ಬಾನಕಸ ಅಥವಾ ಸ್ಪೇಸ್ ಜಂಕ್ ಎಂದರೆ ಭೂಮಿಯ ಸುತ್ತಲೂ ತಿರುಗುತ್ತಿರುವ ವಿವಿಧ ಆಕಾರ, ಗಾತ್ರಗಳ ಅಸಂಖ್ಯಾತ ಕಸ ಮತ್ತು ಲೋಹದ ಚೂರುಗಳು. ಬೇರೆ ಬೇರೆ ಎತ್ತರಗಳಲ್ಲಿ, ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿರುವ ಇವುಗಳಲ್ಲಿ ಹೆಚ್ಚಿನವು ಮಾನವ ನಿರ್ಮಿತ ಉಪಗ್ರಹಗಳ ಭಗ್ನಾವಶೇಷಗಳು. ಮೊದಮೊದಲು ಅಗಾಧವಾದ ಭೂಸುತ್ತಲ ಅವಕಾಶದಲ್ಲಿ ಈ ಚಿಕ್ಕ, ಪುಟ್ಟ ಕಸಗಳು ಏನೂ ಮಾಡಲಾರವು ಎಂಬ ಭಾವನೆ ಇತ್ತು. ಆದರೆ ಯಾವುದೇ ಗುರಿಯಿಲ್ಲದೆ ಬಾಹ್ಯಾಕಾಶದಲ್ಲಿ ಗಿರಕಿ ಹೊಡೆಯುತ್ತಿರುವ ಬಾನಕಸ ಭೂಮಿಯಿಂದ ಉಡಾವಣೆಯಾಗುತ್ತಿರುವ ಈಗಿನ ಕೃತಕ ಉಪಗ್ರಹಗಳಿಗೆ ಅಪಾಯಕಾರಿ ಎಂಬುದು ಸಾಬೀತಾಗಿದೆ. ಬಾಹ್ಯಾಕಾಶ ಸಂಶೋಧನೆ, ಭೂ ಮತ್ತು ಹವಾಮಾನ ಅಧ್ಯಯನ, ದೂರಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳ ಪ್ರಗತಿಯಿಂದಾಗಿ ದಿನದಿಂದ ದಿನಕ್ಕೆ ಉಪಗ್ರಹಗಳ ಹಾರಾಟ ಹೆಚ್ಚುತ್ತಿದೆ, ಮಾನವಸಹಿತ ಮತ್ತು ಮಾನವರಹಿತ ಬಾನನೌಕೆಗಳು ಬಾಹ್ಯ ಜಗತ್ತಿನ ಶೋಧಕ್ಕೆ ಮುನ್ನುಗ್ಗುತ್ತಿವೆ, ಹಾಗೆಯೇ ಹಳೆಯ, ಆಯಸ್ಸು ಮುಗಿದ ಉಪಗ್ರಹಗಳನ್ನು ಕೈಬಿಡುವುದು ಕೂಡ ಅನಿವಾರ್ಯವಾಗಿದೆ. ಅವು ಭೂಸಂಪರ್ಕ ಕಳೆದುಕೊಂಡರೂ, ಅವುಗಳ ಬಿಡಿಭಾಗಗಳು ಕಳಚಿ ಚೂರಾಗಿ, ಅತಿನೇರಳೆ ಕಿರಣಗಳಿಗೆ ಸತತ ಸಿಕ್ಕು ಸವೆದರೂ ಲಕ್ಷಗಟ್ಟಲೆ ವರ್ಷಗಳವರೆಗೆ ಭೂಮಿಯ ಸುತ್ತ ತಮ್ಮ ಕಕ್ಷೆಯಲ್ಲಿ ಸುತುತ್ತಲೇ ಇರುತ್ತವೆ.
ಬಾನಕಸದ ಮೂಲಗಳು
ಬಾಹ್ಯಾಕಾಶ ತಂತ್ರಜ್ಷಾನ ಅಭಿವೃದ್ಧಿಗೊಂಡು ಅದನ್ನು ಸಂಪರ್ಕಸಾಧನವಾಗಿ ಬಳಸತೊಡಗಿದಾಗಿನಿಂದ ಬಾನಕಸದ ಸಮಸ್ಯೆ ಮನುಕುಲಕ್ಕೆ ಎದುರಾಗಿದೆ. 1957 ರಲ್ಲಿ ಸೋವಿಯೆತ್ ರಷ್ಯಾದ ಸ್ಪುಟ್ನಿಕ್ ಉಡಾವಣೆಯೊಂದಿಗೆ ಆರಂಭಗೊಂಡ ‘ಬಾಹ್ಯಾಕಾಶ ಯುಗ’ ದಲ್ಲಿ ಇದುವರೆಗೆ ಸುಮಾರು 6,000 ಉಪಗ್ರಹಗಳು ಗಗನಕ್ಕೆ ಚಿಮ್ಮಿವೆ. ಈಗ 2465 ಉಪಗ್ರಹಗಳು ಮಾತ್ರವೇ ಕ್ರಿಯಾಶೀಲವಾಗಿದ್ದು ಉಳಿದವೆಲ್ಲವೂ ಬಾನಕಸವಾಗಿ ಹಾರಾಟ ನಡೆಸಿವೆ. ಮಾನವ ಬಾಹ್ಯಾಕಾಶಕ್ಕೆ ಹಾರುವ ಮೊದಲು ‘ಸ್ಪುಟ್ನಿಕ್-2’ ಉಪಗ್ರಹದಲ್ಲಿ ಪರೀಕ್ಷಾರ್ಥವಾಗಿ ಹಾರಿಬಿಟ್ಟ ಲೈಕಾ ನಾಯಿಯ ಅವಶೇಷಗಳೂ ಭೂಮಿಯನ್ನು ಸುತ್ತುಹಾಕುತ್ತಿವೆ.
ಬಹುಹಂತದ ಉಪಗ್ರಹ ಉಡಾವಣೆಯಲ್ಲಿ ರಾಕೆಟ್ಟುಗಳು ಉಪಗ್ರಹದಿಂದ ಕಳಚಿ ಬೀಳುತ್ತವೆ. ಅವುಗಳ ಇಂಧನ ಟ್ಯಾಂಕುಗಳಲ್ಲಿ ಉಳಿದಿರುವ ಅನಿಲರೂಪದ ಇಂಧನ ಹಿಗ್ಗಿ ಟ್ಯಾಂಕು ಸಿಡಿದು ಚೂರುಚೂರಾಗಿ ದೂರ ಹಾರುತ್ತವೆ. ನಿವೃತ್ತಿಗೊಂಡ ಉಪಗ್ರಹಗಳು ಭೂಮಿಯಿಂದ ಸಂಪರ್ಕ ಕಳೆದುಕೊಂಡರೂ ಸತತವಾಗಿ ತಮ್ಮ ಕಕ್ಷೆಯಲ್ಲಿ ಹಾರುತ್ತಲೇ ಇರುತ್ತವೆ. ಇವು ಮುಂದೆ ಬಾನಕಸವಾಗುತ್ತವೆ. ಉಪಗ್ರಹಗಳೊಳಗಿರುವ ಕ್ಯಾಮೆರಾಗಳು, ಮಸೂರಗಳು, ಪ್ಲಾಸ್ಟಿಕ್ ಹಾಳೆಗಳು, ಲೋಹದ ವೈರು ಮತ್ತಿತರ ಉಪಕರಣಗಳು ಇವೆಲ್ಲವೂ ಕಾಲ ಕಳೆದಂತೆ ಬಿಡಿಗೊಂಡು ಬಾನಕಸಕ್ಕೆ ಸೇರ್ಪಡೆಗೊಳ್ಳುತ್ತವೆ. ಉಡಾವಣೆಯಲ್ಲಿ ಬಳಸಿದ ಬಲವರ್ಧಕ ಉಪಕರಣಗಳು, ಭೂವಾತಾವರಣವನ್ನು ಹಾದುಹೋಗುವಾಗ ಉಷ್ಣತೆಯ ಒತ್ತಡಕ್ಕೆ ಸಿಕ್ಕು ಕಿತ್ತೆದ್ದ ಉಪಗ್ರಹದ ಮೇಲ್ಮೈನ ಬಣ್ಣದ ಹೊಪ್ಪಳಿಕೆಗಳು ಇವೂ ಕೂಡ ಬಾನಕಸವೆಂದೆನಿಸಿಕೊಳ್ಳುತ್ತವೆ.
ಭೂಸಮೀಪದ ಕಕ್ಷೆಗಳಲ್ಲಿ ಹಾರಾಡುವ ಬಾನಕಸಗಳಿಗೆ ಭೂಮಿಯ ಆಕರ್ಷಣೆಯ ಸೆಳೆತ ಇದ್ದೇ ಇರುತ್ತದೆ. ವಾಯುಮಂಡಲದ ಅಂಚಿನ ಅಲ್ಪ ಒತ್ತಡದಿಂದಾಗಿ ಅಲ್ಲಿ ಹಾರಾಡುತ್ತಿರುವ ವಸ್ತುಗಳು ದೀರ್ಘಕಾಲದ ನಂತರ ವೇಗವನ್ನು ಕಳೆದುಕೊಳ್ಳುತ್ತ ನಮ್ಮ ವಾಯುಮಂಡಲದೊಳಕ್ಕೆ ಪ್ರವೇಶ ಪಡೆಯುತ್ತವೆ, ಇಲ್ಲಿನ ವಾಯು ಒತ್ತಡದಲ್ಲಿ ಅವು ಉರಿದು ಭಸ್ಮವಾಗುತ್ತವೆ.
ಎತ್ತರದ ಕಕ್ಷೆಗಳಲ್ಲಿ ಈ ಪರಿಣಾಮ ಉಂಟಾಗುವುದಿಲ್ಲ. ಅಲ್ಲಿ ಸುತ್ತುತ್ತಿರುವ ಚೂರುಗಳು ದೀರ್ಘಕಾಲದವರೆಗೆ ಅಂದರೆ ಹತ್ತು, ನೂರು ಅಥವಾ ಸಾವಿರ ವರ್ಷಗಳವರೆಗೂ ಅದೇ ಸ್ಥಿತಿಯಲ್ಲಿರುತ್ತವೆ.
ಅಮೆರಿಕದ ಮಿಲಿಟರಿ ಸಂಸ್ಥೆಯೊಂದು ಭೂಮಿಯ ಮೇಲೆ 25 ಕಡೆ ಸ್ಥಾಪಿಸಿದ ಉಪಕರಣಗಳ ‘ಬಾಹ್ಯಾಕಾಶ ವೀಕ್ಷಣಾ ಜಾಲ’ (Space Surveillance Network) ಕಲೆಹಾಕಿದ ಮಾಹಿತಿಗಳ ಪ್ರಕಾರ 10 ಸೆಮೀಗಿಂತ ದೊಡ್ಡದಾಗಿರುವ ಸುಮಾರು 19 ಸಾವಿರದಷ್ಟು, 1-10 ಸೆಮೀನ ಸುಮಾರು 5 ಲಕ್ಷದಷ್ಟು ಹಾಗೂ 1 ಸೆಮೀಗಿಂತ ಚಿಕ್ಕದಾಗಿರುವ ಕೋಟಿಗಟ್ಟಲೆ ಕೃತಕ ವಸ್ತುಗಳು ಭೂಮಿಯನ್ನು ಸುತ್ತುತ್ತಿವೆ. ಇವುಗಳಲ್ಲಿ ದೊಡ್ಡವು ಟನ್ನುಗಟ್ಟಲೆ ತೂಕ ಹೊಂದಿದರೆ ಚಿಕ್ಕವು ನಾಲ್ಕೈದು ಕೆಜಿಯಷ್ಟಿರಬಹುದೆಂದು ಅಂದಾಜಿದೆ. ಸುಮಾರು 2-4 ಕೆ.ಜಿ.ಯಷ್ಟಿದ್ದ ಚೂರುಗಳು ಅತಿ ಹೆಚ್ಚಿದ್ದು ಇವೇ ಕಾರ್ಯನಿರತ ಉಪಗ್ರಹಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿವೆ.
