ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ತಲುಪಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರದ ಎಲ್ಲಾ ಯೋಜನೆಗಳು ಸಕಾಲದಲ್ಲಿ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಿಸಬೇಕಾದರೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವುದರ ಜೊತೆಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಸೌಲಭ್ಯಗಳ ಬಗ್ಗೆ ಮತ್ತು ಫಲಾನುಭವಿಗಳು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ, ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಆಯಾ ಇಲಾಖೆಯ ಸೂಚನಾಫಲಕಗಳಲ್ಲಿ ನಮೂದು ಮಾಡಬೇಕು.
ಜಿಲ್ಲೆಯಲ್ಲಿನ ಬಹಳಷ್ಟು ಕುಟುಂಬಗಳಲ್ಲಿ ವಾಸಮಾಡುತ್ತಿರುವ ಬಡವರಿಗೆ ಎಸ್.ಎಂ.ಎಸ್.ಮಾಡುವುದು ಬರುವುದಿಲ್ಲ. ಆಧಾರ್ಕಾರ್ಡಿನ ಬಗ್ಗೆ ಗೊತ್ತಿಲ್ಲ. ಚುನಾವಣಾ ಗುರುತಿನ ಚೀಟಿಯನ್ನು ಪಡಿತರ ಚೀಟಿಗೆ ಹೊಂದಾಣಿಕೆ ಮಾಡಿಸಲು ಗೊತ್ತಿಲ್ಲ. ಆದ್ದರಿಂದಲೇ ಇದುವರೆಗೂ ನೂರಾರು ಕುಟುಂಬಗಳು ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಾಗರಿಕರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ, ಅವರಿಗೆ ನಿಗದಿತ ಸಮಯದಲ್ಲಿ ಪಡಿತರ ಚೀಟಿಗಳು ಲಭಿಸುವಂತೆ ಮಾಡಿಕೊಡಿ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲೆ ಗುರಿತಿನ ಚೀಟಿಗಳ ಹೊಂದಾಣಿಕೆ ಮಾಡುವಂತಹ ವ್ಯವಸ್ಥೆ ಮಾಡಿ. ಸರ್ಕಾರದಿಂದ ಪಟ್ಟಣದ ಅಂಗನವಾಡಿಗಳಿಗೆ ಬಿಡುಗಡೆಯಾಗುತ್ತಿರುವ ಬಾಡಿಗೆಯ ಹಣ ೩೦೦೦ ರೂಪಾಯಿಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾದ ಕಡೆಗೆ ಅಂಗನವಾಡಿಗಳನ್ನು ಸ್ಥಳೀಯ ವಾರ್ಡಿನ ಸದಸ್ಯರುಗಳ ಸಹಕಾರವನ್ನು ಪಡೆದುಕೊಂಡು ಸ್ಥಳಾಂತರಿಸಿ ಮಕ್ಕಳ ಆರೋಗ್ಯಗಳನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕ ಇಲಾಖೆಯ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ಸೇರಬೇಕು. ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವಂತೆ ಕಾರ್ಮಿಕ ಇಲಾಖಾಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ಶಿವಲೀಲಾರಾಜಣ್ಣ, ಸದಸ್ಯರಾದ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಇ.ಓ.ಗಣಪತಿ ಸಾಕರೆ, ಶಿವಾನಂದ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಧಿಕಾರಿಗಳು ನಾಗರಿಕರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ
ಈ.ತಿಮ್ಮಸಂದ್ರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
ಬುದ್ಧ, ಬಸವ, ಅಂಬೇಡ್ಕರ್ ಮತ್ತು ವಿವೇಕಾನಂದರು ನಮ್ಮ ಆದರ್ಶವಾಗಬೇಕು ಎಂದು ನ್ಯಾಷನಲ್ ಕಾಲೇಜಿನ ಗ್ರಂಥಪಾಲಕ ಟಿ.ಎನ್.ಜಯರಾಮರೆಡ್ಡಿ ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಈಚೆಗೆ ನೆಹರು ಯುವ ಕೇಂದ್ರ, ವಿಶ್ವ ವಿದ್ಯಾ ಚೇತನ ಸಹಯೋಗದಲ್ಲಿ ಆಚರಿಸಿದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಪುರುಷರ ಜೀವನ ಮತ್ತು ಆದರ್ಶಗಳು ನಮಗೆ ಪ್ರೇರಕವಾಗಬೇಕು. ಮನುಷ್ಯರಾದವರು ಎಲ್ಲರೂ ಸಾಯುತ್ತಾರೆ. ಆದರೆ ಸತ್ತು ಬದುಕಬೇಕು. ಅಂದರೆ ಸತ್ತ ನಂತರವೂ ಜನಮಾನಸದಲ್ಲಿ ಬದುಕುಳಿಯುವ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಬಾಬು ಫಕ್ರುದ್ದೀನ್, ಶ್ರೀರಾಮಯ್ಯ ಶ್ರೇಷ್ಠಿ, ಟಿ.ಪಿ.ಬೈರಾರೆಡ್ಡಿ, ನಾರಾಯಣಸ್ವಾಮಿ, ಶಂಕರರೆಡ್ಡಿ, ದೇವರಾಜು, ಶ್ರೀರಾಮರೆಡ್ಡಿ, ಗಣೇಶ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪಡಿತರ ಚೀಟಿಗಾಗಿ ನಿಲ್ಲದ ನಾಗರಿಕರ ಅಲೆದಾಟ
ನೂತನ ಪಡಿತರ ಚೀಟಿಗಳನ್ನು ಪಡೆಯಲು ಕಳೆದ ಒಂದೂವರೆ ವರ್ಷದ ಹಿಂದೆ ಅರ್ಜಿಗಳನ್ನು ಹಾಕಿಕೊಂಡು ಪ್ರತಿನಿತ್ಯ ಅಲೆದಾಡುತ್ತಿದ್ದರೂ ಇದುವರೆಗೂ ಪಡಿತರ ಚೀಟಿಯನ್ನು ಪಡೆಯಲು ಸಾಧ್ಯವಾಗಿಲ್ಲವೆಂದು ನಾಗರೀಕರು ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ಶಾಖೆಯಲ್ಲಿ ನವೀಕರಣ, ಹಾಗೂ ನೂತನ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಪ್ರತಿದಿನವೂ ಅಲೆದಾಡುತ್ತಿದ್ದೇವೆ, ಬಂದಾಗಲೆಲ್ಲಾ ಸರ್ವರ್ ಸಮಸ್ಯೆ ಎನ್ನುತ್ತಾರೆ. ಇದರಿಂದಾಗಿ ಕಾರ್ಡುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಸಾದಲಿ, ಬಶೆಟ್ಟಿಹಳ್ಳಿ, ಎಚ್.ಕ್ರಾಸ್ ಸೇರಿದಂತೆ ದೂರದ ಊರುಗಳಿಂದ ಪ್ರತಿನಿತ್ಯ ನೂರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರಬೇಕು, ಆದರೂ ಕೆಲಸಗಳಾಗುವುದಿಲ್ಲ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಪ್ರತಿನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಬರಬೇಕು. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೂ ಪಡಿತರ ಚೀಟಿಗಳು ಬೇಕು. ತಾಲ್ಲೂಕು ಕಚೇರಿಯಲ್ಲಿ ಪಡಿತರ ಚೀಟಿಗಳನ್ನು ವಿತರಣೆ ಮಾಡದೆ ಇರುವುದರಿಂದ ತುಂಬಾ ಸಮಸ್ಯೆಗಳಾಗುತ್ತಿದ್ದು, ಅಧಿಕಾರಿಗಳು ಸ್ಪಂದಿಸಿ ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಗಣತಿದಾರರಿಗೆ ಮಾಹಿತಿ ಸಂಗ್ರಹಿಸಲು ಸಹಕಾರ ನೀಡಿ – ಎಂ.ರಾಜಣ್ಣ
ಎಲ್ಲಾ ಜನಾಂಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಜಾತಿವಾರು ಜನಗಣತಿಯನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ನಾಗರಿಕರು ನೈಜ ಮಾಹಿತಿಯನ್ನು ಗಣತಿದಾರರಿಗೆ ನೀಡಿ ಸಹಕಾರ ನೀಡುವಂತೆ ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲಾ ಜಾತಿಗಳ ಸ್ಥಿತಿಗತಿಯನ್ನು ತಿಳಿಯಲು ಸಮೀಕ್ಷೆಯಲ್ಲಿ ನೀಡುವಂತಹ ಮಾಹಿತಿ ಸಹಕಾರಿಯಾಗಲಿದೆ. ರಾಜ್ಯದ ಜನತೆಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅದು ಸಹಕಾರಿಯಾಗಲಿದೆ ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಪ್ರಾಮುಖ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಮನೆಯ ಬಾಗಿಲಿಗೆ ಹೋಗಿ ಅಧಿಕಾರಿಗಳು ಅಂಕಿ ಅಂಶಗಳ ಕ್ರೋಡಿಕರಣ ಮಾಡುತ್ತಾರೆ. ಸಂಪೂರ್ಣ ಮಾಹಿತಿಯನ್ನು ಗಣತಿದಾರರಿಗೆ ಒದಗಿಸುವಂತೆ ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿ ಗಣತಿದಾರರು ಕಾರ್ಯನಿರ್ವಹಿಸಲಿದ್ದಾರೆ, ತಾಲ್ಲೂಕಿನಲ್ಲಿ ಒಟ್ಟು ೪೦೮ ಬ್ಲಾಕ್ಗಳು ಇದ್ದು, ಪಟ್ಟಣ ಪ್ರದೇಶದಲ್ಲಿ ೭೮ ಬ್ಲಾಕ್ಗಳನ್ನು ತೆರೆಯಲಾಗಿದೆ. ಪ್ರತಿ ೬ ಬ್ಲಾಕ್ಗಳಿಗೊಬ್ಬರಂತೆ ಮೇಲ್ವಿಚಾರಕರು ಕಾರ್ಯನಿರ್ವಹಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಗಣತಿಕಾರ್ಯದಲ್ಲಿ ಕೆಲಸ ಮಾಡಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಹೆಚ್.ಅಮರೇಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಗುರುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯ ಸಾಂಖಿಕ ನಿರೀಕ್ಷಕ ಜಿ.ಅನಿಲ್ಕುಮಾರ್, ತಾಲ್ಲೂಕು ಕುರುಬರ ಸಂಘದ ಪ್ರಧಾನಕಾರ್ಯದರ್ಶಿ ಎಂ.ರಾಮಾಂಜಿನಪ್ಪ, ಮಾದಿಗ ದಂಡೋರ ಸಂಚಾಲಕ ದೇವರಮಳ್ಳೂರು ಕೃಷ್ಣಪ್ಪ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್ ಮುಂತಾದವರು ಹಾಜರಿದ್ದರು.
