ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳೂ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉದ್ದೇಶದಿಂದ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣೆಕ ಪ್ರಗತಿ ಕಾಣಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ, ಮಹಾನ್ ಸಾಧಕರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿದ್ದಾರೆ, ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಕಡಿಮೆ ಮಾಡಬೇಕು ಎಂದರು.
ಮುಖಂಡ ದೊಣ್ಣಹಳ್ಳಿ ರಾಮಣ್ಣ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಮುರಳಿ, ಗುಮ್ಮರೆಡ್ಡಿ, ಮಾಜಿ ಸದಸ್ಯ ರಾಮಕೃಷ್ಣಪ್ಪ, ವೆಂಕಟೇಶ್, ರವಿ, ಬೈರಾರೆಡ್ಡಿ, ದ್ಯಾವಪ್ಪ, ಶ್ರೀನಿವಾಸ್, ಸೀತಪ್ಪ, ಬೈರಪ್ಪ, ಮುಖ್ಯಶಿಕ್ಷಕ ಕಾಂತರಾಜ್, ಕದಿರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೊಡ್ಡತೇಕಹಳ್ಳಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ
ಸಿ.ಸಿ.ರಸ್ತೆ ಕಾಮಗಾರಿ ಪರಿಶೀಲನೆ
ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ಭರವಸೆ ನೀಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಎಸ್.ಸಿ.ಪಿ. ಯೋಜನೆಯಡಿಯಲ್ಲಿ ಸುಮಾರು ೭.೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಸಿ.ಸಿ.ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆಗಳನ್ನು ನೆರವೇರಿಸಲಾಗಿದ್ದು, ಎಲ್ಲಾ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಇದೇ ರೀತಿಯ ಕಾಮಗಾರಿಗಳನ್ನು ಮಾಡುವ ಮೂಲಕ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳ ಸವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು, ನಾಗರಿಕರೂ ಕೂಡಾ ತಮ್ಮ ತಮ್ಮ ಗ್ರಾಮಗಳಲ್ಲಿ ಮಾಡುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು, ಗುಣಮಟ್ಟದಲ್ಲಿ ರಾಜಿಯಾಗಬಾರದು, ಯಾವುದೇ ಸಂದರ್ಭದಲ್ಲಿ ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದ್ದರೆ ತಕ್ಷಣ ಅಂತಹ ಕಾಮಗಾರಿಯನ್ನು ಸ್ಥಗಿತಗೊಳಿಸಿ ನನ್ನ ಗಮನಕ್ಕೆ ತರಬೇಕು, ಸ್ಥಳೀಯ ಮುಖಂಡರುಗಳು ಸರ್ಕಾರದಿಂದ ಬಿಡುಗಡೆಯಾಗಿರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಗಳಾಗುವಂತೆ ನೋಡಿಕೊಳ್ಳಬೇಕು ಎಂದರು.
ನರಸಿಂಹಮೂರ್ತಿ, ರವಿ, ಮಳ್ಳೂರಯ್ಯ, ಡಿ. ಕೃಷ್ಣಪ್ಪ, ಗುತ್ತಿಗೆದಾರ ಅಪ್ಪೇಗೌಡನಹಳ್ಳಿ ಮಂಜುನಾಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೀಳಾಗಿಸದಿರಿ ಸೃಷ್ಟಿಕ್ರಿಯೆಯನ್ನು!!
ಇತ್ತೀಚೆಗೆ ಮದುವೆಯಾದ ಕಿರಿಯ ಸ್ನೇಹಿತನೊಬ್ಬ ಬಹಳ ಬೇಸರದಲ್ಲಿದ್ದ. ಕಾರಣ ವಿಚಾರಿಸಿದೆ. ಮೊದಮೊದಲು ಹೇಳಲು ನಿರಾಕರಿಸಿದರೂ ನಿಧಾನವಾಗಿ ತೆರೆದುಕೊಳ್ಳತೊಡಗಿದ.
ಅವನ ಬೇಸರದ ಕಾರಣ ಇಷ್ಟು. ಶ್ರಾವಣ ಮಾಸ ಆಗಷ್ಟೇ ಪ್ರಾರಂಭವಾಗಿತ್ತು. ಬಹಳ ಧಾರ್ಮಿಕ ಮನೋಭಾವದವಳಾದ ಅವನ ಪತ್ನಿ, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಏನಾದರೂ ಪೂಜೆ ಪುನಸ್ಕಾರಗಳನ್ನು ಇಟ್ಟುಕೊಂಡಿರುತ್ತಿದ್ದಳು. ಅಂತಹ ದಿನಗಳಲ್ಲಿ ಅವಳು ಬೇರೆ ಹಾಸಿಗೆಯಲ್ಲಿ ಮಲಗುತ್ತಿದ್ದಳು. ಹಾಗಾಗಿ ಶ್ರಾವಣ ಮಾಸ ಮುಗಿದು ಭಾದ್ರಪದ ಶುದ್ಧ ಚೌತಿಯಾಗುವವರೆಗೆ ಸ್ನೇಹಿತನಿಗೆ ಲೈಂಗಿಕ ಉಪವಾಸ!! ಇಷ್ಟೇ ಅಲ್ಲದೆ ಅಂತಹ ಬಲವಂತದ ಉಪವಾಸದ ದಿನಗಳು ಪ್ರತಿ ತಿಂಗಳಲ್ಲಿ ಆಗಾಗ ಬರುತ್ತಿತ್ತು. ಲೈಂಗಿಕ ಕ್ರಿಯೆ ಅಧಾರ್ಮಿಕವಾದದ್ದು ಎಂದು ಬಾಲ್ಯದಿಂದಲೇ ಅವಳಲ್ಲಿ ಬೇರೂರಿದ ನಂಬಿಕೆಯನ್ನು ಯಾವುದೇ ತರ್ಕದಿಂದ ಬದಲಾಯಿಸಲು ನನ್ನ ಸ್ನೇಹಿತನಿಗೆ ಸಾಧ್ಯವಾಗಿರಲಿಲ್ಲ.
ಸರಿ ನಾವೆಲ್ಲಾ ಕುಳಿತು ಧರ್ಮಗ್ರಂಥಗಳ ಸಂಶೋಧನೆ ಮಾಡಿ, ಸಂಸ್ಕøತ ಪಂಡಿತರ ಸಹಾಯ ಪಡೆದು ಧರ್ಮಕ್ಕೂ ಕಾಮಕ್ಕೂ ಇರುವ ನಂಟನ್ನು ಹುಡುಕಬೇಕಾಯಿತು. ವಿವಾಹದೊಳಗಿನ ಕಾಮಕ್ಕೆ ಧರ್ಮ ಯಾವ ಸಮಯದಲ್ಲಿಯೂ ಅಡೆತಡೆಗಳನ್ನು ಒಡ್ಡಿಲ್ಲ ಎಂದು ಸ್ನೇಹಿತ ತನ್ನ ಹೆಂಡತಿಗೆ ನಿಧಾನವಾಗಿ ಮನವರಿಕೆ ಮಾಡಿಸಿತೊಡಗಿದ.
ನನ್ನ ಸ್ನೇಹಿತನಿಗೇನೋ ಹೆಂಡತಿಯ ಬಗೆಗೆ ಬಹಳ ಪ್ರೀತಿಯಿತ್ತು ಮತ್ತು ಸಾಕಷ್ಟು ತಾಳ್ಮೆಯಿತ್ತು. ಅದಿಲ್ಲದಿದ್ದರೆ….?, ವಿವಾಹದಲ್ಲಿ ಅನಗತ್ಯ ಮನಸ್ತಾಪಗಳು ಅಥವಾ ಈ ಭಿನ್ನಾಭಿಪ್ರಾಯಕ್ಕೆ ಇನ್ನಷ್ಟು ಕಾರಣಗಳು ಸೇರಿಕೊಂಡು ಕೊನೆಗೆ ವಿಚ್ಛೇದನದತ್ತ ಪಯಣ.
