿದೆ. ಹಿಂದೆ ಕುರಿ ಸಾಕಿರುವವರ ಮನೆಯ ಬಳಿ ಬಂದು ಉಣ್ಣೆಯ ಕಂಬಳಿ ಕೊಟ್ಟು ಕುರಿಗಳ ಬಂಡ(ತುಪ್ಪಳ)ವನ್ನು ತೆಗೆಯುತ್ತಿದ್ದ ಕಸುಬುದಾರರಿದ್ದರು. ಆದರೆ ಈ ಕಸುಬನ್ನು ನೆಚ್ಚಿದಲ್ಲಿ ಆರ್ಥಿಕವಾಗಿ ಗಿಟ್ಟುವುದಿಲ್ಲವೆಂದು ಅನೇಕರು ಈ ಕಸುಬನ್ನು ತೊರೆದಿದ್ದಾರೆ.
ಮಳ್ಳೂರಿನಲ್ಲಿರುವ ಮೂವರು ಅನುಭವಿ ಬಂಡ ತೆಗೆಯುವವರಿಗೆ ಬೇಡಿಕೆಯಿದ್ದರೂ ಅವರೂ ಹೆಚ್ಚಿಗೆ ಸಂಪಾದಿಸಲಾಗದೆ ಈ ಕಸುಬಿನ ಕೊನೆಯ ಕೊಂಡಿಯಂತಿದ್ದಾರೆ.

