ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಪಂಚಾಯತಿ ಕಚೇರಿಯ ಮುಂದೆ ಶುಕ್ರವಾರ ಬಿಲ್ ಕಲೆಕ್ಟರ್ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ನಿಬಂಧನೆಗಳನ್ನು ಮುರಿದು, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದ 25 ಅಭ್ಯರ್ಥಿಗಳು ಪ್ರತಿಭಟಿಸಿದರು.
ಪತ್ರಿಕೆಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಾಗಿ ಅರ್ಜಿಯನ್ನು ಕೋರಿದ್ದರಿಂದ ಸುಮಾರು 25 ಮಂದಿ ಅರ್ಜಿಯೊಂದಿಗೆ ನೂರು ರೂಪಾಯಿ ಹಣವನ್ನು ನೀಡಿ ಸಲ್ಲಿಸಿದ್ದರು. ಆದರೆ ಒಂಭತ್ತು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಂಡು ಆಯ್ಕೆ ಪ್ರಕ್ರಿಯೆಯ ನಿಬಂಧನೆ, ಶರತ್ತು ಹಾಗೂ ಕಾನೂನನ್ನು ಉಲ್ಲಂಘಿಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಹೆಚ್ಚು ವಿದ್ಯಾರ್ಹತೆಯಿರುವ ಅಭ್ಯರ್ಥಿಗಳನ್ನು ಪರಿಗಣಿಸದೇ, ಆಯ್ಕೆ, ಸಂದರ್ಶನ ಮುಂತಾದ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸುತ್ತೇವೆ ಎಂದು ಯಣ್ಣಂಗೂರು ನಾಗರಾಜಪ್ಪ ತಿಳಿಸಿದರು.
‘ಬಿಲ್ ಕಲೆಕ್ಟರ್ ಹುದ್ದೆಗೆ ಆಯ್ಕೆಯನ್ನು ರಾಜಕೀಯ ಪೂರಿತವಾಗಿ ನಡೆಸಿದ್ದಾರೆ. ಒಂಭತ್ತು ಒಂಭತ್ತು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಬಹುಮತವಿದೆಯೆಂದು ತಾವೇ ನಿರ್ಣಯ ಕೈಗೊಂಡು ಆಯ್ಕೆ ನಡೆಸಿರುವುದು ಸರಿಯಲ್ಲ. ಸರ್ಕಾರಿ ನಿಬಂಧನೆಗಳನ್ನು ಗಾಳಿಗೆ ತೂರಲಾಗಿದೆ. ಅಧ್ಯಕ್ಷರ ಗ್ರಾಮದ ವ್ಯಕ್ತಿಯನ್ನೇ ಏಕ ಪಕ್ಷೀಯವಾಗಿ ಆಯ್ಕೆ ಮಾಡಿರುವುದನ್ನು ರದ್ದುಗೊಳಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡು ಅರ್ಹ ಅಭ್ಯರ್ಥಿಗೆ ನ್ಯಾಯ ಒದಗಿಸಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಣಮೂರ್ತಿ ತಿಳಿಸಿದರು.
ಬಿಲ್ ಕಲೆಕ್ಟರ್ ಹುದ್ದೆಯ ಆಯ್ಕೆಯಲ್ಲಿ ರಾಜಕೀಯ; ಅಭ್ಯರ್ಥಿಗಳಿಂದ ಪ್ರತಿಭಟನೆ
ಹಿರೇಬಲ್ಲ ಗ್ರಾಮದಲ್ಲಿ ರಸಗೊಬ್ಬರಗಳ ಮಳಿಗೆ, ನ್ಯಾಯಬೆಲೆ ಅಂಗಡಿ ಮತ್ತು ಶುದ್ಧ ಕುಡಿಯುವ ಘಟಕ
ಕಲ್ಮಶ ನೀರಿನಿಂದಾಗಿ ಸಾಕಷ್ಟು ಖಾಯಿಲೆಗಳು ಬರುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ನೀರಿ ಶುದ್ಧೀಕರಣ ಘಟಕದ ಅಗತ್ಯವಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಿರೇಬಲ್ಲ ಗ್ರಾಮದಲ್ಲಿ ಶುಕ್ರವಾರ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ರಸಗೊಬ್ಬರಗಳ ಮಳಿಗೆ, ನ್ಯಾಯಬೆಲೆ ಅಂಗಡಿ ಮತ್ತು ಶುದ್ಧ ಕುಡಿಯುವ ಘಟಕವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.