ಸಿಹಿ ಜೇನಹನಿಯೇ! ಏನಿದು ನಿನ್ನ ಹನಿಗಳ ಲೀಲೆ?
ಸಿಹಿಯಾದ ಜೇನಿನ ರುಚಿಯನ್ನು ಪ್ರಾಯಶ: ಆಸ್ವಾದಿಸದ ಮಾನವರಿಲ್ಲ. ಆಯುರ್ವೇದಗ್ರಂಥಗಳಲ್ಲಿ ಮಗುವಿನ ಜನನವಾದ ಸ್ವಲ್ಪ ಸಮಯದ ನಂತರ ಶುದ್ಧವಾದ ಬಂಗಾರವನ್ನು ಜೇನುತುಪ್ಪ ಹಾಗೂ ತುಪ್ಪದ ಮಿಶ್ರಣದಲ್ಲಿ ತೇಯ್ದು ನೆಕ್ಕಿಸುವ ಪದ್ಧತಿಯನ್ನು ನಾವು ಕಾಣಬಹುದು. ವೃದ್ಧರೂ ಕೂಡ ಸರಿಯಾದ ಪ್ರಮಾಣದಲ್ಲಿ ಜೇನಿನ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ಹಾಗೂ ದೈಹಿಕ ಶಿಥಿಲತೆಗಳು ದೂರವಾಗುತ್ತವೆ. ಹೀಗೆ ಜನನದಿಂದ ಮರಣದವರೆಗಿನ ಪ್ರತಿಯೊಂದು ಹಂತಗಳಲ್ಲೂ ಜೇನು ಪ್ರಾಮುಖ್ಯತೆಯನ್ನು ಹೊಂದಿದೆ.
ಜೇನಿನ ವೈವಿಧ್ಯತೆ?
ಎಂಟು ರೀತಿಯ ಜೇನುತುಪ್ಪದ ವಿವರಣೆಯನ್ನು ಆಯುರ್ವೇದ ಗ್ರಂಥವಾದ ಸುಶ್ರುತ ಸಂಹಿತದಲ್ಲಿ ಸುಶ್ರುತಾಚಾರ್ಯರು ವಿವರಿಸಿದ್ದಾರೆ.
1. ಪೌತ್ತಿಕ:- ಈ ಜೇನುತುಪ್ಪವು ತುಪ್ಪದ ಬಣ್ಣವನ್ನು ಹೊಂದಿದೆ ಇದು ರೂಕ್ಷ ಗುಣವನ್ನು ಹೊಂದಿದ್ದು, ವಿಷಯುಕ್ತ ಪುಷ್ಪಗಳಿಂದ ಸಂಗ್ರಹಿಸಲ್ಪಟ್ಟಿರುತ್ತದೆ. ಇದು ವಾತ, ಪಿತ್ತ, ರಕ್ತ ದೋಷಗಳನ್ನು ಹೆಚ್ಚುಸುತ್ತದೆ, ಮದವನ್ನುಂಟುಮಾಡುವುದಲ್ಲದೆ, ದೇಹದಲ್ಲಿ ದಾಹವನ್ನು ಉತ್ಪತ್ತಿ ಮಾಡುತ್ತದೆ.
2. ಭ್ರಾಮರ:- ಈ ಜೇನುತುಪ್ಪವು ಬಿಳಿ ವರ್ಣವನ್ನು ಹೊಂದಿರುತ್ತದೆ. ಅತಿಯಾಗಿ ಸಿಹಿರಸವನ್ನು ಹೊಂದಿದ್ದು, ಜೀರ್ಣಕ್ಕೆ ಭಾರವಾದುದಾಗಿದೆ.
3. ಕ್ಷೌದ್ರ:- ಕಪಿಲ ವರ್ಣವನ್ನು ಹೊಂದಿದ್ದು, ಜೀರ್ಣಕ್ಕೆ ಹಗುರವಾಗಿರುತ್ತದೆ. ಶೀತ ಗುಣವನ್ನು ಹೊಂದಿದ್ದು, ಕಫ ದೋಷವನ್ನು ಶಮನ ಮಾಡುವುದು.
4. ಮೌಕ್ಷಿಕ:- ಇದು ತೈಲದ ಬಣ್ಣದ್ದಾಗಿರುತ್ತದೆ. ಇದು ಎಲ್ಲ ಜೇನುತುಪ್ಪಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ಇದು ಅತ್ಯಂತ ಲಘು ಅಂದರೆ ಜೀರ್ಣಕ್ಕೆ ಹಗುರವಾದಂಥಹುದು ವಿಶೇಷವಾಗಿ ಶ್ವಾಸ (ದಮ್ಮು), ಕಾಸ (ಕೆಮ್ಮು)ಗಳಲ್ಲಿ ಇದನ್ನು ಬಳಸಲಾಗುವುದು.
5. ಛಾತ್ರ:- ಇದು ಮಧುರ ವಿಪಾಕವನ್ನು ಹೊಂದಿದ್ದು ಶೀತ ಗುಣವನ್ನು ಹೊಂದಿರುತ್ತದೆ. ರಕ್ತ ಹಾಗೂ ಪಿತ್ತ ವಿಕಾರಗಳನ್ನು ಶಮನಗೊಳಿಸುವುದು.
ಶ್ವಿತ್ರ (ತೊನ್ನು), ಮಧುವೇಹ ಹಾಗೂ ಕ್ರಿಮಿ ರೋಗಗಳಲ್ಲಿ ಇದನ್ನು ಉಪಯೋಗಿಸಬಹುದು.
6. ಆಘ್ರ್ಯ:- ಇದು ಕಣ್ಣಿಗೆ ಹಿತಕರ ಕಫ ಹಾಗೂ ಪಿತ್ತ ದೋಷಗಳನ್ನು ಶಮನ ಮಾಡುತ್ತದೆ. ಕಷಾಯ (ಒಗರು) ಹಾಗೂ ಕಹಿರಸಗಳನ್ನು ಪ್ರಧಾನವಾಗಿ ಹೊಂದಿದ್ದು, ದೇಹಕ್ಕೆ ಹೆಚ್ಚಿನ ಬಲವನ್ನು ಕೊಡುತ್ತದೆ.
7. ಔದ್ದಾಲಕ:- ಇದು ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಸ್ವರ ಸಂಬಂಧಿ ರೋಗಗಳಿಗೆ ಉತ್ತಮವಾದಂಥಹುದು, ವಿಷ ಹಾಗೂ ಕುಷ್ಠರೋಗಗಳನ್ನು ಹೋಗಲಾಡಿಸುವುದು.
8. ದಾಲ:- ಒಗರು ಹಾಗೂ ಹುಳಿ ರಸಗಳನ್ನು ಪ್ರಧಾನವಾಗಿ ಹೊಂದಿರುತ್ತದೆ. ಉಷ್ಣ ವೀಂiÀರ್i ಹಾಗೂ ಕಟು ವಿಪಾಕಗಳನ್ನು ಹೊಂದಿದ್ದು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ವಾಂತಿ ಹಾಗೂ ಮಧುಮೇಹಗಳಲ್ಲಿ ಉತ್ತಮ.
ಈ ಎಂಟೂ ವಿಧದ ಜೇನುತುಪ್ಪಗಳೂ ಎಂಟು ವಿಧದ ಜೇನು ನೊಣಗಳಿಂದ ಸಂಗ್ರಹಿಸಲ್ಪಟ್ಟುದಾಗಿದೆ.
ಜೇನಿನ ಸಾಮಾನ್ಯ ಗುಣಗಳು:
1. ಸಿಹಿ, ಹಾಗೂ ಒಗರು ರಸಗಳು ಪ್ರಧಾನವಾಗಿರುತ್ತದೆ.