13mar3
ಕುರಿ ಉಣ್ಣೆ ಕತ್ತರಿಸುವ ಕತ್ತರಿ

ಕುರಿಗಳ ಉಣ್ಣೆ ಕನಿಷ್ಠ ವರ್ಷಕ್ಕೊಮ್ಮೆ ಕತ್ತರಿಸುವುದು ರೂಢಿ. ಅದರಿಂದ ಅವುಗಳ ಬೆಳವಣಿಗೆ ಹಾಗೂ ರೋಗ ತಡೆಯುವಿಕೆಯೂ ಸಾಧ್ಯ. ಆದರೆ ಹಿಂದೆ ತಾವೇ ಬಂದು ತುಪ್ಪಳ ತೆಗೆಯುತ್ತಿದ್ದವರು ಈಗ ಕಡಿಮೆಯಾಗಿರುವುದರಿಂದ ಕುರಿ ಸಾಕಿರುವವರು ಕುರಿಗೆ ತಲಾ ಇಷ್ಟೆಂದು ಕಸುಬುದಾರರಿಗೆ ಹಣ ತೆತ್ತು ತಮ್ಮ ಕುರಿಗಳ ಉಣ್ಣೆ ತೆಗೆಸುತ್ತಾರೆ. ಆ ಕಸುಬುದಾರರಿಗೆ ಬೇಡಿಕೆಯಿದ್ದರೂ ಅವರಿಗೂ ಹಲವು ಸಮಸ್ಯೆಗಳಿವೆ.
‘ಒಂದು ಕುರಿಗೆ ಬಂಡ ತೆಗೆಯಲು ರೈತರು 20 ರೂಪಾಯಿ ಕೊಡುತ್ತಾರೆ. ಆರು ತಿಂಗಳು ನಾವು ಕೂಡಿಟ್ಟ ಉಣ್ಣೆಗೆ ಸುಮಾರು 10 ಸಾವಿರ ರೂಪಾಯಿಗಳು ಸಿಗುತ್ತದೆ. ಈ ಉಣ್ಣೆಯ ಕಾರ್ಖಾನೆಗಳೂ ವಿರಳವಾಗಿರುವುದರಿಂದ ಕೆಲ ದಳ್ಳಾಳಿಗಳಷ್ಟೇ ಬಂದು ಖರೀದಿಸುತ್ತಾರೆ. ಈ ಉಣ್ಣೆಯನ್ನು ಕೂಡಿಟ್ಟು ಹುಳು ಬೀಳದಂತೆ ಕಾಪಾಡುವುದೂ ಕಷ್ಟಕರ. ಕೆಲವೆಡೆ ಈ ಕಷ್ಟಕ್ಕೆ ಹೆದರಿ ತಿಪ್ಪೆಗೆ ಬಿಸಾಡುವುದೂ ಉಂಟು. ನಾವು ಚಿಕ್ಕಂದಿನಿಂದ ಕಲಿತ ವಿದ್ಯೆಯನ್ನು ಕುಲಕಸುಬೆಂದು ಬಿಡಲಾರದೆ ಮುಂದುವರೆಸಿದ್ದೇವೆ. ಆದರೆ ನಮ್ಮ ಮುಂದಿನ ಜನಾಂಗ ಇದನ್ನು ಅವಲಂಬಿಸಿಲ್ಲ’ ಎಂದು ಬಂಡ ತೆಗೆಯುವ ಮಳ್ಳೂರಿನ ಲಿಂಗಪ್ಪ ತಿಳಿಸಿದರು.
‘ನಾನು ಚಿಕ್ಕಂದಿನಲ್ಲಿದ್ದಾಗ ಈ ಬಂಡ ತೆಗೆಯುವ ಕತ್ತರಿ 3 ರೂಪಾಯಿಯಿತ್ತು. ಆದರೆ ಈಗದು 800 ರೂಪಾಯಿಗಳಾಗಿದೆ. ಅದನ್ನು ಸೂಲಬೆಲೆ ಹತ್ತಿರವಿರುವ ಗಿಡ್ಡಪ್ಪನಹಳ್ಳಿಯಲ್ಲಿ ಮಾತ್ರ ತಯಾರಿಸಲಾಗುತ್ತದೆ. ಬಂಡ ಕತ್ತರಿಸುತ್ತಾ ನಮ್ಮ ಕೈಯೆಲ್ಲಾ ಕಾಯಿಗಟ್ಟಿವೆ. ಹಾಗೆಂದು ನಾವೇನೂ ಆರ್ಥಿಕವಾಗಿ ಚೇತರಿಕೆ ಕಂಡಿಲ್ಲ’ ಎಂದು ತಮ್ಮ ಕಷ್ಟವನ್ನವರು ವಿವರಿಸಿದರು.
‘ಹಿಂದೆ ನಾವು ನೂರಾರು ಕುರಿಗಳನ್ನು ಸಾಕುತ್ತಿದ್ದೆವು. ಆದರೆ ಮೇವು ಮತ್ತು ನೀರಿನ ಸಮಸ್ಯೆಯಿಂದ ಈಗ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಕುರಿ ಬಂಡ ಕತ್ತರಿಸುವವರು ಬಹಳಷ್ಟು ಮಂದಿ ಇದ್ದರು. ನಮಗೆ ಕುರಿ ಉಣ್ಣೆಯ ಕಂಬಳಿ ಕೊಟ್ಟು ಕತ್ತರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬಂಡ ಕತ್ತರಿಸುವವರು ವಿರಳವಾಗಿದ್ದಾರೆ. ನಾವೇಕುರಿಗಿಷ್ಟು ಎಂದು ಹಣ ಕೊಟ್ಟು ಕತ್ತರಿಸಿಸಬೇಕಿದೆ’ ಎಂದು ಕುರಿಸಾಕಾಣಿಕೆದಾರ ಚೌಡಸಂದ್ರ ರಾಮಕೃಷ್ಣಪ್ಪ ತಿಳಿಸಿದರು.