ಡಾಂಬಿಕ ಮಡಿವಂತಿಕೆ
ಯಾರಾದರೂ ಲೈಂಗಿಕತೆ ಮತ್ತು ಕಾಮ ಎಂದು ಸಾರ್ವಜನಕವಾಗಿ ಮಾತನಾಡಿದ ತಕ್ಷಣ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವುದು ಒಂದು ರೀತಿಯ ಮುಜುಗರದ ಅಥವಾ ಕಿರಿಕಿರಿಯ ಭಾವನೆ. ನಾವೇ ಇದರ ಬಗೆಗೆ ಮಾತನಾಡುವುದಿರಲಿ, ಯಾರಾದರೂ ತಜ್ಞರು ಮಾತನಾಡಿದರೂ ಅದನ್ನು ಸಹಜವಾಗಿ ಸ್ವೀಕರಿಸಲು ಸಿದ್ಧರಿರುವುದಿಲ್ಲ. ಇದು ಏಕೆ ಎನ್ನುವುದು ಚರ್ಚಗೆ ಯೋಗ್ಯವಾದ ವಿಷಯವಾದರೂ ಇದರಿಂದ ಆಗುತ್ತಿರುವ ಅಪಾಯಗಳೇನು ಎಂದು ಮನವರಿಕೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ.
ಲೈಂಗಿಕತೆ ಅಂದ ತಕ್ಷಣ ಲೈಂಗಿಕ ಕ್ರಿಯೆಯ ಬಗೆಗೆ ಮಾತ್ರ ಮಾತನಾಡುವುದು ಎಂದು ತಪ್ಪು ತಿಳಿಯಬಾರದು. ಮಾನವನ ಲೈಂಗಿಕತೆಗೆ ಹಲವಾರು ಮುಖಗಳಿವೆ. ಜೊತೆಗೆ ಈ ವಿಚಾರದಲ್ಲಿ ಸ್ವಲ್ಪವೂ ಮುಜುಗರವಾಗದಂತೆ ಸಾರ್ವಜನಿಕವಾಗಿ ಚರ್ಚಿಸುವುದು ಸಾಧ್ಯವಿದೆ. ಇದನ್ನು ಸಾಕಷ್ಟು ತಜ್ಞರು ಮಾಡುತ್ತಿದ್ದಾರೆ. ನಮ್ಮ ಯೋಚನೆ ಮತ್ತು ವರ್ತನೆಯಲ್ಲಿ ಒಂದು ವಿಪರ್ಯಾಸವಿದೆ. ವಾಸ್ತವಿಕವಾಗಿ ಲೈಂಗಿಕ ಕ್ರಿಯೆ ಸಂಪೂರ್ಣ ಖಾಸಗಿಯಾಗಿರಬೇಕು, ಆದರೆ ಅದರ ಬಗೆಗಿನ ಮಾಹಿತಿ ಸಾರ್ವಜನಿಕವಾಗಿ ಸಿಗಬೇಕು. ಇದು ಆರೋಗ್ಯಕರ ಸಮಾಜಕ್ಕೆ ದಾರಿಮಾಡಿಕೊಡುತ್ತದೆ. ಆದರೆ ಸಾರ್ವಜನಿಕ ಚರ್ಚೆಗೆ ಹಿಂಜರಿಯುವ ನಾವು ನಮ್ಮ ಸಿನಿಮಾಗಳಲ್ಲಿ ತೋರಿಸುವ ಒರಟು ಲೈಂಗಿಕ ವರ್ತನೆಗಳನ್ನು, ಸೂಚ್ಯ ಲೈಂಗಿಕ ಕ್ರಿಯೆಗಳನ್ನು ಅಥವಾ ಅಂತರ್ಜಾಲದಲ್ಲಿ ದೊರೆಯುವ ವಿಕೃತ ಲೈಂಗಿಕ ಪ್ರದರ್ಶನವನ್ನು ಒಪ್ಪಿಕೊಂಡುಬಿಟ್ಟಿದ್ದೇವಲ್ಲವೇ?
ಏಕೆ ಈ ಕೀಳರಿಮೆ?
ಲೈಂಗಿಕತೆಯನ್ನು ಕೀಳಾಗಿ ಕಾಣುವುದಕ್ಕೆ ಐತಿಹಾಸಿಕ ಕಾರಣಗಳೇನಿರಬಹುದು?
ಮೊದಲನೆಯದಾಗಿ ಲೈಂಗಿಕತೆಗೆ ಉಪಯೋಗವಾಗುವ ಅಂಗಾಂಗಗಳನ್ನು ನಾವು ಮಲ ಮೂತ್ರ ವಿಸರ್ಜನೆಯಂತಹ ಶೌಚಕ್ರಿಯೆಗೂ ಉಪಯೋಗಿಸುತ್ತೇವೆ. ಇದರಿಂದಾಗಿ ಶಿಲಾಯುಗದ ಮಾನವನ ಕಾಲದಿಂದಲೂ ಲೈಂಗಿಕತೆಗೂ ಅಶೌಚಕ್ಕೂ ಸಂಬಂಧ ಕಲ್ಪಿಸಿರುವ ಸಾಧ್ಯತೆಗಳಿವೆ. ವಿಜ್ಞಾನ ಇಷ್ಟೆಲ್ಲಾ ಬೆಳೆದ ಮೇಲೂ ನಾವು ಇನ್ನೂ ಅದೇ ತಪ್ಪು ಕಲ್ಪನೆಯನ್ನು ಅಪ್ರಜ್ಞಾಪೂರ್ವಕವಾಗಿ ಮುಂದುವರೆಸುತ್ತಿದ್ದೇವೆ.
ಎರಡನೆಯದು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಧರ್ಮ ಶ್ರೇಷ್ಠವಾದದ್ದು ಎನ್ನುವುದನ್ನು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ತಳುಕುಹಾಕಿಕೊಂಡಿರುವ ಇನ್ನೊಂದು ನಂಬಿಕೆಯೆಂದರೆ ಧಾರ್ಮಿಕ ತತ್ವಗಳು ಮಾನವನ ಲೈಂಗಿಕತೆಯನ್ನು ಮತ್ತು ಲೈಂಗಿಕ ಸುಖವನ್ನು ಮನುಷ್ಯರು ಅನುಭವಿಸುವುದನ್ನು ಕೀಳಾಗಿ ನೋಡುತ್ತವೆ ಎನ್ನುವುದು. ಹಿಂದೂ ಧರ್ಮವನ್ನು ಪಾಲಿಸುವವರಲ್ಲಿ ಇಂತಹ ತಪ್ಪುಕಲ್ಪನೆ ಹೆಚ್ಚಾಗಿರುವ ಸಾಧ್ಯತೆಗಳಿವೆ. ಜೀವಕೋಶಗಳು ವಿಭಜನೆಗೊಳ್ಳುತ್ತಾ ವಂಶಾಭಿವೃದ್ಧಿ ಮಾಡಿಕೊಳ್ಳುವ ಏಕಾಣು ಜೀವಿಗಳನ್ನು ಹೊರತಾಗಿಸಿದರೆ, ಜಗತ್ತಿನ ಎಲ್ಲಾ ಸಸ್ಯ ಮತ್ತು ಪ್ರಾಣಿ ಪ್ರಕಾರಗಳಲ್ಲಿ ಗಂಡು ಹೆಣ್ಣುಗಳ ಮಿನಲದಿಂದ ಮಾತ್ರ ವಂಶಾಭಿವೃದ್ಧಿಯಾಗುತ್ತದೆ. ದ್ವಿಲಿಂಗಿಗಳಾಗಿರುವ ಜೀವಿಗಳೂ ಕೂಡ ಸ್ವಯಂ ಸೃಷ್ಠಿ ಕ್ರಿಯೆಯಲ್ಲಿ ತೊಡಗದೆ ತನ್ನದೇ ಜಾತಿಯ ಮತ್ತೊಂದು ದ್ವಿಲಿಂಗಿಯಿಂದ ಸಂತಾನವನ್ನು ಪಡೆಯುವುದಕ್ಕೆ ಪ್ರಾಶಸ್ತ್ಯ ನೀಡುತ್ತವೆ. ಹಾಗಾಗಿ ಜೀವಸಂಕುಲವನ್ನು ಮುನ್ನಡೆಸುವ ಪ್ರಕೃತಿ ಸಹಜವಾದ ಗಂಡು ಹೆಣ್ಣುಗಳ ಇಂತಹ ಮಿಲನವನ್ನು ಯಾವುದೇ ಧರ್ಮ ಕೀಳಾಗಿ ನೋಡುವುದು ಸಾಧ್ಯವೇ ಇಲ್ಲ. ಹಾಗೊಮ್ಮೆ ಲೈಂಗಿಕತೆಯನ್ನು ಕೀಳುಗೈದರೆ ಮನುಜ ಕುಲವೇ ನಾಶವಾಗಿ ಧರ್ಮವೂ ಅಳಿಯುತ್ತದೆ. ಹೀಗೆ ತಮ್ಮ ಬೇರುಗಳನ್ನೇ ಕತ್ತರಿಸಿಕೊಳ್ಳುವ ಮೂರ್ಖತನವನ್ನೂ ಯಾವ ಧರ್ಮವೂ ಮಾಡಲಾರದು!
