ಚಲವಾದಿ, ಬಲಗೈ, ಹೊಲಯ, ಮಹರ್ ಜನಾಂಗಗಕ್ಕೆ ಸೇರಿದ 40 ಜಾತಿಗಳು ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಹರಡಿದ್ದು, ಹಲವಾರು ಹೆಸರುಗಳಿಂದ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಚಲವಾದಿ ಜಿಲ್ಲಾ ಘಟಕದ ಅಧ್ಯಕ್ಷ ತ್ಯಾಗರಾಜ್ ತಿಳಿಸಿದರು.
ನಗರದಲ್ಲಿ ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಜಾತಿ ಜನಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಹಿಂದುಳಿದ ಆಯೋಗದ ಮೂಲಕ ನಡೆಸುತ್ತಿದೆ. ಇದೊಂದು ಸವಿವರ ಜನಗಣತಿಯಾಗಿದ್ದು, ಇದರಲ್ಲಿ ಚಲವಾದಿ ಬಿ 027, ಹೊಲೆಯ ಬಿ 044, ಮಹರ್ ಬಿ 062, ಬಲಗೈ ಬಿ 015 ಎಂದು ಕಾಲಂ 6 ರಲ್ಲಿ ನಮೂದಿಸಬೇಕು. ನಮೂನೆ ಮೂರರಲ್ಲಿರುವ ಅನುಸೂಚಿ ಕಾಲಂ ಸಂಖ್ಯೆ 7 ರಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಈಗಾಗಲೆ ತಿಳಿಸಿರುವ ಜಾತಿ ಹೆಸರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ, ಹೊಲಯ, ಚಲವಾದಿ, ಮಹರ್, ಮಾಲ ಇತ್ಯಾದಿ ಹೆಸರುಗಳನ್ನು ಕಾಣಿಸಬಹುದು ಎಂದು ಹೇಳಿದರು.
ಜನಾಂಗದವರ ಜನಸಂಖ್ಯೆ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳು ಸರಿಯಾಗಿ ದೊರಕಿದಲ್ಲಿ ಅನುಕೂಲಕರ. ಜಿಲ್ಲೆಯಲ್ಲೂ ಚಲವಾದಿ ಜನಾಂಗದವರಿಗೆ ಈ ಮೂಲಕ ಸರ್ಕಾರಿ ಯೋಜನೆಗಳು ತಲುಪಿಸಲು ಸಹಾಯಕ ಎಂದು ಹೇಳಿದರು.
ಚಲವಾದಿ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಯ್ಯ, ಎಸ್.ವಿ.ಮೂರ್ತಿ, ನಾಗಣ್ಣ, ಮುನಿಕೃಷ್ಣಪ್ಪ, ಗೋಪಾಲಕೃಷ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
ಜಾತಿ ಜನಗಣತಿಯಲ್ಲಿ ಚಲವಾದಿ ಎಂದು ನಮೂದಿಸಿ
ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಮಕ್ಕಳಿಗೆ ಬಾಂಡ್ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬುಧವಾರ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಹೆಚ್ಚು ಅಂಕಗಳಿಸಿರುವ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಐವರು ಮಕ್ಕಳಿಗೆ ಒಟ್ಟು 20 ಸಾವಿರರೂಪಾಯಿಗಳನ್ನು ಸಮನಾಗಿ ಬಾಂಡ್ ಮೂಲಕ ವಿತರಿಸಿದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ
ಅಂತರ್ಜಲದ ಕುಸಿತದಿಂದ ನೀರಿನ ಫ್ಲೂರೈಡೀಕರಣಗೊಂಡು ಹಲ್ಲುಗಳು ಟೊಳ್ಳಾಗುವುದು, ಹಲ್ಲುಗಳಲ್ಲಿ ಕುಳಿಗಳುಂಟಾಗುವುದು ಸಂಭವಿಸುತ್ತಿದ್ದು, ದಂತದ ಆರೋಗ್ಯದ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಭಾರತೀಯ ರೆಡ್ಕ್ರಾಸ್ ಸೊಸೈಟಿ, ಯುನಿಟಿ ಸಿಲ್ಸಿಲಾ ಫೌಂಡೇಷನ್, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ವಿಜಯಾ ಮೆಡಿಕಲ್ಸ್ ಸಹಯೋಗದಲ್ಲಿ ನಡೆದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯು ದುಬಾರಿಯಾಗುತ್ತಿದೆ. ಅದರಲ್ಲಿಯೂ ದಂತದ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಕಾಳಜಿವಹಿಸುತ್ತಿಲ್ಲ. ಕೆಲವಾರು ಸಂಸ್ಥೆಗಳು ಕೈಜೋಡಿಸಿ ಈ ರೀತಿಯ ದಂತ ಚಿಕಿತ್ಸೆಯ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ದಂತ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳಿಗೆ ಯುನಿಟಿ ಸಿಲ್ಸಿಲಾ ಫೌಂಡೇಷನ್ ಮತ್ತು ವಿಜಯಾ ಮೆಡಿಕಲ್ಸ್ ವತಿಯಿಂದ ಉಚಿತವಾಗಿ ಹಲ್ಲುಜ್ಜುವ ಬ್ರೆಷ್ ಮತ್ತು ಪೇಸ್ಟ್ ವಿತರಿಸಿದರು. ಸುಮಾರು 150 ಮಂದಿ ದಂತ ತಪಾಸಣೆಗೆ ಒಳಗಾದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗುರುಬಸಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ರೆಡ್ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ, ದಂತವೈದ್ಯರಾದ ಡಾ.ಕುಬ್ರಾ ಅಂಜುಮ್, ಡಾ.ಪ್ರತಿಭಾ, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ಡಾ.ವಿಜಯಾ, ವಿಜಯಾ ಮೆಡಿಕಲ್ಸ್ ಮಂಜುನಾಥ್, ಯುನಿಟಿ ಸಿಲ್ಸಿಲಾ ಫೌಂಡೇಷನ್ನ ಮಹಮ್ಮದ್ ಅಸ್ಸದ್, ಅಕ್ರಂಪಾಷ, ಇಮ್ತಿಯಾಜ್ ಪಾಷ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕರ್ನಾಟಕ ದರ್ಶನ ಪ್ರವಾಸಕ್ಕೆ ಸರ್ಕಾರಿ ಪ್ರೌಢಶಾಲೆಯ 175 ವಿದ್ಯಾರ್ಥಿಗಳು
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಸರ್ಕಾರಿ ಪ್ರೌಢಶಾಲೆಗಳಿಂದ ಆಯ್ಕೆ ಮಾಡಿರುವ 175 ವಿದ್ಯಾರ್ಥಿಗಳು ನಾಲ್ಕು ದಿನಗಳ ಕಾಲ ಕರ್ನಾಟಕ ದರ್ಶನ ಪ್ರವಾಸಕ್ಕೆ ಹೊರಟ ನಾಲ್ಕು ಬಸ್ಸುಗಳಿಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹಾಜರಿದ್ದರು.