2. ರೂಕ್ಷ ಹಾಗೂ ಶೀತ ಗುಣವನ್ನು ಹೊಂದಿದೆ.
3. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
4. ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ.
5. ಧ್ವನಿ ಶಕ್ತಿಯನ್ನು ಹೆಚ್ಚಿಸುತ್ತದೆ.
6. ಜೀರ್ಣಕ್ಕೆ ಹಗುರವಾದಂತಹುದು.
8. ದೇಹದ ಸೂಕ್ಷ್ಷ್ಮ ಅವಯವಗಳನ್ನೂ, ಮಾರ್ಗಗಳನ್ನೂ ಹಾಗೂ ಸಂಪೂರ್ಣ ಶರೀರವನ್ನು ಅತ್ಯಂತ ಶೀಘ್ರವಾಗಿ ವ್ಯಾಪಿಸುತ್ತದೆ.
9. ದೇಹದ ಯಾವುದೇ ಭಾಗದಲ್ಲಿ ಸಂಗ್ರಹಗೊಂಡ ಕಫವನ್ನು ಹೊರಹಾಕುತ್ತದೆ.
10. ಕಣ್ಣಿಗೆ ಹಿತಕರವಾದುದಾಗಿದೆ.
11. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
12. ವೀರ್ಯ ವರ್ಧನೆಯನ್ನು ಹೆಚ್ಚಿಸುತ್ತದೆ.
13. ದೇಹದಲ್ಲಿ ಉತ್ಪತ್ತಿಯಾದ ಯಾವುದೇ ರೀತಿಯ ವ್ರಣಗಳನ್ನು ಶುದ್ಧಗೊಳಿಸುವುದಲ್ಲದೆ, ಗುಣಪಡಿಸುತ್ತದೆ.
14. ಹೃದಯಕ್ಕೆ ಹಿತಕರವಾದುದಾಗಿದೆ.
15. ದೇಹದಲ್ಲಿ ಅತಿಯಾಗಿ ಸಂಗ್ರಹವಾದ ಕೊಬ್ಬು (ಮೇದಸ್ಸು)ನ್ನು ಕರಗಿಸುತ್ತದೆ.
16. ಶ್ವಾಸ (ದಮ್ಮು), ಕಾಸ (ಕೆಮ್ಮು), ವಾತ, ಕ್ರಿಮಿ, ವಿಷ, ಮಧುಮೇಹ, ಬಾಯಾರಿಕೆ ಇತ್ಯಾದಿಗಳಲ್ಲಿ ಉತ್ತಮ ಲಾಭಕರ.
ಪಕ್ವವಾದ ಜೇನುತುಪ್ಪವು ಮೂರೂ ದೋಷಗಳನ್ನು ಶಮನ ಮಾಡುವುದು. ಅದೇ ರೀತಿ ಅಪಕ್ವವಾದ ಜೇನುತುಪ್ಪವು ಹುಳಿ ರಸವನ್ನು ಹೊಂದಿದ್ದು, ಮೂರೂ ದೋಷಗಳನ್ನು ವರ್ಧಿಸುವುದು.
ಜೇನುತುಪ್ಪವು ಕೇವಲ ರುಚಿಗಾಗಿಯೇ ಇರುವುದಲ್ಲ, ಇದು ಅತ್ಯುತ್ತಮ ಆಹಾರವೂ ಕೂಡ, ಪ್ರತಿಯೊಬ್ಬರೂ ನಿತ್ಯದ ಆಹಾರದ ಜೊತೆ ಜೇನುತುಪ್ಪವನ್ನು ಸೇವನೆ ಮಾಡುವುದು ಉತ್ತಮ ಇದರಿಂದ ಶರೀರದ ಸ್ವಾಭಾವಿಕ ಉಷ್ಣತೆಯೂ, ಶರೀರದ ಸ್ವಾಭಾವಿಕ ಶಕ್ತಿಯೂ ಸ್ಥಿರಗೊಳ್ಳುತ್ತದೆ. ಮಕ್ಕಳು, ಆಶಕ್ತರು, ವೃದ್ಧರು ಮತ್ತು ಸಾಮಾನ್ಯವಾಗಿ ಎಲ್ಲ ಸ್ತ್ರಿ ಪುರುಷರು, ಇವರುಗಳಿಗೆಲ್ಲ ಜೇನುತುಪ್ಪವು ಬಹಳ ಲಾಭದಾಯಕವಾದುದಾಗಿದೆ.
ಮಹಾತ್ಮಾ ಗಾಂಧೀಜಿಯವರು ಬೇಯಿಸದ ಆಹಾರವನ್ನು ಸೇವಿಸುವ ಸಮಯದಲ್ಲಿ ಇತರ ಪದಾರ್ಥಗಳ ಜೊತೆಗೆ 4 ತೊಲ ಜೇನುತುಪ್ಪವನ್ನು ಸೇವಿಸುತ್ತಿದ್ದರು ಎನ್ನುವುದು ಪ್ರತೀತಿ.
ವಿವಿಧ ರೋಗಗಳಲ್ಲಿ ಜೇನುತುಪ್ಪದ ಬಳಕೆ:
1. ಕ್ಷಯ ರೋಗದಿಂದ ಬಳಲುತ್ತಿರುವವರು ಒಂದು ಲೋಟ ಹಸುವಿನ ಹಾಲಿಗೆ ಅಥವಾ ಒಂದು ಲೋಟ ಆಡಿನ ಹಾಲಿಗೆ 2 ರಿಂದ 3 ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಉತ್ತಮ, ಕಾಯಿಸಿ ಆರಿಸಿದ ಹಾಲಿನ ಬಳಕೆ ಉತ್ತಮ.
2. ಮಧುಮೇಹ (ಡಯಾಬಿಟಿಸ್) ರೋಗದಿಂದ ಬಳಲುತ್ತಿರುವವರು ಜೇನುತುಪ್ಪವನ್ನು ಇತರ ಆಹಾರ ಪದಾರ್ಥಗಳೊಡನೆ ಸೇರಿಸಿ ಸೇವಿಸುವುದು ಹಿತಕರ.
3. ಏಟು ತಗಲುವುದರಿಂದ ಆಗಿರುವ ಗಾಯಾಗಳಿಗೆ ಜೇನುತುಪ್ಪವನ್ನು ತುಪ್ಪದೊಡನೆ ಮಿಶ್ರಣ ಮಾಡಿ ಲೇಪಿಸುವುದು ಒಳ್ಳೆಯದು.
4. ಬಹಳ ಉಷ್ಣದಿಂದ ಅಥವಾ ಸುಣ್ಣ ಮತ್ತು ಇತರೆ ಬಿಸಿ ಪದಾರ್ಥಗಳ ಸಂಪರ್ಕದಿಂದ ಸುಟ್ಟಂತಾಗಿ ಬಾಯೊಳಗೆ ಬೊಬ್ಬೆಗಳು, ಗುಳ್ಳೆಗಳು ಆಗಿರುವಾಗ ಜೇನುತುಪ್ಪವನ್ನು ಲೇಪಿಸಿದರೆ ಅವು ಬೇಗನೇ ಗುಣವಾಗುವವು.
5. ಬೇಲದ ಹಣ್ಣು ಅಥವಾ ಚಕ್ಕೆಯ ರಸದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕಿವಿಗಳಿಗೆ ಹಾಕುವುದರಿಂದ ಕಿವಿ ಸೋರುವುದು ನಿಲ್ಲುತ್ತದೆ.
6. ರಕ್ತ ವಾಂತಿಯಾಗುತ್ತಿದ್ದರೆ, ಜೇನುತುಪ್ಪದೊಡನೆ ತುಪ್ಪ ಮತ್ತು ಭತ್ತದ ಅರಳಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಬೇಕು.
7. ಪಿತ್ತ ಜ್ವರದಿಂದ ನೀರಿನಂತಹ ಭೇದಿಯಾಗುತ್ತಿದ್ದರೆ ದಾಳಿಂಬೆಯ ರಸದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು.
8. ವಿವಿಧ ರೀತಿಯ ಚರ್ಮರೋಗಗಳಲ್ಲಿ ಜೇನುತುಪ್ಪವನ್ನು ವಾಯುವಿಡಂಗ, ತ್ರಿಫಲಾ, ಹಿಪ್ಪಲಿ ಇವುಗಳ ಚೂರ್ಣದೊಡನೆ ಮಿಶ್ರಣ ಮಾಡಿ ಸೇವಿಸಬೇಕು.
9. ಚೇಳು ಕಚ್ಚಿದಾಗ ಜೇನುತುಪ್ಪದ ಲೇಪನ ಮತ್ತು ಸೇವನೆ ಮಾಡಿದರೆ ವಿಷವು ಶಮನವಾಗುವುದು.
10. ಶರೀರದಲ್ಲಿ ಕೊಬ್ಬು (ಮೇದಸ್ಸು) ಹೆಚ್ಚು ಸಂಗ್ರಹವಾಗಿದ್ದರೆ ಅರ್ಧ ಲೋಟದಷ್ಟು ಕಾಯಿಸಿ ಆರಿಸಿದ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕೆಲವು ದಿನಗಳವರೆಗೆ ನಿತ್ಯವೂ ಸೇವಿಸಬೇಕು.