ಈ ಭಗ್ನಾವಶೇಷಗಳಲ್ಲಿ ಹೆಚ್ಚಿನವು ಭೂ ಮೇಲ್ಮೈಯಿಂದ ಎರಡು ಸಾವಿರ ಕಿಮೀ ಸುತ್ತಳತೆಯಲ್ಲಿ ಹಾರಾಡುತ್ತಿವೆ. ಸುಮಾರು 800-850 ಕಿಮೀ ಎತ್ತರದ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಿವಿಧ ಅಳತೆಗಳ ಚೂರುಗಳು ಕಂಡುಬರುತ್ತಿವೆ. ಭೂಸಮೀಪದ ಕಕ್ಷೆಯಲ್ಲಿ ಈ ಚೂರುಗಳು ಸೆಕೆಂಡಿಗೆ ಸುಮಾರು 7-8 ಕಿಮೀ ವೇಗದಲ್ಲಿ ಗಿರಕಿ ಹೊಡೆಯುತ್ತಿವೆ. ಒಂದಕ್ಕೊಂದು ಡಿಕ್ಕಿ ಹೊಡೆದವೋ, ಮತ್ತಷ್ಟು ಚೂರುಗಳಾಗಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.
ಕಾಲಾಂತರದಲ್ಲಿ ಭೂಮಿಯ ಆಕರ್ಷಣೆಗೆ ಒಳಗಾಗಿ ಬಹುತೇಕ ಚೂರುಗಳು ವಾತಾವರಣವನ್ನು ಪ್ರವೇಶಿಸಿ ಉರಿದು ಭಸ್ಮವಾಗಲಿವೆ, ನಿಜ. ಆದರೆ ಬಾನಕಸ ಉಂಟಾಗುತ್ತಿರುವ ವೇಗಕ್ಕೆ ಹೋಲಿಸಿದರೆ, ಅವು ನಾಶವಾಗುವ ಪ್ರಕ್ರಿಯೆ ತುಂಬ ನಿಧಾನವಾಗಿ ಆಗುತ್ತಿದೆ. ಉದಾಹರಣೆಗೆ, 2007ರಲ್ಲಿ ಚೀನಾ ದೇಶ ‘ಎಂಟಿ ಸೆಟಲೈಟ್ ಆಪರೇಶನ್’ ಪ್ರಯುಕ್ತ ನಿವೃತ್ತಿಗೊಂಡ ಉಪಗ್ರಹವೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ 1 ಸೆಮೀನಷ್ಟು ಅಗಲದ ಒಂದೂವರೆ ಲಕ್ಷದಷ್ಟು ಚೂರುಗಳನ್ನು ಉಂಟುಮಾಡಿದೆ.
ಕಕ್ಷೆಯಲ್ಲಿರುವಾಗಲೇ ಎರಡು ಉಪಗ್ರಹಗಳು ಢಿಕ್ಕಿ ಹೊಡೆದು ಬಾನಕಸದ ಸಂಖ್ಯೆಯನ್ನು ಅಧಿಕಗೊಳಿಸಿದ ಘಟನೆ 2009 ರಲ್ಲಿ ನಡೆದಿದೆ. ವೇಗವಾಗಿ ಹಾರಾಟ ನಡೆಸಿದ್ದ ಅಮೆರಿಕದ ‘ಇರಿಡಿಯಮ್33’ ಹಾಗೂ ರಷ್ಯಾದ ‘ಕಾಸ್ಮಾಸ್ 2251’ ಉಪಗ್ರಹಗಳು ಒಂದಕ್ಕೊಂದು ಬಡಿದು ಚೂರುಗಳಾಗಿ ಹರಡಿವೆ. ಈ ರೀತಿಯಾಗಿ ಒಂದಕ್ಕೆ ಇನ್ನೊಂದು, ಇನ್ನೊಂದಕ್ಕೆ ಮತ್ತೊಂದು ವಸ್ತು ಅಪ್ಪಳಿಸಿ ಸರಪಳಿ ಕ್ರಿಯೆ ಉಂಟಾಗಿ ಭೂಸುತ್ತಲ ಕಕ್ಷೆಗಳಲ್ಲಿ ಬರೀ ಉಪಗ್ರಹಕಸವೇ ತುಂಬಿ ಹೋಗಬಹುದಾದ ‘ಕೆಸ್ಲರ್ ಸಿಂಡ್ರೋಮ್’ ಎಂಬ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಗಗನನಡಿಗೆ ಮತ್ತು ಬಾನಕಸ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲುಸ್ತುವಾರಿಗೆಂದು ನೌಕೆಯ ಹೊರಗಡೆ ಗಗನ ನಡಿಗೆ ನಡೆಸಿದ ತಂತ್ರಜ್ಞರು ಹಲವು ಬಾರಿ ಕೈಯ್ಯಲ್ಲಿದ್ದ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಅವೆಲ್ಲವೂ ಭೂಮಿಯ ಸುತ್ತ ಸುತ್ತುತ್ತಲೇ ಇವೆ. ಕೈಗವುಸು, ಸುನೀತ ವಿಲಿಯಮ್ಸ್ ಕೈಯ್ಯಿಂದ ಜಾರಿದ ಕ್ಯಾಮೆರಾ, ಸೌರಫಲಕವೊಂದರ ಮರುಜೋಡಣೆ ಮಾಡುವಾಗ ಜಾರಿ ಹಾರಿಹೋದ ಫಲಕದ ಹಲಗೆ ಇತ್ಯಾದಿ.
ಹತ್ತು ವರ್ಷಗಳಿಂದ ಭೂವಾತಾವರಣದಿಂದ 250-320 ಕಿಮೀ ಎತ್ತರದಲ್ಲಿ ಹಾರಾಟ ನಡೆಸುತ್ತಿರುವ ‘ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ಇದೂ ಕೂಡ ಭೂಪ್ರದಕ್ಷಿಣೆ ಹಾಕುತ್ತಿರುವ ಕೃತಕ ಉಪಗ್ರಹವೇ, ಆದರೆ ಇದರ ವಿಶೇಷತೆ ಏನೆಂದರೆ ಕಳೆದ 10 ವರ್ಷಗಳಿಂದ ಇದರಲ್ಲಿ ಸತತವಾಗಿ ಮಾನವ ವಾಸ್ತವ್ಯ ನಡೆದಿದೆ.) ಅನೇಕ ಬಾರಿ ಈ ಅಪಾಯವನ್ನು ಎದುರಿಸಿದೆ. ದೊಡ್ಡ ಚೂರೊಂದು ನೌಕೆಗೆ ಅಪ್ಪಳಿಸುವ ಸಾಧ್ಯತೆಗಳು ಕಂಡುಬಂದಾಗ ನೌಕೆಯ ಎತ್ತರವನ್ನು ಬದಲಿಸಿ, ಅದರೊಳಗಿರುವ ತಂತ್ರಜ್ಞರು ಸುರಕ್ಷಿತ ಸ್ಥಾನವನ್ನು ಸೇರಿಕೊಳ್ಳುವಂತೆ ಸೂಚಿಸಲಾಗುತ್ತದೆ. ಅತಿ ದೀರ್ಘ ಕಾಲ ಭೂ ಪ್ರದಕ್ಷಿಣೆ ಮಾಡಿದ ಮೀರ್ ಬಾಹ್ಯಾಕಾಶ ನೌಕೆಯ ಮೇಲ್ಮೈ ಅನೇಕ ಕಡೆ ಬಾನಕಸದಿಂದ ಘಾಸಿಗೊಂಡಿರುವ ಗುರುತುಗಳನ್ನು ಚಿತ್ರಗಳು ತೋರಿಸಿವೆ.
ಪರಿಹಾರ
ಭೂಮಿಗೆ ಬಂದು ಬೀಳಬಹುದಾದ ಬಾನಕಸದ ಬಗ್ಗೆ ಕೆಲವು ಸಂಸ್ಥೆಗಳು ಅಧ್ಯಯನ ನಡೆಸಿವೆ. ಉಪಗ್ರಹ ತಯಾರಿಸುವ ಸಂಸ್ಥೆಗಳು ಬಾನಕಸದ ಢಿಕ್ಕಿಯಿಂದ ತೊಂದರೆಗೊಳಗಾಗದ ಹಾಗೆ ಉಪಗ್ರಹಗಳ ಹೊರಭಾಗಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ. ಹಾಗೆಯೇ ಮಾನವಕೃತ ಬಾನಕಸ ಅಧಿಕಗೊಳ್ಳದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಒಂದು ಪರಿಹಾರವಾಗಿ ಉಪಗ್ರಹಗಳ ಕ್ರಿಯಾಶೀಲತೆ ಕಡಿಮೆಯಾಗುತ್ತಲೇ ಅವುಗಳನ್ನು ಆದಷ್ಟು ಭೂಸಮೀಪದ ಕಕ್ಷೆಗಳಿಗೆ ಇಳಿಸಬೇಕು. ಅಲ್ಲಿ ಅವು ಶೀಘ್ರವಾಗಿ ಭಗ್ನಗೊಂಡು, ಅವಶೇಷಗಳು ವಾಯುಮಂಡಲದ ಪ್ರಭಾವಕ್ಕೆ ಸಿಕ್ಕು ಪತನಗೊಳ್ಳುವ ಸಾಧ್ಯತೆಗಳು ಹೆಚ್ಚು.
ಈಗಿರುವ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಾಷ್ಟ್ರಗಳು ಪ್ರತ್ಯೇಕವಾಗಿ ಬಾನ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತಿಲ್ಲ. ಆದ್ದರಿಂದ ಸಮಸ್ತ ದೇಶಗಳು ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕಿದೆ.
ಸರೋಜ ಪ್ರಕಾಶ್
ಬಾನಕಸ (ಸ್ಪೇಸ್ ಜಂಕ್)
ಶ್ರೀ ಪೂಜಮ್ಮ ದೇವಿಯ ಕರಗಮಹೋತ್ಸವ
ಪುರಾಣ ಪ್ರಸಿಧ್ದ ಶ್ರೀ ಪೂಜಮ್ಮ ದೇವಿಯ ದೇವಾಲಯದಲ್ಲಿ ಹುಣ್ಣಿಮೆ ಹಬ್ಬದ ಅಂಗವಾಗಿ ಕರಗಮಹೋತ್ಸವ ಭಾರಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ನಡೆಸಲಾದ ಕರಗ ಮಹೋತ್ಸವದ ಅಂಗವಾಗಿ ನಗರದ ಓ.ಟಿ.ವೃತ್ತ ಹಾಗೂ ಕೋಟೆ ವೃತ್ತಗಳಲ್ಲಿ ಆರ್ಕೆಸ್ಟ್ರಾಗಳನ್ನು ಏರ್ಪಡಿಸಲಾಗಿತ್ತು.
