ಪಟ್ಟಣದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಸಂಸ್ಕಾರ ಭಾರತಿಯ ಮಂಗಳೂರು ವಿಭಾಗದ ಪ್ರಚಾರಕ ಆದರ್ಶ ಗೋಖಲೆಯವರ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್, ಲತಾ ನಾಗರಾಜ್ ಮುಂತಾದ ಕಲಾವಿದರ ತಂಡ ರಾಷ್ಟ್ರ ದೇವೋ ಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದೇಶಪ್ರೇಮ, ನಾಡಪ್ರೇಮವನ್ನು ಮೆರೆದು, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ದೇಶದ ಸ್ವಾತಂತ್ರ್ಯ ಸೇನಾನಿಗಳು, ಸೈನಿಕರು, ದಾರ್ಶನಿಕರ ಕುರಿತು ಮಾಹಿತಿಯನ್ನು ಗೋಖಲೆಯವರು ನೀಡಿದರೆ, ಕಲಾವಿದರ ತಂಡ ಅದನ್ನು ನೃತ್ಯರೂಪಕದ ಮೂಲಕ ಅಭಿವ್ಯಕ್ತಪಡಿಸಿದರು.
ಇಂದಿನ ಯುವ ಜನಾಂಗವು ದೇಶ ಪ್ರೇಮವನ್ನು ಬಿಟ್ಟು ಕ್ಷಣಿಕ ಸುಖಕ್ಕಾಗಿ ಹೊರಡುತ್ತಿರುವ ಹಾದಿಯ ಬಗ್ಗೆ ವಿಷಾದಿಸಿದ ಅವರು, ಯುವ ಜನಾಂಗವನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಹಿರಿಯರ ಪಾತ್ರ ಮುಖ್ಯವಾದದ್ದು. ಇದೆಲ್ಲವನ್ನೂ ನಮ್ಮ ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಸಾರುತ್ತದೆ. ದೇಶಕ್ಕಾಗಿ ಮಡಿಯುವವರು ಪ್ರತಿ ಕುಟುಂಬದಲ್ಲೂ ಜನಿಸಬೇಕಾಗಿದೆ ಎಂದು ಸಾರಿದರು.
ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ಗೋಖಲೆ ಹಾಗೂ ಅವರ ತಂಡ ಯಶಸ್ವಿಯಾಯಿತು.
ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ, ಸಂಸ್ಕಾರ ಭಾರತಿಯ ತಾಲ್ಲೂಕು ಅಧ್ಯಕ್ಷ ನಂದೀಶ್, ರಾಷ್ಟ್ರ ದೇವೋ ಭವದ ನಿರ್ದೆಶಕರಾದ ಚಂದ್ರಶೇಖರ ಕೆ.ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
‘ರಾಷ್ಟ್ರ ದೇವೋ ಭವ’ ಕಾರ್ಯಕ್ರಮ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ರಥಸಪ್ತಮಿ ಆಚರಣೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ರಥಸಪ್ತಮಿ ಪ್ರಯುಕ್ತ ವಿಶೇಷವಾಗಿ ಯೋಗ ಬಂಧು-ಭಗಿನಿಯರಿಂದ ಸೂರ್ಯನಮಸ್ಕಾರಗಳನ್ನು ಮಾಡುವುದರ ಮೂಲಕ ಆಚರಿಸಲಾಯಿತು.
ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಸೂರ್ಯ ಭಗವಂತನ ಚಿತ್ರಪಠಕ್ಕೆ ಪೂಜೆ ಸಲ್ಲಿಸುವುದರಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಒಟ್ಟಾಗಿ 60 ಜನ ಯೋಗ ಬಂಧು-ಭಗಿನಿಯರು ಸೇರಿ 20,421 ಸೂರ್ಯನಮಸ್ಕಾರಗಳನ್ನು ಮಾಡಿದರು. ನಂತರ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಯಿತು. ನಂತರ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಿಯನ್ನು ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕರಾದ ಸುಂದರಾಚಾರಿ, ಅಧ್ಯಕ್ಷರಾದ ಶ್ರೀ ಶಂಕರ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿ ಶ್ರೀ ಲಕ್ಷ್ಮಣ, ಹಾಗೂ ಹಿರಿಯರಾದ ಸೋಮಣ್ಣ, ಎಲ್ ಕೇಶವ ಮೂರ್ತಿ ಹಾಗೂ ಸಮಿತಿಯ ಕಾರ್ಯಕರ್ತರು ಹಾಗೂ ಯೋಗ ಬಂಧು-ಭಗಿನಿಯರು ಭಾಗವಹಿಸಿದ್ದರು.
