25.1 C
Sidlaghatta
Monday, December 29, 2025
Home Blog Page 985

ದುಬಾರಿ ಹಣ ವಸೂಲಿ – ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ

0

ಗ್ಯಾಸ್ ವಿತರಕರು ಗ್ರಾಹಕರಿಂದ ದುಬಾರಿ ಹಣವನ್ನು ವಸೂಲಿ ಮಾಡುತ್ತಿರುವುದರ ಜೊತೆಗೆ ಗ್ರಾಹಕರೊಂದಿಗೆ ದೌರ್ಜನ್ಯವಾಗಿ ವರ್ತಿಸುತ್ತಿದ್ದರೆಂದು ಆರೋಪಿಸಿ ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಗರದಲ್ಲಿ ನಡೆಯಿತು.
12feb1aನಗರದ ಅಂಚೆ ಕಚೇರಿಯ ಬಳಿರುವ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಬಂದ ಸಿಧ್ಧಾರ್ಥನಗರದ ನಿವಾಸಿಗಳು ಸಿಲಿಂಡರ್‍ನ ರೇಗ್ಯೂಲೇಟರ್ ಖರೀದಿ ಮಾಡಲು ಹೋದಾಗ 150 ರೂಪಾಯಿಗಳ ಬೆಲೆಯ ರೇಗ್ಯೂಲೇಟರ್‍ಗೆ 495 ರೂಪಾಯಿಗಳನ್ನು ಪಡೆದುಕೊಂಡು ರಸೀದಿಯನ್ನು ನೀಡದೆ, ವಂಚನೆ ಮಾಡಿರುತ್ತಾರೆ, ಸರ್ಕಾರದ ಆದೇಶದಂತೆ 150 ರೂಪಾಯಿಗಳನ್ನು ಮಾತ್ರ ಪಡೆಯಬೇಕು 495 ರೂಪಾಯಿಗಳನ್ನು ಯಾಕೆ ಪಡೆಯುತ್ತೀರಿ ಹಾಗಿದ್ದರೆ 495 ರೂಪಾಯಿಗಳಿಗೆ ನಮಗೆ ರಸೀದಿಯನ್ನು ನೀಡುವಂತೆ ಗ್ರಾಹಕರು ಕೇಳಿದಾಗ, ನಾವು ಪಡೆಯುವುದು ಅಷ್ಟೆ ಹಣ, ನಿಮಗಿಷ್ಟವಿದ್ದರೆ ತೆಗೆದುಕೊಳ್ಳಿ ಇಲ್ಲವಾದರೆ ಬೇರೆ ಎಲ್ಲಿಯಾದರೂ ತೆಗೆದುಕೊಳ್ಳಿ, ಬಿಲ್ ಕೊಡಬೇಕಾದರೆ ಮಧ್ಯಾಹ್ನ 03 ಘಂಟೆಗೆ ಬನ್ನಿ ಎಂದು ಏಜೆನ್ಸಿಯ ಮಾಲೀಕ ನಾಗರಾಜು, ಬೇಜಾವಾಬ್ದಾರಿಯಿಂದ ಉತ್ತರಿಸುತ್ತಾರೆ, ನೂತನವಾಗಿ ಅನಿಲ ಸಂಪರ್ಕವನ್ನು ಪಡೆಯಬೇಕಾದರೆ 5 ಸಾವಿರದಿಂದ 6 ಸಾವಿರ ರೂಪಾಯಿಗಳವರೆಗೂ ಹಣವನ್ನು ಪಡೆದುಕೊಳ್ಳುತ್ತಾರೆ, ಆನ್‍ಲೈನ್‍ನಲ್ಲಿ ಸಿಲಿಂಡರ್ ಬುಕ್ ಮಾಡಿದ ನಂತರ ಮೊಬೈಲ್‍ಗಳಲ್ಲಿ ಮೆಸೆಜ್ ಬಂದರೂ ಕೂಡಾ ಸರಿಯಾದ ಸಮಯಕ್ಕೆ ಸಿಲಿಂಡರ್‍ಗಳನ್ನು ವಿತರಣೆ ಮಾಡದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಈ ಬಗ್ಗೆ ಏಜೆನ್ಸಿಯ ಮಾಲೀಕ ನಾಗರಾಜು ಅವರನ್ನು ಪ್ರಶ್ನಿಸಿದಾಗ ನಾವು ರೇಗ್ಯೂಲೇಟರ್‍ಗೆ ಪಡೆಯುತ್ತಿರುವುದು, 150 ರೂಪಾಯಿಗಳು ಮಾತ್ರ, ಅವರು ರೇಗ್ಯೂಲೇಟರ್ ತೆಗೆದುಕೊಂಡು 500 ರೂಪಾಯಿಗಳನ್ನು ಕೊಟ್ಟಿದ್ದಾರೆ, ಅವರಿಗಿನ್ನು ಚಿಲ್ಲರೆ ಕೊಟ್ಟಿಲ್ಲ, ಅಷ್ಟರಲ್ಲಿ ಈ ರೀತಿಯಾಗಿ ಗಲಾಟೆ ಮಾಡುತ್ತಿದ್ದಾರೆ, ಕಳೆದ ಕೆಲವು ದಿನಗಳ ಹಿಂದೆ ಮದುವೆಗೆ ಗ್ಯಾಸ್ ಸಿಲಿಂಡರ್ ನೀಡುವಂತೆ ಕೇಳಿದ್ದರು, ಸಿಲಿಂಡರ್ ನೀಡಲಿಲ್ಲವೆಂಬ ಕಾರಣಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.

ಆಟೋಗ್ರಾಫ್ ಎಂಬ ನೆನಪಿನ ವಿಮಾನವೇರಿ..

