27.1 C
Sidlaghatta
Monday, December 29, 2025
Home Blog Page 987

ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ

0

ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಮಂಗಳವಾರ ಮಾಘ ಮಾಸದ ಹುಣ್ಣಿಮೆಯ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನಡೆಯಿತು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.
ಸುತ್ತಮುತ್ತಲಿನ ತಾಲ್ಲೂಕುಗಳಿಂದ ಸಾವಿರಾರು ಜನರು ಆಗಮಿಸಿ ದೇವರ ದರ್ಶನ ಪಡೆದರು. ಡೊಳ್ಳುಕುಣಿತ, ವೀರಗಾಸೆ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ವಾದನ ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ಜಾನುವಾರುಗಳ ಜಾತ್ರೆಗೆ ನೆರೆ ರಾಜ್ಯಗಳಿಂದ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರಾಸುಗಳ ವ್ಯಾಪಾರ ವಹಿವಾಟು ನಡೆದಿತ್ತು. ಪಂಚಾಯತಿ ವತಿಯಿಂದ ರಾಸುಗಳಿಗೆ ನೆರಳು, ಮೇವು ಮತ್ತು ನೀರನ್ನು ಒದಗಿಸಲಾಗಿತ್ತು. ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆಲ್ಲ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕೆಲ ಗ್ರಾಮಗಳಿಂದ ಭಕ್ತರು ಟ್ರಾಕ್ಟರಿನಲ್ಲಿ ತಿಂಡಿ ತಯಾರಿಸಿ ತಂದು ವಿತರಿಸಿದರು.
ಶ್ರೀಮಸ್ತಕಾಚಲ, ತಲಕಾಯಲಬೆಟ್ಟ, ತಲೆಕಾಯ್ದಬೆಟ್ಟ, ತಲಕಾಚಿನಕೊಂಡ ಇತ್ಯಾದಿ ಹೆಸರಿರುವ ಈ ಸ್ಥಳ ವೆಂಕಟರಮಣನ ದೇವಾಲಯದಿಂದ ಪ್ರಸಿದ್ಧಿ ಪಡೆದಿದೆ.
ಹಿಂದೆ ಈ ಪ್ರದೇಶಕ್ಕೆ ವೆಂಕಟೇಶಸಾಗರವೆಂದು ಕರೆಯುತ್ತಿದ್ದರು. ಶಿಡ್ಲಘಟ್ಟ ಪಾಳೆಯಪಟ್ಟನ್ನು ನೋಡಿಕೊಳ್ಳುತ್ತ್ದಿದ ತಿಮ್ಮರಾಜು ಇಲ್ಲಿನ ಪೊದೆಗಳಲ್ಲಿ ಹುದುಗಿದ್ದ ವೆಂಕಟೇಶನ ದೇವಾಲಯವನ್ನು ತನ್ನ ಸೇನೆಯ ಸಹಾಯದಿಂದ ಶೋಧಿಸಿ ಬೆಳಕಿಗೆ ತಂದು ಪ್ರತಿಷ್ಠಾಪಿಸಿದನೆಂದು ಸ್ಥಳೀಯವಾಗಿ ಹೇಳಲಾಗುತ್ತದೆ. ಸಮೀಪವೇ ಪಾಪಾಗ್ನಿ ನದಿಯಿದೆ.
ಬೆಟ್ಟದ ಕೆಳಗೆ ವಿಜಯನಗರೋತ್ತರ ಕಾಲದ ವೆಂಕಟೇಶನ ದೇವಾಲಯವನ್ನು ವಿಶಾಲವಾದ ನಿವೇಶನದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಕಲ್ಯಾಣಿಯಿದೆ. ದೇವಾಲಯದ ಪ್ರಾಕಾರವನ್ನು ಪ್ರವೇಶಿಸಲು ಎರಡು ಪ್ರವೇಶದ್ವಾರಗಳಿವೆ. ಮುಖ್ಯ ದ್ವಾರದ ಎಡಬದಿಯ ಗೋಡೆಯಲ್ಲಿ ವರಾಹ, ಮತ್ಸ್ಯ, ಕೂರ್ಮ, ಚಂದ್ರ ಹಾಗೂ ಸೂರ್ಯರ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.
ಮಹರ್ಷಿ ವಾಲ್ಮೀಕಿಯು ತನ್ನ ಪೂರ್ವಾಶ್ರಮದಲ್ಲಿ ವಾಸಿಸುತ್ತಿದ್ದ ಸ್ಥಳಪುರಾಣವಿದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ದೇವಾಲಯದ ಮುಂದೆ ತೆಂಗಿನಕಾಯಿಗಳನ್ನು ಬೆಂಕಿಗೆ ಆಹುತಿ ನೀಡುವ ಸಂಪ್ರದಾಯವಿದೆ. ಆ ಹೊಗೆಯು ದೇವಾಲಯದ ಎತ್ತರಕ್ಕೂ ಆವರಿಸಿತ್ತು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಶಿವಣ್ಣ, ರಾಮಚಂದ್ರ, ನಾರಾಯಣಸ್ವಾಮಿ, ಪ್ರಧಾನ ಅರ್ಚಕ ರಾಮಾನುಜಾ ಭಟ್ಟಾಚಾರ್ಯ, ಅಶ್ವತ್ಥನಾರಾಯಣರೆಡ್ಡಿ, ಕೇಶವಭಟ್ಟಾಚಾರ್ಯ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಚೆಕ್ ವಿತರಣೆ

0

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ತಾಲ್ಲೂಕಿನ ಮೂವರು ಮಹಿಳೆಯರಿಗೆ ತಲಾ 20 ಸಾವಿರ ರೂಪಾಯಿಗಳ ಸಹಾಯಧನವನ್ನು ಚೆಕ್ ಮೂಲಕ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೋಮವಾರ ವಿತರಿಸಿದರು.
ಕೆ.ಕೆ.ಪೇಟೆಯ ನಾಗರತ್ನಮ್ಮ, ಯರ್ರನಾಗೇನಹಳ್ಳಿಯ ಮಂಜುಳಮ್ಮ ಮತ್ತು ಹೇಮಾರ್ಲಹಳ್ಳಿಯ ಮೀನಮ್ಮ ಫಲಾನುಭವಿಗಳಾಗಿದ್ದು, ಇದರೊಂದಿಗೆ ಅಂತ್ಯ ಸಂಸ್ಕಾರ ಪರಿಹಾರ ನಿಧಿ ಯೋಜನೆಯಡಿ ಯರ್ರನಾಗೇನಹಳ್ಳಿಯ ಮಂಜುಳಮ್ಮ ಅವರಿಗೆ 1000 ರೂಪಾಯಿಗಳ ಚೆಕ್ ಕೂಡ ನೀಡಲಾಯಿತು.
ಬಡತನ ರೇಖೆಗಿಂತ ಕೆಳಗೆ ಇರುವ, ಕುಟುಂಬದ ಮುಖ್ಯಸ್ಥನ ಮರಣವಾಗಿರುವುದರಿಂದ ಈ ಸಹಾಯಧನ ಕೇಂದ್ರ ಸರ್ಕಾರದ ಮೂಲಕ ಲಭಿಸುತ್ತಿದ್ದು, ಕುಟುಂಬಕ್ಕೆ ಕೊಂಚ ಮಟ್ಟಿನ ಆರ್ಥಿಕ ಚೇತರಿಕೆಯನ್ನು ನೀಡಲಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ತಿಳಿಸಿದರು. ರಾಜಸ್ವ ನಿರೀಕ್ಷಕ ಸುಬ್ರಮಣಿ ಈ ಸಂದರ್ಭದಲ್ಲಿ ಹಾಜರಿದ್ದರು.