ಅಂದರೆ ಲೈಂಗಿಕತೆ ಕೀಳು ಎಂದು ಕೆಲವು ಧರ್ಮಪ್ರಚಾರಕರು ತಪ್ಪು ತಿಳುವಳಿಕೆಗಳಿಂದ ಹೇಳುತ್ತಿದ್ದಾರೆ ಅಥವಾ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಇಂತಹ ನಂಬಿಕೆಗಳನ್ನು ಉಪಯೋಗಿಸುತ್ತಿದ್ದಾರೆ ಎಂದಾಯಿತು. ಇಂತಹ ಸಾಕಷ್ಟು ಧರ್ಮ ಪ್ರಚಾರಕರ ನಿಜ ಬಣ್ಣ ಇತ್ತೀಚೆಗೆ ಬಯಲಾಗುತ್ತಿದೆ. (ನಿತ್ಯಾನಂದ ಸ್ವಾಮಿ, ಆಸಾರಾಮ್ ಬಾಪೂಗಳಂತವರನ್ನು ನೆನಪಿಸಿಕೊಳ್ಳಿ!) ಹಿಂದೂ ಧರ್ಮದ ಮೂಲ ತತ್ವಗಳಂತೂ ಲೈಂಗಿಕತೆಯನ್ನು ಕೀಳಾಗಿಸಿರುವಂತೆ ಕಾಣುವುದಿಲ್ಲ. ಇದರ ಬಗೆಗೆ ಹೆಚ್ಚಿನ ವಿವರಣೆ ಮತ್ತು ಜಿಜ್ಞಾಸೆಗಳು ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ಹಿಂದೂ ಧರ್ಮವನ್ನೊಳಗೊಂಡು ಎಲ್ಲಾ ಧರ್ಮಗಳೂ ಕಾಮವನ್ನು ಧರ್ಮದ ವಿರೋಧಿಯೆಂದು ತಿಳಿಯದಿದ್ದರೂ ಮುಕ್ತ ಕಾಮವನ್ನು ಅನುಮೋದಿಸಿಲ್ಲ. ಆದರೆ ಅದನ್ನು ಧರ್ಮದ ಮಿತಿಗಳಲ್ಲಿ ಮುಕ್ತವಾಗಿ ಅನುಭವಿಸುವುದಕ್ಕೆ ಯಾವುದೇ ತಡೆಗಳನ್ನೂ ಒಡ್ಡಿಲ್ಲ ಎನ್ನುವುದನ್ನು ಮರೆಯಬಾರದು.
ಹೀಗೆ ಲೈಂಗಿಕತೆಯ ಬಗೆಗಿನ ಕೀಳರಿಮೆಗೆ ಹಲವಾರು ಕಾರಣಗಳಿರಬಹುದು. ಆದರೆ ಅವೆಲ್ಲವೂ ತಪ್ಪು ಮಾಹಿತಿ ಅಥವಾ ಕಲ್ಪನೆಗಳಿಂದ ಬಂದಿರುವುದು ಎನ್ನವುದು ಮಾತ್ರ ನಿಸ್ಸಂದೇಹ.
ಏನಿದರ ಪರಿಣಾಮಗಳು?
ಈ ಎಲ್ಲಾ ಗೊಂದಲಗಳಿಂದಾಗಿ ಪತಿಪತ್ನಿಯರು ಅನಗತ್ಯ ಮಿತಿಗಳನ್ನು ಹಾಕಿಕೊಂಡು ತಮ್ಮ ಸಂಬಂಧದಲ್ಲಿ ಕಂದಕಗಳನ್ನು ತಾವಾಗಿಯೇ ಸೃಷ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಕಾಮ ನಿಷೇಧಿತ ಎಂದು ತಪ್ಪು ತಿಳಿದುಕೊಂಡಿರುವ ಸಮಯದಲ್ಲಿ ಇಬ್ಬರ ಸಹಜ ಪ್ರವೃತ್ತಿ ಜಾಗೃತವಾಗಿ ಅವರು ಕೂಡಿಯೇ ಬಿಟ್ಟಾಗ ಪಾಪಪ್ರಜ್ಞೆಯಿಂದ ನರಳುವ ಘಟನೆಗಳು ಅಪರೂಪವೇನಲ್ಲ. ವೈದ್ಯರಲ್ಲಿಯೇ ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯುವ ನಮ್ಮ ಸಾಮಾಜಿಕ ವಾತಾವರಣದಲ್ಲಿ ಈ ವಿಚಾರವನ್ನು ಧರ್ಮಜ್ಞಾನವಿರುವವರಲ್ಲಿ ಚರ್ಚೆ ಮಾಡಬೇಕೆಂದು ಅಪೇಕ್ಷಿಸುವುದು ಸಾಧ್ಯವೂ ಇಲ್ಲ. ಇದರ ಜೊತೆಗೆ ಈ ವಿಚಾರದಲ್ಲಿ ಒಮ್ಮತವಿಲ್ಲ ಎನ್ನುವ ಅಂಶವನ್ನೂ ಕೂಡ ಅಲ್ಲಗಳೆಯಲಾಗದು.
ಹಾಗಾಗಿ ದಂಪತಿಗಳು ಈ ವಿಚಾರಗಳನ್ನು ಹೆಚ್ಚು ತಾಂತ್ರಿಕವಾಗಿಸಿಕೊಂಡು ಮನಸ್ಸನ್ನು ಕಹಿಯಾಗಿಸಿಕೊಳ್ಳಬೇಕಿಲ್ಲ. ಜೀವಿಗಳ ಲೈಂಗಿಕ ಪ್ರವೃತ್ತಿ ಕೂಡ ಭಗವಂತನ ಪ್ರಸಾದವೇ ಎಂದುಕೊಂಡು ತಮಗೆ ಅನುಕೂಲವಾದ ಸಮಯದಲ್ಲಿ, ಬೇಕಾದ ರೀತಿಯಲ್ಲಿ, ಪ್ರಶಸ್ತವೆನಿಸುವ ಸ್ಥಳದಲ್ಲಿ (ಮನೆ ಚಿಕ್ಕದಿದ್ದಾಗ ದೇವರ ಮನೆಯಲ್ಲೂ ಕೂಡ!) ಮುಕ್ತವಾಗಿ ಬೆರೆಯಲು ಪತಿಪತ್ನಿಯರು ಹಿಂಜರಿಯಬೇಕಿಲ್ಲ!!