0

ಚಂದದ ಗೊಂಬೆಯಂಗಡಿ ಎದುರು ನಿಂತ ಮಗುವೊಂದು ತನ್ನ ಖುಷಿಯನ್ನು ವ್ಯಕ್ತ ಪಡಿಸಲಾಗದೇ ಬೆರಗುಗಣ್ಣಿನಿಂದ ಕಣ್ಣು ಮಿಟುಕಿಸದೆ ನೋಡುವ ಹಾಗೆ, ಅಂದು ನನ್ನ ಪುಟ್ಟ ಪುಸ್ತಕವೊಂದನ್ನ ನೋಡುತ್ತಾ ನಿಂತೆ. ಎಷ್ಟು ದಿನವಾಗಿತ್ತು ಅದನ್ನು ಮುಟ್ಟಿನೋಡದೇ! ಹಿಂದೊಮ್ಮೆ ಶಾಲೆ ಬದಲಿಸುವಾಗ, ಕಾಲೇಜು ಬಿಡುವಾಗ, ಚಿಕ್ಕ ಪುಸ್ತಕದಲ್ಲಿ ಗೆಳೆಯರಿಂದ ಆಟೋಗ್ರಾಫ್ ಬರೆಸಿಟ್ಟುಕೊಂಡ ಪುಸ್ತಕವದು. ನನ್ನ ಜೀವನದ ಹಾದಿಯಲ್ಲಿ ಕೆಲಕಾಲ ಹೆಜ್ಜೆಯಿಟ್ಟು ಜೊತೆಯಾದವರ ನೆನೆದ ಮನಸ್ಸು ಅಂದು ಹುಡುಕಿಕೊಟ್ಟದ್ದು ಇದೇ ಪುಸ್ತಕವನ್ನು. ಭದ್ರವಾಗಿ ಬೀಗ ಹಾಕಿಟ್ಟಿದ್ದ ಪುಸ್ತಕವದು! ಬಹುಶ: ಆ ಪುಟ್ಟ ಪುಟ್ಟ ಸಾಲುಗಳು ಎಲ್ಲಿ ಹಾರಿ ಹೋದಾವು ಎಂಬ ಭ್ರಮೆ ಇದ್ದಿರಬೇಕು ನನಗೆ!
ಪುಸ್ತಕ ತೆರೆಯುತ್ತಿದ್ದಂತೆ ನನಗೇ ತಿಳಿಯದೇ ಮುಗುಳು ನಗೆಯೊಂದು ಮೂಡಿತ್ತು. 20 ವರ್ಷಗಳ ಜೀವನ ಒಂದು ಪುಟ್ಟ ಸಿನಿಮಾದಂತೆ ಕಣ್ಣೆದುರಿಗೆ ಹಾದು ಹೋಗಿತ್ತು. ಅದರಲ್ಲಿ ಅದೆಷ್ಟು ಜನ ಕಣ್ಣೆದುರಿಗೆ ಬಂದು ಹೋದವರು! ಅದರಲ್ಲಿ ಕೆಲವರು ಪ್ರೀತಿಯಿಂದ, ಹಲವರು ತುಂಟತನದಿಂದ, ಇನ್ನೂ ಕೆಲವರು ಹಠದಿಂದ ಏನೇನೆಲ್ಲಾ ಬರೆದ ದೊಡ್ಡ ಹಾಗೂ ದಡ್ಡ ಸಾಲುಗಳನ್ನು ಓದಿದರೆ ಈಗ ತಮಾಷೆಯೆನಿಸುತ್ತದೆ.
“ಡೇಟೆಡ್ ಫಾರೆವರ್” ಎಂದು ಒಬ್ಬ ಹೇಳಿದರೆ, “ಸಮಯ ಸರಿಯಬಹುದು, ಜಗತ್ತಿನಲ್ಲಿ ಎಲ್ಲವೂ ಬದಲಾಗಬಹುದು, ಆದರೆ ನಮ್ಮ ಸ್ನೇಹ ಶಾಶ್ವತ ” ಎನ್ನುತ್ತಾಳೆ ಇನ್ನೊಬ್ಬಳು!” ನಮ್ಮ ಗೆಳೆತನ ನಮ್ಮಿಬ್ಬರ ಕೊನೆಯುಸಿರು ಇರುವವರೆಗೆ” ಎಂದ ಗೆಳತಿ ಎಲ್ಲಿದ್ದಾಳೋ, ಹೇಗಿದ್ದಾಳೋ ಈಗ ನೋಡುವ ಅಸೆಯಾಗುತ್ತದೆ. ನನ್ನ ಹೆಸರಿನ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥ ಕೊಟ್ಟು ಹೊಸ ಅರ್ಥ ಸೃಷ್ಟಿಸಿದ ಬುಧ್ಧಿವಂತರಿದ್ದಾರೆ. ಹೀಗೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ, ವ್ಯಂಗವಾಗಿ, ತಮಾಷೆಯಾಗಿ ಬರೆದುಕೊಟ್ಟ ಎಷ್ಟೋ ಜನ ಒಮ್ಮೆ ನೆನಪಾದರು. ಬಹುಶ: ಆಗ ಇದನ್ನೆಲ್ಲ ಓದಿ ಖುಷಿ ಪಟ್ಟವಳು ನಾನು, ಆದರೆ ಈಗ ಓದಿದರೆ ನಗು ಬರುವುದುಂಟು.
ಎಷ್ಟೊ ಬಾರಿ ನಾನು ಚಿಕ್ಕವಳಿದ್ದಾಗ, ಈ ಆಟೋಗ್ರಾಫ್ ಬರೆದುಕೊಡುವುದಕ್ಕೆ, ಬೇರೆಯವರಿಂದ ಬರೆಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಪ್ರತೀ ಬಾರಿಯೂ ಅನಿಸುತ್ತಿದ್ದುದು, ಈ ನಮ್ಮ ಸ್ನೇಹ ನಿಜವಾಗಿದ್ದರೆ, ಅವರು ನಮ್ಮುಳಗೆ ಅಚ್ಚೊತ್ತಿದ್ದರೆ, ಅದು ಶಾಶ್ವತ. ಎಂದೆಂದಿಗೂ ಯಾರೂ ಅಳಿಸಲಾಗದು. ಇದಕ್ಕೆ ಈ ಪುಸ್ತಕದ ನೆರವು ಬೇಕಾ? ಎಂದು. ಈ ಸ್ನೇಹವೆಂಬುದು ಒಂದು ಸಮುದ್ರವಿದ್ದಂತೆ. ಇಲ್ಲೆ ಹಳೇ ನೀರು ಹೊಸ ನೀರು ಸೇರಿಯೇ ಹೊಸ ಅಲೆಯಾಗಬೇಕು. ಹಾಗಿದ್ದರೆ ಈ ಹಳೆಯ ಸ್ನೇಹವನ್ನು ನಾ ಮರೆಯುದುಂಟಾ? ನಮ್ಮ ಗೆಳೆತನಕ್ಕೆ ಈ ಪುಸ್ತಕದ ಹಂಗು ಬೇಕಾ? ನನ್ನ ಮನಸ್ಸು ಸಾಲದಾ? ಎಂದು ಪ್ರತೀ ಬಾರಿಯೂ ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನ್ನಿಸುತ್ತಿದ್ದುದು ನಿಜ.
ಆದರೆ….ಕೆಲವೊಮ್ಮೆ ದೇವರು ಇಲ್ಲ ಎಂದು ವಾದ ಮಾಡುವವನೊಬ್ಬ, ಸುತ್ತಲಿನ ಜನರೆಲ್ಲರೂ ಜಾತ್ರೆಯಲ್ಲಿ ದೇವರಿಗೆ ಕೈ ಮುಗಿಯುವುದನ್ನು ನೋಡಿ ಭಯದಿಂದಲೋ, ತನಗೇನಾದರಾದೀತು ಎಂಬ ಕಾರಣದಂದಲೋ ತನ್ನ ಕೈಗಳನ್ನೂ ಜೋಡಿಸಿದಂತೆ, ನಾನೂ ಕೂಡ ಎಲ್ಲರ ಹಾಗೆ, ಈ ಆಟೋಗ್ರಾಫ್ ಪುಸ್ತಕದ ಹಾಳೆಗಳನ್ನು ತುಂಬಿಸಿಟ್ಟಿದ್ದೆ. ಇದರ ಅಸ್ತಿತ್ವದ ಅನುಭವ ನನಗೆ ಈಚೆಗೆ ತಿಳಿದದ್ದು, ಅರಿವಾದದ್ದು.
ಈ ಡಿಜಿಟಲ್ ಜಗತ್ತಿನಲ್ಲಿ, ಕೈ ಬೆರಳುಗಳ ತುದಿಯಲ್ಲೇ ಎಲ್ಲವೂ ಸಿಗುವ ಹೊತ್ತಲ್ಲಿ, ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ನಡುವೆ ಈ ಪುಟ್ಟ ಪುಸ್ತಕದ ಉಪಯೋಗ ನಮಗಾರಿಗೂ ಇಲ್ಲ. ಸಾವಿರಕ್ಕೂ ಹೆಚ್ಚು ಗೆಳೆಯರ ಗೆಳೆತನ ಹೊಂದಿದ ಫೇಸ್ ಬುಕ್ ಅಕೌಂಟಿನಲ್ಲಿ, ಯಾರು ಬೇಕಾದರೂ ಎಷ್ಟು ಹೊತ್ತಿಗೂ ಸಿಗುತ್ತಾರೆ. ಸಮಯವಿದ್ದರೆ ಹರಟುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ, ಶಾಲಾ ಕಾಲೇಜು ಬಿಡುವಾಗ. “ಏ ಯಾಕ್ರೋ ಅಳ್ತಿರಾ? ಫೇಸ್ ಬುಕ್ ಅಲ್ಲಿ ಮೀಟ್ ಮಾಡೋಣ ಬಿಡಿ” ಅಂದವರೇ ಹೆಚ್ಚು. ನಿಜ ಈ ಜಾಲತಾಣಗಳು ನಾವು ದೂರದಲ್ಲಿದ್ದರೂ ಹತ್ತಿರದಲ್ಲಿದ್ದೇವೆ ಎಂಬ ಭಾವನೆಯನ್ನು ಮೂಡಿಸಿ ಮುದ ನೀಡುತ್ತದೆ. ಗೆಳೆತನದ ಭರವಸೆಗೆ ಇದು ಸಹಕಾರಿ ಕೂಡ. ಆದರೆ, ಈ ಪುಟ್ಟ ಪುಸ್ತಕವನ್ನು ಮುಂದೊಂದು ದಿನ ಓದಿದಾಗ ಸಿಗುವ ಆನಂದವನ್ನು, ಇದಕ್ಕೆ ಹೋಲಿಸಲಾಗದು. ಇದು ನಮ್ಮ ಗೆಳೆಯರು ಸದ್ಯದಲ್ಲ್ಲಿ ದೂರವಿದ್ದಾರೆ ಹಾಗು ನಾವು ಜೀವನದಲ್ಲಿ ಬಹುದೂರ ಸಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಪ್ರತೀ ಬಾರಿ ಓದಿದಾಗಲೂ ಪದಗಳು ಅದೇ ಆದರೂ ಅದರ ಅರ್ಥ ಅನುಭವ ಬೇರೆಯಾಗುತ್ತಾ ಹೋಗುತ್ತದೆ. ಕೆಲವು ಬಾರಿ ನಮಗೇ ಅರಿಯದೆ ಎಲ್ಲೋ ಕಳೆದುಹೋದ ನಮ್ಮ ಅಂತರಂಗದ ಶಕ್ತಿಯನ್ನು ಮರು ಭರಿಸುತ್ತದೆ.
ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಬಂದ ಆ ಪುಟಾಣಿಗಳು, ನಮ್ಮ ಬಾಲ್ಯವನ್ನ್ನು ಮತ್ತೆ ನೆನಪಿಸುತ್ತಾರೆ. ಹತ್ತಿರವಿದ್ದೂ ದೂರವಿರುವ, ದೂರವಿದ್ದೂ ಹತ್ತಿರವಿದ್ದಂತೆ ತೋರುವ ಈ ಜೀವನದ ವೈರುಧ್ಯ, ನನಗೆ ಅರ್ಥವಾದದ್ದು ಮೊನ್ನೆ ಈ ಬಾಲ್ಯದ ಸ್ನೇಹಿತರನ್ನು ಒಡಿಲಿನಲ್ಲಿ ಹಿಡಿದಿಟ್ಟುಕೊಂಡ ಈ ಪುಟ್ಟ ಪುಸ್ತಕದಿಂದ.
ನೀವು ಕೂಡ ಇದನ್ನು ಜೋಪಾನವಾಗಿಟ್ಟಿದ್ದರೆ, ಒಮ್ಮೆ ಅದರ ಪುಟಗಳನ್ನು ತಿರುವಿಹಾಕಿ. ಆ ಚೊಕ್ಕ ಮನಸ್ಸಿನ ಚಿಕ್ಕ ಚಿಕ್ಕ ಭಾವನೆಗಳು ನಿಮ್ಮ ಮನಸ್ಸಿಗೆ ಮತ್ತೆ ಖುಷಿಯ ರೆಕ್ಕೆಯನ್ನು ಹಚ್ಚುತ್ತದೆ. ಏನಂತೀರ?
ಸ್ಫೂರ್ತಿ ವಾನಳ್ಳಿ