ಕಡಿಮೆ ಬೆಲೆಗೆ ಉತ್ಕೃಷ್ಟ ವಸ್ತುಗಳಿಗೆ ಗ್ರಾಮದ ಜನತೆಗೆ ಸಿಗಬೇಕು ಮತ್ತು ಶುದ್ಧ ಕುಡಿಯುವ ನೀರು ಕೂಡ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದವರು ಆರೂವರೆ ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಪಡಿತರ ಚೀಟಿಯ ಮೂಲಕ ದವಸ ಧಾನ್ಯ ಪಡೆಯಲು ಹಿಂದೆ ಬೇರೆ ಗ್ರಾಮಗಳಿಗೆ ಹೋಗಬೇಕಿತ್ತು. ಈಗ ಇಲ್ಲೇ ನ್ಯಾಯಬೆಲೆ ಅಂಗಡಿ ಆಗಿರುವುದರಿಂದ ಜನರಿಗೆ ಅನುಕೂಲಕರವಾಗಿದೆ. ರೈತರ ವ್ಯವಸಾಯಕ್ಕೆ ಬೇಕಾದ ರಸಗೊಬ್ಬರ ಮಳಿಗೆಯನ್ನು ಗ್ರಾಮದಲ್ಲೇ ಸ್ಥಾಪಿಸಿರುವುದರಿಂದ ಇನ್ನು ದೂರದಿಂದ ಸಾಗಿಸುವ ಹಾಗೂ ಹೆಚ್ಚು ಬೆಲೆ ತೆರುವ ಅಗತ್ಯವಿಲ್ಲ. ಸಂಘದ ಜನಹಿತ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ನುಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗುಡಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಎಸ್.ಎಫ್.ಸಿ.ಎಸ್.ಅಧ್ಯಕ್ಷ ರವಿಕುಮಾರ್, ಎಚ್.ಎಂ.ಮುನಿಯಪ್ಪ, ಬೈರೇಗೌಡ, ವೇಣುಗೋಪಾಲ್, ಅಶ್ವತ್ಥನಾರಾಯಣರೆಡ್ಡಿ, ಮುನಿಕೃಷ್ಣಪ್ಪ, ಎನ್.ಎಸ್.ಕೃಷ್ಣಪ್ಪ, ಉಮಾ ರವಿಕುಮಾರ್, ಆಂಜನೇಯರೆಡ್ಡಿ, ಚನ್ನಕೇಶವ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಛತ್ರಪತ್ರಿ ಶಿವಾಜಿ ಹಾಗೂ ವರಕವಿ ಸರ್ವಜ್ಞ ಅವರ ಜಯಂತ್ಯುತ್ಸವ
ದಾಸ್ಯಮುಕ್ತ ಭಾರತ ದೇಶಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸಿದ ಛತ್ರಪತಿ ಶಿವಾಜಿಯವರ ಹೋರಾಟ ಮನೋಭಾವನೆ ಪ್ರತಿಯೊಬ್ಬ ಯುವಜನತೆಗೆ ಬರಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞ ಕವಿಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದ ಮೇಲೆ ನಡೆಯುತ್ತಿದ್ದ ದಾಳಿ ಮತ್ತು ದೌರ್ಜನ್ಯಗಳಿಗೆ ನಲುಗಬೇಕಾದಂತಹ ಪರಿಸ್ಥಿತಿ ಉಂಟಾಗಿತ್ತು, ಅದನ್ನು ಎದುರಿಸಿದ ವೀರ ಶಿವಾಜಿ. ದೇಶದ ವಿವಿಧ ದಾರ್ಶನಿಕರು, ಸಾಹಿತಿಗಳು, ದಾಸರುಗಳ ಜನ್ಮದಿನಾಚರಣೆಗಳನ್ನು ಮಾಡುವ ಮೂಲಕ ಅವರ ಆದರ್ಶಗಳನ್ನು ಯುವಜನತೆಗೆ ತಿಳಿಸಬೇಕಾಗಿದೆ, ಧರ್ಮನಿಷ್ಟೆ, ಭಕ್ತಿ, ಸದಾಚಾರ, ಸುಶೀಲ, ಮುಂತಾದ ಸದ್ಗುಣಗಳಿಂದ ಮಾತ್ರವಲ್ಲದೆ ಸ್ವರಾಜ್ಯಕ್ಕಾಗಿ ಪೋಷಕವೆನಿಸುವ ಪ್ರತಿಯೊಂದು ಅಂಶದ ಕಡೆಗೆ ಶಿವಾಜಿಯವರು ಬದ್ಧರಾಗಿದ್ದರು. ಅವರು ಕೊಡಿಸಿಕೊಟ್ಟ ಸ್ವರಾಜ್ಯಕ್ಕೆ ದಕ್ಕೆ ಬಾರದಂತೆ ಕಾಪಾಡಿಕೊಳ್ಳಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಛತ್ರಪತಿ ಶಿವಾಜಿಯವರು ಹಿಂದುಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು ಮಹತ್ತರವಾದದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ, ಸರ್ವಜ್ಞರು ಕೂಡಾ ತನ್ನ ವಚನ ಸಾಹಿತ್ಯ ಮೂಲಕ ಪಡೆದ ಹೆಗ್ಗಳಿಕೆ ನಾಡಿನ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಪಡುವಂತಹ ವಿಚಾರವಾಗಿದೆ, ಎಲ್ಲಾ ಕಾಲಗಳಿಗೂ ಅನ್ವಯವಾಗುವಂತಹ ಎಲ್ಲರಿಗೂ ಸರಳಭಾಷೆಯಲ್ಲಿ ಅರ್ಥವಾಗುವಂತಹ ರೀತಿಯಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಬಸಪ್ಪ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಎಇಇ ಶಿವಾನಂದ, ತೋಟಗಾರಿಕಾ ಸಹಾಯಕ ನಿರ್ದೇಶಕ ಎನ್.ಆನಂದ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ಉಲ್ಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಗುರುರಾಜ್, ಉಪನೊಂದಣಾಧಿಕಾರಿ ಶ್ರೀನಿವಾಸ್, ಅಬಕಾರಿ ನಿರೀಕ್ಷಕ ನಾಗೇಂದ್ರಸಿಂಗ್, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್, ಮುನಿಶಾಮಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿದ ರೈತರು
ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರು ಬೆಸ್ಕಾಮ್ ಇಲಾಖೆಯ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ತಿಳಿಸಿರುವಂತೆ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ತಲಾ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಬೆಸ್ಕಾಂ ಅಧಿಕಾರಿಗಳು ಐದಾರು ತಿಂಗಳುಗಳು ಕಳೆದರೂ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ಮುಂದಾಗಿಲ್ಲ. ವೋಲ್ಟೇಜ್ ಇಲ್ಲದೇ ಮೋಟರ್ಗಳು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ವಿಳಂಬ ಧೋರಣೆ ರೈತರಿಗೆ ಮಾರಕವಾಗಿದೆ ಎಂದು ದೂರಿದರು.