ಮೇಲೂರು ಎಂ.ಪಿ.ಸಿ.ಎಸ್ ನಿರ್ದೇಶಕರ ಆಯ್ಕೆ

0

ತಾಲ್ಲೂಕಿನ ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಜೆ.ಡಿ.ಎಸ್ ಬೆಂಬಲಿತ ಹತ್ತು ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬ ವ್ಯಕ್ತಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಕೆ.ರಮೇಶ್ಬಾಬು ತಿಳಿಸಿದ್ದಾರೆ.
ಆಯ್ಕೆಯಾದವರು: ಕೆ.ಎನ್.ಬಚ್ಚೇಗೌಡ, ಎಂ.ಎಸ್.ರಮೇಶ್, ಬಿ.ಶ್ರೀನಿವಾಸಮೂರ್ತಿ, ಎಂ.ಶ್ರೀನಿವಾಸ್, ಟಿ.ಎಂ.ರಮೇಶ್, ಸಿ.ಎನ್. ಚಂದ್ರೇಗೌಡ, ಎನ್.ನಾಗರಾಜ್, ಎನ್.ಎಂ.ಕೃಷ್ಣಪ್ಪ, ಎಂ.ಎನ್.ನಿತ್ಯಾನಂದಶೆಟ್ಟಿ, ಸುಗುಣ, ಗುಣಮ್ಮ.

ರೈತರ ಪ್ರತಿಭಟನಾ ಮೆರವಣಿಗೆ

0

ಭೂಸ್ವಾಧೀನ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಹತ್ತಿಕ್ಕುವ ನೀತಿಗಳನ್ನು ಜಾರಿ ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರ ಈಗ ಜಾರಿ ಮಾಡಲು ಹೊರಟಿರುವ ಭೂಸ್ವಾಧೀನ ಕಾಯ್ದೆಯನ್ನು ಯಾವುದೇ ರೀತಿಯ ಚರ್ಚೆಯಿಲ್ಲದೇ, ಸಾಧಕ ಬಾಧಕಗಳನ್ನು ಪರಿಶೀಲಿಸದೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವುದು ವಸಾಹತುಶಾಹಿಯ ಮಾದರಿಯಂತಿದೆ. ಇದು ಪ್ರಜಾಪ್ರಭುತ್ವದ ತತ್ವ ಹಾಗೂ ಮೌಲ್ಯಗಳನ್ನು ಧಿಕ್ಕರಿಸುವ ಸಂವಿಧಾನ ವಿರೋಧಿ ನೀತಿಯಾಗಿದೆ. ರೈತರ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಹರಣ ಮಾಡುವ ರೈತರನ್ನು ದಮನ ಮಾಡುವ, ಬಂಡವಾಳಶಾಹಿಗಳಿಗೆ ಅನ್ನದಾತನ ಭೂಮಿಯನ್ನು ಕಸಿದುಕೊಡುವ ಈ ರೀತಿಯ ನೀತಿ ಮತ್ತು ಅದರ ಪರಿಣಾಮದ ಬಗ್ಗೆ ರಾಷ್ಟ್ರಪತಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿಯ ರೈತ ವಿರೋಧಿ ನೀತಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡದಂತೆ ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ವೇಣುಗೋಪಾಲ್, ನಾರಾಯಣಸ್ವಾಮಿ, ಮುನಿಆಂಜಿನಪ್ಪ, ಅಬ್ಲೂಡು ಆರ್.ದೇವರಾಜ್, ಮಳಮಾಚನಹಳ್ಳಿ ದೇವರಾಜ್, ಶ್ರೀನಿವಾಸ್, ಕೃಷ್ಣಪ್ಪ, ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಿಕ್ಷೆಯಿಲ್ಲದ ಶಿಕ್ಷಣ ಸಾಧ್ಯ