ಮಕ್ಕಳಿಗೆ ಲೈಂಗಿಕ ಅಂಗಾಗಗಳ ಶುಚಿತ್ವವನ್ನು ಕಲಿಸುವಾಗ ಅವುಗಳು ಕೀಳು ಎನ್ನುವ ಮನೋಭಾವವನ್ನು ಬಿತ್ತಬಾರದು. ಇದರಿಂದ ಅವರ ಮುಂದಿನ ಆರೋಗ್ಯಕರ ಲೈಂಗಿಕ ಜೀವನಕ್ಕೆ ಸಹಾಯವಾಗುತ್ತದೆ.
ನಡಹಳ್ಳಿ ವಸಂತ್
ದಿವ್ಯಾ ಭಾರತ್ ಕರಾಟೆ ಡೊ ಅಸೋಸಿಯೇಷನ್ನ ಕರಾಟೆಪಟುಗಳಿಗೆ ಪದಕಗಳು
ಶಿಡ್ಲಘಟ್ಟದ ದಿವ್ಯಾ ಭಾರತ್ ಕರಾಟೆ ಡೊ ಅಸೋಸಿಯೇಷನ್ನ ಕರಾಟೆಪಟುಗಳು ಈಚೆಗೆ ಗೌರಿಬಿದನೂರಿನಲ್ಲಿ ನಡೆದ ಅಂತರಶಾಲೆ ಮತ್ತು ಅಂತರ ಕಾಲೇಜು ಕರಾಟೆ ಪಂದ್ಯಾವಳಿಯಲ್ಲಿ ಪದಕಗಳನ್ನು ಪಡೆದಿದ್ದಾರೆ.
ಸೇವಾ ಸಂಘ ಸಂಸ್ಥೆಗಳು ನಿಸ್ವಾರ್ಥತತೆಯಿಂದಿರಬೇಕು
ಸೇವಾ ಸಂಘ ಸಂಸ್ಥೆಗಳು ನಿಸ್ವಾರ್ಥತತೆ ಹಾಗು ಜನಪರ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಹುದು ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಮಹಬೂಬ್ನಗರದ ಟಿಪ್ಪು ಶಾದಿಮಹಲ್ನಲ್ಲಿ ಶುಕ್ರವಾರ ಸಂಜೆ ಯೂನಿಟಿ ಸಿಲ್ಸಿಲಾ ಫೌಂಡೇಷನ್ ವತಿಯಿಂದ ಈಚೆಗೆ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಅಭಿನಂದನಾ ಹಾಗೂ ಪ್ರೋತ್ಸಾಹಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೂನಿಟಿ ಸಿಲ್ಸಿಲಾ ಫೌಂಡೇಷನ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಚೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, 209 ಯೂನಿಟ್ ರಕ್ತ ಸಂಗ್ರಹಣೆಯಾಗಿತ್ತು. ತಾಲ್ಲೂಕಿನಲ್ಲಿ ಇದು ಅತ್ಯಂತ ಹೆಚ್ಚಿನ ಸಂಗ್ರಹಣೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ರಕ್ತದಾನಿಗಳನ್ನು ಅಭಿನಂದಿಸುವ ಮತ್ತು ಪ್ರೋತ್ಸಾಹಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥಹ ಕಾರ್ಯಗಳು ಮುಂದುವರೆಯಲಿ ಎಂದು ತಿಳಿಸಿದರು.
ಕೈವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಖಾಸಿಂ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ಉಪನ್ಯಾಸಕ ಪ್ರದೀಪ್ ಮಾತನಾಡಿದರು.
ಈ ಸಂದರ್ಭದಲ್ಲಿ ರಕ್ತದಾನಿಗಳಿಗೆ ಭೋಜನದ ವ್ಯವಸ್ಥೆಯನ್ನು ಸಿಲ್ಸಿಲಾ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿತ್ತು.
ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ದೇವರಾಜ್, ಸಿಲ್ಸಿಲಾ ಫೌಂಡೇಷನ್ನ ಮಹಮ್ಮದ್ ಅಸದ್, ಇಮ್ತಿಯಾಜ್ ಪಾಷ, ಅಕ್ರಂ ಪಾಷ, ಅನ್ಸರ್ ಪಾಷ, ರಹಮತ್, ಷಂಷೀರ್, ತೌಸಿಬ್, ಸಮೀರ್, ಮುಜಾಷೀರ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಾನಲ್ಲಿ ತಾರಾಗ್ರಹ ಗಣತಿ
ಅತ್ತ ದೂರದ ಬಾಹ್ಯ ಆಕಾಶದಲ್ಲಿಯೂ ಗಣತಿ ಕಾರ್ಯ ನಡೆದಿದೆ. ಭರತಭೂಮಿ ಅಖಂಡ ಭೂಗ್ರಹದ ಜನ ನಿಬಿಡವಾದ ಒಂದು ತುಣುಕಾದರೆ ಅತ್ತ ಗಗನದಲ್ಲೂ ನಮ್ಮ ಗೆಲಾಕ್ಸಿಯಾದ ಕ್ಷೀರಪಥದ ಒಂದು ತುಣುಕು ಪ್ರದೇಶದಲ್ಲಿ ಕಾಣಸಿಗುವ ತಾರೆ ಮತ್ತು ಅವುಗಳನ್ನು ಸುತ್ತುತ್ತಿರುವ ಗ್ರಹಗಳ ದಟ್ಟಣೆಯನ್ನು ಎಣಿಕೆ ಮಾಡಲಾಗುತ್ತಿದೆ. ಇದಕ್ಕಾಗಿ 60 ಕೋಟಿ ಡಾಲರ್ ಅಥವಾ 3000 ಕೋಟಿ ರೂಪಾಯಿಗಳನ್ನು ಹೂಡಲಾಗಿದೆ. ‘ಕೆಪ್ಲರ್’ ಹೆಸರಿನ ದೂರದರ್ಶಕವೊಂದು ಕಳಿಸುತ್ತಿರುವ ಚಿತ್ರಗಳ ಆಧಾರದ ಮೇಲೆ ಈ ಅನ್ಯ ತಾರಾಗ್ರಹಗಳನ್ನು ಲೆಕ್ಕ ಮಾಡಲಾಗುತ್ತಿದೆ.
ವಿಜ್ಞಾನ ಮುಂದುವರೆದಂತೆ, ಬಾಹ್ಯಾಕಾಶದ ವಿವಿಧ ಭಾಗಗಳನ್ನು, ಅಲ್ಲಿ ಸೂಸುವ ವಿವಿಧ ರೀತಿಯ ಬೆಳಕುಗಳನ್ನು ಅಧ್ಯಯನ ನಡೆಸುವ ಉಪಕರಣಗಳ ನಿರ್ಮಾಣವಾದಂತೆ, ಅನ್ಯ ಅಂತರಿಕ್ಷ ಕಾಯಗಳಲ್ಲಿ ಜೀವಿಗಳ ಇರುವಿಕೆಯ ಹುಡುಕಾಟ ಇನ್ನೂ ಹೆಚ್ಚಿದೆ. ಜೀವಿಗಳಿರಬೇಕೆಂದರೆ ಅಲ್ಲಿ ನೀರಿರಬೇಕು, ನೀರಿರಬೇಕೆಂದರೆ ಭೂಮಿಯಂತಹ ವಾತಾವರಣ ಇರಬೇಕು, ಅಂದರೆ ಆ ಆಕಾಶಕಾಯ ಸೂರ್ಯನಂತೆ ಉರಿಯುವ ಬೆಂಕಿಯ ಚೆಂಡಾಗಿರಬಾರದು, ಅರ್ಥಾತ್, ಅದು ತಾರೆಯೊಂದನ್ನು ಸುತ್ತುವ ಗ್ರಹವಾಗಿರಬೇಕು. ಜೀವಿ ಸಹ್ಯ ಪರಿಸರ ಇರಬೇಕೆಂದರೆ ಅದು ತನ್ನ ಸೂರ್ಯನಿಂದ ಹೆಚ್ಚೂ ಕಡಿಮೆ ನಮ್ಮ ಭೂಮಿ ನಮ್ಮ ಸೂರ್ಯನಿಂದ ಇರುವಷ್ಟೇ ದೂರದಲ್ಲಿ ಇರಬೇಕು.