ಶಿಡ್ಲಘಟ್ಟದಲ್ಲಿ 66ನೇ ವರ್ಷದ ಗಣರಾಜ್ಯೋತ್ಸವ ಆಚರಣೆ
ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ 66ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಅಖಂಡ ಭಾರತ ದೇಶಕ್ಕೆ ಪ್ರಪಂಚದ ಅತ್ಯಂತ ಬೃಹದಾಕಾರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಆಶಯಗಳಿಗೆ ಕಟಿಬಧ್ದರಾಗಿ ಜೀವಿಸಬೇಕಾದಂತಹ ಅನಿವಾರ್ಯತೆ ಇದೆ. ಮೂಲಭೂತ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದೆ ಯುವಶಕ್ತಿಯ ಮುಂದೆ ವ್ಯವಸ್ಥಿತವಾದ ಸಮಸ್ಯೆಗಳು ಎದುರಾಗುತ್ತಿವೆ, ಭಯೋತ್ಪಾದನೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ, ಭಾರತಾಂಬೆಯ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಬೇಕು, ಗಡಿಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು, ಶಾಲಾ ಮಕ್ಕಳು ಅಕ್ಷರಸ್ಥರಾಗಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು, ಅನಕ್ಷರತೆ ತೊಲಗಬೇಕು, ದೇಶವನ್ನು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡಲು ಎಲ್ಲಾ ಪ್ರಜೆಗಳು ದೃಢ ಸಂಕಲ್ಪ ಮಾಡಬೇಕಾಗಿದೆ, ದೇಶದಲ್ಲಿನ ಜನತೆಯನ್ನು ಭಯಬೀತಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ, ನ್ಯಾಯ ಸಮ್ಮತವಾದ ಚಿಂತನೆ ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಮತ್ತು ಆರಾಧನೆಗಳಿಗೆ ಸ್ವಾತಂತ್ರ್ಯವನ್ನು ಹೊಂದಲು ಇಷ್ಟಪಡುವಂತಹ ಸ್ಥಾನಮಾನಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ದೇಶದಲ್ಲಿ ಸಮಾನತೆ, ಬ್ರಾತೃತ್ವ, ಪರಸ್ಪರ ಪ್ರೀತಿ ಆದರಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ರೈತರ ಅಭಿವೃದ್ದಿಗಾಗಿ ಕೃಷಿ ಭಾಗ್ಯ, ಹಸಿವು ಮುಕ್ತರಾಜ್ಯ, ನಾಡಿನ ಮಕ್ಕಳ ಅಪೌಷ್ಟಿಕತೆ ನಿವಾರಣೆ, ದುರ್ಬಲ ವರ್ಗದ ಜನರ ಅಭಿವೃದ್ದಿಯು ಅವಶ್ಯಕತೆಯಿದೆ ಎಂದರು.
ಈ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಆಯೋಜನೆ ಮಾಡಲಾಗಿತ್ತು, ಹಾಗೂ ವಿವಿಧ ಮಾದರಿಯ ಕವಾಯತುಗಳನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ಇ.ಒ.ಗಣಪತಿಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ, ಸಿ.ಡಿ.ಪಿ.ಓ. ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಅರಣ್ಯಾಧಿಕಾರಿ ಸುಬ್ಬರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಮುಂತಾದವರು ಹಾಜರಿದ್ದರು.