0

ಶಿಕ್ಷಣದಲ್ಲಿ ಶಿಕ್ಷೆ ಅನಿವಾರ್ಯ ಎನ್ನುವುದು ನಮ್ಮೆಲ್ಲರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇದು ಲಾಗಾಯ್ತಿನಿಂದಲೂ ಬಂದ ನಂಬಿಕೆಯಾದ್ದರಿಂದ ಶಿಕ್ಷೆಯಿಲ್ಲದ ಶಿಕ್ಷಣ ಅಸಾಧ್ಯ ಎಂದುಕೊಂಡಿದ್ದೇವೆ. ಸ್ವಲ್ಪ ಭಿನ್ನವಾಗಿ ಯೋಚನೆ ಮಾಡಿದಾಗ ನಮ್ಮ ನಂಬಿಕೆಯ ಟೊಳ್ಳುತನ ಹೊರಬರುತ್ತದೆ.
ಮಕ್ಕಳು ದೈಹಿಕವಾಗಿ ನಮಗಿಂತ ದುರ್ಬಲರು, ಕಡಿಮೆ ಪ್ರಾಪಂಚಿಕ ಜ್ಞಾನವುಳ್ಳವರು, ಮತ್ತು ಭಾವನಾತ್ಮವಾಗಿ ಪೋಷಕರು ಹಾಗೂ ಸ್ವಲ್ಪ ಮಟ್ಟಿಗೆ ಉಪಾಧ್ಯಾಯರ ಮೇಲೆ ಅವಲಂಬಿತರು. ಇದಿಷ್ಟೇ ಕಾರಣಗಳಿಂದ ನಾವು ಅವರ ಮೇಲೆ ಶಿಕ್ಷೆಯೆಂಬ ದಬ್ಬಾಳಿಕೆಯನ್ನು ಹೇರುತ್ತೇವೆ. ಮಕ್ಕಳು ಬೆಳೆಯುತ್ತಾ ಬಂದಂತೆ ಅವರು ಬದಲಾಗಲೀ ಬಿಡಲಿ, ನಮ್ಮ ಶಿಕ್ಷೆಯ ಮಟ್ಟ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಕಾಲೇಜುಗಳಲ್ಲಿ ಅಥವಾ ವಯಸ್ಕರ ಶಿಕ್ಷಣದ ಶಾಲೆಗಳಲ್ಲಿ, ವಿದ್ಯಾರ್ಥಿಗಳು ಹೇಗೇ ಇರಲಿ, ಯಾವ ಉಪಾಧ್ಯಾಯನೂ ಶಿಕ್ಷೆಯನ್ನು ಕೊಡುವ ಧೈರ್ಯಮಾಡಲಾರ! ಅಷ್ಟೇ ಏಕೆ ದೈಹಿಕವಾಗಿ ಕಟ್ಟುಮಸ್ತಾಗಿರುವ ಮಾದ್ಯಮಿಕ ಅಥವಾ ಪ್ರೌಢಶಾಲಾ ವಿದ್ಯಾರ್ಥಿಗಳ ಮೈಮುಟ್ಟುವ ತಪ್ಪನ್ನು ನಮ್ಮ ಶಿಕ್ಷಕರು ಮಾಡಲಾರರು. ಹೆಚ್ಚೆಂದರೆ ಅವನನ್ನು ತರಗತಿಯಿಂದ ಹೊರಹಾಕಬಹುದು ಅಷ್ಟೇ! ಇದರ ಅರ್ಥ ಶಿಕ್ಷಕರು ತಮ್ಮ ಅಜ್ಞಾನ, ದೌರ್ಬಲ್ಯ, ಅಸಹಾಕತೆಗಳನ್ನು ದೈಹಿಕ ಶಕ್ತಿಯ ಮೂಲಕ ಮುಚ್ಚಿ ಹಾಕಲು ಶಿಕ್ಷೆಯ ಹೆಸರಿನಲ್ಲಿ ಯತ್ನಿಸುತ್ತಾರೆ ಎನ್ನುವುದಕ್ಕಿಂತ ಬೇರೇನಿರಲು ಸಾಧ್ಯ ಹೇಳಿ?
ಶಿಕ್ಷೆ ಅನಿವಾರ್ಯ ಎಂದು ನಂಬಿಕೊಂಡಿರುವುದರಲ್ಲಿ ಶಿಕ್ಷಕರ ತಪ್ಪೇನಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ನಾವು ಹಾಗೆ ಕಟ್ಟಿದ್ದೇವೆ. ಮಕ್ಕಳನ್ನು ಯಂತ್ರಗಳನ್ನಾಗಿಸಿ, ಕಲಿಕೆಯ ವಿಷಯಗಳನ್ನು ಸ್ಟಾಂಡರ್ಡೈಸ್ ಮಾಡಿ, ಹೆಚ್ಚು ಅಂಕಗಳಿಕೆ ಮಾತ್ರ ಉತ್ತಮ ಕಲಿಕೆ ಎಂದುಕೊಂಡಿರುವುದಕ್ಕಾಗಿ ಶಾಲೆಯಲ್ಲಿ ಶಿಕ್ಷೆಯೆಂಬುದು ಅನಿವಾರ್ಯವಾಗಿದೆ. ಅಂಕಗಳಿಕೆ ಒತ್ತಡ ಹೇರುವುದು ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದುಕೊಂಡರೆ ಶಿಕ್ಷಕರು ತಮ್ಮ ಶಾಲೆಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದುಕೊಂಡಿದ್ದಾರೆ! ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದು ಮೂಲಭೂತವಾಗಿ ಪೋಷಕರ ಜವಾಬ್ದಾರಿ. ಇದಕ್ಕೆ ಶಿಕ್ಷಕರು ಸಹಾಯ ಮಾಡಬಹುದು ಅಷ್ಟೇ. ಶಿಕ್ಷಕರೇ ಮಕ್ಕಳಿಗೆ ಹೆಚ್ಚು ಅಂಕ ಕೊಡಿಸಲು ಶಿಕ್ಷೆಯೆಂಬ ಹಿಂಸೆಗೆ ಏಕೆ ಇಳಿಯಬೇಕು ಎನ್ನುವುದು ಒಂದು ವಿಪರ್ಯಾಸ. ಶಾಲೆಯ ದುಬಾರಿ ಫೀಸುಗಳನ್ನು ಕಟ್ಟವುದಷ್ಟೇ ತಮ್ಮ ಜವಾಬ್ದಾರಿ ಎಂದು ಪೋಷಕರು ಅಂದುಕೊಂಡಾಗ ಮತ್ತು ಮುಂದಿನ ವರ್ಷ ಹೆಚ್ಚು ಫೀಸನ್ನು ಕಕ್ಕಿಸುವ ಉದ್ದೇಶವನ್ನು ಮಾತ್ರ ಶಿಕ್ಷಕರು ಹೊಂದಿದ್ದಾಗ ಇಂತಹ ವಿಕೃತಿಗಳನ್ನು ಮಕ್ಕಳ ಮೇಲೆ ನಾವು ಹೇರುತ್ತೇವೆ.