ಅಂಥಹ ವಲಯವನ್ನು, ಅಂದರೆ ಸುಮಾರು ನಮ್ಮ ಭೂಮಿ, ಸೂರ್ಯರ ನಡುವಿನ ಅಂತರದ ಆಸುಪಾಸಿನಷ್ಟಿರುವ ಪ್ರದೇಶವನ್ನು ‘ವಾಸಯೋಗ್ಯ ವಲಯ’ ಎಂದು ಹೆಸರಿಸಬಹುದು.
ಭೂಮಿಯ ಹೊರಗಣ ಅನಂತ ಆಕಾಶದಲ್ಲಿ ಅಂತಹ ಗ್ರಹಗಳ ಪತ್ತೆ ಸುಲಭವೇ? ಖಂಡಿತಾ ಇಲ್ಲ. ಬ್ರಹ್ಮಾಂಡದಲ್ಲಿ ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳಿವೆ. ಕಗ್ಗತ್ತಲ ರಾತ್ರಿಯಲ್ಲಿ ಆಗಸಕ್ಕೆ ಮುಖ ಮಾಡಿದರೆ ಎಣಿಸಲಸಾಧ್ಯವಾದಷ್ಟು ಚುಕ್ಕೆಗಳು ಕಾಣುತ್ತವೆ. ಇದಕ್ಕೆಂದೇ ವಿಜ್ಞಾನಿಗಳು ಉಪಾಯ ಹೂಡಿದರು. ಆಕಾಶದ ನಿರ್ದಿಷ್ಟವಾದ ಒಂದು ತುಣುಕನ್ನು ಅಧ್ಯಯನ ನಡೆಸಬೇಕು, ಅಲ್ಲಿರುವ ಸೂರ್ಯರನ್ನು ಮೊದಲು ಗುರುತಿಸಿ, ಅವಕ್ಕಿರುವ ಗ್ರಹಗಳ ಪತ್ತೆ ಹಚ್ಚಬೇಕು, ಪ್ರತಿ ನಕ್ಷತ್ರದ ಪ್ರತಿಯೊಂದು ಗ್ರಹದ ಪಥವನ್ನೂ, ತನ್ನ ಮಾತೃತಾರೆಯಿಂದ ಅದಿರುವ ದೂರವನ್ನೂ ಲೆಕ್ಕಹಾಕಬೇಕು. ಆಗ ಭೂಮಿಯಂತೆ ಇದ್ದಿರಬಹುದಾದ ಗ್ರಹಗಳ ಅಜಮಾಸು ಲೆಕ್ಕ ದೊರೆಯುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿತಗೊಂಡ ವೇದಶಾಲೆ ಕೆಪ್ಲರ್. ಜರ್ಮನ್ ಖಗೋಳ ವಿಜ್ಞಾನಿ ಜೋಹಾನ್ನೆಸ್ ಕೆಪ್ಲರ್ ಅವರ ಹೆಸರಿನ ಈ ವೇದಶಾಲೆ ನಾಸಾದ ಹೊಸ ಭೂಮಿಯ ಅನ್ವೇಷಣೆಯ ಗುರಿ ಹೊತ್ತ ‘ಡಿಸ್ಕವರಿ ಯೋಜನೆ’ಯಡಿ 2009ರ ಮಾರ್ಚ್ 7ರಂದು ಉಡ್ಡಯನಗೊಂಡಿತು. ಇದೊಂದು ದೂರದರ್ಶಕವೊಂದನ್ನು ಹೊತ್ತು ಹಾರುತ್ತಿರುವ, ಸೂರ್ಯಕೇಂದ್ರಿತ ಅಂದರೆ, ಸೂರ್ಯನನ್ನು ಸುತ್ತುಹಾಕುತ್ತಿರುವ ಹಾಗೂ ನಮ್ಮ ಚಂದ್ರನಿಗಿಂತ ಹೆಚ್ಚು ದೂರದಲ್ಲಿರುವ ಅಂತರಿಕ್ಷ ನೌಕೆ. ಕೆಪ್ಲರ್ ವೇದಶಾಲೆಯ ಹಾರಾಟಕ್ಕೆಂದು ತಂತ್ರಜ್ಞರು ವಿಶೇಷವಾದ ಕಕ್ಷೆಯನ್ನು ನಿಗದಿಪಡಿಸಿದ್ದಾರೆ. ಭೂಮಿಯ ಆಚೆ (ಕಾಣುವುದಕ್ಕೆ ಭೂಮಿಯ ಬಾಲದ ಹಾಗೆ) ಸೂರ್ಯನನ್ನು ಸುತ್ತು ಹಾಕುವ ಈ ಕಕ್ಷೆಯಲ್ಲಿ ಕೆಪ್ಲರನ ದರ್ಶಕದ ನೋಟಕ್ಕೆ ಭೂಮಿಯಾಗಲೀ, ಇತರ ಆಕಾಶಕಾಯಗಳಾಗಲೀ ಅಡ್ಡಬಾರವು.
ನಮ್ಮ ಗೆಲಾಕ್ಸಿ ಕ್ಷೀರಪಥದ ಸುಮಾರು ಒಂದೂವರೆ ಲಕ್ಷ ನಕ್ಷತ್ರಗಳನ್ನು ದಿಟ್ಟಿಸಿ ನೋಡುವ ಕೆಪ್ಲರ್ ಎರಡು ತಿಂಗಳ ನಂತರ ನಿಗದಿತ ಸೂರ್ಯಕೇಂದ್ರಿತ ಕಕ್ಷೆಯಲ್ಲಿ ತಿರುಗುತ್ತ ನಕ್ಷತ್ರ ಮತ್ತು ಗ್ರಹಗಳ ಗಣತಿಯನ್ನು ಪ್ರಾರಂಭಿಸಿತು. ಮೊದಲು ನಕ್ಷತ್ರಗಳ ಗುರುತಿಸುವಿಕೆ, ನಂತರ ಅವುಗಳನ್ನು ಸುತ್ತುವ ಗ್ರಹಗಳಿವೆಯೇ ಎಂಬ ಹುಡುಕಾಟ. ಆಕಾಶಕ್ಕೆ ಜಿಗಿದ ಕೆಲವೇ ತಿಂಗಳುಗಳಲ್ಲಿ ಕೆಪ್ಲರ್ ನಿಂದ ಚಿತ್ರಗಳ ರವಾನೆ ಪ್ರಾರಂಭಗೊಂಡಿತು.
ಮಿಲ್ಕೀವೇ ಗೆಲಾಕ್ಸಿಯ ಒಂದು ನಿರ್ದಿಷ್ಟ ಸ್ಥಳವನ್ನು ನಿಟ್ಟಿಸಿ ನೋಡುತ್ತ ಅಲ್ಲಿಂದ ಹೊರಸೂಸಿದ ಬೆಳಕಿನ ಕಿರಣಗಳು, ಅವುಗಳಲ್ಲಾದ ವ್ಯತ್ಯಾಸ ಇವೆಲ್ಲವನ್ನೂ ಸತತವಾಗಿ ದಾಖಲಿಸುವಂತೆ ರಚಿಸಲಾದ ಕೆಪ್ಲರ್‍ನ ಪ್ರಮುಖ ಭಾಗವೆಂದರೆ ಬೆಳಕಿನ ಪ್ರಖರತೆಯನ್ನು ಅಳೆಯುವ ಉಪಕರಣ ಫೋಟೋಮೀಟರ್. ಈ ಉಪಕರಣದಲ್ಲಿ ಬಳಸಲಾದ ಕ್ಯಾಮೆರಾ ಈವರೆಗೆ ಗಗನವೀಕ್ಷಣೆಗೆ ಬಳಸಲಾದ ಯಾವುದೇ ಕ್ಯಾಮೆರಾಕ್ಕಿಂತ ಅತಿ ದೊಡ್ಡದು. ಆಕಾಶದಲ್ಲಿ ಹಾರಾಡುತ್ತಲೇ ಒಂದೇ ಕಡೆ ನಿಟ್ಟಿಸಿ ನೋಡುತ್ತ ಸ್ತಬ್ಧವಾಗಿರುವ ಈ ಕ್ಯಾಮೆರಾ ಚಕ್ಷುವಿನ ದೃಷ್ಟಿ ವಲಯವೂ ಅತಿದೊಡ್ಡದು, ಏಕೆಂದರೆ ಒಂದೂವರೆ ಲಕ್ಷದಷ್ಟು ನಕ್ಷತ್ರಗಳನ್ನು ಇದು ಸದಾಕಾಲ ನೋಡುತ್ತಲೇ ಇರಬೇಕು.
ಲಕ್ಷಾಂತರ ಮೈಲುಗಳಾಚೆ ಇರುವ ನಕ್ಷತ್ರಗಳನ್ನೇನೋ ಅವು ಹೊರಹಾಕುವ ಪ್ರಖರ ಬೆಳಕನ್ನು ಅಳೆದು ಪತ್ತೆಹಚ್ಚಬಹುದು, ಆದರೆ ಅವುಗಳ ಸುತ್ತ ಪ್ರದಕ್ಷಿಣೆ ಹೊಡೆಯುವ ಗ್ರಹಗಳ ಪತ್ತೆ ಹಚ್ಚುವುದು ಹೇಗೆ? ಕಾರಿನ ಹೆಡ್‍ಲೈಟ್ ಮುಂದೆ ನೊಣವೊಂದು ಅಡ್ಡಹಾಯ್ದರೆ ಹೆಡ್‍ಲೈಟು ಸೂಸುತ್ತಿರುವ ಬೆಳಕಿನ ಪ್ರಮಾಣದಲ್ಲಿ ಅಲ್ಪ ಬದಲಾವಣೆ ಆಗಿಯೇ ಆಗುತ್ತದೆ. ದೂರದಲ್ಲಿ ನಿಂತು ನೋಡುತ್ತಿರುವ ಸಾಮಾನ್ಯ ಕಣ್ಣಿಗೆ ಅದು ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಬೆಳಕಿನ ಉಪಕರಣಗಳು ಇಂಥಹ ಬದಲಾವಣೆಗಳನ್ನು ಗುರುತಿಸುತ್ತವೆ. ಉದಾಹರಣೆಗೆ, ಭೂಮಿ ಮತ್ತು ಸೂರ್ಯನ ನಡುವೆ ಶುಕ್ರಗ್ರಹ ಹಾದು ಹೋದಾಗ ಭೂಮಿಯಿಂದ ಪರೀಕ್ಷಿಸುವ ದೂರದರ್ಶಕದ ಕಣ್ಣಿಗೆ ಸೂರ್ಯನ ಪ್ರಕಾಶದಲ್ಲಾದ ಕ್ಷಣಿಕ ಬದಲಾವಣೆಯೂ ಎದ್ದು ತೋರುತ್ತದೆ.
ಇದೇ ತತ್ವವನ್ನು ಅನ್ಯತಾರೆಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ನಕ್ಷತ್ರವು ಹೊರಹಾಕುವ ಬೆಳಕಿನ ಪ್ರಮಾಣದಲ್ಲಾದ ವ್ಯತ್ಯಾಸವನ್ನು ಬಳಸಿ ಆ ದುಂಡನೆಯ ಗ್ರಹದ ವ್ಯಾಸವನ್ನು ಲೆಕ್ಕಹಾಕಲಾಗುತ್ತದೆ. ಅದೇ ಗ್ರಹ ಮತ್ತೊಮ್ಮೆ ತನ್ನ ಸೂರ್ಯನೆದುರು ಹಾದುಹೋದಾಗ ಒಂದು ಸುತ್ತು ಸುತ್ತಲು ಅದು ತೆಗೆದುಕೊಳ್ಳುವ ಕಾಲಾವಧಿ ಅಥವಾ ಪರಿಭ್ರಮಣಾ ಅವಧಿಯನ್ನು ಲೆಕ್ಕಮಾಡಬಹುದು. ತಾರೆಯೊಂದರ ಗ್ರಹವೆಂದು ಖಾತರಿಯಾಗಲು ಅದು ತಾರೆಯ ಸುತ್ತ ತಿರುಗುತ್ತಿರುವುದನ್ನು ಕನಿಷ್ಟ ಪಕ್ಷ ಮೂರು ಬಾರಿಯಾದರೂ ಕ್ಯಾಮೆರಾ ಕಣ್ಣು ಪತ್ತೆ ಹಚ್ಚಬೇಕು. 2010 ಜನೆವರಿಯಲ್ಲಿ ಕೆಪ್ಲರ್ ದೂರದರ್ಶಕ ಮೊಟ್ಟ ಮೊದಲ ಅನ್ಯ ತಾರಾಗ್ರಹವೊಂದನ್ನು ಪತ್ತೆಹಚ್ಚಿತು. ಮೊದಲ 43 ದಿನಗಳ ಅವಧಿಯಲ್ಲಿ ಇನ್ನೂ 4 ಗ್ರಹಗಳನ್ನು ಜಗತ್ತಿಗೆ ಪರಿಚಯಿಸಿತು. ಆ ಗ್ರಹಗಳು ಸುತ್ತುತ್ತಿರುವ ತಾರೆಗಳು ನಮ್ಮ ಸೂರ್ಯನಿಗಿಂತ ಅನೇಕ ಪಟ್ಟು ದೊಡ್ಡ ಗಾತ್ರದವು ಹಾಗೂ ಬಿಸಿಯಾಗಿವೆ ಹಾಗೂ ಆ ಗ್ರಹಗಳೂ ಕೂಡ 2200-3000 ಡಿಗ್ರಿ ಫ್ಯಾರನ್‍ಹೀಟ್‍ನಷ್ಟು ಬಿಸಿ ಚೆಂಡುಗಳು ಎಂಬ ವಿಷಯಗಳು ಬಹಿರಂಗಗೊಂಡವು.