ಚೌಡಸಂದ್ರ ಗ್ರಾಮದಲ್ಲಿ ಕಾಲುಬಾಯಿ ಜ್ವರದ ಲಸಿಕೆ

0

ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ರಕ್ಷಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಸುಗಳಿಗೆ ಮಾರ್ಚ್ 9ರಿಂದ 25ರವರೆಗೆ ಎಂಟನೇ ಸುತ್ತಿನ ಲಸಿಕಾ ಆಂದೋಲನ ಕೈಗೊಂಡಿದೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಲಸಿಕೆ ಕಾರ್ಯಕ್ರಮದಲ್ಲಿ ಗುರುವಾರ ಹಾಜರಿದ್ದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಜ್ವರ ಬರುವುದಕ್ಕಿಂತ ಮುಂಚೆ ಜಾಗೃತರಾಗಿ ಲಸಿಕೆ ಹಾಕಿಸುವುದು ಸೂಕ್ತ. ಪ್ರತಿ ರಾಸುಗಳಿಗೂ ಲಸಿಕೆ ಹಾಕಿಸಬೇಕು. ಎಲ್ಲ ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ ಅಂದರೆ ಹಸು, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳಲ್ಲಿ ವೈರಾಣುಗಳಿಂದ ಈ ರೋಗ ಹರಡುತ್ತದೆ. ಇದು ಸಾಂಕ್ರಾಮಿಕವಾಗಿದ್ದು, ಅತಿ ಬೇಗನೆ ಒಂದರಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರದ ಮೂಲಕ ಹರಡುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನ 274 ಜನವಸತಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಈ ಗ್ರಾಮಗಳಲ್ಲಿ 34,519 ದನಗಳು, 6,957 ಎಮ್ಮೆಗಳು, 175 ಹಂದಿಗಳು ಸೇರಿದಂತೆ 41,651 ಜಾನುವಾರುಗಳಿವೆ. ಕಳೆದ ನಾಲ್ಕು ದಿನಗಳಲ್ಲಿ 87 ಗ್ರಾಮಗಳಲ್ಲಿ ಲಸಿಕೆ ಹಾಕಲಾಗಿದೆ. 11,911 ದನಗಳು, 1904 ಎಮ್ಮೆಗಳು, 44 ಹಂದಿಗಳು ಸೇರಿದಂತೆ ಒಟ್ಟು 13,859 ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ವಾತಾವರಣ ಬದಲಾವಣೆ ಬರುವುದರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬರುವ ಸನ್ನಿವೇಶ ಇರುತ್ತದೆ. ಅದಕ್ಕೆ ಮುಂಜಾಗ್ರತ ಕ್ರಮವಾಗಿ ಪಶುಪಾಲನೆ ಇಲಾಖೆಯಿಂದ ಉಚಿತ ಲಸಿಕೆ ಹಾಕಲಾಗುತ್ತಿರುವುದರಿಂದ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ವರ್ಷ ಮಳಮಾಚನಹಳ್ಳಿಯಲ್ಲಿ ಹಾಗೂ ಲಕ್ಕಹಳ್ಳಿಯಲ್ಲಿ ಹಲವು ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿ ಅಪಾರ ನಷ್ಟವುಂಟಾಗಿತ್ತು. ಈ ಲಸಿಕೆ ಹಾಕುವುದರಿಂದ ಎರಡು ದಿನ ಹಾಲು ಕಡಿಮೆಯಾಗುವುದು ಬಿಟ್ಟರೆ ಯಾವುದೇ ತೊಂದರೆಯಿಲ್ಲ. ಮೂಢನಂಬಿಕೆ ಬಿಟ್ಟು ಜನರು ಲಸಿಕೆ ಹಾಕಿಸುವಂತೆ ಅವರು ತಿಳಿಸಿದರು.
ಮೇಲೂರು ಪಶು ಆಸ್ಪತ್ರೆಯ ದೇವರಾಜ್, ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದರು.

ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ಪ್ರಾರಂಭ

0

ದ್ವಿತೀಯ ಪಿಯುಸಿ ಯ ವಾರ್ಷಿಕ ಪರೀಕ್ಷೆಗಳು ಗುರುವಾರ ಆರಂಭವಾಗಿದ್ದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಲಾ ಒಂದೊಂದು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೧,೦೩೪ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಮಳ್ಳೂರು ಸಮೀಪದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ೪೩೧ ವಿದ್ಯಾರ್ಥಿಗಳು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ೫೮೩ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದರು.
ಮೊದಲ ದಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಾಸಾಯನ ಶಾಸ್ತ್ರ ವಿಷಯವನ್ನು ಎದುರಿಸಿದ್ದಾರೆ.
ಸರ್ಕಾರಿ ಪ್ರೌಢಶಾಲಾ ಕೇಂದ್ರದಲ್ಲಿ ೧೭ ಮಂದಿ ಹಾಗೂ ವಿವೇಕಾನಂದ ಕಾಲೇಜಿನ ಕೇಂದ್ರದಲ್ಲಿ ೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಇನ್ನುಳಿದಂತೆ ಎಲ್ಲರೂ ಹಾಜರಾಗಿ ತಮ್ಮ ಭವಿಷ್ಯದಲ್ಲಿ ಭದ್ರ ಬುನಾದಿ ಹಾಕಬಲ್ಲ ಪರೀಕ್ಷೆಯನ್ನು ಎದುರಿಸಿದರು.
ಬೆಳಗ್ಗೆ ೯ ಗಂಟೆಗೆ ಸರಿಯಾಗಿ ಆರಂಭವಾದ ಪರೀಕ್ಷೆ ಮದ್ಯಾಹ್ನ ೧೨.೧೫ಕ್ಕೆ ಮುಗಿಯಿತು. ಪರೀಕ್ಷೆಗೂ ಮುನ್ನ ೧೦ ನಿಮಿಷಗಳ ಮುನ್ನವಷ್ಟೆ ಪರೀಕ್ಷಾರ್ಥಿಗಳಿಗೆ ಪ್ರವೇಶ ನೀಡಲಾಯಿತು. ಸರಿಯಾಗಿ ೯ ಗಂಟೆಗೆ ಎರಡೂ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಯಿತು.
ಪದವಿ ಪೂರ್ವ ಪರೀಕ್ಷಾ ಮಂಡಳಿಯ ಸೂಚನೆಯಂತೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲೂ ಪರೀಕ್ಷಾರ್ಥಿಗಳಿಗೆಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತಲ್ಲದೆ ಶೌಚಾಲಯದ ವ್ಯವಸ್ಥೆಯೂ ಇತ್ತು.
ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರಾದ ಎಂ.ಆನಂದ್ ಹಾಗೂ ವಿವೇಕಾನಂದ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರಾದ ಚಂದ್ರಕುಮಾರ್ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದು ಎರಡೂ ಕೇಂದ್ರಗಳಲ್ಲೂ ತಲಾ ಒಬ್ಬೊಬ್ಬರು ಪ್ರಶ್ನೆ ಪತ್ರಿಕೆ ಪಾಲಕರು, ಉತ್ತರ ಪತ್ರಿಕೆ ಪಾಲಕರು, ಕಚೇರಿ ಅಧೀಕ್ಷಕರು ಕಾರ್ಯನಿರ್ವಹಿಸಿದರು. ಜತೆಗೆ ವಿವಿಧ ಅಧಿಕಾರಿಗಳ ಸಂಚಾರಿ ಜಾಗೃತ ದಳಗಳೂ ಸಹ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿದ್ದವು.

ಒಂದೂವರೆ ಲಕ್ಷ ರೂಗಳ ಬೆಲೆಯ ಮರಳು ಪೋಲೀಸರ ವಶ

0

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಚೌಡರೆಡ್ಡಿಹಳ್ಳಿಯಲ್ಲಿ ಬುಧವಾರ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಸುಮಾರು ಒಂದೂವರೆ ಲಕ್ಷ ರೂಗಳ ಬೆಲೆಯ 10 ಲಾರಿ ಲೋಡ್ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಚೌಡಸಂದ್ರ ಆಂಜನೇಯಸ್ವಾಮಿ ದೇವಾಲಯದಲ್ಲಿ ವೀಳ್ಯದೆಲೆ ಅಲಂಕಾರ

0

ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ವೀಳ್ಯದೆಲೆ ಅಲಂಕಾರವನ್ನು ಮಾಡಲಾಗಿತ್ತು.