ನನ್ನ ಅಭೀಪ್ರಾಯದಲ್ಲಿ ಶಿಕ್ಷಕರು ಯಾವುದೇ ರೀತಿಯ ದೈಹಿಕ ಶಿಕ್ಷೆಯನ್ನು ಕೊಡಲೇಬಾರದು. ಮಕ್ಕಳ ಮೇಲಿನ ಶಿಕಾಯತುಗಳನ್ನು ಪೋಷಕರಿಗೆ ವರದಿ ಮಾಡುವುದು ಮತ್ತು ಅವರ ಸರ್ವತೋಮುಖ ಅಭಿವೃಧ್ದಿಗೆ ಸಹಕರಿಸುವುದು ಇದಿಷ್ಟೇ ಅವರ ಜವಾಬ್ದಾರಿಗಳಾಗಿರಬೇಕು. ಪೋಷಕರು ತಮ್ಮ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು. ಹಾಗಂತ ಅವರು ಬೇಕಾಬಿಟ್ಟಿ ಶಿಕ್ಷೆಯನ್ನು ಕೊಡಬಹುದು ಅಂತೇನಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅದಕ್ಕೆ ಎರಡು ರೀತಿಯ ಕಾರಣಗಳಿರಬಹುದು. ಮೊದಲನೆಯದು ಅವರಿಗೆ ವಿಷಯದಲ್ಲಿ ಆಸಕ್ತಿ ಇಲ್ಲದಿವುದು, ಕಲಿಕೆಯ ತೊಂದರೆಗಳು, ಅಸಮರ್ಪಕ ಅಥವಾ ಅಹಿತಕರ ವಾತಾವರಣ, ಸೂಕ್ತ ಪರಿಕರದ ಅಭಾವ ಮುಂತಾದವು. ಅಂದರೆ ಇವುಗಳು ಮಕ್ಕಳ ಕೈಮೀರಿದ್ದು. ಇವುಗಳನ್ನು ಶಿಕ್ಷೆಯಿಂದ ಬದಲಾಯಿಸಲು ಯತ್ನಿಸದೆ ಶಿಕ್ಷಣದ ಮಾರ್ಗಗಳತ್ತ ಗಮನಹರಿಸಬೇಕು. ಇಲ್ಲಿ ಶಿಕ್ಷೆ ನಿರುಪಯುಕ್ತವಷ್ಟೇ ಅಲ್ಲ ಅಪಾಯಕಾರಿಯೂ ಆಗಬಹುದು.
ಎರಡನೆಯದು ಮಕ್ಕಳ ಅಶಿಸ್ತು ಬೇಜವಾಬ್ದಾರಿ, ಸುಳ್ಳು ಹೇಳುವಿಕೆ, ಹಿಂಸಾಪ್ರವೃತ್ತಿ ಮುಂತಾದ ವರ್ತನೆಗೆ ಸಂಬಂಧಿಸಿದ ಅಂಶಗಳು ಮಕ್ಕಳನ್ನು ಶಿಕ್ಷಣದಲ್ಲಿ ಹಿಂದುಳಿಯುವಂತೆ ಮಾಡಬಹುದು. ಇದರ ಮೂಲ ಕಾರಣ ಮನೆಯಲ್ಲಿರುವ ವಾತಾವರಣವಾದ್ದರಿಂದ ಪೋಷಕರೇ ಇದನ್ನು ಸರಿಪಡಿಸಬೇಕು. ಇಲ್ಲಿ ಒಂದು ಮಟ್ಟದವರೆಗೆ ಶಿಕ್ಷೆ ಪರಿಣಾಮ ನೀಡಬಹುದು. ಹಾಗಿದ್ದರೂ ಕೂಡ ಶಿಕ್ಷೆಗಿಂತ ಶಿಕ್ಷೆಯ ಭಯ ಹೆಚ್ಚು ಪರಿಣಾಮಕಾರಿ. ಹೆಚ್ಚಿನ ಪ್ರಮಾಣದ ವರ್ತನೆಯ ತೊಂದರೆಗಳಿದ್ದರೆ ಮನಶ್ಯಾಸ್ತ್ರಜ್ಞರ ಸಹಾಯ ಬೇಕಾಗಬಹುದು. ಇದೂ ಕೂಡ ಪೋಷಕರ ಮೂಲಕವೇ ಆಗಬೇಕಾಗಿರುವ ಕೆಲಸ.
ಆದ್ದರಿಂದ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರನ್ನು ಸಕ್ರಿಯವಾಗಿ ಭಾಗಿಗಳನ್ನಾಗಿ ಮಾಡಬೇಕು. ಅದಿಲ್ಲದಿದ್ದರೆ ಹಣದಿಂದ ಎಲ್ಲವನ್ನೂ ಕೊಳ್ಳಬಹುದು ಎಂದುಕೊಳ್ಳುವ ಪೋಷಕರು ತಮ್ಮ ಮಕ್ಕಳು ಎತ್ತ ಸಾಗುತ್ತಿದ್ದಾರೆ ಎಂದು ತಿಳಿಯುವ ಗೋಜಿಗೇ ಹೋಗದೆ ಹೆಚ್ಚು ಹೆಚ್ಚು ಹಣಗಳಿಸುವದರಲ್ಲಿ ಮಾತ್ರ ತೊಡಗಿರುತ್ತಾರೆ. ಇದರಿಂದಾಗಿಯೇ ಇವತ್ತು ಸಾಕಷ್ಟು ಶ್ರೀಮಂತರ ಮಕ್ಕಳು ಸಾಮಾಜಿಕವಾಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬೆಳೆವಣಿಗೆಯ ಹಂತದಲ್ಲಿ ಮಕ್ಕಳಿಗೆ ಸೂಕ್ತವಾದ ತಿಳುವಳಿಕೆ, ತರಬೇತಿಯನ್ನು ನೀಡದೆ, ಅವರಿಗೆ ಸರಿಯಾದ ಮಾದರಿಯಾಗದೆ, ಅವರನ್ನು ಶಾಲೆಗಳಲ್ಲಿ ಶಿಕ್ಷೆಗೆ ಒಡ್ಡುವುದು ಪೋಷಕರ ಸಂಪೂರ್ಣ ಬೇಜಾವಬ್ದಾರಿತನ. ಹಾಗಾಗಿ ಶಿಕ್ಷೆಯನ್ನು ಕೊಡಲೇ ಬೇಕಾಗಿದ್ದರೆ ಅದನ್ನು ಪೋಷಕರಿಗೆ ಕೊಡಬೇಕೇ ಹೊರತು ಮಕ್ಕಳಿಗಲ್ಲ!
ವಸಂತ್ ನಡಹಳ್ಳಿ

ಸಿಟಿಜನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

0

ಶಿಡ್ಲಘಟ್ಟದ ಸಿಟಿಜನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಿಟಿಜನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಚಂದ್ರರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಡಾ.ಸತ್ಯನಾರಾಯಣರಾವ್, ಕೆ.ವಿ.ವೇಣುಗೋಪಾಲ್, ಶಿವಣ್ಣ ಹಾಜರಿದ್ದರು.

ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ಮುಖ್ಯ ಶಿಕ್ಷಕ ಕೆ.ವಿ.ಪ್ರಕಾಶ್ಬಾಬು, ಶಿಕ್ಷಕರಾದ ಉಪೇಂದ್ರ, ಹೇಮಲತಾ, ಲಕ್ಷ್ಮೀನಾರಾಯಣ ಹಾಜರಿದ್ದರು.

ಸರಸ್ವತಿ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕರಿಗೆ ಸನ್ಮಾನ

0

2feb3
2feb2ಶಿಡ್ಲಘಟ್ಟದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ನಿವೃತ್ತರಾ ಶಿಕ್ಷಕ ವೈ.ಎನ್.ದಾಶರಥಿ ಹಾಗೂ ಜಿ.ಆರ್. ಶ್ರೀನಿವಾಸಮೂರ್ತಿ ಅವರನ್ನು ಶನಿವಾರ ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟಸುಬ್ಬಾರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯ ಶಿಕ್ಷಕಿ ಎಂ. ಸೀತಾಲಕ್ಷ್ಮೀ, ಶಿಕ್ಷಕರು ಹಾಜರಿದ್ದರು.