ಒಂದೆಡೆ ಭೂಮಿಯನ್ನು ನಂಬಿ ಬದುಕುತ್ತಾ, ಹಣ್ಣು ತರಕಾರಿಗಳನ್ನು ಬೆಳೆದುಕೊಡುತ್ತಿರುವ ನಮಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಜನಪ್ರತಿನಿಧಿಗಳು ಬಧ್ದತೆಯನ್ನು ತೋರಿಸುತ್ತಿಲ್ಲ, ಕೊಳವೆಬಾವಿಗಳನ್ನು ಕೊರೆಸಲು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಪ್ರತಿಬಾರಿ ಚುನಾವಣೆಗಳಲ್ಲಿಯೂ ಸುಳ್ಳು ಭರವಸೆಗಳನ್ನು ನೀಡಿ ಮತಗಳನ್ನು ಪಡೆದುಕೊಂಡು ಹೋಗುವ ರಾಜಕಾರಣಿಗಳು ಕನಿಷ್ಟ ಮೂರು ಫೇಸ್ ವಿದ್ಯುತ್ ಪೂರೈಕೆಯನ್ನಾದರೂ ಮಾಡಿದರೆ ಇರುವ ನೀರಿನಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದರು.
ನಮ್ಮ ಭಾಗದ ರೈತರ ಕಷ್ಟವನ್ನು ಕಂಡಾದರೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು. ತಮ್ಮ ಪರಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು. ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಪಡೆಯದಂತೆ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಸಾಂಕೇತಿಕವಾಗಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗಜಡಿದು ಉಗ್ರವಾದ ಹೋರಾಟಕ್ಕಿಳಿಯುವುದಾಗಿ ಅವರು ಎಚ್ಚರಿಕೆ ನೀಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಬೆಸ್ಕಾಂ ಇಲಾಖೆಯ ಎಇಇ ಪರಮೇಶ್ವರಪ್ಪ ಮಾತನಾಡಿ ರೈತರು ಕಚೇರಿಗೆ ಬಂದು ಹಣವನ್ನು ಕೌಂಟರ್ನಲ್ಲಿ ಕಟ್ಟಿ ರಸೀದಿಯನ್ನು ಪಡೆಯಿರಿ, ಆದ್ಯತೆಯ ಮೇರೆಗೆ ಟ್ರಾನ್ಸ್ಫರ್ಮರ್ಗಳನ್ನು ಅಳವಡಿಸಲಾಗುತ್ತದೆ, ಇಲಾಖೆಯಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಕಾರ್ಯಾಧ್ಯಕ್ಷ ಎಂ.ನಾಗರಾಜ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅದ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನಕಾರ್ಯದರ್ಶಿ ಬಾಲಮುರಳೀಕೃಷ್ಣ, ದೊಡ್ಡತೇಕಹಳ್ಳಿ ಕದಿರಪ್ಪ, ಭಕ್ತರಹಳ್ಳಿ ಪ್ರತೀಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಯೋಗಬಂಧುಗಳ ವಿಶೇಷ ಪ್ರತಿಭಟನೆ ಮತ್ತು ಭಜನೆ
ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರತಿಭಟನೆ, ಭಜನೆ ಹಾಗೂ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈಚೆಗೆ ಮೈಸೂರಿನಲ್ಲಿ ಪ್ರಗತಿಪರ ಚಿಂತಕರೆಂದು ಗುರುತಿಸಿಕೊಂಡಿರುವ ಪ್ರೊ.ಅರವಿಂದ ಮಾಲಗಿತ್ತಿ, ಪ್ರೊ.ಕೆ.ಎಸ್.ಭಗವಾನ್ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಅವರು ಪವಿತ್ರ ಗ್ರಂಥ ಭಗವದ್ಗೀತೆಯ ಕುರಿತು ಆಡಿರುವ ಅವಹೇಳನಕಾರಿ ಮಾತುಗಳಿಂದ ಹಿಂದುಗಳ ಧಾರ್ಮಿಕ ಶ್ರದ್ಧೆಗೆ ಅಪಮಾನವಾಗಿದೆ. ಇಂಥಹ ಮೇಧಾವಿಗಳಿಗೆ ಈಶ್ವರ ಒಳ್ಳೆಯ ಬುದ್ಧಿ ನೀಡಿ, ಇತರರ ನಂಬಿಕೆಗೂ ಗೌರವ ನೀಡುವ ತಿಳುವಳಿಕೆ ನೀಡಲಿ, ಕೆಟ್ಟ ಮಾತು ಆಡದಂತಾಗಲಿ ಎಂದು ಪ್ರಾರ್ಥಿಸುತ್ತಾ ಪ್ರತಿಭಟನಾ ಸೂಚಕವಾಗಿ ಕಪ್ಪು ಪಟ್ಟಿ ಧರಿಸಿ ನಗರದ ಹಲವಾರು ಶಿವ ದೇವಾಲಯಗಳಲ್ಲಿ ಸುಮಾರು 50 ಮಂದಿ ಯೋಗ ಬಂಧುಗಳು ಪೂಜೆ, ಭಜನೆ ನಡೆಸಿದರು.
ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕೆಂದು ಈ ಸಂದರ್ಭದಲ್ಲಿ ಯೋಗ ಬಂಧುಗಳು ಒತ್ತಾಯಿಸಿದರು.
ವಿಕೇಂದ್ರೀಕರಣ ಬಳಗದ ಮೂಲಕ ಜಾಗೃತಿ ಕಾರ್ಯಕ್ರಮ
ಹಣವಿಲ್ಲದೆ ಮತ ಚಲಾವಣೆ ಎಂಬ ಆದೋಲನವನ್ನು ವಿಕೇಂದ್ರೀಕರಣ ಬಳಗ ಹಮ್ಮಿಕೊಂಡಿದ್ದು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ನಾಗರಿಕರಿಗೆ ಮತ್ತು ಸ್ಪರ್ಧಿಗಳಿಗೆ ತಿಳುವಳಿಕೆ ಹೆಚ್ಚಿಸಲಿದೆ ಎಂದು ವಿಕೇಂದ್ರೀಕರಣ ಬಳಗದ ಮುಖ್ಯಸ್ಥ ಹಾಗೂ ಕುಂದಲಗುರ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗ್ರಾಮಪಂಚಾಯತಿಗಳಿಗೆ ನಡೆಯುವ ಚುನಾವಣೆಯಲ್ಲಿ ಮೌಲ್ಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆ ತರುವ ಇಚ್ಛೆ ಹೊಂದಿ ಸ್ವಿಚ್ಛೆಯಿಂದ ರೂಪುಗೊಂಡ ಬಳಗವೇ ವಿಕೇಂದ್ರೀಕರಣ ಬಳಗ.
ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇರಳವಾಗಿ ಅನಾಗರೀಕ ಪದ್ಧತಿಯಲ್ಲಿ ಹಣ ಮತ್ತು ಮದ್ಯಗಳ ಬಳಕೆಯಿಂದ ಅಕ್ರಮಗಳು ನಡೆದು ಸಭ್ಯ ನಾಗರಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾದಂತ ಪರಿಸ್ಥಿತಿ ಏರ್ಪಟ್ಟಿತ್ತು. ಅದು ಸರಿಯಲ್ಲ ಎಂದು ತಿಳಿದಿದ್ದರೂ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಬಹಳಷ್ಟು ಅಕ್ರಮಗಳು ನಡೆದು ಜೈಲು, ಕೋರ್ಟು ಮುಂತಾದವುಗಳಿಗೆ ಅಭ್ಯರ್ಥಿಗಳು ಹೋಗಿ ಬಂದಿರುವುದನ್ನು ಕಂಡಿದ್ದೇವೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸೇವನೆಯಿಂದ 11 ಜನ ಸಾವನ್ನಪ್ಪಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನ ಸಂಹಿತೆ ಪ್ರಕಾರ ಮತಕ್ಕಾಗಿ ಹಣ ಮತ್ತು ಉಡುಗೊರೆ ಕೊಡುವುದು ಮತ್ತು ತೆಗೆದುಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ನಮ್ಮ ಮತ್ತು ಮುಂದಿನ ಪೀಳಿಗೆಗೆ ಕಲಿಸುತ್ತಿರುವ ಪಾಠ ಏನು ಎಂಬುದನ್ನು ನಾಗರಿಕರು ಮತ್ತು ಸ್ಪರ್ಧಿಗಳು ಪ್ರಶ್ನಿಸಿಕೊಳ್ಳಬೇಕು.