ಸೂರಿಲ್ಲದ ಮನೆಯಲ್ಲಿ ವೃದ್ಧೆಯ ಬದುಕು
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಅಪ್ಪಸಾನಹಳ್ಳಿಯಲ್ಲಿ ವೃದ್ಧೆಯೊಬ್ಬರ ಅತಂತ್ರ ಜೀವನವು ಸಾಗಿದೆ.
ಸರ್ಕಾರದಿಂದ ಸಿಗುವ ಅನುದಾನದಲ್ಲಿ ಹೊಸ ಮನೆ ಕಟ್ಟಿಸಿಕೊಳ್ಳಲು ಮೂರು ವರ್ಷಗಳ ಹಿಂದೆ ಶಿಥಿಲವಾಗಿದ್ದ ಮನೆಯನ್ನು ಅಪ್ಪಸಾನಹಳ್ಳಿಯ ಷರುಫುನ್ನಿಸಾ ಕೆಡವಿಸಿದ್ದರು. ಮನೆಯ ಪಾಯ ಹಾಕಿಸಲು ಮಾತ್ರ ಸರ್ಕಾರದಿಂದ ಅನುದಾನ ದೊರಕಿದೆ. ಗೋಡೆಗಳನ್ನು ಸುಮಾರು 75 ಸಾವಿರ ರೂಗಳಿಗೂ ಹೆಚ್ಚು ಸಾಲ ಮಾಡಿ ಕಟ್ಟಿಸಿ ಇನ್ನು ಸಾಧ್ಯವಿಲ್ಲವೆಂದು ನಿಲ್ಲಿಸಿಬಿಟ್ಟಿದ್ದಾರೆ.
ಈ ವೃದ್ಧೆಯ ಅಡುಗೆ, ವಾಸ, ಸ್ನಾನ ಎಲ್ಲಕ್ಕೂ ಸೂರಿಲ್ಲದ ಮನೆಯಲ್ಲೇ ನಡೆಯಬೇಕಿದೆ. ಸ್ವಾಭಿಮಾನಿಯಾದ ಈಗೆ ಪಕ್ಕದ ಮನೆಯವರು ಕರೆದರೂ ಹೋಗುವುದಿಲ್ಲ. ಮಗಳು ಮತ್ತು ಅಳಿಯ ಆಸರೆಗೂ ಒಳಪಟ್ಟಿಲ್ಲ. ಕೇವಲ ಸರ್ಕಾರದ ಅನುದಾನಕ್ಕಾಗಿ ಆಕೆಯು ಕಾಯುತ್ತಿದ್ದಾರೆ.
‘ನನ್ನ ಜೀವನ ಕಷ್ಟಕರವಾಗಿದೆ. ಕೂಲಿ ಮಾಡಿ ಜೀವನ ನಡೆಸುವ ನನಗೆ ಚಳಿ, ಮಳೆ, ಗಾಳಿಯಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನನ್ನ ಮನೆಯ ಅನುದಾನವನ್ನು ಬಿಡುಗಡೆ ಮಾಡಿದರೆ ಮನೆ ಪೂರ್ಣ ಮಾಡಿಕೊಳ್ಳುವೆ’ ಎನ್ನುತ್ತಾರೆ ವೃದ್ಧೆ ಷರುಫುನ್ನಿಸಾ.
‘ಈಕೆ ಸ್ವಾಭಿಮಾನಿ. ಅಕ್ಕಪಕ್ಕದವರು, ನೆಂಟರು ಕರೆದರೂ ಹೋಗಿಲ್ಲ. ಇಲ್ಲೇ ಕಷ್ಟದಲ್ಲೇ ಬದುಕು ಸವೆಸುತ್ತಿದ್ದಾರೆ. ಸರ್ಕಾರದ ಅನುದಾನಗಳು ಸಮರ್ಪಕವಾಗಿ ಜಾರಿಗೊಳ್ಳದಿರುವುದು ಈ ಸೂರಿಲ್ಲದ ಬದುಕಿಗೆ ಸಾಕ್ಷಿಯಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ವೃದ್ಧೆಯ ಬದುಕಿಗೆ ಸೂರು ಒದಗಿಸಲಿ’ ಎಂದು ನೆರೆಯ ವಾಸಿ ಬಾಬುರೆಡ್ಡಿ ತಿಳಿಸಿದರು.