11. ಒಸಡುಗಳು ಊದಿಕೊಂಡು ನೋಯುತ್ತಿದ್ದರೆ ಅಥವಾ ಕೀವು ಸೋರುತ್ತಿದ್ದರೆ, ಜೇನುತುಪ್ಪದಲ್ಲಿ ಹತ್ತಿಯನ್ನು ಅದ್ದಿ ಹಚ್ಚಬೇಕು. ಇದರಿಂದ ಒಸಡಿಗೆ ಸಂಬಂಧವಾದ ಎಲ್ಲ ರೋಗಗಳೂ ನಿವಾರಣೆಯಾಗುತ್ತದೆ.
12. ದೃಷ್ಟಿದೋಷವಿದ್ದಲ್ಲಿ ನಿತ್ಯ ಪ್ರಾತ:ಕಾಲ ಶುದ್ಧವಾದ ಜೇನುತುಪ್ಪವನ್ನು ಅಂಜನದಂತೆ ಹಚ್ಚುತ್ತಿರಬೇಕು.
13. ಕಫದಿಂದ ಕೂಡಿದ ಕೆಮ್ಮು ಇದ್ದಾಗ ಸಿತೋಪಲಾದಿ ಅಥವಾ ತಾಲೀಸಾದಿ ಚೂರ್ಣದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು.
14. ವರ್ಷಾ ಋತು (ಮಳೆಗಾಲ)ವಿನಲ್ಲಿ ಬಾಹ್ಯ ಪರಿಸರದಲ್ಲೂ ಕ್ಲೇದಾಂಶ (ನೀರಿನಂಶ)ವಿದ್ದು, ದೇಹದಲ್ಲೂ ಕ್ಲೇದತೆ ಅಧಿಕವಾಗಿರುವುದರಿಂದ ಈ ಋತುವಿನಲ್ಲಿ ನಿತ್ಯವೂ ಜೇನಿನ ಬಳಕೆ ಉತ್ತಮ.
ಎಚ್ಚರಿಕೆ:
1. ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದು ನಿಷಿದ್ಧ. ಇದರ ಅತಿ ಸೇವನೆಯಿಂದ ಅಜೀರ್ಣ ಉಂಟಾಗಿ ಮರಣವೂ ಸಂಭವಿಸಬಹುದು.
2. ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
3. ಜೇನುತುಪ್ಪವನ್ನು ಬಿಸಿಯಾದ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಸೇವಿಸಬಾರದು.
4. ಉಷ್ಣ ಪ್ರಕೃತಿಯವರು, ಬಿಸಿಲಿನಿಂದ ಬಸವಳಿದು ಬಂದವರು ಜೇನುತುಪ್ಪವನ್ನು ಸೇವಿಸುವುದು ಹಾನಿಕರ.
“ಅತಿ ಸರ್ವತ್ರ ವರ್ಜಯೇತ್” ಎನ್ನುವ ಚಾಣಕ್ಯರ ನೀತಿಯಂತೆ ದೇಹ, ಪ್ರಕೃತಿ, ರೋಗ, ದೇಶ, ಋತು, ಪ್ರಮಾಣ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸವಿಯಾದ, ಅಮೃತ ತುಲ್ಯ ಜೇನಿನ ಬಳಕೆ ಮಾಡೋಣ.
ಡಾ. ನಾಗಶ್ರೀ .ಕೆ.ಎಸ್.
ಶಿಡ್ಲಘಟ್ಟದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ಬಾಗೇಪಲ್ಲಿಯಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಕರ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಶಿಡ್ಲಘಟ್ಟದ ಶಾರದಾ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ನಾಗಾರ್ಜುನ, ಗೌತಮ, ಕಾರ್ತಿಕ, ಭರತ ಮತ್ತು ವಿದ್ಯಾರ್ಥಿನಿಯರಾದ ಇಂಧು ಮತ್ತು ನಾಝೀಮ ವಿವಿಧ ಆಕರ್ಷಕ ಮಾದರಿಗಳನ್ನು ತಯಾರಿಸಿ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ.
ಕಾರ್ಯಕರ್ತರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು
ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಮುಖಾಂತರ ಸದಸ್ಯತ್ವದ ಗುರಿಯನ್ನು ಮುಟ್ಟಬೇಕಾದರೆ ಕಾರ್ಯಕರ್ತರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಸ್.ಎ.ರಾಮ್ದಾಸ್ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕಾದರೆ, ಪಕ್ಷದ ಕಾರ್ಯಕರ್ತರು ನಿಷ್ಠಾವಂತರಾಗಿ ಕೆಲಸ ಮಾಡಬೇಕು. ನಮಗೆ ನೀಡಿರುವ ಸದಸ್ಯತ್ವದ ಗುರಿಯನ್ನು ಮುಟ್ಟಬೇಕಾದರೆ, ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮೇಲಿನ ಜವಾಬ್ದಾರಿಯಿಂದ ಕೆಲಸ ಮಾಡಿ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು, ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ದೂರದೃಷ್ಟಿ ಹಾಗೂ ಅವರು ಕೈಗೊಂಡಿರುವ ಜನಪರ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿನ ಬಿಜೆಪಿ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮಾತನಾಡಿ, ತಾಲ್ಲೂಕಿನಾಧ್ಯಂತ ನಾಗರಿಕರ ಮನವೊಲಿಸಿ ಸುಮಾರು ೫೦ ಸಾವಿರ ಮಂದಿ ಸದಸ್ಯರನ್ನು ಮಾಡುವ ಗುರಿಯನ್ನು ಹೊಂದಿದ್ದು, ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿ ಮಾಡಬೇಕು. ಪ್ರತಿಯೊಂದು ಗ್ರಾಮದಲ್ಲಿಯೂ ಸದಸ್ಯರನ್ನು ಮಾಡುವ ಮುಖಾಂತರ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂದರು.
ಬಿಜೆಪಿ ರಾಷ್ಟ್ರೀಯ ಉಸ್ತುವಾರಿ ಶಂಕರನಾರಾಯಣರೆಡ್ಡಿ, ಜಿಲ್ಲಾ ಉಸ್ತುವಾರಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ದಾಮೋದರ್, ಶಿವಕುಮಾರಗೌಡ, ಶ್ರೀಧರ್, ಸಿ.ವಿ.ಲೋಕೇಶ್ಗೌಡ, ನಂದೀಶ್, ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಶಿವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಗರಿಕರ ಮೇಲೆ ನಾಯಿಯ ದಾಳಿ
ಪಟ್ಟಣದಲ್ಲಿ ಸೋಮವಾರ ನಾಯಿಯೊಂದು ನಾಗರಿಕರ ಮೇಲೆ ಧಾಳಿ ನಡೆಸಿದ್ದು ಸುಮಾರು 23 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ನಾಯಿಯ ಕಡಿತಕ್ಕೊಳಗಾದ ವಯಸ್ಸಾದ ಮಹಿಳೆಯೊಬ್ಬರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬೆಳಿಗ್ಗೆ ಬಸ್ನಿಲ್ದಾಣದ ಬಳಿ ಕುಮಾರ್ ಎಂಬುವವರನ್ನು, ರೇಷ್ಮೆ ಗೂಡು ಮಾರ್ಕೆಟ್ ಬಳಿ ರಮೇಶ್, 23 ನೇ ವಾರ್ಡ್ ಬಳಿ ನಾಗರಾಜ್ ಸೇರಿದಂತೆ ಹಲವರನ್ನು ಗಾಯಗೊಳಿಸಿರುವ ನಾಯಿಯ ಗುರುತನ್ನು ಎಲ್ಲರೂ ಒಂದೇ ಹೇಳಿರುವುದರಿಂದ ಒಂದೇ ನಾಯಿಯು ಕಚ್ಚುತ್ತಿದೆ ಎಂದು ಆಸ್ಪತ್ರೆಯ ಚಿಕಿತ್ಸಕರು ತಿಳಿಸಿದ್ದಾರೆ.
‘ಬೆಳಿಗ್ಗೆ ಎಂಟರಿಂದ ಕಂದು ಬಣ್ಣದ ಬಿಳಿ ಮಚ್ಚೆಯುಳ್ಳ ನಾಯಿ, ಬಸ್ ನಿಲ್ದಾಣ, ಕೋಟೆ ವೃತ್ತ, ಕೆನರಾ ಬ್ಯಾಂಕ್, ಕುರುಬರ ಪೇಟೆ, ಕಾಂಗ್ರೆಸ್್ ಭವನ ರಸ್ತೆ, ರೇಷ್ಮೆ ಗೂಡಿನ ಮಾರುಕಟ್ಟೆ ಮುಂತಾದೆಡೆ ತಿರುಗುತ್ತಾ, ಹುಚ್ಚು ಹಿಡಿದಂತೆ ಹಲವರನ್ನು ಕಚ್ಚುತ್ತಿರುವ ಸುದ್ಧಿ ಎಲ್ಲೆಡೆ ಹಬ್ಬಿದ್ದರೂ ಪುರಸಭೆಯವರು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ’ ಎಂದು ನಾಯಿಯ ಕಡಿತಕ್ಕೊಳಗಾದವರು ನುಡಿದರು.