ಕರಗ ಮಹೋತ್ಸವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕರಗ ಹೊತ್ತಿದ್ದ ವಿಜಯಕುಮಾರ್ ನರ್ತನಕ್ಕೆ ಚಪ್ಪಾಳೆ, ಶಿಳ್ಳೆಗಳ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಶ್ರೀ ಪೂಜಮ್ಮ ದೇವಾಲಯದಿಂದ ಹೊರಟ ಕರಗ, ಬೈಪಾಸ್ ರಸ್ತೆಯ ಮುಖಾಂತರ ಓ.ಟಿ. ಸರ್ಕಲ್, ಕೋಟೆ ಸರ್ಕಲ್‍ಗಳಲ್ಲಿ ಆಯೋಜನೆ ಮಾಡಲಾಗಿದ್ದ ಆರ್ಕೆಸ್ಟ್ರಾಗಳಲ್ಲಿ ವಿವಿಧ ಬಗೆಯ ಸಂಗೀತಗಳ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿದ ನಂತರ ನಗರದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಪೂಜೆಗಳನ್ನು ಸ್ವೀಕರಿಸಿತು.
ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮದೇವಾಲಯದಲ್ಲಿ ರಾತ್ರಿ 10.25 ಕ್ಕೆ ಪ್ರಾರಂಭವಾದ ಕರಗ ಮಹೋತ್ಸವದಲ್ಲಿ ಶಾಸಕ ಎಂ.ರಾಜಣ್ಣ ಸೇರಿದಂತೆ ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆ ಸಲ್ಲಿಸಿದರು.
ನಗರಸಭೆ ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ಲಕ್ಷ್ಮಯ್ಯ, ಮುಖಂಡರಾದ ಚಿಕ್ಕಮುನಿಯಪ್ಪ, ಮುನಿಪೂಜಮ್ಮ, ಎಸ್.ಎಂ. ರಮೇಶ್, ಯಾಮಾ ನಾರಾಯಣಸ್ವಾಮಿ,ನಾಗನರಸಿಂಹ,ನರಸಿಂಹಮೂರ್ತಿ,ಅಜ್ಜಪ್ಪ,ಕೃಷ್ಣಮೂರ್ತಿ,ಮುನಿನರಸಿಂಹ, ಕೆ.ನಾರಾಯಣಸ್ವಾಮಿ, ಕೆ.ಮಂಜುನಾಥ, ಮತ್ತಿತರರು ಹಾಜರಿದ್ದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾಟನೆ ಹಾಗೂ ದಿನಚರಿ ಬಿಡುಗಡೆ
ದೇಶದ ಬಹುಷ್ಯ ಶಿಕ್ಷಕರ ಕೈಯಲ್ಲಿದ್ದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ಕ್ಷೇತ್ರದ ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಟೆ ಬಾಲಕರ ಶಾಲೆಯ ಆವರಣದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾನೆ ಹಾಗೂ ದಿನಚರಿ2015 ಬಿಡುಗಡೆ ಮಾಡಿ ಮಾತನಾಡಿದ ಅವರು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳನ್ನು ಬಾಲ್ಯದಿಂದಲೆ ಉತ್ತಮ ಪ್ರಜೆಗಳಾಗುವಂತೆ ರೂಪಿಸಬೆಕಾದ ಕರ್ತವ್ಯ ಶಿಕ್ಷಕರದಗಿದ್ದು ಕಾಯಾವಾಚಮನುಸ ಎಂಬಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ಶಿಕ್ಷಕರ ಪಿತಾಮಹ ಶಿಕ್ಷಣ ತಜ್ಞ ತತ್ವಜ್ಯಾನಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಆದರ್ಶಗಳನ್ನು ಶಿಕ್ಷಕರು ಪಾಲಿಸಬೇಕೆಂದರಲ್ಲದೆ ಶಿಕ್ಷಕರ ಭವನ ಶೀಘ್ರದಲ್ಲೆ ನಿರ್ಮಾಣ ಮಾಡಲು ಶ್ರಮಿಸುವುದಾಗಿ ಬರವಸೆ ನೀಡಿದರು.
ಮುಖ್ಯ ಅತಿಥಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಎ.ನಾರಯಣಸ್ವಾಮಿ ಮಾತನಾಡಿ ಶಾಲೆಗಳ ಮತ್ತು ಮಕ್ಕಳ ಆಭಿವೃದ್ದಿಯೇ ನಮ್ಮ ಮೂಲ ಉದ್ದೇಶ ವಾಗಿದ್ದು ಜಿಲ್ಲೆಯ ಸಮಸ್ಥ ಶಿಕ್ಷಕರ ಕ್ಷೇಮಾಬಿವೃದ್ದಿ ಕಾಪಾಡುವುದು ನಮ್ಮ ಸಂಘದ ಮೂಲದೆಯೆ ಆಗಿದೆ, ಅದೆ ರೀತಿ ಈ ವರ್ಷದಿಂದ ನಮ್ಮ ಸಂಘ ನೂತನವಾಗಿ ಮಾರ್ಚಿ ತಿಂಗಳಿನಿಂದ ಎಲ್ಲಾ ಶಿಕ್ಷಕರಿಗೆ ವೇತನ ಪ್ರಮಾಣ ಪತ್ರ ನೀಡಬೇಕೆಂದು ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನ ಮಾಡಿ ಅದರ ಜವಾಬ್ದಾರಿಯನ್ನು ತಾಲ್ಲೂಕು ಸಂಘಗಳು ಉಸ್ತುವಾರಿ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ ಇದರಿಂದ ಶಿಕ್ಷಕರು ಕಚೇರಿ ಬಳಿ ಬರುವ ವಾಡಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಂಡಿದ್ದೇವೆ ಮತ್ತು ಕಚೇರಿಗಳಲ್ಲಿ ಭಾಕಿ ಇರುವ 15,20,30 ಸೇವಾ ಆವಧಿಯ ಬಡ್ತಿಯ ಮೂಲ ಭಾಕಿವೆತನ ಶೀಘ್ರವಾಗಿ ಮಾಡಬೆಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಘದ ಪರವಾಗಿ ಮನವಿಯನ್ನು ಮಾಡಿದ್ದೇವೆ ಹಾಗೂ ಇಡೀ ಜಿಲ್ಲೆಯ ಶಿಕ್ಷಕರ ಕುಂದುಕೊರತೆಗಳನ್ನು ಹಂತಹಂತವಾಗಿ ನಾವು ಬಗೆಹರಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆವರು ಸಂಘದ ಸರ್ವತೋ ಮುಖ ಆಭಿವೃದ್ದಿಗೆ ಸದಾ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಹಿರಿಯ ಮುಖಂಡ ಮೇಲೂರು ಸೂರ್ಯನಾರಾಯಣಗೌಡ, ಸಂಘದ ಸಂಘಟನಾ ಕಾಂiÀi ್ದರ್ಶಿಗಳಾದ ಸಿ.ವಿ.ವೆಂಕಟರಾಯಪ್ಪ, ರಾಮಚಂದ್ರಪ್ಪ, ಗೌರವ ಆದ್ಯಕ್ಷ ಸಿ.ಎಂ.ಮುನಿರಾಜು ಚಿಂತಾಮಣಿ ತಾಲ್ಲೂಕು ಆದ್ಯಕ್ಷ ಆಶೋಕ್ ಕುಮಾರ್, ಪ್ರ.ಕಾ.ವಸಂತರೆಡ್ಡಿ, ರಾಜ್ಯ ಸಂಘದ ಸದಸ್ಯ ಚೌಡಪ್ಪ ಚಿಂತಾಮಣಿ, ಭಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟರೊಣಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎನ್.ಕೆ.ಗುರುರಾಜ್ ರಾವ್, ಸ.ನೌ.ಸಂ.ಕಾರ್ಯದರ್ಶಿ ಅಕ್ಕಲರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ಟಿ.ವಿಜಯಕುಮಾರ್, ಉಪಾದ್ಯಕ್ಷ ಎನ್.ರಾಮಚಂದ್ರಪ್ಪ, ತಾಲ್ಲೂಕು ಸಂಘದ ಕಾರ್ಯದರ್ಶಿ ಬಿ.ಅರ್.ನಾರಾಯಣಸ್ವಾಮಿ, ಟಿ.ವಿ.ನಾಗರಾಜ್, ಮಹಿಳಾ ಉಪಾದ್ಯಕ್ಷಣಿ ಅರುಣಾಚಂದ್ರಶೇಖರ, ಮಹಿಳಾ ಕಾರ್ಯದರ್ಶಿ ಆರ್.ವೇಣುಮಾದವಿ, ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಕೆಂಪೇಗೌಡ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ಹೀಗರಲಿ ಮಕ್ಕಳ ಆಟಿಕೆ
“ಮಕ್ಕಳಿರಲವ್ವ ಮನೆ ತುಂಬ” ಎನ್ನುವುದು ಒಂದು ಜಾನಪದ ರೂಢಿಯ ಮಾತು. “ನಾವಿಬ್ಬರು ನಮಗಿಬ್ಬರು” ಎನ್ನುವುದು ಇಂದಿನ ಆಧುನಿಕ ಶಿಕ್ಷಿತ ಜಗತ್ತಿನ ಒಂದು ಮಂತ್ರ ವಾಕ್ಯ. ಮಕ್ಕಳ ಮನೋರಂಜನೆಗೆ, ಬೌದ್ಧಿಕ ಮನೋ ವಿಕಾಸಕ್ಕೆ, ದೈಹಿಕ ಬೆಳವಣಿಗೆಗೆ ಆಟಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಶಹರಗಳಲ್ಲಿ ಕೊಳ್ಳು ಬಾಕ ಸಂಸ್ಕøತಿಯು ತಲೆ ಎತ್ತಿರುವ ಕಾರಣ ಮಕ್ಕಳಿಬ್ಬರಿರಲಿ, ಮೂವರಿರಲಿ, ಒಂದೇ ಮಗುವಿರಲಿ ಶಾಪಿಂಗ್ ಮಾಲ್ ಗಳಲ್ಲಿ ಕಂಡ ಕಂಡ ಆಟಿಕೆಗಳನ್ನು ಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಯಾವ ರೀತಿಯ ಆಟಿಕೆಗಳನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳಬೇಕು? ಎನ್ನುವುದರ ಬಗ್ಗೆ ಚರಕಾಚಾರ್ಯರು “ಚರಕ ಸಂಹಿತೆ” ಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
“ಕ್ರೀಡನಕಾನಿ ಖಲು ಕುಮಾರಸ್ಯ ವಿಚಿತ್ರಾಣಿ ಘೋಷಮಂತ್ಯಭಿರಾಮಾಣಿ ಚಾಗ್ರರೂಣಿ ಚಾತೀಕ್ಷ್ಣಾಗ್ರಾಣಿ ಚಾನಾಸ್ಯ ಪ್ರವೇಶೀನಿ ಚಾಪ್ರಾಣ ಹರಾಣಿ ಚಾವಿತ್ರಾಸನಾನಿ ಸ್ಯು||”
ವಿಚಿತ್ರಾಣಿ: ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು. ಉದಾರಹರಣೆಗೆ, ಆನೆ, ಹುಲಿ, ಕುದುರೆ, ನಾಯಿ ಇತ್ಯಾದಿ ಪ್ರಾಣಿಗಳನ್ನು ಹೋಲುವಂಥದ್ದಾಗಿರಬೇಕು. ಚಿಕ್ಕ ಚಿಕ್ಕ ಚೆಂಡುಗಳು ವಿವಿಧ ರೀತಿಯ ಟೆಡ್ಡಿಬೇರ್ ಗೊಂಬೆಗಳೂ ಕೂಡ ಮಕ್ಕಳಿಗೆ ಉತ್ತಮ ಆಟಿಕೆ ವಸ್ತುಗಳು.