ವಿಕೇಂದ್ರೀಕರಣ ಬಳಗವು ಕರಪತ್ರಗಳ ಮೂಲಕ ತಿಳುವಳಿಕೆ, ಶಾಲಾ ಮಕ್ಕಳ ಜೊತೆ ಜಾಥಾ, ಶಿಬಿರಗಳ ಮೂಲಕ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಸಕ್ತರು ಕೈಜೋಡಿಸಬಹುದು ಎಂದು ತಿಳಿಸಿದರು. ರಾಜೇಂದ್ರ ಪ್ರಸಾದ್, ಮಂಜುನಾಥ್, ಕೃಷ್ಣಪ್ಪ, ಗಣೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಳಮಾಚನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರುಗಳ ಮೆರವಣಿಗೆ
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಮಳಮಾಚನಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಪೂಜಾ ಮಹೋತ್ಸವ ಸಮಿತಿಯ ವತಿಯಿಂದ ಮಂಗಳವಾರ ರಾತ್ರಿ ಎಲ್ಲಾ ಗ್ರಾಮ ದೇವರುಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಶಿವ ಪಾರ್ವತಿ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಗ್ರಾಮದ ಎಲ್ಲಾ ದೇಗುಲಗಳನ್ನೂ ವಿವಿಧ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯಗಲಲ್ಲಿ ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದ ಎಲ್ಲಾ ದೇವರುಗಳನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಪ್ರತಿ ಮನೆಯವರೂ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸಿ, ದೇವರುಗಳಿಗೆ ಆರತಿ ಬೆಳಗಿ ಪೂಜಿಸಿದರು.
ಶಿವಮೊಗ್ಗದ ಮಹಿಳಾ ಜನಪದ ಕಲಾತಂಡ, ವೀರಗಾಸೆ ಕಲಾವಿದರು, ತಮಟೆ, ನಾಸಿಕ್ ವಾದನಗಳಿಂದ ಮೆರವಣಿಗೆಗೆ ಕಳೆ ಕಟ್ಟಿದ್ದರು.
ಬಿ.ಎನ್.ಕೃಷ್ಣಪ್ಪ, ಎಂ.ಬೈರೇಗೌಡ, ಎಂ.ರಮೇಶ್, ಕೆ.ನರಸಿಂಹಮೂರ್ತಿ, ಬಿ.ರಾಮಯ್ಯ, ಎಂ.ಎನ್.ಗೋಪಾಲ್, ದೊಡ್ಡಬೈರಪ್ಪ, ಲಕ್ಷ್ಮಯ್ಯ, ರಾಮಾಂಜಿನಪ್ಪ, ವೆಂಕಟೇಶಪ್ಪ, ತಮ್ಮಣ್ಣ, ಕೃಷ್ಣಯ್ಯ, ಬಚ್ಚೇಗೌಡ, ದೇವರಾಜು, ರಾಮಯ್ಯ, ಮರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿ ರಥೋತ್ಸವ
ತಾಲ್ಲೂಕಿನ ಪುರಾತನ ಪ್ರಸಿದ್ಧ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ಏಳನೇ ವರ್ಷದ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಾಘ ಮಾಸ ಬಹುಳ ಬುಧವಾರ ವಿಶೇಷ ಪೂಜೆ, ಹೋಮ, ಅಭಿರ್ಜನ್ ಮಹೂರ್ತದಲ್ಲಿ ಮಧ್ಯಾಹ್ನ ಬ್ರಹ್ಮರಥೋತ್ಸವವನ್ನು ವೀರಗಾಸೆ ಮುಂತಾದ ಕಲಾ ತಂಡಗಳು ಹಾಗೂ ವಾಂದ್ಯ ವೃಂದ ಸಮೇತ ನಡೆಸಲಾಯಿತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.
ಸುತ್ತಮುತ್ತಲ ಗ್ರಾಮಗಳು ಹಾಗೂ ತಾಲ್ಲೂಕುಗಳಿಂದ ನೂರಾರು ಭಕ್ತರು ಪೂಜೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮಗಳವರು ಪಾನಕ ಬಂಡಿಗಳನ್ನು ತಂದು ಬಿಸಿಲಿನಲ್ಲಿ ದಣಿದ ಭಕ್ತರಿಗೆ ಉಚಿತವಾಗಿ ವಿತರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಮಾರು ಆರು ನೂರು ವರ್ಷಗಳ ಇತಿಹಾಸವಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಹಾಗೂ ಶಾಸನ ಕಲ್ಲುಗಳಿವೆ. ರಥೋತ್ಸವದ ಅಂಗವಾಗಿ ಮಹಿಳೆಯರು ಮನೆಮನೆಯಿಂದಲೂ ದೀಪಗಳನ್ನು ತಂದು ದೇವರಿಗೆ ಬೆಳಗಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು.