ಅಶಕ್ತ ವೃದ್ಧ ದಂಪತಿಗಳಿಗೆ ಮಾಸಾಶನ
ಬಡವರ ಬದುಕಿಗೆ ದಾರಿತೋರಿಸುವುದು ನಮ್ಮ ಮೂಲ ಉದ್ದೇಶ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ದೊಡ್ಡಬಂದರಘಟ್ಟ ಗ್ರಾಮದ ವೃದ್ಧ ದಂಪತಿಗಳಾದ ಮುದ್ದಪ್ಪ ಮತ್ತು ಕದಿರಮ್ಮ ಅವರಿಗೆ ಐದು ನೂರುಗಳ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ನಮ್ಮ ಕಾರ್ಯಕರ್ತರು ಸರ್ವೇಕ್ಷಣೆ ನಡೆಸುತ್ತಿರುವಾಗ ಈ ಹಳ್ಳಿಯಲ್ಲಿ ಯಾವುದೇ ಆಸರೆಯಿಲ್ಲದೆ, ದುಡಿಯಲು ಶಕ್ತಿಯಿಲ್ಲದ ಪರಿಸ್ಥಿತಿಯಲ್ಲಿ ಗ್ರಾಮದ ಗಡಿಯಂಚಿನ ರಸ್ತೆ ಬದಿ ಗುಡಿಸಲಲ್ಲಿ ನೆಲೆಸಿರುವ ದಂಪತಿಗಳನ್ನು ಗುರುತಿಸಿದರು. ವೃದ್ಧ ಮುದ್ದಪ್ಪನಿಗೆ ನಡುವಿನ ಕೆಳಗೆ ಸ್ವಾಧೀನವಿಲ್ಲದೆ ಪರಾವಲಂಬಿಯಾದರೆ, ಕದಿರಮ್ಮ ವಾಸಿಯಾಗದ ಬಾಯುಣ್ಣು ಕಾಡುತ್ತಿದೆ. ಅವರಿಗೆ ಬದುಕಲು ಆಸರೆ ಹಾಗೂ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ಮುಂದೆ ಅದನ್ನು ಹೆಚ್ಚಿಸಲಾಗುವುದು. ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಗ್ರಾಮದ ಸದಸ್ಯರನ್ನೂ ಸಂಪರ್ಕಿಸಿದ್ದು, ಈ ಅಶಕ್ತ ವೃದ್ಧರಿಗೆ ನಿವೇಶನವನ್ನೂ ಕೊಡಲು ಅವರು ಒಪ್ಪಿದ್ದಾರೆ. ಅಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮನೆ ಕಟ್ಟಿಕೊಡಲು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಭುವನೇಶ್ವರಿ ಸ್ವಸಹಾಯ ಸಂಘದ ಪ್ರಬಂಧಕಿ ಪುಷ್ಪ, ಸಹಯೋಜಕಿ ನಾರಾಯಣಮ್ಮ, ಮೇಲ್ವಿಚಾರಕ ಶಶಿಕುಮಾರ್, ಸೇವಾ ಪ್ರತಿನಿಧಿ ಪ್ರಮೀಳಮ್ಮ, ಚೌಡರೆಡ್ಡಿ, ಸಂಜೀವರೆಡ್ಡಿ, ಅಶೋಕ್, ರಾಮಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ರಿಕೆಟ್ ಮೇಲೇಕೆ ಕಿರಿಕಿರಿ?
ಕ್ರೀಡಾಭಿಮಾನಿಗಳು `ದೇಶದಲ್ಲಿ ಕ್ರಿಕೆಟ್‍ಗೇ ವಿಪರೀತ ಆದ್ಯತೆಯಿದೆ. ಹಾಗಾಗಿಯೇ ನಾವು ಒಲಂಪಿಕ್ಸ್ ಪದಕ ಗಳಿಕೆಯಲ್ಲಿ ಹಿಂದುಳಿದಿದ್ದೇವೆ. ಇನ್ನಾದರೂ ಕ್ರಿಕೆಟ್ ಅಂಧಾಭಿಮಾನದಿಂದ ಹೊರಬರಬೇಕು’ ಎಂಬರ್ಥದ ಆಕ್ರೋಶ ತೋರುತ್ತಾರೆ. ಇದರ ಅಗತ್ಯವಿದೆಯೇ ಎನ್ನುವ ಪ್ರಶ್ನೆ ವಿಶ್ಲೇಷಕರನ್ನು ಕಾಡುತ್ತಲೇ ಇದೆ.
ಬ್ರಿಟಿಷರು ತಂದು ಪರಿಚಯಿಸಿದ ಕ್ರಿಕೆಟ್, ಅದೊಂದೇ ಕಾರಣಕ್ಕೆ ನಮ್ಮಲ್ಲಿ ಜನಪ್ರಿಯವಾಯಿತೆಂದರೆ ತಪ್ಪು. ಮೊತ್ತಮೊದಲಾಗಿ, ಕ್ರಿಕೆಟ್‍ನ ವೈಶಿಷ್ಟ್ಯಗಳತ್ತ ನೋಡಬೇಕು. ಖರ್ಚು ವೆಚ್ಚಗಳ ತಂಟೆಯಿಲ್ಲದೆ, ಲಭ್ಯ ಸೌಕರ್ಯದಲ್ಲಿಯೇ ಕ್ರಿಕೆಟ್‍ನ್ನು ಆರಾಮವಾಗಿ ಆಡಬಹುದು. ಚೆಂಡು ಬೇಕಲ್ಲವೇ? ಕಾಗದದ ದೊಡ್ಡ ಸುರುಳಿಯೇ ಚೆಂಡಾದೀತು. ಉರುಟಾದ ಯಾವುದೇ ಕಾಯಿಯಾದರೂ ಸೈ. ಬ್ಯಾಟ್ ಖರೀದಿಸದಿದ್ದರೇನಂತೆ, ಮನೆಯಲ್ಲಿರುವ ಕಟ್ಟಿಗೆ ತುಂಡು, ರೀಪಿನ ತುಂಡು ಸಾಕು! ಪುಟ್ಟ ಅಂಗಳ, ರಸ್ತೆ ಬದಿ, ಕೊನೆಗೆ ಮನೆಯ ವರಾಂಡದಲ್ಲಾದರೂ ಕ್ರಿಕೆಟ್ ಆಡಬಹುದು.