ಮೇಲೂರಿನ ತೋಟದಲ್ಲಿ ಅಂಜೂರದ ಹಣ್ಣುಗಳು

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಬಿ.ಎನ್.ರವಿಕುಮಾರ್ ಅವರ ತೋಟದಲ್ಲಿ ಅಂಜೂರದ ಹಣ್ಣುಗಳು ಕಾಂಡಕ್ಕೆ ಹೊಂದಿಕೊಂಡು ಗೊಂಚಲುಗಳಾಗಿ ಬಿಟ್ಟಿವೆ.

ಚೌಡಸಂದ್ರ ಗ್ರಾಮದಲ್ಲಿ ಸ್ವಸಹಾಯ ಸಂಘ ಸ್ಥಾಪನೆ

0

ಕುಟುಂಬ ನಿರ್ವಹಣೆ ಮತ್ತು ಗ್ರಾಮ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಈಚೆಗೆ ಎರಡು ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ಮಹಿಳೆಯರು ತಮ್ಮ ಕೌಟುಂಬಿಕ ಆರ್ಥಿಕ ಪ್ರಗತಿಯನ್ನು ನಡೆಸುತ್ತಾ ಗ್ರಾಮಾಭಿವೃದ್ಧಿಗೂ ಕಯಜೋಡಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಉಳಿತಾಯ, ಸ್ವಚ್ಛತೆ, ಆರೋಗ್ಯ ಮುಂತಾದವುಗಳ ಮೂಲಕ ಸರ್ವತೋಮುಖ ಬೆಳವಣಿಗೆಯೆಡೆಗೆ ಮಹಿಳೆಯರು ಸಾಗಬೇಕು ಎಂದು ತಿಳಿಸಿದರು.
ಅಭಿವೃದ್ಧಿಯೆಡೆಗೆ ಸಾಗುವಾಗ ಜಾತಿ ಬೇಧ ಮರೆಯಬೇಕು. ಕುಡಿತ ಬಿಡಿಸುವುದು, ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಮುಖ್ಯ ಕಾರ್ಯಕ್ರಮಗಳಲ್ಲಿ ಸೇರಿವೆ. ತಾಲ್ಲೂಕಿನಲ್ಲಿ 800 ಸಂಘಗಳನ್ನು ಈವರೆಗೆ ಸ್ಥಾಪಿಸಲಾಗಿದೆ. ತಾಲ್ಲೂಕಿನ ಅಶಕ್ತ 20 ಮಂದಿ ವೃದ್ಧರಿಗೆ ಮಾಸಾಶನ ನೀಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ, ಎಂ.ಪಿ.ಸಿ.ಎಸ್ ಸದಸ್ಯ ಆನಂದಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ್ಮೂರ್ತಿ, ನಾಗಪ್ಪ, ರಾಮಚಂದ್ರ, ಸಿ.ಪಿ.ಇ. ಕರಗಪ್ಪ, ಮಹೇಶ್, ಹನುಮೇಗೌಡ, ರಾಮಕೃಷ್ಣಪ್ಪ, ಮೇಲ್ವಿಚಾರಕಿ ಶಾಂತಾ, ಸೇವಾಪ್ರತಿನಿಧಿ ಇಂದಿರಾ, ಅಭಯಾಂಜನೇಯಸ್ವಾಮಿ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ರಾಮಲಕ್ಷ್ಮಮ್ಮ, ಪ್ರಭಾವತಿ, ಮಾಲ, ಭಾರತಾಂಬೆ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಅನಿತಾ, ಕಾವ್ಯ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿ

0

ಶಿಡ್ಲಘಟ್ಟ ಕ್ಷೇತ್ರದ 110ಹಳ್ಳಿಗಳಲ್ಲಿನ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳು ಜಾರಿಯಲ್ಲಿವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ, ಚೀಮಂಗಲ ಗ್ರಾಮ ಪಂಚಾಯತಿಯ ಅಮರಾವತಿ, ಅತ್ತಿಗಾನಹಳ್ಳಿ ಮತ್ತು ತಾಡಪರ್ತಿ ಗ್ರಾಮಗಳ ಕಾಲೋನಿಗಳಲ್ಲಿ ತಲಾ ಆರು ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.
ಎಲ್ಲೆಡೆ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ಗುತ್ತಿಗೆದಾರಿಗೆ ಸೂಚಿಸಿದ್ದು, ಗ್ರಾಮಸ್ಥರೂ ಈ ಬಗ್ಗೆ ಗಮನಹರಿಸಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮೂಲಭೂತ ಸೌಕರ್ಯಗಳ ಬಗ್ಗೆ ಆಸ್ತೆ ವಹಿಸಬೇಕು ಎಂದು ಹೇಳಿದರು.
ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಸೂರ್ಯನಾರಾಯಣಗೌಡ, ತಾದೂರು ರಮೇಶ್, ಈರೇಗೌಡ, ವೆಂಕಟೇಶಪ್ಪ, ನಾರಾಯಣಸ್ವಾಮಿ, ನಾಗೇಶ್, ಮಲ್ಲೇಶ್, ಕೆಂಚಪ್ಪ, ಮುನಿರೆಡ್ಡಿ, ಗೌರೀಶ್, ತಾಡಪರ್ತಿ ಸುರೇಶ್, ನಾರಾಯಣಪ್ಪ, ಎ.ಎನ್.ಶ್ರೀನಿವಾಸ್, ಚನ್ನಕೃಷ್ಣಪ್ಪ, ಮುನಿಕೃಷ್ಣ, ಪ್ರಕಾಶ್, ಗಂಗಾಧರ್, ಚನ್ನಕೇಶವ, ನಾಗ, ಮೋಹನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಒಕ್ಕಲಿಗರ ಯುವಸೇನೆಯಿಂದ ಬೈಕ್ ರ್ಯಾಲಿ

0

ಶಾಶ್ವತ ನೀರಾವರಿ ಹೋರಾಟ ಕುರಿತು ಜನಜಾಗೃತಿ ಮೂಡಿಸಲು ನಗರದಲ್ಲಿ ಬುಧವಾರ ಒಕ್ಕಲಿಗರ ಯುವಸೇನೆಯಿಂದ ಬೈಕ್ ರ್ಯಾಲಿ ನಡೆಸಲಾಯಿತು.
ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ ೧೩ರಂದು ನಡೆಯುವ ರೈತ ಮಕ್ಕಳ ಬೃಹತ್ ಸಮಾವೇಶ ಹಾಗೂ ಈಗಾಗಲೆ ಚಿಂತಾಮಣಿ ನಗರದಲ್ಲಿ ನಡೆಯುತ್ತಿರುವ ಅರ್ನಿಷ್ಟ ಕಾಲದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಹಾಗೂ ಅರಿವು ಮೂಡಿಸುವ ಸಲುವಾಗಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಒಕ್ಕಲಿಗರ ಯುವ ಸೇನೆಯ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಪರಿಕಲ್ಪನೆಯ ಶಾಶ್ವತ ನೀರಾವರಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಬೈಕ್ ರ್ಯಾಲಿ ನಡೆಸಿದ್ದೇವೆ. ನಗರದ ಪ್ರವಾಸಿ ಮಂದಿರದಿಂದ ಬೈಕ್ ರ್ಯಾಲಿಯನ್ನು ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನೀರಾವರಿ ಹೋರಾಟ ಕುರಿತು ಜಾಗೃತಿ ಮೂಡಿಸುತ್ತಾ ಚಿಂತಾಮಣಿಯಲ್ಲಿ ನಡೆಯುತ್ತಿರುವ ಅರ್ನಿಷ್ಟ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತೇವೆ ಎಂದು ಅವರು ಹೇಳಿದರು.
ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಜಿ.ಶಶಿಕುಮಾರ್, ಸಿ.ವಿ.ಮುನಿರಾಜು, ಪುರುಷೋತ್ತಮ, ಪ್ರತಾಪ್, ಪ್ರಸನ್ನ, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!