ಪಿ.ಎಲ್.ಡಿ ಬ್ಯಾಂಕಿನ ಚುನಾವಣೆ

0

ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಮಂಗಳವಾರ ನಾಮಪತ್ರವನ್ನು ಹಿಂಪಡೆಯಲು ಕಡೆಯದಿನವಾಗಿತ್ತು.
ಕಣದಲ್ಲಿ ಉಳಿದಿರುವವರು:

  • ಶಿಡ್ಲಘಟ್ಟ ಟೌನ್ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿ.ಅಶ್ವತ್ಥನಾರಾಯಣ, ಎ.ರಾಮಚಂದ್ರ
  • ಅಬ್ಲೂಡು ಸಾಮಾನ್ಯ ಕ್ಷೇತ್ರ: ಸಿ.ಎಂ.ಗೋಪಾಲ, ಜೆ.ವಿ.ಮುನಿವೆಂಕಟಸ್ವಾಮಿ
  • ಸಾಲಗಾರರಲ್ಲದ ಕ್ಷೇತ್ರ: ದೇವರಾಜ್, ಎಂ.ದೇವರಾಜ್, ಬಿ.ಎ.ನಾರಾಯಣಸ್ವಾಮಿ, ಎಚ್.ಶಂಕರ್
  • ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಸ್ಥಾನ: ರತ್ನಮ್ಮ, ಎಂ.ಎನ್.ರಮಾದೇವಿ
  • ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ: ಅಶ್ವತ್ಥನಾರಾಯಣರೆಡ್ಡಿ, ಜಿ.ಎಂ.ವೆಂಕಟರೆಡ್ಡಿ
  • ಮೇಲೂರು ಸಾಮಾನ್ಯ ಕ್ಷೇತ್ರ: ಆರ್.ಬಿ.ಜಯದೇವ್, ಎಚ್.ಎಂ.ನಾರಾಯಣಸ್ವಾಮಿ
  • ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ: ಸಿ.ನಾರಾಯಣಸ್ವಾಮಿ, ಎಲ್.ಎನ್.ಶಿವಾರೆಡ್ಡಿ
  • ಜಂಗಮಕೋಟೆ ಸಾಮಾನ್ಯ ಕ್ಷೇತ್ರ: ಕೆ.ಎಂ.ಭೀಮೇಶ್, ಡಿ.ಸಂಗಪ್ಪ
  • ಗಂಜಿಗುಂಟೆ ಸಾಮಾನ್ಯ ಕ್ಷೇತ್ರ: ಡಿ.ವಿ.ಚಂದ್ರಶೇಖರ್ ರೆಡ್ಡಿ, ಎಂ.ಪಿ.ರವಿ
  • ಚೀಮಂಗಲ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ವೆಂಕಟೇಶಪ್ಪ, ಸಿದ್ದಪ್ಪ
  • ಆನೂರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರ: ನರಸಿಂಹಪ್ಪ, ಮುನಿಯಪ್ಪ
  • ಸಾದಲಿ ಮಹಿಳಾ ಮೀಸಲು ಸ್ಥಾನ: ಚೌಡಮ್ಮ, ಭಾಗ್ಯಮ್ಮ