ಗುಡಿಹಳ್ಳಿ ಜಿ.ವಿ.ಮುನಿವೆಂಕಟಸ್ವಾಮಪ್ಪ, ಚಿಕ್ಕವೆಂಕಟರೆಡ್ಡಿ, ಕಮಲಮ್ಮ, ಆಂಜನೇಯ, ಅರ್ಚಕರಾದ ಗಾಣಿಗರಹೊಸಹಳ್ಳಿಯ ಎಸ್.ನಂಜುಂಡಯ್ಯ, ಎನ್.ನಾಗೇಂದ್ರ, ಆಗಮಿಕರಾದ ಆರ್.ಗಣೇಶ್ ದೀಕ್ಷಿತ್, ಚನ್ನಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಸದ್ಭಾವನಾ ಶಾಂತಿಯಾತ್ರೆ
ಶಿವಲಿಂಗವು ಪರಮಾತ್ಮನ ಚಿಹ್ನೆ. ಮೂರು ವಿಭೂತಿ ಗೆರೆಗಳು ಕರ್ತವ್ಯದ ಸಂಕೇತಗಳಾದರೆ, ಶಿವಲಿಂಗದ ಮೇಲಿನ ಬಿಂದುವು ಪರಮಾತ್ಮನನ್ನು ನಿರಾಕಾರನೆಂದು ಅರ್ಥೈಸುತ್ತದೆ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಹಳೇ ಅಂಚೆ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿಡ್ಲಘಟ್ಟ ಶಾಖಾ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂಗಗಳೊಂದಿಗೆ ಸದ್ಭಾವನಾ ಶಾಂತಿಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಲಿಂಗವು ನಿರಾಕಾರ ಸರ್ವ ಆತ್ಮರ ತಂದೆಯಾದ ಜ್ಯೋತಿ ಸ್ವರೂಪ ಪರಮಾತ್ಮನ ಸಂಕೇತವಾಗಿದೆ. ನಮ್ಮಲ್ಲಿರುವ ಶತೃಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೆ ಸತ್ಯ ಜಾಗರಣೆ. ಅದೇ ಶಿವರಾತ್ರಿ ಜಾಗರಣೆ ಎಂದು ಶಿವರಾತ್ರಿಯ ವಿಶೇಷದ ಬಗ್ಗೆ ವಿವರಿಸಿದರು.
ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಾಪನೆಗೊಂಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಂತಿಯೊಂದಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ವಜಾರೋಹಣವನ್ನು ನೆರವೇರಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಶಾಂತಿಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ತಾಲ್ಲೂಕು ಸಂಚಾಲಕಿ ಬಿ.ಕೆ.ಜಯಕ್ಕ, ಮುನಿಲಕ್ಷ್ಮಮ್ಮ, ರಾಮಕೃಷ್ಣಪ್ಪ, ಚಂದ್ರಶೇಖರ್, ಬಸವರಾಜ್, ಪಿಳ್ಳವೆಂಕಟಸ್ವಾಮಿ, ರಾಮಲಕ್ಷ್ಮಿ, ದೇವಿಕಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಭ್ಯಂಗ
ವಿವಿಧ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಲ್ಲಿ ಆಯುರ್ವೇದವೂ ಒಂದು. ಇದು ಭಾರತೀಯ ವೈದ್ಯ ಪದ್ಧತಿ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ಮೂಲಕ ಗ್ರಂಥಗಳ ರೂಪದಲ್ಲಿಬೆಳಕಿಗೆ ಬಂದಿತು. ಬ್ರಹ್ಮನು ಆಯುರ್ವೇದವನ್ನು ಸ್ಮರಿಸಿಕೊಂಡು, ದಕ್ಷ ಪ್ರಜಾಪತಿಗೆ ತಿಳಿಸಿದನು. ದಕ್ಷ ಪ್ರಜಾಪತಿಯು ಅಶ್ವಿನಿ ಕುಮಾರರಿಗೆ, ಅಶ್ವಿನಿ ಕುಮಾರರು ಇಂದ್ರನಿಗೆ ಹಾಗೂ ಇಂದ್ರನಿಂದ ಈ ಆಯುರ್ವೇದವು ಆತ್ರೇಯ, ಪುನರ್ವಸು ಇತ್ಯಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು.
ಇತರೇ ಚಿಕಿತ್ಸಾ ಪದ್ಧತಿಗಳಂತಲ್ಲದೆ ಆಯುರ್ವೇದ ವೈದ್ಯ ಪದ್ಧತಿಯು ಎರಡು ಮುಖ್ಯ ಗುರಿಗಳನ್ನೊಳಗೊಂಡಿದೆ. ಮೊದಲನೆಯದು ರೋಗ ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು. ಎರಡನೆಯದು ರೋಗ ಬಂದಾಗ ಚಿಕಿತ್ಸೆಯನ್ನು ಮಾಡಿಕೊಳ್ಳುವುದು.
ರೋಗ, ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಚರಣೆಗಳನ್ನು ಆಯುರ್ವೇದದಲ್ಲಿ ವಿವರಿಸಿದ್ದಾರೆ. ಅವುಗಳಲ್ಲಿ ದಿನಚರ್ಯೆಯೂ ಒಂದು. ಇದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾನೆ ಏಳುವುದರಿಂದ ರಾತ್ರಿ ಮಲಗುವವರೆಗೆ ಏನೇನು ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರಣೆಗಳನ್ನೊಳಗೊಂಡಿದೆ. ಇದರಲ್ಲಿ ಅಭ್ಯಂಗವೂ ಒಂದು ವಿಧಿ.