ಬಹುಷಃ ಈ ತರದ `ಫ್ಲೆಕ್ಸಿಬಿಲಿಟಿ’ಯೇ ಕ್ರಿಕೆಟ್‍ನ ಅತ್ಯುತ್ತಮ ಆಕರ್ಷಣೆ. ಇದ್ದಷ್ಟು ಸಮಯದಲ್ಲಿ ಆಟ ಆಡಬಹುದು. ವೈಯುಕ್ತಿಕವಾಗಿ `ರನ್ ಸಾಧನೆ’ ಇರುವುದರಿಂದ, ವಿಕೆಟ್ ಗಳಿಕೆ ಸಾಧ್ಯವಿರುವುದರಿಂದ ಆಟದ ಅಂತ್ಯಕ್ಕೆ ಆಡುವವರ ಇಗೋಗೂ ಸಮಾಧಾನ ತಂದುಕೊಡುತ್ತದೆ. ರಾಷ್ಟ್ರೀಯ ಕ್ರೀಡೆ ಎಂಬ ಖ್ಯಾತಿಯ ಹಾಕಿಯನ್ನು ಆಡಬೇಕೆಂದರೆ ಯಬಡಾ ಬಡಸಾ ಹಾಕಿ ಸ್ಟಿಕ್ ಉಪಯೋಗವಾಗುವುದಿಲ್ಲ. ಮೈದಾನವೂ ಸಮತಟ್ಟಾಗಿರಬೇಕು. ಉಬ್ಬು ತಗ್ಗುಗಳಿದ್ದಲ್ಲಿ ಡ್ರಿಬ್ಲಿಂಗ್ ಕಲಿಯಲು ಸಾಧ್ಯವೇ? ಇನ್ನು ಟೆನಿಸ್, ವಾಲಿಬಾಲ್‍ಗಳಿಗೆ ರ್ಯಾಕೆಟ್, ಚೆಂಡು, ಹೀಗೆ ಖರ್ಚಿನ ಬಾಬತ್ತಿನ ಬೇಡಿಕೆಗಳೇ. ಚೆಸ್ ಆಡುವೆವೆಂದರೂ ಚೆಸ್ ಕಾಯಿ, ಬೋರ್ಡ್‍ನ್ನಾದರೂ ತಂದುಕೊಳ್ಳಲೇಬೇಕು.
ಇಂದು ಬಡ ಭಾರತೀಯ ಶೂಟಿಂಗ್ ಸ್ಪರ್ಧೆಯ ಕನಸು ಕಾಣುವುದೂ ದುಬಾರಿ. ಶೂಟಿಂಗ್ ರೇಂಜ್ ಸ್ಥಾಪಿಸುವುದು ಲಕ್ಷಗಳ ಮಾತು. ಅತ್ಯಾಧುನಿಕ ಪಿಸ್ತೂಲ್ ಹೊಂದಲೂ ಮತ್ತೆ ಲಕ್ಷಗಳನ್ನೇ ಸುರಿಯಬೇಕು. ಲಕ್ಷ್ಯದ ವಿಚಾರ ಮತ್ತೆಲ್ಲಿ? ಸಚಿನ್, ದ್ರಾವಿಡ್, ಧೋನಿಗಳನ್ನು `ಮಿಮಿಕ್’ ಮಾಡುತ್ತ ಕನಸಿನ ಲೋಕದಲ್ಲಿ ತೇಲಲು ಕ್ರಿಕೆಟ್‍ನಲ್ಲಿ ಸಾಧ್ಯ. ಅಭಿನವ್ ಬಿಂದ್ರಾರಂತೆ ಕನವರಿಸಲು ಪಿಸ್ತೂಲ್ ಕೈಯಲಿಲ್ಲ. ಹೆಚ್ಚೆಂದರೆ, ಯಾವುದೋ ಪಿಸ್ತೂಲ್ ಹಿಡಿದುಕೊಂಡರೂ ಪೋಲೀಸರು ಬಂದು ಎಳೆದೊಯ್ಯುತ್ತಾರೆ, ಶಂಕಿತ ಉಗ್ರಗಾಮಿ ಎನ್ನುತ್ತ!
ಕ್ರಿಕೆಟ್‍ನ ಜನಪ್ರಿಯತೆಗೆ ಒಂದು ವಿಚಿತ್ರ ಕಾರಣವಿದೆ. ಇದನ್ನು ಯಾರು ಬೇಕಾದರೂ ಆಡಬಹುದು. ಬೂನ್, ರಣತುಂಗರ ತರಹದ ದಡಿಯ, ಚಂದ್ರಶೇಖರ್, ವೆಂಕಟಪತಿ ರಾಜು ಮಾದರಿಯ ಕಡ್ಡಿ ಪೈಲ್ವಾನ್, ಕಲುವಿತರಣ, ಪೀಯೂಷ್ ಚಾವ್ಲಾ ತರಹದ ಕುಳ್ಳರೂ ಕ್ರಿಕೆಟ್ ಪಕ್ಷಪಾತಿಯಲ್ಲ. ಅವರವರ ಆಳ್ತನಕ್ಕೆ, ಸಾಮಥ್ರ್ಯಕ್ಕೆ ಹೊಂದಬಹುದಾದ ಕಾರ್ಯಕ್ಷೇತ್ರಗಳನ್ನು ಆಯ್ದುಕೊಳ್ಳಲು ಕ್ರಿಕೆಟ್‍ನಲ್ಲಿ ಅವಕಾಶವಿದೆ. ಹೋಗಿ, ಐದಡಿಯ ಯುವಕ ಬಾಸ್ಕೆಟ್‍ಬಾಲ್ ಆಡುವುದು ದುಸ್ಸಾಹಸ. ಮಂದಗತಿಯ ಚಲನೆಯವ ಫುಟಬಾಲ್ ಆಗಬಹುದಷ್ಟೇ, ಆಡಲಾರ! ಇನ್ನಾವುದು ಬೇಡ ಎಂದರೂ ಚೆಸ್ ಆಡಲು ಮೆದುಳು ಬೇಕು!!
ಭಾರತ ಕ್ರಿಕೆಟ್‍ನಲ್ಲಿ ಮಾತ್ರ ಮೂರು ವಿಶ್ವಕಪ್ ಗೆದ್ದಿದೆ. ಹಾಗೆಂದರೆ, ಕ್ರಿಕೆಟ್ ಅಲರ್ಜಿಯ ಮಂದಿ `ಬಿಡಿ, ಕ್ರಿಕೆಟ್ ವಿಶ್ವದಲ್ಲಿ ಆಡುವುದು ಬರೀ ಒಂಬತ್ತು ರಾಷ್ಟ್ರಗಳಲ್ಲಿ. ಅದೆಂತ ವಿಶ್ವದರ್ಜೆಯ ಆಟ?’ ಎನ್ನುತ್ತಾರೆ. ಊಹ್ಞೂ, ಇದು ಕೂಡ ಅಸೂಯೆಯ ಪ್ರತಿಬಿಂಬವೇ ವಿನಃ ವಾಸ್ತವವಲ್ಲ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ – ಐಸಿಸಿಯಲ್ಲಿ 120 ಸದಸ್ಯ ರಾಷ್ಟ್ರಗಳಿವೆ. ಇವೆಲ್ಲ ಕ್ರಿಕೆಟ್ ಆಡುವ ದೇಶಗಳು. ಇತರ ಆಟಗಳಲ್ಲೂ ಭಾರತ – ಬರ್ಮುಡಾ ಕ್ರಿಕೆಟ್ ತಂಡಗಳ ತಾಕತ್ತಿನಲ್ಲಿ ಕಾಣುವ ಅಂತರ ಕಂಡುಬರುತ್ತದೆ. ವಿಶ್ವ ಫಿಫಾ ರ್ಯಾಂಕಿಂಗ್‍ನಲ್ಲಿ 153ನೇ ಸ್ಥಾನದ ಭಾರತ ಬ್ರೆಜಿಲ್ ವಿರುದ್ಧ ಆಡಿದಂತೆ! ಅಷ್ಟಕ್ಕೂ ಫುಟಬಾಲ್ ವಿಶ್ವಕಪ್‍ನಲ್ಲಿ ಅಗ್ರ ಎಂಟು ತಂಡದಲ್ಲಿ ಕೆಲವೇ ದೇಶಗಳು ಕಾಣಿಸಿಕೊಳ್ಳುತ್ತವೆ ಎಂದರೆ ಅಸಮತೋಲನ ಅಲ್ಲೂ ಇದೆ ಎಂತಲೇ ಅಲ್ಲವೇ?