ನಾಗರಿಕ ಸಂರಕ್ಷಣಾ ಸೇವಾ ಸಮಿತಿಯ ಪ್ರತಿಭಟನೆ
ಸರ್ಕಾರಿ ಕಚೇರಿಗಳಲ್ಲಿ ನಾಗರಿಕರ ಕೆಲಸ ಕಾರ್ಯಗಳನ್ನು ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ನಾಗರೀಕ ಸಂರಕ್ಷಣಾ ಸೇವಾ ಸಮಿತಿಯ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ಕಂದಾಯ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಬಡವರಿಗೆ ನ್ಯಾಯಸಿಗುತ್ತಿಲ್ಲ. ವಿನಾಕಾರಣ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಶ್ರೀಮಂತರು, ಬಡವರು ಎಂಬ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಯಾವುದೇ ಅನುಧಾನಗಳು ಸಂಬಂಧಪಟ್ಟ ಫಲಾನುಭವಿಗಳಿಗೆ ಸೇರದೆ ಉಳ್ಳವರ ಪಾಲಾಗುತ್ತಿವೆ. ಕಾರ್ಮಿಕರನ್ನು ವಂಚನೆ ಮಾಡಿ, ಖಾಸಗೀ ಕಂಪನಿಗಳ ಮಾಲೀಕರು, ಈ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನ್ಯಾಯ ಕೇಳಲು ಬಂದ ಬಡವರ ಮೇಲೆ ಕೆಲ ಮಧ್ಯವರ್ತಿಗಳು ದೌರ್ಜನ್ಯ, ದಬ್ಬಾಳಿಕೆಗಳನ್ನು ನಡೆಸಿ, ಬೆದರಿಸುತ್ತಿದ್ದಾರೆ.
ತಾಲ್ಲೂಕು ಕಚೇರಿ, ಕಂದಾಯ ಇಲಾಖೆ, ಭೂ ಮಾಪನ ಇಲಾಖೆ, ತಾಲ್ಲೂಕು ಪಂಚಾಯಿತಿ, ನಗರಸಭೆ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕು. ಕೆರೆಗಳ ಒತ್ತುವರಿ ತೆರವು ಮಾಡಬೇಕು, ಎಲ್ಲ ಜನಾಂಗ, ವರ್ಗದವರಿಗೂ ಸ್ಮಶಾನ ಭೂಮಿಯನ್ನು ಮೀಸಲಿಡಬೇಕು. ಬಡವರಿಗೆ ನಿವೇಶನ, ಮನೆ ಮಂಜೂರು ಮಾಡುವುದು, ಎಲ್ಲ ಅರ್ಹರಿಗೂ ಬಿಪಿಎಲ್ ಕಾರ್ಡು ವಿತರಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಎಚ್.ಎಸ್.ಸತ್ತಾರ್ ತಿಳಿಸಿದರು.
ಶಿಡ್ಲಘಟ್ಟ ಗ್ರಾಮದ ಸರ್ವೆನಂಬರ್ ೬೪/೧, ೬೪/೨, ೬೪/೩, ೬೪/೪, ೬೪/೫, ರ ಜಮೀನುಗಳು ಸರ್ಕಾರಿ ಸ್ತತ್ತುಗಳಾಗಿದ್ದು, ಸದರಿ ಭೂಮಿಗಳನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು, ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವವರ ಮೇಲೆ ಕ್ರಿಮಿನಲ್ ಮೊಕ್ದದಮೆ ದಾಖಲಿಸಬೇಕು, ನಗರದ ರೈಲು ಹಳಿಯ ಪಕ್ಕದಲ್ಲಿರುವ ಸರ್ಕಾರಿ ಭೂಮಿಯನ್ನು ಅಳತಯೆ ಮಾಡಿಸಿ ಬೇಲಿಯನ್ನು ನಿರ್ಮಾಣ ಮಾಡಬೇಕು, ನಿವೇಶನ ರಹಿತರಿಗೆ ನೀಡಬೇಕು, ಪುರಸಭೆಯ ಮುಖ್ಯಾಧಿಕಾರಿ ರಾಮ್ಪ್ರಕಾಶ್ ಅವರ ಅವಧಿಯಲ್ಲಿ ನಡೆಸದಿರುವ ಅಕ್ರಮಗಳನ್ನು ತನಿಖೆ ನಡೆಸಬೇಕು, ಅವರನ್ನು ಕೂಡಲೇ ಅಮಾನತ್ತು ಪಡಿಸಬೇಕು, ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ನಾಗರಿಕ ಸಂರಕ್ಷಣಾ ಸೇವಾ ಸಮಿತಿಯ ಅಧ್ಯಕ್ಷ ಜಿ.ಎನ್.ವೆಂಕಟೇಶ್, ಉಪಾಧ್ಯಕ್ಷ ಬಿ.ಎ.ಮುನಿರಾಜು, ಕಾರ್ಯದರ್ಶಿ ಹೆಚ್.ಎಸ್.ಸತ್ತಾರ್, ಜಂಟಿ ಕಾರ್ಯದರ್ಶಿ ಪದ್ಮಾವತಿ, ಎನ್.ಗೋಪಾಲ್, ಶ್ರೀನಿವಾಸರಾವ್, ಭಾರತಿ, ಆರ್.ಪ್ರಕಾಶ್, ಅಪ್ಸರ್, ವಿ.ಆರ್.ರವಿಚಂದ್ರ, ಲಕ್ಷ್ಮಮ್ಮ, ಸನಾವುಲ್ಲಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗೃಹಿಣಿಯರೇ, ನಿಮ್ಮತನವನ್ನು ಕಳೆದುಕೊಳ್ಳಬೇಡಿ
ಸುಮಾರು ಇಪ್ಪತ್ತೆಂಟರ ಆಸುಮಾಸಿನಲ್ಲಿರುವ ಗೃಹಿಣಿ. ಮೂರು ವರ್ಷದ ಮಗನಿದ್ದಾನೆ. ಉನ್ನತ ಶಿಕ್ಷಣ ಪಡೆದು ಮದುವೆಯಾಗಿ ಈಗ ಪೂರ್ಣಪ್ರಮಾಣದಲ್ಲಿ ಹೋಮ್ ಮೇಕರ್ ಆಗಿದ್ದಾರೆ. ನನ್ನ ಹತ್ತಿರ ಆಪ್ತಸಲಹೆಗಾಗಿ ಬಂದಿದ್ದರು. ಪ್ರಾರಂಭದ ಪರಿಚಯದ ನಂತರ ನಾನು ಕೇಳಿದೆ, “ಏನಮ್ಮಾ ನಿನ್ನ ಸಮಸ್ಯೆ, ನನ್ನಿಂದ ಏನು ಸಹಾಯವನ್ನು ಅಪೇಕ್ಷಿಸುತ್ತೀರಾ?”
ಮಾತುಗಳು ಕಣ್ಣೀರಿನ ರೂಪದಲ್ಲಿ ಮಾತ್ರ ಹೊರಬಂದವು. ಆಪ್ತಸಲಹೆಯ ನೀತಿಸಂಹಿತೆಯಂತೆ ನಾನು ಯಾವುದೇ ರೀತಿಯಲ್ಲಿ ಸಮಾಧಾನ ಮಾಡದೆ ಅವಳಿಗೆ ತನ್ನ ದುಃಖವನ್ನು ಹೊರಹಾಕಲು ಸೂಚಿಸಿದೆ. ಅವಳು ಮಾತನಾಡುವ ಸ್ಥಿತಿಗೆ ಬಂದ ನಂತರ ಹೇಳಿದ್ದರ ಸಾರಾಂಶ ಇಷ್ಟು.
ಮನೆಯಲ್ಲಿ ಅತ್ತೆ ಮಾವ ಇದ್ದಾರೆ. ಹತ್ತಿರದಲ್ಲೇ ಮದುವೆಯಾದ ಇಬ್ಬರು ನಾದಿನಿಯರೂ ಇದ್ದಾರೆ. ಪತಿಗೆ ಯಾವುದೇ ವಿಚಾರದಲ್ಲಿ ಸ್ವಂತ ನಿಲುವೇ ಇಲ್ಲ. ಎಲ್ಲದಕ್ಕೂ ಅಪ್ಪ ಅಮ್ಮನನ್ನು ಕೇಳಿ ಮಾಡು, ಅವರಿಗೆ ಬೇಸರಪಡಿಸಬೇಡ ಎನ್ನುತ್ತಾರೆ. ಅವರೋ ಮಾತೆತ್ತಿದರೆ ತಪ್ಪು ಹುಡುಕಿ ಹೀಯಾಳಿಸುವವರು. ಜೊತೆಗೆ ಪತಿಯೊಡನೆ ಏನೇ ಹೇಳಿಕೊಂಡರು ಅದು ದೊಡ್ಡ ನಾದಿನಿಗೆ ತಲುಪಿ, ಮರುದಿನ ಅವರಿಂದ ಉಪದೇಶ, ಬೈಗುಳ ಎಲ್ಲಾ ಕೇಳಬೇಕು.