ಘೋಷವಂತಿ: ಮಕ್ಕಳ ಕಿವಿಗೆ ಹಾನಿಯನ್ನುಂಟುಮಾಡದ ರೀತಿಯಲ್ಲಿ ಶಬ್ದ ಮಾಡುವಂತಿರಬೇಕು. ಅತಿ ಹೆಚ್ಚು, ಅತಿ ಕಡಿಮೆ ಅಥವಾ ಕಿವಿಗಡಚಿಕ್ಕುವ ಕರ್ಕಶ ಶಬ್ದವನ್ನುಂಟು ಮಾಡಬಾರದು.
ಅಭಿರಾಮಾಣಿ: ಆಟಿಕೆಗಳು ನೋಡಲು ಸುಂದರವಾಗಿರಬೇಕು ಮಕ್ಕಳನ್ನು ಆಕರ್ಷಿಸುವಂತಿರಬೇಕು.
ಅಗ್ರರೂಣಿ: ಆಟಿಕೆಗಳು ಹಗುರವಾಗಿರಬೇಕು. ಮಕ್ಕಳು ಅನಾಯಾಸವಾಗಿ ಹಿಡಿದು ಆಡಲು ಅನುಕೂಲವಾಗುವಂತಿರಬೇಕು.
ಅತೀಕ್ಷ್ಣಾಗ್ರಾಣಿ: ಆಟಿಕೆಗಳ ತುಡಿಗಳು ಮೊನಚಾಗಿರಬಾರದು ಆಡುವ ಸಮಯದಲ್ಲಿ ಮೊನಚಾಗಿದ್ದರೆ ಮಕ್ಕಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು.
ಅನಾಸ್ಯ ಪ್ರವೇಶೀನಿ: ಮಕ್ಕಳು ಆಟಿಕೆಗಳನ್ನು ಬಾಯಿಯೊಳಗೆ ಹಾಕಿಕೊಳ್ಳುವಂತಿರಬಾರದು. ಯಾವುದೇ ವಸ್ತುಗಳು ಸಿಕ್ಕಾಗಲೂ ಕೂಡ ಆಡುತ್ತಾ ಬಾಯಿಯೊಳಗೆ ಇಟ್ಟುಕೊಳ್ಳುವಂಥದ್ದು ಮಕ್ಕಳ ಸಹಜ ಸ್ವಭಾವ. ಇತ್ತೀಚಿನ ದಿನಗಳಲ್ಲಿ ಕೆಲವು ಆಟಿಕೆಗಳನ್ನು ಸೀಸ ಹಾಗೂ ಇತರೇ ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ. ಇವುಗಳ ಸೇವನೆಯಿಂದ ಕೆಲವು ಶ್ವಾಸಕೋಶ ಸಂಬಂಧಿ, ಜೀರ್ಣಕ್ರಿಯೆ ಸಂಬಂಧಿ ಹಾಗೂ ಚರ್ಮದ ಸೋಂಕುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಅಪ್ರಾಣ ಹರಾಣಿ: ಮಕ್ಕಳ ಆಟಿಕೆಗಳು ಮೃತ್ಯುವನನ್ನು ಆಹ್ವಾನಿಸುವಂತಿರಬಾರದು, ಇದರಿಂದ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯುಂಟಾಗಬಾರದು.
ಅವಿತ್ರಾಸನಾನಿ: ಆಟಿಕೆಗಳು ಭಯಾನಕವಾಗಿರಬಾರದು. ಮಕ್ಕಳನ್ನು ಹೆದರಿಸುವಂತಿರಬಾರದು, ಕ್ರೂರವಾಗಿರಬಾರದು.
ಈ ರೀತಿ ಮಕ್ಕಳ ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು.
ಡಾ. ನಾಗಶ್ರೀ.ಕೆ.ಎಸ್.
ಭವಿಷ್ಯವನ್ನು ಇಂದೇ ಕಬಳಿಸುವುದೇ ಅಭಿವೃದ್ಧಿಯೇ?
ಎಂಬತ್ತರ ದಶಕದ ಪ್ರಾರಂಭದಲ್ಲಿ ನಾನು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾದೆ. ಬರುವ ನಾನೂರು ರೂಪಾಯಿ ಸಂಬಳ ಸಂಪೂರ್ಣ ಖರ್ಚಾಗುತ್ತಿರಲಿಲ್ಲ. ನನ್ನ ಐದಾರು ತಿಂಗಳ ಉಳಿತಾಯದಲ್ಲಿ ಬಹುದಿನಗಳ ಬಯಕೆಯಾಗಿದ್ದ ಪ್ಯಾನಾಸೋನಿಕ್ ಟೂ ಇನ್ ಒನ್ ಖರೀದಿಸಿದೆ. ನಂತರ ನಾನು ಟೀವಿ, ಫ್ರಿಜ್, ವಾಷಿಂಗ್ ಮಷೀನ್-ಏನೆಲ್ಲಾ ಖರೀದಿಸಿದರೂ ಅದು ಉಳಿತಾಯದ ಹಣದಿಂದ ಮಾತ್ರ. ಸಾಲವನ್ನೇ ತೆಗೆಯದ ನಾನು ಸಹೋದ್ಯೋಗಿಗಳಿಗೆ ಒಂತರಾ ಅಚ್ಚರಿಯಾಗಿದ್ದೆ. ಎಷ್ಟೋ ಸಹೋದ್ಯೋಗಿಗಳು ನನ್ನ ಹೆಸರಿನಲ್ಲಿ ತಮಗೆ ಸಾಲ ಕೊಡಿಸಬೇಕೆಂದು, ಅದಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತೇವೆಂದು ಪುಸಲಾಯಿಸಿ ವಿಫಲರಾಗಿದ್ದರು! ಕೊನೆಗೆ ನಾನು ಸಾಲದ ಬೋಣಿ ಮಾಡಿದ್ದು ಮನೆಕಟ್ಟುವಾಗ!
ಹಾಗೆ ನೋಡಿದರೆ ಮೇಲಿನದು ನನ್ನ ಕಥೆ ಮಾತ್ರವಲ್ಲ, ನನ್ನ ತಲೆಮಾರಿನವರೆಗಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯುವಕರು ಕೆಲಸ ಸಿಕ್ಕೊಡನೆ ಮೊಬೈಲು, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೊಗುತ್ತಾರೆ. ಸಾಲ ಕೊಡುವವರಿದ್ದಾಗ ತೆಗೆದುಕೊಳ್ಳುವುದೇನು ತಪ್ಪಲ್ಲ ಬಿಡಿ, ಅಂತ ನೀವು ಅಂದುಕೊಳ್ಳಬಹುದು. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಆರ್ಥಶಾಸ್ತ್ರಜ್ಞರ ತಿಳಿವಳಿಕೆ. ಹೀಗೆ ಸಾಲ ಕೊಡುವವರು ದೇಶವನ್ನು ಉದ್ಧಾರ ಮಾಡುತ್ತಾರೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತಿಂಗಳು ತಿಂಗಳು ಸಾಲದ ಕಂತುಗಳಿಗಾಗಿ ಮೀಸಲಿಡಬೇಕಾಗುತ್ತದೆ ಎನ್ನುವುದಂತೂ ಖಾತ್ರಿ. ಹೀಗಿದ್ದರೂ ಒಂದು ಸಾಲ ತೀರಿದ ನಂತರ ಮತ್ತೊಂದು, ನಂತರ ಇನ್ನೊಂದು… ಹೀಗೆ ಮುಂದುವರೆಸುತ್ತಲೇ ಇರುತ್ತಾರೆ. ಇವರೆಲ್ಲಾ ಬಿಳಿ ಕಾಲರಿನ ಜೀತದಾಳುಗಳಲ್ಲದೇ ಮತ್ತೇನು?
ಸಾಲ ಕೊಳ್ಳುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಇವತ್ತಿನ ಯುವಕರನ್ನು ಕೇಳಿದರೆ, “ಟಾಟಾ, ಬಿರ್ಲಾ, ಅಂಬಾನಿಗಳೆ ಸಾಲ ತೊಗೊಳ್ತಾರೆ. ಅಷ್ಟೇ ಏನು ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಾ ಇದೆ. ಇನ್ನು ನಮ್ಮದೆಲ್ಲಾ ಯಾವ ಲೆಕ್ಕ” ಎನ್ನುವ ಉಡಾಫೆಯ ಮಾತು ಕೇಳಿಬರುತ್ತದೆ. ಉದ್ಯಮಿಗಳು ಅಥವಾ ಸರ್ಕಾರ ತೆಗೆದುಕೊಳ್ಳುವ ಸಾಲ ಬಂಡವಾಳ ಹೂಡಿಕೆಯ ರೂಪದಲ್ಲಿರುತ್ತದೆ. ಆದರೆ ವ್ಯಕ್ತಿಯೊರ್ವ ವ್ಯಾಪಾರ ವ್ಯವಹಾರಗಳ ಉದ್ದೇಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡುತ್ತಿದ್ದೇವೆ ಎಂದರ್ಥ. ಇದು ಸಾಲ ಪಡೆದವನನ್ನು ಹೊರತಾಗಿಸಿ ಇನ್ನೆಲ್ಲರನ್ನೂ, ಕೊನೆಗೆ ದೇಶವನ್ನೂ ಉದ್ಧಾರ ಮಾಡುತ್ತದೆ! ಇದರಿಂದಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿಯನ್ನು ಬಿಟ್ಟು ಹೋಗುವ ಬದಲು ಸಾಲದ ಹೊರೆಹೊರಿಸಿ ಹೋಗುವ ಅಪಾಯವೇ ಹೆಚ್ಚಿರುತ್ತದೆ. ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳನ್ನಾಗಿಸುವ ಪದ್ದತಿ ಈಗ ಬೇರೆ ರೂಪದಲ್ಲಿ ಮುಂದುವರೆಯುತ್ತಿದೆ ಅಷ್ಟೆ!