ಮಳಮಾಚನಹಳ್ಳಿ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ

0

ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಮಳಮಾಚನಹಳ್ಳಿ ಶಾಖೆಯ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಶಿಡ್ಲಘಟ್ಟದಿಂದ ಜಂಗಮಕೋಟೆ ಕ್ರಾಸ್ ನಡುವೆ ಮಳಮಾಚನಹಳ್ಳಿ, ತಾದೂರು, ಬಸವಾಪಟ್ಟಣ ಮುಂತಾದ ಗ್ರಾಮಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ದಿನಕ್ಕೆ ಒಂದು ಬಾರಿ ಮಾತ್ರ ಸರ್ಕಾರಿ ಬಸ್ಸು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಸಾರಿಗೆ ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ಈ ಮಾರ್ಗದಲ್ಲಿ ಬಸ್ಸುಗಳನ್ನು ಬಿಡುತ್ತಿಲ್ಲ. ಇತ್ತ ಪಾಸ್ ಮಾಡಿಸಿರುವ ವಿದ್ಯಾರ್ಥಿಗಳು ಪಾಸ್ ಇದ್ದರೂ ಹೆಚ್ಚು ಹಣವನ್ನು ತೆತ್ತು ಖಾಸಗಿ ಬಸ್ಸು ಹಾಗೂ ಆಟೋಗಳನ್ನು ಅವಲಂಬಿಸಬೇಕಾಗಿದೆ. ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹೋಗಲಾಗದೇ ತೊಂದರೆಯಾಗುತ್ತಿದೆ. ಹಲವಾರು ಬಾರಿ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದು ಮುಂದುವರಿದಲ್ಲಿ ಮುಂದೆ ಶಿಡ್ಲಘಟ್ಟದ ವೃತ್ತದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಮಳಮಾಚನಹಳ್ಳಿ ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಮತ್ತು ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನಿಯಂತ್ರಣವಿರಲಿ ನಾಲಿಗೆಗೆ

0

ಮಾತು, ಆಹಾರಸೇವನೆ ಈ ಎರಡು ಕಾರ್ಯಗಳಲ್ಲಿ ನಾಲಿಗೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಎರಡೂ ಕೆಲಸಗಳು ಹಿತಮಿತವಾಗಿದ್ದರೆ ಮಾತ್ರ ಚೆನ್ನ. ಮಾತಿನ ಬಗ್ಗೆ “ಸದ್ವತ್ತವಿರಲಿ ಸನ್ಮತಿಗೆ” ಎಂಬ ಭಾಗದಲ್ಲಿ ವಿವರಣೆ ನೀಡಲಾಗಿದೆ. ಆಹಾರಕ್ಕೆ ಸಂಬಂಧಿಸಿದ ವಿಶೇಷ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹೆಚ್ಚಿನ ಪ್ರಮಾಣದಲ್ಲಿ ಅತಿಗಟ್ಟಿಯಾದ ಅಥವಾ ಕೇವಲ ಮೆತ್ತಗಿರುವ ಆಹಾರ ಸೇವನೆ ಮಾಡುವುದರಿಂದ ಹಲ್ಲಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ.
2. ಏಕಕಾಲದಲ್ಲಿ ಅತಿ ಬಿಸಿಯಾದ ಹಾಗೂ ಅತಿ ಸಣ್ಣಗಿನ ಆಹಾರ ಸೇವನೆಯಿಂದ ಹಲ್ಲು ಹಾಗೂ ನಾಲಿಗೆಗೆ ತೊಂದರೆಯಾಗುತ್ತದೆ. (ಉದಾ: ಐಸ್ ಕ್ರೀಂ ಸೇವನೆ ನಂತರ ಬಿಸಿ ಸೂಪ್ ಸೇವಿಸುವುದು ಹಿತವಲ್ಲ)
3. ಹುಳಿ ಅಂಶವಿರುವ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಮೂಸಂಬಿ, ದಾಳಿಂಬೆ ಮೊದಲಾದುವುಗಳ ಜೊತೆ ಹಾಲನ್ನು ಸೇವಿಸಬಾರದು.
4. ಅತಿ ಉಪ್ಪು-ಹುಳಿ-ಖಾರ-ಕಹಿ-ಒಗರು: ಈ ರುಚಿಗಳ ಸೇವನೆ ಹಿತವಲ್ಲ.
5. ಬೇಸಗೆ ಕಾಲದಲ್ಲಿ ಅತಿ ಉಪ್ಪು-ಹುಳಿ-ಖಾರದ ಸೇವನೆ ಹಾಗೆಯೇ ಉಷ್ಣಪ್ರದೇಶದಲ್ಲಿ ಅತಿಯಾಗಿ ಉಪ್ಪು-ಹುಳಿಖಾರವಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
6. ಶೀತಕಾಲದಲ್ಲಿ ಅತಿ ಶೀತವಿರುವ ಆಹಾರ; ಉಷ್ಣಕಾಲದಲ್ಲಿ ಅತಿ ಬಿಸಿಯಾಗಿರುವ ಆಹಾರವನ್ನು ಸೇವಿಸಬಾರದು.
7. ಕೇವಲ ಮನಸ್ಸಿಗೆ ಹಿತವಾಗಿರುವ ಆಹಾರವನ್ನು ಸೇವಿಸಬಾರದು. ಶರೀರಕ್ಕೆ ಒಗ್ಗುತ್ತದೆಯೇ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತಹ ಆಹಾರವನ್ನು ಸೇವಿಸಬೇಕು.
8. ಮೊಳಕೆ ಕಾಳು, ಎಣ್ಣೆ ಪದಾರ್ಥಗಳು ಹಾಗೂ ಸಿಹಿತಿಂಡಿಗಳನ್ನು ಏಕಕಾಲದಲ್ಲಿ ಸೇವಿಸುವುದು ಹಿತವಲ್ಲ ಮತ್ತು ಆರೋಗ್ಯಕರವಲ್ಲ.
9. ಜೇನುತುಪ್ಪವನ್ನು ಬಿಸಿ ಮಾಡಿ ಆಗಲೀ, ಬಿಸಿ ಆಹಾರದ ಜೊತೆಗಾಗಲೀ ಸೇವಿಸಬಾರದು.
10. ಜೀರ್ಣಿಸಿಕೊಳ್ಳಲು ಆಗುವಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
11. ಊಟಕ್ಕೆ ಮೊದಲು ಅಥವಾ ಊಟವಾದ ನಂತರ ಒಮ್ಮೆಲೇ ನೀರನ್ನು ಸೇವಿಸುವುದು ಹಿತವಲ್ಲ. ಊಟದ ಮಧ್ಯೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇವಿಸುವುದು ಒಳ್ಳೆಯದು.
12. ಒಮ್ಮೆ ಸೇವಿಸಿದ ಆಹಾರವು ಜೀರ್ಣವಾದ ನಂತರವೇ ಪುನ: ಆಹಾರವನ್ನು ಸೇವಿಸಬೇಕು.
13. ಆಗಾಗ್ಗೆ ಬೆಚ್ಚಗಿನ ನೀರು ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
14. ಬೇಯಿಸಿದ ಆಹಾರ, ಹಸಿಯಾದ ಆಹಾರ, ಹುರಿದು ತಯಾರಿಸಿದ ಆಹಾರ, ಕರಿದು ತಯಾರಿಸಿದ ಆಹಾರ ಹೀಗೆ ನಾಲ್ಕು ರೀತಿಯಲ್ಲಿ ತಯಾರಿಸಿದ ಆಹಾರವನ್ನು ಹದವರಿತು ಸೇವಿಸಬೇಕು.
15. ನಮ್ಮ ದೇಹಕ್ಕೆ ಕೆಲವು ಆಹಾರ ಪದಾರ್ಥಗಳು ಒಗ್ಗದೇ ಇದ್ದ ಪಕ್ಷದಲ್ಲಿ ಅವುಗಳ ಸೇವನೆ ಹಿತವಲ್ಲ.
16. ಆಹಾರದಲ್ಲಿ ಇರಬೇಕಾದ ಘಟಕಗಳಾದ ಏಕದಳ ಧಾನ್ಯಗಳು (ಅಕ್ಕಿ, ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ ಇತ್ಯಾದಿ) ದ್ವಿದಳ ಧಾನ್ಯಗಳು (ಹೆಸರು, ಕಡಲೆ, ಹುರುಳಿ, ಉದ್ದುಇತ್ಯಾದಿ) ಆಕಳ ಹಾಲು, ಆಕಳ ತುಪ್ಪ ಕಾಲಾನುಸಾರವಾಗಿ ಸಿಗುವ ಹಣ್ಣು-ಸೊಪ್ಪು-ತರಕಾರಿಗಳು, ನೀರು-ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಸಂಸ್ಕರಿಸಿಕೊಂಡು ಸೇವಿಸಬೇಕು.
17. ನಿಗದಿತ ಸಮಯದಲ್ಲಿ ಮನಸ್ಸಿಗೆ ಅನುಕೂಲಕರವಾದ ವಾತಾವರಣದಲ್ಲಿ ಮನೆಯವರೊಡಗೂಡಿ ಆಹಾರವನ್ನು ಸೇವಿಸಬೇಕು.
18. ಸುಲಭವಾಗಿ ಜೀರ್ಣಿಸುವ ಆಹಾರ ಪದಾರ್ಥಗಳು (ಹಣ್ಣು, ಬೇಯಿಸಿದ ಆಹಾರ) ಹಾಗೂ ಜೀರ್ಣಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಆಹಾರ ಪದಾರ್ಥಗಳು (ಜಿಡ್ಡಿನ ತಿನಿಸುಗಳು, ಸಿಹಿ ತಿನಿಸುಗಳು) ಎರಡನ್ನೂ ಸೇರಿಸಿ ಸೇವಿಸುವುದು ಒಳ್ಳೆಯದಲ್ಲ.
ಡಾ. ಶ್ರೀವತ್ಸ

ಕೋಟೆ ಶ್ರೀರಾಮ ದೇವಾಲಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ

0

ಸಂಗೀತವು ಮನಸ್ಸನ್ನು ಸುಸಂಸ್ಕೃತಗೊಳಿಸುವ ಗುಣವುಳ್ಳದ್ದು. ಮನಸ್ಸನ್ನು ಹಿಡಿದಿಡುವ ಹಾಗೂ ಏಕಾಗ್ರತೆಯಡೆಗೆ ಸಾಗಿಸುವ ಸಾಧನವಾಗಿದೆ ಸಂಗೀತ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ಸೋಮವಾರ ಸಂಜೆ ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ಎಲ್ಲರ ಮನಸ್ಸನ್ನು ಅರಳಿಸುವ ಮಾದ್ಯಮ. ಹಾಗಾಗಿ ಸಂಗೀತಗಾರರು, ಕಲಾಕಾರರಿಗೆ ಪ್ರೇಕ್ಷಕನ ಆಶೀರ್ವಾದವೇ ಆಸ್ತಿ. ಕಲಾವಿದರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸುವ ಕಾರ್ಯವನ್ನು ಮಾಡುವ ಮೂಲಕ ಕಲಾಪೋಷಣೆ ಮಾಡಬೇಕು. ಅದರ ಮೂಲಕ ಸಾಂಸ್ಕೃತಿಕ ಪರಿಸರವನ್ನು ವಿಸ್ತರಿಸಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಸುಗಮ ಸಂಗೀತ ಕಲಾವಿದ ಜ್ಞಾನಕುಮಾರ್ ಮತ್ತು ತಂಡ, ಗುಡಿಬಂಡೆ ಅಮರನಾರಾಯಣ ಅವರ ತಂಡ, ನ್ಯಾಮಗೊಂಡ್ಲು ಲಕ್ಷ್ಮಯ್ಯ ವೆಂಕಟೇಶಮೂರ್ತಿ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಂಧ ಕಲಾವಿದ ಸಂಗೀತ ಸ್ನಾತಕೋತ್ತರ ಪದವೀಧರರಾದ ಗುಡಿಬಂಡೆ ಅಮರನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಪತಂಜಲಿ ಯೋಗ ಕೇಂದ್ರದ ಕಾರ್ಯದರ್ಶಿ ಶ್ರೀಕಾಂತ್, ಪುರಸಭಾ ಸದಸ್ಯ ಪಿ.ಕೆ.ಕಿಶನ್, ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಬಿ.ಎಸ್.ರಘು, ವಕೀಲ ಜಿ.ವಿ.ವಿಶ್ವನಾಥ್, ಚನ್ನಕೃಷ್ಣಪ್ಪ, ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಅವ್ಯವಹಾರ

0

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯವರು ನಡೆಸುವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಮತ್ತು ಭಾನುವಾರ ಬೀಗ ಜಡಿದು ಹಾಜರಾತಿ ಹಾಕುವ ಮೂಲಕ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದ್ದಾರೆ.
ತಾಲ್ಲೂಕು ಕೇಂದ್ರದಿಂದ ದೂರವಿರುವ ಬಶೆಟ್ಟಹಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳನ್ನು ಊರುಗಳಿಗೆ ಕಳಿಸಿ ಬೀಗ ಹಾಕುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದವು. ಅಲ್ಲಿಗೆ ಭೇಟಿ ನೀಡಿದಾಗ ಬೀಗ ಹಾಕಿರುವುದು ಪ್ರತ್ಯಕ್ಷವಾಗಿ ನೋಡುವಂತಾಯಿತು. ಈ ಬಗ್ಗೆ ವಾರ್ಡನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಲಯದಲ್ಲಿ ಅಳವಡಿಸಲಾದ ನಾಮಫಲಕದಲ್ಲಿ ಹಿಂದೆ ಇದ್ದ ಸಮಾಜ ಕಲ್ಯಾಣ ಸಚಿವರಾದ ಎ.ನಾರಾಯಣಸ್ವಾಮಿ ಅವರ ಹೆಸರಿದೆ. ಹಾಗೇಯೇ ಶಾಸಕರ ಹಾಗೂ ಅಧಿಕಾರಿಗಳ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗಿದೆ. ಎರಡು ವರ್ಷಗಳ ಹಿಂದಿನ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಹೆಸರನ್ನೇ ಇನ್ನೂ ಉಳಿಸಿಕೊಂಡು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಿದೆ ಎಂದು ಆರೋಪಿಸಿದರು.
ಲಕ್ಷಾಂತರ ರೂಪಾಯಿಗಳ ಅನುದಾನ ಬಂದಿದ್ದರೂ ಸಹ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಮೂಲಭೂತ ಸೌಕರ್ಯಗಳು ಅವರಿಗೆ ದೊರಕದಂತಾಗಿದೆ. ಕನಿಷ್ಠ ಪಕ್ಷ ವಿದ್ಯಾರ್ಥಿನಿಲಯದ ನಾಮಫಲಕದ ಬರಹವೂ ಬದಲಾಗದಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಬಳಸಿ ಮತ್ತು ಬಿಸಾಕಿ – ಆದರೆ ಎಲ್ಲಿ ಮತ್ತು ಎಲ್ಲಿಯವರೆಗೆ?