ಮದುವೆಯಾದ ಆರಂಭದಲ್ಲಿ ಉದ್ಯೋಗದಲ್ಲಿದ್ದ ಈಕೆಗೆ ಒಂದು ದಿನ ಶಾಕ್ ಕಾದಿತ್ತು. ಬೆಳಿಗ್ಗೆ ಕಛೇರಿಗೆ ಹೊರಟು ನಿಂತವಳನ್ನು ತಡೆದು ನೀನು ಇವತ್ತಿನಿಂದ ಹೋಗುವಂತಿಲ್ಲ ಎಂದು ನಿರ್ಬಂಧಿಸಲಾಯಿತು. ನಂತರದಿಂದ ಮನೆಯಲ್ಲಿ ಅಡುಗೆಯವಳಾಗಿ, ಕೆಲಸದವಳಾಗಿ ಉಳಿದುಬಿಟ್ಟಳು. ಅತ್ತೆ ಮಾವನ ಸೇವೆ, ನಾದಿನಿಯ ಮಕ್ಕಳಿಗೆ ಊಟೋಪಚಾರ ಒದಗಿಸುವುದರಲ್ಲೇ ದಿನಕಳೆಯುತ್ತಿದ್ದಳು. ಮನೆಯಲ್ಲಿ ಹಿರಿಯರೆದುರು ಟೀವೀ ನೋಡುವುದಿರಲಿ, ಕುಳಿತುಕೊಳ್ಳುವಂತೆಯೂ ಇಲ್ಲ. ಹೊರಗಡೆ ಹೋಗಲು, ತೌರು ಮನೆಗೆ ಬರಲು ಮಾವನ ಅಪ್ಪಣೆ ಕೇಳಬೇಕು ಮತ್ತು ಅದು ಸಾಮಾನ್ಯವಾಗಿ ಸಿಗುವುದೇ ಇಲ್ಲ. ಮಗನೊಡನೆ ಆಟ, ನಗು ಎಲ್ಲವೂ ನಿಷಿದ್ಧ. ಆ ಮಗು ಕೂಡ ಇವರ ದಬ್ಬಾಳಿಕೆ ಹೆದರಿ ಯಾವಾಗಲೂ ಅಮ್ಮನಿಗೆ ಆತುಕೊಂಡಿರುತ್ತದೆ. ಇದೆಲ್ಲ ಸಾಲದೂ ಎಂಬಂತೆ ನೀನು ಮಗೂನ್ನ ಹಾಳುಮಾಡಿದ್ದೀಯಾ, ನಿನ್ನಿಂದಾಗಿ ಮನೆಯವರಿಗೆಲ್ಲಾ ಬೇಸರ ಎನ್ನುವ ಅಪವಾದಗಳು ಮನೆಯವರಿಂದ ಜೊತೆಗೆ ಪತಿಯಿಂದ ಕೂಡ. ತೌರು ಮನೆಯವರು ಮಧ್ಯಪ್ರವೇಶ ಮಾಡಿದಾಗಲೆಲ್ಲಾ ಹೆಚ್ಚಿನ ರಾದ್ಧಾಂತ. ನಿನ್ನ ಅಗತ್ಯವೇ ನನಗಿಲ್ಲ ಎನ್ನುವಂತೆ ವರ್ತಿಸುವ ಗಂಡ. ಹಾಗಿದ್ದರೂ ಈಗ ಇವಳು ಮತ್ತೆ ಎರಡು ತಿಂಗಳ ಗರ್ಭಿಣಿ. ಇತ್ತೀಚೆಗೆ ಇವಳ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್‍ಗಳು ಮತ್ತು ಜೀವವಿಮಾ ಪಾಲಿಸಿಗಳ ನಾಮಿನೇಷನ್‍ನ್ನು ಮಾವನ ಹೆಸರಿಗೆ ಬದಲಾಯಿಸಲು ಪತಿ ಪ್ರಾರಂಭಿಸಿದ್ದರು.
“ಸಾರ್ ನನಗೆ ಅಲ್ಲಿಗೆ ಹೋಗಲು ಇಷ್ಟವೇ ಇಲ್ಲ. ತೊಂಬತ್ತು ವರ್ಷ ಬದುಕಿದ್ದರೂ ಅಲ್ಲಿ ನಾನು ಸತ್ತಂತೆಯೇ ಇರಬೇಕು. ಅದಕ್ಕೆ ಅಲ್ಲಿಗೆ ಯಾಕೆ ಹೋಗಬೇಕು?” ಕೇಳಿದಳು.
ಆತ್ಮಹತ್ಯೆಗೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದಾಳೆಯೇ? ಅವಳು ಇಲ್ಲಿಯವರೆಗೆ ಆಡಿದ ಮಾತುಗಳನ್ನು ಮನಸ್ಸಿನಲ್ಲೇ ನಾನು ರೀವೈಂಡ್ ಮಾಡಿ, ಹೆಚ್ಚಿನ ಸೂಚನೆಗಳು ಸಿಗುತ್ತವೆಯೇ ನೋಡಿದೆ. ಇಲ್ಲ ಸಧ್ಯಕ್ಕಂತೂ ಅಂತಹ ಸೂಚನೆಗಳಿಲ್ಲ. ಈಗ ಆಡಿರುವುದು ಪೂರ್ಣ ಹತಾಷೆಯ ಮಾತುಗಳು. ಆದರೂ ಮುಂದೊಂದು ದಿನ ಪರಿಸ್ಥಿತಿ ಎಂತಹ ತಿರುವನ್ನು ಪಡೆದರೂ ಆಶ್ಚರ್ಯವೇನಿಲ್ಲ.
ಆಪ್ತಸಲಹೆಯ ಮೂಲ ಉದ್ದೇಶ ನಮ್ಮೆದುರಿಗಿರುವ ವ್ಯಕ್ತಿ ತನಗೆ ಕಷ್ಟ ಅನ್ನಿಸುವ ಸಂದರ್ಭಗಳನ್ನು ನಿಭಾಯಿಸುವುದು ಹೇಗೆ ಎಂದು ಮಾನಸಿಕ ತಯಾರಿಕೊಡುವುದು. ಇದಕ್ಕಾಗಿ ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಹಾಗಾಗಿ ವಾರಕ್ಕೊಮ್ಮೆಯಂತೆ ಸುಮಾರು ಹತ್ತು ಹನ್ನೆರೆಡು ವಾರಗಳಾದರೂ ಆ ವ್ಯಕ್ತಿ ಆಪ್ತಸಲಹೆಕಾರರ ಹತ್ತಿರ ಹೋಗಬೇಕಾಗುತ್ತದೆ. ಇಲ್ಲಿ ಬರೀ ಕೆಲವೇ ಗಂಟೆಗಳಲ್ಲಿ ನನ್ನಿಂದ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಹಾಗಾಗಿ ನನ್ನ ಕಾರ್ಯತಂತ್ರ ಸಂಪೂರ್ಣ ಬೇರೆಯೇ ಆಗಿರಬೇಕು ಎಂದು ಯೋಚಿಸಿದೆ.
“ಸರಿಯಮ್ಮ, ನಿಮ್ಮ ಹತಾಷೆ, ನೋವು ಎಲ್ಲದರಿಂದ ಹೊರಬರಲು ನೀವು ಈಗ ಏನು ಮಾಡಬಹುದು ಎಂದು ನಿಮಗನ್ನಿಸುತ್ತದೆ?” ಅವಳನ್ನು ಯೋಚಿಸಲು ಪ್ರಚೋದನೆ ಕೊಡುವ ಉದ್ದೇಶದಿಂದ ಕೇಳಿದೆ. ತಾನು ಏನೇ ಮಾಡಿದರೂ ಅದಕ್ಕೆ ಪ್ರತಿಯಾಗಿ ಇತರರು ಏನೇನು ಮಾಡಬಹುದು ಎಂದು ಮತ್ತೆ ಹಳೆÀಯ ಘಟನೆಗಳನ್ನು ಉದಾಹರಿಸಿ ಹೇಳತೊಡಗಿದಳು. ಒಂದೆರೆಡು ಗಂಟೆಗಳಲ್ಲಿ ಮುಗಿಸಿಬೇಕಾದ ಆಪ್ತಸಲಹೆಯಾದ್ದರಿಂದ ನಾನು ಡೈರೆಕ್ಟಡ್ ಕೌನ್ಸೆಲ್ಲಿಂಗ್ ತಂತ್ರಗಳನ್ನು ಬಳಸಲೇಬೇಕಾಗಿತ್ತು.