ಕದಿರಿನಾಯಕನಹಳ್ಳಿಯಲ್ಲಿ ಶ್ರೀ ಗಣಪತಿ ಹಾಗು ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ
ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಗಣಪತಿ ಹಾಗು ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ದೇವರ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ತಾಲೂಕಿನ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಬಿಜಿಎಸ್ ಪಬ್ಲಿಕ್ ಸ್ಕೂಲ್ ಹಾಗು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ
ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರೊಂದಿಗೆ ಸಹಕಾರ ನೀಡಬೇಕು ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಸ್ವಾಮಿಜಿ ಮಂಗಳಾನಂದನಾಥ ಸ್ವಾಮೀಜಿ ಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಸ್ಕೂಲ್ ಹಾಗು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಸಿಂಚನ-2015 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸಿನಂತೆ ಶಿಡ್ಲಘಟ್ಟ ಹಾಗೂ ಸುತ್ತಮುತ್ತಲ ಪ್ರಾಂತಗಳಲ್ಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ, ಅವರನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡುವುದು ಬಿಜಿಎಸ್ ವಿದ್ಯಾ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಎಲ್ಲಾ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠವಾದದು ಎಂಬ ಮಾತಿನಂತೆ ರಾಜ್ಯಾದ್ಯಂತ ಸುಮಾರು 450 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ಪೋಷಕರಿಗೂ ಇದೆ ಎಂದ ಅವರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಪೋಷಕರ ಕೆಲಸ ಮುಗಿಯುವುದಿಲ್ಲ ಬದಲಿಗೆ ತಿಂಗಳಿಗೊಮ್ಮೆ ತಮ್ಮ ಮಗು ಓದುವ ಶಾಲೆಗೆ ಭೇಟಿ ನೀಡಿ ತಮ್ಮ ಮಗುವಿನ ವಿದ್ಯಾಭ್ಯಾಸದ ಕುರಿತು ಶಿಕ್ಷಕರೊಂದಿಗೆ ಚರ್ಚಿಸುವ ಕೆಲಸವನ್ನು ಮಾಡಬೇಕು ಎಂದರು.
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಂದ ಆಯೋಜನೆ ಮಾಡಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನಸೆಳೆದವು. ಇದೇ ಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಶಿವರಾಮರೆಡ್ಡಿ, ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ರಾಮಚಂದ್ರಾಚಾರಿ, ಮತ್ತಿತರರು ಹಾಜರಿದ್ದರು.
ಲೋಕ್ ಅದಾಲತ್ ಕಾರ್ಯಕ್ರಮ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಲೋಕ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟದ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಕಾನೂನಿನ್ವಯ ರಾಜೀ ಇತ್ಯರ್ಥಕ್ಕೆ ಅರ್ಹವಾದ ಚೆಕ್ ಅಮಾನ್ಯ ಪ್ರಕರಣಗಳು, ಹಣ ವಸೂಲಾತಿ ವ್ಯಾಜ್ಯ ಹಾಗೂ ಇನ್ನಿತರೆ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ, ಅದೇ ರೀತಿ ಬ್ಯಾಂಕಿನ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಈ ರೀತಿ ಇತ್ಯರ್ಥಪಡಿಸಿಕೊಂಡ ದಾವೆಗಳಲ್ಲಿ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಸಂಬಂಧಪಟ್ಟ ಪಕ್ಷಗಾರರಿಗೆ ಹಿಂದಿರುಗಿಸಲಾಗುತ್ತದೆ. ಈ ಕಾರ್ಯಕ್ರಮದಿಂದ ಸಾಕಷ್ಟು ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದರು.
ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
ಚೌಡಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂಚೆ ಇಲಾಖೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ‘ಕರ್ನಾಪೆಕ್ಸ್’ ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ
ಸಮಾಜದ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಕೇಶವರೆಡ್ಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ನಾಗರತ್ನಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹಾಸ್ಟೆಲ್ನ ವಿದ್ಯಾರ್ಥಿನಿಯರು ಸಮರ್ಪಕವಾಗಿ ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿಲ್ಲ, ಬೆಳಿಗ್ಗೆ ೮ ಗಂಟೆಗೆ ಬಂದು ಕಾಟಾಚಾರದ ಅಡುಗೆ ಮಾಡಿ ತಿನ್ನಿ ಎಂದು ಬಲವಂತ ಮಾಡ್ತಾರೆ ಎಂದು ನೋವು ವ್ಯಕ್ತಪಡಿಸಿದಾಗ, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಅಧಿಕಾರಿಗಳಿಗೆ ಇಂತಹ ಅವ್ಯವಸ್ಥೆಯ ಆಗರವಾಗಿರುವ ಹಾಸ್ಟಲ್ಗಳನ್ನು ಸುಧಾರಿಸಲು ಕಣ್ಣು ಕಾಣುವುದಿಲ್ಲವೇ? ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ನಿಮ್ಮ ಮಕ್ಕಳನ್ನು ಹೀಗೆ ನೋಡಿಕೊಳ್ಳುತ್ತೀರಾ? ಕೂಡಲೇ ವಾರ್ಡ್ನ್ಗೆ ನೋಟಿಸ್ ನೀಡಿ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಿಗಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ್ದೇನೆ ಎಂದು ಕೆ.ಡಿ.ಪಿ ಸಭೆಗೆ ಸುಳ್ಳು ಮಾಹಿತಿ ನೀಡಿದ ನಿಮ್ಮ ಕಾರ್ಯವೈಖರಿ ಇಲ್ಲಿ ಗೊತ್ತಾಗುತ್ತದೆ ಎಂದು ತಾಲ್ಲೂಕು ಪಂಚಾಯತಿಯ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ ಕೂಡ ಅಧಿಕಾರಿ ವಿರುದ್ಧ ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಹಾಸ್ಟೆಲ್ನಲ್ಲಿ ಬಯೋಮೆಟ್ರಿಕ್ ಕೆಟ್ಟುಹೋಗಿರುವುದು ನೋಡಿ ಕೂಡಲೇ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲೇ ಆದೇಶಿಸಿದರು. ಈ ಸಂದರ್ಭದಲ್ಲಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾದ ದಾಖಲೆಯಲ್ಲಿ ೬೪ ವಿದ್ಯಾರ್ಥಿನಿಯರಿದ್ದು, ಹಾಜರಿರುವುದು ಮಾತ್ರ 3೩ ಮಂದಿ ವಿದ್ಯಾರ್ಥಿನಿಯರು ಎಂಬುದು ತಿಳಿದು ಅಧಿಕಾರಿಗಳನ್ನು ಯಾರು ಅಟೆಂಡನ್ಸ್ ಹಾಕಿದ್ದು ಎಂದು ಕೇಳಿದಾಗ ವಾರ್ಡನ್ ನಾಗರತ್ನಮ್ಮ ತಡವರಿಸಿದರು.
ಹಾಸ್ಟಲ್ನಲ್ಲಿ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದ ವೇಳೆಯಲ್ಲಿ ಸಹ ಲೋಪದೋಷ ಕಂಡು ಬಂತು. ಕೂಡಲೇ ಹಾಸ್ಟಲ್ನಲ್ಲಿ ೫ ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸಿ, ಅವರ ಸಮ್ಮುಖದಲ್ಲಿ ಆಹಾರಪದಾರ್ಥಗಳನ್ನು ತೂಕ ಮಾಡಿ ಊಟೋಪಚಾರ ಮಾಡಬೇಕೆಂದು ಸೂಚಿಸಿ ಕೆಲವು ದಾಖಲೆಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಸತೀಶ್,ಶಿವಲೀಲಾ ರಾಜಣ್ಣ, ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಮುಖಂಡರಾದ ವೆಂಕಟಪ್ಪ, ಗಂಗುಲಪ್ಪ ಮತ್ತಿತರರು ಹಾಜರಿದ್ದರು.
ಅಂಬಿಗರ ಚೌಡಯ್ಯನವರ ಜಯಂತೋತ್ಸವವಕ್ಕೆ ತೆರಳಿದ ಪದಾಧಿಕಾರಿಗಳ ತಂಡ
ಶಿಡ್ಲಘಟ್ಟದಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಬೆಸ್ತರ ಜನಾಂಗದ ಪದಾಧಿಕಾರಿಗಳು ತೆರಳಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಸಕಾಲಕ್ಕೆ ರಕ್ತ ದೊರೆಯದೆ ನೂರಾರು ಜನರ ಪ್ರಾಣ ಹಾನಿಯಾಗುತ್ತಿದೆ. ಪ್ರತಿಯೊಬ್ಬರು ರಕ್ತದಾನ ಕುರಿತು ಇರುವ ತಪ್ಪು ತಿಳವಳಿಕೆ ದೂರ ಮಾಡಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ರಕ್ತಕ್ಕೆ ಪರ್ಯಾಯವಾಗಿ ಮತ್ತೊಂದು ರಕ್ಕವಿಲ್ಲ. ಹೀಗಾಗಿ ಆರೋಗ್ಯವಂತ ಮಾನವರು ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಮತ್ತೊಂದು ಜೀವ ಉಳಿಸಲು ನೆರವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ 56 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಪ್ರಾಂಶುಪಾಲ ಚಂದ್ರಾನಾಯಕ್, ಉಪನ್ಯಾಸಕರಾದ ಉಮೇಶ್ರೆಡ್ಡಿ, ಡಾ.ವೆಂಕಟೇಶ್, ಡಾ.ರೋಹಿತ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