0

ಕಳೆದ ಕೆಲವಾರು ದಿನಗಳಿಂದ ಬೆಂಗಳೂರು ನಗರದ ಕಸ ವಿಲೇವಾರಿ ದೊಡ್ಡ ಸುದ್ದಿಯಲ್ಲಿದೆ. ವರ್ತಮಾನ ಪತ್ರಿಕೆಗಳ ಮುಖಪುಟದಿಂದ ಹಿಡಿದು ಇಂಗ್ಲೀಷ್ ಮತ್ತು ಹಿಂದಿಯ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕೂಡ ಪದೇ ಪದೇ ಕಾಣಿಸಿಕೊಂಡ ಹೆಮ್ಮೆಗೆ ಇದು ಪಾತ್ರವಾಯಿತು! ರಾಜ್ಯದ ಉಚ್ಛನ್ಯಾಯಾಲಯಲ್ಲಿ ಇದಕ್ಕೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ನಡೆಯಿತು.
ಇದೆಲ್ಲದರ ಜೊತೆಗೆ ರಾಜಕೀಯವಾಗಿ ಅವರಿವರನ್ನು ದೂಷಿಸುವ ಮಾಮೂಲಿನ ಕಸರತ್ತುಗಳೂ ನಡೆಯಿತು. ಈ ಕಸದ ರಾಮಾಯಣಕ್ಕೆ ರಾಜ್ಯ ಸರ್ಕಾರ ಎಷ್ಟು ಹೊಣೆ ಮತ್ತು ಬೆಂಗಳೂರು ಕಾರ್ಪೋರೇಶನ್ ಎಷ್ಟು ಕಾರಣ ಎನ್ನುವ ಚರ್ಚೆಯೂ ಆಯಿತು. ಯಾವುದೇ ದೂರಗಾಮೀ ಯೋಜನೆಯಿಲ್ಲದೆ ಎಲ್ಲಾ ಕಡೆ ದೋಚುವ ಹುನ್ನಾರುಗಳನ್ನಿಟ್ಟುಕೊಂಡೇ ಕೆಲಸ ಮಾಡುವ ನಮ್ಮ ರಾಜ್ಯವಾಳುವ ದೊರೆಗಳು ಮತ್ತು ಅವರ ಕೈಗೊಂಬೆಗಳಂತೆ ವರ್ತಿಸುತ್ತಾ ದೋಚಿದ್ದರಲ್ಲಿ ತಮ್ಮ ಪಾಲನ್ನು ಬಾಚಿಕೊಳ್ಳುತ್ತಾ ಇರುವ ಅಧಿಕಾರಿ ವರ್ಗ-ಇವರಿಬ್ಬರೂ ಇದಕ್ಕೆ ಒಂದು ಖಾಯಮ್ಮಾದ ಪರಿಹಾರ ಕಂಡುಹಿಡಿಯುವರೆಂಬ ಭ್ರಮೆಯಲ್ಲಿ ಬೆಂಗಳೂರಿಗರು ದಿನ ನೂಕುತ್ತಿದ್ದಾರೆ.
ಹೀಗೆ ಹುಡುಕಬಹುದಾದ ಖಾಯಮ್ಮಾದ ಪರಿಹಾರವಾದರೂ ಎಂತಹದಿರಬಹುದು-ಕಸದ ವಿಂಗಡಣೆ, ಮರು ಬಳಕೆ ಅಥವಾ ಸೂಕ್ತ ವಿಲೇವಾರಿ-ಇವಿಷ್ಟೇ ಅಲ್ಲವೇ? ದಿನಕ್ಕೆ 5000 ಟನ್ ಕಸವನ್ನು ಉತ್ಪಾದಿಸುವ ಬೆಂಗಳೂರಿನ ಪ್ರಜ್ಞಾವಂತರೆಂದು ಹೆಸರು ಮಾಡಿರುವ ನಾಗರಿಕರಿಗೆ ಈ ಪ್ರಕ್ರಿಯೆಯಲ್ಲಿ ಏನೂ ಜವಾಬ್ದಾರಿ ಇಲ್ಲವೇ ಇಲ್ಲ. ಈ ಮಟ್ಟದ ಕಸವನ್ನು ಉತ್ಪಾದಿಸುತ್ತಾ ಹೋದರೆ ಎಂತಹ ಸಶಕ್ತ ವಿಲೇವಾರೀ ವ್ಯವಸ್ಥೆಯಾದರೂ ಎಲ್ಲಿಯವರೆಗೆ ತಡೆದುಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಪ್ರಬುದ್ಧ ಜನತೆ ಯೋಚಿಸಿದ್ದಾರೆಯೇ? ಪಾಶ್ಚಿಮಾತ್ಯ ಬಹುರಾಷ್ಟ್ರೀಯ ಕಂಪನಿಗಳ ಒತ್ತಾಸೆಗಳಿಗೆ ಮಣಿದು ನಾವೆಲ್ಲಾ ರೂಡಿಸಿಕೊಂಡಿರುವ “ಬಳಸಿ ಮತ್ತು ಬಿಸಾಕಿ” ಸಂಸ್ಕøತಿಯ ಕೇವಲ ಒಂದು ಅಡ್ಡಪರಿಣಾಮ ಇದು. (ಇತರ ದುಷ್ಪರಿಣಾಮಗಳ ಚರ್ಚೆ ಇಲ್ಲಿ ಪ್ರಸ್ತುತವಲ್ಲ.) ಇಷ್ಟು ಭಾರೀ ಪ್ರಮಾಣದಲ್ಲಿ ಕಸವನ್ನು ಹೊರಹಾಕುವುದನ್ನು ತಡೆಯುವ ಬಗೆಗೆ ಯಾರೂ ಯೋಚಿಸಿದಂತೆಯೇ ಕಾಣುವುದಿಲ್ಲ. ಪ್ರಕೃತಿಯಲ್ಲಿ ಸುಲುಭವಾಗಿ ಲೀನವಾಗದ ಕಸ ಎಂತಹ ಭಾರೀ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಬಗೆಗೆ ನಾವೆಲ್ಲಾ ತಕ್ಷಣ ಗಮನಹರಿಸದಿದ್ದರೆ ಅಪಾಯವನ್ನು ಮುಂದೂಡಬಹುದೇ ವಿನಹ ತಪ್ಪಿಸುವುದು ಅಸಾಧ್ಯ.
ಹೀಗೆಂದ ತಕ್ಷಣ ನಮ್ಮ ಬುದ್ಧಿಜೀವಿಗಳೆಲ್ಲಾ ಮುಗಿಬಿದ್ದು ನ್ಯೂಯಾರ್ಕ್ ಸಿಂಗಾಪೂರ್‍ಗಳ ಉದಾಹರಣೆಗಳನ್ನು ಕೊಡತೊಡಗುತ್ತಾರೆ. ಅಲ್ಲಿರುವ ಜನಸಂಖ್ಯೆಗೆ, ಅವರ ಜೀವನ ಶೈಲಿಗೆ, ಅವರ ಬಳಿ ಇರಬಹುದಾದ ಸಂಪನ್ಮೂಲಗಳಿಗೆ, ಅವರು ಅನುಸರಿಸುತ್ತಿರುವ ಮಾದರಿಗಳು ಸೂಕ್ತವಿರಬಹದು. ಭಾರೀ ಮಟ್ಟದಲ್ಲಿ ಕಸ ಹೊರಹಾಕುತ್ತಿದ್ದರೆ ಅವರ ವ್ಯವಸ್ಥೆಯೂ ಕೂಡ ಕುಸಿದು ಬೀಳುವ ದಿನಗಳು ದೂರವಿರಲಾರದು ಎಂದು ಅಲ್ಲಿನ ಸಾಮಾಜಿಕ ಚಿಂತಕರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇದೆಲ್ಲವನ್ನೂ ಕಡೆಗಣಿಸಿ, ನಮ್ಮ ಮಿತಿಗಳನ್ನೂ ಕಂಡುಕೊಳ್ಳದೇ ಅಭಿವೃದ್ಧಿ ಹೊಂದುವ ಹಪಹಪಿಕೆಯಲ್ಲಿ ನಾವು ಅವರ ಜೀವನ ಶೈಲಿಯನ್ನು, ಅವರ ಮಾದರಿಗಳನ್ನು ಕಣ್ಣುಮುಚ್ಚಿ ಅನುಸರಿಸುತ್ತಿದ್ದೇವೆ. ಶ್ರೀಮಂತ ದೇಶಗಳಿಗೆ ಹೊಂದುವ ಪರಿಹಾರಗಳೇ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೂ ಅನ್ವಯವಾಗುತ್ತದೆ ಎನ್ನವ ಅಮೇರಿಕಾ ಮತ್ತದರ ಮಿತ್ರ ದೇಶಗಳ ನಿಲುವನ್ನು ಇ ಎಫ್ ಶ್ಯೂಮ್ಯಾಕರ್ ಎನ್ನವ ಪಾಷ್ಚಿಮಾತ್ಯ ಅರ್ಥಶಾಸ್ತ್ರಜ್ಞ ತನ್ನ ಪುಸ್ತಕ “ಸ್ಮಾಲ್ ಈಸ್ ಬ್ಯೂಟಿಫುಲ್” ಎನ್ನುವ ಪ್ರಸಿದ್ಧ ಪುಸ್ತಕದಲ್ಲಿ ಪದೇ ಪದೇ ಪ್ರಶ್ನಿಸುತ್ತಾನೆ. ನಮ್ಮ ಕಸ ಉತ್ಪಾದನೆಯ ವಿಷಯದಲ್ಲೂ ಇದರ ಬಗೆಗೆ ನಾವೆಲ್ಲ ತುರ್ತಾಗಿ ಯೋಚಿಸಬೇಕಾಗಿದೆ.
ಸಧ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಸಮರ್ಥ ವ್ಯವಸ್ಥೆ ಮಾಡಬಹುದು. ಆದರೆ ಅದು ಮತ್ತೆ ಕುಸಿದು ಬೀಳುವ ದಿನ ದೂರವಿರುವುದಿಲ್ಲ. ಹಾಗಾಗಿ ಬೆಂಗಳೂರಿಗರು ತಮ್ಮ ನಿರಂತರ ಸ್ವರ್ಗದ ಭ್ರಮೆಗಳಿಂದ ಹೊರಬಂದು ತಕ್ಷಣ ತಮ್ಮ ಕಸದ ಉತ್ಪಾದನೆಯ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡುವ ಬಗೆಗೆ ಯೋಚಿಸಬೇಕು. ನಾಗರಿಕ ಸಂಘಟನೆಗಳು, ಧಾರ್ಮಿಕ ಮುಖಂಡರು ಮುಂತಾದವರೆಲ್ಲಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಎಲ್ಲವನ್ನೂ ಸರ್ಕಾರ ತಲೆಗೆ ಕಟ್ಟಿದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಬರಿಯ ಭಾಷಣ, ಉಪದೇಶ, ಪ್ರವಚನಗಳಿಂದ ಸಾರ್ಥಕತೆಯನ್ನು ಕಂಡುಕೊಳ್ಳದೆ, ಇದಕ್ಕೆ ಒಂದು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮುಂದಿನ 5 ವರ್ಷಗಳಲ್ಲಿ ಕಸದ ಮಟ್ಟವನ್ನು ಈಗಿರುವ ಅರ್ಧದಷ್ಟಕ್ಕೆ ಇಳಿಸಬೇಕು ಮತ್ತು ಅದಕ್ಕಾಗಿ ಯಾವಯಾವ ಕ್ಷೇತ್ರದಲ್ಲಿ ಎಂತಹ ಕ್ರಮ ಕೈಕೊಳ್ಳಬೇಕು ಎಂಬಂತಹ ಸ್ಪಷ್ಟ ಯೋಜನೆ ಹಾಕಿಕೊಳ್ಳಬೇಕು. ಜೊತೆಗೆ ನಾಗರಿಕರನ್ನು ಇದರಲ್ಲಿ ಸಕ್ರಿಯವಾಗಿ ಒಳಗೊಳ್ಳುವಂತೆ ಮಾಡಬೇಕು. ಇಲ್ಲದಿದ್ದರೆ ಅವರು ನಿಷ್ಕ್ರಿಯ ಟೀಕಾಕಾರರಾಗಿಯೇ ಉಳಿದುಬಿಡುತ್ತಾರೆ.
ಇವತ್ತಿನ ಬೆಂಗಳೂರಿನ ಸಮಸ್ಯೆ ನಾಳೆ ನಾಡಿದ್ದರಲ್ಲಿ ಜಿಲ್ಲಾ ಕೇಂದ್ರಗಳಿಗೆ, ಕೆಲವೇ ವರ್ಷಗಳಲ್ಲಿ ತಾಲ್ಲೂಕ್ ಕೇಂದ್ರ ಮತ್ತು ಹಳ್ಳಿಗಳಿಗೂ ಹರಡಬಹುದು. ಹಾಗಾಗಿ ನಾವೆಲ್ಲಾ ಈಗಲೇ ಎಚ್ಚೆತ್ತುಕೊಳ್ಳುವುದು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ. ಪ್ರಕೃತಿಯಲ್ಲಿ ತಕ್ಷಣ ಲೀನವಾಗದ ಕಸದ ಉತ್ಪಾದನೆಯನ್ನು ಅತಿ ಕಡಿಮೆ ಮಟ್ಟದಲ್ಲಿಡುವುದು ಎಲ್ಲಾ ಯೋಜನೆಗಳ ಮೊದಲ ಹಂತವಾಗಬೇಕು. ಉಳಿದಂತೆ ಉತ್ಪಾದನೆಯಾಗುವ ಕಸವನ್ನು ಇಡೀ ನಗರದ ಮಟ್ಟದಲ್ಲಿ ಒಟ್ಟುಗೂಡಿಸಿ ವಿಲೇವಾರಿ ಮಾಡುವ ಕೇದ್ರೀಕೃತ ವೈವಸ್ಥೆಯ ಬದಲಾಗಿ ಅದನ್ನು ಆಯಾಯ ಮನೆ ಅಥವಾ ಬಡಾವಣೆಯ ಮಟ್ಟದಲ್ಲಿ ಮರುಬಳಕೆ ಮಾಡುವ ಯೋಜನೆ ರೂಪಿಸಬೇಕು. ಹೆಚ್ಚಿನ ಕಸ ಉತ್ಪಾದನೆ ಮಾಡುವ ನಾಗರಿಕರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು.
ಭಗವಂತನ ಈ ದಿವ್ಯ ಸೃಷ್ಟಿಯಾದ ಭೂಮಿಯನ್ನು ಶುಚಿಯಾಗಿಡುವುದಕ್ಕಿಂತ ಹೆಚ್ಚಿನ ಪುಣ್ಯಕಾರ್ಯ ಇನ್ನೇನಿರಲು ಸಾಧ್ಯ? ಹಾಗಾಗಿ ನಮ್ಮ ಧಾರ್ಮಿಕ ಮುಖಂಡರುಗಳು ಇದರಲ್ಲಿ ಮುಂದಾಳತ್ವ ವಹಿಸದರೆ ಬಹಳ ಶೀಘ್ರ ಪರಿಣಾಮಗಳನ್ನು ಆಶಿಸಬಹದು.
ವಸಂತ್ ನಡಹಳ್ಳಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಪ್ರತಿಭಟನೆ