ಹಾಗೆ ನೋಡಿದರೆ ನಾಳೆಗಳನ್ನು ಇಂದೇ ತಿನ್ನುವ ಆಧುನಿಕ ಮಾನವನ ಈ ವಿಕೃತಿ ಬರಿಯ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಗರಿಕ ಜಗತ್ತು ಎಂದು ಕರೆಸಿಕೊಳ್ಳುವ ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೇರಿಕಾದ ದೇಶಗಳ ಕೈಗಾರಿಕಾ ಕ್ರಾಂತಿಯ ನಂತರದ ಟಿಪಿಕಲ್ ಮನೋಭಾವ ಇದಾಗಿದ್ದು, ಜೀವನದ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ಮುಂಬರುವ ನೂರಾರು ತಲೆಮಾರುಗಳಿಗಾಗಿ ಉಳಿಸಿ ಹೋಗಬೇಕಾಗಿರುವ ಭೂಮಿಯ ಆಳದಲ್ಲಿ ಸಿಗುವ ನೀರು, ಅದಿರುಗಳು, ತೈಲ ಮುಂತಾದವುಗಳನ್ನೆಲ್ಲಾ ನಾವು ಇಂದೇ ತಿಂಗು ತೇಗುತ್ತಿದ್ದೇವೆ. ಮಿತವಾಗಿ ಬಳಸಿ, ಆದರಲ್ಲಿ ಹೆಚ್ಚಿನದನ್ನು ರೂಪಾಂತರ ಮಾಡದೆ, ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳುವಂತ ಸ್ಥಿತಿಯಲ್ಲಿ ಅದಕ್ಕೇ ಹಿಂತಿರುಗಿಸಬೇಕಾದ ನಾವು ಯಕಶ್ಚಿತ್ ಸಾಲಗಾರರಂತೆ ಇಂದೇ ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದೇವೆ. ಜೊತೆಗೆ ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳದಂತಹ ತ್ಯಾಜ್ಯಗಳನ್ನು ನೀಡುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನಂತರ ಇರಬೇಕಾದ ವಾಯುಮಾಲಿನ್ಯದ ಮಟ್ಟವನ್ನು ಇಂದೇ ತಲುಪಿದ್ದೇವೆ.
ಇಷ್ಟೇ ಅಲ್ಲ, ಭವಿಷ್ಯವನ್ನು ಇಂದೇ ಅನುಭವಿಸುವುದು ನಮ್ಮ ಜೀವನ ಶೈಲಿಯೇ ಆಗಿಬಿಟ್ಟಿದೆ. ಮಕ್ಕಳು ತಮ್ಮ ವಯಸ್ಸಿಗೆ ಮೀರಿದ್ದನ್ನು ಕಲಿತು ಇಂದೇ ವಿದ್ವಾಂಸರಾಗಬೇಕೆಂದು ಅವರ ಮೇಲೆ ಏನೆಲ್ಲ ಒತ್ತಡ ಹೇರುತ್ತೇವೆ. ಚೈಲ್ಡ್ ಪ್ರಾಡಿಜಿ – ಬಾಲ ಪ್ರತಿಭೆಗಳ ಹಣೆಪಟ್ಟಿ ಹಚ್ಚಿ ಟೀವಿ ರಿಯಾಲಿಟಿ ಷೋಗಳು ಮುಗ್ಧ ಮಕ್ಕಳನ್ನು ಏನೆಲ್ಲಾ ಹಿಂಸೆಗೆ ಒಳಪಡಿಸುತ್ತಿವೆ. ಮಕ್ಕಳು ಬಾಲ್ಯವನ್ನೇ ಅನುಭವಿಸದೆ ದೊಡ್ಡವರಂತೆ ವರ್ತಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ. ದೇಹ, ಮನಸ್ಸುಗಳೆರೆಡೂ ಪ್ರೌಢವಾದ ನಂತರ ಅನುಭವಿಸಬೇಕಾದ ಲೈಂಗಿಕತೆಯನ್ನು ಹದಿನೈದು ವರ್ಷಕ್ಕೆ ಮೊದಲಿನಿಂದಲೇ ಅನುಭವಿಸುವ ಮಕ್ಕಳು ಮುಂದೆ ಅದರ ಆಕರ್ಷಣೆಯನ್ನೇ ಕಳೆದುಕೊಂಡು ಹೊಸ ಹೊಸ ಥ್ರಿಲ್-ರೋಮಾಂಚನಗಳನ್ನು ಹುಡುಕ ಹೊರಡುವುದನ್ನು ಪಾಶ್ಚಿಮಾತ್ಯರು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಒಲಂಪಿಕ್ ಮೆಡಲ್‍ಗಳ ಮೇಲಾಟಕ್ಕಾಗಿ ಮಕ್ಕಳನ್ನು ಕೃತಕವಾಗಿ ದೊಡ್ಡವರನ್ನಾಗಿಸಲು ಏನೆಲ್ಲಾ ಹಿಂಸೆ, ವಿಕೃತಿಗಳ ಮೊರೆ ಹೋಗುತ್ತಿದ್ದೇವೆ.
ಹೀಗೆ ಈ ಪ್ರವೃತ್ತಿಗೆ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ನಾಳೆಗಳನ್ನು ಇಂದೇ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಅನುಭವಿಸುವವರು ಹೆಚ್ಚು ಆಧುನಿಕರು, ಮುಂದುವರೆದವರು, ಅಭಿವೃದ್ಧಿ ಹೊಂದಿದವರು ಮತ್ತು ನಾಗರಿಕರು! ಇದು ಪಾಶ್ಚಿಮಾತ್ಯ ದೇಶಗಳು ನಮ್ಮ ಜನಗಳಲ್ಲಿ, ಜನ ನಾಯಕರುಗಳಲ್ಲಿ ಹುಟ್ಟು ಹಾಕಿರುವ ಮನೋವೈಕಲ್ಯ. ಈ ಅಪಾಯಕಾರೀ ಪ್ರವೃತ್ತಿಯಿಂದ ವೈಯುಕ್ತಿಕ ಮಟ್ಟದಲ್ಲಿ ನಾವು ಅಜೀವ ಜೀತದಾಳುಗಳಾದರೆ, ಮನುಕುಲದ ಮಟ್ಟದಲ್ಲಿ, ಲಕ್ಷಾಂತರ ವಷರ್Àಗಳು ಉಪಯೋಗಿಸಬಹುದಾದ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲಾ ಇಂದೇ ಬರಿದಾಗಿಸುತ್ತಿದ್ದೇವೆ.
ಪ್ರಕೃತಿಯ ಎಲ್ಲಾ ಚಲನೆಗೂ ಅದರದ್ದೇ ಆದ ವೇಗವಿರುತ್ತದೆ. ಅದನ್ನು ಕೃತಕವಾಗಿ ಹೆಚ್ಚಿಸುವ ಪ್ರಯತ್ನ ಮಾಡಿದಷ್ಟೂ ಮಾನವ ತಾನು ಬಲಶಾಲಿಯಾಗುತ್ತಿದ್ದೇನೆಂಬ ಭ್ರಮೆಯಲ್ಲಿ ನಿಃಶಕ್ತನಾಗುತ್ತಾ ಹೋಗುತ್ತಾನೆ. ಇದೆಲ್ಲದರ ತಾರ್ಕಿಕ ಕೊನೆ ಸರ್ವನಾಶವೆಂದು ಹೇಳಿದವರನ್ನು ಅಭಿವೃದ್ಧಿಯ ವಿರೋಧಿ, ಸಿನಿಕ, ನಿರಾಶವಾದಿಯೆಂದು ಹೀಗಳೆಯಲಾಗುತ್ತಿದೆ.
ನಡಹಳ್ಳಿ ವಸಂತ್
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಚೀಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಸೋಲಾರ್ ವಿಜ್ಞಾನಿ ಸಜ್ಜಾದ್ ಅಹವಮದ್‍ರವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಿ, ಪ್ರತಿಯೊಂದು ವಿಷಯದ ಏಕೆ, ಏನು? ಹೇಗೆ? ಎಂಬುವುದನ್ನು ಪ್ರಾರಂಭಿಸಿ, ಆಗ ನೀವು ಸಹ ವಿಜ್ಞಾನಿಯಾಗಬಹುದು ಎಂದರು. ತಾವು ತಯಾರಿಸಿದ್ದ ಸೋಲಾರ್ ಕಾರನ್ನು ಮಕ್ಕಳಿಗೆ ಪ್ರದರ್ಶಿಸಿದರು. ನಂತರ ಅದರ ಬಗ್ಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೊಡ್ಡನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು, ಸರ್.ಸಿ.ವಿ. ರಾಮನ್‍ರವರ ಬಗ್ಗೆ ಶಿಕ್ಷಕರಾದ ಶ್ರೀನಿವಾಸ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶಿವಶಂಕ ವಹಿಸಿ ಮಾತನಾಡುತ್ತಾ ಈ ವರ್ಷ ‘ರಾಷ್ಟ್ರೀಯ ವಿಜ್ಞಾನ ದಿನ’ ಮಹತ್ವದ್ದಾಗಿದ್ದು, 2015ರ ಧ್ಯೇಯವಾಕ್ಯ, “ರಾಷ್ಟ್ರ ನಿರ್ಮಾಣ ವಿಜ್ಞಾನ” ವಾಗಿದ್ದು ವಿದ್ಯಾರ್ಥಿಗಳು ಮುಂದಿನ ವರ್ಷಗಳಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನವ ಭಾರತ ನಿರ್ಮಾತೃಗಳಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಮೋಹನ್‍ರವರು ಆಗಮಿಸಿದ್ದು, ಶಿಕ್ಷಕರಾದ ಭವ್ಯರವರು, ಸ್ವಾಗತಿಸಿದರು, ಸವಿತರವರು ವಂದಿಸಿದರು. ಶಿಕ್ಷಕ ಎಂ.ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ದಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ದಿ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೀಮನಹಳ್ಳಿ ಗೋಪಾಲ್ ಉಪಾಧ್ಯಕ್ಷರಾಗಿ ರವಿ.ಎಂ.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಘೋಷಣೆ ಮಾಡಿದ್ದಾರೆ.
ತಾಲ್ಲೂಕಿನ ಪಿ.ಎಲ್.ಡಿ.ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ 15 ರ ಭಾನುವಾರದಂದು ಚುನಾವಣೆ ನಡೆದಿತ್ತು, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅರ್ಭರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು, ಅಧ್ಯಕ್ಷ ಸ್ಥಾನಕ್ಕೆ ಅಬ್ಲೂಡು ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿ.ಎಂ.ಗೋಪಾಲ್, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಜಿಗುಂಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಪಿ.ರವಿ ಅವರು ಮಾತ್ರ ಅರ್ಜಿಗಳನ್ನು ಸಲ್ಲಿಸಿದ್ದರಿಂದ ಇಬ್ಬರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರನ್ನು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿನಂದಿಸಿದರು.
ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿ.ಪಂ.ಅಧ್ಯಕ್ಷ ವಿ.ಸುಭ್ರಮಣಿ, ಮಾಜಿ ತಾ.ಪಂ.ಅಧ್ಯಕ್ಷ ಮೌಲಾ, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಗಂಗನಹಳ್ಳಿ ಬಿ.ಸಿ.ವೆಂಕಟೇಶಪ್ಪ, ಮುತ್ತೂರು ಚಂದ್ರೇಗೌಡ, ನಗರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ಎಂ.ಮುನಿಕೃಷ್ಣಪ್ಪ, ಅಶ್ವಥ್ಥರೆಡ್ಡಿ, ಮಳಮಾಚನಹಳ್ಳಿ ಗ್ರಾ.ಪಂ.ಅಧ್ಯಕ್ಷ ರಾಮಾಂಜಿನಪ್ಪ, ಗುಡಿಹಳ್ಳಿ ನಾರಾಯಣಸ್ವಾಮಿ, ಮಯೂರ, ಕಾಳನಾಯಕನಹಳ್ಳಿ ಮಂಜುನಾಥ್, ಹಾಗೂ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರುಗಳು ಹಾಜರಿದ್ದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಾಗರೀಕರು ನಿಖರವಾದ ಮಾಹಿತಿಯನ್ನು ನೀಡಬೇಕು
ಏಪ್ರಿಲ್ 11 ರಿಂದ ನಡೆಯುವಂತಹ ಎಲ್ಲಾ ಸಮುಧಾಯಗಳ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದ ಕೈಗೆತ್ತಿಕೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಾಗರೀಕರು ಹೆಚ್ಚಿನ ಸಹಕಾರ ನೀಡಿ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಕೋರಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆಯೋಜನೆ ಮಾಡಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಜಾತಿಗಳು ಮತ್ತು ಉಪಜಾತಿಗಳಿದ್ದು, ಎಲ್ಲಾ ಜಾತಿವರ್ಗದ ಜನಾಂಗಗಳ ಅಭಿವೃದ್ದಿಗೆ ಪೂರಕವಾಗಿ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಅನುಧಾನಗಳನ್ನು ಬಿಡುಗಡೆ ಮಾಡಲು ಈ ಸಮೀಕ್ಷಾಕಾರ್ಯವು ಸಹಕಾರಿಯಾಗಲಿದೆ, ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಸರಕಾರ ಸಾಮಾಜಿಕ, ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಕೈಗೊಂಡಿದ್ದು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿ ನಾಗರೀಕರಿಂದ ನಿಖರವಾದ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು, ಸರ್ಕಾರದಿಂದ ನೀಡಿರುವ ನಮೂನೆಗಳನ್ನು ಭರ್ತಿಮಾಡುವಾಗ ಜಾಗ್ರತೆಯಿಂದ ಭರ್ತಿಮಾಡಿ, ಜಾತಿ, ಮತ್ತು ಉಪಜಾತಿಗಳ ಬಗ್ಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ನಾಗರೀಕರು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಅವರಿಗೆ ತಿಳುವಳಿಕೆ ನೀಡಬೇಕು, ಪ್ರತಿಯೊಂದು ಗ್ರಾಮಗಳಲ್ಲಿರುವ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಈ ಸಮೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಸಹಕಾರ ನೀಡಬೇಕು, ನಾಗರೀಕರು ಕೂಡಾ ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡದೆ ನಿಖರವಾದ ಮಾಹಿತಿಯನ್ನು ಗಣತಿದಾರರಿಗೆ ನೀಡುವ ಮುಖಾಂತರ ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಬಸಪ್ಪ, ಶಿಡ್ಲಘಟ್ಟ ನಗರಸಭೆಯ ಮುಖ್ಯಾಧಿಕಾರಿ ಎಸ್.ಎ.ರಾಮ್‍ಪ್ರಕಾಶ್, ಶಿಕ್ಷಣ ಸಂಯೋಜಕ ಹಾಗೂ ಮಾಸ್ಟರ್ ಟ್ರøನರ್ ಮನ್ನಾರಸ್ವಾಮಿ, ಶಂಕರನಾರಾಯಣ, ಹೆಚ್.ನರಸಿಂಹಯ್ಯ, ಸಹಾಯಕ ಸಾಂಖಿಕ ಅಧಿಕಾರಿ ಅನಿಲ್‍ಕುಮಾರ್ ಮುಂತಾದವರು ಹಾಜರಿದ್ದರು.
ಅನ್ವೇಷಣೆಯ ನಿರಂತರತೆ . . . . . . . .
ನ್ಯೂಟನ್ ಎಂಬ ವಿಜ್ಞಾನಿ ಗುರುತ್ವಾಕರ್ಷಣೆ ಕುರಿತು ಅನ್ವೇಷಣೆಯನ್ನು ಮಾಡಿದ್ದು ಮರದ ಮೇಲಿನಿಂದ ಸೇಬುಹಣ್ಣೊಂದು ನೆಲಕ್ಕೆ ಬಿತ್ತು ಎಂಬುದರಿಂದ ಎಂಬ ಮಾತಿದೆ. ಅದು ಆ ಕ್ಷಣದ ಅರಿವಿನ ಸ್ಪೋಟದಿಂದ ಹುಟ್ಟಿದ ಅನ್ವೇಷಣೆ. ಹೀಗೇ ಹಲವೊಂದು ಅನ್ವೇಷಣೆಗಳು ಥಟ್ಟನೆ ಹೊಳೆದ ಯೋಚನೆಗಳಿಂದಾಗಿ ರೂಪುಗೊಂಡಿದ್ದು. ಅನಂತರ ಕೂಡ ಅವರು ಆ ದಿಶೆಯಲ್ಲಿ ಅನ್ವೇಷಣೆಗಳನ್ನು ಮುಂದುವರಿಸಿದ್ದರ ಪರಿಣಾಮದಿಂದಾಗಿ ನಮಗೆ ಆ ಕುರಿತಾಗಿ ಸೂತ್ರಗಳು ಸಿಗುವಂತಾದದ್ದು. ಮಾನವ ಸ್ವಭಾವತಃ ಕುತೂಹಲವನ್ನು ಹೊಂದಿದ್ದು – ತನ್ನ ಕುತೂಹಲದ ತಣಿಕೆಗಾಗಿ ಪ್ರಯತ್ನಿಸುವುದರಿಂದಲೇ ಅನೇಕ ಅನ್ವೇಷಣೆಗಳು ಸಾಧ್ಯವಾದದ್ದು. ಹೊಸ ಹೊಸ ಅನ್ವೇಷಣೆಗಳ ಕುರಿತಾದ ತುಡಿತ ಮಾನವನ ಸಹಜ ಗುಣವೇ ಆಗಿದ್ದಿರುತ್ತದೆ. ಆದರೆ ಇಂಥ ಅನ್ವೇಷಣೆಗಳಿಗೆ ಪ್ರೇರಕವಾಗುವ ಸಂಗತಿಗಳಾವುವು ಎಂದು ಯೋಚಿಸಿ – ಚಾಲ್ತಿಗೆ ತಂದ ಮಾತುಗಳೆಂದರೆ – Necessity is the mother of invention. ಅವಶ್ಯಕತೆಯೇ ಅನ್ವೇಷಣೆಗೆ ಮೂಲ. ಹಾಗೇ Curiosity is the mother of invention. ಕುತೂಹಲವೇ ಅನ್ವೇಷಣೆಯ ಮೂಲ. Interest is the mother of invention – ಆಸಕ್ತಿಯೇ ಅನ್ವೇಷಣೆಯ ಮೂಲ. ಈ ಎಲ್ಲ ಮಾತುಗಳು ನಿಜ. ಆದರೆ ಎಲ್ಲಿಯವರೆಗೆ ಎಂಬುದೇ ಯಕ್ಷ ಪ್ರಶ್ನೆ.
ಅನ್ವೇಷಣೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಹೀಗಿದ್ದಾಗ ‘ಅವಶ್ಯಕತೆಯೇ ಅನ್ವೇಷಣೆಗೆ ಮೂಲ’ ಎಂಬ ತತ್ವ ಬಹುಶಃ ಹೆಚ್ಚು ಬಾಳಿಕೆಗೆ ಬರಲಾರದು. ಏಕೆಂದರೆ ಅವಶ್ಯಕತೆ ಪೂರೈಸಿದಾಕ್ಷಣ ಅನ್ವೇಷಣೆ ನಿಲ್ಲುವ ಸಾಧ್ಯತೆ ಇದೆ. ಅಗತ್ಯಕ್ಕನುಗುಣವಾಗಿ ಕೆಲಸವಾದರೆ ಅನಂತರ ಯಾರೂ ಆ ಕುರಿತು ಚಿಂತಿಸುತ್ತ ಹೋಗುವುದಿಲ್ಲ. ಇನ್ನೊಂದು ಅಗತ್ಯ ಎದುರಾದಾಗಲಷ್ಟೇ ಇನ್ನೊಂದರ ಅನ್ವೇಷಣೆಗೆ ತೊಡಗಬಹುದು! ಹಾಗೇ ತೃಪ್ತಿಪಡುವ ಸಂದರ್ಭವೇ ಅಧಿಕ. ನೀರು ಸೇದಲು ರಾಟೆ ಸಿಕ್ಕ ಕ್ಷಣ ಆ ಅವಶ್ಯಕತೆ ಪೂರ್ಣಗೊಂಡಂತೆ. ಅದನ್ನಷ್ಟು ಉತ್ತಮಗೊಳಿಸಲು ಚಿಂತಿಸಿದರೂ ನಡೆಯುತ್ತದೆ. ಬಿಟ್ಟರೂ ನಡೆಯುತ್ತದೆ ಎಂಬಂತ್ತಾದರೆ ಅನ್ವೇಷಣೆ ನಿರಂತರ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ. ಒಂದು ಹಂತದ ನಿಲುಗಡೆಗೆ ಬಂದು ತಲಿಪಿದಂತಷ್ಟೇ ಆಗಿಬಿಡಬಲ್ಲದು. ಇದೇ ರೀತಿಯಲ್ಲಿ ‘ಕುತೂಹಲವೇ ಅನ್ವೇಷಣೆಯ ಮೂಲ,’ ಎಂಬುದು ಕೂಡ. ಕುತೂಹಲ ತಣಿದ ಮರುಕ್ಷಣವೇ ಅನ್ವೇಷಣೆಯ ಅಗತ್ಯ ನಿಂತುಬಿಡಬಹುದು! ಒಂದು ಕೇವಲ ತಾತ್ಕಾಲಿಕ ಅನ್ವೇಷಣೆಯೇ ವಿನಃ ನಿರಂತರವಾದ ಪ್ರಕ್ರಿಯೆಯಲ್ಲ. ಹಾಗೇ ‘ಆಸಕ್ತಿಯೇ ಅನ್ವೇಷಣೆಯ ಮೂಲ’ಎಂಬ ಉಕ್ತಿ ಕೂಡ ಕಾಲವನ್ನಾಧರಿಸಿದ್ದು. ಆಸಕ್ತಿ ಕಡಿಮೆಯಾದಂತೆ ಅನ್ವೇಷಣೆಯ ಕುರಿತಾದ ತೀವ್ರತೆಯೂ ಕಡಿಮೆಯಾಗುತ್ತ ಸಾಗಲು ಸಾಧ್ಯ. ಹೀಗಿದ್ದಾಗ ಮೇಲೆ ಉಲ್ಲೇಖಿಸಿದ ಮೂರೂ ವ್ಯಾಖ್ಯೆಗಳಿಗೆ ಒಂದು ಮಿತಿ ದತ್ತವಾಗುತ್ತದೆ. ಅಂದರೆ ಈ ಎಲ್ಲ ಸಂದರ್ಭಗಳಲ್ಲೂ ಅನ್ವೇಷಣೆ ಎಂಬುದು ಆಯಾ ಕಾಲಕ್ಕೆ – ಆ ಕಾಲದ ಆಸಕ್ತಿಗೆ ಅನುಗುಣವಾಗಿ ಮಾತ್ರ ನಡೆಯುತ್ತದೆ. ಅಂದರೆ ಅನ್ವೇಷಣೆಯು ಮುಂದುವರೆಯುವುದಕ್ಕೆ ಸಾಧ್ಯವಾಗದೇ ಹೋಗುವ ಸಂದರ್ಭಗಳೇ ಅಧಿಕ. ಒಂದಾದ ಅನಂತರ ಇನ್ನೊಂದರ ಅನ್ವೇಷಣೆ ಅಥವಾ ಒಂದು ಅನ್ವೇಷಣೆಯ ಅನಂತರ ಅದೇ ಜಾಡಿನಲ್ಲಿ ಇನ್ನಷ್ಟು ಅನ್ವೇಷಣೆಗಳನ್ನು ಕೈಗೊಳ್ಳಬೇಕೆಂದಾದರೆ ಅದಕ್ಕೆ ಬದ್ಧವಾಗುವ ಮನಸ್ಥಿತಿಯೊಂದು ಪ್ರಾಪ್ತವಾಗಬೇಕು. ನಿರಂತರ ಹುಡುಕಾಟದ ಚಲನಶೀಲತೆ ಸದಾ ಜಾಗೃತವಾಗಿರಬೇಕು ಎಂತಾದರೆ ಅನ್ವೇಷಣೆಯ ಕುರಿತಾಗಿ ಅನ್ವೇಷಕನಿಗೆ ಒಂದು ತಲುಬಿರಬೇಕು – ಅದೊಂದು ದಿವ್ಯ ಉನ್ಮಾದವಾಗಬೇಕು ಅಥವಾ ಅನ್ವೇಷಣೆಯೇ ಒಂದು ಹುಚ್ಚು ಯಾ ಗೀಳಾಗಿರುವುದು ಅಗತ್ಯ. ಹಾಗಾಗಿ ಅನ್ವೇಷಣೆಯ ನಿರಂತರತೆಗೆ ಅಗತ್ಯವಾದದ್ದು ಆ ಕುರಿತು ಅನ್ವೇಷಕನಲ್ಲಿ ಸ್ಥಾಯಿಯಾಗಿರುವ – ಸದಾ ಜಾಗೃತವಾಗಿರುವ ತಲುಬಿನ ಸ್ಥಿತಿ. ಹಾಗಿಲ್ಲದೇ ಇದ್ದಲ್ಲಿ ಅನ್ವೇಷಣೆಯೂ ಕೇವಲ ಯಾಂತ್ರಿಕ ಕ್ರಿಯೆಯಾಗುವ ಸಾಧ್ಯತೆಯಿದೆ. ಅಲ್ಲಿ ಸೃಜನಶೀಲತೆಯ ದಿವ್ಯ ಅನುಪಸ್ಥತಿ ಏರ್ಪಡಬಹುದು. ದಿವ್ಯ ಧ್ಯಾನಸ್ಥ ಸ್ಥಿತಿಯೊಳಗೆ ಕ್ರಿಯಾಶೀಲತೆ ಏರ್ಪಡುತ್ತಿರಬೇಕು.