ಡೇವಿಸ್ ಕಪ್ ಟೆನಿಸ್‍ನ ಪ್ರಮುಖ ಸ್ಪರ್ಧೆಯಲ್ಲಿ ಕೇವಲ 16 ತಂಡಗಳು ಪಾಲ್ಗೊಳ್ಳುತ್ತವೆ. ಫುಟಬಾಲ್‍ನಲ್ಲಿ 32. ಇದರರ್ಥ ಇವಿಷ್ಟೇ ದೇಶಗಳಲ್ಲಿ ಈ ಆಟಗಳಿವೆ ಎಂದಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇವು ಮುಂದಿವೆ ಎನ್ನಬಹುದು. ಕ್ರಿಕೆಟ್‍ನಲ್ಲೂ ಅಷ್ಟೇ, ಆಟದ ತಾಕತ್ತು ತೋರಿದರೆ ಇನ್ನಾವುದೇ ಹತ್ತನೇ ರಾಷ್ಟ್ರ ಮುಖ್ಯ ಪಂಕ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಬೇರೆ ಆಟಗಳ ಹಿರಿಮೆಯ ಬಗ್ಗೆ ಕ್ರಿಕೆಟ್‍ಗೆ ಗೌರವವಿದೆ. ಉಳಿದವರು ಕ್ರಿಕೆಟ್‍ನ್ನು ಆದರಿಸುವ ಹೃದಯ ವೈಶಾಲ್ಯ ಬೇಡವೇ?
ಕ್ರಿಕೆಟ್‍ನ ಆಟದ ಸ್ವರೂಪದಿಂದಾಗಿ ಅದು ಜಾಹೀರಾತುದಾರರಿಗೂ ಅಚ್ಚುಮೆಚ್ಚು. ಅತಿ ಜನಸಂಖ್ಯೆಯ ಭಾರತೀಯ ಉಪಖಂಡದಲ್ಲಿ ಕ್ರಿಕೆಟ್ ಜನಪ್ರಿಯವಾಗಿರುವುದರಿಂದ ಅದಕ್ಕೆ ಗ್ರಾಹಕ ವಸ್ತು ತಯಾರಕರ ಮುಚ್ಚಟ್ಟೆ ಅರ್ಥವಾಗುವಂತದ್ದು. ಇನ್ನೊಂದು ಕಾರಣವಿದೆ. ಕ್ರಿಕೆಟ್‍ನಲ್ಲಿ ಓವರ್‍ಗಳ ಮಧ್ಯದ ಸಮಯ, ವಿಕೆಟ್ ಬಿದ್ದಾಗಿನ ವೇಳೆಗಳೆಲ್ಲ ಜಾಹೀರಾತು ಸ್ಲಾಟ್! ಬೇರೆ ಆಟದಲ್ಲಿ, ನೇರಪ್ರಸಾರದ ವೇಳೆ ಆಟವನ್ನು ವಂಚಿಸದೆ ಜಾಹೀರಾತು ಹಾಕುವುದು ಸುಲಭವಲ್ಲ. ಫುಟಬಾಲ್, ಹಾಕಿ, ಮೋಟಾರ್ ರೇಸಿಂಗ್….. ಊಹ್ಞೂ.
ಇಲ್ಲ, ಕ್ರಿಕೆಟ್‍ಗೆ ಬೆಳೆಯುವ ಅವಕಾಶವೇ ಹೆಚ್ಚು. 20 – 20 ಅವತರಿಸಿರುವುದು ವಿಶ್ವದ ಮತ್ತಷ್ಟು ದೇಶಗಳಿಗೆ ಈ ಕ್ರೀಡೆ ಹಬ್ಬಲು ನೆಪವಾಗುತ್ತಿದೆ. ಈಗಾಗಲೇ ಚೀನಾದ ದೃಷ್ಟಿ ಕ್ರಿಕೆಟ್‍ನತ್ತ ಬಿದ್ದಿದೆ. ಈಗಾಗಲೇ ಚೀನಾದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಇದೆ. 2012ರ ವರ್ಷಕ್ಕೆ 60 ಸಹಸ್ರ ಮಂದಿ ಕ್ರಿಕೆಟ್ ಆಡುವ `ಪರಿಣಿತ’ರನ್ನಾಗಿಸುವ ಗುರಿ ಹೊಂದಲಾಗಿತ್ತು. ಅಲ್ಲೀಗ 140 ಅಧಿಕೃತ ಅಂಪೈರ್, ಕೋಚ್‍ಗಳಿದ್ದಾರೆ. 100 ಶಾಲೆ, 10 ಸಾವಿರ ವಿದ್ಯಾರ್ಥಿಗಳಿಗೆ ಕ್ರಿಕೆಟ್ ರುಚಿ ಹತ್ತಿಸಲಾಗಿದೆ.