ನೂರಾರು ತಾರೆಗಳನ್ನೂ ಕೆಪ್ಲರ್ ಗುರುತಿಸಿದೆ. ಅವುಗಳಲ್ಲಿ ಗ್ರಹಮಂಡಲಗಳನ್ನು ಹೊಂದಿವೆಯೆಂದು ಕೆಪ್ಲರ್ ದೂರದರ್ಶಕ ಖಚಿತಪಡಿಸಿದ ತಾರೆಗಳಲ್ಲಿ ಹನ್ನೊಂದನೆಯದು ಕೆಪ್ಲರ್-11. 2010 ರ ಅಗಸ್ಟ್ 26 ರಂದು ಕೆಪ್ಲರ್ ಹೊಸತೊಂದು ಮಾಹಿತಿಯನ್ನು ಕಳಿಸಿತ್ತು. ಅದರ ದೃಷ್ಟಿವಲಯದೆದುರು ತಾರೆ ಕೆಪ್ಲರ್-11 ರ ಮೂರು ಗ್ರಹಗಳು ಒಮ್ಮೆಗೇ ಹಾದುಹೋದವು. ಕೆಪ್ಲರ್-11 ಭೂಮಿಯಿಂದ 2 ಸಾವಿರ ಜ್ಯೋತಿರ್ವರ್ಷ ದೂರವಿರುವ ಹೊಳೆಯುವ, ಸೂರ್ಯನಂತೆಯೇ ಇರುವ ತಾರೆ. ಬರಿಗಣ್ಣಿಗೆ ಇದು ಕಾಣದು. ಇತ್ತೀಚೆಗೆ ತಾನೇ ಅನಿಲಗಳು ಮತ್ತು ಕಲ್ಲು ಬಂಡೆಗಳಿಂದ ಕೂಡಿದ ಮೂರು ಗ್ರಹಗಳನ್ನು ಕೆಪ್ಲರ್ ಪತ್ತೆಹಚ್ಚಿತ್ತು. ಈಗ ಮತ್ತೂ ಮೂರು ಗ್ರಹಗಳು ಸೇರಿಕೊಂಡು ಅತ್ಯಂತ ನಿಬಿಡವಾಗಿ, ಅಚ್ಚುಕಟ್ಟಾಗಿರುವÀ, ಪುಟ್ಟದಾದ ಹಾಗೂ ಚಪ್ಪಟೆಯಾಗಿರುವ (ಅಂದರೆ, ಆರೂ ಗ್ರಹಗಳು ಒಂದೇ ಸಮತಲದಲ್ಲಿವೆ) ಗ್ರಹಮಂಡಲವನ್ನು ಹೊಂದಿರುವ ತಾರೆ ಎಂದು ಕೆಪ್ಲರ್-11 ಹೆಸರು ಪಡೆಯಿತು. ಈ ಗ್ರಹಗಳನ್ನು ಕ್ರಮವಾಗಿ ಕೆಪ್ಲರ್-11ಬಿ, ಕೆಪ್ಲರ್-11ಸಿ, ಕೆಪ್ಲರ್-11ಡಿ, ಕೆಪ್ಲರ್-11ಇ, ಕೆಪ್ಲರ್-11ಎಫ್, ಕೆಪ್ಲರ್-11ಜಿ ಎಂದು ಹೆಸರಿಸಲಾಗಿದೆ. ಇವೆಲ್ಲವೂ ನಮ್ಮ ಸೌರಮಂಡಲಕ್ಕೆ ಹೋಲಿಸಿದರೆ ತಮ್ಮ ಸೂರ್ಯನ ಅತಿ ಸಮೀಪದಲ್ಲೇ ಗಿರಕಿ ಹೊಡೆಯುತ್ತಿರುವ, ಭೂಮಿಗಿಂತ ದೊಡ್ಡದಾದ ಬಿಸಿಗ್ರಹಗಳು. ಮೊದಲ ಐದು ಗ್ರಹಗಳು 10 ರಿಂದ 47 ದಿನಗಳ ಪ್ರದಕ್ಷಿಣಾ ಅವಧಿಗಳನ್ನು ಹೊಂದಿದರೆ, ಕೊನೆಯ ಅಂದರೆ ಆರನೆಯ ಗ್ರಹ ಕೆಪ್ಲರ್-11ಜಿ ಪ್ರತಿ 118 ದಿನಗಳಿಗೊಮ್ಮೆ ತನ್ನ ಸೂರ್ಯನ ಸುತ್ತ ತಿರುಗುತ್ತಿದೆ.
ತಂತ್ರಜ್ಞರ ವಿಶ್ಲೇಷಣೆಯ ಬಳಿಕ ತಾರಾ, ಗ್ರಹ ಗಣತಿಯ ಒಂದಿಷ್ಟು ಕುತೂಹಲಕಾರಿಯಾದ ಅಂಕಿಅಂಶಗಳು ದೊರೆತಿವೆ. ಅದರ ಪ್ರಕಾರ, 1235 ಗ್ರಹವಾಗಿರಬಹುದಾದ ಎಲ್ಲ ಲಕ್ಷಣಗಳುಳ್ಳ ಆಕಾಶಕಾಯಗಳು, 528 ಅನ್ಯತಾರಾಗ್ರಹಗಳು, 165 ಗುರುಗ್ರಹದಷ್ಟೇ ಮತ್ತು 19 ಅದಕ್ಕಿಂತ ದೊಡ್ಡವು, 54 ವಾಸಯೋಗ್ಯವಾಗಿರಬಹುದಾದ ಮತ್ತು 49 ಭೂಮಿಗಿಂತ ದೊಡ್ಡದಾದ ಗ್ರಹಗಳನ್ನು ಕೆಪ್ಲರ್ ಕಣ್ಣು ಕಂಡಿದೆ.
ಕೆಪ್ಲರ್ ಕಳಿಸಿದ ಮಾಹಿತಿಗಳನ್ನು ಆಧಾರವಾಗಿರಿಸಿಕೊಂಡು ಭೂಮಿಯ ಮೇಲಿರುವ ದೂರದರ್ಶಕ ಹಾಗೂ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಸ್ಪಿಟ್‍ಝಲರ್ ದೂರದರ್ಶಕದ ಮೂಲಕ ಹೆಚ್ಚು ವಿವರಗಳನ್ನು ಪಡೆಯಲಾಗುತ್ತದೆ. ಇದರಿಂದಾಗಿ ಕೆಪ್ಲರ್ ಕಳಿಸಿದ ಮಾಹಿತಿಯ ಖಚಿತತೆಯನ್ನೂ ಪಡೆದಂತಾಗುತ್ತದೆ.
ಆದರೆ ಈವರೆಗೆ ದೊರೆತ ಮಾಹಿತಿಗಳು ಭೂಮಿಯಂಥಹ ಇನ್ನೊಂದು ಜೀವಿಯೋಗ್ಯ ಸ್ಥಳ ಇದೆಯೇ ಎಂಬುದರ ಪತ್ತೆಗೆ ಏನೂ ಸಾಲದು. ಇನ್ನೂ ಬಹಳಷ್ಟು ಸಂಶೋಧನೆ ನಡೆಯಬೇಕು ಎನ್ನುತ್ತಾರೆ ವಿಜ್ಞಾನಿಗಳು. ಬಿಸಿಯಾದ ಜಲಜನಕ ಮತ್ತು ಹೀಲಿಯಂ ಹೊಂದಿರುವ ಕೆಪ್ಲರ್-11 ರ ಗ್ರಹಗಳು ವಾಸಯೋಗ್ಯವಲ್ಲ ಎಂದು ಪರಿಗಣಿಸಲ್ಪಟ್ಟಿವೆಯಾದರೂ ಗ್ರಹಗಳ ಹುಟ್ಟು ಹಾಗೂ ರಚನೆಯ ಬಗ್ಗೆ ಅಧ್ಯಯನಕ್ಕೆ ಯೋಗ್ಯವಾಗಿವೆಯೆಂಬುದರಲ್ಲಿ ಸಂದೇಹವಿಲ್ಲ.
ಈ ಮೊದಲೇ ಹೇಳಿದ ಹಾಗೆ ಬ್ರಹ್ಮಾಂಡದ ತುಣುಕು ಜಾಗಕ್ಕೆ ಇದೊಂದು ಇಣುಕು ನೋಟವಷ್ಟೆ. ರಾತ್ರಿಯಾಗಸದ ನಾನೂರರಲ್ಲಿ ಒಂದು ಭಾಗವಷ್ಟನ್ನೇ ಕೆಪ್ಲರ್ ಕಣ್ಣು ನೋಡುತ್ತಿದೆ. ಆದರೆ ರೋಚಕ ಕತೆಗಳಲ್ಲಿ ಮಾತ್ರವೇ ವರ್ಣಿಸಲ್ಪಡುತ್ತಿದ್ದ ಅನ್ಯಗ್ರಹಗಳ ಇರುವನ್ನು ಇಂದು ವಿಜ್ಞಾನ ಪತ್ತೆ ಹಚ್ಚಿದೆ, ಭವಿಷ್ಯದಲ್ಲಿ ವಾಸಯೋಗ್ಯ ಗ್ರಹಗಳ ಶೋಧವೂ ಸಾಧ್ಯವಿದೆಯೆಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಸರೋಜಾ ಪ್ರಕಾಶ
ಉಚಿತ ಆರೋಗ್ಯ ತಪಾಸಣಾ ಶಿಬಿರ
ತಾಲ್ಲೂಕಿನ ಮೇಲೂರು ಗ್ರಾಮದ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ರೈತ ಯುವಕ ಸಂಘ ಮತ್ತು ದ್ವಾರಕಾಮಯಿ ಫೌಂಡೇಷನ್ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನಿಂದ ಆಗಮಿಸಿದ್ದ ತಜ್ಞ ವೈದ್ಯರ ತಂಡ ಮಧುಮೇಹ, ರಕ್ತದೊತ್ತಡ, ಹೃದಯ ತಪಾಸಣೆ, ಚರ್ಮರೋಗ, ಕಿವಿ, ಮೂಗು, ಗಂಟಲು, ಸ್ತ್ರೀರೋಗ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಮಾಡಿದರು. ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 600 ಮಂದಿ ಚಿಕಿತ್ಸೆ ಪಡೆದರು.