“ನೋಡಮ್ಮಾ, ನಿಮ್ಮ ಪರಿಸ್ಥಿತಿಗೆ ಕಾರಣ ಯಾರೇ ಅಂತ ನಿಮಗನ್ನಿಸಿದರೂ ಅವರೆಲ್ಲಾ ಸರಿಯಾಗುತ್ತಾರೆಂದು ಆಶಿಸುತ್ತಾ ಕೂತರೆ ನಿಮ್ಮ ಜೀವನ ಮುಗಿದು ಹೋಗಿರುತ್ತದೆ. ನಮ್ಮ ಸುತ್ತಲೂ ಎಂತವರೇ ಇದ್ದರೂ ಅವರೆಲ್ಲರ ಮಧ್ಯೆ ಸಮಾಧಾನದಲ್ಲಿ ಬದುಕುವ ರೀತಿಯನ್ನು ನಾವು ಕಂಡುಕೊಳ್ಳಬೇಕು. ಅದಕ್ಕಾಗಿ ನಮ್ಮ ನಂಬಿಕೆ, ಯೋಚನೆ, ಕ್ರಿಯೆ, ಪ್ರತಿಕ್ರಿಯೆಗಳನ್ನೆಲ್ಲಾ ಬದಲಾಯಿಸಿಕೊಳ್ಳಬೇಕು. ಇಲ್ಲಿಯರೆಗೆ ನೀವು ಹೇಗೆ ವರ್ತಿಸುತ್ತಾ ಬಂದಿದ್ದೀರಾ ಅಂತ ವಿಚಾರ ಮಾಡೋಣ. ಪತಿಯೊಡನೆ ಹಂಚಿಕೊಂಡ ಭಾವನೆಗಳು ನಾದಿನಿಯರಿಗೆ ತಿಳಿದಾಗ ಪತಿಯೊಡನೆ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸದೇ ಅವರೊಡನೆ ಆಪ್ತವಿಚಾರಗಳನ್ನು ಹೇಳಿಕೊಳ್ಳುವುದನ್ನೇ ನಿಲ್ಲಿಸಿದಿರಿ; ನಾದಿನಿಯರನ್ನು ನಿಮ್ಮ ವೈಯುಕ್ತಿಕ ವಿಚಾರದಲ್ಲಿ ತಲೆಹಾಕಬಾರದೆಂದು ನಯವಾಗಿ ಎಚ್ಚರಿಸಲಿಲ್ಲ. ನಿಮ್ಮ ಉದ್ಯೋಗವನ್ನು ಮುಂದುವರಿಸಲೇಬೇಕೆಂದು ಧೃಡವಾದ ನಿಲುವನ್ನು ನೀವು ತೆಗೆದುಕೊಳ್ಳಲಿಲ್ಲ. ನೀವು ಮಾಡುವ ಪ್ರತಿ ಕೆಲಸಕ್ಕೂ ಅತ್ತೆ ಮಾವನ ಒಪ್ಪಿಗೆಯನ್ನು ನಿರೀಕ್ಷಿಸುತ್ತಾ ಹೋದಿರಿ. ಕುಟುಂಬಕ್ಕೆ ಸಂಬಂಧಿಸದ ನಿಮ್ಮ ಖಾಸಗೀ ವಿಚಾರಗಳಲ್ಲಿ- ಉದಾಹರಣೆಗೆ ಸ್ನೇಹಿತರ ಮನೆಗೆ, ತೌರಿಗೆ ಹೋಗುವುದು, ಮಗನೊಡನೆ ಹಾಡಿ ಆಡಿ, ಕುಣಿಯುವುದು-ಕೂಡ ನಿಮಗೆ ಬೇಕಾದಂತೆ ನಡೆದುಕೊಳ್ಳುತ್ತಾ ಹೋಗಲಿಲ್ಲ. ನಾನು ಏನು ಮಾಡಿದರೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಯೋಚನೆಮಾಡುತ್ತಾ ನಿಮ್ಮ ಕ್ರಿಯೆಯನ್ನು ಬದಲಾಯಿಸಿಕೊಳ್ಳುತ್ತಾ ಹೋದಿರಿ. ಈಗ ನಿಮಗಿಷ್ಟವಿರದ ಗರ್ಭವನ್ನು ಉಳಿಸಿಕೊಳ್ಳಬೇಕೇ ಬೇಡವೇ ಎನ್ನುವುದನ್ನು ಅತ್ತೆ ಮಾವಂದಿರು ನಿರ್ಧರಿಸಬೇಕು ಎಂದು ನೀವು ಹೇಳುವುದನ್ನು ನೋಡಿದರೆ, ನೀವು ನಿಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡುಬಿಟ್ಟಿದ್ದೀರಾ ಅನ್ನಿಸುವುದಿಲ್ಲವಾ?” ಸರಳವಾಗಿ ವಿವರಿಸುತ್ತಾ ಹೋದೆ.
“ಸಾರ್ ನನಗೆ ಬೇಕಾದಂತೆ ಮಾಡಿದ್ದರೆ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ನಾನು ಕೆಲವೊಮ್ಮೆ ಅವರ ಮಾತುಗಳಿಗೆ ಪ್ರತ್ಯುತ್ತರವನ್ನು ನೀಡಿದ್ದೆ, ಆಗೆಲ್ಲಾ ಅದೊಂದು ದೊಡ್ಡ ರಾದ್ಧಾಂತವೇ ಆಗಿಬಿಟ್ಟಿತ್ತು.” ಅವಳು ಅಸಹಾಯಕತೆಯನ್ನು ವ್ಯಕ್ತಪಡಿಸಿದಳು.
ನಂತರದ ಮಾತುಕಥೆಯಲ್ಲಿ ನಾವು ಹೇಳಿದ್ದರ ಸಾರಾಂಶ ಇಷ್ಟು, “ನೋಡಮ್ಮಾ ಇಲ್ಲೇ ನೀವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿದಿದ್ದು ಮತ್ತು ನಿಮ್ಮ ಈ ದೌರ್ಬಲ್ಯವನ್ನೇ ಎಲ್ಲರೂ ಉಪಯೋಗಿಸುತ್ತಿರುವುದು. ಈಗ ನೀವು ಪದೇ ಪದೇ ಆದ ಕಹಿ ಅನುಭವಗಳಿಂದ ಪತಿ ಮತ್ತವರ ಕುಟುಂಬದಿಂದ ಮಾನಸಿಕವಾಗಿ ನಿಮ್ಮನ್ನು ವಿಚ್ಛೇದಗೊಳಿಸಿಕೊಂಡುಬಿಟ್ಟಿದ್ದೀರಾ. ಈಗ ಇದೇ ಪರಿಸ್ಥಿತಿಯಲ್ಲಿ ಜೀವಮಾನವಿಡೀ ಮುಂದುವರೆಯವುದು ಅಥವಾ ಕಾನೂನಿನ ವಿಚ್ಛೇದನಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದುಕೊಂಡು ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುವುದು-ಇವೆರೆಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ನಿಮ್ಮ ಸ್ವಂತಿಕೆಯನ್ನು ಧೃಡಪಡಿಸಿಕೊಳ್ಳುತ್ತಾ ಹೋದಾಗ ಪತಿ ಮತ್ತವರ ಕುಟುಂಬದವರ ಪ್ರತಿಕ್ರಿಯೆ ಬೇರೇನೇ ಆಗುತ್ತಾ ಹೋಗಿ, ಮುಂದೆ ವಿಚ್ಛೇದನದ ಅಗತ್ಯ ಬೀಳದೇ ಇರಬಹುದು ಅಥವಾ ಅದಕ್ಕೆ ಬೇಗನೆ ವೇದಿಕೆ ಸಿದ್ಧವಾಗಲೂಬಹುದು. ಆದರೆ ಹೀಗೆ ನಿಮ್ಮ ವ್ಯಕ್ತತ್ವಕ್ಕೆ ಒಂದು ಗಟ್ಟಿತನ ತಂದುಕೊಳ್ಳುವುದು ಬರೀ ಕೌಟುಂಬಿಕ ಜೀವನಕ್ಕಷ್ಟೇ ಅಲ್ಲ, ನಿಮ್ಮ ವ್ಯಾವಹಾರಿಕ ಜೀವನಕ್ಕೂ ಅನುಕೂಲಕರ. ಮನೆಯಿಂದ ಹೊರಗಡೆ ನಿಮ್ಮ ಈ ವ್ಯಕ್ತಿತ್ವವನ್ನು ದುರುಪಯೋಗಪಡಿಸಿಕೊಳ್ಳುವವರು ಹೆಚ್ಚಾಗಿರುತ್ತಾರೆ. ಹಾಗಾಗಿ ನೀವು ಹೆಚ್ಚು ಕ್ರಿಯಾಶೀಲರಾಗದಿದ್ದರೆ ಪರಿಸ್ಥಿತಿಗಳು ಬದಲಾಗಲಾರದು. ಇಲ್ಲಿಯವರೆಗೆ ಮಾಡಿದಂತೆ, ಇತರರ ಪ್ರತಿಕ್ರಿಯೆಗಳಿಗೆ ಕಾಯತ್ತಾ ಕೂರದೆ ನಿಮಗೆ ಸರಿಯೆನಿಸಿದ್ದನ್ನು ಮಾಡುವ ಧೃಡತೆಯನ್ನು ಬೆಳೆಸಿಕೊಳ್ಳವ ತರಬೇತಿಯ ಅಗತ್ಯ ನಿಮಗಿದೆ. ನಿಮ್ಮ ಗಟ್ಟಿತನ್ನವನ್ನು ತೋರಿಸಲು ಈಗ ನಿಮಗೆ ಸರಿಯಾದ ಅವಕಾಶವೂ ಇದೆ. ನಿಮ್ಮ ಎರಡು ತಿಂಗಳ ಗರ್ಭವನ್ನು ಮುಂದುವರಿಸಬೇಕೇ ಬೇಡವೇ ಎಂದು ತಾಯಿಯಾಗಿ ನೀವೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಿ. ಅದರಂತೆ ಮುಂದುವರೆದು ಅದನ್ನು ಪತಿಗೆ ಮಾತ್ರ ತಿಳಿಸಿ.”