ಕ್ರಿಕೆಟ್ ಟೀಕಾಕಾರರಿಗೆ ತಿಳಿಸಬೇಕಾದ ಕೊನೆಯ ವಿಚಾರವೆಂದರೆ, 2020ರ ಒಲಂಪಿಕ್ಸ್‍ನಲ್ಲಿ 20 – 20 ಕ್ರಿಕೆಟ್ ಪದಕದ ಸ್ಪರ್ಧೆಯಾಗುವ ಎಲ್ಲ ಸಾಧ್ಯತೆಗಳಿವೆ!
– ಮಾ.ವೆಂ.ಸ. ಪ್ರಸಾದ.
ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಪೋಲೀಸರ ವಶಕ್ಕೆ
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡನಹಳ್ಳಿ ಬಳಿ ಸುಮಾರು ಎರಡು ಲಕ್ಷ ರೂಗಳ ಬೆಲೆಯ ಮರಳನ್ನು ನಾಲ್ಕು ಲಾರಿಗಳ ಸಮೇತವಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ‘ವರ್ಲಿ ಚಿತ್ರಕಲಾ’ ಕಾರ್ಯಾಗಾರ
ತಾಲ್ಲೂಕಿನ ತಾತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ‘ವರ್ಲಿ ಚಿತ್ರಕಲಾ’ ಕಾರ್ಯಾಗಾರವನ್ನು ಕವಯತ್ರಿ ಗೌರಿಬಿದನೂರು ಮಂಜುಳಾ ಏರ್ಪಡಿಸಿದ್ದರು.
ಬೆಂಗಳೂರಿನ ಅಜೀಂ ಪ್ರೇಮ್ಜಿ ಫೌಂಡೇಶನ್ನ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್, ಗಂಗಾಧರ್ ಮತ್ತು ದಿನೇಶ್ ಚಿತ್ರಕಲೆಯ ಇತಿಹಾಸ, ಹಿನ್ನೆಲೆ, ಬೆಳೆದು ಬಂದ ಬಗೆ ವಿವರಿಸಿ, ವರ್ಲಿ ಚಿತ್ರಕಲೆಯ ಮೂಲ ಲಕ್ಷಣಗಳನ್ನು ಉದಾಹರಣೆ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತನ್ಮಯರಾಗಿ ವರ್ಲಿ ಚಿತ್ರಗಳನ್ನು ಬಿಡಿಸಿದರು. ಗುಡಿಹಳ್ಳಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೂ ಸಹ ಶಿಬಿರದಲ್ಲಿ ಭಾಗವಹಿಸಿದ್ದರು.
ನಂತರ ಕನಕಪುರದ ಜಾದೂಗಾರ ಗಂಗಾಧರ್ ಅವರು ವಿವಿಧ ಮ್ಯಾಜಿಕ್ ಟ್ರಿಕ್ಗಳನ್ನು ಪ್ರದರ್ಶಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆಲ್ಲಾ ಪ್ರಮಾಣಪತ್ರ ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಮ್ಮ, ಸಹಶಿಕ್ಷಕರಾದ ದೇವರಾಜ್, ಗಣೇಶ್ಬಾಬು, ಎಚ್.ಆರ್.ಮಂಜುನಾಥ್, ಡಿ.ಎಸ್.ಶ್ರೀಕಾಂತ್, ತ್ರಿವೇಣಿ, ಶ್ರೀನಿವಾಸ ಯಾದವ್, ಬಾಲಚಂದ್ರ, ಎಸ್.ಕಲಾಧರ್, ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಚಿತ್ರಕಲಾ ಶಿಕ್ಷಕ ನಾಗರಾಜ್ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.
ಅಧ್ಯಯನವಿರಲಿ ಅಭ್ಯುದಯಕೆ
ಆಯುರ್ವೇದ ಗಂಥವಾದ ಚರಕ ಸಂಹಿತೆಯಲ್ಲಿ ಜ್ಞಾನವನ್ನು ಪಡೆಯುವ ವಿವಿಧ ವಿಧಾನಗಳು, ಅಧ್ಯಯನ ವಿಧಿಗಳು ಹೇಳಲ್ಪಟ್ಟಿದೆ. ಈ ವಿಶೇಷ ಅಂಶಗಳು ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರಿ. ಈ ಅಂಶಗಳ ಮೇಲೆ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
1. ಅಧ್ಯಯನ ಮಾಡಬೇಕಾದ ವಿಷಯದ ಬಗ್ಗೆ ತಿಳಿವು ಇರಬೇಕು.
2. ವಿಷಯವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು.
3. ಓದುವ ವಿಷಯವನ್ನು ಉದಾಹರಣೆಗಳೊಂದಿಗೆ, ಪ್ರಾಯೋಗಿಕಗಳ ಸಹಾಯದಿಂದ ಆರ್ಥಮಾಡಿಕೊಳ್ಳಬೇಕು.
4. ವಿಷಯವನ್ನು ತಿಳಿದವರ ಸಹಾಯದಿಂದ ತಿಳಿಯಬೇಕು.
5. ಅಧ್ಯಯನ ಮಾಡುವ ಸ್ಥಳ ಹಾಗೂ ವಾತಾವರಣ ಶುದ್ಧವಾದ ಗಾಳಿ ಬೆಳಕುಗಳಿಂದ ಕೂಡಿರಬೇಕು.
6. ಅಧ್ಯಯನ ಮಾಡುವ ಮೊದಲು ಸ್ನಾನ ಮಾಡಿಕೊಂಡು ಶುದ್ಧವಾದ ವಸ್ತ್ರವನ್ನು ಧರಿಸಿರಬೇಕು.
7. ಶಾಂತ ಮನಸ್ಸಿನಿಂದ ಕ್ರಮಬದ್ಧವಾಗಿ, ಹಂತ ಹಂತವಾಗಿ ವಿಷಯಗಳನ್ನು ಅರ್ಥಮಾಡಿಕೊಂಡು ಅಧ್ಯಯನ ಮಾಡಬೇಕು.
8. ವಿಷಯವನ್ನು ಅರ್ಥೈಸಿಕೊಂಡು ಮತ್ತೆ ಮತ್ತೆ ನೆನಪುಮಾಡಿಕೊಳ್ಳುತ್ತಾ ಓದಬೇಕು.
9. ಮುಸ್ಸಂಜೆ ಹೊತ್ತನ್ನು ಹೊರತುಪಡಿಸಿ ಬ್ರಾಹ್ಮೀ ಮೂಹೂರ್ತದಿಂದ (4.30ರಿಂದ 6.00 ಗಂಟೆಯವರೆಗೆ) ಆರಂಭಿಸಿ ರಾತ್ರಿಯವರೆಗೆ ಅಧ್ಯಯನ ಮಾಡಬಹುದು.