ಅಭ್ಯಂಗ ಎಂದರೇನು?
ಅಭ್ಯಂಗ ಎಂದರೆ ಎಣ್ಣೆಯನ್ನು ಕ್ರಮಬದ್ಧವಾಗಿ ಸಂಪೂರ್ಣ ಮೈಗೆ ಹಚ್ಚಿಕೊಳ್ಳುವುದು. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಯಲ್ಲಿ ನರಕ ಚತುರ್ದಶಿಯ ದಿನದಂದು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು ವಾಡಿಕೆ.
ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ತಿಳಿಯುವುದೇನೆಂದರೆ ದೀಪಾವಳಿಯಲ್ಲಿ ಹೇಮಂತ ಋತು (ಚಳಿಗಾಲ) ವಿನ ಆಗಮನವಾಗಿರುತ್ತದೆ. ಈ ಸಮಯದಲ್ಲಿ ವಾತಾವರಣದಲ್ಲಿ ಒಣ ಗಾಳಿಯು ಬೀಸುತ್ತಿದ್ದು, ಚರ್ಮವು ಒಣಗಿರುತ್ತದೆ. ಈ ಸಮಯದಲ್ಲಿ ಒಣ ಚರ್ಮ ಹಾಗೂ ಚರ್ಮ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಅಭ್ಯಂಗ ಹಿತಕರ.
ಅಭ್ಯಂಗ ಮಾಡುವ ವಿಧಾನ
ಅಭ್ಯಂಗವನ್ನು ನಿತ್ಯವೂ ಮಾಡಬೇಕು, ಅಭ್ಯಂಗವನ್ನು ಆಹಾರ ಸೇವನೆಯ ಪೂರ್ವದಲ್ಲಿ ಅಥವಾ ಆಹಾರ ಜೀರ್ಣವಾದ ನಂತರ (ಕನಿಷ್ಠ ಪಕ್ಷ ಆಹಾರ ಸೇವನೆಯ ಮೂರು ಗಂಟೆಗಳ ನಂತರ) ಮಾಡಬೇಕು. ದೇಹದ ಎಲ್ಲ ಭಾಗಗಳಿಗೂ ಸಮ ಪ್ರಮಾಣದ ಒತ್ತಡವನ್ನು ಹಚ್ಚಿ ತಿಕ್ಕಬೇಕು. ಕೈ ಕಾಲುಗಳನ್ನು ಯಾವಾಗಲೂ ಮೇಲ್ಭಾಗದಿಂದ ಕೆಳಭಾಗದವರೆಗೆ ಒಮ್ಮುಖವಾಗಿ ಸಮಾನ ಒತ್ತಡದಿಂದ ಎಣ್ಣೆಯನ್ನು ಹಚ್ಚಿ ತಿಕ್ಕಬೇಕು. ಬೆನ್ನು ಮೂಳೆಗಳ ಭಾಗವನ್ನು ವೃತ್ತಾಕಾರವಾಗಿ ಒತ್ತಡವನ್ನು ಹಾಕಿ ತಿಕ್ಕಬೇಕು. ಎದೆ ಭಾಗ ಹಾಗೂ ಹೊಟ್ಟೆ ಭಾಗಗಳಲ್ಲೂ ಕಡಿಮೆ ಒತ್ತಡದಿಂದ ಎಣ್ಣೆ ಹಚ್ಚಿ ತಿಕ್ಕಬೇಕು. ವಿಶೇಷವಾಗಿ ತಲೆ, ಕಿವಿ ಹಾಗೂ ಪಾದಗಳಿಗೆ ಎಣ್ಣೆಯನ್ನು ಹಾಕಬೇಕು. ಅಭ್ಯಂಗವನ್ನು ಶರೀರದ ಮಾಂಸ ಖಂಡಗಳ ರಚನೆ ಹಾಗೂ ಜೋಡಣೆಗೆ ಅನುಸಾರವಾಗಿ ಅದೇ ದಿಕ್ಕಿನಲ್ಲಿ ಒಮ್ಮುಖವಾಗಿ ಮಾಡಬೇಕು.
ಅಭ್ಯಂಗಕ್ಕೆ ಬಳಸಬಹುದಾದ ಎಣ್ಣೆಗಳು
ಅತ್ಯಂತ ಶೀತ ಪ್ರಕೃತಿಯವರು ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅಭ್ಯಂಗಕ್ಕೆ ಬಳಸುವುದು ಉತ್ತಮ. ಉಷ್ಣ ಪ್ರಕೃತಿಯವರು ಆಕಳ ತುಪ್ಪದಿಂದ ಅಭ್ಯಂಗ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕ್ಷೀರಾ ಬಲಾತೈಲ, ಮಹಾನಾರಾಯಣ ತೈಲ, ಸಹಚರಾನಿ ತೈಲ, ಬಲಾಶ್ವಗಂಧ ತೈಲ, ಇತ್ಯಾದಿ ತೈಲಗಳನ್ನು ಅಭ್ಯಂಗಕ್ಕೆ ಬಳಸಬಹುದು.