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಸೋಮವಾರ ನಗರದಲ್ಲಿ ಶಾಖಾ ಕಚೇರಿಯ ಉದ್ಘಾಟನೆ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪರಮಶಿವಯ್ಯ ವರದಿಯ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೇಷ್ಮೆ ಬೆಳೆಯುವ ರೈತರಿಗೆ ಒಂದು ಕೆಜಿ ಗೂಡಿಗೆ ಕನಿಷ್ಠ 400 ರೂಗಳು ನಿಗದಿಪಡಿಸಬೇಕು. ಹಿಪ್ಪುನೇರಳೆ ತೋಟಕ್ಕೆ ಹನಿನೀರಾವರಿಗೆ ಮತ್ತು ಸಲಕರಣೆಗಳಿಗೆ ನಿಲ್ಲಿಸಿರುವ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರಿಗೆ ಒಂದು ಲೀಟರ್ ಹಾಲಿಗೆ 40 ರೂಗಳಷ್ಟನ್ನು ಸರ್ಕಾರ ನಿಗದಿಗೊಳಿಸಬೇಕು. ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಸರ್ಕಾರ ಕೈಬಿಟ್ಟು, 3 ಫೇಸ್ ವಿದ್ಯುತ್ ಕನಿಷ್ಠ 10 ಗಂಟೆ ಕೊಡಬೇಕು. ರೈತರು ಬೆಳೆಯುವ ತರಕಾರಿಗಳು ಮತ್ತು ಹೂಗಳಿಗೆ ಎ.ಪಿ.ಎಂ.ಸಿ ಮಾರುಕಟ್ಟೆ ಮಳಿಗೆಗಳಲ್ಲಿ ಪಡೆಯುವ ಶೇಕಡಾ 10 ರಷ್ಟು ಲಮಿಷನ್ ಹಾಗೂ ಬಿಳಿ ಚೀಟಿ ಕೊಡುವುದನ್ನು ನಿಲ್ಲಿಸಬೇಕು. ರಸೀದಿ ಕೊಡುವುದನ್ನು ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಎಲ್ಲಾ ಬ್ಯಾಂಕುಗಳು ಗಣಕೀಕೃತಗೊಂಡಿವೆ. ಯಾರು ಎಲ್ಲಿ ಸಾಲ ಪಡೆದಿದ್ದಾರೆಂಬುದು ತಿಳಿದುಕೊಳ್ಳಬಹುದಾಗಿದ್ದರೂ ಎಲ್ಲಾ ಬ್ಯಾಂಕುಗಳಲ್ಲಿ ಎನ್.ಒ.ಸಿ ನೆಪದಲ್ಲಿ ರೈತರ ಶೋಷಣೆಯಾಗುತ್ತಿದೆ. ರೈತರ ಹಣ, ಸಮಯಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು. ಸರ್ಕಾರದ ವಿವಿಧ ಭಾಗ್ಯಗಳ ಭಿಕ್ಷೆ ಬೇಕಿಲ್ಲ. ನೀರು ಕೊಟ್ಟರೆ ಸಾಕು. ನಾಡು ಸುಭಿಕ್ಷ ವಾಗುತ್ತದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಮಿತಿಯ ಬಿ.ಕೆ.ಮುನಿಕೆಂಪಣ್ಣ, ಎಂ.ಆರ್.ಲಕ್ಷ್ಮೀನಾರಾಯಣ್, ನಾರಾಯಣಸ್ವಾಮಿ, ಶಂಕರರೆಡ್ಡಿ, ಅನಸೂಯಮ್ಮ, ಪಾರ್ವತಮ್ಮ, ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾದ ಶಂಕರಪ್ಪ, ಎಸ್.ಎಂ.ರವಿಪ್ರಕಾಶ್, ನಾಗರಾಜ್, ಬಾಲಮುರಳಿಕೃಷ್ಣ, ಡಿ.ವಿ.ನಾರಾಯಣಸ್ವಾಮಿ, ರಾಮಮೂರ್ತಿ, ಸುರೇಶ್, ಬೈರಪ್ಪ, ನಾಗರಾಜು, ಕೃಷ್ಣಮೂರ್ತಿ, ಮುನೇಗೌಡ, ಪ್ರತೀಶ್, ನಾಗೇಶ್, ಮಲ್ಲೆಪ್ಪ, ಮುನಿಶಾಮಿಗೌಡ, ಚನ್ನೇಗೌಡ, ಕೇಶವ, ಚಂದ್ರಬಾಬು, ರಮೇಶ್, ಮುರಳಿ, ಮಂಜುನಾಥ್, ಬಚ್ಚರೆಡ್ಡಿ, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಛಲವಾದಿ ಸಂಘಟನೆಯಿಂದ ರಕ್ತದಾನ ಶಿಬಿರ

0

ಆರೋಗ್ಯ ಸಂಬಂಧಿ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಬೆಂಗಳೂರು ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಸಿದ್ದರಾಜು ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಛಲವಾದಿ ಸಂಘಟನೆ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸಂಘಟನೆಗಳೂ ಸಮಾಜದಿಂದಲೇ ಬಂದಿರುವುದರಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯವೂ ಅವರದ್ದಾಗಿರುತ್ತದೆ. ಈ ರೀತಿಯ ರಕ್ತದಾನ ಶಿಬಿರಗಳು ಎಲ್ಲರಿಗೂ ಮಾದರಿಯಾದ್ದು, ಸಾಮರಸ್ಯ, ಮಾನವೀಯತೆಗೆ ಇದು ಕಾರಣವಾಗುತ್ತದೆ. ರಕ್ತಕ್ಕೆ ಜಾತಿ ಬೇಧವಿಲ್ಲ. ಆರೋಗ್ಯವಂತ ಯುವಕರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಪರೋಪಕಾರಿಗಳಾಗಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ 40 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಛಲವಾದಿ ಸಂಘದ ಜಿಲ್ಲಾ ಅಧ್ಯಕ್ಷ ತ್ಯಾಗರಾಜು, ಡಾ.ವೆಂಕಟೇಶಮೂರ್ತಿ, ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಟಿ.ಟಿ.ನರಸಿಂಹಪ್ಪ, ಕೃಷ್ಣಪ್ಪ, ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಶ್ರೀರಾಮ್, ರಾಜಶೇಖರ್, ಡಾ.ಸುಧಾಕರ್, ಸಮೀವುಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!