10. ಶುದ್ಧವಾದ ಸ್ಥಳದಲ್ಲಿ ಬೆನ್ನನ್ನು ನೇರವಾಗಿಟ್ಟುಕೊಂಡು ಸುಖವಾದ ಆಸೀನದಲ್ಲಿ ಕುಳಿತು ಓದಬೇಕು.
11. ಅಧ್ಯಯನವನ್ನು ಪ್ರಾರಂಭಿಸುವ ಮೊದಲು ದೇವರಿಗೆ ವಂದಿಸಿ ಗುರುಹಿರಿಯರನ್ನು ಸ್ಮರಿಸಬೇಕು.
12. ಓದಿ ತಿಳಿದುಕೊಂಡ ವಿಷಯವನ್ನು ಪ್ರಾಯೋಗಿಕವಾಗಿ ಉಪಯೋಗಿಸಿಕೊಳ್ಳಲು ಗೊತ್ತಿರಬೇಕು.
13. ಅಧ್ಯಯನ ಮಾಡುವಾಗ ಉದ್ವೇಗ, ಮಾನಸಿಕ ಒತ್ತಡ ಕೋಪತಾಪಗಳ ಪ್ರಭಾವವಿರದಂತೆ ಗಮನಿಸಿಕೊಳ್ಳಬೇಕು.
14. ಅಧ್ಯಯನ ಮಾಡುವ ಸಂದರ್ಭದಲ್ಲಿ ಅತಿಯಾಗಿ ಉಪ್ಪು-ಹುಳಿ-ಖಾರ ಪದಾರ್ಥಗಳು, ಎಣ್ಣೆ ಪದಾರ್ಥಗಳು, ಬೇಕರಿ ತಿಂಡಿ, ಪಿಡ್ಜಾ-ಬರ್ಗರ್ ಮೊದಲಾದ ಫಾಸ್ಟ್‍ಫುಡ್ ಸೇವನೆ ಸಲ್ಲದು. ಇದರಿಂದ ಶರೀರಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುವುದಿಲ್ಲ. ಮನಸ್ಸೂ ಶಾಂತವಾಗಿರುವುದಿಲ್ಲ.
15. ಮೆದುಳಿಗೆ ಚುರುಕುತನವನ್ನು ಕೊಡುವಂತಹ ಆಹಾರಗಳಾದ ತಾಜಾ ಹಣ್ಣು-ಸೊಪ್ಪು-ತರಕಾರಿಗಳು, ಶುದ್ಧವಾದ ನೀರು, ಆಕಳ ಹಾಲು ತುಪ್ಪ ಮೊದಲಾದುವನ್ನು ಕಾಲಕ್ಕೆ ತಕ್ಕಂತೆ, ಹಸಿವಿಗೆ ಅನುಸಾರವಾಗಿ ಸೇವಿಸಬೇಕು.
16. ಮನಸ್ಸಿಗೆ ಹಿತವೆನಿಸುವ ವಾತಾವರಣದಲ್ಲಿ, ಓದುವ ಮನಸ್ಥಿತಿ ಇರುವ ಸ್ನೇಹಿತರೊಡನೆ ಅಧ್ಯಯನ ಮಾಡಬೇಕು.
17. ಚರಕಸಂಹಿತೆಯಲ್ಲಿ ಯಾವುದೇ ವಿಷಯದಲ್ಲಿ ಜ್ಞಾನವನ್ನು ಹೊಂದಲು ಬೇಕಾದ ಮೂರು ಉಪಾಯಗಳನ್ನು ಹೇಳಿದ್ದಾರೆ, ಅವುಗಳೆಂದರೆ:
1. ಆಧ್ಯಯನ: ವಿಷಯವನ್ನು ಸರಿಯಾಗಿ ಅಭ್ಯಾಸ ಮಾಡುವುದು.
2. ಅಧ್ಯಾಪನ: ನಾವು ತಿಳಿದುಕೊಂಡ ವಿಷಯವನ್ನು ಬೇರೆಯವರಿಗೆ ತಿಳಿಸುವುದು.
3. ತದ್ವಿದ್ಯಾ – ಸಂಭಾಷಾ: ತಿಳಿದುಕೊಂಡತಹ ವಿಷಯವನ್ನು ಕುರಿತಾಗಿ ತಜ್ಞರೊಡನೆ ವಿಚಾರ ವಿನಿಮಯಮಾಡಿಕೊಳ್ಳವುದು.
18. ಮೇಲಿನ ಮೂರೂ ವಿಧಾನಗಳಿಂದ ವಿಷಯದ ಗ್ರಹಿಕೆ, ವಿಷಯವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಓದಿದ ವಿಷಯವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಈ ಎಲ್ಲ ಕುಶಲತೆಗಳೂ ಲಭ್ಯವಾಗುತ್ತದೆ.
19. ಅಧ್ಯಯನ ಮಾಡಿ ತಿಳಿದುಕೊಂಡಂತಹ ವಿಷಯವನ್ನು ನೆನಪಿಟ್ಟುಕೊಳ್ಳಲು ಎಂಟು ವಿಧಾನಗಳನ್ನು ಚರಕಸಂಹಿತಯಲ್ಲಿ ಹೇಳಲ್ಪಟ್ಟಿದೆ ಅವುಗಳೆಂದರೆ:
1. ನಿಮಿತ್ತ: ಯಾವುದೇ ಕಾರಣವನ್ನು ನೋಡಿದಾಗ ಕ್ರಿಯೆಯನ್ನು ನೆನಪುಮಾಡಿಕೊಳ್ಳುವುದು ಉದಾಹರಣೆಗೆ ಕುದುರೆಯನ್ನು ನೋಡಿದಾಗ ಶಕ್ತಿಯನ್ನು ಅಳೆಯುವ ಅಶ್ವಶಕ್ತಿಯನ್ನು ಅಳೆಯುವ ಅಶ್ವಶಕ್ತಿ (Horsepower) ಯನ್ನು ನೆನಪು ಮಾಡಿಕೊಳ್ಳುವುದು.