ಹೀಗೆ ಸಾಕಷ್ಟು ಮಾತುಕತೆಯಾದ ನಂತರ ಅವಳಿಗೆ ತಾನು ಇಲ್ಲಿಯವರೆಗೆ ತಪ್ಪಿದ್ದೆಲ್ಲಿ ಎಂದು ತಿಳಿಯತೊಡಗಿತು. ಹಾಗಿದ್ದರೂ ಇಷ್ಟು ದಿನ ಮೈಗೂಡಿರುವ ಸ್ವಭಾವನ್ನು ಏಕಾಏಕಿ ಬದಲಾಯಿಸಿಕೊಳ್ಳುವುದು ಸುಲಭವಲ್ಲ. ನಾವು ಮಾಡಬೇಕೆಂದುಕೊಂಡಿದ್ದನ್ನು ವಾಸ್ತವ ಪರಿಸ್ಥಿತಿಗಳು ಎದುರಾದಾಗ ಮಾಡಲಾಗದೇ ಮತ್ತೆ ಮತ್ತೆ ಹಳೆಯ ದಾರಿಗಳಲ್ಲೇ ನಾವು ನಡೆಯುತ್ತಾ ಕೊರಗುತ್ತಾ ಇರುತ್ತೇವೆ. ಹಾಗಾಗಿ ಸಂಪೂರ್ಣ ಬದಲಾವಣೆಗೆ ಸಮಯ ಮತ್ತು ಸೂಕ್ತ ಸಹಾಯ ಎರಡರ ಅಗತ್ಯವೂ ಇರುತ್ತದೆ. ಇದರ ಬಗೆಗೆ ಅವಳಲ್ಲಿ ಅರಿವನ್ನು ಮೂಡಿಸಿ ಆಪ್ತಸಲಹೆಯನ್ನು ಮುಗಿಸಿದೆ.
ಇದು ನಮ್ಮಲ್ಲಿ ಸಾಕಷ್ಟು ಹೆಣ್ಣುಮಕ್ಕಳ ಪರಿಸ್ಥಿತಿ. ಹೆಚ್ಚಿನವರಿಗೆ ಕೌಟುಂಬಿಕ ವಾತಾವರಣ ಇಷ್ಟು ಅಸಹನೀವಾಗಿಲ್ಲದಿದ್ದರೂ, ಒಟ್ಟಾರೆ ನಾವು ಅವರಿವರಿಗಾಗಿ ಬದುಕುತ್ತಿದ್ದೇವೆ, ತಮ್ಮತನವನ್ನು ಸಂಪೂರ್ಣ ಕಳೆದುಕೊಂಡಿದ್ದೇವೆ ಅನ್ನಿಸುತ್ತಿರಬಹದು. ಜೊತೆಗೆ ಕುಟುಂಬಕ್ಕಾಗಿ ಹೆಣ್ಣು ತ್ಯಾಗಮಾಡಬೇಕು ಎಂದೆಲ್ಲಾ ಉಪದೇಶಿಸುವ ಹಿರಿಯರು, ಧರ್ಮಗುರುಗಳೂ ಸಾಕಷ್ಟು ದಾರಿತಪ್ಪಿಸುತ್ತಾರೆ. ಇಂತಹ ಚಿಂತನೆಯನ್ನು ವೈಭವೀಕರಿಸಿ ಹೆಣ್ಣನ್ನು ದೈವತ್ವಕ್ಕೇರಿಸಿ ತೋರಿಸುವ ಸಿನಿಮಾಗಳಿಗೆ, ಧಾರವಾಹಿಗಳಿಗೆ ಮತ್ತು ಅದನ್ನು ಒದ್ದೆ ಕಣ್ಣುಗಳಿಂದ ಆನಂದಿಸುವ ಸ್ತ್ರೀಯರಿಗೂ ಕೊರತೆಯೇನಿಲ್ಲ. ಇಂತಹ ವಿಷಮ ಪರಿಸ್ಥಿತಿಗಳಲ್ಲೂ ಸಂಸಾರ ಮತ್ತು ತಮ್ಮ ವೃತ್ತಿ ಅಥವಾ ಹವ್ಯಾಸಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿರುವ ಗೃಹಿಣಿಯರು ಸಾಕಷ್ಟು ಜನ ನಮ್ಮ ಸುತ್ತಲೂ ಇದ್ದಾರೆ.
ಹಾಗಾಗಿ ಹೋಮ್ ಮೇಕರ್‍ಗಳು ತಮ್ಮ ಪರಿಸ್ಥಿತಿಗೆ ಕಾರಣಗಳನ್ನು ತಮ್ಮಿಂದ ಹೊರಗೆ ಅಂದರೆ ಸಂಸಾರ, ಸಮಾಜ, ಧರ್ಮ, ಕಾನೂನು ಮುಂತಾದವುಗಳಲ್ಲಿ ಹುಡುಕ ಹೊರಟರೆ ಜೀವನವೆಲ್ಲಾ ಗೊಣಗುತ್ತಲೇ ಇರಬೇಕಾಗುತ್ತದೆ. ಮೊದಲು ತಮಗೆ ಬೇಕಾಗಿರುವುದೇನು ಎನ್ನುವುದನ್ನು ಗೃಹಿಣಿಯರು ಖಚಿತಪಡಿಸಿಕೊಳ್ಳಬೇಕು. ಹಾಗೊಮ್ಮೆ ಅವರಿಗೆ ಈಗಿರುವ ಪರಿಸ್ಥಿತಿಗಳು ಸಮಾಧಾನಕಾರ ಅನ್ನಿಸಿದರೆ ಬಲವಂತವಾಗಿ ಇತರರನ್ನು ಅನುಕರಿಸಬೇಕಿಲ್ಲ. ಬರೇ ಮನೆ ಮಕ್ಕಳು ಅಂತ ಬದುಕುತ್ತಿರುವ ಸಾಕಷ್ಟು ಗೃಹಿಣಿಯರು ತೃಪ್ತಿಯಿಂದ ಇದ್ದಾರೆ. ಅಂತವರು ಸ್ತ್ರೀಸ್ವಾತಂತ್ರದ ಹಣೆಪಟ್ಟಿ ಹಚ್ಚಿಕೊಂಡು ತಮ್ಮ ನೆಮ್ಮದಿ ಹಾಳುಮಾಡಿಕೊಳ್ಳಬೇಕಿಲ್ಲ. ಕೆಲವರಿಗೆ ಪರಿಸ್ಥಿತಿಗಳು ಬದಲಾಗಬೇಕು ಅನ್ನಿಸಿದರೆ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು, ಪ್ರಯತ್ನವನ್ನು ಮಾಡಬೇಕು. ಹಾಗೆ ಮಾಡುವಾಗ ಕುಟುಂಬಕ್ಕೆ ಅವರು ಕೊಡಬಹುದಾದ ಸಮಯ ಕಡಿಮೆಯಾಗಿ, ಪತಿ, ಅತ್ತೆ, ಮಾವ, ಮಕ್ಕಳು, ಹೀಗೆ ಎಲ್ಲರಿಂದ ತಕರಾರುಗಳು ಬಂದೇ ಬರುತ್ತವೆ. ಇದನ್ನೆಲ್ಲಾ ನಿಭಾಯಿಸಲು ಹಿಂಜರಿದರೆ ಮತ್ತೆ ಹಳೆಯ ದಾರಿಯಲ್ಲೇ ನಡೆಯುತ್ತಾ ಇರಬೇಕಾಗುತ್ತದೆ. ನಿಭಾಯಿಸುವುದು ಅಂದರೆ ಕಟುಮಾತುಗಳು ಅಥವಾ ಜಗಳ ಅಂತಂದುಕೊಳ್ಳಬೇಕಿಲ್ಲ. ನಿಮ್ಮ ಅಭೀಪ್ರಾಯವನ್ನು ಎಲ್ಲರೊಡನೆ ಹಂಚಿಕೊಂಡು ಅವರ ಸಲಹೆ ಸಹಕಾರವನ್ನು ಕೇಳಿ. ನಿಧಾನವಾಗಿ ನಮ್ಮ ವ್ಯಕ್ತಿತ್ವವನ್ನು ಧೃಡಪಡಿಸಿಕೊಳ್ಳುತ್ತಾ ಹೋದಂತೆ ಹೆಚ್ಚಿನ ಕುಟುಂಬಗಳು ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಾ ಹೋಗುತ್ತವೆ. ಜೊತೆಗೆ ಗೃಹಿಣಿಯರು ತಮ್ಮ ಸ್ವಂತಿಕೆಯನ್ನು ಕಂಡುಕೊಂಡಾಗ ಬರುವ ಸುಖ ಸಂತೋಷಗಳನ್ನು ಎಲ್ಲರಿಗೂ ಹಂಚಲು ಸಾಧ್ಯವಾಗುತ್ತದೆ. ಇಂತಹ ಯಾವ ಪ್ರಯತ್ನವನ್ನೇ ಮಾಡದೆ ನಿಮ್ಮ ಪರಿಸ್ಥಿತಿಗಳಿಗೆ ಅವರಿವರನ್ನು ದೂಷಿಸುತ್ತಾ ಕುಳಿತಿದ್ದರೆ ನೀವು ಇದ್ದಲ್ಲೇ ಇರುವ ಸಾಧ್ಯತೆಗಳೇ ಹೆಚ್ಚು ಎಂದು ಮರೆಯಬಾರದು.
ವಸಂತ್ ನಡಹಳ್ಳಿ