ಅಭ್ಯಂಗದಿಂದ ದೊರೆಯುವ ಪ್ರಯೋಜನಗಳು
1. ಅಭ್ಯಂಗವು ಮುಪ್ಪನ್ನು ದೂರವಿಡುತ್ತದೆ.
2. ಅಭ್ಯಂಗವು ದಣಿವನ್ನು ನಿವಾರಿಸುತ್ತದೆ.
3. ವಾತ ದೋಷವನ್ನು ಶಮನ ಮಾಡುತ್ತದೆ.
4. ದೇಹಕ್ಕೆ ಪುಷ್ಟಿ, ದೃಢತೆ ಹಾಗೂ ಬಲವನ್ನು ನೀಡುತ್ತದೆ.
5. ಆಯಸ್ಸನ್ನು ವೃದ್ಧಿಗೊಳಿಸುತ್ತದೆ.
6. ಚರ್ಮವನ್ನು ಮೃದುಗೊಳಿಸುವುದಲ್ಲದೆ, ಚರ್ಮದ ಕಾಂತಿಯನ್ನುಹೆಚ್ಚಿಸುವುದು, ಅಲ್ಲದೆ ಚರ್ಮರೋಗಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
7. ತಲೆಗೆ ಎಣ್ಣೆಯನ್ನು ಹಚ್ಚುವುದರಿಂದ ತಲೆ ನೋವು ಇತ್ಯಾದಿ ತಲೆಯ ಸಂಬಂಧಪಟ್ಟ ರೋಗಗಳನ್ನು ದೂರವಿಡಬಹುದು, ಕೂದಲುಗಳನ್ನು ಮೃದುವಾಗಿಸಿ, ಉದ್ದವಾಗಿ, ಕಾಂತಿಯುಕ್ತವನ್ನಾಗಿ ಮಾಡುತ್ತದೆ. ಅಲ್ಲದೆ ಕೂದಲು ಕಪ್ಪಗೆ, ದೃಢವಾಗಿ ಬೆಳೆಯುತ್ತದೆ.
8. ಪಾದಗಳಿಗೆ ಎಣ್ಣೆಯನ್ನು ಹಚ್ಚುವುದರಿಂದ ನಿದ್ರೆ ಹೆಚ್ಚುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಇದು ಉತ್ತಮ.
9. ಕಿವಿಗಳಿಗೆ ಎಣ್ಣೆಯನ್ನು ಹಾಕುವುದರಿಂದ ಕಿವಿನೋವು, ತಲೆನೋವು, ಕುತ್ತಿಗೆಯ ಹಿಂಭಾಗದ ನೋವು ಹಾಗು ದವಡೆಗಳ ನೋವುಗಳನ್ನು ಶಮನ ಮಾಡುತ್ತದೆ.
ಅಭ್ಯಂಗವು ಯಾರಿಗೆ ನಿಷೇಧ?
ಕಫದ ರೋಗಗಳಿಂದ ಬಳಲುತ್ತಿರುವವರು ಅಭ್ಯಂಗವನ್ನು ಮಾಡಬಾರದು. ಅಜೀರ್ಣದಿಂದ ಬಳಲುತ್ತಿರುವವರು, ಜೀರ್ಣಶಕ್ತಿ ಕುಂದಿರುವವರು ಅಭ್ಯಂಗವನ್ನು ಮಾಡದಿರುವುದು ಉತ್ತಮ.
ನಿರಂತರ ಬಳಕೆಯಿಂದ ಸವೆದ ಗಾಡಿಯ ಕೀಲುಗಳು ಎಣ್ಣೆಯನ್ನು ಹಾಕುವುದರಿಂದ ಹೇಗೆ ಕಾರ್ಯಕ್ಷಮತೆಯನ್ನು ಹೊಂದುತ್ತವೋ ಅದೇ ರೀತಿ ಸತತವಾದ ಕೆಲಸ, ಕಾರ್ಯಗಳಿಂದ ಸವೆದ ದೇಹದ ಅಂಗಾಂಗಗಳು ಅಭ್ಯಂಗದಿಂದ ಬಲ ಹಾಗೂ ದೃಢತ್ವವನ್ನು ಹೊಂದಿ ಕೆಲಸ, ಕಾರ್ಯಗಳಿಗೆ ಸಿದ್ಧಗೊಳ್ಳುತ್ತವೆ.
ಅಭ್ಯಂಗ ಯಾರಿಗೆ ಒಳ್ಳೆಯದು? ಯಾರಿಗೆ ಒಳ್ಳೆಯದಲ್ಲ? ಅಭ್ಯಂಗದಿಂದಾಗುವ ಪ್ರಯೋಜನಗಳು, ದೇಹ ಪ್ರಕೃತಿಗೆ ಅನುಕೂಲಕರವಾದ ಎಣ್ಣೆಗಳು ಯಾವುವು? ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಭ್ಯಂಗವನ್ನು ಆಚರಿಸಬೇಕು.
ಡಾ. ನಾಗಶ್ರೀ.ಕೆ.ಎಸ್.