2. ರೂಪಗ್ರಹಣ: ಆಕಾರ, ರೂಪ, ದೃಶ್ಯವನ್ನು ನೋಡುವಿಕೆ. ಉದಾಹರಣೆಗೆ ಆಕಳನ್ನು ನೋಡಿದಾಗ ಹಿಂದಿನ ಅನುಭವವು ನೆನಪಿಗೆ ಬಂದು ಅದು ಆಕಳು ಎಂದು ಗ್ರಹಿಸುತ್ತೇವೆ.
3. ಸಾದೃಶ್ಯ: ಹೋಲಿಕೆಗೆ ಅನುಸಾರವಾಗಿ ನೆನಪಿಟ್ಟುಕೊಳ್ಳುವಿಕೆ. ಉದಾಹರಣೆಗೆ: ಯಾವ ರೀತಿಯಲ್ಲಿ ನದಿಯು ಹೊಲಗದ್ದೆಗಳಿಗೆ ಬೇಕಾದ ನೀರನ್ನು ಒದಗಿಸುತ್ತದೋ ಅದೇ ರೀತಿಯಲ್ಲಿ ನಮ್ಮ ಶರೀರದ ಜೀವಕೋಶಗಳಿಗೆ ರಕ್ತಸಂಚಾರವಾಗುತ್ತದೆ.
4. ವೈಸಾದೃಶ್ಯ: ಒಂದು ವಸ್ತುವನ್ನು ನೋಡಿದಾಗ ಅದಕ್ಕೆ ತದ್ವರುದ್ಧವಾದುದನ್ನು ನೆನಪಿಸಿಕೊಳ್ಳುವುದು. ಉದಾಹರಣೆಗೆ ನೀರನ್ನು ನೋಡಿದಾಗ ಬೆಂಕಿಯನ್ನು ನೆನೆಸಿಕೊಳ್ಳುವುದು, ಹಾವನ್ನು ನೋಡಿದಾಗ ಮುಂಗುಸಿ ನೆನಪಾಗುವುದು ಇತ್ಯಾದಿ.
5. ಸತ್ವಾನುಬಂಧ: ಯಾವುದೇ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಾಗ ಸ್ಪಷ್ಟವಾಗಿ ಮನದಟ್ಟಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ.
6. ಅಭ್ಯಾಸ: ಯಾವುದೇ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿಕೊಂಡಾಗ ಸ್ಪಷ್ಟವಾಗಿ ಮನದಟ್ಟಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ.
7. ಜ್ಞಾನಯೋಗ: ಯಾವುದೇ ವಿಷಯ ಸ್ಪಷ್ಟವಾಗಿ ಮನನವಾದ ಕೂಡಲೇ ಅದರ ಪ್ರಾಯೋಗಿಕ ಬಳಕೆಯನ್ನು ಅರ್ಥಮಾಡಿಕೊಳ್ಳಲು ಯತ್ನಸಿದರೆ ಆ ವಿಷಯ ಚೆನ್ನಾಗಿ ನೆನಪಿನಲ್ಲಿರುತ್ತದೆ. ಉದಾಹರಣೆಗೆ ನೀರು ಎಂದ ಕೂಡಲೇ ನೀರಿನ ಬಳಕೆ, ನೀರಿನ ಉಪಯೋಗ, ನೀರು ಹೇಗೆ ಆರೋಗ್ಯ ರಕ್ಷಣೆ ಮಾಡುತ್ತದೆ. ಪ್ರಾಣಿಗಳಿಗೆ ನೀರು ಎಷ್ಟು ಅವಶ್ಯಕ ಇಂಬಿತ್ಯಾದಿ ಪ್ರಾಯೋಗಿಕ ಅಂಶಗಳನ್ನು ನೆನೆದಾಗ ನೀರಿನ ಇಲ್ಲ ವಿಷಯಗಳೂ ಯಾವಾಗಲೂ ನೆನಪಿನಲ್ಲಿರುತ್ತದೆ.
8. ಪುನಃಶ್ರುತಿ: ಕೇಳಿದ ವಿಷಯವನ್ನು ಮತ್ತೆ ಮತ್ತೆ ಕೇಳುವುದರಿಂದ ಚೆನ್ನಾಗಿ ನೆನಪಿರುತ್ತದೆ. ಅದಕ್ಕಾಗಿಯೇ ಸಂಗೀತಶಾಸ್ತ್ರದಲ್ಲಿ ಕೇಳುವಿಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಯಾವುದೇ ಜ್ಞಾನದ ಶಾಖೆಯಲ್ಲಿ ಶ್ರವಣದ ಮಹತ್ವವು ಬಹಳ ಹೆಚ್ಚು. ಮತ್ತೆ ಮತ್ತೆ ಕೇಳುವುದರಿಂದ ವಿಷಯವು ಮನಸ್ಸಿನಲ್ಲಿ ಚೆನ್ನಾಗಿ ಮುದ್ರಿತವಾಗುತ್ತದೆ.
20. ಈ ಎಂಟೂ ಅಂಶಗಳು ಬೇಕು ಅಧ್ಯಯನಕ್ಕೆ ಹಾಗೂ ಒಳ್ಳೆಯ ನೆನಪಿನಂಗಲಕ್ಕೆ.
21. ಅರ್ಥವಾಗದ ವಿಷಯಗಳನ್ನು ಗುರುಗಳಿಂದ ತಿಳಿದುಕೊಂಡು ಯಾವುದೇ ಒತ್ತಡವಿಲ್ಲದೆ ಅಧ್ಯಯನವನ್ನು ಆನಂದದಿಂದ ಮುಂದುವರೆಸಬೇಕು.
22. ಅಧ್ಯಯನಕ್ಕೆ ಬೇಕಾದ ಪರಿಕರ (ಪೆನ್, ಪುಸ್ತಕ, ಪೆನ್ಸಿಲ್) ಗಳನ್ನು ಮೊದಲೇ ಜೋಡಿಸಿಟ್ಟುಕೊಂಡಿರಬೇಕು. ಮಧ್ಯೆ ಮಧ್ಯೆ ಸೂಕ್ತ ರೀತಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಅಧ್ಯಯನವನ್ನು ಮುಂದುವರೆಸಬೇಕು.
ಡಾ. ಶ್ರೀವತ್ಸ