ವೈಜ್ಞಾನಿಕ ಆವಿಷ್ಕಾರಗಳಷ್ಟೇ ಅಲ್ಲದೇ ಕಲೆ ಮತ್ತು ಸಾಹಿತ್ಯದ ಸಂದರ್ಭಗಳಲ್ಲೂ ಅನ್ವೇಷಣೆಯ ನಿರಂತರತೆ ಅಗತ್ಯ. ಒಬ್ಬ ಕಲಾವಿದ ಒಂದೇ ನಾಟಕದ ಒಂದೇ ಪಾತ್ರವನ್ನು ಹಲವು ಬಾರಿ ಅಭಿನಯಿಸಿದಾಗಲೂ ಅದು ಪ್ರತಿ ಬಾರಿಗೂ ಬೇರೆ ಅಥವಾ ಭಿನ್ನವಾಗಿರಲು ಸಾಧ್ಯವಾಗುವುದು ಅವನ ತಲುಬಿಗನುಗುಣವಾಗಿಯೇ. ಕೆಲವೊಮ್ಮೆ ಅಂದಿನ ಅಮಲಿಗೆ ಅನುಗುಣವಾಗಿಯೂ ಇರಲು ಸಾಧ್ಯ. ಅಮಲು ಕೇವಲ ಮದ್ಯ ಮತ್ತಿತರ ಮತ್ತೇರುವುದರಿಂದ ಮಾತ್ರ ಉತ್ಪನ್ನವಾಗುವುದು ಎಂದಷ್ಟೇ ಭಾವಿಸಬೇಕಾಗಿಲ್ಲ. ಪಾತ್ರವೊಂದರಲ್ಲಿ ತನ್ನಷ್ಟಕ್ಕೆ ತಾನೇ ಮೈಮರೆಯುವುದೂ ಒಂದು ತಲುಬು. ನಮ್ಮ ಯಕ್ಷಗಾನದ ಕಲಾವಿದರಲ್ಲಿ ಕೆಲವರಿಗೆ ಅದೇ ಒಂದು ತಲುಬು. ಚಂಡೆ – ಮದ್ದಳೆಯ ಸದ್ದೇ ಅವರಲ್ಲಿ ಹೆಜ್ಜೆ ಹಾಕುವ ಉಮೇದನ್ನು ಹುಟ್ಟಿಸುತ್ತಿರುತ್ತದೆ. ಒಂದು ಪಾಲ್ಗೊಳ್ಳುವಿಕೆಯೇ ತಲುಬಾಗಿ – ಅದೊಂದು ದಿವ್ಯ ವ್ಯಸನವಾಗಲಿಕ್ಕೂ ಸಾಕು. ಕೇವಲ ಕಲಿತ ಲೆಕ್ಕಾಚಾರದೊಳಗೇ ಉಳಿದರೆ ಉತ್ತಮ ಕಲಾವಿದ ಆಗಬಹುದು ಆದರೆ ಶ್ರೇಷ್ಠ ದರ್ಜೆಯವನು ಎನ್ನಿಸಿಕೊಳ್ಳಲು ಆ ಕಲಿತ ಲೆಕ್ಕಾಚಾರವನ್ನೂ ಮಿಕ್ಕಿ ಮೀರುವ ಪ್ರಯತ್ನದಲ್ಲಿ ಸಫಲತೆ ಸಾಧ್ಯವಾಗಬೇಕಾದದ್ದು ಅಗತ್ಯ. ಇಂಥ ತಲುಬಿನಿಂದ ಹಲವು ಬಾರಿ ಮನೆಮಂದಿಗೆ ಮತ್ತು ಸುತ್ತಮುತ್ತಲಿನವರಿಗೆ ಕಿರಿ ಕಿರಿ ಹುಟ್ಟಬಹುದು. ಅವರೆಲ್ಲಾ ದೂಷಿಸಲೂಬಹುದು. ದಿನನಿತ್ಯದ ಮಾಮೂಲಿ ಬದುಕಿಗಿಂತ ಭಿನ್ನವಾದ ಕ್ಷಣದಲ್ಲಿ – ಅವನನ್ನೇ ಒಂದು ವಿಚಿತ್ರ ಪ್ರಾಣಿಯನ್ನಾಗಿಯೋ, ನಿಷ್ಪ್ರಯೋಜಕ ಘಟಕವೆಂತಲೋ, ಕಾಣುವಂತಾಗಲೂ ಸಾಧ್ಯವಿದೆ. ಬೇರೆ ಸಾಮಾನ್ಯರಿಗಿಂತ – ಅವರ ಸಾಮಾನ್ಯ ನಡಾವಳಿಕೆಗಳಿಗಿಂತ ಭಿನ್ನವಾದಲ್ಲಿ ಇಂಥದ್ದು ಸಹಜ. ಆದರೆ ಬೇರೆಯವರಿಗಿಂತ ಭಿನ್ನವಾಗದಿದ್ದಲ್ಲಿ – ಭಿನ್ನವಾದ ಬೇರೊಂದು ಬಗೆಯ ಅನ್ವೇಷಣೆ ಅಸಾಧ್ಯ. ಹೀಗೆ ಬೇರೊಂದು ಬಗೆಯ ಅನ್ವೇಷಣೆ ಎಷ್ಟರ ಮಟ್ಟಿಗೆ ಈ ಸಮಾಜಕ್ಕೆ ಒಳಿತನ್ನು ನೀಡುತ್ತದೆ ಎಂಬುದು ಬೇರೆಯದೇ ಆದ ಪ್ರಶ್ನೆ. ಕಲೆ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಯೋಚಿಸಿದಾಗ – ಸಾಮಾಜಿಕ ಒಳಿತು ಎನ್ನುವುದು ಅಪ್ರಸ್ತುತವೂ ಆಗಿಬಿಡಬಹುದು. ಅಂತರಂಗದ ಅನಾವರಣ ಪ್ರಕ್ರಿಯೆಯಲ್ಲಿ ಪ್ರಾದುರ್ಭವಿಸುವ ಸಾಹಿತ್ಯ ಅಥವಾ ಕಲೆಗೆ ಸಮಾಜಕ್ಕೆ ಅನ್ನವನ್ನು ನೀಡುವ ಸಾಮಥ್ರ್ಯವಿದೆ ಎಂದು ಭಾವಿಸಲಾಗದು. ಹಾಗಂತ ಅದು ವ್ಯರ್ಥವೆನ್ನಲೂ ಸಾಧ್ಯವಿಲ್ಲ. ಯಾಕೆಂದರೆ ಕೇವಲ ಅನ್ನವನ್ನು ತಿನ್ನುವುದಷ್ಟೇ ಬದುಕಲ್ಲ. ಅಂಥ ಮಿತಿಯೊಳಗಿನ ಬದುಕು ಬಹುಶಃ ನಿಜವಾದ ಬದುಕೂ ಕೂಡ ಅಲ್ಲ.
ಇದೇ ಲೇಖಕನ ಇತ್ತೀಚಿನ ಕವಿತೆ ‘ಕವಳದಂತೆ ಕವಿತೆ’ ಯಲ್ಲಿ ಹೇಳಿದ ಹಾಗೆ ‘ನಿಜವಾದ ತಲುಬುಳ್ಳವ ಮಾತ್ರ ಅಸಲಿ ಕಸುಬಿ’. ಇಲ್ಲಿ ‘ಅಸಲಿ’ ಎಂಬುದು ‘ನಕಲಿ’ ಎಂಬುದರ ವಿರುದ್ಧಾರ್ಥಕ ಪದವಲ್ಲ. ಅಸಲಿ ಎಂದರೆ ‘ಅಪ್ಪಟ’ ಎಂಬುದರೊಟ್ಟಿಗೆ ಕೇವಲ ಕಲಿತದ್ದನ್ನು ಹಾಗೇ ಒಪ್ಪಿಸುವ ಗಿಳಿಪಾಠವಲ್ಲ. ಅನುಕರಣೆಯಲ್ಲ ಎಂಬ ಅರ್ಥದಲ್ಲಿ ಗ್ರಹಿಸುವುದು ಸಾಧ್ಯವಾಗಬೇಕು. ತಲುಬೆನ್ನುವುದು ಕೇವಲ ನಿಶೆಯಲ್ಲ. ನಿಶೆಯಲ್ಲಿ ನಿಷ್ಕ್ರಿಯಗೊಳ್ಳುವುದಲ್ಲ. ಬದಲಿಗೆ ಕ್ರಿಯಾಶೀಲ ಧ್ಯಾನಸ್ಥ ಸ್ಥಿತಿ. ಅನ್ವೇಷಣೆಯ ಮೂಲ ಬಿಂದು. ಅಂಥ ತಲುಬು ಸದಾ ಇದ್ದಾಗ ಸದಾ ಹೊಸತು -ಹೊಸತರ ಹೊಸ ಹೊಸ ಹೊಳಹುಗಳು ಜನ್ಮ ತಾಳಲು ಸಾಧ್ಯ ಮತ್ತು ಅಂಥ ಹೊಳಹುಗಳ ಮೂಲಕವಾಗಿ ಅನ್ವೇಷಣೆಯ ಅನಂತ ಮಾರ್ಗಗಳು ಗೋಚರಿಸುತ್ತಾ ಹೋಗಲು ಸಾಧ್ಯವೆಂದು ಘೋಷಿಸಿದರೆ ಅದು ವ್ಯಾಖ್ಯೆಯಾದೀತೆ ವಿನಃ ಅಪವಾದವಾಗಲಾರದು. ಯಾವುದೇ ವ್ಯಾಖ್ಯೆಗಾದರೂ ಅಪವಾದವಿರುವುದು ಸಹಜ. ಹಾಗಂತ ಅಪವಾದಗಳನ್ನೇ ವ್ಯಾಖ್ಯೆಗಳೆಂದು ಕರೆಯಲಾಗುವುದಿಲ್ಲ.