ಈ ಸಂದರ್ಭದಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿ ಹಾಗೂ ಕಣ್ಣಿನ ತೊಂದರೆಯಿರುವವರಿಗೆ ಉಚಿತವಾಗಿ ಕನ್ನಡಕವನ್ನು ಸಹ ನೀಡಲಾಯಿತು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಎ.ಉಮೇಶ್, ವೈದ್ಯರಾದ ಡಾ.ರೇವಣ್ಣ, ಡಾ.ಬಾಬು ರಾವ್, ಡಾ.ರಾಜ್ಕುಮಾರ್, ಡಾ.ಉಷಾವಾಣಿಶ್ರೀ, ಡಾ.ರಾಜೇಶ್, ಕೆ.ರಘುರಾಮಯ್ಯ, ರಮಾನಂದಸಾಗರ, ಡಾ.ಕಿರಣ್ಕುಮಾರ್, ಡಾ.ಮಹಲಿಂಗಪ್ಪ, ದ್ವಾರಕಾಮಯಿ ಫೌಂಡೇಷನ್ ಅಧ್ಯಕ್ಷೆ ಸುಜಾತ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತು ಕನ್ನಡ ರೈತ ಯುವಕ ಸಂಘದ ಸುಧೀರ್, ಸುದರ್ಶನ್, ಎಸ್.ಆರ್.ಶ್ರೀನಿವಾಸ್, ಧರ್ಮೇಂದ್ರ, ಶಿವಕುಮಾರ್, ರೂಪೇಶ್, ರಾಜೇಶ್, ಕೃಷ್ಣಮೂರ್ತಿ, ರಾಕೇಶ್, ಗೋಪಾಲ್, ಪ್ರಭಾಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಯಲುಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶದ ಅಂಗವಾಗಿ ಬೈಕ್ ರಾಲಿ
ಬಯಲು ಸೀಮೆಯ ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಘಟನಾ ಸಂಚಾಲಕ ಮಳ್ಳೂರು ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ನೀರಿಗಾಗಿ ಜನಾಂದೋಲನ ನಡೆಸಬೇಕೆಂದು ಕರೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಾರ್ಗದರ್ಶನದಲ್ಲಿ ಯುವಶಕ್ತಿ ನಡೆಸುತ್ತಿರುವ ಬಯಲುಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿದಂತೆ ಬಯಲು ಸೀಮೆಯ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಕುಸಿದು ನೀರಿಗಾಗಿ ಹಾಹಾಕಾರ ಉಂಟಾಗಿ ವಿಷಪೂರಿತ ನೀರು ಸೇವಿಸುತ್ತಿದ್ದರು ಸಹ ಜನರ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ನಿಷ್ಕ್ರೀಯಗೊಂಡಿದೆ. ಜನಪ್ರತಿನಿಧಿಗಳು ಉದಾಸೀನ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ತ್ಯಾಜ್ಯ ನೀರನ್ನು ಜಿಲ್ಲೆಯ ಕೆರೆಗಳನ್ನು ಹರಿಸುವ ಯೋಜನೆಯನ್ನು ಕೈಬಿಡಬೇಕು. ಜಿಲ್ಲೆಯಲ್ಲಿರುವ ಕಾಲುವೆ, ರಾಜುಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವುಗೊಳಿಸಿ ೪೦೦೦ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು. ಮಾರ್ಚ್ ೧೪ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಬಯಲುಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ಪ್ರವಾಸಿ ಮಂದಿರದಿಂದ ದ್ವಿಚ್ರಕ ವಾಹನದಲ್ಲಿ ಬೈಕ್ ರ್ಯಾಲಿ ನಡೆಸಿದ ಯುವಶಕ್ತಿ ಕಾರ್ಯಕರ್ತರು, ರೈತ ಸಂಘದ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಶಾಶ್ವತ ನೀರಾವರಿ ಯೋಜನೆಯ ಮಹತ್ವದ ಕುರಿತು ಜನಜಾಗೃತಿ ಮೂಡಿಸಿದರು,
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಚಿಕ್ಕದಾಸರಹಳ್ಳಿ ದಾಮೋದರ್, ಮುನಿನಂಜಪ್ಪ, ಕೃಷ್ಣಪ್ಪ, ಪ್ರತಾಪರೆಡ್ಡಿ, ವಿಜಯಬಾವರೆಡ್ಡಿ, ಶಿವಕುಮಾರ್, ಶಿವಪ್ರಸಾದ್, ಬಾಬು, ವೇಣುಗೋಪಾಲ್, ಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.
ಕಾನೂನು ಸಾಕ್ಷರಥಾ ರಥಕ್ಕೆ ಚಾಲನೆ
ಶಿಡ್ಲಘಟ್ಟದಲ್ಲಿ ಶನಿವಾರ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರಥಾ ರಥಕ್ಕೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಚಾಲನೆ ನೀಡಿದರು. ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಶ್ರೀನಿವಾಸ್, ಬೈರಾರೆಡ್ಡಿ, ಸುಬ್ರಮಣಿ ಹಾಜರಿದ್ದರು.
ಬೀದಿ ನಾಟಕದ ಮೂಲಕ ಆರ್ಥಿಕ ಶಿಕ್ಷಣ ಜಾಗೃತಿ
ನಗರದಲ್ಲಿ ಶುಕ್ರವಾರ ತಾಲ್ಲೂಕಿನ ಕಾಳನಾಯಕನಹಳ್ಳಿಯ ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಸದಸ್ಯರು ಆರ್ಥಿಕ ಶಿಕ್ಷಣ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ, ಸಾದಲಿ ಮತ್ತು ಅಬ್ಲೂಡು ಗ್ರಾಮಗಳಲ್ಲಿ ‘ಬ್ಯಾಂಕ್ ಖಾತೆ ಇದ್ದೋನೆ ಬಾಸು, ಖಾತೆ ಇಲ್ದಿದ್ರೆ ಆಗೋದೆ ಲಾಸು’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿ, ನಗರದ ತಾಲ್ಲೂಕು ಕಚೇರಿಯ ಮುಂದೆಯೂ ಪ್ರದರ್ಶಿಸಿದರು.
‘ಸಾರ್ವಜನಿಕರು ಬ್ಯಾಂಕಿನ ಮೂಲಕ ವ್ಯವಹಾರ ಮಾಡುವುದರಿಂದ ಆಗುವ ಅನುಕೂಲಗಳು ಹಾಗೂ ಬ್ಯಾಂಕಿನ ಸೇವೆಯಿಂದ ವಂಚಿತರಾಗಿರುವ ಗ್ರಾಮೀಣರಿಗೆ ಈ ಬೀದಿ ನಾಟಕದ ಮೂಲಕ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕೆ.ಎ.ರಾಜಪ್ಪ ತಿಳಿಸಿದರು.
ಬೀದಿ ನಾಟಕದಲ್ಲಿ ಕೆ.ಎ.ರಾಜಪ್ಪ, ಎಂ.ಸಿ.ಜ್ಯೋತಿ, ಆರ್.ಮುನಿಸ್ವಾಮಿ, ಎ.ಪ್ರಭಾವತಿ, ಎನ್.ವೆಂಕಟರಾಜಮ್ಮ, ಆರ್.ದೀಪ, ವಿ.ಚಿಕ್ಕರೆಡ್ಡಪ್ಪ, ಎಂ.ವಿ.ಗೋವಿಂದರಾಜು ಅಭಿನಯಿಸಿದರು.