ಅಂಗವಿಕಲರಿಗೆ ಗಾಲಿ ಖುರ್ಚಿ ವಿತರಣೆ

0

ಶಿಡ್ಲಘಟ್ಟದ ಸ್ತ್ರೀ ಶಕ್ತಿ ಭವನದಲ್ಲಿ ಶನಿವಾರ ರೋಟರಿ ಕ್ಲಬ್, ಎ.ಪಿ.ಡಿ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಅಂಗವಿಕಲರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 43 ಮಂದಿ ಅಂಗವಿಕಲರಿಗೆ ಗಾಲಿ ಖುರ್ಚಿಯನ್ನು ವಿತರಿಸಲಾಯಿತು.

ಅಗತ್ಯ ‘ಅನ್ನ’ – ಅನಗತ್ಯ ‘ಗಲಾಟೆ’

0

ರಾಜ್ಯದ ಆಯ್ದ 371 ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೋರಡಿಸಿದ ಹಿನ್ನಲೆಯಲ್ಲಿ ಹಲವಾರು ಸಾಹಿತಿಗಳು, ಸಂಘಟನೆಗಳು ಅದನ್ನು ಪ್ರತಿಭಟಿಸುತ್ತಿರುವ ಸಂದರ್ಭದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಇಂಗ್ಲಿಷ್ ಮಾಧ್ಯಮ ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಕನ್ನಡ ಸಂಘಟನೆಯವರು ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಯಲು ಕಳುಹಿಸುತ್ತಿದ್ದಾರೆ? ಈ ಮಕ್ಕಳು ಎಂತಹ ಶಾಲೆಗಳಲ್ಲಿ ಓದುತ್ತಿದ್ದಾರೆ ಎನ್ನುವುದನ್ನು ಮೊದಲು ಗಮನಿಸಬೇಕಾಗಿದೆ ಎಂದು ಖಾರವಾಗಿಯೇ ಹೇಳಿದ್ದಾರೆ. ಸರಕಾರ ಸರಿದಾರಿಯಲ್ಲಿ ಇದೆಯೇ? ಎಂದು ಯೋಚಿಸುವ ಚರ್ಚಿಸುವ ಮುನ್ನ ವಾಸ್ತವವನ್ನು ಮರೆಯುವುದಾಗಲಿ, ಮರೆಮಾಡುವುದಾಗಲಿ ಒಳ್ಳೆಯದಲ್ಲ. ಇಂದಿನ ಅಗತ್ಯವನ್ನು ಅರಿಯುವುದು ಕೂಡ ಅಗತ್ಯ.
ಇಂದಿನ ‘ಗೋಳೀಕರಣ’ ದ ಸಂದರ್ಭದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ. ಅದು ಅನೇಕ ರೀತಿಯ ನೌಕರಿಗಳಿಗೆ ನೆರೆವಾಗಬಲ್ಲ ಸಾಧನ. ಇಂಗ್ಲೀಷ್ ಮಾದ್ಯಮದಲ್ಲಿ ಓದಿದರೆ ಮಾತ್ರ ಇದು ಸಾಧ್ಯ. ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಬಹುದು. ವಿಜ್ಞಾನ ವಿಷಯಕ್ಕಂತೂ ಇಂಗ್ಲೀಷ್ ಮಾದ್ಯಮ ಬೇಕೇ ಬೇಕು. ತಮ್ಮ ಮಕ್ಕಳು ಇಂಜಿನಿಯರ್‍ಗಳಾಗ ಬೇಕು. ಇಂಥ ಕನಸನ್ನೇ ಇಂದು ಎಲ್ಲೆಲ್ಲೂ ಬಿತ್ತಿದರ ಪರಿಣಾಮವಾಗಿ ಇಂದು ಗ್ರಾಮೀಣ ಪ್ರದೇಶಗಳಿಂದ ಹಿಡಿದು ಎಲ್ಲ ನಗರಗಳಲ್ಲೂ ಖಾಸಗಿ ಇಂಗ್ಲೀಷ್ ಶಾಲೆಗಳು ಪ್ರಾರಂಭಿಸಲ್ಪಟ್ಟಿವೆ. ದಿನೇ ದಿನೇ ಇವುಗಳ ಸಂಖ್ಯೆ ವೃದ್ದಿಯಾಗುತ್ತಿದೆ. ಅಲ್ಲಿಗೆ ಸೇರುವ ಮಕ್ಕಳ ಸಂಖ್ಯೆ ಕೂಡ ಏರುತ್ತಿದೆ. ಅಲ್ಲಿನ ಡೋನೆಶನ್ ಮತ್ತು ಫೀ ಕುರಿತು ಚಿಂತಿಸುವುದಕಿಂತ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ರೂಪುಗೊಂಡರೆ ಸಾಕು ಎಂಬ ಚಿಂತೆ ಪಾಲಕರದ್ದು. ಹಾಗಾಗಿ ಎಷ್ಟೇ ಕಷ್ಟವಾದರು ಸರಿ, ಇಂಗ್ಲೀಷ್ ಸ್ಕೂಲುಗಳಿಗೇ ಸೇರಿಸಲು ಪಾಲಕರು ಒದ್ದಾಡುತ್ತಿದ್ದಾರೆ. ಅಲ್ಲಿನ ಶಿಕ್ಷಣದ ಗುಣಮಟ್ಟದ ಕುರಿತಾಗಲೀ, ಅಲ್ಲಿನ ಶಿಕ್ಷಕರ ವಿದ್ಯಾರ್ಹತೆಯ ಕುರಿತಾಗಲೀ ಯಾರು ತಲೆಕೆಡಿಸಿಕುಳ್ಳುವುದಿಲ್ಲ. ಫಲಿತಾಂಶವನ್ನಷ್ಟೇ ಗಮನಿಸುತ್ತಾರೆ.
ಇತ್ತ ಸರಕಾರಿ ಶಾಲೆಗಳಲ್ಲಿ ಸರಿಯಾದ ವಿದ್ಯಾರ್ಹತೆಯುಳ್ಳ ಶಿಕ್ಷಕರಿದ್ದು, ವ್ಯವಸ್ಥೆ ಇದ್ದ ಸಂದರ್ಭದಲ್ಲೂ, ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ, ಕೆಲವು ಮುಚ್ಚಿದೆ. ಹಲವು ಮುಚ್ಚುವ ಹಂತ ತಲುಪಿದೆ. ಇದು ಹೀಗೆ ಮುಂದುವರೆದಲ್ಲಿ ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಕಡಿತವಾಗುತ್ತದೆ. ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಅವುಗಳನ್ನು ಇಂಗ್ಲೀಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಹೀಗೆ ಎರಡರಲ್ಲು ಶಿಕ್ಷಣ ದೂರಕುವಂತೆ ಮಾಡಿದರೆ, ಕೊನೆಗೆ ಇಂಗ್ಲೀಷ್ ಮಾಧ್ಯಮದ ಕಾರಣಕ್ಕಾದರೂ ಶಾಲೆಗಳು ಇರಬಹುದು. ಆದರೆ ಅದರಲ್ಲಿ ವಿದ್ಯಾರ್ಥಿಗಳು ಇರುವುದು ಅನುಮಾನ. ಇಷ್ಟಕ್ಕೂ ಇರುವ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಯಾರು ಪ್ರಯತ್ನಿಸಿದ್ದಾರೆ? ದನಿ ಎತ್ತಿದ್ದಾರೆ? ಕನ್ನಡವನ್ನು ಉಳಿಸಿ ಬೆಳಸಬೇಕಾದದ್ದು ನಮ್ಮ ಕರ್ತವ್ಯ. ನಮ್ಮ ಮೇಲೆ ಮಾತೃಭಾಷಾ ಋಣವಿದೆ. ಹಾಗಂತ ಕನ್ನಡ ಮಾಧ್ಯಮ ಶಾಲೆಗಳ ಮುಖಾಂತರವಷ್ಟೆ ಅದು ಸಾಧ್ಯವೆಂದು ವಾದಮಾಡಲಿಕ್ಕಾಗದು. ಕನ್ನಡ ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಲ್ಪಟ್ಟರೆ ಸಾಕಾಗುತ್ತದೆ. ಭಾಷೆಯನ್ನು ಸರಿಯಾಗಿ ಕಲಿತು ಬಳಸಲು ಪ್ರಾರಂಭಿಸಿದಾಗ ಅದು ಚಲಾವಣೆಗೆ ಬರುತ್ತದೆ. ಆದರೆ ಇಂದು ಕನ್ನಡವನ್ನು ಸರಿಯಾಗಿ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿರುವುದರ ಬಗ್ಗೆ ಅನುಮಾನಗಳಿವೆ. ಹಳೆಗನ್ನಡವನ್ನಂತೂ ಪಠ್ಯದಿಂದ ದಿನೇ ದಿನೇ ಕಿತ್ತೆಸೆಯುತ್ತಿರುವುದಕ್ಕೆ ಕಾರಣ ಅವುಗಳನ್ನು ವಿದ್ಯಾರ್ಥಿಗಳು ಕಲಿಯಲಾರರು ಎಂದಲ್ಲ, ಬದಲಿಗೆ ಕಲಿಸಲು ಶ್ರಮವಾಗುತ್ತದೆ ಎಂಬುದು. ಹಳಗನ್ನಡ, ನಸುಗನ್ನಡಗಳನ್ನೆಲ್ಲ ತೆಗೆದು ಆಧುನಿಕ ಕನ್ನಡವಷ್ಟೆ ಸಾಕು ಎಂಬ ಮಟ್ಟಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆ ಬಂದು ನಿಂತಿದೆ. ಮುಂದೆ ಅತ್ಯಾಧುನಿಕ ಕನ್ನಡವೆಂದು ಕನ್ನಡ ಇಂಗ್ಲೀಷ್‍ನ ಕಲಿಸುಮೇಲೋಗರವನ್ನು ಒಪ್ಪಿಕೊಳ್ಳಲೂಬಹುದು. ಇದೇ ಇಂದಾಗುತ್ತಿರುವ ದುರಂತ. ಕನ್ನಡವನ್ನು ಕನ್ನಡವೆಂದು ಖಚಿತವಾಗಿ ಒಪ್ಪುವುದೇ ಕಷ್ಟವಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದಕ್ಕೆ ಹೊಣೆ ಯಾರು? ಕನ್ನಡ ಮಾಧ್ಯಮದ ಕುರಿತು ಮೈಮೇಲೆ ಬಂದಂತೆ ಆಡುವವರೆಂದಾದರೂ ಈ ಕುರಿತು ಚರ್ಚಿಸಿದ್ದಾರಾ? ಕನ್ನಡಬೇಕು ಎಂದು ಬೊಬ್ಬೆ ಹೊಡೆದರೆ ಕನ್ನಡ ಬೆಳೆಯುವುದಿಲ್ಲ. ಹಾಗಾಗಿ ಇಂದಿನ ಅಗತ್ಯವೆಂದರೆ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ವ್ಯವಸ್ಥಿತವಾಗಿ ಕಲಿಸುವ ಏರ್ಪಾಡು ಆಗಬೇಕು.
ಇನ್ನು ಈ ವರ್ಷದಿಂದಲೇ ಎಲ್ಲ ಕಡೆಗೂ ಸಿ.ಬಿ.ಎಸ್.ಸಿ. ಪಠ್ಯಕ್ರಮ ಜಾರಿಯಾಗುತ್ತದೆ. ಮುಂದಿನ ವರ್ಷದಿಂದ ಪಿ.ಯು.ಸಿ ವಿಜ್ಞಾನದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಬದಲಿಗೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅದಕ್ಕೆ ಇಲ್ಲಿನ ವಿದ್ಯಾರ್ಥಿಗಳನ್ನು ಅಣಿಗೂಳಿಸುವುದು ಕೂಡ ಅಗತ್ಯ. ಹೀಗಿದ್ದಾಗ 6 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಜಾರಿಯಾಗುವುದರಲ್ಲಿ ಅಂಥ ದೋಷವೇನೂ ಕಾಣಿಸದು. ಮುಖ್ಯವಾಗಿ ಬೇಕಾದದ್ದು ಯಾವುದೇ ಮಾಧ್ಯಮದಲ್ಲಾಗಲೀ, ಸರಿಯಾಗಿ ಶಿಕ್ಷಣ ದೊರಕುವಂತಾಗಬೇಕು. ಸರಕಾರ ಈ ದಿಶೆಯಲ್ಲಿ ಗಮನಹರಿಸಿ ಇಂಗ್ಲೀಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲು ಸಂಕಲ್ಪಿಸಿದನ್ನು ಸರಿಯಾಗಿ ಜಾರಿಗೆ ತರುವುದೇ ಆದಲ್ಲಿ, ಅದಕ್ಕೆ ತಕ್ಕಂತೆ ಶಿಕ್ಷಕರನ್ನು ಆಯ್ಕೆ ಮಾಡಬೇಕು. ಅಥವಾ ಇರುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಯಾಕೆಂದರೆ ಇಂದು ಅನೇಕ ಬಿ.ಎಡ್. ಮತ್ತು ಡಿ.ಎಡ್. ಕಾಲೇಜುಗಳಿಂದ ಹೊರಬರುತ್ತಿರುವ ಬಹುತೇಕರು ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಅಭ್ಯಸಿಸಿ ಪದವಿ ಪಡೆದವರು ಶಿಕ್ಷಕರಾದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಥವಾ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರಿಗೆ ಕಡ್ಡಾಯವಾಗಿ ಇಂಗ್ಲೀಷ್ ತರಬೇತಿಯನ್ನು ನೀಡುವುದು ಅಗತ್ಯವಾಗಿದೆ.
ಇಂದು 6ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸುವರು ತಮ್ಮ ವಿರೋಧವನ್ನು ಸರಕಾರದ ಎದುರು ಸಮರ್ಥವಾಗಿ ಪ್ರಕಟಪಡಿಸಬಹುದು. ಸರಕಾರವು ಅವರ ವಿರೋದಕ್ಕೆ ಬೆಲೆನೀಡಿ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬಹುದು. ಮುಖ್ಯವಾದ ಸಂಗತಿ ಎಂದರೆ, ಸರಕಾರದ ಮೇಲೆ ಒತ್ತಡ ಹೇರಬಹುದೇ ವಿನ: ವಿದ್ಯಾರ್ಥಿಗಳ ಪಾಲಕರ ಮೇಲೆ ಒತ್ತಡ ಹೇರಲಾಗುವುದಿಲ್ಲ. ಇಂದಿನ ಬಹುತೇಕ ಪಾಲಕರ ಮೇಲೆ ಒತ್ತಡ ಹೇರಬಹುದೇ ವಿನ: ಬಹುತೇಕ ಪಾಲಕರ ಮನಸ್ಥಿತಿಯನ್ನು ಗಮನಿಸಿ ಮುಂದುವರೆಯುವುದು ಇಂದಿನ ಅಗತ್ಯವೂ ಹೌದು ಎನ್ನದೇ ವಿಧಿಯಿಲ್ಲ. ಏಕೆಂದರೆ ಸರ್ಕಾರ ಪ್ರಾರಂಭಿಸದಿದ್ದರೆ ಖಾಸಗಿಯವರಂತೂ ಕಾದು ಕುಳಿತಿರುತ್ತಾರೆ. ಇದರ ಲಾಭ ಪಡೆಯುತ್ತಾರೆ. ಇಂಗ್ಲೀಷ್ ಮಾಧ್ಯಮದ ಹೆಸರಿನಲ್ಲಿ ಇನ್ನಿಲ್ಲದ ಶೋಷಣೆ ನಡೆಸಲು ಅವರಿಗೆ ಹೆಚ್ಚು ಅನುಕೂಲ. ಸರ್ಕಾರವೇ ಪ್ರಾರಂಭಿಸಿದರೆ, ಖಾಸಗಿಯವರಿಗೆ ಕಷ್ಟ. ಸರ್ಕಾರದಷ್ಟು ಸಂಬಳ ನೀಡಲಾಗಲೀ, ಸರ್ಕಾರದಂತೆ ಕಟ್ಟುನಿಟ್ಟಿನ ವಿದ್ಯಾರ್ಹತೆಯನ್ನಾಗಲೀ, ಹೊಂದಿದವರನ್ನು ನೇಮಿಸಿಕೊಳ್ಳಲಿಕ್ಕಾಗಲೀ ಅವುಗಳಿಗೆ ಅಷ್ಟು ಸುಲಭವಲ್ಲ. ಸರ್ಕಾರವೇ ಮುನ್ನುಗ್ಗಿ ಇಂಗ್ಲೀಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲು ಪ್ರಾರಂಭಿಸಿದರೆ, ಬಹಳಷ್ಟು ಪಾಲಕರು ಖಾಸಗಿಯವರ ಶೋಷಣೆಯಿಂದ ಮುಕ್ತರಾಗಿ ನಿಟ್ಟುಸಿರು ಬಿಡಬಹುದು. ಅವರ ಮಕ್ಕಳಿಗೆ ನಿಜಕ್ಕೂ ಉತ್ತಮ ಗುಣಮಟ್ಟದ ಶಿಕ್ಷಣ ಪ್ರಾಪ್ತವಾಗಬಹುದು. ಆ ಮಕ್ಕಳು ಇಂದಿನ ಜಾಗತೀಕರಣದ ಮಾರುಕಟ್ಟೆಯಲ್ಲಿ ತನ್ನ ಬದುಕನ್ನು ಸರಾಗವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಬಹುದು. ಇನ್ನು ಇಂದಿನ ಬಹುತೇಕ ಗ್ರಾಮೀಣ ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಅಲ್ಲಿ ಕೇವಲ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯುತ್ತದೆ ಎಂಬುದು. ಹಾಗಾಗಿ ಸರ್ಕಾರ ಅನೇಕ ಅಂತಹಾ ಶಾಲೆಗಳು ಮುಚ್ಚಲು ಅಥವಾ ಪಕ್ಕದ ಶಾಲೆಯೊಂದಿಗೆ ವಿಲೀನಗೊಳಿಸಲು ಹೊರಟಿತ್ತು. ಆಗಲೂ ಅದರ ವಿರುದ್ದ ದನಿ ಎತ್ತಿದರು. ಹೇಗಾದರೂ ಶಾಲೆಯೆಂಬುದೊಂದು ಇರಲಿ ಎಂದು ಹೇಳುವುದು ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದಂತೆ. ಏಕೆಂದರೆ, ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದಾಗ್ಯೂ ಶಾಲೆ ಶಿಕ್ಷಕರ ಸಂಬಳ ಮತ್ತಿತರರ ಖರ್ಚುಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಶಾಲೆಗಳು ಬೇಕು. ಆದರೆ ಆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಎಂಬ ಧೋರಣೆ ಇದ್ದಾಗ ಅದನ್ನು ಒಪ್ಪುವುದು ಕಷ್ಟ. ಶಾಲೆಗಳು ಬೇಕು ಮತ್ತು ಆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸುತ್ತೇವೆ ಎಂದು ಎದೆ ತಟ್ಟಿ ಹೇಳುವ ಪಾಲಕರ ಸಮುದಾಯ ನಿರ್ಮಾಣವಾಗಲು ಬಹುಷ: ಆಂಗ್ಲ ಮಾಧ್ಯಮವನ್ನು 6ನೇ ತರಗತಿಯಿಂದ ಜಾರಿಗೆ ತರುವುದರಿಂದ ಸಾಧ್ಯವಾಗಬಹುದೇನೋ? ಆ ದಿಶೆಯಲ್ಲೂ ಪ್ರಯತ್ನಗಳು ನಡೆದರೆ ಸದ್ಯದಲ್ಲಿ ಆಕ್ಷೇಪಗಳನ್ನು ಬದಿಗಿಟ್ಟು ಮುಂದೆ ಅವುಗಳ ಸ್ಥಿತಿಗತಿಗಳ ಬಗ್ಗೆ ಪುನರ್ ಅವಲೋಕನ ಮಾಡಿ ಅನಂತರ ಬೇಕಿದ್ದರೆ, ತಪ್ಪಾಗಿದ್ದರೆ, ತಿದ್ದಿಕೊಳ್ಳಲು ತಿಳಿಸಬಹುದು.
ಇಂದಿನ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು, ಸರಾಗವಾಗಿ ಮಾತನಾಡಲು ಬರುತ್ತದೆ. ಇಂಗ್ಲೀಷ್ ಭಾಷೆ ಅವರ ಬದುಕಿನ ಎಲ್ಲಾ ಮಗ್ಗುಲನ್ನು ಆವರಿಸಿಕೊಂಡಿಲ್ಲ. ಇಂದು ಈ ರಾಜ್ಯದಲ್ಲಿ ಎಷ್ಟರ ಮಟ್ಟಿಗಾದರೂ ಕನ್ನಡ ಉಳಿದಿದ್ದರೆ, ಅದು ಗ್ರಾಮೀಣ ಭಾಗದಲ್ಲಿ ಮಾತ್ರ. ಪಟ್ಟಣದಲ್ಲಿ ಇಂಗ್ಲೀಷ್-ಕಂಗ್ಲೀಷ್ ಇತ್ಯಾದಿಯಾಗಿದೆ. ಪಟ್ಟಣದಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಲ್ಲಿಯವರು ಹೇಗೋ ಅಲ್ಲೇ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಕನ್ನಡ ಶಾಲೆ, ಕನ್ನಡ ಮಾಧ್ಯಮವೆಂದು ಓದುತ್ತಾ ಎಷ್ಟೇ ಪ್ರತಿಭಾವಂತರಾಗಿದ್ದರೂ, ಸರಾಗವಾಗಿ ಇಂಗ್ಲೀಷ್ ಬಾರದ ಏಕೈಕ ಕಾರಣದಿಂದ ಅನೇಕ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಮಾತ್ರ ಕಬ್ಬಿಣದ ಕಡಲೆ. ಪದವಿ ವಿದ್ಯಾರ್ಥಿಗಳು ಸಹಿತ ಇಂಗ್ಲೀಷ್‍ನಲ್ಲಿ ಪಾಸಾಗುವುದೋ ಒಂದು ಹರಸಾಹಸದ ಕೆಲಸವಾಗಿದೆ. ಹಾಗೆ ಪಾಸಾಗಲು ಅವರು ಅನೇಕ ಅಡ್ಡ ಮಾರ್ಗ ಹಿಡಿಯಲು ನೋಡುತ್ತಾರೆ. ಇದು ಇಂದಿನ ವಾಸ್ತವ ಬೆಳಕಿಗೆ ಬಂದ ಸತ್ಯ. ಇವರಿಗೆ ಇಂಗ್ಲೀಷ್ ಬರದಿರುವುದಕ್ಕೆ ಶಾಲೆ ಕಾಲೇಜುಗಳಲ್ಲಿ ಇಂಗ್ಲೀಷ್ ಕಲಿಸುವುದಿಲ್ಲವೆಂದಲ್ಲ. ಆ ವಾತಾವರಣವಿಲ್ಲ. ಅದ್ದರಿಂದ ಅವರು ಇಂಗ್ಲೀಷ್‍ನಲ್ಲಿ ಹಿಂದುಳಿದಿದ್ದಾರೆ. ಉಳಿದ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಓದಿ ಇಂಗ್ಲೀಷನ್ನು ಮಾತ್ರ ಇಂಗ್ಲೀಷ್‍ನಲ್ಲಿಯೇ ಬರೆ ಎಂದರೆ ಅವರಿಗೆ ಕಷ್ಟವಾಗಿಬಿಡುತ್ತದೆ. ಇದನ್ನು ತಪ್ಪಿಸಲು ಉಳಿದ ವಿಷಯಗಳನ್ನು ಇಂಗ್ಲೀಷ್ ನಲ್ಲಿಯೇ ಬೋಧಿಸಿ, ಕನ್ನಡವನ್ನು ಮಾತ್ರ ಕನ್ನಡದಲ್ಲಿ ಬೋಧಿಸಿದರೆ, ಪರಿಸ್ಥಿತಿ ಸುಧಾರಿಸಬಹುದು.
ವಾಸ್ತವ ಸತ್ಯವನ್ನು ಒಪ್ಪಿಕೊಳ್ಳುವುದು ಸೂಕ್ತ. ಇಂದು ಪದವಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಓದುವ ವಾಣಿಜ್ಯ ಓದುವ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಯಾವುದೇ ತೊಂದರೆ ಇಲ್ಲದೇ ತೇರ್ಗಡೆಯಾಗುತ್ತಾರೆ. ಕಾರಣ ಅವರು ಉಳಿದ ಎಲ್ಲಾ ವಿಷಯಗಳನ್ನು ಇಂಗ್ಲೀಷ್‍ನಲ್ಲಿಯೇ ಓದುತ್ತಿರುತ್ತಾರೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಳು ಉಳಿದೆಲ್ಲಾ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದುವುದರಿಂದ ಅವರ ಇಂಗ್ಲೀಷ್ ವಿಷಯದಲ್ಲಿನ ತೇರ್ಗಡೆಯ ಪ್ರಮಾಣ ಕಡಿಮೆ. ಹೀಗಾಗಿ ಅವರಿಗೆ ನೌಕರಿಯ ಅವಕಾಶಗಳು ತಪ್ಪುತ್ತಿವೆ. ಹೀಗಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದಾದರೆ, 6 ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪ್ರಾರಂಭಿಸಬೇಕಾಗುತ್ತದೆ. ನಮಗೆ ಇಂದು ಅಗತ್ಯವಾದುದು ಅನ್ನವೇ ವಿನ: ಮಾಧ್ಯಮವಲ್ಲ. ಆ ಕುರಿತು ಅನಗತ್ಯ ಗಲಾಟೆ ಬೇಕಿಲ್ಲ.
ರವೀಂದ್ರ ಭಟ್ ಕುಳಿಬೀಡು.

error: Content is protected !!