ಅನ್ವೇಷಣೆಯೊಂದರ ಮೂಲ ಬೇರೆ. ಅನ್ವೇಷಣೆಯೊಂದರ ನಿರಂತರತೆ ಬೇರೆ. ಯಾವುದೇ ಅನ್ವೇಷಣೆ ಒಂದು ಘಟ್ಟವನ್ನು ತಲುಪಿದಾಕ್ಷಣ ಸ್ತಬ್ಧವಾದರೆ – ಅದು ಒಂದು ಉದ್ದೇಶಕ್ಕೆ ಮಾತ್ರ ಮಿತಿಗೊಂಡಂತೆ ಅಥವಾ ಒಂದು ಕುತೂಹಲದ ತಣಿಕೆಗೆ ಮಾತ್ರ ಸೀಮಿತಗೊಂಡಂತೆ. ಹಾಗೇ ಒಂದು ಮಿತಿಗೆ ಮಾತ್ರ ಸೀಮಿತವಾಗದೇ ಸದಾ ಮುಂದುವರೆಯುತ್ತಲೇ ಸಾಗುತ್ತಿರಬೇಕೆಂಬ ಆಶಯವನ್ನು ಹೆಣೆದಿದ್ದರೆ ಅದಕ್ಕೆ ಖಂಡಿತವಾಗಿಯೂ ತಲುಬು ಇರಲೇಬೇಕು. ಅದೇ ಹಗಲು – ರಾತ್ರಿ ಕಾಡುತ್ತ ಕಾಡುತ್ತ ಅತೃಪ್ತಿಯಿಂದ ತೃಪ್ತಿ ಪಡೆಯಬೇಕೆಂಬ ಹಪ ಹಪಿಕೆ ಜೀವಂತವಾಗಿರುವಷ್ಟು ಕಾಲವೂ ಅದರ ನಿರಂತರತೆ ಸಾಧ್ಯವಾಗುತ್ತದೆ. ಇದೇ ದೃಷ್ಟಿಯಿಂದಲೇ ಇರಬೇಕು ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ‘ತೃಪ್ತಿಯೆಂದರೆ ಸಾವು. ಅತೃಪ್ತಿಯೆಂದರೆ ಬದುಕು.’ ಒಳಗುದಿಯೊಂದು ಸದಾ ಜಾಗೃತವಾಗಿದ್ದರೆ ಅಥವಾ ಅದನ್ನಷ್ಟು ಜಾಗೃತವಾಗಿಟ್ಟುಕೊಳ್ಳಬೇಕೆಂದು – ಹಿಡಿದದ್ದನ್ನಷ್ಟು ಮುಗಿಸುವುದಷ್ಟೇ ಅಲ್ಲದೇ ಮುಂದೇನು? ಮುಂದೇನು? ಎಂದು ಪ್ರಶ್ನಿಸಿಕೊಳ್ಳುತ್ತಲೇ – ಉತ್ತರಗಳನ್ನು ಕಂಡುಕೊಳ್ಳುತ್ತಲೇ ಮತ್ತೆ ಮುಂದುವರಿಯುವ ಮನುಷ್ಯನ ತಲುಬು – ಭವಿಷ್ಯದಲ್ಲಿ ಮತ್ತಷ್ಟು – ಮಗದಷ್ಟು ಆವಿಷ್ಕಾರಗÀಳಿಗೆ ಇಂಬುಕೊಡುವ ಕ್ರಿಯಾಶಕ್ತಿಯಾಗಬಹುದು. ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ ‘ತಲುಬು’ ಬೇರೆ ‘ತೆವಲು’ ಬೇರೆ. ಒಂದು ಧನಾತ್ಮಕವಾದರೆ ಇನ್ನೊಂದು ಋಣಾತ್ಮಕ.
ರವೀಂದ್ರ ಭಟ್ ಕುಳಿಬೀಡು
ಭೂತಾನ್ ದೇಶದಲ್ಲಿ ಶಿಡ್ಲಘಟ್ಟದ ಕಲಾವಿದರ ಕಲಾಪ್ರದರ್ಶನ
ಸೃಜನಶೀಲ ಹವ್ಯಾಸವನ್ನು ಹೊಂದಿರುವ ನಗರದ ಇಬ್ಬರು ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ.
ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿರುವ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ ನಿವಾಸಿ ಅಜಿತ್ ಕೌಂಡಿನ್ಯ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಡಿ.ಜಿ.ಮಲ್ಲಿಕಾರ್ಜುನ ಅವರ ಚಿತ್ರಗಳ ಕಲಾಪ್ರದರ್ಶನವನ್ನು ಭೂತಾನ್ ದೇಶದಲ್ಲಿ ಆಯೋಜಿಸಲಾಗಿದೆ. ಭೂತಾನ್ ದೇಶದ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ನ ಕಲಾ ಗ್ಯಾಲರಿಯಲ್ಲಿ ಮಾರ್ಚ್ 4 ರಿಂದ 6 ರವರೆಗೂ ಮೂರು ದಿನಗಳ ಕಾಲ ಅವರ ಕಲಾ ಪ್ರದರ್ಶನ ನಡೆಯಲಿದೆ.
ಭಾರತ ತನ್ನ ಗಡಿ ದೇಶಗಳಾದ ಬಾಂಗ್ಲಾದೇಶ, ಬರ್ಮಾ, ನೇಪಾಳ, ಚೀನಾ, ಪಾಕಿಸ್ತಾನಗಳೊಂದಿಗೆ ಹಲವಾರು ತಕರಾರುಗಳನ್ನು ಹೊಂದಿದೆ. ಆದರೆ ಇವೆಲ್ಲವುಗಳ ಅಪವಾದದಂತೆ ಭೂತಾನ್ ಭಾರತಕ್ಕೆ ಆಪ್ತಮಿತ್ರನಂತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭೇಟಿ ನೀಡಿದ ಮೊಟ್ಟಮೊದಲ ರಾಷ್ಟ್ರ ಭೂತಾನ್. ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಜನರಿರುವ ದೇಶ ಎನ್ನುವುದು ಭೂತಾನ್ನ ಅಗ್ಗಳಿಕೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಉಳಿಸಿಕೊಂಡಿದೆ. ಎಲ್ಲಾ ದೇಶಗಳೂ ತಮ್ಮ ಪ್ರಗತಿಯನ್ನು ತಲಾದಾಯದಲ್ಲಿ ಅಳೆದರೆ, ಭೂತಾನ್ ತನ್ನ ಪ್ರಗತಿಯನ್ನು ರಾಷ್ಟ್ರೀಯ ಸಂತಸ ಸೂಚ್ಯಂಕದಲ್ಲಿ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್) ಕಾಣುತ್ತದೆ.
ಭಾರತ ಮತ್ತು ಭೂತಾನ್ ಸಂಬಂಧಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಹಲವಾರು ಕಾರ್ಯಕ್ರಮಗಳನ್ನು ಭೂತಾನ್ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ ಆಯೋಜಿಸುತ್ತಿದ್ದು, ಶಿಡ್ಲಘಟ್ಟದ ಕಲಾವಿದರ ಪ್ರದರ್ಶನವೂ ಅದರಲ್ಲಿ ಸೇರಿದೆ.

ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿರುವ ಅಜಿತ್ ಕೌಂಡಿನ್ಯ ಅವರ ಮುಖಪುಟ ವಿನ್ಯಾಸಗಳು, ಡಿ.ಜಿ.ಮಲ್ಲಿಕಾರ್ಜುನ ಅವರ ವನ್ಯಜೀವಿ, ಭಾವಾಭಿವ್ಯಂಜಕ, ಹಕ್ಕಿಗಳ ಮತ್ತು ಮ್ಯಾಕ್ರೋ ಛಾಯಾಚಿತ್ರಗಳ ಪ್ರದರ್ಶನವು ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಕೊಂಡಿಯಾಗುತ್ತಿದೆ.


‘ವಿದೇಶದಲ್ಲಿ ಕಲಾ ಪ್ರದರ್ಶನ ನಡೆಸುವುದು ಅದರಲ್ಲೂ ನಮ್ಮ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಭೂತಾನ್ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ಗೆ ನಾವು ಕೆ.ಎಸ್.ಎಂ.ಟ್ರಸ್ಟ್ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಿ ತೆರಳುತ್ತಿದ್ದು, ಡಾ.ಎಂ.ಬೈರೇಗೌಡ ಅವರ ‘ಸೋರೆ ಬುರುಡೆ’, ‘ಕಿನ್ನುಡಿಯ ಬೆಳಕಲ್ಲಿ’ ಮತ್ತು ‘ಸ್ವಪ್ನಸಿದ್ಧಿ’ ಎಂಬ ಕನ್ನಡ ಜನಪದ ನಾಟಕಗಳು, ಛಾಯಾಚಿತ್ರಗಳ ಹಾಗೂ ಮುಖಪುಟ ವಿನ್ಯಾಸಗಳ ಪ್ರದರ್ಶನವನ್ನು ನಡೆಸುತ್ತೇವೆ. ‘ಭಾರತ ಭೂತಾನ್ ಸ್ನೇಹ ಸಂಸ್ಕೃತಿ’ ಎಂಬ ನಮ್ಮ ಮೂರು ದಿನಗಳ ಸಾಂಸ್ಕೃತಿಕ ಪ್ರದರ್ಶನದ ನಡುವೆ ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ, ಡಿ.ಜಿ.ಮಲ್ಲಿಕಾರ್ಜುನ ಅವರು ಕನ್ನಡದಲ್ಲಿ ಬರೆದಿರುವ, ಸೌಮ್ಯ ಅವರ ಇಂಗ್ಲಿಷ್ ಅನುವಾದದ ‘ಭೂತಾನ್– ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್’ ಎಂಬ ಪ್ರವಾಸ ಕಥನವನ್ನೂ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕ್ರಮವನ್ನು ಭೂತಾನ್ ದೇಶದಲ್ಲಿನ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಉದ್ಘಾಟಿಸಲಿದ್ದಾರೆ’ ಎಂದು ಅಜಿತ್ ಕೌಂಡಿನ್ಯ ಮತ್ತು ಡಿ.ಜಿ.ಮಲ್ಲಿಕಾರ್ಜುನ ತಿಳಿಸಿದರು.

